Thursday, August 15, 2019

ಹುರುಳಿಹಕ್ಕಲಿನ ಗತ ವೈಭವ – 5



(ತಿಮ್ಮಪ್ಪನ ಬಾಲ್ಯದ ಎರಡು ಫೋಟೋಗಳು)
ನಂಜುಂಡ ಭಟ್ಟರ ಆಗಮನ ಮತ್ತು ಮೇಲಿನಕೊಡಿಗೆ ಸೀತಾರಾಮಯ್ಯ
ಮತ್ತು ಶ್ರೀನಿವಾಸಯ್ಯನವರ ಸಂಸಾರಗಳ ನಿರ್ಗಮನ
ಹುರುಳಿಹಕ್ಕಲಿಗೆ ತುಂಬಾ ಸಮೀಪದಲ್ಲೇ ಇದ್ದ ಮೇಲಿನಕೊಡಿಗೆಯಲ್ಲಿ ಸೀತಾರಾಮಯ್ಯ ಮತ್ತು ಶ್ರೀನಿವಾಸಯ್ಯನವರ ಸಂಸಾರಗಳು ಲಕ್ಷ್ಮೀನಾರಾಯಣರಾಯರ ಅಡಿಕೆ ತೋಟ ಮತ್ತು ಬತ್ತದ ಗದ್ದೆಗಳನ್ನು ತಲೆತಲಾಂತರದಿಂದ ಗೇಣಿ ಮಾಡಿಕೊಂಡಿದ್ದವು. ಸೀತಾರಾಮಯ್ಯನವರ ಪತ್ನಿ ಮಧ್ಯ ವಯಸ್ಸಿನಲ್ಲೇ ತೀರಿಕೊಂಡಿದ್ದರು. ಆದರೆ ಸೀತಾರಾಮಯ್ಯನವರು  ಬೇರೆ ಮದುವೆಯಾಗದೇ ಮಕ್ಕಳನ್ನು ಬೆಳೆಸಿ ಮೇಲೆ ತಂದಿದ್ದರು. ಆ ದಿನಗಳಲ್ಲಿ ನಮ್ಮ ಅಮ್ಮ ಕೆಲವು ಬಾರಿ ನಮ್ಮ ಚೇಷ್ಟೆ ಮತ್ತು ತಂಟೆಗಳನ್ನು ತಾಳಲಾರದೇ ನಮಗೂ ಸೀತಾರಾಮಯ್ಯನವರ ಮಕ್ಕಳ ಪರಿಸ್ಥಿತಿ ಬಂದಿದ್ದರೆ ಬುದ್ಧಿ ಬರುತ್ತಿತ್ತೆಂದು ಹೇಳುತ್ತಿದ್ದುದು ನೆನಪಾಗುತ್ತಿದೆ. ಶ್ರೀನಿವಾಸಯ್ಯನವರ ತಮ್ಮನೊಬ್ಬ ಅವರೊಂದಿಗಿದ್ದುದು ನೆನಪಾಗುತ್ತಿದೆ. ಅವರ ಮಗ ಗಣೇಶನ ಹಾಡುಗಾರಿಕೆಯ ಬಗ್ಗೆ ಆಗಲೇ ಬರೆದಿದ್ದೇನೆ.
ಅಚ್ಚಣ್ಣ ಶೆಟ್ಟರ ಸಾಲ ತೀರಿಸಲು ರಾಯರು ಈ ಎರಡು ಸಂಸಾರಗಳು ಗೇಣಿ ಮಾಡುತ್ತಿದ್ದ ಜಮೀನುಗಳನ್ನು ಕೊಡೂರು ಶ್ಯಾಮಭಟ್ಟರ ಮಗ ನಂಜುಂಡಭಟ್ಟರಿಗೆ ಮಾರುವುದರೊಡನೆ ಈ ಎರಡು ಸಂಸಾರಗಳು ನಮ್ಮೂರಿನಿಂದ ಎತ್ತಂಗಡಿಯಾದವು. ಶ್ರೀನಿವಾಸಯ್ಯನವರು ಶಿವಮೊಗ್ಗೆ ಸೇರಿ ದೊಡ್ಡಪೇಟೆಯಲ್ಲಿ ಬಾಳೆಹಣ್ಣಿನ ಬುಟ್ಟಿ ಇಟ್ಟುಕೊಂಡು ಮಾರುವುದನ್ನು ನಾನು ನೋಡಿದ್ದೆ. ಆದರೆ ಸೀತಾರಾಮಯ್ಯನವರ ಮಕ್ಕಳು ಬೇರೆ ಬೇರೆ ಕಡೆ ಚದುರಿ ಹೋದರೆಂದು ಕೇಳಿದ್ದೆ. ನಂಜುಂಡ ಭಟ್ಟರ ಸಂಸಾರ ನಮ್ಮೂರಿಗೆ ಹೊಸದಾಗಿ ಸೇರ್ಪಡೆಯಾಯಿತು.
ರಾಯರ ಹಣಕಾಸಿನ ವ್ಯವಹಾರ
ಅತ್ಯಂತ ವಿದ್ಯಾವಂತರೂ ಮತ್ತು ತಿಳುವಳಿಕಸ್ಥರೂ ಮತ್ತು ಗ್ರಾಮ ಪಂಚಾಯತಿಯ ಅಧ್ಯಕ್ಷರೂ ಆಗಿದ್ದ ಲಕ್ಷ್ಮೀನಾರಾಯಣರಾಯರು ಹಣಕಾಸಿನ ವ್ಯವಹಾರದಲ್ಲಿ ಆ ಬಗೆಯ ಬುದ್ಧಿವಂತಿಕೆಯನ್ನು ತೋರಿಸದಿದ್ದದು ಅವರ ಸಂಸಾರದ ದುರಾದೃಷ್ಟವೆನ್ನಲೇ ಬೇಕು. ಅವರ ಅಪಾರ ಪಿತ್ರಾರ್ಜಿತ ಸಂಪತ್ತು ನಮ್ಮ ಕಣ್ಣ ಮುಂದೆಯೇ ಕರಗಿ ಹೋಗಿದ್ದನ್ನು ನಾವು ನೋಡುವಂತಾಯಿತು. ನಮ್ಮ ಊರಿನಲ್ಲೇ ಗೇಣಿ ಮಾಡುತ್ತಿದ್ದ ಕೆಲವು ಪರಿವಾರಗಳು ಶ್ರೀಮಂತರಾಗಿ ಬಿಟ್ಟಿದ್ದನ್ನು ನಾವು ಕಣ್ಣಾರೆ ಕಂಡಿದ್ದೆವು. ಆದರೆ ರಾಯರು ತಮ್ಮ ಒಂದೇ ತಲೆಮಾರಿನಲ್ಲಿ ಪಿತ್ರಾರ್ಜಿತ ಆಸ್ತಿಯನ್ನು  ಕಳೆದುಬಿಟ್ಟು ಊರು ಬಿಡುವಂತಾಯಿತು.
ರಾಯರ ಸಂಸಾರದ ಶಿವಮೊಗ್ಗೆ ಪಯಣ
ಪ್ರಾಯಶಃ ಅದು ೧೯೬೪ನೇ ಇಸವಿ ಇರಬೇಕು. ನಾನಾಗ ಶಿವಮೊಗ್ಗೆಯ ಬ್ರಾಹ್ಮಣರ ಹಾಸ್ಟೆಲಿನಲ್ಲಿದ್ದು  ನ್ಯಾಷನಲ್
ಹೈಸ್ಕೂಲಿನಲ್ಲಿ ಓದುತ್ತಿದ್ದೆ. ಒಂದು ಸಂಜೆ ನಮ್ಮ ದೊಡ್ಡಣ್ಣ ನನ್ನನ್ನು ನೋಡಲು ಹಾಸ್ಟೆಲಿಗೆ  ಬಂದ. ಅವನಿಂದ ಲಕ್ಷ್ಮೀನಾರಾಯಣರಾಯರು  ಹುರುಳಿಹಕ್ಕಲಿನ ಸಂಪೂರ್ಣ ಜಮೀನು  ಮತ್ತೆ ಮನೆಯನ್ನು ನಂಜುಂಡ ಭಟ್ಟರ ಅಣ್ಣನ ಮಗ ಶಂಕರ ಭಟ್ಟರಿಗೆ ಮಾರಿ ಶಿವಮೊಗ್ಗೆಗೆ ಬಂದಿರುವುದು ತಿಳಿಯಿತು. ಆ ದಿನಗಳಲ್ಲಿ ನಮ್ಮ ಮನೆಯ ಹಣಕಾಸಿನ ಪರಿಸ್ಥಿತಿ ಕೂಡ ಸರಿಯಿಲ್ಲದಿದ್ದರಿಂದ ಅಣ್ಣ ಮತ್ತು ಅತ್ತಿಗೆ ಕೂಡ ರಾಯರೊಡನೆ ಶಿವಮೊಗ್ಗೆ ಸೇರಿದ್ದು ತಿಳಿಯಿತು.
ರಾಯರೇನೋ ಊರು ಬಿಡುವ ತೀರ್ಮಾನ ಮಾಡಿ ಸಂಸಾರ ಸಮೇತ ಶಿವಮೊಗ್ಗೆ ಸೇರಿದರು. ಆದರೆ ಆ ತೀರ್ಮಾನಕ್ಕೆ ಉಳಿದವರ ಒಪ್ಪಿಗೆ ಇತ್ತೇ ಎಂಬುದು ತಿಳಿದು ಬರುವುದಿಲ್ಲ. ಮುಖ್ಯವಾಗಿ  ಮೆಜಾರಿಟಿಗೆ ಬಂದಿದ್ದ ಅವರ ಹಿರಿಯ ಮಗ ತಿಮ್ಮಪ್ಪನ ಒಪ್ಪಿಗೆ ಇತ್ತೇ ಎಂಬ ಪ್ರಶ್ನೆಗೆ ಈಗ ಉತ್ತರವಿಲ್ಲ.  ಊರು ಬಿಡುವ ಮೊದಲು ತಿಮ್ಮಪ್ಪನಿಗೆ ನಮ್ಮೂರಿನ ಹುಡುಗಿಯೊಬ್ಬಳೊಡನೆ ಮದುವೆ ನಿಶ್ಚಯವಾಗಿತ್ತೆಂದು ನಾವು ಕೇಳಿದ್ದೆವು.  ರಾಯರ  ಊರು ಬಿಡುವ ತೀರ್ಮಾನದೊಂದಿಗೆ ಆ ಸಂಬಂಧ ಮುರಿದು ಬಿದ್ದಿರಬೇಕು. ಅದು ತಿಮ್ಮಪ್ಪನ ಮೇಲೆ ಯಾವ ಬಗೆಯ ಪರಿಣಾಮ ಬೀರಿರಬೇಕೆಂಬುದು ಯಕ್ಷ ಪ್ರಶ್ನೆಯಾಗಿದೆ. 
ರಾಯರ ದಾಯಾದಿಗಳೇ ಆದ ಬೆಳವಿನಕೊಡಿಗೆ  ಗಣೇಶಯ್ಯನವರು ಊರು ಬಿಟ್ಟು ಶಿವಮೊಗ್ಗೆ ಸೇರಿದ್ದನ್ನು ಇಲ್ಲಿ ಸ್ಮರಿಸಬಹುದು. ಗಣೇಶಯ್ಯನವರು ತಮ್ಮ ಪಾಲಿನ ಆಸ್ತಿಯನ್ನು ಹಾಗೆಯೇ ಬಿಟ್ಟು ಶಿವಮೊಗ್ಗೆಯಲ್ಲಿ ಸ್ವಂತ ಮನೆ ಕೊಂಡ ನಂತರವೇ ಊರು ಬಿಟ್ಟಿದ್ದರು. ಮಾತ್ರವಲ್ಲ ಗಣೇಶಯ್ಯ-ಕಾವೇರಮ್ಮ ದಂಪತಿಗಳು ತಿಮ್ಮಪ್ಪಯ್ಯ ಮತ್ತು ವೆಂಕಪ್ಪಯ್ಯನವರ ಮಕ್ಕಳನ್ನು ತಮ್ಮ ಮನೆಯಲ್ಲಿಟ್ಟುಕೊಂಡು ವಿದ್ಯಾಭ್ಯಾಸ ಮಾಡಿಸಿದ್ದರು.
ಆದರೆ ಲಕ್ಷ್ಮೀನಾರಾಯಣರಾಯರು ಒಂದು ಲಕ್ಷಕ್ಕಿಂತಲೂ ಮೇಲ್ಪಟ್ಟು ರೂಪಾಯಿಗಳನ್ನು (ಅದರ ಆ ಕಾಲದ ಬೆಲೆಯನ್ನು ಈಗ ಊಹಿಸಲೂ ಅಸಾಧ್ಯ) ಕೈಯಲ್ಲಿ  ಇಟ್ಟುಕೊಂಡು ಶಿವಮೊಗ್ಗೆ  ಸೇರಿದ್ದರೂ ಸ್ವಂತ  ಮನೆ ಮಾಡಲಿಲ್ಲ. ಅವರು ಬಂಡವಾಳ ಹೂಡಿದ ವ್ಯವಹಾರಗಳೂ ನಷ್ಟವನ್ನೇ ಉಂಟು ಮಾಡಿದವಂತೆ. ಅವರು ಕೊಟ್ಟ ಸಾಲಗಳೂ ವಾಪಾಸ್ ಬರಲಿಲ್ಲವಂತೆ. ಹಿರಿಯ ಮಕ್ಕಳಾದ ತಿಮ್ಮಪ್ಪ ಮತ್ತು ರಮೇಶ ಬಸ್ ಕಂಪನಿಯಲ್ಲಿ ಕೆಲಸ ಮಾಡತೊಡಗಿದರಂತೆ. ಆದರೆ ಆ ಕೆಲಸಗಳು ಹೆಚ್ಚು ಸಂಬಳ ಕೊಡುವಂತಹವಾಗಿರಲಿಲ್ಲವಂತೆ. ಪರಿಸ್ಥಿತಿ ಯಾವ  ಮಟ್ಟಕ್ಕೆ ಹೋಯಿತೆಂದರೆ ತಿಮ್ಮಪ್ಪ ಇದ್ದಕಿದ್ದಂತೆ ಒಂದು ದಿನ ಕಾಣೆಯಾಗಿ ಹೋದನಂತೆ. ಹಿಂದೆ ನಮ್ಮೂರಿನಿಂದ ಕಾಣೆಯಾಗಿ ಹೋದವರು ಸ್ವಲ್ಪ ವರ್ಷಗಳ ನಂತರ ಹಿಂದಿರುಗಿದ್ದರು. ಆದರೆ ತಿಮ್ಮಪ್ಪನೆಂದೂ ಹಿಂತಿರುಗಿ ಬರಲೇ ಇಲ್ಲ.
ಮುಕ್ತಾಯ
ತಿಮ್ಮಪ್ಪ ಕಾಣೆಯಾದ ನಂತರ ರಮೇಶ ತುಂಬಾ ಹೋರಾಟ ಮಾಡಿ ಇಂದು ತೃಪ್ತಿಯ ಸಂಸಾರ ನಡೆಸುತ್ತಿದ್ದಾನೆ. ಕಿರಿಯ ಮಗ ಭಾಸ್ಕರನೂ ಬೆಂಗಳೂರಿನಲ್ಲಿ ಒಳ್ಳೆಯ ಉದ್ಯೋಗ, ಸಂಸಾರ ಹೊಂದಿದ್ದಾನೆ. ಹೇಮಾ ಮತ್ತು ಕಸ್ತೂರಿ ಕೂಡ ಬೆಂಗಳೂರಿನಲ್ಲೇ ತೃಪ್ತಿಯ ಸಂಸಾರ ನಡೆಸುತ್ತಿದ್ದಾರೆ. ಆದರೆ ಸದಾಶಿವ ಶಿವಮೊಗ್ಗದಲ್ಲೇ ಕಷ್ಟಪಟ್ಟು ಸಂಸಾರ ನಡೆಸುತ್ತಿದ್ದವನು ಇದ್ದಕ್ಕಿದ್ದಂತೆ ಕಾಣೆಯಾಗಿ ಹೋದುದೊಂದು ದುರಾದೃಷ್ಟವೆನ್ನಲೇ ಬೇಕು. ಲಕ್ಷ್ಮೀನಾರಾಯಣರಾಯರು-ರುಕ್ಮಿಣಿಯಮ್ಮ ದಂಪತಿಗಳು ಕಾಲವಾಗಿ ಎಷ್ಟೋ ವರ್ಷಗಳು ಸಂದಿವೆ. ದೇವರು ಅವರ  ಆತ್ಮಕ್ಕೆ ಶಾತಿಯನ್ನೀಯಲಿ
-----ಮುಗಿಯಿತು------

No comments: