Saturday, August 3, 2019

ಹುರುಳಿಹಕ್ಕಲಿನ ಗತ ವೈಭವ - 2



ನವರಾತ್ರಿ ಸಮಾರಾಧನೆ
ನಮ್ಮೂರಿನಲ್ಲಿ ನವರಾತ್ರಿ ಸಮಾರಾಧನೆ ಮುಖ್ಯವಾಗಿ ಮೊದಲಮನೆ (ಪಾಡ್ಯದಂದು ಮೊದಲ ನವರಾತ್ರಿ), ಹೊಸಳ್ಳಿ, ಹುರುಳಿಹಕ್ಕಲು,ಬೆಳವಿನಕೊಡಿಗೆ ಮತ್ತು ಪುರದಮನೆಯಲ್ಲಿ ನಡೆಯುತ್ತಿದ್ದವು.  ಕೊನೆಯ ಮೂರು ಸಮಾರಾಧನೆಗಳು ಕ್ರಮವಾಗಿ ಹುರುಳಿಹಕ್ಕಲು, ಬೆಳವಿನಕೊಡಿಗೆ ಮತ್ತು ಪುರದಮನೆಯಲ್ಲಿ ನಡೆಯುತ್ತಿದ್ದವು. ಪುರದಮನೆಯ ಸಮಾರಾಧನೆಯ ಮಾರನೇ ದಿನ ಮರುಪೂಜೆ ಮುಗಿಸಿ ನಾವೆಲ್ಲ ಶೃಂಗೇರಿಗೆ ದಸರಾ ಉತ್ಸವಕ್ಕೆ ಕಾಲ್ನಡಿಗೆ ಪ್ರಯಾಣ ಮಾಡುತ್ತಿದ್ದೆವು. ಅದರಲ್ಲಿ ಹುರುಳಿಹಕ್ಕಲು ಸಮಾರಾಧನೆ ಒಂದು ಕಾರಣಕ್ಕಾಗಿ ಪ್ರಸಿದ್ಧವಾಗಿತ್ತು. ಅದೆಂದರೆ ಊಟಕ್ಕೆ ಕೂತಾಗ ಕೊಡುತ್ತಿದ್ದ ದಕ್ಷಿಣೆ. ಎಲ್ಲಾ ಕಡೆಗಳಲ್ಲೂ ಒಂದಾಣೆ ಅಥವಾ ಎರಡಾಣೆ ದಕ್ಷಿಣೆ ಕೊಡುತ್ತಿದ್ದರೆ ಹುರುಳಿಹಕ್ಕಲಿನಲ್ಲಿ ನಾಲ್ಕಾಣೆ ದಕ್ಷಿಣೆ ಕೊಡುತ್ತಿದ್ದರು!  ಆದರೆ ನಮಗೆ ನಮ್ಮೂರಿನಲ್ಲಿ ಅಥವಾ ಸುತ್ತಮುತ್ತ ಅದನ್ನು ಖರ್ಚು ಮಾಡಲು ಯಾವುದೇ ಅಂಗಡಿ ಅಥವಾ ಹೋಟೆಲ್ ಇರಲಿಲ್ಲ. ಹಾಗಾಗಿ ಅದು ನಮ್ಮಮ್ಮನ ಕೈ ಸೇರುತ್ತಿತ್ತು.
ಹುಡುಗರ ಜಟಾಪಟಿ
ಹುರುಳಿಹಕ್ಕಲಿನ ಸಮಾರಾಧನೆಯ ದಿನ ನಾವು ಹುಡುಗರು ಹಲವು ಬಾರಿ ಎರಡು ಗುಂಪನ್ನು ಮಾಡಿಕೊಂಡು ಹೊಡೆದಾಟ ಬಡಿದಾಟದಲ್ಲಿ ತೊಡಗುತ್ತಿದ್ದುದು ನೆನಪಿಗೆ ಬರುತ್ತಿದೆ. ಸಮಾರಂಭಕ್ಕೆ ಪ್ರತಿ ವರ್ಷವೂ ತಲವಾನೆ ಫ್ಯಾಮಿಲಿ ಬರುತ್ತಿತ್ತು. ಅವರಲ್ಲಿ ಕಿರಿಯನಾದ ಹಾಗೂ ಬಲಾಢ್ಯನಾದ ಕೃಷ್ಣ ಹೊಡೆದಾಟದಲ್ಲಿ ನಮ್ಮೊಡನೆ ಪಾಲ್ಗೊಳ್ಳುತ್ತಿದ್ದ. ಇನ್ನು ಮೇಲಿನಕೊಡಿಗೆ ಕೃಷ್ಣ ಮತ್ತು  ಬೆಳವಿನಕೊಡಿಗೆ ನಾಗಭೂಷಣ ಜಗಳದಲ್ಲಿ ಸೇರಿಕೊಳ್ಳುತ್ತಿದ್ದುದು ನೆನಪಿದೆ. ನಮ್ಮ ಪುಟ್ಟಣ್ಣನೂ ಒಬ್ಬ ಸ್ಟ್ರಾಂಗ್ ಪರ್ಸನ್ ಆಗಿದ್ದರಿಂದ ನನಗೆ ಶತ್ರುಗಳ ಧಾಳಿಯಿಂದ ರಕ್ಷಣೆ ಸಿಗುತ್ತಿತ್ತು!  ಸಮಾರಾಧನೆ ಪೂಜೆಗೆ ಕರೆ ಬರುವಾಗ ನಮ್ಮ ಕಾಳಗ ನಿಂತು ಹೋಗುತ್ತಿತ್ತು. ಮುಂದಿನ ಸಮಾರಾಧನೆ ಬರುವ ವೇಳೆಗೆ ನಾವು ಬಾರಿ ಯಾರನ್ನು ನಮ್ಮ ತಂಡಕ್ಕೆ ಸೇರಿಸಿಕೊಳ್ಳಬಹುದೆಂದು ಲೆಖ್ಖ ಹಾಕಿರುತ್ತಿದ್ದೆವು!
ಸಾವಿತ್ರಿಯ ಮದುವೆ
ಲಕ್ಷ್ಮೀನಾರಾಯಣರಾಯರ ಹಿರಿಯ ಮಗಳು ಸಾವಿತ್ರಿಯ ಮದುವೆ ಅಗಳಗಂಡಿ ಕೆರೆಮನೆ ತಿಮ್ಮಪ್ಪಯ್ಯನವರ ಮಗ ಲಕ್ಷ್ಮೀನಾರಾಯಣನೊಡನೆ ಹುರುಳಿಹಕ್ಕಲಿನ ಮನೆಯಲ್ಲಿಯೇ ತುಂಬಾ ವಿಜೃಂಭಣೆಯಿಂದ ನಡೆಸಲಾಯಿತು. ಪ್ರಾಯಶಃ ರಾಯರು ತಿಮ್ಮಪ್ಪಯ್ಯನವರ ಬಾಲ್ಯ ಸ್ನೇಹಿತರಿರಬೇಕೆಂದು ನಾನು ಬರವಣಿಗೆಗೆ ಜೋಡಿಸಿರುವ ಫೋಟೋ ಒಂದರಿಂದ ತಿಳಿದು ಬರುತ್ತದೆ. ರಾಯರು ಮತ್ತು ತಿಮ್ಮಪ್ಪಯ್ಯನವರು ತರುಣರಾಗಿದ್ದಾಗ ತೆಗೆದ ಫೋಟೋ ಅದು. ತರುಣ ರಾಯರು ಎಷ್ಟು ಆಕರ್ಷಕ ವ್ಯಕ್ತಿತ್ವ ಹೊಂದಿದ್ದರೆಂದು ಫೋಟೋದಲ್ಲಿ ಗಮನಿಸ ಬಹುದು. ಹಿಂದಿನ ಸಾಲಿನಲ್ಲಿ ನಿಂತಿರುವರಲ್ಲಿ ಗಾಂಧಿ ಟೋಪಿ ಧರಿಸಿರುವರು ತಿಮ್ಮಪ್ಪಯ್ಯನವರ ಸಹೋದರ ಪುಟ್ಟಶಾಮಯ್ಯ. ಉಳಿದವರ ಹೆಸರುಗಳು ಮತ್ತು ಪರಿಚಯ ತಿಳಿದಿಲ್ಲ. ಗೊತ್ತಿದ್ದವರು ತಿಳಿಸಬಹುದು. 
ಮದುವೆಗೆ ಹೋಗುವುದಕ್ಕೆ ಪುಟ್ಟಣ್ಣ ಮತ್ತು ನನಗೆ ಒಂದು ಸಮಸ್ಯೆ ಇತ್ತು. ನಮ್ಮ ಮಾಮೂಲಿ ಕ್ಷೌರಿಕನಾದ ಎತ್ತಿನಹಟ್ಟಿ ವಾಸು ಊರಿಗೆ ಹೋಗಿ ತುಂಬಾ ದಿನ ರಜೆ ಮಾಡಿದ್ದರಿಂದ ನಮ್ಮಿಬ್ಬರ ತಲೆಕೂದಲು ಜಡೆ ಹೆಣೆಯಬೇಕಾದ ಮಟ್ಟಕ್ಕೆ ತಲುಪಿತ್ತು. ಕ್ಷೌರ ಮಾಡಿಸದಿದ್ದರೆ ನಾವು ಮದುವೆಗೆ ಹೋಗುವುದಿಲ್ಲವೆಂದು ಮುಷ್ಕರ ಹೂಡಿದ್ದೆವು. ತಂದೆಯವರು ನಮ್ಮ ತಲೆಯ ಮೇಲೆ ಎರಡು ಹೊತ್ತಲೆ ವೀಳ್ಯದೆಲೆ ಏರಿಸಿ ಅದನ್ನು ಮಾರಿ ಬಂದ ಹಣದಿಂದ ಕ್ಷೌರ ಮಾಡಿಸಿಕೊಂಡು ಬರುವಂತೆ ಜಯಪುರಕ್ಕೆ ಕಾಲ್ನಡಿಗೆಯಲ್ಲಿ ಕಳಿಸಿದರು. ಅನುಭವವನ್ನು ನಾನು ನನ್ನ ಬಾಲ್ಯ ಕಾಲದ ನೆನಪುಗಳಲ್ಲಿ ವಿವರವಾಗಿ ಬರೆದಿದ್ದೇನೆ. ಅಂತೂ ನಾವು ಮದುವೆ ಮನೆಯಲ್ಲಿ ಹಾಜರಿರುವಂತಾಯಿತು.
ಸುಶೀಲಳ ಮದುವೆ
ಸಾವಿತ್ರಿಯ ಮದುವೆಯ ವೇಳೆಯಲ್ಲೇ ಸುಶೀಲಳ ಮದುವೆ ವಳಲೆ ಕೃಷ್ಣ ಅವರೊಡನೆ ಮುಂದೆ ನಡೆಯುವುದೆಂದು ನಾವು ಕೇಳಿದ್ದೆವು. ಅಂತೆಯೇ ಮದುವೆಯನ್ನೂ ತುಂಬಾ ವಿಜೃಂಭಣೆಯಿಂದ ಆಗುಂಬೆಯಲ್ಲಿ ನಡೆಸಲಾಯಿತಂತೆ.

ನೆಂಟರ ಔತಣ ಮತ್ತು ನಮ್ಮೂರಿಗೆ ಜಾಮೂನಿನ ಆಗಮನ!
ದಿನಗಳಲ್ಲಿ ಅಗಳಗಂಡಿ ದಾರಿಯಲ್ಲಿದ್ದ ನೀರ್ಕಟ್ಟು ಎಂಬಲ್ಲಿ ಕೃಷ್ಣಯ್ಯ ಎಂಬ ಪಾಕಶಾಸ್ತ್ರ ಪ್ರವೀಣರಿದ್ದರು. ಪ್ರಾಯಶಃ ಅವರು ಲಕ್ಷ್ಮೀನಾರಾಯಣರಾಯರ ಭಾವನಾದ  ವೆಂಕಟರಮಣಯ್ಯನವರ ಸಹೋದರರಿರಬೇಕು. ಕೃಷ್ಣಯ್ಯನವರೊಬ್ಬ ಲೋಕ ಸಂಚಾರಿ. ಊರೂರು ತಿರುಗುತ್ತಿದ್ದ ಕೃಷ್ಣಯ್ಯ ಪ್ರಾಯಶಃ ಹೋಟೆಲ್ಲುಗಳಲ್ಲಿ ಕೆಲಸ ಮಾಡುವಾಗ ಪಾಕಶಾಸ್ತ್ರ ಪರಿಣಿತರಾಗಿದ್ದಿರಬೇಕು. ಕೃಷ್ಣಯ್ಯನವರು ಸಿಹಿತಿಂಡಿ ಮಾಡುವುದರಲ್ಲಿ ಪ್ರವೀಣರಾಗಿದ್ದರು. ಅವರು ತಯಾರಿಸಿದ ಮೈಸೂರುಪಾಕದ ರುಚಿ ಬಾಯಿ ಚಪ್ಪರಿಸುವಂತಿರುತ್ತಿತ್ತು.

ಹುರುಳಿಹಕ್ಕಲಿನಲ್ಲಿ ಸುಶೀಲಳ ಮದುವೆಯ ಅಂಗವಾಗಿ "ನೆಂಟರ ಔತಣ" ಒಂದನ್ನು ಏರ್ಪಡಿಸಲಾಗಿತ್ತು. ನಮಗೆ ಮೊದಲೇ ತಿಳಿದು ಬಂದಂತೆ ಪಾಕಶಾಸ್ತ್ರ ಪ್ರವೀಣ ಕೃಷ್ಣಯ್ಯನವರು ನಮಗೊಂದು ಹೊಚ್ಚ ಹೊಸ ಸಿಹಿ ತಿಂಡಿಯನ್ನು ಪರಿಚಯಿಸುವರಿದ್ದರು. ನಮ್ಮ ನಿರೀಕ್ಷೆಯಂತೆ ಅತ್ಯಂತ ಆಕರ್ಷಕವಾದ ಸಿಹಿ ತಿಂಡಿಯೊಂದನ್ನು ನಮ್ಮ ಎಲೆಯಲ್ಲಿ  ಬಡಿಸಲಾಯಿತು. ಅದರ ಹೆಸರು ಜಾಮೂನು ಎಂದು ಹೇಳಲಾಯಿತು. ಅಲ್ಲಿಯವರಿಗೆ ನಾವು ಊಟದ ಮನೆ ಸಿಹಿ ತಿಂಡಿ  ಎಂದರೆ ಕೇವಲ ಲಾಡು, ಚಿರೋಟಿ, ಮೈಸೂರು ಪಾಕ್   ಮತ್ತು  ಕೇಸರಿಬಾತ್  ಮಾತ್ರಾ ಎಂದು ತಿಳಿದಿದ್ದೆವು.  ಓಹ್ ! ಎಷ್ಟು ರುಚಿಯಾಗಿತ್ತು ಜಾಮೂನು! ರುಚಿ ನಾವು ಅಮ್ಮನ ಹತ್ತಿರ ಪುನಃ ಯಾವಾಗ ಹುರುಳಿಹಕ್ಕಲಿನಲ್ಲಿ ನೆಂಟರ ಔತಣ ಮಾಡುವರೆಂದು ಕೇಳುವಂತಾಯಿತು.
ಮೂರನೇ ಮಗಳು ಶಾರದೆಯ ಮದುವೆ
ನಮ್ಮ ದೊಡ್ಡಣ್ಣ (ರಾಮಕೃಷ್ಣ )  ಹುರುಳಿಹಕ್ಕಲಿಗೆ ಆಗಾಗ ಹೋಗಿ ಬರುತ್ತಿದ್ದ. ಹಾಗೆಯೇ ಲಕ್ಷ್ಮೀನಾರಾಯಣರಾಯರಿಗೆ ತುಂಬಾ ಆತ್ಮೀಯನೂ ಆಗಿದ್ದ. ಅವರಿಂದ ಫೋಟೋಗ್ರಫಿ ಕೂಡ ಕಲಿತು ಕ್ಯಾಮೆರಾ ತಂದು ನಮ್ಮ ಮನೆಯವರ ಫೋಟೋಗಳನ್ನು  ತೆಗೆದಿದ್ದ. ಅದುವರೆಗೆ ಕನ್ನಡಿಯಲ್ಲಿ ಮಾತ್ರ ನಮ್ಮನ್ನು ನಾವು ನೋಡಿಕೊಳ್ಳುತ್ತಿದ್ದೆವು. ಅಣ್ಣ ನಮ್ಮ ಫೋಟೋಗಳನ್ನು ತೆಗೆದಾಗ ಅದರಲ್ಲಿ ನಮ್ಮನ್ನು ನೋಡಿ ನಮಗೆ ಪರಮಾಶ್ಚರ್ಯವಾಯಿತು. ಬೇಗನೆ ಅಣ್ಣ ಫೋಟೋಗ್ರಫಿಯಲ್ಲಿ ಪಳಗಿ ಬಿಟ್ಟ. ಲಕ್ಷ್ಮೀನಾರಾಯಣರಾಯರ ಪುಸ್ತಕ ಭಂಡಾರದಿಂದ ಅಣ್ಣ ಅನೇಕ ಪುಸ್ತಕಗಳನ್ನು ಮತ್ತು ಕಸ್ತೂರಿ ಡೈಜೆಸ್ಟ್ ನಮ್ಮ ಮನೆಗೆ ಓದಲು ತರುತ್ತಿದ್ದ. ನಾವು ಆಗ ಪ್ರಾಥಮಿಕ ಶಾಲೆಯಲ್ಲಿದ್ದರೂ ಪುಸ್ತಕಗಳನ್ನೆಲ್ಲಾ ಓದಿ ಬಿಡುತ್ತಿದ್ದೆವು.
ಮೈಸೂರು ಮಲ್ಲಿಗೆ
ಕನ್ನಡದ ಖ್ಯಾತ ಕವಿ ನರಸಿಂಹ ಸ್ವಾಮಿಯವರು ಬರೆದ ಮೈಸೂರು ಮಲ್ಲಿಗೆ ನಮ್ಮ ಬಾಲ್ಯದಲ್ಲಿಯೇ ನಾವು ಓದಿದ ಜನಪ್ರಿಯ ಕವನ ಸಂಕಲನ. ಅವುಗಳಲ್ಲಿ ಹೆಚ್ಚಿನವು ಪ್ರಣಯ ಗೀತೆಗಳೇ ಆಗಿದ್ದವು. ಅಣ್ಣ ಪುಸ್ತಕವನ್ನೂ ಪ್ರಾಯಶಃ ಹುರುಳಿಹಕ್ಕಲಿನಿಂದಲೇ ಓದಲು ನಮ್ಮ ಮನೆಗೆ ತಂದಿದ್ದ. ಆ ಹಾಡುಗಳನ್ನು ಅವನು ಕಲಿತು ತೋಟದಲ್ಲಿ ಕೆಲಸ ಮಾಡುವಾಗ, ಅದರಲ್ಲೂ ಮುಖ್ಯವಾಗಿ ಏಣಿ ಏರಿ ವೀಳ್ಯದೆಲೆ ಕೊಯ್ಯುವಾಗ ಹಾಡಿಕೊಳ್ಳುತ್ತಿದ್ದುದು ಇಂದಿಗೂ ನೆನಪಿದೆ. ಪುಟ್ಟಣ್ಣ ಮತ್ತು ನಾನೂ ಕೂಡ ಬಹು ಬೇಗನೆ ಆ ಹಾಡುಗಳನ್ನು ಕಲಿತು ಬಿಟ್ಟೆವು. ಅವುಗಳಲ್ಲಿ ಕೆಲವು (ಮುಖ್ಯವಾಗಿ “ರಾಯರು ಬಂದರು ಮಾವನ ಮನೆಗೆ”  ಮತ್ತು “ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು”)  ಇಂದೂ ಹೇಳಬಹುದಾದಷ್ಟು ನೆನಪಿನಲ್ಲಿವೆ.

ಇಂದು ಹಿಂತಿರುಗಿ ನೋಡುವಾಗ ನಮಗೆ ಅಣ್ಣ ವಿಶೇಷವಾಗಿ ಕೆಳಕಂಡ ಎರಡು ಹಾಡುಗಳನ್ನು ಹೆಚ್ಚಾಗಿ ಆಗಾಗ ಹಾಡುತ್ತಿದ್ದನೆಂದು ಅನಿಸುತ್ತದೆ.  ಅವೆಂದರೆ:
" ಬಾರೆ  ನನ್ನ ಶಾರದೆ
 ಬಾರೆ ಅತ್ತ ನೋಡದೇ
ಎದುರು ಮಾತನಾಡದೇ"
"ನವಿಲೂರಿನೊಳಗೆಲ್ಲ ನೀನೆ ಬಲು ಚಲುವೆ
ಅದಕೆ ನಮ್ಮಿಬ್ಬರಿಗೆ ನಾಳೆಯೇ ಮದುವೆ "
"ಬೆಳ್ಳ ಬೆಳ್ಳಗೆ ತೆಳ್ಳಗಿರುವೆ ನೀನು
ಬೇಟೆಗಾರನ ಬಿಲ್ಲಿನಂತಿರುವೆ ನೀನು
ಕಪ್ಪಾಗಿ ಒಪ್ಪಾಗಿ ಬೆಳೆದಿರುವ ಹುಬ್ಬು
ಪಾರಿವಾಳದ ಕಣ್ಗೆ ನೆರಳಿನಂತಿಹುದು "
ಅಣ್ಣ ಯಾರನ್ನು ನೆನೆಸಿಕೊಂಡು    ಹಾಡುಗಳನ್ನು ಹಾಡುತ್ತಿದ್ದನೆಂದು ತಿಳಿಯಲು ನಮಗೆ ಹಲವು ವರ್ಷಗಳೇ ಬೇಕಾದವು!
----ಮುಂದುವರಿಯುವುದು ---

No comments: