ಸಂಬಂಧಿಕರ ಸಾಲ
ಭಾವನವರ
ಲೆಖ್ಖದ ಪುಸ್ತಕದಲ್ಲಿ ಸೇರಿದ್ದ ‘ಹೋಕು’ ಸಾಲಗಳು ಮುಖ್ಯವಾಗಿ
ಅವರ ಸಂಬಂಧಿಕರಿಗೆ ಕೊಟ್ಟ ಸಾಲಗಳು. ಅವುಗಳಲ್ಲಿ
ಹೆಚ್ಚಿನವು ವಾಪಾಸ್ ಬರುವ ಯಾವುದೇ
ಸೂಚನೆಗಳಿರಲಿಲ್ಲ. ಆದರೆ ಈ ಸಂಬಂಧಿಗಳಿಗೆ
ಭಾವನವರ ಮನೆಯಲ್ಲಿ ನಡೆಯುತ್ತಿದ್ದ ವಿಶೇಷ ಸಮಾರಂಭಗಳಿಗೆ ಬರುವಾಗ
ಯಾವುದೇ ಮುಜುಗರವಿರುತ್ತಿರಲಿಲ್ಲ. ಅಲ್ಲದೇ ಅವರಿಗೆ ಭಾವನವರು
ಯಾರನ್ನೂ ನೇರವಾಗಿ ಸಾಲ ತೀರಿಸಬೇಕೆಂದು
ಹೇಳುವುದಿಲ್ಲವೆಂಬ ಧೈರ್ಯವೂ ಇತ್ತು. ಆದರೆ
ಸಮಾರಂಭ ಮುಗಿದು ನೆಂಟರೆಲ್ಲಾ ಹೊರಡಲು
ತಯಾರಾಗಿ ಕಾಫಿ ಕುಡಿಯುತ್ತಿರುವಾಗ ಅವರು
ಭಾವನ ಒಂದು ಭಾಷಣವನ್ನು ಸಾಮಾನ್ಯವಾಗಿ
ಕೇಳಲೇ ಬೇಕಾಗಿತ್ತು. ಅದರ ಸಾರಾಂಶ ಇಷ್ಟೇ.
ಸಂಬಂಧಿಗಳಾದರೂ ಕೂಡ ಸಾಲ ತೀರಿಸುವ
ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವುದು ಸರಿಯಲ್ಲ. ಸ್ವಲ್ಪ ಸ್ವಲ್ಪವಾಗಿಯಾದರೂ ತೀರಿಸುವ
ಪ್ರಯತ್ನ ಮಾಡಲೇ ಬೇಕು. ಭಾವನವರ
ಮಾತು ಮುಗಿಯುವಷ್ಟರಲ್ಲಿ ಒಂದಿಬ್ಬರು ಬೇಗಬೇಗನೆ ಕಾಫಿ ಮುಗಿಸಿ ಅಂಗಳಕ್ಕಿಳಿದು
ಬಿಡುತ್ತಿದ್ದರು. ಅವರು ಸಾಲಗಾರರ ಲಿಸ್ಟಿಗೆ
ಸೇರಿದ್ದರೆಂದು ಅವರ ನಡೆಯಿಂದಲೇ ಗೊತ್ತಾಗುತ್ತಿತ್ತು!
ನಮ್ಮಣ್ಣನ ಎಮ್ಮೆ
ಸಾಲ
ನಮ್ಮ
ಸಂಸಾರದ ಹಣಕಾಸಿನ ಪರಿಸ್ಥಿತಿ ಆ
ದಿನಗಳಲ್ಲಿ ತುಂಬಾ ಕಷ್ಟಕರವಾಗಿರುತ್ತಿತ್ತು. ರುಕ್ಮಿಣಕ್ಕನ ಮದುವೆಯಾದ
ನಂತರ ಅಣ್ಣನ ಮದುವೆಯ ಖರ್ಚೂ
ಸೇರಿ ಸ್ಥಿತಿ ಇನ್ನೂ ಬಿಗಡಾಯಿಸಿ
ಬಿಟ್ಟಿತ್ತು. ಆದರೂ ಯಾವೊತ್ತೂ ಭಾವನವರಿಂದ
ಸಾಲ ಮಾಡಿರಲಿಲ್ಲ. ಆದರೆ ನನ್ನ ಕಣ್ಣ
ಮುಂದೆಯೇ ಅಂತಹ ಪರಿಸ್ಥಿತಿ ಬಂದು
ಬಿಟ್ಟಿತು. ನಾನು ಆಗ ಬೇಸಿಗೆ
ರಜೆಯಲ್ಲಿ ಅಡೇಖಂಡಿಯಲ್ಲೇ ಇದ್ದೆ.
ನಮ್ಮ ಮನೆಯ ಎಮ್ಮೆಯೊಂದು ಆಗ
ತಾನೇ ಕರು ಹಾಕಿ ಚೆನ್ನಾಗಿ
ಹಾಲು ಕೊಡುತ್ತಿತ್ತು. ಅದೆಷ್ಟೆಂದರೆ ಪೂರ್ತಿ ಸಂಸಾರಕ್ಕೆ ಸಾಕಾಗುವಷ್ಟು.
ಒಂದು ದಿನ ಯಥಾ ಪ್ರಕಾರ
ಅದನ್ನು ಮೇವಿಗೆ ಬಿಡಲಾಗಿತ್ತು. ಸುಮಾರು
ಮಧ್ಯಾಹ್ನ ಮೂರು ಘಂಟೆಗೆ ಒಂದು
ವರ್ತಮಾನ ಬಂತು. ನಮ್ಮ ಎಮ್ಮೆ
ಅಮ್ಮನ ತವರುಮನೆ ಮೊದಲಮನೆಯ ಮೇಲಿದ್ದ
ರಸ್ತೆಯಿಂದ ಕೆಳಗಿನ ಪ್ರಪಾತಕ್ಕೆ ಬಿದ್ದು
ಬಿಟ್ಟಿತ್ತು. ರಸ್ತೆಯ ಕೆಳಭಾಗದಲ್ಲಿ ಬೆಳೆದ
ಹುಲ್ಲನ್ನು ತಿನ್ನುವ ಭರದಲ್ಲಿ ಅದರ
ಕಾಲು ಜಾರಿ ಹೊಂಡಕ್ಕೆ ಬಿದ್ದಿತ್ತು.
ಬಿದ್ದ ಭರಾಟೆಗೆ ಅದರ ಕಾಲುಗಳು
ಮುರಿದು ಹೋಗಿದ್ದವು. ನಾನು ಮತ್ತು ಪುಟ್ಟಣ್ಣ ಅಮ್ಮನೊಡನೆ ಸ್ಥಳಕ್ಕೆ ಓಡಿಹೋದೆವು. ಅಮ್ಮನ ಪ್ರೀತಿಯ ಎಮ್ಮೆಯ
ಪರಿಸ್ಥಿತಿ ಚಿಂತಾಜನಕವಾಗಿತ್ತು. ಅಮ್ಮನನ್ನು ನೋಡುತ್ತಾ ಎಮ್ಮೆಯ ಕಣ್ಣಿನಲ್ಲಿ ನೀರು
ಹರಿದು ಬರತೊಡಗಿತು. ಇಷ್ಟು ವರ್ಷಗಳು ಕಳೆದ
ಮೇಲೂ ಆ ದೃಶ್ಯವನ್ನು ನೆನಸಿಕೊಂಡು
ನನ್ನ ಕಣ್ಣಲ್ಲಿ ಹನಿಗಳು ಉದುರುತ್ತಿವೆ. ಮೂಕ ಪ್ರಾಣಿಯ ನರಳುವಿಕೆ
ಮತ್ತು ಅಮ್ಮನ ಮೇಲಿದ್ದ ಅದರ
ಪ್ರೀತಿ ವರ್ಣಿಸಲಸದಳವಾಗಿತ್ತು.
ಊರಿನವರೆಲ್ಲಾ
ಸೇರಿ ಎಮ್ಮೆಯನ್ನೇನೋ ನಮ್ಮ ಮನೆಗೆ ಹೊತ್ತು
ತಲುಪಿಸಿದರು. ಆದರೆ ಅದು ಹೆಚ್ಚು
ದಿನ ಬದುಕಲಿಲ್ಲ. ಹಾಲಿನ ಕೊರತೆ ನೀಗಿಸಲು
ಇನ್ನೊಂದು ಎಮ್ಮೆ ಕೊಳ್ಳಬೇಕಾಯಿತು. ಆ
ವೇಳೆಗೆ ಸರಿಯಾಗಿ ನಮ್ಮ ಕೆಳಗಿನ
ಮನೆಯಲ್ಲಿ ಎರಡು ಎಮ್ಮೆಗಳು ಕರು
ಹಾಕಿದ್ದರಿಂದ ಒಂದನ್ನು ಮಾರಬೇಕೆಂದಿದ್ದರು. ಅದರಲ್ಲಿ
ಒಂದರ ಬೆಲೆ ೨೦೦ ರೂಪಾಯಿ
ಎಂದು ನಿಗದಿ ಮಾಡಿ ನಾವು
ಕೊಳ್ಳುವುದೆಂದು ತೀರ್ಮಾನವಾಯಿತು. ಅಣ್ಣ ಸ್ವತಃ ಹೊಕ್ಕಳಿಕೆಗೆ
ಹೋಗಿ ಭಾವನಿಂದ ೨೦೦ ರೂಪಾಯಿ
ಸಾಲ ತಂದ. ಅದನ್ನು ಆಮೇಲೆ
ಹಿಂತಿರುಗಿಸಿದನೇ ಎಂಬುದು ನನಗೆ ತಿಳಿಯಲಿಲ್ಲ.
ಭಾವನವರ ನ್ಯೂಸ್
ಪೇಪರ್
ಸ್ಕೀಮ್
!
ಭಾವನವರು
ಮನೆಯ ಅಗತ್ಯಗಳಿಗೆ ಧಾರಾಳವಾಗಿ ಹಣ ಖರ್ಚು ಮಾಡುತ್ತಿದ್ದರು.
ಆದರೆ ಹಣವನ್ನು ಯಾವುದೇ ಕಾರಣಕ್ಕೂ
ವ್ಯರ್ಥವಾಗಿ ಖರ್ಚು ಮಾಡುತ್ತಿರಲಿಲ್ಲ. ಹಾಗೆಯೇ
ಹಣವನ್ನು ಎಲ್ಲೆಲ್ಲಿ ಉಳಿತಾಯ ಮಾಡಬಹುದಾಗಿತ್ತೋ ಅಲ್ಲಲ್ಲಿ
ಮಾಡಿಯೇ ಬಿಡುತ್ತಿದ್ದರು. ಆ ದಿನಗಳಲ್ಲಿ ಹೊಕ್ಕಳಿಕೆಗೆ
ಕನ್ನಡ ವರ್ತಮಾನ ಪತ್ರಿಕೆಗಳು ಗಡಿಕಲ್ಲಿನ
ಗುಂಡಾ ನಾಯಕ್ ಎಂಬುವರ ಅಂಗಡಿಯಿಂದ
ಬರುತ್ತಿದ್ದವು. ಬೆಂಗಳೂರಿನಿಂದ ಬಂದ ಪತ್ರಿಕೆಗಳು ಸಾಮಾನ್ಯವಾಗಿ
ಪ್ರತಿದಿನ ೪ ಗಂಟೆಯ ವೇಳೆಗೆ
ಹೊಕ್ಕಳಿಕೆ ತಲುಪುತ್ತಿದ್ದವು. ನನಗಾದ ಆಶ್ಚರ್ಯವೆಂದರೆ ಭಾವನವರ
ಮನೆಯ ಪ್ರಜಾವಾಣಿ ಮಾತ್ರ ಯಾವಾಗಲೂ ಒಂದು
ದಿನ ತಡವಾಗಿ ತಲುಪುತ್ತಿತ್ತು.
ಜವಾಹರ್ಲಾಲ್ ನೆಹರು ಅವರು ದೇಶದ
ಪ್ರಧಾನಿಯಾಗಿದ್ದ ಹಾಗೂ ಬಿ ಡಿ
ಜತ್ತಿಯವರು ಮೈಸೂರಿನ ಮುಖ್ಯಮಂತ್ರಿಯಾಗಿದ್ದ ಆ
ಕಾಲದಲ್ಲಿ ಯಾವುದೇ ಕೆಟ್ಟ ಅಥವಾ
ಕುತೂಹಲಕಾರಿ ಹಾಗೂ ಪ್ರಚೋದನಕಾರಿ ವರ್ತಮಾನಗಳು
ಪತ್ರಿಕೆಗಳಲ್ಲಿ ಸಾಮಾನ್ಯವಾಗಿ ಬರುತ್ತಿರಲಿಲ್ಲ. ಆದ್ದರಿಂದ
ವರ್ತಮಾನ ಪತ್ರಿಕೆಗಳನ್ನು ಅದೇ ದಿನ ಓದುವುದಕ್ಕೂ
ಅಥವಾ ಮಾರನೇ ದಿನ ಓದುವುದಕ್ಕೂ
ಹೆಚ್ಚು ವ್ಯತ್ಯಾಸ ಇರುತ್ತಿರಲಿಲ್ಲ!
ಇದೇ
ಕಾರಣಕ್ಕಾಗಿ ಭಾವನವರು ಗುಂಡಾ ನಾಯಕರೊಡನೆ
ಒಂದು ವಿಶೇಷ ಒಪ್ಪಂದ ಮಾಡಿಕೊಂಡಿದ್ದರು.
ಗುಂಡಾ ನಾಯಕರು ಪ್ರಜಾವಾಣಿಯ ಒಂದು
ಕಾಪಿಯನ್ನು ಅವರ ಮನೆಯಲ್ಲಿ ಓದಲು ಕೊಳ್ಳುತ್ತಿದ್ದರು. ಭಾವನವರೊಂದಿಗೆ
ಆದ ಒಪ್ಪಂದದ
ಪ್ರಕಾರ ಅವರು ಆ ಪತ್ರಿಕೆಯನ್ನು
ಮಾರನೇ ದಿನ ಬಾವನವರಿಗೆ ತಲುಪಿಸುತ್ತಿದ್ದರು.
ಭಾವನವರು ಪತ್ರಿಕೆಯ ಅರ್ಧ ಬೆಲೆಯನ್ನು ತಿಂಗಳ
ಕೊನೆಯಲ್ಲಿ ಗುಂಡಾ ನಾಯಕರಿಗೆ ಕೊಡುತ್ತಿದ್ದರು.
ಉಳಿದ ಅರ್ಧ ಬೆಲೆ ಗುಂಡಾ
ನಾಯಕರ ಪಾಲಿಗೆ ಹೋಗುತ್ತಿತ್ತು. ಇದು
ಇಬ್ಬರಿಗೂ ಒಂದು ಬಗೆಯ ೫೦:೫೦ ಡಬಲ್ ಬೆನಿಫಿಟ್
ಸ್ಕೀಮ್ ಆಗಿತ್ತು. ಗುಂಡಾ ನಾಯಕರಿಗೆ ಪತ್ರಿಕೆಯನ್ನು
ಅದೇ ದಿನ ಓದುವ ಸೌಕರ್ಯವಾದರೆ,
ಬಾವನವರಿಗೆ ಮಾರನೇ ದಿನ ಓದುವುದರಲ್ಲಿ
ಏನೂ ಕೊರತೆ ಕಾಣುತ್ತಿರಲಿಲ್ಲ. ಅಲ್ಲದೇ
ಹಳೆಯ ಪತ್ರಿಕೆಗಳನ್ನು ತೂಕಕ್ಕೆ ಮಾರುವ ಬೆನಿಫಿಟ್
ಅವರದ್ದಾಗಿತ್ತು!
೧೦೦% ಪಕ್ಕಾ
ತೂಕ!
ವರ್ತಮಾನ
ಪತ್ರಿಕೆಗೆ ಸಂಬಂಧಿಸಿದ ಇನ್ನೊಂದು ಪ್ರಕರಣ ಕೂಡಾ ತುಂಬಾ
ತಮಾಷೆಯದ್ದಾಗಿದೆ. ಇದನ್ನು ನನಗೆ ಹೇಳಿದ್ದು
ನನ್ನ ತಮ್ಮ ಶ್ರೀನಿವಾಸ. ಅವನೂ
ಕೂಡಾ ಮೂರು ವರ್ಷ ಅಕ್ಕನ ಮನೆಯಲ್ಲಿದ್ದು
ಗಡಿಕಲ್ ಪ್ರೌಢ ಶಾಲೆಯಲ್ಲಿ ವಿದ್ಯಾಭ್ಯಾಸ
ಮಾಡಿದ್ದ.
ಒಂದು
ಬಾರಿ ಹಳೇ ಪೇಪರ್ ಕೊಳ್ಳುವವನು
ತನ್ನ ತಕ್ಕಡಿಯೊಡನೆ ಭಾವನ ಮನೆಗೆ ಬಂದಿದ್ದ.
ಅವನ ಮುಂದೆ ಹಳೇ ಪತ್ರಿಕೆಗಳ
ರಾಶಿ ಹಾಕಲಾಯಿತು. ಅವನು ತಕ್ಕಡಿಯಲ್ಲಿ ತೂಕ
ಮಾಡಿ ಮಾಡಿ ಒಂದು ಕಡೆ
ಪೇರಿಸ ತೊಡಗಿದ. ಕಟ್ಟಕಡೆಯ ತಕ್ಕಡಿ
ತೂಕದಲ್ಲಿ ಅವನ
ಪ್ರಕಾರ ಇನ್ನೊಂದು ಪೇಪರ್ ಹಾಕಬಹುದಾದಷ್ಟು ತೂಕ
ಕಡಿಮೆ ಇತ್ತು. ಅವನು ಇನ್ನೊಂದು
ಪೇಪರ್ ಇರುವುದೇ ಎಂದು ಕೇಳಿದ.
ಆ ಸಮಯಕ್ಕೆ (ಸಂಜೆ
ಸುಮಾರು ೫ ಗಂಟೆ) ಸರಿಯಾಗಿ ಹುಡುಗನೊಬ್ಬ ಆಗತಾನೆ ಗಡಿಕಲ್
ನಿಂದ ಬಂದ ಆ ದಿನದ
ಪೇಪರ್ ಭಾವನವರ ಕೈಗಿತ್ತ. ಅದನ್ನು
ಮನೆಯಲ್ಲಿ ಯಾರೂ ಓದಿರಲಿಲ್ಲ. ಭಾವನವರು
ಹಿಂದು ಮುಂದು ನೋಡದೆ ಅದನ್ನು
ತಕ್ಕಡಿಯಲ್ಲಿಟ್ಟು ಬಿಟ್ಟರು! ಪೇಪರ್ ವ್ಯಾಪಾರಿ ಕೂಡಾ
ಯಾವ ಸಂಕೋಚವಿಲ್ಲದೇ ತೂಕ ಸರಿಯಾಯಿತೆಂದು ಹೇಳಿ
ಅದನ್ನು ರಾಶಿಗೆ ಸೇರಿಸಿ ಬಿಟ್ಟ!
----ಮುಂದುವರಿಯುವುದು ---
No comments:
Post a Comment