Monday, June 29, 2020

ಬಾಲ್ಯ ಕಾಲದ ನೆನಪುಗಳು – ೯೭

ಆ ರಾತ್ರಿ ನನಗೆ ನಿದ್ದೆಯೇ ಬರಲಿಲ್ಲ. ಪ್ರಿನ್ಸಿಪಾಲರ ಇಚ್ಚೆಗೆ  ವಿರುದ್ಧವಾಗಿ ನಾನೇನೂ ಮಾಡಲು ಸಾಧ್ಯವಿಲ್ಲವೆಂದು ನನಗೆ ಗೊತ್ತಿತ್ತು. ತುಂಬಾ ಗೌರವಾನ್ವಿತ ವ್ಯಕ್ತಿಯಾದ ಅವರೊಡನೆ ಹೋರಾಡುವ ಪರಿಸ್ಥಿತಿ ನನಗೆ ಬಂದಿತ್ತು. ಆದರೆ ಅವರ ವಿರುದ್ಧ ನಾನೇನಾದರೂ ದೂರು ಕೊಟ್ಟರೆ ನನಗೆ ಬೆಂಬಲ ನೀಡುವವರು ಯಾರೂ ಇಲ್ಲವೆಂದೂ ನನಗೆ ಗೊತ್ತಿತ್ತು. ಆದರೆ ನಾನು ಯಾವ ಕಾರಣಕ್ಕೂ ಅಕಾಡೆಮಿಯ ಏಳು ವರ್ಷದ  ಬಾಂಡ್ ಗಳಲ್ಲಿ ಹೂಡಿಕೆ ಮಾಡುವುದು ಮೂರ್ಖತನದ ಪರಮಾವಧಿ ಎಂದೂ ನನಗೆ ಅರಿವಿತ್ತು.

ಪುಟ್ಟಣ್ಣ ಆಗ ರಜೆಗೆಂದು ಬೆಂಗಳೂರಿನಿಂದ ಬಂದವನು ಇನ್ನೂ ವಾಪಾಸ್ ಹೋಗಿರಲಿಲ್ಲ. ನಾನು ಅವನೊಡನೆ ನನ್ನ ಸಮಸ್ಯೆಯನ್ನು ಹೇಳಿದೆ. ನಾವಿಬ್ಬರೂ ಒಟ್ಟಿಗೆ ಪ್ರಿನ್ಸಿಪಾಲರ ಮನೆಗೆ ಹೋಗಿ ಅವರನ್ನು ಭೇಟಿ ಮಾಡಲು ತೀರ್ಮಾನಿಸಿದೆವು. ಅವರ ಮನೆ ಭಾರತಿ ಬೀದಿಯಲ್ಲಿದ್ದ ಶ್ರೀಕಂಠಯ್ಯನವರ ಮನೆಯಿಂದ ಮೂರನೇ ಮನೆಯಾಗಿತ್ತು. ಪುಟ್ಟಣ್ಣ ಪ್ರಿನ್ಸಿಪಾಲರಿಗೆ ನನಗೆ ಬಾಂಡ್ ಗಳಲ್ಲಿ ಏಕೆ ಹಣ ಹೂಡಲು ಸಾಧ್ಯವಿಲ್ಲವೆಂದು ವಿವರಿಸಿದ. ತುಂಬಾ ತಾಳ್ಮೆಯಿಂದಲೇ ಅದನ್ನು ಕೇಳಿಸಿಕೊಂಡ ಅವರು, ಅಕಾಡೆಮಿಯು ನನಗೆ ಮಾಡಿದ ಸಹಾಯಕ್ಕೆ ಮರು ಸಹಾಯ ಮಾಡುವುದು ನನ್ನ ಕರ್ತವ್ಯ ಎಂದು ಪುನಃ ಹೇಳಿದರು. ನಾವು ನಮ್ಮ ಉದ್ದೇಶ ಸಾಧಿಸಲಾಗದೇ ಹಿಂದಿರುಗಿದೆವು.

ಶ್ರೀಕಂಠಯ್ಯನವರಿಂದ ಸಲಹೆ  

ಆ ರಾತ್ರಿ ನಾನು ನನ್ನ ಸಮಸ್ಯೆಯನ್ನು ಶ್ರೀಕಂಠಯ್ಯನವರ ಹತ್ತಿರ ಹೇಳುವುದೇ ಸರಿಯೆಂದು ತೀರ್ಮಾನಿಸಿದೆ. ಮಾರನೇ ದಿನ ಬೆಳಿಗ್ಗೆ ನಾನು ನನ್ನ ಸಂಕಟ ಪರಿಸ್ಥಿತಿಯನ್ನು ಅವರೊಡನೆ ಹೇಳಿಕೊಂಡೆ. ಅವರಿಗೆ ನನ್ನ ಮಾತನ್ನು ನಂಬುವುದೇ ಅಸಾಧ್ಯವಾಯಿತು. ಪ್ರಿನ್ಸಿಪಾಲರ ಮೇಲೆ ಅವರ ಕೋಪ ನೆತ್ತಿಗೇರಿತು. ಒಬ್ಬ ವಿದ್ಯಾರ್ಥಿ ತನ್ನ ಸ್ಕಾಲರ್ಷಿಪ್ ಹಣವನ್ನು ಏಳು ವರ್ಷದ ಬಾಂಡ್ ಗಳಲ್ಲಿ ತೊಡಗಿಸುವ ಸಲಹೆ ಎಷ್ಟು ಮೂರ್ಖತನದ್ದು ಎಂದು ಅವರು ಪ್ರತಿಕ್ರಿಯಿಸಿದರು.

ಇಲ್ಲಿ ಶ್ರೀಕಂಠಯ್ಯನವರ ವ್ಯಕ್ತಿತ್ವದ ಬಗ್ಗೆ ಕೆಲವು ವಿಷಯಗಳನ್ನು ಹೇಳಲೇ ಬೇಕು. ಶೃಂಗೇರಿ ಕಾಲೇಜಿನ ಆಡಳಿತ ವರ್ಗಕ್ಕೆ ಅವರೊಬ್ಬ ಬಂಡಾಯಗಾರನಂತಿದ್ದರು. ಮೊದಲನೆಯದಾಗಿ ಅವರು ತಮ್ಮ ಮಗ ಜಯಪ್ರಕಾಶನನ್ನು ಶೃಂಗೇರಿಯಲ್ಲೇ ಕಾಲೇಜಿಗೆ ಕಳಿಸಬಹುದಾಗಿದ್ದರೂ ಬೇಕೆಂದೇ ಅವನನ್ನು ಹುಬ್ಬಳ್ಳಿ ಕಾಲೇಜಿಗೆ ಸೇರಿಸಿದ್ದರು. ಅದಕ್ಕಾಗಿ ಅವರು ಹೆಚ್ಚು ಹಣ ಖರ್ಚು ಮಾಡಲೂ ಹಿಂಜರಿದಿರಲಿಲ್ಲ. ಇನ್ನು ಚಂದ್ರಮೌಳಿರಾಯರು ಅವರ ಭಾವನೇ ಆದರೂ ಅವರು ಯಾವುದೇ ವಿಷಯದಲ್ಲಿ  ಆವರೊಡನೆ ಸ್ಪಂದಿಸುತ್ತಿರಲಿಲ್ಲ. ಇನ್ನು ಶೃಂಗೇರಿ ಪೇಟೆಯಲ್ಲಿ ಅವರದ್ದೇ ಆದ ಒಂದು ಪ್ರಭಾವಶಾಲಿ ಸ್ನೇಹಿತರ ಗುಂಪು ಇತ್ತು. ಆ ವಲಯದಲ್ಲಿ ಅವರು ತುಂಬಾ ಗೌರವಾನ್ವಿತ ವ್ಯಕ್ತಿಯಾಗಿದ್ದರು. ಹಾಗಾಗಿ ಕಾಲೇಜಿನ ಆಡಳಿತ ವರ್ಗಕ್ಕೆ ಅವರ ಬಗ್ಗೆ ಸ್ವಲ್ಪ ಭಯವೇ ಇತ್ತು.

ಅವರ ವ್ಯಕ್ತಿತ್ವದ ವಿಶಿಷ್ಟತೆ ಎಂದರೆ ಅವರ ಉಲ್ಲಾಸಶೀಲ ಸ್ವಭಾವ ಮತ್ತು ಯಾವುದೇ ಸಮಸ್ಯೆಗೆ ಕೂಡಲೇ ತಕ್ಕ ಪರಿಹಾರ ಕಂಡು ಹಿಡಿಯುವ ಜಾಣ್ಮೆ. ಯಾವಾಗಲೂ ಉತ್ಸಾಹದಿಂದಲೇ ಇರುತ್ತಿದ್ದ ಅವರು ಯಾವುದೇ ಕಷ್ಟದ ಸನ್ನಿವೇಶದಲ್ಲೂ ತುಂಬಾ ಆಶಾವಾದಿಯಾಗಿಯೇ  ಇರುತ್ತಿದ್ದರು. ನಾನು ಎಷ್ಟೋ ಬಾರಿ ನನ್ನ ಸಮಸ್ಯೆಯೊಂದನ್ನು ಅವರ ಬಳಿ ತೆಗೆದುಕೊಂಡು ಹೋಗಿದ್ದೆ. ಆದರೆ ಅವರೊಡನೆ ಮಾತನಾಡಿ ಹಿಂದಿರುಗುವಾಗ ಅದೊಂದು ಸಮಸ್ಯೆಯೇ ಆಗಿರಲಿಲ್ಲವೆಂದು ಶ್ರೀಕಂಠಯ್ಯನವರು  ನನಗೆ ಮನವರಿಕೆ ಮಾಡಿರುತ್ತಿದ್ದರು. ಅವರ ಮನೋವೃತ್ತಿ ಹೇಗಿರುತ್ತಿತ್ತೆಂದರೆ ಆ ಸಮಸ್ಯೆಯಲ್ಲೇ ಅದರ ಪರಿಹಾರ  ಅಡಗಿರುತ್ತಿತ್ತು!

ಈಗ ನಾವು ನನ್ನ ಬಾಂಡ್ ಸಮಸ್ಯೆಗೆ ವಾಪಾಸ್ ಬರೋಣ. ಶ್ರೀಕಂಠಯ್ಯನವರು ನನಗೊಂದು ಸರಳ ಪರಿಹಾರವನ್ನು ಸಲಹೆ ಮಾಡಿದರು. ಅದರ ಪ್ರಕಾರ ನಾನು ಪುನಃ ಪ್ರಿನ್ಸಿಪಾಲರನ್ನು ಭೇಟಿ ಮಾಡಿ ನಾನು ಬಾಂಡ್ ಬಗ್ಗೆ ಶ್ರೀಕಂಠಯ್ಯನವರ ಹತ್ತಿರ ಚರ್ಚಿಸಿದ್ದಾಗಿ ಹೇಳಬೇಕಿತ್ತು. ಮತ್ತು ಶ್ರೀಕಂಠಯ್ಯನವರು ಆ ವಿಚಾರದಲ್ಲಿ ಸ್ವತಃ ಅವರನ್ನು ಭೇಟಿ ಮಾಡಿ ಚರ್ಚಿಸುವುದಾಗಿ ಹೇಳಬೇಕಿತ್ತು.

ನಾನು ಆ ಸಂಜೆಯೇ ಪ್ರಿನ್ಸಿಪಾಲರನ್ನು ಅವರ ಮನೆಯಲ್ಲೇ ಭೇಟಿ ಮಾಡಿದೆ. ಅವರೊಡನೆ ನಾನು ಶ್ರೀಕಂಠಯ್ಯನವರ ಹತ್ತಿರ ವಿಷಯವನ್ನು ಚರ್ಚಿಸಿದ್ದಾಗಿಯೂ ಮತ್ತು ಶ್ರೀಕಂಠಯ್ಯನವರೇ ಖುದ್ದಾಗಿ ಅವರನ್ನು ಭೇಟಿ ಮಾಡಿ ಆ ವಿಚಾರವನ್ನು ಚರ್ಚಿಸುವುದಾಗಿಯೂ ಹೇಳಿಬಿಟ್ಟೆ.  ನಾನು ಹಾಗೆ ಹೇಳುತ್ತಿದ್ದಂತೆಯೇ ಪ್ರಿನ್ಸಿಪಾಲರ ಮುಖದ ಬಣ್ಣವೇ ಬದಲಾಗಿ ಬಿಟ್ಟಿತು. ನನ್ನ ಮಾತು ಅವರನ್ನು ದೊಡ್ಡ ಗೊಂದಲಕ್ಕೀಡು ಮಾಡಿತೆಂದು ಅವರ ವರ್ತನೆಯಿಂದಲೇ ಗೊತ್ತಾಗಿ ಹೋಯಿತು. ಶ್ರೀಕಂಠಯ್ಯನವರು ಆ ವಿಷಯದಲ್ಲಿ ತಲೆ ಹಾಕಿದರೆ ವಿಷಯ ತಮಗೆ ತಿರುಗುಬಾಣವಾಗಿ ಪರಿಣಮಿಸುವುದೆಂದು ಅವರಿಗೆ ಅನಿಸಿರಬೇಕು.  ಅವರು ಕೂಡಲೇ ನನಗೆ ಆ ವಿಷಯವನ್ನು ಅಲ್ಲಿಯೇ ಕೈಬಿಟ್ಟು ನಾನು ನನ್ನ ಅಭ್ಯಾಸದ ಬಗ್ಗೆ ಗಮನ ಕೊಡಬೇಕೆಂದು ಹೇಳಿಬಿಟ್ಟರು. ಅವರು ಕೇವಲ ನನ್ನ ಹಿತದೃಷ್ಟಿಯಿಂದ ಆ ಸಲಹೆ ಕೊಟ್ಟಿದ್ದರಂತೆ! ಶ್ರೀಕಂಠಯ್ಯನವರನ್ನು ಆ ವಿಷಯದಲ್ಲಿ ತಲೆ ಹಾಕುವಂತೆ ಮಾಡುವುದು ಅನಾವಶ್ಯಕವಾಗಿತ್ತಂತೆ! ನಾನು ಶ್ರೀಕಂಠಯ್ಯನವರಿಗೆ ಅವರ ನಮಸ್ಕಾರಗಳನ್ನು ತಿಳಿಸಬೇಕಂತೆ!

ನಾನು ಶ್ರೀಕಂಠಯ್ಯನವರ ಮನೆಗೆ ಹಿಂದಿರುಗಿ ಅವರಿಗೆ ಪ್ರಿನ್ಸಿಪಾಲರ ನಮಸ್ಕಾರಗಳನ್ನು ತಿಳಿಸಿದಾಗ ಅವರ ಮುಖದಲ್ಲಿ ಮುಗುಳ್ನಗೆಯೊಂದು ಕಾಣಿಸಿಕೊಂಡಿತು. ಅವರಿಗೆ ಪ್ರಿನ್ಸಿಪಾಲರ ಮನೆಗೆ ನನ್ನ ಭೇಟಿಯ ಪರಿಣಾಮ ಮೊದಲೇ ಗೊತ್ತಿತ್ತೆಂದು ಅನಿಸುತ್ತದೆ!  ಒಟ್ಟಿನಲ್ಲಿ ಮಣಿಪಾಲ್ ಅಕಾಡೆಮಿಯಲ್ಲಿ ನನ್ನ ಏಳು ವರ್ಷದ ಬಾಂಡ್ ಗಳಲ್ಲಿನ ಹಣಹೂಡಿಕೆಯ ಪ್ರಸಂಗ ಹೀಗೆ ಕೊನೆಗೊಂಡಿತು.

ನಾನಿಲ್ಲಿ ಆಗಿನ ಮಣಿಪಾಲ್ ಅಕಾಡೆಮಿಯ ಬಾಂಡ್ ವ್ಯವಹಾರದ ಬಗ್ಗೆ ಬರೆಯಲೇ ಬೇಕಾಗಿದೆ. ನಾನು ಈ ಹಿಂದೆಯೇ ಟಿ.ಎಮ್.ಏ. ಪೈ ಅವರು ಅಕಾಡೆಮಿಯ ಸಂಸ್ಥಾಪಕರೆಂದು ಬರೆದಿದ್ದೇನೆ. ಪ್ರಾಯಶಃ ನಮ್ಮ ದೇಶದಲ್ಲಿ ಮೊಟ್ಟ ಮೊದಲಿಗೆ ಕ್ಯಾಪಿಟೇಷನ್ ಫೀ ಪರಿಕಲ್ಪನೆ ತಂದವರೇ ಶ್ರೀಮಾನ್ ಪೈ ಅವರು ಇರಬೇಕು. ತುಂಬಾ ಮಹಾನ್ ಉದ್ದಿಮೆದಾರರಾದ ಪೈ ಅವರು ಏಕಾಂಗಿಯಾಗಿ ಮಣಿಪಾಲಿನಲ್ಲಿ ಬೇರೆ ಬೇರೆ ಸಂಸ್ಥೆಗಳನ್ನು ಸ್ಥಾಪಿಸಿ ಅಷ್ಟೇ ದಕ್ಷತೆಯಿಂದ ಆ ಸಂಸ್ಥೆಗಳ ಆಡಳಿತವನ್ನು ನೋಡಿಕೊಳ್ಳುತ್ತಿದ್ದರು.

ಈ ಬಗೆಯ ಬೇರೆ ಬೇರೆ ಸಂಸ್ಥೆ ಮತ್ತು ಉದ್ದಿಮೆಗಳನ್ನು ನಡೆಸಲು ಅಧಿಕ ಬಂಡವಾಳದ ಅವಶ್ಯಕತೆ ಇತ್ತು.  ಆ ದೃಷ್ಟಿಯಿಂದ ಪೈ ಅವರು ಅವರ ಆಡಳಿತವಿದ್ದ ಸಂಸ್ಥೆಗಳನ್ನು ಭೇಟಿ ಮಾಡಿದಾಗ ಇಂತಹ ಬಾಂಡ್ ಗಳ  ಪ್ರಚಾರ ಮಾಡುತ್ತಿದ್ದರು.  ಆ ಬಾಂಡ್ ಗಳು ಯಾವ ಸಂಸ್ಥೆಯ ಹೆಸರಿನಲ್ಲಿ ಇದ್ದುವೆಂದು ನನಗರಿವಿಲ್ಲ. ಪ್ರಾಯಶಃ ಈ ಸಂಸ್ಥೆಗಳ ಮುಖ್ಯಸ್ಥರಿಗೆ ಬಾಂಡ್ ಗಳನ್ನು ಅದರಲ್ಲಿ ಕೆಲಸ ಮಾಡುತ್ತಿದ್ದವರಿಗೆ ಕೊಳ್ಳುವಂತೆ ಮಾಡುವ ಜವಾಬ್ದಾರಿಯನ್ನು ಕೊಟ್ಟಿರಬೇಕು. ಆದ್ದರಿಂದಲೇ ಪ್ರಿನ್ಸಿಪಾಲರು ನನಗೆ ಅವುಗಳಲ್ಲಿ ಹಣ ತೊಡಗಿಸುವಂತೆ ಒತ್ತಾಯ ತಂದರೆಂದು ಅನಿಸುತ್ತದೆ. ನನಗೆ ನೆನಪಿದ್ದಂತೆ ಪೈ ಅವರು ನಮ್ಮ ಕಾಲೇಜಿನ ಸಮಾರಂಭಗಳಿಗೆ ಬಂದಾಗ ಅವರ ಮುಂದೆ ನಮ್ಮ ಉಪನ್ಯಾಸಕರು ಬಾಂಡ್ ಗಳನ್ನು ಕೊಂಡುಕೊಂಡ ಬಗ್ಗೆ ವರದಿ ಮಾಡಲಾಗುತ್ತಿತ್ತು.

ಅತ್ತೆಮ್ಮನ ಕಥೆ

ನಾನು ಈ ಹಿಂದೆಯೇ ಶ್ರೀಕಂಠಯ್ಯನವರ ಪತ್ನಿ ಶ್ರೀಲಕ್ಷ್ಮಿಯವರು ನನ್ನನ್ನು ಅವರ ಕುಟುಂಬದ ಒಬ್ಬ ಸದಸ್ಯನಂತೆಯೇ ನೋಡಿಕೊಳ್ಳುತ್ತಿದ್ದರೆಂದು ಬರೆದಿದ್ದೇನೆ. ಎಷ್ಟೋ ಬಾರಿ ತಮಗೆ ಅರೋಗ್ಯ ಸರಿ ಇಲ್ಲದಿದ್ದರೂ ಅವರು ನನ್ನ ಊಟೋಪಚಾರಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದರು. ಇನ್ನು ಶ್ರೀಕಂಠಯ್ಯನವರ ಮನೆಯಲ್ಲಿ ಅವರ ವಿಧವೆಯಾಗಿದ್ದ ಅಕ್ಕನೊಬ್ಬರು ಇದ್ದರೆಂದು ನಾನು ಬರೆದಿದ್ದೆ. ಅವರನ್ನು ಎಲ್ಲರೂ ಅತ್ತೆಮ್ಮನೆಂದು ಕರೆಯುತ್ತಿದ್ದರು. ಸ್ವಲ್ಪ ವಿಚಿತ್ರ ಸ್ವಭಾವದ ಆ ಮಹಿಳೆ ನನ್ನ ವಿಚಾರದಲ್ಲಿ ನಿಜವಾಗಿ "ಅತ್ತೆಮ್ಮನಾಗಿ" ಬಿಟ್ಟಿದ್ದರು. ನನಗೆ ಆಗಾಗ ಸಣ್ಣ ಸಣ್ಣ ಸಮಸ್ಯೆಗಳು ಬರುವಂತೆ ಮಾಡಿ ತುಂಬಾ ಕಿರಿಕಿರಿಯನ್ನುಂಟುಮಾಡುತ್ತಿದ್ದರು. ಶ್ರೀಲಕ್ಷ್ಮಿಯವರು ಮನೆಯಲ್ಲಿ ಇಲ್ಲದಾಗ ನನ್ನ ಪರಿಸ್ಥಿತಿ ಸ್ವಲ್ಪ ಕಷ್ಟಕರವಾಗಿ ಬಿಡುತ್ತಿತ್ತು. ವಾಸ್ತವವಾಗಿ ಗಟ್ಟಿಮುಟ್ಟಾಗಿದ್ದ ಅತ್ತೆಮ್ಮನ ಅರೋಗ್ಯ ಯಾವಾಗಲೂ ತುಂಬಾ ಚೆನ್ನಾಗಿಯೇ ಇರುತ್ತಿತ್ತು. ಆದರೆ ಅವರು ಶ್ರೀಲಕ್ಷ್ಮಿಯವರಿಗೆ ಮನೆ ಕೆಲಸದಲ್ಲಿ ಸ್ವಲ್ಪವೂ ಸಹಾಯ ಮಾಡುತ್ತಿರಲಿಲ್ಲ. ಆದರೆ ಅವರು ಅತ್ತೆಮ್ಮನನ್ನು ಎಂದೂ ದೂರುತ್ತಿರಲಿಲ್ಲ. ಆದರೆ ಅತ್ತೆಮ್ಮನವರು ಶ್ರೀಕಂಠಯ್ಯನವರಿಗೆ ತುಂಬಾ ಹೆದರುತ್ತಿದ್ದರು. ಏಕೆಂದರೆ ಅವರಿಗೆ ಯಾವುದೇ ಅಧಿಕ ಪ್ರಸಂಗಗಳು ಇಷ್ಟವಾಗುತ್ತಿರಲಿಲ್ಲ. ನಾನೂ ಕೂಡ ಅತ್ತೆಮ್ಮನ ಬಗ್ಗೆ ತುಂಬಾ ತಾಳ್ಮೆಯಿಂದ ವರ್ತಿಸುತ್ತಿದ್ದೆ.

ಅತ್ತೆಮ್ಮನಿಗೊಬ್ಬ ಅತಿಥಿಯ ಕಾಟ!

ನಾನು ಈಗಾಗಲೇ ಶ್ರೀಕಂಠಯ್ಯನವರ ಅತಿಥಿ ಸತ್ಕಾರ ಸ್ವಭಾವವನ್ನು ಕೆಲವು ಮಂದಿ ದುರುಪಯೋಗ ಮಾಡಿಕೊಳ್ಳುತ್ತಿದ್ದರೆಂದು ಬರೆದಿದ್ದೇನೆ. ಅಂತಹ ಒಬ್ಬ ವ್ಯಕ್ತಿಯ ಬಗ್ಗೆ ನಾನೀಗ ಬರೆಯಲಿದ್ದೇನೆ. ಈ ವ್ಯಕ್ತಿ ತುಂಗಾ ನದಿಯ ಮೂಲಕ್ಕೆ ಹತ್ತಿರವಿದ್ದ ಜಕ್ಕಾರುಕೊಡಿಗೆ ಎಂಬ ಊರಿನವರು. ಅವರು ಶ್ರೀಕಂಠಯ್ಯನವರಿಗೆ ದೂರದ ಸಂಬಂಧಿ ಕೂಡ ಆಗಿದ್ದರಂತೆ. ವರ್ಷದಲ್ಲಿ ಹಲವು ಬಾರಿ ಶೃಂಗೇರಿಗೆ ಭೇಟಿ ನೀಡುತ್ತಿದ್ದ ಈ ವ್ಯಕ್ತಿ ಮದ್ಯಾಹ್ನದ ಊಟ ಶ್ರೀಕಂಠಯ್ಯನವರ ಮನೆಯಲ್ಲೇ ಎಂದು ದೃಢಪಡಿಸಿಕೊಂಡುಬಿಟ್ಟಿದ್ದರು. ಶ್ರೀಲಕ್ಷ್ಮಿಯವರಿಗೆ ಆ ಬಗ್ಗೆ ಯಾವುದೇ ಬೇಸರವಿರಲಿಲ್ಲ. ಆದರೆ ಅತ್ತೆಮ್ಮನಿಗೆ ಅದು ಸುತರಾಂ ಇಷ್ಟವಿರಲಿಲ್ಲ. ತಕ್ಕ ಮಟ್ಟಿಗೆ ಶ್ರೀಮಂತನೇ ಆಗಿದ್ದ ಆ ವ್ಯಕ್ತಿ ಏಕೆ ಹೋಟೆಲಿನಲ್ಲಿ ಊಟ ಮಾಡಬಾರದು ಎಂಬುದು ಅವರ ಪ್ರಶ್ನೆಯಾಗಿತ್ತು. ಕನಿಷ್ಠಪಕ್ಷ ಹಳ್ಳಿಯಿಂದ ಪೇಟೆಗೆ ಬರುವಾಗ ಅಲ್ಲಿ ಬೆಳೆದ ಸ್ವಲ್ಪ ತರಕಾರಿಯನ್ನಾದರೂ ಕೈಯಲ್ಲಿ ಹಿಡಿದು ಬರಬಾರದೇ ಎಂಬುದು ಅತ್ತೆಮ್ಮನ ವಾದವಾಗಿತ್ತು! ಅವರ ಆ ದೃಷ್ಟಿ ತೀರಾ ತಪ್ಪೆಂದೂ ಹೇಳಬರುವಂತಿರಲಿಲ್ಲ.

ಆದರೆ ಆ ವ್ಯಕ್ತಿಗೆ ಯಾವುದೇ ಸಂಕೋಚಗಳಿರಲಿಲ್ಲ. ಶೃಂಗೇರಿ ಪೇಟೆಗೆ ಪ್ರವೇಶ ಮಾಡಿದ ಕೂಡಲೇ ಅವರು ಶ್ರೀಕಂಠಯ್ಯನವರ ಮನೆಯಲ್ಲಿ ಮೊದಲು ಪ್ರತ್ಯಕ್ಷವಾಗುತ್ತಿದ್ದರು. ತಾವು ಮದ್ಯಾಹ್ನದ ಊಟಕ್ಕೆ ಹಾಜರಾಗುವುದಾಗಿ ಅದು ಮುನ್ಸೂಚನೆ ಆಗಿರುತ್ತಿತ್ತು! ಆ ರೀತಿ ಅವರು ಮನೆಗೆ ಬಂದೊಡನೇ ಅತ್ತೆಮ್ಮನವರು ಬೇಕೆಂದೇ ಶ್ರೀಕಂಠಯ್ಯನವರು ಊರಿನಲ್ಲಿಲ್ಲವೆಂದು ಸುಳ್ಳು ಹೇಳಿ ಬಿಡುತ್ತಿದ್ದರು. ಉದ್ದೇಶ ಅವರು ಮದ್ಯಾಹ್ನದ ಊಟಕ್ಕೆ ಹಾಜರಾಗಬಾರದೆಂದು! ಆದರೆ ತುಂಬಾ ಚಾಲೂಕಿನ ಆ ವ್ಯಕ್ತಿ ತಮ್ಮ ಕೆಲಸ ಮುಗಿದ ಮೇಲೆ ಪೇಟೆಯಲ್ಲೆಲ್ಲಾ ಸುತ್ತಾಡಿ ಶ್ರೀಕಂಠಯ್ಯನವರು ಎಲ್ಲಿದ್ದರೂ ಹುಡುಕಿ ಹಿಡಿದು ಅವರೊಡನೆ ಮದ್ಯಾಹ್ನದ ಊಟಕ್ಕೆ ಹಾಜರಾಗಿ ಬಿಡುತ್ತಿದ್ದರು. ಊಟದ ಮದ್ಯೆ ಆಗಾಗ ತಲೆ ಎತ್ತಿ ಆ ವ್ಯಕ್ತಿ ಅತ್ತೆಮ್ಮನತ್ತ ವ್ಯಂಗ ದೃಷ್ಟಿ ಬೀರುತ್ತಿದ್ದರು! ಆ ದೃಷ್ಟಿ ಒಂದು ಪಂದ್ಯದಲ್ಲಿ ವಿಜಯಶಾಲಿಯಾದವನಂತಿರುತ್ತಿತ್ತು! ಅತ್ತೆಮ್ಮನಿಗೆ ಮೈ ಎಲ್ಲಾ  ಉರಿದು ಹೋಗುತ್ತಿತ್ತು!

ಅತ್ತೆಮ್ಮನ ಪಶ್ಚಾತ್ತಾಪ

ಆಮೇಲೆ ಎಷ್ಟೋ ವರ್ಷಗಳ ನಂತರ ಅತ್ತೆಮ್ಮನವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡುವ ಸಂದರ್ಭ ನನಗೆ ಬಂತು. ತೀರಾ ವಯಸ್ಸಾಗಿದ್ದ ಅವರನ್ನು ಶ್ರೀಕಂಠಯ್ಯನವರ ಕುಟುಂಬಕ್ಕೆ ಸೇರಿದ ಆಸ್ಪತ್ರೆಯೊಂದರಲ್ಲಿ ಶಾಶ್ವತವಾಗಿ ಇರುವಂತೆ ಏರ್ಪಾಟು ಮಾಡಲಾಗಿತ್ತು. ನಾನು ಅಲ್ಲಿ ಶ್ರೀಕಂಠಯ್ಯನವರ ಮಗಳು ಡಾಕ್ಟರ್ ವಿಜಯಲಕ್ಷಿ ಮತ್ತು ಮಗ ಡಾಕ್ಟರ್ ಜಯಪ್ರಕಾಶ ಅವರನ್ನು ನೋಡಲು ಹೋಗಿದ್ದೆ. ಅತ್ತೆಮ್ಮನವರು ಇರುವುದನ್ನು ಕೇಳಿದೊಡನೇ ನಾನು ಅವರ ಹಾಸಿಗೆಯ ಹತ್ತಿರ ಹೋಗಿ ಕುಳಿತು ಅವರನ್ನು ಮಾತನಾಡಿಸಿದೆ. ನಾವಿಬ್ಬರೂ ಶ್ರೀಕಂಠಯ್ಯನವರ ಮನೆಯ ಹಳೆಯ ದಿನಗಳನ್ನು ನೆನೆಸಿಕೊಳ್ಳತೊಡಗಿದೆವು. ಆಗ ಇದ್ದಕ್ಕಿದ್ದಂತೇ ಅತ್ತೆಮ್ಮ ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದು ಅಳತೊಡಗಿದರು. ಅವರು ನನಗೆ ತಾವು ಆ ಮನೆಯಲ್ಲಿ ಎಷ್ಟು ಗೋಳು ಕೊಟ್ಟಿದ್ದರೆಂದು ಪದೇಪದೇ ಹೇಳುತ್ತಾ ಬಿಕ್ಕಿ ಬಿಕ್ಕಿ ಅತ್ತರು. ಅಲ್ಲದೇ ನಾನೆಷ್ಟು ತಾಳ್ಮೆಯಿಂದ ಎಲ್ಲವನ್ನೂ ಸಹಿಸಿಕೊಂಡಿದ್ದೆನೆಂದು ಪ್ರಶಂಸೆ ಮಾಡಿದರು. ತಾವು ನನಗಿತ್ತ ಗೋಳಿಗೆ ತುಂಬಾ ಪಶ್ಚತ್ತಾಪ ಪಡುತ್ತಾ ತಮ್ಮನು ಕ್ಷಮಿಸ ಬೇಕೆಂದು ಮತ್ತು ಅದನ್ನೆಲ್ಲ ಮರೆತುಬಿಡಬೇಕೆಂದೂ ಹೇಳತೊಡಗಿದರು. ನಾನು ಕಣ್ಣೀರಿಡುತ್ತಾ ಅವರ ಬಗ್ಗೆ ನನಗೆ ಯಾವುದೇ ಕೋಪ ಇಲ್ಲವೆಂದು ಸ್ಪಷ್ಟವಾಗಿ ಹೇಳಿಬಿಟ್ಟೆ. ಅದು ನಮ್ಮಿಬ್ಬರ ಕೊನೆಯ ಭೇಟಿಯಾಗಿತ್ತು. ಆಮೇಲೆ ಸ್ವಲ್ಪ ದಿನದಲ್ಲೇ ಅತ್ತೆಮ್ಮನವರು ತೀರಿಕೊಂಡ ಸಮಾಚಾರ ನನಗೆ ಬಂತು.  

ನಮ್ಮ ಎರಡನೇ ವರ್ಷದ ಬಿ. ಎಸ್ ಸಿ. ಡಿಗ್ರಿ ತರಗತಿಯ ವಾರ್ಷಿಕ ಪರೀಕ್ಷೆ ೧೯೬೮ನೇ ಇಸವಿಯ ಮಾರ್ಚ್ ತಿಂಗಳಲ್ಲಿ ನಡೆಯಿತು. ಈ ಪರೀಕ್ಷೆಯಲ್ಲಿ ಮ್ಯಾಥಮ್ಯಾಟಿಕ್ಸ್ ಸಬ್ಜೆಕ್ಟಿನಲ್ಲಿ ೨೦೦ಕ್ಕೆ ೨೦೦ ಅಂಕಗಳನ್ನು ಗಳಿಸುವುದು ನನ್ನ ಗುರಿಯಾಗಿತ್ತು. ಅದೃಷ್ಟವಶಾತ್ ನಾನು ಎಲ್ಲಾ ಪ್ರಶ್ನೆಗಳಿಗೂ ಸರಿಯಾದ ಉತ್ತರಗಳನ್ನು (ಶ್ರೀನಾಥ ಶಾಸ್ತ್ರಿಯವರ ಸಬ್ಜೆಕ್ಟಿನಲ್ಲಿ ಕೂಡ) ಬರೆಯಲು ಸಾಧ್ಯವಾಯಿತು, ನನ್ನ ನಿರೀಕ್ಷೆಯ ಪ್ರಕಾರ ನಾನು ೨೦೦ಕ್ಕೆ ೨೦೦ ಅಂಕಗಳನ್ನು ಗಳಿಸುವೆನೆಂದು ಭಾವಿಸಿದೆ.

------- ಮುಂದುವರಿಯುವುದು-----


Friday, June 26, 2020

ಬಾಲ್ಯ ಕಾಲದ ನೆನಪುಗಳು – ೯೬

ಆ ದಿನಗಳಲ್ಲಿ ಡಿಗ್ರಿ ತರಗತಿಯ ಮೊದಲನೇ ವರ್ಷದ ವಾರ್ಷಿಕ ಪರೀಕ್ಷೆ ಕೇವಲ ಕ್ಲಾಸ್ ಪರೀಕ್ಷೆಯಾಗಿದ್ದು ಕಾಲೇಜಿನವರೇ ಮಾಡಿ ಮುಗಿಸಬೇಕಿತ್ತು. ಹಾಗಾಗಿ ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ತುಂಬಾ ಲಘುವಾಗಿ ತೆಗೆದುಕೊಳ್ಳುತ್ತಿದ್ದರು. ಉಪನ್ಯಾಸಕರುಗಳು ತಮ್ಮನ್ನು ಹೇಗಿದ್ದರೂ ಪಾಸ್ ಮಾಡಿಬಿಡುತ್ತಾರೆ ಎಂಬ ನಂಬಿಕೆ ವಿದ್ಯಾರ್ಥಿಗಳಿಗಿತ್ತು. ಆದ್ದರಿಂದ ಪರೀಕ್ಷೆಯ ಬಗ್ಗೆ ಅವರಿಗೆ ಹೆಚ್ಚು ಒತ್ತಡವಿರುತ್ತಿರಲಿಲ್ಲ. ನಾನೂ ಕೂಡ ಪರೀಕ್ಷೆಯನ್ನು ತುಂಬಾ ಲಘುವಾಗೇ ತೆಗೆದುಕೊಂಡಿದ್ದೆ. ನಾನು ಸ್ವತಃ ಅಭ್ಯಾಸಕ್ಕಿಂತಲ್ಲೂ ಹೆಚ್ಚಾಗಿ ಹಾಸ್ಟೆಲಿನ ವಿದ್ಯಾರ್ಥಿಗಳಿಗೆ ಅಭ್ಯಾಸ ಮಾಡಿಸುವುದರಲ್ಲಿ ಹೆಚ್ಚು ವೇಳೆ ಕಳೆದಿದ್ದೆ. ಆದರೆ ನಮ್ಮ ಉಪನ್ಯಾಸಕರು ಹಾಗೂ ಪ್ರಿನ್ಸಿಪಾಲರಿಗೆ ವಿದ್ಯಾರ್ಥಿಗಳು ಹೀಗೆ ಕ್ಲಾಸ್ ಪರೀಕ್ಷೆಯನ್ನು ಲಘುವಾಗಿ ತೆಗೆದುಕೊಂಡದ್ದು ಏನೇನೂ ಇಷ್ಟವಾಗಲಿಲ್ಲ.

ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಬರೆದ ಉತ್ತರಗಳಿಂದ ಉಪನ್ಯಾಸಕರಿಗೆ ಅವರು ಪರೀಕ್ಷೆಯನ್ನು ತುಂಬಾ ಲಘುವಾಗಿ ತೆಗೆದುಕೊಂಡಿದ್ದರೆಂದು ತಿಳಿದು ಮೈಯೆಲ್ಲಾ ಉರಿದು ಹೋಯಿತು. ಅಂತಹ ವಿದ್ಯಾರ್ಥಿಗಳಿಗೆ ಸರಿಯಾಗಿ ಬುದ್ಧಿ ಕಲಿಸಲೇ ಬೇಕೆಂದು ಅವರು ತೀರ್ಮಾನ ಮಾಡಿರಬೇಕು. ಬೇಸಿಗೆ ರಜೆ ಕಳೆದು ಪುನಃ ಕಾಲೇಜಿಗೆ ಬಂದ ವಿದ್ಯಾರ್ಥಿಗಳು ನೋಟೀಸ್ ಬೋರ್ಡ್ ನೋಡಿ ದಂಗಾಗಿ ಹೋದರು. ಏಕೆಂದರೆ ಅಲ್ಲಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರ ದೊಡ್ಡ ಪಟ್ಟಿಯೇ ಇತ್ತು. ಆ ಪಟ್ಟಿಯಲ್ಲಿ ನನ್ನನ್ನು ಸೇರಿ ಕೇವಲ ಕೆಲವರ ಹೆಸರನ್ನು ಬಿಟ್ಟು ಉಳಿದೆಲ್ಲರ ಹೆಸರುಗಳೂ ಇದ್ದವು. ನನ್ನ ಮನಸ್ಸಿಗೇನೋ ನೆಮ್ಮದಿ ಸಿಕ್ಕಿದರೂ ನನಗೆ ನಾನೂ ಕೂಡ ಪರೀಕ್ಷೆಯನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲವೆಂದು ಅನಿಸಿತು. ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪುನಃ ಒಂದು ಪರೀಕ್ಷೆ ನಡೆಸಲಾಯಿತು. ಎಲ್ಲರನ್ನೂ ಎರಡನೇ ವರ್ಷದ ಡಿಗ್ರಿ ತರಗತಿಗೆ ಪ್ರಮೋಟ್ ಮಾಡಲಾಯಿತಾದರೂ ಆಡಳಿತ ವರ್ಗದವರು ಅವರಿಗೆಲ್ಲಾ ಚೆನ್ನಾಗಿ ಬುದ್ಧಿ ಕಲಿಸಿದ್ದರು.

ಈ ಸನ್ನಿವೇಶದಲ್ಲಿ ನನ್ನ ಮನಸ್ಸು  ವಾಸ್ತವಿಕತೆಯ ಕಡೆ ಗಮನ ಕೊಟ್ಟಿತು. ಒಂದಂತೂ ನಿಜವಾಗಿತ್ತು. ನಾನು ಕಳೆದ ವರ್ಷವೆಲ್ಲಾ ಹಾಸ್ಟೆಲ್ ವಿದ್ಯಾರ್ಥಿಗಳಿಂದ ಮತ್ತು ಇತರರಿಂದ ನಾನು ಪಿ.ಯು.ಸಿ. ಪರೀಕ್ಷೆಯಲ್ಲಿ Rank ಪಡೆದುದಕ್ಕಾಗಿ ಹೊಗಳಿಸಿಕೊಳ್ಳುವುದರಲ್ಲಿ ಅಥವಾ ಮನ್ನಣೆ ಪಡೆಯುವುದರಲ್ಲಿ ಕಳೆದು ಬಿಟ್ಟಿದ್ದೆ. ನನ್ನ ಹಿತೈಷಿಗಳು ನನಗಾಗಲೇ ಒಂದು ಎಚ್ಚರಿಕೆ ಕೊಟ್ಟಿದ್ದರು. ಹಲವು ಬಾರಿ ಮೈಲಿಕಲ್ಲೊಂದನ್ನು ಸಾಧಿಸುವುದು ಸುಲಭವಾಗಿರುತ್ತದೆ. ಆದರೆ ನಮ್ಮನ್ನು ಅದೇ ಮಟ್ಟದಲ್ಲಿ ನಿಲ್ಲುವಂತೆ ನೋಡಿಕೊಳ್ಳುವುದೇನು ಸುಲಭವಲ್ಲ. ಆ ಮಟ್ಟದಲ್ಲೇ ನಾವು ಸ್ಥಿರವಾಗಿರಬೇಕಾದರೆ ತುಂಬಾ ಸಾಧನೆಯ ಅವಶ್ಯಕತೆ ಇರುತ್ತದೆ. ನನ್ನ ವಿಷಯದಲ್ಲಿ ಅದು ಸಂಪೂರ್ಣ ಸತ್ಯವಾಗಿತ್ತು.

ಒಟ್ಟಿನಲ್ಲಿ ವಿಷಯವಿಷ್ಟೇ. ನಾನು ನನ್ನ ಹೆಸರನ್ನು ಉಳಿಸಿಕೊಳ್ಳಬೇಕಾದರೆ ಬಿ.ಎಸ್ಸಿ. ಅಂತಿಮ ಪರೀಕ್ಷೆಯಲ್ಲಿ Rank ಪಡೆಯಲೇ ಬೇಕಿತ್ತು. ಅಂತಿಮ ಪರೀಕ್ಷೆಯಲ್ಲಿ ಮಾತ್ರ ನಾವು ನಮ್ಮ ಮೇಜರ್ ಸಬ್ಜೆಕ್ಟುಗಳಾದ ಫಿಸಿಕ್ಸ್ ಮತ್ತು ಕೆಮಿಸ್ಟ್ರಿ ಸೇರಿ ಒಟ್ಟು ೮೦೦ ಅಂಕಗಳ ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸಬೇಕಿತ್ತು. ಡಿಗ್ರಿಯ ಎರಡನೇ ವರ್ಷದಲ್ಲಿ ನಾವು ೨೦೦ ಅಂಕಗಳ ನಮ್ಮ ಮೈನರ್ ಮ್ಯಾಥಮ್ಯಾಟಿಕ್ಸ್ ಸಬ್ಜೆಕ್ಟಿನ ಎರಡು ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸಬೇಕಿತ್ತು. ಅಂತಿಮ ಪರೀಕ್ಷೆಯ ನಂತರ ಒಟ್ಟಿನಲ್ಲಿ ೧೦೦೦ ಅಂಕಗಳಲ್ಲಿ ನಾವು ಎಷ್ಟು ಗಳಿಸಿದ್ದೇವೆಂಬ ಆಧಾರದ ಮೇಲೆ ನಮ್ಮ Ranking ನಿರ್ಧಾರ ಮಾಡಲಾಗುತ್ತಿತ್ತು.

ಆ ದಿನಗಳಲ್ಲಿ ಫಿಸಿಕ್ಸ್ ಸಬ್ಜೆಕ್ಟಿನಲ್ಲಿ ಗರಿಷ್ಟ ಶೇಕಡಾ ೮೦-೮೫ ಅಂಕಗಳನ್ನು ಮತ್ತು ಕೆಮಿಸ್ಟ್ರಿಯಲ್ಲಿ ಗರಿಷ್ಟ ಶೇಕಡಾ ೭೦-೭೫ ಅಂಕಗಳನ್ನು ಮಾತ್ರ ತೆಗೆದುಕೊಳ್ಳಲು ಸಾಧ್ಯವಿತ್ತು. ಆದರೆ ಮ್ಯಾಥಮ್ಯಾಟಿಕ್ಸ್ ಮೇಜರ್ ಸಬ್ಜೆಕ್ಟ್ ಆದರೆ ೪೦೦ಕ್ಕೆ ೪೦೦ ಮತ್ತು ಮೈನರ್ ಆದರೆ ೨೦೦ಕ್ಕೆ ೨೦೦ ಅಂಕಗಳನ್ನು ಪಡೆಯಲು ಸಾಧ್ಯವಿತ್ತು. ನಾನು ಮಾಡಿದ  ಲೆಕ್ಕದ ಪ್ರಕಾರ ನಾನು ಮ್ಯಾಥಮ್ಯಾಟಿಕ್ಸ್ ನಲ್ಲಿ ೨೦೦ಕ್ಕೆ ೨೦೦ ಅಂಕಗಳನ್ನು ಗಳಿಸಿದರೂ ಆ ಸಬ್ಜೆಕ್ಟ್ ಮೇಜರ್ ಆಗಿ ತೆಗೆದುಕೊಂಡ ವಿದ್ಯಾರ್ಥಿ ೪೦೦ಕ್ಕೆ ೪೦೦ ಅಂಕಗಳನ್ನು ತೆಗೆದುಕೊಳ್ಳುವ ಅವಕಾಶವಿದ್ದರಿಂದ ಮತ್ತು ನನಗೆ ಫಿಸಿಕ್ಸ್ ಮತ್ತು ಕೆಮಿಸ್ಟ್ರಿಯಲ್ಲಿ ಸರಾಸರಿ ೧೦೦ಕ್ಕೆ ೮೦ ಅಂಕಗಳಿಗಿಂತ ಮೇಲೆ ತೆಗೆಯುವುದು ಅಸಾಧ್ಯವಾದ್ದರಿಂದ ನನ್ನ ಹೆಸರು ೧೦ ಮಂದಿಯ Rank ಪಟ್ಟಿಯಲ್ಲಿರುವುದು ತೀರಾ ಅಸಾಧ್ಯವೇ ಆಗಿತ್ತು.

 

ನಾನು ನನ್ನ ಈ ಪರಿಸ್ಥಿತಿಯನ್ನು ನನ್ನ ಹಿತೈಷಿಗಳಿಗೆ ತಿಳಿಸಿ ಅವರು ಅನಾವಶ್ಯವಾಗಿ ನಾನು ಅಂತಿಮ ಬಿ.ಎಸ್ಸಿ. ಪರೀಕ್ಷೆಯಲ್ಲಿ ಕೂಡ Rank ಗಳಿಸಿಯೇ ಬಿಡುತ್ತೇನೆಂದು ನಿರೀಕ್ಷೆ ಮಾಡುವುದು ತಪ್ಪೆಂದು ವಿವರಿಸತೊಡಗಿದೆ. ನನ್ನ ಪ್ರಕಾರ ಆ ಬಗೆಯ ನಿರೀಕ್ಷೆ ನನ್ನ ಮೇಲೆ ಒಂದು ದೊಡ್ಡ ಹೊರೆಯಾಗಲಿತ್ತು. ನಾನು ಈ ವಿಷಯವನ್ನು ಮೊದಲು ನನ್ನ ಉಪನ್ಯಾಸಕರೊಡನೆ ಹೇಳಿಕೊಂಡೆ. ನನಗೆ ಆವರಿಗೆ ನನ್ನ ಲೆಕ್ಕಾಚಾರ ಮನವರಿಕೆ ಮಾಡುವುದು ಸುಲಭವೆಂಬ ಭಾವನೆ ಇತ್ತು. ವಿಚಿತ್ರವೆಂದರೆ ಅವರಲ್ಲಿ ಯಾರೂ ನನ್ನ ಲೆಕ್ಕಾಚಾರ ಸರಿಯಲ್ಲವೆಂದು ಹೇಳಲಿಲ್ಲ. ಆದರೆ ಅವರ ಪ್ರಕಾರ ಲೆಕ್ಕಾಚಾರ ಏನೇ ಇರಲಿ ನನಗೆ Rank ಪಡೆಯುವ ಸಾಮರ್ಥ್ಯ ಇದ್ದೇ ಇತ್ತು!  ಅವರಲ್ಲಿ ಒಬ್ಬರಂತೂ ನನಗೆ "ಕೃಷ್ಣಮೂರ್ತಿ, ನೀನು ನಿನ್ನ ಲೆಕ್ಕಾಚಾರವನ್ನೇನೋ ಚೆನ್ನಾಗಿಯೇ ಮಾಡಿರುವೆ. ಆದರೆ ನಮ್ಮೆಲ್ಲರ ದೃಷ್ಟಿಯಲ್ಲಿ ನಿನಗೆ ಪುನಃ Rank ಪಡೆಯುವ ಅರ್ಹತೆ ಇದೆ. ಆದ್ದರಿಂದ ಈ ಲೆಕ್ಕಾಚಾರಗಳನ್ನೆಲ್ಲಾ  ಬದಿಗಿರಿಸಿ ನಿನ್ನ ಅಭ್ಯಾಸದತ್ತ ಗಮನ ಕೊಡು"  ಎಂದು ಹೇಳಿಬಿಟ್ಟರು. ಅಲ್ಲಿಗೆ ನನ್ನ ಮನಸ್ಸಿನ ಹೊರೆಯನ್ನು ಇಳಿಸಿಕೊಳ್ಳುವ ನನ್ನ ಪ್ರಯತ್ನ ಸಂಪೂರ್ಣ ವ್ಯರ್ಥವಾಯಿತು. ಇನ್ನು ನನ್ನ ಕುಟುಂಬದವರು, ಸ್ನೇಹಿತರು ಮತ್ತಿತರರಿಗೆ ನನ್ನ ಲೆಕ್ಕಾಚಾರ ಅರ್ಥವಾಗುವ ಚಾನ್ಸ್ ಇರಲೇ ಇಲ್ಲ. ಆದ್ದರಿಂದ ನಾನು ಆ ಪ್ರಯತ್ನ ಮಾಡಲು ಹೋಗಲೇ ಇಲ್ಲ.

ಇಂತಹ ಸನ್ನಿವೇಶದಲ್ಲಿ ನಾನು ನನ್ನಿಂದಾದಷ್ಟು ಪ್ರಯತ್ನ ಮಾಡಿ ನಾನು ಹಿಂದೆ ಗಳಿಸಿದ ಸ್ಥಾನವನ್ನು  ಉಳಿಸಿಕೊಳ್ಳ ಬೇಕೆಂದೂ ಮತ್ತು ಮಿಕ್ಕಿದ್ದನ್ನು ದೇವರಿಗೆ ಬಿಡುವುದೆಂದು ತೀರ್ಮಾನ ಮಾಡಿದೆ. ಆ ದೃಷ್ಟಿಯಲ್ಲಿ ನನ್ನ ಮೊದಲ ಗುರಿ ಮ್ಯಾಥಮ್ಯಾಟಿಕ್ಸ್ ನಲ್ಲಿ ೨೦೦ಕ್ಕೆ ೨೦೦ ಅಂಕಗಳನ್ನು ತೆಗೆದುಕೊಳ್ಳುವುದಾಗಿತ್ತು. ಆದರೆ ಅದಕ್ಕೆ ದೊಡ್ಡ ಸಮಸ್ಯೆ ನಮ್ಮ ಉಪನ್ಯಾಸಕರಾದ ಶ್ರೀನಾಥ ಶಾಸ್ತ್ರಿಯವರಾಗಿದ್ದರು. ಅವರು ತೆಗೆದುಕೊಳ್ಳುತ್ತಿದ್ದ ತರಗತಿಗಳಲ್ಲಿ ಏನನ್ನು ಅವರು ಬೋಧನೆ ಮಾಡುತ್ತಿದ್ದಾರೆಂದು ಅರಿತುಕೊಳ್ಳುವುದು ಸಾಮಾನ್ಯವಾದ ಸವಾಲೇನಾಗಿರಲಿಲ್ಲ. ಆದರೆ ನಾನು ನನ್ನ ಉತ್ಸಾಹವನ್ನು ಕಳೆದುಕೊಳ್ಳಲಿಲ್ಲ. ಪ್ರಯತ್ನವನ್ನು ಮುಂದುವರಿಸಿದೆ.

ಆ ವರ್ಷ ನಮ್ಮ ಕಾಲೇಜಿನ ಕೆಮಿಸ್ಟ್ರಿ ಡಿಪಾರ್ಟ್ಮೆಂಟಿಗೆ ವೆಂಕಟೇಶ್ ರಾವ್ ಎಂಬ ತರುಣ ಡೆಮಾನ್ಸ್ಟ್ರೇಟರ್ ನೇಮಕ ಮಾಡಲಾಯಿತು. ಅವರು ಎಂ.ಜಿ.ಮ್. ಕಾಲೇಜಿನಲ್ಲಿ ಆಗ ತಾನೇ ಬಿ.ಎಸ್ಸಿ. ಫಸ್ಟ್ ಕ್ಲಾಸ್ಸಿನಲ್ಲಿ ಪಾಸ್ ಮಾಡಿ ಬಂದಿದ್ದರು. ಆಕರ್ಷಕ ತರುಣ ರಾವ್ ನನಗೆ ಅಭ್ಯಾಸದ ಬಗ್ಗೆ ತುಂಬಾ ಪ್ರೋತ್ಸಾಹ ನೀಡಿದರು. ಅವರಿಗೆ ನಾನು ಅಂತಿಮ ಬಿ.ಎಸ್ಸಿ. ಪರೀಕ್ಷೆಯಲ್ಲಿ Rank ಗಳಿಸಿಯೇ ಬಿಡುತ್ತೇನೆಂದು ತುಂಬಾ  ವಿಶ್ವಾಸವಿತ್ತು. ಅವರು ನನಗೆ ಬಿ.ಎಸ್ಸಿ. ಪರೀಕ್ಷೆ ಮುಗಿದ ನಂತರ ಐ ಐ ಟಿ (ಬಾಂಬೆ) ಸೇರಿಕೊಳ್ಳಬೇಕೆಂದು ಸಲಹೆ ನೀಡಿದರು. ಬಹು ಬೇಗನೆ ನಾವಿಬ್ಬರೂ ಆತ್ಮೀಯ ಸ್ನೇಹಿತರಾಗಿ ಬಿಟ್ಟೆವು. ಅವರು ಆ ಮುಂದಿನ ವರ್ಷ ನಮ್ಮ ಕಾಲೇಜಿಗೆ ರಾಜೀನಾಮೆ ಕೊಟ್ಟು ಐ ಐ ಟಿ (ಬಾಂಬೆ) ಸೇರಿಕೊಂಡರು. ನಾವು ಆಮೇಲೆ ಕೆಲವು ಸಮಯ ಪತ್ರ ವ್ಯವಹಾರ ನಡೆಸಿದ್ದೆವು. ಆದರೆ ಕಾಲ ಕ್ರಮೇಣ ನಮ್ಮ ಸ್ನೇಹ ಬಾಂಧವ್ಯ ಕೊನೆಗೊಂಡಿತು.

ನನ್ನ ಬ್ಯಾಂಕ್ ಖಾತೆಯಲ್ಲಿ ಹಣ ಹೆಚ್ಚಾದುದು ನನಗೆ ಕೆಲವು ಸಂದಿಗ್ದ ಪರಿಸ್ಥಿತಿಯನ್ನು ಎದುರಿಸುವಂತೆ ಮಾಡಿತು. ನಮ್ಮ ಕುಟುಂಬದ ಹಣಕಾಸಿನ ಪರಿಸ್ಥಿತಿ ಮಾಮೂಲಿನಂತೆ ತುಂಬಾ ಕಷ್ಟಕರವಾಗಿಯೇ ಮುಂದುವರಿದಿತ್ತು. ಈ ಪರಿಸ್ಥಿತಿ ನನ್ನನ್ನು ಉಭಯಸಂಕಟಕ್ಕೀಡು ಮಾಡಿಬಿಟ್ಟಿತು. ನಾನು ಹಣವನ್ನು ಕುಟುಂಬದ ವೆಚ್ಚಕ್ಕೆ ಕೊಡಬೇಕೇ ಅಥವಾ ನನ್ನ ಮುಂದಿನ ಓದಿಗೆ ಬಳಸಬೇಕೇ ಎನ್ನುವ ಪ್ರಶ್ನೆ ನನ್ನ ಮುಂದಿತ್ತು. ನನ್ನ ತಂದೆ ತಾಯಿಯವರಿಗೆ ತಾವು ಇನ್ನು ಮುಂದೆ ನನ್ನ ಓದಿಗಾಗಿ ಖರ್ಚು ಮಾಡಬೇಕಿಲ್ಲವೆಂಬ ವಿಷಯ ನೆಮ್ಮದಿ ತಂದಿತ್ತು. ಆದರೆ ಅವರು ನನಗೆ ನನ್ನ ಹಣವನ್ನು ಮನೆಯ ಖರ್ಚಿಗೆ ಕೊಡಬೇಕಿಲ್ಲವೆಂದು ಮತ್ತು ಕೇವಲ ನನ್ನ ಮುಂದಿನ ವಿದ್ಯಾಭ್ಯಾಸಕ್ಕೆ ಬಳಸಬೇಕೆಂದು ಸ್ಪಷ್ಟ ಮಾಡಿಬಿಟ್ಟರು.

ನನ್ನ ಬ್ಯಾಂಕಿನ ಖಾತೆಯಲ್ಲಿನ ಹಣದ ಮೇಲೆ ಪ್ರಿನ್ಸಿಪಾಲರ ಕಣ್ಣು ಬಿತ್ತು! 

ನಾನು ಈ ಹಿಂದಿನ ಅಧ್ಯಾಯದಲ್ಲಿ ಆ ಶೈಕ್ಷಣಿಕ ವರ್ಷದ ಕೊನೆಯಲ್ಲಿ ಸಿಂಡಿಕೇಟ್ ಬ್ಯಾಂಕಿನ ನನ್ನ ಖಾತೆಯಲ್ಲಿನ  ಹಣ  ಒಂದು ಸಾವಿರ ರೂಪಾಯಿಯ ಹತ್ತಿರ ತಲುಪಿತ್ತು ಎಂದು ಬರೆದಿದ್ದೇನೆ. ಆ ವರ್ಷ ಸ್ವಲ್ಪ ಬೇಗದಲ್ಲೇ ವಿಶ್ವವಿದ್ಯಾನಿಲಯದಿಂದ ನನ್ನ ಸ್ಕಾಲರ್ಷಿಪ್ ಹಣವಾದ ೪೫೦ ರೂಪಾಯಿ ಕಾಲೇಜು ಮೂಲಕ ಬಂದು ಬಿಟ್ಟಿತ್ತು. ಆಗ ನನ್ನ ಬ್ಯಾಂಕಿನ ಖಾತೆಯಲ್ಲಿನ ಹಣ ಮತ್ಯಾರಿಗೂ ಅಲ್ಲ, ನಮ್ಮ ಪ್ರಿನ್ಸಿಪಾಲ್ ಮತ್ತು ತತ್ವ ಶಾಸ್ತ್ರಜ್ಞ ರಾಮಕೃಷ್ಣರಾಯರ ಕಣ್ಣಿಗೇ ಬಿದ್ದು ಬಿಟ್ಟಿತು! ನನ್ನ ಕೈಗೆ ಚೆಕ್ ಸಿಕ್ಕಿ ಕೇವಲ ಎರಡು ದಿನಗಳ ನಂತರ ನನಗೆ ಪ್ರಿನ್ಸಿಪಾಲರಿಂದ ಕರೆ ಬಂತು. ಅವರು ನನ್ನ ಹತ್ತಿರ ಮಾತು ಪ್ರಾರಂಭಿಸಿದ ರೀತಿಯಲ್ಲೇ ನನಗೆ ಅವರೇನೋ ನನಗಿಷ್ಟವಾಗದ ವಿಷಯ ಹೇಳಲಿದ್ದಾರೆಂದು ಅನುಮಾನ ಬಂದು ಬಿಟ್ಟಿತು. ಅವರ ಪ್ರಕಾರ ನನ್ನ ಹಣಕಾಸಿನ ಪರಿಸ್ಥಿತಿ ಸುಧಾರಣೆ ಕಂಡದ್ದಕ್ಕೆ ಮುಖ್ಯ ಕಾರಣ ಮಣಿಪಾಲ್ ಅಕಾಡೆಮಿಯು ನನಗೆ ಮಾಡಿದ ಉಪಕಾರವೇ  ಆಗಿತ್ತು. ಆದ್ದರಿಂದ ನನಗೂ ಕೂಡ ಅಕಾಡೆಮಿಯ ಉಪಕಾರಕ್ಕೆ ಪ್ರತ್ಯುಪಕಾರ ಮಾಡುವ ಜವಾಬ್ದಾರಿ ಇತ್ತು! ಅಕಾಡೆಮಿಗೆ ವಿದ್ಯಾರ್ಥಿಯಾದ  ನಾನು ಯಾವ ರೀತಿಯಲ್ಲಿ ಪ್ರತ್ಯುಪಕಾರ ಮಾಡಲು ಸಾಧ್ಯ ಎಂದು ಯೋಚಿಸಿ ನನಗೆ ತುಂಬಾ ವಿಸ್ಮಯವಾಯಿತು. ಆದರೆ ಬೇಗನೆ ಆ ರಹಸ್ಯ ಬಯಲಾಯಿತು. ಪ್ರಿನ್ಸಿಪಾಲರು ನನಗೆ ನಾನು ಬ್ಯಾಂಕಿನಲ್ಲಿಟ್ಟಿದ್ದ ಹಣವನ್ನು ಅಕಾಡೆಮಿಯ ಏಳು ವರ್ಷದ ಬಾಂಡ್ ಗಳಲ್ಲಿ ಹೂಡಿಕೆ ಮಾಡುವಂತೆ ಸಲಹೆ ನೀಡಿದರು. ಅವರ ಪ್ರಕಾರ ಬ್ಯಾಂಕಿನಿಂದ ನನಗೆ ಸಿಗುತ್ತಿದ್ದ ಬಡ್ಡಿಗಿಂತ ಅಧಿಕ ಬಡ್ಡಿ (ಶೇಕಡಾ ೬. ೫ ) ಅಕಾಡೆಮಿಯವರು ನನಗೆ ಬಾಂಡ್ ಮೂಲಕ ಕೊಡಲು ಸಾಧ್ಯವಿತ್ತು.

ಪ್ರಿನ್ಸಿಪಾಲರ ಸಲಹೆಯನ್ನು ಕೇಳಿ ನನಗಾದ ಆಘಾತ ಅಷ್ಟಿಷ್ಟಲ್ಲ. ನಾನು ಅವರಿಗೆ ಹಣ ನನ್ನ ಮುಂದಿನ ವಿದ್ಯಾಭ್ಯಾಸಕ್ಕೆ ಬೇಕಾಗುವುದರಿಂದ ಅದನ್ನು ಹೇಗೆ ಏಳು ವರ್ಷದ ಬಾಂಡ್ ಗಳಲ್ಲಿ ಹೂಡಲು ಸಾಧ್ಯವೆಂದು ಮರು ಪ್ರಶ್ನೆ ಮಾಡಿದೆ. ಹಾಗೂ ಅಕಾಡೆಮಿಯು ನನ್ನಂತಹ ವಿದ್ಯಾರ್ಥಿಯೊಬ್ಬನಿಂದ ಯಾವ ರೀತಿಯಲ್ಲಿ ಹಣವನ್ನು ಏಳು ವರ್ಷದ ಬಾಂಡ್ ನಲ್ಲಿ ಹೂಡುವುದನ್ನು ನಿರೀಕ್ಷಿಸುವುದೆಂದೂ ಪ್ರಶ್ನಿಸಿದೆ. ನನ್ನ ಮಾತನ್ನು ಕೇಳಿ ಪ್ರಿನ್ಸಿಪಾಲರ ಕೋಪ ನೆತ್ತಿಗೇರಿತು. ಅವರ ಪ್ರಕಾರ ನಾನು ಅಕಾಡೆಮಿಗೆ ಸ್ವಲ್ಪವೂ ಕೃತಜ್ಞತೆಯಿಲ್ಲದವನಾಗಿ ಬಿಟ್ಟಿದ್ದೆ! ಅವರು ನನಗೊಂದು ಎಚ್ಚರಿಕೆಯನ್ನೂ ಕೊಟ್ಟು ಬಿಟ್ಟರು. ನಾನು ಬಾಂಡ್ ಗಳಲ್ಲಿ ಹಣ ಹೂಡದೇ ಹೋದರೆ ನನಗೆ ಅಕಾಡೆಮಿಯಿಂದ ಅವರು ನನಗೆ ಕಾಲೇಜ್ ಫೀ ಎಂದು ಕೊಟ್ಟ ಹಣವನ್ನು ವಾಪಾಸ್ ಮಾಡುವಂತೆ ನೋಟೀಸ್ ಕಳಿಸಲಾಗುವುದಂತೆ! ನನಗೆ ನನ್ನ ಕಿವಿಯನ್ನೇ ನಂಬಲಾಗಲಿಲ್ಲ. ಏಕೆಂದರೆ ಇದೇ ಮಹಾನುಭಾವರು ಹಿಂದೆ ನನಗೆ ಪ್ರಾಮಿಸರಿ ನೋಟ್ ಮೇಲೆ ಸಹಿ ಮಾಡುವಾಗ ಅಕಾಡೆಮಿಯು ಎಂದೂ ನನ್ನಿಂದ ಹಣವನ್ನು ವಾಪಾಸ್ ಕೇಳುವ ಪ್ರಶ್ನೆಯೇ ಇಲ್ಲವೆಂದು ಭರವಸೆ ನೀಡಿದ್ದರು! ನನಗೆ ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದಂತಾಯಿತು! ನನ್ನ ಬಾಯಿಂದ ಮಾತುಗಳೇ ಹೊರಡಲಿಲ್ಲ.

------- ಮುಂದುವರಿಯುವುದು-----


Wednesday, June 24, 2020

ಬಾಲ್ಯ ಕಾಲದ ನೆನಪುಗಳು – ೯೫

ಹಿಂದೊಮ್ಮೆ ನನ್ನ ವಿದ್ಯಾಭ್ಯಾಸಕ್ಕಾಗಿ ಹಣಕಾಸಿನ ಪರಿಸ್ಥಿತಿ ತುಂಬಾ ಶೋಚನೀಯವಾದಾಗ ನಾನೊಬ್ಬ ಜ್ಯೋತಿಷಿಗೆ ನನ್ನ ಹಸ್ತವನ್ನು ತೋರಿಸಿದ್ದೆ. ಉದ್ದೇಶ ಇಷ್ಟೇ. ನನ್ನ ವಿದ್ಯಾರ್ಥಿ ಜೀವನದಲ್ಲಿ ಎಂದಾದರೂ ಹಣಕಾಸಿನ ಪರಿಸ್ಥಿತಿ ಸುಧಾರಿಸುವ ಅದೃಷ್ಟವಿರುವುದೇ ಎಂದು  ತಿಳಿಯ ಬೇಕಿತ್ತು. ಅಲ್ಲದೇ ವಿದ್ಯಾಭ್ಯಾಸ ಮುಂದುವರಿಸದಿದ್ದರೆ ನನ್ನ ಭವಿಷ್ಯ ಮುಗಿದಂತೆಯೇ ಎಂದೂ ನನಗೆ ಅರಿವಿತ್ತು. ಆ ಜ್ಯೋತಿಷಿಯ ಪ್ರಕಾರ ನನ್ನ ವಿದ್ಯಾರ್ಥಿ ಜೀವನದ ಯಾವುದೋ ಒಂದು ಸನ್ನಿವೇಶದಲ್ಲಿ ಒಬ್ಬ ಪರೋಪಕಾರಿ ವ್ಯಕ್ತಿಯ ಪ್ರವೇಶವಾಗಲಿತ್ತು. ಹಾಗೆ ಆದೊಡನೆ ನನ್ನ ಹಣಕಾಸಿನ ಸಮಸ್ಯೆಗಳು ನನ್ನಿಂದ ದೂರವಾಗಲಿದ್ದವು.  ಆ ವ್ಯಕ್ತಿಯ ಸಹಾಯ ನನಗೆ ದೊರೆಯುವುದು ಮಾತ್ರವಲ್ಲ, ನನ್ನ ಕೈಗೆ ತುಂಬಾ ಹಣವೂ ಬರುವ ಚಾನ್ಸ್ ಕೂಡ ಇತ್ತು!

ಓಹ್! ಆ ಜ್ಯೋತಿಷಿ ಹೇಳಿದ ಭವಿಷ್ಯ ಎಷ್ಟೊಂದು ನಿಜವಾಗಿತ್ತು! ಶ್ರೀಕಂಠಯ್ಯನವರ ಮನೆಗೆ ಪ್ರವೇಶಿಸಿದೊಡನೆ ನನ್ನ ಅದೃಷ್ಟವೇ ಬದಲಾಗಿ ಬಿಟ್ಟಿತು. ನನ್ನ ಓದುಗರು ಇಲ್ಲಿಯವರೆಗೆ ಕೇವಲ ನನ್ನ ಹಣಕಾಸಿನ ಬವಣೆಯನ್ನು ಓದಿರುವಿರಿ. ಈಗ ನಿಮಗೆ ನನ್ನ ವಿದ್ಯಾರ್ಥಿ ಜೀವನದ ಆತ್ಮಕಥೆಯ ಸ್ವಲ್ಪ ಸುಖ ಸಮಾಚಾರಗಳನ್ನು ಓದುವ ಅವಕಾಶ ನೀಡುವ ಸಮಯ ನನಗೆ ಬಂದಿದೆ. ನನ್ನ ಅದೃಷ್ಟ ಖುಲಾಯಿಸಿ ದೇವರು ನನ್ನ ಕೈಯಲ್ಲಿ ಹಣ ಸೇರುವಂತೆ ಮಾಡಿದ ಶುಭದಾಯಕ ವೃತ್ತಾಂತವನ್ನು ನಾನೀಗ ಹೇಳಲಿದ್ದೇನೆ.

ಶಿವಮೊಗ್ಗದ ಅಡಿಕೆ ಮಾರಾಟದ  ಸಹಕಾರ ಸಂಘದಿಂದ ಬಹುಮಾನ

ನಾನು ಈ ಹಿಂದೆಯೇ ಹೇಳಿದಂತೆ ನನ್ನ ಎರಡನೇ ವರ್ಷದ ಬಿ. ಎಸ್ ಸಿ . ತರಗತಿಯ ಪೂರ್ತಿ ಫೀ ಮಣಿಪಾಲ್ ಅಕಾಡೆಮಿಯವರು ನನ್ನಿಂದ ಒಂದು ಪ್ರಾಮಿಸರಿ ನೋಟ್ ಮೇಲೆ ಸಹಿ ತೆಗೆದುಕೊಂಡು ಕಟ್ಟಿಬಿಟ್ಟರು. ಇನ್ನು ಶ್ರೀಕಂಠಯ್ಯನವರ ಮನೆಯಲ್ಲಿ ನಾನು ಇದ್ದುದರಿಂದ ಊಟ ತಿಂಡಿಯ ಖರ್ಚಿನ ಪ್ರಶ್ನೆ ಇರಲಿಲ್ಲ. ಅಲ್ಲದೆ ಒಂದು ದಿನ ಇದ್ದಕ್ಕಿದ್ದಂತೆ ನನಗೆ ವಿಶ್ವನಾಥಪುರ ಶಂಕರರಾಯರಿಂದ ಒಂದು ಶುಭ ಸಮಾಚಾರ ಬಂತು. ಶಿವಮೊಗ್ಗದ ಅಡಿಕೆ ಮಾರಾಟದ  ಸಹಕಾರ ಸಂಘದ (MAMCOS) ಡೈರೆಕ್ಟರಾಗಿದ್ದ ಅವರು ನನಗೆ ಪಿ. ಯು. ಸಿ. ಪರೀಕ್ಷೆಯಲ್ಲಿ ನಾಲ್ಕನೇ Rank ಪಡೆದುದಕ್ಕಾಗಿ ೧೫೦ ರೂಪಾಯಿ ಬಹುಮಾನ ಮಂಜೂರು ಮಾಡಿಸಿದ್ದರು. ಆ ಕಾಲದಲ್ಲಿ ಅದೊಂದು ದೊಡ್ಡ ಮೊತ್ತದ ಹಣವೇ ಆಗಿತ್ತು. ಆಗ ಶೃಂಗೇರಿಯ ಮಲ್ಲಿಕಾ ಮಂದಿರದಲ್ಲಿ ರುಚಿ ರುಚಿಯಾದ ಮಸಾಲೆ ದೋಸೆಗೆ ಕೇವಲ ೨೦ ಪೈಸೆ ಚಾರ್ಜ್ ಮಾಡುತ್ತಿದ್ದರು!  ನನ್ನ ಉಳಿದ ಖರ್ಚುಗಳು ಅಷ್ಟೇನೂ ಹೆಚ್ಚಿನವಾಗಿರಲಿಲ್ಲ. ನಿಜ ಹೇಳಬೇಕೆಂದರೆ ಅಷ್ಟೊಂದು ಹಣ ಒಮ್ಮೆಲೇ ಕೈಗೆ ಬಂದಾಗ ಏನು ಮಾಡಬೇಕೆಂದು ನನಗೆ ಹೊಳೆಯಲಿಲ್ಲ.

ಮೈಸೂರು ವಿಶ್ವವಿದ್ಯಾನಿಲಯದಿಂದಲೂ ಕೂಡ ಅಂತಹದೇ ಒಂದು ಬಹುಮಾನ ಬರಬೇಕಾಗಿತ್ತಲ್ಲವೇ?

ಶಿವಮೊಗ್ಗದ ಅಡಿಕೆ ಸೊಸೈಟಿಯಿಂದ (MAMCOS) ಹಣ ಕೈಗೆ ಬಂದ ಮೇಲೆ ನನ್ನ ತಲೆಯಲ್ಲೊಂದು ಹೊಸ ವಿಚಾರ ಬಂತು. Rank ಪಡೆದುದಕ್ಕಾಗಿ ನನಗೆ ಸರ್ಕಾರದಿಂದ ಅಥವಾ ಮೈಸೂರು ವಿಶ್ವವಿದ್ಯಾನಿಲಯದಿಂದಲೂ ಕೂಡ ಅಂತಹದೇ ಒಂದು ಬಹುಮಾನ ಬರಬೇಕಾಗಿತ್ತಲ್ಲವೇ ಎಂದು. ನಾನು ಕೂಡಲೇ ಪ್ರಿನ್ಸಿಪಾಲರನ್ನು ಭೇಟಿ ಮಾಡಿ ಆ ವಿಚಾರ ಚರ್ಚಿಸಿದೆ. ಅವರ ಪ್ರಕಾರ ಸರ್ಕಾರದಿಂದಾಗಲೀ ಅಥವಾ ಮೈಸೂರು ವಿಶ್ವವಿದ್ಯಾನಿಲಯದಿಂದಾಗಲೀ ಆ ಬಗೆಯ ಯಾವುದೇ ಬಹುಮಾನಗಳಿರಲಿಲ್ಲ. ಅಷ್ಟು ಮಾತ್ರವಲ್ಲ. ಆ ಬಗ್ಗೆ ವಿಶ್ವವಿದ್ಯಾನಿಲಯಕ್ಕೆ ಒಂದು ಪತ್ರ ಬರೆದು ಕಳಿಸುವುದಕ್ಕೂ ಅವರು ತಯಾರಿರಲಿಲ್ಲ. ಏಕೆಂದರೆ ಅಂತಹ ಬಹುಮಾನ ಇರಲೇ ಇಲ್ಲವೆಂದು ಅವರಿಗೆ ಖಾತ್ರಿಯಾಗಿ ಗೊತ್ತಿತ್ತು.

ದಕ್ಷ  ಐ. ಏ. ಎಸ್.  ಅಧಿಕಾರಿ ರಾಮಚಂದ್ರನ್: ಮೈಸೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್

ಆದರೆ ವಿಶ್ವವಿದ್ಯಾನಿಲಯದಿಂದ Rank ಪಡೆದ ವಿದ್ಯಾರ್ಥಿಗೆ ಯಾವುದೇ ಬಹುಮಾನವಿಲ್ಲವೆಂದು ನಾನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವವನಾಗಿರಲಿಲ್ಲ. ನಾನು ಹಠ ಬಿಡದ ಬೇತಾಳ ಕಥೆಯ ತ್ರಿವಿಕ್ರಮನಾಗಿ ಬಿಟ್ಟೆ! ಆಗ ತಾನೇ ನ್ಯೂಸ್ ಪೇಪರಿನಲ್ಲಿ ನಾನು ರಾಮಚಂದ್ರನ್ ಎಂಬ ದಕ್ಷ  ಐ. ಏ. ಎಸ್.  ಅಧಿಕಾರಿ ಮೈಸೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಆಗಿ ಚಾರ್ಜ್ ತೆಗೆದುಕೊಂಡರೆಂದು ಓದಿದ್ದೆ. ನಾನು ಕೂಡಲೇ ಅವರಿಗೆ ಒಂದು ವೈಯುಕ್ತಿಕ ಪತ್ರ ಬರೆದು ಕಳಿಸಿದೆ. ಅದರಲ್ಲಿ ನಾನು ನನ್ನ ಹಣಕಾಸಿನ ಬವಣೆಯನ್ನೂ ಮತ್ತೂ ಪಿ. ಯು. ಸಿ. ಪರೀಕ್ಷೆಯಲ್ಲಿ ನಾಲ್ಕನೇ Rank ಪಡೆದುದಕ್ಕಾಗಿ ನನಗೆ ವಿಶ್ವವಿದ್ಯಾನಿಲಯದಿಂದ ಯಾವುದೇ ಬಹುಮಾನ ದೊರೆಯದಿರುವುದನ್ನೂ ವಿವರಿಸಿದ್ದೆ. ಹಾಗೆಯೇ ತಮ್ಮಂತಹ ದಕ್ಷ ಐ. ಏ. ಎಸ್.  ಅಧಿಕಾರಿಯಿಂದ ನ್ಯಾಯ ಸಿಗುವುದೆಂಬ ಭರವಸೆ ಇರುವುದಾಗಿಯೂ ಬರೆದು ಬಿಟ್ಟಿದ್ದೆ.

ಕೇವಲ ಒಂದು ವಾರದಲ್ಲಿ ನನ್ನ ಕಾಲೇಜ್ ವಿಳಾಸಕ್ಕೆ ಮೈಸೂರು ವಿಶ್ವವಿದ್ಯಾನಿಲಯದಿಂದ ಒಂದು ಲಕೋಟೆ ಬಂತು. ನಾನು ತುಂಬಾ ಕುತೂಹಲ ಮತ್ತು ಉದ್ವೇಗದಿಂದ ಲಕೋಟೆಯನ್ನು ಹರಿದು ಅದರೊಳಗಿನ ಪತ್ರವನ್ನು ನೋಡಿದೆ. ಆಗ ನನಗುಂಟಾದ ನಿರಾಶೆ ಅಷ್ಟಿಷ್ಟಲ್ಲ. ಏಕೆಂದರೆ ಅದರೊಳಗಿದ್ದುದು ನಾನು ರಾಮಚಂದ್ರನ್ ಅವರಿಗೆ ಬರೆದ ಪತ್ರವೇ ಆಗಿತ್ತು! ಒಹ್! ವಿಶ್ವವಿದ್ಯಾನಿಲಯದವರು ನನ್ನ ಪತ್ರವನ್ನು ಓದಲೂ ಇಷ್ಟವಿಲ್ಲದೇ ಹಾಗೆಯೇ ಹಿಂತಿರುಗಿಸಿ ಬಿಟ್ಟಿದ್ದರು. ಎಂತಹ ಕೆಟ್ಟ ಅವಮಾನ ಮತ್ತು ನಿರಾಶೆ ನನ್ನದಾಗಿತ್ತು. ಇನ್ನೇನು ನಾನು ನನ್ನ ಪತ್ರವನ್ನು ಹರಿದು ಬಿಸಾಡುವುದರಲ್ಲಿದ್ದೆ. ಆದರೆ ಅಷ್ಟರಲ್ಲಿ ನನ್ನ ಪತ್ರದ ಕೊನೆಯಲ್ಲಿ ಏನೋ ಬರವಣಿಗೆ ನನ್ನ ಕಣ್ಣಿಗೆ ಬಿತ್ತು. ರಿಜಿಸ್ಟ್ರಾರ್ ಅವರು ತಮ್ಮ ಸ್ವಂತ ಕೈಬರಹದಲ್ಲಿ ಇಲಾಖೆಯ ಅಧಿಕಾರಿಗಳಿಗೆ ನನಗೆ ಸೂಕ್ತವಾದ ಬಹುಮಾನ ನೀಡುವಂತೆ ಆರ್ಡರ್ ಮಾಡಿದ್ದರು. ಇಲಾಖೆಯವರು ನನಗೆ ಮೆರಿಟ್ ಸ್ಕಾಲರ್ಷಿಪ್ ಅರ್ಹತೆ ಇದೆಯೆಂದೂ ಮತ್ತು ಅದನ್ನು ಶೀಘ್ರದಲ್ಲೇ ಮಂಜೂರು ಮಾಡುವುದಾಗಿಯೂ ಬರೆದಿದ್ದರು! ಒಹ್! ಒಮ್ಮೆಲೇ ನನ್ನ ಸಂತೋಷ ಮತ್ತು ಉತ್ಸಾಹ ಆಕಾಶಕ್ಕೇರಿ ಬಿಟ್ಟಿತು!

ನಾನು ಮೈಸೂರು ವಿಶ್ವವಿದ್ಯಾನಿಲಯದೊಡನೆ ನಡೆದ ನನ್ನ ಪತ್ರ ವ್ಯವಹಾರವನ್ನು ಯಾರಿಗೂ (ಪ್ರಿನ್ಸಿಪಾಲರಿಗೂ ಕೂಡ)  ತಿಳಿಸಲಿಲ್ಲ. ತಾಳ್ಮೆಯಿಂದ ವಿಶ್ವವಿದ್ಯಾನಿಲಯದಿಂದ ಸ್ಕಾಲರ್ಷಿಪ್ ಹಣ ಬರುವುದನ್ನೇ ಕಾಯುತ್ತಿದ್ದೆ. ನನಗೆ ಅದರ ಮೊತ್ತ ಎಷ್ಟಿರಬಹುದೆಂಬ ಬಗ್ಗೆ ತೀವ್ರ ಕುತೂಹಲವಿತ್ತು. ಹಿಂದೆ ಶಿವಮೊಗ್ಗೆಯ ಹೈಸ್ಕೂಲಿನಲ್ಲಿ ನನಗೆ ೧೦೦ ರೂಪಾಯಿ ಸ್ಕಾಲರ್ಷಿಪ್ ದೊರೆತಿತ್ತು. ಆದ್ದರಿಂದ ಸ್ವಾಭಾವಿಕವಾಗಿ ಈಗಿನ ಹಣ ಅದಕ್ಕಿಂತ ಹೆಚ್ಚಿರಲೇ ಬೇಕೆಂದು ನನ್ನ ನಿರೀಕ್ಷೆಯಾಗಿತ್ತು.

ನಾನು ತುಂಬಾ ದಿನ ಕಾಯಬೇಕಾದ ಪ್ರಸಂಗ ಬರಲಿಲ್ಲ. ಕೇವಲ ಒಂದು ವಾರದ ನಂತರ ನನಗೆ ತರಗತಿ ನಡೆಯುತ್ತಿರುವಾಗಲೇ ಅರ್ಜೆಂಟಾಗಿ ಪ್ರಿನ್ಸಿಪಾಲರನ್ನು ಕಾಣಬೇಕೆಂದು ಕರೆ ಬಂತು. ಏತಕ್ಕಾಗಿ ಕರೆ ಬಂದಿರಬಹುದೆಂದು ನಾನು ಊಹೆ ಮಾಡುವ ಅಗತ್ಯವೇ ಇರಲಿಲ್ಲ. ಪ್ರಿನ್ಸಿಪಾಲರು ತುಂಬಾ ಉತ್ಸಾಹದಲ್ಲಿದ್ದರು. ಅವರು ನನಗೆ ತಾವು ತುಂಬಾ ಪ್ರಯತ್ನ ಮಾಡಿ ನನಗೆ ವಿಶ್ವವಿದ್ಯಾನಿಲಯದಿಂದ  ಬಹುಮಾನವೊಂದನ್ನು ಕೊಡಿಸಿರುವುದಾಗಿ ಹೇಳಿದರು! ನಾನು ರಿಜಿಸ್ಟ್ರಾರ್ ಅವರಿಗೆ ಪತ್ರ ಬರೆದ ನಂತರವೇ ಅದು ಬಂತೆಂಬ ಬಗ್ಗೆ ನಾನು ಪ್ರಿನ್ಸಿಪಾಲರಿಗೆ ಹೇಳಿ ಅವರ ಉತ್ಸಾಹಕ್ಕೆ ಮಣ್ಣೆರಚಲು ಇಷ್ಟ ಪಡಲಿಲ್ಲ. ಬದಲಿಗೆ ಅವರಿಗೆ ತುಂಬಾ ಕೃತಜ್ಞನಾಗಿರುವುದಾಗಿ ಹೇಳಿ ಬಿಟ್ಟೆ!

ನಾನು ಕಾಲೇಜಿನ ಆಫೀಸಿಗೆ ಹೋಗಿ ೧೦ ಪೈಸೆ ರೆವಿನ್ಯೂ ಸ್ಟ್ಯಾಂಪ್ ಚಾರ್ಜ್ ಕೊಟ್ಟು ಅದರ ಮೇಲೆ ಸಹಿ ಮಾಡಿದೆ. ಸಿಂಡಿಕೇಟ್ ಬ್ಯಾಂಕಿನ ಚೆಕ್ ಒಂದನ್ನು ನನಗೆ ಕೊಡಲಾಯಿತು. ನಾನು ಅದರಲ್ಲಿ ಬರೆದ ಹಣದ ಮೊತ್ತದ ಮೇಲೆ ಕಣ್ಣು ಹಾಯಿಸಿ ಚಕಿತನಾಗಿ ಬಿಟ್ಟೆ. ಅದರಲ್ಲಿ ೪೫೦ ರೂಪಾಯಿ ಎಂದು ಬರೆಯಲಾಗಿತ್ತು! ಕೊನೆಗೂ ವಿಶ್ವವಿದ್ಯಾನಿಲಯದಿಂದ ನಾನು Rank ಪಡೆದುದಕ್ಕೆ ಸೂಕ್ತ ಬಹುಮಾನ ದೊರೆತಿತ್ತು. ಅದನ್ನು ಪಡೆಯಲೇ ಬೇಕೆಂದು ನಾನು ಮಾಡಿದ ಹೋರಾಟಕ್ಕೆ ವಿಜಯ ದೊರೆತಿತ್ತು. ಅದಕ್ಕೆ ಮುಖ್ಯ ಕಾರಣ ರಿಜಿಸ್ಟ್ರಾರ್ ರಾಮಚಂದ್ರನ್ ಅವರೇ ಆಗಿದ್ದರು.

ಸಿಂಡಿಕೇಟ್ ಬ್ಯಾಂಕಿನಲ್ಲಿ ನನ್ನ  ಮೊಟ್ಟ ಮೊದಲ ಸೇವಿಂಗ್ಸ್ ಬ್ಯಾಂಕ್ ಖಾತೆ

ಆ ದಿನ ೪೫೦ ರೂಪಾಯಿನ ಚೆಕ್ ಕೈಯಲ್ಲಿ ಹಿಡಿದು ನಾನು ಸಿಂಡಿಕೇಟ್ ಬ್ಯಾಂಕಿನ ಶಾಖೆಯೊಳಗೆ ಕಾಲಿಟ್ಟಿದ್ದು ಇಂದೂ ನನ್ನ ನೆನಪಿನಲ್ಲಿದೆ. ಅಲ್ಲಿ ಕೆಲಸ ಮಾಡುತ್ತಿರುವರಲ್ಲಿ ಕೆಲವರು ನನಗೆ ಮೊದಲೇ ಪರಿಚಯಸ್ಥರಾಗಿದ್ದರು. ಅವರಲ್ಲಿ ನಾಯಕ್ ಎಂಬುವ ಎತ್ತರದ ಸ್ಪುರದ್ರೂಪಿ ವ್ಯಕ್ತಿಯೊಬ್ಬರು ಚೆನ್ನಾಗಿ ಗೊತ್ತಿದ್ದರು. ಶುದ್ಧ ಬಿಳೇ  ಬಣ್ಣದ ಫುಲ್ ಶರ್ಟ್ ಮತ್ತು ಧೋತಿ ಧರಿಸಿ ಸೈಕಲ್ ಮೇಲೆ ಓಡಾಡುತ್ತಿದ್ದ ನಾಯಕ್ ಶೃಂಗೇರಿಯಲ್ಲಿ ಸಿಂಡಿಕೇಟ್ ಬ್ಯಾಂಕಿನ ಬ್ರಾಂಡ್ ಅಂಬಾಸೆಡರ್ ಆಗಿದ್ದರು ಎಂದು ಹೇಳಬಹುದು. ಬ್ಯಾಂಕಿನ ಯಾವುದೇ ವಿಷಯಕ್ಕೆ ಎಲ್ಲರೂ ಅವರ ಹತ್ತಿರವೇ ಹೋಗುತ್ತಿದ್ದರು. ಅವರನ್ನು ನಾನು ಹಲವು ಬಾರಿ ಮಲ್ಲಿಕಾ ಮಂದಿರದಲ್ಲಿ ನೋಡಿದ್ದೆ. ನಮ್ಮ ಮುಂದೆ ಒಂದಾದ ಮೇಲೆ ಒಂದು ತಿಂಡಿ ಆರ್ಡರ್ ಮಾಡಿ ಸವಿಯುತ್ತಿದ್ದ ನಾಯಕ್ ಅವರನ್ನು ನೋಡಿ ನಮಗೆ ಸ್ವಲ್ಪ ಹೊಟ್ಟೆ ಕಿಚ್ಚು ಉಂಟಾಗುತ್ತಿತ್ತು. ನಾವು ಕೇಳಿದ ಪ್ರಕಾರ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ ಅವರಿಗೆ ನಮ್ಮ ಕಾಲೇಜು ಉಪನ್ಯಾಸಕರಿಗಿಂತಲೂ ಹೆಚ್ಚು ಸಂಬಳ ದೊರೆಯುತ್ತಿತ್ತಂತೆ! ಉಪನ್ಯಾಸಕರು ಸ್ನಾತಕೋತ್ತರ ಪದವಿ ಪಡೆದಿದ್ದರೆ ನಾಯಕ್ ಅವರು ಕೇವಲ ಎಸ್.ಎಸ್.ಎಲ್. ಸಿ. ಪಾಸ್ ಮಾಡಿದ್ದರಂತೆ!

ನಾನು ಚೆಕ್ಕನ್ನು ನಾಯಕ್ ಅವರ ಕೈಯಲ್ಲಿ ಕೊಟ್ಟೆ. ಅಷ್ಟು ದೊಡ್ಡ ಮೊತ್ತದ ಚೆಕ್ ನನ್ನ ಹೆಸರಿಗೆ ಬರೆದಿರುವುದನ್ನು ನೋಡಿ ಅವರಿಗೆ ಆಶ್ಚರ್ಯವಾಯಿತು. ಅದು ಯಾವ ಹಣವೆಂದು ನನ್ನನ್ನು ಅವರು ಪ್ರಶ್ನಿಸಿದರು. ನಾನು ಅದು ನನ್ನ ಸ್ಕಾಲರ್ಷಿಪ್ ಹಣವೆಂದು ತಿಳಿಸಿದೆ. ಅವರು ಚೆಕ್ಕನ್ನು ಕ್ರಾಸ್ ಮಾಡಿರುವುದರಿಂದ ನನಗೆ ಅದರ ಮೊತ್ತವನ್ನು ನಗದಾಗಿ ಕೊಡಲಾಗುವುದಿಲ್ಲವೆಂದು ಹೇಳಿ ಬಿಟ್ಟರು. ನನಗೆ ಕೋಪ ಬಂದು ಅದನ್ನು ಯಾರು ಕ್ರಾಸ್ ಮಾಡಿದ್ದೆಂದು ಕೇಳಿದೆ. ಅವರು ಕಾಲೇಜಿನವರೇ ಅದನ್ನು ಕ್ರಾಸ್ ಮಾಡಿರುವುದಾಗಿ ತಿಳಿಸಿದರು.

ನನಗೆ ಆಗ ಕಾಲೇಜಿನವರು ನನ್ನ ಕೈಗೆ ಹಣ ಸಿಕ್ಕದಂತೆ ಏನೋ ಪಿತೂರಿ ಮಾಡಿದ್ದಾರೆಂದೇ ಅನಿಸಿಬಿಟ್ಟಿತು! ಆದರೆ ನಾಯಕ್ ಅವರು ನನಗೆ ಸಮಾಧಾನ ಮಾಡಿ ಕಾಲೇಜಿನವರು ರೂಲ್ಸ್ ಪ್ರಕಾರ ಕ್ರಾಸ್ ಮಾಡಿದ್ದರೆಂದೂ ಮತ್ತು ನಾನು ಒಂದು ಸೇವಿಂಗ್ಸ್ ಬ್ಯಾಂಕ್ ಖಾತೆ ತೆರೆದು ಅದರಲ್ಲಿ ಚೆಕ್ಕಿನ ಹಣ ಹಾಕಿ ಆಮೇಲೆ ನನಗೆ ಬೇಕಾದಾಗ ಬೇಕಾದಷ್ಟು ಹಣವನ್ನು ತೆಗೆದುಕೊಳ್ಳಬಹುದೆಂದು ವಿವರಿಸಿದರು.

ಆಮೇಲೆ ನಾನು  ಶ್ರೀಕಂಠಯ್ಯನವರಿಂದ ಇಂಟ್ರಡಕ್ಷನ್ ಹಾಕಿಸಿ ಬ್ಯಾಂಕಿನಲ್ಲಿ ನನ್ನ  ಮೊಟ್ಟ ಮೊದಲ ಸೇವಿಂಗ್ಸ್ ಬ್ಯಾಂಕ್ ಖಾತೆಯನ್ನು ತೆರೆದೆ. ಬ್ಯಾಂಕ್ ಪಾಸ್ ಪುಸ್ತಕದಲ್ಲಿ ನನ್ನ ಹೆಸರಿಗೆ ೪೫೦ ರೂಪಾಯಿ ಬರೆದುದನ್ನು ನೋಡಿ ನನಗಾದ ಸಂತೋಷ ಅಷ್ಟಿಷ್ಟಲ್ಲ. ಇದಲ್ಲದೇ ನನಗೆ ಶಿವಮೊಗ್ಗದ ಅಡಿಕೆ ಸೊಸೈಟಿಯಿಂದ (MAMCOS) ದೊರೆತ  ಹಣ ಸ್ವಲ್ಪ ಮಾತ್ರ ಖರ್ಚಾಗಿತ್ತು. ನನ್ನ ಟ್ರಂಕಿನ ಮೂಲೆಯಲ್ಲಿದ್ದ ಆ ಹಣವನ್ನು ಕೂಡ ನಾನು ಬ್ಯಾಂಕ್ ಖಾತೆಗೆ ಜಮಾ ಮಾಡಿಬಿಟ್ಟೆ. ಒಹ್! ಇದ್ದಕ್ಕಿದ್ದಂತೇ ನಾನೊಬ್ಬ ಹಣವಂತ ವಿದ್ಯಾರ್ಥಿ ಆಗಿಬಿಟ್ಟಿದ್ದೆ! ಅಷ್ಟೂ ಹಣ ನಾನು Rank ಪಡೆದುದಕ್ಕೆ ಬಂದ ಬಹುಮಾನವಾಗಿತ್ತು.

ಒಂದು ದಿನ ನನ್ನ ಮನಸ್ಸಿನಲ್ಲಿ ಇದ್ದಕ್ಕಿದಂತೇ ಒಂದು ಚಿಂತೆ ಬಂತು. ನಾನು ಶ್ರೀಕಂಠಯ್ಯನವರ ಮನೆಯಲ್ಲಿ ಯಾವುದೇ ಖರ್ಚಿಲ್ಲದೆ ಊಟ ಮತ್ತು ಕಾಫಿ ತಿಂಡಿ ತೆಗೆದುಕೊಳ್ಳುತ್ತಾ ಕೊಠಡಿಯಲ್ಲಿ ಹಾಯಾಗಿದ್ದೆ. ಹಾಗಿರುವಾಗ ನಾನು ನನ್ನ ಕೈಗೆ ಬಂದ ಬಹುಮಾನದ ಹಣವನ್ನು ಬ್ಯಾಂಕಿನಲ್ಲಿಟ್ಟು ಬಡ್ಡಿ ಪಡೆಯುವುದು  ನ್ಯಾಯವೇ ಎಂದು ನನಗನಿಸತೊಡಗಿತು. ನಾನು ಸೂಕ್ಷ್ಮವಾಗಿ ಶ್ರೀಕಂಠಯ್ಯನವರ  ಮುಂದೆ ಆ ವಿಷಯವನ್ನೆತ್ತಿದೆ. ಅವರಿಗೆ ನನ್ನ ಮನಸ್ಥಿತಿ ಅರಿವಾಯಿತು. ಅವರು ಕೂಡಲೇ ನಾನು ಆ ಹಣವನ್ನು ನನ್ನ ಮುಂದಿನ ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳಬೇಕೆಂದು ಹೇಳಿಬಿಟ್ಟರು.

ಸ್ಕಾಲರ್ಷಿಪ್ ಹೌದೇ? ಅಥವಾ ಬಹುಮಾನವೇ?

ಆಮೇಲೊಂದು ದಿನ ನನಗೆ ಇನ್ನೊಂದು ಯೋಚನೆ ಬಂತು. ಸಾಮಾನ್ಯವಾಗಿ ಯಾವುದೇ ಸ್ಕಾಲರ್ಷಿಪ್ ಒಂದು ವರ್ಷ ಮಂಜೂರಾದರೆ ಮುಂದಿನ ವರ್ಷಗಳಲ್ಲೂ ಕೂಡ ಅದು ಕೊಡಲ್ಪಡುತ್ತದೆ. ನನಗೆ ಹೈಸ್ಕೂಲಿನಲ್ಲಿ ಹಾಗೆಯೇ ಅದು ದೊರೆತಿತ್ತು. ಈ ಬಾರಿಯೂ ವಿಶ್ವವಿದ್ಯಾನಿಲಯದವರು ಬಹುಮಾನ ಎಂದು ಹೇಳದೇ ಸ್ಕಾಲರ್ಷಿಪ್ ಎಂದೇ ಹೇಳಿದ್ದರು. ಆದ್ದರಿಂದ ಅದು ಮೂರು ವರ್ಷಗಳೂ ನನಗೆ ಸಿಗುವ  ಚಾನ್ಸ್ ತುಂಬಾ ಇತ್ತು. ಆ ಆಲೋಚನೆಯೇ ನನಗೆ ತುಂಬಾ ಖುಷಿ ಕೊಟ್ಟಿತು. ನಾನು ಪುನಃ ಪ್ರಿನ್ಸಿಪಾಲರ ಬಳಿಗೆ ಹೋಗಿ ಆ ವಿಷಯ ಎತ್ತಿದೆ. ಆದರೆ ಅವರು ನಾನು ನಿರೀಕ್ಷಿಸಿದಂತೆ ಆ ಪ್ರಶ್ನೆಯೇ ಬರುವುದಿಲ್ಲವೆಂದು ಹೇಳಿಬಿಟ್ಟರು. ಅವರ ಪ್ರಕಾರ ಅದು ನನಗೆ ಕೇವಲ ಪಿ. ಯು. ಸಿ. ಪರೀಕ್ಷೆಯಲ್ಲಿ ನಾಲ್ಕನೇ Rank ಪಡೆದುದಕ್ಕಾಗಿ ಕೊಟ್ಟ ಬಹುಮಾನವಾಗಿತ್ತು. ಆದ್ದರಿಂದ ಅದನ್ನು ಮುಂದಿನ ವರ್ಷಗಳಲ್ಲೂ ಕೊಡುವ ಪ್ರಶ್ನೆಯೇ ಇರಲಿಲ್ಲ.

ನಾನು ಸ್ವಲ್ಪ ದಿನ ಆ ವಿಷಯವನ್ನು ಅಲ್ಲಿಗೇ ಕೈಬಿಟ್ಟಿದ್ದೆ. ಆದರೆ ಒಂದು ದಿನ ನಾನು ನ್ಯೂಸ್ ಪೇಪರಿನಲ್ಲಿ ಮೈಸೂರು ವಿಶ್ವವಿದ್ಯಾನಿಲಯದ  ಉಪಕುಲಪತಿಯವರು ನಿವೃತ್ತರಾದ್ದರಿಂದ ರಿಜಿಸ್ಟ್ರಾರ್ ರಾಮಚಂದ್ರನ್ ಅವರು ತಾತ್ಕಾಲಿಕ ಉಪಕುಲಪತಿಯಾಗಿ ನೇಮಕವಾಗಿದ್ದರೆಂದು ಓದಿದೆ. ಆಗ ಇದ್ದಕ್ಕಿದ್ದಂತೇ ನನಗೊಂದು ಐಡಿಯಾ ಹೊಳೆಯಿತು. ನನಗಿದ್ದ ಅನುಮಾನವನ್ನು ಏಕೆ ಉಪಕುಲಪತಿಯವರಿಂದಲೇ ಬಗೆಹರಿಸಿಕೊಳ್ಳಬಾರದೆಂದು. ಅವರೇ ಅಲ್ಲವೇ ನನಗೆ ಸ್ಕಾಲರ್ಷಿಪ್ ಮಂಜೂರಾಗಲು ಮೂಲ ಕಾರಣ? ನಾನು ಸ್ವಲ್ಪವೂ ತಡಮಾಡದೇ ಅವರಿಗೊಂದು ಪತ್ರ ಬರೆದೆ. ಅದರಲ್ಲಿ ಉಪಕುಲಪತಿಯಾಗಿರುವುದಕ್ಕೆ ಅವರನ್ನು ಅಭಿನಂದಿಸುತ್ತಾ ನನ್ನ ಸ್ಕಾಲರ್ಷಿಪ್ ಮುಂದುವರಿಯುವುದೇ ಎಂದು ಪ್ರಶ್ನಿಸಿದ್ದೆ.

ಕೇವಲ ಒಂದು ವಾರದಲ್ಲಿ ವಿಶ್ವವಿದ್ಯಾನಿಲಯದಿಂದ ನನ್ನ ಹೆಸರಿಗೆ ಒಂದು ಲಕೋಟೆ ಬಂತು. ಅದನ್ನು ಒಡೆದು ನೋಡಿದಾಗ ಪುನಃ ನಾನು ಬರೆದ ಪತ್ರವೇ ಅದರಲ್ಲಿತ್ತು. ಆದರೆ ಈ ಬಾರಿ ನಾನು ಸೀದಾ ಪತ್ರದ ಕೊನೆಯಲ್ಲಿ ಏನಾದರೂ ಬರೆದಿರುವರೇ ಎಂದು ನೋಡಿದೆ. ನನ್ನ ಊಹೆ ನಿಜವಾಗಿತ್ತು. ಈ ಸಂಗತಿ ನಡೆದು ಇಂದಿಗೆ ಐವತ್ತು ವರ್ಷಕ್ಕೂ ಮಿಕ್ಕಿ ಹೋಗಿದೆ. ಆದರೆ ಪತ್ರದ ಕೆಳಗೆ ಬರೆದಿದ್ದ ಒಂದೊಂದು ಅಕ್ಷರವೂ ನನ್ನ ನೆನಪಿನಲ್ಲಿದೆ:

“The scholarship sanctioned for the first year degree will continue throughout the career of the student in the University. It is subject to the satisfactory performance each year.”

                                                             Registrar

                                                       Mysore University

(ಮೊದಲ ವರ್ಷದ ಡಿಗ್ರೀ ತರಗತಿಯಲ್ಲಿ ಮಂಜೂರಾದ ಸ್ಕಾಲರ್ಷಿಪ್ ವಿದ್ಯಾರ್ಥಿಯು ವಿಶ್ವವಿದ್ಯಾನಿಲಯದಲ್ಲಿ ಓದುತ್ತಿರುವವರೆಗೆ ಮುಂದುವರಿಯುವುದು. ಆದರೆ ಅದು ವಿದ್ಯಾರ್ಥಿಯ ಮೆರಿಟ್ ಮೇಲೆ ಅವಲಂಬಿತವಾಗಿರುತ್ತದೆ)

ಆ ಶೈಕ್ಷಣಿಕ ವರ್ಷದ ಕೊನೆಯಲ್ಲಿ ಸಿಂಡಿಕೇಟ್ ಬ್ಯಾಂಕಿನ ನನ್ನ ಖಾತೆಯಲ್ಲಿನ  ಹಣ  ಒಂದು ಸಾವಿರ ರೂಪಾಯಿಯ ಹತ್ತಿರ ತಲುಪಿತ್ತು!

------- ಮುಂದುವರಿಯುವುದು-----


Friday, June 19, 2020

ಬಾಲ್ಯ ಕಾಲದ ನೆನಪುಗಳು – ೯೪

ಜುಲೈ ತಿಂಗಳು ಬರುವ ವೇಳೆಗೆ ನಮ್ಮೂರಿನಲ್ಲಿ ಮಳೆಗಾಲ ಜೋರಾಗಿ ಆರಂಭವಾಗಿತ್ತು. ಪುಟ್ಟಣ್ಣ  ಆಗಲೇ ಬೆಂಗಳೂರಿಗೆ ಹೊರಟುಹೋಗಿದ್ದ. ನಾನು ಅಷ್ಟರಲ್ಲೇ ಒಂದು ತೀರ್ಮಾನ ಮಾಡಿಬಿಟ್ಟಿದ್ದೆ. ಅದೇನೆಂದರೆ ಇನ್ನು ಮುಂದೆ ಪ್ರತಿ ತಿಂಗಳೂ ಹಾಸ್ಟೆಲ್ ಫೀ  ವಸೂಲಿಗೆ ಚಂದ್ರಮೌಳಿರಾಯರ ಮನೆಗೆ ಹೋಗುವುದಿಲ್ಲವೆಂದು. ಆದರೆ ಅದಕ್ಕಾಗಿ ನಾನು ಬೇರೆ ವ್ಯವಸ್ಥೆ ಮಾಡಿಕೊಳ್ಳಬೇಕಿತ್ತು. ನಾನು ಈ ಮೊದಲೇ ಬರೆದಂತೆ ಪುಟ್ಟಣ್ಣನ ಸ್ನೇಹಿತ ಜಯಪ್ರಕಾಶನ ತಂದೆ ಹಳೇಮನೆ ಶ್ರೀಕಂಠಯ್ಯನವರು ನಾನು ಅವರ ಮನೆಯಲ್ಲೇ ಇರಬಹುದೆಂದು ಸೂಚಿಸಿದ್ದರು. ಆದರೆ ನಾನು ಅವರ ಸಲಹೆಯನ್ನು ಅಲ್ಲಿಯವರೆಗೆ ತೀವ್ರವಾಗಿ ಪರಿಗಣಿಸಿರಲಿಲ್ಲ.

ನಾನು ಈ ಹಿಂದೆ ಎಷ್ಟೋ ಬಾರಿ ಪುಟ್ಟಣ್ಣನೊಡನೆ ಶ್ರೀಕಂಠಯ್ಯನವರ ಮನೆಗೆ ಹೋಗಿದ್ದೆ. ಜಯಪ್ರಕಾಶನೂ ಒಮ್ಮೆ ಬೇರೆ ಸ್ನೇಹಿತರೊಡನೆ  ನಮ್ಮ ಮನೆಗೆ ಬಂದಿದ್ದ. ಶ್ರೀಕಂಠಯ್ಯನವರ ಕುಟುಂಬದವರೆಲ್ಲಾ ತುಂಬಾ ಆತ್ಮೀಯತೆ ಮತ್ತು ಸೌಜನ್ಯ ತೋರುವ ವ್ಯಕ್ತಿಗಳಾಗಿದ್ದರು. ಓದುವುದರಲ್ಲಿ ತುಂಬಾ ಬುದ್ಧಿವಂತಳಾದ ಅವರ ಹಿರಿಯ ಮಗಳು ವಿಜಯಲಕ್ಷ್ಮಿ ಹುಬ್ಬಳ್ಳಿ ಮೆಡಿಕಲ್ ಕಾಲೇಜಿನಲ್ಲಿ ಎಂ. ಬಿ. ಬಿ. ಎಸ್. ಓದುತ್ತಿದ್ದಳು. ಹಿರಿಯ ಮಗ ಜಯಪ್ರಕಾಶ ಕೂಡ ಪಿ. ಯು ಸಿ. ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಬಳ್ಳಾರಿ ಮೆಡಿಕಲ್ ಕಾಲೇಜಿನಲ್ಲಿ ಸೀಟ್ ಗಳಿಸಿದ್ದ. ಶ್ರೀಕಂಠಯ್ಯನವರ ಕುಟುಂಬದ ಔದಾರ್ಯ ಎಷ್ಟಿತ್ತೆಂಬುವುದಕ್ಕೆ ಉದಾಹರಣೆಯಾಗಿ ಅವರ ಹಿರಿಯ ಮಗ ಜಯಪ್ರಕಾಶ ಅವನ ಸ್ನೇಹಿತನಾದ ಪುಟ್ಟಣ್ಣನಿಗೆ ಮಾಡುತ್ತಿದ್ದ ಸಹಾಯವನ್ನು ಇಲ್ಲಿ ಬರೆಯಲೇ ಬೇಕು. ಪುಟ್ಟಣ್ಣನ ಹಣಕಾಸಿನ ಪರಿಸ್ಥಿತಿ ಗೊತ್ತಿದ್ದ ಜಯಪ್ರಕಾಶ ಪ್ರತಿ ತಿಂಗಳೂ ಅವನ ತಂದೆ ಖರ್ಚಿಗಾಗಿ ಕಳಿಸಿದ ಹಣದಲ್ಲಿ ಸ್ವಲ್ಪ ಉಳಿಸಿ ಪುಟ್ಟಣ್ಣನಿಗೆ ಕಳಿಸಿಬಿಡುತ್ತಿದ್ದ. ಆದರೆ  ಅದಕ್ಕಾಗಿ ತನ್ನ ತಂದೆಯವರಿಂದ ಹೆಚ್ಚು ಹಣ ಕೇಳುತ್ತಿರಲಿಲ್ಲ. ಈ ವಿಷಯ ಶ್ರೀಕಂಠಯ್ಯನವರಿಗೂ ಗೊತ್ತಿದ್ದು ಅವರು ತಮ್ಮ ಮಗನ ಬಗ್ಗೆ ಹೆಮ್ಮೆ ಪಡುತ್ತಿದ್ದರು. ಪುಟ್ಟಣ್ಣನ ಬಿ. ಕಾಂ. ಫೈನಲ್ ಪರೀಕ್ಷೆ ಮುಗಿಯುವವರೆಗೂ ಹಣ ಅವನಿಗೆ ಬರುತ್ತಲೇ ಇತ್ತು.

ಇದನ್ನೆಲ್ಲಾ ಯೋಚಿಸಿದಾಗ ನನಗೆ ಶ್ರೀಕಂಠಯ್ಯನವರು  ಸುಮ್ಮನೆ ಮಾತಿಗಾಗಿ ಅಲ್ಲ ನಿಜವಾಗಿಯೂ ನಾನು ಅವರ ಮನೆಯಲ್ಲೇ ಇರಬಹುದೆಂದು ಹೇಳಿರಬೇಕು ಎಂದು ಅನಿಸಿತು. ಮತ್ತು ನಾನೆಂದೂ ಅವರ ಮನೆಯಲ್ಲಿದ್ದುದಕ್ಕೆ ಪಶ್ಚಾತ್ತಾಪ ಪಡಬೇಕಾಗುವುದಿಲ್ಲ ಎಂದೂ ಅನಿಸಿತು. ಆದ್ದರಿಂದ ಒಂದು ದಿನ ಬೆಳಿಗ್ಗೆ ನಾನು ಸೀದಾ ಹಳೆಮನೆಯೊಳಗೆ ಹೋಗಿ ಶ್ರೀಕಂಠಯ್ಯನವರನ್ನು ಭೇಟಿಯಾದೆ. ತುಂಬಾ ಆದರದಿಂದ ನನ್ನೊಡನೆ ಮಾತನಾಡಿದ ಅವರು ನನ್ನ ವಿದ್ಯಾಭ್ಯಾಸ ಹೇಗೆ ಸಾಗಿದೆಯೆಂದು ಕೇಳಿದರು. ಹಾಗೆಯೇ ತಾವು ಈ ಹಿಂದೆ ಹೇಳಿದಂತೆ ನಾನು ಅವರ ಮನೆಯಲ್ಲೇ ಇದ್ದು ಕಾಲೇಜಿಗೆ ಹೋಗಬಹುದೆಂದು ಪುನಃ ಹೇಳಿಬಿಟ್ಟರು. ಅವರಿಗೆ ನಾನು ಅದೇ ಉದ್ದೇಶದಿಂದ ಅವರನ್ನು ಭೇಟಿ ಮಾಡಿದ್ದೇನೆಂದು ಖಂಡಿತವಾಗಿಯೂ ಅರಿವಿರಲಿಲ್ಲ. ನಾನು  ಅವರೊಡನೆ ನೀವು ಸೀರಿಯಸ್ ಆಗಿ ಹಾಗೆ ಹೇಳುತ್ತಿದ್ದೀರಾ ಏಕೆಂದರೆ ನಾನು ಬಂದಿರುವುದೇ ಅದೇ ಉದ್ದೇಶದಿನ ಎಂದು ಹೇಳಿಬಿಟ್ಟೆ. ಶ್ರೀಕಂಠಯ್ಯನವರು ದ್ವನಿ ಏರಿಸಿ "ಕೃಷ್ಣಮೂರ್ತಿ, ನಾನೇನು ನಿನ್ನೊಡನೆ ತಮಾಷೆ ಮಾಡುತ್ತಿದ್ದೇನೆಂದು ತಿಳಿದೆಯಾ?" ಎಂದು ಹೇಳಿ ಕೂಡಲೇ ತಮ್ಮ ಪತ್ನಿಯನ್ನು ಕರೆದು ನಾನು ಇನ್ನು ಮುಂದೆ ಅವರ ಮನೆಯಲ್ಲೇ ತಂಗುವುದಾಗಿ ಹೇಳಿಬಿಟ್ಟರು! ಹಾಗೆಯೇ ಮಹಡಿಯ ಮೇಲಿನ ಕೊಠಡಿಯನ್ನು ನಾನು ಉಳಿದುಕೊಳ್ಳಲು ಅನುಕೂಲವಾಗುವಂತೆ ಸ್ವಚ್ಛಗೊಳಿಸುವಂತೆ ಹೇಳಿದರು.

ನಾನು ಮನೆಗೆ ಹಿಂದಿರುಗಿ ತಂದೆ ತಾಯಿಯರೊಡನೆ ನಾನು ಇನ್ನು ಮುಂದೆ ಶ್ರೀಕಂಠಯ್ಯನವರ ಮನೆಯಲ್ಲಿ ಇರುವುದಾಗಿ ಹೇಳಿದಾಗ ಅವರಿಗೆ ನಂಬಲೇ ಆಗಲಿಲ್ಲ. ಸಾಮಾನ್ಯವಾಗಿ ಹೀಗೆ ಇನ್ನೊಬ್ಬರ ಮನೆಯಲ್ಲಿ ಇರಬೇಕಾದರೆ ಅವರು ನಮ್ಮ ರಕ್ತ ಸಂಬಂಧಿಯಾಗಿದ್ದರೆ ಮಾತ್ರ ಸಾಧ್ಯವಿತ್ತು. ಅಲ್ಲದೇ ಎಷ್ಟೋ ರಕ್ತ ಸಂಬಂಧಿಗಳೂ ಕೂಡ ಹೀಗೆ ಒಬ್ಬ ಹುಡುಗ ಅಥವಾ ಹುಡುಗಿಯನ್ನು ತಮ್ಮ ಮನೆಯಲ್ಲಿ ಇಟ್ಟುಕೊಳ್ಳಲು ಇಷ್ಟ ಪಡುತ್ತಿರಲಿಲ್ಲ. ಆದರೆ ಶ್ರೀಕಂಠಯ್ಯನವರು ಅದಕ್ಕೊಂದು ಅಪವಾದವಾಗಿದ್ದರು. ನಾನು ಕೇವಲ ಅವರ ಮಗನ ಸ್ನೇಹಿತನ ತಮ್ಮನಾಗಿದ್ದೆ. ಅವರ ಮನಸ್ಸು ಅಷ್ಟೊಂದು ವಿಶಾಲವಾಗಿತ್ತು. ಆದ್ದರಿಂದ ಒಂದು ದಿನ ಬೆಳಿಗ್ಗೆ ನಾನು ನನ್ನ ವಸ್ತುಗಳೊಡನೆ ಅವರ ಮನೆಯೊಳಗೇ ಕಾಲಿರಿಸಿ ಬಿಟ್ಟೆ!

ಉಪ್ಪರಿಗೆಯ ಮೇಲೆ ನನ್ನ ಆಫೀಸ್!

ಉಪ್ಪರಿಗೆಯ ಮೇಲಿನ ಕೊಠಡಿ ನನ್ನ ವಾಸಕ್ಕೆ ರೆಡಿ ಆಗಿಬಿಟ್ಟಿತ್ತು. ಅಲ್ಲದೇ ಶ್ರೀಕಂಠಯ್ಯನವರ ಚಿಕ್ಕ ಮಕ್ಕಳು ನಾನು ಬರುವುದನ್ನೇ ಕಾಯುತ್ತಿದ್ದರು. ಎಲ್ಲರಿಗಿಂತ ಮುಂದಿದ್ದವನು ಅವರ ಕಿರಿಯ ಮಗ ನಾಲ್ಕು ವರ್ಷ ವಯಸ್ಸಿನ ಜಗ್ಗು (ಜಗದೀಶ)!  ಈ ಮಗು ನನ್ನ ಕೈ ಹಿಡಿದುಕೊಂಡು ಉಪ್ಪರಿಗೆಯ ಮೇಲಿದ್ದ ಕೊಠಡಿಗೆ ನನ್ನನ್ನು ಕರೆದುಕೊಂಡು ಹೋಯಿತು! ಅಲ್ಲಿ ಒಂದು ಕುರ್ಚಿ ಮತ್ತು ಟೇಬಲ್ ನನಗಾಗಿ ಕಾಯುತ್ತಿದ್ದವು. ನಾನು ನನ್ನ ಜೀವಮಾನದಲ್ಲಿ ಮೊಟ್ಟ  ಮೊದಲಿಗೆ ಒಂದು ಕುರ್ಚಿಯ ಮೇಲೆ ಕುಳಿತು ಟೇಬಲ್ ಮೇಲೆ ಪುಸ್ತಕವಿಟ್ಟು ಬರೆದು ಓದುವ ಅವಕಾಶ ಪಡೆದಿದ್ದೆ. ಜಗ್ಗುವಿನ ಪ್ರಕಾರ ಅದು ನನ್ನ ಆಫೀಸ್ ಅಂತೆ! ಆಮೇಲೆ ನಾನು ಎರಡು ವರ್ಷ ಅಲ್ಲಿದ್ದಾಗಲೂ ಜಗ್ಗು ಅದನ್ನು ನನ್ನ ಆಫೀಸ್ ಎಂದೇ ಹೇಳುತ್ತಿದ್ದ. ಅಲ್ಲದೇ ದಿನವೂ ಹೆಚ್ಚು ಕಾಲವನ್ನು ನನ್ನೊಡನೆ ಕಳೆಯುತ್ತಿದ್ದ ಜಗ್ಗು ಬೇಗನೆ ನನ್ನ ಸ್ನೇಹಿತರನ್ನೆಲ್ಲಾ ಪರಿಚಯ ಮಾಡಿಕೊಂಡು ಬಿಟ್ಟ.

ಶ್ರೀಕಂಠಯ್ಯನವರ ಪತ್ನಿ ಶ್ರೀಲಕ್ಷ್ಮಿ

ಶ್ರೀಕಂಠಯ್ಯನವರು ಎಷ್ಟೇ ಉದಾರಿಗಳಾಗಿದ್ದರೂ ನನ್ನಂತಹ ಒಬ್ಬ ಖಾಯಂ ಅತಿಥಿಯನ್ನು ಮನೆಯಲ್ಲಿಟ್ಟುಕೊಳ್ಳುವ ಭಾರ ಕೇವಲ ಅವರ ಪತ್ನಿಯ ಮೇಲೆ ಬೀಳುತ್ತಿತ್ತು. ಆ ವಿಷಯದಲ್ಲಿ ನಾನೆಷ್ಟು ಭಾಗ್ಯಶಾಲಿಯಾಗಿದ್ದೇನೆಂದು ಸ್ವಲ್ಪ ಕಾಲದಲ್ಲೇ ನನಗೆ ಗೊತ್ತಾಗಿ ಹೋಯಿತು. ತಾಳ್ಮೆ ಮತ್ತು ಪ್ರೀತಿಯ ಸಾಕ್ಷಾತ್ಕಾರವೇ ಶ್ರೀಕಂಠಯ್ಯನವರ ಪತ್ನಿ ಶ್ರೀಲಕ್ಷ್ಮಿಯವರೆಂದರೆ ಅದು ಅತಿಶಯೋಕ್ತಿ ಆಗಲಾರದು. ನಾನು ಬಹು ಬೇಗನೆ ನನ್ನ ಮನಸ್ಸಿನಲ್ಲಿ ಅವರಿಗೆ ನನ್ನ ಪ್ರೀತಿಯ ಅಮ್ಮ ಮತ್ತು ಅಕ್ಕಂದಿರಿಬ್ಬರ ನಂತರದ ಸ್ಥಾನವನ್ನು ನೀಡಿಬಿಟ್ಟೆ. 

ನಾನು ಈ ಅಧ್ಯಾಯದ ಮೊದಲಿನಲ್ಲಿ ನನಗೆ ಇನ್ನು ಮುಂದೆ ಪ್ರತಿ ತಿಂಗಳೂ ಹಾಸ್ಟೆಲ್ ಫೀ  ವಸೂಲಿಗೆ ಚಂದ್ರಮೌಳಿರಾಯರ ಮನೆಗೆ ಹೋಗುವುದು ಇಷ್ಟವಿಲ್ಲವೆಂದು ತೀರ್ಮಾನಿಸಿದ ಬಗ್ಗೆ ಬರೆದಿದ್ದೇನೆ. ವಿಚಿತ್ರವೆಂದರೆ ನಾನು ಇನ್ನು ಮುಂದೆ ರಾಯರ ಬದಲಿಗೆ ಅವರ ತಂಗಿಗೆ ಋಣಿಯಾಗಲಿದ್ದೆ. ಏಕೆಂದರೆ ರಾಯರು ಅವರ ತಂದೆಗೆ ಮೊದಲ ಹೆಂಡತಿಯ ಮಗನಾದರೆ ಶ್ರೀಲಕ್ಷ್ಮಿಯವರು ಎರಡನೇ ಹೆಂಡತಿಯ ಮಗಳಾಗಿದ್ದರು. ಹಾಗೂ ಅವರಿಗೆ ಇನ್ನಿಬ್ಬರು ಸಹೋದರರೂ ಇದ್ದರು, ಅವರಿಗೆ ತವರುಮನೆ ಹುಲುಗಾರಿಗೆ ಹೋಗಬೇಕಾದಾಗ ಅಲ್ಲಿಂದ ಕಳಿಸಿದ ಕಾರಿನಲ್ಲೇ ಹೋಗುತ್ತಿದ್ದರು. ಸಾಮಾನ್ಯವಾಗಿ ರಾಯರ ಹಿರಿಯ ಮಗ ಶ್ರೀಕಂಠರಾಯರೇ ಕಾರ್ ತೆಗೆದುಕೊಂಡು ಬಂದು ಅವರ ಮನೆಯಲ್ಲಿ ನಡೆಯುತ್ತಿದ್ದ ಸಮಾರಂಭಗಳಿಗೆ ಕರೆದುಕೊಂಡು ಹೋಗುತ್ತಿದ್ದರು.

ಮುನ್ಸೂಚನೆ ಇಲ್ಲದೇ ಊಟಕ್ಕೆ ಬರುವ ಅತಿಥಿಗಳು

ಶ್ರೀಲಕ್ಷ್ಮಿಯವರು ಒಬ್ಬ ತುಂಬಾ ಸರಳ ಮತ್ತು ಆದರ್ಶ ಗೃಹಿಣಿಯಾಗಿದ್ದರು. ಅವರು ತಮ್ಮ  ಗಂಡನಿಗೆ ಆದರ್ಶ ಪತ್ನಿಯಾಗಿದ್ದಂತೆ ಮಕ್ಕಳಿಗೆ ಪ್ರೀತಿಯ ಅಮ್ಮನಾಗಿದ್ದರು. ಶ್ರೀಕಂಠಯ್ಯನವರಿಗೆ ಒಂದು ವಿಚಿತ್ರ ಸ್ವಭಾವವಿತ್ತು. ಅವರು  ಪೇಟೆಯಿಂದ ಮನೆಗೆ ಮದ್ಯಾಹ್ನದ ಊಟಕ್ಕೆ ಬರುವಾಗ ಹಲವು ಬಾರಿ ಹಳ್ಳಿಯಿಂದ ಬಂದ ಸ್ನೇಹಿತರನ್ನೂ ಕೂಡ ಯಾವ ಮುನ್ಸೂಚನೆ ಇಲ್ಲದೇ ತಮ್ಮೊಡನೆ ಕರೆದುಕೊಂಡು ಬಂದು ಬಿಡುತ್ತಿದ್ದರು. ಅವರ ಈ ಸ್ವಭಾವವನ್ನು ಕೆಲವರು ದುರುಪಯೋಗವನ್ನು ಮಾಡಿಕೊಳ್ಳುವುದನ್ನೂ ನಾನು ನೋಡಿದ್ದೆ. ಯಾವುದೇ ಗೃಹಿಣಿಗಾದರೂ ಈ ಬಗೆಯ ಅತಿಥಿಗಳು ಇದ್ದಕ್ಕಿದಂತೇ ಮನೆಗೆ ಊಟಕ್ಕೆ ಬಂದಾಗ ನಿಭಾಯಿಸುವುದು ಕಷ್ಟಕರವೇ ಆಗಿರುತ್ತದೆ. ಆದರೆ ಶ್ರೀಲಕ್ಷ್ಮಿಯವರು ಸ್ವಲ್ಪವೂ ಗೊಣಗದೇ ತುಂಬಾ ತಾಳ್ಮೆಯಿಂದ ಬಂದ ಅತಿಥಿಗಳಿಗೆ ಊಟದ ಏರ್ಪಾಟು ಮಾಡಿ ಬಡಿಸಿ ಬಿಡುತ್ತಿದ್ದರು. ಅವರೆಂದೂ ಅತಿಥಿಗಳು ಹೊರಟು  ಹೋದ ನಂತರವೂ ಆ ವಿಚಾರವಾಗಿ ಗಂಡನಿಗೆ ಪ್ರಶ್ನೆ ಮಾಡುತ್ತಿರಲಿಲ್ಲ. ಆ ಪತಿ ಪತ್ನಿ ಜೋಡಿ ಬೇರೆ ದಂಪತಿಗಳಿಗೆ ಒಂದು ಬಗೆಯಲ್ಲಿ ಮಾದರಿಯಾಗಿಯೇ ಇದ್ದರು. ಪ್ರಾಯಶಃ ಇಂದಿನ ದಿನಗಳಲ್ಲಿ ಇಂತಹಾ ಜೋಡಿ ಎಲ್ಲಿಯೂ ಕಣ್ಣಿಗೆ ಬೀಳಲಿಕ್ಕಿಲ್ಲ!

ಭಾರತೀಯ ಜೀವವಿಮಾ  ನಿಗಮದ ಏಜೆಂಟ್

ಶ್ರೀಕಂಠಯ್ಯನವರೂ ಒಂದು ಕಾಲದಲ್ಲಿ ಹಣಕಾಸಿನ ಸಮಸ್ಯೆ ಎದುರಿಸಿದವರೇ ಆಗಿದ್ದರು. ಅವರಿಗೆ ಪಿತ್ರಾರ್ಜಿತ ಆಸ್ತಿ ಪಾಲಾಗಿ  ಒಂದು ಎಕರೆ ಅಡಿಕೆ ತೋಟ ಬಂದಿತ್ತು. ಪೇಟೆಗೆ ಹತ್ತಿರದಲ್ಲೇ ಇದ್ದ ಆ ತೋಟವನ್ನು ಅವರೇ ಸ್ವಂತವಾಗಿ ನೋಡಿಕೊಳ್ಳುತ್ತಿದ್ದರು. ಆದರೆ ಅದರಿಂದ ಬಂದ ಉತ್ಪತ್ತಿ ಅವರ ಸ್ವಲ್ಪ ದೊಡ್ಡದೇ ಆದ ಕುಟುಂಬ ನಿರ್ವಹಣೆಗೆ ಸಾಲುತ್ತಿರಲಿಲ್ಲ. ಆಮೇಲೆ ಅವರು ಭಾರತೀಯ ಜೀವವಿಮಾ  ನಿಗಮದ ಏಜೆಂಟ್ ಆದರು. ಅಲ್ಲಿಂದ ಅವರ ಹಣಕಾಸಿನ ಸ್ಥಿತಿ ತುಂಬಾ ಸುಧಾರಿಸಿತು. ಅವರ ನಗೆಮೊಗ, ಸ್ಪಷ್ಟಮಾತುಗಳು ಮತ್ತು ವ್ಯವಹಾರ ಜ್ಞಾನ ಇತ್ಯಾದಿ ಮುಖ್ಯ ಗುಣಗಳು ಅವರನ್ನು ಒಬ್ಬ ಜೀವ ವಿಮ ಏಜೆಂಟ್ ಆಗಿ ಯಶಸ್ವಿಯಾಗಲು ಕಾರಣವಾದವು. ತುಂಬಾ ಆತ್ಮ ಗೌರವ ಹೊಂದಿದ್ದ ಶ್ರೀಕಂಠಯ್ಯನವರು ಯಾರ ಹಂಗಿಗೂ ಬೀಳುವವರಾಗಿರಲಿಲ್ಲ. ಹುಲುಗಾರು ಅವರ ಮಾವನ ಮನೆಯಾಗಿದ್ದರೂ ಅಲ್ಲಿಗೂ ಅವರು ಅಪರೂಪದ ಅತಿಥಿಯಾಗಿದ್ದರು.

ಹಳೇಮನೆ ಕುಟುಂಬ

ಶ್ರೀಕಂಠಯ್ಯನವರು ವಾಸಿಸುತ್ತಿದ್ದ ಮನೆಗೆ ಹಳೇಮನೆ ಎಂದು ಹೆಸರು ಬರಲು ಕಾರಣ ತಿಳಿದಿಲ್ಲ. ಪ್ರಾಯಶಃ ಅದು ಶ್ರೀ ಮಠದ ಎದುರಿನ ಭಾರತಿ ಬೀದಿಯ ಮೊದಲಮನೆಯಾಗಿದ್ದರಿಂದ ಅದಕ್ಕೆ ಆ ಹೆಸರು ಬಂದಿರಬೇಕು.  ಆ ಕಟ್ಟಡದಲ್ಲಿ ಎರಡು ಮನೆಗಳಿದ್ದು ಮೊದಲಿನ ಮನೆಯಲ್ಲಿ ಶ್ರೀಕಂಠಯ್ಯನವರ ಹಿರಿಯ ಅಣ್ಣ ಮಹಾಬಲಯ್ಯನವರು ವಾಸಿಸುತ್ತಿದ್ದರು. ನಾಲ್ಕು ಮಂದಿ ಸಹೋದರರಲ್ಲಿ ಶ್ರೀಕಂಠಯ್ಯನವರು ಕಿರಿಯರಾಗಿದ್ದು ಅವರು ವಾಸಿಸುತ್ತಿದ್ದ ಮನೆ ಅವರ ಅಣ್ಣನಾದ ಶಿವಸ್ವಾಮಿಯವರಿಗೆ ಸೇರಿತ್ತು. ಅವರು ಮಣಿಪಾಲ್  ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದರು. ಇನ್ನೊಬ್ಬ ಅಣ್ಣನಾದ ಕೃಷ್ಣಸ್ವಾಮಿಯವರು ಪೇಟೆಯ ಹತ್ತಿರದಲ್ಲೇ ಇದ್ದ ಹಳ್ಳಿಯಲ್ಲಿ ವಾಸಿಸುತ್ತಿದ್ದರು. ಅವರ ಮಗಳನ್ನು ಆಗಿನ ಶೃಂಗೇರಿ ಮಠದಲ್ಲಿ ಪೇಷ್ಕಾರ್ ಆಗಿದ್ದವರಿಗೆ ಮದುವೆ ಮಾಡಲಾಗಿದ್ದು ಅವರ ಮನೆ ಹಳೇಮನೆಯ ಎದುರಿಗೇ ಇತ್ತು. ನಾಲ್ಕು ಮಂದಿ ಸಹೋದರರಿಗೆ ಕೇವಲ ಒಬ್ಬಳೇ ಸಹೋದರಿ ಇದ್ದಳು. ವಿಧವೆಯಾಗಿ ಅತ್ತೆಮ್ಮನೆಂದು ಕರೆಯಲ್ಪಡುತ್ತಿದ್ದ ಆ ಸಹೋದರಿ ಶ್ರೀಕಂಠಯ್ಯನವರ ಮನೆಯಲ್ಲೇ ಇರುತ್ತಿದ್ದರು.

ತೆರೆಮರೆಯ ರಾಜಕೀಯ ಚಾಣಕ್ಯ ಶ್ರೀಕಂಠಯ್ಯ

ಶ್ರೀಕಂಠಯ್ಯನವರು ಶೃಂಗೇರಿಯ ಸ್ಥಳೀಯ ರಾಜಕೀಯದಲ್ಲಿ ಚಾಣಕ್ಯನಂತಿದ್ದರು. ಒಮ್ಮೆ ಮುನಿಸಿಪಾಲಿಟಿ ಸದಸ್ಯರೂ ಆಗಿದ್ದ ಶ್ರೀಕಂಠಯ್ಯನವರು ಆಮೇಲೆ ತೆರೆಮರೆಯಲ್ಲಿ ಚಟುವಟಿಕೆ ನಡೆಸುತ್ತಿದ್ದ ಕಿಂಗ್ ಮೇಕರ್ ಆಗಿದ್ದರು. ಮುನಿಸಿಪಾಲಿಟಿ ಚುನಾವಣೆಗೆ ನಿಲ್ಲುವರಿಗೆ ಅವರ ಸಲಹೆಗಳು ತುಂಬಾ ಅಮೂಲ್ಯವಾಗಿದ್ದವು. ಅವರು ಶಾರದಾ ಕೋ-ಆಪರೇಟಿವ್ ಸೊಸೈಟಿಯ ಕಾರ್ಯದರ್ಶಿಯೂ ಆಗಿದ್ದರು. ಆಗ ಆ ಸೊಸೈಟಿ ರೇಷನ್ ಸಾಮಾನುಗಳ ವಿತರಣೆಯನ್ನೂ ಮಾಡುತ್ತಿತ್ತು. ಆ ಕಾಲದಲ್ಲಿ ಸಕ್ಕರೆ ತುಂಬಾ ಅಭಾವದ ವಸ್ತುವಾಗಿತ್ತು. ಕಾರ್ಯದರ್ಶಿಯಾದ ಶ್ರೀಕಂಠಯ್ಯನವರಿಗೆ ರೇಷನ್ ಹಂಚಿದ ಮೇಲೆ ಉಳಿದ ಸಕ್ಕರೆಯನ್ನು ಅವರಿಗೆ ಇಷ್ಟವಾದವರಿಗೆ ಹಂಚುವ ಸೌಲಭ್ಯವಿತ್ತು.

ಧ್ಯಾನ ಮಗ್ನ ಚಂದ್ರಮೌಳಿರಾಯರು

ಶ್ರೀಕಂಠಯ್ಯನವರ ಮನೆ ಮಠದ ಎದುರಿಗೆ ಇದ್ದದ್ದು ನನಗೊಂದು ವರವಾಗಿ ಪರಿಣಮಿಸಿತು. ನಾನು ಪ್ರತಿ ದಿನ ಸಂಜೆ ನನ್ನ ಸ್ನೇಹಿತರಾದ ಹೆಬ್ಬಿಗೆ ವಿಶ್ವನಾಥ, ಮಂಜುನಾಥ ಮತ್ತು ಕೊಡಿಗೆತೋಟದ ಪದ್ಮನಾಭನೊಡನೆ ಮಠಕ್ಕೆ ಹೋಗಿ ಶಾರದಾಂಬೆಯ ದರ್ಶನ ಮಾಡುತ್ತಿದ್ದೆ. ನಾವು ಮೊದಲು ತುಂಗಾ ನದಿಗೆ ಹೋಗಿ ಕೈ ಕಾಲು ತೊಳೆದು ಶಾರದಾಂಬೆಯ ದರ್ಶನ ಮಾಡಿ ಸ್ವಲ್ಪ ಕಾಲ ದೇವಸ್ತಾನದಲ್ಲೇ ಕುಳಿತಿರುತ್ತಿದ್ದೆವು. ಆಮೇಲೆ ಪುನಃ ನದಿಯ ದಂಡೆಗೆ ಹೋಗಿ ಅಲ್ಲಿನ ಮೆಟ್ಟಿಲುಗಳ ಮೇಲೆ ಕುಳಿತುಕೊಳ್ಳುತ್ತಿದ್ದೆವು. ನಮ್ಮ ಮುಂದೆ ಹರಿಯುತ್ತಿದ್ದ ತುಂಗೆಯ ಮತ್ತು ಆಚೆ ದಂಡೆಯಲ್ಲಿ ಕಾಣುತ್ತಿದ್ದ ನರಸಿಂಹವನದ  ಪ್ರಶಾಂತ ಸನ್ನಿವೇಶ ನಮ್ಮನ್ನು ಬೇರಾವುದೋ ಲೋಕಕ್ಕೆ ಒಯ್ಯುತ್ತಿತ್ತು. ಪುನಃ ನಾವು ಮೆಟ್ಟಿಲೇರಿ ವಿದ್ಯಾಶಂಕರ ದೇವಾಲಯದ ಹತ್ತಿರ ಬರುವಾಗ ಅದರ ಒಂದು ಬದಿಯಲ್ಲಿದ್ದ ಹಸಿರು ಹುಲ್ಲಿನ ಮೇಲೆ ಕುಳಿತು ಧ್ಯಾನ ಮಾಡುತ್ತಿದ್ದ ಚಂದ್ರಮೌಳಿರಾಯರು ನಮ್ಮ ಕಣ್ಣಿಗೆ ಬೀಳುತ್ತಿದ್ದರು.  ಪ್ರತಿ ಸಂಜೆಯೂ ಶಂಕರ ದೇವಾಲಯದ ಮುಂದೆ ಕುಳಿತು ಧ್ಯಾನ ಮಾಡುವುದು ರಾಯರ ದಿನಚರಿಯಲ್ಲೊಂದಾಗಿತ್ತು.

------- ಮುಂದುವರಿಯುವುದು-----


Tuesday, June 16, 2020

ಬಾಲ್ಯ ಕಾಲದ ನೆನಪುಗಳು – ೯೩

ಪ್ರತಿ ವರ್ಷದ ಮಾಮೂಲಿನಂತೆ ಆ ವರ್ಷದ ಬೇಸಿಗೆ ರಜೆಯಲ್ಲೂ ಪುಟ್ಟಣ್ಣ ಮತ್ತು ನಾನು ಮಳೆಗಾಲಕ್ಕೆ ಮುಂಚೆ ಮಾಡಬೇಕಾದ ಕೆಲಸಗಳನ್ನೆಲ್ಲಾ ಮಾಡಿ ಮುಗಿಸಿಬಿಟ್ಟೆವು.  ಜುಲೈ ೧ನೇ ತಾರೀಕಿನಿಂದ ನಾವು ಕಾಲೇಜಿಗೆ ಹೋಗಬೇಕಾದ್ದರಿಂದ ಅಷ್ಟರಲ್ಲಿ ಮತ್ತು ಮಳೆಗಾಲ ಶುರುವಾಗುವ ಮೊದಲು ಆ ಎಲ್ಲಾ ಕೆಲಸಗಳು ಮುಗಿಯಲೇ ಬೇಕಿತ್ತು. ಪುಟ್ಟಣ್ಣ ಹೇಗೋ ಹೋರಾಟಮಾಡಿ ಮನೆಯಿಂದ ದೊರೆಯುತ್ತಿದ್ದ ಅಲ್ಪ ಹಣದಿಂದ ಬೆಂಗಳೂರಿನಲ್ಲೇ ತನ್ನ ವಿದ್ಯಾಭ್ಯಾಸ ಮುಂದುವರಿಸಿದ್ದ. ನಮ್ಮ ಮಲೆನಾಡಿನಲ್ಲಿ ಬಿ.ಕಾಂ. ಪರೀಕ್ಷೆ ತೆಗೆದುಕೊಳ್ಳುತ್ತಿದ್ದವರಲ್ಲಿ ಪುಟ್ಟಣ್ಣನೊಬ್ಬ ಮೊದಲಿಗನಾಗಿದ್ದನೆಂದು ಅನಿಸುತ್ತಿದೆ. ಆ ಪದವಿ ತರಗತಿಯಲ್ಲಿ ವ್ಯಾಪಾರ ಮತ್ತು ವ್ಯವಹಾರಗಳ ಬಗ್ಗೆ ತರಬೇತಿ ನೀಡುತ್ತಿದ್ದರೆಂದು ಪುಟ್ಟಣ್ಣನಿಂದ ನನಗೆ ತಿಳಿಯಿತು. ಅವನು ಕೇವಲ ಎರಡು ವರ್ಷದಲ್ಲೇ ಬೆಂಗಳೂರಿನಲ್ಲಿ ತುಂಬಾ ಸ್ನೇಹಿತರನ್ನು ಹೊಂದಿದ್ದ. ನಾವಿಬ್ಬರೂ ನಮ್ಮ ಕಾಲೇಜಿನ ಅನುಭವಗಳನ್ನು ಹಂಚಿಕೊಳ್ಳುತ್ತಾ ಇನ್ನೂ ಎರಡು ವರ್ಷ ಹೇಗೆ ನಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಬೇಕೆಂದು ಚರ್ಚಿಸುತ್ತಿದ್ದೆವು.

ನನಗೆ ನನ್ನ ಹಾಸ್ಟೆಲ್ ಮೇಟ್ ಗಳಿಂದ ತುಂಬಾ ಪತ್ರಗಳು ಬರುತ್ತಿದ್ದವು. ಹೆಚ್ಚಿನ ಪತ್ರಗಳು  ನಾನು ಅವರಿಗೆ ಮಾರ್ಗದರ್ಶನ ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಬರೆದ ಪತ್ರಗಳಾಗಿರುತ್ತಿದ್ದವು. ಹಾಗೆಯೇ ನನ್ನಂತಹ Rank ಪಡೆದ ವಿದ್ಯಾರ್ಥಿಯನ್ನು ಸ್ನೇಹಿತನನ್ನಾಗಿ ಪಡೆದುದು ತಮ್ಮ ಅದೃಷ್ಟವೆಂದು ಅವರು ಬರೆದಿದ್ದರು. ಕೆಲವು ಪತ್ರಗಳಲ್ಲಿ ನನ್ನನ್ನು ತುಂಬಾ ಹೊಗಳಿ ಬರೆದದ್ದು ಸ್ವಲ್ಪ  ತಮಾಷೆಯಾಗಿಯೇ ಕಾಣುತ್ತಿತ್ತು. ನನ್ನ ತಮ್ಮಂದಿರು ಅವನ್ನು ಗಟ್ಟಿಯಾಗಿ ಓದಿ ನನ್ನನ್ನು ತಮಾಷೆ ಮಾಡುತ್ತಾ ನಗುತ್ತಿದ್ದರು. ನನ್ನ ರೂಮ್ ಮೇಟ್ ನಂಜುಂಡಸ್ವಾಮಿ ನಾನು ಅವನ ಊರಾದ ಲಿಂಗದಹಳ್ಳಿಗೆ ಬರಲೇ ಬೇಕೆಂದು ತುಂಬಾ ಒತ್ತಾಯ ಮಾಡಿ ಪತ್ರ ಬರೆದಿದ್ದ. ಹಾಗೆಯೇ ನಾವು ಬೀರೂರು ಮತ್ತು ಕಡೂರಿಗೂ ಹೋಗಿ ನಮ್ಮ ಮಿತ್ರರನ್ನು ಭೇಟಿಮಾಡಬಹುದೆಂದು ಅವನು ಸಲಹೆ ನೀಡಿದ್ದ. ನಮ್ಮ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಕಡೂರು ಮತ್ತು ಬೀರೂರು ಬಯಲುಸೀಮೆ ಊರುಗಳಾಗಿದ್ದವು. ಅಲ್ಲಿನ ಜನಜೀವನ ಹೇಗಿರಬಹುದೆಂದು ತಿಳಿಯುವ ಕುತೂಹಲ ನನಗೂ ತುಂಬಾ ಇತ್ತು. ಆದ್ದರಿಂದ ನಾನು ಮೊದಲು ಲಿಂಗದಹಳ್ಳಿಗೆ ಹೋಗಲು ತೀರ್ಮಾನಿಸಿದೆ.

ಲಿಂಗದಹಳ್ಳಿಗೆ ಪ್ರಯಾಣ

ದಿನ ನಾನು ಬೆಳಗೊಳ ಗಣಪತಿಕಟ್ಟೆಗೆ ಹೋಗಿ ಚಿಕ್ಕಮಗಳೂರಿಗೆ ಹೋಗುವ ಶಂಕರ್ ಟ್ರಾನ್ಸ್ಪೋರ್ಟ್ ಬಸ್ ಹತ್ತಿದೆ. ನಾನು ಇನ್ನೂ ಚಿಕ್ಕ ಹುಡುಗನಾಗಿದ್ದಾಗ ತಂದೆಯವರೊಡನೆ ಬಾಳೆಕಾಯಿ ವ್ಯಾಪಾರ ಮಾಡಲು ಅಲ್ಲಿಗೆ ಹೋಗಿದ್ದನ್ನು ಹಿಂದೆಯೇ ಬರೆದಿದ್ದೇನೆ. ಆಮೇಲೆ ಎಷ್ಟೋ ವರ್ಷಗಳು ಕಳೆದಿದ್ದರೂ ಚಿಕ್ಕಮಗಳೂರು ಪಟ್ಟಣದಲ್ಲಿ ಹೆಚ್ಚಿನ ಬದಲಾವಣೆಗಳೇನೂ ಕಣ್ಣಿಗೆ ಬೀಳಲಿಲ್ಲ. ಅದೊಂದು ಜಿಲ್ಲಾ ಕೇಂದ್ರವಾಗಿದ್ದರೂ ಶಿವಮೊಗ್ಗೆಗೆ ಯಾವ ರೀತಿಯಲ್ಲ್ಲೂ ಹೋಲಿಕೆ ಮಾಡುವಂತಿರಲಿಲ್ಲ. ನಾನು ಅಲ್ಲಿಂದ ಇನ್ನೊಂದು ಬಸ್ ಹಿಡಿದು ಲಿಂಗದಹಳ್ಳಿ ತಲುಪಿದೆ. ಅದೊಂದು ಚಿಕ್ಕ ಬಯಲುಸೀಮೆ ಊರಾಗಿತ್ತು. ನಂಜುಂಡಸ್ವಾಮಿ ಬಸ್ ನಿಲ್ದಾಣದಲ್ಲಿ ನನಗೆ ಕಾಯುತ್ತಿದ್ದ. ಪಕ್ಕಾ ಮಲೆನಾಡಿನಲ್ಲಿ ಹುಟ್ಟಿ ಬೆಳೆದ ನನಗೆ ಅದೊಂದು ತುಂಬಾ ವಿಚಿತ್ರ ಊರಾಗಿ ಕಾಣಿಸಿತು. ನಂಜುಂಡಸ್ವಾಮಿಯ ತಂದೆ ತಾಯಿಯವರು ನನ್ನನ್ನು ತುಂಬಾ ಆದರದಿಂದ ಬರಮಾಡಿಕೊಂಡರು. ತಮ್ಮ ಮಗ ನನ್ನ ಬಗ್ಗೆ ತುಂಬಾ ಹೇಳಿರುವುದಾಗಿ ತಿಳಿಸಿ ನನ್ನಂತಹ ಗೆಳೆಯ ಅವನಿಗೆ ಸಿಕ್ಕಿದ್ದುದು ಅವನ ಅದೃಷ್ಟ ಎಂದು ಹೇಳಿದರು. ನನಗೆ ಜೋಳದ ರೊಟ್ಟಿ ಮತ್ತು ಎಣ್ಣೆಗಾಯಿ ಊಟ ಮಾಡಿಸಿದರು. ಸಂಜೆಯ ವೇಳೆ ನಾವಿಬ್ಬರೂ ಒಮ್ಮೆ ಊರನ್ನೆಲ್ಲಾ ಸುತ್ತಿ ಬಂದೆವು. ಇಡೀ ಊರಿನಲ್ಲಿ ಕೇವಲ ಕೆಲವೇ ಸಿಹಿ ನೀರಿನ ಬಾವಿಗಳಿದ್ದವು. ಊರಿನವರೆಲ್ಲಾ ಅವುಗಳಿಂದಲೇ ದಿನ ನಿತ್ಯ ಕುಡಿಯುವ ನೀರನ್ನು ತರಬೇಕಾಗಿತ್ತು. ಅದನ್ನು ನೋಡುವಾಗ ನನಗೆ ನಮ್ಮೂರಿನಲ್ಲಿ ಪ್ರತಿ ಮನೆಗೂ ಹರಿದು ಬರುತ್ತಿದ್ದ ಒರತೆಯ ಸಿಹಿ ನೀರು ನೆನಪಾಗಿ ನಾವೆಷ್ಟು ಭಾಗ್ಯಶಾಲಿಗಳೆಂದು ಅರಿವಾಯಿತು. ಆ ರಾತ್ರಿ ನಾನು ಅವರ ಮನೆಯಲ್ಲೇ ಇದ್ದು ಬೆಳಿಗ್ಗೆ ನಾವಿಬ್ಬರೂ ಕೆಮ್ಮಣ್ಣುಗುಂಡಿಗೆ ಪ್ರಯಾಣ ಮಾಡುವುದೆಂದು ತೀರ್ಮಾನಿಸಿದೆವು.

ಕೆಮ್ಮಣ್ಣುಗುಂಡಿಗೆ ಪ್ರಯಾಣ ಮತ್ತು ಕಲ್ಹತ್ತಿ ಜಲಪಾತ

ಮಾರನೇ ದಿನ ಬೆಳಿಗ್ಗೆ ನಾವು ಬಸ್ ಒಂದನ್ನು ಹಿಡಿದು ಕೆಮ್ಮಣ್ಣುಗುಂಡಿಯ ತಪ್ಪಲನ್ನು ತಲುಪಿದೆವು. ಆದರೆ ಗುಡ್ಡದ ಮೇಲೆ ಹೋಗಲು ಕೇವಲ ಎರಡೇ ಬಸ್ಸುಗಳಿದ್ದು ನಾವು ಮೊದಲನೇ ಬಸ್ ಮಿಸ್ ಮಾಡಿದ್ದೆವು. ಮುಂದಿನ ಬಸ್ ಮದ್ಯಾಹ್ನದ ನಂತರ ಇತ್ತು. ನಿರ್ವಾಹವಿಲ್ಲದೇ ನಾವು ರಸ್ತೆಯಲ್ಲಿಯೇ ಮುನ್ನಡೆಯುತ್ತಾ ಗುಡ್ಡದ ಮೇಲೆ ಹೋಗತೊಡಗಿದೆವು. ಆರಂಭದಲ್ಲಿ ನಾವು ಅತಿ ಉತ್ಸಾಹದಿಂದ ಗುಡ್ಡಕ್ಕೆ ಹೋಗುವ ರಸ್ತೆಯಲ್ಲಿ ಪಯಣಿಸಿದೆವು. ರಸ್ತೆಯ ಒಂದು ಪಕ್ಕದಲ್ಲಿ ಗುಡ್ಡದ ತುದಿಯಿಂದ ನೀರು ಇಳಿದು ಕಾಲುವೆಯಾಗಿ ಹರಿದು ಹೋಗುತ್ತಿದ್ದುದು ನಮ್ಮ ಉತ್ಸಾಹವನ್ನು ಇನ್ನೂ ಹೆಚ್ಚಿಸಿತು. ಆದರೆ ನೆತ್ತಿಯ ಮೇಲೆ ಸೂರ್ಯನ ಬಿಸಿಲು ಉರಿಯತೊಡಗಿದಂತೆ ನಮ್ಮ ಉತ್ಸಾಹ ಕಡಿಮೆಯಾಗ ತೊಡಗಿತು. ದಾರಿಯಲ್ಲಿ ನಮಗೆ ಸಿಕ್ಕ ಒಂದೆರಡು ಕಾಫಿ ಪ್ಲಾಂಟರ್ ಗಳ ಜೀಪುಗಳನ್ನು ನಿಲ್ಲಿಸುವ ನಮ್ಮ ಪ್ರಯತ್ನ ವಿಫಲವಾಯಿತು. ಮಾರ್ಗದಲ್ಲಿ ಸಿಕ್ಕಿದ ಒಂದು ಅಡ್ಡ ರಸ್ತೆಯಲ್ಲಿ ಹೋದಾಗ ನಾವು ಅತ್ಯಂತ ರಮಣೀಯವಾದ ಕಲ್ಹತ್ತಿ ಜಲಪಾತವನ್ನು ತಲುಪಿದೆವು. ಜಲಪಾತದ ಮದ್ಯೆ ಹೋಗಿ ನಾವು ತುಂಬಾ ಖುಶಿಯಿಂದ ಸ್ನಾನ ಮಾಡಿ ಮುಗಿಸಿದೆವು. ಅಲ್ಲಿರುವ ವೀರ ಭದ್ರೇಶ್ವರ ಸ್ವಾಮಿ ದೇವಾಲಯ ವಿಜಯನಗರದ ಅರಸರ ಕಾಲದ್ದಂತೆ. ಸುಮಾರು ೧೨೨ ಮೀಟರ್ ಎತ್ತರದಿಂದ ದುಮ್ಮಿಕ್ಕುವ ಜಲಪಾತವಿರುವ ಈ ಪ್ರದೇಶ ಪುರಾಣಗಳ ಪ್ರಕಾರ ಅಗಸ್ತ್ಯ ಮುನಿಗೆ ಸಂಬಂಧಿಸಿದ್ದಂತೆ. ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಸ್ವಲ್ಪ ಕಾಲ ವೀಕ್ಷಿಸಿದ ನಂತರ ಅಲ್ಲಿಂದ ಸುಮಾರು ೧೦ ಕಿಲೋಮೀಟರ್ ದೂರದಲ್ಲಿದ್ದ ಕೆಮ್ಮಣ್ಣುಗುಂಡಿಯತ್ತ ನಮ್ಮ ಪ್ರಯಾಣ ಮುಂದುವರಿಯಿತು.

ಆ ವೇಳೆಯಲ್ಲಿ ನಮ್ಮ  ಅದೃಷ್ಟ ಖುಲಾಯಿಸಿತ್ತು. ನಮ್ಮ ಹಿಂದಿನಿಂದ ಬಂದ ಒಂದು ಜೀಪಿನಲ್ಲಿದ್ದ ಮಹಾಶಯರು ಅದನ್ನು ನಮ್ಮ ಪಕ್ಕದಲ್ಲೇ ನಿಲ್ಲಿಸಿ ಲಿಫ್ಟ್ ಬೇಕೇ ಎಂದು ಪ್ರಶ್ನಿಸಿದರು. ಅವರಿಗೆ ತುಂಬಾ ಕೃತಜ್ಞತೆ ಸಲ್ಲಿಸಿ ನಾವು ಜೀಪನ್ನೇರಿ ಬಿಟ್ಟೆವು.  ಬೇಗನೆ ಬೆಟ್ಟದ ತುದಿಯನ್ನು ತಲುಪಿದ ನಮಗೆ ನಿರಾಶೆಯೊಂದು ಅಲ್ಲಿ ಕಾಯುತ್ತಿತ್ತು. ಆಗ ಅಲ್ಲಿ ಯಾವುದೇ ಹೋಟೆಲ್ಲುಗಳು ಇರದೇ ಕೇವಲ ಒಂದು ಕ್ಯಾಂಟೀನ್ ಇತ್ತು. ಅಲ್ಲಿ ತಯಾರಿಸಿದ್ದ ಕಡಿಮೆ ಸಂಖ್ಯೆಯ ಊಟಗಳು ಮುಗಿದು ಹೋಗಿದ್ದು ನಾವೆಷ್ಟೇ ಕೇಳಿಕೊಂಡರೂ ನಮಗಾಗಿ ಸ್ವಲ್ಪ ಅಡಿಗೆ ಮಾಡಲು ಕ್ಯಾಂಟೀನ್ ಮಾಲೀಕರು ತಯಾರಿರಲಿಲ್ಲ. ಹಾಗಾಗಿ ನಾವು ೮ ಗಂಟೆಯ ರಾತ್ರಿ ಊಟಕ್ಕೆ ಕಾಯಬೇಕಾಗಿತ್ತು. ಆದರೆ ಅದರದ್ದೂ ಗ್ಯಾರಂಟಿ ಇರಲಿಲ್ಲ. ಏಕೆಂದರೆ ಆ ರಾತ್ರಿ ಅಲ್ಲಿ ಉಳಿದುಕೊಳ್ಳುವ ಯಾತ್ರಿಕರು ಯಾರೂ ಇರಲಿಲ್ಲ. ನಮ್ಮನ್ನೂ ಸೇರಿ ಐದು ಮಂದಿಯಾದರೂ ಇದ್ದರೆ ಮಾತ್ರ ರಾತ್ರಿ ಊಟ ತಯಾರು ಮಾಡುವುದಾಗಿ ನಮಗೆ ತಿಳಿಸಲಾಯಿತು.

ಆ ವೇಳೆಗೆ ನಮ್ಮ ಹೊಟ್ಟೆ ಜೋರಾಗಿ ತಾಳ ಹಾಕತೊಡಗಿತ್ತು. ನಾವು ಸ್ವಲ್ಪ ಓಡಾಡಿ ಕಣ್ಣಿಗೆ ಬಿದ್ದ ಅಂಗಡಿಯೊಂದರಲ್ಲಿ ಕಂಡ ಬಾಳೆಹಣ್ಣುಗಳನ್ನು ಕೊಂಡು ತಿಂದೆವು. ಹೊಟ್ಟೆ ಸ್ವಲ್ಪ ತಣ್ಣಗಾದರೂ ನಮಗೆ ರಾತ್ರಿ ಊಟವೂ ಸಿಗದಿದ್ದರೆ ಏನು ಗತಿ ಎಂದು ಚಿಂತಿಸತೊಡಗಿದೆವು. ಅಷ್ಟರಲ್ಲಿ ನಮಗೆ ಅಲ್ಲಿದ್ದ ಕೃಷಿ ಇಲಾಖೆಯ ಅಧಿಕಾರಿಯಿಂದ ರಾತ್ರಿ ತಂಗುವುದಕ್ಕಾಗಿ ಒಂದು ಕಾಟೇಜ್ ದೊರೆಯಿತು. ತುಂಬಾ ಸುಂದರವಾದ ಆ ಕಾಟೇಜ್ ನಿಂದ ಹೊರಗೆ ನೋಡಿದಾಗ ಕೆಮ್ಮಣ್ಣುಗುಂಡಿಯ ಅಪಾರ ಪ್ರಕೃತಿ ಸೌಂದರ್ಯ ಕಣ್ಣಿಗೆ ಬೀಳುತ್ತಿತ್ತು. ಅದರ ಪಕ್ಕದಲ್ಲೇ ಇದ್ದ ನಾಲ್ಮಡಿ ಕೃಷ್ಣರಾಜರು ಕಟ್ಟಿಸಿದ ರಾಜಭವನಕ್ಕೆ ನಾವು ಒಂದು ಸುತ್ತು ಹಾಕಿದೆವು. ಆ ವೇಳೆಗೆ ಗುಡ್ಡದ ಮೇಲೆ ಕತ್ತಲೆಯಾಗತೊಡಗಿ ನಮಗೆ ರಾತ್ರಿ ಊಟದ ಚಿಂತೆ ಹೆಚ್ಚಾದಂತೆ ನಾವು ಕರುಣೆ ತೋರುವಂತೆ ದತ್ತಾತ್ರೇಯನ ಸ್ಮರಣೆ ಮಾಡತೊಡಗಿದೆವು.

ದತ್ತಾತ್ರೇಯನ ಕೃಪೆ

ಖಂಡಿತವಾಗಿಯೂ ದತ್ತಾತ್ರೇಯನಿಗೆ ನಮ್ಮ ಮೊರೆ ಕಿವಿಗೆ ಬಿದ್ದಿರಬೇಕು. ಏಕೆಂದರೆ ಇದ್ದಕ್ಕಿದ್ದಂತೆ ಬೆಟ್ಟದ ಮೇಲೆ ಬಂದ ಒಂದು ವ್ಯಾನಿನಿಂದ ಅನೇಕ ಯಾತ್ರಿಗಳು ಒಮ್ಮೆಲೇ ಇಳಿಯತೊಡಗಿದರು. ಅಲ್ಲಿಗೆ ನಮ್ಮ ರಾತ್ರಿ ಊಟ ಗ್ಯಾರಂಟಿ ಆದಂತಾಯಿತು. ಅಷ್ಟು ಮಾತ್ರವಲ್ಲ. ನಮಗೆ ಇನ್ನೂ ಖುಶಿ ಕಾದಿತ್ತು. ಏಕೆಂದರೆ ತಂಡದ ಮುಖ್ಯಸ್ಥ ಸ್ಪೆಷಲ್ ಡಿನ್ನರ್ ತಯಾರಿಸಲು ಆರ್ಡರ್ ಕೊಟ್ಟುಬಿಟ್ಟ. ಅಂದರೆ ನಮಗೂ ಸ್ಪೆಷಲ್ ಡಿನ್ನರ್ ದೊರೆಯಲಿತ್ತು! ಎಂತಹ ಅದೃಷ್ಟ ನಮದಾಗಿತ್ತು!

ಕನ್ನಡದ ಕೋಗಿಲೆ ಮತ್ತು ಭಾವಗೀತೆಗಳ ಹರಿಕಾರ ಪಿ. ಕಾಳಿಂಗರಾಯರು!

ದತ್ತಾತ್ರೇಯ ನಮಗಿತ್ತ ವರ ಅಲ್ಲಿಗೇ ಮುಗಿದಿರಲಿಲ್ಲ. ನಮಗಿನ್ನೂ ಆಶ್ಚರ್ಯ ಕಾದಿತ್ತು! ಏಕೆಂದರೆ ಆ ತಂಡದ ಮುಖ್ಯಸ್ಥ ಬೇರೆ ಯಾರೂ ಅಲ್ಲ. ಅವರೇ ಕನ್ನಡದ ಕೋಗಿಲೆ ಮತ್ತು ಭಾವಗೀತೆಗಳ ಹರಿಕಾರ ಪಿ. ಕಾಳಿಂಗರಾಯರು! ನಾನು ಅವರ ಎಷ್ಟೋ ಹಾಡುಗಳನ್ನು ಗ್ರಾಮೋಫೋನ್ ರೆಕಾರ್ಡುಗಳ ಮೂಲಕ ಕೇಳಿದ್ದೆ ಮತ್ತು ಅವರೇ ಪ್ರತ್ಯಕ್ಷವಾಗಿ ಸಿನಿಮಾ ಒಂದರಲ್ಲಿ "ಅಂತಿಂತ ಹೆಣ್ಣು ನೀನಲ್ಲ” ಎಂಬ ಹಾಡನ್ನು ಹಾಡುವುದನ್ನು ನೋಡಿದ್ದೆ. ಕಾಳಿಂಗರಾಯರೊಡನೆ ಅವರ ಸಹಗಾಯಕರಾದ ಮೋಹನ ಕುಮಾರಿ ಹಾಗೂ ಸೋಹನ ಕುಮಾರಿಯವರೂ ಆಗಮಿಸಿದ್ದರು. ಆ ರಾತ್ರಿ ಕಾಳಿಂಗರಾಯರ ಭಾವಗೀತೆಗಳ ಕಾರ್ಯಕ್ರಮವೊಂದು ಅಲ್ಲಿ ನಡೆಯುವುದೆಂದು ತಿಳಿದು ನಮಗಾದ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ನಾವೆಣಿಸಿದಂತೆ ಆ ರಾತ್ರಿ ಕ್ಯಾಂಟೀನಿನಲ್ಲಿ ನಮಗೆ ಭರ್ಜರಿ ಭೋಜನವೇ ಆಯಿತು. ಆ ದಿನ ಬೆಳಿಗ್ಗೆ ಲಿಂಗದಹಳ್ಳಿಯಲ್ಲಿ ತಿಂಡಿ ತಿಂದ ಮೇಲೆ ನಮಗೆ ರಾತ್ರಿಯವರೆಗೆ ತಿನ್ನಲು ಬಾಳೆಹಣ್ಣನ್ನು ಬಿಟ್ಟು ಬೇರೇನೂ ದೊರೆತಿರಲಿಲ್ಲ. ಆದ್ದರಿಂದ ನಾವು ಸಕತ್ತಾಗಿ ರಾತ್ರಿ ಊಟವನ್ನು ಸವಿದು ಬಿಟ್ಟೆವು.

ಊಟದ ನಂತರ ಕಾಳಿಂಗರಾಯರು ಮತ್ತವರ ಜೋಡಿ ಕುಮಾರಿಯರು ನಡೆಸಿದ ಭಾವಗೀತೆಗಳ ಕಾರ್ಯಕ್ರಮ ನಾವೆಂದೂ ಮರೆಯುವಂತದ್ದಾಗಿರಲಿಲ್ಲ. ಮುಖ್ಯವಾಗಿ  ನನಗಿಂದೂ ನೆನಪಿಗೆ ಬರುವ ಹಾಡುಗಳೆಂದರೆ ಬಾರಯ್ಯ ಬೆಳದಿಂಗಳೇ, ಬ್ರಹ್ಮ ನಿನಗೆ ಜೋಡಿಸ್ತೀನಿ ಹೆಂಡ ಮುಟ್ಟಿದ ಕೈನ, ಅದು ಬೆಟ್ಟ ಇದು ಬೆಟ್ಟವೋ, ಮಾಡು ಸಿಕ್ಕದಲ್ಲಾ, ಯಾಕಳುವೆ  ಎಲೆ ರಂಗ, ಎಂಬ ಹಾಡುಗಳು. ನಮಗೆ ಸಿಕ್ಕಿದ ಆ ಅಪೂರ್ವ ಅವಕಾಶದ ಸವಿಯನ್ನು ನಾವಿಬ್ಬರೂ ಅನುಭವಿಸಿ ಸಂಬ್ರಮಿಸಿದೆವು. ನನ್ನ ಜೀವಮಾನದ ಅತಿ ಮಧುರ ಸನ್ನಿವೇಶಗಳಲ್ಲಿ ಆ ಕಾರ್ಯಕ್ರಮವೂ ಒಂದಾಗಿತ್ತೆಂದು ಇಂದಿಗೂ ಅನಿಸುತ್ತಿದೆ.

ಹೆಬ್ಬೆ ಜಲಪಾತ

ಮಾರನೇ ದಿನ ಬೆಳಿಗ್ಗೆ ನಾವು ಕಬ್ಬಿಣದ ಅದಿರು ಗಣಿಗಳನ್ನು ನೋಡಲು ಹೋದೆವು. ಗುಡ್ಡದಿಂದ ಹೊರತೆಗೆದ ಅದಿರನ್ನು ರೋಪ್ ವೇ ಮೂಲಕ ತಣಿಗೆಬೈಲು ಎಂಬಲ್ಲಿಗೆ ಸಾಗಿಸಲಾಗುತ್ತಿತ್ತು. ಅಲ್ಲಿಂದ ಲಾರಿಗಳಲ್ಲಿ ಭದ್ರಾವತಿ ಕಾರ್ಖಾನೆಗೆ ಒಯ್ಯಲಾಗುತ್ತಿತ್ತು. ಬೆಳಗಿನ ಉಪಾಹಾರ ಮುಗಿದನಂತರ ನಾವು ಅಲ್ಲಿಂದ ೧೦ ಕಿಲೋಮೀಟರ್ ದೂರದಲ್ಲಿದ್ದ ಹೆಬ್ಬೆ ಜಲಪಾತವನ್ನು ನೋಡಲು ಹೋದೆವು. ಇಲ್ಲಿ ಝರಿಯ ನೀರು ಸುಮಾರು ೧೬೮ ಕಿಲೋಮೀಟರ್ ಕೆಳಗೆ ಎರಡು ಹಂತದಲ್ಲಿ ದುಮುಕುತ್ತದೆ. ಇವುಗಳಿಗೆ ದೊಡ್ಡ ಹೆಬ್ಬೆ ಫಾಲ್ಸ್ ಮತ್ತು ಚಿಕ್ಕ ಹೆಬ್ಬೆ ಫಾಲ್ಸ್ ಎಂದು ಕರೆಯುತ್ತಾರೆ. ಈ ಜಲಪಾತಗಳೂ ಕೂಡ ನಯನ ಮನೋಹರವಾಗಿವೆ. ಅಲ್ಲಿಂದ ಮರುಪ್ರಯಾಣ ಮಾಡಿ ನಾವು ಮದ್ಯಾಹ್ನ  ಲಿಂಗದಹಳ್ಳಿ ತಲುಪಿದೆವು. ಹೀಗೆ ನಮ್ಮ ಕೆಮ್ಮಣ್ಣುಗುಂಡಿ ಪಿಕ್ನಿಕ್ ಮುಕ್ತಾಯಗೊಂಡಿತು.

ಬೀರೂರು ಮತ್ತು ಕಡೂರು

ಮಾರನೇ ದಿನ ಬೆಳಿಗ್ಗೆ ನಾವು ಬೀರೂರಿಗೆ ಹೋಗಿ ನನ್ನ ಸ್ನೇಹಿತ ಶಿವಶಂಕರಪ್ಪನ ತಂದೆಯವರಾದ ಮಾರ್ಗದ ಮಲ್ಲಪ್ಪನವರ ಕುಟುಂಬದವರನ್ನು ಅವರ ಮನೆಯಲ್ಲೇ ಭೇಟಿ ಮಾಡಿದೆವು. ಆ ಕಾಲದಲ್ಲಿ ಮಾರ್ಗದ ಕುಟುಂಬ ಬೀರೂರು ಮತ್ತು ಕಡೂರಿನಲ್ಲಿ ತುಂಬಾ ಹೆಸರಾಂತ ಕುಟುಂಬವಾಗಿತ್ತು. ಈ ಕುಟುಂಬ ಅಪಾರ ಕೃಷಿ ಜಮೀನು ಮತ್ತು ವಿವಿಧ ವ್ಯಾಪಾರ ವ್ಯವಹಾರವನ್ನು ಹೊಂದಿತ್ತು. ಹಿರಿಯ ವಕೀಲರಾಗಿದ್ದ ಮಲ್ಲಪ್ಪನವರು ಮೈಸೂರು ವಿಧಾನ ಸಭೆಯ ಸದಸ್ಯರಾಗಿ ಚುನಾಯಿತರಾಗಿದ್ದರು. ಮುಂದೆ ಅವರು ದೇವರಾಜ ಅರಸರ ಮಂತ್ರಿಮಂಡಲದಲ್ಲಿ ಅರೋಗ್ಯ ಮಂತ್ರಿಯಾದರು. ಅವರ ಚಿಕ್ಕಮ್ಮನ ಮಗ ಷಡಾಕ್ಷರಿ ಕೂಡ ನಮ್ಮ ಕಾಲೇಜಿನ ವಿದ್ಯಾರ್ಥಿಯಾಗಿದ್ದ. ಮಲ್ಲಪ್ಪನವರು ನಮ್ಮನ್ನು ತುಂಬಾ ಆದರದಿಂದ ಸ್ವಾಗತಿಸಿ ಮುಂದಿನ ಎರಡು ದಿನ ಅವರ ಬಂಗಲೆಯಲ್ಲೇ ಇರಲು ಏರ್ಪಾಟು ಮಾಡಿದರು. ಆಮೇಲೆ ನಾವು ಕಡೂರಿಗೆ ಹೋಗಿ ನಮ್ಮ ಇನ್ನೊಬ್ಬ ಹಾಸ್ಟೆಲ್ ಮೇಟ್ ಆದ ಕಾಂತರಾಜ್ ಎನ್ನುವ ವಿದ್ಯಾರ್ಥಿಯನ್ನು ಭೇಟಿ ಮಾಡಿದೆವು. ತುಂಬಾ ಒಳ್ಳೆಯ ಮೈಕಟ್ಟು ಹೊಂದಿದ್ದ ಕಾಂತರಾಜ್ ಎನ್ ಸಿ ಸಿ ಯಲ್ಲಿ ಒಳ್ಳೆ ಹೆಸರು ಗಳಿಸಿದ್ದ. ಅವನ ಕುಟುಂಬದವರೂ ಕೂಡ ನಮ್ಮನ್ನು ತುಂಬಾ ಆದರದಿಂದ ಬರಮಾಡಿಕೊಂಡರು.

ಮಾರನೇ ದಿನ ನಾನು ಚಿಕ್ಕಮಗಳೂರು ಬಸ್ ಹತ್ತಿದರೆ ನಂಜುಂಡಸ್ವಾಮಿ ಲಿಂಗದಹಳ್ಳಿ ಬಸ್ ಹತ್ತಿದ. ಹೀಗೆ ನನ್ನ ಸ್ನೇಹಿತರು ಮತ್ತು ಹಾಸ್ಟೆಲ್ ಮೇಟ್ಗಳ ಊರಿಗೆ ನನ್ನ ಪಯಣ ತುಂಬಾ ಆನಂದದಾಯಕವಾಗಿ ಮುಕ್ತಾಯಗೊಂಡಿತು.

------- ಮುಂದುವರಿಯುವುದು-----



Friday, June 12, 2020

ಬಾಲ್ಯ ಕಾಲದ ನೆನಪುಗಳು – ೯೨

ನ್ಯಾಷನಲ್ ಕ್ಯಾಡೆಟ್ ಕಾರ್ಪ್ಸ್ (ಎನ್.ಸಿ.ಸಿ.)

೧೯೬೫ನೇ ಇಸವಿಯಲ್ಲಿ ನಡೆದ ಇಂಡಿಯಾ ಮತ್ತು ಪಾಕಿಸ್ತಾನ ಯುದ್ಧದ ನಂತರ ಕಾಲೇಜು ವಿದ್ಯಾರ್ಥಿಗಳಾದ ನಮಗೆ ನ್ಯಾಷನಲ್ ಕ್ಯಾಡೆಟ್ ಕಾರ್ಪ್ಸ್ (ಎನ್.ಸಿ.ಸಿ.) ಟ್ರೈನಿಂಗ್  ಎರಡು ವರ್ಷ ಕಡ್ಡಾಯ ಮಾಡಲಾಯಿತು. ನಮ್ಮ ಕನ್ನಡ ಉಪನ್ಯಾಸಕರಾದ ಪ್ರಧಾನ್ ಗುರುದತ್ತ ಅವರು ನಮ್ಮ ಕಾಲೇಜಿನಲ್ಲಿ ಅದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಭಾರತೀಯ ಸೇನೆಯ ಕೊಡಗಿನ ಮಾಚಯ್ಯ ಎನ್ನುವರು ನಮಗೆ ತರಬೇತಿ ನೀಡುತ್ತಿದ್ದರು. ಮಾಚಯ್ಯ ತುಂಬಾ ಕಠಿಣ ಶಿಸ್ತಿನ ಮನುಷ್ಯ. ತರಬೇತಿ ನಡೆಯುತ್ತಿದ್ದಾಗ ಆಸಕ್ತಿ ತೋರದೇ ಬೇರೆಲ್ಲೋ ದೃಷ್ಟಿ ಹಾಯಿಸುತ್ತಿದ್ದ ಕೆಡೆಟ್ಗಳಿಗೆ ಮಾಚಯ್ಯ ಕಠಿಣ ಶಿಕ್ಷೆ ನೀಡುತ್ತಿದ್ದ. ಉದಾಹರಣೆಗೆ ನಮ್ಮ ಕಾಲೇಜಿನ ಮೈದಾನದಲ್ಲಿ ತರಬೇತಿ ನಡೆಯುವಾಗ ನಮಗೆ ಕೆಳಗೆ ದೂರದಲ್ಲಿ ತುಂಗಾ ನದಿಯ ಸೇತುವೆ ಕಣ್ಣಿಗೆ ಬೀಳುತ್ತಿತ್ತು. ಮಾಚಯ್ಯನವರು ಆದೇಶ ನೀಡುತ್ತಿರುವಾಗ ಕೆಲವರು ಬೇರೆಲ್ಲೋ ನೋಡುತ್ತಿರುವುದು ಅವರ ಗಮನಕ್ಕೆ ಬಂದಾಗ ಅಂತವರಿಗೆ ಅವರು ಎಲ್ಲಿಯವರೆಗೆ ದೃಷ್ಟಿ ಹಾಯಿಸಿದ್ದರೋ ಅಲ್ಲಿಯವರೆಗೆ ಓಡಬೇಕೆಂದು ಶಿಕ್ಷೆ ನೀಡುತ್ತಿದ್ದರು. ಅಂದರೆ ತುಂಗಾ ನದಿಯ ಸೇತುವೆಯವರೆಗೆ ಓಡಿ ಪುನಃ ಓಡಿಕೊಂಡೇ ಹಿಂದಿರುಗಬೇಕಿತ್ತು! ಆದರೆ ಪ್ರತಿ ದಿನದ ತರಬೇತಿಯ ನಂತರ ನಮಗೆ ಒಳ್ಳೆಯ ಕಾಫಿ ಮತ್ತು ತಿಂಡಿ ನೀಡಲಾಗುತ್ತಿತ್ತು.

ಹಾಸನದಲ್ಲಿ ಎನ್.ಸಿ.ಸಿ. ಕ್ಯಾಂಪ್

ಆ ವರ್ಷ ನಮ್ಮ ಎನ್.ಸಿ.ಸಿ. ಕ್ಯಾಂಪ್ ಹಾಸನದ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಟ್ಟುಕೊಳ್ಳಲಾಗಿತ್ತು. ಅದು ಹಾಸನಕ್ಕೆ ನನ್ನ ಮೊದಲ ಭೇಟಿಯಾಗಿತ್ತು. ಹತ್ತು ದಿನ ನಡೆದ ಕ್ಯಾಂಪ್ ಜೀವನ ನಮಗೊಂದು ಹೊಸ ಹಾಗೂ ಅಪೂರ್ವ  ಅನುಭವವೇ ಆಗಿತ್ತು. ಕ್ಯಾಂಪ್ ಮುಗಿಯುವುದಕ್ಕೆ ಒಂದು ದಿನ ಮೊದಲು ನಮಗೆಲ್ಲಾ ಒಂದು ದಿನ ಪೂರ್ತಿ ಹಾಸನ ನಗರದಲ್ಲಿ ಸುತ್ತಾಡಿ ಬರಲು ಅನುಮತಿ ನೀಡಲಾಯಿತು. ನಾವು ತುಂಬಾ ಆನಂದದಿಂದ ನಗರವನ್ನೆಲ್ಲ ಸುತ್ತಾಡಿ ಹೋಟೆಲ್ ಊಟ ಮತ್ತು ತಿಂಡಿ ತಿಂದೆವು. ಅಲ್ಲದೇ ಥಿಯೇಟರ್ ಒಂದರಲ್ಲಿ ಪ್ರದರ್ಶಿತವಾಗುತ್ತಿದ್ದ ದೇವ್ ಆನಂದ್ ಮತ್ತು ವಹೀದಾ ರೆಹ್ಮಾನ್ ನಟಿಸಿದ ಮತ್ತು ಆರ್. ಕೆ. ನಾರಾಯಣ್ ಅವರು ಬರೆದ ಗೈಡ್ ಹಿಂದಿ ಚಲನಚಿತ್ರವನ್ನೂ ನೋಡಿದೆವು. ಎಸ್. ಡಿ. ಬರ್ಮನ್ ಅವರ ಸುಮಧುರ ಸಂಗೀತವಿದ್ದ ರೋಮ್ಯಾಂಟಿಕ್ ಸಿನಿಮಾ ಗೈಡ್ ನಮಗೆ ತುಂಬಾ ಇಷ್ಟವಾಯಿತು. ಕ್ಯಾಂಪಿನಿಂದ ಹಿಂದಿರುಗುವಾಗ ನಾವು ಹಳೆಯಬೀಡು ಮತ್ತು ಬೇಲೂರಿನ ದೇವಸ್ಥಾನಗಳನ್ನೂ ನೋಡಿಕೊಂಡು ಶೃಂಗೇರಿಗೆ ವಾಪಾಸ್ ಬಂದೆವು. ಒಟ್ಟಿನಲ್ಲಿ ಆ ಕ್ಯಾಂಪ್ ನಮಗೆ ಎಂದೂ ಮರೆಯಲಾಗದ ಅನುಭವವನ್ನು ನೀಡಿತೆಂದು ಹೇಳಲೇ ಬೇಕು.

ನನಗೆ ಕಾಲೇಜಿನ ಬಡ ವಿದ್ಯಾರ್ಥಿಗಳ ನಿಧಿಯಿಂದ ೨೫ ರೂಪಾಯಿ

ಚಂದ್ರಮೌಳಿರಾಯರು ನನ್ನ ಹಾಸ್ಟೆಲಿನ ಫೀ ಕೊಡಲು ಒಪ್ಪಿಕೊಂಡು ನಾನು ಹಾಸ್ಟೆಲ್ ಸೇರಿದ ಮೇಲೆ ನನ್ನ ಮತ್ತು ಪ್ರಿನ್ಸಿಪಾಲ್ ರಾಮಕೃಷ್ಣರಾಯರ  ಸಂಬಂಧದಲ್ಲಿ ಸುಧಾರಣೆ ಕಂಡು ಬಂತು. ಅವರಿಗೆ ತಾವು ಅಕಾಡೆಮಿಯಿಂದ ನನ್ನ ಊಟ ಮತ್ತು ತಿಂಡಿಯ ಖರ್ಚು ಕೊಡಿಸುವುದಾಗಿ ಕೊಟ್ಟ ಭರವಸೆ ಮುರಿದು ಹೋದದ್ದಕ್ಕೆ ತುಂಬಾ ಗಿಲ್ಟಿ ಫೀಲಿಂಗ್ ಇತ್ತು. ಆದರೆ ಈಗ ಬೇರೆ ವ್ಯವಸ್ಥೆಯಾಗಿದ್ದರಿಂದ ಅವರ ಮನಸ್ಸಿನ ಭಾರ ಇಳಿದಂತೆ ಕಾಣಿಸುತ್ತಿತ್ತು. ಹಾಗಾಗಿ ನನ್ನೊಡನೆ  ತುಂಬಾ ಪ್ರೀತಿಯಿಂದ ನಡೆದುಕೊಳ್ಳತೊಡಗಿದರು.

ಕಾಲೇಜಿನಲ್ಲಿ ನಡೆಯುತ್ತಿದ್ದ ಸಮಾರಂಭಗಳಲ್ಲೆಲ್ಲಾ ನನ್ನ ಹೆಸರು ಹೇಳಿ ನಾನು ಮೊದಲ ವರ್ಷವೇ Rank ಪಡೆದು ಕಾಲೇಜಿಗೆ ಹೆಸರು ತಂದ  ಬಗ್ಗೆ ಮತ್ತು ನನ್ನ ನಿರಹಂಕಾರ ಮನೋಭಾವದ ಬಗ್ಗೆ ಹೊಗಳತೊಡಗಿದರು. ನನಗೆ ಕಾಲೇಜಿನ ಬಡ ವಿದ್ಯಾರ್ಥಿಗಳ ನಿಧಿಯಿಂದ ೨೫ ರೂಪಾಯಿ ಕೂಡ ಮಂಜೂರು ಮಾಡಿಸಿದರು.

ಸಾರ್ವತ್ರಿಕ ಚುನಾವಣೆ ೧೯೬೭

೧೯೬೭ನೇ ಇಸವಿಯ ಫೆಬ್ರವರಿ ತಿಂಗಳಿನಲ್ಲಿ ಲೋಕಸಭೆ ಮತ್ತು ಮೈಸೂರು ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯಿತು. ಶೃಂಗೇರಿ ಕ್ಷೇತ್ರದಿಂದ ಹಿಂದೆ ಎಂ ಎಲ್ ಎ ಆಗಿದ್ದ ಕಡಿದಾಳ್ ಮಂಜಪ್ಪನವರು ರಾಜಕೀಯದಿಂದ ನಿವೃತ್ತಿ ಹೊಂದಿದ್ದರಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಲು ತೀವ್ರ ಸ್ಪರ್ಧೆ ಇತ್ತು. ಮುಖ್ಯವಾಗಿ ಸ್ಪರ್ಧೆ ಕೊಪ್ಪ ತಾಲೂಕ್ ಬೋರ್ಡ್ ಪ್ರೆಸಿಡೆಂಟ್ ಹೆಚ್ ಜಿ ಗೋವಿಂದ ಗೌಡ ಮತ್ತು ಶೃಂಗೇರಿ ತಾಲೂಕ್ ಬೋರ್ಡ್ ಪ್ರೆಸಿಡೆಂಟ್ ಕೆ ಎನ್ ವೀರಪ್ಪ ಗೌಡರ ನಡುವೆ ಇತ್ತು. ಒಂದು ದಿನ ಸಂಜೆ ನಮಗೆ ವೀರಪ್ಪ ಗೌಡರು ಗುಡ್ಡದ ಮೇಲಿನ ತಮ್ಮ ಮನೆಯಿಂದ ವಾಕಿಂಗ್ ಸ್ಟಿಕ್ ಹಿಡಿದುಕೊಂಡು ಮೀಸೆ ತಿರುವುತ್ತಾ ಕೆಳಗಿನ ಪೇಟೆಯಲ್ಲಿದ್ದ ಕಳಸಪ್ಪ ನಾಯಕರ ಅಂಗಡಿಗೆ ಬಂದು ಕುಳಿತರೆಂದು ತಿಳಿಯಿತು! ನಾವೆಣಿಸಿದಂತೆ ಅವರೇ ಶೃಂಗೇರಿ ಕ್ಷೇತ್ರದಿಂದ  ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನೇಮಕವಾಗಿದ್ದರು. ವೀರಪ್ಪ ಗೌಡರು ನಮ್ಮ ಕ್ಲಾಸ್ ಮೇಟ್ ರವೀಂದ್ರನಾಥ ಟಾಗೋರ್ ತಂದೆ. (ಗೋವಿಂದ ಗೌಡರು ಮುಂದೆ ಎಂ ಎಲ್ ಎ ಆಗಿ ಶಿಕ್ಷಣ ಮಂತ್ರಿಯೂ ಆಗಿದ್ದು ಎಲ್ಲರಿಗೂ ತಿಳಿದ ವಿಷಯ). ವೀರಪ್ಪ ಗೌಡರ ವಿರುದ್ಧ ತರುಣ ವಕೀಲರಾದ ಜನಸಂಘದ ಶ್ರೀಕಂಠ ಭಟ್ ಮತ್ತು ಪಕ್ಷೇತರ ಅಭ್ಯರ್ಥಿ ಗೋಪಯ್ಯ ಎನ್ನುವರು ಸ್ಪರ್ದಿಸಿದ್ದರು. ಶ್ರೀಕಂಠ ಭಟ್ ಅವರು ಮುಂದೆ ನಮ್ಮ ಕಾಲೇಜಿನಲ್ಲಿ ಕಾನೂನು ವಿಭಾಗದಲ್ಲಿ ಅರೆಕಾಲಿಕ ಉಪನ್ಯಾಸಕರಾದರು.

ಆ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತುಂಬಾ ಬೆಂಬಲ ಇದ್ದುದರಿಂದ ವೀರಪ್ಪ ಗೌಡರ ಜಯ ನಿಶ್ಚಿತವಾಗಿತ್ತು. ಆದರೆ ಪಕ್ಷೇತರ ಅಭ್ಯರ್ಥಿ ಗೋಪಯ್ಯನವರು ಚುನಾವಣೆಗೆ ಒಂದು ಬಗೆಯ ಕಳೆ ನೀಡಿ ಬಿಟ್ಟರು. ಗೋಪಯ್ಯನವರ ಬಗ್ಗೆ ಶೃಂಗೇರಿಯಲ್ಲಿ ಕೆಲವು ಕಥೆಗಳು ಹರಡಿದ್ದವು. ಅವರ ವಿರುದ್ಧ ಮಾತನಾಡಲು ಯಾರಿಗೂ ಧ್ಯರ್ಯವಿರಲಿಲ್ಲ. ಗೋಪಯ್ಯನವರು ಗಣೇಶ್ ರಾಜ್ ಎಂಬ ತರುಣನನ್ನು ತಮ್ಮ ಚುನಾವಣಾ ವ್ಯವಸ್ಥಾಪಕನಾಗಿ ನೇಮಕ ಮಾಡಿದ್ದರು. ತುಂಬಾ ಒಳ್ಳೆಯ ಮಾತುಗಾರನಾದ  ಗಣೇಶ್ ರಾಜ್ ಮಾಮೂಲಾಗಿ ತುಂಬಾ ಸಪ್ಪೆಯಾಗಿರುತ್ತಿದ್ದ ಚುನಾವಣೆ ಪ್ರಚಾರವನ್ನು  ಒಂದು ದೊಡ್ಡ ಮನೋರಂಜನ ಕಾರ್ಯಕ್ರಮದಂತೆ ನಡೆಸಲಾರಂಭಿಸಿದ. ಪ್ರತಿ ದಿನ ಸಂಜೆ ಶೃಂಗೇರಿಯ ಕಟ್ಟೆಬಾಗಿಲಿನಲ್ಲಿ ನಡೆಯುತ್ತಿದ್ದ ಗಣೇಶ್ ರಾಜನ ಭಾಷಣಗಳು ಎಷ್ಟು ಮನೋರಂಜಕವಾಗಿರುತ್ತಿದ್ದವೆಂದರೆ ನಾವೆಲ್ಲಾ ಅವನ ಮಾತಿಗೆ ಮರುಳಾಗಿ ಚಪ್ಪಾಳೆ ತಟ್ಟುತ್ತಿದ್ದೆವು. ಅವನು ಕಾಂಗ್ರೆಸ್ ಪಕ್ಷವನ್ನು ವಿವಿಧ ಕಥೆಗಳ ಮೂಲಕ ತುಂಬಾ ತಮಾಷೆಯಾಗಿ ತನ್ನ ಟೀಕೆಗಳಿಗೆ ಗುರಿ ಮಾಡುತ್ತಿದ್ದ. ಅವನ ಮಾತುಗಳು ಎಷ್ಟು ಪ್ರಚೋದನೆ ನೀಡುತ್ತಿದ್ದವೆಂದರೆ ನಾವು ಅವನನ್ನು ಶೇಕ್ಸ್ ಪಿಯರ್ ಬರೆದ ಜೂಲಿಯಸ್ ಸೀಸರ್ ನಾಟಕದಲ್ಲಿ ಬರುವ ಆಂಟೋನಿ ಪಾತ್ರಕ್ಕೆ ಹೋಲಿಸುತ್ತಿದ್ದೆವು! ಆದರೆ ಗಣೇಶ್ ರಾಜ್ ಏನೋ ನಮಗೆ ಹೀರೋ ಎಂದು ಕಾಣಿಸಿದರೂ ಗೋಪಯ್ಯನವರು ಚುನಾವಣೆಯಲ್ಲಿ  ಅತಿ ಕಡಿಮೆ ಮತ ಪಡೆದು ಸೋತು ಹೋದರು. ನಾವೆಣಿಸಿದಂತೆ  ಕಾಂಗ್ರೆಸ್ ಪಕ್ಷದ ವೀರಪ್ಪ ಗೌಡರು ಜಯಗಳಿಸಿ  ಮೀಸೆ ತಿರುವುತ್ತಾ ವಾಕಿಂಗ್ ಸ್ಟಿಕ್ ಹಿಡಿದು ಓಡಾಡತೊಡಗಿದರು!

ಚುನಾವಣಾಧಿಕಾರಿಗಳಾಗಿ ನಮ್ಮ ಇಂಗ್ಲಿಷ್ ರೀಡರ್ ಎನ್.ಬಿ.ಎನ್.ಮೂರ್ತಿಯವರು  ಮತ್ತು ಕೃಷ್ಣಪ್ಪಯ್ಯನವರು

ಈ ಚುನಾವಣೆ ನಡೆದಾಗ ನನಗೆ ತುಂಬಾ ಸಂತೋಷ ತಂದ ಸನ್ನಿವೇಶವೊಂದು ನಮ್ಮೂರಿಗೆ ಹತ್ತಿರದ ಮತದಾನ ಕೇಂದ್ರವಾದ ಉತ್ತಮೇಶ್ವರದಲ್ಲಿ ಜರುಗಿತು. ಆ ಕೇಂದ್ರಕ್ಕೆ ಚುನಾವಣಾಧಿಕಾರಿಯಾಗಿ ನೇಮಕವಾದವರು ನಮ್ಮ ಇಂಗ್ಲಿಷ್ ರೀಡರ್ ಎನ್.ಬಿ.ಎನ್.ಮೂರ್ತಿಯವರು  ಮತ್ತು ಅವರ ಕೆಳಗೆ ನಮ್ಮ ಫಿಸಿಕ್ಸ್ ಉಪನ್ಯಾಸಕ ಕೃಷ್ಣಪ್ಪಯ್ಯನವರು. ಚುನಾವಣಾಧಿಕಾರಿಗಳಾಗಿದ್ದರಿಂದ ಅವರಿಬ್ಬರನ್ನೂ ನಮ್ಮ ಮನೆಗೆ ಬರಲು ಅಹ್ವಾನ ನೀಡಲು ಸಾಧ್ಯವಿರಲಿಲ್ಲ. ಆದರೆ ನಮ್ಮ ಅಮ್ಮ ತಯಾರಿಸಿದ ತಿಂಡಿಗಳನ್ನು ನಾನು ಟಿಫಿನ್ ಡಬ್ಬದಲ್ಲಿ ಹಾಕಿಕೊಂಡು ಹೋಗಿ ಅವರಿಗೆ ಕೊಟ್ಟುಬಿಟ್ಟೆ!  ಅವರಿಬ್ಬರೂ ನಮ್ಮಮ್ಮನ ಕೈ ಅಡಿಗೆ ಮತ್ತು ಮಲೆನಾಡಿನ ಸ್ಪೆಷಲ್ ತಿಂಡಿಯನ್ನು ಸವಿದು ತುಂಬಾ ಹೊಗಳಿಕೆ ನೀಡಿದರು. ಆ ಸನ್ನಿವೇಶ ಇಂದೂ ನನ್ನ ಮನಸ್ಸಿನಲ್ಲಿ ಹಚ್ಚ ಹಸುರಾಗಿದೆ.

ನನ್ನ ಹಾಸ್ಟೆಲ್ ಫೀ ಸಂದಾಯದಲ್ಲಿ ತೊಡಕು

ಎನ್.ಬಿ.ಎನ್.ಮೂರ್ತಿಯವರು  ನಮ್ಮ ಹಾಸ್ಟೆಲಿನ ವಾರ್ಡನ್ ಆಗಿದ್ದಾಗ ನನ್ನ ಹಾಸ್ಟೆಲ್ ಫೀ ಅವರು ಯಾವುದೋ ರೀತಿಯಲ್ಲಿ ಚಂದ್ರಮೌಳಿರಾಯರಿಂದ ನೇರವಾಗಿ ಪಡೆಯುತ್ತಿದ್ದರು. ಆದ್ದರಿಂದ ನನಗೆ ಅದರ ಚಿಂತೆಯಿರಲಿಲ್ಲ. ಆದರೆ ಗುಂಡಣ್ಣನವರು ವಾರ್ಡನ್ ಆದ ಮೇಲೆ ಪ್ರತಿ ತಿಂಗಳೂ ನಾನೆ ಸ್ವತಃ ಹೋಗಿ  ಚಂದ್ರಮೌಳಿರಾಯರಿಂದ ಫೀ ಕಲೆಕ್ಟ್ ಮಾಡಬೇಕಾಯಿತು. ಅದಕ್ಕಾಗಿ ನಾನು ತಿಂಗಳ ಮೊದಲ ವಾರ ಅವರ ಮನೆಗೆ ಹೋಗುತ್ತಿದ್ದೆ. ಮೊದಮೊದಲು ನಾನು ಅಲ್ಲಿಗೆ ಹೋದಾಗ ರಾಯರ ಹಿರಿಯ ಮಗ ಶ್ರೀಕಂಠರಾಯರು ನನ್ನನ್ನು ಆದರದಿಂದ ಮಾತನಾಡಿಸಿ ನಾನು ಹೇಳಿದ ಮೊತ್ತಕ್ಕೆ ಕೂಡಲೇ ಚೆಕ್ ಬರೆದು ಕೊಟ್ಟುಬಿಡುತ್ತಿದ್ದರು. ಅದು ಪ್ರಾಯಶಃ ಜನವರಿ ಅಥವಾ ಫೆಬ್ರವರಿ ತಿಂಗಳಿರಬೇಕು. ಆ ತಿಂಗಳು ನಾನು ರಾಯರ ಮನೆಗೆ ಹೋದಾಗ ಶ್ರೀಕಂಠರಾಯರು ಇರಲಿಲ್ಲ. ಚಂದ್ರಮೌಳಿರಾಯರು ನನಗೆ ಮಾರನೇ ದಿನ ಬರುವಂತೆ ಹೇಳಿದರು. ಆದರೆ ಆ ದಿನವೂ ಹಣ ಕೊಡದೇ ಇನ್ನೊಮ್ಮೆ ಬರುವಂತೆ ಹೇಳಿದರು. ಅಷ್ಟರಲ್ಲಿ ಫೀ ಪಾವತಿಗೆ ತುಂಬಾ ತಡವಾಗಿಬಿಟ್ಟಿತು. ಆ ದಿನ ನಾನು ಬೆಳಿಗ್ಗೆ ನಾನು ಹಾಸ್ಟೆಲ್ ಮೇಟ್ ಗಳು ಮತ್ತು ಕಾಲೇಜ್ ಉಪನ್ಯಾಸಕರೊಡನೆ ಊಟ ಮಾಡುತ್ತಿದ್ದೆ. ಇದ್ದಕ್ಕಿದ್ದಂತೆ ಗುಂಡಣ್ಣನವರು ನನ್ನನ್ನು ಉದ್ದೇಶಿಸಿ ನನ್ನ ಹಾಸ್ಟೆಲ್ ಫೀ ಪಾವತಿ ಇನ್ನೂ ಆಗಿಲ್ಲವೆಂದು ಗಟ್ಟಿ ದ್ವನಿಯಲ್ಲಿ ಪ್ರಕಟ ಮಾಡಿಬಿಟ್ಟರು. ನನಗೆ ಕೆಟ್ಟ ಅವಮಾನ ಆದಂತಾಗಿ ನಾನು ಊಟವನ್ನು ಅಲ್ಲಿಗೇ ನಿಲ್ಲಿಸಿ ಕೈ ತೊಳೆಯಲು ಹೋಗಿಬಿಟ್ಟೆ.

ಗುಂಡಣ್ಣನವರು ಇನ್ನು ಕೆಲವು ಉಪನ್ಯಾಸಕರೊಡನೆ ಮಠದ ಹತ್ತಿರವೇ ಇದ್ದ ಒಂದು ಮನೆಯ ಮೊದಲನೇ ಮಹಡಿಯಲ್ಲಿ ವಾಸ ಮಾಡುತ್ತಿದ್ದರು. ನಾನು ಆ ಸಂಜೆ ಅಲ್ಲಿಗೆ ಹೋಗಿ ಉಳಿದ ಉಪನ್ಯಾಸಕರ ನಡುವೆ ಇದ್ದ ಗುಂಡಣ್ಣನವರ ಮುಂದೆ ನನಗೆ ಊಟದ ಮಧ್ಯೆ ಅವಮಾನ ಮಾಡಿದ್ದಕ್ಕೆ ಪ್ರತಿಭಟನೆ ಮಾಡಿದೆ. ಆ ಸಮಯದಲ್ಲಿ ನನ್ನ ಕಣ್ಣಿನಲ್ಲಿ ಬಂದ ನೀರು ಕೂಡ ಅವರಿಗೆ ಕಾಣಿಸಿತು. ಎಲ್ಲರೂ ತುಂಬಾ ಗಾಭರಿಗೊಂಡು ನನ್ನಿಂದ ಫೀ ಪಾವತಿ ತಡವಾಗಲು ಕಾರಣ ತಿಳಿದುಕೊಂಡು ನನ್ನನ್ನು ಸಮಾಧಾನ ಮಾಡಿದರು. ಗುಂಡಣ್ಣನವರು ತುಂಬಾ ಪಶ್ಚಾತ್ತಾಪ ತೋರಿಸಿ ಇನ್ನು ಮುಂದೆ ನನ್ನ ಕೈಯಲ್ಲಿ ಹಣ ಬಂದ  ನಂತರವೇ  ಫೀ ಪಾವತಿ ಮಾಡಬಹುದೆಂದೂ ಮತ್ತು ತಾವೆಂದೂ ಆ ಬಗ್ಗೆ ನನ್ನನ್ನು ಪ್ರಶ್ನಿಸುವುದಿಲ್ಲವೆಂದೂ ಹೇಳಿಬಿಟ್ಟರು. ನನಗೆ ಆಮೇಲಿನ ಎರಡು ತಿಂಗಳೂ ಕೂಡ ಚಂದ್ರಮೌಳಿರಾಯರಿಂದ ಫೀ ಕಲೆಕ್ಟ್ ಮಾಡುವುದು ಸ್ವಲ್ಪ ತಡವೇ  ಆಯಿತು. ಆದ್ದರಿಂದ ನಾನು ಮುಂದಿನ ವರ್ಷದಿಂದ  ಬೇರೆ ಏನಾದರೂ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ತೀರ್ಮಾನ ಮಾಡಿಬಿಟ್ಟೆ.

ನಮ್ಮ ಕಾಲೇಜಿನ ವಾರ್ಷಿಕೋತ್ಸವ

ನನಗೆ ಆ ವರ್ಷದ ನಮ್ಮ ಕಾಲೇಜಿನ ವಾರ್ಷಿಕೋತ್ಸವ ತುಂಬಾ ಸಂತೋಷ ತಂದಿತು. ಮುಕ್ತಾಯ ಸಮಾರಂಭದ ದಿನ ಪ್ರಿನ್ಸಿಪಾಲರು ತಮ್ಮ ಭಾಷಣದಲ್ಲಿ ನಾನು ಮೊದಲ ವರ್ಷವೇ ನಾಲ್ಕನೇ Rank ಪಡೆದು ಕಾಲೇಜಿಗೆ ಕೀರ್ತಿ ತಂದ  ಬಗ್ಗೆ ಹಾಗೂ ನನ್ನ ನಿಗರ್ವಿತನದ ಬಗ್ಗೆ ತುಂಬಾ ಹೆಮ್ಮೆಯಿಂದ ಮಾತನಾಡಿದರು. ಉಳಿದ ನನ್ನ ಉಪನ್ಯಾಸಕರೂ ಕೂಡ ನನ್ನ ಸಾಧನೆಯ ಬಗ್ಗೆ ಹೊಗಳುತ್ತಾ ತಮ್ಮ ಸಬ್ಜೆಕ್ಟಿನಲ್ಲಿ ನಾನು ಗಳಿಸಿದ ಅಧಿಕ ಅಂಕಗಳಿಗಾಗಿ ವೈಯುಕ್ತಿಕ ಬಹುಮಾನಗಳನ್ನು ಕೊಟ್ಟರು. ನನ್ನ ಸಂಸ್ಕೃತ ಉಪನ್ಯಾಸಕರಾದ ವೆಂಕಣ್ಣಯ್ಯನವರು ನನಗೆ ಬಹುಮಾನವಾಗಿ ವಿಲಿಯಂ ಶೇಕ್ಸ್ ಪಿಯರ್ ಅವರ ಸಂಪೂರ್ಣ ಕೃತಿಗಳ ಒಂದು ಪುಸ್ತಕವನ್ನು ನೀಡಿದರು. ಎಷ್ಟೋ ವರ್ಷಗಳವರೆಗೆ ನನ್ನ ಹತ್ತಿರವಿದ್ದ ಆ ಪುಸ್ತಕದ ಸಂಪೂರ್ಣ ಉಪಯೋಗವನ್ನು ನಾನು ಪಡೆದೆ. ನನಗೆ ಅವನು ಬರೆದ ಸಾನೆಟ್ಟುಗಳು ತುಂಬಾ ಇಷ್ಟವಾಗಿದ್ದವು. ಹೀಗೆ ನಮ್ಮ ಕಾಲೇಜಿನಲ್ಲಿ ನನ್ನ ಇನ್ನೊಂದು ವರ್ಷದ ಅಭ್ಯಾಸ ಕೊನೆಗೊಂಡಿತು.

------- ಮುಂದುವರಿಯುವುದು-----