Wednesday, April 12, 2017

ನನ್ನ ಬಾಲ್ಯ

ಅಧ್ಯಾಯ ೨೦
ಬೆಳವಿನಕೊಡಿಗೆ ನಮ್ಮೂರಿನ ಅತ್ಯಂತ ಪುರಾತನವಾದ ಮನೆ. ನಮ್ಮೂರು ನಾನು ಮೊದಲೇ ಹೇಳಿದಂತೆ ಒಂದು ಅಡಿಕೆ ತೋಟದ ಕಣಿವೆಯಾಗಿದ್ದು ಅದರ ಪ್ರಾರಂಭದಲ್ಲಿ ಒಂದು ಬೆಟ್ಟದ ಕೆಳಗಿರುವ ಈ ಮನೆಯ ಹೆಸರು ಮತ್ತು ನಮ್ಮ ಗ್ರಾಮದ ಹೆಸರು ಒಂದೇ ಆಗಿರುವುದು ಆ ಮನೆಯ ಪ್ರಾಮುಖ್ಯತೆಯನ್ನು ತೋರಿಸುತ್ತದೆ. ಒಂದು ಕಾಲದಲ್ಲಿ  ನಮ್ಮೂರಿನ ಎಲ್ಲಾ ತೋಟಗಳು ಬೆಳವಿನಕೊಡಿಗೆ, ಪುರದಮನೆ ಮತ್ತು ಮೊದಲಮನೆ ಎಂಬ ಮೂರು ಸಂಸಾರಗಳಲ್ಲಿ ಹಂಚಿ ಹೋಗಿದ್ದವು. ಉಳಿದವರೆಲ್ಲ ಕೇವಲ ಗೇಣಿದಾರರಾಗಿದ್ದರು. ಅದರಲ್ಲಿ ಹೆಚ್ಚಿನ ತೋಟಗಳು ಬೆಳವಿನಕೊಡಿಗೆ ವಂಶದವರಿಗೆ ಸೇರಿದ್ದುವು. ಇಷ್ಟಲ್ಲದೆ ಈ ವಂಶದವರ ಜಮೀನುಗಳು ನಮ್ಮೂರಿನ ಬೇರೆ ಭಾಗಗಳಲ್ಲೂ ಹಾಗೂ ಭುವನಕೋಟೆ ಗ್ರಾಮದಲ್ಲೂ ಹರಡಿದ್ದವು. ತಲೆತಲಾಂತರದಿಂದ ಈ ವಂಶದ ಹಿರಿಯ ಯಜಮಾನರ ಹೆಸರು ಎಲ್ಲಪ್ಪಯ್ಯ ಎಂದು ಇಡಲೇ ಬೇಕಿತ್ತು. ಪ್ರತಿ ಯಜಮಾನನ ಮೊಮ್ಮಗನ ಹೆಸರು  ಎಲ್ಲಪ್ಪಯ್ಯಎಂದು ಇಡುವುದು ವಾಡಿಕೆಯಾಗಿತ್ತು. ಈ ಹೆಸರಿನ ಮೂಲ ಒಂದು ರಹಸ್ಯವಾಗಿಯೇ ಉಳಿದು ಹೋಗಿತ್ತು. ನಾನು ಬಾಲ್ಯದಲ್ಲಿ ನೋಡಿದ ಎಲ್ಲಪ್ಪಯ್ಯ ೨೦ ವಯಸ್ಸಿನ ತರುಣ. ಅವರ ಅಜ್ಜನ ಹೆಸರು ಕೂಡ ಎಲ್ಲಪ್ಪಯ್ಯ ಎಂದಿತ್ತು. ಅವರು ತೀರಿಕೊಂಡು ಎಷ್ಟೋ ವರ್ಷಗಳಾಗಿದ್ದವು. ಅವರ ತಂಗಿಯಾಗಿದ್ದ ಗೌರಮ್ಮ ನಮ್ಮ ಅಮ್ಮನ ಅಜ್ಜಿ (ತಂದೆಯ ತಾಯಿ). ಅವರನ್ನು ಮೊದಲಮನೆ ಸಂಸಾರಕ್ಕೆ ಮದುವೆ ಮಾಡಿ ಕೊಡಲಾಗಿತ್ತು. ನಾನು ಅವರನ್ನು ಬಾಲ್ಯದಲ್ಲಿ ನೋಡಿದ ನೆನಪಿದೆ. ಹೀಗೆ ನಮಗೆ ಬೆಳವಿನಕೊಡಿಗೆ ವಂಶದೊಂದಿಗೆ ರಕ್ತ ಸಂಬಂಧವಿತ್ತು.

ಬೆಳವಿನಕೊಡಿಗೆ ಮನೆಯ ಪಕ್ಕದ ಹಿತ್ತಲಿನಲ್ಲಿ ಅವರ ವಂಶಕ್ಕೆ ಸೇರಿದ ಪುರಾತನವಾದ ರಕ್ತೇಶ್ವರಿ ದೇವಸ್ಥಾನವಿತ್ತು. ಪ್ರತಿ ವರ್ಷವೂ ರಕ್ತೇಶ್ವರಿ ಸಮಾರಾಧನೆ ಮತ್ತು ವಿಶೇಷ ಪೂಜೆ ನಡೆಯುತ್ತಿದ್ದು ಅದರಲ್ಲಿ  ಊರಿನವರೆಲ್ಲಾ ಪಾಲ್ಗೊಳ್ಳುತ್ತಿದ್ದರು. ಈ ರಕ್ತೇಶ್ವರಿ ಬೆಳವಿನಕೊಡಿಗೆಯವರ ಸಕಲ ಅಸ್ತಿ ಪಾಸ್ತಿಗಳ ಸಂರಕ್ಷಕಿಯಾಗಿದ್ದಳು. ಅವಳ ಮಹಿಮೆಯ ಬಗ್ಗೆ ಒಂದು ವಿಶೇಷ ಕಥೆಯಿದೆ.

ಮನೆಯ ಮುಂದಿದ್ದ ಚಪ್ಪರದಲ್ಲಿ ಅಡಿಕೆ ಕೊಯ್ಲು ನಡೆಯುವಾಗ ಒಣಗಲು  ಹಾಕಿದ ಅಡಿಕೆಯ ರಾಶಿ ರಾಶಿಯೇ ಇರುತ್ತಿತ್ತು. ವಾಡಿಕೆಯಂತೆ ಮನೆಯ ಯಜಮಾನರಾಗಿದ್ದ ಎಲ್ಲಪ್ಪಯ್ಯನವರು ರಾತ್ರಿ ಮಲಗುವ ಮುನ್ನ ರಕ್ತೇಶ್ವರಿಯ ಸ್ಮರಣೆ ಮಾಡಿ ಚಪ್ಪರದ ಮೇಲಿರುವ ಅಡಿಕೆ ರಾಶಿಯನ್ನು ಸಂರಕ್ಷಿಸುವಂತೆ ಕೇಳಿಕೊಳ್ಳುತ್ತಿದ್ದರಂತೆ. ಒಂದು ರಾತ್ರಿ ಕಳ್ಳನೊಬ್ಬ ಒಂದು ಮೂಟೆ ತುಂಬಾ ಅಡಿಕೆ ಹಾಕಿಕೊಂಡು ಸದ್ದಿಲ್ಲದಂತೆ ಅಂಗಳದ ತುದಿಯಲ್ಲಿದ್ದ ಮೆಟ್ಟಿಲಿಳಿದು ಹೋಗುತ್ತಿದ್ದನಂತೆ. ಅದೇ ಸಮಯಕ್ಕೆ ಸರಿಯಾಗಿ ಎಲ್ಲಪ್ಪಯ್ಯನವರು ರಕ್ತೇಶ್ವರಿಯ ಸ್ಮರಣೆ ಮಾಡಿ ಮಂತ್ರ ಹೇಳತೊಡಗಿದರಂತೆ. ರಕ್ತೇಶ್ವರಿಯ ಮಹಿಮೆಯಿಂದ ಕಳ್ಳನು ಒಂದು ಹೆಜ್ಜೆ ಸಹ ಮುಂದಿಡಲಾಗದೆ ನಿಂತಲ್ಲೇ ಪ್ರತಿಮೆಯಂತಾಗಿ ಬಿಟ್ಟನಂತೆ! ಬೆಳಿಗ್ಗೆ ಮನೆಯವರು ಎದ್ದ ನಂತರವೇ ಅವನ ಕಾಲಿಗೆ ಚೈತನ್ಯ ಬಂದು ಅವನು ಮೂಟೆಯನ್ನು ಮನೆಯವರಿಗೆ ಒಪ್ಪಿಸಿದ ಮೇಲೆಯೇ ರಕ್ತೇಶ್ವರಿ ಅವನನ್ನು ತನ್ನ ವಶದಿಂದ ಬಿಡುಗಡೆ ಮಾಡಿದಳಂತೆ.

ನಮ್ಮ ಅಮ್ಮ ನಮಗೆ ಎಲ್ಲಪ್ಪಯ್ಯನವರ ಬಗ್ಗೆ ಇನ್ನೊಂದು ಕಥೆ ಹೇಳುತ್ತಿದ್ದುದು ನೆನಪಿಗೆ ಬರುತ್ತಿದೆ. ಒಮ್ಮೆ ಸ್ವಲ್ಪ ಬುದ್ಧಿ ಭ್ರಮಣೆ ಯಾದ್ದರಿಂದ ಎಲ್ಲಪ್ಪಯ್ಯನವರೊಬ್ಬರೇ ಒಂಟಿಯಾಗಿ ಬೆಳವಿನಕೊಡಿಗೆ ಮನೆಯಲ್ಲಿ ಇರುವಂತಾಯಿತಂತೆ. ಮನೆಯಲ್ಲಿ ಬೆಳ್ಳಿ, ಬಂಗಾರ ಮತ್ತು ವಜ್ರದಿಂದ ಮಾಡಿದ ಆಭರಣಗಳ ದೊಡ್ಡ ನಿಧಿಯೇ ಇದ್ದು ಅದರ ಸಂದೂಕದ ಕೀಲಿಕೈ ಎಲ್ಲಪ್ಪಯ್ಯನವರ ಸೊಂಟದ ಬಂಗಾರದ ಉಡಿದಾರದಲ್ಲಿ ನೇತಾಡುತ್ತಿರುತ್ತಿತ್ತಂತೆ. ಇತರ ಆಭರಣಗಳ ನಡುವೆ ಒಂದು  ದೊಡ್ಡ ಬೆಳ್ಳಿ ತಂಬಿಗೆಯ ತುಂಬಾ ಚಿನ್ನದ ಉಂಗುರಗಳು ಇದ್ದುವಂತೆ. ಅದರಲ್ಲಿ ಎಷ್ಟು ಉಂಗುರ ಇದ್ದುವೆಂದು ಎಲ್ಲಪ್ಪಯ್ಯನವರಿಗೆ ಮಾತ್ರ ಗೊತ್ತಿದ್ದು ಅವರು ಅದನ್ನು ಆಗಾಗ ಪುನರೆಣಿಕೆ ಮಾಡುತ್ತಿದ್ದರಂತೆ.

ಆಗಿನ ಕಾಲದಲ್ಲಿ ದರೋಡೆಗಳು ತುಂಬಾ ನಡೆಯುತ್ತಿದ್ದು ದರೋಡೆಗಾರರು ಆಗರ್ಭ ಶ್ರೀಮಂತರ ಮನೆಗಳನ್ನು ಗುರಿಯಾಗಿ ಇಟ್ಟುಕೊಳ್ಳುತ್ತಿದ್ದರಂತೆ. ಆದ್ದರಿಂದ ಎಲ್ಲಪ್ಪಯ್ಯನವರ ಮತ್ತು ಅವರ ಐಶ್ವರ್ಯದ ರಕ್ಷಣೆಗೆ ಮೈಸೂರು ಸಂಸ್ಥಾನದ ಇಬ್ಬರು ರಿಸರ್ವ್ ಪೊಲೀಸ್ ಕಾನ್ಸ್ಟೇಬಲ್ ಗಳನ್ನು ನೇಮಕ ಮಾಡಲಾಗಿತ್ತಂತೆ. ಈ ನೇಮಕ ಆಗಿನ ಮೈಸೂರು ಸರ್ಕಾರದಲ್ಲಿ ಬೆಳವಿನಕೊಡಿಗೆ  ಮನೆತನದವರಿಗಿದ್ದ ಪ್ರಭಾವವನ್ನು ತೋರಿಸುತ್ತಿತ್ತಂತೆ. ಆದರೆ ಯಾವುದೋ ಕಾಣದ ಕೈ ಪ್ರಭಾವದಿಂದ ಈ ರಕ್ಷಣೆಯನ್ನು ಇದ್ದಕಿದ್ದಂತೆ ಹಿಂತೆಗುದುಕೊಳ್ಳಲಾಯಿತಂತೆ. 

ಇದೇ ಸಮಯವನ್ನು ಕಾಯುತ್ತಿದ್ದ ದರೋಡೆಗಾರರ ಗುಂಪೊಂದು ಮನೆಯ ಮೇಲೆ ದಾಳಿ ಮಾಡಿತಂತೆ. ಅವರು ಬರುವ ಸಮಾಚಾರ ಹೇಗೋ ಗೊತ್ತಾಗಿ ಎಲ್ಲಪ್ಪಯ್ಯನವರು ಮನೆಯೊಳಗೆ ಸೇರಿಕೊಂಡು ಮಾಳಿಗೆಯ ಬಾಗಿಲುಗಳನ್ನು ಭದ್ರವಾಗಿ ಮುಚ್ಚಿಕೊಂಡರಂತೆ. ತುಂಬಾ ಗಟ್ಟಿಮುಟ್ಟಾದ ಹಲಸಿನ ಮರದಿಂದ ಮಾಡಿದ ಬಾಗಿಲುಗಳನ್ನು ದರೋಡೆಗಾರರು ತೆಗೆಯಲು ಸಾಧ್ಯವಾಗಲಿಲ್ಲವಂತೆ. ಆಗ ಅವರು ಬಾಗಿಲಿನ ಸುತ್ತ ನೆಲವನ್ನೇ ಅಗೆದು ಬಾಗಿಲನ್ನು ಕಿತ್ತು ಹಾಕಲು ಶುರು ಮಾಡಿದರಂತೆ . ಹೀಗೆ ನೆಲವನ್ನು ಅಗೆಯುವ ಶಬ್ದ ಇಡೀ ಊರಿಗೇ ಕೇಳಿಸುತ್ತಿತ್ತಂತೆ. ಆದರೆ ಯಾರೂ ತಮ್ಮ ಜೀವದ ಹಂಗು ತೊರೆದು ಎಲ್ಲಪ್ಪಯ್ಯನವರನ್ನು ಕಾಪಾಡಲು ಬರಲೇ ಇಲ್ಲವಂತೆ. ಸ್ವಲ್ಪ ಸಮಯದಲ್ಲೇ ಬಾಗಿಲು ಕುಸಿದು ಹೋಯಿತಂತೆ.

ಪ್ರಾಯಶಃ ದರೋಡೆಗಾರರ ಮುಖ್ಯಸ್ಥನು ಎಲ್ಲಪ್ಪಯ್ಯನ ಪರಿಚಿತನಾಗಿರಬೇಕು. ಆದ್ದರಿಂದ ಅವನು ತನ್ನ ಸಂಗಡಿಗರಿಗೆ ಅವರ ಕಣ್ಣಿಗೆ ಮರಳನ್ನು ಎಸೆದು ದೃಷ್ಟಿ ಇಲ್ಲದಂತೆ ಮಾಡಲು ಹೇಳಿದ್ದನಂತೆ. ಅವರ ಜೀವಕ್ಕೆ ಯಾವುದೇ ಅಪಾಯ ಮಾಡುವುದು ಅವನ ಉದ್ದೇಶವಾಗಿರಲಿಲ್ಲವಂತೆ. ಆದರೆ ಅವನಿಗೆ ಕೊನೇ ಗಳಿಗೆಯಲ್ಲಿ ಕಣ್ಣಿಗೆ ಮರಳನ್ನು ಎಸೆಯುವುದೂ ಕ್ರೂರತನ ಎಂದು ಅನಿಸಿ ಅವರ ಕಣ್ಣುಗಳಿಗೆ ಬಟ್ಟೆ ಕಟ್ಟುವಂತೆ ಆಜ್ಞೆ ಮಾಡಿದನಂತೆ. ಅದರಂತೆ ಎಲ್ಲಪ್ಪಯ್ಯನವರನ್ನು ಹೆಡೆಮುರಿ  ಕಟ್ಟಿ ಕಣ್ಣಿಗೆ ಬಟ್ಟೆ ಕಟ್ಟಲಾಯಿತಂತೆ. ಆ ಕಟ್ಟನ್ನು ಬಿಚ್ಚಿಕೊಳ್ಳಲಾಗದಂತೆ ಎರಡೂ ಕೈಗಳನ್ನು ಬೆನ್ನ ಹಿಂದೆ ಕಟ್ಟಿಹಾಕಿದರಂತೆ.

ಆ ನಂತರವೇ ಎಲ್ಲಪ್ಪಯ್ಯನವರ ಮುಂದೆ ಬಂದ ದರೋಡೆಗಾರರ ಮುಖ್ಯಸ್ಥ ಅವರ ಸೊಂಟದ ಉಡಿದಾರದಿಂದ ಸಂದೂಕದ ಕೀಲಿಕೈಯನ್ನು ಕಿತ್ತುಕೊಂಡು ಅದರಲ್ಲಿದ್ದ ಒಡವೆಗಳನ್ನೆಲ್ಲಾ ಸಂಪೂರ್ಣವಾಗಿ ಲೂಟಿ ಮಾಡಿಬಿಟ್ಟ. ಅಷ್ಟು ಸಾಲದೆ ಅವನ ದೃಷ್ಟಿ ಕೊನೆಗೆ ಎಲ್ಲಪ್ಪಯ್ಯನವರ ಚಿನ್ನದ ಉಡಿದಾರದ ಮೇಲೂ ಬಿತ್ತು. ಅದನ್ನು ಯಾವುದೇ ಕರುಣೆ ಅಥವಾ ದಾಕ್ಷಿಣ್ಯವಿಲ್ಲದೆ ಕಿತ್ತು ಎಳೆದು ತನ್ನ ಜೇಬಿಗೆ ಸೇರಿಸಿಬಿಟ್ಟ. ಎಲ್ಲಪ್ಪಯ್ಯನವರನ್ನು ಅದೇ ಸ್ಥಿತಿಯಲ್ಲಿ ಬಿಟ್ಟು ದರೋಡೆಗಾರರ ತಂಡ ಅಲ್ಲಿಂದ ಪರಾರಿಯಾಯಿತು.

----ಮುಂದುವರಿಯುವುದು ---

No comments: