Thursday, April 6, 2017

ನನ್ನ ಬಾಲ್ಯ


ಅಧ್ಯಾಯ ೧೯
ಚೌಡನ ಸಾವು ನಮ್ಮೂರಿನವರ ದೃಷ್ಟಿಯಲ್ಲಿ ಯಾರೂ ಪುನಃ ತುಂಬಲಾರದ ಒಂದು ವ್ಯಕ್ತಿತ್ವದ ನಿರ್ಗಮನವಾಗಿತ್ತು. ಅವನ ಮಗ ತಿಪ್ಪ ವಂಶ ಪಾರಂಪರ್ಯವಾಗಿ ಆ ಸ್ಥಾನಕ್ಕೇನೋ ಬರಲೇ ಬೇಕಾಯಿತು. ಆದರೆ ಅಪ್ಪ ಮಗನ ವ್ಯಕ್ತಿತ್ವಗಳಲ್ಲಿ ಯಾವುದೇ ಸಾಮ್ಯಗಳಿರಲಿಲ್ಲ. ತಿಪ್ಪನ  ಜೀವನದ ಆದರ್ಶಗಳು ತೀರಾ ಬೇರೆಯಾಗಿದ್ದವು. ಅವನನ್ನು ಹಾಗೆಯೇ ಬಿಟ್ಟಿದ್ದರೆ ಒಬ್ಬ ಉಂಡಾಡಿ ಗುಂಡನಂತೆ ಊರು ತಿರುಗುವ ಆಸಕ್ತಿ ಅವನಿಗಿತ್ತು. ದನ ಮೇಯಿಸುವ ಕಸುಬಿನಲ್ಲಿ ಅವನಿಗೆ ಯಾವುದೇ ಆಸಕ್ತಿ ಇರಲಿಲ್ಲ. ಆದರೆ ಅವನಿಗೆ ನಿರ್ವಾಹವಿಲ್ಲದೆ ಕುಲ ಕಸುಬನ್ನು ಮುಂದುವರಿಸ ಬೇಕಾಗಿ ಬಂತು.
ತಿಪ್ಪನೇನೋ ತನ್ನ ಕುಲಕಸುಬನ್ನು ಜೀವನೋಪಾಯಕ್ಕಾಗಿ ಮುಂದುವರೆಸಿದ. ಆದರೆ ಇನ್ನೂ ನಮ್ಮಂತೆ ಶಾಲೆಗೆ ಹೋಗುವ ವಯಸ್ಸಿನವನಾದ ಅವನಿಗೆ ಅಪ್ಪನು ಬಿಟ್ಟು ಹೋದ ಸಂಸಾರವೊಂದು ದೊಡ್ಡ ಹೊರೆಯೇ ಆಗಿತ್ತು. ಸಾಲದುದಕ್ಕೆ ಅವನ ಮೇಲೆ ಇನ್ನೊಂದು ಸಿಡಿಲೆರಗಿತು. ಮೇಲ್ಜಾತಿಯವರಂತೆ ಅವನ ಜಾತಿಯ ಹೆಂಗಸರಿಗೆ ಯಾವುದೇ ಕಟ್ಟುಪಾಡುಗಳಿರಲಿಲ್ಲ. ಹಾಗಾಗಿ ಅವನ ಅಮ್ಮನಾದ ಕುಂದಿ ಬಹು ಬೇಗನೆ ಸುಬ್ಬನೆಂಬುವನೊಡನೆ ಮರುಮದುವೆ ಮಾಡಿಕೊಂಡು ಮನೆ ಬಿಟ್ಟು ಹೋಗಿಬಿಟ್ಟಳು! ಹೀಗೆ ತಮ್ಮ ಮತ್ತು ತಂಗಿಯರನ್ನು ನೋಡಿಕೊಳ್ಳುವ  ಸಂಪೂರ್ಣ ಜವಾಬ್ದಾರಿ ತಿಪ್ಪನಿಗೆ ಅಂಟಿಕೊಂಡುಬಿಟ್ಟಿತು.

ತಿಪ್ಪ ಅವನಿಗಿಂತ ಸ್ವಲ್ಪ ಚಿಕ್ಕವರಾದ ನಮ್ಮೊಡನೆ ತನ್ನ ಕಷ್ಟ ಸುಖಗಳನ್ನು ಹೇಳಿಕೊಳ್ಳುತ್ತಿದ್ದ. ಅವನು ನಮ್ಮನ್ನು ಸಣ್ಣಯ್ಯ ಎಂದು ಕರೆಯುತ್ತಿದ್ದ. ಅವನ ಪ್ರಕಾರ ನಮಗೆ ತಿಳಿಯದಂತಹ ಇನ್ನೊಂದು ಮುಖ್ಯ ಜವಾಬ್ದಾರಿ ಅವನಿಗಿತ್ತು. ಅದು ಸತ್ತುಹೋದ ಹಸುಗಳನ್ನು ಗುಡ್ದಕ್ಕೊಯ್ದು ಹುಗಿಯುವಷ್ಟು ಸುಲಭದ್ದಾಗಿರಲಿಲ್ಲ. ಊರಿನಲ್ಲಿ ಯಾವ ಮನುಷ್ಯರಾದರು ತೀರಿಕೊಂಡರೆ ಮೊದಲ ಕರೆ ತಿಪ್ಪನಿಗೆ ತಲುಪುತ್ತಿತ್ತು. ಅವನು ಕಾಡಿನಿಂದ ಕಟ್ಟಿಗೆ ತೆಗೆದುಕೊಂಡುಹೋಗಿ ನದಿ ತೀರದಲ್ಲಿ ಚಿತೆ ತಯಾರು ಮಾಡಬೇಕಿತ್ತು. ತಿಪ್ಪನ ಪ್ರಕಾರ ಅವನ ಜವಾಬ್ದಾರಿ ಪುರೋಹಿತರ ಜವಾಬ್ದಾರಿಗಿಂತ ಹೆಚ್ಚಿನದಾಗಿತ್ತು. ಏಕೆಂದರೆ ಅವನು ತಯಾರಿಸಿದ ಚಿತೆಯಲ್ಲಿ ದೇಹ ಸಂಪೂರ್ಣ ದಹಿಸುವವರೆಗೆ ಪುರೋಹಿತರ ಎಷ್ಟೇ ದೀರ್ಘ ಮಂತ್ರಪಠಣ ಆತ್ಮವನ್ನು ಸ್ವರ್ಗಕ್ಕೆ ಸೇರಿಸುವುದರಲ್ಲಿ ಯಶಸ್ವಿಯಾಗುತ್ತಿರಲಿಲ್ಲ! ಹಾಗಾಗಿ ಊರಿನ ಎಷ್ಟೋಜನ ವಯಸ್ಸಾದವರು ತಮ್ಮ ಸಾವಿನ ಸಮಯದಲ್ಲಿ ತಿಪ್ಪ ಊರಿನಲ್ಲಿ ಹಾಜರಿರುವಂತೆ ದೇವರನ್ನು ಬೇಡಿಕೊಳ್ಳುತ್ತಿದ್ದರಂತೆ!

ತಿಪ್ಪನಿಗೆ ದನ ಮೇಯಿಸುವುದರಲ್ಲಿ ಆಸಕ್ತಿ ಇಲ್ಲದಿದ್ದರೂ ಅವನಿಗೆ ಒಳ್ಳೆ ಬಟ್ಟೆಗಳನ್ನು ಧರಿಸಬೇಕೆಂಬ ಶೋಕಿ ಇತ್ತು. ಅವನ ರೂಪ ಆಗಿನ ಕನ್ನಡ ಸಿನಿಮಾದ ಯುವನಟ ಸುದರ್ಶನನನ್ನು ಹೋಲುತ್ತಿತ್ತು. ಅವನು ಹೇಗಾದರೂ  ತನ್ನ ವಯಸ್ಸಿನ ಹುಡುಗರ ಹಳೆ ಬಟ್ಟೆಗಳಿಗೆ ಅಡ್ವಾನ್ಸ್ ಬುಕಿಂಗ್ ಮಾಡಿ ಬಿಡುತ್ತಿದ್ದ. ಆದರೆ ಅವನೂ ತಂದೆ ಚೌಡನಂತೆ ಅವುಗಳನ್ನು ಎಂದೂ  ತೊಳೆಯುವ ಗೋಜಿಗೆ ಹೋಗುತ್ತಿರಲಿಲ್ಲ! ನಮ್ಮ ಅಣ್ಣ ಹಲವು ಬಾರಿ ಅವನ ಕೈಯಲ್ಲಿ ಒಂದು ಸೋಪನ್ನು ಇಡಲು ನೋಡುತ್ತಿದ್ದರು. ಆದರೆ ಅವನು ಅದನ್ನು ಅಲ್ಲಿಯೇ ಬಿಟ್ಟು ಪರಾರಿಯಾಗುತ್ತಿದ್ದ!

ತಿಪ್ಪನಿಗೆ ಇದ್ದಕ್ಕಿದ್ದಂತೆ ಸಿನಿಮಾದ ಹುಚ್ಚು ಹಿಡಿಯಿತು. ಆ ದಿನಗಳಲ್ಲಿ ಪರ್ಮನೆಂಟ್ ಸಿನಿಮಾ ಥೀಯೇಟರ್ ತೀರ್ಥಹಳ್ಳಿಯಲ್ಲಿ ಮಾತ್ರ ಇತ್ತು. ಕೊಪ್ಪ, ಶೃಂಗೇರಿ ಮತ್ತು ಜಯಪುರದಲ್ಲಿ ಕೇವಲ ಟೂರಿಂಗ್ ಟಾಕೀಸ್ ಇರುತ್ತಿದ್ದವು. ಟಾರ್ಪಾಲಿನಿಂದ ಮಾಡಿದ  ಈ ಟಾಕೀಸ್ ಮಲೆನಾಡಿನ ಭಾರೀ ಮಳೆಯನ್ನೂ ತಡೆಯುವಂತಿರಲಿಲ್ಲ. ಹಾಗಾಗಿ  ಅವುಗಳು ಮಳೆಗಾಲದಲ್ಲಿ ಮುಚ್ಚಿರುತ್ತಿದ್ದವು. ತಿಪ್ಪ ಮೊದಮೊದಲಿಗೆ ಜಯಪುರದಲ್ಲಿ ಸಿನಿಮಾ ನೋಡಲು ಹೋಗುತ್ತಿದ್ದ. ಆದರೆ ಅಲ್ಲಿನ ಟಾಕೀಸ್ ಕಾಫಿ ಮತ್ತು ಟೀ ಎಸ್ಟೇಟ್ಗಳಲ್ಲಿ ಕೆಲಸ ಮಾಡುತ್ತಿದ್ದ ತಮಿಳು ಕೆಲಸಗಾರರಿಗಾಗಿ ಕೇವಲ ತಮಿಳು ಸಿನಿಮಾಗಳನ್ನು ಪ್ರದರ್ಶನ ಮಾಡುತ್ತಿತ್ತು. ಆದ್ದರಿಂದ ತಿಪ್ಪ ಆರು ಮೈಲಿ ದೂರದ ಜಯಪುರದಿಂದ ಎಂಟು ಮೈಲಿ ದೂರದ ಶೃಂಗೇರಿಗೆ ಹೋಗತೊಡಗಿದ. ನಮಗೆ ಆಶ್ಚರ್ಯದ ವಿಷಯವೆಂದರೆ ಕೈಯಲ್ಲಿ ಪುಡಿಗಾಸಿಲ್ಲದ ತಿಪ್ಪ ಟಿಕೆಟ್ಟಿನ ಹಣ  ಹೇಗೆ ಕೊಡುತ್ತಿದ್ದ ಎನ್ನುವ ವಿಷಯ. ತಿಪ್ಪನೇ ಸ್ವತಃ ಒಮ್ಮೆ ನಮಗೆ ತನ್ನ ರಹಸ್ಯವನ್ನು ಬಯಲು ಮಾಡಿದ. ಅವನು ಟೆಂಟಿಗೆ ಬಳಸಿದ ಟಾರ್ಪಾಲಿನಲ್ಲಿ ಒಂದು ದೊಡ್ಡ ತೂತು ಇರುವುದನ್ನು ಕಂಡು ಹಿಡಿದಿದ್ದ. ಕತ್ತಲಿನಲ್ಲಿ ಅವನು ಆ ತೂತಿನ ಮೂಲಕ ಸಿನಿಮಾ ವೀಕ್ಷಿಸುವ ರಹಸ್ಯ ಟೆಂಟ್ ಮಾಲೀಕರಿಗೆ ಗೊತ್ತಿರಲಿಲ್ಲವಂತೆ!

ತಿಪ್ಪನ ಈ ರಹಸ್ಯ ಸ್ವಲ್ಪ ಕಾಲದಲ್ಲೇ ಬಯಲಾಗಿಬಿಟ್ಟಿತು. ಆದರೆ ತಿಪ್ಪನೇನು ಸಾಮಾನ್ಯ ವ್ಯಕ್ತಿ ಆಗಿರಲಿಲ್ಲ. ತನ್ನ ಮಾತು ಮತ್ತು ವ್ಯಕ್ತಿತ್ವದ ಮೂಲಕ ಅವನು ಟಾಕೀಸಿನ ಯಜಮಾನರ ಮನಸ್ಸನ್ನು ಗೆದ್ದುಬಿಟ್ಟ. ಅಲ್ಲದೆ ಅವರಿಗೆ ಕಾಡಿನಲ್ಲಿ ಸಿಗುವ ವಿಶೇಷ ಹಣ್ಣುಗಳನ್ನೂ ಮತ್ತು ತಾನೇ ತಯಾರಿಸಿದ ಕೊಳಲನ್ನು ಕೊಡತೊಡಗಿದ. ಆದ್ದರಿಂದ ಅವನಿಗೆ ಟಾಕೀಸ್ ಒಳಗೆ ನಿಂತು ಮುಫತ್ತಾಗಿ ಸಿನಿಮಾ ನೋಡುವ ಅವಕಾಶ ಸಿಕ್ಕಿ ಬಿಟ್ಟಿತು.  ತಿಪ್ಪ ಸ್ವಲ್ಪ ದಿನದಲ್ಲೇ  ಸಿನಿಮಾ ಹಾಡುಗಳನ್ನು ಹೇಳುವುದು ಮತ್ತು ನಟರ ಅಭಿನಯವನ್ನು ಅಣಕಿಸುವುದನ್ನೂ ಕಲಿತು ಬಿಟ್ಟ. ಅವನು ನಮಗಾಗಿ ಟಾಕೀಸಿನಲ್ಲಿ ದೊರೆಯುತ್ತಿದ್ದ ಸಿನಿಮಾ ಹಾಡುಗಳ ಪುಸ್ತಕಗಳನ್ನೂ ತಂದು ಕೊಡತೊಡಗಿದ. ನಾವು ಆ ಹಾಡುಗಳನ್ನು ಕಂಠಪಾಠ ಮಾಡಿ ತಮ್ಮಂದಿರ ತೊಟ್ಟಿಲು ತೂಗುವಾಗ ಜೋಗುಳವಾಗಿ ಹಾಡತೊಡಗಿದೆವು.

ಆ ದಿನಗಳಲ್ಲಿ ಬರುತ್ತಿದ್ದ ಕನ್ನಡ ಸಿನೆಮಾಗಳ ಸಂಖ್ಯೆ ತುಂಬಾ ಕಡಿಮೆ ಇತ್ತು. ಹಾಗಾಗಿ ಶೃಂಗೇರಿಯಲ್ಲಿ ಕೂಡ ತಮಿಳು ಸಿನಿಮಾಗಳು ಪ್ರದರ್ಶಿತವಾಗುತ್ತಿದ್ದವು. ಬೇಗನೆ ತಿಪ್ಪನಿಗೆ ತಮಿಳು ಸಿನೆಮಾಗಳ ಹುಚ್ಚು ಹಿಡಿಯಿತು. ಅವನ  ಪ್ರಕಾರ ಕನ್ನಡ ಸಿನಿಮಾಗಳು ತುಂಬಾ ಸಪ್ಪೆಯಂತೆ! ಆದರೆ ತಮಿಳು ಸಿನಿಮಾಗಳು ತುಂಬಾ ಸಾಹಸಭರಿತ ಹಾಗೂ ರೋಮಾಂಚಕ ಕಥೆಗಳನ್ನು ಹೊಂದಿರುತ್ತಿದ್ದವಂತೆ!  ಅವನ ಈ ಸಿದ್ದಾಂತಕ್ಕೆ ಪೂರಕವಾಗಿ ಅವನು ಕನ್ನಡ ಮತ್ತು ತಮಿಳು ಸಿನೆಮಾಗಳ ಹೆಸರುಗಳನ್ನೇ ಉದಾಹರಣೆಯಾಗಿ ಕೊಟ್ಟ. ಕನ್ನಡ ಹೆಸರುಗಳೆಂದರೆ ವಿಧಿವಿಲಾಸ, ಸ್ಕೂಲ್ ಮಾಸ್ಟರ್, ಭಕ್ತ ಮಾರ್ಖಂಡೇಯ ಮತ್ತು ಸಂತ ಸಖು ಬಾಯಿ. ಇದಕ್ಕೆ ವಿರುದ್ಧವಾಗಿ ತಮಿಳಿನ ಹೆಸರುಗಳೆಂದರೆ ವೀರ ಪಾಂಡ್ಯ ಕಟ್ಟ ಬೊಮ್ಮನ್, ನೀಲ ಮಲೈ ತಿರುಡನ್, ವಂಜಿ ಕೊಟ್ಟೈ ವಾಲಿಬನ್ ಮತ್ತು ಕಪ್ಪ  ಲೋಟ್ಟಿಯ ತಮಿಳನ್. ನಮಗೆ ಅಂದಿನ ದಿನಗಳಲ್ಲಿ ಸಾಹಸಮಯ ಕಥೆಗಳನ್ನು ಕೇಳುವುದು ಮತ್ತು ಓದುವುದು ತುಂಬಾ ಆಕರ್ಷಕ ವಿಷಯವಾಗಿತ್ತು. ಹಾಗಾಗಿ ನಮಗೆ ತಿಪ್ಪನ ಅಭಿಪ್ರಾಯದಲ್ಲಿ ಹುರುಳಿರುವುದೆಂದು ಅನಿಸಿದ್ದರಲ್ಲಿ ಆಶ್ಚರ್ಯವಿರಲಿಲ್ಲ.

ನನಗೆ ಇದ್ದಕ್ಕಿದ್ದಂತೆ ತಮಿಳು ಸಿನಿಮಾ ಹಾಡುಗಳನ್ನು ಕಲಿಯಬೇಕೆಂಬ ಹುಚ್ಚು ಹಿಡಿಯಿತು. ತಿಪ್ಪ ಕೂಡಲೇ ನನಗೆ ಒಂದು ಹಾಡನ್ನು ಕಲಿಸಿಯೇ ಬಿಟ್ಟ. ಅದು ಕೆಳಗೆ ಕಾಣಿಸಿದಂತಿತ್ತು:
"ಪೋನಾಳ್ ಪೋಗಟ್ಟುಮ್ ಪೋಡಾ
ಇಂದ ಭುವಿ ಲೀಲಯಾಯ್
ವಾಂದವರ್ ಯಾರಡಾ
ಪೋನಾಳ್ ಪೋಗಟ್ಟುಮ್ ಪೋಡಾ "
ನಾನು ಈ ಹಾಡನ್ನು ಗಟ್ಟಿಯಾಗಿ ಹೇಳುತ್ತಾ ತಮ್ಮನ ತೊಟ್ಟಿಲನ್ನು ತೂಗ ತೊಡಗಿದೆ. ನನ್ನ ಅದೃಷ್ಟಕ್ಕೆ ನನ್ನ ತಮ್ಮ ನಿದ್ದೆ ಮಾಡುವ ಬದಲಿಗೆ ನನ್ನ ಹಾಡಿಗಿಂತ ಗಟ್ಟಿಯಾಗಿ ಅಳತೊಡಗಿದ. ನನ್ನ ಅಕ್ಕ ಮಗುವಿನ ಬೊಬ್ಬೆ ಕೇಳಿ ಓಡಿ  ಬಂದಳು. ಅವಳಿಗೆ ನನ್ನ ಈ ವಿಚಿತ್ರ ಹಾಡಿನಿಂದಲೇ ಮಗು ಬೆದರಿತ್ತೆಂದು ಅನ್ನಿಸಿತು. ಅವಳು ಮೊದಲು ನನ್ನ ಹಾಡನ್ನು ನಿಲ್ಲಿಸ ಹೇಳಿ ಎರಡು ಪ್ರಶ್ನೆ ಕೇಳಿದಳು.
೧. ಈ ಹಾಡಿಗೆ ಏನಾದರೂ ಅರ್ಥವಿದೆಯೇ?
೨. ಹಾಡನ್ನು ಹಾಡುವ ಬದಲು ಕಿರುಚುವುದೇಕೆ?
ನಾನು ಅವಳಿಗೆ ಅದು ತಮಿಳು ಹಾಡೆಂದೂ ಮತ್ತು ನನ್ನ ಅಮ್ಮನ ಆಣೆಗೂ ಅದರ ಅರ್ಥ ನನಗೆ ಖಂಡಿತವಾಗಿಯೂ ಗೊತ್ತಿಲ್ಲವೆಂದೂ ಹೇಳಿದೆ.  ಮತ್ತು ನಾನು ಅದನ್ನು ತಿಪ್ಪನು ಹೇಳಿದಷ್ಟೇ ಚೆನ್ನಾಗಿ ಹೇಳುತ್ತಿರುವುದಾಗಿಯೂ ತಿಳಿಸಿದೆ. ಅಕ್ಕ ಅವಳಿಗೆ ತಮಿಳು ಭಾಷೆಯ ಮೇಲೆ ದ್ವೇಷ ಇಲ್ಲವೆಂದೂ ಆದರೆ ಜೋಗುಳಗಳು ಮಗುವಿನ ಎಳೇ ಕಿವಿಗಳಿಗೆ ಇಂಪಾಗಿರಬೇಕೆಂದೂ ತಿಳಿಹೇಳಿದಳು.

ನಾನು ತಮಿಳು ಹಾಡನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡಲು ತಯಾರಿರಲಿಲ್ಲ. ವಿಷಯ ತಿಳಿದ ತಿಪ್ಪ ನನಗೆ ಬೇರೊಂದು ಹಾಡನ್ನು ಕಲಿಸಿದ. ಅದು ಕೆಳಗೆ ಕಾಣಿಸಿದಂತಿತ್ತು:
“ನಿನ್ನಾಯ್ ಕಂಡೆ ನಾನಾಡ
ಎನ್ನೈ ಕಂಡೆ ನೀನಾಡ
ಉಲ್ಲಾಸಂ ಪಂಗು ಇಂಬ ದೀಪಾವಳಿ
ಊರಿಂಗು ಮುಗಿಲ್ದುಮ್ ಹೊನ್ ರಾಂಗ ಕಳಂಡುಮ್
ಉರವಾಡಮ್ ನೇರಮಡ “
ಈ ಹಾಡು ನನ್ನ ತಮ್ಮನ ಮೇಲೆ ಒಳ್ಳೆ ಪ್ರಭಾವ ಬೀರಿತು. ಅವನು ಅದನ್ನು ಕೇಳಿ ಬೇಗನೆ ನಿದ್ದೆ ಮಾಡತೊಡಗಿದ.
ತಿಪ್ಪ ಕೆಲಕಾಲ ತನ್ನನ್ನು ಬೇಟೆಯಲ್ಲೂ ತೊಡಗಿಸಿ ಕೊಂಡ. ಆದರೆ ಅವನ ಅದೃಷ್ಟಕ್ಕೆ ಅವನ ಕೋವಿಗೆ ಕುರ್ಕ ಬರ್ಕಗಳನ್ನು ಬಿಟ್ಟರೆ ಬೇರೆ ಯಾವುದೇ ದೊಡ್ಡ ಪ್ರಾಣಿ ಬಲಿಯಾಗಲಿಲ್ಲ. ಅವನಿಗೆ ದೇವಿ ಎಂಬ ಹುಡುಗಿಯೊಡನೆ ವಿವಾಹ ನಡೆಯಿತು. ತನ್ನ ಸಂಸಾರ ನಡೆಸುತ್ತಲೇ ತಿಪ್ಪ ಸಿನಿಮಾ ಹುಚ್ಚನ್ನು ಮುಂದುವರೆಸಿದ. ನಾವು ಅವನನ್ನು ಆಗಾಗ ಮುಂದೇನು ಮಾಡಬೇಕೆಂದಿದ್ದೀಯೆ ಎಂದು ಕೇಳುತ್ತಿದ್ದೆವು. ಆಗ ಅವನು ತನ್ನ ಜೀವನದ ಆದರ್ಶವನ್ನು ಬಯಲು ಮಾಡಿದ. ಅವನ ಪ್ರಕಾರ ಮುಂದೆ ಒಂದು ದಿನ ಯಾವುದಾದರೂ ಪರ್ಮನೆಂಟ್ ಥಿಯೇಟರಿನಲ್ಲಿ ಗೇಟ್ ಕೀಪರ್ ಆಗಬೇಕೆಂಬುದೇ ಅವನ ಪರಮಾದರ್ಶವಾಗಿತ್ತು!

ಆ ಮೇಲೆ ಕೆಲ ವರ್ಷದ ನಂತರ ತನ್ನ ಕುಲಕಸುಬನ್ನು ತಮ್ಮನಾದ ಮರಿಯನಿಗೆ ಒಪ್ಪಿಸಿ ಯಾರಿಗೂ ಹೇಳದೆ ಊರು ಬಿಟ್ಟು ಹೋಗಿಬಿಟ್ಟ. ಆದರೆ ಕೆಲ ವರ್ಷದ ನಂತರ ನಮಗೆ ಅವನು ಹಾಸನದಲ್ಲಿ ಒಂದು ಥೀಯೇಟರ್ ಒಳಗೆ ಗೇಟ್ ಕೀಪರ್ ಕೆಲಸ ಮಾಡುತ್ತಿರುವನೆಂಬ ಸಮಾಚಾರ ತಿಳಿದು ಬಂತು. ಆಶ್ಚರ್ಯವೆಂದರೆ ಅವನ ಯಾವುದೇ ಸ್ನೇಹಿತರು (ನನ್ನನ್ನೂಸೇರಿ) ತಮ್ಮ ಜೀವನದ ಆದರ್ಶವನ್ನು ಸಾಧಿಸಲಾಗಲಿಲ್ಲ. ಹೌದು. ಇದು ನಿಜ. ನಮ್ಮ ಬಾಲ್ಯ ಸ್ನೇಹಿತ ತಿಪ್ಪ ಮಾತ್ರ ತನ್ನ ಜೀವನದ ಧ್ಯೇಯವನ್ನು ಸಾಧಿಸಿ ತೋರಿಸಿದ್ದ. ಅವನೆಲ್ಲೇ ಇದ್ದರೂ ಅವನಿಗೆ ಶುಭವಾಗಲೆಂದು ಕೋರುತ್ತಾ ಈ ಅಧ್ಯಾಯವನ್ನು ಮುಗಿಸುತ್ತೇನೆ.
----ಮುಂದುವರಿಯುವುದು ---






No comments: