Saturday, June 3, 2017

ನನ್ನ ಬಾಲ್ಯ


ಅಧ್ಯಾಯ ೨೫
ನಮ್ಮೂರ  ಶಾಲೆಗೆ ಹೊಸ ಮೇಷ್ಟರು ಬಂದಿದ್ದರೂ ನನ್ನನ್ನು ಪುನಃ ಶಾಲೆಗೆ ಕಳಿಸಲು ನಮ್ಮ ತಂದೆಯವರು ಯಾವುದೇ ತೀರ್ಮಾನ ತೆಗೆದುಕೊಳ್ಳಲಿಲ್ಲ. ಒಂದು ದಿನ ಸ್ವತಃ ವಿಶ್ವೇಶ್ವರಯ್ಯನವರೇ ನಮ್ಮ ಮನೆಗೆ ಆಗಮಿಸಿ ನನ್ನನ್ನು ತಂಗಿಯೊಡನೆ ಶಾಲೆಗೆ ಕಳಿಸಬೇಕೆಂದು ಕೇಳಿಕೊಂಡರು. ತಂದೆಯವರು ಊರಿನ ಬೇರೆ ಹಿರಿಯರೊಡನೆ ಮಾತಾಡಿ ನಮಗೆ ಶಾಲೆಗೆ ಹೋಗಲು ಅನುಮತಿ ನೀಡಿದರು. ನಾನು ಪುನಃ ನಮ್ಮ ನೆರೆಯ ಉಳಿದ ಹುಡುಗರೊಡನೆ ಶಾಲೆಗೆ ಹೋಗತೊಡಗಿದೆ. ನನ್ನ ತಮ್ಮ ಮಾಧವನನ್ನೂ ಶಾಲೆಗೆ ಸೇರಿಸಲಾಯಿತು. ಆದರೆ ಆವೇಳೆಗೆ  ಅರ್ಧ ವರ್ಷವೇ ಕಳೆದು ಹೋಗಿತ್ತು.

ವಿಶ್ವೇಶ್ವರಯ್ಯ ಬಂದ  ಮೇಲೆ ನಮ್ಮ ಶಾಲೆಯಲ್ಲಿ ಹಲವು ಬದಲಾವಣೆಗಳಾದುವು. ಅಲ್ಲಿಯವರೆಗೆ ನಾವು ಬೆಳಿಗ್ಗೆ ಪ್ರಾರ್ಥನೆಗೆ ಮೈಸೂರು ರಾಜ್ಯಗೀತೆಯಾದ "ಕಾಯೋ ಶ್ರೀಗೌರಿ ಕರುಣಾ ಲಹರಿ ತೋಯಜಾಕ್ಷಿ ಶಂಕರೀಶ್ವರೀ” ಎಂಬ ಗೀತೆಯನ್ನು ಹಾಡುತ್ತಿದ್ದೆವು. ಹಾಗೂ ಪ್ರತಿ ವರ್ಷ ಮೈಸೂರು ಮಹಾರಾಜರ ವರ್ಧಂತಿಯನ್ನು (ಜನ್ಮ ದಿನ) ಅವರ ಪೋಟೋಗೆ ಮಾಲೆ  ಹಾಕಿ ಕೊಬ್ಬರಿ ಪುಡಿಯೊಡನೆ ಸಕ್ಕರೆ ಮಿಕ್ಸ್ ಮಾಡಿ ಹಂಚುವುದರೊಡನೆ ಆಚರಿಸಲಾಗುತ್ತಿತ್ತು. ಮಹಾರಾಜರು ಆಡಳಿತವನ್ನು ಬಿಟ್ಟುಕೊಟ್ಟು ರಾಜ್ಯಪಾಲ ಪದವಿಯನ್ನು ಒಪ್ಪಿಕೊಂಡ ಮೇಲೆ ಈ ಆಚರಣೆಗಳು ನಿಂತು ಹೋದವು.

ವಿಶ್ವೇಶ್ವರಯ್ಯನವರು SSLC ಪಾಸ್ ಮಾಡಿದ್ದರು. ಪಾಠಗಳನ್ನು ತುಂಬಾ ಚೆನ್ನಾಗಿ ಮಾಡುತ್ತಿದ್ದರು.  ಅವರು ಬೆಳಗಿನ ಪ್ರಾರ್ಥನೆಗೆ  ವಂದೇ ಮಾತರಂ ಹಾಡಿಸತೊಡಗಿದರು. ಹಾಗೂ ಸ್ವಾತಂತ್ರ ದಿನಾಚರಣೆ ಮತ್ತು ಗಣತಂತ್ರ ದಿನ ಆಚರಿಸ ತೊಡಗಿದರು. ನಮ್ಮ ಶಾಲೆಗೆ ಆಗ ಯಾವುದೇ ಆಟದ  ಮೈದಾನ ಇರಲಿಲ್ಲ. ಆದ್ಧರಿಂದ ವಾರದಲ್ಲಿ ಎರಡು ದಿನ ನಮ್ಮನ್ನು ಶಾಲೆಯಿಂದ ದೂರದ ಬಯಲಿಗೆ ಕರೆದುಕೊಂಡು ಹೋಗಿ ಡ್ರಿಲ್ ಮಾಡಿಸುತ್ತಿದ್ದರು. ಅವರ ತಮ್ಮ ಚಂದ್ರಿ (ಚಂದ್ರಶೇಖರ) ನಾರ್ವೆ ಮಿಡ್ಲ್ ಸ್ಕೂಲ್ ನಲ್ಲಿ ಓದುತ್ತಿದ್ದ. ಅವನು ಫ್ಯಾನ್ಸಿ ಡ್ರೆಸ್, ಮಿಮಿಕ್ರಿ , ಇತ್ಯಾದಿಗಳಲ್ಲಿ ತುಂಬಾ ಪರಿಣಿತನಾಗಿದ್ದ. ಮೇಷ್ಟರು  ಅವನನ್ನು ನಮ್ಮ ಶಾಲೆಗೆ ಕರೆಸಿ ಅವನಿಂದ ವಿವಿಧ ವಿನೋದಾವಳಿ ಮಾಡಿಸುತ್ತಿದ್ದರು. ಒಟ್ಟಿನಲ್ಲಿ  ಶಾಲೆ ತುಂಬಾ ಏಳಿಗೆಯನ್ನು ಕಂಡಿತು.

ಬೇಗನೆ ನನ್ನ ನಾಲ್ಕನೇ ತರಗತಿ ಮುಕ್ತಾಯಗೊಂಡಿತು. ಬೇಸಿಗೆ ರಜ ಮುಗಿದನಂತರ ನಾನು ಮಿಡ್ಲ್ ಸ್ಕೂಲ್ ಓದಲು ಬೇರೆ ಊರಿಗೆ ಹೋಗಬೇಕಿತ್ತು. ಆದರೆ ಅಣ್ಣ ನನಗೆ ನಮ್ಮೂರ ಶಾಲೆಗೇ ಹೋಗುತ್ತಿರುವಂತೆ ಹೇಳಿದ. ಆದರೆ ನಾನು ಪುನಃ ಶಾಲೆಗೆ ಏಕೆ ಬರುತ್ತಿರುವೆನೆಂದು ಮೇಷ್ಟರಿಗೆ ಅರ್ಥವಾಗಲಿಲ್ಲ. ಅಣ್ಣನಿಗೆ ಪುರದಮನೆಯಲ್ಲಿದ್ದ ಶಾಲೆಗೆ ಬರಲಾಗದಿದ್ದರಿಂದ ಪತ್ರಮುಖೇನ ಮೇಷ್ಟರಿಗೆ ನನಗೆ ಐದನೇ ತರಗತಿಯ ಟ್ಯೂಷನ್ ಮಾಡುವಂತೆ ಕೇಳಿಕೊಂಡ. ಮೇಷ್ಟರು ತಮ್ಮ ಫೀ ಎಷ್ಟೆಂದು ಕೂಡಾ ಹೇಳದೆ ಪಾಠ ಹೇಳಲು ಒಪ್ಪಿಕೊಂಡರು. ನನಗೆ  ಜೆ ಸಿ ರೋಲೋ ಅವರು ಬರೆದ ಐಡಿಯಲ್ ಇಂಗ್ಲಿಷ್ ರೀಡರ್ ಮೂಲಕ ಇಂಗ್ಲಿಷ್ ಪಾಠ ಪ್ರಾರಂಭ ಮಾಡಲಾಯಿತು. ಆದರೆ ನನಗೊಂದು ಸಮಸ್ಯೆ ಎದುರಾಯಿತು. ಅಣ್ಣ ಮತ್ತು ಮೇಷ್ಟರು ಎಷ್ಟೇ ಪ್ರಯತ್ನಪಟ್ಟರೂ ನನಗೆ ಚರಿತ್ರೆ ಮತ್ತು ಭೂಗೋಳ ಪಠ್ಯ ಪುಸ್ತಕಗಳು ದೊರೆಯಲಿಲ್ಲ. ಹಾಗಾಗಿ ನನ್ನ ಟ್ಯೂಷನ್ ಇಂಗ್ಲಿಷ್, ಕನ್ನಡ ಮತ್ತು ಅಂಕಗಣಿತಕ್ಕೆ ಸೀಮಿತವಾಯಿತು.

ಈ ನಡುವೆ ಇದ್ದಕ್ಕಿದ್ದಂತೆ ವಿಶ್ವೇಶ್ವರಯ್ಯನವರ ನಡವಳಿಕೆಯಲ್ಲಿ ತುಂಬಾ ಬದಲಾವಣೆ ಕಂಡು ಬಂತು. ಅವರು ವಿದ್ಯಾರ್ಥಿಗಳಿಗೆ ಸಣ್ಣ ಸಣ್ಣ ತಪ್ಪುಗಳಿಗೂ ಕೂಡಾ ಕಠಿಣ ಶಿಕ್ಷೆ ನೀಡತೊಡಗಿದರು. ಅವರು ಏಕೆ ಹಾಗೆ  ಮಾಡುತ್ತಿದ್ದಾರೆಂದು ನಮಗೆ ಅರ್ಥವಾಗಲೇ ಇಲ್ಲ. ಶಾಲೆಗೆ ಸ್ವಲ್ಪ ತಡವಾಗಿ ಬಂದರೂ ಮಕ್ಕಳನ್ನು ಒಳಗೆ ಸೇರಿಸದೆ ಹೊರಗೇ ಕೊಳೆಹಾಕಿ ನಂತರ ಒಳಗೆ ಬಿಡತೊಡಗಿದರು. ನಾನು ಅದನ್ನು ಗಮನಿಸುತ್ತಿದ್ದೆ. ನನಗೆ ಅದು ಸ್ವಲ್ಪವೂ ಇಷ್ಟವಾಗಲಿಲ್ಲ. ಹಾಗೂ ನಾನೇನಾದರೂ ಸ್ವಲ್ಪ ತಡವಾಗಿ ಬಂದರೆ ಏನಾಗಬಹುದೆಂದು ಯೋಚಿಸುತ್ತಿದ್ದೆ. ಆ ಅವಕಾಶ ಬಹು ಬೇಗನೆ ಬಂತು.

ನಾನು ನಮ್ಮ ನೆರೆಹೊರೆಯ ಮಕ್ಕಳೂ ಸೇರಿ ಸುಮಾರು ೧೦ ವಿದ್ಯಾರ್ಥಿಗಳೊಡನೆ ದಿನವೂ ಶಾಲೆಗೆ ಹೋಗುತ್ತಿದ್ದೆ. ಈ ತಂಡಕ್ಕೆ ನಾನೇ  ನಾಯಕನಾಗಿದ್ದೆ. ನಾವು ಪ್ರತಿದಿನ ಮಧ್ಯಾಹ್ನ ಮನೆಗೆ ಬಂದು ಊಟ ಮಾಡಿ ಪುನಃ ಶಾಲೆಗೆ ಹೋಗುತ್ತಿದ್ದೆವು. ಒಂದು ಮಧ್ಯಾಹ್ನ ನಮ್ಮ ಕೆಳಗಿನ ಮನೆಯಲ್ಲಿ ಯಾವುದೋ ಊಟವಿದ್ದರಿಂದ ನಾವು ಮಧ್ಯಾಹ್ನ ಶಾಲೆಗೆ ಹಿಂದಿರುಗುವುದು ಸ್ವಲ್ಪ ತಡವಾಯಿತು. ನಾನು ಮಾಮೂಲಿನಂತೆ ಉಳಿದ ಮಕ್ಕಳೊಡನೆ  ಸೀದಾ ಶಾಲೆಯ ಒಳಗೆ ಪ್ರವೇಶ ಮಾಡಲು ಹೋದೆ.  ಆದರೆ ಮೇಷ್ಟರು ನನಗೆ ಹೊರಗೇ ನಿಲ್ಲುವಂತೆ ಆಜ್ಞೆ ಮಾಡಿದರು. ಅಲ್ಲಿಯವರೆಗೆ ನಾನು ಯಾವುದೇ ಶಿಕ್ಷೆಗೆ ಪಾತ್ರನಾಗುವನಲ್ಲವೆಂಬ ಹೆಮ್ಮೆಯಲ್ಲಿದ್ದೆ. ಆದರೆ ನನ್ನ ಹೆಮ್ಮೆ ಆದಿನ ಮುರಿದು ಬಿತ್ತು.  ನಾನು ನನ್ನ ತಾಳ್ಮೆ ಕಳೆದುಕೊಂಡದ್ದರಲ್ಲಿ ಆಶ್ಚರ್ಯವಿರಲಿಲ್ಲ.

ನಾನು ಒಂದರೆಕ್ಷಣವೂ ಯೋಚಿಸದೇ ಶಾಲೆಯ ಮೆಟ್ಟಿಲಿಂದ ಹಿಂದಿರುಗಿ ನನ್ನ ತಂಡಕ್ಕೆ ನನ್ನನ್ನು ಹಿಂಬಾಲಿಸುವಂತೆ ಆಜ್ಞಾಪಿಸಿ ಶಾಲೆಯಿಂದ ಹೊರಟು ಬಿಟ್ಟೆ. ಪುರದಮನೆ ಮತ್ತು ಶಾಲೆ ಒಂದು ಗುಡ್ಡದ ಬುಡದಲ್ಲಿದ್ದು ಗುಡ್ಡ ಹತ್ತಿದನಂತರ ರಸ್ತೆ ಸಿಗುತ್ತಿತ್ತು. ನಮ್ಮ ತಂಡ ನನ್ನೊಡನೆ ಸೀದಾ ಗುಡ್ಡದ ಮೇಲೆ ಏರತೊಡಗಿತು. ನಾವು  ಸ್ವಲ್ಪವೂ ತಿರುಗಿ ನೋಡದೇ ಮನೆಯ ದಾರಿ ಹಿಡಿದೆವು. ಮೇಷ್ಟರು ನಾನು ಈ ರೀತಿ "ದಂಗೆಯೆದ್ದು" ನನ್ನ ಸೇನೆಯೊಡನೆ ಮನೆಯ ದಾರಿ ಹಿಡಿಯುವೆನೆಂದು ಕನಸ್ಸಿನಲ್ಲೂ ಎಣಿಸಿರಲಿಕ್ಕಿಲ್ಲ.  ಅವರು ಬೇಗನೆ ಶಾಲೆಯಿಂದ ಹೊರಬಂದು ಆಗಲೇ ಗುಡ್ಡದ ತುದಿ ಸೇರಿದ್ದ ನಮ್ಮನ್ನು ಕೈಬೀಸಿ ಗಟ್ಟಿಯಾಗಿ ಕರೆಯತೊಡಗಿದರು.  ಈ ತಮಾಷೆಯನ್ನು ಪುರದಮನೆಯ ಕುಟುಂಬದವರೆಲ್ಲಾ ಹೊರಬಂದು ನೋಡತೊಡಗಿದರು. ಮೇಷ್ಟರ ಗಾಬರಿಗೆ ಇನ್ನೊಂದು ಕಾರಣವಿತ್ತು. ನಮ್ಮ ಕುಟುಂಬಕ್ಕೂ ಪುರದಮನೆಯವರಿಗೂ ಮನಸ್ತಾಪವಿದ್ದರಿಂದ ಮೇಷ್ಟರು ಪುರದಮನೆಯವರ ಚಿತಾವಣೆಯಿಂದ ನಮ್ಮನ್ನು ಶಾಲೆಯಿಂದ ಹೊರಹಾಕಿದರೆಂದು ಊರಿನವರು ಭಾವಿಸಬಹುದಾಗಿತ್ತು.

ಗುಡ್ಡದ ತುದಿಯಿಂದ ನಮಗೆ ಮೇಷ್ಟರು ಕೈಬೀಸಿ ಕರೆಯುತ್ತಿದ್ದುದು ಮತ್ತು ಪುರದಮನೆಯವರು ನೋಡುತ್ತಿರುವುದೂ ಕಾಣುತ್ತಿತ್ತು. ಆದರೆ ನಾನು  ಅದನ್ನು ಲಕ್ಷ ಮಾಡದೇ ಸೀದಾ ನಮ್ಮ ಕೆಳಗಿನ ಮನೆಯನ್ನು ನಮ್ಮ ತಂಡದೊಡನೆ ತಲುಪಿದೆ. ಅಲ್ಲಿ ಸಂತರ್ಪಣೆ ಊಟ ಮುಗಿದು ಗಂಡಸರೆಲ್ಲಾ ಇಸ್ಪೀಟ್ ಆಟದಲ್ಲಿ ತೊಡಗಿದ್ದರು. ಅವರು ಆಟವನ್ನು ನಿಲ್ಲಿಸಿ ಶಾಲೆಯಿಂದ ಅಷ್ಟು ಬೇಗ  ವಾಪಾಸ್ ಬರಲು ಕಾರಣ ಕೇಳಿದರು. ನಾನು ಅವರಿಗೆ ನಾವು ಊಟ ಮುಗಿಸಿ ಹೋದಾಗ ಕೇವಲ ೪-೫ ನಿಮಿಷಗಳು ತಡವಾದುದಕ್ಕೆ ಮೇಷ್ಟರು ನಮಗೆ ಶಾಲೆಯ ಒಳಗೆ ಪ್ರವೇಶವಿಲ್ಲದಂತೆ ಮಾಡಿದರೆಂದು ಹೇಳಿದೆ. ಹಾಗೆಯೇ ಈ ರೀತಿ ನಾವು ತಡವಾದದ್ದು ಅದು ಮೊದಲನೇ ಬಾರಿಯೆಂದೂ ಆದ್ದರಿಂದ ನಮಗೆ ಆ ಬಗೆಯ ಶಿಕ್ಷೆ ಸರಿಯಲ್ಲವೆಂದೂ ಹೇಳಿದೆ.
ನನ್ನ ಅಭಿಪ್ರಾಯಕ್ಕೆ ಅಲ್ಲಿದ್ದ ಎಲ್ಲಾ ಹಿರಿಯರ ಸಮರ್ಥನೆ ಸಿಕ್ಕಿತು. ಅಲ್ಲದೆ ನಮ್ಮಣ್ಣನ ಪ್ರಕಾರ ನಾನು ಕೇವಲ ಟ್ಯೂಷನ್ ವಿದ್ಯಾರ್ಥಿಯಾದ್ದರಿಂದ ನನಗೆ ಶಾಲೆಯ ನಿಗದಿತ  ಸಮಯಕ್ಕೆ ಅಲ್ಲಿರಬೇಕಾದ ಅವಶ್ಯಕತೆ ಇರಲಿಲ್ಲ. ಒಟ್ಟಿನಲ್ಲಿ ಎಲ್ಲರ ಅಭಿಪ್ರಾಯ ಮೇಷ್ಟರ ಈ ವಿಚಿತ್ರ ವರ್ತನೆಗೆ ಪುರದಮನೆ ಶ್ರೀನಿವಾಸಯ್ಯನವರೇ ಕಾರಣ ಎಂದಾಗಿತ್ತು. ಆದರೆ ವಾಸ್ತವದಲ್ಲಿ ಶ್ರೀನಿವಾಸಯ್ಯನವರಿಗೂ ಮೇಷ್ಟರ ವರ್ತನೆಗೂ ಯಾವುದೇ ಸಂಬಂಧವಿರಲಿಲ್ಲ. ನನ್ನ ಅಣ್ಣ ಕೂಡಲೇ ಮೇಷ್ಟರಿಗೆ ಒಂದು ಪತ್ರ ಬರೆದು  ನನ್ನ ಕೈಯಲ್ಲಿ ಕೊಟ್ಟ. ಅದನ್ನು ನಾನು ಮಾರನೇ ದಿನ ಮೇಷ್ಟರಿಗೆ ಕೊಡಬೇಕಿತ್ತು.

ನನಗೆ ಆ ರಾತ್ರಿ ನಿದ್ದೆಯೇ ಬರಲಿಲ್ಲ. ಅಷ್ಟೊಂದು ದಿನ ಅತ್ಯಂತ ಉತ್ತಮ ಮಟ್ಟದಲ್ಲಿದ್ದ  ನನ್ನ ಮತ್ತು ಮೇಷ್ಟರ ಸಂಬಂಧ ಈ ರೀತಿ ಒಮ್ಮೆಯೇ ಬಿಗಡಾಯಿಸಬಹುದೆಂದು ನಾನು ಕನಸ್ಸಿನಲ್ಲೂ ಎಣಿಸಿರಲಿಲ್ಲ. ಅವರ ವಿರುದ್ಧವಾಗಿ ನನ್ನ ನಡೆತ ಸರಿಯೇ ತಪ್ಪೇ ಎಂಬ ಸಂದಿಗ್ಧ ನನ್ನನ್ನು ರಾತ್ರಿಯೆಲ್ಲಾ ಕಾಡಿತು.
----ಮುಂದುವರಿಯುವುದು ---




No comments: