Thursday, June 8, 2017

ನನ್ನ ಬಾಲ್ಯ


ಅಧ್ಯಾಯ ೨೭
ಸೋಮವಾರ ಬೆಳಿಗ್ಗೆ ನಾನು ನಾರ್ವೆ ಮಿಡ್ಲ್ ಸ್ಕೂಲ್ ಒಳಗೆ ಮೊದಲ ಬಾರಿಗೆ ಕಾಲಿಟ್ಟೆ. ಶಾಲೆಯ ಐದನೇ ತರಗತಿಯ ವಿದ್ಯಾರ್ಥಿಗಳ ಸಂಖ್ಯೆ ನಮ್ಮ ಶಾಲೆಯ ಒಟ್ಟಿನ ಸಂಖ್ಯೆಗಿಂತ ಜಾಸ್ತಿ ಇತ್ತು. ಮೊದಲೇ ಹೇಳಿದಂತೆ ಹೆಡ್ ಮಾಸ್ಟರ್ ಹಿರಣ್ಣಯ್ಯನವರೇ ನನಗೆ ಇಂಗ್ಲಿಷ್  ಟೆಕ್ಸ್ಟ್ ಪುಸ್ತಕದ ಮೌಖಿಕ ಪರೀಕ್ಷೆ ಮಾಡುವರಿದ್ದರು . ಒಬ್ಬೊಬ್ಬರಾಗಿ ವಿದ್ಯಾರ್ಥಿಗಳನ್ನು ಒಳಗೆ ಕರೆದು ಪರಿಕ್ಷೆ ಮಾಡಲು ಪ್ರಾರಂಭಿಸಿದರು. ನಾನು ಪ್ರೈವೇಟ್ ಸ್ಟೂಡೆಂಟ್ ಆಗಿದ್ದರಿಂದ ನನ್ನನ್ನು ಎಲ್ಲರಿಗಿಂತ ಕೊನೆಯಲ್ಲಿ ಕರೆಯಲಾಯಿತು. ನಾನು ಅವರು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಸರಾಗವಾಗಿ ಉತ್ತರ ಕೊಟ್ಟುಬಿಟ್ಟೆ. ಆದರೆ ಅವರ ಕೊನೆಯ ಪ್ರಶ್ನೆ ನನ್ನನ್ನು  ಸಂಧಿಗ್ದದಲ್ಲಿ  ಸಿಕ್ಕಿಸಿತು. ಅವರು ತಮ್ಮ ಕೈಯಲ್ಲಿ ಕಟ್ಟಿದ್ದ ವಾಚನ್ನು ತೋರಿಸಿ "ವಾಟ್  ಈಸ್ ದಿಸ್?" ( What is this?) ಎಂದು ಕೇಳಿದರು. ವಾಚ್ ಎನ್ನುವ ಪದ ನನ್ನ ಇಂಗ್ಲಿಷ್ ಪುಸ್ತಕದಲ್ಲೆಲ್ಲೂ ಬಂದಿರಲಿಲ್ಲ. ನಾವು ನಿತ್ಯದ ಬಳಕೆಯಲ್ಲಿ ವಾಚ್ ಎಂಬ ಪದವನ್ನು ಬಳಸುತ್ತಿದ್ದರಿಂದ ಅದು ಕನ್ನಡ ಪದವೇ ಎಂದು ತಿಳಿದು ಬಿಟ್ಟಿದ್ದೆ. ನಾನು ವಾಚ್ ಪದಕ್ಕೆ ಸರಿಯಾದ ಇಂಗ್ಲಿಷ್ ಪದ ನನಗೆ ಗೊತ್ತಿಲ್ಲವೆಂದು ಹೇಳಿಬಿಟ್ಟೆ. ಹಿರಣ್ಣಯ್ಯನವರು ನಕ್ಕು ಅದು ಇಂಗ್ಲಿಷ್ ಪದವೇ ಎಂದು ಹೇಳಿ ನನ್ನ ಪರೀಕ್ಷೆ ಮುಗಿಸಿದರು.

ಅಂದು ಸಂಜೆ ಹಿರಣ್ಣಯ್ಯನವರು ಮೇಷ್ಟರಿಗೆ ಒಂದು ಸಂದೇಶವನ್ನು ಕಳಿಸಿದರು. ಅದರ ಪ್ರಕಾರ ಪರೀಕ್ಷೆಯಲ್ಲಿ ನನಗೆ ಎಲ್ಲರಿಗಿಂತ ಅಧಿಕ ಅಂಕಗಳನ್ನು  ಕೊಟ್ಟಿದ್ದರು. ಉಳಿದ ವಿದ್ಯಾರ್ಥಿಗಳಲ್ಲಿ ಯಾರೂ ನನ್ನ  ಮಟ್ಟದ ಅಂಕಗಳನ್ನು ಪಡೆದಿರಲಿಲ್ಲ. ಅದೊಂದು ದೊಡ್ಡ ಸಮಾಚಾರವಾಗಿ ಹೋಯಿತು. ಅಗ್ರಹಾರದಲ್ಲಿ ಎಲ್ಲರೂ ನನ್ನನ್ನು ಮತ್ತು ಮೇಷ್ಟರನ್ನು ಹೊಗಳ ತೊಡಗಿದರು. ಮೇಷ್ಟರ ಅಮ್ಮ ಸಂಭ್ರಮದಿಂದ ರಾತ್ರಿ ಊಟದೊಡನೆ ಪಾಯಸವನ್ನೂ ಮಾಡಿಬಿಟ್ಟರು. ನನ್ನ ಸಂತೋಷಕ್ಕೆ ಮಿಗಿಲೇ ಇರಲಿಲ್ಲ. ಮುಂದೆರಡು ದಿನದಲ್ಲಿ ನಡೆದ ಕನ್ನಡ ಮತ್ತು ಅಂಕ ಗಣಿತದ ಪರೀಕ್ಷೆಯಲ್ಲೂ ನಾನು ಚೆನ್ನಾಗಿಯೇ ಉತ್ತರಗಳನ್ನು ಕೊಟ್ಟೆ.

ಆದರೆ ನನ್ನ ಸಮಸ್ಯೆ ಆಮೇಲಿನ ಪರೀಕ್ಷೆಗಳಾದ ಭೂಗೋಳ ಮತ್ತು ಚರಿತ್ರೆಯಲ್ಲಿತ್ತು. ನಾನು ಮೊದಲೇ  ಹೇಳಿದಂತೆ ಪುಸ್ತಕಗಳ ಪಾಠವನ್ನು ನಾನು ಕಣ್ಣಿನಲ್ಲೂ ನೋಡಿರಲಿಲ್ಲ. ಏಕೆಂದರೆ ನನಗೆ ಪುಸ್ತಕಗಳು ದೊರೆತೇ ಇರಲಿಲ್ಲ. ನಾನು ಇಂದು ಹಿಂತಿರುಗಿ ನೋಡುವಾಗ ನನಗೆ ನನ್ನ ಮೇಷ್ಟರು ಪುಸ್ತಕಗಳನ್ನು ಒಮ್ಮೆಯೂ  ಕಣ್ಣಾರೆ ನೋಡದೇ ಹೇಗೆ ಪರೀಕ್ಷೆಗೆ ಹೋಗೆಂದು ಹೇಳಿದರೆಂದು ಆಶ್ಚರ್ಯವಾಗುತ್ತದೆ. ಅದಿರಲಿ. ಅಂದು ನಾನು ಶಾಲೆಯೊಳಗೆ ಹೋದಾಗ ನನ್ನ ಮನಸ್ಸಿನ ತುಂಬಾ ಪ್ರಶ್ನೆಗಳೇ ತುಂಬಿ ಹೋಗಿದ್ದವು. ಮೇಷ್ಟರು ಕೇಳಬಹುದಾದ ಪ್ರಶ್ನೆಗಳಿಗೆ ನನ್ನ ತಲೆಯಲ್ಲಿ ಯಾವುದೇ ಉತ್ತರಗಳಿರಲಿಲ್ಲ.

ದಿನ ಬೆಳಿಗ್ಗೆ ಭೂಗೋಳ ಮತ್ತು ಮದ್ಯಾಹ್ನದ ನಂತರ ಚರಿತ್ರೆಯ ಪರೀಕ್ಷೆ ಇತ್ತು. ಹುಸೇನ್ ಸಾಬ್ ಎಂಬ ಮೇಷ್ಟರು  ಒಂದು ಕೊಠಡಿಯೊಳಗೆ ಕುಳಿತು ಒಬ್ಬೊಬ್ಬರನ್ನಾಗಿ ಕರೆದು ಪರೀಕ್ಷೆ ಮಾಡಲಾರಂಭಿಸಿದರು. ನನ್ನ ಸರದಿ ಕೊನೆಯಲ್ಲಿತ್ತು. ಅಷ್ಟು ಹೊತ್ತಿಗೆ ಇಡೀ ಶಾಲೆಯಲ್ಲಿ ಒಂದು ಸಮಾಚಾರ ಹರಡಿತ್ತು. ಅದೆಂದರೆ ಯಾವನೋ ಒಬ್ಬ ಪ್ರೈವೇಟ್ ವಿದ್ಯಾರ್ಥಿ ಎಲ್ಲಾ ವಿದ್ಯಾರ್ಥಿಗಳಿಗಿಂತ ಹೆಚ್ಚು ಅಂಕ ಗಳಿಸಿ ಇದುವರೆಗಿನ ಪರೀಕ್ಷೆಯಲ್ಲಿ ತರಗತಿಗೇ ಪ್ರಥಮನಾಗಿರುವನಂತೆ. ನಾನು ಕಾತುರದಿಂದ ನನ್ನ ಸರದಿಗಾಗಿ ಕಾಯುತ್ತಿರುವಾಗ ಮೂರು ಜನ ಹಿರಿಯ ವಿದ್ಯಾರ್ಥಿಗಳು (ಎಂಟನೇ ತರಗತಿಯವರು) ನನ್ನನ್ನು ನೋಡಲು ಬಂದರು. ಅವರು ನನ್ನನ್ನು ಅಭಿನಂದಿಸಿ ಭೂಗೋಳದಲ್ಲಿ ನನ್ನ ತಯಾರಿ ಹೇಗಿರುವುದೆಂದು ಕೇಳಿದರುನಾನು ಅವರಿಗೆ ನನ್ನ ಪರಿಸ್ಥಿತಿಯನ್ನು ತಿಳಿಸಿದೆ. ಅವರಿಗೆ ನಾನು ಪುಸ್ತಕವನ್ನೇ ನೋಡಿಲ್ಲವೆಂದು ಹೇಳಿದ್ದನ್ನು ನಂಬಲಾಗಲಿಲ್ಲ. ಅವರು ಸ್ವಲ್ಪ ಹೊತ್ತು ಹೊರಗೆ ಹೋಗಿ ಪುನಃ ನನ್ನ ಹತ್ತಿರ  ಬಂದರು. ಅವರ ಕೈಯಲ್ಲಿ ಭೂಗೋಳ ಪುಸ್ತಕವಿತ್ತು. ಅವರು ತಮ್ಮ ಪ್ಲಾನ್ ಏನೆಂದು ನನಗೆ ತಿಳಿಸಿದರು.

ಅದರ ಪ್ರಕಾರ ಅವರಲ್ಲೊಬ್ಬನು ಪರೀಕ್ಷೆ ನಡೆಯುತ್ತಿದ್ದ ರೂಮಿಗೆ ಹೋಗಿ ಮೇಷ್ಟರು ಯಾವ ಯಾವ  ಪ್ರಶ್ನೆಗಳನ್ನು ಕೇಳುತ್ತಾರೆಂದು ತಿಳಿದು ಬರುವುದು. ಹಿರಿಯ ವಿದ್ಯಾರ್ಥಿ ಆದ್ದರಿಂದ ಮೇಷ್ಟರು ಅವನು ಅಲ್ಲಿಗೆ ಹೋದುದಕ್ಕೆ ಅಡ್ಡಿ ಮಾಡುವ ಪ್ರಶ್ನೆ ಇರಲಿಲ್ಲ. ಅವನು ತಿಳಿದು ಬಂದ  ಪ್ರಶ್ನೆಗಳಿಗೆ ಉಳಿದಿಬ್ಬರು ನನ್ನನ್ನು ತಯಾರಿ ಮಾಡುವುದು. ಹಾಗೆ ಹೋದ ವಿದ್ಯಾರ್ಥಿ ಸ್ವಲ್ಪ ಸಮಯದಲ್ಲಿ ಹಿಂತಿರುಗಿ ಬಂದ. ಮೊದಲ ಪ್ರಶ್ನೆ ಭಾರತದ ಮೇಲ್ಮೆ ಲಕ್ಷಣಗಳು ಯಾವುವು ಎಂದಿತ್ತು. ನನ್ನನ್ನು ಬಗ್ಗೆ ಕೇಳಿದಾಗ ನಾನು ಪದಗಳನ್ನು ಮೊದಲ ಬಾರಿಗೆ ಕೇಳಿದ್ದಾಗಿ ಹೇಳಿದೆ! ಆಗ ಅವರು ನನಗೆ ಭಾರತದ ಉತ್ತರ, ದಕ್ಷಿಣ, ಪಶ್ಚಿಮ ಮತ್ತು ಪೂರ್ವ ದಿಕ್ಕಿನಲ್ಲಿ ಏನಿರುವುದೆಂದು ಕೇಳಿದರು. ನಾನು ಕೂಡಲೇ ಹಿಮಾಲಯ ಪರ್ವತ, ಹಿಂದೂ ಮಹಾಸಾಗರ , ಅರಬ್ಬೀ ಸಮುದ್ರ ಮತ್ತು ಬಂಗಾಳ ಕೊಲ್ಲಿ ಎಂದು ಹೇಳಿದೆ. ಅವರು ಕೂಡಲೇ ನಾನು ಅಷ್ಟು ಉತ್ತರ ಕೊಟ್ಟರೆ ಸಾಕೆಂದು ತಿಳಿಸಿದರು. ಅದೇ ರೀತಿಯಲ್ಲಿ ಸುಮಾರು ೧೦ ಪ್ರಶ್ನೆಗಳಿಗೆ ನನ್ನಿಂದ ಉತ್ತರ ಬರುವಂತೆ ತಯಾರಿ ಮಾಡಿದರು. ನಾನು ಬಾಯಿಪಾಠ ಮಾಡುವುದರಲ್ಲಿ ನಿಸ್ಸೀಮನಾಗಿದ್ದೆ. ಹಾಗಾಗಿ ನನಗೆ ಉತ್ತರಗಳನ್ನು ನೆನಪಿಟ್ಟು ಕೊಳ್ಳುವುದು ಕಷ್ಟವಾಗಲಿಲ್ಲ. ನನ್ನ ಸರದಿ ಬಂದಾಗ ನಾನು ಪೂರ್ಣ ಉತ್ಸಾಹದಲ್ಲಿದ್ದೆ. ಮೇಷ್ಟರು ಕೇಳಿದ ಪ್ರಶ್ನೆಗಳಿಗೆ ನನ್ನಿಂದ ಪಟಪಟನೆ ಉತ್ತರಗಳು ದೊರೆತವು. ಅವರಿಂದ ಅಭಿನಂದನೆ ಪಡೆದು ನಾನು ಊಟಕ್ಕೆ ಮನೆಗೆ ಹಿಂದಿರುಗಿದೆ.

ನಾನು ನನ್ನ ಹತ್ತಿರ ಚರಿತ್ರೆ ಪುಸ್ತಕವೂ ಇಲ್ಲವೆಂದು ಹೇಳಿದ್ದರಿಂದ ಅದೇ ಮೂರು ವಿದ್ಯಾರ್ಥಿಗಳು ಮದ್ಯಾಹ್ನದ ನಂತರದ ನನ್ನ ಪರೀಕ್ಷೆಗೆ ಕೂಡ ಸಹಾಯ ಮಾಡಿದರುನಾನು ಯಥಾ ಪ್ರಕಾರ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿ ಭೇಷ್ ಎನ್ನಿಸಿಕೊಂಡೆ. ನನಗೆ ಮೂರು ವಿದ್ಯಾರ್ಥಿಗಳಿಗೆ ಹೇಗೆ ಕೃತಜ್ಞತೆ ಸಲ್ಲಿಸಬೇಕೆಂದು ಹೊಳೆಯಲೇ ಇಲ್ಲ. ನಾನು ಮೇಷ್ಟರಿಗೆ ವಿಷಯ ತಿಳಿಸಿದಾಗ ಅವರಿಗೂ ನಂಬಲಾಗಲಿಲ್ಲ. ಆದರೆ ಹೆಡ್ ಮಾಸ್ಟರ್ ಅವರು ನಾನು ಎಲ್ಲ ವಿಷಯಗಳಲ್ಲೂ (subjects) ತರಗತಿಗೆ ಪ್ರಥಮನಾಗಿ ಬಂದಿದ್ದೇನೆಂದು ಹೇಳಿದ ಮೇಲೆ ನಾನು ಹೇಳಿದ್ದು ಸತ್ಯವೆಂದು ಅವರಿಗೆ ಮನವರಿಕೆಯಾಯಿತು .

ಇಂದು ನಾನು ನನ್ನ ನೆನಪಿನ ಅಂಗಳದ ಪುಟಗಳನ್ನು  ತಿರುವಿ  ನೋಡುವಾಗ  ನನಗೆ ನನ್ನ ಪರಿಚಯ ಸ್ವಲ್ಪವೂ ಇರದ ಮೂರು ವಿದ್ಯಾರ್ಥಿಗಳು ಏಕೆ ಹಾಗೆ ನಂಬಲಾರದ ರೀತಿಯ ಸಹಾಯ ಮಾಡಿದರೆಂದು ಅರ್ಥವಾಗುತ್ತಿಲ್ಲ. ಅವರನ್ನು ನಾನು ಪುನಃ ಎಂದೂ ಭೇಟಿ ಮಾಡುವ ಸಂದರ್ಭ ಬರಲಿಲ್ಲ. ಇಂದಿನ ಸೀನಿಯರ್ ವಿದ್ಯಾರ್ಥಿಗಳು ಕಿರಿಯ ವಿದ್ಯಾಥಿಗಳನ್ನು ಗೋಳು ಹೊಯ್ದು ಕೊಳ್ಳುವ ಕಥೆಗಳು ನಮ್ಮ ಕಿವಿಗೆ ಬೀಳುತ್ತಲೇ ಇರುತ್ತವೆ. ಆದರೆ  ಮೂರು ವಿದ್ಯಾರ್ಥಿಗಳು ನನ್ನ ಪಾಲಿಗೆ ದೇವತೆಗಳಂತೆ ಅವತರಿಸಿ ಮಾಡಿದ  ಸಹಾಯವನ್ನು ನಾನು ಎಂದಿಗೂ  ಮರೆಯಲಾರೆ. ಪ್ರಾಯಶಃ ಇಂತಹ ದೇವತೆಗಳು ಪ್ರತಿಯೊಬ್ಬರ ಜೀವಮಾನದಲ್ಲೂ ಒಮ್ಮೆ ಬರುತ್ತಾರೆ. ಆದರೆ ಅವರ ಸಹಾಯ ಹಿಂತಿರುಗಿಸುವಂತದ್ದಲ್ಲ  .  ಕೇವಲ ನೆನಪಿಡುವಂತಹವು.
----ಮುಂದುವರಿಯುವುದು ---



No comments: