Sunday, March 31, 2019

ಒಂದು ಊರಿನ ಕಥೆ ಕೊಪ್ಪ - 7


ಅಧ್ಯಾಯ ೭
ನಾಯಕ್ ಬ್ರದರ್ಸ್
ನಾಯಕ್ ಬ್ರದರ್ಸ್ ಆಗಿನ ಕಾಲದ ಕೊಪ್ಪದಲ್ಲಿ ತುಂಬಾ ಹೆಸರು ಪಡೆದ ಬಿಸಿನೆಸ್ ಫ್ಯಾಮಿಲಿ ಆಗಿತ್ತು. ಈ ಫ್ಯಾಮಿಲಿಯ ಅಣ್ಣ ತಮ್ಮಂದಿರು ಬಗೆ ಬಗೆಯ ಬಿಸಿನೆಸ್ ಮಾಡುತ್ತಿದ್ದರು. ಅವುಗಳಲ್ಲಿ ಔಷದಿ ಅಂಗಡಿ, ರೇಡಿಯೋ ಶಾಪ್ ಮತ್ತು ಸ್ಟೇಷನರಿ ಸಾಮಾನುಗಳ ಅಂಗಡಿಗಳು ಮುಖ್ಯವಾದವು. ಬಾಲಕೃಷ್ಣ ನಾಯಕ್, ನರಹರಿ ನಾಯಕ್, ಸುಬ್ಬರಾವ್  ಮತ್ತು ಶ್ರೀನಿವಾಸ ನಾಯಕ್  ಎಂಬುದು ಈ ಅಣ್ಣ ತಮ್ಮಂದಿರ ಹೆಸರುಗಳು. ಅವರಲ್ಲಿ ಸುಬ್ಬರಾವ್ ಆ ಕಾಲಕ್ಕೆ ತುಂಬಾ ದೊಡ್ಡದಾಗಿದ್ದ ಮತ್ತು ಪ್ರಸಿದ್ಧವಾಗಿದ್ದ ಮೆಡಿಕಲ್ ಶಾಪ್ ಒಂದನ್ನು ನಡೆಸುತ್ತಿದ್ದರು. ಆ ಶಾಪಿನಲ್ಲಿ  ದೊರೆಯದ ಔಷಧಿಗಳಿರಲಿಲ್ಲ. ಹಾಗೆಯೇ ಶ್ರೀನಿವಾಸ ನಾಯಕ್  ಅವರು ಕಾಂಷ್ (KAMSH Radio) ಎಂಬ ಹೆಸರಿನಲ್ಲಿ ದೊಡ್ಡ ರೇಡಿಯೋ ಅಂಗಡಿ ನಡೆಸುತ್ತಿದ್ದರು.

ರವೀಂದ್ರ ನಾಯಕ್ ಮತ್ತು ಮೋಟಾರ್ ಸೈಕಲ್ ರಿಪೇರಿ
ರವೀಂದ್ರ ನಾಯಕ್  ನರಹರಿ ರಾಯರ ಪುತ್ರ. ನಿರುದ್ಯೋಗಿಯಾಗಿದ್ದ ರವೀಂದ್ರ ಒಂದು ದೊಡ್ಡ ಮೋಟಾರ್ ಬೈಕ್  ಹೊಂದಿದ್ದು ಅದನ್ನು ಕೊಪ್ಪ ಪೇಟೆಯಲ್ಲಿ ಗುಡುಗುಡಿಸುತ್ತಾ ಓಡಿಸುತ್ತಿದ್ದ. ಹಾಗೆಯೇ ಸುತ್ತಮುತ್ತಲಿನ ಊರುಗಳಿಗೂ ಅದನ್ನು ಓಡಿಸಿಕೊಂಡು ಹೋಗುತ್ತಿದ್ದ.  ಆ ಕಾಲದಲ್ಲಿ ಬೇರೆಬೇರೆ ಊರುಗಳಲ್ಲಿ ನಡೆಯುತ್ತಿದ್ದ ಜಾತ್ರೆಗಳಲ್ಲೋ ಅವನ ಬೈಕ್ ಹಾಜರಿರುತ್ತಿತ್ತು. ಸೈಕಲ್ಲು ಕೂಡ ಅಪರೂಪವಾಗಿದ್ದ ಆ ಕಾಲದಲ್ಲಿ ರವೀಂದ್ರನ ಗುಡುಗುಡು ಮೋಟಾರ್ ಬೈಕ್ ತುಂಬಾ ಪ್ರಸಿದ್ಧಿ ಪಡೆದಿತ್ತು. ಸುಮಾರು ಏಳು ಅಡಿ ಎತ್ತರವಿದ್ದ ರವೀಂದ್ರನೊಬ್ಬ ಅಜಾನುಬಾಹು ಸೈoಧವನಂತಿದ್ದ. ಆದರೆ ಅವನ ನಿರುದ್ಯೋಗವೊಂದು ದೊಡ್ಡ ಸಮಸ್ಯೆ ಆಗಿತ್ತು.

ಆ ಕಾಲದಲ್ಲಿ ಕೊಪ್ಪದಲ್ಲಿ ಯಾವುದೇ ಮೋಟಾರ್ ಬೈಕ್  ರಿಪೇರಿ ವರ್ಕ್ ಶಾಪ್ ಇರಲಿಲ್ಲ. ಆದರೆ ರವೀಂದ್ರ ಬಹು ಬೇಗನೆ ಒಬ್ಬ ಮೋಟಾರ್ ಬೈಕ್  ರಿಪೇರಿ ಪರಿಣಿತನಾಗಿಬಿಟ್ಟ. ಅವನ ತಜ್ಞತೆ ಯಾವ ಮಟ್ಟಕ್ಕೆ ಹೋಯಿತೆಂದರೆ ಅವನು ಟ್ಯೂಬುಗಳೇ ಇಲ್ಲದ ಟೈಯರ್ ಗಳನ್ನು ಬೈಕ್ ನಲ್ಲಿ ಫಿಕ್ಸ್ ಮಾಡುವ ಟೆಕ್ನಾಲಜಿ ಒಂದನ್ನು ಕಂಡು ಹಿಡಿದು ಬಿಟ್ಟ! ವಿಚಿತ್ರವೆಂದರೆ ಈ ಟೆಕ್ನಾಲಜಿ ಬಳಸಲು ಹಣದ ಅವಶ್ಯಕತೆಯೇ ಇರಲಿಲ್ಲ! ಏಕೆಂದರೆ ಅವನು ಟೈರಿನಲ್ಲಿ ಟ್ಯೂಬಿನ ಬದಲಿಗೆ ಕೇವಲ ಹುಲ್ಲು ತುಂಬಿಸುತ್ತಿದ್ದ! ಬಹು ಸುಲಲಿತವಾಗಿ ಓಡಾಡುತ್ತಿದ್ದ ರವೀಂದ್ರನ ಬೈಕ್ ನೋಡಿದ ಯಾರಿಗೂ ಅವನು ಟೈರಿನೊಳಗೆ ಹುಲ್ಲು ತುಂಬಿರುವನೆಂಬುವ ವಿಚಾರ ಗೊತ್ತೇ ಆಗುತ್ತಿರಲಿಲ್ಲ!
ರವೀಂದ್ರ ಮತ್ತು ಭಾರತೀಯ ಸೇನೆ
ಒಮ್ಮೆ ಯಾರೋ ರವೀಂದ್ರನ ಪರ್ಸನಾಲಿಟಿ ನೋಡಿ ಅವನೇಕೆ ಇಂಡಿಯನ್ ಆರ್ಮಿ (ಭಾರತೀಯ ಸೇನೆ) ಸೇರಲು ಪ್ರಯತ್ನ ಮಾಡಬಾರದೆಂದು ಪ್ರಶ್ನಿಸಿದರಂತೆ. ತಡಮಾಡದೇ ರವೀಂದ್ರ ಸ್ವಲ್ಪ ಸಮಯದಲ್ಲೇ ಹತ್ತಿರದ ಊರೊಂದರಲ್ಲಿ ನಡೆಯುತ್ತಿದ್ದ ಭಾರತೀಯ ಸೇನೆಯ ಆಯ್ಕೆ ಕ್ಯಾಂಪೊಂದರಲ್ಲಿ ಪಾಲ್ಗೊಂಡನಂತೆ. ಆ ಕ್ಯಾಂಪಿನ ಮುಖ್ಯಸ್ಥರಾದ ಪಂಜಾಬಿ ಸರ್ದಾರ್ಜಿ ಒಬ್ಬರಿಗೆ ರವೀಂದ್ರನ ಪರ್ಸನಾಲಿಟಿ ತುಂಬಾ ಇಷ್ಟವಾಯಿತಂತೆ. ರವೀಂದ್ರನ ಫೈನಲ್ ಇಂಟರ್ವ್ಯೂ ಆ ಸರ್ದಾರ್ಜಿಯವರೇ ಮಾಡಿದರಂತೆ. ಅವರು ಅವನಿಗೆ ಅವನ ವಿಶೇಷ ಪರಿಣತೆ ಏನೆಂದು ಕೇಳಿದರಂತೆ. ಸ್ವಲ್ಪವೂ ತಡಮಾಡದೇ ರವೀಂದ್ರ ಮೋಟಾರ್ ಬೈಕ್  ರಿಪೇರಿ ಎಂದು ಹೇಳಿ ಬಿಟ್ಟನಂತೆ.

ಸರ್ದಾರ್ಜಿಯವವರು ಕೂಡಲೇ ಕೆಟ್ಟು ಹೋಗಿದ್ದ ಮಿಲಿಟರಿ ಮೋಟಾರ್ ಬೈಕ್ ಒಂದನ್ನು ತರಿಸಿ ರವೀಂದ್ರನ ಮುಂದೆ ನಿಲ್ಲಿಸಿದರಂತೆ. ಅವರು ರವೀಂದ್ರನಿಗೆ ಒಂದು ಚಾಲೆಂಜ್ ಹಾಕಿದರಂತೆ. ಅದರ ಪ್ರಕಾರ ರವೀಂದ್ರ ಸ್ಥಳದಲ್ಲೇ ಮೋಟಾರ್ ಬೈಕ್ ಸಮಸ್ಯೆಯನ್ನು ಕಂಡುಹಿಡಿದು ಅದನ್ನು ರಿಪೇರಿ ಮಾಡಬೇಕು ಮತ್ತು ಅದು ಕೇವಲ ಒಂದೇ ಕಿಕ್ಕಿನಲ್ಲಿ ಸ್ಟಾರ್ಟ್ ಆಗಬೇಕು. ಅದರಲ್ಲಿ ಅವನು ಜಯಗಳಿಸಿದರೆ ಅವನು ಇಂಡಿಯನ್ ಆರ್ಮಿಗೆ ಆಯ್ಕೆಯಾದಂತೆ! ರವೀಂದ್ರ ಆ ಚಾಲೆಂಜ್ ಒಪ್ಪಿಕೊಂಡು ಬಿಟ್ಟನಂತೆ. ಕೂಡಲೇ ಅವನ  ಮುಂದೆ ಒಂದು ಕೆಟ್ಟು ಹೋಗಿದ್ದ ಮಿಲಿಟರಿ ಬೈಕ್ ತಂದಿರಿಸಲಾಯಿತಂತೆ. ತಡಮಾಡದೇ ರವೀಂದ್ರ ಅದರ ಪಾರ್ಟ್ ಗಳನ್ನೆಲ್ಲಾ ಬಿಚ್ಚಿ ಬೈಕಿನ ನ್ಯೂನತೆ ಯನ್ನು ಕಂಡುಹಿಡಿದು ಅದನ್ನು ಸರಿಪಡಿಸಿ ಪುನರ್ಜೋಡಿಸಿ ಬಿಟ್ಟನಂತೆ. ಅದನ್ನು ಮಿಲಿಟರಿ ಆಫೀಸರ್ ಒಬ್ಬ ಪರಿಶೀಲನೆ ಮಾಡಿ ಒಂದು ಕಿಕ್ ಕೊಟ್ಟನಂತೆ. ಅದು ಗುಡುಗುಡನೆ ಸ್ಟಾರ್ಟ್ ಆಗುತ್ತಿದ್ದಂತೆ ಸರ್ದಾರ್ಜಿಯವವರು ರವೀಂದ್ರನನ್ನು ಅಭಿನಂದಿಸಿದರಂತೆ.
ಮಿಲಿಟರಿ ಡಾಕ್ಟರ್ ಮತ್ತು ರಶಿಯನ್ ಟ್ರ್ಯಾಕ್ಟರ್
ನಾನು ಈ ಹಿಂದೆಯೇ ಬರೆದಂತೆ ಮಿಲಿಟರಿ ಡಾಕ್ಟರ್ ಕ್ಯಾಪ್ಟನ್ ಎಂ ಆರ್ ಆರ್ ಅಯ್ಯಂಗಾರ್ ಅವರು ಕೊಪ್ಪದಿಂದ ಶೃಂಗೇರಿಗೆ ಹೋಗುವ ಮಾರ್ಗದಲ್ಲಿ ನಾಗಲಾಪುರ ಎಂಬಲ್ಲಿ ಕೃಷಿ ಭೂಮಿ ಹೊಂದಿದ್ದರಂತೆ. ಅದು ಅವರ ಮಿಲಿಟರಿ ಸೇವೆಯನ್ನು ಗಮನಿಸಿ ಭಾರತ ಸರ್ಕಾರ ಕೊಟ್ಟ ಜಮೀನಂತೆ. ಆಗಿನ ಕಾಲದಲ್ಲಿ ಕೃಷಿ ಭೂಮಿಯನ್ನು ಹೂಟೆ ಮಾಡಲು ನೇಗಿಲನ್ನು ಬಿಟ್ಟು ಬೇರೆ ಯಾವ ಉಪಕರಣಗಳೂ ಇರಲಿಲ್ಲ. ಅಂದಿನ ರಶಿಯಾ ಕೃಷಿ ಯಾಂತ್ರೀಕರಣದಲ್ಲಿ ತುಂಬಾ ಮುಂದುವರೆದಿತ್ತು. ಹಾಗೂ ಅದು ಭಾರತ ಸರ್ಕಾರದೊಡನೆ ತುಂಬಾ ಸ್ನೇಹದಿಂದಿತ್ತು. ಭಾರತ ಸರ್ಕಾರ ಕೂಡ ಕೃಷಿ ವಲಯವನ್ನು ಯಾಂತ್ರೀಕರಣ ಮಾಡಲು ತೀರ್ಮಾನಿಸಿ ರಷ್ಯಾದಿಂದ ಒಂದು ಲಾಟ್ ಟ್ರ್ಯಾಕ್ಟರ್ ಗಳನ್ನು ಆಮದು ಮಾಡಿಕೊಂಡಿತು. ಹಾಗೆ ಆಮದಾದ ಒಂದು ಟ್ರ್ಯಾಕ್ಟರ್ ಮಿಲಿಟರಿ ಡಾಕ್ಟರ್ ಅವರಿಗೆ ಅಲಾಟ್ ಆಯಿತು. ಅಂದು ಆ ಟ್ರಾಕ್ಟರಿನ ಬೆಲೆ ೧೦,೦೦೦ ರೂಪಾಯಿಗಳಾಗಿತ್ತು. ಪ್ರಾಯಶಃ ಕೊಪ್ಪದ  ಜನರು ನೋಡಿದ ಮೊದಲ ಟ್ರ್ಯಾಕ್ಟರ್ ಅದೇ ಆಗಿದ್ದಿರಬಹುದು.  ಅದನ್ನು ಡಾಕ್ಟರ್ ಅವರ ಮನೆಯ ಮುಂದೆ ಇದ್ದ ಶೆಡ್ಡಿನಲ್ಲಿ ಅವರ ಪ್ರಖ್ಯಾತ ರಾಯಲ್  ಬುಲೆಟ್ ಮೋಟಾರ್ ಬೈಕಿನ ಪಕ್ಕದಲ್ಲೇ ಪಾರ್ಕ್ ಮಾಡಲಾಗುತ್ತಿತ್ತಂತೆ.
ಕೊಪ್ಪದ ಟೂರಿಂಗ್ ಟಾಕೀಸ್
ಆ ಕಾಲದಲ್ಲಿ ಕೊಪ್ಪ, ಶೃಂಗೇರಿ ಮತ್ತು ಜಯಪುರಗಳಲ್ಲಿ ಕೇವಲ ಟೂರಿಂಗ್ ಟಾಕೀಸುಗಳಿರುತ್ತಿದ್ದವು. ಅವುಗಳನ್ನು ಮಳೆಗಾಲದಲ್ಲಿ ಮುಚ್ಚಲಾಗುತ್ತಿತ್ತು. ಕೇವಲ ತೀರ್ಥಹಳ್ಳಿ ಮಾತ್ರಾ ವೆಂಕಟೇಶ್ವರ ಟಾಕೀಸ್ ಎಂಬ ಪರ್ಮನೆಂಟ್ ಟಾಕೀಸನ್ನು ಹೊಂದುವ ಹೆಮ್ಮೆ ಪಡೆದಿತ್ತು. ನಮ್ಮ ತಂದೆಯವರ ಪ್ರಕಾರ ಕೊಪ್ಪ ಟೂರಿಂಗ್ ಟಾಕೀಸು ಮೊದಲು ಪ್ರಾರಂಭವಾದಾಗ ಕೇವಲ ಮೂಕಿ ಸಿನಿಮಾಗಳನ್ನು ಪ್ರದರ್ಶನ ಮಾಡಲಾಗುತ್ತಿತ್ತಂತೆ. ಆದರೆ ಮೊದಲ ಪ್ರದರ್ಶನದ ದಿನವೇ ದೊಡ್ಡ ಅನಾಹುತ ನಡೆದು ಹೋಯಿತಂತೆ. ಕಾರಣವಿಷ್ಟೇ. ಆ ಸಿನಿಮಾದಲ್ಲಿ ಒಂದು ಯುದ್ಧದ ಸೀನ್ ಇತ್ತಂತೆ. ಅದು ಪ್ರಾರಂಭವಾಗುವಾಗ ಶತ್ರುಗಳ ಕಡೆಯಿಂದ ಒಂದು ಕುದುರೆ ಸವಾರರ ತಂಡ ಕುದುರೆಗಳ ಮೇಲೆ ರಣರಂಗಕ್ಕೆ ದೌಡಾಯಿಸಿ ಬಂದಿತಂತೆ. ಆಗ ಒಂದಾಣೆ ಕೊಟ್ಟು ತೆರೆಯ ಮುಂದಿನ ನೆಲದ ಸೀಟಿನಲ್ಲಿ ಕುಳಿತಿದ್ದ ಪ್ರೇಕ್ಷಕರು ಕುದುರೆಗಳು ತಮ್ಮ ಮೇಲೆಯೇ ಬರುತ್ತಿರುವವೆಂದು ಭ್ರಮಿಸಿ  ಎದ್ದು ಹಿಂದಿನ ಸೀಟುಗಳಲ್ಲಿ ಕುರ್ಚಿಗಳಮೇಲೆ ಕುಳಿತಿದ್ದ ಪ್ರೇಕ್ಷಕರನ್ನೆಲ್ಲಾ ನೆಲಕ್ಕೆ ಬೀಳಿಸುತ್ತಾ ಟಾಕೀಸಿನಿಂದ ಹೊರಗೆ ದೌಡಾಯಿಸಿದರಂತೆ!
ಆಮೇಲೆ ಕೊಪ್ಪದಲ್ಲಿ ಡಯಾಸ್ ಎಂಬ ಕಂಟ್ರಾಕ್ಟರ್ ಒಬ್ಬರು ಜೆಎಂಜೆ  (JMJ) ಎಂಬ ಪರ್ಮನೆಂಟ್ ಟಾಕೀಸ್ ಒಂದನ್ನು  ಬಸ್ ನಿಲ್ದಾಣದ ಪಕ್ಕದಲ್ಲೇ ಕಟ್ಟಿಸಿದರಂತೆ.  ಸ್ವಲ್ಪ ಕಾಲದ ನಂತರ ಅದನ್ನು ನಮಗೆ ಗೊತ್ತಿದ್ದ ಹನಕೋಡು ಗೋಪಾಲಯ್ಯ ಎಂಬುವ ಜಮೀನ್ದಾರರ ಒಬ್ಬ ಮಗ ಸ್ವಲ್ಪ ಕಾಲ ನಡೆಸುತ್ತಿದ್ದುದು ನೆನಪಿಗೆ ಬರುತ್ತಿದೆ. ಆದರೆ ಅವರು ಪ್ರಾಯಶಃ ಅದನ್ನು ಹೆಚ್ಚು ದಿನ ನಡೆಸಲಿಲ್ಲ.
-----ಮುಂದಿನ ಅಧ್ಯಾಯದಲ್ಲಿ ಮುಕ್ತಾಯ----

Friday, March 15, 2019

ಒಂದು ಊರಿನ ಕಥೆ - ಕೊಪ್ಪ-6


ಅಧ್ಯಾಯ ೬
ಬಂತು! ಬಂತು!  ನಯಾಪೈಸ  ಬಂತು!  -  ತಂತು! ತಂತು! ಶಂಕರ್ ಕಂಪನಿಗೆ ಸಮಸ್ಯೆ ತಂತು!
ಅದು ೧೯೫೭ನೇ ಇಸವಿ. ಒಂದು ದಿನ ನಮ್ಮ ಶಾಲೆಯ ಮೇಷ್ಟರಾದ ಶ್ರೀಕಂಠ ಜೋಯಿಸರು ಒಂದು ಸಣ್ಣ ಬಟ್ಟೆಯ ಚೀಲದೊಡನೆ ನಮ್ಮ ಮನೆಗೆ ಬಂದರು. ಅದರಲ್ಲಿದ್ದ ಹಣವನ್ನು ನಮ್ಮ ಮುಂದೆ ಹರಡಿ ತೋರಿಸಿದರು. ಅವುಗಳು ಆಗ ತಾನೇ ಭಾರತ ಸರ್ಕಾರ ಹೊರಡಿಸಿದ್ದ ನಯಾಪೈಸೆ ನಾಣ್ಯಗಳಂತೆ. ಅವುಗಳು  ಒಂದು, ಎರಡು, ಐದು, ಹತ್ತು, ೨೫ ಮತ್ತು  ೫೦ ನಯಾಪೈಸೆ ಮತ್ತು ಹೊಸ ಒಂದು ರೂಪಾಯಿ ಅಂದರೆ ೧೦೦ ನಯಾಪೈಸೆ ಮುಖಬೆಲೆಯ ನಾಣ್ಯಗಳಂತೆ. ನಾವು ಅಲ್ಲಿಯವರೆಗೆ  ಕಾಸು, ಬಿಲ್ಲೆ, ಅರ್ಧ ಆಣೆ, ೧ ಆಣೆ, ೨ ಆಣೆ, ೪ ಆಣೆ, ೮ ಆಣೆ  ಹಾಗೂ ೧ ರೂಪಾಯಿ  ನಾಣ್ಯಗಳನ್ನು ಮಾತ್ರಾ ನೋಡಿದ್ದೆವು. ಹಾಗೂ ಒಂದು ಆಣೆಗೆ ೧೨ ಕಾಸುಗಳು ಮತ್ತು ೧೬ ಆಣೆಗಳಿಗೆ ಒಂದು ರೂಪಾಯಿ ಎಂದು ಶಾಲೆಯಲ್ಲಿ ಕೂಡುಲೆಕ್ಕ ಮಾಡುವುದನ್ನು ಕಲಿತಿದ್ದೆವು..

ಆದರೆ ಮೇಷ್ಟರ ಪ್ರಕಾರ ಇನ್ನು ಮುಂದೆ ೧ ಆಣೆಗೆ ೬ ನಯಾಪೈಸೆ ಮತ್ತು ೨ ಆಣೆಗೆ ೧೨ ನಯಾಪೈಸೆ ಸಮವಂತೆ.  ಆದರೆ ೪ ಆಣೆಗೆ ೨೫ ನಯಾಪೈಸೆ, ೮ ಆಣೆಗೆ ೫೦ ನಯಾಪೈಸೆ ಹಾಗೂ ೧ ರೂಪಾಯಿಗೆ ೧೦೦ ನಯಾಪೈಸೆ ಆಗುವುದಂತೆ!  ನಮಗೆ ಇದೊಂದು ಮೋಸದ ಲೆಕ್ಖಚಾರ ಎಂದು ಅನಿಸಿತು. ಏಕೆಂದರೆ  ವೀಳ್ಯದೆಲೆ ಮತ್ತು ಬಾಳೆಹಣ್ಣು ನಾವು ೧ ಆಣೆ ಮತ್ತು  ೨ ಆಣೆಗೆ  ಚಿಲ್ಲರೆ ಮಾರಾಟ ಮಾಡುತ್ತಿದ್ದೆವು. ಹೊಸ ಲೆಕ್ಕದ ಪ್ರಕಾರ ನಮಗೆ ೧೬ ಆಣೆಯಷ್ಟು ಮಾರಾಟ ಮಾಡಿದಾಗ ಕೈಯ್ಯಲ್ಲಿ ೧ ರೂಪಾಯಿಗೆ ಬದಲಾಗಿ ೯೬ ನಯಾಪೈಸೆ ಇರುತ್ತಿತ್ತು. ಇದು ಒಂದು ರೂಪಾಯಿಗೆ ೪ ನಯಾಪೈಸೆ ಕಮ್ಮಿ ಆಗುತ್ತಿತ್ತು!  ಇನ್ನು ಶಂಕರ್ ಬಸ್ ಪ್ರಯಾಣಿಕರಿಗೆ ಉಂಟಾದ ಸಮಸ್ಯೆ ಹೇಳತೀರದು. ಕೊಪ್ಪಕ್ಕೆ ಬಿ ಜಿ ಕಟ್ಟೆಯಿಂದ ೬ ಆಣೆ  ಚಾರ್ಜ್ ಇತ್ತು. ಕಂಡಕ್ಟರ್ ಪ್ರಕಾರ ಅದು (೨೫+೧೨) ೩೭ ನಯಾಪೈಸೆ.  ಆದರೆ ಪ್ರಯಾಣಿಕರ ಪ್ರಕಾರ ಅದು (೬x೬) ಅಂದರೆ ೩೬ ನಯಾಪೈಸೆ ಮಾತ್ರಾ! ಬೇರೆ ಸ್ಥಳಗಳಿಗೆ ಹೋಗುವವರಿಗೂ  ಕೂಡ ಇದೆ ರೀತಿ ಭಿನ್ನಾಭಿಪ್ರಾಯಗಳು ಬಂದು ಕಂಡಕ್ಟರ್ಗಳ ಸಮಸ್ಯೆ ಜಟಿಲವಾಯಿತು. ಸಮಸ್ಯೆಗಳು ಬಗೆ ಹರಿದು ನಯಾಪೈಸೆ ಜಮಾನಕ್ಕೆ ಹೊಂದಿಕೊಳ್ಳಲು ತುಂಬಾ ಸಮಯ ಬೇಕಾಯಿತು.  ಮುಂದೆ ಭಾರತ ಸರ್ಕಾರ ೧ ಜೂನ್  ೧೯೬೪ ರಿಂದ  ನಯಾಪೈಸೆ ಹೆಸರನ್ನು ತೆಗೆದುಹಾಕಿ ಅದನ್ನು ಕೇವಲ ಪೈಸೆ ಎಂದು ಮಾಡಿತು.
ಕೊಪ್ಪ ಬಸ್ ಸ್ಟಾಂಡ್ ಟಿಕೆಟ್ ಕೌಂಟರ್ ಮತ್ತು ಮೂರ್ತಿರಾಯರು
ಶಂಕರ್ ಕಂಪನಿಯ ಎಲ್ಲಾ ಬಸ್ಸುಗಳೂ ಕೊಪ್ಪ ಬಸ್ ನಿಲ್ದಾಣಕ್ಕೆ ಬಂದು ಹೋಗಬೇಕಾಗಿತ್ತು. ಅಲ್ಲಿಂದ ಹೊರಡುವ ಪ್ರಯಾಣಿಕರಿಗೆ ನಿಲ್ದಾಣದಲ್ಲೇ ಒಂದು ಮೇಜಿನ ಹಿಂದೆ ಕುಳಿತಿರುತ್ತಿದ್ದ ಮೂರ್ತಿರಾಯರು ಮತ್ತು ಕಾಮತ್ ಎಂಬ ಇಬ್ಬರು ಕಂಪನಿಯ ಪರವಾಗಿ ಟಿಕೆಟ್ ನೀಡುತ್ತಿದ್ದರು. ಅಡ್ಡ ಪಂಚೆ ಧರಿಸಿದ ಮೂರ್ತಿರಾಯರು ಕಂಪನಿಯ ಒಂದು ಬ್ರಾಂಡ್ ಆಗಿ ಬಿಟ್ಟಿದ್ದರು. ಕಾಮತ್ ಅವರು ಮಾತ್ರ ಪ್ಯಾಂಟ್ ಮತ್ತು ಬುಷ್ ಶರ್ಟ್ ಧರಿಸಿ ತುಂಬಾ ಟೀಕುಟಾಕಾಗಿ ಕಾಣಿಸುತ್ತಿದ್ದರು. ಪ್ರತಿಯೊಂದು ಬಸ್ ನಿಲ್ದಾಣದೊಳಗೆ ಬರುತ್ತಿದ್ದಂತೇ ಮೂರ್ತಿರಾಯರು  ಏರು ದ್ವನಿಯಲ್ಲಿ ಆ ಬಸ್ ಹೋಗುವ ಮಾರ್ಗವನ್ನು ಹೇಳುತ್ತಾ (ಉದಾಹರಣೆಗೆ: ಯಾರ್ರೀ ಜಯಪುರ,ಬಾಳೆಹೊನ್ನೂರ್, ಆಲ್ದೂರ್, ಚಿಕ್ಕಮಗಳೂರ್, ಚಿಕ್ಕಮಗಳೂರ್, ಚಿಕ್ಕಮಗಳೂರ್  ಅಥವಾ ಯಾರ್ರೀ ಕುದುರೆಗುಂಡಿ, ಎನ್  ಆರ್ ಪುರ, ಶಿವಮೊಗ್ಗಾ, ಶಿವಮೊಗ್ಗಾ, ಶಿವಮೊಗ್ಗಾ ಎಂದು) ಮೈಕಿನಲ್ಲಿ ಹೇಳಿದಷ್ಟು  ಗಟ್ಟಿಯಾಗಿ ಕೂಗುತ್ತಿದ್ದರು. ಹಾಗೆಯೇ ಟಿಕೆಟ್ ನೀಡಲು ಪ್ರಾರಂಭಿಸುತ್ತಿದ್ದರು. ಪ್ರತಿಯೊಂದು ಬಸ್ಸೂ  ಮೂರ್ತಿರಾಯರು ಅಥವಾ ಕಾಮತ್ ಅವರು ಸೀಟುಗಳನ್ನು ಎಣಿಕೆ ಮಾಡಿ ಅದು ಗೇಟ್ ಪಾಸಿಗೆ ಹೊಂದಾಣಿಕೆ ಆದ ಮೇಲೆಯೇ ನಿಲ್ದಾಣ ಬಿಡಬೇಕಾಗಿತ್ತು. ಆದ್ದರಿಂದ ಕಂಡಕ್ಟರ್ ಅವರಿಂದ ಸಹಿ ಪಡೆದ ಗೇಟ್ ಪಾಸ್ ದೊರೆತ ಮೇಲೆಯೇ ಸೀಟಿ ಹೊಡೆಯುತ್ತಿದ್ದ. ಕೆಲವೊಮ್ಮೆ ಕೇವಲ ಒಂದು ಸೀಟ್ ವ್ಯತ್ಯಾಸ ಬಂದು ಬಸ್ಸು ಹೊರಡಲು ೧೫ ರಿಂದ ೨೦ ನಿಮಿಷಗಳು ತಡವಾಗುತ್ತಿತ್ತು. ಇಂತಹ ಪ್ರಸಂಗಗಳು ಪ್ರಯಾಣಿಕರ ತಾಳ್ಮೆಯ ಪರೀಕ್ಷೆ ಮಾಡಿದಂತಿರುತ್ತಿತ್ತು. ಎಷ್ಟೋ ಬಾರಿ ಎಲ್ಲ ಪ್ರಯಾಣಿಕರ ಟಿಕೆಟ್ ಚೆಕ್ ಮಾಡುವಾಗ ಅದರಲ್ಲಿ ಬೇರೆ ಊರಿನಿಂದ ಬಂದ ಒಬ್ಬರು ಪ್ರಯಾಣಿಕರ ಕೈಯಲ್ಲಿ ಥ್ರೂ ಟಿಕೆಟ್ ಇರುವುದು ಗೊತ್ತಾಗುತ್ತಿತ್ತು! ಅದು ಗೇಟ್ ಪಾಸಿನಲ್ಲಿ ಎಂಟ್ರಿ ಆಗದೇ ಇರುವುದೇ ಒಂದು ಸೀಟ್ ವ್ಯತ್ಯಾಸಕ್ಕೆ ಕಾರಣವಾಗಿರುತ್ತಿತ್ತು.
ಶಂಕರ್ ಕಂಪನಿಯ ಆಫೀಸ್ ಮತ್ತು ವರ್ಕ್ ಶಾಪ್
ಶಂಕರ್ ಕಂಪನಿಯ ಬಸ್ಸುಗಳು ಯಾವುದೇ ಮಾರ್ಗದಲ್ಲಿ ಕೆಟ್ಟು ನಿಂತು ಹೋಗುವ ಪ್ರಸಂಗಗಳನ್ನು ನಾವು ಕೇಳಿರಲೇ ಇಲ್ಲ. ಕಂಪನಿಯ ಒಂದು ದೊಡ್ಡ ವರ್ಕ್ ಶಾಪ್ ಮತ್ತು ಅದಕ್ಕೆ ಸೇರಿದಂತಿದ್ದ ಒಂದು ದೊಡ್ಡ ಆಫೀಸ್ ಪಟ್ಟಣದ ಮಧ್ಯ ಭಾಗದಲ್ಲಿದ್ದುವು.  ಪ್ರತಿಯೊಂದು ಬಸ್ ಕೂಡಾ ವರ್ಕ್ ಶಾಪ್ ನೊಳಗೆ ಸಂಪೂರ್ಣ ಪರೀಕ್ಷೆಗೊಂಡ ನಂತರವೇ ಕೊಪ್ಪ ಬಸ್ ನಿಲ್ದಾಣಕ್ಕೆ ಬರುತ್ತಿತ್ತು. ಮನೋಹರ ರಾವ್ ಎಂಬುವವರು ವರ್ಕ್ ಶಾಪಿನ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದರು. ಕಂಪನಿಯ ಮುಖ್ಯಸ್ಥರಾದ ರಮೇಶ್ ರಾವ್ ಮತ್ತು ಮನೋಹರ ರಾವ್ ಅವರಿಗೆ ಆಫೀಸ್ ಒಳಗೆ ವಿಶೇಷ ಕ್ಯಾಬಿನ್ಗಳು ಇದ್ದುವಂತೆ. ಆಫೀಸ್ ನಲ್ಲಿ ನೌಕರರ ಸಂಖ್ಯೆ ಕೂಡ ತುಂಬಾ ದೊಡ್ಡದಿತ್ತಂತೆ. ಒಟ್ಟಿನಲ್ಲಿ ಕಂಪನಿಯ ಆಡಳಿತ ವರ್ಗ ಕಂಪನಿಯ ಆಡಳಿತ ಮತ್ತು ಚಟುವಟಿಕೆಯನ್ನು ತುಂಬಾ ದಕ್ಷತೆಯಿಂದ ಹಾಗೂ ಲಾಭಕರವಾಗಿ ನಡೆಸುತ್ತಿತ್ತು.
"ಸಹಕಾರ ಸಾರಿಗೆ"
ಶಂಕರ್ ಕಂಪನಿಯ ಹೆಸರು ಇಂದು ಕೇವಲ ನೆನಪು ಮಾತ್ರಾ. ಆದರೆ ಮನಸ್ಸಿಗೆ ತುಂಬಾ ಸಂತೋಷ ಕೊಡುವ ವಿಚಾರವೆಂದರೆ, ಕಂಪನಿ ಮುಚ್ಚುವ ಸಂದರ್ಭದಲ್ಲಿ ನೌಕರ ವರ್ಗ ಅದರ ಆಡಳಿತವನ್ನು ವಹಿಸಿಕೊಂಡು ಇಂದಿಗೂ ಕೂಡಾ"ಸಹಕಾರ ಸಾರಿಗೆ" ಹೆಸರಿನಲ್ಲಿ ಅದನ್ನು ಸಾಮರ್ಥ್ಯದಿಂದ ನಡೆಸುತ್ತಿರುವುದು. "ಸಹಕಾರ ಸಾರಿಗೆ" ನಿರಂತರವಾಗಿ ಮುಂದುವರಿಯಲೆಂದು ಆಶಿಸುತ್ತೇನೆ.
----ಮುಂದುವರಿಯುವುದು ---

Wednesday, March 6, 2019

ಒಂದು ಊರಿನ ಕಥೆ - ಕೊಪ್ಪ - 5


ಅಧ್ಯಾಯ ೫
ಶಂಕರ್ ಮೋಟಾರ್ ಟ್ರಾನ್ಸ್ಪೋರ್ಟ್  ಕಂಪನಿ ಮೊದಲು ಲೋಕಸೇವಾ ನಿರತ ಎಂ ಸ್ ದೇವೇಗೌಡರ  (ದ್ಯಾವೇ ಗೌಡರ)  ಒಡೆತನದಲ್ಲಿತ್ತಂತೆ.  ಅವರು ಅದನ್ನು ಉಡುಪಿ ಮೂಲದ ಆರೂರು ಲಕ್ಷ್ಮೀನಾರಾಯಣ ರಾವ್  ( ಎಲ್ ನ್ ರಾವ್ ) ಅವರ ಕಂಪನಿಗೆ   ಲೀಸ್ ಮಾಡಿ ಕೊಟ್ಟರಂತೆ. ಪ್ರಾಯಶಃ ಅದು ೧೯೫೦ನೇ ಇಸವಿಯ ಹತ್ತಿರದಲ್ಲಿರಬೇಕು. ಎಲ್ ನ್ ರಾವ್ ಅವರ ಒಡೆತನದಲ್ಲಿ ನನಗೆ ತಿಳಿದಂತೆ ದಕ್ಷಿಣ ಕನ್ನಡದ ಶಂಕರ್ ವಿಠಲ್ ಮೋಟಾರ್ ಸರ್ವಿಸ್ ಮತ್ತು ಶಿವಮೊಗ್ಗೆಯ ಯುನೈಟೆಡ್ ರೋಡ್ವೇಸ್ ಕೂಡಾ ಸೇರಿದ್ದುವು. ಆಮೇಲೆ ಮಾಂಡೋವಿ ಮೋಟಾರ್ ಕೂಡ ಪ್ರಾರಂಭವಾಯಿತು. ಈ ಕಂಪೆನಿಗಳೆಲ್ಲಾ ತುಂಬಾ ವೃತ್ತಿಪರವಾಗಿ ಹಾಗೂ ಲಾಭದಾಯಕವಾಗಿ ನಡೆಯುವಂತೆ ಆಡಳಿತ ವರ್ಗ ನೋಡಿಕೊಳ್ಳುತ್ತಿತ್ತು.
ದಿನಗಳಲ್ಲಿ ಕೆಲವು  ಶ್ರೀಮಂತರು ಕೇವಲ ಒಂದೊಂದೇ ಬಸ್ ಓಡಿಸುವ ಲೈಸೆನ್ಸ್ ಪಡೆದು ವ್ಯವಹಾರ ನಡೆಸುತ್ತಿದ್ದರಂತೆ. ಆದರೆ ಶಂಕರ್ ಟ್ರಾನ್ಸ್ಪೋರ್ಟ್ ನೀಡುತ್ತಿದ್ದ ತೀವ್ರ ಪೈಪೋಟಿಯ ಮುಂದೆ ಅವುಗಳು ಕ್ರಮೇಣ ನಷ್ಟ ಅನುಭವಿಸ ತೊಡಗಿದವಂತೆ. ಇಂತಹ ಬಸ್ಸುಗಳ ಹಿಂದೊಂದು ಮುಂದೊಂದು ಶಂಕರ್ ಬಸ್ ಓಡಿಸುವುದರ ಮೂಲಕ ಅವುಗಳ ಕಲೆಕ್ಷನ್ ಸಂಪೂರ್ಣ ಬಿದ್ದುಹೋಗುವಂತೆ ಮಾಡಲಾಯಿತಂತೆ. ಬಸ್ಸುಗಳ ಮಾಲೀಕರು ಕೊನೆಗೆ ತಮ್ಮ ಬಸ್ಸುಗಳನ್ನು ಲೈಸನ್ಸ್ ಸಮೇತ ಶಂಕರ್ ಕಂಪನಿಗೆ ಮಾರಿಬಿಟ್ಟರಂತೆ.

ನಾವು ನೋಡಿದಂತೆ ಕೊಪ್ಪದಿಂದ ಚಿಕ್ಕಮಗಳೂರಿಗೆ ಬೆಳಿಗ್ಗೆ ಗಂಟೆಗೆ ಮಲ್ಲಿಕಾರ್ಜುನ ಎಂಬ ಬಸ್ ಹೊರಡುತ್ತಿತ್ತು. ಮತ್ತು ಶಾರದಾಂಬ ಎಂಬ ಬಸ್ ಶೃಂಗೇರಿಯಿಂದ ನಮ್ಮ ಬಿ ಜಿ ಕಟ್ಟೆಗೆ ೧೧ ಗಂಟೆಯ ವೇಳೆಗೆ ಬರುತ್ತಿತ್ತು. ಅದು ಮುಂದೆ ಚಿಕ್ಕಮಗಳೂರಿಗೆ ಹೋಗುತ್ತಿತ್ತು. ಹಾಗೆಯೇ ಶೃಂಗೇರಿಯಿಂದ ಬೆಳಿಗ್ಗೆ ಗಂಟೆಗೆ ಮ್ ಪಿ ಮ್ ಎಂಬ ಬಸ್ ಬೀರೂರಿಗೆ ಹೊರಡುತ್ತಿತ್ತು. ಆದರೆ ಬಸ್ಸುಗಳೆಲ್ಲಾ ಶಂಕರ್ ಕಂಪನಿಗೆ ಸೇರಿದ್ದುವು. ಪ್ರಾಯಶಃ ಹೆಸರುಗಳು ಅವುಗಳ ಮೊದಲಿನ ಮಾಲೀಕರು ಇಟ್ಟ ಹೆಸರುಗಳಾಗಿರಬೇಕು.
ಉದ್ದ ಮೂತಿಯ ಬಸ್ಸುಗಳುಮುಂಡು”  ಬಸ್ಸುಗಳಾದುದು!
ಒಂದು ಕಾಲದಲ್ಲಿ ಬಸ್ಸು ಮತ್ತು ಲಾರಿಗಳಿಗೆ ಎಂಜಿನ್ಗಳು ಅವುಗಳ ಮುಂದೆ ಚಾಚಿದ ಮೂತಿಯಲ್ಲಿ ಇರುತ್ತಿದ್ದವು. ಅವುಗಳನ್ನು ಸ್ಟಾರ್ಟ್ ಮಾಡಲು ಒಂದು ಕಬ್ಬಿಣದ ರಾಡ್ ಮೂತಿಯಲ್ಲಿ ತೂರಿಸಿ ತಿರುಗಿಸ ಬೇಕಾಗಿತ್ತು. ಹೊಸದಾಗಿ ಬರುವ ಬಸ್ಸುಗಳಿಗೆ ಮೂತಿಯಿಲ್ಲದ್ದರಿಂದ ಅವುಗಳನ್ನು "ಮುಂಡು " ಬಸ್ಸುಗಳೆಂದು ಕರೆಯಲಾರಂಭವಾಯಿತು.  ಅವುಗಳ ಎಂಜಿನ್ ಡ್ರೈವರ್ ಸೀಟಿನ ಹತ್ತಿರವೇ ಇದ್ದು ಕೀಲಿಕೈ ತಿರುಗಿಸುವ ಮೂಲಕ ಸ್ಟಾರ್ಟ್ ಮಾಡಲು ಅನುಕೂಲವಿತ್ತು.  ನಾವು ಬಸ್ ನೋಡುವ ವೇಳೆಗೆ ಉದ್ದ ಮೂತಿಯ ಬಸ್ಸುಗಳು ಕೇವಲ ಎರಡು ಅಥವಾ ಮೂರು ಮಾತ್ರಾ ಇದ್ದುವು. ಅವುಗಳನ್ನು ಹೆಚ್ಚು ಘಾಟಿಯಿರುವ ರಸ್ತೆಗಳಲ್ಲಿ ಓಡಿಸಲಾಗುತ್ತಿತ್ತು. ಅದರಲ್ಲಿ ಕೊಪ್ಪದಿಂದ ಕಳಸಕ್ಕೆ ಹೋಗುವ ಬಸ್ ಒಂದು. ಬಸ್ಸಿನ ಡ್ರೈವರ್ ತಿಮ್ಮಪ್ಪ ಬಸರೀಕಟ್ಟೆ ಕಳಸ ಮಾರ್ಗದಲ್ಲಿ ತುಂಬಾ ಪ್ರಸಿದ್ಧನಾಗಿದ್ದ. ಯಾರು ಎಲ್ಲಿ ಕೈ ತೋರಿಸಿದರೂ ಬಸ್ ನಿಲ್ಲಿಸುತ್ತಿದ್ದ ತಿಮ್ಮಪ್ಪ, ಮಾರ್ಗದಲ್ಲಿ ಮಾಮೂಲಾಗಿ ಪ್ರಯಾಣಿಸುವ ಜನರ ಹೆಸರುಗಳನ್ನೂ ಹೇಳಬಲ್ಲವನಾಗಿದ್ದ. ಅಲ್ಲದೆ ಅವರ ಸಾಮಾನುಗಳನ್ನು ಬಸ್ಸಿನಿಂದ ಇಳಿಸಲು ತುಂಬಾ ಸಹಕಾರ ನೀಡುತ್ತಿದ್ದ. ೧೯೬೨ನೇ ಇಸವಿಯಲ್ಲಿ ನನ್ನ  ಉಪನಯನಕ್ಕೆ ಹೊರನಾಡಿಗೆ ಹೋಗುವಾಗ ತಿಮ್ಮಪ್ಪನ ಬಸ್ಸಿನಲ್ಲಿ ಕಳಸದವರೆಗೆ ಪ್ರಯಾಣ ಮಾಡಿದ್ದು ನೆನಪಿಗೆ ಬರುತ್ತಿದೆ.

ತಿಮ್ಮಪ್ಪನಷ್ಟೇ ಪ್ರಸಿದ್ಧನಾಗಿದ್ದ ಇನ್ನೊಬ್ಬ ಡ್ರೈವರ್ ಅಂದರೆ ಮಲ್ಲಿಕಾಜುನ ಬಸ್ಸಿನ ಎಲ್ಲಪ್ಪ. ಆಜಾನುಬಾಹು ಎಲ್ಲಪ್ಪ "ಮಾತು ಕಡಿಮೆ ಹೆಚ್ಚು ದುಡಿಮೆ" ಎಂಬ ತತ್ವ ಪಾಲಿಸುತ್ತಾ ತುಂಬಾ ಗಾಂಭೀರ್ಯದಿಂದ ಬಸ್ ನಡೆಸುತ್ತಿದ್ದ . ಕಾಲದಲ್ಲಿ ಹಲವು ವರ್ಷ ನಮ್ಮ ತಂದೆ ಅಥವಾ ದೊಡ್ಡ ಅಣ್ಣ ಪ್ರತಿ ಮಂಗಳವಾರ ಒಂದು ಎತ್ತಿನ ಗಾಡಿಯಷ್ಟು ಬಾಳೆಕಾಯಿಗಳನ್ನು ಚಿಕ್ಕಮಗಳೂರು ಸಂತೆಗೆ ತೆಗೆದುಕೊಂಡು ಹೋಗುತ್ತಿದ್ದರು. ದಿನಗಳಲ್ಲಿ  ಬಸ್ ಕಂಡಕ್ಟರ್ ಡ್ಯೂಟಿಯಲ್ಲಿ ಪ್ರಯಾಣಿಕರ ಸಾಮಾನುಗಳನ್ನು ಬಸ್ಸಿನ ಟಾಪ್ ಮೇಲೆ ಹಾಕುವುದೂ ಸೇರಿತ್ತು. ಆದರೆ ಸ್ವಲ್ಪ ವರ್ಷಗಳ ನಂತರ ಅವನ ಜವಾಬ್ದಾರಿಯನ್ನು ತೆಗೆದು ಹಾಕಲಾಯಿತು. ಸಾಮಾನ್ಯವಾಗಿ ಎಲ್ಲಪ್ಪನ ಮಲ್ಲಿಕಾಜುನ ಬಸ್ಸಿನಲ್ಲೇ ಅದನ್ನು ಒಯ್ಯಲಾಗುತ್ತಿತ್ತು.  ಎಲ್ಲಪ್ಪ ತುಂಬಾ ಸಹಕಾರ ನೀಡುತ್ತಿದ್ದುದು ನಮಗೆ ಗೊತ್ತಾಗುತ್ತಿತ್ತು. ಹಾಗೆಯೆ ನಮ್ಮೂರಿನಿಂದ ಕೆಲವು  ಮದುವೆ  ದಿಬ್ಬಣಗಳು ಎಲ್ಲಪ್ಪನ ಬಸ್ಸಿನಲ್ಲಿ ಆಗುಂಬೆ ಮತ್ತಿತರ ಊರುಗಳಿಗೆ ಹೋಗಿದ್ದವು. ಎಲ್ಲಪ್ಪ ನಮ್ಮೂರ  ರಸ್ತೆ ಚೆನ್ನಾಗಿಲ್ಲದಿದ್ದರೂ ಬೆಳವಿನಕೊಡಿಗೆ ಮನೆಯವರೆಗೆ ಬಸ್ ತರುತ್ತಿದ್ದ. ಅವನು  ಡ್ರೈವರ್ ಕೆಲಸ ಮಾತ್ರವಲ್ಲದೇ ಬೇರೆ ಬಿಸಿನೆಸ್ ಕೂಡ ಮಾಡಿ ತುಂಬಾ ಹಣ ಗಳಿಸುತ್ತಿದ್ದನೆಂದು ಮುಂದೆ ನಮಗೆ ತಿಳಿದು ಬಂತು. ಆದರೆ ಅವನು ತನ್ನ ವೃತ್ತಿಯಲ್ಲಿ ಮಾಡುತ್ತಿದ್ದ ಉನ್ನತ ಮಟ್ಟದ ಸೇವೆ ಎಂದೂ ಮರೆಯುವಂತದಲ್ಲ.
ಶಂಕರ್ ಕಂಪನಿಯ ಏಕಸ್ವಾಮ್ಯತೆ
ಕೊಪ್ಪದಿಂದ ಚಿಕ್ಕಮಗಳೂರಿಗೆ ಹೋಗುವ ಜಯಪುರ ಮತ್ತು ಬಾಳೆಹೊನ್ನೂರು  ಮಾರ್ಗದಲ್ಲಿ ಶಂಕರ್ ಕಂಪನಿಯ ಏಕಸ್ವಾಮ್ಯತೆ  (monopoly) ಇತ್ತು.  ಅದನ್ನು ಕಂಪನಿ ತುಂಬಾ ಜೋಪಾನವಾಗಿ ಕಾಯ್ದುಕೊಂಡಿತ್ತು. ಆದರೆ ಶಿವಮೊಗ್ಗೆಗೆ ನರಸಿಂಹರಾಜಪುರದ ಮೂಲಕ ಹೋಗುವ ಮಾರ್ಗದಲ್ಲಿ ಅದಕ್ಕೆ ಉದಯ ಮೋಟಾರಿನ ಎರಡು ಬಸ್ಸುಗಳು ಪೈಪೋಟಿ ನೀಡುತ್ತಿದ್ದವು. ಶಂಕರ್ ಕಂಪನಿಯ ಎಲ್ಲಾ ಬಸ್ಸುಗಳು ಟಾಟಾ ಮರ್ಸಿಡಿಸ್ ಬೆನ್ಜ್ (Benz) ಬಸ್ಸುಗಳೇ ಆಗಿದ್ದವು. ಆದರೆ ಉದಯ ಮೋಟಾರ್ ಲೆಯ್ಲ್ಯಾಂಡ್ (Leyland) ಬಸ್ಸುಗಳನ್ನು ಓಡಿಸುತ್ತಿತ್ತು. ಅದರ ಹತ್ತಿರ ಒಂದೆರಡು ಫಾರ್ಗೋ ಮತ್ತು ಡಾಡ್ಜ್ ಬಸ್ಸುಗಳೂ ಇದ್ದುವು. ಶೃಂಗೇರಿ- ಕೊಪ್ಪ- ತೀರ್ಥಹಳ್ಳಿ-ಶಿವಮೊಗ್ಗ ಮಾರ್ಗದಲ್ಲಿ ಕೇವಲ ಸಿ ಕೆ ಮ್ ಸ್  (CKMS)  ಕಂಪನಿ ಒಂದು ಲೆಯ್ಲ್ಯಾಂಡ್ ಬಸ್ಸನ್ನು ಓಡಿಸುತ್ತಿತ್ತು. ನನ್ನ ಶಿವಮೊಗ್ಗೆಯ ಮೊಟ್ಟ  ಮೊದಲ ಪ್ರಯಾಣ ೧೯೬೨ನೇ ಇಸವಿಯಲ್ಲಿ   ಬಸ್ಸಿನಲ್ಲಿ ಆಗಿತ್ತು. ಅದರ ಡ್ರೈವರ್ ಅಡಿ ಎತ್ತರದ ಆಜಾನುಭಾಹು. ಅವನ ಪರ್ಸನಾಲಿಟಿ ಗಲಿವರನಂತೆ ತೋರುತ್ತಿತ್ತು. ಅವನು ಬಸ್ಸಿನಲ್ಲಿ ತಲೆ ಬಗ್ಗಿಸಿ ಕುಳಿತುಕೊಳ್ಳಬೇಕಾಗುತ್ತಿತ್ತು!
----ಮುಂದುವರಿಯುವುದು ---