Sunday, May 31, 2020

ಬಾಲ್ಯ ಕಾಲದ ನೆನಪುಗಳು – ೯೦

ನಾನು ನನ್ನ ಬಾಲ್ಯ ಜೀವನದ ಬಗ್ಗೆ ಹಿಂತಿರುಗಿ ನೋಡುವಾಗ ನಾನು ಕಾಲೇಜ್ ಹಾಸ್ಟೆಲಿನಲ್ಲಿದ್ದ ದಿನಗಳು ನನ್ನ ವಿದ್ಯಾರ್ಥಿ ಜೀವನದ ಅಮೂಲ್ಯ ದಿನಗಳಾಗಿದ್ದುವು ಎಂದು ಅನಿಸುತ್ತಿದೆ.  ಮೊದಲನೆಯದಾಗಿ ನನ್ನ ಮೆಸ್ಸ್ ಚಾರ್ಜಿಗೆ ಪ್ರತಿ ತಿಂಗಳೂ ಕೊಡಬೇಕಾಗಿದ್ದ ೩೦ ರೂಪಾಯಿ ಹೊರೆಯನ್ನು ತಂದೆಯವರ ಬೆನ್ನಿನಿಂದ ಇಳಿಸಿಬಿಟ್ಟಿದ್ದೆ. ಇದರಿಂದ ನಾನು ಪ್ರತಿ ವಾರದ ಕೊನೆಯಲ್ಲಿ ಮನೆಗೆ ಹೋಗುವಾಗ ಒಂದು ಬಗೆಯ ನೆಮ್ಮದಿಯಿಂದ ಹೋಗಲು ಸಾಧ್ಯವಾಯಿತು. ನನ್ನ ಟೆಕ್ಸ್ಟ್ ಪುಸ್ತಕಗಳು ಇತ್ಯಾದಿ ಖರ್ಚುಗಳ ಸಣ್ಣ ಹೊರೆ ಮಾತ್ರ ತಂದೆಯವರಿಗಿತ್ತು. ಶಿವಮೊಗ್ಗೆಯ ಹಾಸ್ಟೆಲಿನಲ್ಲಿ ಫ್ರೀ ಸೀಟ್ ವಿದ್ಯಾರ್ಥಿಗಳಿಗೆ ಒಂದು ಬಗೆಯ ಕೀಳರಿಮೆ ಇರುತ್ತಿತ್ತು. ಆದರೆ ಶೃಂಗೇರಿ ಕಾಲೇಜ್ ಹಾಸ್ಟೆಲಿನಲ್ಲಿ Rank ಸ್ಟೂಡೆಂಟ್ ಎಂದು ವಿಶೇಷ ಗೌರವ ನನಗೆ ಸಿಗುತ್ತಿತ್ತು.

ಆ ವರ್ಷ ಕೆಲವು ಉಪನ್ಯಾಸಕರು ಶೃಂಗೇರಿಯಲ್ಲೇ ತಮ್ಮ ಕುಟುಂಬವನ್ನು ನೆಲೆಗೊಳಿಸಿದ್ದರು. ಅವರನ್ನು ಬಿಟ್ಟು ಉಳಿದವರು ಹಾಸ್ಟೆಲಿನಲ್ಲಿ ತಂಗದಿದ್ದರೂ ಊಟ ಮತ್ತು ತಿಂಡಿ ಅಲ್ಲಿಯೇ ತೆಗೆದುಕೊಳ್ಳುತ್ತಿದ್ದರು. ಆದ್ದರಿಂದ ಹಾಸ್ಟೆಲಿನ ಊಟ ಮತ್ತು ತಿಂಡಿಗಳ ಶುಚಿ ಮತ್ತು ರುಚಿ ಹಾಗೂ ಗುಣಮಟ್ಟಕ್ಕೆ ಅವರು ಕಾರಣರಾಗಿದ್ದರು. ನಮ್ಮ ಕೆಮಿಸ್ಟ್ರಿ ವಿಭಾಗಕ್ಕೆ ಶಾನುಭಾಗ್ ಅವರು ಮುಖ್ಯಸ್ಥರಾದರೆ ಅವರ ಕೆಳಗೆ ಹೊಸದಾಗಿ ರಾಮಸ್ವಾಮಿ ಮತ್ತು ಹೆಗ್ಡೆ ಎನ್ನುವರು ಉಪನ್ಯಾಸಕರಾಗಿ ಸೇರಿಕೊಂಡರು. ಫಿಸಿಕ್ಸ್ ವಿಭಾಗದ ಮುಖ್ಯಸ್ಥರಾದ ಕೃಷ್ಣಪ್ಪಯ್ಯನವರ ಕೆಳಗೆ ಮೈಸೂರಿನ ನಾಗರಾಜ್ ಮತ್ತು ದಕ್ಷಿಣ ಕನ್ನಡದ ವೆಂಕಟರಮಣ ಭಟ್ ಎಂಬ ಇಬ್ಬರು ಹೊಸ ಉಪನ್ಯಾಸಕರು ಸೇರಿಕೊಂಡರು. ಒಟ್ಟಿನಲ್ಲಿ ನಮಗೆ ಮೇಜರ್ ಸಬ್ಜೆಕ್ಟುಗಳಾಗಿದ್ದ ಫಿಸಿಕ್ಸ್ ಮತ್ತು ಕೆಮಿಸ್ಟ್ರಿ ವಿಭಾಗಕ್ಕೆ ತುಂಬಾ ಒಳ್ಳೆಯ ಉಪನ್ಯಾಸಕರೇ ದೊರೆತಿದ್ದರು.

ಶ್ರೀನಾಥ ಶಾಸ್ತ್ರಿಯವರು ಮತ್ತು ನಮಗೊಂದು ಸಮಸ್ಯೆ!

ಆದರೆ ನಮಗೆ ಮೈನರ್ ಸಬ್ಜೆಕ್ಟ್ ಆಗಿದ್ದ ಮ್ಯಾಥಮ್ಯಾಟಿಕ್ಸ್ ವಿಭಾಗದ ಪರಿಸ್ಥಿತಿ ತುಂಬಾ ಚಿಂತಾಜನಕವಾಗಿ ಬಿಟ್ಟಿತು. ವಿಭಾಗದ ಮುಖ್ಯಸ್ಥರಾದ ಎನ್.ಆರ್.ಭಟ್ ಅವರೇನೋ ತುಂಬಾ ಉನ್ನತ ಮಟ್ಟದ ಉಪನ್ಯಾಸಕರಾಗಿದ್ದರು. ಅವರ ಮಾರ್ಗದರ್ಶನದಿಂದಲೇ ನಾನು ಪಿ.ಯು.ಸಿ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ್ದೆ. ಆದರೆ ನಮಗೆ ಸಮಸ್ಯೆಯಾದುದು ಹೊಸದಾಗಿ ಉಪನ್ಯಾಸಕರಾಗಿ ಬಂದ ಶ್ರೀನಾಥ ಶಾಸ್ತ್ರಿಯವರು. ಶಾಸ್ತ್ರಿಯವರೇನೋ ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪರೀಕ್ಷೆಯಲ್ಲಿ Rank ಗಳಿಸಿದ್ದರು. ಹಾಗೆಯೇ ಅವರು ಕನ್ನಡದ ಶ್ರೇಷ್ಠ ವಿದ್ವಾಂಸ ಪ್ರೊಫೆಸರ್ ತೀ. ನಂ. ಶ್ರೀಕಂಠಯ್ಯನವರ ಮೊಮ್ಮಗನೂ ಆಗಿದ್ದರು. ತೀ. ನಂ. ಶ್ರೀ.  ಅವರು ಎಷ್ಟು ಪ್ರಸಿದ್ಧರೆಂದರೆ ಒಂದು ಕಾಲದಲ್ಲಿ ಬೆಂಗಳೂರಿನ ಸೌತ್ ಎಂಡ್ ಸರ್ಕಲ್ಲಿಗೆ ತೀ.ನಂ. ಶ್ರೀ. ಸರ್ಕಲ್ ಎಂದು ನಾಮಕರಣ ಮಾಡಿ ಅವರ ಪುಟ್ಟ ಪ್ರತಿಮೆಯನ್ನೂ ಅಲ್ಲಿ ಸ್ಥಾಪಿಸಲಾಗಿತ್ತು. ಆದರೆ ಇಂದು ಅದು ಯಾರಿಗೂ ನೆನಪಿಲ್ಲ. ಹಾಗೆಯೇ  ಅವರ ಪ್ರತಿಮೆಯೂ ಮೂಲೆ ಸೇರಿದಂತಿದೆ!

ಒಬ್ಬ ತುಂಬಾ ಮೆರಿಟ್ ವಿದ್ಯಾರ್ಥಿ ಎಷ್ಟು ಕಳಪೆ ಉಪನ್ಯಾಸಕನಾಗಲು ಸಾಧ್ಯ ಎಂಬುದಕ್ಕೆ ಶಾಸ್ತ್ರಿಯವರು ಒಬ್ಬ ಸಾಕ್ಷಿಯಾಗಿದ್ದರು! ಉದಾಹರಣೆಗೆ ಅವರು ತರಗತಿಯ ಪ್ರಾರಂಭದಲ್ಲಿ ಒಂದು ಮ್ಯಾಥಮ್ಯಾಟಿಕ್ಸ್ ಸಮಸ್ಯೆಯನ್ನು ಕಪ್ಪು ಹಲಗೆಯ ಮೇಲೆ ಬರೆದು ನಮಗೆ ಅದನ್ನು ಹೇಗೆ ಉತ್ತರಿಸಬೇಕೆಂದು ತಿಳಿಸಲು ನೋಡುತ್ತಿದ್ದರು. ಆದರೆ ಆ ವಿವರಣೆ ಮಾಡುವಾಗ ಅವರು ಎಷ್ಟು ಗೊಂದಲಕ್ಕೀಡಾಗುತ್ತಿದ್ದರೆಂದರೆ ಕೊನೆಗೆ ಅವರಿಗೆ ಸಮಸ್ಯೆ ಏನಿತ್ತೆಂದೇ ಮರೆತುಹೋಗಿಬಿಡುತ್ತಿತ್ತು! ಕೊನೆಯಲ್ಲಿ ತಾವು ಕಪ್ಪು ಹಲಗೆಯ ಮೇಲೆ ಬರೆದುದನ್ನೆಲ್ಲಾ ಅಳಿಸಿ ಆ ದಿನದ ತರಗತಿಯನ್ನು ಮುಗಿಸಿಬಿಡುತ್ತಿದ್ದರು, ಮುಂದಿನ ತರಗತಿಯಲ್ಲಿ ಇನ್ನೊಂದು ಹೊಸ ಸಮಸ್ಯೆಯನ್ನು ಪ್ರಾರಂಭಮಾಡಿ ಅದನ್ನೂ ಗೊಂದಲದಲ್ಲಿ ಮುಕ್ತಾಯ ಮಾಡಿಬಿಡುತ್ತಿದ್ದರು. ಒಟ್ಟಿನಲ್ಲಿ ಶಾಸ್ತ್ರಿಯವರು ಮ್ಯಾಥಮ್ಯಾಟಿಕ್ಸ್ ಸಮಸ್ಯೆಗಳನ್ನು ಹೇಗೆ ಬಗೆಹರಿಸಬೇಕೆಂದು ನಮಗೆ ಕಲಿಸುವ ಬದಲಾಗಿ ಅವರೇ ನಮಗೊಂದು ಸಮಸ್ಯೆ ಆಗಿಬಿಟ್ಟರು!

ಶಾಸ್ತ್ರಿಯವರ ಈ ಬಗೆಯ ಉಪನ್ಯಾಸಗಳು ನನ್ನ ತಲೆಯನ್ನೇ ಕೆಡಿಸಿಬಿಟ್ಟವು. ಏಕೆಂದರೆ ನಾನು ಅಂತಿಮ ಬಿ.ಎಸ್ ಸಿ. ಪರೀಕ್ಷೆಯಲ್ಲಿ Rank ತೆಗೆದುಕೊಳ್ಳಬೇಕಾದರೆ ಮೈನರ್ ಮ್ಯಾಥಮ್ಯಾಟಿಕ್ಸ್ ಸಬ್ಜೆಕ್ಟಿನಲ್ಲಿ ಇನ್ನೂರಕ್ಕೆ ಇನ್ನೂರು ಅಂಕಗಳನ್ನು ತೆಗೆದುಕೊಳ್ಳುವುದು ಅತ್ಯಾವಶ್ಯಕವಾಗಿತ್ತು. ಆದರೆ ಶಾಸ್ತ್ರಿಗಳು ಪಾಠ ಮಾಡುವ ರೀತಿ ನೋಡಿದರೆ ನಾನು Rank ಪಡೆಯುವುದಿರಲಿ, ಅವರ ಸಬ್ಜೆಕ್ಟಿನಲ್ಲಿ ಪಾಸ್ ಆಗುವುದೇ ಅನುಮಾನವಾಗಿ ಕಾಣತೊಡಗಿತು! ನನಗೆ ಆಗಾಗ ನಾನು ಅವರ ಸಬ್ಜೆಕ್ಟಿನಲ್ಲಿ ಫೇಲ್ ಆದಂತೆ ದುಸ್ವಪ್ನಗಳು ಕಾಣತೊಡಗಿದವು. ನಾನು ಎನ್.ಆರ್.ಭಟ್ ಅವರೊಡನೆ ನನ್ನ ಸಮಸ್ಯೆ ಮತ್ತು ಭಯವನ್ನು ಹೇಳಿಕೊಂಡೆ. ಅವರು ನನಗೆ ಕೌನ್ಸೆಲಿಂಗ್ ಮಾಡಲು ಪ್ರಯತ್ನಿಸಿದರು. ಅವರ ಪ್ರಕಾರ ಶಾಸ್ತ್ರಿಯವರು ಎಷ್ಟೇ ಕೆಟ್ಟದ್ದಾಗಿ ಪಾಠ ಮಾಡಿದರೂ ನಾನು ೨೦೦ಕ್ಕೆ ೨೦೦ ಅಂಕಗಳನ್ನು ಪಡೆಯಲು ಸಮರ್ಥನಾಗಿದ್ದೆ!  ನನಗೆ ಅವರ ಮಾತುಗಳಲ್ಲಿ ನಂಬಿಕೆ ಬರಲಿಲ್ಲ. ಶಾಸ್ತ್ರಿಗಳ ಸಮಸ್ಯೆ ಹಾಗೆಯೇ ಮುಂದುವರಿಯಿತು.

(ಶಾಸ್ತ್ರಿಯವರು ಎರಡು ವರ್ಷದ ನಂತರ ನಮ್ಮ ಕಾಲೇಜಿನ ಕೆಲಸಕ್ಕೆ ರಾಜೀನಾಮೆ ನೀಡಿ ಬೆಂಗಳೂರಿನಲ್ಲಿ ನ್ಯಾಷನಲ್ ಏರೋನಾಟಿಕಲ್ ಲ್ಯಾಬೋರೇಟರಿ (NAL)  ಸೇರಿಕೊಂಡರು. ನಾನು ಎಷ್ಟೋ ವರ್ಷದ ನಂತರ ಅವರನ್ನು ಅವರ ಮನೆಯಲ್ಲೇ ಭೇಟಿ ಮಾಡಿದ್ದೆ. ಅವರು ಆ ಸಂಸ್ಥೆಯಲ್ಲಿ ಕಣಾದ ಎಂಬ ಹೆಸರಿನ ಮ್ಯಾಗಜಿನ್ ಹೊರಡಿಸಲು ಕಾರಣರಾಗಿದ್ದರು. ಶಾಸ್ತ್ರಿಯವರು ನಮಗೆ ಒಳ್ಳೆಯ ಉಪನ್ಯಾಸಕರು ಆಗಿರದಿದ್ದರೂ ಆ ಸಂಸ್ಥೆಯಲ್ಲಿ ಒಳ್ಳೆಯ ಹೆಸರು ತೆಗೆದುಕೊಂಡಿದ್ದರು)

ವೆಂಕಣ್ಣಯ್ಯನವರ ಕಾಳಿದಾಸನ ಕೃತಿಗಳ ಪಾಠ

ನಮ್ಮ ಸಂಸ್ಕೃತ ಉಪನ್ಯಾಸಕರಾದ ವೆಂಕಣ್ಣಯ್ಯನವರು ಪ್ರಖ್ಯಾತ ಕನ್ನಡ ಪ್ರೊಫೆಸರ್ ತ.ಸು. ಶಾಮರಾಯರ ಮಗನೆಂದು ಹಿಂದೆಯೇ ಬರೆದಿದ್ದೇನೆ. ತುಂಬಾ ಒಳ್ಳೆಯ ಉಪನ್ಯಾಸಕರೇ ಆಗಿದ್ದ ವೆಂಕಣ್ಣಯ್ಯನವರು ಕಾಳಿದಾಸನ ಕೃತಿಗಳ ಪಾಠವನ್ನು ಮಾಡುವುದರಲ್ಲಿ ತುಂಬಾ ನಿಪುಣರಾಗಿದ್ದರು. ಅವರು ಅವನ ಕೃತಿಗಳಲ್ಲಿ ಬರುತ್ತಿದ್ದ ಕಾಮುಕತೆ ಮತ್ತು ಪ್ರಣಯ ಪ್ರಸಂಗಗಳನ್ನು ತುಂಬಾ  ತನ್ಮಯತೆಯಿಂದ ನಮಗೆ ವಿವರಿಸುತ್ತಿದ್ದರು. ನಾವು ಪಿ.ಯು.ಸಿ ತರಗತಿಯಲ್ಲಿ  ಓದುವಾಗ ಅವರಿಗಿನ್ನೂ ಮದುವೆಯಾಗಿರಲಿಲ್ಲ. ಆದರೆ ನಾವು ಬಿ.ಎಸ್ ಸಿ. ಮೊದಲ ವರ್ಷಕ್ಕೆ ಬರುವಾಗ ಅವರಿಗೆ ವಿವಾಹವಾಗಿಬಿಟ್ಟಿತ್ತು. ಹಾಗಾಗಿ ಅವರು ತಮ್ಮ ಸ್ವಂತ ಅನುಭವದಿಂದ ಪ್ರಣಯ ಪ್ರಸಂಗಗಳನ್ನು ಇನ್ನೂ ಹೆಚ್ಚು ತನ್ಮಯತೆಯಿಂದ ನಮಗೆ ಬೋಧಿಸಲು ಸಾಧ್ಯವಾಯಿತೆಂದು ನಾವುಗಳೆಲ್ಲ ತಮಾಷೆ ಮಾಡುತ್ತಿದ್ದೆವು! ನಮ್ಮ ಸಂಸ್ಕೃತ ತರಗತಿಗೆ ಕೆಲವು ವಿಧ್ಯಾರ್ಥಿನಿಯರೂ ಬರುತ್ತಿದ್ದರು. ಹಾಗಾಗಿ ವೆಂಕಣ್ಣಯ್ಯನವರು ಪ್ರಣಯ ಪ್ರಸಂಗಗಳನ್ನು ವಿವರಿಸುವಾಗ ನಮಗೆ ಸ್ವಲ್ಪ ಮುಜುಗರವಾಗುತ್ತಿತ್ತು. ಆದರೆ ವೆಂಕಣ್ಣಯ್ಯನವರಿಗೆ ಅದರಲ್ಲೇನೂ ಮುಜುಗರವಾದಂತೆ ನಮಗನಿಸಲಿಲ್ಲ !

ಎನ್.ಬಿ.ಎನ್.ಮೂರ್ತಿಯವರು ಮತ್ತು ಶೇಕ್ಸ್ ಪಿಯರ್ ಬರೆದ ಒಥೆಲೋ ನಾಟಕ

ನಮ್ಮ ಇಂಗ್ಲಿಷ್ ರೀಡರ್ ಎನ್.ಬಿ.ಎನ್.ಮೂರ್ತಿಯವರು ಅತ್ಯಂತ ಶ್ರೇಷ್ಠ ಅಧ್ಯಾಪಕರಾಗಿದ್ದರು. ಇಂಗ್ಲಿಷ್ ಕವನಗಳನ್ನು ಮತ್ತು ಶೇಕ್ಸ್ ಪಿಯರ್ ನಾಟಕಗಳನ್ನು ಅವರಷ್ಟು ಚೆನ್ನಾಗಿ ಮಾಡುವವರು ಬೇರೆ ಯಾರೂ ಇರಲಿಲ್ಲ. ನಮಗೆ ಶೇಕ್ಸ್ ಪಿಯರ್ ಬರೆದ ಒಥೆಲೋ ನಾಟಕ ಪಠ್ಯಪುಸ್ತಕವಾಗಿತ್ತು. ಪರಮ ಸುಂದರಿಯಾದ ಡೆಸ್ಡೆಮೋನಾ ತನ್ನ ಪತಿಯೇ ತನ್ನ ಪಾತಿವ್ರತ್ಯದ ಬಗ್ಗೆ ಸಂಶಯ ಹೊಂದಿ ತನ್ನನ್ನು ಕೊಲೆ ಮಾಡುವ ದುರಂತವನ್ನು ಎದುರಿಸುತ್ತಾಳೆ. ಅದಕ್ಕೆ ನರಿ ಬುದ್ದಿಯ ಇಯಾಗೋ ಮಾಡಿದ ಪಿತೂರಿಯೇ ಕಾರಣ. ಮೂರ್ತಿಯವರು ಈ ನಾಟಕವನ್ನು ನಮಗೆ ಎಷ್ಟು ಚೆನ್ನಾಗಿ ಬೋಧಿಸಿದ್ದರೆಂದರೆ ನನಗೆ ಅವರ ನೆನಪು ಮರುಕಳಿಸಿದಾಗೆಲ್ಲಾ ಒಥೆಲೋ ನಾಟಕದ ದುರಂತ ನೆನಪಾಗುತ್ತದೆ.

ಆ ಕಾಲದಲ್ಲಿ ಇಂಗ್ಲೀಷಿನಲ್ಲಿ ಸ್ನಾತಕೋತ್ತರ ಪದವಿ ಪಡೆದವರ ಕೊರತೆ ಇತ್ತು. ನಮ್ಮ ಇನ್ನೊಬ್ಬ ಹೊಸ ಇಂಗ್ಲಿಷ್ ಉಪನ್ಯಾಸಕರು ಚೆನ್ನೈ ಇಂದ ಬಂದವರಾಗಿದ್ದರು. ನನಗೆ ಅವರ ಹೆಸರು ನೆನಪಾಗುತ್ತಿಲ್ಲ. ಇಂಗ್ಲಿಷ್ ಎಂ.ಏ. ಪದವೀಧರರಾಗಿದ್ದ ಅವರು ಹಿರಿಯ ವಯಸ್ಸಿನವರಾಗಿದ್ದು ಅಲ್ಲಿಯವರೆಗೆ ಹೈಸ್ಕೂಲ್ ಮೇಷ್ಟ್ರಾಗಿದ್ದರು. ಅವರ ಬೋಧನೆಯ ಮಟ್ಟ ಕೂಡ ಹೈಸ್ಕೂಲ್ ಮಟ್ಟದಲ್ಲೇ ಇತ್ತು. ನಮಗೆ ಮೂರ್ತಿಯವರು ನೂರು ಕ್ಯಾಂಡಲ್ ಬಲ್ಬ್ ಅನಿಸಿದರೆ ಇವರು ಸೊನ್ನೆ ಕ್ಯಾಂಡಲ್ ಬಲ್ಬ್ ಅನಿಸುತ್ತಿತ್ತು! ಆಮೇಲೆ ಸ್ವಲ್ಪ ಕಾಲದ ನಂತರ ಇಂಗ್ಲೀಷಿನಲ್ಲಿ ಬಿ. ಏ. (ಆನರ್ಸ್) ಪಾಸ್ ಮಾಡಿದ್ದ ಸೂರ್ಯನಾರಾಯಣ ಎನ್ನುವರು ನಮಗೆ ಟ್ಯೂಟರ್ ಆಗಿ ಬಂದರು. ಅವರೂ ಕೂಡ ಹಿಂದೆ ಹೈಸ್ಕೂಲ್ ಮೇಷ್ಟ್ರಾಗಿದ್ದವರು. ಸೂರ್ಯನಾರಾಯಣ ಅವರು ಕಾಲೇಜ್ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವಷ್ಟು ಸಮರ್ಥರೇ ಆಗಿರಲಿಲ್ಲ. ಅವರು ನಮಗೆ ಗದ್ಯದ (Prose) ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ಅವರ ಪ್ರಕಾರ ಇಂಗ್ಲಿಷ್ ಗದ್ಯ ಪಾಠವೆಂದರೆ  ಕೇವಲ ಅದರಲ್ಲಿ ಬರುವ ಇಂಗ್ಲಿಷ್ ಪದಗಳ ಕನ್ನಡ ಅರ್ಥವನ್ನು ನಮಗೆ ತಿಳಿಸುವುದು! ಹಾಗಾಗಿ ನಮಗೆ ಗದ್ಯ ಪಾಠ ಒಂದು ದುರಂತವೆಂದೇ ಅನಿಸಿ ಬಿಟ್ಟಿತ್ತು!

ನನ್ನ ಮಿತ್ರ ಬೀರೂರಿನ ಶಿವಶಂಕರಪ್ಪ

ಆ ವರ್ಷ ಹೊಸದಾಗಿ ನಮ್ಮ ತರಗತಿಗೆ  ಸೇರಿದ ವಿದ್ಯಾರ್ಥಿಗಳಲ್ಲಿ ಬೀರೂರಿನ ಶಿವಶಂಕರಪ್ಪ ಎಂಬುವರೂ ಒಬ್ಬರಾಗಿದ್ದರು. ಅವರು ನನ್ನ ಹಾಸ್ಟೆಲ್ ಮೇಟ್ ಕೂಡ ಆಗಿದ್ದರು. ನಾವಿಬ್ಬರೂ ಬೇಗನೆ ಆತ್ಮೀಯ ಸ್ನೇಹಿತರಾಗಿ ಬಿಟ್ಟೆವು. ತಮ್ಮ ತಂದೆಯ ಹಿರಿಯ ಮಗನಾಗಿದ್ದ ಶಿವಶಂಕರಪ್ಪ  ಬೀರೂರಿನ ಒಂದು ಪ್ರಸಿದ್ಧ ಲಿಂಗಾಯಿತ ಕುಟುಂಬಕ್ಕೆ ಸೇರಿದವರಾಗಿದ್ದರು. ಅವರ ತಂದೆ ಮಾರ್ಗದ ಮಲ್ಲಪ್ಪನವರು ಒಬ್ಬ ಪ್ರಸಿದ್ಧ ಮತ್ತು ಹಿರಿಯ ವಕೀಲರಾಗಿದ್ದರು. ಮಲ್ಲಪ್ಪನವರು ೧೯೬೭ನೇ ಇಸವಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬೀರೂರು-ಕಡೂರು ಕ್ಷೇತ್ರದಿಂದ ಜಯಗಳಿಸಿದರು. ಮುಂದೆ ಅವರು ದೇವರಾಜ ಅರಸು ಅವರ ಮಂತ್ರಿಮಂಡಲದಲ್ಲಿ ಅರೋಗ್ಯ ಮಂತ್ರಿಯೂ ಆಗಿದ್ದರು. ನಾನು ಆ ಬೇಸಿಗೆ ರಜೆಯಲ್ಲಿ ಬೀರೂರಿಗೆ ಹೋಗಿ ಶಿವಶಂಕರಪ್ಪನವರನ್ನು ಅವರ ಮನೆಯಲ್ಲೇ ಭೇಟಿಯಾಗಿದ್ದೆ. ಅವರ ಕುಟುಂಬದವರು ನನಗೆ ತುಂಬಾ ಆದರದ ಆತಿಥ್ಯ ನೀಡಿದ್ದರು.

ಮಲ್ಲಪ್ಪನವರಿಗೆ ಅವರು ಬಿ. ಏ. (ಆನರ್ಸ್)  ಓದುವಾಗ ಜವಾಹರ್ಲಾಲ್ ನೆಹರು ಅವರ ಕಿರಿಯ ಸಹೋದರಿ ಕೃಷ್ಣ ಹತೀಸಿಂಗ್ ಅವರು ಬರೆದ  ಆತ್ಮಕಥೆಯಾದ  “ವಿತ್ ನೋ ರಿಗ್ರೆಟ್ಸ್“ ಒಂದು ಪಠ್ಯ  ಪುಸ್ತಕವಾಗಿತ್ತಂತೆ.  ಶಿವಶಂಕರಪ್ಪನವರು ಅದನ್ನು ನನಗೆ ಓದಲು ಕೊಟ್ಟಿದ್ದರು. ಕೃಷ್ಣ ಹತೀಸಿಂಗ್  ಅವರು ತುಂಬಾ ಭಾವನಾತ್ಮಕವಾಗಿ ಬರೆದಿದ್ದ ಈ ಆತ್ಮಕಥೆ ನನಗೆ ತುಂಬಾ ಇಷ್ಟವಾಯಿತು. ಅದನ್ನು ತಿಳಿದ ಶಿವಶಂಕರಪ್ಪನವರು ಆ ಪುಸ್ತಕವನ್ನು ನನಗೆ ಉಡುಗೊರೆಯಾಗಿ  ಕೊಟ್ಟುಬಿಟ್ಟರು. ಆ ಪುಸ್ತಕ ಇಂದೂ ನನ್ನ ಬಳಿ ಇದೆ. ಅದನ್ನು ನೋಡುವಾಗ ನನ್ನ ಮತ್ತು ಶಿವಶಂಕರಪ್ಪನವರ ಅಂದಿನ ಆತ್ಮೀಯ ಗೆಳೆತನದ ದಿನಗಳ ನೆನಪು ಮರುಕಳಿಸುತ್ತದೆ.

------- ಮುಂದುವರಿಯುವುದು-----


Monday, May 25, 2020

ಬಾಲ್ಯ ಕಾಲದ ನೆನಪುಗಳು – ೮೯

ಆ ದಿನ ರಾತ್ರಿಯಲ್ಲಿ ನನಗೆ ಸರಿಯಾಗಿ ನಿದ್ದೆಯೇ ಬರಲಿಲ್ಲ. ಎರಡು ಮುಖ್ಯ ವಿಷಯಗಳು ನನ್ನ ತಲೆ ತಿನ್ನುತ್ತಿದ್ದವು. ಮೊದಲನೆಯದಾಗಿ ನಾನು ನನ್ನ ವಿದ್ಯಾಭ್ಯಾಸದ ಖರ್ಚಿನ ಹೊರೆಯನ್ನು ತಂದೆ ತಾಯಿಗಳ ಬೆನ್ನ ಮೇಲಿಂದ ಇಳಿಸಲಾಗದಿದ್ದುದು. ಎರಡನೆಯದು ನಾನು ನಾಲ್ಕನೇ ರಾಂಕ್ ಗಳಿಸಿದ್ದಕ್ಕೆ ಸೂಕ್ತ ಬಹುಮಾನವನ್ನು ಪಡೆಯಲಾಗದಿದ್ದುದು. ಈ ದೃಷ್ಟಿಯಲ್ಲಿ ನಾನು ಮುಂದೇನು ಮಾಡಬೇಕೆಂದು ಯೋಚಿಸುತ್ತಾ ಹೋದಾಗ ನನಗೊಂದು ಐಡಿಯಾ ಹೊಳೆಯಿತು.

ಚಂದ್ರಮೌಳಿರಾಯರ ಭೇಟಿ

ನಾನು ಈ ಮೊದಲೇ ಬರೆದಂತೆ ಹುಲಗಾರು ಚಂದ್ರಮೌಳಿರಾಯರು ಶೃಂಗೇರಿಯಲ್ಲಿ ಕಾಲೇಜು ಆರಂಭವಾಗುವುದಕ್ಕಾಗಿ ಹೋರಾಟ ಮಾಡಿದ ಮುಖ್ಯ ಮಹನೀಯರಲ್ಲಿ ಮೊದಲಿಗರಾಗಿದ್ದರು. ಅವರು ಹುಟ್ಟುಹಾಕಿದ ಭಾರತಿ ವಿದ್ಯಾ ಸಂಸ್ಥೆಯೇ ಮಣಿಪಾಲ ಅಕ್ಯಾಡೆಮಿಯೊಂದಿಗೆ ಸೇರಿಕೊಂಡು ಕಾಲೇಜನ್ನು ಪ್ರಾರಂಭಿಸಿತ್ತು. ಕಳೆದ ಒಂದು ವರ್ಷದಲ್ಲಿ ಆದ ಕಾಲೇಜಿನ ಬೆಳವಣಿಗೆ ಅವರಿಗೆ ತುಂಬಾ ಆನಂದವನ್ನು ತಂದಿತ್ತು. ಹಾಗೆಯೇ  ಅವರಿಗೆ ನಾನು ಮೊದಲ ವರ್ಷವೇ ನಾಲ್ಕನೇ Rank ಪಡೆಯುವ ಮೂಲಕ ಕಾಲೇಜಿನ ಕೀರ್ತಿ ಇಡೀ ಮಲೆನಾಡಿನಲ್ಲಿ ಮತ್ತು ಬೀರೂರು, ಕಡೂರು ಇತ್ಯಾದಿ ಊರುಗಳಲ್ಲಿ ಹಬ್ಬಲು ಕಾರಣನಾಗಿದ್ದೆನೆಂಬ ಅರಿವಿತ್ತು. ಪ್ರಿನ್ಸಿಪಾಲರು ಮತ್ತು ಶಂಕರರಾಯರು ನನ್ನ ಹತ್ತಿರ ಚಂದ್ರಮೌಳಿರಾಯರು ನನ್ನ ಬಗ್ಗೆ ತುಂಬಾ ಅಭಿಮಾನ ಹೊಂದಿದ್ದರೆಂದು ಹೇಳುತ್ತಲೇ ಇದ್ದರು. ಆದರೆ ನಾನವರನ್ನು ಅಲ್ಲಿಯವರೆಗೆ ಭೇಟಿ ಮಾಡಿಯೇ ಇರಲಿಲ್ಲ. ಈಗ ಪ್ರಿನ್ಸಿಪಾಲರು ನನಗೆ ಕೊಟ್ಟಿದ್ದ ಭರವಸೆಯಲ್ಲಿ ವಿಫಲರಾದ ಕಾರಣ ನಾನೊಮ್ಮೆ ರಾಯರನ್ನು ಭೇಟಿ ಮಾಡಿ ನನ್ನ ಪರಿಸ್ಥಿತಿಯನ್ನು ಅವರಿಗೆ ವಿವರಿಸುವುದು ಸೂಕ್ತವೆಂದು ನನಗನಿಸಿತು.

ಮಾರನೇ ದಿನ ಸಂಜೆ ನಾನು ಚಂದ್ರಮೌಳಿರಾಯರು ಶೃಂಗೇರಿಯಲ್ಲಿ ಬಂದಾಗ ಇರುತ್ತಿದ್ದ  ಅವರ ಇನ್ನೊಂದು ಮನೆಗೆ ಹೋದೆ. ಮಠದ ಹತ್ತಿರವೇ ಇದ್ದ ಈ ಮನೆಯಲ್ಲಿ ರಾಯರ ಕುಟುಂಬದ ಕೆಲವರು ವಾಸವಾಗಿದ್ದರು ಮತ್ತು ರಾಯರು ಹೆಚ್ಚು ಸಮಯವನ್ನು ಆ ಮನೆಯಲ್ಲೇ ಕಳೆಯುತ್ತಿದ್ದರು.  ನನ್ನನ್ನು ತುಂಬಾ ಆದರದಿಂದ ಬರಮಾಡಿಕೊಂಡ ರಾಯರು Rank ಪಡೆದುದಕ್ಕಾಗಿ  ನನ್ನನ್ನು ಅಭಿನಂದಿಸಿದರು. ಅಲ್ಲದೇ ಕಾಲೇಜಿನ ಮೊದಲ ವರ್ಷವೇ Rank ಪಡೆದು ನಾನು ಕಾಲೇಜಿನ ಪ್ರಸಿದ್ಧಿಗೆ ಕಾರಣನಾಗಿದ್ದೇನೆಂದೂ ಹೇಳಿದರು.

ನನ್ನ ನಡವಳಿಕೆ ನೋಡಿ ಅವರಿಗೆ ನಾನು ಯಾವುದೋ ಸಮಸ್ಯೆಯನ್ನು ಅವರ ಹತ್ತಿರ ಹೇಳಲು ಬಂದಿರುವೆನೆಂದು ಅನಿಸಿರಬೇಕು. ಅವರು ನನಗೆ ನನ್ನ ಸಮಸ್ಯೆ ಏನಿದ್ದರೂ ನಿಸ್ಸಂಕೋಚವಾಗಿ ತಿಳಿಸಲು ಹೇಳಿದರು. ನಾನು ಅವರಿಗೆ ಮಣಿಪಾಲ್ ಅಕ್ಯಾಡೆಮಿಯವರು ಹೇಗೆ ನನಗೆ ನೀಡಿದ ಭರವಸೆಯನ್ನು ಮುರಿದಿರುವರೆಂದು ವಿವರಿಸಿದೆ. ಅವರು ಕೂಡಲೇ ನನಗೆ ನಾನು ಏಕೆ ಅಕ್ಯಾಡೆಮಿಯವರ ಸಹಾಯ ಕೇಳಲು ಹೋದೆನೆಂದು ಪ್ರಶ್ನಿಸಿದರು. ಆಗ ನಾನು ಅವರಿಗೆ ನನ್ನ ಬಹು ಮುಖ್ಯ ಸಮಸ್ಯೆ ಎಂದರೆ ನನಗೆ ಹಾಸ್ಟೆಲ್ ಫೀ ಕಟ್ಟುವಷ್ಟು ಅನುಕೂಲ ಇಲ್ಲದಿರುವುದು ಎಂದು ಹೇಳಿದೆ. ಆಗ ಅವರು ನನಗೆ ಅಲ್ಲಿಂದ ಸೀದಾ ಹಾಸ್ಟೆಲಿಗೆ ಹೋಗಿ ಸೇರಿಕೊಳ್ಳ ಬೇಕೆಂದೂ ಮತ್ತು ವಾರ್ಡನ್ ಅವರಿಗೆ ನನ್ನ ಫೀ ಚಂದ್ರಮೌಳಿರಾಯರೇ ಕಟ್ಟುವರೆಂದು ಹೇಳಬೇಕೆಂದು ಕೂಡ ಹೇಳಿ ಬಿಟ್ಟರು.

ಎನ್.ಬಿ.ಎನ್. ಮೂರ್ತಿಯವರು

ನಾನು ಸ್ವಲ್ಪವೂ ತಡ ಮಾಡದೇ ಆಗ ಹಾಸ್ಟೆಲಿನ ವಾರ್ಡನ್ ಆಗಿದ್ದ ಎನ್.ಬಿ.ಎನ್ ಮೂರ್ತಿಯವರನ್ನು ಅವರ ಕೊಠಡಿಗೆ ಹೋಗಿ ಭೇಟಿಯಾದೆ. ನಾನು ಈ ಮೊದಲೇ ಬರೆದಂತೆ ಆ ವರ್ಷ ನಮ್ಮ ಕಾಲೇಜಿಗೆ ಆಗಮಿಸಿದ ಹೊಸ ಉಪನ್ಯಾಸಕರುಗಳಲ್ಲಿ ಎನ್ .ಬಿ .ಎನ್. ಮೂರ್ತಿಯವರು ಕೂಡ ಒಬ್ಬರಾಗಿದ್ದರು. ಇಂಗ್ಲೀಷಿನಲ್ಲಿ ಎಂ. ಏ. ಪದವೀಧರರಾದ ಮೂರ್ತಿಯವರು ಈ ಹಿಂದೆ ಅಕ್ಯಾಡೆಮಿಯೇ ಸ್ಥಾಪಿಸಿದ್ದ ಕಾರ್ಕಳದ  ಭುವನೇಂದ್ರ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ಬಂದವರಾಗಿದ್ದರು. ಅವರನ್ನು ಶೃಂಗೇರಿ ಕಾಲೇಜಿನಲ್ಲಿ ರೀಡರ್ ಮತ್ತು ಇಲಾಖೆಯ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿತ್ತು. ಹಾಗೆಯೇ ಸೀನಿಯಾರಿಟಿಯ ಆಧಾರದ ಮೇಲೆ ಅವರು ನಮ್ಮ ಕಾಲೇಜಿನ ವೈಸ್ ಪ್ರಿನ್ಸಿಪಾಲರೂ ಆಗಿದ್ದರು. ತುಂಬಾ ಆಕರ್ಷಕ ವ್ಯಕ್ತಿತ್ವ ಹೊಂದಿದ್ದ ಮೂರ್ತಿಯವರು ಅಷ್ಟೇ ಆಕರ್ಷಕವಾಗಿ ಉಪನ್ಯಾಸ ಮತ್ತು ಭಾಷಣಗಳನ್ನು ಮಾಡಬಲ್ಲವರಾಗಿದ್ದರು. ಅತಿ ಬೇಗನೆ ಮೂರ್ತಿಯವರು ನಮ್ಮ ಕಾಲೇಜಿನ ಅತ್ಯಂತ ಜನಪ್ರಿಯ ವ್ಯಕ್ತಿಯಾಗಿ ಹೊರಹೊಮ್ಮಿದ್ದರು.

ಆಗಿನ್ನೂ ಬ್ರಹ್ಮಚಾರಿಯೇ ಆಗಿದ್ದ ಮೂರ್ತಿಯವರು ಕಾಲೇಜು ಹಾಸ್ಟೆಲಿನ ಸಮೀಪದಲ್ಲೇ ಇದ್ದ ಒಂದು ಕೊಠಡಿಯಲ್ಲಿ ವಾಸಮಾಡುತ್ತಿದ್ದರು. ನಾನು ಅವರನ್ನು ಭೇಟಿ ಮಾಡಿ ಚಂದ್ರಮೌಳಿರಾಯರು  ನನಗೆ ಹಾಸ್ಟೆಲಿಗೆ ಸೇರಲು  ಹೇಳಿದ್ದಾರೆಂದೂ ಮತ್ತು ನನ್ನ ಫೀ ಅವರೇ ಕಟ್ಟುವುದಾಗಿ ಹೇಳಿದ್ದಾರೆಂದು ತಿಳಿಸಿದೆ. ಹಾಗೆಯೇ ನಾನು ರಾಯರ ಬಳಿ ಹೋಗುವಂತಹ ಪರಿಸ್ಥಿತಿ ಹೇಗೆ ಬಂತೆಂದು ವಿವರಿಸಿದೆ. ಮೂರ್ತಿಯವರಿಗೆ ನನ್ನ ಪರಿಸ್ಥಿತಿ ಸ್ಪಷ್ಟವಾಗಿ ಗೊತ್ತಾಯಿತು. ಆ ವೇಳೆಗೆ ರಾತ್ರಿಯಾಗಿ ಬಿಟ್ಟಿದ್ದರಿಂದ ಮೂರ್ತಿಯವರು ನನಗೆ ಮಾರನೇ ದಿನ ಸಂಜೆ ಹಾಸ್ಟೆಲಿಗೆ ಸೇರಿಕೊಳ್ಳುವಂತೆ ಸೂಚಿಸಿದರು. ಅಷ್ಟು ಮಾತ್ರವಲ್ಲ. ಚಂದ್ರಮೌಳಿರಾಯರಿಂದ ತಾವೇ ನನ್ನ  ಫೀ ನೇರವಾಗಿ ತೆಗೆದುಕೊಳ್ಳುವುದಾಗಿಯೂ ಮತ್ತು ನಾನು ಆ ಬಗ್ಗೆ ಚಿಂತೆ ಮಾಡಬೇಕಿಲ್ಲವೆಂದೂ ಹೇಳಿದರು. ಅವರ ಈ ಮಾತುಗಳು ನನಗೆ ತುಂಬಾ ನೆಮ್ಮದಿಯನ್ನು ನೀಡಿದವು.

ಕಾಲೇಜಿನಲ್ಲಿ ನಾನೊಬ್ಬ ಹೀರೋ ಆಗಿ ಬಿಟ್ಟೆ!

ನಾನು Rank ಪಡೆದ ನಂತರವೂ ಈ ಬಗೆಯ ಹೋರಾಟ ಮಾಡಬೇಕಾಗಿ ಬಂದಿದ್ದರೂ ಮತ್ತೂ ನೋವನ್ನು ಅನುಭವಿಸುತ್ತಿದ್ದರೂ ಬೇರೆ ಕೆಲವು ವಿಷಯಗಳಲ್ಲಿ ನನಗೆ ಸಂತೋಷ ತರುವ ವಾತಾವರಣ ಕಾಲೇಜಿನಲ್ಲಿ ಉಂಟಾಗಿತ್ತು. ಆ ವರ್ಷ ಹೊಸದಾಗಿ ಕಾಲೇಜು ಸೇರಿದ್ದ ವಿದ್ಯಾರ್ಥಿಗಳ ದೃಷ್ಟಿಯಲ್ಲಿ ನಾನೊಬ್ಬ ಹೀರೋ ಆಗಿ ಬಿಟ್ಟಿದ್ದೆ. ಅವರಲ್ಲಿ ತುಂಬಾ ಹುಡುಗರಿಗೆ ನನ್ನೊಡನೆ ಮಾತನಾಡಿ ನಾನು Rank ಪಡೆಯಲು ಯಾವ ರೀತಿಯ ತಯಾರಿ ಮಾಡಿಕೊಂಡೆನೆಂದು ತಿಳಿಯಬೇಕೆಂಬ ಕುತೂಹಲವಿತ್ತು..  ನಾನು ತುಂಬಾ ಹೆಮ್ಮೆಯಿಂದ ಅವರ ಪ್ರಶ್ನೆಗಳಿಗೆ ಉತ್ತರ ಕೊಡುತ್ತಾ ಅವರು ನನ್ನ ಸಾಧನೆಯ ಬಗ್ಗೆ ತೋರುತ್ತಿದ್ದ ಮೆಚ್ಚುಗೆಯನ್ನು ಮನಸ್ಸಿನಲ್ಲೇ ಅನುಭವಿಸುತ್ತಿದ್ದೆ. ಅವರಲ್ಲಿ ತುಂಬಾ ಹುಡುಗರು ಕಾಲೇಜ್ ಹಾಸ್ಟೆಲಿಗೆ ಸೇರಿಕೊಂಡಿದ್ದರು. ನಾನು ಹಾಸ್ಟೆಲಿಗೆ ಸೇರುವೆನೆಂಬ ಸಮಾಚಾರ ತಿಳಿದು ಅವರಿಗೆ ತುಂಬಾ ಸಂತೋಷವಾಗಿ ಬಿಟ್ಟಿತ್ತು.

ನನ್ನ ರೂಮ್ ಮೇಟ್  ಆಗಲು ಪೈಪೋಟಿ

ನಾನು ಮಾರನೇ ಸಂಜೆ ನನ್ನ ವಸ್ತುಗಳನ್ನೆಲ್ಲಾ ಒಂದು ಟ್ರಂಕ್ ಒಳಗೆ ಇಟ್ಟುಕೊಂಡು ಹಾಸ್ಟೆಲಿಗೆ ಹೋದೆ. ನಾನು ಬರುವುದನ್ನೇ ಕಾಯುತ್ತಿದ್ದ ಹುಡುಗರಲ್ಲಿ ಒಬ್ಬ ನನ್ನ ಕೈಯಿಂದ ಟ್ರಂಕ್ ಕಿತ್ತುಕೊಂಡು ನಾನು ಅವನ ರೂಮ್ ಮೇಟ್  ಆಗಬೇಕೆಂದು ಕೇಳಿಕೊಂಡ! ಅಷ್ಟರಲ್ಲಿ ಇನ್ನೊಬ್ಬ ವಿದ್ಯಾರ್ಥಿ ಅದು ಸಾಧ್ಯವಿಲ್ಲವೆಂದು ಹೇಳಿ ವಾರ್ಡನ್ ಮೂರ್ತಿಯವರು ನಾನು ಅವನ ರೂಮ್ ಮೇಟ್ ಎಂದು ಆಗಲೇ ಹೇಳಿಬಿಟ್ಟಿದ್ದಾರೆಂದು ತಿಳಿಸಿದ. ನನಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ಆದರೆ ನಾನು ಮನಸ್ಸಿನಲ್ಲೇ ನನ್ನ ರೂಮ್ ಮೇಟ್ ಆಗಲು ನಡೆಯುತ್ತಿದ್ದ ಪೈಪೋಟಿಯ ಆನಂದವನ್ನು ಅನುಭವಿಸಿದೆ. ಆ ವೇಳೆಗೆ ಅಲ್ಲಿಗೆ ಬಂದ ವಾರ್ಡನ್ ಮೂರ್ತಿಯವರು ನಾನು ಆ ಎರಡನೇ ವಿದ್ಯಾರ್ಥಿಯ ರೂಮ್ ಮೇಟ್ ಆಗಿ ಅವನ ರೂಮಿನಲ್ಲಿರಬೇಕೆಂದು ಹೇಳಿಬಿಟ್ಟರು. ಕೂಡಲೇ ಆ ವಿದ್ಯಾರ್ಥಿ ಮೊದಲ ವಿದ್ಯಾರ್ಥಿಯ ಕೈಯಿಂದ ಟ್ರಂಕ್ ಕಿತ್ತುಕೊಂಡು ನನ್ನನ್ನು ಅವನ ರೂಮಿಗೆ ಕರೆದುಕೊಂಡು ಹೋದ. ನನ್ನ ರೂಮ್ ಮೇಟ್  ಆಗಲು ನಡೆದ ಪೈಪೋಟಿ ಹೀಗೆ  ಮುಕ್ತಾಯಗೊಂಡಿತು.

ನಂಜುಂಡಸ್ವಾಮಿಯ ಮಹತ್ವಾಕಾಂಕ್ಷೆ

ಹೀಗೆ ನನ್ನ ರೂಮ್ ಮೇಟ್ ಆದ  ವಿದ್ಯಾರ್ಥಿಯ ಹೆಸರು ನಂಜುಂಡಸ್ವಾಮಿ ಎಂದಿತ್ತು. ಅವನು ತರೀಕೆರೆ ತಾಲೂಕಿನ ಲಿಂಗದಹಳ್ಳಿ ಎಂಬ ಊರಿನ ಹುಡುಗ. ನನ್ನನ್ನು ರೂಮ್ ಮೇಟ್ ಆಗಿ ಪಡೆದು  ತಾನೊಂದು ದೊಡ್ಡ ಹೋರಾಟದಲ್ಲಿ ಗೆದ್ದುಬಿಟ್ಟೆನೆಂಬ ತೃಪ್ತಿ ನಂಜುಂಡಸ್ವಾಮಿಯ ಮುಖದಲ್ಲಿ ಎದ್ದು ಕಾಣುತ್ತಿತ್ತು. ಅವನ ಪ್ರಕಾರ ಅವನೊಂದು ಸಾಧನೆ ಮಾಡಲೇ ಬೇಕೆಂಬ ಗುರಿ ಇಟ್ಟುಕೊಂಡಿದ್ದ. ಅವನ ಮಹತ್ವಾಕಾಂಕ್ಷೆ ಏನೆಂದರೆ ಮ್ಯಾಥಮ್ಯಾಟಿಕ್ಸ್ ಸಬ್ಜೆಕ್ಟಿನಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆಯುವುದು. ಅವನಿಗೆ ನಾನು ಮ್ಯಾಥಮ್ಯಾಟಿಕ್ಸ್ ಸಬ್ಜೆಕ್ಟಿನಲ್ಲಿ ನೂರಕ್ಕೆ  ನೂರು ಅಂಕಗಳನ್ನು ಪಡೆದಿರುವುದು ಗೊತ್ತಿತ್ತು. ಅವನಿಗೆ ನನ್ನಿಂದ ನಾನು ಹೇಗೆ ಆ ಸಾಧನೆಯನ್ನು ಮಾಡಿದೆನೆಂದು ತಿಳಿದುಕೊಳ್ಳಬೇಕಾಗಿತ್ತು, ಅವನ ಪ್ರಕಾರ ಆ ಗುರಿ ಸಾಧನೆಗೆ ನನ್ನನ್ನು ರೂಮ್ ಮೇಟ್ ಆಗಿ ಪಡೆದುದು ಮೊದಲ ಹೆಜ್ಜೆಯಾಗಿತ್ತು. ಇನ್ನು ಮುಂದಿನ ಮಾರ್ಗದರ್ಶನ ನನ್ನ ಜವಾಬ್ದಾರಿಯಾಗಿತ್ತು! ಆ ಜವಾಬ್ದಾರಿಯನ್ನು ನಾನು ಹೇಗೆ ನಿರ್ವಹಿಸಬೇಕೆಂದು ನಾನೇ ತೀರ್ಮಾನ ಮಾಡಬೇಕಿತ್ತು!

ನಾನು ನಂಜುಂಡಸ್ವಾಮಿಯ ಗುರಿ ಸಾಧನೆಗೆ ಮಾರ್ಗದರ್ಶನ ನೀಡಲು ಒಪ್ಪಕೊಂಡುಬಿಟ್ಟೆ. ಅಷ್ಟರಲ್ಲೇ ಉಳಿದ ವಿದ್ಯಾರ್ಥಿಗಳು ನನ್ನೊಡನೆ ತಮ್ಮ ಪರಿಚಯ ಮಾಡಿಕೊಳ್ಳಲು ಕಾಯುತ್ತಿರುವುದು ನನ್ನ ಕಣ್ಣಿಗೆ ಬಿತ್ತು. ಬೇರೆ ಬೇರೆ ಊರಿನಿಂದ ಬಂದಿದ್ದ ಆ ವಿದ್ಯಾರ್ಥಿಗಳ ಬಳಗ ಶೃಂಗೇರಿ ಕಾಲೇಜಿಗೆ ಸೇರಿ ಸಾಧನೆ ಮಾಡಬೇಕೆಂದು ತುಂಬಾ ಆಸಕ್ತಿ ಹೊಂದಿದ್ದರು. ಅವರೆಲ್ಲಾ ತುಂಬಾ ಉತ್ಸಾಹದಿಂದಿರುವುದು ನೋಡಿ ನನಗೆ ತುಂಬಾ ಸಂತೋಷವಾಯಿತು. ಹಾಸ್ಟೆಲಿನಲ್ಲಿ ವಿದ್ಯಾಭ್ಯಾಸಕ್ಕೆ ತುಂಬಾ ಅನುಕೂಲವಾದ ವಾತಾವರಣ ಇದ್ದುದನ್ನು ನಾನು ನೋಡಿದೆ. ಮಲ್ಲಿಕಾ ಮಂದಿರದ ಆಡಳಿತ ವರ್ಗ ಹಾಸ್ಟೆಲಿನ ಊಟ ಮತ್ತು ತಿಂಡಿಗಳ  ಗುಣಮಟ್ಟ ಮತ್ತು ರುಚಿ ತುಂಬಾ ಶ್ರೇಷ್ಠವಾಗಿರುವಂತೆ ನೋಡಿಕೊಳ್ಳುತ್ತಿತ್ತು. ಉಪನ್ಯಾಸಕರಲ್ಲಿ ಹೆಚ್ಚು ಮಂದಿ ಹಾಸ್ಟೆಲಿನಲ್ಲೇ ಊಟ ಮತ್ತು ತಿಂಡಿ ತೆಗೆದುಕೊಳ್ಳುತ್ತಿದ್ದರು. ಒಟ್ಟಿನಲ್ಲಿ ನನ್ನ ಸಮಸ್ಯೆಗಳೆಲ್ಲಾ ಬಗೆಹರಿದು ನಾನಿನ್ನು ನನ್ನ  ಬಿ. ಎಸ್ ಸಿ ಮೊದಲ ವರ್ಷದ ತರಗತಿಗಳ ಕಡೆಗೆ ಗಮನ ಹರಿಸಬಹುದೆಂದು ನನಗನ್ನಿಸಿತು.

------- ಮುಂದುವರಿಯುವುದು-----


Wednesday, May 20, 2020

ಬಾಲ್ಯ ಕಾಲದ ನೆನಪುಗಳು – ೮೮

ಎರಡನೇ ವರ್ಷಕ್ಕೆ ಕಾಲಿರಿಸಿದ್ದ ನಮ್ಮ ಕಾಲೇಜಿನ ವಾತಾವರಣ ಸಂಪೂರ್ಣವಾಗಿ ಬದಲಾಗಿ ಹೋಗಿತ್ತು. ಒಮ್ಮೆಲೇ ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿ ಆಗುವುದರ ಜೊತೆಗೆ ಉಪನ್ಯಾಸಕರ  ಸಂಖ್ಯೆಯೂ ಜಾಸ್ತಿಯಾಗಿತ್ತು. ಅಲ್ಲದೇ ಬಿಎಸ್.ಸಿ , ಬಿ.ಎ  ಮತ್ತು ಬಿ. ಕಾಂ ಪದವಿಗಳಿಗೆ ಮೊದಲ ವರ್ಷದ ವಿದ್ಯಾರ್ಥಿಗಳು ಸೇರಿದ್ದರಿಂದ ಒಟ್ಟು ಸಂಖ್ಯಾ ಬಲ ಹೆಚ್ಚಾಗುವುದರ ಜೊತೆಗೆ ಉಪನ್ಯಾಸಕರ ಸಂಖ್ಯೆಯೂ ಜಾಸ್ತಿ ಆಗಲೇ ಬೇಕಿತ್ತು. ಒಟ್ಟಿನಲ್ಲಿ ಚಟುವಟಿಕೆಗಳು ಒಮ್ಮೆಗೆ ಜಾಸ್ತಿಯಾಗಿ ಬಿಟ್ಟಿದ್ದವು. ಕಾಲೇಜಿನ ಆಡಳಿತ ವರ್ಗ ಹೊರ ಊರುಗಳಿಂದ ಬಂದ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ಸೌಲಭ್ಯವನ್ನು ಒದಗಿಸಲೂ ತೀರ್ಮಾನ ಮಾಡಿತ್ತು. ಈ ಸೌಲಭ್ಯ ಹೊಸದಾಗಿ ಕಾಲೇಜು ಪ್ರವೇಶ ಮಾಡಿದ್ದ ಚಿಕ್ಕಮಗಳೂರು, ಬೀರೂರು ಮತ್ತು ಕಡೂರಿನ ವಿದ್ಯಾರ್ಥಿಗಳಿಗೆ ಅತ್ಯಾವಶ್ಯಕವಾಗಿತ್ತು. ಆಡಳಿತ ವರ್ಗ ಮತ್ತು ಉಪನ್ಯಾಸಕರುಗಳು ತುಂಬಾ ಉತ್ಸಾಹದಿಂದಿದ್ದರೆ ಪ್ರಿನ್ಸಿಪಾಲರು ಕೂಡ ಅಷ್ಟೇ ಉತ್ಸಾಹದಿಂದ ಆಡಳಿತವನ್ನು ತುಂಬಾ ಬಿಗಿಗೊಳಿಸಿಬಿಟ್ಟಿದ್ದರು.

ನಮ್ಮ ಪದವಿ ತರಗತಿಗಳು ಪ್ರಾರಂಭವಾಗುವ ಸಮಯ ಬಂದು ಬಿಟ್ಟಿತ್ತು. ಆದರೆ ಅಕ್ಯಾಡೆಮಿಯವರಿಂದ ನನ್ನ ಕಾಲೇಜು ಫೀ ಮತ್ತು ಹಾಸ್ಟೆಲ್ ಫೀ ಯಾವಾಗ ಮತ್ತು ಹೇಗೆ ಪಾವತಿಮಾಡುವರೆಂಬ ಸಮಾಚಾರವೇ ಬಂದಿರಲಿಲ್ಲ. ನನಗೆ ಯಾವುದೇ ತರಗತಿಗಳಿಂದ ತಪ್ಪಿಸಿ ಕೊಳ್ಳುವುದು ಇಷ್ಟವಿರಲಿಲ್ಲ. ಆದ್ದರಿಂದ ನಾನು ಮೊದಲ ದಿನವೇ ಶೃಂಗೇರಿ ತಲುಪಿ ತರಗತಿಗಳಿಗೆ ಹಾಜರಾದೆ. ಕಾಲೇಜು ಹಾಸ್ಟೆಲ್ ಹಿಂದಿನ ದಿನವೇ ತೆರೆಯಲಾಗಿತ್ತೆಂದು ನನಗೆ ತಿಳಿಯಿತು. ಅಲ್ಲದೇ ಪೇಟೆಯಲ್ಲಿ ಅತ್ತ್ಯುತ್ತಮ ಹೋಟೆಲ್ ಆಗಿದ್ದ ಮಲ್ಲಿಕಾ ಮಂದಿರದ ಮಾಲೀಕರೇ ಹಾಸ್ಟೆಲಿನ ಊಟ ಮತ್ತು ತಿಂಡಿ ವ್ಯವಸ್ಥೆ ಮಾಡುವರೆಂದೂ ಗೊತ್ತಾಯಿತು. ಹಾಸ್ಟೆಲಿಗೆ ಸೇರಲು ತುಂಬಾ ಉತ್ಸಾಹಿತನಾಗಿದ್ದ ನಾನು ಪ್ರಿನ್ಸಿಪಾಲರಿಂದ ಯಾವಾಗ ಕರೆ ಬರುವುದೆಂದು ಕಾಯುತ್ತಿದ್ದೆ. ತಾತ್ಕಾಲಿಕವಾಗಿ ನನಗೊಂದು ತಂಗುವ ಮತ್ತು ಊಟ ತಿಂಡಿ ಮಾಡುವ ವ್ಯವಸ್ಥೆ ನಾನು ಮಾಡಿಕೊಳ್ಳ ಬೇಕಾಯಿತು.

ನಾನು ಪ್ರತಿನಿತ್ಯ ಕಾಲೇಜು ಆಫೀಸಿಗೆ ಹೋಗಿ ಪ್ರಿನ್ಸಿಪಾಲರನ್ನು ಭೇಟಿಮಾಡತೊಡಗಿದೆ. ಒಂದು ದಿನ ಬೆಳಿಗ್ಗೆ ಅವರು ನನಗೆ ಅಕ್ಯಾಡೆಮಿಯಿಂದ ಚೆಕ್ ಬಂದಿರುವುದಾಗಿಯೂ ಮತ್ತು ನಾನು ಕೆಲವು ಕಾಗದ ಪತ್ರಗಳನ್ನು ಸಹಿ ಮಾಡಬೇಕೆಂದೂ ಹೇಳಿದರು. ನಾನು ಚೆಕ್ಕಿನಲ್ಲಿ ಕೇವಲ ನನ್ನ ಕಾಲೇಜು ಫೀ ಆಗುವಷ್ಟು ಹಣ ಮಾತ್ರ ಬರೆದಿದುದನ್ನು ನೋಡಿದೆ. ಅಲ್ಲದೇ ಪ್ರಿನ್ಸಿಪಾಲರ ವರ್ತನೆಯಲ್ಲೂ ನನಗೆ ಬದಲಾವಣೆಗಳು ಕಾಣಿಸಿ ಏನೋ ಸರಿಯಿಲ್ಲವೆಂದು ಸಂಶಯ ಬಂತು. ನಾನು ಹಾಸ್ಟೆಲ್ ಫೀ ಬಗ್ಗೆ ಕೇಳಿದಾಗ ಅವರು ಸರಿಯಾದ ಉತ್ತರ ಕೊಡಲಿಲ್ಲ. ನಮ್ಮ ತಂದೆಯವರಿಂದ ಸಹಿ ಮಾಡಿಸಿಕೊಂಡು ಬರಬೇಕೆಂದು ಹೇಳಿ ಒಂದು ಡಾಕ್ಯುಮೆಂಟನ್ನು ನನ್ನ ಕೈಗಿತ್ತರು.

ಪ್ರಿನ್ಸಿಪಾಲರ ವಿಚಿತ್ರ ವರ್ತನೆಯಿಂದ ನಾನು ಸ್ವಲ್ಪ ಕಂಗಾಲಾಗಿಬಿಟ್ಟೆ. ಆದರೆ ಅವರು ಕೊಟ್ಟ ಡಾಕ್ಯುಮೆಂಟನ್ನು ನೋಡಿದ ಮೇಲೆ ನನಗೆ ದೊಡ್ಡ ಆಘಾತವೇ ಆಯಿತು. ಏಕೆಂದರೆ ಅದೊಂದು ಪ್ರಾಮಿಸರಿ ನೋಟ್ ಆಗಿತ್ತು ಮತ್ತು ಅದರಲ್ಲಿ ಕಾಲೇಜು ಫೀ ಆಗುವಷ್ಟು ಹಣವನ್ನು ಬರೆಯಲಾಗಿತ್ತು. ಸಾಲ  ಕೊಡುವವರು ಸಾಲಗಾರರಿಂದ ಪ್ರಾಮಿಸರಿ ನೋಟ್ ಸಹಿ ಮಾಡಿಸಿಕೊಳ್ಳುವರೆಂದು ನನಗೆ ಗೊತ್ತಿತ್ತು. ನಾನು ಪುನಃ ಪ್ರಿನ್ಸಿಪಾಲರ  ಹತ್ತಿರ ಹೋಗಿ ಆ ಡಾಕ್ಯುಮೆಂಟ್ ಬಗ್ಗೆ ಸ್ಪಷ್ಟೀಕರಣ ಕೇಳಿದೆ. ಅದಕ್ಕೆ ಅವರು ಅಕ್ಯಾಡೆಮಿಯವರು ನನಗೆ ಕೊಟ್ಟ ಹಣಕ್ಕೆ ತೆಗೆದುಕೊಳ್ಳುತ್ತಿರುವ ರಸೀದಿ ಅದೆಂದು ಹೇಳಿದರು!

ಆದರೆ ನಾನು ಅವರಿಗೆ ಅದರಲ್ಲಿ ಬರೆದುದನ್ನು ಓದಿದರೆ ಅದೊಂದು ರಸೀದಿ ಅಲ್ಲವೆಂದೂ ಮತ್ತು ಹಣವನ್ನು ಹಿಂತಿರುಗಿಸುವುದಾಗಿ ಬರೆದ ಪ್ರಾಮಿಸರಿ ನೋಟ್ ಎಂದೂ ಸ್ಪಷ್ಟವಾಗಿ ಗೊತ್ತಾಗುವುದೆಂದು ಹೇಳಿದೆ. ಅಲ್ಲದೇ ನಾನು ಹಿಂದೆ ಸ್ಕಾಲರ್ಷಿಪ್ ಹಣಕ್ಕಾಗಿ ಸಹಿ ಮಾಡಿದಾಗ ರಸೀದಿ ಹೇಗಿರುವುದೆಂದು ನೋಡಿರುವುದಾಗಿ ತಿಳಿಸಿದೆ. ನಾನು ಈ ಹಿಂದೆ ಎಷ್ಟೋ ಬಾರಿ ನನ್ನ ಜನರಲ್ ನಾಲೆಜ್ ಬಗ್ಗೆ ಮೇಷ್ಟ್ರುಗಳಿಂದ ಹೊಗಳಿಸಿ ಕೊಂಡಿದ್ದೆ. ಆದರೆ ಈ ಸಂದರ್ಭದಲ್ಲಿ ಪ್ರಿನ್ಸಿಪಾಲರ ಸಿಟ್ಟು ನೆತ್ತಿಗೇರಿ ಬಿಟ್ಟಿತು. ಅವರು ನನಗೆ ಸುಮ್ಮನೆ ಅಧಿಕ ಪ್ರಸಂಗ ಮಾಡದೇ ಡಾಕ್ಯುಮೆಂಟನ್ನು ತಂದೆಯವರಿಂದ ಸಹಿ ಮಾಡಿಸಿಕೊಂಡು ಬರಬೇಕೆಂದೂ ಮತ್ತು ನನ್ನ ಹಿತದೃಷ್ಟಿಯಿಂದಲೇ ಅವರು ನನಗೆ ಮಾರ್ಗದರ್ಶನ ನೀಡುತ್ತಿರುವುದಾಗಿ ತಿಳಿಸಿದರು.

ನಾನು ಡಾಕ್ಯುಮೆಂಟ್ ಬಗ್ಗೆ ಬೇರೆ ಹಿರಿಯರನ್ನು ಕೇಳಿದಾಗ ಅವರು ನಾನು ಭಾವಿಸಿದಂತೆಯೇ ಅದೊಂದು ಸಾಲಗಾರರಿಂದ ಸಹಿ ತೆಗೆದುಕೊಳ್ಳುವ ಪ್ರಾಮಿಸರಿ ನೋಟ್ ಹೌದೆಂದು ಹೇಳಿದರು. ಆದರೆ ಅವರ ಪ್ರಕಾರ ಅಕ್ಯಾಡೆಮಿಯವರು ಎಂದೂ ನನ್ನಿಂದ ಹಣವನ್ನು ವಾಪಾಸ್ ಕೇಳುವ ಪ್ರಶ್ನೆ ಇಲ್ಲವೆಂದು ತಿಳಿದು ಬಂತು. ಆದ್ದರಿಂದ ನಾನು ತಂದೆಯವರ ಸಹಿ ಪಡೆದು ಡಾಕ್ಯುಮೆಂಟ್ ಪ್ರಿನ್ಸಿಪಾಲರಿಗೆ ಕೊಟ್ಟುಬಿಟ್ಟೆ. ಕಾಲೇಜ್ ಆಫೀಸಿನವರು ಚೆಕ್ಕಿನ ಹಿಂದೆ ನನ್ನ ಸಹಿ ಪಡೆದು ನನಗೆ ವಾರ್ಷಿಕ ಫೀ ಪೂರ್ತಿ ಪಾವತಿಯಾಯಿತೆಂದು ರಶೀದಿ ಕೊಟ್ಟುಬಿಟ್ಟರು.

ನನಗೆ ಯಾವಾಗಲೂ ಲೋನ್ ಅಥವಾ ಸಾಲ ಎಂಬ ಪದದ ಬಗ್ಗೆ ಒಂದು ರೀತಿಯ ಅಲರ್ಜಿ ಇತ್ತು. ನಮ್ಮ ತಂದೆಯವರು ಎಷ್ಟೋ ಬಾರಿ ಅಮ್ಮನ ಆಭರಣಗಳನ್ನು  ಅಡವಿಟ್ಟು ಬ್ಯಾಂಕಿನಿಂದ ಸಾಲ ತೆಗೆಯುತ್ತಿದ್ದರು. ಆದರೆ ಸಾಲ ತೀರಿಸಲಾಗದೇ ಎಷ್ಟೋ ಆಭರಣಗಳು ಹರಾಜಾಗಿದ್ದವು. ಆದ್ದರಿಂದ ನಾನು ಮಾತ್ರ ಎಂದೂ ಸಾಲ ತೆಗೆಯುವುದಿಲ್ಲವೆಂದು ಮನಸ್ಸಿನಲ್ಲೇ ಪ್ರತಿಜ್ಞೆ ಮಾಡಿಬಿಟ್ಟಿದ್ದೆ. ಹಾಗಾಗಿ ನನಗೆ ಪಿ. ಯು. ಸಿ  ಓದುವಾಗ  ಕೇಂದ್ರ ಸರ್ಕಾರದ ಬಡ್ಡಿ ಇಲ್ಲದ ಸಾಲ ದೊರೆಯುತ್ತಿದ್ದರೂ ನಾನದನ್ನು ತೆಗೆದುಕೊಂಡಿರಲಿಲ್ಲ. ಮುಂದೆ ಒಂದು ದಿನ ನಾನು ನೌಕರಿಗೆ ಸೇರಿದಾಗ ಸಾಲದ ಹೊರೆಯೊಂದು ನನ್ನ ಮೇಲಿರುವುದು ನನಗೆ ಸ್ವಲ್ಪವೂ ಇಷ್ಟವಿರಲಿಲ್ಲ.

ಈ ದೃಷ್ಟಿಯಿಂದ ನೋಡಿದಾಗ ಅಕ್ಯಾಡೆಮಿಯವರು ನನ್ನ ತಂದೆಯವರಿಂದ ಪ್ರಾಮಿಸರಿ ನೋಟ್  ಮೇಲೆ ಸಹಿ ಪಡೆದುದು ನನ್ನ ಮನಸ್ಸಿನಲ್ಲಿ ತುಂಬಾ ಕಸಿವಿಸಿ ಉಂಟು ಮಾಡಿತ್ತು. ನಾನು ನನ್ನ ಓದುಗರಿಗೆ ಇಲ್ಲಿ ತಿಳಿಸ ಬಯಸುವುದೇನೆಂದರೆ ಮುಂದೆ ಒಂದು ಕಾಲಕ್ಕೆ ನನ್ನ ಅನುಮಾನಗಳೆಲ್ಲಾ ನಿಜವಾಗಿ ಬಿಟ್ಟವು. ಆಗ ನಮ್ಮ ತಂದೆಯವರು ಸಹಿ ಮಾಡಿದ ಡಾಕ್ಯುಮೆಂಟ್ ಕೇವಲ  ರಶೀದಿ ಎಂದು ಹೇಳಿದ ನಮ್ಮ ಪ್ರಿನ್ಸಿಪಾಲ್  ರಾಮಕೃಷ್ಣರಾಯರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಹಿಂದೂ ಫಿಲಾಸಫಿ ಬೋಧನೆ ಮಾಡುತ್ತಿದ್ದರು. ಆಗ ಅವರ ಹತ್ತಿರ ಮಾತನಾಡಿ ಏನೂ ಉಪಯೋಗವಿರಲಿಲ್ಲ.

ನಾನು ಮುಂದಿನ ಬಾರಿ ನಾನು ಪ್ರಿನ್ಸಿಪಾಲರನ್ನು ಭೇಟಿಯಾದಾಗನನ್ನ ವಿಚಾರವಾಗಿ  ಅವರ ವರ್ತನೆ ಇದ್ದಕ್ಕಿದ್ದಂತೆ ಬದಲಾವಣೆಯಾಗಲು ಕಾರಣವೇನೆಂದು ಗೊತ್ತಾಗಿ ಹೋಯಿತು. ಅವರು ನನ್ನ ಹತ್ತಿರ ಹಿಂದೆ ನನ್ನ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು (ನನ್ನ ಬಟ್ಟೆ ಖರ್ಚು ಬಿಟ್ಟು) ಅಕ್ಯಾಡೆಮಿಯವರು ಭರಿಸುವುದಾಗಿ ಹೇಳಿದ್ದರಷ್ಟೇ. ಆದರೆ ಅಕ್ಯಾಡೆಮಿಯವರ ದೃಷ್ಟಿಯಲ್ಲಿ ಸಂಪೂರ್ಣ ವೆಚ್ಚವೆಂದರೆ ಕೇವಲ ಕಾಲೇಜು ಫೀ ಆಗಿತ್ತು. ಅಷ್ಟೇ. ಈಗ ಅದು ತಿಳಿದ ಮೇಲೆ ನನಗೆ ಆ ವಿಷಯ ತಿಳಿಸಲು ಅವರಿಗೆ ತುಂಬಾ ಮುಜುಗರವಾಗಿತ್ತು. ಅದರ ಪರಿಹಾರಾರ್ಥವಾಗಿ ಅವರು ನನ್ನ ಮುಂದೆ ಹೊಸ ಸಲಹೆಯೊಂದನ್ನಿಟ್ಟರು. ಅದರ ಪ್ರಕಾರ ನಾನು ವಾರದಲ್ಲಿ ಒಂದು ದಿನ ಅವರ ಮನೆಯಲ್ಲೇ ಊಟ ಮಾಡಬಹುದಿತ್ತು. ಉಳಿದ ದಿನಗಳಲ್ಲಿ ಊಟ ಹಾಕಲು ನಾನು ಆ ವೇಳೆಗೆ ಶೃಂಗೇರಿಯಲ್ಲಿ ಕುಟುಂಬದೊಡನೆ ಇರುವ ಇತರ ಉಪನ್ಯಾಸಕರನ್ನು ಬೇಡಿಕೊಳ್ಳಬೇಕಿತ್ತು. ಅದಕ್ಕಾಗಿ ಆ ಕೂಡಲೇ ಉಪನ್ಯಾಸಕರ ಕೊಠಡಿಗೆ ಹೋಗಿ ಅವರನ್ನು ಕೇಳಿಕೊಳ್ಳುವಂತೆ ಒತ್ತಾಯ ಮಾಡಿ ಬಿಟ್ಟರು ಕೂಡ.

ನಾನು ಮಾತು ಮುಂದುವರಿಸದೇ ಪ್ರಿನ್ಸಿಪಾಲರ ಕೊಠಡಿಯಿಂದ ಒಮ್ಮೆಗೆ ಹೊರಬಂದು ಬಿಟ್ಟೆ. ನನ್ನ ಪರಿಸ್ಥಿತಿ ನಾನು Rank ಪಡೆಯುವುದಕ್ಕಿಂತ ಮೊದಲಿದ್ದ ಸ್ಥಿತಿಗೇ ವಾಪಾಸ್ ಬಂದಂತಾಗಿತ್ತು. ಇಲ್ಲ. ಹಾಗಲ್ಲ. ಅದಕ್ಕಿಂತಲೂ ತುಂಬಾ ಕೆಟ್ಟದ್ದಾಗಿತ್ತು! ಏಕೆಂದರೆ ನಾನು ಶಿವಮೊಗ್ಗೆಯ ಹಾಸ್ಟೆಲಿನಲ್ಲಿ ಫ್ರೀ ಸೀಟ್ ಇದ್ದರೂ ಉಳಿದ ಖರ್ಚುಗಳಿಗಾಗಿ ಪರರನ್ನು ಬೇಡಲಿಚ್ಛಿಸದೇ ಅಲ್ಲಿ ನನ್ನ ವಿಧ್ಯಾಭ್ಯಾಸವನ್ನು ನಿಲ್ಲಿಸಿಬಿಟ್ಟಿದ್ದೆ. ಕಳೆದ ವರ್ಷ ನನ್ನ ಸಂಪೂರ್ಣ ಕಾಲೇಜು ಫೀ ಶಂಕರರಾಯರು ಕಟ್ಟಿದ್ದರು. ನನ್ನ ಈಗಿನ ಸ್ಥಿತಿ ಹೇಗಿತ್ತೆಂದರೆ ಶಂಕರರಾಯರ ಬದಲಿಗೆ ಅಕ್ಯಾಡೆಮಿಯವರು ನನ್ನ ಪೂರ್ತಿ ಫೀ ಕಟ್ಟಿದ್ದರು. ಶಂಕರರಾಯರಿಗೆ ನಾನು ಹಣ ಹಿಂತಿರುಗಿಸುವ ಪ್ರಶ್ನೆ ಇರಲಿಲ್ಲ. ಆದರೆ ಅಕ್ಯಾಡೆಮಿಯವರು ನನ್ನ ತಂದೆಯವರಿಂದ ಪ್ರಾಮಿಸರಿ ನೋಟ್  ಮೇಲೆ ಸಹಿ ಪಡೆದಿದ್ದರು. ಒಟ್ಟಿನಲ್ಲಿ ನಾನು ಕಾಲೇಜಿನ ಪ್ರಥಮ ವರ್ಷದಲ್ಲಿ Rank ಪಡೆದು ಅಕ್ಯಾಡೆಮಿಯವರ ಸಾಲಗಾರನಾಗಿ ಬಿಟ್ಟಿದ್ದೆ! ಅಷ್ಟು ಮಾತ್ರವಲ್ಲ. ಪ್ರಿನ್ಸಿಪಾಲರು ನನ್ನನ್ನು ಉಪನ್ಯಾಸಕರ ಹತ್ತಿರ ಕಳಿಸಿ ಅವರ ಮನೆಯಲ್ಲಿ ಊಟ ಹಾಕುವಂತೆ ಬೇಡಿಕೊಳ್ಳಲು ಒತ್ತಾಯ ಮಾಡುತ್ತಿದ್ದರು. ಅವರ ಈ ಸಲಹೆ ಕೇಳಿ ನನ್ನ ಮೈ ಎಲ್ಲಾ  ಉರಿದು ಹೋಯಿತು. ನಾನು ಯಾರೊಡನೆಯೂ ಏನನ್ನೂ ಬೇಡಿಕೊಳ್ಳಲು ತಯಾರಿರಲಿಲ್ಲ.

------- ಮುಂದುವರಿಯುವುದು-----


Monday, May 18, 2020

ಬಾಲ್ಯ ಕಾಲದ ನೆನಪುಗಳು – ೮೭

ಎಷ್ಟೋ ವರ್ಷಗಳ ಹಿಂದೆ  ನಮ್ಮ ಮನೆಯಲ್ಲೂ ಒಂದು ಅಲರಾಂ ಗಡಿಯಾರ ಇತ್ತು. ಅದು ಒಮ್ಮೆ ಕೆಟ್ಟು ಹೋದಾಗ ಕೊಪ್ಪದಲ್ಲಿ ಒಂದು ಅಂಗಡಿಗೆ ರಿಪೇರಿ ಮಾಡಲು ಕೊಡಲಾಗಿತ್ತು. ಆದರೆ ಆ ಅಂಗಡಿಯವನು ಪ್ರತಿ ವಾರ ನಮ್ಮ ತಂದೆ ಸಂತೆಗೆ ಹೋದಾಗ ವಿಚಾರಿಸಿದರೆ ಮುಂದಿನ ವಾರ ಗ್ಯಾರಂಟಿಯಾಗಿ ಕೊಡುವುದಾಗಿ ಹೇಳುತ್ತಲೇ ಇದ್ದ. ಆದರೆ ಆ ಮುಂದಿನ ವಾರ ಎಂದೂ ಬರಲೇ ಇಲ್ಲ! ಹಾಗಾಗಿ ನಮ್ಮ ತಂದೆಯವರು ಅದರ ತಂಟೆಗೇ ಹೋಗದೇ ಕೈ ಬಿಟ್ಟುಬಿಟ್ಟರು. ಹೊಸದೊಂದು ಗಡಿಯಾರವನ್ನು ಕೊಳ್ಳುವಷ್ಟು ಹಣ ಇಲ್ಲದೇ ಹೋದ ಕಾರಣ ನಾವು ಮಾಮೂಲಿನಂತೆ ಸೂರ್ಯನ ಬಿಸಿಲು ಅಂಗಳದಲ್ಲಿ ಎಲ್ಲಿಯವರೆಗೆ ಪಸರಿಸಿದೆ ಎಂಬ ಆಧಾರದ ಮೇಲೆ ವೇಳೆ ಎಷ್ಟೆಂದು ಕಂಡುಕೊಳ್ಳತೊಡಗಿದೆವು.

ಶಂಕರರಾಯರಿಂದ ನನಗೆ ಒಂದು ವಿಷಯ ತಿಳಿದು ಬಂದಿತ್ತು. ಅವರು ಹಿಂದಿನ ವರ್ಷ ನನ್ನ ಕಾಲೇಜು ಫೀ ೩೫೦ ರೂಪಾಯಿ ಕಟ್ಟಿದ ವಿಷಯ ಹೇಳಿದಾಗ ಪುರದಮನೆ ಶ್ರೀನಿವಾಸಯ್ಯನವರು ಅವರಿಗೆ ೧೦೦ ರುಪಾಯಿ ಮತ್ತು ಭುವನಕೋಟೆ ವೆಂಕಪ್ಪಯ್ಯನವರು ೫೦ ರುಪಾಯಿ ಅವರ ಕೊಡುಗೆಯಾಗಿ ನೀಡಿದ್ದರಂತೆ.  ಆದರೆ ಅವರಿಬ್ಬರೂ ಈ ವಿಷಯ ನನಗಾಗಲೀ ನನ್ನ ತಂದೆಯವರಿಗಾಗಲೀ ತಿಳಿಸಿರಲಿಲ್ಲ. ಹಾಗಾಗಿ ಅವೆರಡೂ ನನ್ನ ವಿದ್ಯಾಭ್ಯಾಸಕ್ಕೆ ಅವರು ನೀಡಿದ ಅಜ್ಞಾತ ಕೊಡುಗೆಯಾಗಿತ್ತು! ಶ್ರೀನಿವಾಸಯ್ಯನವರು ನಾನು Rank ಪಡೆದ ವಿಷಯ ತಿಳಿದು ತುಂಬಾ ಸಂತೋಷ ವ್ಯಕ್ತಪಡಿಸಿದರು. ಹಾಗೆಯೇ ನನಗೆ ಬಹುಮಾನವಾಗಿ ದೊರೆತ ಗಡಿಯಾರಕ್ಕೆ ಒಂದು ಸುಂದರವಾದ ತೇಗದ ಮರದ ಪೆಟ್ಟಿಗೆ ಮಾಡಿಸಿಕೊಟ್ಟರು. ಮಿತ್ರವೃಂದದವರು ಕೊಟ್ಟ ಗಡಿಯಾರ ಎಷ್ಟೋ ವರ್ಷ ನಮ್ಮ ಮನೆಯ ಒಳಗಿನ ಗೋಡೆಯಲ್ಲಿ ಆ ಪೆಟ್ಟಿಗೆಯೊಳಗೆ ರಾರಾಜಿಸುತ್ತಿತ್ತು. ಹಾಗೆಯೇ ನಮಗೆ ಖಚಿತವಾಗಿ ಸಮಯವೆಷ್ಟೆಂದು ಸೂಚಿಸುತ್ತಲೇ ಇತ್ತು.

ನಮ್ಮ ಪುಟ್ಟಣ್ಣನೂ ಪಿ. ಯು.ಸಿ ಪಾಸಾಗಿ ಆ ವರ್ಷ ಬೆಂಗಳೂರಿನ ಎಂ.ಇ.ಎಸ್ ಕಾಲೇಜಿನಲ್ಲಿ ಬಿ. ಕಾಂ. ತರಗತಿಗೆ ಸೇರುವನಿದ್ದ. ಹಂಚಿನಮನೆ ಸುಬ್ರಹ್ಮಣ್ಯನಿಂದ ಇನ್ನು ಯಾವ ಸಹಾಯ ಸಿಗುವ ಪ್ರಶ್ನೆಯೇ ಇರಲಿಲ್ಲ. ಆದ್ದರಿಂದ ಅವನಿಗೆ ನಮ್ಮ ತಂದೆಯವರಿಂದ ಆರ್ಥಿಕ ಸಹಾಯ ಅತ್ಯಗತ್ಯವಾಗಿತ್ತು. ಈಗಾಗಲೇ ನನ್ನ ಮೆಸ್ ಚಾರ್ಜ್ ತಿಂಗಳಿಗೆ ೩೦ ರೂಪಾಯಿ  ನಮ್ಮ ತಂದೆಯವರಿಗೆ ದೊಡ್ಡ ಹೊರೆಯೇ ಆಗಿತ್ತು. ಆದ್ದರಿಂದ ಅವರಿಗೆ ಆ ಹೊರೆಯನ್ನು ತಪ್ಪಿಸುವುದು ನನ್ನ ಮುಖ್ಯ ಉದ್ದೇಶವಾಗಿತ್ತು. ನಾನು ಕಾಲೇಜಿನ ಮೊದಲ ವರ್ಷವೇ Rank ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದರಿಂದ ಕಾಲೇಜು ಆಡಳಿತ ವರ್ಗ ಅಥವಾ ಮಣಿಪಾಲ್ ಅಕ್ಯಾಡೆಮಿಯವರು ಈ ಖರ್ಚನ್ನು ವಹಿಸಿಕೊಳ್ಳುವಂತೆ ಮಾಡುವುದು ನನ್ನ ಗುರಿಯಾಗಿತ್ತು.  ಆದರೆ ನಾನು ನಮ್ಮ ಕಾಲೇಜಿನಲ್ಲೇ ಓದು ಮುಂದುವರಿಸಿದರೆ ಮಾತ್ರ ಆ ಸಾಧ್ಯತೆ ಇತ್ತು.

ತಲವಾನೆ ಶ್ರೀನಿವಾಸ್ ಅವರಿಂದ ನನಗೊಂದು ಅಭಿನಂದನಾ ಪತ್ರ 

ಆಗ ನವದೆಹಲಿಯಲ್ಲಿದ್ದ ಡಾಕ್ಟರ್ ತಲವಾನೆ ಶ್ರೀನಿವಾಸ್ ಅವರಿಂದ ನನಗೊಂದು ಅಭಿನಂದನಾ ಪತ್ರ  ಬಂತು. ನನಗೆ ಶಿವಮೊಗ್ಗೆಯ ಹಾಸ್ಟೆಲಿನಲ್ಲಿ ಫ್ರೀ ಸೀಟ್ ದೊರಯಲು ಅವರು ಸಹಾಯ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ನನ್ನ ಮುಂದಿನ ವಿದ್ಯಾಭ್ಯಾಸದ ಕೆರಿಯರ್ ತುಂಬಾ ಎಚ್ಚರಿಕೆಯಿಂದ ಆಯ್ಕೆ ಮಾಡಬೇಕೆಂದು ಅವರು ಸೂಚಿಸಿದ್ದರು. ನನಗೆ ಅದೊಂದು ಕಷ್ಟಕರವಾದ ತೀರ್ಮಾನವೇ ಆಗಿತ್ತು. ಏಕೆಂದರೆ ಆ ಬಗ್ಗೆ ನನಗೆ ಮಾರ್ಗದರ್ಶನ ನೀಡುವರು ಯಾರೂ ಇರಲೇ ಇಲ್ಲ. ನಾನು Rank ಗಳಿಸಿದ್ದೇನೋ ನಿಜ. ಆದರೆ ನನ್ನ ಮುಂದಿನ ಗುರಿ ಏನೆಂದು ನನಗೇ ಗೊತ್ತಿರಲಿಲ್ಲ. ಕೆಲವರು ನನಗೆ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಓದಲು ಸೂಚಿಸಿದರೆ ಇನ್ನು ಕೆಲವರು ಕೆ.ಆರ್.ಇ.ಸಿ ಸುರತ್ಕಲ್ಲಿನಲ್ಲಿ ಇಂಜಿನಿಯರಿಂಗ್  ಓದುವಂತೆ ಸಲಹೆ ಮಾಡಿದರು. ಆ ಕಾಲದಲ್ಲಿ Rank ಪಡೆದ ವಿದ್ಯಾರ್ಥಿಗಳು ಈ ಎರಡು ಕೋರ್ಸುಗಳಲ್ಲಿ ಒಂದನ್ನು ಆಯ್ಕೆ ಮಾಡುವುದು ಮಾಮೂಲಾಗಿತ್ತು. ನನ್ನಂತೆ ಮ್ಯಾಥೆಮ್ಯಾಟಿಕ್ಸ್ ಸಬ್ಜೆಕ್ಟಿನಲ್ಲಿ ೧೦೦ಕ್ಕೆ ೧೦೦ ಅಂಕಗಳಿಸಿದ್ದ ಪ್ರಕಾಶ್ ಕಾಮತ್ ಸುರತ್ಕಲ್ಲಿನಲ್ಲಿ ಇಂಜಿನಿಯರಿಂಗ್  ಓದಲು ತೀರ್ಮಾನಿಸಿದ್ದ. ಪ್ರಕಾಶನ ತಂದೆಯವರು ಆ ಬಗ್ಗೆ ಎಲ್ಲ ವಿವರಗಳನ್ನು ಕೊಟ್ಟು ನನ್ನನ್ನೂ ಅಲ್ಲಿಯೇ ಓದುವಂತೆ  ಹೇಳಿದರು. ಆದರೆ ನನಗೆ ಆರ್ಥಿಕವಾಗಿ ಅದು ಸಾಧ್ಯವೇ ಎಂಬ ಪ್ರಶ್ನೆಗೆ ಯಾವ ಉತ್ತರವಿರಲಿಲ್ಲ. ಆಗ ತಾನೇ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬಿ.ಎಸ್ ಸಿ (ಆನರ್ಸ್) ತರಗತಿಗಳನ್ನು ಪ್ರಾರಂಭ ಮಾಡುವರಿದ್ದರು. ನನಗೆ ಅದರಲ್ಲಿ ತುಂಬಾ ಆಸಕ್ತಿ ಇತ್ತು. ಆದರೆ ನಾನಿದ್ದ ಆರ್ಥಿಕ ಪರಿಸ್ಥಿತಿಯಲ್ಲಿ ಅದು ಕೇವಲ ಕನಸಾಗಿತ್ತು. ಅಷ್ಟೇ.

ನಾಲ್ಕನೇ Rank ಪಡೆದ ನನಗೆ ಪಿ. ಯು.ಸಿ ಪರೀಕ್ಷೆಯಲ್ಲಿ ಬಂದ ಅಂಕಗಳು ಕೆಳ  ಕಂಡಂತಿದ್ದವು:

Subject

Maximum Marks

Marks Secured

English

100

69

Sanskrit

100

71

Physics

100

82

Chemistry

100

88

Mathematics

100

100

 

ಆಗಿನ ಕಾಲದಲ್ಲಿ ಮ್ಯಾಥಮ್ಯಾಟಿಕ್ಸ್ ಬಿಟ್ಟರೆ ಬೇರೆ ಯಾವ ಸಬ್ಜೆಕ್ಟಿನಲ್ಲೂ ೯೦ರ ಮೇಲೆ ಅಂಕಗಳನ್ನು ತೆಗೆಯುವ ಪ್ರಶ್ನೆ ಇರಲಿಲ್ಲ. ಹಾಗೆಯೇ ಲ್ಯಾಂಗ್ವೇಜ್ ಸಬ್ಜೆಕ್ಟುಗಳಿಗೆ ೭೦ರ ಮೇಲೆ ಅಂಕಗಳನ್ನು ನೀಡುತ್ತಿರಲಿಲ್ಲ.

ಆ ವರ್ಷ ಕಾಲೇಜಿಗೆ ಸೇರಲು ಅರ್ಜಿ ಹಾಕಿದ್ದ ವಿದ್ಯಾರ್ಥಿಗಳಿಗೆ ಸಂದರ್ಶನ!

ಈ ಬಗೆಯ ಅನಿಶ್ಚಿತ ಸ್ಥಿತಿಯಲ್ಲಿ ನಾನು ಪ್ರಿನ್ಸಿಪಾಲ್ ರಾಮಕೃಷ್ಣರಾಯರನ್ನು ಭೇಟಿಯಾಗಲು ಹೋದೆ. ಆದರೆ ಅವರೆಷ್ಟು ಬ್ಯುಸಿ ಆಗಿದ್ದರೆಂದರೆ ನನ್ನ ಕಣ್ಣುಗಳನ್ನು ನಾನೇ ನಂಬಲಾಗಲಿಲ್ಲ. ಏಕೆಂದರೆ ಅವರು ಆ ಸಮಯದಲ್ಲಿ ಆ ವರ್ಷ ಕಾಲೇಜಿಗೆ ಸೇರಲು ಅರ್ಜಿ ಹಾಕಿದ್ದ ವಿದ್ಯಾರ್ಥಿಗಳಿಗೆ ಸಂದರ್ಶನ ಮಾಡುತ್ತಿದ್ದರು! ಆ ಸಂದರ್ಶನಕ್ಕಾಗಿ ವಿದ್ಯಾರ್ಥಿಗಳ ಒಂದು ದೊಡ್ಡ ಸಾಲೇ ನಿಂತು ಬಿಟ್ಟಿತ್ತು! ಹಿಂದಿನ ವರ್ಷ ಇದೇ ಕಾಲೇಜಿನಲ್ಲಿ ಓದಲು ವಿದ್ಯಾರ್ಥಿಗಳನ್ನು ಹುಡುಕುತ್ತಿದ್ದರೆ ಈ ವರ್ಷ ಸೇರಲು ಬಯಸಿದ ವಿದ್ಯಾರ್ಥಿಗಳಿಗೆ ಪ್ರಿನ್ಸಿಪಾಲರು ಸಂದರ್ಶನ ಮಾಡುವಂತಾಗಿತ್ತು! ನಮ್ಮ ಕಾಲೇಜಿನ ಮೊದಲ ವರ್ಷವೇ ಒಬ್ಬ ವಿದ್ಯಾರ್ಥಿ Rank ಪಡೆದ ಸಮಾಚಾರ ಎಲ್ಲೆಡೆ ಹಬ್ಬಿ ಪ್ರವೇಶಕ್ಕಾಗಿ ಚಿಕ್ಕಮಗಳೂರು, ಕಡೂರು, ಬೀರೂರು, ಕೊಪ್ಪ ಮತ್ತು ನರಸಿಂಹರಾಜಪುರ ಇತ್ಯಾದಿ ಊರುಗಳಿಂದ ವಿದ್ಯಾರ್ಥಿಗಳು ನಮ್ಮ ಕಾಲೇಜಿಗೆ ಸೇರಲು ಅರ್ಜಿ ಹಾಕಿ ಸಂದರ್ಶನಕ್ಕೆ ಬಂದಿದ್ದರು. ನನ್ನೆದುರಿನಲ್ಲೇ ಪ್ರಿನ್ಸಿಪಾಲರು ಯಾವುದೋ ಕಾರಣಕ್ಕಾಗಿ ಇಬ್ಬರು ವಿದ್ಯಾರ್ಥಿಗಳಿಗೆ ಸೀಟ್ ನಿರಾಕರಿಸಿದುದನ್ನೂ ನಾನು ನೋಡಿದೆ! ಒಟ್ಟಿನಲ್ಲಿ ನನ್ನ ಮೊದಲ ವರ್ಷವೇ Rank ಗಳಿಸಿಬಿಟ್ಟ ಸಾಧನೆ ಕಾಲೇಜಿನ ಕೀರ್ತಿಯನ್ನು ಮೇಲೇರಿಸಿ ಬಿಟ್ಟಿತ್ತು. ಪ್ರಿನ್ಸಿಪಾಲರು ಕೂಡ ಅದನ್ನು ಒಪ್ಪಿಕೊಂಡರು.

ಶ್ರೀಕಂಠಯ್ಯನವರಿಂದ ಅವರ ಮನೆಯಲ್ಲೇ ಇರಲು ಅಹ್ವಾನ

ನಾನು ನನ್ನ ಮುಂದಿನ ಕೆರಿಯರ್ ಆರಿಸಲು ಉಂಟಾಗಿದ್ದ ಅನಿಶ್ಚತೆಯನ್ನು ಪ್ರಿನ್ಸಿಪಾಲರಿಗೆ ವಿವರಿಸಿದೆ. ಹಾಗೆಯೇ ನಾನು ಪ್ರಾಯಶಃ ನಮ್ಮ ಕಾಲೇಜಿನಲ್ಲೇ ಓದು ಮುಂದುವರಿಸುವ ತೀರ್ಮಾನ ಮಾಡಬೇಕಾಗಬಹುದೆಂದೂ ತಿಳಿಸಿದೆ. ಪ್ರಿನ್ಸಿಪಾಲರು ಹಾಗಿದ್ದಲ್ಲಿ ಅವರು ಅಕ್ಯಾಡೆಮಿಯವರೊಡನೆ ಅವರಿಂದ ನನಗೆ ಯಾವ ರೀತಿಯಲ್ಲಿ ಸಹಾಯ ದೊರೆಯುವುದೆಂದು ವಿಚಾರಿಸಿ ತಿಳಿಸುವುದಾಗಿ ಹೇಳಿದರು. ಅವರಿಗೆ ಡಾಕ್ಟರ್ ಟಿ. ಎಂ. ಏ. ಪೈ ಅವರೊಂದಿಗೆ ತುಂಬಾ ಒಳ್ಳೆಯ ಸಂಬಂಧವಿತ್ತು. ನಾನು ಆಮೇಲೆ ನಮ್ಮ ಪುಟ್ಟಣ್ಣನ ಕ್ಲಾಸ್ ಮೇಟ್ ಆದ ಜಯಪ್ರಕಾಶನ ಮನೆಗೆ ಹೋದೆ. ಅವನೂ ಉತ್ತಮ ಅಂಕಗಳನ್ನು ಪಡೆದು ಮೆಡಿಕಲ್ ಕಾಲೇಜಿಗೆ ಸೇರಲು ಕಾಯುತ್ತಿದ್ದ. ಆಗ ಮನೆಯಲ್ಲೇ ಇದ್ದ ಪ್ರಕಾಶನ ತಂದೆ ಹಳೇಮನೆ ಶ್ರೀಕಂಠಯ್ಯನವರು ನಾನು ಮೆಸ್ ಚಾರ್ಜ್ ಪಾವತಿ ಮಾಡಲು ಒದ್ದಾಡುತ್ತಿರುವ ವಿಷಯ ಕೇಳಿ ನಾನು ಅವರ ಮನೆಯಲ್ಲೇ ಇರಬಹುದೆಂದೂ, ಹಾಗೆ ಮಾಡಿದರೆ ಆ ಖರ್ಚು ಇರುವುದಿಲ್ಲವೆಂದೂ ಹೇಳಿದರು. ಆದರೆ ಆಗ ನಾನು ಅವರ ಆ ಸಲಹೆಯತ್ತ ಗಮನ ಕೊಡಲಿಲ್ಲ.

ನನ್ನ ಫೋಟೋ ಪೇಪರಿನಲ್ಲಿ ಬರುವುದೆಂದು ಕಾಯುತ್ತಿದ್ದ ನನ್ನ ಅಣ್ಣನಿಗೆ ನಿರಾಶೆ

ಇಂಡಿಯನ್ ಎಕ್ಸ್ ಪ್ರೆಸ್ ಮತ್ತು ಕನ್ನಡ ಪ್ರಭ ಏಜೆಂಟ್ ಆಗಿದ್ದ ಎನ್ ಎಸ್ ಚಂದ್ರಶೇಖರ್  ಅವರು ನನ್ನ ಛಾಯಾಚಿತ್ರವನ್ನು ಪತ್ರಿಕೆಗಳಲ್ಲಿ ಹಾಕಲು ಬಯಸಿ ನನ್ನ ಹತ್ತಿರ ಒಂದು ಫೋಟೋ ಕೊಡುವಂತೆ ಹೇಳಿದರು. ಆದರೆ ನನ್ನ ಹತ್ತಿರ ನಾನೊಬ್ಬನೇ ತೆಗೆಸಿದ್ದ ಯಾವುದೇ ಫೋಟೋ ಇರಲಿಲ್ಲ. ಆ ಕಾಲದಲ್ಲಿ ಶೃಂಗೇರಿಯಲ್ಲಿ ಯಾವುದೇ  ಸ್ಟುಡಿಯೋ ಇರಲಿಲ್ಲ. ಕೊಪ್ಪದಲ್ಲಿ ಥಾಮ್ಸನ್ ಎಂಬ ಸ್ಟುಡಿಯೋ ಇತ್ತು. ಆದರೆ ತೆಗೆದ ಫೋಟೋ ಕೂಡಲೇ ಸಿಗುತ್ತಿರಲಿಲ್ಲ. ಒಟ್ಟಿನಲ್ಲಿ ನನ್ನ ಫೋಟೋ ಪೇಪರಿನಲ್ಲಿ ಬರಲೇ ಇಲ್ಲ. ನನ್ನ ಫೋಟೋ ಪೇಪರಿನಲ್ಲಿ ಬರುವುದೆಂದು ಶಿವಮೊಗ್ಗದಲ್ಲಿ ಕಾಯುತ್ತಿದ್ದ ನನ್ನ ಅಣ್ಣನಿಗೆ ತುಂಬಾ ನಿರಾಶೆ ಆಯಿತಂತೆ.

ಅಂತಿಮ ಬಿ.ಎಸ್ ಸಿ. ಪರೀಕ್ಷೆಯಲ್ಲಿ ಕೂಡ Rank ಪಡೆಯುವೆನೆಂಬ ನಿರೀಕ್ಷೆ ಒಂದು ದೊಡ್ಡ  ಹೊರೆಯಾಗಲಿತ್ತು

ನಾನು ಅಂತಿಮವಾಗಿ ನಮ್ಮ ಕಾಲೇಜಿನಲ್ಲೇ ಬಿ.ಎಸ್ ಸಿ. ತರಗತಿಗೆ ಸೇರುವ ತೀರ್ಮಾನ ಮಾಡಿಬಿಟ್ಟೆ. ಮುಂದೆ ಫಿಸಿಕ್ಸ್ ಸಬ್ಜೆಕ್ಟಿನಲ್ಲಿ ಎಂ.ಎಸ್ ಸಿ. ಮಾಡುವುದು ನನ್ನ ಗುರಿಯಾಗಿತ್ತು. ಶಂಕರರಾಯರಿಗೂ ನನ್ನ ತೀರ್ಮಾನವನ್ನು ತಿಳಿಸಿದೆ. ಅವರು ಹಿಂದಿನ ವರ್ಷದಂತೆ ನನ್ನ ಕಾಲೇಜು ಫೀ ಕಟ್ಟಲು ಸಹಾಯ ಮಾಡುವುದಾಗಿ ಹೇಳಿದರು. ಆದರೆ ನನಗೊಂದು ಸಮಸ್ಯೆ ಎದುರಾಯಿತು. ನಾನು ಫಿಸಿಕ್ಸ್ ಮತ್ತು ಮ್ಯಾಥಮ್ಯಾಟಿಕ್ಸ್ ಮೇಜರ್ ಸಬ್ಜೆಕ್ಟುಗಳಾಗಿ ತೆಗೆದುಕೊಳ್ಳಬೇಕೆಂದಿದ್ದೆ. ಆದರೆ ಅಕ್ಯಾಡೆಮಿಯವರು ನಮ್ಮ ಕಾಲೇಜಿನಲ್ಲಿ ಕೇವಲ ಫಿಸಿಕ್ಸ್ ಮತ್ತು ಕೆಮಿಸ್ಟ್ರಿ ಮೇಜರ್ ಸಬ್ಜೆಕ್ಟುಗಳಾಗಿ ಮತ್ತು ಮ್ಯಾಥಮ್ಯಾಟಿಕ್ಸ್ ಮೈನರ್ ಸಬ್ಜೆಕ್ಟ್ ಆಗಿ ಇಟ್ಟುಬಿಟ್ಟಿದ್ದರು. ನನಗೆ ಕೆಮಿಸ್ಟ್ರಿಯಲ್ಲಿ ಅಷ್ಟು ಆಸಕ್ತಿ ಇರಲಿಲ್ಲ. ಅಲ್ಲದೇ ಮ್ಯಾಥಮ್ಯಾಟಿಕ್ಸ್ ಸಬ್ಜೆಕ್ಟಿನಲ್ಲಿ ಮಾತ್ರ ೪೦೦ಕ್ಕೆ ೪೦೦ ಅಂಕ ಪಡೆಯುವ ಅವಕಾಶವಿತ್ತು. ಆದರೆ ಕೆಮಿಸ್ಟ್ರಿಯಲ್ಲಿ ಎಷ್ಟು ಚೆನ್ನಾಗಿ ಉತ್ತರ ಬರೆದರೂ ೪೦೦ಕ್ಕೆ ೩೦೦ ಅಂಕಗಳನ್ನು ಕೂಡ ಆ ಕಾಲದಲ್ಲಿ ಕೊಡುತ್ತಿರಲಿಲ್ಲ. ಆದ್ದರಿಂದ ಕೆಮಿಸ್ಟ್ರಿ ಮೇಜರ್ ಆಗಿ ತೆಗೆದುಕೊಂಡ ವಿದ್ಯಾರ್ಥಿ ಮೈನರ್ ಮ್ಯಾಥಮ್ಯಾಟಿಕ್ಸ್ ಸಬ್ಜೆಕ್ಟಿನಲ್ಲಿ ೨೦೦ಕ್ಕೆ ೨೦೦ ಅಂಕಗಳನ್ನು ತೆಗೆದರೂ ಅಂತಿಮ ಬಿ.ಎಸ್ ಸಿ. ಪರೀಕ್ಷೆಯಲ್ಲಿ Rank ತೆಗೆದುಕೊಳ್ಳುವ ಸಾಧ್ಯತೆಯೇ ಇರಲಿಲ್ಲ. ಆದರೆ ನಾನಾಗಲೇ ಪಿ. ಯು. ಸಿ. ಪರೀಕ್ಷೆಯಲ್ಲಿ Rank ಪಡೆದಿದ್ದುದರಿಂದ ನನ್ನ ಗುರುಗಳೂ ಮತ್ತು ಹಿತೈಷಿಗಳು ನಾನು ಅಂತಿಮ ಬಿ.ಎಸ್ ಸಿ. ಪರೀಕ್ಷೆಯಲ್ಲಿ ಕೂಡ Rank ಪಡೆಯುವೆನೆಂದು ಖಂಡಿತವಾಗಿ ನಿರೀಕ್ಷೆ ಮಾಡುತ್ತಿದ್ದರು. ಆದರೆ ಅದು ಸಾಧ್ಯವಿಲ್ಲವೆಂದು ಹೇಳಿದರೆ ಅವರಲ್ಲಿ ಯಾರೂ ಒಪ್ಪುವ ಸಾಧ್ಯತೆಯೇ ಇರಲಿಲ್ಲ. ಈ ನಿರೀಕ್ಷೆ ಮುಂದೆ ನನಗೆ ದೊಡ್ಡ ಹೊರೆಯಾಗಲಿತ್ತು.

ಅಕ್ಯಾಡೆಮಿಯವರ ಔದಾರ್ಯ

ನಾನು ಮುಂದಿನ ವಾರ ಪುನಃ ಪ್ರಿನ್ಸಿಪಾಲರನ್ನು ಭೇಟಿಯಾಗಲು ಹೋದಾಗ ಅವರು ನಾನು ಬರುವುದನ್ನೇ ಕಾಯುತ್ತಿದ್ದರು. ಅವರು ತುಂಬಾ ಉತ್ಸಾಹದಿಂದ ಇನ್ನು ಮುಂದೆ ನನ್ನ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು ಅಕ್ಯಾಡೆಮಿಯೇ ಕೊಡುವುದಾಗಿ ಹೇಳಿಬಿಟ್ಟರು! ಆದರೆ ಅದರಲ್ಲಿ ಒಂದೇ ಒಂದು ಷರತ್ತು ಇತ್ತು. ಅದೇನೆಂದರೆ ನಾನು ನನ್ನ ವಿದ್ಯಾಭ್ಯಾಸ ಮುಗಿದ ನಂತರ ಅಕ್ಯಾಡೆಮಿಯ ಯಾವುದಾದರೂ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡಬೇಕಿತ್ತು. ನಿರುದ್ಯೋಗ ತುಂಬಾ ಹೆಚ್ಚಾಗಿದ್ದ ಆ ಕಾಲದಲ್ಲಿ ಈ ಷರತ್ತು ಒಂದು ವರವೇ ಆಗಿತ್ತು. ಏಕೆಂದರೆ ಅಕ್ಯಾಡೆಮಿಯಲ್ಲಿ ನನ್ನ ನೌಕರಿ ಗ್ಯಾರಂಟಿಯಾಗಿತ್ತು. ಪ್ರಿನ್ಸಿಪಾಲರು ಹೇಳಿದ ಸಮಾಚಾರ ತಿಳಿದು ನನ್ನ ಆನಂದಕ್ಕೆ ಮಿತಿಯೇ ಇರಲಿಲ್ಲ. ಏಕೆಂದರೆ ಅಕ್ಯಾಡೆಮಿಯವರ ಈ ಔದಾರ್ಯ ನನ್ನ ವಿದ್ಯಾಭ್ಯಾಸದ ಹೊರೆಯನ್ನು ನನ್ನ  ತಂದೆ ತಾಯಿಯವರಿಂದ ಸಂಪೂರ್ಣವಾಗಿ ದೂರಮಾಡಲಿತ್ತು. ಅಕ್ಯಾಡೆಮಿಯವರು ನನ್ನ ಸಾಧನೆಗೆ ಸೂಕ್ತ ಬಹುಮಾನ ನೀಡಿಬಿಡುವರೆಂದು ನಾನು ತಿಳಿದೆ . ಆದರೂ ನನ್ನ ಮನಸ್ಸಿನಲ್ಲಿ ಕೆಲವು ಅನುಮಾನಗಳು ಬಂದವು. ನಾನು ಅವುಗಳಿಗೆ ಸೂಕ್ತ ಉತ್ತರವನ್ನು ಅಕ್ಯಾಡೆಮಿಯವರಿಂದ ಪಡೆದುಕೊಳ್ಳುವಂತೆ ಪ್ರಿನ್ಸಿಪಾಲರನ್ನು ಕೇಳಿಕೊಂಡೆ:

೧. ಅಕ್ಯಾಡೆಮಿಯ ಕಾಲೇಜುಗಳಲ್ಲಿ ಸ್ನಾತಕೋತ್ತರ ತರಗತಿಗಳಿಲ್ಲವಾದ್ದರಿಂದ ನಾನು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅಭ್ಯಾಸ ಮಾಡಿದರೂ ನನಗೆ ನೀಡುವ ನೆರವು ಮುಂದುವರಿಯುವುದೇ?

೨. ಅಕ್ಯಾಡೆಮಿಯವರು ನೀಡುವ ನೆರವಿನಲ್ಲಿ ನನ್ನ ಹಾಸ್ಟೆಲ್ ಫೀ ಕೂಡ ಸೇರಿರುವುದೇ?

ಆಮೇಲೆ ಸ್ವಲ್ಪ ದಿನಗಳಲ್ಲೇ ಪ್ರಿನ್ಸಿಪಾಲರು ನನ್ನನ್ನು ಕರೆದು ಅಕ್ಯಾಡೆಮಿಯ ನೆರವಿನಲ್ಲಿ ನನ್ನ ಹಾಸ್ಟೆಲ್ ಫೀ ಕೂಡ ಸೇರಿದೆಯೆಂದು ಹೇಳಿಬಿಟ್ಟರು. ಅವರ ಪ್ರಕಾರ ನಾನು ಕೇವಲ ನನ್ನ ಬಟ್ಟೆಗಳಿಗಾಗಿ ಮಾತ್ರ ವೆಚ್ಚ ಮಾಡಬೇಕಾಗಿತ್ತು! ಅಲ್ಲದೇ ಅಕ್ಯಾಡೆಮಿಯ ನೆರವು ನಾನು ಯಾವುದೇ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದರೂ ನನ್ನ ಸಂಪೂರ್ಣ ವಿದ್ಯಾರ್ಥಿ ಜೀವನ ಕೊನೆಗೊಳ್ಳುವವರೆಗೂ ದೊರೆಯಲಿತ್ತು.

ನಾನು ನನ್ನ ತಂದೆ ತಾಯಿಯವರಿಗೆ ಅಕ್ಯಾಡೆಮಿಯವರು ನನ್ನ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಹೇಳಿದಾಗ ಅವರಿಗೆ ತುಂಬಾ ಆನಂದವಾಯಿತು. ನನ್ನ ಹಿತೈಷಿಗಳು ಅದರಲ್ಲೂ ಮುಖ್ಯವಾಗಿ ಶಂಕರರಾಯರು ಇದಕ್ಕಿಂತಲೂ ಉತ್ತಮ ನೆರವು ಯಾರಿಂದಲೂ ದೊರೆಯಲು ಸಾಧ್ಯವಿಲ್ಲವೆಂದು ಹೇಳಿ ಬಿಟ್ಟರು. ಏಕೆಂದರೆ ವಿದ್ಯಾಭ್ಯಾಸಕ್ಕೆ ನೆರವಿನೊಂದಿಗೆ ನಂತರದ ನೌಕರಿಯನ್ನೂ ಅಕ್ಯಾಡೆಮಿ ನೀಡಲಿತ್ತು. ಅಕ್ಯಾಡೆಮಿಯು ನನ್ನ ಸಾಧನೆಗೆ ತುಂಬಾ ಉನ್ನತ ಮಟ್ಟದ ನೆರವನ್ನೇ ನೀಡಲಿತ್ತು. ಇದಕ್ಕಿಂತ ಹೆಚ್ಚೇನನ್ನು ನಾನು ಬಯಸುವ ಪ್ರಶ್ನೆಯೇ ಇರಲಿಲ್ಲ. ನನ್ನ ಸಕಲ ಸಂಕಟಗಳೂ ಒಮ್ಮೆಗೇ ಕೊನೆಗೊಂಡಂತೆ ನನಗನ್ನಿಸಿತು. ಆದರೆ ಅದು ನಿಜವಾಯಿತೇ?

------- ಮುಂದುವರಿಯುವುದು-----


Saturday, May 16, 2020

ಬಾಲ್ಯ ಕಾಲದ ನೆನಪುಗಳು – ೮೬



ನಾನು ಪ್ರತಿ ವರ್ಷದ ಬೇಸಿಗೆ ರಜೆಯಲ್ಲಿ ನಮ್ಮ ಮನೆಯ ಮಳೆಗಾಲದ ಕೆಲಸಗಳೆಲ್ಲಾ ಮುಗಿದ ಮೇಲೆ ನನ್ನ ಅಕ್ಕಂದಿರಿಬ್ಬರ ಊರಾದ ಹೊಕ್ಕಳಿಕೆಗೆ ಹೋಗಿ ಸ್ವಲ್ಪ ದಿನ ಇದ್ದು ಬರುತ್ತಿದ್ದೆ. ನಾನು ಹಿಂದೆ ಅದೇ ಊರಿನಲ್ಲೇ ಮೂರು ವರ್ಷ ಇದ್ದು ಬಸವಾನಿ ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದರಿಂದ ನನಗೆ ಅಲ್ಲಿ ಅನೇಕ ಸ್ನೇಹಿತರಿದ್ದರು. ನನ್ನ ಅಕ್ಕಂದಿರು ಕಡಿಮೆಯೆಂದರೆ ೧೦ ದಿನಗಳ ಮೊದಲು ನನಗೆ ವಾಪಾಸ್ ಊರಿಗೆ ಬರಲು ಬಿಡುತ್ತಿರಲಿಲ್ಲ.  ಈ ವರ್ಷವೂ ಮೇ ತಿಂಗಳ ಕೊನೆಯಲ್ಲಿ ನಾನು ಹೊಕ್ಕಳಿಕೆಯಲ್ಲಿಯೇ ಇದ್ದೆ. ನನ್ನ ಪರೀಕ್ಷಾ ಫಲಿತಾಂಶಗಳು ಸದ್ಯದಲ್ಲೇ ಬರಲಿದ್ದವು. 

ಆ ದಿನಗಳಲ್ಲಿ ಎಸ್.ಎಸ್.ಎಲ್.ಸಿ ಮತ್ತು ಆಮೇಲಿನ ಎಲ್ಲ ಪರೀಕ್ಷಾ ಫಲಿತಾಂಶಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು. ಪರೀಕ್ಷೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ರಿಜಿಸ್ಟ್ರೇಶನ್ ನಂಬರ್ ಗಳು ಫಸ್ಟ್ ಕ್ಲಾಸ್, ಸೆಕೆಂಡ್ ಕ್ಲಾಸ್ ಮತ್ತು ಥರ್ಡ್ ಕ್ಲಾಸ್ ಎಂಬ ಮೂರು ವರ್ಗೀಕರಣದಲ್ಲಿ ಪ್ರಕಟವಾಗುತ್ತಿದ್ದವು. ಯಾವುದೇ ವಿದ್ಯಾರ್ಥಿಯ ರಿಜಿಸ್ಟ್ರೇಶನ್ ನಂಬರ್ ಮೂರು ವರ್ಗದಲ್ಲೂ ಇರಲಿಲ್ಲವೆಂದರೆ ಅವನು ಅನುತ್ತೀರ್ಣ ಆಗಿದ್ದನೆಂದು ತಿಳಿಯುತ್ತಿತ್ತು. ಅದಲ್ಲದೇ ಮೊದಲ ಹತ್ತು Rank ಪಡೆದ ವಿದ್ಯಾರ್ಥಿಗಳ ಹೆಸರು ಮತ್ತು ರಿಜಿಸ್ಟ್ರೇಶನ್ ನಂಬರ್ ಸಾಮಾನ್ಯವಾಗಿ ಮೊದಲ ಪುಟದಲ್ಲಿಯೇ ಪ್ರಕಟವಾಗುತ್ತಿದ್ದವು.

Rank ಪಡೆದ ವಿದ್ಯಾರ್ಥಿಗಳ ಛಾಯಾಚಿತ್ರಗಳೂ ಸಾಮಾನ್ಯವಾಗಿ ಸ್ವಲ್ಪ ದಿನಗಳ ನಂತರ ಪ್ರಕಟವಾಗುತ್ತಿದ್ದವು. ನನ್ನ ಉಪನ್ಯಾಸಕರು ಮತ್ತು ಹಿತೈಷಿಗಳು (ಮುಖ್ಯವಾಗಿ ನನ್ನ ಪ್ರೀತಿಯ ಅಣ್ಣ)  ಒಂದಲ್ಲ ಒಂದು ದಿನ ನನ್ನ ಹೆಸರೂ ಕೂಡ Rank ಪಡೆದ ವಿದ್ಯಾರ್ಥಿಗಳ ಪಟ್ಟಿಯಲ್ಲಿ ಪ್ರಕಟವಾಗಿಯೇ ಬಿಡುವುದೆಂದು ಹೇಳುತ್ತಲೇ ಇದ್ದರು. ಆದರೆ ಸ್ವತಃ ನನಗೇ ಆ ರೀತಿ ನನ್ನ ಹೆಸರನ್ನು ದಿನಪತ್ರಿಕೆಯಲ್ಲಿ ನೋಡುವೆನೆಂಬ ನಂಬಿಕೆ ಇರಲಿಲ್ಲ. ಏಕೆಂದರೆ ನಾನೊಬ್ಬ ಹಳ್ಳಿ ಹುಡುಗ ಮತ್ತು ಪೇಟೆಯ ಹುಡುಗರಿಗೆ ಮಾತ್ರ ಅದು ಸಾಧ್ಯವೆಂದು ನಾನು ತಿಳಿದಿದ್ದೆ. ನಾನು ಹೊಕ್ಕಳಿಕೆಯಲ್ಲಿ ಪ್ರತಿ ದಿನವೂ ದಿನಪತ್ರಿಕೆಯಲ್ಲಿ ನಮ್ಮ ಪರೀಕ್ಷಾ ಫಲಿತಾಂಶ ಬಂದಿದೆಯೇ ಎಂದು ನೋಡುತ್ತಲೇ ಇದ್ದೆ. ಆಗ ದಿನಪತ್ರಿಕೆಗಳು ಸಂಜೆಯ ವೇಳೆಗೆ ಮನೆಗೆ ಬರುತ್ತಿದ್ದವು.

ಮರೆಯಲಾಗದ ದಿನ

ಆ ದಿನ ಇಂದಿಗೂ ನನಗೆ ಸ್ಪಷ್ಟವಾಗಿ ನೆನಪಿಗೆ ಬರುತ್ತಿದೆ. ಅದು ೧೯೬೬ನೇ ಇಸವಿಯ ಜೂನ್ ತಿಂಗಳ ಒಂದನೇ ತಾರೀಕು. ನಾನು ಮದ್ಯಾಹ್ನದ ಊಟ ಮುಗಿಸಿ ಗೌರಕ್ಕನ ಮನೆಯಿಂದ ಹೊರಟು ಎರಡು ಮೈಲಿ ದೂರ ನಡೆದು ಕೊಪ್ಪಕ್ಕೆ ಹೋಗುವ ಬಸ್ ಹತ್ತಲು ಗಡಿಕಲ್ ಎಂಬ ಊರಿಗೆ ಬಂದೆ. ಸುಮಾರು ಮೂರು ಗಂಟೆಯ ವೇಳೆಗೆ ನನಗೆ ದಿನಪತ್ರಿಕೆ ಏಜೆಂಟರಾದ ಗುಂಡಾ ನಾಯಕ್ ಎಂಬುವರ ಅಂಗಡಿಯಲ್ಲಿ ಅಂದಿನ ಪ್ರಜಾವಾಣಿ ಪತ್ರಿಕೆ ನೋಡಲು ಸಾಧ್ಯವಾಯಿತು. ನಮ್ಮ ಪರೀಕ್ಷಾ ಫಲಿತಾಂಶ ಪ್ರಕಟವಾಗಿರುವುದೂ ನನ್ನ ಗಮನಕ್ಕೆ ಬಂತು. ನಾನು ಬೇಗ ಬೇಗನೆ ನನ್ನ ರಿಜಿಸ್ಟ್ರೇಶನ್ ನಂಬರ್ (೮೬೭೫) ಪ್ರಥಮ ದರ್ಜೆಯಲ್ಲಿ ಪಾಸಾದ ವಿದ್ಯಾರ್ಥಿಗಳ ಪಟ್ಟಿಯಲ್ಲಿ ಇದೆಯೇ ಎಂದು ನೋಡಿದೆ. ಹೌದು. ನನ್ನ ನಂಬರ್ ಅಲ್ಲಿತ್ತು. ಆ ನಂತರ ನಾನು Rank ಪಡೆದ ವಿದ್ಯಾರ್ಥಿಗಳ ಪಟ್ಟಿಯನ್ನು ನೋಡತೊಡಗಿದೆ. ನಾನು ಮೊದಲ ಮೂರು Rank ಪಡೆದ ವಿದ್ಯಾರ್ಥಿಗಳ ಹೆಸರನ್ನು ನೋಡಿ ನಾಲ್ಕನೇ ಹೆಸರಿಗೆ ಬಂದೆ. ಒಹ್! ನನ್ನ ಕಣ್ಣುಗಳು ಅಲ್ಲಿಂದ ಮುಂದೆ ದೃಷ್ಟಿ ಹಾಯಿಸಲೇ ಇಲ್ಲ. ಅದು ಖಂಡಿತವಾಗಿಯೂ ಕನಸಾಗಿರಲಿಲ್ಲ. ಅದು ನನ್ನ ಹೆಸರೇ ಆಗಿತ್ತು!  ಹೌದು. ಹೆಸರು, ರಿಜಿಸ್ಟ್ರೇಶನ್ ನಂಬರ್ ಮತ್ತು ನಮ್ಮ ಕಾಲೇಜಿನ ಹೆಸರು ಎಲ್ಲವೂ ಸರಿಯಾಗೇ ಇತ್ತು.

ನಾನು ಆ ಸಮಯದಲ್ಲಿ ಅನುಭವಿಸಿದ ಸಂಭ್ರಮ ಮತ್ತು ಸಂತೋಷವನ್ನು ವರ್ಣಿಸಲು ನನಗೆ ಪದಗಳೇ ಸಿಗುತ್ತಿಲ್ಲ. ಅದು ನನ್ನ ಜೀವಮಾನದ ಅತ್ಯಂತ ಹರ್ಷದಾಯಕ ಕ್ಷಣವಾಗಿತ್ತೆಂದು ಇಂದಿಗೂ ಅನ್ನಿಸುತ್ತಿದೆ. ಆಮೇಲೆ ಕೂಡ ನನ್ನ ಜೀವನದಲ್ಲಿ ಎಷ್ಟೋ ಉಲ್ಲಾಸದ ಸಂಗತಿಗಳು ಜರುಗಿದ್ದವು. ಆದರೆ ಅವುಗಳು ಯಾವುವೂ ನನಗೆ ನನ್ನ ಹೆಸರನ್ನು ಮೊದಲ ಬಾರಿ ದಿನಪತ್ರಿಕೆಯ Rank ಪಟ್ಟಿಯಲ್ಲಿ ನೋಡಿದಷ್ಟು ಆನಂದವನ್ನು ಕೊಟ್ಟಿಲ್ಲ. ನನಗೆ ಬಂದ ಮೊಟ್ಟ ಮೊದಲ ಯೋಚನೆ ಎಂದರೆ ನನ್ನ ಆ ಅಪೂರ್ವ ಕ್ಷಣವನ್ನು ಅಣ್ಣನೊಡನೆ ಹಂಚಿಕೊಳ್ಳಬೇಕೆಂದು. ಆದರೆ ಆ ಕಾಲದಲ್ಲಿ ಟೆಲಿಫೋನ್ ಸಂಪರ್ಕ ಕೂಡ ಲಭ್ಯವಿರಲಿಲ್ಲ. ಅಣ್ಣ ಆಗ ಶಿವಮೊಗ್ಗೆಯಲ್ಲಿದ್ದರಿಂದ ಬೆಳಿಗ್ಗೆಯೇ ದಿನಪತ್ರಿಕೆಯಲ್ಲಿ ನನ್ನ ಹೆಸರು ನೋಡಿರಬೇಕು. ಆದರೆ ಅವನು ನನ್ನನ್ನು ಯಾವುದೇ ರೀತಿಯಲ್ಲಿ ಸಂಪರ್ಕ ಮಾಡುವ ಸಾಧ್ಯತೆ ಇರಲಿಲ್ಲ. ನಿಜ ಹೇಳಬೇಕೆಂದರೆ ನನ್ನ ಸಂತೋಷವನ್ನು ಹಂಚಿಕೊಳ್ಳಬಹುದಾದ ಯಾವುದೇ ವ್ಯಕ್ತಿ ಆಗ ನನ್ನ ಬಳಿ ಇರಲಿಲ್ಲ.

 ಜೈ! ಶ್ರೀಕೃಷ್ಣ!

ಆಗ ನನ್ನ ಮನಸ್ಸಿಗೆ ಬಂದ ಮೊದಲ ವಿಷಯವೆಂದರೆ ಹೇಗಾದರೂ ಮಾಡಿ ನಾನು ದಿನಪತ್ರಿಕೆಯ ಒಂದು ಪ್ರತಿಯನ್ನು ಪಡೆಯಲೇ ಬೇಕೆಂದು. ಆದರೆ ಏಜೆಂಟ್ ಗುಂಡಾ ನಾಯಕ್ ಅವರು ಕೇವಲ ಒಂದೇ ಪ್ರತಿ ಅವರ ಬಳಿ ಇರುವುದರಿಂದ ಅದನ್ನು ನನಗೆ ಕೊಡಲು ಸಾಧ್ಯವಿಲ್ಲವೆಂದು ನಿರಾಕರಿಸಿ ಬಿಟ್ಟರು. ನಾನು ನನ್ನ ಹೆಸರು ಪತ್ರಿಕೆಯಲ್ಲಿ ಬಂದಿರುವುದನ್ನು ತೋರಿಸಿದರೂ ಏನೂ ಪ್ರಯೋಜನವಾಗಲಿಲ್ಲ. ಆ ವೇಳೆಗೆ ಅಲ್ಲಿಗೆ ಬಂದ  ಕೊಪ್ಪ ಬಸ್ ಹತ್ತಿ ಅರ್ಧ ಗಂಟೆಯಲ್ಲಿ ನಾನು ಕೊಪ್ಪ ತಲುಪಿ ಬಿಟ್ಟೆ. ಅಲ್ಲಿನ ಬಸ್ ಸ್ಟ್ಯಾಂಡಿನಲ್ಲಿ ನನ್ನ ಕ್ಲಾಸ್ ಮೇಟ್ ಆಗಿದ್ದ ಶ್ರೀಕೃಷ್ಣ ಎನ್ನುವ ಹುಡುಗನನ್ನು ನೋಡಿದೆ. ನನ್ನ ಹೆಸರನ್ನು ಆಗಲೇ ದಿನಪತ್ರಿಕೆಯಲ್ಲಿ ನೋಡಿದ್ದ ಶ್ರೀಕೃಷ್ಣ ಪದೇ ಪದೇ ನನ್ನನ್ನು ಅಭಿನಂದಿಸ ತೊಡಗಿದ. ಅವನ ಪ್ರಕಾರ ನಾನು ನಮ್ಮ ಕಾಲೇಜಿಗೆ ದೊಡ್ಡ ಕೀರ್ತಿಯನ್ನು ತಂದು ಬಿಟ್ಟಿದ್ದೆ.

ನಾನು ಶ್ರೀಕೃಷ್ಣನಿಗೆ ನನಗೆ ದಿನಪತ್ರಿಕೆಯ ಒಂದೇ ಒಂದು ಪ್ರತಿಯೂ ದೊರೆಯದಿರುವ ಸಮಸ್ಯೆಯನ್ನು ಹೇಳಿದೆ. ಅವನು ನನ್ನನ್ನು ಪೇಟೆಯಲ್ಲಿದ್ದ ಎಷ್ಟೋ ಅಂಗಡಿಗಳಿಗೆ ಕರೆದುಕೊಂಡು ಹೋದ. ಆದರೆ ಅವರೆಲ್ಲರ ಹತ್ತಿರ ಒಂದೇ ಒಂದು ಪ್ರತಿ ಇದ್ದರಿಂದ ಅದನ್ನು ಕೊಡಲು ಸ್ಪಷ್ಟವಾಗಿ ನಿರಾಕರಿಸಿ ಬಿಟ್ಟರು. ಆ ದಿನಗಳಲ್ಲಿ ನಮ್ಮೂರಿನಲ್ಲಿ ಕೇವಲ ಬೆಳವಿನಕೊಡಿಗೆಗೆ ಒಂದು ದಿನ ಪತ್ರಿಕೆ ಬರುತ್ತಿತ್ತು. ಆದರೆ ಕೆಲವು ದಿನ ಅದರ ಪ್ರತಿಯೂ ಅಲ್ಲಿಗೆ ತಲುಪದೇ ಎಲ್ಲೋ ಕಳೆದು ಹೋಗುತ್ತಿತ್ತು. ಆದ್ದರಿಂದ ನನ್ನ ತಂದೆ ತಾಯಿಯರಿಗೆ ತೋರಿಸಲೂ ಒಂದು ಪ್ರತಿ ನನಗೆ ಸಿಗುವ ಗ್ಯಾರಂಟಿ ಇರಲಿಲ್ಲ. ನನಗೆ ಹೇಗಾದರೂ ಮಾಡಿ ಒಂದು ಪ್ರತಿಯನ್ನು ಪಡೆದುಕೊಳ್ಳುವುದು ತೀರಾ ಅವಶ್ಯವಾಗಿತ್ತು.

ಶ್ರೀಕೃಷ್ಣ ನನಗೆ ಬಸ್ ಸ್ಟ್ಯಾಂಡಿನಲ್ಲೇ ಇರುವಂತೆ ಹೇಳಿ ಹೊರಟು ಹೋದ. ಸ್ವಲ್ಪ ಸಮಯದ ನಂತರ ಹಿಂತಿರುಗಿದ ಅವನು ಪ್ರಜಾವಾಣಿಯ ಒಂದು ಪ್ರತಿಯನ್ನು ನನಗೆ ಕೊಟ್ಟುಬಿಟ್ಟ. ಅವನ ಪ್ರಕಾರ ಆ ಪ್ರತಿಯನ್ನು ಅವನು ಕದ್ದುಕೊಂಡು ಬಂದಿದ್ದನಂತೆ! ಯಾವುದೋ ಒಂದು ಅಂಗಡಿಯಲ್ಲಿ ಅಲ್ಲಿದ್ದ ಪತ್ರಿಕೆಯನ್ನು ಓದುತ್ತಿರುವಂತೆ ಮಾಡಿ ಮೆತ್ತಗೆ ಅದನ್ನು ಮಡಿಸಿ ಹಿಡಿದುಕೊಂಡು ಬಂದು ಬಿಟ್ಟನಂತೆ! ಆ ಪ್ರಜಾವಾಣಿಯ ಪ್ರತಿ ಇಂದಿಗೂ ನನ್ನ  ಬಳಿ ಇದೆ.  ಜೈ! ಶ್ರೀಕೃಷ್ಣ!

ನಮ್ಮ ಮನೆಯಲ್ಲೊಂದು ಹಬ್ಬದ ವಾತಾವರಣ

ನಾನು ಸಂಜೆಯ ವೇಳೆಗೆ ಮನೆ ತಲುಪಿದೆ. ಆಗ ನಮ್ಮ ಮನೆಯಲ್ಲೊಂದು ಹಬ್ಬದ ವಾತಾವರಣವಿತ್ತು. ಏಕೆಂದರೆ ಪುಟ್ಟಣ್ಣ ಮಧ್ಯಾಹ್ನದ ನಂತರ ಪೋಸ್ಟ್ ಆಫೀಸಿಗೆ ಹೋಗಿ ದಿನಪತ್ರಿಕೆ ಮನೆಗೆ ತಂದು ಬಿಟ್ಟಿದ್ದ.  ಅವನು ತುಂಬಾ  ಉತ್ಸಾಹದಿಂದ ಅಪ್ಪ ಮತ್ತು ಅಮ್ಮನಿಗೆ ನನ್ನ ಹೆಸರನ್ನು Rank ಪಟ್ಟಿಯಲ್ಲಿ ತೋರಿಸಿ ಬಿಟ್ಟಿದ್ದ. ವಿಚಿತ್ರವೆಂದರೆ ದಾರಿಯಲ್ಲಿ ಸಿಕ್ಕ ಕೆಲವರಿಗೆ ಅವನು ನಾನು Rank ಪಡೆದಿದ್ದೇನೆಂದು ಹೇಳಿದಾಗ ಅವರಿಗೆ ಏನೂ ಅರ್ಥವಾಗದೇ ಪಾಸ್ ಆಗಿರುವನಲ್ಲವೇ ಎಂದು ಪ್ರಶ್ನಿಸಿದ್ದರಂತೆ! ನನಗೆ ಖುಶಿ ನೀಡಿದ ಇನ್ನೊಂದು ವಿಷಯವೆಂದರೆ ನನ್ನ ಮೊಟ್ಟ ಮೊದಲ ಶಾಲೆಯ ಗುರುಗಳಾದ ಶ್ರೀಕಂಠ ಜೋಯಿಸರು ಆ ವೇಳೆಯಲ್ಲಿ ನಮ್ಮ ಮನೆಗೆ ಬಂದುದು. ಜೋಯಿಸರಿಗೆ ನನ್ನ ಹೆಸರನ್ನು ದಿನಪತ್ರಿಕೆಯಲ್ಲಿ ನೋಡಿ ತುಂಬಾ ಆನಂದವಾಗಿತ್ತು. ನನ್ನ ತಂದೆಯವರು ನನ್ನ ಸಾಧನೆಗೆ ಅಡಿಪಾಯ ಹಾಕಿದವರು ಜೋಯಿಸರೇ ಎಂದು ಹೇಳಿ ಅವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿಸಿದರು.  ಆ ದಿನ ನಮ್ಮ ಪಕ್ಕದ ಕಿಟ್ಟಜ್ಜಯ್ಯನ ಮನೆಯಲ್ಲಿ ಯಾವುದೋ ಸಮಾರಂಭವಿದ್ದರಿಂದ ನಾವು ಅಲ್ಲಿಯೇ ರಾತ್ರಿ ಊಟ ಮಾಡಿದೆವು. ಅಲ್ಲಿ ಸೇರಿದ್ದವರಿಗೆಲ್ಲಾ ಜೋಯಿಸರು ನಾನು Rank ಪಡೆದುದರ ಮಹತ್ವದ ಬಗ್ಗೆ ವಿವರಣೆ ನೀಡಿದರು. ಒಟ್ಟಿನಲ್ಲಿ ಆ ದಿನ ನನ್ನ ಜೀವನದ ಅತ್ಯಂತ ಸಂತೋಷದ ದಿನವಾಗಿತ್ತೆಂದು ಹೇಳಲೇ ಬೇಕು.

ಅಣ್ಣನಿಂದ ಪತ್ರ ಮತ್ತು ಅಭಿನಂದನೆ

ನನಗೆ ಆದಷ್ಟು ಬೇಗ ನನ್ನ ಕಾಲೇಜಿನ ಉಪನ್ಯಾಸಕರುಗಳನ್ನು ಭೇಟಿ ಮಾಡಿ ನನ್ನ ಸಂತೋಷವನ್ನು ಅವರೊಡನೆ ಹಂಚಿಕೊಳ್ಳಬೇಕೆಂಬ ಆಸೆಯಿತ್ತು. ಆದರೆ ಪ್ರಿನ್ಸಿಪಾಲರ ಹೊರತಾಗಿ ಉಳಿದವರೆಲ್ಲರೂ ಬೇಸಿಗೆ ರಜೆಯಲ್ಲಿ ಊರಿಗೆ ಹೋಗಿದ್ದರು. ಆದ್ದರಿಂದ ನಾನು ಮುಂದಿನ ಒಂದು ವಾರ  ಶೃಂಗೇರಿಗೆ ಹೋಗದೇ ಮನೆಯಲ್ಲೇ ಇದ್ದೆ. ಅಷ್ಟರಲ್ಲಿ ಶಿವಮೊಗ್ಗೆಯಿಂದ ನನ್ನ ಅಣ್ಣನ ಪತ್ರ ಬಂದು ಬಿಟ್ಟಿತ್ತು. ಅಣ್ಣನ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ಅವನ ಪ್ರಕಾರ ನಾನು ಅವನ ಕನಸನ್ನು ನನಸು ಮಾಡಿ ಬಿಟ್ಟಿದ್ದೆ!

ಶಂಕರರಾಯರಿಂದ ಅಭಿನಂದನೆ

ನಾನು ಕಾಲೇಜಿಗೆ ಹೋಗಿ ಓದಲು ಏಕೈಕ ಕಾರಣರಾಗಿದ್ದ ವಿಶ್ವನಾಥಪುರ ಶಂಕರರಾಯರನ್ನು ನಾನು ಅವರ ಮನೆಗೆ ಹೋಗಿ ಭೇಟಿಯಾದೆ. ಅವರು ನನ್ನನ್ನು ಪದೇ ಪದೇ ಅಭಿನಂದಿಸಿದರು. ನನ್ನ ಸಾಧನೆಯ ಬಗ್ಗೆ ಅವರಿಗೇ ತುಂಬಾ ಅಭಿನಂದನೆಗಳು ಬಂದಿದ್ದವಂತೆ. ಏಕೆಂದರೆ ಅವರೇ ನನ್ನನ್ನು ಕಾಲೇಜಿಗೆ ಸೇರಿಸಿದ್ದು ಎಂದು ತುಂಬಾ ಜನರಿಗೆ ಗೊತ್ತಿತ್ತು. ಆದರೆ ಅವರು ನನ್ನ ಸಾಧನೆಗೆ ನಾನೇ  ಕಾರಣ ಎಂದು ಸ್ಪಷ್ಟಪಡಿಸಿಬಿಟ್ಟರು. ಹಾಗೂ ಆದಷ್ಟು ಬೇಗ ಶೃಂಗೇರಿಗೆ ಹೋಗಿ ಪ್ರಿನ್ಸಿಪಾಲರನ್ನು ಭೇಟಿ ಮಾಡಬೇಕೆಂದು ಹೇಳಿದರು.

ಪತ್ತೆ ಇಲ್ಲದ Rank ವಿದ್ಯಾರ್ಥಿಗೆ ಬಹುಮಾನ!

ಶಂಕರರಾಯರು ಹೇಳಿದ ಪ್ರಕಾರ ನಾನು ಕಾಲೇಜಿನ ಮೊದಲ ವರ್ಷದಲ್ಲೇ Rank ಗಳಿಸಿದ್ದು ಕಾಲೇಜಿನ ಆಡಳಿತ ವರ್ಗಕ್ಕೆ ಮತ್ತು ಶೃಂಗೇರಿ ಪೇಟೆಯ ಜನಗಳಿಗೆ ತುಂಬಾ ಸಂತೋಷ  ತಂದಿತ್ತಂತೆ. ಮುಖ್ಯವಾಗಿ ಪ್ರಿನ್ಸಿಪಾಲರಿಗೆ ಮತ್ತು ಚಂದ್ರಮೌಳಿರಾಯರಿಗೆ ನಾನು ಕಾಲೇಜಿಗೆ ಪ್ರಥಮ ವರ್ಷದಲ್ಲೇ ಕೀರ್ತಿ ತಂದುಬಿಟ್ಟೆನೆಂದು ಹೆಮ್ಮೆ ಹಾಗೂ  ಅಭಿಮಾನ ಮೂಡಿಬಿಟ್ಟಿತ್ತಂತೆ. ಇಂಡಿಯನ್ ಎಕ್ಸ್ ಪ್ರೆಸ್ ಮತ್ತು ಕನ್ನಡ ಪ್ರಭ ಏಜೆಂಟ್ ಆಗಿದ್ದ ಎನ್ ಎಸ್ ಚಂದ್ರಶೇಖರ್  ಅವರು ನನ್ನ ಛಾಯಾಚಿತ್ರವನ್ನು  ಅವೆರಡು ದಿನಪತ್ರಿಕೆಗಳಲ್ಲಿ ಹಾಕಿಸಬೇಕೆಂದಿದ್ದರಂತೆ. ಆದರೆ ನನ್ನ ಛಾಯಾಚಿತ್ರ ಪಡೆಯುವ ಮೊದಲು ನಾನೆಲ್ಲಿರುವೆನೆಂದು ಅವರಿಗಾಗಲೀ ಅಥವಾ ನಮ್ಮ ಕಾಲೇಜಿನ ಪ್ರಿನ್ಸಿಪಾಲರಿಗಾಗಲೀ ಗೊತ್ತಾಗಲಿಲ್ಲವಂತೆ!  ಕಾಲೇಜಿನಲ್ಲಿದ್ದ ನನ್ನ ವಿಳಾಸ ಯಾವುದೇ ರೀತಿಯಲ್ಲಿ ಅವರ ಉಪಯೋಗಕ್ಕೆ ಬರಲಿಲ್ಲವಂತೆ. ಆ ದಿನಗಳಲ್ಲಿ ನಮ್ಮ ಹಳ್ಳಿಗಳಿಗೆ ಅಂಚೆ ಇಲಾಖೆಯ ಹೊರತಾಗಿ ಬೇರೆ ಯಾವುದೇ ಸಂಪರ್ಕ ಸಾಧನಗಳು ಇರಲಿಲ್ಲ. ಶೃಂಗೇರಿಯ ನಾಗರಿಕರು ಮಿತ್ರವೃಂದ ಎಂಬ ಸಂಘಟನೆಯ ಮೂಲಕ Rank ಪಡೆದುದಕ್ಕಾಗಿ ನನಗೊಂದು ಸನ್ಮಾನ ಸಮಾರಂಭವನ್ನು ಏರ್ಪಡಿಸಿದ್ದರಂತೆ. ನನ್ನ ಸಾಧನೆಯ ನೆನಪಿಗಾಗಿ ಒಂದು ಅಲರಾಂ ಗಡಿಯಾರವನ್ನು ಉಡುಗೊರೆಯಾಗಿ ಕೊಡಲು ತೀರ್ಮಾನಿಸಿದ್ದರಂತೆ. ನನ್ನ ಅನುಪಸ್ಥಿತಿಯಲ್ಲಿ ಅದನ್ನು ನಮ್ಮ ಪ್ರಿನಿಪಾಲ್ ರಾಮಕೃಷ್ಣರಾಯರ ವಶಕ್ಕೆ ಕೊಟ್ಟರಂತೆ.

ಶೃಂಗೇರಿಯಲ್ಲಿ ಮರೆಯಲಾಗದ ದಿನ

ನಾನು ಮಾರನೇ ದಿನವೇ ಯಥಾಪ್ರಕಾರ ಕಾಲ್ನಡಿಗೆಯ ಮೂಲಕ ಶೃಂಗೇರಿ  ತಲುಪಿದೆ. ನಾನು ಪೇಟೆಯ ಬೀದಿಯಲ್ಲಿ ಹೋಗುವಾಗ ನನ್ನ ಪರಿಚಯಸ್ತರು ನನ್ನನ್ನು ನಿಲ್ಲಿಸಿ ಹಾರ್ದಿಕವಾಗಿ ಅಭಿನಂದಿಸತೊಡಗಿದರು. ನನಗೆ ಪರಿಚಯವಿಲ್ಲದ ಕೆಲವರು ನನ್ನತ್ತ ಕೈ ತೋರಿಸಿ ಉಳಿದವರಿಗೆ ನಾನೇ Rank ಪಡೆದ ವಿದ್ಯಾರ್ಥಿ ಎಂದು ಹೇಳುತ್ತಿರುವುದೂ ನನ್ನ  ಕಣ್ಣಿಗೆ ಬಿತ್ತು.  ನನಗೆ ಅದೊಂದು ಎಂದೂ ಮರೆಯಲಾಗದ ದಿನವಾಗಿ ಹೋಯಿತು. ನಾನು ಕಟ್ಟ ಕಡೆಗೆ ಶಾರದಾಂಬೆಯ ದೇವಸ್ಥಾನದ ಹತ್ತಿರವೇ ಇದ್ದ ಪ್ರಿನ್ಸಿಪಾಲರ ಮನೆ ತಲುಪಿದೆ. ತುಂಬಾ ಆದರದಿಂದ ನನ್ನನ್ನು ಸ್ವಾಗತಿಸಿದ ಪ್ರಿನ್ಸಿಪಾಲರು ನಾನು ಇಷ್ಟು ದಿನ ಎಲ್ಲಿ ಅಡಗಿಕೊಂಡಿದ್ದೆನೆಂದು ಪ್ರಶ್ನಿಸಿದರು! ಹಾಗೆಯೇ ಮಿತ್ರವೃಂದದವರು ನೀಡಿದ್ದ ಗಡಿಯಾರವನ್ನು ನನಗೆ ಕೊಟ್ಟರು. ಅಲ್ಲದೇ ಮಣಿಪಾಲ್ ಅಕ್ಯಾಡೆಮಿಯವರೂ ಕೂಡ ನನಗೆಸೂಕ್ತ ಬಹುಮಾನ ನೀಡಲು ಬಯಸುತ್ತಿದ್ದಾರೆಂದು  ಹೇಳಿದರು.

ನಾನು ಕಾಲೇಜಿನ ಆಫೀಸಿಗೆ ಹೋಗುವಾಗ ಅಲ್ಲಿ ನನ್ನ ನೆಚ್ಚಿನ ಉಪನ್ಯಾಸಕರಿಂದ ಬಂದ ಟೆಲಿಗ್ರಾಂ ಮತ್ತು ಪತ್ರಗಳು ನನ್ನನ್ನು ಕಾಯುತ್ತಿದ್ದವು. ಪ್ರಧಾನ್ ಗುರುದತ್ ಅವರ ಪ್ರಕಾರ “I had permanently etched my name in the history of the institution by securing the fourth rank in its very first year of existence.’ ನನ್ನ ಇನ್ನೊಬ್ಬ ನೆಚ್ಚಿನ ಉಪನ್ಯಾಸಕರಾಗಿದ್ದ ರಘುನಾಥನ್ ಅವರ ಪತ್ರದ ಪ್ರಕಾರ ‘I had kept up his expectations and fully deserved the recognition.’

ನನ್ನ ಗುರುಗಳಿಂದ ಮತ್ತು ಆತ್ಮೀಯರಿಂದ ನನ್ನ ಸಾಧನೆಗೆ ದೊರೆತ ಈ ಬಗೆಯ ಪ್ರತಿಕ್ರಿಯೆಗಳಿಂದ ನನಗಾದ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ಆದರೆ ಈ ನಡುವೆ ನನ್ನ ಮನಸ್ಸಿನಲ್ಲಿ ಒಂದು ಪ್ರಶ್ನೆ ಪದೇ ಪದೇ ಮೇಲೆದ್ದು ಬರುತ್ತಿತ್ತು. ಅದಿಷ್ಟೇ. ಮುಂದೇನು? ಮುಂದೇನು?

------- ಮುಂದುವರಿಯುವುದು-----

Wednesday, May 13, 2020

ಬಾಲ್ಯ ಕಾಲದ ನೆನಪುಗಳು – ೮೫

ನಮ್ಮ ತರಗತಿಗಳೆಲ್ಲಾ ಒಮ್ಮೆಲೇ ಪ್ರಾರಂಭವಾಗಿ ಟೈಮ್ ಟೇಬಲ್ ಪ್ರಕಾರ ಉಪನ್ಯಾಸಕರು ತರಗತಿಗಳನ್ನು ತೆಗೆದುಕೊಳ್ಳಲಾರಂಭಿಸಿದರು. ನಮ್ಮ ಪ್ರಿನ್ಸಿಪಾಲ್ ರಾಮಕೃಷ್ಣರಾಯರು ತುಂಬಾ ದಕ್ಷ ಆಡಳಿತಗಾರರೂ ಆಗಿದ್ದರು. ಅವರು ವಿಧ್ಯಾರ್ಥಿಗಳಂತೆಯೇ  ಉಪನ್ಯಾಸಕರನ್ನೂ  ಶಿಸ್ತಿನಿಂದ ತಮ್ಮ ಕೆಲಸದಲ್ಲಿ ತೊಡಗಿಸುವುದರಲ್ಲಿ ನಿಸ್ಸೀಮರಾಗಿದ್ದರು. ನಿಜ ಹೇಳಬೇಕೆಂದರೆ ರಾಯರ ಹಿರಿತನ ಮತ್ತು ಗಾಂಭೀರ್ಯ ಉಪನ್ಯಾಸಕರ ಮೇಲೆ ಎಷ್ಟೊಂದು ಪ್ರಭಾವ ಬೀರಿತ್ತೆಂದರೆ ರಾಯರ ಮುಂದೆ ಅವರು ನಮ್ಮಂತೆಯೇ ವಿದ್ಯಾರ್ಥಿಗಳ ಹಾಗೆ ಕಾಣುತ್ತಿದ್ದರು. ಅವರೆಲ್ಲರೂ ವಯಸ್ಸಿನಲ್ಲಿ ಕಿರಿಯರಾಗಿದ್ದುದೂ ಇದಕ್ಕೆ ಒಂದು ಕಾರಣವಾಗಿತ್ತು. ನಾನು ಹಿಂದೆ ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜಿನ ಹಿರಿಯ ಉಪನ್ಯಾಸಕರನ್ನು ನೋಡಿದ್ದೆ  ಮತ್ತು ಕೆಲವರ ಉಪನ್ಯಾಸಗಳನ್ನೂ ಕೇಳುವ ಅವಕಾಶ ನನಗೆ ಸಿಕ್ಕಿತ್ತು. ಹಿರಿಯ ಉಪನ್ಯಾಸಕರೊಡನೆ ನಮ್ಮ  ಕಾಲೇಜಿನ ಅನನುಭವಿ ಉಪನ್ಯಾಸಕರನ್ನು ಹೋಲಿಸಿದಾಗ ನನಗೆ ಸ್ವಲ್ಪ ನಿರಾಶೆಯೇ ಉಂಟಾಯಿತು. ಆದರೆ ನಮ್ಮ ಉಪನ್ಯಾಸಕರೆಲ್ಲಾ ತೋರುತ್ತಿದ್ದ ಉತ್ಸಾಹ ಮತ್ತು ಆಸಕ್ತಿ ಖಂಡಿತವಾಗಿ ನಮಗೆ ಸಂತೋಷವನ್ನುಂಟು ಮಾಡಿತು.

ನನ್ನ ಮೇಲೆ ಹೆಚ್ಚು ಪ್ರಭಾವ ಬೀರಿದ ಮೊದಲ ಉಪನ್ಯಾಸಕರೆಂದರೆ ಕೆಮಿಸ್ಟ್ರಿ ಲೆಕ್ಚರರ್  ರಘುನಾಥನ್ ಅವರು. ನಮಗೆ ಫಿಸಿಕ್ಸ್  ಸಬ್ಜೆಕ್ಟ್ ತೆಗೆದುಕೊಳ್ಳುವ ಉಪನ್ಯಾಸಕರು ಇನ್ನೂ ಬಂದಿಲ್ಲವಾದ್ದರಿಂದ ರಘುನಾಥನ್ ಅವರು ಅದನ್ನೂ ತೆಗೆದುಕೊಳ್ಳ ತೊಡಗಿದರು.  ಕೇವಲ ಸ್ವಲ್ಪ ಕಾಲದಲ್ಲೇ ರಘುನಾಥನ್ ಅವರು ನನ್ನನ್ನು ಒಬ್ಬ ಮೆರಿಟ್ ವಿದ್ಯಾರ್ಥಿ ಎಂದು ಪರಿಗಣಿಸಿ ನನ್ನತ್ತ ವಿಶೇಷ ಗಮನ ಕೊಡತೊಡಗಿದರು. ಮ್ಯಾಥಮ್ಯಾಟಿಕ್ಸ್ ಉಪನ್ಯಾಸಕ ಎನ್ ಆರ್ ಭಟ್ ಕೂಡ ನಾನು ಮತ್ತು ಪ್ರಕಾಶ್ ಕಾಮತ್ ೧೦೦ಕ್ಕೆ ೧೦೦ ಅಂಕಗಳನ್ನು ತೆಗೆದುಕೊಳ್ಳುವ ಅರ್ಹತೆ ಇರುವವರು ಎಂದು ತೀರ್ಮಾನಿಸಿ ನಮಗೆ ಗುರಿ ಇಟ್ಟುಕೊಳ್ಳುವಂತೆ ಹೇಳಿದರು. ನಾನು ಅಲ್ಲಿಯವರೆಗೆ ಕೆಲವು ಸಬ್ಜೆಕ್ಟಿನಲ್ಲಿ ೯೦ ಮೇಲೆ ಅಂಕಗಳನ್ನು ಪಡೆದಿದ್ದರೂ ೧೦೦ಕ್ಕೆ ನೂರು  ಗಳಿಸಿರಲಿಲ್ಲ. ಆದರೆ ಭಟ್ಟರು ನಮಗೆ ಅದು ಸಾಧ್ಯವೆಂದು ಹುರಿದುಂಬಿಸಿದರು. ಹಾಗೆಯೇ  ಗುರಿಯತ್ತ ನಮ್ಮ ಪ್ರಗತಿಯನ್ನು ತೀವ್ರವಾಗಿ ಗಮನಿಸತೊಡಗಿದರು.

ಫಿಸಿಕ್ಸ್ ಉಪನ್ಯಾಸಕ ಕೃಷ್ಣಪ್ಪಯ್ಯನವರ ಆಗಮನ

ಆಮೇಲೆ ಸುಮಾರು ಎರಡು ತಿಂಗಳ ನಂತರ ನಮ್ಮ ಹೊಸ ಫಿಸಿಕ್ಸ್ ಉಪನ್ಯಾಸಕರು ಆಗಮಿಸಿದರು. ಕೃಷ್ಣಪ್ಪಯ್ಯನವರು ಮಣಿಪಾಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿದ್ದರು. ನಿಜ ಹೇಳಬೇಕೆಂದರೆ ಕೃಷ್ಣಪ್ಪಯ್ಯನವರ ಹೆಸರು ನಮಗೆ ಅಷ್ಟು ಉತ್ಸಾಹ ನೀಡಲಿಲ್ಲ. ಏಕೆಂದರೆ ಹೆಸರು ಕಾಲಕ್ಕೆ ತೀರ್ಥಹಳ್ಳಿ ಪೇಟೆಯಲ್ಲಿ ಪ್ರಸಿದ್ಧವಾಗಿದ್ದ ಹೋಟೆಲೊಂದರ ಮಾಲೀಕರದ್ದೇ ಆಗಿತ್ತು! ಆದರೆ ನಮ್ಮ ಭಾವನೆ ಎಷ್ಟು ತಪ್ಪಾಗಿತ್ತೆಂದು ನಮಗೆ ಬೇಗನೆ ಅರಿವಾಯಿತು. ನಿಜ ಹೇಳಬೇಕೆಂದರೆ ಕೃಷ್ಣಪ್ಪಯ್ಯನವರು ಬಹು ಬೇಗನೆ ನನ್ನ ಅತ್ಯಂತ ನೆಚ್ಚಿನ ಗುರು ಮತ್ತು ಮಾರ್ಗದರ್ಶಕರಾಗಿ ಬಿಟ್ಟರು. ಕೃಷ್ಣಪ್ಪಯ್ಯನವರು ಮುಂದೆ ಕಾಲೇಜಿನ ಪ್ರಿನ್ಸಿಪಾಲ್ ಆಗಿ ನಿವೃತ್ತಿ ಪಡೆದರು.

ಕೃಷ್ಣಪ್ಪಯ್ಯನವರು ಅಕ್ಯಾಡೆಮಿ ಕಾಲೇಜಿನಲ್ಲಿ ಆಗಲೇ ಒಂದು ವರ್ಷ ಕೆಲಸ ಮಾಡಿದ್ದರಿಂದ ನಮ್ಮ ಕಾಲೇಜಿನ ವೈಸ್ ಪ್ರಿನ್ಸಿಪಾಲ್ ಯಾರೆಂಬುವ ಸಮಸ್ಯೆ ಬಗೆಹರಿದು ಬಿಟ್ಟಿತು. ಅವರೊಬ್ಬ ಶ್ರೇಷ್ಠ ಉಪನ್ಯಾಸಕರು ಮಾತ್ರವಲ್ಲ ಉತ್ತಮ ಆಡಳಿತಗಾರರೂ ಆಗಿದ್ದರು. ತಮ್ಮ ಕರ್ತವ್ಯವನ್ನು ಬಿಟ್ಟು ಬೇರೆ ಯಾವುದೇ ಚಿಕ್ಕ ಪುಟ್ಟ ವಿಷಯಗಳ ಬಗ್ಗೆ ಅವರು ಆಸಕ್ತಿ ವಹಿಸುತ್ತಿರಲಿಲ್ಲ. ಮುಂದೆ ಕಾಲೇಜಿನ ಪ್ರಿನ್ಸಿಪಾಲರಾಗಿ ಸ್ವಯಂ ಪ್ರೇರಿತ ನಿವೃತ್ತಿ ಪಡೆದ ಕೃಷ್ಣಪ್ಪಯ್ಯನವರು ಶುದ್ಧ ಬ್ರಹ್ಮಚಾರಿಯಾಗೇ ಉಳಿದು ಬಿಟ್ಟರು. ಆಮೇಲೆ ಎಷ್ಟೋ ವರ್ಷಗಳ ನಂತರ ನಾನೊಮ್ಮೆ ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದ ಹತ್ತಿರ ಇದ್ದ ಅವರ ಮನೆಗೇ ಹೋಗಿ ಭೇಟಿಯಾಗಿ ಬಂದಿದ್ದೆ. ಆಗಲೂ ನನ್ನನ್ನು ತುಂಬಾ ಪ್ರೀತಿ ಮತ್ತು ಅಭಿಮಾನದಿಂದ ಮಾತನಾಡಿಸಿದ್ದನ್ನು ನಾನೆಂದೂ ಮರೆಯುವಂತಿಲ್ಲ.

ಕಮ್ಮರಡಿ ಉಮರಬ್ಬ

ನಮ್ಮ ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿಗಳಲ್ಲಿ ನನಗೆ ನೆನಪು ಬರುವವರಲ್ಲಿ ಕಮ್ಮರಡಿ ಊರಿನ ಉಮರಬ್ಬನದು ಮೊದಲ ಹೆಸರಾಗಿದೆ. ತುಂಬಾ ಸ್ನೇಹಮಯ ವ್ಯಕ್ತಿತ್ವದ ಉಮರಬ್ಬ ಕನ್ನಡದಲ್ಲಿ ಒಳ್ಳೆಯ ಭಾಷಣಕಾರನಾಗಿದ್ದ. ಹಾಗೆಯೇ ಅವನು ಕನ್ನಡ ಸಿನಿಮಾ ಹಾಡುಗಳನ್ನು ತುಂಬಾ ಚೆನ್ನಾಗಿ ಹಾಡುತ್ತಿದ್ದ. ಆದರೆ ಮುಂದೆ ಬಿ.ಎಸ್.ಸಿ ತರಗತಿಯಲ್ಲಿ ಓದುವಾಗ ಉಮರಬ್ಬ ಸ್ವಲ್ಪ ವಿಲಕ್ಷಣ ಸ್ವಭಾವ ಬೆಳೆಸಿಕೊಂಡು ಕಾಲೇಜಿನ ಆಡಳಿತ ವರ್ಗದ ಸಹಾನುಭೂತಿ ಕಳೆದುಕೊಂಡು ಬಿಟ್ಟ. ಆಮೇಲೆ ಎಷ್ಟೋ ವರ್ಷಗಳ ನಂತರ ನಾನು ಕರ್ನಾಟಕದ ಹೊರಗೆ ಕೆಲಸ ಮಾಡುವಾಗ ಉಮರಬ್ಬ ರಾಜಕೀಯ ಪ್ರವೇಶಿಸಿ ದಕ್ಷಿಣ ಕನ್ನಡದ ಒಂದು ಕ್ಷೇತ್ರದಿಂದ ಶಾಸಕನಾಗಿ ಚುನಾಯಿತನಾದನೆಂದು ಕೇಳಿದ್ದೆ. ಹಾಗೂ ಅವನೊಬ್ಬ ಜನಪ್ರಿಯ ರಾಜಕೀಯ ವ್ಯಕ್ತಿಯಾಗಿ ಬಿಟ್ಟಿದ್ದನಂತೆ. ಆದರೆ ವಿಪರೀತ ಕುಡಿತದ ಹುಚ್ಚಿನ ಕಾರಣ ಅವನ ರಾಜಕೀಯ ಜೀವನ ಸಂಪೂರ್ಣ ಕೆಟ್ಟು ಹೋಗಿ ಅವನು ಅಕಾಲ ಮರಣ ಹೊಂದಿದನಂತೆ.

ಭಾಷಣಕಾರ ರಾಮಶರ್ಮ

ಶೃಂಗೇರಿಯ ಹತ್ತಿರದ ಒಂದು ಊರಿನ ರಾಮಶರ್ಮ ಎಂಬ ವಿದ್ಯಾರ್ಥಿ ಕೂಡ ಕನ್ನಡದಲ್ಲಿ ತುಂಬಾ ಒಳ್ಳೆಯ ಭಾಷಣಕಾರನಾಗಿದ್ದ.  ಮಾತುಗಾರಿಕೆಯಲ್ಲಿ ತುಂಬಾ ಪ್ರತಿಭಾವಂತನೆಂಬ ಹೆಸರೂ ಕೂಡ ಶರ್ಮನಿಗೆ ಸಿಕ್ಕಿ ಬಿಟ್ಟಿತು. ಆದರೆ ಪ್ರಾಯಶಃ ತನಗೆ ಸಿಕ್ಕ ಅತಿ ಹೊಗಳಿಕೆ ಶರ್ಮನ ತಲೆಗೇರಿ ಬಿಟ್ಟಿತು. ಒಂದು ರೀತಿಯ ವಿಲಕ್ಷಣ ಮನೋಭಾವ ಬೆಳೆಸಿಕೊಂಡ ಶರ್ಮನನ್ನು ಅನಧಿಕೃತವಾಗಿ ಅರೆಹುಚ್ಚನೆಂದು ಎಲ್ಲರೂ ತೀರ್ಮಾನಿಸಿ ಬಿಟ್ಟರು! ಅದು ಯಾವ ಮಟ್ಟಕ್ಕೆ ಹೋಯಿತೆಂದರೆ ಶರ್ಮನ ಕಾಲೇಜು ವಿಧ್ಯಾಭ್ಯಾಸವೇ ಕೊನೆಗೊಂಡುಬಿಟ್ಟಿತು.

ಪ್ರತಿ ಶನಿವಾರ ನಮ್ಮೂರಿಗೆ ಕಾಲ್ನಡಿಗೆಯ ಪ್ರಯಾಣ

ಪ್ರತಿ ಶನಿವಾರ ಸಂಜೆಯೂ ನಾನು ನಮ್ಮೂರಿಗೆ ಕಾಲ್ನಡಿಗೆಯ ಪ್ರಯಾಣ ಮಾಡಿಬಿಡುತ್ತಿದ್ದೆ. ಭಾನುವಾರ ಪೂರ್ತಿ ದಿನ ತಂದೆಯವರಿಗೆ ನಮ್ಮ ಅಡಿಕೆ ತೋಟದಲ್ಲಿ ಸಹಾಯ ಮಾಡುವುದು, ಕಾಫಿ ಹಣ್ಣು ಕೊಯ್ಯುವುದೂ, ಇತ್ಯಾದಿ ಕೆಲಸಗಳು ನನಗಿರುತ್ತಿದ್ದವು. ನಮ್ಮೂರಿನ ಜನಗಳಿಗೆ ನಮ್ಮ ಕಾಲೇಜಿನ ಬಗ್ಗೆ ತುಂಬಾ ಕುತೂಹಲವಿತ್ತು. ಅವರಿಗೆ ಬಗ್ಗೆ ತಿಳಿ ಹೇಳುವುದು ನನ್ನ ಚಟುವಟಿಕೆಗಳಲ್ಲಿ ಒಂದಾಗಿ ಬಿಟ್ಟಿತ್ತು. ಸೋಮವಾರದಂದು ಬೆಳಿಗ್ಗೆ ಮುಂಚೆಯೇ ಮನೆಯಿಂದ ಹೊರಟು ಎಂಟು ಮೈಲಿ ನಡೆದು ಶೃಂಗೇರಿ ತಲುಪಿ ಕಾಲೇಜಿಗೆ ಹೋಗಿ ಬಿಡುತ್ತಿದ್ದೆ. ಬಗೆಯ ಪ್ರತಿ ವಾರದ ಪ್ರಯಾಣ ನಾನು ಶೃಂಗೇರಿ ಕಾಲೇಜಿನಲ್ಲಿ ಓದಿದ ನಾಲ್ಕು ವರ್ಷಗಳೂ ನನಗೆ ಮಾಮೂಲಾಗಿ ಬಿಟ್ಟಿತ್ತು. ಪ್ರಕೃತಿಯ ನಡುವಿನ ಪ್ರಯಾಣದ ಸಂತೋಷ ಈಗಿನ ಕಾಲದಲ್ಲಿ ಪ್ರಾಯಶಃ ಯಾರಿಗೂ ಲಭ್ಯವಿಲ್ಲ ಎಂದು ಅನಿಸುತ್ತದೆ. ನನ್ನ ತಂದೆ ತಾಯಿ , ತಂಗಿ ಮತ್ತು ಸಹೋದರರು  ಪ್ರತಿ ಶನಿವಾರ ನನ್ನ ಆಗಮನದ ನಿರೀಕ್ಷೆಯಲ್ಲಿರುತ್ತಿದ್ದರು. ನಾನೆಂದೂ ಅವರನ್ನು ನಿರಾಶೆಗೊಳಿಸಲಿಲ್ಲ.

ಪುಟ್ಟಣ್ಣನ ಓದಿಗೆ ಸಮಸ್ಯೆ

ಇದ್ದಕ್ಕಿದ್ದಂತೆ ಬೆಂಗಳೂರಿನಲ್ಲಿದ್ದ ನಮ್ಮ ಪುಟ್ಟಣ್ಣನಿಂದ ಬಂದ ಒಂದು ಪತ್ರ ನಮ್ಮ ತಂದೆ ಮತ್ತು ತಾಯಿಯರಿಗೆ ತುಂಬಾ ಚಿಂತೆ ಉಂಟಾಗುವಂತೆ ಮಾಡಿತು. ನಮ್ಮ ಕಸಿನ್ ಆದ ಹಂಚಿನಮನೆ ಸುಬ್ರಹ್ಮಣ್ಯ ಕೊಟ್ಟ ಆರ್ಥಿಕ ಸಹಾಯದ ಭರವಸೆಯ ಮೇಲೆ ಪುಟ್ಟಣ್ಣ ಬೆಂಗಳೂರಿಗೆ ಹೋಗಿ ಎಂ..ಎಸ್ ಕಾಲೇಜಿನಲ್ಲಿ ಪಿ.ಯು.ಸಿ ಓದುತ್ತಿದ್ದ. ಆದ್ದರಿಂದ ಅವನ ಓದಿಗಾಗಿ ತಾವೇನೂ ಖರ್ಚು ಮಾಡಬೇಕಾಗಿಲ್ಲವೆಂದು ತಂದೆ ತಾಯಿಯವರು ಭಾವಿಸಿದ್ದರು. ಆದರೆ ಸುಬ್ರಹ್ಮಣ್ಯ ಇದ್ದಕ್ಕಿದ್ದಂತೇ ಹಣದ ಸಹಾಯವನ್ನು ನಿಲ್ಲಿಸಿ ಬಿಟ್ಟಿದ್ದರು. ಮಾತ್ರವಲ್ಲ. ಬಗ್ಗೆ ಪುಟ್ಟಣ್ಣ ಬರೆದ ಪತ್ರಗಳಿಗೆ ಉತ್ತರ ಕೊಡುವ ಗೋಜಿಗೇ ಹೋಗಲಿಲ್ಲ. ಪ್ರತಿ ತಿಂಗಳೂ ನಾನು ಕೊಡಬೇಕಾಗಿದ್ದ ಮೆಸ್ ಚಾರ್ಜ್ ೩೦ ರೂಪಾಯಿಗಳಿಗೇ ಒದ್ದಾಡುತ್ತಿದ್ದ  ತಂದೆ ಮತ್ತು ತಾಯಿಯರಿಗೆ ಇನ್ನೊಂದು ದೊಡ್ಡ ಸಂಕಟ ಎದುರಾಗಿತ್ತು.

ಊರು ಬಿಟ್ಟು ಓಡಿಹೋದ ಸುಬ್ರಹ್ಮಣ್ಯ

ನಾನಾಗ ಸುಬ್ರಹ್ಮಣ್ಯ ಅವರ ಶೃಂಗೇರಿ ಮನೆಯ ಮುಂದಿದ್ದ ಒಂದು ರೂಮಿನಲ್ಲೇ ಇದ್ದೆ. ಅವರು ಪ್ರತಿ ದಿನವೂ ಶೃಂಗೇರಿಗೆ ಬಂದು ತಮ್ಮ ಕೆಲವು ಸ್ನೇಹಿತರೊಡನೆ ಅವರ ಮನೆಯಲ್ಲೇ ಇರುತ್ತಿದ್ದರು. ನಾನು ಪುಟ್ಟಣ್ಣನಿಂದ ಬಂದ ಪತ್ರದ ವಿಚಾರ ಅವರೊಡನೆ ಮಾತನಾಡಿದಾಗ ಅವರಿಂದ ಯಾವುದೇ ಉತ್ತರ ದೊರೆಯಲಿಲ್ಲ. ತಮ್ಮ ತಂದೆಯವರು ಬಿಟ್ಟು ಹೋದ ತುಂಬಾ ದೊಡ್ಡ ಆಸ್ತಿ ಮತ್ತು ಮನೆಯಿದ್ದ ಒಬ್ಬನೇ ಮಗನಾದ ಸುಬ್ರಹ್ಮಣ್ಯ ತಮ್ಮ ಅಪಾರ ವಾರ್ಷಿಕ ಆದಾಯವನ್ನು ಹೇಗೆ ವ್ಯಯ ಮಾಡುತ್ತಿದ್ದರೆಂಬುದು ಒಂದು ಬ್ರಹ್ಮ ರಹಸ್ಯವೇ ಆಗಿತ್ತು. ಇನ್ನೂ ಬ್ರಹ್ಮಚಾರಿಯಾಗೇ ಇದ್ದ ಸುಬ್ರಹ್ಮಣ್ಯ ಮುಂದೆ ತಾವು ಮಾಡಿದ ಸಾಲ ತೀರಿಸಲಾಗದೇ ಊರು ಬಿಟ್ಟು ಓಡಿ ಹೋದದ್ದು ಒಂದು ನಂಬಲಾರದ ಸತ್ಯವಾಗಿ ಬಿಟ್ಟಿತು. ಅವರ ಆಸ್ತಿ ಮತ್ತು ಮನೆ ಎಲ್ಲವೂ ಸಾಲಗಾರರ ಪಾಲಾಗಿ ಹೋದವು. ಇಂದು ಅವರ ಪೂರ್ವಿಕರು ಕಟ್ಟಿದ್ದ ಹಂಚಿನಮನೆ ನಮಗೆಲ್ಲಾ  ಕೇವಲ ಒಂದು ಕಹಿ ನೆನಪಾಗಿ ಉಳಿದು ಹೋಗಿದೆ ಅಷ್ಟೇ. ಸುಬ್ರಹ್ಮಣ್ಯ ಎಂದೂ ಹಿಂತಿರುಗಿ ಬರಲೇ ಇಲ್ಲ.

ನನಗೆ ಮ್ಯಾಥಮ್ಯಾಟಿಕ್ಸ್ ಸಬ್ಜೆಕ್ಟಿನಲ್ಲಿ ನೂರಕ್ಕೆ ನೂರು ಅಂಕ

ನಮಗೆ ನಡೆದ ಫಸ್ಟ್ ಟರ್ಮ್ ಪರೀಕ್ಷೆಯಲ್ಲಿ ನಾನು ಎಲ್ಲಾ ಸಬ್ಜೆಕ್ಟ್ ಗಳಲ್ಲೂ ಉಳಿದವರಿಗಿಂತ ಹೆಚ್ಚಿನ ಅಂಕಗಳನ್ನು ಗಳಿಸಿ ಬಿಟ್ಟೆ. ಅಲ್ಲದೇ ನನಗೆ ಮ್ಯಾಥಮ್ಯಾಟಿಕ್ಸ್ ಸಬ್ಜೆಕ್ಟಿನಲ್ಲಿ ನೂರಕ್ಕೆ ನೂರು ಅಂಕಗಳೂ ದೊರೆತವು. ಪರಿಣಾಮವಾಗಿ ನಮ್ಮ ಉಪನ್ಯಾಸಕರುಗಳಿಗೆ ನಾನು ವಿಶ್ವವಿದ್ಯಾನಿಲಯದ ಮಟ್ಟದಲ್ಲಿ Rank ಪಡೆಯ ಬಲ್ಲ ವಿದ್ಯಾರ್ಥಿ ಎಂಬ ವಿಶ್ವಾಸ ಬಂದು ಬಿಟ್ಟಿತು. ಅವರೆಲ್ಲಾ ನನಗೆ ಗುರಿಯನ್ನಿಟ್ಟುಕೊಂಡು ಅಭ್ಯಾಸ ಮಾಡುವಂತೆ ಒತ್ತಾಯಿಸತೊಡಗಿದರು. ಅಲ್ಲದೇ ದೃಷ್ಟಿಯಿಂದ ನನಗೆ ಸೂಕ್ತ ಸಲಹೆಗಳನ್ನು ನೀಡತೊಡಗಿದರು. ನನಗೂ ಕೂಡ ನಾನು Rank ಪಡೆಯಬಲ್ಲೆನೆಂಬ ವಿಶ್ವಾಸ ಮೂಡತೊಡಗಿತು. ಪ್ರಿನ್ಸಿಪಾಲ್ ರಾಮಕೃಷ್ಣರಾಯರು ಕೂಡ ನನ್ನನ್ನು ಕರೆದು ನಾನು ಕಾಲೇಜಿಗೆ  ಒಳ್ಳೆಯ ಹೆಸರು ತರುವೆನೆಂಬ ವಿಶ್ವಾಸವನ್ನು ವ್ಯಕ್ತ ಪಡಿಸಿದರು.

ಉಪನ್ಯಾಸಕರುಗಳ ನಿರ್ಗಮನ

ಒಂದು ದಿನ ಬೆಳಿಗ್ಗೆ ನಮಗೆ ನಮ್ಮ ಇಂಗ್ಲಿಷ್ ಉಪನ್ಯಾಸಕ ಶ್ರೀರಾಮ್ ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟು ಮೈಸೂರಿಗೆ ಹೋಗಿ ಬಿಟ್ಟರೆಂದು ತಿಳಿದು ಬಂತು. ಅವರು ಮೈಸೂರಿನ ಒಂದು ಕಾಲೇಜಿಗೆ ಉಪನ್ಯಾಸಕರಾಗಿ ಆಯ್ಕೆ ಆಗಿದ್ದರಂತೆ. ವಿಷಯ ತಿಳಿದು ನಮಗೆಲ್ಲಾ ತುಂಬಾ ದುಃಖವಾಯಿತು. ನಮಗೆ ತುಂಬಾ ಬೇಸರವಾದ ವಿಷಯವೆಂದರೆ ಅವರು ವಿದ್ಯಾರ್ಥಿಗಳಾದ ನಮಗೆ ಸ್ವಲ್ಪ ಸೂಚನೆಯನ್ನೂ ಕೊಡದೇ ಶೃಂಗೇರಿ ಬಿಟ್ಟು ಹೋದದ್ದು. ಅವರ ಜಾಗಕ್ಕೆ ಎರಡು ತಿಂಗಳ ನಂತರ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ಬರಾಯ  ಎಂಬ ಹಿರಿಯ ವ್ಯಕ್ತಿ ಒಬ್ಬರು ಆಗಮಿಸಿದರು. ಉಪನ್ಯಾಸಕರಾಗಿ ತುಂಬಾ ಅನುಭವಸ್ತರಾದ ಸುಬ್ಬರಾಯರು ನಮ್ಮನ್ನು ಪಿ.ಯು.ಸಿ ಅಂತಿಮ ಪರೀಕ್ಷೆಗೆ ಬಹಳ ಚೆನ್ನಾಗಿಯೇ ತಯಾರು ಮಾಡಿಬಿಟ್ಟರು.

ಆಮೇಲೆ ಸ್ವಲ್ಪ ಕಾಲದಲ್ಲೇ ನಮ್ಮನ್ನು ಅಗಲಿದವರು ನಮ್ಮ ನೆಚ್ಚಿನ ಕೆಮಿಸ್ಟ್ರಿ ಉಪನ್ಯಾಸಕರಾದ ರಘುನಾಥನ್ ಅವರು.  ಅವರು ನಮ್ಮನ್ನು ಆಗಲಿ ದಾವಣಗೆರೆಯ ಡಿ.ಆರ್.ಎಂ ಮೆಡಿಕಲ್ ಕಾಲೇಜಿಗೆ ಉಪನ್ಯಾಸಕರಾಗಿ ಹೋಗುವರೆಂದು ತಿಳಿದು ನಮಗೆಲ್ಲಾ ಆದ ದುಃಖ ಅಷ್ಟಿಷ್ಟಲ್ಲ. ತುಂಬಾ ಉತ್ತಮ ಮಟ್ಟದ ಉಪನ್ಯಾಸಕರಾದ ರಘುನಾಥನ್ ನಮ್ಮ ಕಾಲೇಜ್ ಮತ್ತು ವಿದ್ಯಾರ್ಥಿಗಳಾದ ನಮ್ಮನ್ನು ತುಂಬಾ ಮನಸ್ಸಿಗೆ ಹಚ್ಚಿಕೊಂಡಿದ್ದರು. ಅಲ್ಲದೇ ಅವರು ಶ್ರೀರಾಮ್ ಅವರಂತೆ ನಮಗೆಲ್ಲ ತಿಳಿಸದೇ ನಮ್ಮಿಂದ ಅಗಲಲಿಲ್ಲ. ತಾವು ಶೃಂಗೇರಿ ಬಿಟ್ಟು ಹೋಗುವುದಾಗಿ ನಮಗೆಲ್ಲಾ ಹೇಳುತ್ತಾ ನಮ್ಮ ಮುಂದೆ ಕಣ್ಣೀರು ಸುರಿಸಿಬಿಟ್ಟರು. ನಮ್ಮೆಲ್ಲರ ಕಣ್ಣುಗಳೂ ಒದ್ದೆಯಾದುವೆಂದು ಹೇಳಲೇ ಬೇಕಿಲ್ಲ. ಆದರೆ ಆಕಸ್ಮಿಕವಾಗಿ ನಮ್ಮನ್ನು ಹೀಗೆ ತೊರೆದು ಹೋಗುತ್ತಿರುವುದಕ್ಕೆ ನಮಗೆ ಕಾರಣ ತಿಳಿಯಲೇ ಇಲ್ಲ.

ನಮ್ಮ ಕಾಲೇಜಿನಿಂದ ಅಗಲಿದ ಮೂರನೇ ಉಪನ್ಯಾಸಕರೆಂದರೆ ಅರ್ಥ ಶಾಸ್ತ್ರದ ಉಪನ್ಯಾಸಕರಾದ ಶಿವಾನಂದ ಅವರು. ವಿದ್ಯಾರ್ಥಿಗಳಿಗೆ ತುಂಬಾ ಇಷ್ಟವಾಗಿದ್ದ ಶಿವಾನಂದ ಅವರಿಗೆ ಮೈಸೂರು ಸರ್ಕಾರದ ವಾಣಿಜ್ಯ ಇಲಾಖೆಯಲ್ಲಿ ಅಧಿಕಾರಿಯಾಗಿ ಕೆಲಸ ದೊರೆತಿತ್ತು. ಹೀಗೆ ಒಮ್ಮೆಗೇ ಮೂರು ಮಂದಿ ಉಪನ್ಯಾಸಕರು ನಮ್ಮನ್ನು ತೊರೆದು ಹೋಗಿ ಬಿಟ್ಟದ್ದು ನಮಗೆಲ್ಲ ದೊಡ್ಡ ಆಘಾತವೇ ಆಗಿತ್ತು. ಇಂತಹಾ ದೊಡ್ಡ ಆಘಾತದಿಂದ ಹೊರಬರಲು ನಮಗೆ ಹಲವು ದಿನಗಳೇ ಬೇಕಾದವು. ಶೃಂಗೇರಿಯಂತಹ ಸಣ್ಣ ಊರಿನಲ್ಲಿದ್ದ ನಮಗೆ ಕಾಲದಲ್ಲಿ ತುಂಬಾ ಭಾವನಾತ್ಮಕ ಮನೋಭಾವನೆ ಇತ್ತೆಂದು ಇಲ್ಲಿ ಹೇಳಲೇ ಬೇಕು. ಆದರೆ ಕಾಲದ ಶೃಂಗೇರಿಯಲ್ಲಿ ಉಪನ್ಯಾಸಕರುಗಳಿಗೆ ಬೇಕಾದ ಸಾಮಾನ್ಯ ಮಟ್ಟದ ಅನುಕೂಲತೆಗಳೂ ಇರಲಿಲ್ಲ ಎನ್ನುವುದೂ  ಅಷ್ಟೇ ಸತ್ಯವಾಗಿತ್ತು. ವರ್ಷ ಹೊಸದಾಗಿ ಕಾಲೇಜಿಗೆಬಂದ  ಉಪನ್ಯಾಸಕರುಗಳೆಂದರೆ ಸಸ್ಯಶಾಸ್ತ್ರ ಉಪನ್ಯಾಸಕ ಆನಂದರಾಮ ಮಡಿ ಮತ್ತು ರಘುನಾಥನ್ ಅವರ ಬದಲಿಗೆ ಬಂದ ಕೆಮಿಸ್ಟ್ರಿ ಉಪನ್ಯಾಸಕರಾದ ಶಾನಭಾಗ್ ಅವರು.

ಟಿ.ಎಂ.ಏ. ಪೈ ಮತ್ತು ಟಿ.ಏ.ಪೈ

ಮಣಿಪಾಲ್  ಅಕ್ಯಾಡೆಮಿಯ ರಿಜಿಸ್ಟ್ರಾರ್ ಆದ ಡಾಕ್ಟರ್ ಟಿ.ಎಂ..ಪೈ ನಮ್ಮ ಕಾಲೇಜಿಗೆ ಆಗಾಗ ಭೇಟಿಕೊಟ್ಟು ನಮ್ಮನ್ನುದ್ದೇಶಿಸಿ ಮಾತನಾಡುತ್ತಿದ್ದರು. ತಮ್ಮ ಭಾಷಣಗಳಲ್ಲಿ ಅವರು ತಾವು ಹೇಗೆ ಮಣಿಪಾಲ್ ಮತ್ತು ಅಲ್ಲಿನ ವಿದ್ಯಾಕೇಂದ್ರಗಳನ್ನು ಸ್ಥಾಪಿಸಿ ಅಭಿವೃದ್ಧಿಗೊಳಿಸಿದರೆಂದು ವಿವರವಾಗಿ ಮತ್ತು ಆಸಕ್ತಿದಾಯಕವಾಗಿ ನಮಗೆ ತಿಳಿಸುತ್ತಿದ್ದರು. ಪೈ ಅವರು ಮಣಿಪಾಲಿನಲ್ಲಿ ಸಿಂಡಿಕೇಟ್ ಬ್ಯಾಂಕ್, ಮೆಡಿಕಲ್ ಕಾಲೇಜ್, ಇಂಜಿನಿಯರಿಂಗ್ ಕಾಲೇಜ್, ಮಣಿಪಾಲ ಹಾಸ್ಪಿಟಲ್ ಇತ್ಯಾದಿಗಳನ್ನು ಸ್ಥಾಪಿಸಿ ಅವುಗಳ ಆಡಳಿತ ವ್ಯವಸ್ಥೆಯನ್ನು ಅಷ್ಟೇ ಚೆನ್ನಾಗಿ  ಮಾಡಿದ್ದರು. ಆಗ ಸಿಂಡಿಕೇಟ್ ಬ್ಯಾಂಕ್ ಛೇರ್ಮನ್ ಆಗಿದ್ದ ಟಿ.ಏ.ಪೈ ಅವರೂ ಕೂಡ ಆಗಾಗ ನಮ್ಮ ಕಾಲೇಜಿಗೆ ಬಂದು ನಮ್ಮನ್ನುದ್ದೇಶಿಸಿ ಮಾತನಾಡುತ್ತಿದ್ದರು.  ಇವರಲ್ಲದೆ ಎಂ ಜಿ ಎಂ ಕಾಲೇಜಿನ ಪ್ರಿನ್ಸಿಪಾಲ್ ಕು ಶಿ ಹರಿದಾಸ್ ಭಟ್  ಮತ್ತು ಅನೇಕ ಕನ್ನಡ ಸಾಹಿತ್ಯಲೋಕದ ಮಹನೀಯರುಗಳು ನಮ್ಮ ಕಾಲೇಜಿಗೆ ಅತಿಥಿಗಳಾಗಿ ಬರುತ್ತಿದ್ದರು. ನಮಗೆ ಅವರ ವಿದ್ವತ್ಪೂರ್ಣ ಭಾಷಣಗಳನ್ನು ಕೇಳುವ ಅವಕಾಶಗಳು ದೊರೆತಿದ್ದವು.

ಪ್ರಿಪರೇಟರಿ ಎಕ್ಸಾಮಿನೇಷನ್ ಮತ್ತು ನನ್ನ ಚಕ್ಕರ್!

ನಮ್ಮ ಫೈನಲ್ ಎಕ್ಸಾಮಿನೇಷನ್ ಹತ್ತಿರ ಬರುತ್ತಿದ್ದಂತೆ ನಾವೆಲ್ಲಾ ನಮ್ಮ ಅಭ್ಯಾಸಗಳ ಬಗ್ಗೆ ತೀವ್ರ ಗಮನ ಕೊಡಲಾರಂಭಿಸಿದೆವು. ಆಗ ಇದ್ದಕ್ಕಿದ್ದಂತೇ ನಾವೆಲ್ಲಾ ಒಂದು ಪ್ರಿಪರೇಟರಿ ಎಕ್ಸಾಮಿನೇಷನ್ ಎದುರಿಸಬೇಕೆಂದು ಹೇಳಲಾಯಿತು. ನನಗೆ ಬಗೆಯ ಪ್ರಿಪರೇಟರಿ ಪರೀಕ್ಷೆಯಲ್ಲಿ ಏನೇನೂ ಆಸಕ್ತಿ ಇರಲಿಲ್ಲ. ನಾನು ನೇರವಾಗಿ ಅಂತಿಮ ಪರೀಕ್ಷೆಯನ್ನು ಎದುರಿಸಲು ತಯಾರಿ ನಡೆಸಿದ್ದೆ. ಆದ್ದರಿಂದ ನಾನು ಯಾರಿಗೂ ಹೇಳದೇ ಪರೀಕ್ಷೆಗೆ ಚಕ್ಕರ್ ಹೊಡೆದು ಊರಿಗೆ ಹೋಗಿಬಿಟ್ಟೆ. ಆಗ ನಮ್ಮ ತಂದೆಯವರಿಗೆ ಶೃಂಗೇರಿಯಲ್ಲಿ ಏನೋ ಕೆಲಸವಿತ್ತು. ನಾನು  ಅವರ ಮೂಲಕ ನನಗೆ ಅರೋಗ್ಯ ಸರಿಯಿಲ್ಲದ ಕಾರಣ ಪರೀಕ್ಷೆಗೆ ಬರಲಾಗುತ್ತಿಲ್ಲವೆಂದು ಸಂದೇಶ ಕಳಿಸಿಬಿಟ್ಟೆ. ತಂದೆಯವರು ಹೊಳ್ಳರ ಮೆಸ್ಸಿನಲ್ಲಿ ನನ್ನ ಉಪನ್ಯಾಸಕರ ಭೇಟಿ ಮಾಡಿ ವಿಷಯ ತಿಳಿಸಿದರಂತೆ. ವಿಷಯ ತಿಳಿದ ಅವರು ನನ್ನ ಬಗ್ಗೆ ತುಂಬಾ ಚಿಂತೆ ವ್ಯಕ್ತಪಡಿಸಿದ್ದನ್ನು ನೋಡಿ ನನ್ನ ತಂದೆಯವರಿಗೆ ತುಂಬಾ ಗಾಭರಿ ಆಗಿ ಬಿಟ್ಟಿತು. ಪರೀಕ್ಷೆಗೆ ನಾನು ಹಾಜರಾಗದಿದ್ದರೆ ತುಂಬಾ ತೊಂದರೆಯಾಗಬಹುದೆಂದು ಅವರು ಭಾವಿಸಿದ್ದರು. ಆದರೆ ನಾನು ಬಗ್ಗೆ ಚಿಂತೆ ಮಾಡಲೇ ಇಲ್ಲ. ಪರೀಕ್ಷೆಗೆ ಹೋಗಲೂ ಇಲ್ಲ.

ಮಾರ್ಚ್ ತಿಂಗಳ ಅಂತಿಮ ಪರೀಕ್ಷೆ: ಫಿಸಿಕ್ಸ್ ಪ್ರಶ್ನೆ ಪತ್ರಿಕೆಯಲ್ಲಿ ಒಂದು ಔಟ್ ಅಫ್ ಸಿಲಬಸ್ ಪ್ರಶ್ನೆ

ಮಾರ್ಚ್ ತಿಂಗಳಲ್ಲಿ ನಮ್ಮ ಅಂತಿಮ ಪರೀಕ್ಷೆ ಆರಂಭವಾಯಿತು. ನಾನು ಎಲ್ಲಾ ಪ್ರಶ್ನೆ ಪತ್ರಿಕೆಗಳಿಗೂ ತುಂಬಾ ಚೆನ್ನಾಗಿಯೇ ಉತ್ತರ ಬರೆದಿದ್ದೆ. ಆದರೆ ನಮ್ಮ ಫಿಸಿಕ್ಸ್ ಪ್ರಶ್ನೆ ಪತ್ರಿಕೆಯಲ್ಲಿ ಒಂದು ಔಟ್ ಅಫ್ ಸಿಲಬಸ್ ಪ್ರಶ್ನೆ ಬಂದುಬಿಟ್ಟಿತ್ತು. ವಾಸ್ತವವಾಗಿ ಇದೇ  ಪ್ರಶ್ನೆ ಹಿಂದೆ ಎರಡು ಬಾರಿ ಬೇರೆ ಬೇರೆ ವರ್ಷದ ಪ್ರಶ್ನೆ ಪತ್ರಿಕೆಗಳಲ್ಲೂ ಬಂದಿತ್ತು. ಅದನ್ನು ವಿಶೇಷವಾಗಿ ಗಮನಿಸಿದ್ದ ನಾನು ಕೃಷ್ಣಪ್ಪಯ್ಯನವರ ಹತ್ತಿರ ಪ್ರಶ್ನೆಗೆ ಸಂಬಂಧ ಪಟ್ಟ ವಿಷಯವನ್ನು ನಮಗೆ ವಿವರಿಸಿ ಪ್ರಶ್ನೆ ಪುನಃ ಬಂದರೆ ಉತ್ತರ ಬರೆಯಲು ತಯಾರು ಮಾಡಬೇಕೆಂದು ಕೇಳಿಕೊಂಡಿದ್ದೆ. ಅವರೂ ಅದಕ್ಕೆ ಒಪ್ಪಿಗೆ ನೀಡಿದ್ದರು. ಆದರೆ ಪರೀಕ್ಷೆ ಹತ್ತಿರ ಬರುತ್ತಿರುವಾಗ ಅವರು ನನಗೆ ಅದೇ ಪ್ರಶ್ನೆ ಪುನಃ ಬರುವ ಚಾನ್ಸ್ ಇಲ್ಲವೆಂದು ಹೇಳಿ ಬಿಟ್ಟರು. ಮತ್ತು ನಮ್ಮನ್ನು ಪ್ರಶ್ನೆಗೆ ಉತ್ತರ ಬರೆಯಲು ತಯಾರಿ ಮಾಡಲೇ ಇಲ್ಲ.

ದಿನ ನಾನು ಫಿಸಿಕ್ಸ್ ಪ್ರಶ್ನೆ ಪತ್ರಿಕೆಗೆ ಉತ್ತರ ಬರೆದು ಮುಗಿಸಿ ಪರೀಕ್ಷಾ ಕೊಠಡಿಯಿಂದ ಹೊರಬರುತ್ತಿರುವಾಗ ಕೃಷ್ಣಪ್ಪಯ್ಯನವರು ತುಂಬಾ ಆತಂಕದಿಂದ ನಾನು ಹೊರಗೆ ಬರುವುದನ್ನೇ ಕಾಯುತ್ತಿರುವುದು ನನ್ನ ಕಣ್ಣಿಗೆ ಬಿತ್ತು. ನಾನು ತುಂಬಾ ಬೇಡಿಕೆ ಮಾಡಿದ್ದರೂ ಪ್ರಶ್ನೆಗೆ ಉತ್ತರ ಬರೆಯಲು ನಮಗೆ ಸಹಾಯ ಮಾಡದುದಕ್ಕಾಗಿ ತುಂಬಾ ಪಶ್ಚಾತ್ತಾಪವನ್ನು ವ್ಯಕ್ತಪಡಿಸಿದರು. ನಮ್ಮ ಪ್ರಶ್ನೆ ಪತ್ರಿಕೆಯಲ್ಲಿ ಪ್ರಶ್ನೆಗೆ ಯಾವುದೇ ಚಾಯ್ಸ್ ಇಲ್ಲದ್ದರಿಂದ ಉತ್ತರ ಬರೆಯದ ನನಗೆ ೧೦ ಅಂಕಗಳು ನಷ್ಟವಾದುವೆಂದು ಅವರು ಭಾವಿಸಿದ್ದರು. ನಾನವರಿಗೆ ಏನೂ ಬೇಸರಮಾಡುವ ಅವಶ್ಯಕತೆ ಇಲ್ಲವೆಂದೂ ಮತ್ತು ನಾನು ಪ್ರಶ್ನೆಗೆ ಸರಿಯಾದ ಉತ್ತರ ಬರೆದಿರುವೆನೆಂದೂ  ತಿಳಿಸಿದೆ!

ಮೂಲತಃ ನನ್ನದೊಂದು ಸ್ವಭಾವವಿತ್ತು. ನಾನು ಪರೀಕ್ಷೆಯ ವಿಷಯದಲ್ಲಿ ಯಾವುದೇ ರಿಸ್ಕ್ ತೆಗೆದುಕೊಳ್ಳುತ್ತಿರಲಿಲ್ಲ. ಕೃಷ್ಣಪ್ಪಯ್ಯನವರು ಸಹಾಯ ಮಾಡದಿದ್ದರಿಂದ ನಾನು ಒಂದು ಗೈಡ್ ನೋಡಿ ಪ್ರಶ್ನೆಗೆ ಉತ್ತರ ಬರೆಯುವ ತಯಾರಿ ಮಾಡಿಕೊಂಡು ಬಿಟ್ಟಿದ್ದೆ. ಹಾಗಾಗಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳಲ್ಲಿ ನಾನು ಮಾತ್ರ ಪ್ರಶ್ನೆಗೆ ಉತ್ತರಿಸಿ ಬಿಡಲು ಸಾಧ್ಯವಾಗಿತ್ತು. ಕೃಷ್ಣಪ್ಪಯ್ಯನವರಿಗೆ ನಾನು ಹೇಳಿದುದನ್ನು ನಂಬುವುದೇ ಕಷ್ಟವಾಯಿತು. ಅವರು ನನ್ನ ಹಠ ಮತ್ತು ಸಾಧನೆಗೆ ಹಾರ್ದಿಕವಾಗಿ ಅಭಿನಂದಿಸಿದರು.

------- ಮುಂದುವರಿಯುವುದು-----