Saturday, May 16, 2020

ಬಾಲ್ಯ ಕಾಲದ ನೆನಪುಗಳು – ೮೬



ನಾನು ಪ್ರತಿ ವರ್ಷದ ಬೇಸಿಗೆ ರಜೆಯಲ್ಲಿ ನಮ್ಮ ಮನೆಯ ಮಳೆಗಾಲದ ಕೆಲಸಗಳೆಲ್ಲಾ ಮುಗಿದ ಮೇಲೆ ನನ್ನ ಅಕ್ಕಂದಿರಿಬ್ಬರ ಊರಾದ ಹೊಕ್ಕಳಿಕೆಗೆ ಹೋಗಿ ಸ್ವಲ್ಪ ದಿನ ಇದ್ದು ಬರುತ್ತಿದ್ದೆ. ನಾನು ಹಿಂದೆ ಅದೇ ಊರಿನಲ್ಲೇ ಮೂರು ವರ್ಷ ಇದ್ದು ಬಸವಾನಿ ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದರಿಂದ ನನಗೆ ಅಲ್ಲಿ ಅನೇಕ ಸ್ನೇಹಿತರಿದ್ದರು. ನನ್ನ ಅಕ್ಕಂದಿರು ಕಡಿಮೆಯೆಂದರೆ ೧೦ ದಿನಗಳ ಮೊದಲು ನನಗೆ ವಾಪಾಸ್ ಊರಿಗೆ ಬರಲು ಬಿಡುತ್ತಿರಲಿಲ್ಲ.  ಈ ವರ್ಷವೂ ಮೇ ತಿಂಗಳ ಕೊನೆಯಲ್ಲಿ ನಾನು ಹೊಕ್ಕಳಿಕೆಯಲ್ಲಿಯೇ ಇದ್ದೆ. ನನ್ನ ಪರೀಕ್ಷಾ ಫಲಿತಾಂಶಗಳು ಸದ್ಯದಲ್ಲೇ ಬರಲಿದ್ದವು. 

ಆ ದಿನಗಳಲ್ಲಿ ಎಸ್.ಎಸ್.ಎಲ್.ಸಿ ಮತ್ತು ಆಮೇಲಿನ ಎಲ್ಲ ಪರೀಕ್ಷಾ ಫಲಿತಾಂಶಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು. ಪರೀಕ್ಷೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ರಿಜಿಸ್ಟ್ರೇಶನ್ ನಂಬರ್ ಗಳು ಫಸ್ಟ್ ಕ್ಲಾಸ್, ಸೆಕೆಂಡ್ ಕ್ಲಾಸ್ ಮತ್ತು ಥರ್ಡ್ ಕ್ಲಾಸ್ ಎಂಬ ಮೂರು ವರ್ಗೀಕರಣದಲ್ಲಿ ಪ್ರಕಟವಾಗುತ್ತಿದ್ದವು. ಯಾವುದೇ ವಿದ್ಯಾರ್ಥಿಯ ರಿಜಿಸ್ಟ್ರೇಶನ್ ನಂಬರ್ ಮೂರು ವರ್ಗದಲ್ಲೂ ಇರಲಿಲ್ಲವೆಂದರೆ ಅವನು ಅನುತ್ತೀರ್ಣ ಆಗಿದ್ದನೆಂದು ತಿಳಿಯುತ್ತಿತ್ತು. ಅದಲ್ಲದೇ ಮೊದಲ ಹತ್ತು Rank ಪಡೆದ ವಿದ್ಯಾರ್ಥಿಗಳ ಹೆಸರು ಮತ್ತು ರಿಜಿಸ್ಟ್ರೇಶನ್ ನಂಬರ್ ಸಾಮಾನ್ಯವಾಗಿ ಮೊದಲ ಪುಟದಲ್ಲಿಯೇ ಪ್ರಕಟವಾಗುತ್ತಿದ್ದವು.

Rank ಪಡೆದ ವಿದ್ಯಾರ್ಥಿಗಳ ಛಾಯಾಚಿತ್ರಗಳೂ ಸಾಮಾನ್ಯವಾಗಿ ಸ್ವಲ್ಪ ದಿನಗಳ ನಂತರ ಪ್ರಕಟವಾಗುತ್ತಿದ್ದವು. ನನ್ನ ಉಪನ್ಯಾಸಕರು ಮತ್ತು ಹಿತೈಷಿಗಳು (ಮುಖ್ಯವಾಗಿ ನನ್ನ ಪ್ರೀತಿಯ ಅಣ್ಣ)  ಒಂದಲ್ಲ ಒಂದು ದಿನ ನನ್ನ ಹೆಸರೂ ಕೂಡ Rank ಪಡೆದ ವಿದ್ಯಾರ್ಥಿಗಳ ಪಟ್ಟಿಯಲ್ಲಿ ಪ್ರಕಟವಾಗಿಯೇ ಬಿಡುವುದೆಂದು ಹೇಳುತ್ತಲೇ ಇದ್ದರು. ಆದರೆ ಸ್ವತಃ ನನಗೇ ಆ ರೀತಿ ನನ್ನ ಹೆಸರನ್ನು ದಿನಪತ್ರಿಕೆಯಲ್ಲಿ ನೋಡುವೆನೆಂಬ ನಂಬಿಕೆ ಇರಲಿಲ್ಲ. ಏಕೆಂದರೆ ನಾನೊಬ್ಬ ಹಳ್ಳಿ ಹುಡುಗ ಮತ್ತು ಪೇಟೆಯ ಹುಡುಗರಿಗೆ ಮಾತ್ರ ಅದು ಸಾಧ್ಯವೆಂದು ನಾನು ತಿಳಿದಿದ್ದೆ. ನಾನು ಹೊಕ್ಕಳಿಕೆಯಲ್ಲಿ ಪ್ರತಿ ದಿನವೂ ದಿನಪತ್ರಿಕೆಯಲ್ಲಿ ನಮ್ಮ ಪರೀಕ್ಷಾ ಫಲಿತಾಂಶ ಬಂದಿದೆಯೇ ಎಂದು ನೋಡುತ್ತಲೇ ಇದ್ದೆ. ಆಗ ದಿನಪತ್ರಿಕೆಗಳು ಸಂಜೆಯ ವೇಳೆಗೆ ಮನೆಗೆ ಬರುತ್ತಿದ್ದವು.

ಮರೆಯಲಾಗದ ದಿನ

ಆ ದಿನ ಇಂದಿಗೂ ನನಗೆ ಸ್ಪಷ್ಟವಾಗಿ ನೆನಪಿಗೆ ಬರುತ್ತಿದೆ. ಅದು ೧೯೬೬ನೇ ಇಸವಿಯ ಜೂನ್ ತಿಂಗಳ ಒಂದನೇ ತಾರೀಕು. ನಾನು ಮದ್ಯಾಹ್ನದ ಊಟ ಮುಗಿಸಿ ಗೌರಕ್ಕನ ಮನೆಯಿಂದ ಹೊರಟು ಎರಡು ಮೈಲಿ ದೂರ ನಡೆದು ಕೊಪ್ಪಕ್ಕೆ ಹೋಗುವ ಬಸ್ ಹತ್ತಲು ಗಡಿಕಲ್ ಎಂಬ ಊರಿಗೆ ಬಂದೆ. ಸುಮಾರು ಮೂರು ಗಂಟೆಯ ವೇಳೆಗೆ ನನಗೆ ದಿನಪತ್ರಿಕೆ ಏಜೆಂಟರಾದ ಗುಂಡಾ ನಾಯಕ್ ಎಂಬುವರ ಅಂಗಡಿಯಲ್ಲಿ ಅಂದಿನ ಪ್ರಜಾವಾಣಿ ಪತ್ರಿಕೆ ನೋಡಲು ಸಾಧ್ಯವಾಯಿತು. ನಮ್ಮ ಪರೀಕ್ಷಾ ಫಲಿತಾಂಶ ಪ್ರಕಟವಾಗಿರುವುದೂ ನನ್ನ ಗಮನಕ್ಕೆ ಬಂತು. ನಾನು ಬೇಗ ಬೇಗನೆ ನನ್ನ ರಿಜಿಸ್ಟ್ರೇಶನ್ ನಂಬರ್ (೮೬೭೫) ಪ್ರಥಮ ದರ್ಜೆಯಲ್ಲಿ ಪಾಸಾದ ವಿದ್ಯಾರ್ಥಿಗಳ ಪಟ್ಟಿಯಲ್ಲಿ ಇದೆಯೇ ಎಂದು ನೋಡಿದೆ. ಹೌದು. ನನ್ನ ನಂಬರ್ ಅಲ್ಲಿತ್ತು. ಆ ನಂತರ ನಾನು Rank ಪಡೆದ ವಿದ್ಯಾರ್ಥಿಗಳ ಪಟ್ಟಿಯನ್ನು ನೋಡತೊಡಗಿದೆ. ನಾನು ಮೊದಲ ಮೂರು Rank ಪಡೆದ ವಿದ್ಯಾರ್ಥಿಗಳ ಹೆಸರನ್ನು ನೋಡಿ ನಾಲ್ಕನೇ ಹೆಸರಿಗೆ ಬಂದೆ. ಒಹ್! ನನ್ನ ಕಣ್ಣುಗಳು ಅಲ್ಲಿಂದ ಮುಂದೆ ದೃಷ್ಟಿ ಹಾಯಿಸಲೇ ಇಲ್ಲ. ಅದು ಖಂಡಿತವಾಗಿಯೂ ಕನಸಾಗಿರಲಿಲ್ಲ. ಅದು ನನ್ನ ಹೆಸರೇ ಆಗಿತ್ತು!  ಹೌದು. ಹೆಸರು, ರಿಜಿಸ್ಟ್ರೇಶನ್ ನಂಬರ್ ಮತ್ತು ನಮ್ಮ ಕಾಲೇಜಿನ ಹೆಸರು ಎಲ್ಲವೂ ಸರಿಯಾಗೇ ಇತ್ತು.

ನಾನು ಆ ಸಮಯದಲ್ಲಿ ಅನುಭವಿಸಿದ ಸಂಭ್ರಮ ಮತ್ತು ಸಂತೋಷವನ್ನು ವರ್ಣಿಸಲು ನನಗೆ ಪದಗಳೇ ಸಿಗುತ್ತಿಲ್ಲ. ಅದು ನನ್ನ ಜೀವಮಾನದ ಅತ್ಯಂತ ಹರ್ಷದಾಯಕ ಕ್ಷಣವಾಗಿತ್ತೆಂದು ಇಂದಿಗೂ ಅನ್ನಿಸುತ್ತಿದೆ. ಆಮೇಲೆ ಕೂಡ ನನ್ನ ಜೀವನದಲ್ಲಿ ಎಷ್ಟೋ ಉಲ್ಲಾಸದ ಸಂಗತಿಗಳು ಜರುಗಿದ್ದವು. ಆದರೆ ಅವುಗಳು ಯಾವುವೂ ನನಗೆ ನನ್ನ ಹೆಸರನ್ನು ಮೊದಲ ಬಾರಿ ದಿನಪತ್ರಿಕೆಯ Rank ಪಟ್ಟಿಯಲ್ಲಿ ನೋಡಿದಷ್ಟು ಆನಂದವನ್ನು ಕೊಟ್ಟಿಲ್ಲ. ನನಗೆ ಬಂದ ಮೊಟ್ಟ ಮೊದಲ ಯೋಚನೆ ಎಂದರೆ ನನ್ನ ಆ ಅಪೂರ್ವ ಕ್ಷಣವನ್ನು ಅಣ್ಣನೊಡನೆ ಹಂಚಿಕೊಳ್ಳಬೇಕೆಂದು. ಆದರೆ ಆ ಕಾಲದಲ್ಲಿ ಟೆಲಿಫೋನ್ ಸಂಪರ್ಕ ಕೂಡ ಲಭ್ಯವಿರಲಿಲ್ಲ. ಅಣ್ಣ ಆಗ ಶಿವಮೊಗ್ಗೆಯಲ್ಲಿದ್ದರಿಂದ ಬೆಳಿಗ್ಗೆಯೇ ದಿನಪತ್ರಿಕೆಯಲ್ಲಿ ನನ್ನ ಹೆಸರು ನೋಡಿರಬೇಕು. ಆದರೆ ಅವನು ನನ್ನನ್ನು ಯಾವುದೇ ರೀತಿಯಲ್ಲಿ ಸಂಪರ್ಕ ಮಾಡುವ ಸಾಧ್ಯತೆ ಇರಲಿಲ್ಲ. ನಿಜ ಹೇಳಬೇಕೆಂದರೆ ನನ್ನ ಸಂತೋಷವನ್ನು ಹಂಚಿಕೊಳ್ಳಬಹುದಾದ ಯಾವುದೇ ವ್ಯಕ್ತಿ ಆಗ ನನ್ನ ಬಳಿ ಇರಲಿಲ್ಲ.

 ಜೈ! ಶ್ರೀಕೃಷ್ಣ!

ಆಗ ನನ್ನ ಮನಸ್ಸಿಗೆ ಬಂದ ಮೊದಲ ವಿಷಯವೆಂದರೆ ಹೇಗಾದರೂ ಮಾಡಿ ನಾನು ದಿನಪತ್ರಿಕೆಯ ಒಂದು ಪ್ರತಿಯನ್ನು ಪಡೆಯಲೇ ಬೇಕೆಂದು. ಆದರೆ ಏಜೆಂಟ್ ಗುಂಡಾ ನಾಯಕ್ ಅವರು ಕೇವಲ ಒಂದೇ ಪ್ರತಿ ಅವರ ಬಳಿ ಇರುವುದರಿಂದ ಅದನ್ನು ನನಗೆ ಕೊಡಲು ಸಾಧ್ಯವಿಲ್ಲವೆಂದು ನಿರಾಕರಿಸಿ ಬಿಟ್ಟರು. ನಾನು ನನ್ನ ಹೆಸರು ಪತ್ರಿಕೆಯಲ್ಲಿ ಬಂದಿರುವುದನ್ನು ತೋರಿಸಿದರೂ ಏನೂ ಪ್ರಯೋಜನವಾಗಲಿಲ್ಲ. ಆ ವೇಳೆಗೆ ಅಲ್ಲಿಗೆ ಬಂದ  ಕೊಪ್ಪ ಬಸ್ ಹತ್ತಿ ಅರ್ಧ ಗಂಟೆಯಲ್ಲಿ ನಾನು ಕೊಪ್ಪ ತಲುಪಿ ಬಿಟ್ಟೆ. ಅಲ್ಲಿನ ಬಸ್ ಸ್ಟ್ಯಾಂಡಿನಲ್ಲಿ ನನ್ನ ಕ್ಲಾಸ್ ಮೇಟ್ ಆಗಿದ್ದ ಶ್ರೀಕೃಷ್ಣ ಎನ್ನುವ ಹುಡುಗನನ್ನು ನೋಡಿದೆ. ನನ್ನ ಹೆಸರನ್ನು ಆಗಲೇ ದಿನಪತ್ರಿಕೆಯಲ್ಲಿ ನೋಡಿದ್ದ ಶ್ರೀಕೃಷ್ಣ ಪದೇ ಪದೇ ನನ್ನನ್ನು ಅಭಿನಂದಿಸ ತೊಡಗಿದ. ಅವನ ಪ್ರಕಾರ ನಾನು ನಮ್ಮ ಕಾಲೇಜಿಗೆ ದೊಡ್ಡ ಕೀರ್ತಿಯನ್ನು ತಂದು ಬಿಟ್ಟಿದ್ದೆ.

ನಾನು ಶ್ರೀಕೃಷ್ಣನಿಗೆ ನನಗೆ ದಿನಪತ್ರಿಕೆಯ ಒಂದೇ ಒಂದು ಪ್ರತಿಯೂ ದೊರೆಯದಿರುವ ಸಮಸ್ಯೆಯನ್ನು ಹೇಳಿದೆ. ಅವನು ನನ್ನನ್ನು ಪೇಟೆಯಲ್ಲಿದ್ದ ಎಷ್ಟೋ ಅಂಗಡಿಗಳಿಗೆ ಕರೆದುಕೊಂಡು ಹೋದ. ಆದರೆ ಅವರೆಲ್ಲರ ಹತ್ತಿರ ಒಂದೇ ಒಂದು ಪ್ರತಿ ಇದ್ದರಿಂದ ಅದನ್ನು ಕೊಡಲು ಸ್ಪಷ್ಟವಾಗಿ ನಿರಾಕರಿಸಿ ಬಿಟ್ಟರು. ಆ ದಿನಗಳಲ್ಲಿ ನಮ್ಮೂರಿನಲ್ಲಿ ಕೇವಲ ಬೆಳವಿನಕೊಡಿಗೆಗೆ ಒಂದು ದಿನ ಪತ್ರಿಕೆ ಬರುತ್ತಿತ್ತು. ಆದರೆ ಕೆಲವು ದಿನ ಅದರ ಪ್ರತಿಯೂ ಅಲ್ಲಿಗೆ ತಲುಪದೇ ಎಲ್ಲೋ ಕಳೆದು ಹೋಗುತ್ತಿತ್ತು. ಆದ್ದರಿಂದ ನನ್ನ ತಂದೆ ತಾಯಿಯರಿಗೆ ತೋರಿಸಲೂ ಒಂದು ಪ್ರತಿ ನನಗೆ ಸಿಗುವ ಗ್ಯಾರಂಟಿ ಇರಲಿಲ್ಲ. ನನಗೆ ಹೇಗಾದರೂ ಮಾಡಿ ಒಂದು ಪ್ರತಿಯನ್ನು ಪಡೆದುಕೊಳ್ಳುವುದು ತೀರಾ ಅವಶ್ಯವಾಗಿತ್ತು.

ಶ್ರೀಕೃಷ್ಣ ನನಗೆ ಬಸ್ ಸ್ಟ್ಯಾಂಡಿನಲ್ಲೇ ಇರುವಂತೆ ಹೇಳಿ ಹೊರಟು ಹೋದ. ಸ್ವಲ್ಪ ಸಮಯದ ನಂತರ ಹಿಂತಿರುಗಿದ ಅವನು ಪ್ರಜಾವಾಣಿಯ ಒಂದು ಪ್ರತಿಯನ್ನು ನನಗೆ ಕೊಟ್ಟುಬಿಟ್ಟ. ಅವನ ಪ್ರಕಾರ ಆ ಪ್ರತಿಯನ್ನು ಅವನು ಕದ್ದುಕೊಂಡು ಬಂದಿದ್ದನಂತೆ! ಯಾವುದೋ ಒಂದು ಅಂಗಡಿಯಲ್ಲಿ ಅಲ್ಲಿದ್ದ ಪತ್ರಿಕೆಯನ್ನು ಓದುತ್ತಿರುವಂತೆ ಮಾಡಿ ಮೆತ್ತಗೆ ಅದನ್ನು ಮಡಿಸಿ ಹಿಡಿದುಕೊಂಡು ಬಂದು ಬಿಟ್ಟನಂತೆ! ಆ ಪ್ರಜಾವಾಣಿಯ ಪ್ರತಿ ಇಂದಿಗೂ ನನ್ನ  ಬಳಿ ಇದೆ.  ಜೈ! ಶ್ರೀಕೃಷ್ಣ!

ನಮ್ಮ ಮನೆಯಲ್ಲೊಂದು ಹಬ್ಬದ ವಾತಾವರಣ

ನಾನು ಸಂಜೆಯ ವೇಳೆಗೆ ಮನೆ ತಲುಪಿದೆ. ಆಗ ನಮ್ಮ ಮನೆಯಲ್ಲೊಂದು ಹಬ್ಬದ ವಾತಾವರಣವಿತ್ತು. ಏಕೆಂದರೆ ಪುಟ್ಟಣ್ಣ ಮಧ್ಯಾಹ್ನದ ನಂತರ ಪೋಸ್ಟ್ ಆಫೀಸಿಗೆ ಹೋಗಿ ದಿನಪತ್ರಿಕೆ ಮನೆಗೆ ತಂದು ಬಿಟ್ಟಿದ್ದ.  ಅವನು ತುಂಬಾ  ಉತ್ಸಾಹದಿಂದ ಅಪ್ಪ ಮತ್ತು ಅಮ್ಮನಿಗೆ ನನ್ನ ಹೆಸರನ್ನು Rank ಪಟ್ಟಿಯಲ್ಲಿ ತೋರಿಸಿ ಬಿಟ್ಟಿದ್ದ. ವಿಚಿತ್ರವೆಂದರೆ ದಾರಿಯಲ್ಲಿ ಸಿಕ್ಕ ಕೆಲವರಿಗೆ ಅವನು ನಾನು Rank ಪಡೆದಿದ್ದೇನೆಂದು ಹೇಳಿದಾಗ ಅವರಿಗೆ ಏನೂ ಅರ್ಥವಾಗದೇ ಪಾಸ್ ಆಗಿರುವನಲ್ಲವೇ ಎಂದು ಪ್ರಶ್ನಿಸಿದ್ದರಂತೆ! ನನಗೆ ಖುಶಿ ನೀಡಿದ ಇನ್ನೊಂದು ವಿಷಯವೆಂದರೆ ನನ್ನ ಮೊಟ್ಟ ಮೊದಲ ಶಾಲೆಯ ಗುರುಗಳಾದ ಶ್ರೀಕಂಠ ಜೋಯಿಸರು ಆ ವೇಳೆಯಲ್ಲಿ ನಮ್ಮ ಮನೆಗೆ ಬಂದುದು. ಜೋಯಿಸರಿಗೆ ನನ್ನ ಹೆಸರನ್ನು ದಿನಪತ್ರಿಕೆಯಲ್ಲಿ ನೋಡಿ ತುಂಬಾ ಆನಂದವಾಗಿತ್ತು. ನನ್ನ ತಂದೆಯವರು ನನ್ನ ಸಾಧನೆಗೆ ಅಡಿಪಾಯ ಹಾಕಿದವರು ಜೋಯಿಸರೇ ಎಂದು ಹೇಳಿ ಅವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿಸಿದರು.  ಆ ದಿನ ನಮ್ಮ ಪಕ್ಕದ ಕಿಟ್ಟಜ್ಜಯ್ಯನ ಮನೆಯಲ್ಲಿ ಯಾವುದೋ ಸಮಾರಂಭವಿದ್ದರಿಂದ ನಾವು ಅಲ್ಲಿಯೇ ರಾತ್ರಿ ಊಟ ಮಾಡಿದೆವು. ಅಲ್ಲಿ ಸೇರಿದ್ದವರಿಗೆಲ್ಲಾ ಜೋಯಿಸರು ನಾನು Rank ಪಡೆದುದರ ಮಹತ್ವದ ಬಗ್ಗೆ ವಿವರಣೆ ನೀಡಿದರು. ಒಟ್ಟಿನಲ್ಲಿ ಆ ದಿನ ನನ್ನ ಜೀವನದ ಅತ್ಯಂತ ಸಂತೋಷದ ದಿನವಾಗಿತ್ತೆಂದು ಹೇಳಲೇ ಬೇಕು.

ಅಣ್ಣನಿಂದ ಪತ್ರ ಮತ್ತು ಅಭಿನಂದನೆ

ನನಗೆ ಆದಷ್ಟು ಬೇಗ ನನ್ನ ಕಾಲೇಜಿನ ಉಪನ್ಯಾಸಕರುಗಳನ್ನು ಭೇಟಿ ಮಾಡಿ ನನ್ನ ಸಂತೋಷವನ್ನು ಅವರೊಡನೆ ಹಂಚಿಕೊಳ್ಳಬೇಕೆಂಬ ಆಸೆಯಿತ್ತು. ಆದರೆ ಪ್ರಿನ್ಸಿಪಾಲರ ಹೊರತಾಗಿ ಉಳಿದವರೆಲ್ಲರೂ ಬೇಸಿಗೆ ರಜೆಯಲ್ಲಿ ಊರಿಗೆ ಹೋಗಿದ್ದರು. ಆದ್ದರಿಂದ ನಾನು ಮುಂದಿನ ಒಂದು ವಾರ  ಶೃಂಗೇರಿಗೆ ಹೋಗದೇ ಮನೆಯಲ್ಲೇ ಇದ್ದೆ. ಅಷ್ಟರಲ್ಲಿ ಶಿವಮೊಗ್ಗೆಯಿಂದ ನನ್ನ ಅಣ್ಣನ ಪತ್ರ ಬಂದು ಬಿಟ್ಟಿತ್ತು. ಅಣ್ಣನ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ಅವನ ಪ್ರಕಾರ ನಾನು ಅವನ ಕನಸನ್ನು ನನಸು ಮಾಡಿ ಬಿಟ್ಟಿದ್ದೆ!

ಶಂಕರರಾಯರಿಂದ ಅಭಿನಂದನೆ

ನಾನು ಕಾಲೇಜಿಗೆ ಹೋಗಿ ಓದಲು ಏಕೈಕ ಕಾರಣರಾಗಿದ್ದ ವಿಶ್ವನಾಥಪುರ ಶಂಕರರಾಯರನ್ನು ನಾನು ಅವರ ಮನೆಗೆ ಹೋಗಿ ಭೇಟಿಯಾದೆ. ಅವರು ನನ್ನನ್ನು ಪದೇ ಪದೇ ಅಭಿನಂದಿಸಿದರು. ನನ್ನ ಸಾಧನೆಯ ಬಗ್ಗೆ ಅವರಿಗೇ ತುಂಬಾ ಅಭಿನಂದನೆಗಳು ಬಂದಿದ್ದವಂತೆ. ಏಕೆಂದರೆ ಅವರೇ ನನ್ನನ್ನು ಕಾಲೇಜಿಗೆ ಸೇರಿಸಿದ್ದು ಎಂದು ತುಂಬಾ ಜನರಿಗೆ ಗೊತ್ತಿತ್ತು. ಆದರೆ ಅವರು ನನ್ನ ಸಾಧನೆಗೆ ನಾನೇ  ಕಾರಣ ಎಂದು ಸ್ಪಷ್ಟಪಡಿಸಿಬಿಟ್ಟರು. ಹಾಗೂ ಆದಷ್ಟು ಬೇಗ ಶೃಂಗೇರಿಗೆ ಹೋಗಿ ಪ್ರಿನ್ಸಿಪಾಲರನ್ನು ಭೇಟಿ ಮಾಡಬೇಕೆಂದು ಹೇಳಿದರು.

ಪತ್ತೆ ಇಲ್ಲದ Rank ವಿದ್ಯಾರ್ಥಿಗೆ ಬಹುಮಾನ!

ಶಂಕರರಾಯರು ಹೇಳಿದ ಪ್ರಕಾರ ನಾನು ಕಾಲೇಜಿನ ಮೊದಲ ವರ್ಷದಲ್ಲೇ Rank ಗಳಿಸಿದ್ದು ಕಾಲೇಜಿನ ಆಡಳಿತ ವರ್ಗಕ್ಕೆ ಮತ್ತು ಶೃಂಗೇರಿ ಪೇಟೆಯ ಜನಗಳಿಗೆ ತುಂಬಾ ಸಂತೋಷ  ತಂದಿತ್ತಂತೆ. ಮುಖ್ಯವಾಗಿ ಪ್ರಿನ್ಸಿಪಾಲರಿಗೆ ಮತ್ತು ಚಂದ್ರಮೌಳಿರಾಯರಿಗೆ ನಾನು ಕಾಲೇಜಿಗೆ ಪ್ರಥಮ ವರ್ಷದಲ್ಲೇ ಕೀರ್ತಿ ತಂದುಬಿಟ್ಟೆನೆಂದು ಹೆಮ್ಮೆ ಹಾಗೂ  ಅಭಿಮಾನ ಮೂಡಿಬಿಟ್ಟಿತ್ತಂತೆ. ಇಂಡಿಯನ್ ಎಕ್ಸ್ ಪ್ರೆಸ್ ಮತ್ತು ಕನ್ನಡ ಪ್ರಭ ಏಜೆಂಟ್ ಆಗಿದ್ದ ಎನ್ ಎಸ್ ಚಂದ್ರಶೇಖರ್  ಅವರು ನನ್ನ ಛಾಯಾಚಿತ್ರವನ್ನು  ಅವೆರಡು ದಿನಪತ್ರಿಕೆಗಳಲ್ಲಿ ಹಾಕಿಸಬೇಕೆಂದಿದ್ದರಂತೆ. ಆದರೆ ನನ್ನ ಛಾಯಾಚಿತ್ರ ಪಡೆಯುವ ಮೊದಲು ನಾನೆಲ್ಲಿರುವೆನೆಂದು ಅವರಿಗಾಗಲೀ ಅಥವಾ ನಮ್ಮ ಕಾಲೇಜಿನ ಪ್ರಿನ್ಸಿಪಾಲರಿಗಾಗಲೀ ಗೊತ್ತಾಗಲಿಲ್ಲವಂತೆ!  ಕಾಲೇಜಿನಲ್ಲಿದ್ದ ನನ್ನ ವಿಳಾಸ ಯಾವುದೇ ರೀತಿಯಲ್ಲಿ ಅವರ ಉಪಯೋಗಕ್ಕೆ ಬರಲಿಲ್ಲವಂತೆ. ಆ ದಿನಗಳಲ್ಲಿ ನಮ್ಮ ಹಳ್ಳಿಗಳಿಗೆ ಅಂಚೆ ಇಲಾಖೆಯ ಹೊರತಾಗಿ ಬೇರೆ ಯಾವುದೇ ಸಂಪರ್ಕ ಸಾಧನಗಳು ಇರಲಿಲ್ಲ. ಶೃಂಗೇರಿಯ ನಾಗರಿಕರು ಮಿತ್ರವೃಂದ ಎಂಬ ಸಂಘಟನೆಯ ಮೂಲಕ Rank ಪಡೆದುದಕ್ಕಾಗಿ ನನಗೊಂದು ಸನ್ಮಾನ ಸಮಾರಂಭವನ್ನು ಏರ್ಪಡಿಸಿದ್ದರಂತೆ. ನನ್ನ ಸಾಧನೆಯ ನೆನಪಿಗಾಗಿ ಒಂದು ಅಲರಾಂ ಗಡಿಯಾರವನ್ನು ಉಡುಗೊರೆಯಾಗಿ ಕೊಡಲು ತೀರ್ಮಾನಿಸಿದ್ದರಂತೆ. ನನ್ನ ಅನುಪಸ್ಥಿತಿಯಲ್ಲಿ ಅದನ್ನು ನಮ್ಮ ಪ್ರಿನಿಪಾಲ್ ರಾಮಕೃಷ್ಣರಾಯರ ವಶಕ್ಕೆ ಕೊಟ್ಟರಂತೆ.

ಶೃಂಗೇರಿಯಲ್ಲಿ ಮರೆಯಲಾಗದ ದಿನ

ನಾನು ಮಾರನೇ ದಿನವೇ ಯಥಾಪ್ರಕಾರ ಕಾಲ್ನಡಿಗೆಯ ಮೂಲಕ ಶೃಂಗೇರಿ  ತಲುಪಿದೆ. ನಾನು ಪೇಟೆಯ ಬೀದಿಯಲ್ಲಿ ಹೋಗುವಾಗ ನನ್ನ ಪರಿಚಯಸ್ತರು ನನ್ನನ್ನು ನಿಲ್ಲಿಸಿ ಹಾರ್ದಿಕವಾಗಿ ಅಭಿನಂದಿಸತೊಡಗಿದರು. ನನಗೆ ಪರಿಚಯವಿಲ್ಲದ ಕೆಲವರು ನನ್ನತ್ತ ಕೈ ತೋರಿಸಿ ಉಳಿದವರಿಗೆ ನಾನೇ Rank ಪಡೆದ ವಿದ್ಯಾರ್ಥಿ ಎಂದು ಹೇಳುತ್ತಿರುವುದೂ ನನ್ನ  ಕಣ್ಣಿಗೆ ಬಿತ್ತು.  ನನಗೆ ಅದೊಂದು ಎಂದೂ ಮರೆಯಲಾಗದ ದಿನವಾಗಿ ಹೋಯಿತು. ನಾನು ಕಟ್ಟ ಕಡೆಗೆ ಶಾರದಾಂಬೆಯ ದೇವಸ್ಥಾನದ ಹತ್ತಿರವೇ ಇದ್ದ ಪ್ರಿನ್ಸಿಪಾಲರ ಮನೆ ತಲುಪಿದೆ. ತುಂಬಾ ಆದರದಿಂದ ನನ್ನನ್ನು ಸ್ವಾಗತಿಸಿದ ಪ್ರಿನ್ಸಿಪಾಲರು ನಾನು ಇಷ್ಟು ದಿನ ಎಲ್ಲಿ ಅಡಗಿಕೊಂಡಿದ್ದೆನೆಂದು ಪ್ರಶ್ನಿಸಿದರು! ಹಾಗೆಯೇ ಮಿತ್ರವೃಂದದವರು ನೀಡಿದ್ದ ಗಡಿಯಾರವನ್ನು ನನಗೆ ಕೊಟ್ಟರು. ಅಲ್ಲದೇ ಮಣಿಪಾಲ್ ಅಕ್ಯಾಡೆಮಿಯವರೂ ಕೂಡ ನನಗೆಸೂಕ್ತ ಬಹುಮಾನ ನೀಡಲು ಬಯಸುತ್ತಿದ್ದಾರೆಂದು  ಹೇಳಿದರು.

ನಾನು ಕಾಲೇಜಿನ ಆಫೀಸಿಗೆ ಹೋಗುವಾಗ ಅಲ್ಲಿ ನನ್ನ ನೆಚ್ಚಿನ ಉಪನ್ಯಾಸಕರಿಂದ ಬಂದ ಟೆಲಿಗ್ರಾಂ ಮತ್ತು ಪತ್ರಗಳು ನನ್ನನ್ನು ಕಾಯುತ್ತಿದ್ದವು. ಪ್ರಧಾನ್ ಗುರುದತ್ ಅವರ ಪ್ರಕಾರ “I had permanently etched my name in the history of the institution by securing the fourth rank in its very first year of existence.’ ನನ್ನ ಇನ್ನೊಬ್ಬ ನೆಚ್ಚಿನ ಉಪನ್ಯಾಸಕರಾಗಿದ್ದ ರಘುನಾಥನ್ ಅವರ ಪತ್ರದ ಪ್ರಕಾರ ‘I had kept up his expectations and fully deserved the recognition.’

ನನ್ನ ಗುರುಗಳಿಂದ ಮತ್ತು ಆತ್ಮೀಯರಿಂದ ನನ್ನ ಸಾಧನೆಗೆ ದೊರೆತ ಈ ಬಗೆಯ ಪ್ರತಿಕ್ರಿಯೆಗಳಿಂದ ನನಗಾದ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ಆದರೆ ಈ ನಡುವೆ ನನ್ನ ಮನಸ್ಸಿನಲ್ಲಿ ಒಂದು ಪ್ರಶ್ನೆ ಪದೇ ಪದೇ ಮೇಲೆದ್ದು ಬರುತ್ತಿತ್ತು. ಅದಿಷ್ಟೇ. ಮುಂದೇನು? ಮುಂದೇನು?

------- ಮುಂದುವರಿಯುವುದು-----

No comments: