Thursday, September 17, 2020

ರಿಪ್ ವಾನ್ ವಿಂಕಲ್: ಐವತ್ತು ವರ್ಷಗಳ ನಂತರ

 

Ghost-like, I paced round the haunts of my childhood.

Earth seemed a desert I was bound to traverse,

Seeking to find the old familiar faces.

How some they have died, and some they have left me,

And some are taken from me; all are departed;

All, all are gone, the old familiar faces.

                                  ---ಚಾರ್ಲ್ಸ್ ಲ್ಯಾಂಬ್

(ಈ ಲೇಖನವನ್ನು ೧೦ ವರ್ಷಗಳ ಹಿಂದೆ ನಾನು ಇಂಗ್ಲೀಷಿನಲ್ಲಿ ಬರೆದಿದ್ದೆ. ಈಗ ಅದನ್ನು ಮೂಲ ಲೇಖನದಂತೆಯೇ ಕನ್ನಡಕ್ಕೆ ಅನುವಾದಿಸಿರುತ್ತೇನೆ. ಆದರೆ ಈ ೧೦ ವರ್ಷಗಳಲ್ಲಿ ಎಷ್ಟೋ ಬದಲಾವಣೆಗಳು ಆಗಿಬಿಟ್ಟಿವೆ. ಇಂದು ಹೊಕ್ಕಳಿಕೆ ಊರಿನಲ್ಲಿ ನನ್ನ ಪ್ರೀತಿಯ ಅಕ್ಕಂದಿರಿಬ್ಬರೂ ಇಲ್ಲ. ಅವರಿಬ್ಬರೂ  ನಮ್ಮನ್ನು ಅಗಲಿ ಹೋಗಿದ್ದಾರೆ)

ಬಹಳ ಸಮಯದ ನಂತರ ನಾನು ನನ್ನ ಅಕ್ಕಂದಿರಿಬ್ಬರ ಊರಿಗೆ ಭೇಟಿ ನೀಡುತ್ತಿದ್ದೆ.  ನನ್ನ ಅಕ್ಕಂದಿರಿಬ್ಬರೂ ದಟ್ಟ ಮಲೆನಾಡಿನ ಮಧ್ಯದಲ್ಲಿರುವ ಹೊಕ್ಕಳಿಕೆ ಎಂಬ ಊರಿನಲ್ಲಿ  ವಾಸಿಸುತ್ತಿದ್ದಾರೆ. ಹಳ್ಳಿಯು  ಚಿಕ್ಕಮಗಳೂರು  ಜಿಲ್ಲೆಯ ಕೊಪ್ಪಾ ತಾಲ್ಲೂಕಿಗೆ ಸೇರಿದ್ದರೂ, ಇದು ಶಿವಮೊಗ್ಗ  ಜಿಲ್ಲೆಯಲ್ಲಿ ಇರುವ ತೀರ್ಥಹಳ್ಳಿಗೆ ಕೂಡ ಹತ್ತಿರದಲ್ಲಿದೆ. ಹಾಗೆಯೇ ಸ್ಥಳವು ಕನ್ನಡದ ಸುಪ್ರಸಿದ್ಧ ಕವಿ ಕುವೆಂಪು (ಡಾ.ಕೆ ವಿ ಪುಟ್ಟಪ್ಪ)  ಅವರು ವಾಸಿಸುತ್ತಿದ್ದ ಕುಪ್ಪಳ್ಳಿಗೆ ಬಹಳ ಹತ್ತಿರದಲ್ಲಿದೆ.

ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಯ ಸ್ಮರಣೆಯನ್ನು ಕಾಪಾಡಲು ಕರ್ನಾಟಕ ಸರ್ಕಾರ ಇಲ್ಲಿಗೆ ಸಮೀಪದಲ್ಲಿ  ವಸ್ತು ಸಂಗ್ರಹಾಲಯವೊಂದನ್ನು ಸ್ಥಾಪಿಸಿದೆ. ಸ್ಥಳವು ಪ್ರಯಾಣಿಕರ ತಾಣವಾಗಿ ಮಾರ್ಪಟ್ಟಿರುವ ಕಾರಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ರಾಜಹಂಸ ಐಷಾರಾಮಿ ಬಸ್ಸನ್ನು  ಕುಪ್ಪಳ್ಳಿಗೆ ಓಡಿಸುತ್ತದೆ. ನನ್ನ ಹೆಂಡತಿಗೆ ಪ್ರಯಾಣ ಮಾಡಲು ಸಾಧ್ಯವಾಗದ ಕಾರಣ ನಾನು ಬಸ್ನಲ್ಲಿ ಏಕಾಂಗಿಯಾಗಿ ಪ್ರಯಾಣಿಸುತ್ತಿದ್ದೆ. ಪ್ರವಾಸವು ನನಗೆ ನಿಜವಾಗಿಯೂ ನೆನಪಿಡುವಂತದಾಗಿದೆ. ಬಸ್ ಬಿಡುವಿಲ್ಲದ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಹೊರಬಂದಾಗ ನನ್ನ ಮನಸ್ಸು 50 ವರ್ಷಗಳ ಹಿಂದಕ್ಕೆ ಹೋಯಿತು.

ಹೌದು. ೫೦ ವರ್ಷದ ಕೆಳಗೆ ಅಂದರೆ ೧೯೫೯ ನೇ ಇಸವಿಯ ಮೇ ತಿಂಗಳಿನಲ್ಲಿ  ನನ್ನ ಪ್ರೀತಿಯ ದೊಡ್ಡಣ್ಣ ರಾಮಕೃಷ್ಣ ನನ್ನನ್ನು ನನ್ನ ದೊಡ್ಡಕ್ಕ (ಗೌರಕ್ಕ) ಮನೆಗೆ ಕರೆದುಕೊಂಡು ಹೋಗಿ ಅಲ್ಲಿಂದ ತೀರ್ಥಹಳ್ಳಿ ತಾಲೂಕಿನ  ಬಸವಾನಿ ಎಂಬಲ್ಲಿದ್ದ ಸರ್ಕಾರಿ ಮಾಧ್ಯಮಿಕ ಶಾಲೆಯ ಆರನೇ ತರಗತಿಗೆ ಸೇರಿಸಿದ್ದ. ನಾನು  ನನ್ನ ಜೀವನದಲ್ಲಿ ಮೊಟ್ಟ  ಮೊದಲಬಾರಿಗೆ ಹುಟ್ಟಿ ಬೆಳೆದ ಮನೆಯನ್ನು ಬಿಟ್ಟು ಬೇರೊಂದು ಮನೆಯಲ್ಲಿ ವಾಸಿಸಲು ಹೋಗುತ್ತಿದ್ದೆ. ಆದರೂ ಕೂಡ ನಾನು ತುಂಬಾ ಸಡಗರದಲ್ಲಿದ್ದೆ. ಏಕೆಂದರೆ ಆಗ ಬಸವಾನಿ ಶಾಲೆ ವರದಾಚಾರ್ ಎಂಬ ಪ್ರಸಿದ್ಧ ಹೆಡ್ ಮಾಸ್ಟರ್ ಅವರ ಆಡಳಿತದಲ್ಲಿ ತುಂಬಾ ಒಳ್ಳೆಯ ಹೆಸರು ಗಳಿಸಿತ್ತು. ಅಲ್ಲದೇ ಅಮ್ಮನನ್ನು ಬಿಟ್ಟಿರುವುದು ಕಷ್ಟವೆನಿಸಿದರೂ  ಗೌರಕ್ಕ ತುಂಬಾ ಮೃದು ಸ್ವಭಾವದವಳೆಂದು ನನಗೆ ಗೊತ್ತಿತ್ತು. ನಮ್ಮ ಭಾವನವರು ತುಂಬಾ ಅನುಕೂಲಸ್ಥರಾಗಿದ್ದು ಮನೆಯಲ್ಲಿ ಹಾಲು ಮೊಸರಿನ ಸಮೃದ್ಧಿ ಇತ್ತು. ನಮ್ಮ ಮನೆಯಲ್ಲಿರುತ್ತಿದ್ದ ಕಷ್ಟ ಕಾರ್ಪಣ್ಯಗಳು ಅಲ್ಲಿರಲಿಲ್ಲ.

ನಾನು ಪ್ರತಿ ದಿನ ಮೂರು ಮೈಲಿ ಕಾಲ್ನಡಿಗೆ ಪ್ರಯಾಣ ಮಾಡಿ ಬಸವಾನಿ  ಶಾಲೆಗೆ ಹೋಗಬೇಕಿತ್ತು. ದಿನಗಳಲ್ಲಿ ಮೈಲಿಗಟ್ಟಲೆ ಕಾಲ್ನಡಿಗೆ ಪ್ರಯಾಣ ಮಾಮೂಲಾಗಿದ್ದರಿಂದ ಅದೇನು ನನಗೊಂದು ಕಷ್ಟದ ವಿಷಯವಾಗಿರಲಿಲ್ಲ. ಮುಂದೆ ಒಂದು ವರ್ಷದ ನಂತರ ನನ್ನ ಎರಡನೇ ಅಕ್ಕನನ್ನು (ರುಕ್ಮಿಣಕ್ಕ) ಕೂಡ ಹೊಕ್ಕಳಿಕೆ ಊರಿನ ಶ್ರೀನಿವಾಸಯ್ಯ ಎಂಬುವರಿಗೆ ಕೊಟ್ಟು ಮದುವೆ  ಮಾಡಲಾಯಿತು. ನಾನು ಮೂರು ವರ್ಷ ಅಂದರೆ ಎಂಟನೇ ತರಗತಿ ಮುಗಿಯುವವರೆಗೆ ಊರಿನಲ್ಲಿ ಕಳೆದ ದಿನಗಳನ್ನು ಎಂದಿಗೂ  ಮರೆಯುವಂತಿಲ್ಲ.

------o----- --o--- -----o------o-------o-------o--------o---------o-------o--------o-----

ಬೆಳಿಗ್ಗೆ ಸುಮಾರು ಗಂಟೆಯ ವೇಳೆಗೆ ಬಸ್ಸು ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯ ಸರಹದ್ದಿನಲ್ಲಿರುವ ಗಡಿಕಲ್ ಎಂಬ ಊರನ್ನು ತಲುಪಿತು. ನನ್ನ ಅಕ್ಕಂದಿರ ಊರಾದ ಹೊಕ್ಕಳಿಕೆ ಇಲ್ಲಿಂದ ಸುಮಾರು ಎರಡು ಮೈಲಿ ದೂರದಲ್ಲಿದ್ದು ನಾನು ಯಾವಾಗಲೂ ಕಾಲ್ನಡಿಗೆಯಲ್ಲೇ ಒಳದಾರಿಯ ಮಾರ್ಗವಾಗಿ ಅಲ್ಲಿಗೆ ತಲುಪುತ್ತಿದ್ದೆ. ಈಗ ಬಸ್ಸುಗಳ ಅನುಕೂಲವಿದೆ. ಆದರೆ ನಾನು ಬೆಳಗಿನ ಬಸ್ಸನ್ನು ಮಿಸ್ ಮಾಡಿಬಿಟ್ಟಿದ್ದೆ. ನಾನು ಹೇಳಿದ ಒಳದಾರಿ ಕಾಡು, ಬೆಟ್ಟ ಮತ್ತು ಬತ್ತದ ಗದ್ದೆಗಳ ಮೂಲಕ ಹಾದು  ಹೋಗುತ್ತಿದ್ದು ಪ್ರಕೃತಿ ಸೌಂದರ್ಯದ ಬೀಡಾಗಿತ್ತು. ಅದರ ಮೂಲಕ ನಡೆದು ಹೋಗುವುದು ಒಂದು ಆಹ್ಲಾದಕರ ಅನುಭವವೇ ಆಗಿತ್ತು. ಆದರೆ ಬಸ್ಸುಗಳು ಬಂದ ಮೇಲೆ ಒಳದಾರಿ ಅಲ್ಲಲ್ಲಿ ಮುಚ್ಚಿಯೇ ಹೋಗಿರುವುದರಿಂದ ನಾನು ರಸ್ತೆಯ ಮಾರ್ಗವಾಗಿಯೇ ನಡೆದು ಹೋಗಬೇಕಾಗಿತ್ತು. ಅದು ನನಗಿಷ್ಟ ಆಗದುದರಿಂದ ಒಂದು ಆಟೋರಿಕ್ಷಾ ಹಿಡಿದು ದೊಡ್ಡಕ್ಕನ ಮನೆ ತಲುಪಿದೆ.

ಗೌರಕ್ಕನ ಗಂಡ ಮಹಾಬಲಯ್ಯನವರು ತೀರಿಕೊಂಡು ಹಲವು ವರ್ಷಗಳೇ ಸಂದಿವೆ. ಈಗ ಅಕ್ಕನ ಮಗ ನಾಗರಾಜನೇ ಮನೆಯ ಯಜಮಾನ. ನಾನು ಅಲ್ಲಿ ಓದುತ್ತಿರುವಾಗ ಊರಿನಲ್ಲಿ ಸುಮಾರು ಹತ್ತು ಮನೆಗಳಿದ್ದವು. ಈಗ ಸುಮಾರು ಇಪ್ಪತ್ತು ಮನೆಗಳಿವೆ. ದಿನಗಳಲ್ಲಿ ಮನೆಯ ಯಜಮಾನರಾಗಿದ್ದ ವ್ಯಕ್ತಿಗಳೆಲ್ಲಾ ತೀರಿ ಹೋಗಿ ಕೇವಲ ರಾಮಯ್ಯ ಎನ್ನುವವರು ಇನ್ನೂ ಬದುಕಿದ್ದಾರೆ. ಆದರೆ ನಾನು ಅವರೊಡನೆ ಹಳೆಯ ನೆನಪುಗಳನ್ನು ಹಂಚಿಕೊಳ್ಳುವಂತಿಲ್ಲ. ಏಕೆಂದರೆ ಅವರು ಸಂಪೂರ್ಣ ಕಿವುಡರಾಗಿದ್ದಾರಂತೆ. ಅದೃಷ್ಟವಶಾತ್ ಕೇವಲ ಒಬ್ಬರ ಪತ್ನಿಯನ್ನುಳಿದು ಉಳಿದ ಕುಟುಂಬಗಳ ಯಜಮಾನರ ಪತ್ನಿಯರೆಲ್ಲಾ ಜೀವಂತವಾಗಿದ್ದಾರೆ. ತೀರಿಕೊಂಡವಳು ನಮ್ಮ ಭಾವನ ತಮ್ಮನ ಪತ್ನಿಯಾದ  ಗೋಪಿ. ತುಂಬಾ ಮಾತುಗಾರ್ತಿ ಮತ್ತು ಧೈರ್ಯಸ್ಥೆಯಾದ ಗೋಪಿ ನನಗೆ ಇನ್ನೊಬ್ಬ ಅಕ್ಕನಷ್ಟೇ ಪ್ರೀತಿ ತೋರಿಸುತ್ತಿದ್ದಳು. ಒಂದು ವರ್ಷದ  ಹಿಂದೆ ತೀರಿಹೋದ ಗೋಪಿಯನ್ನು ನಾನೆಂದೂ ಮರೆಯುವಂತಿಲ್ಲ.

------o----- --o--- -----o------o-------o-------o--------o---------o-------o--------o-----

ನನ್ನ  ನೆಚ್ಚಿನ ಕೆಲವು ಹಳೆಯ ಸಹಪಾಠಿಗಳನ್ನು ಸಾಧ್ಯವಾದರೆ ಭೇಟಿಯಾಗಿ ನಮ್ಮ ಶಾಲಾ ದಿನಗಳನ್ನು ನೆನೆಸಿಕೊಳ್ಳುವುದು ನನ್ನ ಉದ್ದೇಶವಾಗಿತ್ತು. ಅವರಲ್ಲಿ ಇಬ್ಬರು ಹೊಕ್ಕಳಿಕೆಗೆ ಸ್ವಲ್ಪ ದೂರದ ಮನೆಗಳಿಂದ ನನ್ನೊಡನೆ ಶಾಲೆಗೆ ಬರುತ್ತಿದ್ದರು. ಒಬ್ಬನ ಹೆಸರು ಲಕ್ಷ್ಮೀನಾರಾಯಣ ಮತ್ತು ಇನ್ನೊಬ್ಬ ಮಿತ್ರ ಮಂಜುನಾಥ. ಲಕ್ಷ್ಮೀನಾರಾಯಣ ಚಾರಣಬೈಲು ಎಂಬಲ್ಲಿ ವಾಸಿಸುತ್ತಿದ್ದ. ನಾನು ಅಚ್ಚ ಮಲೆನಾಡಿನ ಕಾಡು ಮತ್ತು ಅಡಿಕೆ ಮರಗಳ ತೋಟದ ನಡುವೆ ಇದ್ದ ಅವನ ಮನೆಗೆ ಹೆಚ್ಚು ಶ್ರಮವಿಲ್ಲದೆ ತಲುಪಿದೆ. ಮುಚ್ಚಿದ್ದ ಮನೆಯ ಮುಂದಿನ ಬಾಗಿಲನ್ನು ಬಡಿಯುವಾಗ ೫೦ ವರ್ಷ ಹಿಂದಿನ ನನ್ನ ಸ್ನೇಹಿತ ಮತ್ತು ಸಹಪಾಠಿಯ ವ್ಯಕ್ತಿತ್ವ ಈಗ ಹೇಗಿರಬಹುದೆಂದು ನೆನೆಸಿಕೊಂಡು ನನ್ನ ಮನಸ್ಸಿನಲ್ಲಿ ತುಂಬಾ ಕುತೂಹಲ ಮೂಡಿತ್ತು. ಶಾಲೆಯ ದಿನಗಳಲ್ಲಿ ೧೧-೧೨ ವರ್ಷ ವಯಸ್ಸಿನವನಾಗಿದ್ದ ಲಕ್ಷ್ಮೀನಾರಾಯಣ ೬೦ ವರ್ಷ ವಯಸ್ಕನಾಗಿ ಈಗ ಹೇಗೆ ಕಾಣುತ್ತಿರಬಹುದು ಮತ್ತು ನನ್ನನ್ನು ಗುರುತಿಸಲು ಅವನಿಗೆ ಸಾಧ್ಯವೇ ಎಂಬುದು ನನ್ನ ಕುತೂಹಲಕ್ಕೆ ಕಾರಣವಾಗಿತ್ತು. ಅದೊಂದು  ಚಲನಚಿತ್ರದ ದೃಶ್ಯದಂತೆ ಕಾಣಬಹುದೆಂದು ನನಗನಿಸತೊಡಗಿತು.

ನಾನು ತಾಳ್ಮೆಯಿಂದ ಕಾಯುತ್ತಿದ್ದ ಸ್ವಲ್ಪ ಸಮಯದಲ್ಲೇ ಸುಮಾರು ೫೫ ವರ್ಷ ವಯಸ್ಸಿನ ಮಹಿಳೆಯೊಬ್ಬರು ಬಾಗಿಲನ್ನು ತೆರೆದು ಅಪರಿಚಿತನಾದ ನನ್ನ ಮುಖದತ್ತ ನೋಡತೊಡಗಿದರು. ನಾನು ಅವರೊಡನೆ ಲಕ್ಷ್ಮೀನಾರಾಯಣ ಬಸವಾನಿ ಶಾಲೆಯಲ್ಲಿ ನನ್ನ ಸಹಪಾಠಿ ಮತ್ತು ಸ್ನೇಹಿತನಾಗಿದ್ದನೆಂದೂ ಮತ್ತು ೫೦ ವರ್ಷದ ನಂತರ ಅವನನ್ನು ಭೇಟಿಯಾಗಲು ಬಂದಿರುವುದಾಗಿಯೂ ಹೇಳಿದೆ!

ಒಂದು ಕ್ಷಣ ಅವರಿಗೆ ನಾನು ಏನು ಹೇಳುತ್ತಿರುವೆನೆಂದೇ ಅರಿವಾಗಲಿಲ್ಲ. ಒಮ್ಮೆ ತಿಳಿದ ಮೇಲೆ ಅವರು ನನ್ನನ್ನು ಮನೆಯೊಳಗೆ ಕರೆದು ಕುಳಿತುಕೊಳ್ಳುವಂತೆ ಹೇಳಿದರು ಮತ್ತು ಕಾಫಿ ಕುಡಿಯುವೆನೇ ಎಂದು ವಿಚಾರಿಸಿದರು. ಆದರೆ ನನಗೆ ದೊಡ್ಡ ನಿರಾಶೆ ಕಾದಿತ್ತು. ಏಕೆಂದರೆ ನನ್ನ ಬಾಲ್ಯ ಸ್ನೇಹಿತ ಮನೆಯಿಂದ ಮೂರು ಮೈಲಿ ದೂರದಲ್ಲಿದ್ದ ಬತ್ತದ ಗದ್ದೆಗೆ ಹೋಗಿರುವನೆಂದೂ ಮತ್ತು ಅವನು ಹಿಂದಿರುಗುವುದು ಸಂಜೆಗೇ ಎಂದು ತಿಳಿಯಿತು. ನನ್ನ ನಿರಾಶೆಯನ್ನು ಗಮನಿಸಿದ ಸ್ನೇಹಿತನ ಪತ್ನಿ ನನ್ನ ಕೈಗೊಂದು ಲೋಟ ಕಾಫಿ ಕೊಟ್ಟು ಲೋಕಾಭಿರಾಮವಾಗಿ ಮಾತನಾಡತೊಡಗಿದರು. ಅವರಿಗೆ ಇಬ್ಬರು ಮಕ್ಕಳಿದ್ದು ಇಬ್ಬರೂ ಬೆಂಗಳೂರಿನಲ್ಲಿರುವರಂತೆ. ಮಗಳಿಗೆ ಮದುವೆಯಾಗಿ ಮಗನು ಯಾವುದೊ ನೌಕರಿಯಲ್ಲಿರುವನಂತೆ. ದಂಪತಿಗಳಿಗೆ ತಮ್ಮ ಇಳಿ ವಯಸ್ಸಿನಲ್ಲಿ ಮಕ್ಕಳ ಸಹಾಯವಿಲ್ಲದೇ ಜಮೀನನ್ನು ನೋಡಿಕೊಳ್ಳುವುದು ಕಷ್ಟವಾಗುತ್ತಿದೆಯಂತೆ. ಆದರೆ ನಿರ್ವಾಹವಿಲ್ಲ. ಏಕೆಂದರೆ ಇದು ಇಂದಿನ ಮಲೆನಾಡಿನ ಎಷ್ಟೋ ಕುಟುಂಬಗಳ ಮಾಮೂಲಿನ ಸಮಸ್ಯೆ ಆಗಿಬಿಟ್ಟಿದೆ. ಎಷ್ಟೋ ಕುಟುಂಬಗಳ ಮಕ್ಕಳು ದೂರದ ಊರುಗಳಲ್ಲಿ ಅಥವಾ ಪರದೇಶದಲ್ಲಿ ನೌಕರಿಯಲ್ಲಿರುವುದರಿಂದ ತಂದೆ ತಾಯಂದಿರು ತಲೆತಲಾಂತರದಿಂದ  ಬಂದ ಜಮೀನು ಮತ್ತು ಅದರ ವ್ಯವಸಾಯವನ್ನು ತೊರೆದು ಊರು ಬಿಡಲಾಗದೇ ಇಬ್ಬಂದಿಯಲ್ಲಿದ್ದಾರೆ.

ನಾನು ನನ್ನ ಇನ್ನೊಬ್ಬ ಸಹಪಾಠಿ ಮತ್ತು ಮಿತ್ರನಾದ ಮಂಜುನಾಥನ ಬಗ್ಗೆ ಕೇಳಿದಾಗ ತಮ್ಮ ಅಣ್ಣನಿಗೆ ಮಂಜುನಾಥನ ಅಕ್ಕನನ್ನು ಕೊಟ್ಟು ಮದುವೆಯಾದ್ದರಿಂದ ಅವನು ಪರಿಚಿತನೆಂದು ಹೇಳಿದರು. ಅವನ ಕುಟುಂಬದವರು ಈಗ ಮೇಲುಕೊಪ್ಪ ಎಂಬಲ್ಲಿದ್ದ ತಮ್ಮ ಊರಿನ ಜಮೀನನ್ನು ಮಾರಿ ಹೊಸನಗರದ ಹತ್ತಿರ ಹೋಗಿ ನೆಲೆಸಿರುವರಂತೆ. ಅಲ್ಲಿಗೆ ನಾನು ಅವನನ್ನು ಭೇಟಿಮಾಡುವ ಪ್ರಶ್ನೆಯೂ ಇಲ್ಲದಂತಾಯಿತು. ಸ್ನೇಹಿತನ ಪತ್ನಿ ನನಗೆ ಪುನಃ ಒಮ್ಮೆ ಬಂದು ತಮ್ಮ ಪತಿಯನ್ನು ಭೇಟಿ ಮಾಡಲು ಹೇಳಿದರು. ವಾಸ್ತವವಾಗಿ ಅವರಿಗೆ ಹೀಗೆ ಒಬ್ಬ ಮನುಷ್ಯ ತನ್ನ ೫೦ ವರ್ಷದ ಹಿಂದಿನ ಗೆಳೆಯನನ್ನು ಹುಡುಕಿಕೊಂಡು ಬಂದಿರುವನೆಂದು ನಂಬಲು ಸ್ವಲ್ಪ ಕಷ್ಟವೆನಿಸಿರಬೇಕು!

ಅಕ್ಕನ ಮನೆಗೆ ಹಿಂತಿರುಗಿ ಬರುತ್ತಿರುವಂತೆ ನನಗೆ ಮಾರನೇ ದಿನ ನಾನು ಪುನಃ ನನ್ನ ಬಾಲ್ಯ ಸ್ನೇಹಿತನನ್ನು ನೋಡಲು ಹೋಗಬೇಕೆ ಎಂದು ತೀರ್ಮಾನಿಸುವುದು ಕಷ್ಟವಾಯಿತು. ನಿಜ ಹೇಳಬೇಕೆಂದರೆ ನನ್ನ ಮನಸ್ಸಿಗೆ ನಾನು ಆಗ ತಾನೇ ನೋಡಿದ ೫೫ ವರ್ಷ ವಯಸ್ಸಿನ ಸ್ತ್ರೀಯೊಬ್ಬರು ನಾನು ಶಾಲೆಯಲ್ಲಿದ್ದಾಗ ಕೊನೆಯ ಬಾರಿ ನೋಡಿದ್ದ ೧೧-೧೨ ವರ್ಷ ವಯಸ್ಸಿನ ಸ್ನೇಹಿತನ ಪತ್ನಿಯಾಗಿರುವಳೆಂದು ಒಪ್ಪಿಕೊಳ್ಳುವುದು ಕಷ್ಟವಾಗಿತ್ತು. ಆದರೆ ಅದೇ ಸ್ನೇಹಿತನನ್ನು ಈಗ ಅವನ ಪತ್ನಿಯೊಡನೆ ನೋಡಿದ್ದರೆ ಪ್ರಾಯಶಃ ಮನಸ್ಸಿಗೆ ತೃಪ್ತಿಯಾಗುತ್ತಿತ್ತು. ಅದು ಏನೆ ಇರಲಿ. ನನಗೆ ಆಮೇಲೆ ಪುನಃ ಹೋಗಿ ಸ್ನೇಹಿತನನ್ನು ಭೇಟಿಯಾಗುವ ಅವಕಾಶ ಸಿಗಲಿಲ್ಲ. ಆದ್ದರಿಂದ ಲಕ್ಷ್ಮೀನಾರಾಯಣ ಇಂದಿಗೂ ನನ್ನ ಮನಸ್ಸಿನಲ್ಲಿ ೧೧-೧೨ ವರ್ಷ ವಯಸ್ಸಿನ ವ್ಯಕ್ತಿಯಾಗಿ ಉಳಿದು ಹೋಗಿದ್ದಾನೆ!

------o----- --o--- -----o------o-------o-------o--------o---------o-------o--------o-----

ಮರುದಿನ ನಾನು ನನ್ನ ಹಳೆಯ ಶಾಲೆಯನ್ನು ನೋಡಲು ಬಸವಾನಿಗೆ  ಭೇಟಿ ನೀಡಲು ನಿರ್ಧರಿಸಿದೆ ನನ್ನ ಸಹಪಾಠಿಗಳು ಯಾರಾದರೂ ಇನ್ನೂ ಇದ್ದಾರೆಯೇ ಎಂದು ಕಂಡುಹಿಡಿಯುವುದು ಕೂಡ ನನ್ನ ಉದ್ದೇಶವಾಗಿತ್ತು. ವಾಸ್ತವವಾಗಿ ನಾನು ಮೂರು ಮೈಲಿ ದೂರ ಕಾಲ್ನಡಿಗೆಯಲ್ಲಿ ಪ್ರಯಾಣ ಮಾಡಲು  ಬಯಸಿದ್ದೆ. ಮೂಲಕ  ದಾರಿಯಲ್ಲಿರುವ ಪ್ರತಿಯೊಂದು ಸ್ಥಳಗಳಿಗೆ ಸಂಬಂಧಿಸಿದ ಹಳೆಯ ಘಟನೆಗಳನ್ನು  ನೆನಪಿಸಿಕೊಳ್ಳುವುದು  ಸಾಧ್ಯವಾಗುತ್ತಿತ್ತು. ಆದರೆ ಸಮಯದ ಕೊರತೆಯಿಂದ ನಾನು ಬಸ್ನಲ್ಲಿ ಪ್ರಯಾಣಿಸಬೇಕಾಗಿ ಬಂತು. ಇನ್ನೂ ಸಣ್ಣ ಊರೇ ಆಗಿದ್ದ ಬಸವಾನಿಯ ಪ್ರವೇಶವಾಗುತ್ತಿದ್ದಂತೆಯೇ ನಾನು ಬಸ್ಸಿನಿಂದ  ಇಳಿದು ನಡೆಯಲು ಪ್ರಾರಂಭಿಸಿದೆ. ವಾಸ್ತವವಾಗಿ ನಾನು ಓದುತ್ತಿದ್ದ ಕಾಲದಲ್ಲೇ ಅಲ್ಲಿನ ಆದರ್ಶ ಮುಖಂಡರ ಪ್ರಯತ್ನದ ಮೂಲಕ ಬಸವಾನಿ ಒಂದು ಮಾದರಿ ಗ್ರಾಮವಾಗಿತ್ತು. ಕಾಲದಲ್ಲೇ ಅಂತಹ ಸಣ್ಣ ಊರಿನಲ್ಲಿ ವಿದ್ಯುಚ್ಛಕ್ತಿ  ಮತ್ತು  ಕೊಳವೆ ನೀರು ಸರಬರಾಜು, ಅಂಚೆ ಕಚೇರಿ, ಅಕ್ಕಿ ಗಿರಣಿ, ಸರ್ಕಾರಿ ಆಸ್ಪತ್ರೆ ಮತ್ತು ಬಸ್ ಸೌಲಭ್ಯಗಳಿದ್ದವು .

ನಾನು ದಿನಗಳಲ್ಲಿ ತುಂಬಾ ಪ್ರಸಿದ್ಧವಾಗಿದ್ದ ಒಂದು ಬಂಗಲೆಯ ಮುಂದೆ ಹಾದುಹೋದೆ. ಇದು ಸುಬ್ಬಾ ಭಟ್ ಎಂಬ ಪ್ರಸಿದ್ಧ  ವ್ಯಕ್ತಿಯ ನೇತೃತ್ವದ ಶ್ರೀಮಂತ ಕುಟುಂಬಕ್ಕೆ ಸೇರಿತ್ತು. ರಸ್ತೆಯಲ್ಲಿ ಪ್ರಯಾಣಿಸುವ ಜನರ ಗಮನವನ್ನು ಸೆಳೆಯುತ್ತಿದ್ದ ಬಂಗಲೆಯ ಮುಂದೆ ವಿಶಾಲವಾದ ಸುಂದರವಾದ ಉದ್ಯಾನವನವೊಂದಿತ್ತು. ಸುಬ್ಬಾಭಟ್ ಅವರು ತುಂಬಾ  ದೊಡ್ಡ ಕೃಷಿ ಭೂಮಿಯನ್ನು ಮತ್ತು ಸುತ್ತಮುತ್ತಲ  ಪ್ರದೇಶದ ಏಕೈಕ ಅಕ್ಕಿ ಗಿರಣಿಯನ್ನು ಹೊಂದಿದ್ದರು. ಕಾಲದ ಬಸವಾನಿಯಲ್ಲಿ ಸುಬ್ಬಾಭಟ್ಟರ ಕುಟುಂಬ ತುಂಬಾ ಪ್ರತಿಷ್ಠಿತ ಕುಟುಂಬವಾಗಿದ್ದು ಊರಿನ ಅತಿ ಸುಂದರವಾದ ಬಂಗಲೆಯ ಮಾಲೀಕರು ಅವರಾಗಿದ್ದರು. ಅವರ ಹಿರಿಯ ಮಗ ಚಿದಂಬರ ನಾನು ಶಾಲೆಗೆ ಸೇರಿದಾಗ ಎಂಟನೇ ತರಗತಿಯಲ್ಲಿ ಓದುತ್ತಿದ್ದ.

ನಾನು ಅಂದು ನೋಡುತ್ತಿದ್ದ ಬಂಗಲೆ ಈಗ ಶಿಥಿಲಾವಸ್ಥೆಯಲ್ಲಿದ್ದು ಮನೆಯ ಮುಂದಿನ ಉದ್ಯಾನವನ ಹಾಳು ಸುರಿಯುತ್ತಿದ್ದುದು ನನ್ನ ಕಣ್ಣಿಗೆ ಬಿದ್ದು ಮನಸ್ಸಿಗೆ ತುಂಬಾ ಹಿಂಸೆಯಾಯಿತು. ಸನ್ನಿವೇಶ ತನ್ನದೇ ಆದ ಕಥೆಯೊಂದನ್ನು ಹೇಳುತ್ತಿರುವಂತೆ ನನಗೆ ಅನಿಸತೊಡಗಿತು. ಕಥೆಯು ಖಂಡಿತವಾಗಿ ನನಗೆ ಇಷ್ಟವಾಗುವುದು ಸಾಧ್ಯವಿರಲಿಲ್ಲ. ನಾನು ಬೇಗಬೇಗನೆ ನನ್ನ ಹಳೆಯ ಶಾಲೆಯ ಬಳಿಗೆ ಹೋದೆ. ನಾನು ಅದನ್ನು ಸಮೀಪಿಸುತ್ತಿದ್ದಂತೆ ನನ್ನ ಹಳೆಯ ಮೇಷ್ಟ್ರುಗಳು ಅದರಲ್ಲೂ ಮುಖ್ಯವಾಗಿ ಹೆಡ್ ಮಾಸ್ಟರ್  ವರದಾಚಾರ್ ಅವರು ನನಗಾಗಿ ಅಲ್ಲಿ ಕಾಯುತ್ತಿರುವಂತೆ ಭಾಸವಾಗತೊಡಗಿತು. ಶಾಲೆಯ ಮುಂದಿದ್ದ ವಿಶಾಲವಾದ ಕೆರೆಯೊಂದು ಕೂಡ ನನ್ನ ನೆನಪಿಗೆ ಬಂತು. ನಾನು ಅಲ್ಲಿಗೆ ಸಮೀಪಿಸುತ್ತಿದ್ದಂತೆಯೇ ನನ್ನ ಹೃದಯದ ಬಡಿತ ವೇಗಗೊಂಡಿತು. ಒಹ್! ಹೌದು ನಮ್ಮ ಶಾಲೆಯ ಕಟ್ಟಡ ಮತ್ತು ಮುಂದಿನ ಕೆರೆ ಅಲ್ಲಿದ್ದವು. ಕೆರೆಯು ಮೊದಲಿಗಿಂತ ತುಂಬಾ ಸ್ವಚ್ಛವಾಗಿ ಮತ್ತು ವಿಶಾಲವಾಗಿ ಕಾಣುತ್ತಿದ್ದರೆ, ಶಾಲೆಯ ಮುಂದೆ ಕಾಫಿಶಾಪ್ ಎಂಬ ಬೋರ್ಡ್ ಗೋಚರಿಸಿತು.

ಶಾಲೆಯ ಕಟ್ಟಡದ ಪಕ್ಕದಲ್ಲಿ ಒಂದು ಸಣ್ಣ ಮನೆ ಇತ್ತು. ಒಬ್ಬ ವ್ಯಕ್ತಿಯು ಮನೆಯ ಮುಂದೆ ಹಾರೆಯೊಂದನ್ನು ಹಿಡಿದು  ಕೆಲಸ ಮಾಡುವುದನ್ನು ನಾನು ನೋಡಿದೆ. ವ್ಯಕ್ತಿಯ ಒಂದು ಕಾಲು ಸ್ವಲ್ಪ ಕುಂಟಾಗಿರುವುದು ನನಗೆ ಕಾಣಿಸಿತು. ಸುಬ್ಬಾಭಟ್ ಅವರಿಗೆ ಗೋಪಾಲ್ ಎಂಬ ಮಗನಿದ್ದ ಮತ್ತು ಅವನ ಒಂದು ಕಾಲು ಕೂಡ ಸ್ವಲ್ಪ ಕುಂಟಾಗಿತ್ತೆಂದು ನನಗೆ ಇದ್ದಕ್ಕಿದ್ದಂತೆ ನೆನಪಾಯಿತು.ಅವನು ಶಾಲೆಯಲ್ಲಿ ನನಗೆ ಕಿರಿಯನಾಗಿದ್ದ.  ನಾನು ಹೋಗಿ ಅವನ ಹತ್ತಿರ ನಿಂತೆ :

ನಾನು: ನೀವು ಸುಬ್ಬಾಭಟ್ ಅವರ ಮಗ ಗೋಪಾಲ್ ಅಲ್ಲವೇ ?

ವ್ಯಕ್ತಿ : ಹೌದು . ಆದರೆ ನೀವು ಯಾರು ಮತ್ತು ನೀವು ನನ್ನನ್ನು ಹೇಗೆ ಬಲ್ಲಿರಿ?

ನಾನು: ನನ್ನ ಹೆಸರು ಕೃಷ್ಣಮೂರ್ತಿ. ನಾನು 50 ವರ್ಷಗಳ ಹಿಂದೆ ಇಲ್ಲಿರುವ ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದೆ!

ಗೋಪಾಲ್:  ಓಹ್! ನನಗೆ ನಂಬಲಾಗುತ್ತಿಲ್ಲ! 50 ವರ್ಷಗಳ ನಂತರ ನೀವು ನನ್ನನ್ನು ಗುರುತಿಸಬಲ್ಲಿರಾ!

ನಾನು: ನಿಮ್ಮ ಪ್ರಸಿದ್ಧವಾದ ಮೂಲ ಮನೆಗೆ ಏನಾಯಿತು? ಅಲ್ಲಿ ಯಾರು ವಾಸಿಸುತ್ತಿದ್ದಾರೆ? ನಿಮ್ಮ  ಹಿರಿಯ ಸಹೋದರ ಚಿದಂಬರ ಎಲ್ಲಿದ್ದಾರೆ ? ಈಗ ಅಕ್ಕಿ ಗಿರಣಿಯನ್ನು ಯಾರು ನಡೆಸುತ್ತಿದ್ದಾರೆ?

ಗೋಪಾಲ್: ಚಿದಂಬರ ಬೆಂಗಳೂರಿನಲ್ಲಿದ್ದಾನೆ. ನಮ್ಮ  ಕುಟುಂಬ ವಿಭಜನೆಯಾಗಿದೆ ಮತ್ತು ನನ್ನ ಸಹೋದರ ಮುರಳಿ ನಮ್ಮ ಹಳೆಯ ಬಂಗಲೆಯಲ್ಲಿಯೇ ವಾಸಿಸುತ್ತಿದ್ದಾನೆ.  ನಮ್ಮ  ಅಕ್ಕಿ ಗಿರಣಿಯನ್ನು ಮಾರಾಟ ಮಾಡಲಾಗಿದೆ.

ನಾನು: ಚಿದಂಬರ ನನಗಿಂತ ಹಿರಿಯ ವಿದ್ಯಾರ್ಥಿಯಾಗಿದ್ದ.  ಈಗ ಮಾಧ್ಯಮಿಕ ಶಾಲೆ ಎಲ್ಲಿದೆ? ನಾನು ಓದಿದ್ದ ಹಳೆಯ ಕಟ್ಟಡದಲ್ಲಿ ಈಗ ಕಾಫಿಶಾಪ್ ಕಾಣುತ್ತಿದ್ದೇನೆ! ನಾನು ಇಲ್ಲಿ ನನ್ನ ಇಬ್ಬರು ಸಹಪಾಠಿಗಳನ್ನು ಹೊಂದಿದ್ದೆ - ಶ್ರೀಧರಮೂರ್ತಿ ಮತ್ತು ಸತ್ಯನಾರಾಯಣ. ನನಗೆ ತಿಳಿದಂತೆ ಶ್ರೀಧರಮೂರ್ತಿ  ಬೆಂಗಳೂರಿನಲ್ಲಿದ್ದಾನೆ . ಸತ್ಯನಾರಾಯಣ ಈಗ ಎಲ್ಲಿದ್ದಾನೆ? ಹೇಳಬಲ್ಲಿರಾ?

ಗೋಪಾಲ್: ಮಾಧ್ಯಮಿಕ ಶಾಲೆ ಇಲ್ಲಿಂದ ಸ್ವಲ್ಪ ದೂರದಲ್ಲಿರುವ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಸತ್ಯನಾರಾಯಣ ಇಲ್ಲಿಯೇ ಇದ್ದಾನೆ ಮತ್ತು ಅವನು ಇಲ್ಲಿನ ಪೋಸ್ಟ್ ಮಾಸ್ಟರ್ ಆಗಿದ್ದಾನೆ.  ಇಂದು ಭಾನುವಾರವಾದ್ದರಿಂದ, ನೀವು ಅವನನ್ನು  ಅವನ ಮನೆಯಲ್ಲಿ ಭೇಟಿಯಾಗಬಹುದು.

ನಾನು ಶಾಲೆಯಲ್ಲಿ ಓದುತ್ತಿದ್ದಾಗ ಅದರ  ಹಿಂಭಾಗದಲ್ಲಿ ಸ್ವಲ್ಪ ದೂರದಲ್ಲಿದ್ದ ಆಟದ ಮೈದಾನ ನನಗೆ ಭಾವನಾತ್ಮಕವಾಗಿ ತುಂಬಾ ಇಷ್ಟವಾದ ಸ್ಥಳವಾಗಿತ್ತು. ಆದರೆ ಅದೀಗ ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿರುವುದೆಂದೂ ಆದರೆ ಮೈದಾನ ಮೊದಲಿನಂತೆಯೇ ಇರುವುದೆಂದು ತಿಳಿಯಿತು. ನಾನು ಗೋಪಾಲ್ ಅವರಿಗೆ ಧನ್ಯವಾದ ಅರ್ಪಿಸಿ ಬೇಗನೆ ಆಟದ ಮೈದಾನವನ್ನು ಹುಡುಕಿಕೊಂಡು ಹೋದೆ. ಬೇಗನೆ ಮೈದಾನವನ್ನೇನೋ ತಲುಪಿದೆ. ಆದರೆ ಅದರ ಸುತ್ತಲೂ ಬೇಲಿ ಹಾಕಿರುವುದನ್ನು ಕಂಡೆ. ಅದರೊಳಗೆ ನುಸುಳಿದ ನಾನು ಒಂದೆಡೆ ಕುಳಿತು ಕಣ್ಣು ಮುಚ್ಚಿಕೊಂಡು ನಾನು ಹಿಂದೆ ಅಲ್ಲಿ ನನ್ನ ಸಹಪಾಠಿಗಳೊಡನೆ ಕಬಡ್ಡಿ ಆಡುತ್ತಿದ್ದನ್ನು ನೆನೆಸಿಕೊಂಡೆ. ಒಹ್! ಇದೇನು ಕನಸೇ! ಅವರೆಲ್ಲಾ ಇಲ್ಲಿಯೇ ಇರುವರಲ್ಲ! ಹೌದು. ಆರಡಿ ಎತ್ತರದ ಕಬಡ್ಡಿ ಚಾಂಪಿಯನ್ ವಾಸಾಚಾರಿ ಮತ್ತು ಗೂಳಿಯಂತೆ ಮೈಮೇಲೆ ಎಗರುವ ಶಂಕರಪ್ಪ ತಮ್ಮ ನೇತೃತ್ವದ ಟೀಮುಗಳೊಡನೆ ಆಟವಾಡುತ್ತಿದ್ದಾರೆ! ನಾನು ಶಂಕರಪ್ಪನ ಟೀಮಿನಲ್ಲೇ ಇದ್ದೇನೆ. ಇನ್ನು ಕೈಗೆ ಸಿಕ್ಕದೇ ನುಸುಳಿ ಹೋಗುತ್ತಿರುವ ತಿಮ್ಮಪ್ಪ ಝೇಂಡು ಝೇಂಡು ಝೇಂಡು ಗುಡು ಗೂಡು ಎಂದು ಕೂಗುತ್ತಾ ಪುನಃ ಪುನಃ ಮುನ್ನುಗ್ಗಿ ಬರುತ್ತಿದ್ದಾನೆ! ಒಹ್! ಎಷ್ಟು ರೋಮಾಂಚಕವಾಗಿದೆ ಆಟ! ಒಹ್! ಇಷ್ಟರಲ್ಲೇ ಜವಾನ ನಾಗಪ್ಪ ಗಂಟೆ ಬಾರಿಸಿ ಬಿಟ್ಟನೇ? ಏನಿದು ಶಬ್ದ? ಇದ್ದಕ್ಕಿದ್ದಂತೇ ನಾನು ಎಚ್ಚರಗೊಂಡು ನೋಡುವಾಗ ಅದು ನಾಯಿಯೊಂದು ಸ್ವಲ್ಪ ದೂರದಲ್ಲಿ ಬೊಗಳುತ್ತಿರುವ ಶಬ್ದವಾಗಿತ್ತು, ಅಷ್ಟೇ.

ನಾನು ಬೇಗನೆ ಎದ್ದು ಪಟ್ಟಣದ ಸೋಮೇಶ್ವರ ದೇವಸ್ಥಾನದ ಕಡೆಗೆ ಹೋದೆ. ಸತ್ಯನಾರಾಯಣ ದೇವಾಲಯದ ಹತ್ತಿರ ಎಲ್ಲೋ ವಾಸಿಸುತ್ತಿದ್ದ ಎಂದು ನನಗೆ ತಿಳಿದಿತ್ತು. ನನ್ನ ಊಹೆ ನಿಜವಾಗಿತ್ತು. ದಾರಿಯಲ್ಲಿ ಸಿಕ್ಕಿದ ವ್ಯಕ್ತಿಯೊಬ್ಬರು ನನ್ನನ್ನು ಮರಗಳ ಮಧ್ಯವಿದ್ದ ಒಂದು ಸಣ್ಣ ಕಾಲುದಾರಿಯ ಮೂಲಕ ಸೀದಾ ಸತ್ಯನಾರಾಯಣನ ಮನೆಯ ಮುಂದೆ ಕರೆದುಕೊಂಡು ಹೋದರು. ಮನೆಯ ಮುಂದೆ ಕೆಲವು ವ್ಯಕ್ತಿಗಳು ಏನೋ ಕೆಲಸಗಳಲ್ಲಿ ನಿರತರಾಗಿರುವುದನ್ನು ನಾನು ನೋಡಿದೆ. ಸತ್ಯನಾರಾಯಣ ಎಲ್ಲಿದ್ದಾನೆ ಎಂದು ನಾನು ಅವರನ್ನು ಕೇಳಿದೆ. ಅವರಲ್ಲಿ ಒಬ್ಬ ವ್ಯಕ್ತಿ  ಸೀದಾ ನನ್ನ ಕಡೆ ಬಂದದ್ದನ್ನು ಕಂಡೆ.  ನಾನು ಅವನನ್ನು ಗುರುತಿಸಿಬಿಟ್ಟೆ! ಹೌದು. ಅವನೇ ನಾನು ಎಷ್ಟೋ  ವರ್ಷಗಳ ಹಿಂದೆ ಕೊನೆಯ ಬಾರಿಗೆ ನೋಡಿದ್ದ  ಸತ್ಯನಾರಾಯಣ! ನಾನು ಅವನಿಗೆ ನನ್ನ ಹೆಸರನ್ನು ಹೇಳಿದೆ. ಅವನಿಗೂ ನನ್ನ ಗುರುತು ಸಿಕ್ಕಿ ಉತ್ಸಾಹದಿಂದ ಗಟ್ಟಿಯಾಗಿ ನನ್ನ ಹೆಸರನ್ನು ಕೂಗಿಬಿಟ್ಟ! ಪರಸ್ಪರ ಕೈಕುಲುಕುತ್ತಾ ನಾವು ಮನೆಯೊಳಗೆ ಪ್ರವೇಶಿಸಿದೆವು.

ಸತ್ಯನಾರಾಯಣ ಒಂದು ಜಂಟಿ ಕುಟುಂಬದ ಮುಖ್ಯಸ್ಥನಾಗಿದ್ದ. ಹಾಗೂ ತೃಪ್ತಿಕರ ಜೀವನವನ್ನು ನಡೆಸುತ್ತಿದ್ದ. ಸುಮಾರು 50 ವರ್ಷಗಳ ನಂತರ ತನ್ನ ಗಂಡನ ಸಹಪಾಠಿಯೊಬ್ಬರು ಅವನನ್ನು ಭೇಟಿ ಮಾಡುತ್ತಿದ್ದಾರೆಂದು ಅವನ ಹೆಂಡತಿಗೆ ನಂಬಲಾಗಲಿಲ್ಲ. ಅವರ ಇಬ್ಬರು ಪುತ್ರರು ಸಹ ಸಮಯದಲ್ಲಿ ಮನೆಯಲ್ಲಿದ್ದರು ಮತ್ತು ಅವರ ತಂದೆಯ ವಯಸ್ಸಾದ ಸ್ನೇಹಿತ ಮತ್ತು ಸಹಪಾಠಿಯ ಬಗ್ಗೆ ಸಾಕಷ್ಟು ಉತ್ಸಾಹವನ್ನು ವ್ಯಕ್ತಪಡಿಸಿದರು. ನಾವಿಬ್ಬರೂ ಒಂದು ಗಂಟೆಗೂ ಹೆಚ್ಚು ಕಾಲನಮ್ಮ ಶಾಲಾ ದಿನಗಳನ್ನು ಮತ್ತು ಸಂತೋಷದ ಕ್ಷಣಗಳನ್ನು ನೆನಪಿಸಿಕೊಂಡೆವು. ನಾನು ಅಕ್ಕನ ಮನೆಗೆ ವಾಪಾಸ್ ಹೋರಡಬೇಕಾದ ಸಮಯ ಬಂತು.

ನಾನು ಬಸ್ ಸ್ಟಾಪಿಗೆ ವಾಪಾಸ್ ಬಂದೆ ಮತ್ತು ಬಸವಾನಿಯಲ್ಲಿ ನಾನು ಕಳೆದ ದಿನಗಳನ್ನು ಮತ್ತೊಮ್ಮೆ ನೆನಪಿಸಿಕೊಳ್ಳುತ್ತಾ ಕುಳಿತೆ. ನಾನು ಊರಿನಲ್ಲಿ ಕಳೆದ ಮೂರು ವರ್ಷಗಳ ಘಟನೆಗಳು ನನ್ನ ನೆನಪಿನಲ್ಲಿ ಮತ್ತೆ ಪ್ರವಾಹದಂತೆ  ಬರಲಾರಂಭಿಸಿದವು………. ಇದ್ದಕ್ಕಿದ್ದಂತೆ ಬಸ್ ಸ್ಟಾಪಿನ ಹಿಂಭಾಗದಲ್ಲಿ ಏನೋ ಚಲಿಸುತ್ತಿರುವ ಶಬ್ದ ನನ್ನ ಕಿವಿಗೆ ಬಿತ್ತು. ನಾನು ಅಲ್ಲಿಗೆ ಹೋಗಿ ಹಾಳು ಬಾವಿಯೊಂದನ್ನು ಕಂಡೆ. ಹಾಗೆಯೇ ಅದರೊಳಗೆ ಇಣುಕಿ ನೋಡಿದೆ. ಒಳಗಿನಿಂದ ಒಂದು ದೊಡ್ಡ ಹಾವು ಮೇಲೆ ಬರುತ್ತಿರುವುದನ್ನು ನಾನು ಗಮನಿಸಿದೆ! ನಾನು ಹಿಂದಕ್ಕೆ ಸರಿಯುತ್ತಿದ್ದಂತೆ ಅದು ಹೊರಗೆ ಹಾರಿತು. ಇದ್ದಕ್ಕಿದ್ದಂತೆ ಅದು ತನ್ನ ಹೆಡೆಯನ್ನು ಪೂರ್ಣವಾಗಿ ಎತ್ತಿ ಒಮ್ಮೆ ನನ್ನತ್ತ ನೋಡಿತು. ಅದು ನನ್ನನ್ನು ಗುರುತಿಸಿತೇ? ನನಗೆ ಗೊತ್ತಾಗಲಿಲ್ಲ. ಆದರೆ ಅದು ತನ್ನ ಹೆಡೆಯನ್ನು ಮಡಚಿ ವೇಗವಾಗಿ ಚಲಿಸುವಾಗ ಅದು ನನಗೆ ವಿದಾಯ ಹೇಳುತ್ತಿದ್ದಂತೆ ಭಾಸವಾಯಿತು! ಅಷ್ಟರಲ್ಲೇ  ಬಸ್ಸಿನ ಹಾರ್ನ್   ನನ್ನ ಕಿವಿಗೆ ಬಿತ್ತು.  ಬಸ್ಸಿನಲ್ಲಿ ಕುಳಿತು ನನ್ನ ಪ್ರೀತಿಯ ಊರಿನಿಂದ ದೂರ ಹೋಗುತ್ತಿದ್ದಂತೆ ನನ್ನ ಹಳೆಯ ನೆನಪುಗಳು ನನ್ನಿಂದ ಮರೆಯಾಗತೊಡಗಿದವು!