Sunday, June 3, 2018

ಒಂದು ಊರಿನ ಕಥೆ - 16 (ಹೊಕ್ಕಳಿಕೆ)
ನಮ್ಮ ಅಡೇಖಂಡಿ ಸಂಸಾರದ ಮತ್ತು ಹೊಕ್ಕಳಿಕೆಯ ಸಂಬಂಧ ೧೯೫೪ನೇ ಇಸವಿಯಯಲ್ಲಿ ಗೌರಕ್ಕನ ಮದುವೆಯಿಂದ ಪ್ರಾರಂಭವಾಯಿತು.  ಮುಂದೆ ೧೯೬೦ನೇ ಇಸವಿಯಲ್ಲಿ ರುಕ್ಮಿಣಕ್ಕನ ಮದುವೆಯೊಂದಿಗೆ ಅದು ಮತ್ತಷ್ಟು ಬೆಳೆಯಿತು. ಅಕ್ಕಂದಿರ ಸಂಸಾರ ಬೆಳೆಯುವುದರೊಂದಿಗೆ ಸಂಬಂಧ ಗಾಢವಾಗುತ್ತಾ ಹೋಯಿತು. ರುಕ್ಮಿಣಕ್ಕ ನಮ್ಮನ್ನು ಬೇಗನೆ ತೊರೆದು ಹೋಗಿಬಿಟ್ಟಳು. ಕಳೆದ ವರ್ಷ ಗೌರಕ್ಕನೂ ಅವಳನ್ನು ಹಿಂಬಾಲಿಸಿ ಬಿಟ್ಟಳು.  ನಾನು ಬರೆದ ಹೊಕ್ಕಳಿಕೆ ಕಥೆಯೆಯನ್ನು ಓದಲು ನಮ್ಮ ಪ್ರೀತಿಯ ಅಕ್ಕಂದಿರಿಬ್ಬರೂ ಇಂದು ನಮ್ಮೊಂದಿಗಿಲ್ಲ.

ನಾನು ೧೦ ವರ್ಷದ ಹಿಂದೆ ಕನ್ನಡದಲ್ಲಿ ಬರವಣಿಗೆ ಮಾಡುವ ಪ್ರಯತ್ನ ಆರಂಭಿಸಿದೆ. ನಮ್ಮ ಕುಟುಂಬದ ಬೆಳವಣಿಗೆಗೆ ಮುಖ್ಯ ಕಾರಣನಾದ ನಮ್ಮ ದೊಡ್ಡಣ್ಣನ ಬಗ್ಗೆ ನಾನು ಬರೆದುದೇ ನನ್ನ ಮೊದಲ ಕನ್ನಡ ಕವನ.  ಹಾಗೆಯೇ ನನ್ನ ಇಬ್ಬರು ಪ್ರೀತಿಯ ಅಕ್ಕಂದಿರಿಬ್ಬರ ಮೇಲೂ ಎರಡು ಕವನಗಳನ್ನು ಬರೆದು ಇಬ್ಬರಿಗೂ ಅಂಚೆಯ ಮೂಲಕ ಕಳಿಸಿಕೊಟ್ಟೆ. ಗೌರಕ್ಕನಿಂದ ಅದು ತಲುಪಿ ಓದಿ ಸಂತೋಷಿಸಿದ ಬಗ್ಗೆ ಬೇಗನೆ ಫೋನ್ ಬಂತು. ಆದರೆ ರುಕ್ಮಿಣಿಕ್ಕನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ನಿರಾಶನಾದ ನಾನು ಅವಳಿಗೆ ಫೋನ್ ಮಾಡಿದಾಗ ಅವಳಿಗೆ ಅದು ತಲುಪಲೇ ಇಲ್ಲವೆಂದು ತಿಳಿಯಿತು. ಅವಳ ಮಾತಿನಿಂದ ಅವಳಿಗೆ ನಾನು ಕೇವಲ ಗೌರಕ್ಕನ ಬಗ್ಗೆ ಬರೆದು ತನ್ನ ಬಗ್ಗೆ ಬರೆಯಲಿಲ್ಲವೆಂದು  ಬೇಸರವಾಗಿತ್ತೆಂದು ತಿಳಿಯಿತು. ನಾನು ಕೂಡಲೇ ಇನ್ನೊಂದು ಪ್ರತಿಯನ್ನು ಕಳಿಸಿದ ಮೇಲೆ ಅವಳಿಗೆ ಸಮಾಧಾನವಾಗಿ ಫೋನ್ ಮಾಡಿ ತನ್ನ ಸಂತಸವನ್ನು ವ್ಯಕ್ತಪಡಿಸಿದಳು.
ನನ್ನ  ಮೊದಲ ಮೂರು ಕನ್ನಡ ಕವನಗಳು ಕೆಳಗಿನಂತಿವೆ:
ಅಣ್ಣನ ನೆನಪು
ಅಣ್ಣನಿಲ್ಲದ ಮನೆಯು
                                                 ಎಣ್ಣೆಯಿಲ್ಲದ ದೀಪ                                                             
                                                         ಕಣ್ಣೇ ಕಾಣದಾಗಿದೆ ಎನಗೆ                                                     
                                ಬಣ್ಣಿಸಲಾರೆ ಮನದ ಪರಿಯ                                        

ಆಡಿಸಿದೆ ಓಡಿಸಿದೆ
ಓದಿಸಿದೆ ಬರೆಯಿಸಿದೆ
ತೀಡಿ ತೀಡಿ ತಿದ್ದಿಸಿದೆ
ಜಾಡಿಸಿದೆ ಮನದ ಕೊಳೆಯ

ಓದಿಸಿದೆ  ಪಾಠವನು
ಹಾಡಿಸಿದೆ ಹಾಡನ್ನು
ಓಡಿಸಿದೆ ಮನದ ದುಗುಡವನು
ಹೋಗಿಹೆ ನೀನು ಜಾಡನರಿಯದ ಜಾಗಕೆ

ಇಂತು ನಿನ್ನ ಅಗಲಿಕೆಯ
ಎಂತು ನಾ ಬಣ್ಣಿಸಲಿ
ಸಂತೆಯಂತಾಯಿತು ಎನ್ನ ಮನ
ಮಂಥನ ಮಾಡುತಿಹುದು ಅನುದಿನವು .

 ದೀನನಾಗಿಹೆ ನಾನು
ದಾನಿಯಾಗಿದ್ದೆ ನೀನು
ಜಾಣನ ಮಾಡಿದೆ ನೀ ಎನ್ನ
ವಿದ್ಯದಾನಕ್ಕಿಂತ ಮಿಗಿಲೇನು.

 ಜಗದಲೇನಿದೆ ಎನಗೆ
ಹೋಗುವೆ ನಾನಾದರು ಎಲ್ಲಿಗೆ
ಹಾಕುತಿಹೆ ನಾ ಹೆಜ್ಜೆಯ ಮೆಲ್ಲಗೆ
ಆಗಿಹೆ ನೀನೆನ್ನ  ದಾರಿ ದೀವಿಗೆ.

ನನ್ನಕ್ಕ ಗೌರಕ್ಕ 
ಅಕ್ಕನೀ ಅಕ್ಕರೆಯಲಿ
ಸಕ್ಕರೆಯ ಸಿಹಿಯಿಹುದು
ಉಕ್ಕಿ ಹರಿದಿಹುದು
ಚೊಕ್ಕ ಹಾಲಿನಂತೆ

ತಮ್ಮನಾದ ನನ್ನನ್ನು
ಅಮ್ಮನಂತೆ ನೋಡಿದ್ದೆ
ಒಮ್ಮೆಯೂ ಕೆಡದಂತೆ
ಬೆಳೆಸಿದ್ದೆ ಹೆಮ್ಮೆಯಲೀ

ಆಟದಲ್ಲಿದ್ದ  ನನ್ನ ಮನವ
ಪಾಠದತ್ತ ಸೆಳೆದಿದ್ದೆ
ಊಟವ ಹಾಕಿದ್ದೆ
ಕಾಟ ಕೊಡುತಿದ್ದ ನನಗೆ

ನನ್ನ ನಡವಳಿಕೆಗಳ
ತಿದ್ದಿದ್ದೆ ತೀಡಿದ್ದೆ
ನಿನ್ನ ನೆರಳಿನಲಿ ಬೆಳೆದು
ನಾ ಧನ್ಯನಾದೆ ನಿಜದಲಿ

ನನ್ನ  ಮೇಲ್ಮೆಯಲಿ
ನಿನ್ನ ಪಾತ್ರವೂ ಇಹುದು
ಮುನ್ನವೇ ಹೇಳಿದ್ದೆ ಇದನು
ಆದರೂ ಇನ್ನೊಮ್ಮೆ ಹೇಳುವೆನು

ಇಂದು ಹೀಗೆ ಬರೆವಾಗ
ಒಂದೊಂದು  ನೆನಪಾಗುವುದು
ಚೆಂದದಿಂದ ಕಳೆದುಹೋದುವು
ಅಂದಿನ   ದಿನಗಳು
ಮುಂದೆಯೂ ಬಯಸುವೆನು
ಅಂದಿನ ಅದೇ ಪ್ರೀತಿಯನು
ಚೆಂದವಾಗಿರಲಿ ಹೀಗೆಯೇ
ನಮ್ಮೆಲ್ಲರ ಬಾಳ ಪಯಣ

ನನ್ನ ಪ್ರೀತಿಯ  ರುಕ್ಮಿಣಕ್ಕ
ಅಕ್ಕನೆಂದೊಡನೆಯೇ
ಚಕ್ಕನೆ ನೆನಪಾಗುವುದು
ಚೊಕ್ಕ ಸಂಸಾರದ
ನಮ್ಮ ಅಕ್ಕರೆಯ ದಿನಗಳು

ನಮ್ಮನೆಲ್ಲರ ನೀನು
ಬಿಮ್ಮನೆ ಬೆಳೆಸಿದ್ದೆ
ಒಮ್ಮೆಯೂ ಕೆಡದಂತೆ
ಸುಮ್ಮನೆ ಕಾಲಹರಣ ಮಾಡದಂತೆ

ನಮ್ಮೆಲ್ಲರಿಗೂ ನೀನು
ಅಮ್ಮನಂತೆಯೇ ಇದ್ದೆ
ಸುಮ್ಮನೆ ಹೇಳಿಲ್ಲ ನಾನಿದನು
ಅಮ್ಮನೇ ಇದಕೆ ಸಾಕ್ಷಿ

ಸೋಮಾರಿಗಳಾಗಿದ್ದ ನಮಗೆ
ಛೀಮಾರಿ ಹಾಕುತ್ತ
ಯಾಮಾರಿಸಿ ಬೆದರಿಸಿ
ಸಾಮಾನ್ಯರಾಗಿಸಿದೆ ನೀನು

ಸ್ನಾನವ ಮಾಡಿಸಿದೆ
ಧ್ಯಾನವ ಕಲಿಸಿದೆ
ಮಾನವ  ಉಳಿಸುತ್ತ
ಜ್ಞಾನಿಗಳಾಗಿ ಮಾಡಿದೆ 

ತವರಿನಾಮನೆಗಾಗಿ
ಬೆವರೆಷ್ಟು ಸುರಿಸಿದ್ದೆ
ತವರೇ ಇಲ್ಲದಂತಾಯ್ತೀಗ
ಬೆವರಿಗೆ ಬೆಲೆಯಿಲ್ಲದಂತಾಯ್ತು
ತವರಿನ ನೆನಪಷ್ಟೇ ಉಳಿಯಿತೀಗ

ಅಂದಿನಾ ನೆನಪುಗಳು
ಸ್ಪಂದಿಸುತಿಹುವು ಮನದಲ್ಲಿ
ಮಂದದಿ ನರ್ತಿಸುತಿಹುವು 
'ಅಡೇಕಂಡಿಯ' ಸಂದು ಗೊಂದಿನಲಿ 

ಇಂದು  ಕವನವನು
ನಿನಗಾಗೆ ಬರೆದಿಹೆನು
ಒಂದು ಅವಕಾಶ ನನಗಿದುವೆ
ಬಯಸುತಿಹೆ ನಿನ್ನ ಆಶೀರ್ವಾದವ

ರುಕ್ಮಿಣಕ್ಕ ನಮ್ಮನ್ನು ಅಗಲಿದ ಮೇಲೆ ನಾನೊಮ್ಮೆ ಹೊಸಮನೆಗೆ ಹೋದಾಗ ಅವಳಿಲ್ಲದ ಮನೆಯನ್ನು ನಾನು ನೋಡುತ್ತಿರುವೆನೆಂದು ನಂಬಲಾಗಲೇ ಇಲ್ಲ. ನನ್ನ ಆಗಿನ ಭಾವನೆಗಳನ್ನು ವ್ಯಕ್ತಪಡಿಸಿ ನಾನು ಬರೆದ ಕವನ ಒಂದು ಕೆಳಕಂಡಂತಿದೆ:
ಅಕ್ಕನಿಲ್ಲದ ಮನೆ 
ಚಪ್ಪಲಿಯ ತೆಗೆದಿಹೆನು
ಮೆಟ್ಟಿಲನು ಹತ್ತಿದೆನು
ಕತ್ತುದ್ದ  ಮಾಡಿದರೂ
ಅಕ್ಕನಿಲ್ಲ!
ಕುರ್ಚಿಯಲಿ ಕುಳಿತಿಹೆನು
ಕತ್ತೆತ್ತಿ ನೋಡಿದೆನು
ಅತ್ತಿತ್ತ ತಿರುಗಿದರೂ
ಅಕ್ಕನಿಲ್ಲ!
                        ಒಳಗಿನಾ ಬಾಗಿಲಲಿ                               
ಹಣಿಕಿಣಿಕಿ ನೋಡಿದೆನು 
ಮಿಣುಕುವಾ ದೀಪದಲಿ
ಅಕ್ಕನಿಲ್ಲ!
ಬಚ್ಚ್ಚಲಿನ ಮನೆಯಲ್ಲಿ
ಹೊಚ್ಚಿರುವ ಒಲೆಯಿಹುದು
ಬೆಚ್ಚನೆಯ ನೀರಿಹುದು
  ಅಕ್ಕನಿಲ್ಲ!
ಅಡಿಗೆಯಮನೆಯಲ್ಲಿ
ನಗೆಮೊಗದ ಉಷೆ ಇಹಳು
ಬಿಸಿಬಿಸಿ ಕಾಫಿಯ ನೀಡುವಳು
 ಅಕ್ಕನಿಲ್ಲ!
ಮನೆಯ ಕೈತೋಟದಲಿ
ಹಸಿರೆಷ್ಟು ತುಂಬಿಹುದು
ಹೊಸಹೊಸ ಹೂವಿಹುದು
 ಅಕ್ಕನಿಲ್ಲ!
ದೇವರ ಮನೆಯಲ್ಲಿ
ಭಾವನವರು ಕುಳಿತಿಹರು
ದೇವರ ಪೂಜೆಗೆಯ್ಯುತಿಹರು
 ಅಕ್ಕನಿಲ್ಲ!
ಮನೆಯ ಮಾಳಿಗೆಯಲ್ಲಿ
ಅಕ್ಕನ ಪಟವಿಹುದು
ನಸುನಗೆಯ ಬೀರುತಿಹಳು
ಕುಸುಮಮಾಲೆಯ ನಡುವೆ
ಓಹ್ ! ಅಕ್ಕ ನೀನಿಲ್ಲಿ?
ನನ್ನ ಅಕ್ಕಂದಿರ ಮೇಲಿದ್ದ ಪ್ರೀತಿ ನನ್ನ ಒಂದು ಊರಿನ ಕಥೆಯ ಬರವಣಿಗೆಗೆ ಪ್ರೇರಣೆ.  ಬೇರೆ ಯಾರಾದರೂ ಹೀಗೆ ಒಂದು ಊರಿನ ಬಗ್ಗೆ ದೀರ್ಘ ಬರವಣಿಗೆ ಮಾಡಿರುವರೇ ಎಂದು ನನಗೆ ತಿಳಿದಿಲ್ಲ. ನನ್ನ ಬರವಣಿಗೆಗೆ ಕಾರಣರಾದ ನನ್ನ ಅಕ್ಕಂದಿರಿಗೆ ನಮಿಸುತ್ತಾ ಒಂದು ಊರಿನ ಕಥೆಗೆ ಮುಕ್ತಾಯ ಹಾಡುತ್ತಿದ್ದೇನೆ.