Tuesday, December 31, 2019

ಬಾಲ್ಯ ಕಾಲದ ನೆನಪುಗಳು – ೪೪


ನಡುವೆ ನಮ್ಮ ಅಡೇಖಂಡಿ ಮನೆಯಲ್ಲಿ ಹಲವು ಬದಲಾವಣೆಗಳು ಆದವು. ನನಗಿಂತ ಎರಡು ವರ್ಷ ಹಿರಿಯನಾದ ಪುಟ್ಟಣ್ಣ (ಲಕ್ಷ್ಮೀನಾರಾಯಣ) ನಾಲ್ಕನೇ ತರಗತಿ ಮುಗಿಸಿ ಮನೆಯಲ್ಲಿದ್ದವನಿಗೆ ನಮ್ಮ ಅಣ್ಣ ವಿಶ್ವೇಶ್ವರಯ್ಯನವರಿಂದ ಟ್ಯೂಷನ್ ಹೇಳಿಸಿ ನಾರ್ವೆ ಶಾಲೆಯಲ್ಲಿ ೬ನೇ ತರಗತಿ ಕಟ್ಟಿಸಿ ಪಾಸ್ ಆಯಿತು. ನಂತರ ವೇಳೆಗೆ ಟ್ರೈನಿಂಗ್ ಮುಗಿಸಿ ಪುನಃ ನಮ್ಮೂರ ಶಾಲೆಗೆ ಬಂದಿದ್ದ ಸುಬ್ಬಾಭಟ್ಟರಿಂದ ೭ನೇ  ತರಗತಿಗೂ ಟ್ಯೂಷನ್ ಏರ್ಪಾಟಾಯಿತು. ಅಲ್ಲಿಗೆ ನಾವು ಅಣ್ಣ ತಮ್ಮಂದಿರಿಬ್ಬರೂ ಒಂದೇ ತರಗತಿಯಲ್ಲಿ ಓದುವಂತಾಯಿತು. ನಮ್ಮೂರ ಶಾಲೆ ಕೂಡಾ ಪುರದಮನೆಯಿಂದ ಗೋಳಿಕಟ್ಟೆಯ ಬಳಿ ಹೊಸದಾಗಿ ಕಟ್ಟಿದ ಕಟ್ಟಡಕ್ಕೆ ಶಿಫ್ಟ್ ಆಯಿತು. ಅಲ್ಲದೇ ಶಾಲೆಗೆ ಸುಬ್ಬಾಭಟ್ಟರಲ್ಲದೇ ಇನ್ನಿಬ್ಬರು ಮೇಷ್ಟರು ವರ್ಗವಾಗಿ ಬಂದರು. ಅದರಲ್ಲಿ ಒಬ್ಬರು ದಾವಣಗೆರೆಯ ಸುಬ್ಬಣ್ಣ ಎಂಬುವರು. ಅವರಿಗೆ ಗೋಳಿಕಟ್ಟೆ ಮನೆಯಲ್ಲಿ ಉಳಿದುಕೊಳ್ಳುವ ಏರ್ಪಾಟು ಆಯಿತು. ಇನ್ನೊಬ್ಬರು ವಿಶ್ವೇಶ್ವರಯ್ಯನವರ ತಮ್ಮ ಕೃಷ್ಣಮೂರ್ತಿ ಎಂಬ ಮೇಷ್ಟರು.

ಸುಬ್ಬಣ್ಣನವರ ಆಗಮನದೊಡನೆ ನಮ್ಮೂರಿನಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಹೆಚ್ಚಾಗಿ ನಡೆಯ ತೊಡಗಿದವು. ಶಾಲೆಯಲ್ಲಿ ಗಣಪತಿ ಹಬ್ಬದಲ್ಲಿ ಮೂರ್ತಿಯನ್ನಿಟ್ಟು ಪೂಜೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯ ತೊಡಗಿದವು. ಇಷ್ಟಲ್ಲದೇ ಕ್ಷೀರಸಾಗರ ಅವರು ಬರೆದ ಕನ್ನಡ ನಾಟಕವೊಂದನ್ನು ಶಾಲೆಯ ಹುಡುಗರಿಂದ ಆಡಿಸುವ ಏರ್ಪಾಟಾಯಿತು. ಸ್ವಲ್ಪ ಹಾಸ್ಯಮಯವಾದ ನಾಟಕದ ಮುಖ್ಯ ಪಾತ್ರಧಾರಿ ನಮ್ಮ ಪುಟ್ಟಣ್ಣ. ಇನ್ನು ಅವನ ಜೊತೆಗೆ ಭುವನಕೋಟೆಯ ವೆಂಕಟೇಶ ಮತ್ತು ಲಕ್ಷ್ಮೀನಾರಾಯಣ ಪಟೇಲ ಇದ್ದುದು ನೆನಪಿಗೆ ಬರುತ್ತಿದೆ. ಪಟೇಲ ಅವನ ಹಾಸ್ಯಮಯ ಪಾತ್ರವನ್ನು ತುಂಬಾ ಚೆನ್ನಾಗಿ ಮಾಡುತ್ತಿದ್ದ. ನಾಟಕವನ್ನು ಬೆಳವಿನಕೊಡಿಗೆ ಮತ್ತು ಪುರದಮನೆಯಲ್ಲಿ ನವರಾತ್ರಿ ಸಮಾರಾಧನೆಯ ರಾತ್ರಿ ಆಡಿಸಲಾಯಿತು.  ನಮ್ಮೂರಿನವರಿಂದ ನಿರೀಕ್ಷೆಗಿಂತ ಹೆಚ್ಚು ಪ್ರೋತ್ಸಾಹ ದೊರೆಯಿತು. ದುರದೃಷ್ಟ ವಶಾತ್ ಲಕ್ಷ್ಮೀನಾರಾಯಣ ಪಟೇಲ  ಅದೇ ವರ್ಷ ನಾರ್ವೆಯ ಹತ್ತಿರ ತುಂಗಾ ನದಿಯಲ್ಲಿ ಈಜಲು ಹೋಗಿ ಅಪಮೃತ್ಯುವಿಗೊಳಗಾದ. ಸಮಾಚಾರ ಅವನ ಅಣ್ಣನಿಂದ ತಿಳಿದು ಬಂದಾಗ ನಮಗಾದ ದುಃಖ ಅಷ್ಟಿಟ್ಟಲ್ಲ.

ಇದಲ್ಲದೇ ನಮ್ಮೂರ ಶಾಲೆಯ ಹುಡುಗಿಯರಿಂದಲೂ ಒಂದು ನಾಟಕ ಆಡಿಸಲಾಯಿತು. ಅದರಲ್ಲಿ ನಮ್ಮ ತಂಗಿ ಲೀಲಾಳಿಗೆ ಒಂದು ಮುಖ್ಯ ಪಾತ್ರವಿತ್ತು. ಅವಳ ಜೊತೆಗೆ ನಡುವಿನ ಮನೆಯ ನಾಗರತ್ನ ಮತ್ತು ಶಾಂತ, ಗೋಳಿಕಟ್ಟೆ ಶಾಂತ ಮತ್ತು ಸಂಪೇಕೊಳಲು (ಮಡೋಡಿ) ಶಾಂತ ನಟಿಸಿದ್ದರು. ನಮ್ಮ ಅಣ್ಣನ ಮದುವೆಯ ನಂತರ ನಮ್ಮ ಮನೆಯಲ್ಲಿ ನಡೆದ ಸಮಾರಂಭದ ರಾತ್ರಿ ನಮ್ಮ ಮನೆಯ ಮುಂದೆಯೇ ಒಂದು ಸ್ಟೇಜ್ ಕಟ್ಟಿ  ನಾಟಕವಾಡಿಸಲಾಯಿತು. ಇದಲ್ಲದೇ ಆಗ ಶಿವಮೊಗ್ಗೆಯಲ್ಲಿ ಓದುತ್ತಿದ್ದ ಬೆಳವಿನಕೊಡಿಗೆ (ಭುವನಕೋಟೆ) ಗಂಗಾರತ್ನ ಇವಳಿಂದ ನಾಟ್ಯವೂ ನಡೆಯಿತು. ನಾನು ಆಗ ಅಕ್ಕನ ಮನೆಯಲ್ಲಿದ್ದರಿಂದ ನನಗೆ ಯಾವುದೇ ಚಟುವಟಿಕೆಗಳಲ್ಲಿ ಅವಕಾಶವಿರಲಿಲ್ಲ. ನಾನು ಕೇವಲ ಪ್ರೇಕ್ಷಕನಾಗಿದ್ದೆ.

ಪುಟ್ಟಣ್ಣನ ಸಾಹಿತ್ಯ ಸಾಧನೆ
ನಮ್ಮ ಪುಟ್ಟಣ್ಣನಲ್ಲಿ ಬಾಲ್ಯದಲ್ಲಿಯೇ ಮುಂದೆ ಒಬ್ಬ ಕನ್ನಡ ಸಾಹಿತಿಯಾಗುವ ಮುನ್ಸೂಚನೆಗಳು ದೊರೆಯುತ್ತಿದ್ದವು. ನಮ್ಮೂರ  ಶಾಲೆಯಲ್ಲಿ ಓದುತ್ತಿರುವಾಗಲೇ ಅವನುಚಂದ್ರಾವಳಿ” ಎಂಬ ಪತ್ರಿಕೆಯನ್ನು (ಮ್ಯಾಗಝಿನ್)  ಕೈ ಬರಹದಲ್ಲೇ ತಯಾರು ಮಾಡಿಬಿಟ್ಟ. ಅದರಲ್ಲಿ  ಕಥೆಗಳಲ್ಲದೇ ಅವನೇ ಬರೆದ ಚಿತ್ರಗಳೂ ಇದ್ದವು. ಅವನು ಹಲವು ಚಂದ್ರಾವಳಿಯ ಸಂಚಿಕೆಗಳನ್ನು ಹೊರತಂದ.  ಆದರೆ  ಅದರ ಓದು ನಮ್ಮ ಮನೆಯವರಿಗೆ ಸೀಮಿತವಾಗಿತ್ತು. ಹಿರಿಯರಿಂದ ಅದಕ್ಕೆ ಸರಿಯಾದ ಪ್ರೋತ್ಸಾಹ ದೊರೆಯಲಿಲ್ಲ. ಆದರೆ ಮುಂದೆ  ಶೃಂಗೇರಿಯಲ್ಲಿ ಹೈಸ್ಕೂಲ್ ಓದುತ್ತಿದ್ದಾಗ ನಮ್ಮ ಕಸಿನ್ ಹಂಚಿನಮನೆ ಸುಬ್ರಮಣ್ಯ ಅವರು ಪ್ರಕಟಿಸುತ್ತಿದ್ದ ಮಲೆನಾಡ ಮಲ್ಲಿಗೆ ಎಂಬ ಪತ್ರಿಕೆಗೆ ಅವನು ಗುಪ್ತ ಸಂಪಾದಕನಾಗಿದ್ದ. ಚಂದ್ರಾವಳಿಯ ಅನುಭವ ಅವನಿಗೆ ತುಂಬಾ ಸಹಾಯವಾಯಿತು. ಹಾಗೆಯೇ ಕನ್ನಡ ಸಾಹಿತಿಗಳ ಸಂಪರ್ಕವೂ ದೊರೆಯಿತು. ಸುಬ್ರಮಣ್ಯ ಅವರು ಹೆಸರಿಗೆ ಮಾತ್ರ ಅಧಿಕೃತ ಸಂಪಾದಕರಾಗಿದ್ದರು.

ನನ್ನ ಮೊದಲ ಪತ್ತೇದಾರಿ ಕಾದಂಬರಿ
ಪುಟ್ಟಣ್ಣನ ಬರವಣಿಗೆ ನನಗೂ ಬರೆಯುವಂತೆ ಪ್ರೋತ್ಸಾಹಿಸಿತು. ಅದಕ್ಕೆ ಪುಟ್ಟಣ್ಣನ ಪ್ರೋತ್ಸಾಹವೂ ದೊರೆಯಿತು. ನಾನೊಂದು ಪತ್ತೇದಾರಿ ಕಾದಂಬರಿಯನ್ನು ಅವನ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬರೆಯುವುದಾಗಿ ಹೇಳಿದೆ. ಪುಟ್ಟಣ್ಣ ಅದನ್ನು ಪ್ರಕಟಿಸಲು ಒಪ್ಪಿಕೊಂಡ. ಮಾತ್ರವಲ್ಲ. ಬಾರಿಯ ಚಂದ್ರಾವಳಿ ಪತ್ರಿಕೆಯ ಕೊನೆಯ ಪುಟದ ಹಿಂಭಾಗದಲ್ಲಿ ನನ್ನ ಪತ್ತೇದಾರಿ ಕಾದಂಬರಿಯ ಜಾಹಿರಾತೊಂದನ್ನು ಫ್ರೀಯಾಗಿ ಹಾಕಲೂ ಒಪ್ಪಿಕೊಂಡ! ನಾನು ನನ್ನ  ಮೊದಲ ಪತ್ತೇದಾರಿ ಕಾದಂಬರಿಗೆ "ಭೀಷಣ ಕೊಲೆ" ಎಂದು ಹೆಸರಿಟ್ಟು ಬಿಟ್ಟೆ.

ನನ್ನ ದುರಾದೃಷ್ಟಕ್ಕೆ ನನ್ನ ಮೊದಲ ಪತ್ತೇದಾರಿ ಕಾದಂಬರಿ ಪ್ರಕಟವಾಗಲೇ ಇಲ್ಲ. ಕಾರಣವಿಷ್ಟೇ. ನನಗೆ ಅದನ್ನು ಬರೆಯಲು ಸಾಧ್ಯವಾಗಲೇ ಇಲ್ಲ! ಇಂದು ನಾನು ಹಿಂತಿರುಗಿ ನೋಡುವಾಗ, ಪುಟ್ಟಣ್ಣನ ಅಷ್ಟೊಂದು ಪ್ರೋತ್ಸಾಹವಿದ್ದರೂ ನಾನು ಬರೆಯಲಾಗದ ಕಾರಣ ಸ್ಪಷ್ಟವಾಗಿ ಗೋಚರಿಸುತ್ತಿದೆ. ಮೂಲತಃ ನಾನೊಂದು ತಪ್ಪು ಮಾಡಿಬಿಟ್ಟಿದ್ದೆ. ಮೊದಲು ಕಥೆಯ ರೂಪರೇಷೆಗಳನ್ನು ಮನಸ್ಸಿನಲ್ಲೇ ತೀರ್ಮಾನಿಸಿ ನಂತರ ಅದಕ್ಕೆ ಹೆಸರಿಡಬೇಕಿತ್ತು. ಬದಲಿಗೆ ನಾನು ಅದಕ್ಕೆ ಮೊದಲು ಹೆಸರಿಟ್ಟು ಚಂದ್ರಾವಳಿಯಲ್ಲಿ ಜಾಹೀರಾತನ್ನೂ ಪ್ರಕಟಿಸಿ ನಂತರ ಕಥೆಯ ಬಗ್ಗೆ ಯೋಚಿಸ ತೊಡಗಿದ್ದೆ.  ಕಥೆಯಲ್ಲಿ ಆಗುವ ಭಯಂಕರ ಕೊಲೆಯ ಪ್ರಸಂಗದ ಬಗ್ಗೆ ನನ್ನಲ್ಲಿ ಸ್ಪಷ್ಟ ಚಿತ್ರಣವಿತ್ತು. ಆದರೆ ಪ್ರಸಂಗ ಎಷ್ಟು ಜಟಿಲವಾಗಿತ್ತೆಂದರೆ ಯಾವುದೇ ನುರಿತ ಪತ್ತೇದಾರನಿಗೂ ಅದರ ರಹಸ್ಯವನ್ನು ಭೇದಿಸಲಾಗದಂತಿತ್ತು! ಹೀಗಾಗಿ ಕಥೆಯಲ್ಲಿ ಪತ್ತೇದಾರನ ಪಾತ್ರಕ್ಕೆ ಅವಕಾಶವೇ ಇಲ್ಲದಂತಾಗಿತ್ತು!

ಪುಟ್ಟಣ್ಣನೇನೋ ಕುದುರೆಯನ್ನು ನೀರಿನ ಬಳಿಗೆ ಒಯ್ದಿದ್ದ. ಆದರೆ ನೀರನ್ನು ಕುಡಿಸುವ ಸಾಮರ್ಥ್ಯ ಅವನಲ್ಲಿರಲಿಲ್ಲ. ಕೆಲಸ "ಕುದುರೆಯೇ” ಮಾಡಬೇಕಿತ್ತು. ಆದರೂ ಅವನು ನನಗೆ ಸಹಾಯ ಮಾಡಲು ಪ್ರಯತ್ನಿಸಿದ. ನಾನು ನನ್ನ ತಲೆಯಲ್ಲಿ ಹೊಕ್ಕಿದ್ದ ನಿಗೂಢ ಕೊಲೆಯ ಪ್ರಸಂಗವನ್ನು ಅವನಿಗೆ ವಿವರಿಸಿದೆ.  ಅವನಿಗೂ ಅದು ತುಂಬಾ ಕುತೂಹಲಕಾರಿಯಾಗಿ ಕಾಣಿಸಿತು.  ಅದರಲ್ಲಿ ಮೂವರು ಬೇರೆ ಬೇರೆ ವ್ಯಕ್ತಿಗಳು ಒಬ್ಬ ವ್ಯಕ್ತಿಯನ್ನು ಕೊಲೆಮಾಡಲು ತೀರ್ಮಾನಿಸಿರುತ್ತಾರೆ.  ವ್ಯಕ್ತಿಯ ಕೊಲೆಯೂ ಆಗುತ್ತದೆ. ಪತ್ತೇದಾರನು ಅದರಲ್ಲಿ ಯಾರು ಕೊಲೆಗಾರನೆಂದು ಸಾಕ್ಷಿ ಸಮೇತ ಕಂಡು ಹಿಡಿಯ ಬೇಕಾಗಿರುತ್ತದೆ. ಆದರೆ ನನಗೆ ಪತ್ತೇದಾರನಿಂದ ನಿಜವಾದ ಕೊಲೆಗಾರನನ್ನು ಕಂಡು ಹಿಡಿಯುವಂತೆ ಮಾಡಲು ಆಗಲಿಲ್ಲ. ಪುಟ್ಟಣ್ಣನಿಗೆ ತುಂಬಾ ಆಶ್ಚರ್ಯವಾದ ಅಂಶವೆಂದರೆ ಲೇಖಕನಾದ ನನಗೇ ನಿಜವಾದ ಕೊಲೆಗಾರ ಯಾರೆಂದು ಗೊತ್ತಿರಲಿಲ್ಲ!  ನನ್ನ ಬಾಲ್ಯದ  ಸೃಜನಶೀಲತೆ ಮಟ್ಟದ್ದಾಗಿತ್ತು. ಆದರೆ ಅದಕ್ಕೆ ನಾನೆ ಹೊಣೆಯಾಗಿದ್ದೆನೇ ಹೊರತು  ಬೇರೆ ಯಾರನ್ನೂ ದೂಷಿಸುವಂತಿರಲಿಲ್ಲ!
----ಮುಂದುವರಿಯುವುದು ---