Thursday, August 15, 2019

ಹುರುಳಿಹಕ್ಕಲಿನ ಗತ ವೈಭವ – 5



(ತಿಮ್ಮಪ್ಪನ ಬಾಲ್ಯದ ಎರಡು ಫೋಟೋಗಳು)
ನಂಜುಂಡ ಭಟ್ಟರ ಆಗಮನ ಮತ್ತು ಮೇಲಿನಕೊಡಿಗೆ ಸೀತಾರಾಮಯ್ಯ
ಮತ್ತು ಶ್ರೀನಿವಾಸಯ್ಯನವರ ಸಂಸಾರಗಳ ನಿರ್ಗಮನ
ಹುರುಳಿಹಕ್ಕಲಿಗೆ ತುಂಬಾ ಸಮೀಪದಲ್ಲೇ ಇದ್ದ ಮೇಲಿನಕೊಡಿಗೆಯಲ್ಲಿ ಸೀತಾರಾಮಯ್ಯ ಮತ್ತು ಶ್ರೀನಿವಾಸಯ್ಯನವರ ಸಂಸಾರಗಳು ಲಕ್ಷ್ಮೀನಾರಾಯಣರಾಯರ ಅಡಿಕೆ ತೋಟ ಮತ್ತು ಬತ್ತದ ಗದ್ದೆಗಳನ್ನು ತಲೆತಲಾಂತರದಿಂದ ಗೇಣಿ ಮಾಡಿಕೊಂಡಿದ್ದವು. ಸೀತಾರಾಮಯ್ಯನವರ ಪತ್ನಿ ಮಧ್ಯ ವಯಸ್ಸಿನಲ್ಲೇ ತೀರಿಕೊಂಡಿದ್ದರು. ಆದರೆ ಸೀತಾರಾಮಯ್ಯನವರು  ಬೇರೆ ಮದುವೆಯಾಗದೇ ಮಕ್ಕಳನ್ನು ಬೆಳೆಸಿ ಮೇಲೆ ತಂದಿದ್ದರು. ಆ ದಿನಗಳಲ್ಲಿ ನಮ್ಮ ಅಮ್ಮ ಕೆಲವು ಬಾರಿ ನಮ್ಮ ಚೇಷ್ಟೆ ಮತ್ತು ತಂಟೆಗಳನ್ನು ತಾಳಲಾರದೇ ನಮಗೂ ಸೀತಾರಾಮಯ್ಯನವರ ಮಕ್ಕಳ ಪರಿಸ್ಥಿತಿ ಬಂದಿದ್ದರೆ ಬುದ್ಧಿ ಬರುತ್ತಿತ್ತೆಂದು ಹೇಳುತ್ತಿದ್ದುದು ನೆನಪಾಗುತ್ತಿದೆ. ಶ್ರೀನಿವಾಸಯ್ಯನವರ ತಮ್ಮನೊಬ್ಬ ಅವರೊಂದಿಗಿದ್ದುದು ನೆನಪಾಗುತ್ತಿದೆ. ಅವರ ಮಗ ಗಣೇಶನ ಹಾಡುಗಾರಿಕೆಯ ಬಗ್ಗೆ ಆಗಲೇ ಬರೆದಿದ್ದೇನೆ.
ಅಚ್ಚಣ್ಣ ಶೆಟ್ಟರ ಸಾಲ ತೀರಿಸಲು ರಾಯರು ಈ ಎರಡು ಸಂಸಾರಗಳು ಗೇಣಿ ಮಾಡುತ್ತಿದ್ದ ಜಮೀನುಗಳನ್ನು ಕೊಡೂರು ಶ್ಯಾಮಭಟ್ಟರ ಮಗ ನಂಜುಂಡಭಟ್ಟರಿಗೆ ಮಾರುವುದರೊಡನೆ ಈ ಎರಡು ಸಂಸಾರಗಳು ನಮ್ಮೂರಿನಿಂದ ಎತ್ತಂಗಡಿಯಾದವು. ಶ್ರೀನಿವಾಸಯ್ಯನವರು ಶಿವಮೊಗ್ಗೆ ಸೇರಿ ದೊಡ್ಡಪೇಟೆಯಲ್ಲಿ ಬಾಳೆಹಣ್ಣಿನ ಬುಟ್ಟಿ ಇಟ್ಟುಕೊಂಡು ಮಾರುವುದನ್ನು ನಾನು ನೋಡಿದ್ದೆ. ಆದರೆ ಸೀತಾರಾಮಯ್ಯನವರ ಮಕ್ಕಳು ಬೇರೆ ಬೇರೆ ಕಡೆ ಚದುರಿ ಹೋದರೆಂದು ಕೇಳಿದ್ದೆ. ನಂಜುಂಡ ಭಟ್ಟರ ಸಂಸಾರ ನಮ್ಮೂರಿಗೆ ಹೊಸದಾಗಿ ಸೇರ್ಪಡೆಯಾಯಿತು.
ರಾಯರ ಹಣಕಾಸಿನ ವ್ಯವಹಾರ
ಅತ್ಯಂತ ವಿದ್ಯಾವಂತರೂ ಮತ್ತು ತಿಳುವಳಿಕಸ್ಥರೂ ಮತ್ತು ಗ್ರಾಮ ಪಂಚಾಯತಿಯ ಅಧ್ಯಕ್ಷರೂ ಆಗಿದ್ದ ಲಕ್ಷ್ಮೀನಾರಾಯಣರಾಯರು ಹಣಕಾಸಿನ ವ್ಯವಹಾರದಲ್ಲಿ ಆ ಬಗೆಯ ಬುದ್ಧಿವಂತಿಕೆಯನ್ನು ತೋರಿಸದಿದ್ದದು ಅವರ ಸಂಸಾರದ ದುರಾದೃಷ್ಟವೆನ್ನಲೇ ಬೇಕು. ಅವರ ಅಪಾರ ಪಿತ್ರಾರ್ಜಿತ ಸಂಪತ್ತು ನಮ್ಮ ಕಣ್ಣ ಮುಂದೆಯೇ ಕರಗಿ ಹೋಗಿದ್ದನ್ನು ನಾವು ನೋಡುವಂತಾಯಿತು. ನಮ್ಮ ಊರಿನಲ್ಲೇ ಗೇಣಿ ಮಾಡುತ್ತಿದ್ದ ಕೆಲವು ಪರಿವಾರಗಳು ಶ್ರೀಮಂತರಾಗಿ ಬಿಟ್ಟಿದ್ದನ್ನು ನಾವು ಕಣ್ಣಾರೆ ಕಂಡಿದ್ದೆವು. ಆದರೆ ರಾಯರು ತಮ್ಮ ಒಂದೇ ತಲೆಮಾರಿನಲ್ಲಿ ಪಿತ್ರಾರ್ಜಿತ ಆಸ್ತಿಯನ್ನು  ಕಳೆದುಬಿಟ್ಟು ಊರು ಬಿಡುವಂತಾಯಿತು.
ರಾಯರ ಸಂಸಾರದ ಶಿವಮೊಗ್ಗೆ ಪಯಣ
ಪ್ರಾಯಶಃ ಅದು ೧೯೬೪ನೇ ಇಸವಿ ಇರಬೇಕು. ನಾನಾಗ ಶಿವಮೊಗ್ಗೆಯ ಬ್ರಾಹ್ಮಣರ ಹಾಸ್ಟೆಲಿನಲ್ಲಿದ್ದು  ನ್ಯಾಷನಲ್
ಹೈಸ್ಕೂಲಿನಲ್ಲಿ ಓದುತ್ತಿದ್ದೆ. ಒಂದು ಸಂಜೆ ನಮ್ಮ ದೊಡ್ಡಣ್ಣ ನನ್ನನ್ನು ನೋಡಲು ಹಾಸ್ಟೆಲಿಗೆ  ಬಂದ. ಅವನಿಂದ ಲಕ್ಷ್ಮೀನಾರಾಯಣರಾಯರು  ಹುರುಳಿಹಕ್ಕಲಿನ ಸಂಪೂರ್ಣ ಜಮೀನು  ಮತ್ತೆ ಮನೆಯನ್ನು ನಂಜುಂಡ ಭಟ್ಟರ ಅಣ್ಣನ ಮಗ ಶಂಕರ ಭಟ್ಟರಿಗೆ ಮಾರಿ ಶಿವಮೊಗ್ಗೆಗೆ ಬಂದಿರುವುದು ತಿಳಿಯಿತು. ಆ ದಿನಗಳಲ್ಲಿ ನಮ್ಮ ಮನೆಯ ಹಣಕಾಸಿನ ಪರಿಸ್ಥಿತಿ ಕೂಡ ಸರಿಯಿಲ್ಲದಿದ್ದರಿಂದ ಅಣ್ಣ ಮತ್ತು ಅತ್ತಿಗೆ ಕೂಡ ರಾಯರೊಡನೆ ಶಿವಮೊಗ್ಗೆ ಸೇರಿದ್ದು ತಿಳಿಯಿತು.
ರಾಯರೇನೋ ಊರು ಬಿಡುವ ತೀರ್ಮಾನ ಮಾಡಿ ಸಂಸಾರ ಸಮೇತ ಶಿವಮೊಗ್ಗೆ ಸೇರಿದರು. ಆದರೆ ಆ ತೀರ್ಮಾನಕ್ಕೆ ಉಳಿದವರ ಒಪ್ಪಿಗೆ ಇತ್ತೇ ಎಂಬುದು ತಿಳಿದು ಬರುವುದಿಲ್ಲ. ಮುಖ್ಯವಾಗಿ  ಮೆಜಾರಿಟಿಗೆ ಬಂದಿದ್ದ ಅವರ ಹಿರಿಯ ಮಗ ತಿಮ್ಮಪ್ಪನ ಒಪ್ಪಿಗೆ ಇತ್ತೇ ಎಂಬ ಪ್ರಶ್ನೆಗೆ ಈಗ ಉತ್ತರವಿಲ್ಲ.  ಊರು ಬಿಡುವ ಮೊದಲು ತಿಮ್ಮಪ್ಪನಿಗೆ ನಮ್ಮೂರಿನ ಹುಡುಗಿಯೊಬ್ಬಳೊಡನೆ ಮದುವೆ ನಿಶ್ಚಯವಾಗಿತ್ತೆಂದು ನಾವು ಕೇಳಿದ್ದೆವು.  ರಾಯರ  ಊರು ಬಿಡುವ ತೀರ್ಮಾನದೊಂದಿಗೆ ಆ ಸಂಬಂಧ ಮುರಿದು ಬಿದ್ದಿರಬೇಕು. ಅದು ತಿಮ್ಮಪ್ಪನ ಮೇಲೆ ಯಾವ ಬಗೆಯ ಪರಿಣಾಮ ಬೀರಿರಬೇಕೆಂಬುದು ಯಕ್ಷ ಪ್ರಶ್ನೆಯಾಗಿದೆ. 
ರಾಯರ ದಾಯಾದಿಗಳೇ ಆದ ಬೆಳವಿನಕೊಡಿಗೆ  ಗಣೇಶಯ್ಯನವರು ಊರು ಬಿಟ್ಟು ಶಿವಮೊಗ್ಗೆ ಸೇರಿದ್ದನ್ನು ಇಲ್ಲಿ ಸ್ಮರಿಸಬಹುದು. ಗಣೇಶಯ್ಯನವರು ತಮ್ಮ ಪಾಲಿನ ಆಸ್ತಿಯನ್ನು ಹಾಗೆಯೇ ಬಿಟ್ಟು ಶಿವಮೊಗ್ಗೆಯಲ್ಲಿ ಸ್ವಂತ ಮನೆ ಕೊಂಡ ನಂತರವೇ ಊರು ಬಿಟ್ಟಿದ್ದರು. ಮಾತ್ರವಲ್ಲ ಗಣೇಶಯ್ಯ-ಕಾವೇರಮ್ಮ ದಂಪತಿಗಳು ತಿಮ್ಮಪ್ಪಯ್ಯ ಮತ್ತು ವೆಂಕಪ್ಪಯ್ಯನವರ ಮಕ್ಕಳನ್ನು ತಮ್ಮ ಮನೆಯಲ್ಲಿಟ್ಟುಕೊಂಡು ವಿದ್ಯಾಭ್ಯಾಸ ಮಾಡಿಸಿದ್ದರು.
ಆದರೆ ಲಕ್ಷ್ಮೀನಾರಾಯಣರಾಯರು ಒಂದು ಲಕ್ಷಕ್ಕಿಂತಲೂ ಮೇಲ್ಪಟ್ಟು ರೂಪಾಯಿಗಳನ್ನು (ಅದರ ಆ ಕಾಲದ ಬೆಲೆಯನ್ನು ಈಗ ಊಹಿಸಲೂ ಅಸಾಧ್ಯ) ಕೈಯಲ್ಲಿ  ಇಟ್ಟುಕೊಂಡು ಶಿವಮೊಗ್ಗೆ  ಸೇರಿದ್ದರೂ ಸ್ವಂತ  ಮನೆ ಮಾಡಲಿಲ್ಲ. ಅವರು ಬಂಡವಾಳ ಹೂಡಿದ ವ್ಯವಹಾರಗಳೂ ನಷ್ಟವನ್ನೇ ಉಂಟು ಮಾಡಿದವಂತೆ. ಅವರು ಕೊಟ್ಟ ಸಾಲಗಳೂ ವಾಪಾಸ್ ಬರಲಿಲ್ಲವಂತೆ. ಹಿರಿಯ ಮಕ್ಕಳಾದ ತಿಮ್ಮಪ್ಪ ಮತ್ತು ರಮೇಶ ಬಸ್ ಕಂಪನಿಯಲ್ಲಿ ಕೆಲಸ ಮಾಡತೊಡಗಿದರಂತೆ. ಆದರೆ ಆ ಕೆಲಸಗಳು ಹೆಚ್ಚು ಸಂಬಳ ಕೊಡುವಂತಹವಾಗಿರಲಿಲ್ಲವಂತೆ. ಪರಿಸ್ಥಿತಿ ಯಾವ  ಮಟ್ಟಕ್ಕೆ ಹೋಯಿತೆಂದರೆ ತಿಮ್ಮಪ್ಪ ಇದ್ದಕಿದ್ದಂತೆ ಒಂದು ದಿನ ಕಾಣೆಯಾಗಿ ಹೋದನಂತೆ. ಹಿಂದೆ ನಮ್ಮೂರಿನಿಂದ ಕಾಣೆಯಾಗಿ ಹೋದವರು ಸ್ವಲ್ಪ ವರ್ಷಗಳ ನಂತರ ಹಿಂದಿರುಗಿದ್ದರು. ಆದರೆ ತಿಮ್ಮಪ್ಪನೆಂದೂ ಹಿಂತಿರುಗಿ ಬರಲೇ ಇಲ್ಲ.
ಮುಕ್ತಾಯ
ತಿಮ್ಮಪ್ಪ ಕಾಣೆಯಾದ ನಂತರ ರಮೇಶ ತುಂಬಾ ಹೋರಾಟ ಮಾಡಿ ಇಂದು ತೃಪ್ತಿಯ ಸಂಸಾರ ನಡೆಸುತ್ತಿದ್ದಾನೆ. ಕಿರಿಯ ಮಗ ಭಾಸ್ಕರನೂ ಬೆಂಗಳೂರಿನಲ್ಲಿ ಒಳ್ಳೆಯ ಉದ್ಯೋಗ, ಸಂಸಾರ ಹೊಂದಿದ್ದಾನೆ. ಹೇಮಾ ಮತ್ತು ಕಸ್ತೂರಿ ಕೂಡ ಬೆಂಗಳೂರಿನಲ್ಲೇ ತೃಪ್ತಿಯ ಸಂಸಾರ ನಡೆಸುತ್ತಿದ್ದಾರೆ. ಆದರೆ ಸದಾಶಿವ ಶಿವಮೊಗ್ಗದಲ್ಲೇ ಕಷ್ಟಪಟ್ಟು ಸಂಸಾರ ನಡೆಸುತ್ತಿದ್ದವನು ಇದ್ದಕ್ಕಿದ್ದಂತೆ ಕಾಣೆಯಾಗಿ ಹೋದುದೊಂದು ದುರಾದೃಷ್ಟವೆನ್ನಲೇ ಬೇಕು. ಲಕ್ಷ್ಮೀನಾರಾಯಣರಾಯರು-ರುಕ್ಮಿಣಿಯಮ್ಮ ದಂಪತಿಗಳು ಕಾಲವಾಗಿ ಎಷ್ಟೋ ವರ್ಷಗಳು ಸಂದಿವೆ. ದೇವರು ಅವರ  ಆತ್ಮಕ್ಕೆ ಶಾತಿಯನ್ನೀಯಲಿ
-----ಮುಗಿಯಿತು------

ಹುರುಳಿಹಕ್ಕಲಿನ ಗತ ವೈಭವ – 4




ಟ್ಯೂಶನ್ ಮೇಷ್ಟ್ರು ವಿಠ್ಠಲ ಶೆಟ್ಟಿ
ಆ ದಿನಗಳಲ್ಲಿ ನಮ್ಮೂರಿನ ಶಾಲೆಯಲ್ಲಿ ಮೇಷ್ಟರ ಕೊರತೆಯಿಂದಾಗಿ ಬೆಳವಿನಕೊಡಿಗೆ ಮನೆಯಲ್ಲಿ ಹುಡುಗರಿಗೆ ಪಾಠ ಕಲಿಸಲು ವಿಠ್ಠಲ ಶೆಟ್ಟಿ ಎಂಬ ಟ್ಯೂಶನ್ ಮೇಷ್ಟ್ರುಇದ್ದರು. ಮನೆಯ ಉಪ್ಪರಿಗೆಯ ಮೇಲೆ ಜಮಖಾನದ ಮೇಲೆ ಕುಳಿತು ಹುಡುಗರು ಪಾಠ ಕಲಿಯುತ್ತಿದ್ದನ್ನು ನಾವು ನೋಡಿದ್ದೆವು.  ತರುಣರಾಗಿದ್ದ ವಿಠ್ಠಲ ಶೆಟ್ರು ತುಂಬಾ ಒಳ್ಳೆಯ ಮೇಷ್ಟರಾಗಿದ್ದರು. ಅವರು ಇಂಗ್ಲಿಷ್ ಪಾಠಗಳನ್ನೂ ಹೇಳಿ ಕೊಡುತ್ತಿದ್ದರು. ಬೆಳವಿನಕೊಡಿಗೆ ಹುಡುಗರು ಶಿವಮೊಗ್ಗ ಸೇರಿದ ಮೇಲೆ ಮೇಷ್ಟರು ಹುರುಳಿಹಕ್ಕಲು ಮನೆಯಲ್ಲಿ ಪಾಠ ಮಾಡತೊಡಗಿದರು. ಆ ದಿನಗಳಲ್ಲಿ ನೀರುಕಟ್ಟಿನ ಸುಬ್ಬರಾಯ ಕೂಡ ಹುರುಳಿಹಕ್ಕಲು ಮನೆಯಲ್ಲಿಯೇ ಇದ್ದು ಅವರಿಂದ ಪಾಠ ಹೇಳಿಸಿಕೊಳ್ಳುತ್ತಿದ್ದ. ಮೇಷ್ಟರಿಗೆ ಹುರುಳಿಹಕ್ಕಲು ಮನೆಯಲ್ಲಿಯೇ ತಂಗುವ ಮತ್ತು ಊಟ, ಕಾಫಿ-ತಿಂಡಿ ವ್ಯವಸ್ಥೆ ಇತ್ತು.
ತಿಮ್ಮಪ್ಪ, ರಮೇಶ ಮತ್ತು ನೀರುಕಟ್ಟಿನ ಸುಬ್ಬರಾಯ ಜಯಪುರ ಮಿಡ್ಲ್ ಸ್ಕೂಲ್ ನಲ್ಲಿ ಪರೀಕ್ಷೆ ಕಟ್ಟಿ ನಂತರ ಕೊಪ್ಪದಲ್ಲಿ ಹೈಸ್ಕೂಲ್ ಓದಿದರಂತೆ. ಅಲ್ಲಿ ಅವರು ಬೆಟ್ಟಗೆರೆ ಕೃಷ್ಣಭಟ್ಟರ ಹಾಸ್ಟೆಲಿನಲ್ಲಿ ಇದ್ದರಂತೆ. ಆಗ ಅವರು ಅಲ್ಲಿ ಆಡಿದ ನಾಟಕ ಒಂದರ ಫೋಟೋ ಈ ಲೇಖನದಲ್ಲಿ ಸೇರಿಸಿದ್ದೇನೆ. ಫೋಟೋದಲ್ಲಿ ಅವರು ಮಾಡಿದ ಪಾತ್ರಗಳ ಹೆಸರೂ ಸೇರಿಸಲಾಗಿದೆ . ಹಾಗೆಯೇ ಆಗ ಅವರೊಡನೆ ಹಾಸ್ಟೆಲಿನಲ್ಲಿದ್ದ ಕೆಲವರ ಅಪರೂಪದ ಫೋಟೋ ಒಂದನ್ನು ಕೂಡಾ ಸೇರಿಸಿದ್ದೇನೆ. ಈ ಫೋಟೋದಲ್ಲಿ ಮುಂದಿನ ಸಾಲಿನಲ್ಲಿರುವವರು ಆಲ್ಮನೆ ವೆಂಕಟೇಶ, ಸಂಸ್ಕೃತ ಮೇಷ್ಟ್ರು ಚರಂತಿಮಠ್  ಮತ್ತು ಗೋಳ್ಗಾರ್ ನಾಗೇಂದ್ರ. ಎರಡನೇ ಸಾಲಿನಲ್ಲಿರುವವರು ರಮೇಶ, ಗೋಳ್ಗಾರ್ ಕೃಷ್ಣಮೂರ್ತಿ, ರಾಜಾರಾಮ್ ಮಧ್ಯಸ್ಥ ಮತ್ತು ಭಂಡಿಗಡಿ ಶ್ರೀನಿವಾಸಮೂರ್ತಿ. ಮಧ್ಯಸ್ಥ ನನ್ನೊಡನೆ ಶಿವಮೊಗ್ಗ ಬ್ರಾಹ್ಮಿನ್ಸ್ ಹಾಸ್ಟೆಲ್ ಮತ್ತು ಬೆಂಗಳೂರಿನ ಟಾಟಾ ಇನ್ಸ್ಟಿಟ್ಯೂಟಿನಲ್ಲಿ ಇದ್ದ.  ಅವನು ನನಗಿಂತ ಎರಡು ವರ್ಷ ಸೀನಿಯರ್. ಇನ್ನು ಶ್ರೀನಿವಾಸಮೂರ್ತಿ ನನ್ನ ಕೆನರಾ ಬ್ಯಾಂಕ್  ಶಿವಮೊಗ್ಗ ಸಹೋದ್ಯೋಗಿ.
ಅಜ್ಞಾತ ಪುರುಷ ವೆಂಕಟಸುಬ್ಬಯ್ಯ
ಹುರುಳಿಹಕ್ಕಲು ಮನೆಯಲ್ಲಿ  ನಾವು ನೋಡಿದಂತೆ ವೆಂಕಟಸುಬ್ಬಯ್ಯ ಎಂಬ ಹಿರಿಯರೊಬ್ಬರಿದ್ದರು. ಮನೆಯ ಒಬ್ಬ ಸದಸ್ಯರಾಗಿ ಎಲ್ಲಾ  ಕೆಲಸದ ಜವಾಬ್ದಾರಿಯನ್ನೂ ಹೊರುತ್ತಿದ್ದ ವೆಂಕಟಸುಬ್ಬಯ್ಯನವರ ಮೂಲಮನೆ ಯಾವುದಿರಬಹುದೆಂದು ತಿಳಿದುಬರುತ್ತಿಲ್ಲ. ಮುಂದೆ ಹುರುಳಿಹಕ್ಕಲು ಸಂಸಾರ ಊರು ಬಿಟ್ಟು ಶಿವಮೊಗ್ಗೆ ಸೇರಿದಾಗಲೂ ಅವರು ಜೊತೆಯಲ್ಲಿದ್ದರಂತೆ. ಅವರ ಫೋಟೋ ಒಂದನ್ನು ಈ ಬರಹಕ್ಕೆ ಲಗತ್ತಿಸಲಾಗಿದೆ.
ಅಚ್ಚಣ್ಣ ಶೆಟ್ಟರ ಸಾಲವೆಂಬ  ಶೂಲ!
ಆ ದಿನಗಳಲ್ಲಿ ಜಯಪುರದಲ್ಲಿ ಅಚ್ಚಣ್ಣಶೆಟ್ಟರೆಂಬ ಶ್ರೀಮಂತ ವ್ಯಾಪಾರಿಯೊಬ್ಬರಿದ್ದರು. ಕೇವಲ ಮುಂಡು  ಪಂಚೆಯೊಂದನ್ನು ಉಟ್ಟು ಸಾಲ ವಸೂಲಿಗೆ ಸಾಹುಕಾರರ ಮನೆಗಳಿಗೆ  ನಡೆದೇ ಬರುತ್ತಿದ್ದ ಶೆಟ್ಟರ ಹತ್ತಿರ ಹಣವೆಷ್ಟಿತ್ತೆಂದು ಆ ಬ್ರಹ್ಮನಿಗೂ ತಿಳಿದಿರಲಾರದು! ಆದರೆ ಒಂದಂತೂ ಗ್ಯಾರಂಟೀ ಆಗಿತ್ತು. ಅವರ ಸಾಲ ಸಂಪೂರ್ಣವಾಗಿ ತೀರಿಸಬೇಕಾದರೆ ಜಮೀನು ಮತ್ತು ಮನೆ ಮಾರಿ ಊರುಬಿಡಲೇ ಬೇಕಿತ್ತು! ಅದಕ್ಕೆ ಮೊದಲ ಉದಾಹರಣೆ ಲಕ್ಷ್ಮೀನಾರಾಯಣರಾಯರೇ ಆದದ್ದು ಒಂದು ದೌರ್ಭಗ್ಯವೆನ್ನಲೇ ಬೇಕು.
ಜಮೀನು ಮಾರಾಟ ಮತ್ತು ಊರುಬಿಡಿಸಾಟ!
ಆ ದಿನಗಳಲ್ಲಿ ಭೂ ಸುಧಾರಣೆ ಕಾನೂನು ಇನ್ನೂ ಬಂದಿರಲಿಲ್ಲ. ಅಲ್ಲದೇ  ಲಕ್ಷ್ಮೀನಾರಾಯಣರಾಯರ  ಹೆಚ್ಚಿನ ಜಮೀನುಗಳು ಗೇಣಿಗೆ ಕೊಡಲ್ಪಟ್ಟಿದ್ದವು. ಅವರ ಮನೆಯ ಮುಂದಿದ್ದ ಸುಮಾರು ೮-೧೦ ಎಕರೆ ಅಡಿಕೆತೋಟ ಬಿಟ್ಟರೆ ಉಳಿದ ಜಮೀನೆಲ್ಲಾ ಗೇಣಿಗೆ ಕೊಡಲ್ಪಟ್ಟಿದ್ದವು. ಹಾಗಾಗಿ ಅಚ್ಚಣ್ಣ ಶೆಟ್ಟರ ಸಾಲ ತೀರಿಸಲು ರಾಯರು ಒಂದೊಂದೇ ಜಮೀನು ಮಾರುತ್ತಿದ್ದಂತೇ  ಗೇಣಿ ಮಾಡುತ್ತಿದ್ದ ಕುಟುಂಬಗಳು ಊರು ಬಿಡಬೇಕಾಗಿ ಬರುತ್ತಿತ್ತು. ಏಕೆಂದರೆ ಜಮೀನು  ಕೊಂಡವರು  ಅದನ್ನು ತಾವೇ ಮುಂದೆ ಬೇಸಾಯ ಮಾಡಬೇಕೆಂದು ಬಯಸುತ್ತಿದ್ದರಲ್ಲಿ ತಪ್ಪೇನೂ ಇರಲಿಲ್ಲ. ಹಾಗಾಗಿ ಅವರು ಗೇಣಿದಾರರನ್ನು ಖಾಲಿ ಮಾಡಿಸಲೇ ಬೇಕಾಗುತ್ತಿತ್ತು.
ಮೊದಲ ಜಮೀನು ಮಾರಾಟ ಮತ್ತು ಸೋದರತ್ತೆ ಕುಟುಂಬದಿಂದ ಊರಿಗೆ ವಿದಾಯ
ದುರದೃಷ್ಟವಶಾತ್ ರಾಯರು ಮೊದಲು ಮಾರಿದ ನಮ್ಮೂರಿನ ಜಮೀನು ಅವರ ಸೋದರತ್ತೆಯ ಸಂಸಾರವೇ ನಮ್ಮೂರು ತೊರೆಯುವಂತೆ ಮಾಡಿತು. ಹುರುಳಿಹಕ್ಕಲಿನ ಸಮೀಪದಲ್ಲೇ ಅರದಳ್ಳಿ ಎಂಬಲ್ಲಿ ರಾಯರಿಗೆ ಸೇರಿದ ಅಡಿಕೆ ತೋಟ ಮತ್ತು ಬತ್ತದ ಗದ್ದೆಗಳಿದ್ದುವು. ಅದನ್ನು ನಾವು ಬಾಲ್ಯದಲ್ಲಿ ನೋಡಿದಂತೆ ಅವರ ಸೋದರತ್ತೆ ಫಣಿಯಮ್ಮ ನವರ ಮಕ್ಕಳಾದ ವೆಂಕಟರಮಣಯ್ಯ ಮತ್ತು ರಾಯ (ಅವರ ಪೂರ್ತಿ ಹೆಸರು ನಮಗ್ಯಾರಿಗೂ ತಿಳಿದಿರಲಿಲ್ಲ) ಎಂಬ ಅಣ್ಣ ತಮ್ಮಂದಿರು ಗೇಣಿ ಮಾಡುತ್ತಿದ್ದರು. ಆ ಜಮೀನನ್ನು ರಾಯರು ತಮ್ಮ ಷಡ್ಡಕರೇ ಆದ ಸಂಪೇಕೊಳಲು ಗಣೇಶರಾಯರಿಗೆ ಮಾರಾಟ ಮಾಡಿದರು. ಗಣೇಶರಾಯರ ಪತ್ನಿ ಸೀತಮ್ಮ ಲಕ್ಷ್ಮೀನಾರಾಯಣರಾಯರ   ಪತ್ನಿ ರುಕ್ಮಿಣಮ್ಮನವರ ತಂಗಿ. ವೆಂಕಟರಮಣಯ್ಯನವರು ತೀರ್ಥಹಳ್ಳಿಯ ಹತ್ತಿರದ ಒಂದು ಊರಿಗೆ ವಲಸೆ ಹೋದರೆ ಅವರ ತಮ್ಮ ರಾಯರು ಕಾನೂರು ಎಂಬಲ್ಲಿಗೆ  ಹೋದರಂತೆ.
ನಂಜುಂಡ ಭಟ್ಟರ ಆಗಮನ ಮತ್ತು ಮೇಲಿನಕೊಡಿಗೆ ಸೀತಾರಾಮಯ್ಯ ಮತ್ತು ಶ್ರೀನಿವಾಸಯ್ಯನವರ ಸಂಸಾರಗಳ ನಿರ್ಗಮನ
----ಮುಂದುವರಿಯುವುದು ---

ಹುರುಳಿಹಕ್ಕಲಿನ ಗತ ವೈಭವ – 3


(ಫೋಟೋದಲ್ಲಿರುವುದು ಲಕ್ಷ್ಮೀನಾರಾಯಣರಾಯರ ಸಹೋದರಿ ಸೀತಾಲಕ್ಷ್ಮಿ ಮತ್ತು ನೀರುಕಟ್ಟಿನ ವೆಂಕಟರಾಮಯ್ಯನವರ ಮದುವೆ ಪತ್ರಿಕೆ ಇಸವಿ ೧೯೪೩)

ಅಣ್ಣಯ್ಯನ ಮದುವೆ
ಪ್ರಾಯಶಃ ಅದು ೧೯೬೦ನೇ ಇಸವಿಯ ಕೊನೆಯಲ್ಲಿ ಅಥವಾ ೧೯೬೧ನೇ ಇಸವಿಯ  ಮಾರ್ಚಿ-ಏಪ್ರಿಲ್  ತಿಂಗಳಿರಬೇಕು. ನಾನಾಗ ಹೊಕ್ಕಳಿಕೆಯಲ್ಲಿದ್ದು ಬಸವಾನಿ ಶಾಲೆಗೆ ಹೋಗುತ್ತಿದ್ದೆ. ರುಕ್ಮಿಣಕ್ಕನ ಮದುವೆ ಮುಗಿದು ಸ್ವಲ್ಪ ದಿನಗಳಾಗಿದ್ದವು. ಒಂದು ದಿನ ಹುರುಳಿಹಕ್ಕಲಿನ ಲಕ್ಷ್ಮೀನಾರಾಯಣರಾಯರು ಸ್ವತಹಃ ನಮ್ಮ ಮನೆಗೆ ಆಗಮಿಸಿದರಂತೆ.  ಅವರು ಬಂದ  ಕಾರಣ ನಮ್ಮಣ್ಣನೊಡನೆ ಅವರ ಮೂರನೆಯ ಮಗಳು ಶಾರದೆಯ ಮದುವೆಯ ಪ್ರಸ್ತಾಪಕ್ಕೆ. ನಮ್ಮ ತಂದೆ ತಾಯಿಯವರಿಗೆ  ಶ್ರೀಮಂತ ಮನೆತನದವರೊಡನೆ ಮದುವೆ ಸಂಬಂಧ ಅಷ್ಟೇನೂ ಇಷ್ಟವಿರಲಿಲ್ಲ. ಆದರೆ ಅಣ್ಣನು ಶಾರದೆಯೊಡನೆ ಮದುವೆ ಮಾಡಿಕೊಳ್ಳಲು ಇಷ್ಟಪಟ್ಟಿದ್ದಾನೆಂದು ತಿಳಿದ ಮೇಲೆ ಅವರ ಒಪ್ಪಿಗೆ ದೊರೆಯಿತು.
ಮದುವೆಯ ಸಡಗರ
ನಮ್ಮ ಪ್ರೀತಿಯ ಅಣ್ಣ ಮತ್ತು ಶಾರದೆಯ ಮದುವೆ ಹುರುಳಿಹಕ್ಕಲಿನ  ಮನೆಯಲ್ಲಿಯೇ ಅತ್ಯಂತ ಸಡಗರ ಹಾಗೂ ವಿಜೃಂಭಣೆಯಿಂದ ನೆರವೇರಿತು. ಪ್ರಾಯಶಃ ನಾನು ನೋಡಿದ ಆ ಕಾಲದ ಮದುವೆಗಳಲ್ಲಿಯೇ ಅದು ಹೆಚ್ಚಿನ ಸಂಭ್ರಮದಿಂದ ಕೂಡಿದ ಮದುವೆಯಾಗಿತ್ತು. ಹುರುಳಿಹಕ್ಕಲಿನ ಮನೆಯ ಮುಂಭಾಗದಲ್ಲಿ ದೊಡ್ಡ ಚಪ್ಪರದ ಕೆಳಗೆ ಮದುವೆ  ಮಂಟಪ ಕಂಗೊಳಿಸುತ್ತಿತ್ತು. ಅಣ್ಣಯ್ಯನ ಆತ್ಮೀಯ ಮಿತ್ರರಾದ ಗೋಳಿಕಟ್ಟೆ ಕೃಷ್ಣಯ್ಯನವರ ಹೆಚ್ ಎಂ ವಿ ಗ್ರಾಮೋಫೋನ್ ಮದುವೆಯ ಸಂಭ್ರಮಕ್ಕೆ ಪುಟ ಕೊಟ್ಟಂತಿತ್ತು. ಮದುವೆಯ ಚಪ್ಪರದಲ್ಲಿ ಅದರ ಸ್ಪೀಕರ್ ನಿಂದ ಆ ಕಾಲದ ಜನಪ್ರಿಯ ಸಿನಿಮಾ ಹಾಡುಗಳು ಒಂದಾದ ಮೇಲೆ ಒಂದು ಕೇಳಿಬರುತ್ತಿದ್ದವು. ಮುಖ್ಯವಾಗಿ ಭಕ್ತ ಕನಕದಾಸ ಮತ್ತು ಕಿತ್ತೂರು ರಾಣಿ ಚೆನ್ನಮ್ಮನ ಹಾಡುಗಳು ಮೊಳಗುತ್ತಿದ್ದವು. ಉದಾಹರಣೆಗೆ:
ಭಕ್ತ ಕನಕದಾಸ
"ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ "
"ಕುಲಕುಲ ಕುಲವೆಂದು"
"ಸಿಂಗಾರ ಶೀಲಾ ಸಂಗೀತ ಲೋಲ "
"ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು"
ಕಿತ್ತೂರು ರಾಣಿ ಚೆನ್ನಮ್ಮ
“ಸನ್ನೆ ಏನೇನೋ ಮಾಡಿತು ಕಣ್ಣು”
“ತಾಯಿ ದೇವಿಯನು ಕಾಣೆ ಹಂಬಲಿಸಿ”
“ಅಹೋ ರಾತ್ರಿ ನಿಲದೋಡಿ ತಾ ಬಂದಿದೆ”
“ಹೂವಿನ ಹಂತ ಹತ್ತುವ ಜಾಣೆ ಕಾಲಾಗೆ ಗೆಜ್ಯಾಕಾ”
ವಿಶೇಷವಾಗಿ ಹೆಣ್ಣೊಪ್ಪಿಸಿ ಕೊಡುವಾಗ ಗ್ರಾಮೋಫೋನ್ ಕಿತ್ತೂರು ರಾಣಿಯ ಕೆಳಕಂಡ ಹಾಡನ್ನು ಹಾಡಿ ಎಲ್ಲರ ಕಣ್ಣಲ್ಲೂ ನೀರು ತರಿಸಿತು.
“ಆಲಕ್ಕೆ  ಹೂವಿಲ್ಲ ಸಾಲಕ್ಕೆ ಕೊನೆಯಿಲ್ಲ
ಜಾಲೀಯ ಮರವೂ ನೆರಳಲ್ಲ
ಜಾಲೀಯ ಮರವೂ ನೆರಳಲ್ಲ ಮಗಳೇ
ತಾಯಿಯ ಮನೆಯೂ ಸ್ಥಿರವಲ್ಲ”
ಆ ಸಂದರ್ಭದಲ್ಲಿ ಈ ಹಾಡನ್ನು ಹಾಕಿ ಕಣ್ಣೇರು ತರಿಸಿದ ಬಗ್ಗೆ ಕೆಲವರಿಂದ ಆಕ್ಷೇಪಣೆ ಕೂಡಾ ಬಂದಿದ್ದುದು ನೆನಪಾಗುತ್ತಿದೆ.
“ಬುಡುಬುಡಿಕೆ” ಅಥವಾ “ಮಾತಿನ ಮಲ್ಲಿ” ನಾಟಕ
ಲಕ್ಷ್ಮೀನಾರಾಯಣರಾಯರ ನೇತೃತ್ವದಲ್ಲಿ ಹುರುಳಿಹಕ್ಕಲು ಮತ್ತು ಮೇಲಿನಕೊಡಿಗೆಯ ಹುಡುಗರ ತಂಡವೊಂದು ಕನ್ನಡ ನಾಟಕವೊಂದನ್ನು ಆಗ ಆಡಲು ಪ್ರಾಕ್ಟೀಸ್ ಮಾಡಿದ್ದರು. ಆ ನಾಟಕವನ್ನು ಮೊದಲು ಪುರದಮನೆ ನವರಾತ್ರಿಯಂದು ಆಡಲಾಗಿತ್ತು. ನಾಟಕದ ಮೂಲ ಹೆಸರು "ಬುಡುಬುಡಿಕೆ" ಎಂದಿತ್ತಂತೆ. ಆದರೆ ರಾಯಲ್ಟಿ ಕೊಡುವುದನ್ನು ತಪ್ಪಿಸಲು ಅದರ ಹೆಸರನ್ನು "ಮಾತಿನಮಲ್ಲಿ" ಎಂದು ಬದಲಾಯಿಸಲಾಯಿತಂತೆ. ಅದೇ ನಾಟಕವನ್ನು ನಮ್ಮ ಅಣ್ಣನ ಮದುವೆಯ ದಿನ ರಾತ್ರಿ ಮನೆಯ ಮುಂದಿದ್ದ ಕೊಟ್ಟಿಗೆಯಲ್ಲಿ ಸ್ಟೇಜ್ ಕಟ್ಟಿ ಆಡಿಸಲಾಯಿತು. ಹಾಸ್ಯಮಯವಾದ ಈ ನಾಟಕದ ಮುಖ್ಯ ಪಾತ್ರದಾರಿಗಳು ರಾಯರ ಹಿರಿಯ ಮಗ ತಿಮ್ಮಪ್ಪ, ಅವನ ತಮ್ಮ ರಮೇಶ, ನೀರ್ಕಟ್ಟಿನ  ಸುಬ್ರಾಯ, ಹಾಗೂ ಮೇಲಿನಕೊಡಿಗೆ ಸೀತಾರಾಮಯ್ಯನವರ ಮಗ ತಿಮ್ಮಪ್ಪ ಎಂದು ನೆನಪು.  ರಮೇಶನ  ಡಾಕ್ಟರ್ ಪಾತ್ರ ಎಲ್ಲರ ಮೆಚ್ಚುಗೆ ಗಳಿಸಿತು. ತಿಮ್ಮಪ್ಪನದು ಸ್ತ್ರೀ ಪಾತ್ರ.  ಅವನು ಸುಬ್ಬರಾಯನ ಪಾತ್ರದ ಪತ್ನಿಯಾಗಿ ತುಂಬಾ ಚೆನ್ನಾಗಿ ನಟಿಸಿದ್ದ.
ನಾಟಕದ ಕಥೆ
ಸುಬ್ಬರಾಯನ ಪಾತ್ರದ ಪತ್ನಿ (ತಿಮ್ಮಪ್ಪ) ಮಾತು ಬಾರದ  ಮೂಕಿಯಾಗಿರುತ್ತಾಳೆ . ಸ್ಪೆಷಲಿಸ್ಟ್ ಡಾಕ್ಟರ್ ಪಾತ್ರಧಾರಿ (ರಮೇಶ) ಅವಳಿಗೆ ಮಾತು ಬರುವಂತೆ ಮಾಡುವ ಕಾರ್ಯದಲ್ಲಿ ಯಶಸ್ವಿ ಆಗುತ್ತಾನೆ.  ಆದರೆ ಸಮಸ್ಯೆ ಶುರುವಾಗುವುದೇ ಅಲ್ಲಿ. ಮೂಕಿಯಾದ ಪತ್ನಿ ಟ್ರೀಟ್ಮೆಂಟ್ ಆದಮೇಲೆ ಕೊನೆ ಮೊದಲಿಲ್ಲದಂತೆ ಮಾತನಾಡಲು ತೊಡಗುತ್ತಾಳೆ. ಅವಳ ಸಂಭಾಷಣೆ ಯಾರೊಡನೆಯಾದರೂ ಪ್ರಾರಂಭವಾಯಿತೆಂದರೆ ಅದಕ್ಕೆ ಮುಕ್ತಾಯವೇ ಇರುವುದಿಲ್ಲ! ಪರಿಸ್ಥಿತಿ ಯಾವ ಮಟ್ಟಕ್ಕೆ ಹೋಯಿತೆಂದರೆ ಗಂಡನ ಪಾತ್ರಧಾರಿ ಸುಬ್ಬರಾಯ ಪುನಃ ಡಾಕ್ಟರ್ (ರಮೇಶ) ಹತ್ತಿರ ಹೋಗುವ ಪ್ರಸಂಗ ಬರುತ್ತದೆ.  ಉದ್ದೇಶವಿಷ್ಟೇ. ತನ್ನ “ಮಾತಿನ ಮಲ್ಲಿ” ಅಥವಾ “ಬುಡುಬುಡಿಕೆ” ಪತ್ನಿಯನ್ನು ಪುನಃ ಮೂಕಿಯಾಗಿ ಮಾಡುವಂತೆ ಪ್ರಾರ್ಥಿಸಲು!
ಇತರ ಕಾರ್ಯಕ್ರಮಗಳು
ಆ ದಿನಗಳಲ್ಲಿ ನಮ್ಮೂರಿನಲ್ಲಿ ಯಾವುದೇ ಕಾರ್ಯಕ್ರಮ ನಡೆದಾಗ ಮೇಲಿನಕೊಡಿಗೆ ಶ್ರೀನಿವಾಸಯ್ಯನವರ ಹಿರಿಯ ಮಗ ಗಣೇಶ (ಅಥವಾ ತಿಮ್ಮಪ್ಪಎಂದು ನೆನಪು)  ಒಂದು ಹಾಡನ್ನು ಹಾಡುವುದು  ನಿಗದಿಯಾಗಿರುತ್ತಿತ್ತು.  ಸ್ವಾತಂತ್ರ ದಿನಾಚರಣೆಯ ಮತ್ತು ಗಣರಾಜ್ಯೋತ್ಸವದ ದಿನ ಅವನು "ಭಾರತದಾ ಬಾಪೂ ನೀನೇ ಜಗದ ಕಾಪೂ " ಎಂಬ ಗೀತೆಯನ್ನು ಹಾಡುವುದು ಮಾಮೂಲಾಗಿತ್ತು. ಅವನಿಂದ ಅಣ್ಣನ ಮದುವೆಯ ರಾತ್ರಿ ಒಂದು ವಿಶೇಷ ಹಾಡನ್ನು ಹಾಡಿಸಲಾಯಿತು. ಅದೊಂದು ಜಾನಪದ ಗೀತೆ. ಅದು ನನ್ನ ನೆನಪಿನ ಆಧಾರದ ಮೇಲೆ ಕೆಳಕಂಡಂತಿತ್ತು.
“ಗುಜು ಗುಜು ಬಾಪುರೆ ಹೆಣ್ಣ ಕೋಡಾ
ಗುಜ್ಜಾಲ  ಬಾಪುರೆ ಹೆಣ್ಣ ಕೋಡಾ
 ಸಾವಧಾನದಲಿ ಹೆಣ್ಣ ಕೋಡಾ
ಈ ಲೋಕಕ್ಕೆಲ್ಲಾ ಹೆಣ್ಣ ಕೋಡಾ!

ನಾಳೆಗೆ ಬಂದರೆ
ಮನೆ ನೋಡಾ
ನಿನ್ನ ಮನಸಿಗೆ ಬಂದರೆ
ಹೆಣ್ಣ ಕೋಡಾ!

ಬಾರವ್ವ ಬಾರವ್ವ ಭೀಗಿತ್ತಿ
ವಂಕಿ ವಡ್ಡಿ ವಾಣಕೇನಂತಿ ?
ಹಂಡಿ ಕೊಡಪಾನ ಮಸ್ತಾಯಿತಿ
ಬಾಂಡ್ಲಿ  ಸಾಮಾನ್  ತುಂಬೈತಿ!

ನೆರೆಹೊರೆ ಜನ ಕೇಳ್ಯಾರು
ಪಂಚಾಂಗ ತೆಗೆಸಿ ನೋಡ್ಯಾರು
ನೀವೇನ್ ಬಲ್ಲಿರಿ ಹಿರಿಯವರು
ನಮ್ಮ ಬಂಗಾರ ಶೆಟ್ಟಿ ಸೌಕಾರ್ರು

ದಸರೇ ಹಬ್ಬಕೆ ಬರುವವರು
ನಮ್ಮ ಹೆಣ್ಣಮ್ ಮದುವೆ
ಮಾಡಿಕೊಂಡು ಹೋಗುವರು
ಗುಜು ಗುಜು ಬಾಪುರೆ ಹೆಣ್ಣ ಕೋಡಾ
ಗುಜ್ಜಾಲ  ಬಾಪುರೆ ಹೆಣ್ಣ ಕೋಡಾ
ಈ ಹಾಡನ್ನು ಈ ಮೊದಲೂ ನಾವು ಕೇಳಿದ್ದೆವು. ಪ್ರಾಯಶಃ ಗ್ರಾಮೋಫೋನ್ ರೆಕಾರ್ಡಿನಲ್ಲೇ ಇರಬಹುದು. ಆದರೆ ಯಾರದೋ ಸೂಚನೆಯಂತೆ ಅಣ್ಣನ ಮದುವೆಯ ಸಂದರ್ಭದಲ್ಲಿ ಹುರುಳಿಹಕ್ಕಲಿನ ಲಕ್ಷ್ಮೀನಾರಾಯಣರಾಯರ ಗೌರವಾರ್ಥ ಹಾಡಿನಲ್ಲಿ "ನಮ್ಮ ಬಂಗಾರ ಶೆಟ್ಟಿ ಸೌಕಾರ್ರು" ಎಂಬುದರ ಬದಲು "ಹುರುಳಿಹಕ್ಕಲು ಛೇರ್ಮನ್ ಸಾಹುಕಾರ್ರು"ಎಂದು ಬದಲಾಯಿಸಿ ಹಾಡಲಾಯಿತು!
----ಮುಂದುವರಿಯುವುದು ---

Saturday, August 3, 2019

ಹುರುಳಿಹಕ್ಕಲಿನ ಗತ ವೈಭವ - 2



ನವರಾತ್ರಿ ಸಮಾರಾಧನೆ
ನಮ್ಮೂರಿನಲ್ಲಿ ನವರಾತ್ರಿ ಸಮಾರಾಧನೆ ಮುಖ್ಯವಾಗಿ ಮೊದಲಮನೆ (ಪಾಡ್ಯದಂದು ಮೊದಲ ನವರಾತ್ರಿ), ಹೊಸಳ್ಳಿ, ಹುರುಳಿಹಕ್ಕಲು,ಬೆಳವಿನಕೊಡಿಗೆ ಮತ್ತು ಪುರದಮನೆಯಲ್ಲಿ ನಡೆಯುತ್ತಿದ್ದವು.  ಕೊನೆಯ ಮೂರು ಸಮಾರಾಧನೆಗಳು ಕ್ರಮವಾಗಿ ಹುರುಳಿಹಕ್ಕಲು, ಬೆಳವಿನಕೊಡಿಗೆ ಮತ್ತು ಪುರದಮನೆಯಲ್ಲಿ ನಡೆಯುತ್ತಿದ್ದವು. ಪುರದಮನೆಯ ಸಮಾರಾಧನೆಯ ಮಾರನೇ ದಿನ ಮರುಪೂಜೆ ಮುಗಿಸಿ ನಾವೆಲ್ಲ ಶೃಂಗೇರಿಗೆ ದಸರಾ ಉತ್ಸವಕ್ಕೆ ಕಾಲ್ನಡಿಗೆ ಪ್ರಯಾಣ ಮಾಡುತ್ತಿದ್ದೆವು. ಅದರಲ್ಲಿ ಹುರುಳಿಹಕ್ಕಲು ಸಮಾರಾಧನೆ ಒಂದು ಕಾರಣಕ್ಕಾಗಿ ಪ್ರಸಿದ್ಧವಾಗಿತ್ತು. ಅದೆಂದರೆ ಊಟಕ್ಕೆ ಕೂತಾಗ ಕೊಡುತ್ತಿದ್ದ ದಕ್ಷಿಣೆ. ಎಲ್ಲಾ ಕಡೆಗಳಲ್ಲೂ ಒಂದಾಣೆ ಅಥವಾ ಎರಡಾಣೆ ದಕ್ಷಿಣೆ ಕೊಡುತ್ತಿದ್ದರೆ ಹುರುಳಿಹಕ್ಕಲಿನಲ್ಲಿ ನಾಲ್ಕಾಣೆ ದಕ್ಷಿಣೆ ಕೊಡುತ್ತಿದ್ದರು!  ಆದರೆ ನಮಗೆ ನಮ್ಮೂರಿನಲ್ಲಿ ಅಥವಾ ಸುತ್ತಮುತ್ತ ಅದನ್ನು ಖರ್ಚು ಮಾಡಲು ಯಾವುದೇ ಅಂಗಡಿ ಅಥವಾ ಹೋಟೆಲ್ ಇರಲಿಲ್ಲ. ಹಾಗಾಗಿ ಅದು ನಮ್ಮಮ್ಮನ ಕೈ ಸೇರುತ್ತಿತ್ತು.
ಹುಡುಗರ ಜಟಾಪಟಿ
ಹುರುಳಿಹಕ್ಕಲಿನ ಸಮಾರಾಧನೆಯ ದಿನ ನಾವು ಹುಡುಗರು ಹಲವು ಬಾರಿ ಎರಡು ಗುಂಪನ್ನು ಮಾಡಿಕೊಂಡು ಹೊಡೆದಾಟ ಬಡಿದಾಟದಲ್ಲಿ ತೊಡಗುತ್ತಿದ್ದುದು ನೆನಪಿಗೆ ಬರುತ್ತಿದೆ. ಸಮಾರಂಭಕ್ಕೆ ಪ್ರತಿ ವರ್ಷವೂ ತಲವಾನೆ ಫ್ಯಾಮಿಲಿ ಬರುತ್ತಿತ್ತು. ಅವರಲ್ಲಿ ಕಿರಿಯನಾದ ಹಾಗೂ ಬಲಾಢ್ಯನಾದ ಕೃಷ್ಣ ಹೊಡೆದಾಟದಲ್ಲಿ ನಮ್ಮೊಡನೆ ಪಾಲ್ಗೊಳ್ಳುತ್ತಿದ್ದ. ಇನ್ನು ಮೇಲಿನಕೊಡಿಗೆ ಕೃಷ್ಣ ಮತ್ತು  ಬೆಳವಿನಕೊಡಿಗೆ ನಾಗಭೂಷಣ ಜಗಳದಲ್ಲಿ ಸೇರಿಕೊಳ್ಳುತ್ತಿದ್ದುದು ನೆನಪಿದೆ. ನಮ್ಮ ಪುಟ್ಟಣ್ಣನೂ ಒಬ್ಬ ಸ್ಟ್ರಾಂಗ್ ಪರ್ಸನ್ ಆಗಿದ್ದರಿಂದ ನನಗೆ ಶತ್ರುಗಳ ಧಾಳಿಯಿಂದ ರಕ್ಷಣೆ ಸಿಗುತ್ತಿತ್ತು!  ಸಮಾರಾಧನೆ ಪೂಜೆಗೆ ಕರೆ ಬರುವಾಗ ನಮ್ಮ ಕಾಳಗ ನಿಂತು ಹೋಗುತ್ತಿತ್ತು. ಮುಂದಿನ ಸಮಾರಾಧನೆ ಬರುವ ವೇಳೆಗೆ ನಾವು ಬಾರಿ ಯಾರನ್ನು ನಮ್ಮ ತಂಡಕ್ಕೆ ಸೇರಿಸಿಕೊಳ್ಳಬಹುದೆಂದು ಲೆಖ್ಖ ಹಾಕಿರುತ್ತಿದ್ದೆವು!
ಸಾವಿತ್ರಿಯ ಮದುವೆ
ಲಕ್ಷ್ಮೀನಾರಾಯಣರಾಯರ ಹಿರಿಯ ಮಗಳು ಸಾವಿತ್ರಿಯ ಮದುವೆ ಅಗಳಗಂಡಿ ಕೆರೆಮನೆ ತಿಮ್ಮಪ್ಪಯ್ಯನವರ ಮಗ ಲಕ್ಷ್ಮೀನಾರಾಯಣನೊಡನೆ ಹುರುಳಿಹಕ್ಕಲಿನ ಮನೆಯಲ್ಲಿಯೇ ತುಂಬಾ ವಿಜೃಂಭಣೆಯಿಂದ ನಡೆಸಲಾಯಿತು. ಪ್ರಾಯಶಃ ರಾಯರು ತಿಮ್ಮಪ್ಪಯ್ಯನವರ ಬಾಲ್ಯ ಸ್ನೇಹಿತರಿರಬೇಕೆಂದು ನಾನು ಬರವಣಿಗೆಗೆ ಜೋಡಿಸಿರುವ ಫೋಟೋ ಒಂದರಿಂದ ತಿಳಿದು ಬರುತ್ತದೆ. ರಾಯರು ಮತ್ತು ತಿಮ್ಮಪ್ಪಯ್ಯನವರು ತರುಣರಾಗಿದ್ದಾಗ ತೆಗೆದ ಫೋಟೋ ಅದು. ತರುಣ ರಾಯರು ಎಷ್ಟು ಆಕರ್ಷಕ ವ್ಯಕ್ತಿತ್ವ ಹೊಂದಿದ್ದರೆಂದು ಫೋಟೋದಲ್ಲಿ ಗಮನಿಸ ಬಹುದು. ಹಿಂದಿನ ಸಾಲಿನಲ್ಲಿ ನಿಂತಿರುವರಲ್ಲಿ ಗಾಂಧಿ ಟೋಪಿ ಧರಿಸಿರುವರು ತಿಮ್ಮಪ್ಪಯ್ಯನವರ ಸಹೋದರ ಪುಟ್ಟಶಾಮಯ್ಯ. ಉಳಿದವರ ಹೆಸರುಗಳು ಮತ್ತು ಪರಿಚಯ ತಿಳಿದಿಲ್ಲ. ಗೊತ್ತಿದ್ದವರು ತಿಳಿಸಬಹುದು. 
ಮದುವೆಗೆ ಹೋಗುವುದಕ್ಕೆ ಪುಟ್ಟಣ್ಣ ಮತ್ತು ನನಗೆ ಒಂದು ಸಮಸ್ಯೆ ಇತ್ತು. ನಮ್ಮ ಮಾಮೂಲಿ ಕ್ಷೌರಿಕನಾದ ಎತ್ತಿನಹಟ್ಟಿ ವಾಸು ಊರಿಗೆ ಹೋಗಿ ತುಂಬಾ ದಿನ ರಜೆ ಮಾಡಿದ್ದರಿಂದ ನಮ್ಮಿಬ್ಬರ ತಲೆಕೂದಲು ಜಡೆ ಹೆಣೆಯಬೇಕಾದ ಮಟ್ಟಕ್ಕೆ ತಲುಪಿತ್ತು. ಕ್ಷೌರ ಮಾಡಿಸದಿದ್ದರೆ ನಾವು ಮದುವೆಗೆ ಹೋಗುವುದಿಲ್ಲವೆಂದು ಮುಷ್ಕರ ಹೂಡಿದ್ದೆವು. ತಂದೆಯವರು ನಮ್ಮ ತಲೆಯ ಮೇಲೆ ಎರಡು ಹೊತ್ತಲೆ ವೀಳ್ಯದೆಲೆ ಏರಿಸಿ ಅದನ್ನು ಮಾರಿ ಬಂದ ಹಣದಿಂದ ಕ್ಷೌರ ಮಾಡಿಸಿಕೊಂಡು ಬರುವಂತೆ ಜಯಪುರಕ್ಕೆ ಕಾಲ್ನಡಿಗೆಯಲ್ಲಿ ಕಳಿಸಿದರು. ಅನುಭವವನ್ನು ನಾನು ನನ್ನ ಬಾಲ್ಯ ಕಾಲದ ನೆನಪುಗಳಲ್ಲಿ ವಿವರವಾಗಿ ಬರೆದಿದ್ದೇನೆ. ಅಂತೂ ನಾವು ಮದುವೆ ಮನೆಯಲ್ಲಿ ಹಾಜರಿರುವಂತಾಯಿತು.
ಸುಶೀಲಳ ಮದುವೆ
ಸಾವಿತ್ರಿಯ ಮದುವೆಯ ವೇಳೆಯಲ್ಲೇ ಸುಶೀಲಳ ಮದುವೆ ವಳಲೆ ಕೃಷ್ಣ ಅವರೊಡನೆ ಮುಂದೆ ನಡೆಯುವುದೆಂದು ನಾವು ಕೇಳಿದ್ದೆವು. ಅಂತೆಯೇ ಮದುವೆಯನ್ನೂ ತುಂಬಾ ವಿಜೃಂಭಣೆಯಿಂದ ಆಗುಂಬೆಯಲ್ಲಿ ನಡೆಸಲಾಯಿತಂತೆ.

ನೆಂಟರ ಔತಣ ಮತ್ತು ನಮ್ಮೂರಿಗೆ ಜಾಮೂನಿನ ಆಗಮನ!
ದಿನಗಳಲ್ಲಿ ಅಗಳಗಂಡಿ ದಾರಿಯಲ್ಲಿದ್ದ ನೀರ್ಕಟ್ಟು ಎಂಬಲ್ಲಿ ಕೃಷ್ಣಯ್ಯ ಎಂಬ ಪಾಕಶಾಸ್ತ್ರ ಪ್ರವೀಣರಿದ್ದರು. ಪ್ರಾಯಶಃ ಅವರು ಲಕ್ಷ್ಮೀನಾರಾಯಣರಾಯರ ಭಾವನಾದ  ವೆಂಕಟರಮಣಯ್ಯನವರ ಸಹೋದರರಿರಬೇಕು. ಕೃಷ್ಣಯ್ಯನವರೊಬ್ಬ ಲೋಕ ಸಂಚಾರಿ. ಊರೂರು ತಿರುಗುತ್ತಿದ್ದ ಕೃಷ್ಣಯ್ಯ ಪ್ರಾಯಶಃ ಹೋಟೆಲ್ಲುಗಳಲ್ಲಿ ಕೆಲಸ ಮಾಡುವಾಗ ಪಾಕಶಾಸ್ತ್ರ ಪರಿಣಿತರಾಗಿದ್ದಿರಬೇಕು. ಕೃಷ್ಣಯ್ಯನವರು ಸಿಹಿತಿಂಡಿ ಮಾಡುವುದರಲ್ಲಿ ಪ್ರವೀಣರಾಗಿದ್ದರು. ಅವರು ತಯಾರಿಸಿದ ಮೈಸೂರುಪಾಕದ ರುಚಿ ಬಾಯಿ ಚಪ್ಪರಿಸುವಂತಿರುತ್ತಿತ್ತು.

ಹುರುಳಿಹಕ್ಕಲಿನಲ್ಲಿ ಸುಶೀಲಳ ಮದುವೆಯ ಅಂಗವಾಗಿ "ನೆಂಟರ ಔತಣ" ಒಂದನ್ನು ಏರ್ಪಡಿಸಲಾಗಿತ್ತು. ನಮಗೆ ಮೊದಲೇ ತಿಳಿದು ಬಂದಂತೆ ಪಾಕಶಾಸ್ತ್ರ ಪ್ರವೀಣ ಕೃಷ್ಣಯ್ಯನವರು ನಮಗೊಂದು ಹೊಚ್ಚ ಹೊಸ ಸಿಹಿ ತಿಂಡಿಯನ್ನು ಪರಿಚಯಿಸುವರಿದ್ದರು. ನಮ್ಮ ನಿರೀಕ್ಷೆಯಂತೆ ಅತ್ಯಂತ ಆಕರ್ಷಕವಾದ ಸಿಹಿ ತಿಂಡಿಯೊಂದನ್ನು ನಮ್ಮ ಎಲೆಯಲ್ಲಿ  ಬಡಿಸಲಾಯಿತು. ಅದರ ಹೆಸರು ಜಾಮೂನು ಎಂದು ಹೇಳಲಾಯಿತು. ಅಲ್ಲಿಯವರಿಗೆ ನಾವು ಊಟದ ಮನೆ ಸಿಹಿ ತಿಂಡಿ  ಎಂದರೆ ಕೇವಲ ಲಾಡು, ಚಿರೋಟಿ, ಮೈಸೂರು ಪಾಕ್   ಮತ್ತು  ಕೇಸರಿಬಾತ್  ಮಾತ್ರಾ ಎಂದು ತಿಳಿದಿದ್ದೆವು.  ಓಹ್ ! ಎಷ್ಟು ರುಚಿಯಾಗಿತ್ತು ಜಾಮೂನು! ರುಚಿ ನಾವು ಅಮ್ಮನ ಹತ್ತಿರ ಪುನಃ ಯಾವಾಗ ಹುರುಳಿಹಕ್ಕಲಿನಲ್ಲಿ ನೆಂಟರ ಔತಣ ಮಾಡುವರೆಂದು ಕೇಳುವಂತಾಯಿತು.
ಮೂರನೇ ಮಗಳು ಶಾರದೆಯ ಮದುವೆ
ನಮ್ಮ ದೊಡ್ಡಣ್ಣ (ರಾಮಕೃಷ್ಣ )  ಹುರುಳಿಹಕ್ಕಲಿಗೆ ಆಗಾಗ ಹೋಗಿ ಬರುತ್ತಿದ್ದ. ಹಾಗೆಯೇ ಲಕ್ಷ್ಮೀನಾರಾಯಣರಾಯರಿಗೆ ತುಂಬಾ ಆತ್ಮೀಯನೂ ಆಗಿದ್ದ. ಅವರಿಂದ ಫೋಟೋಗ್ರಫಿ ಕೂಡ ಕಲಿತು ಕ್ಯಾಮೆರಾ ತಂದು ನಮ್ಮ ಮನೆಯವರ ಫೋಟೋಗಳನ್ನು  ತೆಗೆದಿದ್ದ. ಅದುವರೆಗೆ ಕನ್ನಡಿಯಲ್ಲಿ ಮಾತ್ರ ನಮ್ಮನ್ನು ನಾವು ನೋಡಿಕೊಳ್ಳುತ್ತಿದ್ದೆವು. ಅಣ್ಣ ನಮ್ಮ ಫೋಟೋಗಳನ್ನು ತೆಗೆದಾಗ ಅದರಲ್ಲಿ ನಮ್ಮನ್ನು ನೋಡಿ ನಮಗೆ ಪರಮಾಶ್ಚರ್ಯವಾಯಿತು. ಬೇಗನೆ ಅಣ್ಣ ಫೋಟೋಗ್ರಫಿಯಲ್ಲಿ ಪಳಗಿ ಬಿಟ್ಟ. ಲಕ್ಷ್ಮೀನಾರಾಯಣರಾಯರ ಪುಸ್ತಕ ಭಂಡಾರದಿಂದ ಅಣ್ಣ ಅನೇಕ ಪುಸ್ತಕಗಳನ್ನು ಮತ್ತು ಕಸ್ತೂರಿ ಡೈಜೆಸ್ಟ್ ನಮ್ಮ ಮನೆಗೆ ಓದಲು ತರುತ್ತಿದ್ದ. ನಾವು ಆಗ ಪ್ರಾಥಮಿಕ ಶಾಲೆಯಲ್ಲಿದ್ದರೂ ಪುಸ್ತಕಗಳನ್ನೆಲ್ಲಾ ಓದಿ ಬಿಡುತ್ತಿದ್ದೆವು.
ಮೈಸೂರು ಮಲ್ಲಿಗೆ
ಕನ್ನಡದ ಖ್ಯಾತ ಕವಿ ನರಸಿಂಹ ಸ್ವಾಮಿಯವರು ಬರೆದ ಮೈಸೂರು ಮಲ್ಲಿಗೆ ನಮ್ಮ ಬಾಲ್ಯದಲ್ಲಿಯೇ ನಾವು ಓದಿದ ಜನಪ್ರಿಯ ಕವನ ಸಂಕಲನ. ಅವುಗಳಲ್ಲಿ ಹೆಚ್ಚಿನವು ಪ್ರಣಯ ಗೀತೆಗಳೇ ಆಗಿದ್ದವು. ಅಣ್ಣ ಪುಸ್ತಕವನ್ನೂ ಪ್ರಾಯಶಃ ಹುರುಳಿಹಕ್ಕಲಿನಿಂದಲೇ ಓದಲು ನಮ್ಮ ಮನೆಗೆ ತಂದಿದ್ದ. ಆ ಹಾಡುಗಳನ್ನು ಅವನು ಕಲಿತು ತೋಟದಲ್ಲಿ ಕೆಲಸ ಮಾಡುವಾಗ, ಅದರಲ್ಲೂ ಮುಖ್ಯವಾಗಿ ಏಣಿ ಏರಿ ವೀಳ್ಯದೆಲೆ ಕೊಯ್ಯುವಾಗ ಹಾಡಿಕೊಳ್ಳುತ್ತಿದ್ದುದು ಇಂದಿಗೂ ನೆನಪಿದೆ. ಪುಟ್ಟಣ್ಣ ಮತ್ತು ನಾನೂ ಕೂಡ ಬಹು ಬೇಗನೆ ಆ ಹಾಡುಗಳನ್ನು ಕಲಿತು ಬಿಟ್ಟೆವು. ಅವುಗಳಲ್ಲಿ ಕೆಲವು (ಮುಖ್ಯವಾಗಿ “ರಾಯರು ಬಂದರು ಮಾವನ ಮನೆಗೆ”  ಮತ್ತು “ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು”)  ಇಂದೂ ಹೇಳಬಹುದಾದಷ್ಟು ನೆನಪಿನಲ್ಲಿವೆ.

ಇಂದು ಹಿಂತಿರುಗಿ ನೋಡುವಾಗ ನಮಗೆ ಅಣ್ಣ ವಿಶೇಷವಾಗಿ ಕೆಳಕಂಡ ಎರಡು ಹಾಡುಗಳನ್ನು ಹೆಚ್ಚಾಗಿ ಆಗಾಗ ಹಾಡುತ್ತಿದ್ದನೆಂದು ಅನಿಸುತ್ತದೆ.  ಅವೆಂದರೆ:
" ಬಾರೆ  ನನ್ನ ಶಾರದೆ
 ಬಾರೆ ಅತ್ತ ನೋಡದೇ
ಎದುರು ಮಾತನಾಡದೇ"
"ನವಿಲೂರಿನೊಳಗೆಲ್ಲ ನೀನೆ ಬಲು ಚಲುವೆ
ಅದಕೆ ನಮ್ಮಿಬ್ಬರಿಗೆ ನಾಳೆಯೇ ಮದುವೆ "
"ಬೆಳ್ಳ ಬೆಳ್ಳಗೆ ತೆಳ್ಳಗಿರುವೆ ನೀನು
ಬೇಟೆಗಾರನ ಬಿಲ್ಲಿನಂತಿರುವೆ ನೀನು
ಕಪ್ಪಾಗಿ ಒಪ್ಪಾಗಿ ಬೆಳೆದಿರುವ ಹುಬ್ಬು
ಪಾರಿವಾಳದ ಕಣ್ಗೆ ನೆರಳಿನಂತಿಹುದು "
ಅಣ್ಣ ಯಾರನ್ನು ನೆನೆಸಿಕೊಂಡು    ಹಾಡುಗಳನ್ನು ಹಾಡುತ್ತಿದ್ದನೆಂದು ತಿಳಿಯಲು ನಮಗೆ ಹಲವು ವರ್ಷಗಳೇ ಬೇಕಾದವು!
----ಮುಂದುವರಿಯುವುದು ---