Friday, April 28, 2017

ನನ್ನ ಬಾಲ್ಯ


ಅಧ್ಯಾಯ  ೨೨
ಎಲ್ಲಪ್ಪಯ್ಯನವರು ತಮ್ಮ ಗಂಡು ಮಕ್ಕಳಿಗೆ ವ್ಯವಸಾಯಕ್ಕೆ ಸಂಬಂಧಿಸಿದ ಎಲ್ಲಾ ಕೆಲಸಗಳಲ್ಲಿ ತರಬೇತಿ ನೀಡಿದ್ದರು. ದಿನಗಳಲ್ಲಿ ಎಷ್ಟೇ ಶ್ರೀಮಂತರಾದರೂ ಊರಿನಲ್ಲಿ ಎಲ್ಲರ ಮನೆಗಳಲ್ಲೂ ನಡೆಯುವ ಕೆಲಸಗಳಲ್ಲಿ ಪಾಲ್ಗೊಳ್ಳಲೇ ಬೇಕಿತ್ತು. ಅವುಗಳಲ್ಲಿ ಅಡಿಕೆ ಸೋಗೆಯಿಂದ ಪ್ರತಿ ವರ್ಷ ಮನೆ ಮತ್ತು ಕೊಟ್ಟಿಗೆಗಳನ್ನು ಹೊಚ್ಚುವ ಕೆಲಸವೂ ಸೇರಿತ್ತು. ಸೋಗೆ ಹೊಚ್ಚುವ ಕೆಲಸ ಪರಿಣಿತರಿಂದ ಮಾತ್ರ ಸಾಧ್ಯವಾಗುವ ಕೆಲಸ. ತಿಮ್ಮಪ್ಪಯ್ಯ ಮತ್ತು ವೆಂಕಪ್ಪಯ್ಯ ಇಬ್ಬರೂ ಅದರಲ್ಲಿ ಪರಿಣಿತರು. ಅವರಿಬ್ಬರೂ ನಮ್ಮ ಮನೆ ಹೊಚ್ಚಲು ಹಳೇ ಬಟ್ಟೆಗಳನ್ನು ಧರಿಸಿ ಬರುತ್ತಿದ್ದುದು ನನ್ನ ಕಣ್ಣಿಗೆ ಕಟ್ಟಿದಂತಿದೆ. ಬೆಳವಿನಕೊಡಿಗೆ ಮನೆಗೆ ಹೆಂಚು ಹಾಕಿದ್ದರೂ ಕಲವು ಕೊಟ್ಟಿಗೆಗಳಿಗೆ ಸೋಗೆ ಹೊಚ್ಚುವ ಕ್ರಮವಿತ್ತು.

ತಿಮ್ಮಪ್ಪಯ್ಯ ಮತ್ತು ವೆಂಕಪ್ಪಯ್ಯ ಇಬ್ಬರೂ ಊರಿನ ಇತರ ಹಿರಿಯರಂತೆ ಪಾಣಿ ಪಂಚೆ ಕಟ್ಟಿಕೊಂಡು ಅರ್ಧ  ತೋಳಿನ  ಎರಡೇ ಗುಂಡಿಗಳಿದ್ದ  ಅಂಗಿಗಳನ್ನು ಹಾಕಿಕೊಂಡು ಒಂದು ಗಾಂಧಿ ಶಾಲನ್ನು ಹೊದ್ದುಕೊಂಡಿರುತ್ತಿದ್ದರು. ಬಗೆಯ ಉಡುಪು ದೇಹ ಶ್ರಮದ ಕೆಲಸಗಳಿಗೆ ಅನುಕೂಲವಾಗಿತ್ತು. ಮುಖ್ಯ ಸಮಾರಂಭಗಳಿಗೆ ಹೋಗುವಾಗ ಕಚ್ಚೆಪಂಚೆ ಧರಿಸಿ ಉದ್ದ ತೋಳಿನ ಶರ್ಟ್ ಧರಿಸುತ್ತಿದ್ದರು. ಪ್ರತಿ ವರ್ಷ ನಮ್ಮೂರಿನಿಂದ ಮೇಗೂರಿನ ತೇರಿಗೆ ದಿಬ್ಬಣ ಹೋಗುತ್ತಿದ್ದು ಅದರ ನೇತೃತ್ವವನ್ನು ಸಾಮಾನ್ಯವಾಗಿ ವೆಂಕಪ್ಪಯ್ಯನವರು ವಹಿಸುತ್ತಿದ್ದರು. ವಾದ್ಯ ಸಮೇತವಾದ ದಿಬ್ಬಣ ಸುಮಾರು ಹತ್ತು ಮೈಲಿ ದೂರವನ್ನು ಕಾಲ್ನಡಿಗೆಯಲ್ಲೇ ಪಯಣಿಸುತ್ತಿತ್ತು.

ಬೆಳವಿನಕೊಡಿಗೆಯವರ ಹೆಚ್ಚಿನ ಜಮೀನು ಗೇಣಿದಾರರ ವಶದಲ್ಲಿತ್ತು. ನಮ್ಮ ತಂದೆ ಕೂಡ ಅವರ ಸುಮಾರು ೨೦ ಗುಂಟೆ ಜಮೀನು ಗೇಣಿ ಮಾಡುತ್ತಿದ್ದರು. ಅದಕ್ಕೆ ಆರು ಮಣ ಅಡಿಕೆ (ಹಸ) ಗೇಣಿ ನಿಗದಿಯಾಗಿತ್ತು. ವಾರ್ಷಿಕ ಗೇಣಿಯನ್ನು ಅಡಿಕೆ ಕೊಯ್ಲು ಮುಗಿದು ಅಡಿಕೆ ಆರಿಸಿಯಾದ ನಂತರ ವಸೂಲಿ ಮಾಡಲಾಗುತ್ತಿತ್ತು. ವೆಂಕಪ್ಪಯ್ಯನವರ ನೇತೃತ್ವದಲ್ಲಿ ಒಂದು ಟೀಮ್ ತಕ್ಕಡಿ ಮತ್ತು ಖಾಲಿ ಗೋಣಿಚೀಲಗಳೊಡನೆ ನಿಗದಿಯಾದ ದಿನ ಗೇಣಿದಾರರ ಮನೆಗೆ ಭೇಟಿ ಕೊಡುತ್ತಿತ್ತು. ವೆಂಕಪ್ಪಯ್ಯನವರು ಸ್ವತಃ ತಲೆಗೆ ಒಂದು ಗಾಂಧಿ ಶಾಲನ್ನು ಸುತ್ತಿಕೊಂಡು ಅಡಿಕೆ ತೂಕ ಮಾಡುತ್ತಿದ್ದರು. ತಲೆಗೆ ಮುಂಡಾಸು ಸುತ್ತದೇ  ತೂಕ ಮಾಡುವ ಪ್ರಶ್ನೆಯೇ ಇರಲಿಲ್ಲ. ತೂಕ ಮಾಡುವಾಗ ಮೊದಲ ಸಂಖ್ಯೆ ಒಂದು ಎನ್ನುವ ಬದಲು ಲಾಭ ಎಂದು ಹೇಳಲಾಗುತ್ತಿತ್ತು. ಹಾಗೆಯೇ ಏಳು ಸಂಖ್ಯೆ ಬದಲಿಗೆ ಮತ್ತೊಂದು  ಎಂದು ಹೇಳಲಾಗುತ್ತಿತ್ತುಎಲ್ಲ ಮನೆಗಳ ಗೇಣಿ ತೂಕವಾದ ನಂತರ ಅದನ್ನು ಬೇರೊಂದು ದಿನ ಎತ್ತಿನ ಗಾಡಿಯಲ್ಲಿ ಒಯ್ಯಲಾಗುತ್ತಿತ್ತು.

ಗಣೇಶಯ್ಯ-ಕಾವೇರಮ್ಮ ದಂಪತಿಗಳು ಶಿವಮೊಗ್ಗೆಗೆ ಹೋಗಿ ನೆಲಸುವಾಗ ತಮ್ಮೊಡನೆ ಮೂರು ಜನ ಗಂಡು ಮಕ್ಕಳನ್ನು ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಜೊತೆಗೆ ಕರೆದುಕೊಂಡು ಹೋಗಿ ಅಲ್ಲಿ ಶಾಲೆಗೆ ಸೇರಿಸಿದ್ದರು. ತಿಮ್ಮಪ್ಪಯ್ಯನವರ ಮಗ ಶಂಕರ್ ಮತ್ತು ಗಣೇಶಯ್ಯನವರ ಸಹೋದರಿಯರ ಮಕ್ಕಳಾದ ಭಾಸ್ಕರ ಮತ್ತು ಚಂದ್ರಶೇಖರ್  ಹಾಗೂ ವೆಂಕಪ್ಪಯ್ಯನವರ ಮಕ್ಕಳಾದ ಗಂಗಾರತ್ನ ಮತ್ತು ಅನ್ನಪೂರ್ಣ ಅವರೊಟ್ಟಿಗೆ ಹೋದ ಮಕ್ಕಳು. ಆಮೇಲೆ ಸ್ವಲ್ಪ ವರ್ಷದ ನಂತರ ತಿಮ್ಮಪ್ಪಯ್ಯನವರ ಮಕ್ಕಳಾದ ಸುಬ್ಬಣ್ಣ, ನಾಗಭೂಷಣ, ಗುರುಮೂರ್ತಿ ಮತ್ತು ಚಂದ್ರಶೇಖರ ಹಾಗೂ ವೆಂಕಪ್ಪಯ್ಯನವರ ಮಗ ಕೇಶವ ಕೂಡ ಶಿವಮೊಗ್ಗೆ ಸೇರಿದರು. ಹುಡುಗರು ನಮ್ಮ ಸಮ ವಯಸ್ಕರು ಅಥವಾ ಸ್ವಲ್ಪ ಹೆಚ್ಚು ವಯಸ್ಸಿನವರು. ಇವರೆಲ್ಲ ಗಣೇಶಯ್ಯ-ಕಾವೇರಮ್ಮ ದಂಪತಿಗಳೊಡನೆ ಹಬ್ಬಗಳಲ್ಲಿ ಊರಿಗೆ ಬರುತ್ತಿದ್ದರು.

ನಮಗೆ ಮಕ್ಕಳನ್ನು ನೋಡಿ ತುಂಬಾ ಹೊಟ್ಟೆಕಿಚ್ಚಾಗುತ್ತಿತ್ತು. ಏಕೆಂದರೆ ಕಾಲದಲ್ಲಿ ಶಿವಮೊಗ್ಗೆಯಲ್ಲಿ ವಾಸಿಸುವರಿಗೆ ಈಗ ಅಮೇರಿಕಾದಲ್ಲಿ ಇರುವರಿಗಿಂತ ಹೆಚ್ಚು ಗೌರವ ಇತ್ತು. ಹಳ್ಳಿ ಗುಗ್ಗುಗಳಾದ ನಾವು ಮಲೆನಾಡಿನ ಹಳ್ಳಿ ಭಾಷೆ ಮಾತನಾಡುತ್ತಿದ್ದೆವು. ಆದರೆ ಪೇಟೆ ಹುಡುಗರು ಸ್ವಚ್ಛ ಕನ್ನಡದಲ್ಲಿ ಸೊಗಸಾಗಿ ಮಾತನಾಡುವುದಲ್ಲದೇ ಮಧ್ಯೆ ಮಧ್ಯೆ ಇಂಗ್ಲಿಷ್ ಪದಗಳನ್ನು ತುಂಬಾ ಸ್ಟೈಲಾಗಿ ಬಳಸುತ್ತಿದ್ದರು. ಇಷ್ಟಲ್ಲದೆ ನಾವು ಕುಂಟಾಟ, ಕಂಬದಾಟ ಮತ್ತು ಹೆಚ್ಚೆಂದರೆ ಕಬಡ್ಡಿ ಆಟ ಆಡುತ್ತಿದ್ದರೆ ಪೇಟೆ ಹುಡುಗರು ಅದಾವುದೋ ಕ್ರಿಕೆಟ್ ಎಂಬ ಆಟ  ಆಡುತ್ತಿದ್ದರಂತೆ! ನಮಗೆ ಅದರ ಗಂಧ ಗಾಳಿ ಗೊತ್ತಿರಲಿಲ್ಲ. ನಾವೂ ಒಂದು ದಿನ ಶಿವಮೊಗ್ಗೆಯಲ್ಲಿ ಇರುವಂತಾಗಿ ಕ್ರಿಕೆಟ್ ಆಟವನ್ನು ಆಡಬೇಕೆಂದು ಕನಸು ಕಾಣತೊಡಗಿದೆವು.

ದಿನಗಳ ನವರಾತ್ರಿ ಸಮಾರಾಧನೆ ಈಗಿನ ಮದುವೆ ಮನೆಗಳಿಗಿಂತ ಜೋರಾಗಿ ನಡೆಯುತ್ತಿತ್ತುಅದರ ಹಿಂದಿನ ದಿನವೇ ಅಡಿಗೆಗೆ ತಯಾರಿ ಮಾಡಲು ಪಾಕಪ್ರವೀಣ ಮಹಾಬಲಯ್ಯ ತಮ್ಮ ಬಳಗದೊಡನೆ ಆಗಮಿಸುತ್ತಿದ್ದರು. ಮಹಾಬಲಯ್ಯ ಯಾವ ಊರಿನವರೆಂದು ನಮಗೆ ಗೊತ್ತಿರಲಿಲ್ಲ. ನೋಡಲು ಥೇಟ್ ಗಾಂಧಿ ಮಹಾತ್ಮನಂತೆ ಕಾಣುತ್ತಿದ್ದ ಮಹಾಬಲಯ್ಯನವರ ಮುಂದೆ ಇಂದಿನ ಪ್ರಸಿದ್ಧ  ಟೀವಿ ಚೆಫ್ ಗಳಾದ ಸಂಜೀವ್ ಕಪೂರ್ ಅಥವಾ ಸಿಹಿಕಹಿ ಚಂದ್ರುವನ್ನು ನಿವಾಳಿಸಿ ಬಿಸಾಕಬೇಕಿತ್ತು. ಮಹಾಬಲಯ್ಯ ಅಡಿಗೆಯಲ್ಲಿ ಎಷ್ಟು ಪ್ರವೀಣರೆಂದರೆ ಅವರು ಆಲೂ ಗೆಡ್ಡೆಯ ಸಿಪ್ಪೆಯಿಂದ ಕೂಡ ಬೋಂಡಾ ಮಾಡಬಲ್ಲವರಂತೆ!

ಸಮಾರಾಧನೆಯ ದಿನ ಗಣೇಶಯ್ಯನವರೇ ಸ್ವತಃ ಅಮ್ಮನವರಿಗೆ ಪೂಜೆ ಮತ್ತು ಆರತಿ ಮಾಡುತ್ತಿದ್ದರು. ನಂತರ ಭರ್ಜರಿ ಭೋಜನ ಕೂಟ ನಡೆಯುತ್ತಿತ್ತು. ಊಟದ ಮಧ್ಯೆ ವಿಶೇಷ ಗ್ರಂಥಗಳನ್ನು ಹೇಳಲಾಗುತ್ತಿತ್ತು. ನಂತರ ಜಗಲಿಯಲ್ಲಿ ಹಿರಿಯ ಗಂಡಸರೆಲ್ಲಾ ಸಭೆ ಸೇರುತ್ತಿದ್ದರು. ಮಕ್ಕಳಾದ ನಾವೆಲ್ಲಾ  ಉಪ್ಪರಿಗೆಯ ಮೇಲೇರಿ ಹಳೆ ಚಂದಮಾಮಗಳನ್ನು ಓದುವುದರಲ್ಲಿ ಮಗ್ನರಾಗುತ್ತಿದ್ದೆವು. ಸಾಮಾನ್ಯವಾಗಿ ಸಮಯದಲ್ಲಿ ಹಿರಿಯರೆಲ್ಲ ಇಸ್ಪೇಟಿನ ಸೆಟ್ ಆಟ ಆಡುತ್ತಿದ್ದರೆ ಗಣೇಶಯ್ಯನವರ ಮುಂದೆ ಅದು ನಡೆಯುತ್ತಿರಲಿಲ್ಲ. ಅವರ ಮುಂದೆ ಸಭಿಕರಿಗೆ ಶ್ರಿಮದ್ಗಾಂಭೀರ್ಯ ಬಂದು ಬಿಡುತ್ತಿತ್ತು. ಅವರೆಲ್ಲ ಗಣೇಶಯ್ಯನವರ ಮಾತಿಗಾಗಿ ಕಾಯಬೇಕಿತ್ತು. ಗಣೇಶಯ್ಯನವರ ಆಕಾರ ಗಲಿವರ್ ನಂತಿದ್ದರೆ ಉಳಿದವರು ಅವರ ಮುಂದೆ ಲಿಲಿಪುಟ್ ಗಳಂತೆ ಕಾಣುತ್ತಿದ್ದರು!

ಗಣೇಶಯ್ಯನವರು ಪ್ರತಿ ಮನೆಯ ಹಿರಿಯರನ್ನು ಅವರ ಹೆಸರು ಕರೆದು ಮಾತನಾಡಿಸುತ್ತಿದ್ದರು. ಮೊದಲ ಸರದಿ ಕೆಳಕೊಡಿಗೆ ನಾರಾಯಣಯ್ಯನವರದಾಗಿತ್ತು. ಅವರಿಂದ ಗಣೇಶಯ್ಯನವರು ತಮ್ಮ ಎರಡು ಭೇಟಿಗಳ ನಡುವೆ ಊರಿನಲ್ಲಿ ನಡೆದ ಸಮಾಚಾರಗಳ ಬಗ್ಗೆ ವರದಿ ಪಡೆಯುತ್ತಿದ್ದರು. ಆಮೇಲೆ ಉಳಿದವರ ಸರದಿ. ಹೆಚ್ಚಿನವರಿಗೆ ಅವರ ಮುಂದೆ ತಲೆಯೆತ್ತಿ ಮಾತನಾಡುವಷ್ಟು ಧೈರ್ಯವೂ ಇರಲಿಲ್ಲ. ಅವರೊಡನೆ ಸ್ವಲ್ಪ ಗಟ್ಟಿಯಾಗಿ ಮಾತನಾಡುವವರೆಂದರೆ ಬೈಸೆಮನೆ ಮಾಧವರಾವ್ ಎಂಬ ಹೊಸನಗರದ ಮಹನೀಯರು. ಅವರ ಮಗಳು ಲಕ್ಷ್ಮಿಯನ್ನು ತಿಮ್ಮಪ್ಪಯ್ಯನವರ ಹಿರಿಯ ಮಗ ಎಲ್ಲಪ್ಪಯ್ಯನವರಿಗೆ ಕೊಟ್ಟು ಮದುವೆ  ಮಾಡಲಾಗಿತ್ತು. ಕಪ್ಪು ಕೋಟ್ ಮತ್ತು ಕಚ್ಚೆಪಂಚೆ ಧರಿಸಿದ ಮಾಧವರಾವ್  ವ್ಯಕ್ತಿತ್ವ ಸ್ವಲ್ಪ ದೊಡ್ಡ ಮಟ್ಟದ್ದೇ ಆಗಿತ್ತು.

ಗಣೇಶಯ್ಯ-ಕಾವೇರಮ್ಮ ದಂಪತಿಗಳು ಭಾಗವಹಿಸುತ್ತಿದ್ದ ಮುಂದಿನ ಹಬ್ಬವೆಂದರೆ ಅನಂತನ ಚತುರ್ದಶಿ ವ್ರತ. ವ್ರತ ಇತರ ವ್ರತಗಳಿಗಿಂತ ಕಠಿಣವಾದದ್ದು. ಗಣೇಶಯ್ಯನವರೊಡನೆ ಇನ್ನು ಕೆಲವರೂ ಕೂಡಿ ವ್ರತವನ್ನು ಆಚರಿಸುತ್ತಿದ್ದರು. ವ್ರತ ಮುಗಿದ ನಂತರ ಸಂತರ್ಪಣೆ ನಡೆದು ಆಮೇಲೆ ಅನಂತನ ವಿಸರ್ಜನೆ  ನಡೆಯುತ್ತಿತ್ತು. ನಮಗೆ ವಿಸರ್ಜನೆ ಅತ್ಯಂತ ಸಂಭ್ರಮ ತರುತ್ತಿತ್ತು. ಗಣೇಶಯ್ಯ ಮತ್ತು ಇತರರು ವಿಸರ್ಜನೆಗಾಗಿ ದೇವರನ್ನು ಮನೆಯ ಕೆಳಗಿದ್ದ ತೋಟದ ಭಾವಿಗೆ ಕೊಂಡೊಯ್ಯುತ್ತಿದ್ದರು. ಹೆಂಗಸರು ಅವರೊಟ್ಟಿಗೆ ಹೋಗುತ್ತಿದ್ದರು. ಆದರೆ ಗಂಡಸರೆಲ್ಲಾ ಅವರು ವಾಪಾಸ್ ಬರುವುದನ್ನೇ ಕಾಯುತ್ತಿದ್ದರು. ಎಲ್ಲರ ಕೈಯಲ್ಲೂ ಗೆಣಜಲು ಎಂಬ ಗಿಡಗಳಲ್ಲಿ ಬೆಳೆದ ಕಾಳುಗಳನ್ನು ಕೊಡಲಾಗುತ್ತಿತ್ತು. ಅದನ್ನು ಅವರು ಗಣೇಶಯ್ಯ ಮತ್ತಿತರ ಮೇಲೆ ಅವರು ವಾಪಾಸ್ ಮನೆಯೊಳಗೆ ಪ್ರವೇಶ ಮಾಡುವಾಗ ಎಸೆಯ ಬೇಕಿತ್ತು.

ಗೆಣಜಲು ಗಿಡಗಳು ಕೇವಲ ನಮ್ಮ ತೋಟದ ಮಧ್ಯ ಭಾಗದಲ್ಲಿದ್ದ ಕೆರೆಯ ದಂಡೆಯಲ್ಲಿ ಮಾತ್ರಾ ಬೆಳೆದಿದ್ದವು. ಅವು ನಮ್ಮೂರಿನ ಬೇರೆಲ್ಲೂ ಇರಲಿಲ್ಲ. ರೀತಿ ಅವುಗಳನ್ನು ಅನಂತನ ವ್ರತದಲ್ಲಿ ಬಳಕೆ ಮಾಡುವ ಕ್ರಮ ಹೇಗೆ ಶುರುವಾಯಿತೆನ್ನುವುದೂ ಒಂದು ರಹಸ್ಯವೇ ಆಗಿತ್ತು. ಏನೇ ಇರಲಿ ನಮಗೆ ಮಾತ್ರ ಅದು ಕೇವಲ ನಮ್ಮ ತೋಟದಲ್ಲಿ ಮಾತ್ರ ದೊರೆಯುವುದೆಂಬ ಹೆಮ್ಮೆ ಇತ್ತು. ಅದನ್ನು ಕೊಯ್ಯಲು ಬೆಳವಿನಕೊಡಿಗೆಯಿಂದ ಜನ ಬಂದು ನಮ್ಮ ತಂದೆಯವರ ಅನುಮತಿ ಕೇಳುವಾಗ ನಾವು ಸ್ವಲ್ಪ 'ಕೋಡು' ಬಂದವರಂತೆ ವರ್ತಿಸುವುದರಲ್ಲಿ ಆಶ್ಚರ್ಯವೇನಿರಲಿಲ್ಲ.

ಗಣೇಶಯ್ಯ-ಕಾವೇರಮ್ಮ ದಂಪತಿಗಳು ನವರಾತ್ರಿ ಹಬ್ಬ ಮುಗಿದಮೇಲೆ ಸ್ವಲ್ಪ ಕಾಲ ನಮ್ಮೂರಲ್ಲೇ ಇದ್ದು ಇಬ್ಬರೂ ಬೇರೆಬೇರೆಯಾಗಿ ಎಲ್ಲ ಮನೆಗಳಿಗೆ ಭೇಟಿ ನೀಡುತ್ತಿದ್ದರು. ಕಾವೇರಮ್ಮನವರು ಬೇರೆ ಹೆಂಗಸರೊಡಗೂಡಿ ಬರುತ್ತಿದ್ದರು. ಅವರು ಬರುವ ಮುನ್ಸೂಚನೆ ನಮಗೆ ಮೊದಲೇ ದೊರೆಯುತ್ತಿತ್ತು. ಆದರೆ ಗಣೇಶಯ್ಯನವರು ಒಂಟಿಯಾಗಿ ಬರುತ್ತಿದ್ದರು. ನಾವು ಕಾವೇರಮ್ಮನವರ ಭೇಟಿಯನ್ನು ಆಸಕ್ತಿಯಿಂದ ನಿರೀಕ್ಷಿಸುತ್ತಿದ್ದೆವು. ಏಕೆಂದರೆ ಅವರೇನು ಬರಿಗೈಯಲ್ಲಿ ಬರುತ್ತಿರಲಿಲ್ಲ. ಅವರ ಕೈಚೀಲದಿಂದ ನಮಗಾಗಿ ದ್ರಾಕ್ಷಿ, ಗೋಡಂಬಿ ಮತ್ತು  ಸೇಬಿನ ಹಣ್ಣು ಇತ್ಯಾದಿಗಳು ಹೊರಬೀಳುತ್ತಿದ್ದವು. ಓಹ್ ! ಕಾವೇರಮ್ಮನದು ಎಂತಹ ಮನಮೋಹಕ ವ್ಯಕ್ತಿತ್ವ? ಅವರು ಮನೆಯಲ್ಲಿ ಇದ್ದಾಗ ಮನೆ ಇಡೀ  ಒಂದು ಬಗೆಯ ಉಜ್ವಲ ಕಾಂತಿ ತುಂಬಿರುತ್ತಿದ್ದು ಅದು ಅವರೊಡನೇ ಹೊರಟು ಹೋಗುತ್ತಿತ್ತು!

ಇದಕ್ಕೆ ತದ್ವಿರುದ್ಧವಾಗಿ ಗಣೇಶಯ್ಯನವರ ಭೇಟಿ ಯಾವುದೇ ಮುನ್ಸೂಚನೆ ಇಲ್ಲದೇ ಜರುಗುತ್ತಿತ್ತು. ನಮಗೆ ಕೊಂಚವೂ ಸುಳಿವು ಸಿಗುತ್ತಿರಲಿಲ್ಲನಮ್ಮೂರಿನ ಎಲ್ಲ ಮನೆಗಳಿಗೂ ಎರಡು ದಾರಿಗಳಿದ್ದುವು. ರಸ್ತೆಯ ಮೂಲಕ ಮತ್ತು ಅಡಿಕೆ ತೋಟದ ಮೂಲಕ. ಗಣೇಶಯ್ಯನವರು ಇದ್ದಕ್ಕಿದ್ದಂತೆ ಮನೆಯ ಮುಂದೆ ಪ್ರತ್ಯಕ್ಷವಾಗುತ್ತಿದ್ದರು. ಅವರು ಯಾವ ದಾರಿಯಲ್ಲಿ ಬಂದರೆನ್ನುವುದೂ ನಮಗೆ ತಿಳಿಯುತ್ತಿರಲಿಲ್ಲ.

ಗಣೇಶಯ್ಯನವರೊಡನೆ ಸಂಭಾಷಣೆ ಸಾಮಾನ್ಯವಾಗಿ ಏಕಮುಖಿಯಾಗಿತ್ತು. ಎಲ್ಲರೂ ಅವರ  ಪ್ರಶ್ನೆಗಳಿಗೆ ಉತ್ತರ ನೀಡುವುದರಲ್ಲೇ ತಮ್ಮ ಮಾತನ್ನು ಮುಗಿಸುತ್ತಿದ್ದರು. ಯಾರೂ ಅವರಿಗೆ ತಿರುಗಿ ಪ್ರಶ್ನೆ ಕೇಳುತ್ತಿರಲಿಲ್ಲ. ಮಾತುಗಳು ಸಾಮಾನ್ಯವಾಗಿ ತೋಟದ ಹಾಗೂ ಅಡಿಕೆಯ ಬಗ್ಗೆ ಸೀಮಿತವಾಗಿರುತ್ತಿದ್ದವು. ಒಂದು ಬಾರಿ  ಅವರು ಬಂದಾಗ ನಮ್ಮ ತಂದೆ ಅಡಿಕೆ ಆರಿಸುತ್ತಿದ್ದರು. ಗಣೇಶಯ್ಯನವರಿಗೆ ಅವರ ಮುಂದೆ ರಾಶಿ ಬಿದ್ದ ಅಡಿಕೆಯ  (ಹಸ)  ಬಣ್ಣ ನೋಡಿ ಪರಮಾಶ್ಚರ್ಯವಾಯಿತು. ಅಷ್ಟು ಸುಂದರವಾಗಿತ್ತು ಅದರ  ಬಣ್ಣ. ಅಡಿಕೆಗೆ ಅಂತಹ ಬಣ್ಣ ಬರಲು ಅದಕ್ಕೆ ಬಳಸಿದ ಚೊಗರು ಹಾಗೂ ಅದನ್ನು ಸರಿಯಾದ ಮಟ್ಟದವರೆಗೆ ಬೇಯಿಸುವ ಮತ್ತು ಒಣಗಿಸುವ ವಿಧಾನ. ವಿಚಾರದಲ್ಲಿ ನಮ್ಮ ತಂದೆಯೊಬ್ಬ ಮಾಂತ್ರಿಕನೆಂದೇ ಹೇಳಬೇಕು. ಅವರು ಕಾಡಿನ ಮರದ   ತೊಗಟೆಯಿಂದ ಸ್ವತಃ ತಯಾರಿಸಿದ ಚೊಗರು ಅತ್ಯಂತ ಶ್ರೇಷ್ಠ ಮಟ್ಟದ್ದಾಗಿರುತ್ತಿತ್ತು. ಹಾಗೆಯೇ ಅವರು ಅಡಿಕೆಯನ್ನು ಬೇಯಿಸುವ ಹದವೂ ತುಂಬಾ ಉನ್ನತ ಮಟ್ಟದ್ದಾಗಿತ್ತುನಮ್ಮ ತಂದೆಯವರಿಗೆ ಗಣೇಶಯ್ಯನವರ ಶಹಬಾಶ್ ಗಿರಿ ಸಿಕ್ಕಿತು. ಮಾತ್ರವಲ್ಲ ಅವರು ನಮ್ಮ ತಂದೆಯವರಿಗೆ  ಅಡಿಕೆಯನ್ನು ಪ್ರತ್ಯೇಕ ಮೂಟೆಮಾಡಿ ಶಿವಮೊಗ್ಗೆಯ ಮಂಡಿಗೆ ಕಳಿಸಬೇಕೆಂದು ಸಲಹೆ ನೀಡಿದರು. ಅದರಂತೆ ಮಾಡಿದಾಗ ನಮ್ಮ ಅಡಿಕೆಗೆ ಮಂಡಿಯಲ್ಲಿ ವರ್ಷಕ್ಕೆ ಅತ್ಯಂತ ಉನ್ನತ ಬೆಲೆ ಸಿಕ್ಕಿತಂತೆ.

ನನಗೆ ಗಣೇಶಯ್ಯನವರ ಕೊನೆಯ ದಿನಗಳು ಹೇಗೆ ಕಳೆದುವೆನ್ನುವುದು ನೆನಪಿಗೆ ಬರುತ್ತಿಲ್ಲ. ನಾನಾಗ ಹೊಕ್ಕಳಿಕೆಯಲ್ಲಿ ನಮ್ಮ ಗೌರಕ್ಕನ  ಮನೆಯಲ್ಲಿದ್ದು ಬಸವಾನಿಯಲ್ಲಿದ್ದ ಮಾಧ್ಯಮಿಕ ಶಾಲೆಗೆ ಹೋಗುತ್ತಿದ್ದೆ. ಪ್ರತಿ ಶನಿವಾರ ನನ್ನ  ಎರಡನೇ ಅಕ್ಕ ರುಕ್ಮಿಣಕ್ಕನ ಮನೆಗೆ (ಹೊಸಮನೆ) ಹೋಗಿ ಒಂದು ದಿನ ಅಲ್ಲಿಯೇ ಇರುತ್ತಿದ್ದೆ. ಅದು ಪ್ರಾಯಶಃ ೧೯೬೧ನೇ ಇಸವಿ ಇರಬೇಕು. ನಾನು ಹೊಸಮನೆ ಪ್ರವೇಶಿಸುತ್ತಿದ್ದಂತೆ ನನಗೆ ರುಕ್ಮಿಣಿಅಕ್ಕನ ಕಣ್ಣಲ್ಲಿ ನೀರು ಕಾಣಿಸಿತು. ಅವಳು ನನಗೆ ಗಣೇಶಯ್ಯನವರು ಶಿವಮೊಗ್ಗೆಯಲ್ಲಿ ತೀರಿಕೊಂಡ ಸಮಾಚಾರ ತಿಳಿಸಿದಳು. ಸಮಾಚಾರ ಪತ್ರಿಕೆಗಳಲ್ಲೂ ಪ್ರಕಟವಾಗಿತ್ತಂತೆ. ಪತ್ರಿಕೆಗಳಲ್ಲಿ ಅವರನ್ನು ಮಲೆನಾಡಿನ ಓರ್ವ ಪ್ರಸಿದ್ಧ ವ್ಯಕ್ತಿಯೆಂದು ಬಣ್ಣಿಸಲಾಗಿತ್ತಂತೆ. ಹೆಸರಿಗೆ ಅವರು ಅತ್ಯಂತ ಅರ್ಹರಾಗಿದ್ದರೆಂಬುವುದರಲ್ಲಿ ಯಾವುದೇ ಸಂಶಯವಿರಲಿಲ್ಲ.
                                            ಮಧ್ಯದಲ್ಲಿರುವವರು ಎಲ್ಲಪ್ಪಯ್ಯನ ತಂಗಿ ಹಾಗೂ ನಮ್ಮಮ್ಮನ ಅಜ್ಜಿ  ಗೌರಮ್ಮ (ಬೂರಮ್ಮ)

                                                   ಗಣೇಶಯ್ಯನವರ ಪತ್ನಿ ಕಾವೇರಮ್ಮ 
                                          (ಫೋಟೋಗಳು ನಮ್ಮ ದೊಡ್ಡಣ್ಣ ರಾಮಕೃಷ್ಣನವರ ಸಂಗ್ರಹದಿಂದ)
ಗಣೇಶಯ್ಯನವರ ಮರಣದೊಂದಿಗೆ ನಮ್ಮೂರಿನಲ್ಲಿ ಒಂದು ಯುಗವೇ ಕಳೆದು ಹೋಯಿತೆಂದರೆ ಅತಿಶಯೋಕ್ತಿಯಾಗಲಾರದುಬೆಳವಿನಕೊಡಿಗೆ ಮನೆಯ ಸಂಪ್ರದಾಯಗಳು ಅವರ ತಮ್ಮಂದಿರಾದ ತಿಮ್ಮಪ್ಪಯ್ಯ ಮತ್ತು ವೆಂಕಪ್ಪಯ್ಯನವರ ನೇತೃತ್ವದಲ್ಲಿ ಮುಂದುವರೆದುವು. ಆದರೆ  ಊರಿನಲ್ಲಿ ಗಣೇಶಯ್ಯನವರ ಸ್ಥಾನಕ್ಕೆ ಬರಲು ಬೇರೆ ಯಾರಿಗೂ ಅವರ ಮಟ್ಟದ  ಅರ್ಹತೆ ಇರಲಿಲ್ಲ ಮತ್ತು ಯಾರೂ ಬರಲೂ ಇಲ್ಲ. ಇಂದು ಗಣೇಶಯ್ಯನವರ ಧೀಮಂತ ವ್ಯಕ್ತಿತ್ವ ಕೇವಲ ಒಂದು ನೆನಪು ಮಾತ್ರ. ದೇವರು ಅವರ ಆತ್ಮಕ್ಕೆ ಶಾಂತಿಯನ್ನೀಯಲಿ.
----ಮುಂದುವರಿಯುವುದು ---





Thursday, April 20, 2017

ನನ್ನ ಬಾಲ್ಯ


ಅಧ್ಯಾಯ ೨೧
ನಾವು ನಮ್ಮ ಅಮ್ಮನ ಬಾಯಿಂದ ಕೇಳಿದ ನಮ್ಮೂರಿನ ಹಳೆ ಕಾಲದ ಕಥೆಗಳು ಯಾವಾಗಲೂ ನಮ್ಮ ಕುತೂಹಲವನ್ನು ಕೆರಳಿಸುವಂತಹವೇ ಆಗಿರುತ್ತಿದ್ದವು. ಎಲ್ಲಪ್ಪಯ್ಯನವರ ಕಥೆಯೂ ಅಂತಹದೇ ಆಗಿತ್ತು. ಒಬ್ಬ ದೃಢಕಾಯ ವ್ಯಕ್ತಿಯಾಗಿದ್ದ ಅವರು ಸ್ವಲ್ಪ ಸಮಯದಲ್ಲೇ ತಮ್ಮ ಕಾಲಿನ ಕಟ್ಟುಗಳನ್ನು ಬಿಡಿಸಿಕೊಳ್ಳುವುದರಲ್ಲಿ ಯಶಸ್ವಿಯಾದರು. ಆದರೆ ಎಷ್ಟು ಕಷ್ಟಪಟ್ಟರೂ ತಮ್ಮ ಕೈಕಟ್ಟುಗಳನ್ನು ಬಿಡಿಸಿಕೊಳ್ಳಲಾಗಲಿಲ್ಲ. ಆದ್ದರಿಂದ ಕಣ್ಣಿನ ಕಟ್ಟುಗಳನ್ನೂ ಬಿಚ್ಚಿಕೊಳಲಾರದೆ ಕುರುಡರಂತಾಗಿಬಿಟ್ಟರು. ಆದರೆ ಅವರೆಷ್ಟು ಸಾಹಸಿಯೆಂದರೆ ಕೇವಲ ತಮ್ಮ ನೆನಪಿನ ಶಕ್ತಿಯಿಂದಲೇ ಅವರು ಒಂದು ಮೈಲಿಗೂ ಹೆಚ್ಚು ದೂರ ನಡೆದು ಅವರಿಗೆ ಇಷ್ಟವಾದ ಒಬ್ಬರ ಮನೆಗೆ ಹೋಗಿ ತಮ್ಮ ಕಣ್ಣಿನ ಕಟ್ಟುಗಳನ್ನು ಬಿಚ್ಚಿಸಿಕೊಂಡರಂತೆ!

ನಮ್ಮ ಅಮ್ಮನಿಗೆ ದರೋಡೆಗಾರರು ಆಮೇಲೆ ಸಿಕ್ಕಿಬಿದ್ದರೇ ಎಂಬ ವಿಷಯ ತಿಳಿದು ಬರಲಿಲ್ಲ. ಆದ್ದರಿಂದ ಎಲ್ಲಪ್ಪಯ್ಯನವರ ಅಷ್ಟೊಂದು ಸಂಪತ್ತು ಕರಗಿ ಹೋಗಿದ್ದು ಸತ್ಯವಾಗಿತ್ತು. ಆದರೆ ನಮ್ಮೂರಿನಲ್ಲಿ ಹಣ ಹುಗಿದಿಡುವ ಸಂಪ್ರದಾಯ ಮೊದಲಿಂದ ಇದ್ದದ್ದರಿಂದ   ಎಲ್ಲಪ್ಪಯ್ಯನವರೂ ತಮ್ಮ ಸಂಪತ್ತನ್ನು ಬೇರೆ ಬೇರೆ ಕಡೆ ಇಟ್ಟಿದ್ದಿರಬೇಕೆಂದು ಒಂದು ಊಹೆ. ಅಲ್ಲದೇ ಅವರ ಜಮೀನಿನಿಂದ ವಾರ್ಷಿಕ ಆದಾಯವೇನು ಸಾಮಾನ್ಯ ಮಟ್ಟದ್ದಾಗಿರಲಿಲ್ಲ. ಒಟ್ಟಿನಲ್ಲಿ ಸ್ವಲ್ಪ ಕಾಲದಲ್ಲೇ ಅವರ  ಸಂಪತ್ತು ಮೊದಲಿನ ಮಟ್ಟ ತಲುಪಿರಬೇಕು.

ನಾನು ನನ್ನ ಬಾಲ್ಯದಲ್ಲಿ ನೋಡಿದ ಬೆಳವಿನಕೊಡಿಗೆಯಲ್ಲಿ ಎಲ್ಲಪ್ಪಯ್ಯನ ಕಾಲ ಮುಗಿದು ಅವರ ಮೂರು ಗಂಡು ಮಕ್ಕಳಲ್ಲಿ ಹಿರಿಯರಾದ ಗಣೇಶಯ್ಯನವರ ಮನೆ ಆಡಳಿತವೂ ಕೊನೆಗೊಂಡಿತ್ತು. ಅವರ ತಮ್ಮಂದಿರಾದ ತಿಮ್ಮಪ್ಪಯ್ಯ ಮತ್ತು ವೆಂಕಪ್ಪಯ್ಯನವರು ಜಂಟಿಯಾಗಿ ಮನೆ ಆಡಳಿತ ನೆಡಸುತ್ತಿದ್ದರು. ಗಣೇಶಯ್ಯನವರ ಒಬ್ಬಳೇ ಮಗಳು ಒಂದು ಅಪಘಾತದಲ್ಲಿ ತೀರಿಕೊಂಡ ನಂತರ ಅವರು ತಮ್ಮ ಪತ್ನಿ ಕಾವೇರಮ್ಮ ನವರೊಡನೆ ಶಿವಮೊಗ್ಗ ಪೇಟೆಯಲ್ಲಿ ಸ್ವಂತ ಮನೆ ಮಾಡಿಕೊಂಡು ವಾಸಿಸುತ್ತಿದ್ದರು. ಆದರೆ ಅವರು ಅಲ್ಲಿಂದಲೇ ಮನೆಯ ಹಣಕಾಸು ಇತ್ಯಾದಿಗಳ ರಿಮೋಟ್ ಕಂಟ್ರೋಲ್ ಮಾಡುತ್ತಿದ್ದರು. ಅವರ ಪತ್ನಿ ಕಾವೇರಮ್ಮ ಕಾನೂರಿನ ಶ್ರೀಮಂತ ಸುಬ್ಬರಾಯರ ಸಹೋದರಿ.

ಗಣೇಶಯ್ಯನವರು ಒಬ್ಬ ಆಜಾನುಬಾಹು ವ್ಯಕ್ತಿ . ಅವರ ವ್ಯಕ್ತಿತ್ವ ಬಾಹುಬಲಿಯನ್ನು ಹೋಲುತ್ತಿದ್ದು ಸಾಮಾನ್ಯ ಪುರುಷರಿಗೆ ಅವರ ಮುಂದೆ ನಿಲ್ಲುವ  ಧೈರ್ಯ  ಕೂಡ ಬರುತ್ತಿರಲಿಲ್ಲ. ಅವರ ಧ್ವನಿ ಕೂಡ ಅತ್ಯಂತ ಅಧಿಕಾರದಿಂದ ಕೂಡಿರುತ್ತಿತ್ತು. ಕಾವೇರಮ್ಮನವರು ಮಹಾರಾಣಿಯ ಲಕ್ಷಣ ಹೊಂದಿದ್ದು ನೋಡುವರಿಗೆ ಪ್ರೀತಿ ಮತ್ತು ಮಮತೆಯ ಸಾಕಾರವಾಗಿ ಕಾಣುತ್ತಿದ್ದರು. ದಂಪತಿಗಳು ತಮ್ಮೊಡನೆ ಮನೆಯ  ಕೆಲವು  ಗಂಡು ಮತ್ತು ಹೆಣ್ಣು ಮಕ್ಕಳನ್ನು ಕರೆದುಕೊಂಡು ಹೋಗಿ ಶಿವಮೊಗ್ಗೆಯ ಶಾಲೆಗಳಲ್ಲಿ ಓದಿಸುತ್ತಿದ್ದರು. ಅಲ್ಲದೆ ಮನೆಯಲ್ಲಿ ವರ್ಷವಿಡೀ ನಡೆಯುವ ಹಬ್ಬ ಹಾಗೂ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ನವರಾತ್ರಿ ಹಬ್ಬ ಮತ್ತು ಅನಂತ ಚತುರ್ದಶಿ ಅವುಗಳಲ್ಲಿ ಮುಖ್ಯವಾದ ಹಬ್ಬಗಳು.

ನಮ್ಮೂರಿನ ಇತರ ಮನೆಗಳಂತೆ ಬೆಳವಿನಕೊಡಿಗೆ ಮನೆಗೆ ಕೂಡ ಮನೆಯಿಂದ ಸ್ವಲ್ಪ ದೂರದಲ್ಲಿದ್ದ ಒಂದು ಕೆರೆಯಿಂದ ನೀರು ವರ್ಷವಿಡೀ ಹರಿದು ಬರುತ್ತಿತ್ತು. ಮನೆಯ ಪಕ್ಕದಲ್ಲಿದ್ದ ಒಂದು ದೊಡ್ಡ ಗೋಶಾಲೆ ಹಸು ಕರುಗಳಿಂದ ತುಂಬಿರುತ್ತಿತ್ತು. ಅಂದಿನ ಮಲೆನಾಡಿನಲ್ಲಿ ಮನೆಯಲ್ಲಿ ಜನಿಸಿದ ಮಕ್ಕಳಲ್ಲಿ ಹೆಣ್ಣು ಅಥವಾ ಗಂಡು ಎಂಬ ಬೇಧಭಾವ ಇರಲಿಲ್ಲ. ಆದರೆ ಹಸುಗಳು ಕರು ಹಾಕಿದಾಗ ಹೆಣ್ಣು ಕರುವಿನ ಮೇಲಿದ್ದ ಮಮತೆ ಗಂಡಿನ ಮೇಲಿರಲಿಲ್ಲ. ಅದಕ್ಕೆ ಕಾರಣ ಹೆಣ್ಣು ಕರುಗಳು ಮುಂದೆ ಹಸುಗಳಾಗಿ ಬೆಳೆದು ಹಾಲನ್ನೀಯುವುದು. ಅಲ್ಲದೆ ಹೆಣ್ಣು ಕರುಗಳು ಸಾಮಾನ್ಯವಾಗಿ ಸಾಧುಗಳಾಗಿದ್ದರೆ ಗಂಡು ಕರುಗಳು ಬೇಗನೆ ಪೋಲಿ ಪೋಕರಿಗಳಾಗುತ್ತಿದ್ದವು. ಬೆಳವಿನಕೊಡಿಗೆಯಲ್ಲಿ ಅವುಗಳಿಗೆ  ಒಂದು ವಿಶೇಷ ವ್ಯವಸ್ಥೆಯಿತ್ತು.

ಗಂಡು ಕರುಗಳನ್ನು ಅವು ಅಮ್ಮನ ಮೊಲೆ ಹಾಲು ಕುಡಿಯುವುದನ್ನು ನಿಲ್ಲಿಸಿದೊಡನೆ ನಮ್ಮ ಮನೆಯ ಹತ್ತಿರವಿದ್ದ ಒಂದು "ಶಿಶುವಿಹಾರಕ್ಕೆ" ಸ್ಥಳಾಂತರಿಸಲಾಗುತ್ತಿತ್ತು. ಹೆಣ್ಣು ಕರುಗಳು ಅಮ್ಮನೊಟ್ಟಿಗೆ ತವರು ಮನೆಯಲ್ಲೇ ವಾಸ ಮುಂದುವರಿಸುವ ಹಕ್ಕನ್ನು ಹೊಂದಿದ್ದವು. ಆದರೆ ಬಡಪಾಯಿಗಳಾದ ಗಂಡುಕರುಗಳು ಶಿಶುವಿಹಾರ ಸೇರಲೇ ಬೇಕಿತ್ತು. ಶಿಶುವಿಹಾರ ಒಂದು ಹಾಸ್ಟೆಲಿಗೆ ಸಮಾನವಾಗಿತ್ತು. ಕನ್ನಡದಲ್ಲಿ ಅದಕ್ಕೆ ಕೂಡುಕೊಟ್ಟಿಗೆ ಎಂಬ ಹೆಸರಿತ್ತು. ಅದರ ವಾರ್ಡನ್ ಶೇಷ ಎಂಬ ಹೆಸರಿನ ಹಿರಿಯ ನೌಕರ.

ಹೆಣ್ಣು ಕರುಗಳನ್ನು ಕೊಟ್ಟಿಗೆಯಲ್ಲಿ ಬೇರೆ ಬೇರೆಯಾಗಿ ಕಟ್ಟಿದ್ದರೆ ಕೂಡುಕೊಟ್ಟಿಗೆಯಲ್ಲಿದ್ದ ಗಂಡು ಕರುಗಳು ಯಾವುದೇ ಹಗ್ಗವಿಲ್ಲದೆ ಸ್ವತಂತ್ರವಾಗಿರುತ್ತಿದ್ದವು. ಬೆಳಿಗ್ಗೆ ಮುಂಚೆ ಶೇಷ ಅವುಗಳಿಗೆ ಹುಲ್ಲು ತಿನ್ನಿಸಿ ಕೊಟ್ಟಿಗೆ ಬಾಗಿಲು ತೆಗೆದು ಚೌಡನೊಡನೆ ಮೇವಿಗೆ ಕಳಿಸುತ್ತಿದ್ದ. ಸಂಜೆ ಅವುಗಳನ್ನು ಪುನಃ ಕೊಟ್ಟಿಗೆಯೊಳಗೆ ಸೇರಿಸಿ ಬಾಗಿಲು ಹಾಕಿ  ಬಿಡುತ್ತಿದ್ದ. ಅಮ್ಮನ ಮತ್ತು ಮನೆಯವರ ಮಮತೆಯಿಲ್ಲದ ಕರುಗಳು ತುಂಬಾ ತುಂಟಾಟದಲ್ಲಿ ತೊಡಗಿರುತ್ತಿದ್ದವು. ಅವುಗಳಲ್ಲಿ ಹಿರಿಯ ಕರುಗಳು ಗಂಭೀರವಾಗಿ ಮಲಗಿದ್ದರೆ ಕಿರಿಯವು ಯಾವಾಗಲೂ ಗುದ್ದಾಟದಲ್ಲಿ ತೊಡಗಿರುತ್ತಿದ್ದವು. ಹಿರಿಯ ಕರುಗಳನ್ನು ಸ್ವಲ್ಪ ಸಮಯದ ನಂತರ ಮಕ್ಕಿ ಗದ್ದೆಯ ಹತ್ತಿರವಿದ್ದ ಎತ್ತಿನ ಕೊಟ್ಟಿಗೆಗೆ ಪ್ರಮೋಷನ್ ಮಾಡಿ ಕಳಿಸಲಾಗುತ್ತಿತ್ತು. ಅದೊಂದು ಟ್ರೇನಿಂಗ ಸೆಂಟರ್ ಆಗಿತ್ತು. ಅಲ್ಲಿ ಅವುಗಳಿಗೆ ಗದ್ದೆಯಲ್ಲಿ ಹೂಟೆ ಮಾಡುವ ವಿಶೇಷ ತರಬೇತಿ ನೀಡಲಾಗುತ್ತಿತ್ತು.

ಕೂಡುಕೊಟ್ಟಿಗೆಯ ಸಮೀಪದಲ್ಲೇ ವಾರ್ಡನ್ ಶೇಷನಿಗೆ ಒಂದು ಬಿಡಾರದ ವ್ಯವಸ್ಥೆಯಿತ್ತು. ಅದರ ಹತ್ತಿರವಿದ್ದ ಖಾಲಿ ಜಾಗದಲ್ಲಿ ಶೇಷ ಅನೇಕ ತರಕಾರಿಗಳನ್ನು ಬೆಳೆಯುತ್ತಿದ್ದ. ಅವುಗಳಲ್ಲಿ ಬಸಳೆ ಎಂಬ ತರಕಾರಿ ವಿಶೇಷದ್ದಾಗಿತ್ತು. ಯಾವುದೊ ಕಾರಣದಿಂದ ಬಸಳೆಯನ್ನು ಕಾಲದಲ್ಲಿ ಅಡಿಗೆಗೆ ನಿಷಿದ್ಧ ಮಾಡಲಾಗಿತ್ತು. ಶೇಷ ಅದನ್ನು ನಮ್ಮ ಮನೆಗೆ ತುಂಬಾ ಗುಟ್ಟಾಗಿ ಸಪ್ಲೈ ಮಾಡುತ್ತಿದ್ದ. ನಮ್ಮ ಅಮ್ಮ ಬಸಳೆ ಸೊಪ್ಪಿನಿಂದ ತುಂಬಾ ರುಚಿಕರವಾದ ಸಾಂಬಾರ್ ಮತ್ತು ಸಾಸಿವೆ (ತಂಬುಳಿಮಾಡುತ್ತಿದ್ದಳು. ಶೇಷ ಕೇವಲ ಒಂದು ಲೋಟ ಕಾಫಿ  ಮತ್ತು ಎಲೆ ಅಡಿಕೆಗಳಿಂದ ತೃಪ್ತಿ ಹೊಂದುತ್ತಿದ್ದ. ಶೇಷನಿಗೆ ಇನ್ನೂ ಬೇರೆ ಕೆಲಸಗಳಿದ್ದುವು. ಅದರಲ್ಲಿ ನಮ್ಮ ಮನೆಯ ಹತ್ತಿರವಿದ್ದ ಬೆಳವಿನಕೊಡಿಗೆಯವರ ತೋಟಕ್ಕೆ ಕೆರೆ ನೀರು ಬಿಡುವುದೂ ಸೇರಿತ್ತು. ಶೇಷನ ವ್ಯಕ್ತಿತ್ವ ನೋಡಲು ಚೋಮನ ದುಡಿ ಸಿನಿಮಾದ ಚೋಮನಂತೇ ಇತ್ತು.

ನಮ್ಮೂರಿನ ಮುಖ್ಯ ದೇವಸ್ಥಾನ ಗಣಪತಿಕಟ್ಟೆ ಬೆಳವಿನಕೊಡಿಗೆ ಮನೆಯವರ ಸುಪರ್ದಿನಲ್ಲಿತ್ತು. ಅದರ ದಿನನಿತ್ಯ ಪೂಜೆಯ ಜವಾಬ್ದಾರಿಯನ್ನು ನಡುವಿನ ಮನೆಯ ಫಣಿಯಪ್ಪಯ್ಯನವರಿಗೆ ವಹಿಸಲಾಗಿತ್ತು. ಪ್ರತಿ ದಿನದ ಪೂಜೆಯ ನಂತರ ಹಣ್ಣು ಕಾಯಿಯನ್ನು  ಬೆಳವಿನಕೊಡಿಗೆ ಮನೆಗೆ ತಲುಪಿಸಬೇಕಿತ್ತು. ಅದಕ್ಕಾಗಿ ಅವರಿಗೆ ವರ್ಷಕ್ಕೆ ಎಷ್ಟು ಭತ್ತವನ್ನು ಕೊಡಬೇಕೆಂದು ನಿಗದಿ ಮಾಡಲಾಗಿತ್ತು. ಪ್ರತಿ ಚೌತಿ ತಿಥಿಯಂದು ಗಣಪತಿಗೆ ವಿಶೇಷ ಪೂಜೆ ಮಾಡಿ ಪ್ರತಿಯೊಂದು ಮನೆಗೂ ಹಣ್ಣು ಕಾಯಿ ತಲುಪಿಸಲಾಗುತ್ತಿತ್ತು. ಅದಕ್ಕೆ ಪ್ರತಿ ಮನೆಯವರೂ ನಿಗದಿ ಮಾಡಿದಷ್ಟು ಹಣ ನೀಡ ಬೇಕಿತ್ತು. ದೀಪಾವಳಿ ಹಬ್ಬದ ಸಮಯದಲ್ಲಿ ಬೇರೆ ಬೇರೆ ಮನೆಗಳ ವತಿಯಿಂದ ದೇವಸ್ಥಾನದಲ್ಲಿ ದೀಪಾರಾಧನೆ ನಡೆಯುತ್ತಿತ್ತು. ಆಗ ನಾವು ಎತ್ತಿನ ಗಾಡಿಯಲ್ಲಿ ಅಲ್ಲಿಗೆ ತಲುಪುತ್ತಿದ್ದೆವು.
----ಮುಂದುವರಿಯುವುದು ---