Saturday, July 8, 2017

ನನ್ನ ಬಾಲ್ಯ


ಅಧ್ಯಾಯ ೨೮
ನನ್ನ ಪರೀಕ್ಷೆ ಮುಗಿದ ನಂತರವೂ ನಾನು ಕೆಲವು  ಕಾಲ ನಾರ್ವೆಯಲ್ಲೇ ನಿಲ್ಲಬೇಕಾಗಿ ಬಂತು. ಏಕೆಂದರೆ ನಾರ್ವೆ ಶಾಲೆಯಲ್ಲಿ ಪ್ರತಿ ವರ್ಷವೂ ವಾರ್ಷಿಕೋತ್ಸವ ಹಿರಣ್ಣಯ್ಯನವರ ನೇತೃತ್ವದಲ್ಲಿ ತುಂಬಾ ವಿಜ್ರಂಭಣೆಯಿಂದ ನಡೆಯುತ್ತಿತ್ತು. ನನಗೆ ಬೇಗನೆ ಊರಿಗೆ ಹಿಂದಿರುಗಿ ಅಣ್ಣನೊಡನೆ ನಾನು ತರಗತಿಗೆ ಪ್ರಥಮನಾಗಿ ಬಂದೆನೆಂದು ಹೇಳಿಕೊಳ್ಳ ಬೇಕೆಂದಿತ್ತು. ಆದರೆ ಎಲ್ಲ ತರಗತಿಗಳಿಗೂ ಪರೀಕ್ಷೆ ಮುಗಿದ ನಂತರವೇ ಈ ಕಾರ್ಯಕ್ರಮ ನಡೆಯುತ್ತಿತ್ತು. ಹಾಗಾಗಿ ನನ್ನ ಮೇಷ್ಟರ ಮನೆವಾಸ ಮುಂದುವರೆಯಿತು. ಈ ನಡುವೆ ನಾನು ತುಂಗಾ ನದಿಯಲ್ಲಿ ಈಜುವುದನ್ನು ಮತ್ತು ಸಂಪಿಗೆ ಮರದಲ್ಲಿ ಮರಕೋತಿಯಾಟ ಆಡುವುದನ್ನೂ ಕಲಿತೆ.

ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಬಗೆಯ  ಆಟ ಸ್ಪರ್ಧೆಗಳು ನಡೆದುವು. ವಾರ್ಷಿಕೋತ್ಸವದಂದು ಮನಮೋಹಕ ನೃತ್ಯಗಳು, ಹಾಡುಗಳು, ಮುಂತಾದ ವಿವಿಧ ವಿನೋದಾವಳಿಗಳ ನಂತರ ಶಾಲೆಯ ವಿದ್ಯಾರ್ಥಿಗಳೊಡನೆ ಮೇಷ್ಟರೂ ಸೇರಿ ಪಾತ್ರವಹಿಸಿದ ನಾಟಕ ಒಂದನ್ನು ಆಡಲಾಯಿತು. ದಾಶರಥಿ ದೀಕ್ಷಿತ್ ಅವರು ಬರೆದ ಈ ನಾಟಕದ ಹೆಸರು "ಅಳಿಯ ದೇವರು" ಎಂದಿತ್ತು. ನಾನು ಮೊದಲ ಬಾರಿಗೆ ಆ ಬಗೆಯ ನಾಟಕವನ್ನು ನೋಡಿದೆ. ಹಿರಣ್ಣಯ್ಯನವರೇ ಅಭಿನಯಿಸಿ ನಿರ್ದೇಶಿಸಿದ ಈ ನಗೆನಾಟಕ ಎಲ್ಲರಿಂದಲೂ ಮೆಚ್ಚುಗೆ ಗಳಿಸಿತು.

ವಾರ್ಷಿಕೋತ್ಸವದ ನಂತರ ನಾನು ದೊಡ್ಡ ದಿಗ್ವಿಜಯ ಸಾಧಿಸಿದವನಂತೆ  ಊರಿಗೆ ಹಿಂದಿರುಗಿದೆ. ನಾರ್ವೆಯಲ್ಲಿ ನಾನು ಕಳೆದ ಎರಡು ವಾರಗಳು ನನ್ನ ಜೀವನದ ಅತ್ಯಂತ ಅಮೂಲ್ಯ ದಿನಗಳಾಗಿದ್ದವು. ನಾರ್ವೆ ಊರಿನ ಜನಗಳು, ಶಾಲೆಯ ಮೇಷ್ಟರು ಮತ್ತು ವಿದ್ಯಾರ್ಥಿಗಳಿಂದ ನನಗೆ ವಿಶೇಷ ಪ್ರೀತಿ ಮತ್ತು ಅಭಿಮಾನಗಳು  ದೊರೆತವು. ಅದಕ್ಕೆಲ್ಲಾ ವಿಶ್ವೇಶ್ವರಯ್ಯನವರೇ ಕಾರಣ.  ಅಷ್ಟಲ್ಲದೇ ಮೇಷ್ಟರ ಮನೆಯವರೆಲ್ಲಾ ನಾನು ಅವರ ಮನೆಯಲ್ಲೇ ಇದ್ದು ನನ್ನ ವಿದ್ಯಾಭ್ಯಾಸವನ್ನು ಮುಂದುವರೆಸಬೇಕೆಂದು ಒತ್ತಾಯ ಮಾಡಿದರು. ಹಿರಣ್ಣಯ್ಯನವರಿಗೂ ನಾನು ಅವರ ಶಾಲೆಯಲ್ಲೇ ಮುಂದೆ ಓದಬೇಕೆಂಬ ಅಭಿಪ್ರಾಯವಿತ್ತು.

ಆದರೆ ವಿಶ್ವೇಶ್ವರಯ್ಯನವರದ್ದು ತುಂಬಾ ದೊಡ್ಡ ಸಂಸಾರವಾಗಿದ್ದರಿಂದ ನಾನು ಅವರಿಗೆ ಹೊರೆಯಾಗುವುದು ನಮ್ಮ ಮನೆಯವರಿಗೆ ಇಷ್ಟವಿರಲಿಲ್ಲ. ಅಲ್ಲದೆ ನನ್ನ ಮುಂದಿನ ವಿದ್ಯಾಭ್ಯಾಸಕ್ಕೆ  ನಾನು ಹೊಕ್ಕಳಿಕೆಯಲ್ಲಿ ಗೌರಕ್ಕನ ಮನೆಯಲ್ಲಿದ್ದು ಗಡಿಕಲ್ ಮಾಧ್ಯಮಿಕ ಶಾಲೆಗೆ ಹೋಗುವುದೆಂದು ಆಗಲೇ ತೀರ್ಮಾನವಾಗಿ ಬಿಟ್ಟಿತ್ತು. ನನಗೆ ಅಕ್ಕನ ಮನೆಯ ಮೇಲೆ ತುಂಬಾ ಆಕರ್ಷಣೆ ಇತ್ತು. ಅದಕ್ಕೆ ವಿಶೇಷ ಕಾರಣಗಳಿದ್ದುವು. ಗೌರಕ್ಕ ರುಕ್ಮಿಣಿಕ್ಕನಂತೆ ಶಿಸ್ತಿನ ಸಿಪಾಯಿ ಆಗಿರಲಿಲ್ಲ. ಅವಳದು ತುಂಬಾ ಮೃದು ಸ್ವಭಾವ. ಅಲ್ಲದೆ ಮನೆಯಲ್ಲಿ ಹಾಲು ಮತ್ತು ಮೊಸರಿನ ಸಮೃದ್ಧಿ ಇತ್ತು. ನಮ್ಮ ಮನೆಯಲ್ಲಿದ್ದಂತೆ ಯಾವುದೇ ಕಷ್ಟದ ಕೆಲಸಗಳನ್ನು ಮಾಡುವ ಪ್ರಶ್ನೆ ಇರಲಿಲ್ಲ. ನಾನು ಹಿಂದಿನ ಬಾರಿ ಹೊಕ್ಕಳಿಕೆಗೆ ಹೋದಾಗ ಅಕ್ಕ ದೊಡ್ಡ ಸಂಸಾರದೊಡನೆ ಹಳೆಯ ಮನೆಯಲ್ಲಿದ್ದಳು. ಆದರೆ ಆಮೇಲೆ ಐದು  ಮಂದಿ ಗಂಡು ಮಕ್ಕಳಲ್ಲಿ ಪಾಲಾದ ನಂತರ ಈಗ ಪಕ್ಕದಲ್ಲೇ  ಕಟ್ಟಿದ  ಹೊಸಮನೆಯಲ್ಲಿದ್ದಳು. ಹಾಗಾಗಿ ನನಗೆ ಅವಳಿಂದ ಹೆಚ್ಚಾದ ಪ್ರೀತಿ ಮತ್ತು ಸ್ವಾತಂತ್ರ ಸಿಗಲಿತ್ತು .
0-------------------0--------------0----------------0----------------------0-----------------0-
ಆ ಬೇಸಿಗೆ ರಜದಲ್ಲಿ ನನಗೆ ಅಮ್ಮನೊಡನೆ ಒಮ್ಮೆ ಹೊಕ್ಕಳಿಕೆಗೆ ಹೋಗಿ ಬರುವ ಅವಕಾಶ ಸಿಕ್ಕಿತು. ಅಕ್ಕನಿಗೆ ಮದುವೆಯಾಗಿ ಹಲವು ವರ್ಷಗಳಾದರೂ ಮಕ್ಕಳಾಗಿರಲಿಲ್ಲ.  ಭಾವನವರು ಊರಿನ ದೇವಸ್ಥಾನದ ಪಕ್ಕದಲ್ಲಿದ್ದ ಅಶ್ವತ್ಥ ವೃಕ್ಷಕ್ಕೆ ಉಪನಯನ ಮಾಡುವುದಾಗಿ ಹೇಳಿಕೊಂಡಿದ್ದರಂತೆ. ಆ ಸಮಾರಂಭ ತುಂಬಾ ಸಂಭ್ರಮದಿಂದ ನಡೆಯಿತು. ನಾನು ಮೊದಲ  ಬಾರಿಗೆ ಅಕ್ಕನ ಹೊಸಮನೆಗೆ ಪ್ರವೇಶ ಮಾಡಿದೆ. ಮನೆ ಆ ಕಾಲಕ್ಕೆ ತುಂಬಾ ಚೆನ್ನಾಗಿ ಮತ್ತು ಅನುಕೂಲಕ್ಕೆ ತಕ್ಕಂತೆ ಕಟ್ಟಲ್ಪಟ್ಟಿತ್ತು. ಮನೆಯ  ಪಕ್ಕದಲ್ಲಿ ಒಂದು ದೊಡ್ಡ ಕಟ್ಟಡವನ್ನು ಜಾನುವಾರು, ಗಾಡಿಎತ್ತುಗಳು, ಅಕ್ಕಿ ಮತ್ತು ಬತ್ತಗಳನ್ನು ಕೂಡಿಡಲು ಅನುಕೂಲವಾಗುವಂತೆ ಕಟ್ಟಲಾಗಿತ್ತು. ಸಮಾರಂಭದ ದಿನ ರಾತ್ರಿ ಈ ಕಟ್ಟಡದ ಒಂದು ರೂಮಿನಲ್ಲಿ ಹೆಣ್ಣು ಮಕ್ಕಳೆಲ್ಲಾ ಬಾಗಿಲು ಹಾಕಿಕೊಂಡು ಹಾಡು ಹೇಳುತ್ತಿರುವುದು ಕೇಳಿಸಿತು. ನಾವು ಕಿಟಕಿಯಿಂದ ಇಣುಕಿ ನೋಡಿದಾಗ ಹುಡುಗಿಯೊಬ್ಬಳು ನರ್ತನ ಮಾಡುತ್ತಿರುವುದು ಕಾಣಿಸಿತು. ಆ ಹುಡುಗಿಯ ಹೆಸರು ರಾಧಾ ಎಂದೂ ಮತ್ತು ಅವಳು ಹುಲ್ಕುಳಿ ಸುಬ್ಬರಾಯರೆಂಬ ಶ್ರೀಮಂತರ ಮಗಳೆಂದೂ ತಿಳಿಯಿತು. ಅವಳು ತೀರ್ಥಹಳ್ಳಿಯಲ್ಲಿ ಓದುತ್ತಿದ್ದಳಂತೆ. ಆ ಕಾಲಕ್ಕೆ ಹುಡುಗಿಯೊಬ್ಬಳು ಪ್ರೌಢಶಾಲೆಯಲ್ಲಿ ಓದುವುದು ಮತ್ತು ನರ್ತನ ಮಾಡುವುದು ಎರಡೂ ತುಂಬಾ ವಿಶೇಷ  ವಿಷಯಗಳಾಗಿದ್ದವು.

ಭಾವನವರ ಸಂಬಂಧಿಗಳೆಲ್ಲಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ನನಗೆ ಭಾವನ ತಂಗಿ ನರ್ಜಿ ಸೀತಮ್ಮನವರ ಮಗ ವಿಷ್ಣುಮೂರ್ತಿಯ ಪರಿಚಯ ಮಾಡಿಕೊಡಲಾಯಿತು. ಅವನೂ ಕೂಡ ನನ್ನಂತೆಯೇ ಗಡಿಕಲ್ ಮಿಡ್ಲ್ ಸ್ಕೂಲ್ನಲ್ಲಿ ಓದಲು ಹೊಕ್ಕಳಿಕೆಗೆ ಬರುವನಿದ್ದ. ನಾನು ಆರನೇ ತರಗತಿಯಾದರೆ ವಿಷ್ಣು ಏಳನೇ ತರಗತಿ. ಅವನು ಹಳೆಮನೆಯಲ್ಲಿ ಇಬ್ಬರು ಸೋದರ ಮಾವಂದಿರ (ಕೃಷ್ಣಮೂರ್ತಿ ಮತ್ತು ನಾಗೇಶಯ್ಯ) ಮನೆಯಲ್ಲಿರುವುದೆಂದು ತೀರ್ಮಾನವಾಗಿತ್ತು. ತುಂಬಾ ಸ್ಫುರದ್ರೂಪಿಯಾದ ವಿಷ್ಣುವಿನ ವಿಶೇಷವೆಂದರೆ ಅವನ ಜುಟ್ಟು. ಊರಿನ  ಶಾಲೆಗೆ ಹೋಗುವ ಎಲ್ಲ ಮಕ್ಕಳೂ ಕ್ರಾಪ್ ಕಟ್ ಮಾಡಿಸಿಕೊಂಡಿರುತ್ತಿದ್ದ ಆ ದಿನಗಳಲ್ಲೂ, ವಿಷ್ಣುವಿನ ಆ ವಯಸ್ಸಿನ ಜುಟ್ಟು ಒಂದು ವಿಚಿತ್ರವೇ ಆಗಿತ್ತು!

ಹೊಕ್ಕಳಿಕೆ ಊರು ನಾನು ಹಿಂದೆ ನೋಡಿದ ಊರಿಗಿಂತ ತುಂಬಾ ಬದಲಾಗಿತ್ತು. ಭಾವನ ಮೊದಲನೇ ತಮ್ಮ ಚಂದ್ರಹಾಸಯ್ಯ ಬಿಳುವಿನಕೊಪ್ಪ ಎಂಬಲ್ಲಿ ಹೊಸಮನೆ ಕಟ್ಟಿಸಿಕೊಂಡು ಹೋಗಿದ್ದರೆ, ಎರಡನೇ ತಮ್ಮ ಗಣೇಶಯ್ಯ ರಸ್ತೆಯ ಕೆಳಭಾಗದಲ್ಲಿ ಹೊಸಮನೆ ಕಟ್ಟಿಸಿಕೊಂಡು ವಾಸಿಸುತ್ತಿದ್ದರು.  ಕಿರಿಯ ತಮ್ಮಂದಿರಾದ ಕೃಷ್ಣಮೂರ್ತಿ ಮತ್ತು ನಾಗೇಶಯ್ಯನವರು ಜಮೀನು ಪಾಲಾಗಿದ್ದರೂ ಹಳೆಯ ಮನೆಯಲ್ಲೇ ಒಟ್ಟಿಗೆ ವಾಸಿಸುತ್ತಿದ್ದರು. ಇನ್ನು ಹೊಸಮನೆ ತಿಮ್ಮಪ್ಪಯ್ಯನವರ ತಮ್ಮ ಕೃಷ್ಣಯ್ಯನವರು ಒಂದು ಹೊಸಮನೆ ಕಟ್ಟಿಸಿದ್ದರೆ, ಸದಾಶಿವಯ್ಯನವರು ಕಾರ್ಬೈಲ್ ಎಂಬಲ್ಲಿ ಹೊಸಮನೆ ಕಟ್ಟಿಸಿಕೊಂಡು ವಾಸಿಸುತ್ತಿದ್ದರು. ಅವರ ತಮ್ಮ ಶ್ರೀನಿವಾಸಯ್ಯ, ಗಣೇಶಯ್ಯನವರ ಮನೆಯ ಪಕ್ಕದಲ್ಲೇ ಮನೆ ಕಟ್ಟಿಸಿಕೊಂಡಿದ್ದರು. ಅವರ ಹೆಂಡತಿ ಜಲಜಮ್ಮ ವಿಷ್ಣುವಿನ ಅಕ್ಕ.

ಕೃಷ್ಣಯ್ಯ ಮತ್ತು ಅವರ ತಮ್ಮ ಮಂಜಪ್ಪಯ್ಯ ನಾನು ಹಿಂದೆ ಬಂದಾಗ ಕಾನೂರು ಎಂಬಲ್ಲಿ ವಾಸ ಮಾಡುತ್ತಿದ್ದರಂತೆ. ಕೃಷ್ಣಯ್ಯನವರ ಪತ್ನಿ ಕಮಲಾಕ್ಷಮ್ಮ ನಮ್ಮ ಸಂಬಂಧಿಗಳಾದ ಹೆಬ್ಬಿಗೆ ಶಿಂಗಪ್ಪಯ್ಯನವರ ಮಗಳು. ನಾನು ಅಮ್ಮ ಅವರ ಹೊಸಮನೆಗೆ ಭೇಟಿ ನೀಡಿದೆವು. ಅವರ ಹಿರಿಯ ಮಗಳು ಲಲಿತ ಮತ್ತು ಹಿರಿಯ ಮಗ ರಾಮಚಂದ್ರ ಹೊಕ್ಕಳಿಕೆ ಶಾಲೆಯಲ್ಲಿ ಓದುತ್ತಿದ್ದರು. ಮಂಜಪ್ಪಯ್ಯನವರ ಹೊಸಮನೆಯ ನಿರ್ಮಾಣ ನಡೆಯುತ್ತಿದ್ದರಿಂದ ಅವರ ಸಂಸಾರ ಕೃಷ್ಣಯ್ಯನವರ ಮನೆಯಲ್ಲೇ ನೆಲಸಿತ್ತು.

ಮೇ ತಿಂಗಳ ಕೊನೆಯಲ್ಲಿ ನಾನು ಟಿಸಿ (Transfer Certificate) ತೆಗೆದುಕೊಳ್ಳಲು ನಾರ್ವೆಗೆ ಹೋಗಬೇಕಾಯಿತು. ಹೆಡ್ ಮಾಸ್ಟರ್ ಹಿರಣ್ಣಯ್ಯನವರಿಗೆ ನಾನು ಅವರ ಶಾಲೆಯನ್ನು ಬಿಟ್ಟು ಹೋಗುವುದು ಸುತರಾಂ ಇಷ್ಟವಿರಲಿಲ್ಲ.  ಅವರು ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದರು. ಹಾಗೆಯೇ ಮೇಷ್ಟರ ಮನೆಯಿಂದ ಬೀಳ್ಕೊಡುವುದೂ ನನಗೆ ತುಂಬಾ ಕಷ್ಟಕರವಾಗಿ ಪರಿಣಮಿಸಿತು. ಅತ್ಯಂತ ಸ್ವಲ್ಪ ಕಾಲದ ನನ್ನ ಮತ್ತು ಆ ಮನೆಯವರ ಸಂಬಂಧ ಅಷ್ಟೊಂದು ಮಟ್ಟಕ್ಕೆ ಹೋಗಿತ್ತು. ಆಮೇಲೆ ಒಂದು ದಿನ ವಿಶ್ವೇಶ್ವರಯ್ಯನವರನ್ನು ನಮ್ಮ ಮನೆಗೆ ಆಮಂತ್ರಿಸಲಾಯಿತು. ಒಂದು ಹರಿವಾಣದಲ್ಲಿ ಲಕೋಟೆಯೊಂದರಲ್ಲಿ ಎಷ್ಟೋ ಹಣವನ್ನಿಟ್ಟು ನನ್ನ ಕೈಯಿಂದ ಮೇಷ್ಟರಿಗೆ ಕೊಡಿಸಿ ಉದ್ದಂಡ ನಮಸ್ಕಾರ ಮಾಡಿಸಲಾಯಿತು. ಈ ಗುರುದಕ್ಷಿಣೆಯೊಂದಿಗೆ ನನ್ನ ಮತ್ತು ನನ್ನ ಅತ್ಯಂತ ಪ್ರೀತಿಯ ಗುರುಗಳೊಬ್ಬರ ಸಂಬಂಧ ಮುಕ್ತಾಯಗೊಂಡಿತು.
----ಮುಂದುವರಿಯುವುದು ---



No comments: