Tuesday, June 6, 2017

ನನ್ನ ಬಾಲ್ಯ

ಅಧ್ಯಾಯ ೨೬
ವಜ್ರಾದಪಿ ಕಠೋರಾನಿ
 ಮೃದೂನಿ ಕುಸುಮಾದಪಿ
ಲೋಕೋತ್ತರಣಾಮ್ ಚೇತಾಂಸಿ
ಕೋನು ವಿಜ್ಞಾತುಮರ್ಹಸಿ?
(ಅವರ ಮನಸ್ಸು ವಜ್ರಕ್ಕಿಂತ ಕಠಿಣ
ಕುಸುಮಕ್ಕಿಂತ  ಮೃದು
ಮಹಾತ್ಮರ ಮನಸ್ಸಿನಲ್ಲಿರುವುದನ್ನು
ಯಾರು ಕಲ್ಪಿಸಬಲ್ಲರು?)
ನಾನು ಮಾರನೇ ದಿನ ಶಾಲೆಗೆ ಹೋದಾಗ ನನ್ನ ಮನಸ್ಸು ಹೇಗಿತ್ತೆಂದು ನೀವು ಕಲ್ಪಿಸಿಕೊಳ್ಳಬಹುದು. ವಿಶ್ವೇಶ್ವರಯ್ಯನವರಿಂದ ನಾನು ತುಂಬಾ ಬೈಗುಳ ಅಥವಾ ಬುದ್ಧಿವಾದವನ್ನು ನಿರೀಕ್ಷಿಸಿದ್ದೆ. ಆದರೆ ಅವರು ಹಿಂದಿನ ದಿನದ ಪ್ರಸಂಗದ ಬಗ್ಗೆ ಯಾವ ಮಾತನ್ನೂ ಆಡದೇ ಮಾಮೂಲಿನಂತೆ ನನ್ನ ಪಾಠವನ್ನು ಮುಂದುವರಿಸಿದರು. ನಾನು ಅಣ್ಣನ ಪತ್ರ ಅವರಿಗೆ ಕೊಟ್ಟಾಗ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಅವರು ಹಿಂದಿನ ದಿನ ಏನೂ ನಡೆದಿಲ್ಲ ಎಂಬ ರೀತಿಯಲ್ಲಿ ವರ್ತಿಸಿದರು. ಆಮೇಲೆ ಒಮ್ಮೆ ಅವರು ನಮ್ಮ ಮನೆಗೆ ಬಂದಾಗ ಅಣ್ಣ ಆ ವಿಚಾರ ಎತ್ತಿದಾಗ ಕೂಡಾ ಎನೂ ನಡೆದೇ ಇಲ್ಲದಂತೆ ವರ್ತಿಸಿದರು. ಆದರೆ ಅದರಲ್ಲಿ ಶ್ರೀನಿವಾಸಯ್ಯನವರ ಪಾತ್ರ ಏನೂ ಇರಲಿಲ್ಲವೆಂದು ಸ್ಪಷ್ಟಪಡಿಸಿದರು. ಅಲ್ಲಿಗೆ ಆ ಪ್ರಸಂಗ ಮುಕ್ತಾಯ  ಕಂಡಿತು.

ವಿಶ್ವೇಶ್ವರಯ್ಯನವರು ನನಗೆ ಸಮಾರಂಭಗಳಲ್ಲಿ ಭಾಷಣ ಮಾಡುವುದು, ಡ್ರಿಲ್ ಮಾಡುವುದು, ಕಬಡ್ಡಿ ಆಡುವುದು, ಇತ್ಯಾದಿ ಚಟುವಟಿಗೆಗಳನ್ನು ಕಲಿಸಿದರು. ಶಾಲೆಗೆ ಯಾವುದೇ ಮಹನೀಯರು ಬಂದಾಗ ನನ್ನನ್ನು ಮಾದರಿ ವಿದ್ಯಾರ್ಥಿ ಎಂದು ಪರಿಚಯ ಮಾಡಿಸುತ್ತಿದ್ದರು. ಶಾಲೆಯ ಸಮಾರಂಭಗಳಿಗೆ ಚಂದಾ  ವಸೂಲು ಮಾಡಲು ಬೇರೆ ಬೇರೆ ಮನೆಗಳಿಗೆ ಕಳಿಸುತ್ತಿದ್ದರು. ನನಗೆ ಈ ಬಗೆಯ ಚಟುವಟಿಕೆಗಳು ತುಂಬಾ ಸಂತೋಷ ಕೊಡುತ್ತಿದ್ದವು.

ನಾನು  ನಾರ್ವೆ ಮಿಡ್ಲ್ ಸ್ಕೂಲ್ ನಲ್ಲಿ ಐದನೇ ತರಗತಿಯ ವಾರ್ಷಿಕ ಪರೀಕ್ಷೆಗೆ ಪ್ರೈವೇಟ್ ವಿದ್ಯಾರ್ಥಿಯಾಗಿ ಹೋಗಬೇಕೆಂದು ಮೊದಲೇ ತೀರ್ಮಾನವಾಗಿತ್ತು. ವಿಶ್ವೇಶ್ವರಯ್ಯನವರು  ಅಲ್ಲಿನ ಹೆಡ್ ಮಾಸ್ಟರ್ ಅವರೊಡನೆ ಆ ಬಗ್ಗೆ ಮಾತನಾಡಿದ್ದರು. ನನಗೆ ಚರಿತ್ರೆ ಮತ್ತು ಭೂಗೋಳ ಬಿಟ್ಟು ಉಳಿದ ಪಾಠಗಳನ್ನೆಲ್ಲಾ ಮೇಷ್ಟರು ಮಾಡಿ ಮುಗಿಸಿದ್ದರು. ನಾನು ಪರೀಕ್ಷೆಯ ಬಗ್ಗೆ ಹೆಚ್ಚು ಚಿಂತಿಸಬಾರದೆಂದು ಮೇಷ್ಟರು ಹೇಳಿದ್ದರು. ಆದರೂ "ಹಳ್ಳಿ ಹುಡುಗನಾದ" ನನಗೆ ನಾರ್ವೆಯಂತಹ ಊರಿನಲ್ಲಿ ಬೇರೆ ಮೇಷ್ಟರಿಂದ ಪರೀಕ್ಷೆ ಮಾಡಿಸಿಕೊಳ್ಳಲು ಖಂಡಿತವಾಗಿ ಭಯವಿತ್ತು. ನಾನು ಬೇರೆ ಯಾರಾದರೂ ಮೇಷ್ಟರ ಪರೀಕ್ಷೆಗೆ ಒಮ್ಮೆ ಒಳಗಾದರೆ ನನ್ನ  ಭಯ ಕಡಿಮೆಯಾಗುವುದೆಂದು ನನಗೆ ಅನಿಸುತ್ತಿತ್ತು. ಅದಕ್ಕೊಂದು ಅವಕಾಶವೂ ಕೂಡಿ ಬಂತು.

ಮೇಷ್ಟರಿಗೆ ಒಂದು ದಿನ ನಮ್ಮೂರಿನ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಹುರುಳಿಹಕ್ಲು ಲಕ್ಷ್ಮೀನಾರಾಯಣ ರಾವ್ ಅವರ ಮನೆಗೆ ಹೋಗಬೇಕಾದ ಪ್ರಸಂಗ ಬಂತು. ಅವರು ತಮ್ಮೊಟ್ಟಿಗೆ ನನ್ನನ್ನೂ ಕರೆದುಕೊಂಡು ಹೋದರು. ಮಾತುಕತೆ ಮುಗಿಯುವಾಗ ರಾತ್ರಿಯಾದ್ದರಿಂದ ನಾವು ಅಲ್ಲಿಯೇ ಊಟಮಾಡಿ ಮಲಗುವ ಪರಿಸ್ಥಿತಿ ಬಂತು.

ಆ ಸಮಯದಲ್ಲಿ ಲಕ್ಷ್ಮೀನಾರಾಯಣ ರಾವ್  ಅವರು ತಮ್ಮ ಮಕ್ಕಳಿಗೆ ಮನೆಯಲ್ಲೇ ಪಾಠಮಾಡಲು ಪ್ರೈವೇಟ್ ಟೀಚರ್ ಒಬ್ಬರನ್ನು ಏರ್ಪಾಟು ಮಾಡಿದ್ದರು. ವಿಠ್ಠಲಶೆಟ್ಟಿ ಎಂಬ ಈ ಮೇಷ್ಟರು ಉತ್ತಮವಾಗಿ ಇಂಗ್ಲಿಷ್ ಪಾಠ ಕೂಡ ಮಾಡುತ್ತಾರೆಂದು ಪ್ರಸಿದ್ಧರಾಗಿದ್ದರು. ಅವರು ಈ ಮುಂದೆ ಬೆಳವಿನಕೊಡಿಗೆ ಮಕ್ಕಳಿಗೆ ಮನೆಪಾಠ ಮಾಡುತ್ತಿದ್ದರು. ಆ ಮಕ್ಕಳೆಲ್ಲಾ ಶಿವಮೊಗ್ಗೆ ಸೇರಿದಮೇಲೆ ಅವರು ಹುರುಳಿಹಕ್ಲಿಗೆ ಬಂದಿದ್ದರು.  ರಾತ್ರಿಯಲ್ಲಿ ಅವರು ನಮ್ಮ ಮುಂದೆ ಮನೆಯ ಹುಡುಗರಿಗೆ ಪರೀಕ್ಷೆ ಮಾಡತೊಡಗಿದರು. ಆ ಹುಡುಗರು ಜಯಪುರದಲ್ಲಿ ಮಿಡ್ಲ್ ಸ್ಕೂಲ್ ಪರೀಕ್ಷೆಗೆ ಹೋಗುವರಿದ್ದರು. 

ಆ ಹುಡುಗರು ಕೆಲವು ಸಾಮಾನ್ಯ ಪ್ರಶ್ನೆಗಳಿಗೂ ತೃಪ್ತಿಕರ ಉತ್ತರ ನೀಡದ್ದರಿಂದ ಮೇಷ್ಟರಿಗೆ  ಸ್ವಲ್ಪ ಕೋಪ ಬಂತು. ಆಗ ಅವರು ವಿಶ್ವೇಶ್ವರಯ್ಯನವರ ಹತ್ತಿರ ನನ್ನ ಇಂಗ್ಲಿಷ್ ಪರೀಕ್ಷೆ ಮಾಡಲು ಅನುಮತಿ ಕೇಳಿದರು. ಮೇಷ್ಟರು ಕೂಡಲೇ ಒಪ್ಪಿಗೆ ನೀಡಿದರು. ವಿಠ್ಠಲ ಶೆಟ್ಟರು ಕೇಳಿದ ಪ್ರಶ್ನೆಗಳಿಗೆಲ್ಲ ನಾನು ಪಟಪಟನೆ ಉತ್ತರ ನೀಡಿಬಿಟ್ಟೆ. ಅವರು ತುಂಬಾ ಖುಷಿಪಟ್ಟು ವಿಶ್ವೇಶ್ವರಯ್ಯನವರಿಗೆ ಅಭಿನಂದಿಸಿದರು. ಆದರೆ ಮೇಷ್ಟರು ಆ ಅಭಿನಂದನೆಗೆ ನಾನು ಪಾತ್ರನೆಂದು ಹೇಳಿ ಬಿಟ್ಟರು. ನನ್ನ ಹಳೆಯ ನೆನಪುಗಳನ್ನು ಮೆಲುಕುಹಾಕುವಾಗ  ಅಂದಿನ ಘಟನೆ  ನನ್ನ ಜೀವಮಾನದ ಒಂದು ಅತ್ಯಂತ ತೃಪ್ತಿಕರ ಸನ್ನಿವೇಶವಾಗಿತ್ತೆಂದು ಅನಿಸುತ್ತದೆ.

ಅದು ೧೯೫೯ನೇ ಇಸವಿ ಮಾರ್ಚ್ ತಿಂಗಳು. ನನ್ನ ವಾರ್ಷಿಕ ಪರೀಕ್ಷೆಗೆ ನಾರ್ವೆಗೆ ಹೋದಾಗ ಮೇಷ್ಟರ ಮನೆಯಲ್ಲೇ ನಾನು ನಿಲ್ಲಬೇಕೆಂದು ಮೇಷ್ಟರು ಮೊದಲೇ ಷರತ್ತು ಹಾಕಿಬಿಟ್ಟಿದ್ದರು. ಅಂತೆಯೇ ನಾನು ಮೇಷ್ಟರೊಡನೆ ಪರೀಕ್ಷೆ ಪ್ರಾರಂಭವಾಗುವ ಹಿಂದಿನ ದಿನ ಅವರ ಮನೆ ತಲುಪಿದೆ. ಮೇಷ್ಟರ ಮನೆ ತುಂಗಾನದಿಯ ದಂಡೆಯಲ್ಲಿದ್ದ ನಾರ್ವೆ ಅಗ್ರಹಾರದಲ್ಲಿತ್ತು. ಮನೆಯವರೆಲ್ಲ ನನ್ನನ್ನು ಅತ್ಯಂತ ಆತ್ಮೀಯತೆಯಿಂದ ಸ್ವಾಗತಿಸಿದರು. ವಿಶ್ವೇಶ್ವರಯ್ಯನವರ ತಂದೆ-ತಾಯಿ ಅವರದ್ದು ತುಂಬಾ ದೊಡ್ಡ ಸಂಸಾರ. ಅವರಿಗೆ ಒಂಬತ್ತು ಮಕ್ಕಳು. ದೊಡ್ಡ ಮಗಳಿಗೆ ಮದುವೆಯಾಗಿತ್ತು. ವಿಶ್ವೇಶ್ವರಯ್ಯನವರ ತಮ್ಮ ಕೂಡ ಸ್ಕೂಲ್ ಮಾಸ್ಟರ್ ಆಗಿದ್ದರು. ಮೂರನೇ ಮಗ ಗುರುಮೂರ್ತಿ ಚಿಕ್ಕಮಗಳೂರಿನಲ್ಲಿ ಡಿಪ್ಲೊಮಾ ಓದುತ್ತಿದ್ದ. ಮೇಷ್ಟರ ತಂದೆ ಹತ್ತಿರದ ಊರಿನಲ್ಲಿ ಪೋಸ್ಟ್ ಮಾಸ್ಟರ್ ಆಗಿದ್ದರು.

ನನ್ನ ಜೀವಮಾನದಲ್ಲಿ ನಾನು ಮೊದಲಬಾರಿ ಬೇರೊಂದು ಕುಟುಂಬದ ಮನೆಯಲ್ಲಿ ತಂಗಿದ್ದೆ. ಆದರೆ ಮೇಷ್ಟರ ಅಮ್ಮನೂ ಸೇರಿ ಮನೆಮಂದಿಯೆಲ್ಲಾ ನನ್ನಗೆ ತೋರಿಸಿದ ಪ್ರೀತಿ ವಾತ್ಸಲ್ಯವನ್ನು ನಾನೆಂದೂ ಮರೆಯುವಂತಿಲ್ಲ. ನಾನು ಆ ಬಗೆಯ ಪ್ರೀತಿಗೆ ಅರ್ಹನೇ ಎಂದು ನನಗೇ ಸಂಶಯ ಬಂದಿದ್ದರಲ್ಲಿ ಆಶ್ಚರ್ಯವಿರಲಿಲ್ಲ. ಆದಿನಗಳಲ್ಲಿ ಯಾವ ಹಳ್ಳಿಗಳಲ್ಲೂ ವಿದ್ಯುತ್ ಇರಲಿಲ್ಲ. ಮೇಷ್ಟರ ಮನೆಯಲ್ಲಿ ನಾನು ಮೊದಲ ಬಾರಿ ವಿದ್ಯುತ್ ದೀಪಗಳನ್ನು ಕಂಡೆ. ನನಗೆ ಸ್ವಿಚ್ ಮುಟ್ಟಲೂ ಭಯವಾಗುತ್ತಿತ್ತು!

ಮೇಷ್ಟರು ನನ್ನನ್ನು ಅಗ್ರಹಾರದ ಪಕ್ಕದಲ್ಲಿದ್ದ ಹೆಡ್ ಮಾಸ್ಟರ್ ಹಿರಣ್ಣಯ್ಯನವರ ಮನೆಗೆ ಕರೆದುಕೊಂಡು ಹೋದರು. ಹಿರಣ್ಣಯ್ಯನವರು ಆ ಕಾಲದಲ್ಲಿ ಇಡೀ ಚಿಕ್ಕಮಗಳೂರು ಜಿಲ್ಲೆಗೇ ಪ್ರಸಿದ್ಧ ಮೇಷ್ಟರಾಗಿದ್ದರು. ಅವರು ಶಾಲೆಯಲ್ಲಿ ನಡೆಯುವ ನಾಟಕಗಳಲ್ಲಿ ವಹಿಸುತ್ತಿದ್ದ ಪಾತ್ರಗಳು ಪ್ರಖ್ಯಾತ ರಂಗಭೂಮಿ ನಟ ಮಾಸ್ಟರ್ ಹಿರಣ್ಣಯ್ಯನವರಿಗೇನೂ ಕಡಿಮೆಯಾದಾಗಿರಲಿಲ್ಲ. ಅವರು ನನ್ನ ಹತ್ತಿರ ಮೇಷ್ಟರು ನನ್ನ ಮೆರಿಟ್ ಬಗ್ಗೆ ಎಲ್ಲ ಹೇಳಿರುವುದಾಗಿಯೂ ಅದನ್ನು ಅವರೇ ಖುದ್ದಾಗಿ ಮಾರನೇ ದಿನ  ಪರೀಕ್ಷಿಸುವುದಾಗಿಯೂ ಹೇಳಿದರು.
----ಮುಂದುವರಿಯುವುದು ---
ವಿ ಕೃಷ್ಣಮೂರ್ತಿ
೬ನೇ ಜೂನ್ ೨೦೧೭




No comments: