Tuesday, March 21, 2017

ನನ್ನ ಬಾಲ್ಯ


ಅಧ್ಯಾಯ ೧೮
“ಧರಣಿ ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ನಾಟ ದೇಶದೊಳಿರುವ
ಕಾಳಿಂಗನೆಂಬ ಗೊಲ್ಲನ
ಪರಿಯ ನಾನೆಂತು ಪೇಳ್ವೆನು”
------ ಗೋವಿನ ಹಾಡು
ನಮ್ಮ ಬಾಲ್ಯಕಾಲದಲ್ಲಿ ನಮಗೆ ಅತ್ಯಂತ ಪ್ರಿಯವಾದ ಹಾಡೆಂದರೆ ಅಜ್ಞಾತ ಕವಿ ರಚಿಸಿದ ಗೋವಿನ ಹಾಡು. ಅದಕ್ಕೆ ಮುಖ್ಯ ಕಾರಣ ನಮ್ಮೆಲ್ಲರ ಮನೆಯಲ್ಲೂ ಇರುತ್ತಿದ್ದ ದನಕರುಗಳು.  ಈ ದನಕರುಗಳು ನಮ್ಮ ಜೀವನದ ಒಂದು ಅವಿಭಾಜ್ಯ ಅಂಗವಾಗಿದ್ದುವು. ದನಗಳ ಹಾಲು ಕರೆಯುವುದು ಮತ್ತು ಅವುಗಳಿಗೆ ಮುರುವನ್ನು ಬೇಯಿಸಿ ಅಥವಾ ಹಸಿಯಾಗಿ ಹಾಕುವುದು ಹೆಂಗಸರ ಕೆಲಸವಾಗಿದ್ದರೆ, ಅವುಗಳನ್ನು ಮೇವಿಗೆ ಬಿಡುವುದು ಹಾಗೂ ಸಂಜೆಗೆ ಅವು ಕೊಟ್ಟಿಗೆ ಸೇರುವಂತೆ ಮಾಡುವುದು ಗಂಡಸರ ಕಾರ್ಯವಾಗಿತ್ತು. ಮಕ್ಕಳಾದ ನಮಗೆ ಹೊಸದಾಗಿ ಜನಿಸಿದ ಕರುಗಳು ಕೊಟ್ಟಿಗೆಯಲ್ಲಿ ಚಂಗ್ ಚಂಗ್ ಎಂದು ಹಾರುತ್ತಾ ಬೇರೆ ದನಗಳ ಅಡಿಯಲ್ಲಿ ನುಗ್ಗುವುದು ಮತ್ತು ಅಮ್ಮನ  ಮೊಲೆಯನ್ನು ಜಗ್ಗಿ ಹಾಲು ಕುಡಿಯುವುದನ್ನು ನೋಡುವುದೇ ಒಂದು ಸಡಗರವಾಗಿತ್ತು. ಇನ್ನು ದೀಪಾವಳಿ ಹಬ್ಬದ ಗೋಪೂಜೆಯ ಸಂಭ್ರಮ ಎಂದೂ ಮರೆಯುವಂತದ್ದಲ್ಲ.
ಚೌಡನ ಕಥೆ
ನಾನು ಹಿಂದೆಯೇ ಆಲೆಮನೆಯ ಬಗ್ಗೆ ಬರೆವಾಗ ಬೆಳೆದು ನಿಂತ ನಮ್ಮ ಕಬ್ಬಿನ ತೋಟದ ಕಾವಲಿಗೆ ನಮ್ಮ ದನಗಳನ್ನು ಮೇಯಿಸುವ ಗೊಲ್ಲನಾದ ಚೌಡನನ್ನು ನೇಮಿಸಿದ ಬಗ್ಗೆ ಬರೆದಿದ್ದೇನೆ. ಚೌಡ ವಂಶ ಪಾರಂಪರ್ಯದಿಂದ ನಮ್ಮೂರಿನ ದನಗಳನ್ನು ಮೇಯಿಸುವ ಗೊಲ್ಲನಾಗಿದ್ದ. ಅವನು ನಮ್ಮೂರಿಗೇ ದೊಡ್ಡ ಸಾಹುಕಾರರಾಗಿದ್ದ ಬೆಳುವಿನಕೊಡಿಗೆಯವರ ಮನೆಯ ಹತ್ತಿರವಿದ್ದ ತನ್ನ "ಗುಡಿಯಲ್ಲಿ " ವಾಸಮಾಡುತ್ತಿದ್ದ. ಅವನ ಮಡದಿಯ ಹೆಸರು ಕುಂದಿ ಮತ್ತು ಮೊದಲನೇ ಮಗನ ಹೆಸರು ತಿಪ್ಪ ಎಂದಿತ್ತು. ತಿಪ್ಪ ನಮ್ಮ ಸಮ ವಯಸ್ಕನಾಗಿದ್ದ.

ಸಾಮಾನ್ಯವಾಗಿ ಚೌಡ ಬೆಳಗಿನ ಘಂಟೆಯ ವೇಳೆಗೆ ಮನೆಯ ಮುಂದೆ ಹಾಜರಾಗುತ್ತಿದ್ದ. ಅವನು ಬಾರಿಸುತ್ತಾ ಬರುತ್ತಿದ್ದ ಕೊಳಲಿನ ದ್ವನಿ ಅವನ ಬರುವಿಕೆಯ ಮುನ್ಸೂಚನೆ ಕೊಡುತ್ತಿತ್ತು ವೇಳೆಗೆ ಹಾಲು ಕರೆಯುವ ಮತ್ತು ಮೇವು ಹಾಕುವ ಕೆಲಸ ಮುಗಿದಿರುತ್ತಿತ್ತು. ಅವನಿಗೆ ಮಾಮೂಲಿನಂತೆ"'ಎಲೆ ಅಡಿಕೆ" ಕೊಟ್ಟನಂತರ ಎಲ್ಲರ ಮನೆಯ ದನಗಳನ್ನು ಒಂದುಗೂಡಿಸಿ ಅವುಗಳನ್ನು ಮೇವಿಗಾಗಿ ಬೆಟ್ಟ, ಕಾಡು ಅಥವಾ ಗದ್ದೆಗಳಿಗೆ (ಬೆಳೆ ಕೊಯ್ಲಾದ ನಂತರ) ಕೊಂಡೊಯ್ಯುತ್ತಿದ್ದ. ಚೌಡನ ಕೈಯಲ್ಲಿ ಸಾಮಾನ್ಯವಾಗಿ ಒಂದು ದೊಣ್ಣೆ ಮತ್ತು ಕೊಳಲು ಇರುತ್ತಿದ್ದವು. ದೊಣ್ಣೆಯನ್ನು ದನಗಳನ್ನು ನಿಯಂತ್ರಿಸಲು ಬಳಸಿದರೆ, ಕೊಳಲು ಒಬ್ಬನಿಗೇ ಬೇಸರವೆನಿಸಿದಾಗ  ಮೈ ಮರೆಯುವ  ಸಾಧನವಾಗಿತ್ತು. ಚೌಡನೊಬ್ಬ ಅಸಾಮಾನ್ಯ ಕೊಳಲು ವಾದಕ. ಆದರೆ ಅವನ ಕೊಳಲು ವಾದನ ಊರಿನವರಿಗೆ ಕೇವಲ ಅವನ ಇರುವು ಎಲ್ಲಿ ಎಂಬುದನ್ನು ತಿಳಿಯುವ ಸಾಧನವಾಗಿತ್ತು. ಅವನ ಸಂಗೀತ ಸಾಧನೆಗೆ ಯಾವುದೇ ಬೆಲೆಯಿರಲಿಲ್ಲ.

ಸಂಜೆಯ ಘಂಟೆಯ ವೇಳೆಗೆ ಚೌಡ ದನಗಳೊಡನೆ ಮನೆಯ ಮುಂದೆ ಹಾಜರಾಗುತ್ತಿದ್ದಸಾಮಾನ್ಯವಾಗಿ ಅವನ  ವೃತ್ತಿಯಲ್ಲಿ  ಯಾವುದೇ ಸಮಸ್ಯೆಗಳಿರಲಿಲ್ಲ. ಆದರೆ ಕೆಲವು ಬಾರಿ ನಮ್ಮೂರಿಗೆ ಭೇಟಿ ನೀಡುತ್ತಿದ್ದ "ಹುಲಿರಾಯನ" ಆಗಮನ ಅವನ ವೃತ್ತಿಗೆ ದೊಡ್ಡ ಮಾರಕವಾಗಿತ್ತು. ಎಷ್ಟೋ ಬಾರಿ ಅವನ ಕಣ್ಣ ಮುಂದಿನಲ್ಲೇ ಹುಲಿರಾಯ ಹಸುವನ್ನು ತನ್ನ ಬಾಯಿಯಲ್ಲಿ ಕಚ್ಚಿಕೊಂಡು ಓಡಿಹೋಗುವ ಪ್ರಸಂಗಗಳು ನಡೆಯುತ್ತಿದ್ದವು. ನಮಗೆ ಅವನು ಸಂಜೆ ಬಂದು ಹೇಳಿದಾಗಲೇ ವಿಷಯ ಗೊತ್ತಾಗುತ್ತಿತ್ತು. ನಮ್ಮ ಪ್ರೀತಿಪಾತ್ರ ಹಸುವನ್ನು ಹುಲಿ ಕೊಂಡೊಯ್ದ ಸಮಾಚಾರ ಕೇಳಿ ನಮಗಾಗುತ್ತಿದ್ದ ದುಃಖಕ್ಕೆ ಮಿತಿಯೇ ಇರಲಿಲ್ಲ. ನಮ್ಮ ರೋದನ ಆಗ ಮುಗಿಲು ಮುಟ್ಟುತ್ತಿತ್ತು. ಚೌಡನ ಇತರ ಕೆಲಸಗಳಲ್ಲಿ ಸತ್ತುಹೋದ ಜಾನುವಾರುಗಳನ್ನು ಕೊಟ್ಟಿಗೆಯಿಂದ ಹೊತ್ತೊಯ್ದು ಗುಡ್ಡದಲ್ಲಿ ಹೂತಿಡುವ ಜವಾಬ್ದಾರಿಯೂ ಸೇರಿತ್ತು.

ಆಗಿನ  ಕಾಲದಲ್ಲಿ ಯಾವುದೇ ಮಕ್ಕಳು ಶಾಲೆಗೆ ಹೋಗಲು ಇಷ್ಟಪಡದಿದ್ದರೆ ಅಥವಾ ಓದಿನಲ್ಲಿ ಹಿಂದಿದ್ದರೆ ಅವರಿಗೆ ಮನೆಯ ಹಿರಿಯರು ದನ ಮೇಯಿಸಲು ಕಳಿಸುವುದಾಗಿ ಹೆದರಿಸುತ್ತಿದ್ದರು. ಆದರೆ ನಮಗಂತೂ ಚೌಡನ ವೃತ್ತಿ ಒಂದು ಆಕರ್ಷಕ ವೃತ್ತಿ ಎಂದೇ ಅನಿಸುತ್ತಿತ್ತು. ಹಾಗೆ ನೋಡಿದರೆ ಅದು ಸ್ವತಃ ಕೃಷ್ಣ ಪರಮಾತ್ಮನೇ ಮಾಡಿದ ವೃತ್ತಿಯಾಗಿತ್ತು! ನಮ್ಮೂರಿನ ಹಸಿರು ಬೆಟ್ಟಗುಡ್ಡಗಳಲ್ಲಿ ಕೊಳಲನ್ನು ಬಾರಿಸುತ್ತಾ ಸುಂದರವಾಗಿ ಕಾಣುತ್ತಿದ್ದ ಹಸುಕರುಗಳನ್ನು ಮೇಯಿಸುವುದು ಮನಸ್ಸಿಗೆ ಸಂತಸವಾದ ಕಾರ್ಯವಾಗಿತ್ತೆಂದು ಇಂದಿಗೂ ಅನ್ನಿಸುತ್ತಿದೆ

ಚೌಡನ ಇತರ ಸೇವೆಗಳಲ್ಲಿ ಮುಖ್ಯವಾದವೆಂದರೆ ಹೆಂಗಸರಿಗೆ ತಲೆ ಸ್ನಾನ ಮಾಡಲು ಬಳಸುತ್ತಿದ್ದ ಬೆಳ್ಳಟ್ಟೆ ಸೊಪ್ಪನ್ನು ಕಾಡಿನಿಂದ ತರುವುದು, ಮಕ್ಕಳಿಗೆ ಬಿದಿರಿನಿಂದ  ಕೊಳಲನ್ನು ತಯಾರಿಸಿ ಕೊಡುವುದು, ಕಾಡಿನಲ್ಲಿ ಬೆಳೆದ ವಿವಿಧ ಹಣ್ಣುಗಳನ್ನು ತರುವುದು, ಇತ್ಯಾದಿ. ಆದರೆ ಎಲ್ಲಕ್ಕಿಂತ ಮುಖ್ಯವಾದ ಕೆಲಸವೆಂದರೆ ಮಕ್ಕಳಿಗೆ ವರ್ಷಕ್ಕೊಮ್ಮೆ ಬರುವ ಪೆಟ್ಲು ಹಬ್ಬದಲ್ಲಿ ಪೆಟ್ಲು ತಯಾರಿಸಿ  ಕೊಡುವುದು. ಪೆಟ್ಲು ಹಬ್ಬ ಮಲೆನಾಡಿನ ಮನೆಗಳಲ್ಲಿ ಮಾತ್ರ ಮಾಡುವ ವಿಶೇಷ ವಾರ್ಷಿಕ ಹಬ್ಬ. ಬಿದಿರಿನಿಂದ ಮಾಡಿದ ಪಿಸ್ತೂಲಿನಂತೆ ಕಾಣುವ ಪೆಟ್ಲಿನಲ್ಲಿ  ಪೆಟ್ಲು ಕಾಯಿಯನ್ನು ಗುಂಡಿನಂತೆ ಇಟ್ಟು ಮರದಿಂದ ತಯಾರಿಸಿದ ಗಜದಿಂದ ಜೋರಾಗಿ ತಳ್ಳಿದರೆ ಅದು ಶಬ್ದಮಾಡಿ ಗುರಿಯಿಟ್ಟಲ್ಲಿಗೆ ತಲುಪುತ್ತದೆ. ಪೆಟ್ಲು ಗಿಡ ಮಲೆನಾಡಿನಲ್ಲಿ ಮಾತ್ರ ಬೆಳೆಯುವ ಗಿಡ. ಅದರ ಬೆಳೆದ ಕಾಯಿಯನ್ನು ಪೆಟ್ಲಿಗೆ ಗುಂಡಿನ ರೂಪದಲ್ಲಿ ಬಳಸಿದರೆ, ಎಳೆಯ ಕಾಯಿಯಿಂದ ತಯಾರಿಸಿದ ಉಪ್ಪಿನ ಕಾಯಿಯ ರುಚಿ ಅಸದಳ.

ಚೌಡನೊಬ್ಬ ಸಾಮಾನ್ಯ ಜೀವಿ. ಅವನಿಗೆ ಯಾವುದೇ ಹೆಚ್ಚಿನ ಆಶೆಗಳಿರಲಿಲ್ಲ. ಅವನ ಅವಶ್ಯಕತೆಗಳೂ ಅತಿ ಕಡಿಮೆಯಾಗಿದ್ದವು. ಅವನು ಊರಿನವರು ಕೊಟ್ಟ ಹಳೆ ಬಟ್ಟೆಗಳನ್ನು ಮಾತ್ರ ಧರಿಸುತ್ತಿದ್ದ. ಹಾಗೂ ಅವುಗಳನ್ನು ಎಂದೂ  ತೊಳೆಯುವ ಗೋಜಿಗೆ ಹೋಗುತ್ತಿರಲಿಲ್ಲ! ಅವನ ಪ್ರಕಾರ ಬಟ್ಟೆ ತೊಳೆಯುವುದೊಂದು ಅನಾವಶ್ಯಕ ಕೆಲಸವಾಗಿತ್ತು! ಬಟ್ಟೆ ತೀರಾ ಹರಿದು ಹೋದಾಗ ಯಾರಿಂದಲಾದರೂ ಇನ್ನೊಂದು ಬಟ್ಟೆಯನ್ನು ಪಡೆದು ಹಳೆಯದನ್ನು ಬಿಸಾಕುತ್ತಿದ್ದ. ಆದರೆ ಅವನದೊಂದು ವಿಶೇಷವಾದ ಕಪ್ಪು ಕೋಟು ಇತ್ತು. ಅದನ್ನು ಯಾರೋ ಕಾಶಿಯಾತ್ರೆ ಮಾಡಿ ಬಂದವರು ಅವನಿಗೆ ಕೊಟ್ಟಿದ್ದರಂತೆ. ಅದರ ಬಣ್ಣ ಸವೆದು ಬೂದಿ ಬಣ್ಣಕ್ಕೆ ತಿರುಗಿತ್ತು. ಅದಕ್ಕೆ ಆರು ಜೇಬುಗಳಿದ್ದು ಅವನಿಗೆ ಎಲೆ ಅಡಿಕೆ ಇತ್ಯಾದಿಗಳನ್ನು ಇಡಲು ಉಪಯೋಗವಾಗುತ್ತಿತ್ತು. ಆದರೆ ಯಾವುದೇ ಜೇಬಿನಲ್ಲಿ ಹಣವಿಡುವ ಸಮಸ್ಯೆ ಅವನಿಗೆ ಇರಲಿಲ್ಲ!

ರೇಡಿಯೋ, ದೂರದರ್ಶನ ಮತ್ತು ಸಮಾಚಾರ ಪತ್ರಿಕೆಗಳೂ ಇಲ್ಲದಿದ್ದ ಕಾಲದ ನಮ್ಮೂರಿನಲ್ಲಿ ಚೌಡನೊಬ್ಬ ವಿಶೇಷ ವರದಿಗಾರನಾಗಿದ್ದ. ಊರಿನ ಎಲ್ಲಾ ಮನೆಗಳಿಗೂ ಹೋಗುತ್ತಿದ್ದ ಚೌಡ ಮನೆಯ ಯಜಮಾನರಿಂದ ಮತ್ತು ವಿಶೇಷವಾಗಿ ಹೆಂಗಸರ ಬಾಯಿಯಿಂದ ರಹಸ್ಯ ಸಮಾಚಾರಗಳನ್ನು ಜಾಣ್ಮೆಯಿಂದ ಹೊರತರುತ್ತಿದ್ದ. ಅವನಿಗೆ ಅದೇ ಸಮಾಚಾರಗಳನ್ನು ಇನ್ನೊಬ್ಬರ ಮನೆಗೆ ಹೋದಾಗ ಸ್ವಲ್ಪ ಬಣ್ಣ ಹಚ್ಚಿ ಆಕರ್ಷಕವಾಗಿ ವರ್ಣನೆ ಮಾಡುವ ಕಲೆ ಸಾಧಿಸಿತ್ತು. ಅವನೊಬ್ಬ ಅಪ್ರತಿಮ ಕಥೆಗಾರನೇ ಆಗಿದ್ದ. ಬಗೆಯ ಸಮಾಚಾರ ಬಿತ್ತನೆಗೆ ಬದಲಾಗಿ ಚೌಡನು ಬಯಸುತ್ತಿದ್ದ ಬೆಲೆಯೂ ತೀರಾ ಕಡಿಮೆಯಾದಾಗಿತ್ತು. ಕೇವಲ ಒಂದು ಲೋಟ ಕಾಫಿ ಅಥವಾ  ಹೆಚ್ಚೆಂದರೆ  ಸ್ವಲ್ಪ ಯಾವುದಾದರೂ ತಿಂಡಿ!

ಚೌಡನ ಮುಪ್ಪಿನ ದಿನಗಳು ತುಂಬಾ ಕಷ್ಟಗಳನ್ನು ಕಂಡವು. ಅವನ  ಮಗ ತಿಪ್ಪ ಶಾಲೆಗೆ ಹೋಗಲೂ ಇಲ್ಲ. ಹಾಗೆ ಅವನಿಗೆ ಕುಲ ಕಸಬಾದ ಗೊಲ್ಲನ ವೃತ್ತಿಯಲ್ಲೂ ಆಸಕ್ತಿ ಇರಲಿಲ್ಲ. ತನ್ನ ಅಂತಿಮ ದಿನಗಳಲ್ಲಿ ಚೌಡ ಬೆಳಿಗ್ಗೆ ಮನೆಗಳಿಗೆ ಹೋಗಿ ಎಲೆ ಅಡಿಕೆ ಮತ್ತು ಕಾಫಿ ತೆಗೆದುಕೊಂಡು ಹಸುಗಳನ್ನು ಮೇವಿಗೆ ಬಿಟ್ಟುಕೊಂಡು ಹೋಗುತ್ತಿದ್ದ. ಆದರೆ ಆಮೇಲೆ ಅವನಿಗೆ ಅವುಗಳ ಕಡೆ ಗಮನ ಕೊಡಲಾಗುತ್ತಿರಲಿಲ್ಲ. ಸಂಜೆಗೆ ಹೆಚ್ಚಿನ ದನಗಳು ಅಭ್ಯಾಸ ಬಲದಿಂದ ವಾಪಾಸ್ ಕೊಟ್ಟಿಗೆಗೆ ಬರುತ್ತಿದ್ದವು. ಚೌಡನೇನೋ ಪುನಃ ಮನೆಗಳ ಹತ್ತಿರ ಬಂದು ಅವುಗಳು ಬಂದ ಬಗ್ಗೆ ವಿಚಾರಿಸುತ್ತಿದ್ದ. ಆದರೆ ಯಾವುದೇ ಹಸುಗಳು ಬಾರದಿದ್ದರೆ ಅವನ್ನು ಹುಡುಕುವುದಾಗಿ ಹೇಳಿಹೋದ ಚೌಡ ಪುನಃ ಕಣ್ಣಿಗೆ ಬೀಳುತ್ತಿರಲಿಲ್ಲ.

ನನಗೆ ದಿನ ಇಂದೂ ಸ್ಪಷ್ಟವಾಗಿ ಕಣ್ಣ ಮುಂದೆ ಬರುತ್ತಿದೆ. ನಾನು ಶಾಲೆಯಿಂದ ವಾಪಾಸ್ ಬರುತ್ತಿದ್ದೆ. ಆಗ ನನ್ನ ಕಣ್ಣಿಗೆ ತಿಪ್ಪ ಗಡಿಬಿಡಿಯಲ್ಲಿ ಎಲ್ಲೋ ಹೋಗುತ್ತಿರುವುದು ಕಾಣಿಸಿತು. ನಾನು ಮಾಮೂಲಿನಂತೆ ತಮಾಷೆಯಾಗಿ ಅವನಿಗೆ ಏನೋ ಹೇಳಲು ಹೋದೆ. ಅವನು ಅಸಮಾಧಾನದಿಂದ ದಿನವಾದರೂ ನನ್ನ ಸುದ್ದಿಗೆ ಬರಬೇಡಿ ಎಂದು ಹೇಳಿ ಹೊರಟು  ಹೋದ.

ನಾನು ಮನೆಗೆ ಹೋದಾಗ ಅಮ್ಮನಿಂದ ಚೌಡ ಇನ್ನಿಲ್ಲ ಎಂಬ ಸಮಾಚಾರ ಕೇಳಿದೆ. ಒಂದು ನಿಮಿಷ ನನಗೆ ಅದನ್ನು ನಂಬಲೇ ಆಗಲಿಲ್ಲ. ಇಡೀ ನಮ್ಮೂರಿನ ಏಕೈಕ ಸಮಾಚಾರ ವಾಹಿನಿಯಾಗಿದ್ದ ಚೌಡ ಇನ್ನಿಲ್ಲವೆಂಬ ಸತ್ಯವನ್ನು ಒಪ್ಪಿಕೊಳ್ಳಲು ನನ್ನ ಮನಸ್ಸು ಸಿದ್ಧವಿರಲಿಲ್ಲ. ಆದರೆ ಚೌಡನ ಆತ್ಮ ಪರಲೋಕ ಪ್ರಯಾಣ ಮಾಡಿದ ಸಂಗತಿ ಅರಗಿಸಿಕೊಳ್ಳಲಾಗದ ಸತ್ಯವೇ ಆಗಿತ್ತು.

ಇಂದು ನನ್ನ ನೆನಪಿನ ಅಂಗಳದಿಂದ  ಚೌಡನ ಕಥೆಯನ್ನು ಹೊರತೆಗೆದು ಬರೆಯುವಾಗ ನನ್ನ ಕಣ್ಣಿನಿಂದ ನೀರು  ಹೊರಬರುತ್ತಿದೆ. ಚೌಡನೇ ಸ್ವತಃ ಬಂದು ನನ್ನ ಕಣ್ಣ ಮುಂದೆ ನಿಂತು ತನ್ನ ಆತ್ಮಕಥೆಯನ್ನು ಬರೆದುದಕ್ಕಾಗಿ ಮತ್ತು ತನ್ನನ್ನು ಅಮರನಾಗುವಂತೆ ಮಾಡಿದ್ದಕ್ಕಾಗಿ ಕೃತಜ್ಞತೆ ಸೂಚಿಸುತ್ತಿರುವಂತೆ ಭಾಸವಾಗುತ್ತಿದೆ. ಹೌದು. ಇದು ನಿಜ. ಇಂದು ಚೌಡ ಕೇವಲ ನೆನಪು ಮಾತ್ರ. ಅವನಂತಹ ವ್ಯಕ್ತಿ ಪುನಃ ಜನಿಸಿ ಬರಲು ಖಂಡಿತವಾಗಿಯೂ ಸಾಧ್ಯವಿಲ್ಲ. ಅವನ ಆತ್ಮ ಸ್ವರ್ಗದಲ್ಲಿ ನಿರಂತರವಾಗಿ ಕೊಳಲು ಊದುತ್ತಿರಲಿ!
----ಮುಂದುವರಿಯುವುದು ---



Sunday, March 5, 2017

ನನ್ನ ಬಾಲ್ಯ


ಅಧ್ಯಾಯ ೧೭
ಅಕ್ಕನ ಮನೆಗೆ ಮೂರು ಮಂದಿ ಹುಡುಗಿಯರ ಆಗಮನದೊಂದಿಗೆ ನಮ್ಮ ಆಟ ಮತ್ತು ಚೇಷ್ಟೆಗಳೂ ಜಾಸ್ತಿಯಾದುವು. ನನಗೆ ಅಲ್ಲಿಯವೆರೆಗೆ ಹುಡುಗಿಯರೊಂದಿಗೆ ಅಡಿ ಅಭ್ಯಾಸವಿರಲಿಲ್ಲ. ಮೂವರು ಹುಡುಗಿಯರಲ್ಲಿ ಒಬ್ಬಳು ತುಂಬಾ ತುಂಟಿಯಾಗಿದ್ದಳು. ನನಗೆ ಹುಡುಗಿಯರ ಮುಂದೆ ನನ್ನ ಶೌರ್ಯವನ್ನು ತೋರಿಸಿಕೊಳ್ಳಬೇಕೆಂಬ ಅಭಿಲಾಷೆ ಮೇರೆ ಮೀರಿತು. ಅದೆಷ್ಟಾಯಿತೆಂದರೆ ನನ್ನ ಜೀವಕ್ಕೇ ಅಪಾಯವಾಗುವಂತ ಸಾಹಸವೊಂದನ್ನು ನಾನು ಮಾಡಿಬಿಟ್ಟೆ!

ಅಕ್ಕನ ಮನೆಯ ಹಿಂಭಾಗದಲ್ಲಿದ್ದ ಬಾವಿಯಲ್ಲಿದ್ದ ನೀರು ಬೇಸಿಗೆಯಲ್ಲಿ ಕಡಿಮೆಯಾಗಿ ಮನೆಯ ಬಳಕೆಗೆ ಸಾಕಾಗುವಷ್ಟು ಇರುತ್ತಿರಲಿಲ್ಲ. ಆದ್ದರಿಂದ ಬೇಸಿಗೆಯಲ್ಲಿ ಸ್ನಾನಕ್ಕೆ ತೋಟದಲ್ಲಿ ಹಳ್ಳದ ಪಕ್ಕದಲ್ಲಿದ್ದ ಬಾವಿಯೊಂದರ ನೀರು ಬಳಸಲಾಗುತ್ತಿತ್ತು. ಅದಕ್ಕಾಗಿ ಬಾವಿಯ ಪಕ್ಕದಲ್ಲೇ ಒಂದು ಸ್ನಾನದ ಮನೆಯನ್ನು ಕಟ್ಟಲಾಗಿತ್ತು. ಭಾವಿಯಲ್ಲಿ ನೀರು ಯಥೇಚ್ಛವಾಗಿತ್ತು.

ದಿನ ನಾವು ಮಕ್ಕಳು ಒಬೊಬ್ಬರಾಗಿ ತೋಟದ ಬಚ್ಚಲಲ್ಲಿ ಸ್ನಾನ ಮಾಡುತ್ತಿದ್ದೆವು. ವೇಳೆಗೆ ಬಚ್ಚಲಿನ ಹೊರಗೆ ಭಾವಿಯ ಬಳಿ ಸ್ನಾನಕ್ಕೆ ಕಾಯುತ್ತಿದ್ದವರಲ್ಲಿ ಒಂದು ಸ್ಪರ್ಧೆ ಪ್ರಾರಂಭವಾಯಿತು. ಬಾವಿ ಸಂಪೂರ್ಣವಾಗಿ ತುಂಬಿ ಅದರ ಮೇಲ್ಭಾಗದಿಂದ ಎರಡು ಮೆಟ್ಟಿಲುಗಳು ಮಾತ್ರ ಕಣ್ಣಿಗೆ ಬೀಳುತ್ತಿದ್ದವು. ನಮ್ಮಲ್ಲಿ ಯಾರು ಹೆಚ್ಚು ಮೆಟ್ಟಿಲು ಕೆಳಗಿಳಿಯುವರೆಂಬುದೇ ಸ್ಪರ್ಧೆಯಾಗಿತ್ತು. ಮೊದಲಿನ ಸ್ಪರ್ಧಿಗಳು ಒಬೊಬ್ಬರಾಗಿ ಮೂರು ಮೆಟ್ಟಿಲವರೆಗೆ ಕಾಲಿಟ್ಟು ನಿಂತು ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡಿದರು. ನನ್ನ ಸರದಿ ನಾಲ್ಕನೇ ಮೆಟ್ಟಿಲಿನದ್ದಾಗಿತ್ತು. ನಾನು ನಿರಾಳವಾಗಿ ಮೆಟ್ಟಿಲಮೇಲೆ ಕಾಲಿಟ್ಟು ನಿಂತುಬಿಟ್ಟೆ. ನೀರು ನನ್ನ ಕಾಲಗಂಟಿನ ಮೇಲಿನವರೆಗೂ ಬಂದಿತ್ತು. ನನ್ನ ಸಾಹಸಕ್ಕೆ ಹುಡುಗಿಯರಿಂದಲೂ ಚಪ್ಪಾಳೆ ಸಿಕ್ಕಿತು. ಅದು ನನ್ನ ತಲೆಗೇರಿ ಐದನೇ ಮೆಟ್ಟಿಲಿಗೆ ಕಾಲಿಡಲು ಸಹ ತೀರ್ಮಾನಿಸಿಬಿಟ್ಟೆ! ಅಂತೆಯೇ ನನ್ನ ಕಣ್ಣಿಗೆ ಕಾಣದಂತಿದ್ದ ಐದನೇ ಮೆಟ್ಟಿಲಿನತ್ತ ನನ್ನ ಒಂದು ಕಾಲನ್ನು ಜೋರಾಗಿ ಊರಿಬಿಟ್ಟೆ. ಹುಡುಗಿಯರಿಂದ ಚಪ್ಪಾಳೆಗಳೂ ಕೇಳಿಸಿದವು. ಆದರೆ ಅದು ನನ್ನ ಮೂರ್ಖತನದ ಪರಮಾವಧಿಯಾಗಿತ್ತು. ಏಕೆಂದರೆ ಬಾವಿಯಲ್ಲಿ ಐದನೇ ಮೆಟ್ಟಿಲೇ ಇರಲಿಲ್ಲ!

ನಾನು ಕಾಲಿಟ್ಟ ರಭಸಕ್ಕೆ ನನ್ನ ಶರೀರ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿ ಹೋಯಿತು. ನಾನು ನೀರಿನಲ್ಲಿ ತೇಲುತ್ತಲೇ ಮೆಟ್ಟಿಲಿನ ಹತ್ತಿರಬಂದು ಬಾವಿಯಿಂದ ಹೊರಬರಲು ಪ್ರಯತ್ನಿಸಿದೆ. ಆದರೆ ಅದು ಸಾಧ್ಯವಾಗಲಿಲ್ಲ. ಮಾತ್ರವಲ್ಲ ನೀರು ನಾನು ಉಸಿರೆಳೆದಂತೆ ದೇಹದೊಳಗೆ ಸೇರತೊಡಗಿತು. ಬಾವಿಯ ಹೊರಗಿದ್ದ ಮಕ್ಕಳು ಬೊಬ್ಬೆ ಹಾಕತೊಡಗಿದರು. ಆದರೆ ಯಾರೂ ಹತ್ತಿರದಲ್ಲಿದ್ದ ಮನೆಯಲ್ಲಿದ್ದ ಹಿರಿಯರಿಗೆ ತಿಳಿಸುವ ಯೋಚನೆ ಮಾಡಲಿಲ್ಲ. ಅವರಿಗೆ ಅದನ್ನು ಹೇಳುವ ನನ್ನ  ಪ್ರಯತ್ನ ವಿಫಲವಾಯಿತು. ನಾನು ನನ್ನ ಕಥೆ ಮುಗಿಯಿತೆಂದೇ ಭಾವಿಸಿದೆ.

ಆದರೆ ನನ್ನ ಅದೃಷ್ಟ ಚೆನ್ನಾಗಿತ್ತು. ಅದೇ ಸಮಯಕ್ಕೆ ಭಾವನ ತಮ್ಮ ಚಂದ್ರಹಾಸಯ್ಯನವರ ಪತ್ನಿ ಸರಸ್ವತಮ್ಮನವರು ದೇವರೇ ಕಳಿಸಿದಂತೆ ಸ್ನಾನಕ್ಕಾಗಿ ಅಲ್ಲಿಗೆ ಬಂದರು. ಅವರಿಗೆ ನಾನು ಬಾವಿಯಲ್ಲಿ ತೇಲಾಡುವ ದೃಶ್ಯ ಗೋಚರಿಸಿ ಕಂಗಾಲಾದರು. ಆದರೆ ಗಟ್ಟಿಮುಟ್ಟಾಗಿದ್ದ ಅವರು ಸ್ವಲ್ಪವೂ ಭಯಪಡದೆ ನನಗೆ ನೀರಿನೊಳಗಿನಿಂದ ಮೇಲಕ್ಕೆ ಕೈ ಚಾಚುವಂತೆ ಕೂಗಿ ಹೇಳತೊಡಗಿದರು. ನಾನು ಕೈ ಮೇಲೆತ್ತುತ್ತಿದ್ದಂತೆ ಅವರು ನನ್ನನು ಒಮ್ಮೆಗೆ ನೀರಿನಿಂದ ಹೊರಗೆಳೆದು ಹಾಕಿಬಿಟ್ಟರು. ಆಮೇಲೆ ನನ್ನನ್ನು ಮನೆಯೊಳಗೇ ಎತ್ತಿಕೊಂಡು ಹೋಗಿ ದೇಹದಲ್ಲಿ ಸೇರಿದ್ದ ನೀರನ್ನು ಹೊರತೆಗೆಯಲಾಯಿತು. ಅರೆ ಎಚ್ಚರದಲ್ಲಿದ ನನಗೆ ತುಂಬಾ ಸಮಯ ಇನ್ನೂ ನೀರಿನೊಳಗೇ ಮುಳುಗಿದ್ದಂತೆ ಅನ್ನಿಸುತ್ತಿತ್ತು.

ನನ್ನ ಮಾ ರಣಾಂತಿಕ ಸಾಹಸಕ್ಕೆ ಅಕ್ಕ ಮತ್ತು ಭಾವನವರಿಂದ ತೀವ್ರ  ಪ್ರತಿಕ್ರಿಯೆ ಬರಬಹುದೆಂದು ನಾನು ಭಯಪಟ್ಟಿದ್ದೆ. ಆದರೆ ಅವರಿಬ್ಬರೂ ನನಗೆ ಒಂದು ಮಾತೂ ಅನ್ನಲಿಲ್ಲಆದರೆ ಊರಿನ ತುಂಬಾ ನನ್ನ ಸಾಹಸದ ಸಮಾಚಾರ ಹರಡಿತು. ಅಕ್ಕನ ಮನೆಯ ಬಾವಿಯ ಆಳ ಅಳತೆ ಮಾಡಿದವನೆಂಬ ಬಿರುದೂ ನನಗೆ  ಸಿಕ್ಕಿತುಬೇರೆ ಮಕ್ಕಳು ನನ್ನ ಹತ್ತಿರ ಪದೇಪದೇ "ಬಾವಿಯ ಆಳ ಎಷ್ಟಿತ್ತಪ್ಪಾ?" ಎಂದು ಕೇಳತೊಡಗಿದರು!
---------------------------------00------------------------------------00-------------------------00------------------------
ಅಕ್ಕನಿಗೆ ಮದುವೆಯಾದಾಗ ಅವಳಿಗೆ ಕೇವಲ ೧೬ ವರ್ಷ ವಯಸ್ಸು. ಆದರೆ ನಾನು ಹೊಕ್ಕಳಿಕೆಯಲ್ಲಿದ್ದಾಗಲೇ ಅವಳಿಗೊಂದು ಹೆಣ್ಣನ್ನು ಧಾರೆ ಎರೆಸಿಕೊಳ್ಳುವ  ಅವಕಾಶ ಬಂದಿತು. ತೀರ್ಥಹಳ್ಳಿಯ ಸಮೀಪದಲ್ಲಿದ್ದ ಆಲ್ಮನೆ ಎಂಬ ಊರಿನ ತಿಮ್ಮಪ್ಪಯ್ಯ ಎಂಬುವರು ಭಾವನ ದಾಯಾದಿಗಳಂತೆ. ಅವರಿಗೆ ಶೃಂಗೇರಿಯ ಸಮೀಪದಲ್ಲಿದ್ದ ಜಕ್ಕಾರುಕೊಡಿಗೆ ಎಂಬ ಊರಿನ ಹುಡುಗಿಯೊಡನೆ ಮದುವೆ ನಿಶ್ಚಯವಾಗಿತ್ತು. ತಿಮ್ಮಪ್ಪಯ್ಯನವರ ತಂದೆತಾಯಿಗಳು (ಪ್ರಾಯಶಃ) ಇಲ್ಲದಿದ್ದರಿಂದ ಅಕ್ಕ-ಭಾವನವರೇ ಹುಡುಗಿಯನ್ನು ಧಾರೆಎರೆಸಿಕೊಳ್ಳಬೇಕೆಂದು ನಿಶ್ಚಯವಾಗಿತ್ತು. ಮದುವೆ ಜಕ್ಕಾರುಕೊಡಿಗೆ ಹೆಣ್ಣಿನ ಮನೆಯಲ್ಲೇ ನಡೆಯುವುದೆಂದೂ ನಿಶ್ಚಯಿಸಲಾಗಿತ್ತು.

ಅಕ್ಕ ಭಾವ ಇಬ್ಬರು ಮದುವೆಗೆ ನಮಗಿಂತ ಮೊದಲೇ ಹೊರಟು  ಹೋದರು. ನಾನು ಬೇರೆಯವರೊಡನೆ ಮದುವೆಯ ಹಿಂದಿನ ದಿನದ ಸಂಜೆಗೆ ಜಕ್ಕಾರುಕೊಡಿಗೆ ತಲುಪುವುದೆಂದೂ ತೀರ್ಮಾನಿಸಲಾಗಿತ್ತು. ಅದರಂತೆ ನಾವೆಲ್ಲಾ ಹರಿಹರಪುರಕ್ಕೆ ನಡೆದು ಹೋದೆವು. ಅಲ್ಲಿಂದ ಒಂದು ಲಾರಿಯಲ್ಲಿ ನಾವು ಶೃಂಗೇರಿ ಮಾರ್ಗವಾಗಿ ಜಕ್ಕಾರುಕೊಡಿಗೆ ಸೇರಬೇಕಿತ್ತು. ನಮ್ಮ ಅದೃಷ್ಟಕ್ಕೆ ಎಷ್ಟು ಕಾದರೂ ಲಾರಿ ಮಾತ್ರಾ ಬರಲೇ ಇಲ್ಲ. ಕೊನೆಗೆ ಸಂಜೆಯ ನಂತರ ಅದರ ದರ್ಶನವಾಯಿತು. ನಾವೆಲ್ಲ ಡಬಡಬನೆ ಲಾರಿ ಹತ್ತಿದೆವುಆದರೆ ಕೂಡಲೇ ಹೊರಟ ಅದರ ಶಬ್ದವನ್ನು ನೋಡಿದರೆ ಏನೋ  ಸಮಸ್ಯೆ ಇರುವಂತೆ ತೋರುತ್ತಿತ್ತು. ನಾವು ಜಕ್ಕಾರುಕೊಡಿಗೆ ಸೇರುವಾಗ ರಾತ್ರಿಯಾಗುವುದೆಂದು ಭಾವಿಸಿದೆವು.

ಆದರೆ ನಮ್ಮ ನಿರೀಕ್ಷೆಯೂ ಸುಳ್ಳಾಯಿತು. ಹರಿಹರಪುರದಿಂದ ಸ್ವಲ್ಪ ದೂರದಲ್ಲಿದ್ದ ಅಡ್ಡಗದ್ದೆ ಎಂಬ ಊರಿನ ಹತ್ತಿರ ನಮ್ಮ ಲಾರಿ ನೆಲಕಚ್ಚಿ ನಿಶ್ಶಬ್ದವಾಯಿತು. ಡ್ರೈವರ್ ಮತ್ತು ಕಂಡಕ್ಟರ್ ಅದನ್ನು ರಿಪೇರಿ ಮಾಡಲು ಮಾಡಿದ ಪ್ರಯತ್ನವೆಲ್ಲ ವಿಫಲವಾಗಿ ನಾವು ಕತ್ತಲೆಯಲ್ಲಿ  ಬೀದಿ ಪಾಲಾದೆವು.

ಆಗ  ಸುಮಾರು ರಾತ್ರಿ ಘಂಟೆ ವೇಳೆಯಿರಬೇಕು. ಗಾಡಾಂಧಕಾರದ ರಾತ್ರಿಯಲ್ಲಿ ನಾವು ರಸ್ತೆಯ ಪಕ್ಕದ ಕಾಡಿನ ದಂಡೆಯಲ್ಲಿ ಕುಳಿತು ಆಕಾಶದಲ್ಲಿ ಕಾಣುತ್ತಿದ್ದ ನಕ್ಷತ್ರಗಳನ್ನು ಎಣಿಸತೊಡಗಿದೆವು. ನಕ್ಷತ್ರಗಳಲ್ಲಿ ಧ್ರುವ ನಕ್ಷತ್ರ ಯಾವುದೆಂದು ಕಂಡುಹಿಡಿಯುವ ಸ್ಪರ್ಧೆ ನಡೆಯಿತು. ಅಷ್ಟರಲ್ಲೇ ನಮಗೆ ಹರಿಹರಪುರದ ಕಡೆಯಿಂದ ಯಾವುದೋ ವಾಹನವೊಂದು ಬರುತ್ತಿರುವ ಶಬ್ದ ಕೇಳಿ ಬೆಳಕೂ ಕಾಣಿಸಿತು. ನಮ್ಮ ಹತ್ತಿರ ಬಂದು ನಿಂತ ಬಸ್ಸಿನ ಹೆಸರು ಎಂಪಿಎಂ ಬಸ್ ಎಂದೂ ಮತ್ತು ಅದು ಬೆಳಗಿನ ಝಾವ ಶೃಂಗೇರಿಯಿಂದ ಹೊರಟು ಬೀರೂರಿಗೆ ಹೋಗಿ ಈಗ ವಾಪಾಸ್ ಬರುತ್ತಿತ್ತೆಂದೂ ತಿಳಿಯಿತು. ನಾವೆಲ್ಲ ಬೇಗನೆ ಬಸ್ ಏರಿದೆವು. ಅರ್ಧಗಂಟೆಯಲ್ಲಿ ನಾವು ಶೃಂಗೇರಿಯಲ್ಲಿದ್ದೆವು.

ಶೃಂಗೇರಿಯಲ್ಲಿ ದಿನಗಳಲ್ಲಿ ನಮ್ಮೂರಿನವರಿಗೆಲ್ಲಾ ಪರಿಚಿತರಾಗಿದ್ದ ಅಣ್ಣಪ್ಪಯ್ಯ ಎಂಬುವರ ಮನೆಯಲ್ಲಿ ನಾವು ರಾತ್ರಿ ಊಟ ಮಾಡಿ ಅಲ್ಲಿಯೇ ತಂಗಿದೆವು. ಬೆಳಗಾಗುವಾಗ ನಮ್ಮ ಲಾರಿ ರಿಪೇರಿಯಾಗಿ ನಮ್ಮನ್ನು ಜಕ್ಕಾರುಕೊಡಿಗೆಗೆ  ತಲುಪಿಸುವುದೆಂದು ಭಾವಿಸಲಾಗಿತ್ತು. ಆದರೆ ಅದು ಸುಳ್ಳಾಯಿತು. ಆದ್ದರಿಂದ ನಾವು ನಮ್ಮ ಕಾಲ್ನಡಿಗೆ ಪ್ರಯಾಣ ಪ್ರಾರಂಭಿಸಿ ತುಂಗಾ ನದಿಯನ್ನು ದಾಟಿ ವೈಕುಂಠಪುರವೆಂಬ ಊರಿನ ಮೂಲಕ ಗಂಗಾಮೂಲದತ್ತ (ತುಂಗೆಯ ಉಗಮಸ್ಥಳ) ಮುಂದುವರೆದೆವು. ಆಮೇಲೆ ಎಷ್ಟೋ ವರ್ಷದ ನಂತರ ಇದೇ  ವೈಕುಂಠಪುರದಲ್ಲಿ ಗಿರೀಶ್ ಕಾರ್ನಾಡ್ ಅವರು ನಟಿಸಿದ ಅನಂತಮೂರ್ತಿಯವರು ಬರೆದ ಸಂಸ್ಕಾರ ಸಿನಿಮಾ ಶೂಟಿಂಗ್ ನಡೆಯಿತು. ಆಗ ವೈಕುಂಠಪುರ ದೂರ್ವಾಸಪುರವಾಗಿ ಪರಿವರ್ತಿತವಾಗಿತ್ತು.

ಸುಮಾರು ಘಂಟೆಗೆ ನಾವು ಕಾಫಿ ಕಾಡು ಎಂಬ ಮನೆಯಲ್ಲಿ ವಾಸಿಸುತ್ತಿದ್ದ ಸುಬ್ಬರಾಯರೆಂಬುವರ ಮನೆಗೆ ತಲುಪಿದೆವು. ಅಲ್ಲಿ ನಮ್ಮ ಸ್ನಾನ ಮತ್ತು ಬೆಳಗಿನ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಂದ ನಾವು ಮದುವೆಯ ಮುಹೂರ್ತಕ್ಕೆ ಸರಿಯಾಗಿ ಜಕ್ಕಾರುಕೊಡಿಗೆಗೆ ತಲುಪಿದೆವು. ಅಕ್ಕನಿಗೆ ನಾವು ಕೊನೆಗೂ ಸಮಯಕ್ಕೆ ಸರಿಯಾಗಿ ಅಲ್ಲಿಗೆ ತಲುಪಿದ್ದು ನೆಮ್ಮದಿ ತಂದಿತು.

ನನಗೆ ಶಾಲೆಗೆ ಹೋಗುವ ತೊಂದರೆ ಇಲ್ಲದ್ದರಿಂದ ಇನ್ನೂ ಕೆಲವು ದಿನ ಅಕ್ಕನ ಮನೆಯಲ್ಲೇ ಕಳೆಯ ಬಹುದಾಗಿತ್ತು. ಆದರೆ ಅಷ್ಟರಲ್ಲೇ ಪುಟ್ಟಣ್ಣನ ಉಪನಯನ ಹೊರನಾಡು ಅನ್ನಪೂರ್ಣೇಶ್ವರಿ ದೇವಿಯ ಸನ್ನಿಧಿಯಲ್ಲಿ ನಡೆಯಲಿರುವ ಸಮಾಚಾರ ಬಂತು. ಆದ್ದರಿಂದ ನಾನು ಅಕ್ಕ ಮತ್ತು ಭಾವನವರೊಡನೆ ಪುನಃ ಕಾಲ್ನಡಿಗೆ ಪ್ರಯಾಣಮಾಡಿ ಅಡೇಖಂಡಿ  ತಲುಪಿದೆ.
----ಮುಂದುವರಿಯುವುದು ---