Sunday, July 23, 2017

ನನ್ನ ಬಾಲ್ಯ


ಅಧ್ಯಾಯ ೩೦
ಸೋಮವಾರ ಮುಂಜಾನೆ ನನ್ನನ್ನು ಎಬ್ಬಿಸಿದ ಗೌರಕ್ಕ ನಾನು ಮುಖ ತೊಳೆದ ಸ್ವಲ್ಪ ಹೊತ್ತಿಗೇ ಕಾಫಿ ತಿಂಡಿಗೆ ಕರೆದಳು. ಆಮೇಲೆ ನಾನು ಸ್ನಾನ ಇತ್ಯಾದಿಗಳನ್ನು ಮುಗಿಸಿ ೯ ಗಂಟೆಗೆ ಶಾಲೆಗೆ ಹೊರಡಲು ರೆಡಿಯಾಗುತ್ತಿದ್ದಂತೆ ನನಗೆ ಇನ್ನೊಂದು ಸಣ್ಣ ಫಲಾಹಾರಕ್ಕೆ ಕರೆ ಬಂತು. ಅಣ್ಣನಿಗೆ ನಮ್ಮ ಮನೆಯವರ ಬೆಳಗಿನ ತಿಂಡಿಯ ಹುಚ್ಚು ತಿಳಿದಿದ್ದರಿಂದ ನನಗೆ ಎರಡು ಬಾರಿ ತಿಂಡಿ ಕೊಡುವಂತೆ ಅಕ್ಕನಿಗೆ ಹೇಳಿದ್ದನಂತೆ! ಅವನಿಗೆ ಶಾಲೆಯಲ್ಲಿ ಕೊಡುತ್ತಿದ್ದ ಕ್ಯಾಂಟೀನ್ ತಿಂಡಿಯ ಬಗ್ಗೆ ಯಾವುದೇ ಭರವಸೆ ಇರಲಿಲ್ಲ. ಆದ್ದರಿಂದ ನಾನು ಶಾಲೆಯಿಂದ ಹಿಂದಿರುಗಿದ ಮೇಲೆ ಮದ್ಯಾಹ್ನ ಮತ್ತು ರಾತ್ರಿ ಊಟಗಳನ್ನು ಒಂದೇ ಕಂತಿನಲ್ಲಿ ಸುಮಾರು ಐದು ಗಂಟೆಯ ವೇಳೆಗೆ ಮಾಡಬೇಕಿತ್ತು!  ನಾನು ಬೇಗನೆ ಈ ವ್ಯವಸ್ಥೆಗೆ ಹೊಂದಿಕೊಂಡೆ. 

ನಾನು ವಿಷ್ಣು ಇಬ್ಬರೂ ಒಟ್ಟಿಗೆ ಹೊರಟು ಆಗ ಹೊಸದಾಗಿ ಕಟ್ಟಿದ್ದ ಮಂಜಪ್ಪಯ್ಯನವರ ಮನೆಯ ಪಕ್ಕದಲ್ಲಿ ಒಂದು ಸಣ್ಣ ಕಾಡಿನ ಕಾಲುಹಾದಿಯಲ್ಲಿ ಮುಂದೆ ಹೋದೆವು. ಅದಕ್ಕೆ ಬೊಮ್ಮಕ್ಕನ ಓಣಿ ಎಂದು ಹೆಸರು. ಅಲ್ಲಿನ ಇಳಿಜಾರಿನಲ್ಲಿ ಒಂದು ಸಣ್ಣ ಹಳ್ಳ ಹರಿಯುತ್ತಿತ್ತು. ಆ ಹಳ್ಳವೇ ಮುಂದೆ ಹರಿದು ಹೊಕ್ಕಳಿಕೆಯ ತೋಟಗಳಿಗೆ ನೀರು ಒದಗಿಸುತ್ತಿತ್ತು. ಅದನ್ನು ದಾಟಿ ಮೇಲ್ಕೊಪ್ಪ ಎಂಬಲ್ಲಿ ರಸ್ತೆ ಸೇರಿದೆವು. ಅಲ್ಲಿ ಪುಟ್ಟಪ್ಪ (ವಾಸಪ್ಪ ನಾಯಕರ ಮಗ), ಮಂಜುನಾಥ (ಮುದ್ದಣ್ಣಯ್ಯನವರ ಮಗ) ಮತ್ತು ವೆಂಕಟಯ್ಯ (ಕೋಣೆಗದ್ದೆ)  ಎಂಬ ಹುಡುಗರು ಜೊತೆಯಾದರು. ಮುಂದೆ ಕವಡೆಕಟ್ಟೆ ಎಂಬಲ್ಲಿ ಲಕ್ಷ್ಮೀನಾರಾಯಣ (ಚಾರಣ ಬೈಲ್) ಎಂಬ ಹುಡುಗನೊಡನೆ ಸೇರಿ ಕೊಳಾವರ  ದೇವಸ್ಥಾನ ತಲುಪಿದೆವು. ಅಲ್ಲಿನ ಅರ್ಚಕರಾದ ಅಚ್ಚುತ ಭಟ್ಟರ ಮಗ ಶಿವರಾಮ ನಮ್ಮೊಡನೆ ಸೇರಿದ.

ಸ್ವಲ್ಪ ಮುಂದೆ ಒಂದು ಹಳ್ಳದ ಸೇತುವೆಯನ್ನು ದಾಟಿ ನಾವು ಅತ್ತಿಕೊಡಿಗೆಯೆಂಬಲ್ಲಿ ಚಿಕ್ಕಮಗಳೂರು ಜಿಲ್ಲೆಯ ಗಡಿ ದಾಟಿ ಶಿವಮೊಗ್ಗ ಜಿಲ್ಲೆಯೊಳಗೆ ಪ್ರವೇಶಿಸಿದೆವು. ಅಲ್ಲಿ ಪುಟ್ಟಪ್ಪ (ಚೂಡೇಗೌಡರ  ಮಗ) ಮತ್ತು ಶಂಕ್ರಪ್ಪ ಎಂಬ ಹುಡುಗರು ಜೊತೆಯಾದರು. ಅತ್ತಿಕೊಡಿಗೆ ಮನೆಯ ಬಲಭಾಗದಲ್ಲಿ ವಾಸಪ್ಪ ನಾಯಕರ ತಮ್ಮ ಲಿಂಗಪ್ಪ ನಾಯಕರ ಮನೆಯನ್ನು ಹೊಸದಾಗಿ ಕಟ್ಟಲಾಗಿತ್ತು. ಅವರಿಗೆ ರಾಮ ಮತ್ತು ಲಕ್ಷ್ಮಣ ಎಂಬ ಅವಳಿ ಜವಳಿ ಮಕ್ಕಳಿದ್ದರು. ಅಲ್ಲಿಂದ ಮುಂದೆ ಬಸವಾನಿಯವರೆಗೂ ಟಾರ್ ರಸ್ತೆ ಇತ್ತು.  ಬಸವಾನಿಗೆ ಬಂದ ಬಸ್ಸುಗಳು ಅಲ್ಲಿಯವರೆಗೂ ಬರುತ್ತಿದ್ದವು. ಸ್ವಲ್ಪ ದೂರ ಮುಂದೆ ಒಂದು ದೇವಸ್ಥಾನವಿತ್ತು. ಅದರ ಹಿಂದೆ ಗಣಪೇಗೌಡರ ಮನೆಯಿಂದ ತಿಮ್ಮಪ್ಪ ಮತ್ತು ಗೋಪಾಲ ಎಂಬ ಹುಡುಗರು ನಮ್ಮೊಡನೆ ಸೇರಿದರು. ಮುಂದೆ ಸ್ವಲ್ಪ ದೂರದಲ್ಲಿ ಬಲಭಾಗದಲ್ಲಿ ಕೊಳಾವರ ತಿಮ್ಮಣ್ಣ ಗೌಡರ ವಿಶಾಲವಾದ ಬಂಗಲೆ ಇತ್ತು. ತಿಮ್ಮೇಗೌಡರ ಕುಟುಂಬ ತುಂಬಾ ಶ್ರೀಮಂತ, ವಿದ್ಯಾವಂತ ಮತ್ತು ಪ್ರಸಿದ್ಧ ಕುಟುಂಬ. ಅವರ ಮಗ ವೆಂಕಟಯ್ಯನವರು ಮುಂದೆ ತೀರ್ಥಹಳ್ಳಿ ತಾಲೂಕ್ ಬೋರ್ಡ್ ಪ್ರೆಸಿಡೆಂಟ್ ಆಗಿ ತುಂಬಾ ಜನೋಪಕಾರಿ ಕೆಲಸಗಳನ್ನು ಮಾಡಿದರು. 

ಮುಂದೆ ನೇಣಾಂಗಿ ಎಂಬ ಊರಿನ ಮಹಾದೇವ ಭಟ್ಟರ ಮಗಳು ವಿಶಾಲಾಕ್ಷಿ ಎಂಬ ಹುಡುಗಿಯೂ ನಮ್ಮೊಡನೆ ೮ನೇ ತರಗತಿಯಲ್ಲಿ ಓದಲು ಬರುತ್ತಿದ್ದಳು. ಅಲ್ಲೊಂದು ದೊಡ್ಡ ಹಳ್ಳದ ಮೇಲಿನ ಸೇತುವೆ ದಾಟಿ ಒಂದು ಗುಡ್ಡವನ್ನೇರಿದ ನಂತರ ನಾವು ಬಸವಾನಿ ತಲುಪಿದೆವು. ಊರಿನ ಒಂದು ದೊಡ್ಡ ಕೆರೆಯ ದಂಡೆಯ ಮತ್ತೊಂದು ಬದಿಗೆ ನಮ್ಮ ಶಾಲೆ ಇತ್ತು.

ಬಸವಾನಿ ಊರು ತುಂಗಾನದಿಯ ತೀರದಲ್ಲಿತ್ತು. ಇಲ್ಲಿ ಪ್ರಸಿದ್ಧ  ಸೋಮೇಶ್ವರ ದೇವಸ್ಥಾನವಿದ್ದು ಪ್ರತಿ ವರ್ಷವೂ ಜಾತ್ರೆ ನಡೆಯುತ್ತಿತ್ತು. ಊರಿನ ಮಧ್ಯೆ ಒಂದು ದೊಡ್ಡ ರೈಸ್ ಮಿಲ್ ಇತ್ತು. ಸುಬ್ಬಾ ಭಟ್ಟರೆಂಬ ಶ್ರೀಮಂತರು ಅದರ ಒಡೆಯರಾಗಿದ್ದು ಅವರ ಸುಂದರ ಬಂಗಲೆ ಊರಿನ ಮಧ್ಯದಲ್ಲಿ ಮೆರೆಯುತ್ತಿತ್ತು. ಬಂಗಲೆಯ ಮುಂದಿದ್ದ ಹೂತೋಟದ ಸೊಬಗು ವರ್ಣಿಸಲಸದಳ. ಸುಬ್ಬಾ ಭಟ್ಟರ ಹಿರಿಯ ಮಗ ಚಿದಂಬರ ನಮ್ಮ ಶಾಲೆಯಲ್ಲಿ ೮ನೇ ತರಗತಿ ಓದುತ್ತಿದ್ದ. ನಮ್ಮ ಶಾಲೆಯ ಹತ್ತಿರವೇ ಪ್ರಸಿದ್ಧ ಸ್ವಾತಂತ್ರ ಹೋರಾಟಗಾರ ಮತ್ತು ರಾಜಕೀಯ ಪ್ರವೀಣ ಬಸವಾನಿ ರಾಮಶರ್ಮರ ಬಂಗಲೆ ಇತ್ತು. ಅವರ ಪತ್ನಿ ಸಾವಿತ್ರಮ್ಮ ಹಿರಿಯ ಸಮಾಜ ಸೇವಕಿಯಾಗಿದ್ದರು. ದಂಪತಿಗಳಿಗೆ ಮಕ್ಕಳಿರಲಿಲ್ಲ.

ನನ್ನ ಶಾಲೆಯ ಮೊದಲ ದಿನ ಮೇಷ್ಟರ ಮತ್ತು ಸಹಪಾಠಿಗಳ ಪರಿಚಯ ಮಾಡಿಕೊಳ್ಳುವುದರಲ್ಲಿ ಮುಕ್ತಾಯವಾಯಿತು. ನನಗೆ ನಮ್ಮ ತರಗತಿಯಲ್ಲಿ ಯಾರು ಪ್ರಥಮ ವಿದ್ಯಾರ್ಥಿ ಎಂದು ತಿಳಿದುಕೊಳ್ಳುವುದು ಮುಖ್ಯವಾಗಿತ್ತು. ಏಕಂದರೆ ಅಣ್ಣ ನನಗೆ ಒಂದು ವಿಷಯ ಸ್ಪಷ್ಟ ಮಾಡಿಬಿಟ್ಟಿದ್ದ. ನಾನು ಯಾವಾಗಲೂ ತರಗತಿಗೆ ಪ್ರಥಮನಾಗಿ ಇರಬೇಕೆಂದು. ಅವನಿಗೇನೋ ನನ್ನ ಅರ್ಹತೆಯ ಬಗ್ಗೆ ಅಷ್ಟೊಂದು ವಿಶ್ವಾಸವಿದ್ದರೂ ನನಗೆ ಮುಂದೆ ಅದೊಂದು ದೊಡ್ಡ ಹೊರೆಯಾಗಲಿತ್ತು. ಜಗದೀಶ ಎಂಬ ಹುಡುಗ ಮೊದಲನೇ ಸ್ಥಾನ ಮತ್ತು ಶ್ರೀಧರ ಮೂರ್ತಿ ಎಂಬ ಹುಡುಗ ಎರಡನೇ ಸ್ಥಾನದಲ್ಲಿದ್ದರೆಂದು ತಿಳಿಯಿತು. ಜಗದೀಶ ಲಕ್ಷ್ಮೀಪುರ ಎಂಬ ಊರಿನ ತಿಮ್ಮೇ ಗೌಡರ ಮಗ. (ಈಚೆಗೆ ಒಬ್ಬರಿಂದ ಅವನು ಕೊಪ್ಪ ತಾಲೂಕಿನ ತಹಸೀಲ್ದಾರ್ ಆಗಿ ನಿವೃತ್ತಿ ಪಡೆದನೆಂದು ತಿಳಿಯಿತು. ಅವನ ಮೇಲಿನ ಅಪವಾದವೆಂದರೆ ತಾನು ಲಂಚ ಪಡೆಯದಿದ್ದುದು ಮಾತ್ರವಲ್ಲ, ಬೇರೆಯವರಿಗೂ ಲಂಚ ಪಡೆಯದಂತೆ ಮಾಡಿ ಇಡೀ ತಾಲೂಕು ಕಚೇರಿಯವರನ್ನೆಲ್ಲಾ ಬಡವರನ್ನಾಗಿ ಮಾಡಿ ಬಿಟ್ಟನೆಂದು!). ಜಗದೀಶನ ಚಿಕ್ಕಪ್ಪ ಕೃಷ್ಣೇಗೌಡರು ನಾವೆಂದೂ ಕೇಳಿರದ ಕಮ್ಯುನಿಸ್ಟ್ ಪಾರ್ಟಿ (ಮಾರ್ಕ್ಸಿಸ್ಟ್)  ಲೀಡರ್ ಆಗಿದ್ದು ಬಸವಾನಿಯಲ್ಲಿ ಒಂದು ಆಫೀಸ್ ಕೂಡ ಹೊಂದಿದ್ದರು. 

ಶ್ರೀಧರ ಮೂರ್ತಿ ಕಾಂಗ್ರೆಸ್ ನಾಯಕರೂ ಮತ್ತು ಮಲೆನಾಡು ಅಡಿಕೆ ಮಾರಾಟ ಸೊಸೈಟಿ ಬಸವಾನಿ ಶಾಖೆಯ ಮುಖ್ಯಸ್ಥರೂ ಆಗಿದ್ದ ನಾರಾಯಣ ಭಟ್ಟರ ಮಗ.  ಅವನೂ ಕೂಡ ನಮ್ಮ ವಿಷ್ಣುವಿನಂತೆ ಜುಟ್ಟು ಬಿಟ್ಟಿದ್ದರೂ ಅದನ್ನು ತನ್ನ ತಂದೆಯವರಂತೆ ಗಾಂಧಿಟೋಪಿಯಿಂದ ಮುಚ್ಚಿಬಿಟ್ಟಿದ್ದ!  ಇಡೀ ಶಾಲೆಗೆ ಅವನೊಬ್ಬನೇ ಗಾಂಧಿ ಟೋಪಿಧಾರಿಯಾಗಿದ್ದ.

ಮದ್ಯಾಹ್ನದ ವಿರಾಮದ ವೇಳೆಗೆ ಅಡಿಗರ ಕ್ಯಾಂಟೀನ್ ನಲ್ಲಿ ತಯಾರಿಸಿದ ಉಪ್ಪಿಟ್ಟು ಮತ್ತು ಪೌಡರ್ ಹಾಲು ಹಂಚಲಾಯಿತು. ನನಗೆ ಅವೆರಡೂ ಗಂಟಲಲ್ಲಿ ಇಳಿಯಲೇ ಇಲ್ಲ! ಹಾಗಾಗಿ ನಾನು ಎರಡನೇ ದಿನದಿಂದ ಅದಕ್ಕೆ ಚಕ್ಕರ್ ಹಾಕತೊಡಗಿದೆ. ಶಾಲೆಯ ಹಿಂದೆ ಆಟದ ಮೈದಾನವಿದ್ದು ಅದರಲ್ಲಿ ಹುಡುಗರೆಲ್ಲ ಸೇರಿ ಕಬಡ್ಡಿ ಆಡುತ್ತಿದ್ದರು. ನನಗೆ  ಮೊದಲಿನಿಂದಲೂ ಕಬಡ್ಡಿಯಲ್ಲಿ ವಿಪರೀತ ಆಸಕ್ತಿ ಇತ್ತು. ನಾನು ಆಟದಲ್ಲಿ ಸೇರಿಕೊಂಡೆ. ಇಡೀ ಶಾಲೆಗೆ ಎತ್ತರದ ವಿದ್ಯಾರ್ಥಿಯಾಗಿದ್ದ  ೮ನೇ ತರಗತಿಯ ವಾಸಾಚಾರಿ ಒಂದು ಟೀಮ್ ಕ್ಯಾಪ್ಟನ್ ಆಗಿದ್ದರೆ, ಇನ್ನೊಂದು ಟೀಮ್ ಗೆ ೭ನೇ ತರಗತಿಯ ಅತ್ಯಂತ ಬಲಕಾಯ ವಿದ್ಯಾರ್ಥಿಯಾದ ಶಂಕರಪ್ಪ ಕ್ಯಾಪ್ಟನ್ ಆಗಿದ್ದ.

ಶಂಕರಪ್ಪ ಮತ್ತು ವಾಸಾಚಾರಿ ಇಬ್ಬರೂ ಆಟದಲ್ಲಿ ತುಂಬಾ ಪ್ರವೀಣರಾಗಿದ್ದರು. ಗುಂಡು ಗುಂಡಾಗಿದ್ದ ಶಂಕರಪ್ಪನನ್ನು ಹಿಡಿಯುವುದು ಅಸಾಧ್ಯವಾಗಿದ್ದರೆ, ಆಕಾಶದೆತ್ತರದ ವಾಸಾಚಾರಿ ಯಾರ ಕೈಗೂ ಸಿಲುಕದ ಗಿರಾಕಿಯಾಗಿದ್ದ.  ನಾನು ಕೂಡಾ ಕಬಡ್ಡಿ ಆಟದ ಕೆಲವಂಶಗಳನ್ನು ಮನದಟ್ಟು ಮಾಡಿಕೊಂಡಿದ್ದೆ:

1.     ತುಂಬಾ ಹೊತ್ತು ಉಸಿರನ್ನು ಹಿಡಿದುಕೊಳ್ಳುವಿಕೆ
2.    ಯಾರಾದರೂ ಹಿಡಿದುಕೊಂಡಾಗ ನುಸುಳಿ ಹೋಗುವ ಚಾಕಚಕ್ಯತೆ ಮತ್ತು
3.    ಆಟಗಾರನ ಕಾಲು ಗಟ್ಟಿಯಾಗಿ ಹಿಡಿದು ಅಂಟಿಕೊಂಡು ಬಿಡುವುದು

ನನ್ನ ದೇಹ ಶಕ್ತಿ ಕಡಿಮೆ ಇದ್ದರೂ ಕೂಡಾ ಮೇಲಿನ ವಿಷಯಗಳಲ್ಲಿ ಪ್ರವೀಣತೆ ಗಳಿಸಿ ಬೇಗನೆ ಕಬಡ್ಡಿ ಟೀಮ್ ನಲ್ಲಿ ಒಂದು ಉತ್ತಮ ಸ್ಥಾನ ಗಳಿಸಿಕೊಂಡೆ. ವಿಷ್ಣು ಉತ್ತಮ ದೇಹ ಶಕ್ತಿ ಹೊಂದಿದ್ದರೂ ಅವನಿಗೆ ಆಟಗಳಲ್ಲಿ ಯಾವುದೇ ಆಸಕ್ತಿ ಇರಲಿಲ್ಲ. ಶಾಲೆಯ ಜವಾನ ನಾಗಪ್ಪ ಘಂಟೆ ಬಾರಿಸುತ್ತಿದ್ದಂತೆ ನಾವು ಆಟವನ್ನು ನಿಲ್ಲಿಸಿ ಕೆರೆಯಲ್ಲಿ ಕೈ ಕಾಲು ತೊಳೆದು ಶಾಲೆಗೆ   ಧಾವಿಸಬೇಕಿತ್ತು.

ನಮ್ಮ ತರಗತಿಯಲ್ಲಿ ೬-೭ ಮಂದಿ ಹುಡುಗಿಯರಿದ್ದರು. ಆದರೆ ನಮಗೆಲ್ಲ ನಾಚಿಕೆ ಜಾಸ್ತಿಯಿದ್ದರಿಂದ ಹುಡುಗಿರೊಡನೆ ಹೆಚ್ಚು ಮಾತನಾಡುತ್ತಿರಲಿಲ್ಲ. ಶಾಲೆಯ  ೫ನೇ  ಮತ್ತು  ೬ನೇ ತರಗತಿಗಳು ಪ್ರತ್ಯೇಕ ಕೋಣೆಗಳಲ್ಲಿ ನಡೆಯುತ್ತಿದ್ದವು. ಆದರೆ ೭ ನೇ ಮತ್ತು ೮ನೇ ತರಗತಿಗಳು ಒಂದೇ ಕೊಠಡಿಯಲ್ಲಿ ನಡೆಯುತ್ತಿದ್ದವು. ನಾಗಪ್ಪನ ಕೊನೆಯ ಘಂಟೆ ಬಾರಿಸುತ್ತಿದ್ದಂತೆ ನಾವೆಲ್ಲರೂ ಒಟ್ಟಿಗೆ ಶಾಲೆಯಿಂದ ಹೊರಟು ಮೇಲ್ಕೊಪ್ಪ ತಲುಪುವಾಗ ನಾನು ಮತ್ತು ವಿಷ್ಣು ಮಾತ್ರ ಉಳಿದು ಹೊಕ್ಕಳಿಕೆ ತಲುಪುತ್ತಿದ್ದೆವು.
-----ಮುಂದುವರೆಯುವುದು-----


Sunday, July 16, 2017

ನನ್ನ ಬಾಲ್ಯ


ಅಧ್ಯಾಯ ೨೯
ನನ್ನ ಅಣ್ಣನಿಗೆ ತಾನು ಮುಂದೆ ಓದಲಾಗದಿದ್ದರೂ ತನ್ನ ತಮ್ಮಂದಿರು ಓದಿ ಮುಂದೆ ಬರಲೇ ಬೇಕೆಂಬ ಆಸೆಯಿತ್ತು. ಅವನ ಮುಂದಿದ್ದ ಗುರಿಯೆಂದರೆ ತನ್ನ ತಮ್ಮಂದಿರು ವಿದ್ಯಾವಂತರಾಗಿ ಪೇಟೆಯ ಹುಡುಗರಂತೆ ಪಟಪಟನೆ ಇಂಗ್ಲಿಷ್ ಮಾತನಾಡುತ್ತಾ ನೌಕರಿ ಮಾಡಬೇಕೆಂದು. ಆ ದೃಷ್ಟಿಯಿಂದ ಅವನು ಸರ್ವ ಪ್ರಯತ್ನ ಮಾಡಿದ್ದನ್ನು ನಾವೆಂದೂ ಮರೆಯಲಾರೆವು.

ನನ್ನ ಈ ದೃಷ್ಟಿಯ ಪಯಣ ನಾನು ಮೊಟ್ಟ ಮೊದಲ ಬಾರಿ ಅಡೇಖಂಡಿ ಮನೆಯನ್ನು ಬಿಟ್ಟು ಹೊಕ್ಕಳಿಕೆಗೆ ಹೊರಡುವುದರೊಡನೆ  ಆರಂಭವಾಯಿತು. ಅದು ೧೯೫೯ ನೇ ಇಸವಿಯ ಮಾರ್ಚ್ ತಿಂಗಳ ಕೊನೆಯ ವಾರ. ಅಣ್ಣ ನನಗಾಗಿ ಆಗಲೇ ೬ನೇ ತರಗತಿಯ ಪುಸ್ತಕಗಳನ್ನು ತಂದು ಬಿಟ್ಟಿದ್ದ.  ಆ ಕಾಲದಲ್ಲೇ ಅಣ್ಣನ ಸ್ನೇಹಿತರಾದ ಗೋಳಿಕಟ್ಟೆ ಕೃಷ್ಣರಾವ್ ಅವರ ಮನೆಗೆ  ಫಿಲಂ ಫೇರ್ ವಾರ ಪತ್ರಿಕೆ ಬರುತ್ತಿತ್ತು. ಅಣ್ಣ ಅದರ ಒಂದು ಕಾಪಿ ಮನೆಗೆ ತಂದ . ಉದ್ದೇಶ ಓದಲಿಕ್ಕಲ್ಲ. ನನ್ನ ಪುಸ್ತಕಗಳಿಗೆ ಬೈಂಡ್ ಮಾಡುವುದಕ್ಕೆ!  ರಾಜ್ ಕಪೂರ್, ನರ್ಗಿಸ್, ದಿಲೀಪ್ ಕುಮಾರ್, ಮಧುಬಾಲ, ಮುಂತಾದವರ ಫೋಟೋಗಳಿದ್ದ ಪತ್ರಿಕೆಯ ಪುಟಗಳು ನನ್ನ ಪುಸ್ತಕಗಳ ಹೊರಭಾಗವನ್ನು ಅಲಂಕರಿಸಿದುವು.

ಮನೆಯಿಂದ ಹೊರಟ ನಾನು ಮತ್ತು ಅಣ್ಣ ಬಸ್ಸಿನಲ್ಲಿ ಕೊಪ್ಪ ತಲುಪಿದೆವು. ಸೀದಾ  ಅಚ್ಯುತ ಭಟ್ಟರ ಅಂಗಡಿಗೆ ಹೋಗಿ ನನಗೆ ಒಂದು ಜೊತೆ ಶರ್ಟ್ ಮತ್ತು ಚೆಡ್ಡಿ ಬಟ್ಟೆಗಳನ್ನು ಖರೀದಿಸಿದೆವು. ಅದನ್ನು ಹೊಲಿಸಲು ಆ ಕಾಲಕ್ಕೆ ಕೊಪ್ಪದಲ್ಲಿ ಅತ್ಯಂತ  ಪ್ರಸಿದ್ಧನಾಗಿದ್ದ ಶೇಷಗಿರಿ ಎಂಬುವನ ಟೈಲರ್ ಶಾಪ್ ಒಳಗೆ ಪ್ರವೇಶ ಮಾಡಿದೆವು. ಶೇಷಗಿರಿಯ ಪ್ರಸಿದ್ಧಿ ಅವನ ಹೊಲಿಗೆಯ ಪ್ರವೀಣತೆಗಲ್ಲ. ಅದಕ್ಕೆ ಕಾರಣವೆ ಬೇರೆ.  ಅವನು ಯಾವುದೇ ಡ್ರೆಸ್ ಹೊಲಿಗೆಗೆ ಕೊಟ್ಟದ್ದನ್ನು ಒಪ್ಪಿಕೊಂಡ ಸಮಯಕ್ಕೆ ಹೊಲಿದು ಕೊಟ್ಟ ಉದಾಹರಣೆಗಳೇ ಇರಲಿಲ್ಲ. ಸಾಮಾನ್ಯವಾಗಿ ಗೋಕುಲಾಷ್ಟಮಿಗೆ ಹಾಕಲೆಂದು ಹೊಲಿಗೆಗೆ ಕೊಟ್ಟರೆ ಮಹಾಶಿವರಾತ್ರಿಗೆ ಅದು ಸಿಗುವ ಸಾಧ್ಯತೆ ಇತ್ತು!

ಶೇಷಗಿರಿಯ ಹತ್ತಿರ ಯಾವುದೇ ರಿಸ್ಕ್ ತೆಗೆದುಕೊಳ್ಳದೇ ನನ್ನ ಅಣ್ಣ ಅವನು ಬಟ್ಟೆ ಕಟ್ ಮಾಡಿ ಹೊಲಿಯಲು ಪ್ರಾರಂಭ ಮಾಡಿದ್ದನ್ನು ಕಣ್ಣಾರೆ ಕಂಡ  ಮೇಲೆಯೇ ನನ್ನನ್ನು ಒಂದು ಶೂ ಅಂಗಡಿಗೆ ಕರೆದುಕೊಂಡು ಹೋದ. ಅಲ್ಲಿ ನನಗೆ ಒಂದು ಜೊತೆ ಕ್ಯಾನ್ವಾಸ್ ಶೂ ಕೊಡಿಸಲಾಯಿತು. ನನಗೆ ನನ್ನ ಕಣ್ಣನ್ನೇ ನಂಬಲಾಗಲಿಲ್ಲ. ಏಕೆಂದರೆ ಆ ಕಾಲದಲ್ಲಿ ನಮ್ಮೂರಿನಲ್ಲಿ ಶೂ ಇರಲಿ, ಚಪ್ಪಲಿಯನ್ನು ಧರಿಸುವರೇ ವಿರಳರಾಗಿದ್ದರು. ನನಗೆ ಶೂ ಕೊಡಿಸುವ ಅಣ್ಣನ ತೀರ್ಮಾನ ಒಂದು ದೊಡ್ಡ ಕ್ರಾಂತಿಕಾರಿ ತೀರ್ಮಾನವಾಗಿತ್ತು! ಶೂ ಧರಿಸಿದ ನನ್ನನ್ನು ಅಣ್ಣ ಪುನಃ ಶೇಷಗಿರಿಯ ಅಂಗಡಿಗೆ ಕರೆದುಕೊಂಡು ಹೋದ. ಅಲ್ಲಿ ನಾನು ನನ್ನ ಹೊಸ ಡ್ರೆಸ್ ಗಳು ರೆಡಿಯಾಗುವುದನ್ನು ಕಣ್ಣಾರೆ ಗಮನಿಸಬೇಕಾಗಿತ್ತು. ಏಕೆಂದರೆ ಅಣ್ಣನಿಗೆ ಶೇಷಗಿರಿಯ ಮೇಲೆ ನಂಬಿಕೆಯೇ ಇರಲಿಲ್ಲ.

ನನ್ನ ಹೊಸ ಬಟ್ಟೆ ರೆಡಿಯಾದ ಮೇಲೆ ನಾವು ಬಸ್ ಪ್ರಯಾಣ ಮಾಡಿ ಗಡಿಕಲ್ ಎಂಬ ಊರನ್ನು ತಲುಪಿದೆವು. ನಾನು ಹಿಂದೆ ಹೊಕ್ಕಳಿಕೆಗೆ ಹೋಗುವಾಗ ಹರಿಹರಪುರ ಮಾರ್ಗವಾಗಿ ನಡೆದೇ ಹೋಗಿದ್ದೆ. ಆದರೆ ಈ ಬಾರಿ ಬಿ ಜಿ ಕಟ್ಟೆಯಿಂದ ಕೊಪ್ಪ ಮಾರ್ಗವಾಗಿ ಬಸ್ನಲ್ಲೇ ಗಡಿಕಲ್ ತಲುಪಿದ್ದೆ. ಅಲ್ಲಿಂದ ನಾವು ಎರಡು ಮೈಲಿ ಕಾಲ್ನಡಿಗೆ ಮಾಡಬೇಕಿತ್ತು. ಗಡಿಕಲ್ ಊರು ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಗಡಿಯಾಗಿತ್ತು. ಕನ್ನಡದ ಪ್ರಸಿದ್ಧ ಕವಿ ಕುವೆಂಪು ಅವರು ಇಲ್ಲಿಗೆ ಸಮೀಪದ ಕುಪ್ಪಳ್ಳಿಯವರು .

ಗೌರಕ್ಕನಿಗೆ ನಾನು ಅವಳ ಮನೆಯಲ್ಲೇ ಇರಲು ಬಂದದ್ದು ತುಂಬಾ ಸಂತೋಷ ಕೊಟ್ಟಿತು. ಅಲ್ಲದೆ ನಾನು ಅವಳ ಮನೆಯಲ್ಲೇ ಮೂರು ವರ್ಷ ಇರುವುದೆಂದು ಆಗಲೇ ತೀರ್ಮಾನವಾಗಿ ಬಿಟ್ಟಿತ್ತು. ಅಷ್ಟರಲ್ಲೇ ನರ್ಜಿ ವಿಷ್ಣುಮೂರ್ತಿ ಕೂಡ ಹೊಕ್ಕಳಿಕೆಗೆ ೭ನೇ ತರಗತಿ ಓದಲು ಪಕ್ಕದ ಮನೆಗೆ ಬಂದು ಬಿಟ್ಟಿದ್ದ. ಆದರೆ ಅವನನ್ನು ನಾವೆಣಿಸಿದಂತೆ ಗಡಿಕಲ್ ಶಾಲೆಗೆ ಸೇರಿಸಿರಲಿಲ್ಲ. ಬದಲಿಗೆ ತೀರ್ಥಹಳ್ಳಿ ತಾಲೂಕಿನ ಬಸವಾನಿ ಎಂಬಲ್ಲಿದ್ದ ಗವರ್ನಮೆಂಟ್ ಶಾಲೆಗೆ ಸೇರಿಸಿದ್ದರು. ಆ ಊರು ಹೊಕ್ಕಳಿಕೆಗೆ ಮೂರು ಮೈಲಿ ದೂರದಲ್ಲಿತ್ತು. ಅಲ್ಲಿನ ಶಾಲೆ ತುಂಬಾ ಪ್ರಸಿದ್ಧಿ ಪಡೆದಿತ್ತಂತೆ. ಅದನ್ನು ತಿಳಿದ ನಂತರ ನನ್ನನ್ನೂ ಅದೇ ಶಾಲೆಗೆ ಸೇರಿಸುವುದೆಂದು ತೀರ್ಮಾನಿಸಲಾಯಿತು.

ಮಾರನೇ ದಿನ ನಾವು ಬಸವಾನಿ ಶಾಲೆಗೆ ಹೋದೆವು. ಶಾಲೆಯ ಹೆಡ್ ಮಾಸ್ಟರ್ ಆಗಿದ್ದ ವರದಾಚಾರ್ ಅವರು ಇಡೀ ತೀರ್ಥಹಳ್ಳಿ ತಾಲೂಕಿನಲ್ಲೇ ಪ್ರಸಿದ್ಧರಾಗಿದ್ದ ಮೇಷ್ಟರಾಗಿದ್ದರು. ಅವರ ವ್ಯಕ್ತಿತ್ವ ಅತ್ಯಂತ  ಪ್ರಭಾವಶಾಲಿಯಾಗಿತ್ತು. ಅವರು ಬೇಗನೆ ಹೈಸ್ಕೂಲ್ ಮೇಷ್ಟರಾಗಿ ಹೋಗುವರೆಂದು ಹೇಳಲಾಗುತ್ತಿತ್ತು. ನನ್ನ ಮಾರ್ಕ್ಸ್ ಕಾರ್ಡ್ ನೋಡಿ ಅವರು ಸಂತೋಷ ವ್ಯಕ್ತಪಡಿಸಿದರು.

ನನ್ನ ಕ್ಲಾಸ್ ಟೀಚರ್ ಹೆಸರು ಗುರುಶಾಂತಪ್ಪ ಎಂದಿತ್ತು. ಅವರು ಬಯಲುಸೀಮೆಯ ಚೆನ್ನಗಿರಿಯವರು. ಇನ್ನೊಬ್ಬ ಮೇಷ್ಟರ ಹೆಸರು ರಾಮಪ್ಪ ಎಂದಿತ್ತು. ಅವರ ಊರು ಸೊರಬ. ಬಸವಾನಿ ಶಾಲೆಯ ವಿಶೇಷವೊಂದಿತ್ತು. ಬೇರೆ ಎಲ್ಲ ಶಾಲೆಗಳಲ್ಲಿ ೬ ನೇ ತರಗತಿಗೆ "ಅರೋಗ್ಯ' ಎಂಬ ಸಬ್ಜೆಕ್ಟ್ ಇದ್ದರೆ  ಇಲ್ಲಿ ಮಾತ್ರ ಅದರ ಬದಲಿಗೆ ಹಿಂದಿ ಸಬ್ಜೆಕ್ಟ್ ಇತ್ತು. ಅದಕ್ಕೊಬ್ಬ ಪಾರ್ಟ್ ಟೈಮ್ ಮೇಷ್ಟರಿದ್ದರು. ಅವರ  ಹೆಸರು ಗೋಪಾಲ. ಅವರು ಬಸವಾನಿಯ ಸಮೀಪದಲ್ಲಿದ್ದ ಲಕ್ಕುಡಿಗೆ ಎಂಬ ಊರಿನವರು. ಅವರು ಮದ್ಯಾಹ್ನದ ನಂತರ ಶಾಲೆಗೆ ಬಂದು ಕೇವಲ ೬,೭ ಮತ್ತು ೮ ನೇ ತರಗತಿಗಳಿಗೆ ಪಾಠ ಮಾಡುತ್ತಿದ್ದರು. ಅವರ ಸಂಬಳ ಆಗ ತಿಂಗಳಿಗೆ ೩೦ ರೂಪಾಯಿ ಇತ್ತು.  ಮಲ್ಲಾಡಿ ಹಳ್ಳಿಯ ಸ್ವಾಮೀಜಿಯವರ ಶಿಷ್ಯರಾದ ಗೋಪಾಲ ಮೇಷ್ಟರಿಗೆ  "ಕೃಪಾನಂದ' ಎಂಬ ಕಾವ್ಯನಾಮವೂ ಇತ್ತು. ಅವರೊಬ್ಬ ಬ್ರಹ್ಮಚಾರಿ ಮತ್ತು ಕನ್ನಡ ಸಾಹಿತಿ. ಅವರ ಕನ್ನಡ ಕಾದಂಬರಿಗಳು ಆಗಲೇ ಪ್ರಕಟಗೊಂಡಿದ್ದವು. ಅವರು ಬರೆದ ಕಥೆಗಳು ಚಂದಮಾಮದಲ್ಲೂ ಪ್ರಕಟಿತವಾಗಿದ್ದವು.

ನಮ್ಮಣ್ಣ ನಮಗೆ ಆಗಲೇ ಹಿಂದಿ ಕಲಿಸಿಬಿಟ್ಟಿದ್ದರಿಂದ ನನಗೆ ಶಾಲೆಯಲ್ಲಿ ಹಿಂದಿ ಇರುವುದೆಂದು ತಿಳಿದು ಸಂತೋಷವಾಯಿತು. ಆದರೆ ದುರದೃಷ್ಟವಶಾತ್ ನನಗೆ ಹಿಂದಿ ಪುಸ್ತಕ ಸಿಗಲೇ ಇಲ್ಲ. ಕೇವಲ ನಮ್ಮ ಶಾಲೆಯಲ್ಲಿ ಮಾತ್ರ ಇದ್ದ ಸಬ್ಜೆಕ್ಟ್  ಆದ್ದರಿಂದ ಪುಸ್ತಕದ ಕೊರತೆ ಇತ್ತು. ಆಗ ನನ್ನ ಸಹಾಯಕ್ಕೆ ಬಂದವರು ನನ್ನ ಭಾವನ  ಕಿರಿಯ ತಮ್ಮ ನಾಗೇಶ್ ರಾವ್ . ಅವರು ಹಿಂದೆ ಬಸವಾನಿ ಶಾಲೆಯಲ್ಲೇ ಓದಿದವರು. ಅವರ ಹತ್ತಿರವಿದ್ದ ಹಳೆಯ ಪುಸ್ತಕವನ್ನು ಹುಡುಕಿ ನನಗೆ ಕೊಟ್ಟುಬಿಟ್ಟರು. ಬಸವಾನಿ ಶಾಲೆಯಲ್ಲಿ ಇನ್ನೊಂದು ವಿಶೇಷವಿತ್ತು. ಅಲ್ಲಿ ಮದ್ಯಾಹ್ನ ಕ್ಯಾಂಟೀನ್ ವ್ಯವಸ್ಥೆ ಇತ್ತು. ಅದಕ್ಕೆ ಬೇಕಾದ ಗೋಧಿ ಮತ್ತು ಹಾಲಿನ ಪೌಡರ್ ಅಮೇರಿಕಾದಿಂದ ಬರುತ್ತಿತ್ತು (under PL 480 Funds Scheme). ಶಾಲೆಯ ಹತ್ತಿರವಿದ್ದ ಹೋಟೆಲ್ ನಡೆಸುತ್ತಿದ್ದ ಅಡಿಗರೆಂಬುವರು ಅದರಿಂದ ಉಪ್ಪಿಟ್ಟು ಮತ್ತು ಹಾಲು ತಯಾರಿಸಿ ಶಾಲೆಯ ಮಕ್ಕಳಿಗೆ ಮದ್ಯಾಹ್ನ ಬಡಿಸುತ್ತಿದ್ದರು.

ಆ ಕಾಲದಲ್ಲಿ ಮಲೆನಾಡಿನ ಹೆಚ್ಚಿನ ಹಳ್ಳಿಗಳಿಗೆ ವಿದ್ಯುಚ್ಛಕ್ತಿಯ ಅನುಕೂಲ ಬಂದಿರಲಿಲ್ಲ. ಹಾಗೆಯೇ ಸಾರಿಗೆ ಸಂಪರ್ಕ ಮತ್ತು ನೀರಿನ ಸರಬರಾಯಿ ವ್ಯವಸ್ಥೆ ಇರಲಿಲ್ಲ. ಅಕ್ಕನ ಊರಿಗೂ ಈ  ಅನುಕೂಲಗಳಿರಲಿಲ್ಲ. ಆದರೆ ಬಸವಾನಿ ಒಂದು ಮಾದರಿ ಗ್ರಾಮವಾಗಿತ್ತು. ಊರಿಗೆ ವಿದ್ಯುಚ್ಛಕ್ತಿಯ ಅನುಕೂಲವಿತ್ತು. ತೀರ್ಥಹಳ್ಳಿಯಿಂದ ಬಸ್ಸುಗಳು ಬರುತ್ತಿದ್ದವು. ಊರಿನ ರಸ್ತೆಗೆ ಟಾರ್ ಹಾಕಲಾಗಿತ್ತು. ನಮ್ಮ ಶಾಲೆಯ ಮುಂದಿದ್ದ ಕೆರೆಯಿಂದ ನೀರು ಶಾಲೆಯ ಹಿಂದಿದ್ದ ಗುಡ್ಡಕ್ಕೆ ಪಂಪ್ ಆಗಿ ಅಲ್ಲಿಂದ ಇಡೀ ಊರಿಗೆ ಹಂಚಲ್ಪಡುತ್ತಿತ್ತು.

ನನ್ನ ಓದಿಗೆ ಎಲ್ಲ ವ್ಯವಸ್ಥೆಮಾಡಿದ  ನಂತರ ಅಣ್ಣ ನನ್ನ ಜೇಬಿನಲ್ಲಿ ಸ್ವಲ್ಪ ಚಿಲ್ಲರೆ ದುಡ್ಡಿಟ್ಟು ಊರಿಗೆ ಹೊರಟುಬಿಟ್ಟ. ಆ ವೇಳೆ ನನಗೆ ನಾನು ಮೊಟ್ಟ ಮೊದಲ ಬಾರಿಗೆ ನಮ್ಮ ಸಂಸಾರದ ಎಲ್ಲರನ್ನೂ ತೊರೆದು ಬೇರೆ ಊರು ಸೇರಿದೆನೆಂಬ ಯೋಚನೆ ಬಂದಿತು. ಆಗಿನ ಕಾಲದಲ್ಲಿ ಅಪ್ಪ ಅಮ್ಮನನ್ನು ಬಿಟ್ಟು ಬೇರೆ ಊರಿನಲ್ಲಿ ಇರಬೇಕೆಂಬ ಕಲ್ಪನೆಯೇ  ನಮಗೆ ದುಃಖ ತರುತ್ತಿತ್ತು. ಹಾಗಾಗಿ ಅಣ್ಣನಿಗೆ ವಿದಾಯ ಹೇಳುವಾಗ ನನ್ನ ಕಣ್ಣಲ್ಲಿ ನೀರು ಹರಿಯತೊಡಗಿತು. ಆದರೆ ನನ್ನ ಪ್ರೀತಿಯ ಗೌರಕ್ಕ ನನ್ನೊಡನೆ ಇರುವಳೆಂಬ ವಿಷಯ  ನನಗೆ ಸ್ವಲ್ಪ ನೆಮ್ಮದಿ ನೀಡಿತು. ಒಟ್ಟಿನಲ್ಲಿ ನನ್ನ ಜೀವನದಲ್ಲಿ ಒಂದು ಹೊಸ ಅಧ್ಯಾಯ ಪ್ರಾರಂಭಗೊಂಡಿತ್ತು.
-----ಮುಂದುವರೆಯುವುದು-----

Saturday, July 15, 2017

The Success Story of a Financial Controller


Background
The unit was into the business of dealership of Maruti vehicles.  It started operation in the year 2002. The promoter had already gathered experience in the line in another firm where he was a partner. But his experience was more in the field of marketing and exposure to accounts was limited. Hence he was unable to understand the nuances of finance and accounting.

As a marketing man, the promoter had no problem in achieving a decent turnover in the first year itself. He was quite successful in managing the front office by reaching the targeted sales. However, the management of back office functions took a back seat. The attitude was somewhat like ‘if you achieved your sales target you have achieved everything’; other functions like back office were supposed to fall in line automatically. 
Problem
The balance sheet and P & L account for AY 2003 showed a loss of Rs.40 lacs. The Management accepted the loss typically treating itself as a manufacturing concern wherein the initial years’ performance results invariably in losses. This assumption made the Management to overlook the accounting failures. The Management conveniently forgot that, after all, their activity was nothing but a pure trading activity wherein the profits start from day one, provided the sales start happening. Thus the opportunity to review the accounts on a realistic basis was lost. 
Audit
The financial papers of the firm for AY 2003 were audited by M/S X and company. They found the accounts in a total mess. One of the main issues raised was that Bank accounts were not reconciled. Management treated this as a typical audit observation to be replied as “necessary action is being taken”. Audit Team also found that there was supposed to be an internal audit system in place. However, there was no trace of any such audit reports or rather the very existence of such a system was doubtful unless proved otherwise. Again, the Management found this as a matter of making some payment to the auditors and asked them to prepare the necessary reports and send the bill to them!

The best thing that the audit Team did was to suggest that a Financial Controller be engaged. When asked to suggest a name, they recommended the name of Mr. AVL Rao. He was to retire shortly from a Major Engineering Company as Finance Manager. The Team was quite confident that he could turn around the Company from the financial mess they had landed in! 
Enter the financial Controller
Mr.Rao reported for duty in the month of March, ie, one month prior to the ending of the financial year 2004. It took very little time for him to conclude that the accounts were really in a state of mess! Like an experienced Doctor treating a patient for the first time, he made a thorough investigation and immediately concluded that loss for the current year AY 2004 could not be less than a crore! The Management could not simply believe! The accounts Team had already presented them quarterly P & L accounts for first three quarters showing profits in each quarter! Of course, these were Excel sheet workings arrived more on the basis of sales figures than on the actual accounts database.
Analysis
Rao constituted a team with the help of which he scrutinized the entire accounts for the current financial year. He arrived at the following position:
1       Strangely for a trading firm, there was no profit margin available on the individual sale of each vehicle! The Principal had designed an ingenious system, which was fully loaded towards the Manufacturer!  The dealer had to open a Letter of Credit under which the Principal would raise a bill against the dispatch of each consignment. The bill would be paid on presentation by the Bank against debit of Dealer’s current account. The dealer was to sell each vehicle at Manufacturer’s listed price only, i.e., without any margin. He was eligible for incentives strictly based on the sales performance for each month. In effect, the cash flow was fully in favour of the Principal.
2       In respect of vehicles sold under discount schemes, the dealer had to claim the discount amount from the Principal. As per the Scheme, very ingeniously designed by the Principal, the dealer was not only to offer 50% of the discount by cutting into his own margin, he was also required to first allow the discount and claim the same in the monthly target achievement statement. The accounts Team had either failed to prepare the claims properly or had submitted the same with delay.  Further there was no effective monitoring of the same for early realization from the Principal. Another dent in the profitability!
3       The Company had outsourced the sale of accessories at the post sales level to an outsider. Hence only a portion of the margin on such sales was realizable against the full margin, which would have accrued to them otherwise.
4       The issue of Insurance policies by the Company under arrangement with Insurance companies was a major source of income but required necessary thrust.
5       The arrangement of Bank finance was another area of major income, which also required proper attention to fully realize the benefits.
6       Finally the four-wheeler market was both buyer’s and sellers’ market but not even remotely the ‘dealer’s market’! The dealer was to earn his profit more through after sales services rendered by way of sale of accessories, arrangement of Bank finance and issue of insurance policies. Of course, all these activities were directly linked to sales.
7       The Bank accounts had not been reconciled for the last two years. The said reconciliation when completed revealed that a good number of customers’ cheques had bounced and debits had been raised in Bank accounts. The accounts Team had failed to collect these cheques and initiate further action for recoveries. This failure was to throw a big dent in the current year’s profits. Similarly certain credit entries were found missing in the Bank statements for which the accounts had no explanation to offer. 
Challenges
1       To convince the Management the necessity of giving due importance to the back office working. The fact that back office and front office were different sides of the same coin needed to be established.
2       To explain the position of the actual financial status of the company as at the end of AY 2004.which was to result in a net loss of not less than a crore of rupees.
3       To convince the Tax officials that the loss was a real one and not a ‘figure made out’ to hide profits and avoid payment of taxes.
4       To start direct sales of Accessories and give major thrust to market the issue of insurance policies and disbursement of Bank loans through proper co-ordination with Insurance Companies and Banks.
5       To initiate the recovery of the outstandings which were a result of bounced cheques from customers and which had been overlooked in view of the Bank accounts not being reconciled
6       To ensure prompt and correct submission of monthly target achievement and discount claim statements to the Principal and obtain early payments resulting in comfortable cash flow to the Company.
Conclusion
I had a meeting with Rao recently. He gave the performance of the Company after his joining as follows:

Year
Profit/Loss in Rs (lakhs)
2004
100.00 -loss
2005
40.00-proft
2006
200.00
2007 Estimated
250.00

Needless to say that Rao was successful in contributing to the turnaround of the Company. (One of the positive aspects of the situation was the availability huge space within the large building owned by the company). Of course it was a teamwork involving both front and back offices with full support from the Management. The successful team was given the incentive of a Bangkok trip by the Management in 2006!

(Originally written in 2007)

Saturday, July 8, 2017

ನನ್ನ ಬಾಲ್ಯ


ಅಧ್ಯಾಯ ೨೮
ನನ್ನ ಪರೀಕ್ಷೆ ಮುಗಿದ ನಂತರವೂ ನಾನು ಕೆಲವು  ಕಾಲ ನಾರ್ವೆಯಲ್ಲೇ ನಿಲ್ಲಬೇಕಾಗಿ ಬಂತು. ಏಕೆಂದರೆ ನಾರ್ವೆ ಶಾಲೆಯಲ್ಲಿ ಪ್ರತಿ ವರ್ಷವೂ ವಾರ್ಷಿಕೋತ್ಸವ ಹಿರಣ್ಣಯ್ಯನವರ ನೇತೃತ್ವದಲ್ಲಿ ತುಂಬಾ ವಿಜ್ರಂಭಣೆಯಿಂದ ನಡೆಯುತ್ತಿತ್ತು. ನನಗೆ ಬೇಗನೆ ಊರಿಗೆ ಹಿಂದಿರುಗಿ ಅಣ್ಣನೊಡನೆ ನಾನು ತರಗತಿಗೆ ಪ್ರಥಮನಾಗಿ ಬಂದೆನೆಂದು ಹೇಳಿಕೊಳ್ಳ ಬೇಕೆಂದಿತ್ತು. ಆದರೆ ಎಲ್ಲ ತರಗತಿಗಳಿಗೂ ಪರೀಕ್ಷೆ ಮುಗಿದ ನಂತರವೇ ಈ ಕಾರ್ಯಕ್ರಮ ನಡೆಯುತ್ತಿತ್ತು. ಹಾಗಾಗಿ ನನ್ನ ಮೇಷ್ಟರ ಮನೆವಾಸ ಮುಂದುವರೆಯಿತು. ಈ ನಡುವೆ ನಾನು ತುಂಗಾ ನದಿಯಲ್ಲಿ ಈಜುವುದನ್ನು ಮತ್ತು ಸಂಪಿಗೆ ಮರದಲ್ಲಿ ಮರಕೋತಿಯಾಟ ಆಡುವುದನ್ನೂ ಕಲಿತೆ.

ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಬಗೆಯ  ಆಟ ಸ್ಪರ್ಧೆಗಳು ನಡೆದುವು. ವಾರ್ಷಿಕೋತ್ಸವದಂದು ಮನಮೋಹಕ ನೃತ್ಯಗಳು, ಹಾಡುಗಳು, ಮುಂತಾದ ವಿವಿಧ ವಿನೋದಾವಳಿಗಳ ನಂತರ ಶಾಲೆಯ ವಿದ್ಯಾರ್ಥಿಗಳೊಡನೆ ಮೇಷ್ಟರೂ ಸೇರಿ ಪಾತ್ರವಹಿಸಿದ ನಾಟಕ ಒಂದನ್ನು ಆಡಲಾಯಿತು. ದಾಶರಥಿ ದೀಕ್ಷಿತ್ ಅವರು ಬರೆದ ಈ ನಾಟಕದ ಹೆಸರು "ಅಳಿಯ ದೇವರು" ಎಂದಿತ್ತು. ನಾನು ಮೊದಲ ಬಾರಿಗೆ ಆ ಬಗೆಯ ನಾಟಕವನ್ನು ನೋಡಿದೆ. ಹಿರಣ್ಣಯ್ಯನವರೇ ಅಭಿನಯಿಸಿ ನಿರ್ದೇಶಿಸಿದ ಈ ನಗೆನಾಟಕ ಎಲ್ಲರಿಂದಲೂ ಮೆಚ್ಚುಗೆ ಗಳಿಸಿತು.

ವಾರ್ಷಿಕೋತ್ಸವದ ನಂತರ ನಾನು ದೊಡ್ಡ ದಿಗ್ವಿಜಯ ಸಾಧಿಸಿದವನಂತೆ  ಊರಿಗೆ ಹಿಂದಿರುಗಿದೆ. ನಾರ್ವೆಯಲ್ಲಿ ನಾನು ಕಳೆದ ಎರಡು ವಾರಗಳು ನನ್ನ ಜೀವನದ ಅತ್ಯಂತ ಅಮೂಲ್ಯ ದಿನಗಳಾಗಿದ್ದವು. ನಾರ್ವೆ ಊರಿನ ಜನಗಳು, ಶಾಲೆಯ ಮೇಷ್ಟರು ಮತ್ತು ವಿದ್ಯಾರ್ಥಿಗಳಿಂದ ನನಗೆ ವಿಶೇಷ ಪ್ರೀತಿ ಮತ್ತು ಅಭಿಮಾನಗಳು  ದೊರೆತವು. ಅದಕ್ಕೆಲ್ಲಾ ವಿಶ್ವೇಶ್ವರಯ್ಯನವರೇ ಕಾರಣ.  ಅಷ್ಟಲ್ಲದೇ ಮೇಷ್ಟರ ಮನೆಯವರೆಲ್ಲಾ ನಾನು ಅವರ ಮನೆಯಲ್ಲೇ ಇದ್ದು ನನ್ನ ವಿದ್ಯಾಭ್ಯಾಸವನ್ನು ಮುಂದುವರೆಸಬೇಕೆಂದು ಒತ್ತಾಯ ಮಾಡಿದರು. ಹಿರಣ್ಣಯ್ಯನವರಿಗೂ ನಾನು ಅವರ ಶಾಲೆಯಲ್ಲೇ ಮುಂದೆ ಓದಬೇಕೆಂಬ ಅಭಿಪ್ರಾಯವಿತ್ತು.

ಆದರೆ ವಿಶ್ವೇಶ್ವರಯ್ಯನವರದ್ದು ತುಂಬಾ ದೊಡ್ಡ ಸಂಸಾರವಾಗಿದ್ದರಿಂದ ನಾನು ಅವರಿಗೆ ಹೊರೆಯಾಗುವುದು ನಮ್ಮ ಮನೆಯವರಿಗೆ ಇಷ್ಟವಿರಲಿಲ್ಲ. ಅಲ್ಲದೆ ನನ್ನ ಮುಂದಿನ ವಿದ್ಯಾಭ್ಯಾಸಕ್ಕೆ  ನಾನು ಹೊಕ್ಕಳಿಕೆಯಲ್ಲಿ ಗೌರಕ್ಕನ ಮನೆಯಲ್ಲಿದ್ದು ಗಡಿಕಲ್ ಮಾಧ್ಯಮಿಕ ಶಾಲೆಗೆ ಹೋಗುವುದೆಂದು ಆಗಲೇ ತೀರ್ಮಾನವಾಗಿ ಬಿಟ್ಟಿತ್ತು. ನನಗೆ ಅಕ್ಕನ ಮನೆಯ ಮೇಲೆ ತುಂಬಾ ಆಕರ್ಷಣೆ ಇತ್ತು. ಅದಕ್ಕೆ ವಿಶೇಷ ಕಾರಣಗಳಿದ್ದುವು. ಗೌರಕ್ಕ ರುಕ್ಮಿಣಿಕ್ಕನಂತೆ ಶಿಸ್ತಿನ ಸಿಪಾಯಿ ಆಗಿರಲಿಲ್ಲ. ಅವಳದು ತುಂಬಾ ಮೃದು ಸ್ವಭಾವ. ಅಲ್ಲದೆ ಮನೆಯಲ್ಲಿ ಹಾಲು ಮತ್ತು ಮೊಸರಿನ ಸಮೃದ್ಧಿ ಇತ್ತು. ನಮ್ಮ ಮನೆಯಲ್ಲಿದ್ದಂತೆ ಯಾವುದೇ ಕಷ್ಟದ ಕೆಲಸಗಳನ್ನು ಮಾಡುವ ಪ್ರಶ್ನೆ ಇರಲಿಲ್ಲ. ನಾನು ಹಿಂದಿನ ಬಾರಿ ಹೊಕ್ಕಳಿಕೆಗೆ ಹೋದಾಗ ಅಕ್ಕ ದೊಡ್ಡ ಸಂಸಾರದೊಡನೆ ಹಳೆಯ ಮನೆಯಲ್ಲಿದ್ದಳು. ಆದರೆ ಆಮೇಲೆ ಐದು  ಮಂದಿ ಗಂಡು ಮಕ್ಕಳಲ್ಲಿ ಪಾಲಾದ ನಂತರ ಈಗ ಪಕ್ಕದಲ್ಲೇ  ಕಟ್ಟಿದ  ಹೊಸಮನೆಯಲ್ಲಿದ್ದಳು. ಹಾಗಾಗಿ ನನಗೆ ಅವಳಿಂದ ಹೆಚ್ಚಾದ ಪ್ರೀತಿ ಮತ್ತು ಸ್ವಾತಂತ್ರ ಸಿಗಲಿತ್ತು .
0-------------------0--------------0----------------0----------------------0-----------------0-
ಆ ಬೇಸಿಗೆ ರಜದಲ್ಲಿ ನನಗೆ ಅಮ್ಮನೊಡನೆ ಒಮ್ಮೆ ಹೊಕ್ಕಳಿಕೆಗೆ ಹೋಗಿ ಬರುವ ಅವಕಾಶ ಸಿಕ್ಕಿತು. ಅಕ್ಕನಿಗೆ ಮದುವೆಯಾಗಿ ಹಲವು ವರ್ಷಗಳಾದರೂ ಮಕ್ಕಳಾಗಿರಲಿಲ್ಲ.  ಭಾವನವರು ಊರಿನ ದೇವಸ್ಥಾನದ ಪಕ್ಕದಲ್ಲಿದ್ದ ಅಶ್ವತ್ಥ ವೃಕ್ಷಕ್ಕೆ ಉಪನಯನ ಮಾಡುವುದಾಗಿ ಹೇಳಿಕೊಂಡಿದ್ದರಂತೆ. ಆ ಸಮಾರಂಭ ತುಂಬಾ ಸಂಭ್ರಮದಿಂದ ನಡೆಯಿತು. ನಾನು ಮೊದಲ  ಬಾರಿಗೆ ಅಕ್ಕನ ಹೊಸಮನೆಗೆ ಪ್ರವೇಶ ಮಾಡಿದೆ. ಮನೆ ಆ ಕಾಲಕ್ಕೆ ತುಂಬಾ ಚೆನ್ನಾಗಿ ಮತ್ತು ಅನುಕೂಲಕ್ಕೆ ತಕ್ಕಂತೆ ಕಟ್ಟಲ್ಪಟ್ಟಿತ್ತು. ಮನೆಯ  ಪಕ್ಕದಲ್ಲಿ ಒಂದು ದೊಡ್ಡ ಕಟ್ಟಡವನ್ನು ಜಾನುವಾರು, ಗಾಡಿಎತ್ತುಗಳು, ಅಕ್ಕಿ ಮತ್ತು ಬತ್ತಗಳನ್ನು ಕೂಡಿಡಲು ಅನುಕೂಲವಾಗುವಂತೆ ಕಟ್ಟಲಾಗಿತ್ತು. ಸಮಾರಂಭದ ದಿನ ರಾತ್ರಿ ಈ ಕಟ್ಟಡದ ಒಂದು ರೂಮಿನಲ್ಲಿ ಹೆಣ್ಣು ಮಕ್ಕಳೆಲ್ಲಾ ಬಾಗಿಲು ಹಾಕಿಕೊಂಡು ಹಾಡು ಹೇಳುತ್ತಿರುವುದು ಕೇಳಿಸಿತು. ನಾವು ಕಿಟಕಿಯಿಂದ ಇಣುಕಿ ನೋಡಿದಾಗ ಹುಡುಗಿಯೊಬ್ಬಳು ನರ್ತನ ಮಾಡುತ್ತಿರುವುದು ಕಾಣಿಸಿತು. ಆ ಹುಡುಗಿಯ ಹೆಸರು ರಾಧಾ ಎಂದೂ ಮತ್ತು ಅವಳು ಹುಲ್ಕುಳಿ ಸುಬ್ಬರಾಯರೆಂಬ ಶ್ರೀಮಂತರ ಮಗಳೆಂದೂ ತಿಳಿಯಿತು. ಅವಳು ತೀರ್ಥಹಳ್ಳಿಯಲ್ಲಿ ಓದುತ್ತಿದ್ದಳಂತೆ. ಆ ಕಾಲಕ್ಕೆ ಹುಡುಗಿಯೊಬ್ಬಳು ಪ್ರೌಢಶಾಲೆಯಲ್ಲಿ ಓದುವುದು ಮತ್ತು ನರ್ತನ ಮಾಡುವುದು ಎರಡೂ ತುಂಬಾ ವಿಶೇಷ  ವಿಷಯಗಳಾಗಿದ್ದವು.

ಭಾವನವರ ಸಂಬಂಧಿಗಳೆಲ್ಲಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ನನಗೆ ಭಾವನ ತಂಗಿ ನರ್ಜಿ ಸೀತಮ್ಮನವರ ಮಗ ವಿಷ್ಣುಮೂರ್ತಿಯ ಪರಿಚಯ ಮಾಡಿಕೊಡಲಾಯಿತು. ಅವನೂ ಕೂಡ ನನ್ನಂತೆಯೇ ಗಡಿಕಲ್ ಮಿಡ್ಲ್ ಸ್ಕೂಲ್ನಲ್ಲಿ ಓದಲು ಹೊಕ್ಕಳಿಕೆಗೆ ಬರುವನಿದ್ದ. ನಾನು ಆರನೇ ತರಗತಿಯಾದರೆ ವಿಷ್ಣು ಏಳನೇ ತರಗತಿ. ಅವನು ಹಳೆಮನೆಯಲ್ಲಿ ಇಬ್ಬರು ಸೋದರ ಮಾವಂದಿರ (ಕೃಷ್ಣಮೂರ್ತಿ ಮತ್ತು ನಾಗೇಶಯ್ಯ) ಮನೆಯಲ್ಲಿರುವುದೆಂದು ತೀರ್ಮಾನವಾಗಿತ್ತು. ತುಂಬಾ ಸ್ಫುರದ್ರೂಪಿಯಾದ ವಿಷ್ಣುವಿನ ವಿಶೇಷವೆಂದರೆ ಅವನ ಜುಟ್ಟು. ಊರಿನ  ಶಾಲೆಗೆ ಹೋಗುವ ಎಲ್ಲ ಮಕ್ಕಳೂ ಕ್ರಾಪ್ ಕಟ್ ಮಾಡಿಸಿಕೊಂಡಿರುತ್ತಿದ್ದ ಆ ದಿನಗಳಲ್ಲೂ, ವಿಷ್ಣುವಿನ ಆ ವಯಸ್ಸಿನ ಜುಟ್ಟು ಒಂದು ವಿಚಿತ್ರವೇ ಆಗಿತ್ತು!

ಹೊಕ್ಕಳಿಕೆ ಊರು ನಾನು ಹಿಂದೆ ನೋಡಿದ ಊರಿಗಿಂತ ತುಂಬಾ ಬದಲಾಗಿತ್ತು. ಭಾವನ ಮೊದಲನೇ ತಮ್ಮ ಚಂದ್ರಹಾಸಯ್ಯ ಬಿಳುವಿನಕೊಪ್ಪ ಎಂಬಲ್ಲಿ ಹೊಸಮನೆ ಕಟ್ಟಿಸಿಕೊಂಡು ಹೋಗಿದ್ದರೆ, ಎರಡನೇ ತಮ್ಮ ಗಣೇಶಯ್ಯ ರಸ್ತೆಯ ಕೆಳಭಾಗದಲ್ಲಿ ಹೊಸಮನೆ ಕಟ್ಟಿಸಿಕೊಂಡು ವಾಸಿಸುತ್ತಿದ್ದರು.  ಕಿರಿಯ ತಮ್ಮಂದಿರಾದ ಕೃಷ್ಣಮೂರ್ತಿ ಮತ್ತು ನಾಗೇಶಯ್ಯನವರು ಜಮೀನು ಪಾಲಾಗಿದ್ದರೂ ಹಳೆಯ ಮನೆಯಲ್ಲೇ ಒಟ್ಟಿಗೆ ವಾಸಿಸುತ್ತಿದ್ದರು. ಇನ್ನು ಹೊಸಮನೆ ತಿಮ್ಮಪ್ಪಯ್ಯನವರ ತಮ್ಮ ಕೃಷ್ಣಯ್ಯನವರು ಒಂದು ಹೊಸಮನೆ ಕಟ್ಟಿಸಿದ್ದರೆ, ಸದಾಶಿವಯ್ಯನವರು ಕಾರ್ಬೈಲ್ ಎಂಬಲ್ಲಿ ಹೊಸಮನೆ ಕಟ್ಟಿಸಿಕೊಂಡು ವಾಸಿಸುತ್ತಿದ್ದರು. ಅವರ ತಮ್ಮ ಶ್ರೀನಿವಾಸಯ್ಯ, ಗಣೇಶಯ್ಯನವರ ಮನೆಯ ಪಕ್ಕದಲ್ಲೇ ಮನೆ ಕಟ್ಟಿಸಿಕೊಂಡಿದ್ದರು. ಅವರ ಹೆಂಡತಿ ಜಲಜಮ್ಮ ವಿಷ್ಣುವಿನ ಅಕ್ಕ.

ಕೃಷ್ಣಯ್ಯ ಮತ್ತು ಅವರ ತಮ್ಮ ಮಂಜಪ್ಪಯ್ಯ ನಾನು ಹಿಂದೆ ಬಂದಾಗ ಕಾನೂರು ಎಂಬಲ್ಲಿ ವಾಸ ಮಾಡುತ್ತಿದ್ದರಂತೆ. ಕೃಷ್ಣಯ್ಯನವರ ಪತ್ನಿ ಕಮಲಾಕ್ಷಮ್ಮ ನಮ್ಮ ಸಂಬಂಧಿಗಳಾದ ಹೆಬ್ಬಿಗೆ ಶಿಂಗಪ್ಪಯ್ಯನವರ ಮಗಳು. ನಾನು ಅಮ್ಮ ಅವರ ಹೊಸಮನೆಗೆ ಭೇಟಿ ನೀಡಿದೆವು. ಅವರ ಹಿರಿಯ ಮಗಳು ಲಲಿತ ಮತ್ತು ಹಿರಿಯ ಮಗ ರಾಮಚಂದ್ರ ಹೊಕ್ಕಳಿಕೆ ಶಾಲೆಯಲ್ಲಿ ಓದುತ್ತಿದ್ದರು. ಮಂಜಪ್ಪಯ್ಯನವರ ಹೊಸಮನೆಯ ನಿರ್ಮಾಣ ನಡೆಯುತ್ತಿದ್ದರಿಂದ ಅವರ ಸಂಸಾರ ಕೃಷ್ಣಯ್ಯನವರ ಮನೆಯಲ್ಲೇ ನೆಲಸಿತ್ತು.

ಮೇ ತಿಂಗಳ ಕೊನೆಯಲ್ಲಿ ನಾನು ಟಿಸಿ (Transfer Certificate) ತೆಗೆದುಕೊಳ್ಳಲು ನಾರ್ವೆಗೆ ಹೋಗಬೇಕಾಯಿತು. ಹೆಡ್ ಮಾಸ್ಟರ್ ಹಿರಣ್ಣಯ್ಯನವರಿಗೆ ನಾನು ಅವರ ಶಾಲೆಯನ್ನು ಬಿಟ್ಟು ಹೋಗುವುದು ಸುತರಾಂ ಇಷ್ಟವಿರಲಿಲ್ಲ.  ಅವರು ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದರು. ಹಾಗೆಯೇ ಮೇಷ್ಟರ ಮನೆಯಿಂದ ಬೀಳ್ಕೊಡುವುದೂ ನನಗೆ ತುಂಬಾ ಕಷ್ಟಕರವಾಗಿ ಪರಿಣಮಿಸಿತು. ಅತ್ಯಂತ ಸ್ವಲ್ಪ ಕಾಲದ ನನ್ನ ಮತ್ತು ಆ ಮನೆಯವರ ಸಂಬಂಧ ಅಷ್ಟೊಂದು ಮಟ್ಟಕ್ಕೆ ಹೋಗಿತ್ತು. ಆಮೇಲೆ ಒಂದು ದಿನ ವಿಶ್ವೇಶ್ವರಯ್ಯನವರನ್ನು ನಮ್ಮ ಮನೆಗೆ ಆಮಂತ್ರಿಸಲಾಯಿತು. ಒಂದು ಹರಿವಾಣದಲ್ಲಿ ಲಕೋಟೆಯೊಂದರಲ್ಲಿ ಎಷ್ಟೋ ಹಣವನ್ನಿಟ್ಟು ನನ್ನ ಕೈಯಿಂದ ಮೇಷ್ಟರಿಗೆ ಕೊಡಿಸಿ ಉದ್ದಂಡ ನಮಸ್ಕಾರ ಮಾಡಿಸಲಾಯಿತು. ಈ ಗುರುದಕ್ಷಿಣೆಯೊಂದಿಗೆ ನನ್ನ ಮತ್ತು ನನ್ನ ಅತ್ಯಂತ ಪ್ರೀತಿಯ ಗುರುಗಳೊಬ್ಬರ ಸಂಬಂಧ ಮುಕ್ತಾಯಗೊಂಡಿತು.
----ಮುಂದುವರಿಯುವುದು ---