Wednesday, December 4, 2019

ಬಾಲ್ಯ ಕಾಲದ ನೆನಪುಗಳು - 37


ನಿರ್ವಾಹವಿಲ್ಲದೇ ನಾನು ಮತ್ತು ಅಕ್ಕ ಚಿಮಣಿ ದೀಪವನ್ನು ಕೈಯಲ್ಲಿ ಹಿಡಿದು ಮಾಳಿಗೆಯ  ಬಾಗಿಲನ್ನು ತೆಗೆದು ಜಗಲಿಗೆ ಹೋದೆವು. ಆಗ ದೀಪವನ್ನು ಹೊರಗಿನ ಬಾಗಿಲ ಬಳಿ ಹಿಡಿದು ನೋಡಿದಾಗ ಬಾಗಿಲನ್ನು ಬಡಿದದ್ದು  ನಮ್ಮ ಅಣ್ಣನೇ ಎಂದು ತಿಳಿದು ನಮಗೆ ನಾಚಿಕೆ ಆಯಿತು. ಅಣ್ಣನಿಗೆ ನಾವೇಕೆ ಬಾಗಿಲನ್ನು ತೆರೆಯಲು ತಡ ಮಾಡಿದೆವೆಂದು ಗೊತ್ತಾಗಲಿಲ್ಲ. ನಾವು ಕೂಡ ಅದನ್ನು ಹೇಳುವ ಪರಿಸ್ಥಿತಿಯಲ್ಲಿರಲಿಲ್ಲ. ಅಣ್ಣನು ಕೊಪ್ಪದಿಂದ ಬರುತ್ತಿದ್ದ ಬಸ್ಸು ದಾರಿಯಲ್ಲಿ ಕೆಟ್ಟು ಹೋದ್ದರಿಂದ ಅವನು ಬರುವುದು ತಡವಾಯಿತಂತೆ.  ನಾವು ಓದುತ್ತಿದ್ದ ರೋಮಾಂಚಕ ಪತ್ತೇದಾರಿ ಕಾದಂಬರಿಗಳು ನಮ್ಮ ಮೇಲೆ ಎಷ್ಟು ಪರಿಣಾಮ ಬೀರುತ್ತಿದ್ದವೆಂದು ಪ್ರಸಂಗದಿಂದ ಅರಿವಾಗುತ್ತದೆ.
ಶ್ರೀಧರಮೂರ್ತಿ ಒಮ್ಮೆ ನನ್ನನ್ನು ಅವರ ಮನೆಗೆ ಕರೆದುಕೊಂಡು ಹೋದ. ಅವನ ತಂದೆ ಸ್ವಾತಂತ್ರ ಹೋರಾಟಗಾರ ನಾರಾಯಣ ಭಟ್ಟರದು ದೊಡ್ಡ ಸಂಸಾರವೇ ಆಗಿತ್ತು. ಅವರ ಮನೆಯಲ್ಲಿ ನಾನು ಹಿಂದೆಯೇ ಬರೆದ ೮ನೇ ತರಗತಿಯಲ್ಲಿ ಓದುತ್ತಿದ್ದಪಠ್ಯ ಪುಸ್ತಕ ವ್ಯಾಪಾರಿ” ಫಣಿಯಪ್ಪ ಮತ್ತು ನನ್ನ ತರಗತಿಯಲ್ಲೇ ಓದುತ್ತಿದ್ದ ಶಂಕರನಾರಾಯಣ ಎಂಬ ವಿದ್ಯಾರ್ಥಿಗಳು ಆಶ್ರಯ ಪಡೆದಿದ್ದರು. ಅವರ  ಹಿರಿಯ ಮಗ ದತ್ತಾತ್ರಿ ಮೆಟ್ರಿಕ್ ಪರೀಕ್ಷೆ ಪಾಸ್ ಮಾಡಿ ಮನೆಯ ವ್ಯವಹಾರಗಳನ್ನು ನೋಡುತ್ತಿದ್ದ. ಅವನಿಗೆ ನಾನು ಶಾಲೆಯಲ್ಲಿ ಮೊದಲನೇ ಸ್ಥಾನ  ಪಡೆದು ಶ್ರೀಧರಮೂರ್ತಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದು ಏನೂ ಇಷ್ಟವಾಗಿರಲಿಲ್ಲ. ಅದನ್ನು ಅವನು ಬೇರೆ ಬೇರೆ ರೀತಿಯಲ್ಲಿ ತೋರಿಸಿಕೊಳ್ಳುತ್ತಿದ್ದ.
ದತ್ತಾತ್ರಿಯ ದೌರ್ಜನ್ಯ
ಒಂದು ದಿನ ನಾನು ಶ್ರೀಧರಮೂರ್ತಿಯೊಡನೆ ಪುಸ್ತಕ ಭಂಡಾರಕ್ಕೆ ನಾನು ತೆಗೆದುಕೊಂಡಿದ್ದ ಪುಸ್ತಕಗಳನ್ನು ಹಿಂದಿರುಗಿಸಿ ಹೊಸ ಪುಸ್ತಕಗಳನ್ನು ತೆಗೆದುಕೊಳ್ಳಲು ಹೋದೆ. ಮಾಮೂಲಾಗಿ ಕಿಟ್ಟಯ್ಯ ಎನ್ನುವರು ಪುಸ್ತಕಗಳನ್ನು ಕೊಟ್ಟು ತೆಗೆದುಕೊಳ್ಳುತ್ತಿದ್ದರು. ದಿನ ಅವರು ರಜೆಯಲ್ಲಿದ್ದರಿಂದ ದತ್ತಾತ್ರಿಯೇ ಸ್ಥಾನದಲ್ಲಿದ್ದ. ನಾನು ಪುಸ್ತಕಗಳನ್ನು ಅವನ ಕೈಗೆ ಕೊಟ್ಟೆ. ಪುಸ್ತಕಗಳನ್ನು ನೋಡುತ್ತಿದ್ದಂತೆ ದತ್ತಾತ್ರಿಯ ಕಣ್ಣುಗಳು ಕೆಂಪಾದವು. ಅವನ್ನು ಒಂದೊಂದನ್ನೇ ತಿರುವಿ ನೋಡಿ ಅವನ್ನು ರಿಜಿಸ್ಟರಿನಲ್ಲಿ ಎಂಟ್ರಿ ಮಾಡಿ ಬೀರುವಿನೊಳಗಿಟ್ಟ. ನಾನು ಇನ್ನೂ ಅವನ ಮುಂದೆ ನಿಂತಿರುವುದನ್ನು ನೋಡಿ ಏಕೆ ನಿಂತಿರುವೇ ಎಂದು ಪ್ರಶ್ನಿಸಿದ. ನಾನು ಹೊಸ ಪುಸ್ತಕಗಳನ್ನು ತೆಗೆದುಕೊಳ್ಳಲು ಎಂದು ಹೇಳಿದಾಗ ಅವನ ಕಣ್ಣು ಇನ್ನೂ ಕೆಂಪಾಗಿ ಕಿರುಚ ತೊಡಗಿದ. ಅವನು ಅಲ್ಲಿದ್ದವರೊಡನೆ "ನೋಡಿ.   ೬ನೇ ತರಗತಿಯ ಹುಡುಗ ಎಂತೆಂತಾ ಕೆಟ್ಟ ಪತ್ತೇದಾರಿ ಕಾದಂಬರಿಗಳನ್ನು ಓದುತ್ತಿದ್ದಾನೆ". ಎಂದು ಗಟ್ಟಿಯಾಗಿ ಹೇಳುತ್ತಾ ನನ್ನನ್ನು ದುರುಗುಟ್ಟಿಕೊಂಡು ನೋಡತೊಡಗಿದ. ನನ್ನ ಜೊತೆಗಿದ್ದ ಶ್ರೀಧರಮೂರ್ತಿಗೆ ತುಂಬಾ ಬೇಸರವಾಯಿತು. ನಾವು ಅಲ್ಲಿಂದ ಹೊರಟೆವು. ಅಷ್ಟರಲ್ಲಿ ಅಲ್ಲಿದ್ದ ಒಬ್ಬ ಮಹನೀಯರು ಶ್ರೀಧರಮೂರ್ತಿಗೆ ನಾನು ತರಗತಿಯಲ್ಲಿ ಹೇಗಿದ್ದೇನೆಂದು ಪ್ರಶ್ನಿಸಿದರು. ಅವನು ನಾನು ಮೊದಲನೇ ಸ್ಥಾನದಲ್ಲಿದ್ದೇನೆಂದು ಹೇಳಿದಾಗ ಅವರು ಹಾಗಿದ್ದರೆ ನಾನು ಬೇರೆ ಪುಸ್ತಕಗಳನ್ನು ಓದುವುದರಲ್ಲಿ ಏನೂ ತಪ್ಪು ಕಾಣುವುದಿಲ್ಲವೆಂದು ಅಭಿಪ್ರಾಯ ಪಟ್ಟರು!
ನಾನು, ಅಕ್ಕ ಮತ್ತು ಸಿಂಗಾರಿ ಸ್ವಲ್ಪ ದಿನ ಕಾದಂಬರಿಗಳನ್ನು ಓದುವುದನ್ನು ನಿಲ್ಲಿಸ ಬೇಕಾಯಿತು. ಆದರೆ ಶ್ರೀಧರಮೂರ್ತಿ ನನ್ನ  ಕೈಬಿಡಲಿಲ್ಲ. ಅವನ ಅಣ್ಣ ಪುಸ್ತಕ ಭಂಡಾರದಲ್ಲಿ ಇರದ ಸಮಯ ನೋಡಿ ನನಗೆ ಪುಸ್ತಕಗಳನ್ನು ಕೊಡಿಸುವುದನ್ನು ಮುಂದುವರೆಸಿದ. ಆದರೆ ದತ್ತಾತ್ರಿಯ ನನ್ನ  ಮೇಲಿನ ದ್ವೇಷ ನಿಲ್ಲಲಿಲ್ಲ. ಅವನು ಮುಂದೊಂದು ದಿನ ನನ್ನ  ಮೇಲಿನ ಹಗೆ ತೀರಿಸಿಕೊಂಡ. ಪ್ರಸಂಗವನ್ನು ಮುಂದೆ ಬರೆಯುತ್ತೇನೆ.
ಕೊನೆಯ ಮೌಖಿಕ ಪರೀಕ್ಷೆ
ನನ್ನ ೬ನೇ ತರಗತಿಯ ವಾರ್ಷಿಕ ಪರೀಕ್ಷೆ ೧೯೬೦ನೇ ಇಸವಿ ಮಾರ್ಚಿ ತಿಂಗಳಲ್ಲಿ ಮುಗಿಯಿತು. ಅದು ನಾನು ಭಾಗವಹಿಸಿದ ಕೊನೆಯ ಮೌಖಿಕ ಪರೀಕ್ಷೆ. ಪರೀಕ್ಷೆಯ ಫಲಿತಾಂಶ ಒಂದು ಶನಿವಾರ ಪ್ರಕಟಿಸುವರಿದ್ದರು. ನಾವೆಲ್ಲಾ ವಿದ್ಯಾರ್ಥಿಗಳು ಆಫೀಸಿನ ಹೊರಗೆ ಕಾಯುತ್ತಿದ್ದೆವು. ನಮ್ಮ ಕ್ಲಾಸ್ ಟೀಚರ್ ಗುರುಶಾಂತಪ್ಪನವರು ಫಲಿತಾಂಶದ ಪಟ್ಟಿಯನ್ನು ತಂದು ನೋಟೀಸ್ ಬೋರ್ಡಿನಲ್ಲಿ ಅಂಟಿಸಿದರು. ಆದರೆ ಅದರಲ್ಲಿ ವಿದ್ಯಾರ್ಥಿಗಳ ಹೆಸರಿನ ಮುಂದೆ ಪಾಸ್ ಅಥವಾ ಫೇಲ್ ಎಂದು ಮಾತ್ರ ಬರೆದಿತ್ತು. ಆದರೆ ಯಾರು ಪ್ರಥಮ, ದ್ವಿತೀಯ ಅಥವಾ ತೃತೀಯ ಸ್ಥಾನದಲ್ಲಿದ್ದಾರೆಂದು ಬರೆದಿರಲಿಲ್ಲ. ನಾನು ಊರಿಗೆ ಹೋದಾಗ ಅಣ್ಣನ ಮೊದಲ ಪ್ರಶ್ನೆಯೇ ಅದಾಗಲಿತ್ತು. ನಾನು ಆಫೀಸಿನ ಒಳಗೆ ಹೋಗಿ ಹೆಡ್ ಮಾಸ್ಟರ್ ಮುಂದೆಯೇ ಗುರುಶಾಂತಪ್ಪನವರೊಡನೆ ನನ್ನ ಸ್ಥಾನ  (Rank) ಎಷ್ಟೆಂದು ಕೇಳಿದೆ. ಅವರು ನಗುತ್ತಾ ಹೆಡ್ ಮಾಸ್ಟರೊಡನೆ "ನೋಡಿ ಕೃಷ್ಣಮೂರ್ತಿಗೆ ಅವನ ಸ್ಥಾನ ತಿಳಿಯ ಬೇಕಂತೆ" ಎಂದು ಹೇಳಿದರು. ಮತ್ತು  ನನ್ನ ಕಡೆ ತಿರುಗಿ ನೋಡಿ, "ಖಂಡಿತವಾಗಿ ಹೇಳು. ನೀನಲ್ಲದೇ ಬೇರೆ ಯಾರಾದರೂ ಮೊದಲನೇ ಸ್ಥಾನ ಪಡೆದಿರಬಹುದೆಂದು ನಿನಗನಿಸುವುದೇ"? ಎಂದು ಪ್ರಶ್ನಿಸಿದರು. ನನಗಾದ ಸಂತೋಷದಲ್ಲಿ ನನ್ನ ಬಾಯಿಂದ ಯಾವುದೇ ಮಾತುಗಳು ಹೊರಬರಲಿಲ್ಲ. ಆಮೇಲೆ ಅವರು ಹೊರಗೆ ಬಂದು ಸ್ವತಃ ನನ್ನ  ಹೆಸರ ಮುಂದೆ ಮೊದಲ ಸ್ಥಾನ  (First Rank) ಎಂದು ಬರೆದರು. ಆಗ ನನಗಾದ ಸಂತೋಷವನ್ನು ಬಣ್ಣಿಸಲು ನನಗೆ  ಇಂದಿಗೂ ಯಾವುದೇ ಪದಗಳು ಕಾಣುತ್ತಿಲ್ಲ.
----ಮುಂದುವರಿಯುವುದು ---

No comments: