Tuesday, June 26, 2018

ಬೆಳವಿನಕೊಡಿಗೆ - ನಮ್ಮೂರಿನ ಇತಿಹಾಸ



ನಮ್ಮೂರು ಆಗಿನ ಕಾಲದ ಮಲೆನಾಡಿನಲ್ಲೇ ಒಂದು ಅತ್ಯಂತ ಸುಂದರವಾದ ಊರಾಗಿತ್ತೆಂದರೆ ಅತಿಶಯೋಕ್ತಿಯಲ್ಲ. ಖಂಡಿತವಾಗಿಯೂ ನೂರಾರು ವರ್ಷಗಳ ಹಿಂದೆ ಯಾವನೋ ದೊಡ್ಡ ಇಂಜಿನಿಯರ್ ಒಂದು ಸ್ಕೆಚ್ ಹಾಕಿ ನಮ್ಮೂರನ್ನು ಒಂದು ಸುಂದರ ಕಣಿವೆಯಲ್ಲಿ ಕೆರೆ ಕಟ್ಟೆಗಳ ಹಾಗೂ ಅಡಿಕೆ ಮತ್ತು ಬಾಳೆ ತೋಟಗಳ ನಡುವೆ ತಯಾರು ಮಾಡಿರಬೇಕು. ತೋಟಗಳು ನಮ್ಮ ಗ್ರಾಮದ ಹೆಸರಾದ ಬೆಳವಿನಕೊಡಿಗೆ ಎಂಬ ಮನೆಯಿಂದ ಶುರುವಾಗಿ ಒಂದು ಕಾಲದಲ್ಲಿ ಪುರದಮನೆ ಎಂದು ಪ್ರಸಿದ್ಧವಾಗಿದ್ದ ಮನೆಯ ಮುಂದಕ್ಕೂ  ಸ್ವಲ್ಪ ದೂರಕ್ಕೆ ಹರಡಿದ್ದವು. ತೋಟದ ಇನ್ನೊಂದು ತುದಿಯಲ್ಲಿ ನಾವು ಚಿಕ್ಕಂದಿನಲ್ಲಿ ಕಂಡಂತೆ ಗೋಳಿಕಟ್ಟೆ ಎಂಬ ಮನೆಯನ್ನು ಸರಿ  ಸುಮಾರು ೧೯೫೫ ನೇ ಇಸವಿಯಲ್ಲಿ ಹೊಸದಾಗಿ ಕಟ್ಟಲಾಯಿತು. ತೋಟದ ಸಾಲಿನ ಮಧ್ಯದಲ್ಲಿ ಅಲ್ಲಲ್ಲಿ ನಡುವಿನಮನೆ, ಸಂಪಿಗೆಕೊಳಲು, ಅಡೇಖಂಡಿ  ಮತ್ತು ಮೊದಲಮನೆ ಎಂಬ ಮನೆಗಳು ಇದ್ದು ಅಲ್ಲಿ ಬೇರೆಬೇರೆ ಸಂಸಾರಗಳು ವಾಸಿಸುತ್ತಿದ್ದವು. ಊರಿನ ಮೂರು ಭಾಗದಲ್ಲೂ ಬೆಟ್ಟ ಗುಡ್ಡಗಳಿದ್ದು ಒಂದು ಬೆಟ್ಟದ ಕೆಳಭಾಗದಲ್ಲಿ ಪವಿತ್ರವಾದ ತುಂಗಾ ನದಿ ಹರಿಯುತ್ತಿತ್ತು.  ಊರಿನ ಇನ್ನೊಂದು ತುದಿಯಲ್ಲಿ ಬತ್ತದ ಗದ್ದೆಗಳಿದ್ದವು. ಮಕ್ಕಿಗದ್ದೆಯೆಂದು ಕರೆಯುತ್ತಿದ್ದ ಗದ್ದೆಯ ಮುಂದೆ ಊರಿಗೆ ಮುಖ್ಯವಾದ ಗಣಪತಿ ಕಟ್ಟೆ (ದೇವಸ್ಥಾನ) ಇತ್ತು. ನಮ್ಮ ಊರಿನ ಇತರ ಭಾಗಗಳೆಂದರೆ ಹೊಸಳ್ಳಿ, ಬಾಳೆಹಿತ್ಲು, ಕನಮಡ್ಲು, ಅರದಳ್ಳಿ, ಮೇಲಿನಕೊಡಿಗೆ, ಚಿಟ್ಟೆಮಕ್ಕಿ, ಬಾಳೆಹಕ್ಲು, ಕೆಳಕೊಡಿಗೆ, ಹುರುಳಿಹಕ್ಲು, ಇತ್ಯಾದಿ. 

ಮಕ್ಕಿಗದ್ದೆಯ ಅಂಚಿನಲ್ಲಿದ್ದ ಒಂದು ಜೈನ ಶಾಸನ ಒಂದು ಕಾಲದಲ್ಲಿ ನಮ್ಮೂರಿನಲ್ಲಿ ಜೈನರು ವಾಸಿಸುತ್ತಿದ್ದರೆಂದು ಸೂಚಿಸುತ್ತಿತ್ತು. ಪ್ರಾಯಶಃ ಶಂಕರಾಚಾರ್ಯರು ಶೃಂಗೇರಿಯಲ್ಲಿ ಮಠ ಸ್ಥಾಪಿಸಿದಮೇಲೆ ಹೆಬ್ಬಾರರೆಂದು ಕರೆದುಕೊಳ್ಳುವ ಸ್ಮಾರ್ತ ಸಂಪ್ರದಾಯದ  ನಮ್ಮ ಜನಾಂಗ ಮಲೆನಾಡಿಗೆ ವಲಸೆ ಬಂದು ಹಾಗೆಯೇ ನಮ್ಮೂರಿಗೂ ಪ್ರವೇಶಿಸಿ ಅಡಿಕೆ ಮತ್ತು ಬತ್ತದ ಬೇಸಾಯದಲ್ಲಿ ತಮ್ಮನ್ನು ತೊಡಗಿಸಿ ಕೊಂಡಿರಬೇಕು. ಆದರೆ ಒಂದು ಕಾಲದಲ್ಲಿ ತುಂಬಾ ಪ್ರಸಿದ್ಧವಾಗಿ ವಾರ್ಷಿಕ ಜಾತ್ರೆ ಮತ್ತು ತೇರು ನಡೆಯುತ್ತಿದ್ದ ನಮ್ಮೂರ  ದೇವಸ್ಥಾನ ಯಾವುದೊ ಕಾರಣಕ್ಕೆ ತನ್ನ ಹಿರಿಮೆಯನ್ನು ಕಳೆದುಕೊಂಡಿರಬೇಕು. ಅದಕ್ಕೆ ಸಾಕ್ಷಿಯಾಗಿ ನಾವು ಚಿಕ್ಕಂದಿನಲ್ಲಿ ಕಂಡಂತೆ ದೇವಸ್ಥಾನದ ಪಕ್ಕದಲ್ಲಿದ್ದ ಬಾವಿ  ಪಾಳುಬಿದ್ದಿತ್ತು. ದೇವಸ್ಥಾನದ ಇನ್ನೊಂದು ಬದಿಯಲ್ಲಿ ತುಂಬಾ ಹಳೆಯ  ಹಾಗೂ ಸುಂದರವಾದ ಮರದ ತೇರೊಂದು ಮುರಿದು ಬಿದ್ದಿತ್ತು. ಅದರಲ್ಲಿದ್ದ ಎಷ್ಟೋ ಸುಂದರವಾದ ಪ್ರಾಣಿ ಪಕ್ಷಿಗಳ ಗೊಂಬೆಗಳು ಹಲವರ ಮನೆಯಲ್ಲಿ ಮಕ್ಕಳ ಆಟದ ಸಾಮಾನುಗಳಾಗಿ ಗೋಚರಿಸುತ್ತಿದ್ದವು.

ಸರಿ ಸುಮಾರು ೧೯೬೭ನೇ ಇಸವಿಯಲ್ಲಿ ಶೃಂಗೇರಿ JCBM ಕಾಲೇಜಿನಿಂದ ಪ್ರೊಫೆಸರ್ ಸುಂದರ್ (History Professor) ಅವರ ನೇತೃತ್ವದಲ್ಲಿ ಒಂದು ಪುರಾತತ್ವ ಪರಿಶೋಧನಾ ತಂಡ ನಮ್ಮೂರಿಗೆ ಆಗಮಿಸಿತ್ತು. ತಂಡ ನಮ್ಮೂರಿನ ಗಣಪತಿ ದೇವಸ್ಥಾನದ ಸ್ವಲ್ಪ ಮುಂದಿನ ಜಾಗದಲ್ಲಿ ಉತ್ಕತನ  ಮಾಡಿ ಸಂಶೋಧನೆ ನಡೆಸಿತು. ಹಾಗೂ ಒಂದು ವರದಿಯನ್ನು ತಯಾರು ಮಾಡಿತು. ವರದಿ  ಅಂದಿನ ಪ್ರಜಾವಾಣಿ ಪತ್ರಿಕೆಯ ಮುಂದಿನ ಪುಟದಲ್ಲೇ ಚಿಕ್ಕ ಸಮಾಚಾರ ರೂಪದಲ್ಲಿ ಪ್ರಕಟವಾಗಿತ್ತು. ಅದರ ಪ್ರಕಾರ ನಮ್ಮೂರಿಗೆ ಪುರಾತನ ಸಂಸ್ಕೃತಿ ಹಾಗೂ ಚರಿತ್ರೆ ಇತ್ತು. ಆದರೆ ಸಂಶೋಧನೆ ಅಲ್ಲಿಗೇ ಮುಕ್ತಾಯಗೊಂಡಿದ್ದು ನಮ್ಮ ದುರಾದೃಷ್ಟ. 

ಊರಿನ ಒಂದು ಭಾಗದಲ್ಲಿದ್ದ ಬೆಟ್ಟದಮೇಲೆ ಓರಣಕಲ್ ಎಂಬ ದೊಡ್ಡ ಗುಹೆ ಇತ್ತು. ನಾವು ಚಿಕ್ಕವರಾಗಿದ್ದಾಗ ಪ್ರತಿ ವರ್ಷವೂ ಗುಹೆಗೆ ಹುಲಿಗಳು ಬೇರೆ ಬೇರೆ ಕಾಡಿನಿಂದ ಬಂದು ಕ್ಯಾಂಪ್ ಮಾಡುತ್ತಿದ್ದವು. ನಮ್ಮ ಎಷ್ಟೋ ಜಾನುವಾರುಗಳು ಹುಲಿಗಳಿಗೆ ಬಲಿಯಾಗುತ್ತಿದ್ದವು. ಬೆಟ್ಟದ ಕೆಳಭಾಗದಲ್ಲಿ ಹಾಗೂ  ತೋಟಗಳ ಕಣಿವೆಯ ಮೇಲ್ಭಾಗದಲ್ಲಿ ಒಂದು ಕಾಡುಕಲ್ಲುಗಳ ಕಟ್ಟಣೆಯ ಸಂದಿಯಿಂದ ನೀರು ದೊಡ್ಡದಾಗಿ ಹರಿದು ಬರುತ್ತಿತ್ತು. ನೀರಿಗೆ ಸ್ವಲ್ಪ ದೂರದಲ್ಲಿ ಒಂದು ಕೆರೆಕಟ್ಟಲಾಗಿದ್ದು ಅದಕ್ಕೆ ದೇವರಮನೆ ಕೆರೆ ಎಂದು ಕರೆಯಲಾಗುತ್ತಿತ್ತು. ಹಾಗೆ ಕರೆಯಲು ಒಂದು ವಿಶಿಷ್ಟ ಕಾರಣವಿತ್ತು.

ಕೆರೆಯ ಮೇಲ್ಭಾಗದಲ್ಲಿ ಹಾದು ಹೋಗುತ್ತಿದ್ದ ರಸ್ತೆಯ ಒಂದು ಪಕ್ಕದಲ್ಲಿ ನಾಗರ ಕಟ್ಟೆಯಿದ್ದರೆ ಇನ್ನೊಂದು ಪಕ್ಕದಲ್ಲಿ ಒಂದು ಕಲ್ಲಿನ ಪೀಠದ ಮೇಲೆ ಬ್ರಹ್ಮನ ಮೂರ್ತಿಯನ್ನು ಸ್ಥಾಪಿಸಲಾಗಿತ್ತು. ಕೆರೆಯ ಇನ್ನೊಂದು ದಂಡೆಯ ಬದಿಯಲ್ಲಿ ಚೌಡೇಶ್ವರಿಯ ವಾಸಸ್ಥಾನವಿತ್ತು. ಬ್ರಹ್ಮನ ಮೂರ್ತಿಯಿದ್ದ ಜಾಗಕ್ಕೆ ಬ್ರಹ್ಮನಬನ ಎಂದೇ ಕರೆಯಲಾಗುತ್ತಿತ್ತು. ನಮಗೆ ತಿಳಿದಂತೆ ನಮ್ಮ ದೇಶದಲ್ಲಿ ರಾಜಸ್ಥಾನದ ಪುಷ್ಕರವೆಂಬ ಊರನ್ನು ಬಿಟ್ಟರೆ ಬೇರೆಲ್ಲ್ಲೂ ಬ್ರಹ್ಮನ ದೇವಸ್ಥಾನಗಳಿಲ್ಲ. ಅಲ್ಲೂ ಕೂಡ ಬ್ರಹ್ಮನಿಗೆ ಪೂಜೆ ಮಾಡುವುದಿಲ್ಲವಂತೆ. ಅದಕ್ಕೆ ಬ್ರಹ್ಮನ ಪತ್ನಿ ಸರಸ್ವತಿಯ ಶಾಪವೇ ಕಾರಣವಂತೆ. ಆದರೆ ಕಥೆ ಇಲ್ಲಿ ಅಪ್ರಸ್ತುತ. ಆದರೆ ನಮ್ಮೂರಿನಲ್ಲಿ ಬ್ರಹ್ಮನ ಮೂರ್ತಿ ಇದ್ದುದು ಮಾತ್ರವಲ್ಲ ಅದಕ್ಕೆ ನಿತ್ಯ ಪೂಜೆ ಇಲ್ಲದಿದ್ದರೂ ಆಗಾಗ ಫಲಾರ್ಪಣೆ (ಹಣ್ಣು ನೈವೇದ್ಯ) ಮಾಡಲಾಗುತ್ತಿತ್ತು.
ನಮ್ಮೂರಿನ ವಿಶೇಷ ನೀರಾವರಿ ಯೋಜನೆಗಳು
ನಮ್ಮ ಊರಿನ ಒಂದೊಂದು ಮನೆಗೂ ವಿಶೇಷವಾದ ಕುಡಿಯುವ ನೀರಿನ ವ್ಯವಸ್ಥೆ  ಇತ್ತು. ಬೆಳವಿನಕೊಡಿಗೆ ಮನೆಗೆ ಒಂದು ಕೆರೆಯಿಂದ ನೀರು ಹರಿದು ಬರುತ್ತಿದ್ದರೆ ಸಂಪಿಗೆಕೊಳಲಿಗೆ ದೇವರಮನೆ ಕೆರೆಯಿಂದ ನೀರು ಬರುತ್ತಿತ್ತು. ನಡುವಿನಮನೆ ಸಮೀಪದಲ್ಲಿದ್ದ  ಒಂದು ಬಾವಿಯಿಂದ ನೀರು ಉಕ್ಕಿ ಅಡಿಕೆ ಮರದ ದೋಣಿಯ ಮೂಲಕ ಮನೆಯ ಬಚ್ಚಲಿಗೆ ಬಂದು ಬೀಳ್ಳುತ್ತಿದ್ದಲ್ಲದೇ ಹೆಚ್ಚಾದ ನೀರು ಮನೆಯ ಕೆಳಗಿದ್ದ ಕೆರೆಗೆ ಹರಿದು ಹೋಗುತ್ತಿತ್ತು. ಇನ್ನು ಅಡೇಖಂಡಿ ಮತ್ತು ಮೊದಲಮನೆಗಳಿಗೆ ಒರತೆಯ ನೀರು ಧಾರಾಳವಾಗಿ ಹರಿದು ಬರುತ್ತಿತ್ತು.
ನಾವು ನೋಡಿದಂತೆ ನಮ್ಮೂರೆಲ್ಲಾ ಅಡಿಕೆ ಬಾಳೆ ತೋಟಗಳಿಂದ ತುಂಬಿದ್ದರೂ ಒಂದು ಕಾಲದಲ್ಲಿ ಬೇರೆಬೇರೆ ಬೆಳೆಗಳನ್ನೂ ಬೆಳೆಯುತ್ತಿದ್ದಿರಬೇಕು. ಏಕೆಂದರೆ ನಮ್ಮ ಮನೆಯ ಮೇಲ್ಭಾಗದಲ್ಲಿದ್ದ ತೋಟಕ್ಕೆ ಕಬ್ಬಿನಹಕ್ಲು ಎಂದು ಹೆಸರಿದ್ದರೆ ನಡುವಿನಮನೆಯ ಮುಂದಿದ್ದ ತೋಟಕ್ಕೆ ಶುಂಠಿಹಕ್ಲು ಎಂಬ ಹೆಸರಿತ್ತು. ತೋಟದ ಬೇರೆಬೇರೆ ಭಾಗಗಳಿಗೆ ಬೇರೆಬೇರೆ ಹೆಸರುಗಳು ರೂಡಿಯಲ್ಲಿದ್ದುವು. ಉದಾಹರಣೆಗೆ ಗುಡ್ಡೇತೋಟ, ಬಾವಿಕಂಡು, ಶೇಷನ ತೋಟ, ಪುಟ್ಟಕಂಡು, ಮುರುಗನಮನೆ ಕಂಡು,ಇತ್ಯಾದಿ.

ನಮ್ಮ ತೋಟದ ಕಣಿವೆ ಒಂದೇ ಮಟ್ಟದಲ್ಲಿರಲಿಲ್ಲ. ಹಾಗಾಗಿ ಅಡಿಕೆ ಹಾಗೂ ಬಾಳೆಗಿಡಗಳನ್ನು ವಿವಿದ ಮಟ್ಟದಲ್ಲಿ ನೆಟ್ಟು ಬೆಳೆಸಲಾಗಿತ್ತು. ಈ ರೀತಿ ಬೆಳೆಸಿದ ತೋಟದ ವಿವಿಧ ಭಾಗಗಳಿಗೆ ನೀರು ತಲುಪುವಂತೆ ಮಾಡುವುದು ದೊಡ್ಡ ಸಮಸ್ಯೆಯಾಗಿತ್ತು. ಆದರೆ ತೋಟದ ಮಧ್ಯದಲ್ಲಿ ಅಲ್ಲಲ್ಲಿದ್ದ ಕೆರೆಗಳಿಂದ ತೋಟದ ಎಲ್ಲ ಭಾಗಗಳಿಗೂ ನೀರು ತಲುಪುವ ವ್ಯವಸ್ಥೆಯಿತ್ತು. ಪ್ರತಿಯೊಂದು ಕೆರೆಯ ನೀರು ಕೂಡ ತೋಟದ ಮೂಲೆಮೂಲೆಗೂ ತಲುಪುವಂತೆ ಕಾಲುವೆಗಳನ್ನು ರಚಿಸಲಾಗಿತ್ತು. ಕೆರೆಗಳಿಗೆ ವಿಶಿಷ್ಟವಾದ ಹೆಸರುಗಳನ್ನು ಇಡಲಾಗಿತ್ತು. ಆದರೆ ಮೂಲ ಹೆಸರುಗಳು ಬಳಕೆಯಲ್ಲಿ ಬದಲಾಗುತ್ತ ಹೋಗಿ ಕೆಲವಕ್ಕೆ ಯಾವ ಅರ್ಥವೂ ಇಲ್ಲದಂತಾಗಿತ್ತು. ರೀತಿಯ ಕೆಲವು ಹೆಸರುಗಳೆಂದರೆ ಅತ್ರಣೆ ಕೆರೆ, ಕೊಣದಣೆ ಕೆರೆ, ನೂರ್ಲ್ ಪಾರ್ಲ್ ಕೆರೆ ಮತ್ತು ಕಪ್ರಣೆ ಕೆರೆ. ಬೇಸಿಗೆ ಕಾಲ  ಬಂದಾಗ ಎಲ್ಲಾ ಕೆರೆಗಳಿಗೂ ಕಟ್ಟೆ  ಕಟ್ಟಿ ನೀರನ್ನು ಸರದಿಯಮೇಲೆ ಬೇರೆಬೇರೆ ಮನೆಗಳಿಗೆ ಸೇರಿದ ತೋಟಗಳಿಗೆ ಬಿಡಲಾಗುತ್ತಿತ್ತು.

ಪ್ರತಿಮನೆಯ ತೋಟಕ್ಕೂ ಅದರ ವಿಸ್ತೀರ್ಣದ ಆಧಾರದ ಮೇಲೆ ಎಷ್ಟು ದಿನ ನೀರು ಬಿಡಬಹುದೆಂದು ಯಾವುದೋ ಕಾಲದಲ್ಲಿ ನಿಗದಿ ಮಾಡಲಾಗಿತ್ತು. ಮಳೆಗಾಲ ಬರುವ ಮುನ್ನ ಎಲ್ಲಾ ಕೆರೆಗಳ ಕಟ್ಟೆ ಒಡೆದು ನೀರನ್ನು ಹಳ್ಳಕ್ಕೆ ಬಿಡಲಾಗುತ್ತಿತ್ತು. ಹಳ್ಳ ಮುಂದೆ ಹರಿದು ಮಕ್ಕಿ ಗದ್ದೆಗೆ ಮಳೆಗಾಲದ ಬತ್ತದ ಬೆಳೆಗೆ ಉಪಯೋಗವಾಗುತ್ತಿತ್ತು.

 ನಾನು ಮೊದಲೇ ಹೇಳಿದಂತೆ ಯಾವನೋ ದೊಡ್ಡ ಇಂಜಿನಿಯರ್ ವಿಶಿಷ್ಟ ರೀತಿಯ ನೀರಾವರಿ ಯೋಜನೆಯನ್ನು ನಮ್ಮೂರಿಗೆ ಅಳವಡಿಸಿರಬೇಕು. ಏಕೆಂದರೆ  ಇಷ್ಟಲ್ಲದೇ ಮೊದಲಮನೆಯ ಮುಂದೆ ಹರಿಯುತ್ತಿದ್ದ ಒಂದು ಹಳ್ಳದಿಂದ  ಒಂದು ಕಾಲದಲ್ಲಿ ಪುರದಮನೆಯ ಮೇಲ್ಭಾಗದಲ್ಲಿದ್ದ ಬಸವನಮಕ್ಕಿ ಮತ್ತು ಬೂರನಮಕ್ಕಿ ಎಂಬ ಗದ್ದೆಗಳಿಗೆ ನೀರು ಹೋಗುವಂತೆ ಕಾಲುವೆ ಮಾಡಲಾಗಿತ್ತು.  ಪ್ರಕೃತಿಯ ವಿಕೋಪಕ್ಕೆ ಸಿಲುಕಿ ಕಾಲುವೆಯ ಅರ್ಧಭಾಗ ಕುಸಿದುಹೋಗಿ ನಾಶವಾಗಿದ್ದುದು ನಮ್ಮ ಕಣ್ಣಿಗೆ ಬೀಳುತ್ತಿತ್ತು. ನೀರಿನ ಆಧಾರ ತಪ್ಪಿದ್ದರಿಂದ ಎರಡು ಗದ್ದೆಗಳೂ ಶಾಶ್ವತವಾಗಿ ಹಾಳು  ಬಿದ್ದಿದ್ದವು.

ಇನ್ನೊಂದು ಅಪೂರ್ಣವಾದ ಮಹಾ ನೀರಾವರಿ ಯೋಜನೆ ನಮ್ಮೂರಿನ ಕಿತ್ಳೆಕಟ್ಟೆ ಗುಡ್ಡದ ಮೇಲೆ ಕಣ್ಣಿಗೆ ಬೀಳುತ್ತಿತ್ತು. ಅದೊಂದು ರೀತಿಯ ಭಗೀರಥ ಯೋಜನೆಯೇ ಅನ್ನಬಹುದು. ಯೋಜನೆಯಂತೆ ಗುಡ್ಡದ ಒಂದು ತಲೆಭಾಗದಿಂದ ಇಳಿಜಾರಿನಲ್ಲಿ ಬೇರೆಕಡೆ ಹರಿದು  ಹೋಗುತ್ತಿದ್ದ ಹಳ್ಳವನ್ನು ನಮ್ಮೂರಿನ ಕಡೆ ತಿರುಗಿಸಿ ಹರಿಸುವ ಪ್ರಯತ್ನವಿತ್ತು. ನೀರು ಹರಿದು ಹೋಗುತ್ತಿದ್ದ ಗುಡ್ಡದ ಇಳಿಜಾರಿನ ಭಾಗಕ್ಕೆ ಕೊಂಗನ  ಸರಳು ಎಂದು ಕರೆಯಲಾಗುತ್ತಿತ್ತು. ಆದರೆ ಯಾವುದೋ  ತಾಂತ್ರಿಕ ಕಾರಣದಿಂದ ಯೋಜನೆ ಅರ್ಧಕ್ಕೇ ನಿಂತು ಹೋಗಿ ಅಪೂರ್ಣವಾದ ಕಾಲುವೆಗಳು ತಮ್ಮ ಉದ್ದೇಶ ಸಾಧಿಸಲಾಗದೆ ಕೊರಗುತ್ತಿದ್ದುದು ನಮ್ಮ ಮನಮಿಡಿಯುವಂತಿತ್ತು.
ನಮ್ಮೂರ ಹುಲಿಯ ಮೈಸೂರು ಪಯಣ
ನಮ್ಮೂರಿಗೆ ಮಲೆನಾಡಿನ ಯಾವ  ಹಳ್ಳಿಗೂ ಸಿಗದಂತ ಸೌಭಾಗ್ಯವೊಂದು ಸಿಕ್ಕಿ ಅದು ನಮ್ಮೂರ ಇತಿಹಾಸಕ್ಕೆ ಸೇರ್ಪಡೆಯಾಗಿತ್ತು. ಪ್ರಸಂಗ ನಾವು ನಮ್ಮ ತಂದೆ-ತಾಯಿಯ ಬಾಯಿಂದ ಬಾಲ್ಯದಲ್ಲಿ ಕೇಳಿದ್ದು.  ನಾನು ಆಗಲೇ  ಬರೆದಂತೆ ನಮ್ಮೂರಿನ ಬೆಟ್ಟದ ಮೇಲಿದ್ದ ಓರಣಕಲ್ ಎಂಬ ಗುಹೆಗೆ ಆಗಾಗ ಹುಲಿಗಳು ವಲಸೆ ಬಂದು ಕ್ಯಾಂಪ್ ಮಾಡುತ್ತಿದ್ದವು. ಒಮ್ಮೆ ಹಾಗೆ ಬಂದ ಹುಲಿಯೊಂದು ದೀರ್ಘಕಾಲ ತನ್ನ ಕ್ಯಾಂಪನ್ನು ಮುಂದುವರಿಸಿ ನಮ್ಮೂರ ಜಾನುವಾರುಗಳನ್ನು ಒಂದೊಂದಾಗಿ ಕಬಳಿಸ ತೊಡಗಿತ್ತಂತೆ. ಪುರದಮನೆ ಶಿಂಗಪ್ಪಯ್ಯನವರು ಕಾಲದಲ್ಲಿ ನಮ್ಮೂರಿನ ಶ್ರೀಮಂತ ಮತ್ತು ಧೀಮಂತ ವ್ಯಕ್ತಿಯಾಗಿದ್ದರು. ಊರ ಜನರೆಲ್ಲಾ ಒಟ್ಟಾಗಿ ಹುಲಿಯ ಕಾಟದಿಂದ ಹೇಗಾದರೂ ಬಿಡುಗಡೆ ಮಾಡಬೇಕೆಂದು ಅವರನ್ನು ಕೇಳಿಕೊಂಡರಂತೆ.

ಶಿಂಗಪ್ಪಯ್ಯನವರು ಕೂಡಲೇ ಕಾರ್ಯೋನ್ಮುಖರಾಗಿ ತುಂಬಾ ಪ್ರವೀಣರಾಗಿದ್ದ ಬಡಗಿಗಳನ್ನು ಕರೆಸಿ ಒಂದು  ದೊಡ್ಡ ಹುಲಿಯ ಬೋನನ್ನು ತಯಾರು ಮಾಡಿಸಿದರಂತೆ.  ಬೋನಿನ ಒಂದುಭಾಗದಲ್ಲಿ ಒಂದು ಸಣ್ಣ ಕರುವನ್ನು ಅದರ ಜೀವಕ್ಕೆ ಅಪಾಯವಾಗದಂತೆ ಇಟ್ಟು ಬೋನನ್ನು ಗಾಡಿಯಲ್ಲಿ ತೆಗೆದುಕೊಂಡು ಹೋಗಿ ಗುಹೆಯ ಸಮೀಪದಲ್ಲಿ ಇರಿಸಿದರಂತೆ.  ಪ್ರಯತ್ನ ಫಲಕಾರಿಯಾಗಿ ರಾತ್ರಿಯೇ ಹುಲಿ ಕರುವನ್ನು ತಿನ್ನಲು ಬೋನಿನೊಳಗೆ ಪ್ರವೇಶಿಸಿ ಅದರಲ್ಲಿ ಸಿಕ್ಕಿಹಾಕಿಕೊಂಡಿತಂತೆ. ಹೀಗೆ ಸಿಕ್ಕಿಕೊಂಡ ಹುಲಿರಾಯನ ಘರ್ಜನೆ ದೂರ ದೂರದ ಊರುಗಳಿಗೂ ಕೇಳತೊಡಗಿತಂತೆ.
ಹುಲಿಯ ಬಂಧನದ ಸಮಾಚಾರ ಇಡೀ ಕೊಪ್ಪ ಮತ್ತು ಶೃಂಗೇರಿ ತಾಲೂಕುಗಳಲ್ಲಿ ಹರಡಿ ಅದನ್ನು ವೀಕ್ಷಿಸಲು ನಮ್ಮೂರಿಗೆ ಜನಗಳ ಸಂತೆಯೇ ಬರತೊಡಗಿತಂತೆ. ಊರಿನಲ್ಲಿ ಒಂದು ದೊಡ್ಡ ಹಬ್ಬದ ವಾತಾವರಣ ಇತ್ತಂತೆ. ಆದರೆ ಊರಿನವರಿಗೆ ಎದುರಾದ  ಸಮಸ್ಯೆಯೆಂದರೆ ಹುಲಿರಾಯನನ್ನು ಮುಂದೇನು ಮಾಡಬೇಕೆನ್ನುವುದು. ಆದರೆ ಶಿಂಗಪ್ಪಯ್ಯನವರು ತುಂಬಾ ದೂರದೃಷ್ಟಿಯುಳ್ಳ ವ್ಯಕ್ತಿ. ಆಗಿನ ಕಾಲದಲ್ಲಿ ಯಾವುದೇ ಸಂಪರ್ಕ ಸಾಧನಗಳು (ಟೆಲಿಫೋನ್ ಇತ್ಯಾದಿ) ಇರಲಿಲ್ಲ. ಆದ್ದರಿಂದ ಅವರು ಒಬ್ಬ ಗಣ್ಯ ವ್ಯಕ್ತಿಯನ್ನು ಮೈಸೂರಿಗೆ ಶ್ರೀಮನ್ ಮಹಾರಾಜ ನಾಲ್ಮಡಿ ಕೃಷ್ಣರಾಜರನ್ನು ಭೇಟಿಮಾಡಲು ಕಳಿಸಿದರಂತೆ. ಅವರ ಪ್ರಭಾವ ಎಷ್ಟಿತ್ತೆಂದರೆ ಮಹಾರಾಜರು ಮೈಸೂರಿನ ಪ್ರಾಣಿ ಸಂಗ್ರಹಾಲಯದ ಅಧಿಕಾರಿಗಳಿಗೆ ಹುಲಿಯನ್ನು ಸಾಗಿಸಲು ಸೂಕ್ತವಾದ ವಾಹನವನ್ನು ನಮ್ಮೂರಿಗೆ ಕೂಡಲೇ ಕಳಿಸುವಂತೆ ಅಪ್ಪಣೆ ಮಾಡಿದರಂತೆ. ಶೀಘ್ರದಲ್ಲೇ ನಮ್ಮೂರು ತಲುಪಿದ ವಾಹನದಲ್ಲಿ ನಮ್ಮೂರ ಹುಲಿರಾಯ ಸೂಕ್ತ ಬೀಳ್ಕೊಡಿಗೆ ಸಮಾರಂಭದ ನಂತರ ಆಗಿನ ರಾಜಧಾನಿಯಾದ ಮೈಸೂರಿಗೆ ಪ್ರಯಾಣ ಮಾಡಿದನಂತೆ.

ನಮ್ಮಮ್ಮನ  ಪ್ರಕಾರ ಆಮೇಲೆ ಎಷ್ಟೋ ವರ್ಷ ಪ್ರತೀ ತಿಂಗಳೂ ಮೈಸೂರು ಪ್ರಾಣಿ ಸಂಗ್ರಹಾಲಯದಿಂದ ಶಿಂಗಪ್ಪಯ್ಯನವರ  ಹೆಸರಿಗೆ ಒಂದು ಪತ್ರ  ಬರುತ್ತಿತ್ತಂತೆ. ಅದರಲ್ಲಿ ನಿಮ್ಮೂರಿನ ಹುಲಿ ನಮ್ಮಲ್ಲಿ ಕ್ಷೇಮವಾಗಿದೆ ಎಂದು ಬರೆದಿರುತ್ತಿತ್ತಂತೆ. ನಮ್ಮ ತಂದೆಯವರು ಶಿಂಗಪ್ಪಯ್ಯನವರ ಆಪ್ತರಾಗಿದ್ದರಿಂದ ಹುಲಿರಾಯನ ಪ್ರಸಂಗದಲ್ಲಿ ಪ್ರಮುಖ ಪಾತ್ರವಹಿಸಿದ್ದರಂತೆ.
ಬೆಳವಿನಕೊಡಿಗೆ
ಬೆಳವಿನಕೊಡಿಗೆ ನಮ್ಮೂರಿನ ಅತ್ಯಂತ ಪುರಾತನವಾದ ಮನೆ. ನಮ್ಮೂರು ನಾನು ಮೊದಲೇ ಹೇಳಿದಂತೆ ಒಂದು ಅಡಿಕೆ ತೋಟದ ಕಣಿವೆಯಾಗಿದ್ದು ಅದರ ಪ್ರಾರಂಭದಲ್ಲಿ ಒಂದು ಬೆಟ್ಟದ ಕೆಳಗಿರುವ ಈ ಮನೆಯ ಹೆಸರು ಮತ್ತು ನಮ್ಮ ಗ್ರಾಮದ ಹೆಸರು ಒಂದೇ ಆಗಿರುವುದು ಆ ಮನೆಯ ಪ್ರಾಮುಖ್ಯತೆಯನ್ನು ತೋರಿಸುತ್ತದೆ. ಒಂದು ಕಾಲದಲ್ಲಿ  ನಮ್ಮೂರಿನ ಎಲ್ಲಾ ತೋಟಗಳು ಬೆಳವಿನಕೊಡಿಗೆ, ಪುರದಮನೆ ಮತ್ತು ಮೊದಲಮನೆ ಎಂಬ ಮೂರು ಸಂಸಾರಗಳಲ್ಲಿ ಹಂಚಿ ಹೋಗಿದ್ದವು. ಉಳಿದವರೆಲ್ಲ ಕೇವಲ ಗೇಣಿದಾರರಾಗಿದ್ದರು. ಅದರಲ್ಲಿ ಹೆಚ್ಚಿನ ತೋಟಗಳು ಬೆಳವಿನಕೊಡಿಗೆ ವಂಶದವರಿಗೆ ಸೇರಿದ್ದುವು. ಇಷ್ಟಲ್ಲದೆ ಈ ವಂಶದವರ ಜಮೀನುಗಳು ನಮ್ಮೂರಿನ ಬೇರೆ ಭಾಗಗಳಲ್ಲೂ ಹಾಗೂ ಭುವನಕೋಟೆ ಗ್ರಾಮದಲ್ಲೂ ಹರಡಿದ್ದವು. ತಲೆತಲಾಂತರದಿಂದ ಈ ವಂಶದ ಹಿರಿಯ ಯಜಮಾನರ ಹೆಸರು ಎಲ್ಲಪ್ಪಯ್ಯ ಎಂದು ಇಡಲೇ ಬೇಕಿತ್ತು. ಪ್ರತಿ ಯಜಮಾನನ ಮೊಮ್ಮಗನ ಹೆಸರು  ಎಲ್ಲಪ್ಪಯ್ಯಎಂದು ಇಡುವುದು ವಾಡಿಕೆಯಾಗಿತ್ತು. ಈ ಹೆಸರಿನ ಮೂಲ ಒಂದು ರಹಸ್ಯವಾಗಿಯೇ ಉಳಿದು ಹೋಗಿತ್ತು. ನಾನು ಬಾಲ್ಯದಲ್ಲಿ ನೋಡಿದ ಎಲ್ಲಪ್ಪಯ್ಯ ೨೦ ವಯಸ್ಸಿನ ತರುಣ. ಅವರ ಅಜ್ಜನ ಹೆಸರು ಕೂಡ ಎಲ್ಲಪ್ಪಯ್ಯ ಎಂದಿತ್ತು. ಅವರು ತೀರಿಕೊಂಡು ಎಷ್ಟೋ ವರ್ಷಗಳಾಗಿದ್ದವು. ಅವರ ತಂಗಿಯಾಗಿದ್ದ ಗೌರಮ್ಮ ನಮ್ಮ ಅಮ್ಮನ ಅಜ್ಜಿ (ತಂದೆಯ ತಾಯಿ). ಅವರನ್ನು ಮೊದಲಮನೆ ಸಂಸಾರಕ್ಕೆ ಮದುವೆ ಮಾಡಿ ಕೊಡಲಾಗಿತ್ತು. ನಾನು ಅವರನ್ನು ಬಾಲ್ಯದಲ್ಲಿ ನೋಡಿದ ನೆನಪಿದೆ. ಹೀಗೆ ನಮಗೆ ಬೆಳವಿನಕೊಡಿಗೆ ವಂಶದೊಂದಿಗೆ ರಕ್ತ ಸಂಬಂಧವಿತ್ತು.

ಬೆಳವಿನಕೊಡಿಗೆ ಮನೆಯ ಪಕ್ಕದ ಹಿತ್ತಲಿನಲ್ಲಿ ಅವರ ವಂಶಕ್ಕೆ ಸೇರಿದ ಪುರಾತನವಾದ ರಕ್ತೇಶ್ವರಿ ದೇವಸ್ಥಾನವಿತ್ತು. ಪ್ರತಿ ವರ್ಷವೂ ರಕ್ತೇಶ್ವರಿ ಸಮಾರಾಧನೆ ಮತ್ತು ವಿಶೇಷ ಪೂಜೆ ನಡೆಯುತ್ತಿದ್ದು ಅದರಲ್ಲಿ  ಊರಿನವರೆಲ್ಲಾ ಪಾಲ್ಗೊಳ್ಳುತ್ತಿದ್ದರು. ಈ ರಕ್ತೇಶ್ವರಿ ಬೆಳವಿನಕೊಡಿಗೆಯವರ ಸಕಲ ಅಸ್ತಿ ಪಾಸ್ತಿಗಳ ಸಂರಕ್ಷಕಿಯಾಗಿದ್ದಳು. ಅವಳ ಮಹಿಮೆಯ ಬಗ್ಗೆ ಒಂದು ವಿಶೇಷ ಕಥೆಯಿದೆ.

ಮನೆಯ ಮುಂದಿದ್ದ ಚಪ್ಪರದಲ್ಲಿ ಅಡಿಕೆ ಕೊಯ್ಲು ನಡೆಯುವಾಗ ಒಣಗಲು  ಹಾಕಿದ ಅಡಿಕೆಯ ರಾಶಿ ರಾಶಿಯೇ ಇರುತ್ತಿತ್ತು. ವಾಡಿಕೆಯಂತೆ ಮನೆಯ ಯಜಮಾನರಾಗಿದ್ದ ಎಲ್ಲಪ್ಪಯ್ಯನವರು ರಾತ್ರಿ ಮಲಗುವ ಮುನ್ನ ರಕ್ತೇಶ್ವರಿಯ ಸ್ಮರಣೆ ಮಾಡಿ ಚಪ್ಪರದ ಮೇಲಿರುವ ಅಡಿಕೆ ರಾಶಿಯನ್ನು ಸಂರಕ್ಷಿಸುವಂತೆ ಕೇಳಿಕೊಳ್ಳುತ್ತಿದ್ದರಂತೆ. ಒಂದು ರಾತ್ರಿ ಕಳ್ಳನೊಬ್ಬ ಒಂದು ಮೂಟೆ ತುಂಬಾ ಅಡಿಕೆ ಹಾಕಿಕೊಂಡು ಸದ್ದಿಲ್ಲದಂತೆ ಅಂಗಳದ ತುದಿಯಲ್ಲಿದ್ದ ಮೆಟ್ಟಿಲಿಳಿದು ಹೋಗುತ್ತಿದ್ದನಂತೆ. ಅದೇ ಸಮಯಕ್ಕೆ ಸರಿಯಾಗಿ ಎಲ್ಲಪ್ಪಯ್ಯನವರು ರಕ್ತೇಶ್ವರಿಯ ಸ್ಮರಣೆ ಮಾಡಿ ಮಂತ್ರ ಹೇಳತೊಡಗಿದರಂತೆ. ರಕ್ತೇಶ್ವರಿಯ ಮಹಿಮೆಯಿಂದ ಕಳ್ಳನು ಒಂದು ಹೆಜ್ಜೆ ಸಹ ಮುಂದಿಡಲಾಗದೆ ನಿಂತಲ್ಲೇ ಪ್ರತಿಮೆಯಂತಾಗಿ ಬಿಟ್ಟನಂತೆ! ಬೆಳಿಗ್ಗೆ ಮನೆಯವರು ಎದ್ದ ನಂತರವೇ ಅವನ ಕಾಲಿಗೆ ಚೈತನ್ಯ ಬಂದು ಅವನು ಮೂಟೆಯನ್ನು ಮನೆಯವರಿಗೆ ಒಪ್ಪಿಸಿದ ಮೇಲೆಯೇ ರಕ್ತೇಶ್ವರಿ ಅವನನ್ನು ತನ್ನ ವಶದಿಂದ ಬಿಡುಗಡೆ ಮಾಡಿದಳಂತೆ.

ನಮ್ಮ ಅಮ್ಮ ನಮಗೆ ಎಲ್ಲಪ್ಪಯ್ಯನವರ ಬಗ್ಗೆ ಇನ್ನೊಂದು ಕಥೆ ಹೇಳುತ್ತಿದ್ದುದು ನೆನಪಿಗೆ ಬರುತ್ತಿದೆ. ಒಮ್ಮೆ ಸ್ವಲ್ಪ ಬುದ್ಧಿ ಭ್ರಮಣೆ ಯಾದ್ದರಿಂದ ಎಲ್ಲಪ್ಪಯ್ಯನವರೊಬ್ಬರೇ ಒಂಟಿಯಾಗಿ ಬೆಳವಿನಕೊಡಿಗೆ ಮನೆಯಲ್ಲಿ ಇರುವಂತಾಯಿತಂತೆ. ಮನೆಯಲ್ಲಿ ಬೆಳ್ಳಿ, ಬಂಗಾರ ಮತ್ತು ವಜ್ರದಿಂದ ಮಾಡಿದ ಆಭರಣಗಳ ದೊಡ್ಡ ನಿಧಿಯೇ ಇದ್ದು ಅದರ ಸಂದೂಕದ ಕೀಲಿಕೈ ಎಲ್ಲಪ್ಪಯ್ಯನವರ ಸೊಂಟದ ಬಂಗಾರದ ಉಡಿದಾರದಲ್ಲಿ ನೇತಾಡುತ್ತಿರುತ್ತಿತ್ತಂತೆ. ಇತರ ಆಭರಣಗಳ ನಡುವೆ ಒಂದು  ದೊಡ್ಡ ಬೆಳ್ಳಿ ತಂಬಿಗೆಯ ತುಂಬಾ ಚಿನ್ನದ ಉಂಗುರಗಳು ಇದ್ದುವಂತೆ. ಅದರಲ್ಲಿ ಎಷ್ಟು ಉಂಗುರ ಇದ್ದುವೆಂದು ಎಲ್ಲಪ್ಪಯ್ಯನವರಿಗೆ ಮಾತ್ರ ಗೊತ್ತಿದ್ದು ಅವರು ಅದನ್ನು ಆಗಾಗ ಪುನರೆಣಿಕೆ ಮಾಡುತ್ತಿದ್ದರಂತೆ.

ಆಗಿನ ಕಾಲದಲ್ಲಿ ದರೋಡೆಗಳು ತುಂಬಾ ನಡೆಯುತ್ತಿದ್ದು ದರೋಡೆಗಾರರು ಆಗರ್ಭ ಶ್ರೀಮಂತರ ಮನೆಗಳನ್ನು ಗುರಿಯಾಗಿ ಇಟ್ಟುಕೊಳ್ಳುತ್ತಿದ್ದರಂತೆ. ಆದ್ದರಿಂದ ಎಲ್ಲಪ್ಪಯ್ಯನವರ ಮತ್ತು ಅವರ ಐಶ್ವರ್ಯದ ರಕ್ಷಣೆಗೆ ಮೈಸೂರು ಸಂಸ್ಥಾನದ ಇಬ್ಬರು ರಿಸರ್ವ್ ಪೊಲೀಸ್ ಕಾನ್ಸ್ಟೇಬಲ್ ಗಳನ್ನು ನೇಮಕ ಮಾಡಲಾಗಿತ್ತಂತೆ. ಈ ನೇಮಕ ಆಗಿನ ಮೈಸೂರು ಸರ್ಕಾರದಲ್ಲಿ ಬೆಳವಿನಕೊಡಿಗೆ  ಮನೆತನದವರಿಗಿದ್ದ ಪ್ರಭಾವವನ್ನು ತೋರಿಸುತ್ತಿತ್ತಂತೆ. ಆದರೆ ಯಾವುದೋ ಕಾಣದ ಕೈ ಪ್ರಭಾವದಿಂದ ಈ ರಕ್ಷಣೆಯನ್ನು ಇದ್ದಕಿದ್ದಂತೆ ಹಿಂತೆಗುದುಕೊಳ್ಳಲಾಯಿತಂತೆ. 

ಇದೇ ಸಮಯವನ್ನು ಕಾಯುತ್ತಿದ್ದ ದರೋಡೆಗಾರರ ಗುಂಪೊಂದು ಮನೆಯ ಮೇಲೆ ದಾಳಿ ಮಾಡಿತಂತೆ. ಅವರು ಬರುವ ಸಮಾಚಾರ ಹೇಗೋ ಗೊತ್ತಾಗಿ ಎಲ್ಲಪ್ಪಯ್ಯನವರು ಮನೆಯೊಳಗೆ ಸೇರಿಕೊಂಡು ಮಾಳಿಗೆಯ ಬಾಗಿಲುಗಳನ್ನು ಭದ್ರವಾಗಿ ಮುಚ್ಚಿಕೊಂಡರಂತೆ. ತುಂಬಾ ಗಟ್ಟಿಮುಟ್ಟಾದ ಹಲಸಿನ ಮರದಿಂದ ಮಾಡಿದ ಬಾಗಿಲುಗಳನ್ನು ದರೋಡೆಗಾರರು ತೆಗೆಯಲು ಸಾಧ್ಯವಾಗಲಿಲ್ಲವಂತೆ. ಆಗ ಅವರು ಬಾಗಿಲಿನ ಸುತ್ತ ನೆಲವನ್ನೇ ಅಗೆದು ಬಾಗಿಲನ್ನು ಕಿತ್ತು ಹಾಕಲು ಶುರು ಮಾಡಿದರಂತೆ . ಹೀಗೆ ನೆಲವನ್ನು ಅಗೆಯುವ ಶಬ್ದ ಇಡೀ ಊರಿಗೇ ಕೇಳಿಸುತ್ತಿತ್ತಂತೆ. ಆದರೆ ಯಾರೂ ತಮ್ಮ ಜೀವದ ಹಂಗು ತೊರೆದು ಎಲ್ಲಪ್ಪಯ್ಯನವರನ್ನು ಕಾಪಾಡಲು ಬರಲೇ ಇಲ್ಲವಂತೆ. ಸ್ವಲ್ಪ ಸಮಯದಲ್ಲೇ ಬಾಗಿಲು ಕುಸಿದು ಹೋಯಿತಂತೆ.

ಪ್ರಾಯಶಃ ದರೋಡೆಗಾರರ ಮುಖ್ಯಸ್ಥನು ಎಲ್ಲಪ್ಪಯ್ಯನ ಪರಿಚಿತನಾಗಿರಬೇಕು. ಆದ್ದರಿಂದ ಅವನು ತನ್ನ ಸಂಗಡಿಗರಿಗೆ ಅವರ ಕಣ್ಣಿಗೆ ಮರಳನ್ನು ಎಸೆದು ದೃಷ್ಟಿ ಇಲ್ಲದಂತೆ ಮಾಡಲು ಹೇಳಿದ್ದನಂತೆ. ಅವರ ಜೀವಕ್ಕೆ ಯಾವುದೇ ಅಪಾಯ ಮಾಡುವುದು ಅವನ ಉದ್ದೇಶವಾಗಿರಲಿಲ್ಲವಂತೆ. ಆದರೆ ಅವನಿಗೆ ಕೊನೇ ಗಳಿಗೆಯಲ್ಲಿ ಕಣ್ಣಿಗೆ ಮರಳನ್ನು ಎಸೆಯುವುದೂ ಕ್ರೂರತನ ಎಂದು ಅನಿಸಿ ಅವರ ಕಣ್ಣುಗಳಿಗೆ ಬಟ್ಟೆ ಕಟ್ಟುವಂತೆ ಆಜ್ಞೆ ಮಾಡಿದನಂತೆ. ಅದರಂತೆ ಎಲ್ಲಪ್ಪಯ್ಯನವರನ್ನು ಹೆಡೆಮುರಿ  ಕಟ್ಟಿ ಕಣ್ಣಿಗೆ ಬಟ್ಟೆ ಕಟ್ಟಲಾಯಿತಂತೆ. ಆ ಕಟ್ಟನ್ನು ಬಿಚ್ಚಿಕೊಳ್ಳಲಾಗದಂತೆ ಎರಡೂ ಕೈಗಳನ್ನು ಬೆನ್ನ ಹಿಂದೆ ಕಟ್ಟಿಹಾಕಿದರಂತೆ.

ಆ ನಂತರವೇ ಎಲ್ಲಪ್ಪಯ್ಯನವರ ಮುಂದೆ ಬಂದ ದರೋಡೆಗಾರರ ಮುಖ್ಯಸ್ಥ ಅವರ ಸೊಂಟದ ಉಡಿದಾರದಿಂದ ಸಂದೂಕದ ಕೀಲಿಕೈಯನ್ನು ಕಿತ್ತುಕೊಂಡು ಅದರಲ್ಲಿದ್ದ ಒಡವೆಗಳನ್ನೆಲ್ಲಾ ಸಂಪೂರ್ಣವಾಗಿ ಲೂಟಿ ಮಾಡಿಬಿಟ್ಟ. ಅಷ್ಟು ಸಾಲದೆ ಅವನ ದೃಷ್ಟಿ ಕೊನೆಗೆ ಎಲ್ಲಪ್ಪಯ್ಯನವರ ಚಿನ್ನದ ಉಡಿದಾರದ ಮೇಲೂ ಬಿತ್ತು. ಅದನ್ನು ಯಾವುದೇ ಕರುಣೆ ಅಥವಾ ದಾಕ್ಷಿಣ್ಯವಿಲ್ಲದೆ ಕಿತ್ತು ಎಳೆದು ತನ್ನ ಜೇಬಿಗೆ ಸೇರಿಸಿಬಿಟ್ಟ. ಎಲ್ಲಪ್ಪಯ್ಯನವರನ್ನು ಅದೇ ಸ್ಥಿತಿಯಲ್ಲಿ ಬಿಟ್ಟು ದರೋಡೆಗಾರರ ತಂಡ ಅಲ್ಲಿಂದ ಪರಾರಿಯಾಯಿತು.
---------0-----------0------------0------------0-----------0-----------------0-------------0------------0-----------0---------0----
ನಾವು ನಮ್ಮ ಅಮ್ಮನ ಬಾಯಿಂದ ಕೇಳಿದ ನಮ್ಮೂರಿನ ಹಳೆ ಕಾಲದ ಕಥೆಗಳು ಯಾವಾಗಲೂ ನಮ್ಮ ಕುತೂಹಲವನ್ನು ಕೆರಳಿಸುವಂತಹವೇ ಆಗಿರುತ್ತಿದ್ದವು. ಎಲ್ಲಪ್ಪಯ್ಯನವರ ಕಥೆಯೂ ಅಂತಹದೇ ಆಗಿತ್ತು. ಒಬ್ಬ ದೃಢಕಾಯ ವ್ಯಕ್ತಿಯಾಗಿದ್ದ ಅವರು ಸ್ವಲ್ಪ ಸಮಯದಲ್ಲೇ ತಮ್ಮ ಕಾಲಿನ ಕಟ್ಟುಗಳನ್ನು ಬಿಡಿಸಿಕೊಳ್ಳುವುದರಲ್ಲಿ ಯಶಸ್ವಿಯಾದರು. ಆದರೆ ಎಷ್ಟು ಕಷ್ಟಪಟ್ಟರೂ ತಮ್ಮ ಕೈಕಟ್ಟುಗಳನ್ನು ಬಿಡಿಸಿಕೊಳ್ಳಲಾಗಲಿಲ್ಲ. ಆದ್ದರಿಂದ ಕಣ್ಣಿನ ಕಟ್ಟುಗಳನ್ನೂ ಬಿಚ್ಚಿಕೊಳಲಾರದೆ ಕುರುಡರಂತಾಗಿಬಿಟ್ಟರು. ಆದರೆ ಅವರೆಷ್ಟು ಸಾಹಸಿಯೆಂದರೆ ಕೇವಲ ತಮ್ಮ ನೆನಪಿನ ಶಕ್ತಿಯಿಂದಲೇ ಅವರು ಒಂದು ಮೈಲಿಗೂ ಹೆಚ್ಚು ದೂರ ನಡೆದು ಅವರಿಗೆ ಇಷ್ಟವಾದ ಒಬ್ಬರ ಮನೆಗೆ ಹೋಗಿ ತಮ್ಮ ಕಣ್ಣಿನ ಕಟ್ಟುಗಳನ್ನು ಬಿಚ್ಚಿಸಿಕೊಂಡರಂತೆ!

ನಮ್ಮ ಅಮ್ಮನಿಗೆ ದರೋಡೆಗಾರರು ಆಮೇಲೆ ಸಿಕ್ಕಿಬಿದ್ದರೇ ಎಂಬ ವಿಷಯ ತಿಳಿದು ಬರಲಿಲ್ಲ. ಆದ್ದರಿಂದ ಎಲ್ಲಪ್ಪಯ್ಯನವರ ಅಷ್ಟೊಂದು ಸಂಪತ್ತು ಕರಗಿ ಹೋಗಿದ್ದು ಸತ್ಯವಾಗಿತ್ತು. ಆದರೆ ನಮ್ಮೂರಿನಲ್ಲಿ ಹಣ ಹುಗಿದಿಡುವ ಸಂಪ್ರದಾಯ ಮೊದಲಿಂದ ಇದ್ದದ್ದರಿಂದ ಎಲ್ಲಪ್ಪಯ್ಯನವರೂ ತಮ್ಮ ಸಂಪತ್ತನ್ನು ಬೇರೆ ಬೇರೆ ಕಡೆ ಇಟ್ಟಿದ್ದಿರಬೇಕೆಂದು ಒಂದು ಊಹೆ. ಅಲ್ಲದೇ ಅವರ ಜಮೀನಿನಿಂದ ವಾರ್ಷಿಕ ಆದಾಯವೇನು ಸಾಮಾನ್ಯ ಮಟ್ಟದ್ದಾಗಿರಲಿಲ್ಲ. ಒಟ್ಟಿನಲ್ಲಿ ಸ್ವಲ್ಪ ಕಾಲದಲ್ಲೇ ಅವರ  ಸಂಪತ್ತು ಮೊದಲಿನ ಮಟ್ಟ ತಲುಪಿರಬೇಕು.

ನಾನು ನನ್ನ ಬಾಲ್ಯದಲ್ಲಿ ನೋಡಿದ ಬೆಳವಿನಕೊಡಿಗೆಯಲ್ಲಿ ಎಲ್ಲಪ್ಪಯ್ಯನ ಕಾಲ ಮುಗಿದು ಅವರ ಮೂರು ಗಂಡು ಮಕ್ಕಳಲ್ಲಿ ಹಿರಿಯರಾದ ಗಣೇಶಯ್ಯನವರ ಮನೆ ಆಡಳಿತವೂ ಕೊನೆಗೊಂಡಿತ್ತು. ಅವರ ತಮ್ಮಂದಿರಾದ ತಿಮ್ಮಪ್ಪಯ್ಯ ಮತ್ತು ವೆಂಕಪ್ಪಯ್ಯನವರು ಜಂಟಿಯಾಗಿ ಮನೆ ಆಡಳಿತ ನೆಡಸುತ್ತಿದ್ದರು. ಗಣೇಶಯ್ಯನವರ ಒಬ್ಬಳೇ ಮಗಳು ಒಂದು ಅಪಘಾತದಲ್ಲಿ ತೀರಿಕೊಂಡ ನಂತರ ಅವರು ತಮ್ಮ ಪತ್ನಿ ಕಾವೇರಮ್ಮ ನವರೊಡನೆ ಶಿವಮೊಗ್ಗ ಪೇಟೆಯಲ್ಲಿ ಸ್ವಂತ ಮನೆ ಮಾಡಿಕೊಂಡು ವಾಸಿಸುತ್ತಿದ್ದರು. ಆದರೆ ಅವರು ಅಲ್ಲಿಂದಲೇ ಮನೆಯ ಹಣಕಾಸು ಇತ್ಯಾದಿಗಳ ರಿಮೋಟ್ ಕಂಟ್ರೋಲ್ ಮಾಡುತ್ತಿದ್ದರು. ಅವರ ಪತ್ನಿ ಕಾವೇರಮ್ಮ ಕಾನೂರಿನ ಶ್ರೀಮಂತ ಸುಬ್ಬರಾಯರ ಸಹೋದರಿ.

ಗಣೇಶಯ್ಯನವರು ಒಬ್ಬ ಆಜಾನುಬಾಹು ವ್ಯಕ್ತಿ . ಅವರ ವ್ಯಕ್ತಿತ್ವ ಬಾಹುಬಲಿಯನ್ನು ಹೋಲುತ್ತಿದ್ದು ಸಾಮಾನ್ಯ ಪುರುಷರಿಗೆ ಅವರ ಮುಂದೆ ನಿಲ್ಲುವ  ಧೈರ್ಯ  ಕೂಡ ಬರುತ್ತಿರಲಿಲ್ಲ. ಅವರ ಧ್ವನಿ ಕೂಡ ಅತ್ಯಂತ ಅಧಿಕಾರದಿಂದ ಕೂಡಿರುತ್ತಿತ್ತು. ಕಾವೇರಮ್ಮನವರು ಮಹಾರಾಣಿಯ ಲಕ್ಷಣ ಹೊಂದಿದ್ದು ನೋಡುವರಿಗೆ ಪ್ರೀತಿ ಮತ್ತು ಮಮತೆಯ ಸಾಕಾರವಾಗಿ ಕಾಣುತ್ತಿದ್ದರು. ದಂಪತಿಗಳು ತಮ್ಮೊಡನೆ ಮನೆಯ  ಕೆಲವು  ಗಂಡು ಮತ್ತು ಹೆಣ್ಣು ಮಕ್ಕಳನ್ನು ಕರೆದುಕೊಂಡು ಹೋಗಿ ಶಿವಮೊಗ್ಗೆಯ ಶಾಲೆಗಳಲ್ಲಿ ಓದಿಸುತ್ತಿದ್ದರು. ಅಲ್ಲದೆ ಮನೆಯಲ್ಲಿ ವರ್ಷವಿಡೀ ನಡೆಯುವ ಹಬ್ಬ ಹಾಗೂ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ನವರಾತ್ರಿ ಹಬ್ಬ ಮತ್ತು ಅನಂತ ಚತುರ್ದಶಿ ಅವುಗಳಲ್ಲಿ ಮುಖ್ಯವಾದ ಹಬ್ಬಗಳು.

ನಮ್ಮೂರಿನ ಇತರ ಮನೆಗಳಂತೆ ಬೆಳವಿನಕೊಡಿಗೆ ಮನೆಗೆ ಕೂಡ ಮನೆಯಿಂದ ಸ್ವಲ್ಪ ದೂರದಲ್ಲಿದ್ದ ಒಂದು ಕೆರೆಯಿಂದ ನೀರು ವರ್ಷವಿಡೀ ಹರಿದು ಬರುತ್ತಿತ್ತು. ಮನೆಯ ಪಕ್ಕದಲ್ಲಿದ್ದ ಒಂದು ದೊಡ್ಡ ಗೋಶಾಲೆ ಹಸು ಕರುಗಳಿಂದ ತುಂಬಿರುತ್ತಿತ್ತು. ಅಂದಿನ ಮಲೆನಾಡಿನಲ್ಲಿ ಮನೆಯಲ್ಲಿ ಜನಿಸಿದ ಮಕ್ಕಳಲ್ಲಿ ಹೆಣ್ಣು ಅಥವಾ ಗಂಡು ಎಂಬ ಬೇಧಭಾವ ಇರಲಿಲ್ಲ. ಆದರೆ ಹಸುಗಳು ಕರು ಹಾಕಿದಾಗ ಹೆಣ್ಣು ಕರುವಿನ ಮೇಲಿದ್ದ ಮಮತೆ ಗಂಡಿನ ಮೇಲಿರಲಿಲ್ಲ. ಅದಕ್ಕೆ ಕಾರಣ ಹೆಣ್ಣು ಕರುಗಳು ಮುಂದೆ ಹಸುಗಳಾಗಿ ಬೆಳೆದು ಹಾಲನ್ನೀಯುವುದು. ಅಲ್ಲದೆ ಹೆಣ್ಣು ಕರುಗಳು ಸಾಮಾನ್ಯವಾಗಿ ಸಾಧುಗಳಾಗಿದ್ದರೆ ಗಂಡು ಕರುಗಳು ಬೇಗನೆ ಪೋಲಿ ಪೋಕರಿಗಳಾಗುತ್ತಿದ್ದವು. ಬೆಳವಿನಕೊಡಿಗೆಯಲ್ಲಿ ಅವುಗಳಿಗೆ  ಒಂದು ವಿಶೇಷ ವ್ಯವಸ್ಥೆಯಿತ್ತು.

ಗಂಡು ಕರುಗಳನ್ನು ಅವು ಅಮ್ಮನ ಮೊಲೆ ಹಾಲು ಕುಡಿಯುವುದನ್ನು ನಿಲ್ಲಿಸಿದೊಡನೆ ನಮ್ಮ ಮನೆಯ ಹತ್ತಿರವಿದ್ದ ಒಂದು "ಶಿಶುವಿಹಾರಕ್ಕೆ" ಸ್ಥಳಾಂತರಿಸಲಾಗುತ್ತಿತ್ತು. ಹೆಣ್ಣು ಕರುಗಳು ಅಮ್ಮನೊಟ್ಟಿಗೆ ತವರು ಮನೆಯಲ್ಲೇ ವಾಸ ಮುಂದುವರಿಸುವ ಹಕ್ಕನ್ನು ಹೊಂದಿದ್ದವು. ಆದರೆ ಬಡಪಾಯಿಗಳಾದ ಗಂಡುಕರುಗಳು ಶಿಶುವಿಹಾರ ಸೇರಲೇ ಬೇಕಿತ್ತು. ಶಿಶುವಿಹಾರ ಒಂದು ಹಾಸ್ಟೆಲಿಗೆ ಸಮಾನವಾಗಿತ್ತು. ಕನ್ನಡದಲ್ಲಿ ಅದಕ್ಕೆ ಕೂಡುಕೊಟ್ಟಿಗೆ ಎಂಬ ಹೆಸರಿತ್ತು. ಅದರ ವಾರ್ಡನ್ ಶೇಷ ಎಂಬ ಹೆಸರಿನ ಹಿರಿಯ ನೌಕರ.

ಹೆಣ್ಣು ಕರುಗಳನ್ನು ಕೊಟ್ಟಿಗೆಯಲ್ಲಿ ಬೇರೆ ಬೇರೆಯಾಗಿ ಕಟ್ಟಿದ್ದರೆ ಕೂಡುಕೊಟ್ಟಿಗೆಯಲ್ಲಿದ್ದ ಗಂಡು ಕರುಗಳು ಯಾವುದೇ ಹಗ್ಗವಿಲ್ಲದೆ ಸ್ವತಂತ್ರವಾಗಿರುತ್ತಿದ್ದವು. ಬೆಳಿಗ್ಗೆ ಮುಂಚೆ ಶೇಷ ಅವುಗಳಿಗೆ ಹುಲ್ಲು ತಿನ್ನಿಸಿ ಕೊಟ್ಟಿಗೆ ಬಾಗಿಲು ತೆಗೆದು ಚೌಡನೊಡನೆ ಮೇವಿಗೆ ಕಳಿಸುತ್ತಿದ್ದ. ಸಂಜೆ ಅವುಗಳನ್ನು ಪುನಃ ಕೊಟ್ಟಿಗೆಯೊಳಗೆ ಸೇರಿಸಿ ಬಾಗಿಲು ಹಾಕಿ  ಬಿಡುತ್ತಿದ್ದ. ಅಮ್ಮನ ಮತ್ತು ಮನೆಯವರ ಮಮತೆಯಿಲ್ಲದ ಕರುಗಳು ತುಂಬಾ ತುಂಟಾಟದಲ್ಲಿ ತೊಡಗಿರುತ್ತಿದ್ದವು. ಅವುಗಳಲ್ಲಿ ಹಿರಿಯ ಕರುಗಳು ಗಂಭೀರವಾಗಿ ಮಲಗಿದ್ದರೆ ಕಿರಿಯವು ಯಾವಾಗಲೂ ಗುದ್ದಾಟದಲ್ಲಿ ತೊಡಗಿರುತ್ತಿದ್ದವು. ಹಿರಿಯ ಕರುಗಳನ್ನು ಸ್ವಲ್ಪ ಸಮಯದ ನಂತರ ಮಕ್ಕಿ ಗದ್ದೆಯ ಹತ್ತಿರವಿದ್ದ ಎತ್ತಿನ ಕೊಟ್ಟಿಗೆಗೆ ಪ್ರಮೋಷನ್ ಮಾಡಿ ಕಳಿಸಲಾಗುತ್ತಿತ್ತು. ಅದೊಂದು ಟ್ರೇನಿಂಗ ಸೆಂಟರ್ ಆಗಿತ್ತು. ಅಲ್ಲಿ ಅವುಗಳಿಗೆ ಗದ್ದೆಯಲ್ಲಿ ಹೂಟೆ ಮಾಡುವ ವಿಶೇಷ ತರಬೇತಿ ನೀಡಲಾಗುತ್ತಿತ್ತು.

ಕೂಡುಕೊಟ್ಟಿಗೆಯ ಸಮೀಪದಲ್ಲೇ ವಾರ್ಡನ್ ಶೇಷನಿಗೆ ಒಂದು ಬಿಡಾರದ ವ್ಯವಸ್ಥೆಯಿತ್ತು. ಅದರ ಹತ್ತಿರವಿದ್ದ ಖಾಲಿ ಜಾಗದಲ್ಲಿ ಶೇಷ ಅನೇಕ ತರಕಾರಿಗಳನ್ನು ಬೆಳೆಯುತ್ತಿದ್ದ. ಅವುಗಳಲ್ಲಿ ಬಸಳೆ ಎಂಬ ತರಕಾರಿ ವಿಶೇಷದ್ದಾಗಿತ್ತು. ಯಾವುದೊ ಕಾರಣದಿಂದ ಬಸಳೆಯನ್ನು ಕಾಲದಲ್ಲಿ ಅಡಿಗೆಗೆ ನಿಷಿದ್ಧ ಮಾಡಲಾಗಿತ್ತು. ಶೇಷ ಅದನ್ನು ನಮ್ಮ ಮನೆಗೆ ತುಂಬಾ ಗುಟ್ಟಾಗಿ ಸಪ್ಲೈ ಮಾಡುತ್ತಿದ್ದ. ನಮ್ಮ ಅಮ್ಮ ಬಸಳೆ ಸೊಪ್ಪಿನಿಂದ ತುಂಬಾ ರುಚಿಕರವಾದ ಸಾಂಬಾರ್ ಮತ್ತು ಸಾಸಿವೆ (ತಂಬುಳಿ)  ಮಾಡುತ್ತಿದ್ದಳು. ಶೇಷ ಕೇವಲ ಒಂದು ಲೋಟ ಕಾಫಿ  ಮತ್ತು ಎಲೆ ಅಡಿಕೆಗಳಿಂದ ತೃಪ್ತಿ ಹೊಂದುತ್ತಿದ್ದ. ಶೇಷನಿಗೆ ಇನ್ನೂ ಬೇರೆ ಕೆಲಸಗಳಿದ್ದುವು. ಅದರಲ್ಲಿ ನಮ್ಮ ಮನೆಯ ಹತ್ತಿರವಿದ್ದ ಬೆಳವಿನಕೊಡಿಗೆಯವರ ತೋಟಕ್ಕೆ ಕೆರೆ ನೀರು ಬಿಡುವುದೂ ಸೇರಿತ್ತು. ಶೇಷನ ವ್ಯಕ್ತಿತ್ವ ನೋಡಲು ಚೋಮನ ದುಡಿ ಸಿನಿಮಾದ ಚೋಮನಂತೇ ಇತ್ತು.

ನಮ್ಮೂರಿನ ಮುಖ್ಯ ದೇವಸ್ಥಾನ ಗಣಪತಿಕಟ್ಟೆ ಬೆಳವಿನಕೊಡಿಗೆ ಮನೆಯವರ ಸುಪರ್ದಿನಲ್ಲಿತ್ತು. ಅದರ ದಿನನಿತ್ಯ ಪೂಜೆಯ ಜವಾಬ್ದಾರಿಯನ್ನು ನಡುವಿನ ಮನೆಯ ಫಣಿಯಪ್ಪಯ್ಯನವರಿಗೆ ವಹಿಸಲಾಗಿತ್ತು. ಪ್ರತಿ ದಿನದ ಪೂಜೆಯ ನಂತರ ಹಣ್ಣು ಕಾಯಿಯನ್ನು  ಬೆಳವಿನಕೊಡಿಗೆ ಮನೆಗೆ ತಲುಪಿಸಬೇಕಿತ್ತು. ಅದಕ್ಕಾಗಿ ಅವರಿಗೆ ವರ್ಷಕ್ಕೆ ಎಷ್ಟು ಭತ್ತವನ್ನು ಕೊಡಬೇಕೆಂದು ನಿಗದಿ ಮಾಡಲಾಗಿತ್ತು. ಪ್ರತಿ ಚೌತಿ ತಿಥಿಯಂದು ಗಣಪತಿಗೆ ವಿಶೇಷ ಪೂಜೆ ಮಾಡಿ ಪ್ರತಿಯೊಂದು ಮನೆಗೂ ಹಣ್ಣು ಕಾಯಿ ತಲುಪಿಸಲಾಗುತ್ತಿತ್ತು. ಅದಕ್ಕೆ ಪ್ರತಿ ಮನೆಯವರೂ ನಿಗದಿ ಮಾಡಿದಷ್ಟು ಹಣ ನೀಡ ಬೇಕಿತ್ತು. ದೀಪಾವಳಿ ಹಬ್ಬದ ಸಮಯದಲ್ಲಿ ಬೇರೆ ಬೇರೆ ಮನೆಗಳ ವತಿಯಿಂದ ದೇವಸ್ಥಾನದಲ್ಲಿ ದೀಪಾರಾಧನೆ ನಡೆಯುತ್ತಿತ್ತು. ಆಗ ನಾವು ಎತ್ತಿನ ಗಾಡಿಯಲ್ಲಿ ಅಲ್ಲಿಗೆ ತಲುಪುತ್ತಿದ್ದೆವು.
---------0-----------0------------0------------0-----------0-----------------0-------------0------------0-----------0---------0----
ಎಲ್ಲಪ್ಪಯ್ಯನವರು ತಮ್ಮ ಗಂಡು ಮಕ್ಕಳಿಗೆ ವ್ಯವಸಾಯಕ್ಕೆ ಸಂಬಂಧಿಸಿದ ಎಲ್ಲಾ ಕೆಲಸಗಳಲ್ಲಿ ತರಬೇತಿ ನೀಡಿದ್ದರು. ದಿನಗಳಲ್ಲಿ ಎಷ್ಟೇ ಶ್ರೀಮಂತರಾದರೂ ಊರಿನಲ್ಲಿ ಎಲ್ಲರ ಮನೆಗಳಲ್ಲೂ ನಡೆಯುವ ಕೆಲಸಗಳಲ್ಲಿ ಪಾಲ್ಗೊಳ್ಳಲೇ ಬೇಕಿತ್ತು. ಅವುಗಳಲ್ಲಿ ಅಡಿಕೆ ಸೋಗೆಯಿಂದ ಪ್ರತಿ ವರ್ಷ ಮನೆ ಮತ್ತು ಕೊಟ್ಟಿಗೆಗಳನ್ನು ಹೊಚ್ಚುವ ಕೆಲಸವೂ ಸೇರಿತ್ತು. ಸೋಗೆ ಹೊಚ್ಚುವ ಕೆಲಸ ಪರಿಣಿತರಿಂದ ಮಾತ್ರ ಸಾಧ್ಯವಾಗುವ ಕೆಲಸ. ತಿಮ್ಮಪ್ಪಯ್ಯ ಮತ್ತು ವೆಂಕಪ್ಪಯ್ಯ ಇಬ್ಬರೂ ಅದರಲ್ಲಿ ಪರಿಣಿತರು. ಅವರಿಬ್ಬರೂ ನಮ್ಮ ಮನೆ ಹೊಚ್ಚಲು ಹಳೇ ಬಟ್ಟೆಗಳನ್ನು ಧರಿಸಿ ಬರುತ್ತಿದ್ದುದು ನನ್ನ ಕಣ್ಣಿಗೆ ಕಟ್ಟಿದಂತಿದೆ. ಬೆಳವಿನಕೊಡಿಗೆ ಮನೆಗೆ ಹೆಂಚು ಹಾಕಿದ್ದರೂ ಕಲವು ಕೊಟ್ಟಿಗೆಗಳಿಗೆ ಸೋಗೆ ಹೊಚ್ಚುವ ಕ್ರಮವಿತ್ತು.

ತಿಮ್ಮಪ್ಪಯ್ಯ ಮತ್ತು ವೆಂಕಪ್ಪಯ್ಯ ಇಬ್ಬರೂ ಊರಿನ ಇತರ ಹಿರಿಯರಂತೆ ಪಾಣಿ ಪಂಚೆ ಕಟ್ಟಿಕೊಂಡು ಅರ್ಧ  ತೋಳಿನ  ಎರಡೇ ಗುಂಡಿಗಳಿದ್ದ  ಅಂಗಿಗಳನ್ನು ಹಾಕಿಕೊಂಡು ಒಂದು ಗಾಂಧಿ ಶಾಲನ್ನು ಹೊದ್ದುಕೊಂಡಿರುತ್ತಿದ್ದರು. ಬಗೆಯ ಉಡುಪು ದೇಹ ಶ್ರಮದ ಕೆಲಸಗಳಿಗೆ ಅನುಕೂಲವಾಗಿತ್ತು. ಮುಖ್ಯ ಸಮಾರಂಭಗಳಿಗೆ ಹೋಗುವಾಗ ಕಚ್ಚೆಪಂಚೆ ಧರಿಸಿ ಉದ್ದ ತೋಳಿನ ಶರ್ಟ್ ಧರಿಸುತ್ತಿದ್ದರು. ಪ್ರತಿ ವರ್ಷ ನಮ್ಮೂರಿನಿಂದ ಮೇಗೂರಿನ ತೇರಿಗೆ ದಿಬ್ಬಣ ಹೋಗುತ್ತಿದ್ದು ಅದರ ನೇತೃತ್ವವನ್ನು ಸಾಮಾನ್ಯವಾಗಿ ವೆಂಕಪ್ಪಯ್ಯನವರು ವಹಿಸುತ್ತಿದ್ದರು. ವಾದ್ಯ ಸಮೇತವಾದ ದಿಬ್ಬಣ ಸುಮಾರು ಹತ್ತು ಮೈಲಿ ದೂರವನ್ನು ಕಾಲ್ನಡಿಗೆಯಲ್ಲೇ ಪಯಣಿಸುತ್ತಿತ್ತು.

ಬೆಳವಿನಕೊಡಿಗೆಯವರ ಹೆಚ್ಚಿನ ಜಮೀನು ಗೇಣಿದಾರರ ವಶದಲ್ಲಿತ್ತು. ನಮ್ಮ ತಂದೆ ಕೂಡ ಅವರ ಸುಮಾರು ೨೦ ಗುಂಟೆ ಜಮೀನು ಗೇಣಿ ಮಾಡುತ್ತಿದ್ದರು. ಅದಕ್ಕೆ ಆರು ಮಣ ಅಡಿಕೆ (ಹಸ) ಗೇಣಿ ನಿಗದಿಯಾಗಿತ್ತು. ವಾರ್ಷಿಕ ಗೇಣಿಯನ್ನು ಅಡಿಕೆ ಕೊಯ್ಲು ಮುಗಿದು ಅಡಿಕೆ ಆರಿಸಿಯಾದ ನಂತರ ವಸೂಲಿ ಮಾಡಲಾಗುತ್ತಿತ್ತು. ವೆಂಕಪ್ಪಯ್ಯನವರ ನೇತೃತ್ವದಲ್ಲಿ ಒಂದು ಟೀಮ್ ತಕ್ಕಡಿ ಮತ್ತು ಖಾಲಿ ಗೋಣಿಚೀಲಗಳೊಡನೆ ನಿಗದಿಯಾದ ದಿನ ಗೇಣಿದಾರರ ಮನೆಗೆ ಭೇಟಿ ಕೊಡುತ್ತಿತ್ತು. ವೆಂಕಪ್ಪಯ್ಯನವರು ಸ್ವತಃ ತಲೆಗೆ ಒಂದು ಗಾಂಧಿ ಶಾಲನ್ನು ಸುತ್ತಿಕೊಂಡು ಅಡಿಕೆ ತೂಕ ಮಾಡುತ್ತಿದ್ದರು. ತಲೆಗೆ ಮುಂಡಾಸು ಸುತ್ತದೇ  ತೂಕ ಮಾಡುವ ಪ್ರಶ್ನೆಯೇ ಇರಲಿಲ್ಲ. ತೂಕ ಮಾಡುವಾಗ ಮೊದಲ ಸಂಖ್ಯೆ ಒಂದು ಎನ್ನುವ ಬದಲು ಲಾಭ ಎಂದು ಹೇಳಲಾಗುತ್ತಿತ್ತು. ಹಾಗೆಯೇ ಏಳು ಸಂಖ್ಯೆ ಬದಲಿಗೆ ಮತ್ತೊಂದು  ಎಂದು ಹೇಳಲಾಗುತ್ತಿತ್ತು.  ಎಲ್ಲ ಮನೆಗಳ ಗೇಣಿ ತೂಕವಾದ ನಂತರ ಅದನ್ನು ಬೇರೊಂದು ದಿನ ಎತ್ತಿನ ಗಾಡಿಯಲ್ಲಿ ಒಯ್ಯಲಾಗುತ್ತಿತ್ತು.

ಗಣೇಶಯ್ಯ-ಕಾವೇರಮ್ಮ ದಂಪತಿಗಳು ಶಿವಮೊಗ್ಗೆಗೆ ಹೋಗಿ ನೆಲಸುವಾಗ ತಮ್ಮೊಡನೆ ಮೂರು ಜನ ಗಂಡು ಮಕ್ಕಳನ್ನು ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಜೊತೆಗೆ ಕರೆದುಕೊಂಡು ಹೋಗಿ ಅಲ್ಲಿ ಶಾಲೆಗೆ ಸೇರಿಸಿದ್ದರು. ತಿಮ್ಮಪ್ಪಯ್ಯನವರ ಮಗ ಶಂಕರ್ ಮತ್ತು ಗಣೇಶಯ್ಯನವರ ಸಹೋದರಿಯರ ಮಕ್ಕಳಾದ ಭಾಸ್ಕರ ಮತ್ತು ಚಂದ್ರಶೇಖರ್  ಹಾಗೂ ವೆಂಕಪ್ಪಯ್ಯನವರ ಮಕ್ಕಳಾದ ಗಂಗಾರತ್ನ ಮತ್ತು ಅನ್ನಪೂರ್ಣ ಅವರೊಟ್ಟಿಗೆ ಹೋದ ಮಕ್ಕಳು. ಆಮೇಲೆ ಸ್ವಲ್ಪ ವರ್ಷದ ನಂತರ ತಿಮ್ಮಪ್ಪಯ್ಯನವರ ಮಕ್ಕಳಾದ ಸುಬ್ಬಣ್ಣ, ನಾಗಭೂಷಣ, ಗುರುಮೂರ್ತಿ ಮತ್ತು ಚಂದ್ರಶೇಖರ ಹಾಗೂ ವೆಂಕಪ್ಪಯ್ಯನವರ ಮಗ ಕೇಶವ ಕೂಡ ಶಿವಮೊಗ್ಗೆ ಸೇರಿದರು. ಹುಡುಗರು ನಮ್ಮ ಸಮ ವಯಸ್ಕರು ಅಥವಾ ಸ್ವಲ್ಪ ಹೆಚ್ಚು ವಯಸ್ಸಿನವರು. ಇವರೆಲ್ಲ ಗಣೇಶಯ್ಯ-ಕಾವೇರಮ್ಮ ದಂಪತಿಗಳೊಡನೆ ಹಬ್ಬಗಳಲ್ಲಿ ಊರಿಗೆ ಬರುತ್ತಿದ್ದರು.

ನಮಗೆ ಮಕ್ಕಳನ್ನು ನೋಡಿ ತುಂಬಾ ಹೊಟ್ಟೆಕಿಚ್ಚಾಗುತ್ತಿತ್ತು. ಏಕೆಂದರೆ ಕಾಲದಲ್ಲಿ ಶಿವಮೊಗ್ಗೆಯಲ್ಲಿ ವಾಸಿಸುವರಿಗೆ ಈಗ ಅಮೇರಿಕಾದಲ್ಲಿ ಇರುವರಿಗಿಂತ ಹೆಚ್ಚು ಗೌರವ ಇತ್ತು. ಹಳ್ಳಿ ಗುಗ್ಗುಗಳಾದ ನಾವು ಮಲೆನಾಡಿನ ಹಳ್ಳಿ ಭಾಷೆ ಮಾತನಾಡುತ್ತಿದ್ದೆವು. ಆದರೆ ಪೇಟೆ ಹುಡುಗರು ಸ್ವಚ್ಛ ಕನ್ನಡದಲ್ಲಿ ಸೊಗಸಾಗಿ ಮಾತನಾಡುವುದಲ್ಲದೇ ಮಧ್ಯೆ ಮಧ್ಯೆ ಇಂಗ್ಲಿಷ್ ಪದಗಳನ್ನು ತುಂಬಾ ಸ್ಟೈಲಾಗಿ ಬಳಸುತ್ತಿದ್ದರು. ಇಷ್ಟಲ್ಲದೆ ನಾವು ಕುಂಟಾಟ, ಕಂಬದಾಟ ಮತ್ತು ಹೆಚ್ಚೆಂದರೆ ಕಬಡ್ಡಿ ಆಟ ಆಡುತ್ತಿದ್ದರೆ ಪೇಟೆ ಹುಡುಗರು ಅದಾವುದೋ ಕ್ರಿಕೆಟ್ ಎಂಬ ಆಟ  ಆಡುತ್ತಿದ್ದರಂತೆ! ನಮಗೆ ಅದರ ಗಂಧ ಗಾಳಿ ಗೊತ್ತಿರಲಿಲ್ಲ. ನಾವೂ ಒಂದು ದಿನ ಶಿವಮೊಗ್ಗೆಯಲ್ಲಿ ಇರುವಂತಾಗಿ ಕ್ರಿಕೆಟ್ ಆಟವನ್ನು ಆಡಬೇಕೆಂದು ಕನಸು ಕಾಣತೊಡಗಿದೆವು.

ದಿನಗಳ ನವರಾತ್ರಿ ಸಮಾರಾಧನೆ ಈಗಿನ ಮದುವೆ ಮನೆಗಳಿಗಿಂತ ಜೋರಾಗಿ ನಡೆಯುತ್ತಿತ್ತು.  ಅದರ ಹಿಂದಿನ ದಿನವೇ ಅಡಿಗೆಗೆ ತಯಾರಿ ಮಾಡಲು ಪಾಕಪ್ರವೀಣ ಮಹಾಬಲಯ್ಯ ತಮ್ಮ ಬಳಗದೊಡನೆ ಆಗಮಿಸುತ್ತಿದ್ದರು. ಮಹಾಬಲಯ್ಯ ಯಾವ ಊರಿನವರೆಂದು ನಮಗೆ ಗೊತ್ತಿರಲಿಲ್ಲ. ನೋಡಲು ಥೇಟ್ ಗಾಂಧಿ ಮಹಾತ್ಮನಂತೆ ಕಾಣುತ್ತಿದ್ದ ಮಹಾಬಲಯ್ಯನವರ ಮುಂದೆ ಇಂದಿನ ಪ್ರಸಿದ್ಧ  ಟೀವಿ ಚೆಫ್ ಗಳಾದ ಸಂಜೀವ್ ಕಪೂರ್ ಅಥವಾ ಸಿಹಿಕಹಿ ಚಂದ್ರುವನ್ನು ನಿವಾಳಿಸಿ ಬಿಸಾಕಬೇಕಿತ್ತು. ಮಹಾಬಲಯ್ಯ ಅಡಿಗೆಯಲ್ಲಿ ಎಷ್ಟು ಪ್ರವೀಣರೆಂದರೆ ಅವರು ಆಲೂ ಗೆಡ್ಡೆಯ ಸಿಪ್ಪೆಯಿಂದ ಕೂಡ ಬೋಂಡಾ ಮಾಡಬಲ್ಲವರಂತೆ!

ಸಮಾರಾಧನೆಯ ದಿನ ಗಣೇಶಯ್ಯನವರೇ ಸ್ವತಃ ಅಮ್ಮನವರಿಗೆ ಪೂಜೆ ಮತ್ತು ಆರತಿ ಮಾಡುತ್ತಿದ್ದರು. ನಂತರ ಭರ್ಜರಿ ಭೋಜನ ಕೂಟ ನಡೆಯುತ್ತಿತ್ತು. ಊಟದ ಮಧ್ಯೆ ವಿಶೇಷ ಗ್ರಂಥಗಳನ್ನು ಹೇಳಲಾಗುತ್ತಿತ್ತು. ನಂತರ ಜಗಲಿಯಲ್ಲಿ ಹಿರಿಯ ಗಂಡಸರೆಲ್ಲಾ ಸಭೆ ಸೇರುತ್ತಿದ್ದರು. ಮಕ್ಕಳಾದ ನಾವೆಲ್ಲಾ  ಉಪ್ಪರಿಗೆಯ ಮೇಲೇರಿ ಹಳೆ ಚಂದಮಾಮಗಳನ್ನು ಓದುವುದರಲ್ಲಿ ಮಗ್ನರಾಗುತ್ತಿದ್ದೆವು. ಸಾಮಾನ್ಯವಾಗಿ ಸಮಯದಲ್ಲಿ ಹಿರಿಯರೆಲ್ಲ ಇಸ್ಪೇಟಿನ ಸೆಟ್ ಆಟ ಆಡುತ್ತಿದ್ದರೆ ಗಣೇಶಯ್ಯನವರ ಮುಂದೆ ಅದು ನಡೆಯುತ್ತಿರಲಿಲ್ಲ. ಅವರ ಮುಂದೆ ಸಭಿಕರಿಗೆ ಶ್ರಿಮದ್ಗಾಂಭೀರ್ಯ ಬಂದು ಬಿಡುತ್ತಿತ್ತು. ಅವರೆಲ್ಲ ಗಣೇಶಯ್ಯನವರ ಮಾತಿಗಾಗಿ ಕಾಯಬೇಕಿತ್ತು. ಗಣೇಶಯ್ಯನವರ ಆಕಾರ ಗಲಿವರ್ ನಂತಿದ್ದರೆ ಉಳಿದವರು ಅವರ ಮುಂದೆ ಲಿಲಿಪುಟ್ ಗಳಂತೆ ಕಾಣುತ್ತಿದ್ದರು!

ಗಣೇಶಯ್ಯನವರು ಪ್ರತಿ ಮನೆಯ ಹಿರಿಯರನ್ನು ಅವರ ಹೆಸರು ಕರೆದು ಮಾತನಾಡಿಸುತ್ತಿದ್ದರು. ಮೊದಲ ಸರದಿ ಕೆಳಕೊಡಿಗೆ ನಾರಾಯಣಯ್ಯನವರದಾಗಿತ್ತು. ಅವರಿಂದ ಗಣೇಶಯ್ಯನವರು ತಮ್ಮ ಎರಡು ಭೇಟಿಗಳ ನಡುವೆ ಊರಿನಲ್ಲಿ ನಡೆದ ಸಮಾಚಾರಗಳ ಬಗ್ಗೆ ವರದಿ ಪಡೆಯುತ್ತಿದ್ದರು. ಆಮೇಲೆ ಉಳಿದವರ ಸರದಿ. ಹೆಚ್ಚಿನವರಿಗೆ ಅವರ ಮುಂದೆ ತಲೆಯೆತ್ತಿ ಮಾತನಾಡುವಷ್ಟು ಧೈರ್ಯವೂ ಇರಲಿಲ್ಲ. ಅವರೊಡನೆ ಸ್ವಲ್ಪ ಗಟ್ಟಿಯಾಗಿ ಮಾತನಾಡುವವರೆಂದರೆ ಬೈಸೆಮನೆ ಮಾಧವರಾವ್ ಎಂಬ ಹೊಸನಗರದ ಮಹನೀಯರು. ಅವರ ಮಗಳು ಲಕ್ಷ್ಮಿಯನ್ನು ತಿಮ್ಮಪ್ಪಯ್ಯನವರ ಹಿರಿಯ ಮಗ ಎಲ್ಲಪ್ಪಯ್ಯನವರಿಗೆ ಕೊಟ್ಟು ಮದುವೆ  ಮಾಡಲಾಗಿತ್ತು. ಕಪ್ಪು ಕೋಟ್ ಮತ್ತು ಕಚ್ಚೆಪಂಚೆ ಧರಿಸಿದ ಮಾಧವರಾವ್  ವ್ಯಕ್ತಿತ್ವ ಸ್ವಲ್ಪ ದೊಡ್ಡ ಮಟ್ಟದ್ದೇ ಆಗಿತ್ತು.

ಗಣೇಶಯ್ಯ-ಕಾವೇರಮ್ಮ ದಂಪತಿಗಳು ಭಾಗವಹಿಸುತ್ತಿದ್ದ ಮುಂದಿನ ಹಬ್ಬವೆಂದರೆ ಅನಂತನ ಚತುರ್ದಶಿ ವ್ರತ. ವ್ರತ ಇತರ ವ್ರತಗಳಿಗಿಂತ ಕಠಿಣವಾದದ್ದು. ಗಣೇಶಯ್ಯನವರೊಡನೆ ಇನ್ನು ಕೆಲವರೂ ಕೂಡಿ ವ್ರತವನ್ನು ಆಚರಿಸುತ್ತಿದ್ದರು. ವ್ರತ ಮುಗಿದ ನಂತರ ಸಂತರ್ಪಣೆ ನಡೆದು ಆಮೇಲೆ ಅನಂತನ ವಿಸರ್ಜನೆ  ನಡೆಯುತ್ತಿತ್ತು. ನಮಗೆ ವಿಸರ್ಜನೆ ಅತ್ಯಂತ ಸಂಭ್ರಮ ತರುತ್ತಿತ್ತು. ಗಣೇಶಯ್ಯ ಮತ್ತು ಇತರರು ವಿಸರ್ಜನೆಗಾಗಿ ದೇವರನ್ನು ಮನೆಯ ಕೆಳಗಿದ್ದ ತೋಟದ ಭಾವಿಗೆ ಕೊಂಡೊಯ್ಯುತ್ತಿದ್ದರು. ಹೆಂಗಸರು ಅವರೊಟ್ಟಿಗೆ ಹೋಗುತ್ತಿದ್ದರು. ಆದರೆ ಗಂಡಸರೆಲ್ಲಾ ಅವರು ವಾಪಾಸ್ ಬರುವುದನ್ನೇ ಕಾಯುತ್ತಿದ್ದರು. ಎಲ್ಲರ ಕೈಯಲ್ಲೂ ಗೆಣಜಲು ಎಂಬ ಗಿಡಗಳಲ್ಲಿ ಬೆಳೆದ ಕಾಳುಗಳನ್ನು ಕೊಡಲಾಗುತ್ತಿತ್ತು. ಅದನ್ನು ಅವರು ಗಣೇಶಯ್ಯ ಮತ್ತಿತರ ಮೇಲೆ ಅವರು ವಾಪಾಸ್ ಮನೆಯೊಳಗೆ ಪ್ರವೇಶ ಮಾಡುವಾಗ ಎಸೆಯ ಬೇಕಿತ್ತು.

ಗೆಣಜಲು ಗಿಡಗಳು ಕೇವಲ ನಮ್ಮ ತೋಟದ ಮಧ್ಯ ಭಾಗದಲ್ಲಿದ್ದ ಕೆರೆಯ ದಂಡೆಯಲ್ಲಿ ಮಾತ್ರಾ ಬೆಳೆದಿದ್ದವು. ಅವು ನಮ್ಮೂರಿನ ಬೇರೆಲ್ಲೂ ಇರಲಿಲ್ಲ. ರೀತಿ ಅವುಗಳನ್ನು ಅನಂತನ ವ್ರತದಲ್ಲಿ ಬಳಕೆ ಮಾಡುವ ಕ್ರಮ ಹೇಗೆ ಶುರುವಾಯಿತೆನ್ನುವುದೂ ಒಂದು ರಹಸ್ಯವೇ ಆಗಿತ್ತು. ಏನೇ ಇರಲಿ ನಮಗೆ ಮಾತ್ರ ಅದು ಕೇವಲ ನಮ್ಮ ತೋಟದಲ್ಲಿ ಮಾತ್ರ ದೊರೆಯುವುದೆಂಬ ಹೆಮ್ಮೆ ಇತ್ತು. ಅದನ್ನು ಕೊಯ್ಯಲು ಬೆಳವಿನಕೊಡಿಗೆಯಿಂದ ಜನ ಬಂದು ನಮ್ಮ ತಂದೆಯವರ ಅನುಮತಿ ಕೇಳುವಾಗ ನಾವು ಸ್ವಲ್ಪ 'ಕೋಡು' ಬಂದವರಂತೆ ವರ್ತಿಸುವುದರಲ್ಲಿ ಆಶ್ಚರ್ಯವೇನಿರಲಿಲ್ಲ.

ಗಣೇಶಯ್ಯ-ಕಾವೇರಮ್ಮ ದಂಪತಿಗಳು ನವರಾತ್ರಿ ಹಬ್ಬ ಮುಗಿದಮೇಲೆ ಸ್ವಲ್ಪ ಕಾಲ ನಮ್ಮೂರಲ್ಲೇ ಇದ್ದು ಇಬ್ಬರೂ ಬೇರೆಬೇರೆಯಾಗಿ ಎಲ್ಲ ಮನೆಗಳಿಗೆ ಭೇಟಿ ನೀಡುತ್ತಿದ್ದರು. ಕಾವೇರಮ್ಮನವರು ಬೇರೆ ಹೆಂಗಸರೊಡಗೂಡಿ ಬರುತ್ತಿದ್ದರು. ಅವರು ಬರುವ ಮುನ್ಸೂಚನೆ ನಮಗೆ ಮೊದಲೇ ದೊರೆಯುತ್ತಿತ್ತು. ಆದರೆ ಗಣೇಶಯ್ಯನವರು ಒಂಟಿಯಾಗಿ ಬರುತ್ತಿದ್ದರು. ನಾವು ಕಾವೇರಮ್ಮನವರ ಭೇಟಿಯನ್ನು ಆಸಕ್ತಿಯಿಂದ ನಿರೀಕ್ಷಿಸುತ್ತಿದ್ದೆವು. ಏಕೆಂದರೆ ಅವರೇನು ಬರಿಗೈಯಲ್ಲಿ ಬರುತ್ತಿರಲಿಲ್ಲ. ಅವರ ಕೈಚೀಲದಿಂದ ನಮಗಾಗಿ ದ್ರಾಕ್ಷಿ, ಗೋಡಂಬಿ ಮತ್ತು  ಸೇಬಿನ ಹಣ್ಣು ಇತ್ಯಾದಿಗಳು ಹೊರಬೀಳುತ್ತಿದ್ದವು. ಓಹ್ ! ಕಾವೇರಮ್ಮನದು ಎಂತಹ ಮನಮೋಹಕ ವ್ಯಕ್ತಿತ್ವ? ಅವರು ಮನೆಯಲ್ಲಿ ಇದ್ದಾಗ ಮನೆ ಇಡೀ  ಒಂದು ಬಗೆಯ ಉಜ್ವಲ ಕಾಂತಿ ತುಂಬಿರುತ್ತಿದ್ದು ಅದು ಅವರೊಡನೇ ಹೊರಟು ಹೋಗುತ್ತಿತ್ತು!

ಇದಕ್ಕೆ ತದ್ವಿರುದ್ಧವಾಗಿ ಗಣೇಶಯ್ಯನವರ ಭೇಟಿ ಯಾವುದೇ ಮುನ್ಸೂಚನೆ ಇಲ್ಲದೇ ಜರುಗುತ್ತಿತ್ತು. ನಮಗೆ ಕೊಂಚವೂ ಸುಳಿವು ಸಿಗುತ್ತಿರಲಿಲ್ಲ.  ನಮ್ಮೂರಿನ ಎಲ್ಲ ಮನೆಗಳಿಗೂ ಎರಡು ದಾರಿಗಳಿದ್ದುವು. ರಸ್ತೆಯ ಮೂಲಕ ಮತ್ತು ಅಡಿಕೆ ತೋಟದ ಮೂಲಕ. ಗಣೇಶಯ್ಯನವರು ಇದ್ದಕ್ಕಿದ್ದಂತೆ ಮನೆಯ ಮುಂದೆ ಪ್ರತ್ಯಕ್ಷವಾಗುತ್ತಿದ್ದರು. ಅವರು ಯಾವ ದಾರಿಯಲ್ಲಿ ಬಂದರೆನ್ನುವುದೂ ನಮಗೆ ತಿಳಿಯುತ್ತಿರಲಿಲ್ಲ.

ಗಣೇಶಯ್ಯನವರೊಡನೆ ಸಂಭಾಷಣೆ ಸಾಮಾನ್ಯವಾಗಿ ಏಕಮುಖಿಯಾಗಿತ್ತು. ಎಲ್ಲರೂ ಅವರ  ಪ್ರಶ್ನೆಗಳಿಗೆ ಉತ್ತರ ನೀಡುವುದರಲ್ಲೇ ತಮ್ಮ ಮಾತನ್ನು ಮುಗಿಸುತ್ತಿದ್ದರು. ಯಾರೂ ಅವರಿಗೆ ತಿರುಗಿ ಪ್ರಶ್ನೆ ಕೇಳುತ್ತಿರಲಿಲ್ಲ. ಮಾತುಗಳು ಸಾಮಾನ್ಯವಾಗಿ ತೋಟದ ಹಾಗೂ ಅಡಿಕೆಯ ಬಗ್ಗೆ ಸೀಮಿತವಾಗಿರುತ್ತಿದ್ದವು. ಒಂದು ಬಾರಿ  ಅವರು ಬಂದಾಗ ನಮ್ಮ ತಂದೆ ಅಡಿಕೆ ಆರಿಸುತ್ತಿದ್ದರು. ಗಣೇಶಯ್ಯನವರಿಗೆ ಅವರ ಮುಂದೆ ರಾಶಿ ಬಿದ್ದ ಅಡಿಕೆಯ  (ಹಸ)  ಬಣ್ಣ ನೋಡಿ ಪರಮಾಶ್ಚರ್ಯವಾಯಿತು. ಅಷ್ಟು ಸುಂದರವಾಗಿತ್ತು ಅದರ  ಬಣ್ಣ. ಅಡಿಕೆಗೆ ಅಂತಹ ಬಣ್ಣ ಬರಲು ಅದಕ್ಕೆ ಬಳಸಿದ ಚೊಗರು ಹಾಗೂ ಅದನ್ನು ಸರಿಯಾದ ಮಟ್ಟದವರೆಗೆ ಬೇಯಿಸುವ ಮತ್ತು ಒಣಗಿಸುವ ವಿಧಾನ. ವಿಚಾರದಲ್ಲಿ ನಮ್ಮ ತಂದೆಯೊಬ್ಬ ಮಾಂತ್ರಿಕನೆಂದೇ ಹೇಳಬೇಕು. ಅವರು ಕಾಡಿನ ಮರದ   ತೊಗಟೆಯಿಂದ ಸ್ವತಃ ತಯಾರಿಸಿದ ಚೊಗರು ಅತ್ಯಂತ ಶ್ರೇಷ್ಠ ಮಟ್ಟದ್ದಾಗಿರುತ್ತಿತ್ತು. ಹಾಗೆಯೇ ಅವರು ಅಡಿಕೆಯನ್ನು ಬೇಯಿಸುವ ಹದವೂ ತುಂಬಾ ಉನ್ನತ ಮಟ್ಟದ್ದಾಗಿತ್ತು.  ನಮ್ಮ ತಂದೆಯವರಿಗೆ ಗಣೇಶಯ್ಯನವರ ಶಹಬಾಶ್ ಗಿರಿ ಸಿಕ್ಕಿತು. ಮಾತ್ರವಲ್ಲ ಅವರು ನಮ್ಮ ತಂದೆಯವರಿಗೆ  ಅಡಿಕೆಯನ್ನು ಪ್ರತ್ಯೇಕ ಮೂಟೆಮಾಡಿ ಶಿವಮೊಗ್ಗೆಯ ಮಂಡಿಗೆ ಕಳಿಸಬೇಕೆಂದು ಸಲಹೆ ನೀಡಿದರು. ಅದರಂತೆ ಮಾಡಿದಾಗ ನಮ್ಮ ಅಡಿಕೆಗೆ ಮಂಡಿಯಲ್ಲಿ ವರ್ಷಕ್ಕೆ ಅತ್ಯಂತ ಉನ್ನತ ಬೆಲೆ ಸಿಕ್ಕಿತಂತೆ.

ನನಗೆ ಗಣೇಶಯ್ಯನವರ ಕೊನೆಯ ದಿನಗಳು ಹೇಗೆ ಕಳೆದುವೆನ್ನುವುದು ನೆನಪಿಗೆ ಬರುತ್ತಿಲ್ಲ. ನಾನಾಗ ಹೊಕ್ಕಳಿಕೆಯಲ್ಲಿ ನಮ್ಮ ಗೌರಕ್ಕನ  ಮನೆಯಲ್ಲಿದ್ದು ಬಸವಾನಿಯಲ್ಲಿದ್ದ ಮಾಧ್ಯಮಿಕ ಶಾಲೆಗೆ ಹೋಗುತ್ತಿದ್ದೆ. ಪ್ರತಿ ಶನಿವಾರ ನನ್ನ  ಎರಡನೇ ಅಕ್ಕ ರುಕ್ಮಿಣಕ್ಕನ ಮನೆಗೆ (ಹೊಸಮನೆ) ಹೋಗಿ ಒಂದು ದಿನ ಅಲ್ಲಿಯೇ ಇರುತ್ತಿದ್ದೆ. ಅದು ಪ್ರಾಯಶಃ ೧೯೬೧ನೇ ಇಸವಿ ಇರಬೇಕು. ನಾನು ಹೊಸಮನೆ ಪ್ರವೇಶಿಸುತ್ತಿದ್ದಂತೆ ನನಗೆ ರುಕ್ಮಿಣಿಅಕ್ಕನ ಕಣ್ಣಲ್ಲಿ ನೀರು ಕಾಣಿಸಿತು. ಅವಳು ನನಗೆ ಗಣೇಶಯ್ಯನವರು ಶಿವಮೊಗ್ಗೆಯಲ್ಲಿ ತೀರಿಕೊಂಡ ಸಮಾಚಾರ ತಿಳಿಸಿದಳು. ಸಮಾಚಾರ ಪತ್ರಿಕೆಗಳಲ್ಲೂ ಪ್ರಕಟವಾಗಿತ್ತಂತೆ. ಪತ್ರಿಕೆಗಳಲ್ಲಿ ಅವರನ್ನು ಮಲೆನಾಡಿನ ಓರ್ವ ಪ್ರಸಿದ್ಧ ವ್ಯಕ್ತಿಯೆಂದು ಬಣ್ಣಿಸಲಾಗಿತ್ತಂತೆ. ಹೆಸರಿಗೆ ಅವರು ಅತ್ಯಂತ ಅರ್ಹರಾಗಿದ್ದರೆಂಬುವುದರಲ್ಲಿ ಯಾವುದೇ ಸಂಶಯವಿರಲಿಲ್ಲ.

ಗಣೇಶಯ್ಯನವರ ಮರಣದೊಂದಿಗೆ ನಮ್ಮೂರಿನಲ್ಲಿ ಒಂದು ಯುಗವೇ ಕಳೆದು ಹೋಯಿತೆಂದರೆ ಅತಿಶಯೋಕ್ತಿಯಾಗಲಾರದು.  ಬೆಳವಿನಕೊಡಿಗೆ ಮನೆಯ ಸಂಪ್ರದಾಯಗಳು ಅವರ ತಮ್ಮಂದಿರಾದ ತಿಮ್ಮಪ್ಪಯ್ಯ ಮತ್ತು ವೆಂಕಪ್ಪಯ್ಯನವರ ನೇತೃತ್ವದಲ್ಲಿ ಮುಂದುವರೆದುವು. ಆದರೆ  ಊರಿನಲ್ಲಿ ಗಣೇಶಯ್ಯನವರ ಸ್ಥಾನಕ್ಕೆ ಬರಲು ಬೇರೆ ಯಾರಿಗೂ ಅವರ ಮಟ್ಟದ  ಅರ್ಹತೆ ಇರಲಿಲ್ಲ ಮತ್ತು ಯಾರೂ ಬರಲೂ ಇಲ್ಲ. ಇಂದು ಗಣೇಶಯ್ಯನವರ ಧೀಮಂತ ವ್ಯಕ್ತಿತ್ವ ಕೇವಲ ಒಂದು ನೆನಪು ಮಾತ್ರ. ದೇವರು ಅವರ ಆತ್ಮಕ್ಕೆ ಶಾಂತಿಯನ್ನೀಯಲಿ.
ಚಿಟ್ಟೆಮಕ್ಕಿ
ಬೆಳವಿನಕೊಡಿಗೆಯವರಿಗೆ ಅಡಿಕೆ ತೋಟದೊಂದಿಗೆ ಕಾಫಿ ತೋಟ ಮತ್ತು ಬತ್ತದ ಗದ್ದೆಗಳೂ ಇದ್ದುವು. ಹೆಚ್ಚಿನ ಗದ್ದೆಗಳು ಗೇಣಿಗೆ  ಕೊಡಲ್ಪಟ್ಟಿದ್ದುವು . ಅದರಲ್ಲಿ ಹೆಚ್ಚಿನವು ಚಿಟ್ಟೆಮಕ್ಕಿ ಎಂಬಲ್ಲಿದ್ದುವು. ಚಿಟ್ಟೆಮಕ್ಕಿಯ ಬಗ್ಗೆ ಬರೆಯದಿದ್ದರೆ ಬೆಳವಿನಕೊಡಿಗೆ ಕಥೆಯೇ ಅಪೂರ್ಣ ಎಂದು ಹೇಳಲೇ ಬೇಕು.

ಚಿಟ್ಟೆಮಕ್ಕಿಯ ಸಂಸಾರಗಳೆಲ್ಲಾ ಮಡಿವಾಳ (ದೋಬಿ) ಕುಲಕ್ಕೆ ಸೇರಿದ್ದುವು.  ಸಂಸಾರಗಳು ತಲೆತಲಾಂತರದಿಂದ ಬೆಳವಿನಕೊಡಿಗೆ ಜಮೀನನ್ನು ಗೇಣಿ ಮಾಡುತ್ತ ಅವರ ಅಡಿಕೆ ತೋಟದ ಆಕಾರ ಅಂದರೆ ಅಡಿಕೆ ಕೊಯ್ಲಿನ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿದ್ದವು. ಅದಕ್ಕೆ ಅವರಿಗೆ ನಿಗದಿಯಾದ ಹಣವನ್ನು ನೀಡಲಾಗುತ್ತಿತ್ತು. ಕೇವಲ  ಬತ್ತ  ಬೆಳೆದು ಜೀವನ  ಸಾಗಿಸಲಾಗದ್ದರಿಂದ ಅವರು ತಮ್ಮ ಕುಲ ಕಸುಬಾದ ಬಟ್ಟೆ ಒಗೆದು ಕೊಡುವುದು ಮಾತ್ರವಲ್ಲದೆ ನಮ್ಮೂರಿನ ಬೇರೆ ಬೇರೆ ಮನೆಗಳಲ್ಲಿ ಜಮೀನಿಗೆ ಸಂಬಂಧಿಸಿದ ಕೂಲಿ ಕೆಲಸವನ್ನು ಕೂಡ ಮಾಡುತ್ತಿದ್ದರು. ಸಾಮಾನ್ಯವಾಗಿ ಇವರ ಹೆಸರುಗಳು ಕೇವಲ ಎರಡು ಅಕ್ಷರಗಳಲ್ಲಿ ಇರುತ್ತಿದ್ದವು. ಉದಾಹರಣೆಗೆ ಮಂಜ, ತಿಮ್ಮ, ಹೂವ,  ರುದ್ರ, ದುಗ್ಗ, ನಾಗ, ಸೂರ ಮತ್ತು ಸಿಂಗ  ಹಾಗೂ ಶೇಷಿ, ರುಕ್ಕಿ, ಬೆಳ್ಳಿ, ಲೋಕಿ, ಚಿನ್ನಿ ಮತ್ತು ಸುಬ್ಬಿ.

ಸಂಸಾರಗಳಿಗೆ ಮಂಜ ಎಂಬುವನು ಮುಖ್ಯಸ್ಥನಾಗಿದ್ದ. ಅವನಿಗೆ ಉಳಿದೆಲ್ಲರಿಗಿಂತ ಹೆಚ್ಚು ಗೇಣಿ ಜಮೀನು  ಇತ್ತು.  ಮಂಜನೊಬ್ಬ ಪರಿಣಿತ ಬೇಟೆಗಾರನೂ ಆಗಿದ್ದ. ನಮ್ಮ ನೆರೆಮನೆಯ ಕಿಟ್ಟಜ್ಜಯ್ಯನವರ ಮೇಲೆ ಕಾಡು  ಹಂದಿಯೊಂದು ಆಕ್ರಮಣ ಮಾಡಿದಾಗ ಅದು ಮಂಜನ ಕೋವಿಗೆ ಬಲಿಯಾಗಿತ್ತು. ನಾವು ನೋಡುವ ವೇಳೆಗೆ ಮಂಜ ಎಂಬತ್ತು ವರ್ಷದ ಮುದುಕನಾಗಿದ್ದ. ಮಂಜನ ಹೆಂಡತಿ ಶೇಷಿ. ಅವರಿಗೆ ರುಕ್ಕಿ ಮತ್ತು ಸುಬ್ಬಿ ಎಂಬ ಹೆಣ್ಣು ಮಕ್ಕಳು.  ಅವರ  ಒಬ್ಬನೇ ಮಗ ತಿಮ್ಮ ತಂದೆಗೆ ಯಾವುದೇ ರೀತಿಯಲ್ಲಿ ಸರಿ ಸಾಟಿಯಾಗಿರಲಿಲ್ಲ.  ಹಾಗಾಗಿ  ಸಂಸಾರ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡಿತ್ತು. ಆದರೆ ಅದನ್ನು ಪುನಃ ಪಡೆಯಲು ಹೋರಾಟ ಮಾಡುತ್ತಲೇ ಇತ್ತು.

ನಮ್ಮ  ಬಾಲ್ಯದಲ್ಲಿ ನಾವು ಮಂಜನ ಸಂಸಾರಕ್ಕೂ ಮತ್ತು ಚಿಟ್ಟೆಮಕ್ಕಿಯ ಉಳಿದ ಸಂಸಾರಗಳಿಗೂ ಆಗಾಗ ನಡೆಯುತ್ತಿದ್ದ ಕದನದ ಕಥೆಗಳನ್ನು ಕೇಳಿ ಖುಷಿಪಡುತ್ತಿದ್ದೆವು.  ಕಥೆಗಳನ್ನು  ಅದರಲ್ಲಿ ಪಾತ್ರವಹಿಸಿದ ಪ್ರಮುಖ ವ್ಯಕ್ತಿಗಳ ಬಾಯಿಂದಲೇ ಕೇಳಿದಾಗ ನಮಗಾಗುತ್ತಿದ್ದ ರೋಮಾಂಚನ ಅಷ್ಟಿಟ್ಟಲ್ಲ. ನಾವು ಕಥೆಗಳಿಗೆ ಚಿಟ್ಟೆಮಕ್ಕಿಯ ಮೊದಲನೇ ಮತ್ತು ಎರಡನೇ ಮಹಾ ಯುದ್ಧಗಳೆಂದು  (ಪಾಣಿಪಟ್ ಯುದ್ಧಗಳಂತೆ)  ಹೇಳುತ್ತಿದ್ದೆವು. ಅಡಿಕೆ ಸುಲಿತ ನಡೆಯುತ್ತಿರುವಾಗ ರಾತ್ರಿಯಲ್ಲಿ ಕಥೆಗಳನ್ನು ಕೇಳುವುದೇ ಒಂದು ಸಂಭ್ರಮದ ವಿಷಯವಾಗಿತ್ತು.

ಚಿಟ್ಟೆಮಕ್ಕಿಯ ಮೊದಲನೇ ಮಹಾಯುದ್ಧ  ತುಂಬಾ ವಿಶಿಷ್ಟದ್ದಾಗಿತ್ತು. ಏಕೆಂದರೆ ಅದು ಸುಬ್ಬನೆಂಬ ಒಂಟಿ ಮಹಾಯೋಧನ ವಿರುದ್ಧ ತುಂಬಾ ಬಲಶಾಲಿಯಾಗಿದ್ದ ಮಂಜನ ಕುಟುಂಬ ನಡೆಸಿದ ಮಹಾಯುದ್ಧವಾಗಿತ್ತು. ನೀವು ಪ್ರಾಯಶಃ ನಂಬಲಾರಿರಿ. ಏಕೆಂದರೆ ಅದರಲ್ಲಿ ವಿಜಯಿಯಾದವನು ಒಂಟಿ ಯೋಧನಾದ  ಸುಬ್ಬನೇ! ಆದರೆ ಯುದ್ಧದಲ್ಲಿ ಸೋತುಹೋದ  ಮಂಜನ ಪ್ರಬಲ  ಸೇನೆಯ ಸೋಲಿಗೆ ಕಾರಣ  ಕಂಡು ಹಿಡಿಯಲು ಯಾವುದೇ ಸಮಿತಿಯನ್ನು ನೇಮಕ ಮಾಡುವ ಅವಶ್ಯಕತೆ ಇರಲಿಲ್ಲ. ಕಾರಣ ತುಂಬಾ ಸ್ಪಷ್ಟವಾಗಿತ್ತು. ಏಕೆಂದರೆ ಮಂಜನ ಸೇನೆ ಯುದ್ಧಕ್ಕೆ ಬರಿಯ ಕೈ ಕಾಲುಗಳನ್ನು ಬಳಸಿದರೆ, ಪರಮವೀರನಾದ ಸುಬ್ಬ ಕಾಲಕ್ಕೆ ತುಂಬಾ ಪ್ರಸಿದ್ಧ ಅಸ್ತ್ರವಾಗಿದ್ದ ದೊಣ್ಣೆಯನ್ನು ಬಳಸಿದ್ದ! ಇಲ್ಲಿ ಕಥೆಯನ್ನು ಸ್ವಲ್ಪ ವಿಶದವಾಗಿ ಹೇಳುವುದು ಒಳಿತೆಂದು ಅನ್ನಿಸುತ್ತಿದೆ.

ಸುಬ್ಬನೊಬ್ಬ  ಆರಡಿ ಎತ್ತರದ ದೃಢಕಾಯ ತರುಣ. ಅವನಿಗೆ ಸಮೀಪದ ಇನ್ನೊಂದು ಊರಿನ ಲೋಕಿ ಎಂಬುವಳೊಡನೆ ಆಗ ತಾನೇ ವಿವಾಹವಾಗಿತ್ತು. ನವದಂಪತಿಗಳು  ವಿವಾಹದ  ಮೊದಲ ದಿನಗಳನ್ನು ತುಂಬಾ ಸಂಭ್ರಮದಿಂದ ಕಳೆಯುತ್ತಿದ್ದರು. ಇದು ಮಂಜನ ಕುಟುಂಬದ ಉರಿಗಣ್ಣಿಗೆ ಬಿತ್ತು. ಹೊಟ್ಟೆ ಕಿಚ್ಚನ್ನು ಸಹಿಸಲಾರದ ಕುಟುಂಬ ಒಂದು ರಾತ್ರಿ ಯಾವುದೇ ಕಾರಣವಿಲ್ಲದೇ ಸುಬ್ಬನ ಮನೆಯ ಮುಂದೆ ಒಟ್ಟಾಗಿ ಸೇರಿ ಕಾಲ್ಕೆರೆದು ಜಗಳ ಪ್ರಾರಂಭಿಸಿತು. ಜಗಳ ತಾರಕಕ್ಕೇರಿ ಕೈ ಕೈ ಮಿಲಾಯಿಸುವ ಮಟ್ಟಕ್ಕೆ ತಲುಪಿತು.

ತಮ್ಮ ಮಹಾ ಸೇನೆಯ ಮುಂದೆ ಒಂಟಿ ಸುಬ್ಬ ಏನೂ ಮಾಡಲಾರನೆಂದು ಮಂಜನ ಕುಟುಂಬ ಭಾವಿಸಿತ್ತು. ಆದರೆ ಅವರಿಗೆ ಸುಬ್ಬನ ಸಿಟ್ಟಿನ ಹಾಗೂ ಶಕ್ತಿಯ ಅರಿವಿರಲಿಲ್ಲ. ತಾಳ್ಮೆ ಕಳೆದುಕೊಂಡ ಸುಬ್ಬ ಯಾವುದಾದರೂ ಅಸ್ತ್ರ ಸಿಗುವುದೇ ಎಂದು ಆಚೀಚೆ ನೋಡಿದ. ಆದರೆ ಏನೂ ಸಿಗದಿದ್ದಾಗ ನಿರಾಶನಾಗದೇ ಪಕ್ಕದಲ್ಲಿದ್ದ ಬೇಲಿಯಿಂದ ಒಂದು ಬಲವಾದ ಗೂಟವನ್ನು ಕಿತ್ತು ಹೊರತೆಗೆದ. ಅದನ್ನು ಮಿಂಚಿನ ವೇಗದಲ್ಲಿ ತಿರುಗಿಸುತ್ತಾ ಮಂಜನ ಸೇನೆಯ ಮೇಲೆ ಪ್ರತಿ ದಾಳಿ ಮಾಡಿದ. ಮಂಜನ ಸೇನೆಯ ಮುಂದಿದ್ದ ಒಬ್ಬೊಬ್ಬ ಗಂಡಸಿಗೂ ಸುಬ್ಬನ ದೊಣ್ಣೆಯ ರುಚಿ ತಗಲ ತೊಡಗಿತು. ಸೇನೆಯ ಹಿಂದಿದ್ದ ಹೆಂಗಸರ ಮೇಲೆ ದೊಣ್ಣೆ ಬೀಸುವ ಪ್ರಸಂಗವೇ ಬರಲಿಲ್ಲ. ಏಕೆಂದರೆ ಅವರೆಲ್ಲ ಮನೆ ಸೇರಿ ಬಾಗಿಲು ಭದ್ರ ಮಾಡಿಕೊಂಡರು. ಹೇಡಿಗಳಾದ ಗಂಡಸರು  ದೊಣ್ಣೆಯ ಪೆಟ್ಟಿನ ರುಚಿ ನೋಡುತ್ತಾ ಕಾಲಿಗೆ ಬುದ್ಧಿ ಹೇಳಿದರು. ಏಕಾಂಗಿಯಾದ ಸುಬ್ಬನ ಪರಾಕ್ರಮ ವೀರ ಅಭಿಮನ್ಯುವಿನ ಹೋರಾಟಕ್ಕೇನೂ ಕಡಿಮೆ ಇತ್ತೆಂದು ನಮಗನ್ನಿಸಲಿಲ್ಲ. ಆದರೆ ವೀರ ಅಭಿಮನ್ಯು ತನ್ನ ಪ್ರಾಣವನ್ನೇ ತೆತ್ತಿದ್ದರೆ ಸುಬ್ಬ ಯುದ್ಧದಲ್ಲಿ ಸಂಪೂರ್ಣ ವಿಜಯ ಗಳಿಸಿದ್ದ!

ಚಿಟ್ಟೆಮಕ್ಕಿಯ ಎರಡನೇ ಮಹಾಯುದ್ಧ  ಕೂಡ ತುಂಬಾ ರೋಚಕವಾಗಿತ್ತು. ಬಾರಿ  ಮಂಜನ ಕುಟುಂಬದ ವೈರಿಗಳ ಸಂಖ್ಯೆ ಎರಡರಷ್ಟಾಗಿತ್ತು! ಯುದ್ಧದಲ್ಲಿ ಮಂಜನ  ಸೇನೆ ಅಣ್ಣ ತಮ್ಮಂದಿರಿಬ್ಬರ ಜಂಟಿ ಸೇನೆಯ ಮೇಲೆ ಕಾಳಗ ಮಾಡಿತ್ತು. ಹೂವ ಎಂಬ ಹೆಸರಿನ ಮಧ್ಯ ವಯಸ್ಕನೊಬ್ಬನಿಗೆ ಮಕ್ಕಳಿರಲಿಲ್ಲ. ಅವನು ತನ್ನ ಸಹೋದರಿಯ ಮಕ್ಕಳಿಬ್ಬರನ್ನು ದತ್ತು ಪಡೆದು ಸಾಕಿದ್ದ. ದೊಡ್ಡವನಿಗೆ ಸಿಂಗ (ಸಿಂಹ) ಎಂದು ಮತ್ತು ಚಿಕ್ಕವನಿಗೆ ಸೂರ ಎಂದೂ ನಾಮಕರಣ ಮಾಡಿದ್ದ. ಯಾವುದೊ ಕಾರಣದಿಂದ ಮಂಜನ ಕುಟುಂಬಕ್ಕೆ ಹೂವನ ಮೇಲೆ  ದ್ವೇಷ ಇತ್ತು.

ಒಂದು ರಾತ್ರಿ ಕುಟುಂಬಗಳ ನಡುವಿನ ಕಲಹ ವಿಪರೀತಕ್ಕೇರಿತು. ಆರಂಭದ  ಮಾತಿನ ಜಗಳದಲ್ಲಿ ಮಂಜನ ಕುಟುಂಬದ ಕೈ ಮೇಲಾಯಿತು. ಕಾರಣವಿಷ್ಟೇ. ಹೂವನಿಗೆ ಗಂಟಲಿನ ಕಾಯಿಲೆ ಇದ್ದರಿಂದ ಅವನಿಗೆ ತನ್ನ ಧ್ವನಿ ಏರಿಸಿ ಮಾತನಾಡಲು ಆಗುತ್ತಿರಲಿಲ್ಲ. ಮಂಜನ ಕುಟುಂಬ ತಾವು ಗೆದ್ದೆವೆಂದೇ  ಭಾವಿಸಿತು. ಆದರೆ ಕುಟುಂಬಕ್ಕೆ  ಹೂವನ ಸಾಕು ಮಕ್ಕಳಿಬ್ಬರ ಶೌರ್ಯದ ಅರಿವಿರಲಿಲ್ಲ. ಸಿಂಗ-ಸೂರ ಜೋಡಿಗೆ ತಮ್ಮ ಮಾವನಿಗಾಗುತ್ತಿದ್ದ ಅಪಮಾನವನ್ನು ಸಹಿಸಲಾಗಲಿಲ್ಲ. ಸಿಂಗನು ಸಿಂಹದಂತೆ ಗರ್ಜನೆ ಮಾಡುತ್ತಾ ಶತ್ರುಗಳ ಮೇಲೆ ಜಿಗಿದರೆ, ಸೂರನು ಶೌರ್ಯದಿಂದ ಅವರ ಮೇಲೆ ಎಗರಿದ! ಅಣ್ಣ ತಮ್ಮಂದಿರು ತಮ್ಮ ಕೈಗೆ ಸಿಕ್ಕಿದ ವಸ್ತುಗಳನ್ನೇ (ಪೊರಕೆಗಳೂ ಸೇರಿ)  ಅಸ್ತ್ರವಾಗಿ ಬಳಸಿ  ನಡೆಸಿದ ದಾಳಿಗೆ ಮಂಜನ ಸೇನೆ ಬೆದರಿ ಹಿಮ್ಮೆಟ್ಟಿತು. ಅದು ಯಾವ ಬಗೆಯ ಏಟು ತಿಂದಿತ್ತೆಂದರೆ ಪುನಃ ಸೇನೆ ಒಂದಾಗಲೇ ಇಲ್ಲ. ಹಾಗಾಗಿ ಪಾಣಿಪಟ್ ಯುದ್ಧದ ಹಾಗೆ ಮೂರನೇ ಚಿಟ್ಟೆಮಕ್ಕಿ ಯುದ್ಧ ನಡೆಯುವ ಪ್ರಸಂಗವೇ ಬರಲಿಲ್ಲ. ಅದು ಎರಡಕ್ಕೆ ಮುಕ್ತಾಯವಾಗಿ ಮಂಜನ ಕುಟುಂಬದ ಪ್ರಾಮುಖ್ಯತೆ ಕೊನೆಗೊಂಡಿತು.
---------0-----------0------------0------------0-----------0-----------------0-------------0------------0-----------0---------0----
೧೯೫೦ನೇ ದಶಕದ ಕೊನೆಯ ಭಾಗದಲ್ಲಿ ನಮ್ಮ ಬೆಳವಿನಕೊಡಿಗೆ ಗ್ರಾಮದ ಪುನರುಜ್ಜೀವನ ಆಯಿತೆಂದು ಹೇಳಬೇಕು. ವಯಸ್ಕರ ಶಿಕ್ಷಣ ಸಮಿತಿಯಿಂದ ನಮ್ಮೂರಿನಲ್ಲಿ ಅನೇಕ ಕಾರ್ಯಕ್ರಮಗಳು ನಡೆದುವು. ನಮ್ಮೂರಿನ ಶಾಲೆಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ವಯಸ್ಕರಿಗಾಗಿ ಒಂದು ರಾತ್ರಿ ಶಾಲೆಯನ್ನೂ ಸ್ವಲ್ಪ ದಿನ ನಡೆಸಲಾಯಿತು. ಶ್ರೀ ವಿದ್ಯಾತೀರ್ಥ ಪುಸ್ತಕ ಭಂಡಾರ ಎಂಬ ಹೆಸರಿನಲ್ಲಿ ಸಾರ್ವಜನಿಕ ಪುಸ್ತಕ ಭಂಡಾರವನ್ನು ಬೆಳವಿನಕೊಡಿಗೆ ಮನೆಯಲ್ಲಿ ಸ್ಥಾಪನೆ ಮಾಡಲಾಯಿತು. ಅದಕ್ಕೆ ಪುಸ್ತಕಗಳನ್ನು ದಾನಮಾಡಿದವರಲ್ಲಿ ಮುಖ್ಯರೆಂದರೆ ಹುರುಳಿಹಕ್ಲು ಲಕ್ಷ್ಮೀನಾರಾಯಣ ರಾವ್, ಬೆಳವಿನಕೊಡಿಗೆ ಎಲ್ಲಪ್ಪಯ್ಯ, ಹೊಸಳ್ಳಿ ತಿಮ್ಮಪ್ಪ ಮತ್ತು ಅದೇಖಂಡಿ ರಾಮಕೃಷ್ಣ ರಾವ್ (ನಮ್ಮಣ್ಣ).  ಬಗ್ಗೆ ಪ್ರಜಾವಾಣಿಯಲ್ಲಿ ಒಂದು ವರದಿ ಕೂಡ ಬಂತು. ನಮಗೆ ನಮ್ಮಣ್ಣನ ಹೆಸರನ್ನು ಪೇಪರಿನಲ್ಲಿ  ಓದಿ ಆದ  ಸಂತೋಷ ಅಷ್ಟಿಟ್ಟಲ್ಲ.
ನಮಗೆ ಬೆಳವಿನಕೊಡಿಗೆ  ಎಲ್ಲಪ್ಪಯ್ಯನವರ ಹೆಸರನ್ನು ಮರೆಯದಿರಲು ಅನೇಕ ಕಾರಣಗಳಿವೆ. ನಾವು ಚಿಕ್ಕವರಾಗಿದ್ದಾಗ ಅವರಿನ್ನೂ ೨೫ ವರ್ಷದ ತರುಣ. ಬೆಳವಿನಕೊಡಿಗೆ ಮನೆಯ ಸಮೀಪದ ಬೆಟ್ಟದ ಬುಡದಲ್ಲಿ ಒಂದು ವಿಶಾಲವಾಗಿ ಹರಡಿದ ಸಂಪಿಗೆ ಮರವಿತ್ತು. ನೆಲದಿಂದ ಕಡಿಮೆ ಎತ್ತರದಲ್ಲಿದ್ದ ಅದರ ಕೊಂಬೆಗಳನ್ನೇರಿ ಹೂವು ಕೊಯ್ಯುವುದು ನಮಗೆ ತುಂಬಾ ಸಂತೋಷದ ಕೆಲಸವಾಗಿತ್ತು. ಒಂದು ದಿನ ಬೆಳಿಗ್ಗೆ ನಾನೂ ಪುಟ್ಟಣ್ಣನೂ ಒಟ್ಟಿಗೆ ಹೂವು ಕೊಯ್ಯುತ್ತಿದ್ದೆವು. ನಾನು ಇದ್ದಕ್ಕಿದ್ದಂತೆ ಕಾಲು ಜಾರಿ ಮರದಿಂದ ಕೆಳಗೆ ಬಿದ್ದೆ. ಬಿದ್ದ ರಭಸಕ್ಕೆ ನನ್ನ ಪ್ರಜ್ಞೆ ತಪ್ಪಿತು. ಪುಟ್ಟಣ್ಣನಿಗೆ ಗಾಬರಿಯಾಗಿ  ಮನೆಯವರಿಗೆ ತಿಳಿಸಲು ಓಡಿ  ಹೋದ.  ಯಾರಿಂದಲೋ ವಿಷಯ ತಿಳಿದ ಎಲ್ಲಪ್ಪಯ್ಯನವರು ನನ್ನ ಮುಖಕ್ಕೆ ನೀರು ಚಿಮುಕಿಸಿ  ಎಚ್ಚರಗೊಳಿಸಿ ಹೆಗಲಮೇಲೆ ಹಾಕಿಕೊಂಡು ಮನೆಗೆ ಎತ್ತಿಕೊಂಡು ಹೋದರು. ಆಮೇಲೆ ನನ್ನ ಎಡಕೈನಲ್ಲಿ ಮೂಳೆ ಮುರಿದದ್ದು ಗೊತ್ತಾಗಿ ಕೊಪ್ಪದ ಆಸ್ಪತ್ರೆಗೆ ಹೋಗಬೇಕಾಯಿತು. ಅಲ್ಲಿ ಆಗ ಮುಂದೆ ತುಂಬಾ ಪ್ರಸಿದ್ಧಿ ಪಡೆದ ಡಾಕ್ಟರ್ ಕಾಂತರಾಜ್ ಅವರು ನನ್ನ ಕೈಗೆ ಬ್ಯಾಂಡೇಜ್ ಸುತ್ತಿದ್ದರು. ಅದು ಆಸ್ಪತ್ರೆಗೆ ನನ್ನ ಮೊದಲ ಭೇಟಿಯಾಗಿತ್ತು.

ನಮಗೆ ಬಾಲ್ಯದಲ್ಲಿ ಚಂದಮಾಮ ಕೊಟ್ಟಷ್ಟು ಖುಷಿ ಬೇರೆಯಾವುದರಿಂದಲೂ ದೊರೆತಿರಲಿಲ್ಲ. ನಮ್ಮ ಇಡೀ ಊರಿನಲ್ಲಿ ಕೇವಲ ಎಲ್ಲಪ್ಪಯ್ಯನವರು ಮಾತ್ರ ಅದರ ಚಂದಾದಾರರಾಗಿದ್ದರು. ಅದನ್ನು ಕೊಪ್ಪದಲ್ಲಿದ್ದ  ನ್ಯಾಷನಲ್ ಸ್ಟೋರ್ಸ್ ನಿಂದ ತರಬೇಕಾಗಿತ್ತು. ಎಷ್ಟೋ ಬಾರಿ ನಮ್ಮಣ್ಣ ಅದನ್ನು ಕೊಪ್ಪದಿಂದ ತರುತ್ತಿದ್ದರು. ನಾವು ಅದನ್ನು ಓದಿದ ನಂತರ ಬೆಳವಿನಕೊಡಿಗೆಗೆ  ತಲುಪಿಸುತ್ತಿದ್ದೆವು. ಹಾಗೂ ಅಲ್ಲಿ ನಡೆಯುತ್ತಿದ್ದ ಸಮಾರಂಭಗಳಿಗೆ ಹೋದಾಗ ಉಪ್ಪರಿಗೆಯ ಮೇಲಿದ್ದ ಬೀರುವಿನಿಂದ ಎಲ್ಲಾ ಹಳೆಯ ಚಂದಮಾಮಗಳನ್ನು ತೆಗೆದು ಓದುತ್ತಿದ್ದೆವು.

ನಮ್ಮೂರಿನಲ್ಲಿ ಮೊಟ್ಟ ಮೊದಲ ಟರ್ಲಿನ್ ಶರ್ಟ್ ಧರಿಸಿದವರು ಎಲ್ಲಪ್ಪಯ್ಯ. ಅದು ಕಾಲದಲ್ಲಿ ಕೇವಲ ಶ್ರೀಮಂತರು ಮಾತ್ರ ಧರಿಸಬಲ್ಲ ವಸ್ತುವಾಗಿತ್ತು. ಎಲ್ಲಪ್ಪಯ್ಯನವರು ಸ್ಟೈಲಾದ ಶರ್ಟ್ ಧರಿಸಿ ಜೇಬಿನಲ್ಲಿ ಎಲ್ಲರ ಕಣ್ಣಿಗೆ ಬೀಳುವಂತೆ ಒಂದು ನೂರು ರೂಪಾಯಿನ ನೋಟ್ ಇಟ್ಟುಕೊಂಡು ಓಡಾಡುತ್ತಿದ್ದುದು ಈಗಲೂ ನನ್ನ ಕಣ್ಣಿಗೆ ಬಿದ್ದಂತಾಗುತ್ತಿದೆ. ಹಾಗೆಯೇ ಎಲ್ಲಪ್ಪಯ್ಯನವರ ಮದುವೆ  ಹೊಸನಗರದ ಬೈಸೆಮನೆ ಮಾಧವ ರಾವ್ ಅವರ ಮಗಳಾದ ಲಕ್ಷ್ಮಿಯೊಡನೆ ನಿಶ್ಚಯವಾದಾಗ ನಮ್ಮೂರಿನಿಂದ ದಿಬ್ಬಣ ಎತ್ತಿನ ಗಾಡಿಯಲ್ಲಿ ಬೆಳವಿನಕೊಡಿಗೆಯಿಂದ ಹೊರಟಿದ್ದೂ ನೆನಪಿಗೆ ಬರುತ್ತಿದೆ. 

ಇಂದು ಎಲ್ಲಪ್ಪಯ್ಯನವರು ನಮ್ಮೊಂದಿಗಿಲ್ಲ.ಅವರ ವ್ಯಕ್ತಿತ್ವ ನಮ್ಮಿಂದ ಕಣ್ಮರೆಯಾಗಿ ಹೋಗಿದೆ. ಹಾಗೆಯೇ ಎಲ್ಲಪ್ಪಯ್ಯ ಎಂಬ  ಹೆಸರೂ ಕೂಡ ಕೊನೆಗೊಂಡಂತೆ ಅನಿಸುತ್ತಿದೆ. ಮೊಮ್ಮಗನಿಗೆ ಅಜ್ಜನ ಹೆಸರಿನ್ನಿಡುವ ಸಂಪ್ರದಾಯ ಈಗ ಇಲ್ಲ. ಹಾಗೆಯೇ ಇಂದಿನ ಹೊಸ ಯುಗದಲ್ಲಿ ಎಲ್ಲಪ್ಪಯ್ಯ ಎಂಬ ಹೆಸರು ಯಾವ ತಂದೆ ತಾಯಿಗಳಿಗೂ ಇಷ್ಟವಾಗುವುದು ಎಂದೂ ಅನಿಸುವುದಿಲ್ಲ.  ಬೆಳವಿನಕೊಡಿಗೆ ಮನೆಯ ತಲೆತಲಾಂತರ ಸಂಪ್ರದಾಯ ಇಲ್ಲಿಗೇ ಕೊನೆಗೊಂಡಿರಬಹುದೇ? ಇದನ್ನು ಕಾಲವೇ ನಿರ್ಧರಿಸಬಲ್ಲುದು.  ದೇವರು ಎಲ್ಲಪ್ಪಯ್ಯನವರ ಆತ್ಮಕ್ಕೆ ಶಾಂತಿಯನ್ನೀಯಲಿ.
---------0-----------0------------0------------0-----------0-----------------0-------------0------------0-----------0-
ಬೆಳವಿನಕೊಡಿಗೆ ಆಸ್ತಿ ಪಾಲಾದ ನಂತರ ಗಣೇಶಯ್ಯನ ಕಿರಿಯ ತಮ್ಮ ವೆಂಕಪ್ಪಯ್ಯ ನಮ್ಮೂರಿನ ಪಕ್ಕದ ಭುವನಕೋಟೆಗೆ ತಮ್ಮ ಸಂಸಾರವನ್ನು ಸಾಗಿಸಿದರು. ಅಲ್ಲಿ ಅವರ ಪಾಲಿನ ಅಡಿಕೆ ತೋಟದ ಮೇಲ್ಭಾಗದಲ್ಲಿ ಹೊಸಮನೆ ಕಟ್ಟಿಸಲಾಯಿತು. ಅವರದೂ ದೊಡ್ಡ ಸಂಸಾರವೇ ಆಗಿತ್ತು. ಅವರ ಪತ್ನಿ ಹೆಬ್ಬಿಗೆ ಶಿಂಗಪ್ಪಯ್ಯನವರ ಹಿರಿಯ ಮಗಳು ಲಕ್ಷ್ಮಮ್ಮಲಕ್ಷ್ಮಮ್ಮ ಹೆಬ್ಬಿಗೆ ಸಂಸಾರದ ಎಲ್ಲರಂತೆ ಶಾಂತ ಮತ್ತು ಮೃದು ಸ್ವಭಾವದವರು. ತುಂಬಾ ಮೆಲ್ಲನೆ ಮಾತನಾಡುತ್ತಿದ್ದ ವೆಂಕಪ್ಪಯ್ಯ ವ್ಯವಹಾರ ಕುಶಲರೇ ಆಗಿದ್ದರು. ಅವರ ಹಿರಿಯ ಮಗ ಕೇಶವ ನಮ್ಮ ವಯಸ್ಸಿನವನೇ. ತಂದೆಯ ನಂತರ ಕೇಶವ ತನ್ನ ಅವಿಭಕ್ತ ಕುಟುಂಬವನ್ನು ಇಂದಿಗೂ ಚೆನ್ನಾಗಿ ನಡೆಸಿಕೊಂಡು ಹೋಗುತ್ತಿರುವುದು ಹೆಮ್ಮೆಯ ವಿಷಯ.

ಬೆಳವಿನಕೊಡಿಗೆಯ ಮೂಲಮನೆ ಈಗ ತುಂಬಾ ಬದಲಾವಣೆ ಕಂಡಿದೆಆದರೆ ಅದು ಇಂದೂ ಉಳಿದುಕೊಂಡಿದೆ. ಹಾಗೂ ನಮ್ಮ ಹಳೆಯ ನೆನಪುಗಳನ್ನು ಕೆಣಕುತ್ತದೆ. ತಿಮ್ಮಪ್ಪಯ್ಯನವರ ಮೂರನೇ ಮಗನಾದ ಶಂಕರ್ ಅವರ ನೇತೃತ್ವದಲ್ಲಿ ಬೆಳವಿನಕೊಡಿಗೆ ಮನೆತನ ತನ್ನ ಹೆಸರನ್ನು ಉಳಿಸಿಕೊಂಡಿದೆ. ಶಂಕರ್ ಅವರು ಶಿವಮೊಗ್ಗದಲ್ಲಿ ತಮ್ಮ ವಿದ್ಯಾಭ್ಯಾಸ ಮುಗಿಸಿ ಬರುವಾಗ ಹಣಕಾಸಿನ ವ್ಯವಹಾರದಲ್ಲಿ ಪರಿಣಿತರಾಗಿ ಬಂದಿದ್ದರು. ನಮ್ಮ ದೊಡ್ಡಣ್ಣ ರಾಮಕೃಷ್ಣನ ಆತ್ಮೀಯ  ಸ್ನೇಹಿತರಾಗಿದ್ದ ಶಂಕರ್, ತಮ್ಮ  ಎರಡನೇ ಅಣ್ಣ ಶ್ರೀನಿವಾಸ್ ಅವರೊಂದಿಗೆ ನಮ್ಮ ಮನೆಗೆ ಆಗಾಗ ಬರುತ್ತಿದ್ದುದು ನೆನಪಾಗುತ್ತದೆ. ತಿಮ್ಮಪ್ಪಯ್ಯ ಮತ್ತು ಎಲ್ಲಪ್ಪಯ್ಯ ಉತ್ತಮೇಶ್ವರಕ್ಕೆ ಹೋದ ಮೇಲೆ ಮನೆಯ ಆಡಳಿತ ಶ್ರೀನಿವಾಸ್ ಮತ್ತು ಶಂಕರ್ ಅವರ ಕೈಗೆ ಬಂತು. ಮುಂದೆ ಶ್ರೀನಿವಾಸ್ ಶಿವಮೊಗ್ಗೆ ಸೇರಿದ ಮೇಲೆ ಸಂಪೂರ್ಣ ಆಡಳಿತದ ಜವಾಬ್ದಾರಿ ಶಂಕರ್ ಅವರ ಕೈಗೆ ಬಂತು.


ಶಂಕರ್  ಅವರು ಬಾಲ್ಯ ಸ್ನೇಹಿತನಾದ ನಮ್ಮ ಅಣ್ಣನಿಗೆ  ಪುರದಮನೆಯಲ್ಲಿ ಕೆಲವು ವರ್ಷ ವಾಸಮಾಡುವ ಅವಕಾಶ ಒದಗಿಸಿ ಕೊಟ್ಟಿದ್ದರು. ಅಲ್ಲದೇ ತಮ್ಮ ದಾನ ಧರ್ಮಗಳಿಂದ ಸಕಲವನ್ನೂ ಕಳೆದುಕೊಂಡಿದ್ದ ಗಣೇಶಯ್ಯನವರ ಪತ್ನಿ ಕಾವೇರಮ್ಮನನ್ನು ಕಡೆಗಾಲದಲ್ಲಿ ವಾಪಾಸ್ ಮನೆಗೆ ಕರೆಸಿ ನೋಡಿಕೊಂಡಿದ್ದರು. ಇಷ್ಟಲ್ಲದೇ ಮನೆ ಬಿಟ್ಟು ಉತ್ತಮೇಶ್ವರದಲ್ಲಿ ನೆಲೆಸಿದ್ದ  ತಮ್ಮ ಹಿರಿಯಣ್ಣ ಎಲ್ಲಪ್ಪಯ್ಯನವರನ್ನು ಅವರ ಕೊನೆಗಾಲದಲ್ಲಿ ಪತ್ನಿ ಸಮೇತ ವಾಪಾಸ್ ಮನೆಗೆ ಕರೆಸಿ ನೋಡಿಕೊಂಡ ಹಿರಿಮೆಯೂ ಅವರಿಗೆ ಸಲ್ಲುತ್ತದೆ.

ನಾವು ಬಾಲ್ಯದಲ್ಲಿ ನೋಡಿದ ಮಲೆನಾಡಿನ ಜೀವನ ಇಂದಿನ ನವನಾಗರೀಕತೆಯಲ್ಲಿ ಸಂಪೂರ್ಣ ಬದಲಾವಣೆ ಕಂಡಿದೆ. ಆದರೆ ಇಂತಹ ಕಾಲದಲ್ಲೂ ಶಂಕರ್ ಅವರು ತಮ್ಮ ಅನುಭವ, ತಿಳುವಳಿಕೆ ಮತ್ತು ಜಾಣತನದಿಂದ ಬೆಳವಿನಕೊಡಿಗೆ ಮನೆತನದ ಸಾರಥ್ಯವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ನಾವು ಪ್ರತಿ ಬಾರಿ ಊರಿಗೆ ಹೋದಾಗಲೂ ನಮ್ಮನ್ನು  ಬೆಳವಿನಕೊಡಿಗೆ ಮನೆಯಲ್ಲಿ ಆದರದಿಂದ ಸ್ವಾಗತಿಸುತ್ತಾರೆ.  ಅವರ ನೇತೃತ್ವ ಹೀಗೆಯೇ ಸುದೀರ್ಘ ಕಾಲ ಮುಂದುವರಿಯಲೆಂದು ದೇವರನ್ನು ಬೇಡಿಕೊಳ್ಳುತ್ತೇನೆ.