Friday, August 2, 2019

ಹುರುಳಿಹಕ್ಕಲಿನ ಗತ ವೈಭವ -1




(ಫೋಟೋಗಳಲ್ಲಿ ಕಾಣಿಸುವವರು ಕ್ರಮವಾಗಿ ಸುಬ್ಬರಾಯರು, ರುಕ್ಮಿಣಮ್ಮ-ಲಕ್ಷ್ಮೀನಾರಾಯಣರಾಯರು,ಲಕ್ಷ್ಮೀನಾರಾಯಣರಾಯರು ಮಗ ತಿಮ್ಮಪ್ಪನೊಡನೆ ಮತ್ತು ಸಾವಿತ್ರಿ, ಸುಶೀಲ ಮತ್ತು ಶಾರದ)

ಪೀಠಿಕೆ
ನಮ್ಮೂರಿನ ಗತಕಾಲದ ಸಂಸ್ಕೃತಿ, ಪರಿಸರ, ವಿಶಿಷ್ಟ ವ್ಯಕ್ತಿಗಳ ಪರಿಚಯ ಮತ್ತು ಆ ಕಾಲದಲ್ಲಿ ನಡೆದಿದ್ದ ವಿಶೇಷ ಸಂಗತಿಗಳು ನಮ್ಮ ಮುಂದಿನ ಪೀಳಿಗೆಯವರಿಗೆ ಸದಾ ಕಾಲವೂ ಲಭ್ಯವಾಗಿರುವಂತೆ ಮಾಡುವುದೇ ನನ್ನ ಹೆಚ್ಚಿನ ಬರವಣಿಗೆಗಳ ಉದ್ದೇಶವಾಗಿರುತ್ತದೆ. ಇದಕ್ಕೆ ಸಂಬಂಧ ಪಟ್ಟಂತೆ ನಾನು ಈಗಾಗಲೇ ಬೆಳವಿನಕೊಡಿಗೆ ಮತ್ತು ಪುರದಮನೆ ಸಂಸಾರಗಳ ಬಗ್ಗೆ ಬರವಣಿಗೆ ಮಾಡಿದ್ದೇನೆ. ನನ್ನ ದೃಷ್ಟಿಯಲ್ಲಿ ಹುರುಳಿಹಕ್ಕಲು ಕುಟುಂಬ ಕೂಡಾ ತುಂಬಾ ಮುಖ್ಯವಾದುದೆಂದು ಅನಿಸುತ್ತದೆ.  ಆದರೆ ಆ ಕುಟುಂಬದ ಹಿರಿಯರೆಲ್ಲಾ ಕಾಲವಾಗಿ ಹೋಗಿದ್ದಾರೆ. ಹಾಗೂ ಈಗ ಉಳಿದಿರುವ ಕಿರಿಯರಿಗೆ ಹೆಚ್ಚಿನ ವಿವರಗಳ ಅರಿವಿಲ್ಲ. ಅವರಿಂದ ದೊರೆತ ವಿವರಗಳನ್ನು (ಮುಖ್ಯವಾಗಿ ಲಕ್ಷ್ಮೀನಾರಾಯಣರಾಯರ ಎರಡನೇ ಮಗನಾದ ರಮೇಶ ಹೇಳಿದ ವಿವರಗಳು ಮತ್ತು ಅವನು ಒದಗಿಸಿದ ತುಂಬಾ ಅಪರೂಪದ ಫೋಟೋಗಳ ಮೂಲಕ)  ಮತ್ತು ನನ್ನ ಬಾಲ್ಯಕಾಲದ ನೆನಪುಗಳ ಆಧಾರದ ಮೇಲೆ ಈ ಬರವಣಿಗೆಯನ್ನು ಪ್ರಾರಂಭಿಸುತ್ತಿದ್ದೇನೆ. 
ಕಣ್ಮರೆಯಾಗಿ ಹೋದ ಕುಟುಂಬ
ಹುರುಳಿಹಕ್ಕಲು ಶ್ರೀಮಂತ ಕುಟುಂಬ ನಮ್ಮ ಕಣ್ಮುಂದೆಯೇ ನಮ್ಮೂರಿನಿಂದ ಕಣ್ಮರೆಯಾಗಿ ಹೋದ ಕುಟುಂಬ. ಸುಮಾರು  ೫೫  ವರ್ಷಕ್ಕೂ ಹಿಂದೆ  (ಪ್ರಾಯಶಃ ೧೯೬೪ನೇ ಇಸವಿಯಲ್ಲಿ) ಕುಟುಂಬ ನಮ್ಮೂರು ಬಿಟ್ಟು ಶಿವಮೊಗ್ಗೆ ಸೇರಿ ಆಮೇಲೆ ಅಲ್ಲಿಂದಲೂ ಕಳಚಿ ಹೋಯಿತು. ಕುಟುಂಬ ಮತ್ತು ನಾನು ಹಿಂದೆಯೇ ಬರೆದ ಬೆಳವಿನಕೊಡಿಗೆ ಕುಟುಂಬದ ಮೂಲ ಒಂದೇ ಆಗಿತ್ತು. ಬೆಳವಿನಕೊಡಿಗೆಯೇ ಎರಡು ಕುಟುಂಬಗಳ ಮೂಲ ಸ್ಥಳವಾಗಿತ್ತೆಂಬುದರಲ್ಲಿ ಯಾವುದೇ ಸಂಶಯಗಳಿಲ್ಲ. ಹುರುಳಿಹಕ್ಕಲಿನ ಮನೆ ಕೂಡ ಬೆವಿನಕೊಡಿಗೆ ಮನೆಯಂತೆ ೬೦ ಅಂಕಣದ  ಭವ್ಯವಾದ ಮನೆಯಾಗಿತ್ತು. ಮತ್ತು ಮನೆತನದವರ ಆಸ್ತಿ ಅಂತಸ್ತುಗಳು ಬೆಳವಿನಕೊಡಿಗೆ ಕುಟುಂಬಕ್ಕಿಂತ ಕಡಿಮೆ ಏನಿರಲಿಲ್ಲ. ಆದರೆ ಹುರುಳಿಹಕ್ಕಲಿನ ಮೂಲ ಮನೆಯನ್ನು  ಬೆಳವಿನಕೊಡಿಗೆ ಮನೆತನದ  ಆಸ್ತಿ ವಿಭಾಗವಾದ ನಂತರ ಕಟ್ಟಲಾಯಿತೇ ಎಂಬ ಬಗ್ಗೆ ಯಾವುದೇ ವಿವರಗಳು ಲಭ್ಯವಿಲ್ಲ. ಬೆಳವಿನಕೊಡಿಗೆ ಮೂಲ ಪುರುಷ (ನಮಗೆ ತಿಳಿದಂತೆ) ಎಲ್ಲಪ್ಪಯ್ಯ ಮತ್ತು ಅವರ ಮೂರು ಜನ ತಂಗಿಯರು (ಒಬ್ಬರು ನಮ್ಮ ಅಜ್ಜಿ ಮೊದಲಮನೆಯ ಗೌರಮ್ಮ ಅಥವಾ ಬೂರಮ್ಮ) ಅವರ ತಂದೆಯ ಮೊದಲ ಹೆಂಡತಿಯ ಮಕ್ಕಳಂತೆ. ಹುರುಳಿಹಕ್ಕಲಿನ ಮೂಲ ಪುರುಷ (ನಮಗೆ ತಿಳಿದಂತೆ) ಸುಬ್ಬರಾಯರು ಮತ್ತು ಅವರ ಐದು ಮಂದಿ ಸಹೋದರಿಯರು ಎರಡನೇ ಹೆಂಡತಿಯ ಮಕ್ಕಳಂತೆ.
ಸುಬ್ಬರಾಯರ ಪಂಚ ಸಹೋದರಿಯರು
ಸುಬ್ಬರಾಯರಿಗೆ ಐವರು ಸಹೋದರಿಯರು. ಮೊದಲನೆಯವರು ದುಗ್ಗಮ್ಮ. ಬಾಲ ವಿಧವೆಯಾಗಿದ್ದ ದುಗ್ಗಮ್ಮನಿಗೆ ತವರುಮನೆ ವಾಸವೇ ಶಾಶ್ವತವಾಯಿತು. ಎರಡೆನೆಯವರು ಫಣಿಯಮ್ಮ.  ಒಂದು ಕಾಲದಲ್ಲಿ ಫಣಿಯಮ್ಮಮತ್ತು ಅವರ ಯಜಮಾನರ ಸಂಸಾರ ನಮ್ಮ ಮನೆಯ ಪಕ್ಕದ ನಡುವಿನಮನೆ ಎಂಬಲ್ಲಿ ಬೆಳವಿನಕೊಡಿಗೆಯವರ ತೋಟವನ್ನು ಗೇಣಿ ಮಾಡಿಕೊಂಡಿತ್ತಂತೆ. ಮೂರನೆಯವರು ತಲವಾನೆ ಶ್ರೀಮಂತ ಜಮೀನ್ದಾರರಾಗಿದ್ದ ತಿಮ್ಮಪ್ಪಯ್ಯನವರ ಹೆಂಡತಿ. ಅವರ ಮಕ್ಕಳಾದ ಮಂಜಪ್ಪಯ್ಯ ಮತ್ತು ಶ್ರೀನಿವಾಸ ನಡುವಿನಮನೆಯಲ್ಲಿ ದೊಡ್ಡಮ್ಮನ ಮನೆಯಲ್ಲಿದ್ದು ನಮ್ಮೂರ ಪುರದಮನೆ ಶಾಲೆಗೆ ಹೋಗುತ್ತಿದ್ದರಂತೆ. ನಾನು ಬಾಲ್ಯದಲ್ಲಿ ನೋಡಿದಂತೆ ಫಣಿಯಮ್ಮನ ಎರಡು ಗಂಡು ಮಕ್ಕಳ ಸಂಸಾರ ಹುರುಳಿಹಕ್ಕಲಿನ ಸಮೀಪದಲ್ಲಿದ್ದ ಯಲ್ಲಳ್ಳಿ ಎಂಬಲ್ಲಿ ಹುರುಳಿಹಕ್ಕಲಿನವರಿಗೆ ಸೇರಿದ ಅಡಿಕೆ ತೋಟ ಮತ್ತು ಗದ್ದೆ ಗೇಣಿ ಮಾಡುತ್ತಿದ್ದರು. ಫಣಿಯಮ್ಮನ ಒಬ್ಬ ಮಗಳಾದ ಸರಸ್ವತಮ್ಮನವರನ್ನು ನಮ್ಮ ಹೊಕ್ಕಳಿಕೆ ಭಾವನ ತಮ್ಮ ಚಂದ್ರಹಾಸಯ್ಯನವರಿಗೆ ಮದುವೆ ಮಾಡಲಾಗಿತ್ತು. ಸುಬ್ಬರಾಯರ ನಾಲ್ಕನೇ ಸಹೋದರಿ ಸಾವಿತ್ರಮ್ಮನನ್ನು ಗೋಳಿಗುಂಡಿ ಎಂಬಲ್ಲಿಗೆ ಮದುವೆ  ಮಾಡಿ ಕೊಡಲಾಗಿದ್ದರೆ ಇನ್ನೊಬ್ಬರು ತಂಗಿ ಗಿರಿಜಮ್ಮನನ್ನು  ಶೃಂಗೇರಿಯ ಹತ್ತಿರದ ವಳಲೆ ಎಂಬಲ್ಲಿಗೆ ಮದುವೆ  ಮಾಡಿ ಕೊಡಲಾಗಿತ್ತಂತೆ. ಸುಬ್ಬರಾಯರಿಗೆ ಕೇವಲ ಇಬ್ಬರೇ ಮಕ್ಕಳು. ಹಿರಿಯ ಮಗನೇ ಲಕ್ಷ್ಮೀನಾರಾಯಣರಾಯರು ಮತ್ತು ಮಗಳು ಅವರ ತಂಗಿಯಾದ ಸೀತಾಲಕ್ಷ್ಮಿ.  ಸೀತಾಲಕ್ಷ್ಮಿಯವರನ್ನು ನೀರುಕಟ್ಟಿನ ಜಮೀನ್ದಾರರಾಗಿದ್ದ ವೆಂಕಟರಮಣಯ್ಯನವರಿಗೆ ವಿವಾಹಮಾಡಿ ಕೊಡಲಾಗಿತ್ತು.
ಲಕ್ಷ್ಮೀನಾರಾಯಣರಾಯರ ನಿಗೂಢ ವಿದ್ಯಾಭ್ಯಾಸ
ನಮಗೆ ನಮ್ಮ ಬಾಲ್ಯದಲ್ಲಿ ನಮ್ಮೂರಿನ ಕೆಲವು ವಿಷಯಗಳು ತುಂಬಾ ನಿಗೂಢವಾಗಿ ಕಾಣುತ್ತಿದ್ದವು. ಅದರಲ್ಲಿ ಒಂದು ಲಕ್ಷ್ಮೀನಾರಾಯಣರಾಯರು  ಎಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮಾಡಿದರೆಂಬುದು. ನಮ್ಮ ತಂದೆಯವರಿಂದ ನಾವು ತಿಳಿದಂತೆ ಆಗಿನ ಕಾಲದಲ್ಲಿ ಯಾವುದೇ ಹಳ್ಳಿಗಳಲ್ಲಿ ಶಾಲೆಗಳಿರಲಿಲ್ಲ. ಹಾಗೂ ಸ್ಲೇಟು ಮತ್ತು ಬಳಪಗಳ ಬಳಕೆಯೂ ಇದ್ದಿರಲಿಲ್ಲ. ಆದ್ದರಿಂದ ಗುರುಗಳು ಮಕ್ಕಳಿಗೆ ಮರಳಿನ ಮೇಲೆ ಕೈಬೆರಳುಗಳನ್ನು ಇಟ್ಟು ಅಕ್ಷರ ಬರೆಸುತ್ತಿದ್ದರಂತೆ. ನಮ್ಮ ತಂದೆ ಮತ್ತು ತಾಯಿ ಆ ರೀತಿಯಲ್ಲೇ ಕನ್ನಡ ವಿದ್ಯಾಭಾಸ ಮಾಡಿದ್ದರಂತೆ. ಆದರೆ ಲಕ್ಷ್ಮೀನಾರಾಯಣರಾಯರ ವಿಷಯ ಬೇರೆಯೇ ಆಗಿತ್ತು. ಏಕೆಂದರೆ ಅವರು ಯಾವುದೇ ಶಾಲೆಗೆ ಹೋಗದೇ ಇಂಗ್ಲಿಷ್ ಭಾಷೆಯನ್ನು ಕೂಡ ಕಲಿತು ಬಿಟ್ಟಿದ್ದರು! ಮಾತ್ರವಲ್ಲ. ಅವರು ತಮ್ಮ ಮನೆಗೆ ಇಂಗ್ಲಿಷ್ ಹೆಲ್ತ್ ಮ್ಯಾಗಜಿನ್ ಗಳನ್ನೂ ಹಾಗೂ ರೀಡರ್ಸ್ ಡೈಜೆಸ್ಟ್ ಕೂಡ ತರಿಸುತ್ತಿದ್ದರು. ಇದಲ್ಲದೆ ಡಾಕ್ಟರ್ ಕೆ ಎಂ ಮುನ್ಷಿಯವರು ಪ್ರಕಟಿಸುತ್ತಿದ್ದ ಕಲ್ಯಾಣ ಕಲ್ಪತರು ಎಂಬ ಆಧ್ಯಾತ್ಮಿಕ ಸಂಚಿಕೆಯನ್ನೂ ತರಿಸುತ್ತಿದ್ದರಂತೆ. ಕನ್ನಡ ಕಲಿಸಲೇ ಗುರುಗಳು ಸಿಗದ ಆ ಕಾಲದಲ್ಲಿ ಲಕ್ಷ್ಮೀನಾರಾಯಣರಾಯರಿಗೆ ಇಂಗ್ಲಿಷ್ ಕಲಿಸಿಕೊಟ್ಟ ಗುರು ಯಾರೆಂಬುದು ಇಂದಿಗೆ ನಿಗೂಢವಾಗಿ ಕಾಣುತ್ತಿದೆ.
ಕ್ಯಾಮೆರಾ ಮತ್ತು ಛಾಯಾಗ್ರಹಣ
ಇನ್ನೊಂದು ನಂಬಲಾರದ ವಿಷಯವೆಂದರೆ ಲಕ್ಷ್ಮೀನಾರಾಯಣರಾಯರು  ಒಬ್ಬ ಪಳಗಿದ ಛಾಯಾಗ್ರಾಹಕರಾಗಿದ್ದುದು ಮತ್ತು ತಮ್ಮದೇ ಆದ ಕೊಡಕ್ ಕ್ಯಾಮೆರಾವನ್ನು ಹೊಂದಿದ್ದುದು. ವಿಚಿತ್ರವೆಂದರೆ ಆ ಕಾಲದಲ್ಲಿ ಕೊಪ್ಪ ಮತ್ತು ಶೃಂಗೇರಿಯಲ್ಲಿ ಕೂಡಾ ಯಾವುದೇ ಸ್ಟುಡಿಯೋಗಳು ಇರಲಿಲ್ಲ. ಹುರುಳಿಹಕ್ಕಲಿನ ಮನೆಯ ಮಹಡಿಯಲ್ಲಿ ಫೋಟೋಗಳನ್ನು ಡೆವೆಲೊಪ್ ಮಾಡಲು ಒಂದು ಡಾರ್ಕ್ ರೂಮ್ ಕೂಡ ಇತ್ತು. ಅದನ್ನು ನೋಡಿದ ಸ್ಪಷ್ಟವಾದ ನೆನಪು ನನಗಿಂದಿಗೂ ಇದೆ. ರಾಯರಿಗೆ ಛಾಯಾಗ್ರಹಣದಲ್ಲಿ ಟ್ರೈನಿಂಗ್  ಯಾರಿಂದ ಸಿಕ್ಕಿತೆಂಬ ಬಗ್ಗೆ ಯಾವುದೇ ಪುರಾವೆಗಳಿಲ್ಲ. ಲಕ್ಷ್ಮೀನಾರಾಯಣರಾಯರು ಬೆಳವಿನಕೊಡಿಗೆ ಭುವನಕೋಟೆ ಮತ್ತು ಹೆದಸೆ ಗ್ರಾಮಗಳ ಗ್ರೂಪ್ ಪಂಚಾಯಿತಿಯ ಛೇರ್ಮನ್ ಸಹ ಆಗಿದ್ದರಂತೆ. ಮಾನ್ಯ ಭುವನಕೋಟೆ ಹರಿಕೃಷ್ಣ ಬಾಸ್ರಿಗಳು ವೈಸ್ ಛೇರ್ಮನ್ ಆಗಿದ್ದರಂತೆ.
ಲಕ್ಷ್ಮೀನಾರಾಯಣರಾಯರ ಪುಸ್ತಕ ಭಂಡಾರ
ಲಕ್ಷ್ಮೀನಾರಾಯಣರಾಯರೊಬ್ಬ ಪುಸ್ತಕ ಪ್ರೇಮಿ. ಅವರ ಭಂಡಾರದಲ್ಲಿ ಆಗಿನ ಕಾಲದ ಕನ್ನಡದ ಪ್ರಮುಖ ಲೇಖಕರಾದ ಅನಕೃ, ತರಾಸು, ವೀರಕೇಸರಿ ಸೀತಾರಾಮ ಶಾಸ್ತ್ರಿ, ಎಂ ರಾಮಮೂರ್ತಿ, ಎನ್ ನರಸಿಂಹಯ್ಯ, ಎನ್ ಗುಂಡಾ ಶಾಸ್ತ್ರಿ, ಮೊದಲಾದವರ ಪುಸ್ತಕಗಳು ತುಂಬಿ ಹೋಗಿದ್ದವು. ನಮ್ಮ ದೊಡ್ಡಣ್ಣ ರಾಮಕೃಷ್ಣ ಅವರ ಮನೆಯಿಂದ ಪುಸ್ತಕಗಳನ್ನು ಓದಲು ತರುತ್ತಿದ್ದ. ಅವನ್ನು ನಾವು ಪ್ರಾಥಮಿಕ ಶಾಲೆಯಲ್ಲಿದ್ದಾಗಲೇ ಓದುತ್ತಿದ್ದುದು ನೆನಪಿಗೆ ಬರುತ್ತಿದೆ. ಮುಂದೆ ಈ ಪುಸ್ತಕಗಳನ್ನೆಲ್ಲಾ ಬೆಳವಿನಕೊಡಿಗೆಯಲ್ಲಿ ವಯಸ್ಕರ ಶಿಕ್ಷಣ ಸಮಿತಿಯವರು "ಶ್ರೀ ವಿದ್ಯಾತೀರ್ಥ ಪುಸ್ತಕ ಭಂಡಾರ" ಸ್ಥಾಪಿಸಿದಾಗ ಅದಕ್ಕೆ ಡೊನೇಷನ್ ಮಾಡಲಾಯಿತು. ಈ ಪುಸ್ತಕಗಳಲ್ಲದೇ ಹುಬ್ಬಳ್ಳಿಯಿಂದ ಪ್ರಕಟವಾಗುತ್ತಿದ್ದ ಕಸ್ತೂರಿ ಮಾಸ ಪತ್ರಿಕೆ (ಮ್ಯಾಗಜಿನ್)  ಅದರ ಮೊದಲ ಆವೃತ್ತಿಯಿಂದ ಹಿಡಿದು ಎಲ್ಲ ಸಂಚಿಕೆಗಳೂ ರಾಯರ ಮನೆಯಲ್ಲಿ ಓದಲು ದೊರೆಯುತ್ತಿದ್ದವು.
ಲಕ್ಷ್ಮೀನಾರಾಯಣರಾಯರ ಸಂಸಾರ
ಲಕ್ಷ್ಮೀನಾರಾಯಣರಾಯರ  ಪತ್ನಿ ರುಕ್ಮಿಣಮ್ಮ ಶೃಂಗೇರಿ ಹತ್ತಿರದ ಮಡೋಡಿ ಎಂಬ ಊರಿನವರು. ದಂಪತಿಗಳಿಗೆ ಮೊದಲ ಮೂರು ಮಕ್ಕಳು ಹೆಣ್ಣು ಮಕ್ಕಳೇ ಆಗಿದ್ದರು. ಅವರಿಗೆ ಕ್ರಮವಾಗಿ ಸಾವಿತ್ರಿ, ಸುಶೀಲ ಮತ್ತು ಶಾರದ ಎಂದು ನಾಮಕರಣ ಮಾಡಲಾಗಿತ್ತು.  ಈ ಹೆಸರುಗಳು ನಮಗೆ ಬಾಲ್ಯದಲ್ಲಿ ನಾವು ಚಂದಮಾಮದಲ್ಲಿ ಓದಿದ "ಅವಳಿಮಕ್ಕಳು" ಎಂಬ ಕಥೆ ನೆನಪಿಗೆ ಬರುವಂತಿತ್ತು. ಏಕೆಂದರೆ ಆ ಹೆಸರುಗಳು ಕ್ರಮವಾಗಿ ಸುಹಾಸಿನಿ, ಸುಭಾಷಿಣಿ ಮತ್ತು ಸುಕೇಶಿನಿ ಎಂದಿತ್ತು. ಮೊದಲನೇ ಗಂಡುಮಗ ತಿಮ್ಮಪ್ಪ.  ಆಮೇಲಿನ ಮಕ್ಕಳು ಕ್ರಮವಾಗಿ ರಮೇಶ, ಹೇಮಾ, ಕಸ್ತೂರಿ, ಸದಾಶಿವ ಮತ್ತು ಭಾಸ್ಕರ.
----ಮುಂದುವರಿಯುವುದು ---

No comments: