Thursday, February 27, 2020

ಬಾಲ್ಯ ಕಾಲದ ನೆನಪುಗಳು – ೬೬


ನಾನು ಮೊದಲೇ ಬರೆದಂತೆ ನಮ್ಮ ವಾರ್ಡನ್ ಮಂಗಳಮೂರ್ತಿಯವರು ಒಬ್ಬ ದಕ್ಷ ಹಾಗೂ ನಿಷ್ಪಕ್ಷಪಾತ ವ್ಯಕ್ತಿಯಾಗಿದ್ದರು. ಆದರೆ ಅಸಿಸ್ಟೆಂಟ್ ವಾರ್ಡನ್ ಶ್ರೀಪಾದ ಜೋಯಿಸ್ ಮತ್ತು ಮ್ಯಾನೇಜರ್ ಚಂದ್ರಶೇಖರ ಶಾಸ್ತ್ರಿಯವರು  ಅಷ್ಟೇ  ಪಕ್ಷಪಾತಿಗಳೂ ಮತ್ತು ಫ್ರೀಶಿಪ್ ಪಡೆದ ವಿದ್ಯಾರ್ಥಿಗಳ ಬಗ್ಗೆ ಕೀಳು ದೃಷ್ಟಿಯವರೂ ಆಗಿದ್ದರು. ಜೋಡಿಯಿಂದ ನನಗಾದ ಎರಡು ಕೆಟ್ಟ ಅನುಭವಗಳು ಕೆಳಕಂಡಂತಿವೆ:

ನನ್ನ ಅಣ್ಣ ನನಗೆ ಹಾಸ್ಟೆಲಿನಲ್ಲಿ ಯಾರ ಹತ್ತಿರವೂ ಇಲ್ಲದ ಒಂದು ಅಪರೂಪದ ವಸ್ತುವನ್ನು ಕೊಡಿಸಿದ್ದ. ಅದೊಂದು ಹೊಚ್ಚ ಹೊಸ ಎವರೆಡಿ ಟಾರ್ಚ್. ದಿನಗಳಲ್ಲಿ ಅನೇಕ ರಾತ್ರಿ ವಿದ್ಯುತ್ ಇಲ್ಲದಾಗ ನಾನು ನನ್ನ ಟಾರ್ಚನ್ನು ಹಿಡಿದುಕೊಂಡು ಓಡಾಡುತ್ತಿದ್ದೆ. ಎಷ್ಟೋ ವಿದ್ಯಾರ್ಥಿಗಳು ನನ್ನಿಂದ ಅದನ್ನು ಪಡೆದು ಬಳಸಿ ವಾಪಾಸ್ ಮಾಡುತ್ತಿದ್ದರು. ಒಂದು ರಾತ್ರಿ ಹಾಗೆಯೆ ಕರೆಂಟ್ ಹೋದಾಗ ನಾನು ಟಾರ್ಚ್ ಹಿಡಿದು ಓಡಾಡುವುದನ್ನು ಶ್ರೀಪಾದ ಜೋಯಿಸ್ ನೋಡಿ ಬಿಟ್ಟರು. ಕೂಡಲೇ ಅದನ್ನು ಸ್ವಲ್ಪ ಕೊಡು ಎಂದು ಕೇಳಿ ತೆಗೆದುಕೊಂಡು ಹೋದರು. ಅವರು ಹಾಸ್ಟೆಲಿಗೆ ಸೈಕಲ್ ಮೇಲೆ ಬರುತ್ತಿದ್ದರು. ಪ್ರಾಯಶಃ ರಾತ್ರಿ ಹಿಂದಿರುಗುವಾಗ ಡೈನಮೊ ಇಲ್ಲದ ಸೈಕಲ್ ಬಿಡಲು ಟಾರ್ಚ್ ಉಪಯೋಗಿಸಿರಬೇಕು. ನಾನು ಮಾರನೇ ದಿನ ಜೋಯಿಸ್ ಅವರು ನನ್ನ ಟಾರ್ಚನ್ನು ಹಿಂದಿರುಗಿಸುವರೆಂದು ಭಾವಿಸಿದ್ದೆ. ಮಾತ್ರವಲ್ಲ ನನಗೆ ಥ್ಯಾಂಕ್ಸ್ ಎಂದು ಹೇಳುವರೆಂದೂ ಭಾವಿಸಿದ್ದೆ. ಆದರೆ ಅವರು ಅದನ್ನು ಹಿಂತಿರುಗಿಸುವ ಯೋಚನೆಯಲ್ಲೇ ಇರಲಿಲ್ಲ. ನಾನು ಪದೇ ಪದೇ ಕೇಳುತ್ತಿದ್ದರಿಂದ ಸುಮಾರು ಎರಡು ತಿಂಗಳ ನಂತರ ಅದನ್ನು ನನಗೆ ವಾಪಾಸ್ ಮಾಡಿದರು. ಆದರೆ ಅದರ ಸೆಲ್ಲುಗಳು ಕರಗಿಹೋಗಿ ಪುನಃ ಬಳಸದ ರೀತಿಯಲ್ಲಿ ಟಾರ್ಚ್ ಕೆಟ್ಟು ಹೋಗಿತ್ತು. ನಾನು ಅದನ್ನು ಕಸಕ್ಕೆ ಎಸೆಯಬೇಕಾಯಿತು.

ಮ್ಯಾನೇಜರ್ ಚಂದ್ರಶೇಖರ ಶಾಸ್ತ್ರಿಯವರೊಡನೆ ನನಗಾದ ಅನುಭವ ಇನ್ನೂ ಕೆಟ್ಟದ್ದಾಗಿತ್ತು. ಒಂದು ರಜೆಯ ದಿನ ನಾನು ನನ್ನ ಕೆಲವು ಸ್ನೇಹಿತರೊಡನೆ ಹಾಸ್ಟೆಲಿನ ಒಳಾಂಗಣದಲ್ಲಿ ಕುಳಿತು ಮಾತನಾಡುತ್ತಿದ್ದೆ. ಅದೇ ವೇಳೆ ಶಾಸ್ತ್ರಿಯವರು ಹಾಸ್ಟೆಲಿನ ಮುಖ್ಯ ದ್ವಾರದಿಂದ ಒಳ ಪ್ರವೇಶ ಮಾಡಿದರು. ಆಗ ಅವರು ಹೊರಗೆ ಕುಳಿತಿದ್ದ ಒಬ್ಬ ವಿದ್ಯಾರ್ಥಿ ಅವರ ಮುಂದೆ ಜಂಪ್ ಮಾಡಿ ಗೇಟಿನಲ್ಲಿದ್ದ ಟ್ಯೂಬ್ ಲೈಟಿಗೆ ಕೈ ತಾಗಿಸಿ ಒಳಗೆ ಓಡಿ ಹೋದದ್ದನ್ನು ನೋಡಿದರಂತೆ.  ಹುಡುಗ ಹೀಗೆ ಹಾರಿ ಹಾಸ್ಟೆಲಿನೊಳಗೆ ಓಡಿ ಹೋದದ್ದು ನಮ್ಮ ಕಣ್ಣಿಗೂ ಬಿದ್ದಿತ್ತು. ತುಂಬಾ ಕೋಪದಿಂದ ಹಾಸ್ಟೆಲ್ ಪ್ರವೇಶಿಸಿದ ಶಾಸ್ತ್ರಿಗಳು ನನ್ನತ್ತ ಕೈ ತೋರಿಸಿ ಹಾಸ್ಟೆಲ್ ಆಫೀಸಿನೊಳಗೆ ಬರುವಂತೆ ಹೇಳಿದರು. ಅಲ್ಲಿ ಅವರು ನನಗೆ ಜಂಪ್ ಮಾಡಿ ಟ್ಯೂಬ್ ಲೈಟಿಗೆ ಕೈ ತಾಗಿಸಿದ್ದು ನಾನೇ ಎಂದೇ ಒಮ್ಮೆಲೇ ಬಯ್ಯತೊಡಗಿದರು. ಹಾಗೆ ಮಾಡಿದ್ದೂ ನಾನಲ್ಲವೆಂದು ನಾನೆಷ್ಟೇ ಹೇಳಿದರೂ ಅವರು ಒಪ್ಪಲು ತಯಾರಿರಲಿಲ್ಲ. ಅವರ ಪ್ರಕಾರ ಜಂಪ್ ಮಾಡಿದ ಹುಡುಗ ನೀಲಿ ಬಣ್ಣದ ಶರ್ಟ್ ಹಾಕಿದ್ದನಂತೆ. ನನ್ನ ಶರ್ಟ್ ಕೂಡ ನೀಲಿ ಬಣ್ಣದ್ದಾಗಿದ್ದರಿಂದ ಅದು ನಾನೇ ಅಂತೆ! ನನ್ನ ಜೊತೆಯಲ್ಲಿದ್ದ ನನ್ನ ಸ್ನೇಹಿತರು ಕೂಡಾ ಅದು ನಾನಲ್ಲವೆಂದು ಎಷ್ಟೇ ಹೇಳಿದರೂ ಶಾಸ್ತ್ರಿಗಳು ಒಪ್ಪಲೇ ಇಲ್ಲ. ನಾನು ಪ್ರಾಯಶಃಚೌತಿ ಚಂದ್ರನನ್ನು” ನೋಡಿರಬೇಕೆಂದು ನನಗನಿಸತೊಡಗಿತು. ನಾನು ಮೊದಲೇ ಶಾಸ್ತ್ರಿಗಳು ಕಿವುಡರಾಗಿದ್ದರೆಂದು  ಮತ್ತು "ಗೂಟಧಾರಿ" ಎಂದು ಕರೆಯಲ್ಪಡುತ್ತಿದ್ದರೆಂದು ಬರೆದಿದ್ದೇನೆ. ನನಗೆಷ್ಟು ಸಿಟ್ಟು ಬಂತೆಂದರೆ "ನಿಮಗೆ ಕಣ್ಣೂ ಕೂಡ ಸರಿಯಾಗಿ ಕಾಣುತ್ತಿಲ್ಲವೇ?" ಎಂದು ಕೇಳಬೇಕೆನಿಸಿತು. ಆದರೆ ಫ್ರೀಶಿಪ್ ವಿದ್ಯಾರ್ಥಿಯಾದ ನಾನು ಹಾಗೆ ಕೇಳುವ ಪರಿಸ್ಥಿತಿಯಲ್ಲಿರಲಿಲ್ಲ.

ಆದರೆ ನನಗೆ ಸ್ನೇಹಿತನೊಬ್ಬನ ಸಹಾಯ ಸಮಯಕ್ಕೆ ಸರಿಯಾಗಿ ದೊರೆಯಿತು. ನನ್ನ ಸ್ನೇಹಿತ ಹಾಸ್ಟೆಲಿನಲ್ಲೆಲ್ಲಾ ಹುಡುಕಾಡಿ ನಿಜವಾದ ಅಪರಾಧಿಯನ್ನು ಹಿಡಿದು ತಂದೇ ಬಿಟ್ಟ! ಆದರೆ ಶಾಸ್ತ್ರಿಗಳು ಬಡಪೆಟ್ಟಿಗೆ ಒಪ್ಪಲು ತಯಾರಿರಲಿಲ್ಲ. ಆದರೆ ಹುಡುಗ ತಾನೇ ಜಂಪ್ ಮಾಡಿ ಟ್ಯೂಬ್ ಲೈಟಿಗೆ ಕೈ ಹೊಡೆದುದಾಗಿ ಒಪ್ಪಿಕೊಂಡು ಬಿಟ್ಟ. ಅವನೂ ಕೂಡಾ ನೀಲಿ ಶರ್ಟ್ ಧರಿಸಿದ್ದುದು ಅವನ ಅಪರಾಧವನ್ನು ಸಾಬೀತು ಮಾಡಿದಂತಾಯಿತು.

ಕೌಂಟ್ ಆಫ್ ಮೊಂಟೆ ಕ್ರಿಸ್ಟೋ (ರಾಜಾ ಮಲಯಸಿಂಹ)
ಇನ್ನೂ ಕಿರಿಯ ವಯಸ್ಸಿನವನಾದ ನನಗೆ ನನ್ನ ಮೇಲೆ ವೃಥಾಪವಾದ ಹೊರಿಸಿದ ಶಾಸ್ತ್ರಿಗಳ ಮೇಲೆ ಹೇಗಾದರೂ ಸೇಡು ತೀರಿಸಿಕೊಳ್ಳಬೇಕೆಂದು ಅನಿಸಿದ್ದರಲ್ಲಿ ಆಶ್ಚರ್ಯವೇನಿರಲಿಲ್ಲ. ನಾನಿನ್ನೂ ಸಣ್ಣವನಾಗಿದ್ದಾಲೇ ಪ್ರಸಿದ್ಧ ಫ್ರೆಂಚ್ ಲೇಖಕ ಅಲೆಕ್ಸಾಂಡರ್ ಡ್ಯೂಮಾಸ್  ಅವರು ಬರೆದಕೌಂಟ್ ಆಫ್ ಮೊಂಟೆ ಕ್ರಿಸ್ಟೋ” ಎಂಬ ಕಾದಂಬರಿಯ ಕನ್ನಡ ಅನುವಾದವಾದರಾಜಾ ಮಲಯಸಿಂಹ” ಎಂಬ ಕಾದಂಬರಿಯನ್ನು ಓದಿದ್ದೆ. ಶ್ರೀಯುತ ಬಿ ವೆಂಕಟಾಚಾರ್ಯ ಅವರು ಮೂರು ಭಾಗಗಳಲ್ಲಿ ಬರೆದ ರಾಜಾ ಮಲಯಸಿಂಹ ನಾವು ಚಿಕ್ಕಂದಿನಲ್ಲಿ ಓದಿದ ಅತ್ಯಂತ ಶ್ರೇಷ್ಠ ಸಾಹಸ ಕಾದಂಬರಿಯಾಗಿತ್ತು. ನಿರಪರಾಧಿಯಾದ ತನ್ನ ಮೇಲೆ ಇಲ್ಲದ ಆರೋಪ ಹೊರಿಸಿ ಜೈಲು ಕಾಣಿಸಿದ್ದ ತನ್ನ ಬೇರೆ ಬೇರೆ ಶತ್ರುಗಳ ಮೇಲೆ ರಾಜಾ ಮಲಯಸಿಂಹ (Edmund Dantes) ಸೇಡು ತೀರಿಸಿಕೊಂಡ ಬಗೆ ನಮಗೆ ಅತ್ಯಂತ ತೃಪ್ತಿಯನ್ನು ಕೊಟ್ಟಿತ್ತು. ನಾನೂ ಕೂಡ ರಾಜಾ ಮಲಯಸಿಂಹನಂತೆ ಒಂದು ದಿನ ಶಾಸ್ತ್ರಿಗಳ ಮೇಲೆ ಸೇಡು ತೀರಿಸಿಕೊಳ್ಳುವೆನೆಂದು ಪಣ ತೊಟ್ಟು ಬಿಟ್ಟೆ. ಆದರೆ ಶಾಸ್ತ್ರಿಗಳೇ ಆಮೇಲೆ ತಮ್ಮ ಭಾಷಣದಲ್ಲಿ ಹೇಳಿದ ಪ್ರಸಂಗವೊಂದರಿಂದ ನನಗೆ ಅವರ ಮೇಲೆ ನನ್ನ ಸೇಡನ್ನು ದೇವರೇ ತೀರಿಸಿದ ಎನ್ನಿಸಿತು.

ಶಾಸ್ತ್ರಿಗಳ ಮೇಲೆ ಮೂತ್ರಾಭಿಷೇಖ ಮತ್ತು ನನ್ನ ಸೇಡು ತೀರಿದ್ದು!
ನಮ್ಮ ಹಾಸ್ಟೆಲಿನ ಕೆಲವು ಹುಡುಗರು ಒಂದು ದುರಭ್ಯಾಸವನ್ನು ಹೊಂದಿದ್ದರು. ಅವರು ಟಾಯ್ಲೆಟ್ ಬೌಲ್ನಲ್ಲಿ ನಿಂತುಕೊಂಡೇ ಮೂತ್ರ ಮಾಡಿ ಆಮೇಲೆ ನೀರು ಹಾಕದೇ ಬಂದು ಬಿಡುತ್ತಿದ್ದರು. ಒಂದು ರಾತ್ರಿ ಹಾಸ್ಟೆಲಿನಲ್ಲಿ ವಿದ್ಯುತ್ ಇರಲಿಲ್ಲ. ಆಗ ಶಾಸ್ತ್ರಿಯವರು ಕತ್ತಲೆಯಲ್ಲೇ ಒಂದು ಟಾಯ್ಲೆಟ್ ಒಳಗೆ ಕುಳಿತುಕೊಂಡು ಮೂತ್ರ ಮಾಡುತ್ತಿದ್ದರಂತೆ. ಅವರಿಗೆ ಅದರ ಬಾಗಿಲು ಹಾಕಿಕೊಳ್ಳಲು ಮರೆತು ಹೋಗಿತ್ತಂತೆ. ಆಗ ಹುಡುಗನೊಬ್ಬ ನಿಂತುಕೊಂಡು ಅವರ ತಲೆಯ ಮೇಲೇ ಮೂತ್ರ ಮಾಡಿ ಅವರು ಬೊಬ್ಬೆಹಾಕುವಷ್ಟರಲ್ಲಿ ಓಡಿ ಹೋಗಿ ಬಿಟ್ಟನಂತೆ! ಶಾಸ್ತ್ರಿಯವರು ತಮ್ಮ ಶನಿವಾರದ  ಭಜನೆಯ ನಂತರದ ಮಾಮೂಲಿ ಭಾಷಣದಲ್ಲಿ ಹೇಳಿದ ಪ್ರಸಂಗವನ್ನು ಕೇಳಿ ಅವರ ಕೆಟ್ಟ ಸ್ವಭಾವವನ್ನು ನನ್ನ  ಹಾಗೆಯೇ ಅನುಭವಿಸಿದ ಫ್ರೀಶಿಪ್ ವಿದ್ಯಾರ್ಥಿಗಳು ಜೋರಾಗಿ ಚಪ್ಪಾಳೆ ಹೊಡೆದು ಖುಷಿಪಟ್ಟು ಬಿಟ್ಟೆವು. ನಮ್ಮ ಪ್ರಕಾರ ಅವರಿಗಾದ ಯೂರಿನ್ ಥೆರಪಿ Urine therapy) ಅವರು ನಮಗೆ ಮಾಡುತ್ತಿದ್ದ ಹಿಂಸೆಗೆ ದೇವರೇ ಕೊಟ್ಟ ತಕ್ಕ ಪ್ರತಿಫಲವಾಗಿತ್ತು!

ಕೇರಂ ಚಾಂಪಿಯನ್ ರಂಗಣ್ಣ
ನಮ್ಮ ಹಾಸ್ಟೆಲಿನ ವಾರ್ಷಿಕೋತ್ಸವವನ್ನು ೧೯೬೩ನೇ ಇಸವಿ ಜನವರಿ ತಿಂಗಳಲ್ಲಿ ಮಾಡಲಾಯಿತು. ಅದಕ್ಕಾಗಿ ಬೇರೆ ಬೇರೆ ಸ್ಪೋರ್ಟ್ಸ್ ಮತ್ತು ಟ್ಯಾಲೆಂಟ್ ಸ್ಪರ್ಧೆಗಳನ್ನು  ನಡೆಸಲಾಯಿತು. ಪ್ರತಿಯೊಂದು ಸ್ಪರ್ಧೆಯಲ್ಲೂ ಬಹುಮಾನ ಗಳಿಸಿದವರಿಗೆ ಕ್ಯಾಶ್ ಪ್ರೈಜ್ ನಿಗಧಿ ಮಾಡಲಾಗಿತ್ತು. ಪ್ರತಿಯೊಬ್ಬ ಸ್ಪರ್ಧಿಯೂ ತಾನು ಗಳಿಸಿದ ಒಟ್ಟು ಮೊತ್ತದ ಹಣಕ್ಕೆ ತನಗಿಷ್ಟವಾದ ವಸ್ತುಗಳನ್ನು ಬಹುಮಾನವಾಗಿ ಪಡೆಯಬಹುದಾಗಿತ್ತು. ರಂಗಣ್ಣನೆಂಬ ನಮ್ಮ ಹಾಸ್ಟೆಲಿನ ಪಿ ಯು ಸಿ ವಿದ್ಯಾರ್ಥಿ ಕೇರಂ ಚಾಂಪಿಯನ್ ಆಗಿದ್ದ. ಅವನ ಆಟವನ್ನು ನೋಡುವುದೇ ನಮಗೆಲ್ಲ ಒಂದು ಸಂಭ್ರಮದ ವಿಷಯವಾಗಿತ್ತು. ಅವನು ಫಸ್ಟ್ ಸ್ಟ್ರೈಕ್ ನಲ್ಲೇ ಎಲ್ಲಾ ಪಾನ್ ಗಳನ್ನೂ ಕ್ಲಿಯರ್ ಮಾಡುವಷ್ಟು ಸಮರ್ಥನಾಗಿದ್ದ. ಅವನ ಕೈಗೆ ಒಮ್ಮೆ ಸ್ಟ್ರೈಕರ್ ಹೋಯಿತೆಂದರೆ ಕಥೆ ಮುಗಿಯಿತೆಂದೇ ಲೆಖ್ಖ. ಅವನ ಡಬಲ್ಸ್ ಪಾರ್ಟ್ನರ್ ಆಗಲು ತುಂಬಾ ಪೈಪೋಟಿ ಇತ್ತು. ಏಕೆಂದರೆ ಮೊದಲನೇ ಬಹುಮಾನದ ಗ್ಯಾರಂಟೀ ಇತ್ತು! ನಾನು ನನ್ನ ಜೀವಮಾನದಲ್ಲಿ ಪುನಃ ರಂಗಣ್ಣನಂತಹ ಕೇರಂ ಆಟಗಾರನನ್ನು ನೋಡಲಿಲ್ಲ.

ನಮ್ಮ ಹಾಸ್ಟೆಲಿನಲ್ಲೊಂದು ಗ್ಯಾಂಗ್ ವಾರ್!
ದತ್ತಾತ್ರಿ ಎಂಬ ೯ನೇ ಸ್ಟ್ಯಾಂಡರ್ಡ್ ವಿದ್ಯಾರ್ಥಿ ನಮ್ಮ ರೂಮ್ ಮೇಟ್ ಆಗಿದ್ದ. ಸ್ವಲ್ಪ ಮೆಳ್ಳೆಗಣ್ಣಿನ ಸೊರಬದ ಈ ವಿದ್ಯಾರ್ಥಿ ನೋಡಲು ಸುಂದರನಾಗಿದ್ದ. ನಮ್ಮ ಹಾಸ್ಟೆಲಿನಲ್ಲಿ ಕೃಷ್ಣಶರ್ಮನೆಂಬ ಪಿ ಯು ಸಿ ವಿದ್ಯಾರ್ಥಿ ಇದ್ದ. ಸ್ವಲ್ಪ ಧಾಂಡಿಗನಂತಿದ್ದ ಶರ್ಮ ಇದ್ದಕ್ಕಿದ್ದಂತೇ ದತ್ತಾತ್ರಿಯ ಆತ್ಮೀಯ ಸ್ನೇಹಿತನಾಗಿ  ಬಿಟ್ಟ. ನಮ್ಮ ಯಾವ ರೂಮ್ ಮೇಟ್ ಗಳಿಗೂ ಈ ಸ್ನೇಹ ಏನೂ ಇಷ್ಟವಾಗಲಿಲ್ಲ. ಆದರೆ ಶರ್ಮ ತನ್ನದೇ ಆದ ಸ್ನೇಹಿತರ ಗುಂಪು ಮಾಡಿಕೊಂಡಿದ್ದ ಮತ್ತು ಅವನು ಯಾರಿಗೂ ಕೇರ್ ಮಾಡದಿರುವಷ್ಟು ಸೊಕ್ಕಿನಿಂದಿದ್ದ. ಅವನು ಆಗಾಗ ನಮ್ಮ ರೂಮಿಗೆ ಬಂದು ದತ್ತಾತ್ರಿಯನ್ನು ಹೊರಗೆಲ್ಲೋ ಕರೆದುಕೊಂಡು ಹೋಗುತ್ತಿದ್ದ. ಹಾಸ್ಟೆಲಿನಲ್ಲಿ ಕೆಲವರು ಶರ್ಮ ದತ್ತಾತ್ರಿಯನ್ನು ಕಿಸ್ ಮಾಡುವುದನ್ನೂ ನೋಡಿದರಂತೆ. ಈ ಸಮಾಚಾರ ಇಡೀ ಹಾಸ್ಟೆಲಿನಲ್ಲಿ ಹರಡಿದರೂ ಶರ್ಮ ಕೇರ್ ಮಾಡಲೇ ಇಲ್ಲ. ದತ್ತಾತ್ರಿಗೆ ಕೂಡಾ ಶರ್ಮನೊಡನೆ ಒಡನಾಟ ಇಷ್ಟವಾಗಿತ್ತೆಂಬುವುದರಲ್ಲಿ ಯಾವುದೇ ಅನುಮಾನವಿರಲಿಲ್ಲ. ಇವರ ಸ್ನೇಹ ಯಾವ ಮಟ್ಟಕ್ಕೆ ಹೋಯಿತೆಂದರೆ ದತ್ತಾತ್ರಿ ಎಷ್ಟೋ ಬಾರಿ ರಾತ್ರಿ ಶರ್ಮನ ರೂಮಿನಲ್ಲೇ ಮಲಗತೊಡಗಿದ.

ಶರ್ಮನ ತಂಡದ ವಿರುದ್ಧ ನಾವು ಕೆಲವರು ಸೇರಿ ಒಂದು ತಂಡವನ್ನು ಮಾಡಿಕೊಂಡೆವು. ನಮ್ಮ ತಂಡದವರು ಶರ್ಮನನ್ನು ಕಿಸ್ಸರ್ ಎಂದು ಕರೆಯತೊಡಗಿದೆವು. ಆದರೆ ಶರ್ಮ ಕೋಪ ಮಾಡಿಕೊಳ್ಳುವ ಬದಲು ಅದನ್ನು ಒಂದು ಬಿರುದಿನಂತೆ ಸ್ವೀಕರಿಸಿ ಬಿಟ್ಟ! ನಮ್ಮ ಎರಡು ತಂಡಗಳು ಬದ್ಧ ಶತ್ರುಗಳಾಗಿ ಬಿಟ್ಟವು. ಪರಿಸ್ಥಿತಿ ಎಷ್ಟು ವಿಕೋಪಕ್ಕೆ ಹೋಯಿತೆಂದರೆ ಎಷ್ಟೋ ಬಾರಿ ಅದು ಪರಸ್ಪರ ಹೊಡೆದಾಡುವ ಮಟ್ಟಕ್ಕೆ ಹೋಯಿತು.

ನಮ್ಮ ರೂಮ್ ಮೇಟ್ ಲಚ್ಚು ತುಂಬಾ ಧೈರ್ಯವಂತ ಮತ್ತು ಯಾರಿಗೂ ಹೆದರುವ ವ್ಯಕ್ತಿಯಾಗಿರಲಿಲ್ಲ. ಅವನು ನಮ್ಮ ತಂಡದ ಮುಖ್ಯಸ್ಥರಲ್ಲೊಬ್ಬನಾಗಿದ್ದ. ಶರ್ಮನ ತಂಡ ಲಚ್ಚುವನ್ನು ತಂಡದ ಲೀಡರ್ ಎಂದು ತೀರ್ಮಾನಿಸಿ ಅವನಿಗೆ ಬುದ್ಧಿ ಕಲಿಸಲು ಪ್ಲಾನ್  ಮಾಡಿತು. ಲಚ್ಚುವಿಗೆ ಬುದ್ಧಿ ಕಲಿಸಲು ನಮ್ಮ ಹಾಸ್ಟೆಲಿನ ಪಕ್ಕದಲ್ಲೇ ಆಗಾಗ ಕಣ್ಣಿಗೆ ಬೀಳುತ್ತಿದ್ದ ಒಂದು ಎಳೆಯ ವಯಸ್ಸಿನ ಹುಡುಗರ ಪೋಲಿ ತಂಡಕ್ಕೆ ಶರ್ಮನ ತಂಡ ಹಣ ಕೊಟ್ಟು ಏರ್ಪಾಟು ಮಾಡಿತು. ಒಂದು ದಿನ ಬೆಳಿಗ್ಗೆ ನಾನು ಲಚ್ಚುವಿನೊಡನೆ ನದಿಯಲ್ಲಿ ಸ್ನಾನ ಮಾಡಿ ವಾಪಾಸ್ ಬರುತ್ತಿದ್ದೆ. ಆಗ ಈ ಬಾಡಿಗೆ ಪೋಲಿಗಳ ತಂಡ ಲಚ್ಚುವಿನೊಡನೆ ಕಾಲು ಕೆರೆದು ಜಗಳ ಮಾಡಿ ಆಕ್ರಮಣ ಮಾಡಿಬಿಟ್ಟಿತು. ರಸ್ತೆಯಲ್ಲಿ ಹೋಗುತ್ತಿದ್ದ ಸಾರ್ವಜನಿಕರು ಲಚ್ಚುವನ್ನು ಕಾಪಾಡಿ ಪೋಲಿಗಳನ್ನು ಓಡಿಸಿ  ಬಿಟ್ಟರು.

ಲಚ್ಚು ತೀರಿಸಿಕೊಂಡ ಸೇಡಿಗೆ ಸೇಡು!
ಈ ಪ್ರಸಂಗದಿಂದ ಲಚ್ಚುವಿನ ಕೋಪ ನೆತ್ತಿಗೇರಿ ಹೋಯಿತು. ಅವನು ಓದುತ್ತಿದ್ದ ಡಿ ವಿ ಎಸ್ ಹೈಸ್ಕೂಲಿನ ೯ನೇ ಸ್ಟ್ಯಾಂಡರ್ಡ್ ನಲ್ಲಿ ಆಗ ಸತ್ಯನಾರಾಯಣ ಶೆಟ್ಟಿ ಎಂಬ ರೌಡಿ ವಿದ್ಯಾರ್ಥಿ ಒಬ್ಬನಿದ್ದ. ಮತ್ತು ಅವನು ತನ್ನದೇ ಆದ ಹುಡುಗರ ಗ್ಯಾಂಗ್ ಒಂದರ ಲೀಡರ್ ಕೂಡ ಆಗಿದ್ದ. ಲಚ್ಚುವಿಗಾದ ಅವಮಾನವನ್ನು ಕೇಳಿ ಶೆಟ್ಟಿಯ  ಮೈಯೆಲ್ಲಾ ಉರಿದು ಹೋಯಿತು. ಮಾರನೇ ದಿನ ಬೆಳಿಗ್ಗೆ ಶೆಟ್ಟಿಯ ಗ್ಯಾಂಗ್ ನಮ್ಮ ಹಾಸ್ಟೆಲಿನ ಹತ್ತಿರ ಬಂತು. ಶೆಟ್ಟಿ ಲಚ್ಚುವಿನೊಡನೆ ಆ ಪೋಲಿ ಕೂಟದ ಹುಡುಗರನ್ನು ಗುರುತಿಸುವಂತೆ ಹೇಳಿದ. ಲಚ್ಚು ತೋರಿಸಿದ ಪೋಲಿಗಳಿಗೆ ಶೆಟ್ಟಿಯ ಗ್ಯಾಂಗ್ ಯಾವ ರೀತಿ ಚಚ್ಚಿತೆಂದರೆ ಆ ಮೇಲೆ ಆ ಪೋಲಿಗಳು ನಮ್ಮ ಹಾಸ್ಟೆಲಿನ ಹತ್ತಿರ ಸುಳಿಯಲೂ ಇಲ್ಲ!

ಶರ್ಮ ಮತ್ತು ಲಚ್ಚುವಿನ ತಂಡಗಳ ವೈರ ಹಾಗೆಯೇ ಮುಂದುವರೆಯಿತು. ಆದರೆ ಮಾರ್ಚ್ ತಿಂಗಳ ಪರೀಕ್ಷೆ ಹತ್ತಿರ ಬರುತ್ತಿದ್ದಂತೇ ಎಲ್ಲರ ಗಮನ ಪರೀಕ್ಷೆಯತ್ತ ಹೋಯಿತು. ಮುಂದೆ ಬೇಸಿಗೆ ರಜೆ ಬರುತ್ತಿದ್ದಂತೆ ತಂಡಗಳು ಹರಿದು ಹಂಚಿ ಹೋದವು.
------- ಮುಂದುವರಿಯುವುದು-----

No comments: