Thursday, January 22, 2015

ನಾಗಕ್ಕನ ದುರಂತ ಕಥೆ


ಇದು ನಾನು ಶಿವಮೊಗ್ಗೆಯಲ್ಲಿ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದಾಗ ನಡೆದ ಘಟನೆ. ಸರಿಸುಮಾರು ಸಾವಿರದ ಒಂಬೈನೂರರ ಎಪ್ಪತ್ತರ ದಶಕದ ಮೊದಲ ಭಾಗವಿರಬೇಕು. ಆ ದಿನಗಳಲ್ಲಿ ನಾನು ತಿಂಗಳಿಗೊಮ್ಮೆ ಊರಿಗೆ ಹೋಗಿಬರುತ್ತಿದ್ದೆ . ಸಾಧಾರಣವಾಗಿ ನಾನು ರಾತ್ರಿ ಪ್ರಯಾಣವನ್ನು ಮಾಡುತ್ತಿರಲಿಲ್ಲ . ಯಾಕೆಂದರೆ ಬಸ್ಸಿಳಿದಮೇಲೆ ನಮ್ಮೂರಿಗೆ ನಾಲ್ಕು ಮೈಲಿ ನಡೆಯಬೇಕಿತ್ತು. ನನಗೆ ಮೊದಲಿಂದಲೂ ದೆವ್ವಗಳೆಂದರೆ ಭಯ. ನಮ್ಮೂರಿಗೆ ತಲುಪಲು ಆ ದಿನಗಳಲ್ಲಿ ಕಾಡು ಮೇಡು ಬೆಟ್ಟ ಗುಡ್ಡ ನದಿ ಸರೋವರಗಳನ್ನು ದಾಟಲೇ ಬೇಕಿತ್ತು. ದೆವ್ವಗಳಲ್ಲಿ ನಂಬಿಕೆಯಿಲ್ಲದವರಿಗೆ ಸಹಾ ರಾತ್ರಿವೇಳೆ ಅದರಲ್ಲಿ ನಂಬಿಕೆ ಬರುವಂತೆ ಮಾಡಬಲ್ಲ ದುರ್ಗಮ ದಾರಿಯದಾಗಿತ್ತು.

ಆದರೆ ಈಬಾರಿ ನನಗೆ ರಾತ್ರಿಯಲ್ಲಿ ತಲುಪುವಂತ ಬಸ್ಸನ್ನೇ ಹಿಡಿಯಬೇಕಾದ ಪ್ರಸಂಗ ಬಂದಿತ್ತು. ಹಾಗಾಗಿ ರಾತ್ರಿ ಹತ್ತು ಗಂಟೆಗೆ ಬಸ್ಸಿನಿಂದಿಳಿದೆ . ಪ್ರಾಯಶಃ ಅದು ಅಮವಾಸ್ಯೆಯ ದಿನವಿರಬೇಕು. ಏಕೆಂದರೆ ಒಮ್ಮೆಲೇ ನಾನು ಕಗ್ಗತ್ತಲಿಂದ ಸುತ್ತುವರಿಯಲ್ಪಟ್ಟೆ. ಅದೃಷ್ಟವಶಾತ್ ನನ್ನ ಕೈಯಲ್ಲಿ ಟಾರ್ಚೊಂದಿತ್ತು. ಅತ್ತಿತ್ತ ನೋಡದೇ ಸೀಧಾ ನಮ್ಮೂರ ದಾರಿಹಿಡಿದೆ. ಕಾಡು ಪ್ರಾಣಿಗಳು ಕೂಗುತ್ತಿರುವ ಶಬ್ದ ಕೇಳುತ್ತಲೇ ಇತ್ತು. ಅದರಲ್ಲೂ ದೂರದ ಬೆಟ್ಟದಿಂದ ನರಿಯೊಂದು ಊಳಿಡುವ ಶಬ್ದ ಒಂದು ಬಗೆಯ ವಿಚಿತ್ರ ಭೀತಿಯನ್ನು ಸೃಷ್ಟಿಸುತ್ತಿತ್ತು. ಕಾಲ್ನಡಿಗೆಯಲ್ಲಿ ದೂರ ಪ್ರಯಾಣ ನನಗೇನೂ ಹೊಸತಲ್ಲ. ಮಲೆನಾಡಿನಲ್ಲಿ ಬೆಳೆದ ನಾನು ಅದರಲ್ಲಿ ತುಂಬಾ ಅನುಭವಸ್ಥನಾಗಿದ್ದೆ. ಆದರೆ ರಾತ್ರಿ ಪ್ರಯಾಣದ ಕಥೆಯೇ ಬೇರೆ.  ಅದರಲ್ಲೂ ಒಂಟಿ ಪ್ರಯಾಣ.  ನನ್ನ ಎದೆ ಸ್ವಲ್ಪ ನಡುಗಿದ್ದರಲ್ಲಿ ಆಶ್ಚರ್ಯವೇನಿರಲಿಲ್ಲ.

ನಮ್ಮೂರ ದಾರಿಯಲ್ಲಿ ಮೊಟ್ಟಮೊದಲು ಸೀತಾನದಿಯನ್ನು ದಾಟಿ ಮುಂದುವರಿದೆ. ರಸ್ತೆಯಲ್ಲಿ ಸ್ವಲ್ಪ ದೂರ  ಹೋದನಂತರ ಒಂದು ದುರ್ಗಮವಾದ ಕಾಡಿನ ದಾರಿಯಲ್ಲಿ ಪಯಣಿಸಬೇಕಿತ್ತು . ಆಕಾಶದೆತ್ತರಕ್ಕೆ ಬೆಳೆದ ಮರಗಳಡಿಯಲ್ಲಿ ಒಂದು ಕಾಲುದಾರಿಯ ಹರಿದು ಹೋಗಿತ್ತು.   ಎಷ್ಟೋಬಾರಿ ಈ ದಾರಿಯಲ್ಲಿ ಹಗಲು ಪ್ರಯಾಣವೇ ಭಯ ಹುಟ್ಟಿಸುತ್ತಿತ್ತು. ರಾತ್ರಿಯಂತೂ ಪ್ರತಿ ಮರದ ಹಿಂದೆ ಒಂದೊಂದು ಭೂತ ಅಡಗಿರುವಂತೆ ಅನಿಸುತ್ತಿತ್ತು . ಇಂತ ಪ್ರಯಾಣ ಏನಿದ್ದರೂ ಗಟ್ಟಿ ಎದೆಯ ನಮ್ಮ ತಂದೆಯಂತವರಿಗೆ ಮಾತ್ರಾ ಹೇಳಿಸಿದ್ದು . ನನ್ನಂತ ಅಂಜುಬುರುಕರಿಗಲ್ಲ . ಏನೇ ಇರಲಿ ಬೇಗಬೇಗ ನಡೆದು 'ಭುವನಕೋಟೆ' ಎಂಬ ಜಾಗವನ್ನು ತಲುಪಿ ನಿಟ್ಟುಸಿರು ಬಿಟ್ಟೆ . ಅಲ್ಲಿಂದ ಒಂದು  ಬೆಟ್ಟವನ್ನೇರಿ ನಮ್ಮೂರ ಗಡಿಯನ್ನು ತಲುಪಿದೆ .

ನಮ್ಮೂರ ಅಡಿಕೆ ತೋಟದ ಕಣಿವೆಯನ್ನು ಪ್ರವೇಶಿಸುತ್ತಿದ್ದಂತೆ ಒಂದು ಬಗೆಯ ನೆಮ್ಮದಿ ನನ್ನನ್ನು ಆವರಿಸಿಕೊಂಡಿತು . ಅದರಲ್ಲೂ ನಮ್ಮ ಸ್ವಂತ ತೋಟದಲ್ಲಿ ಕಾಲಿಟ್ಟಾಗ ಉಂಟಾದ ಅನುಭವ ಅಸದಳ . ಇದು ಪ್ರತಿ ಬಾರಿ ಊರಿಗೆ ಹೋದಾಗಲೂ ಆಗುವಂತದ್ದೆ . ಬಾಲ್ಯದಿಂದ ನಮ್ಮ ಒಡನಾಡಿಯಾದ ನಮ್ಮ ತೋಟದ ಮೇಲಿನ ಮಮತೆ ನಾವು ಊರು ಬಿಡುವಂತಾದಮೇಲೆ ಇನ್ನೂ ಜಾಸ್ತಿ ಆಗಿದ್ದುದರಲ್ಲಿ ಆಶ್ಚರ್ಯವೇನಿರಲಿಲ್ಲ . ಆದರೆ ಈ ಬಾರಿಯ ರಾತ್ರಿ ಪ್ರವೇಶ ನಿಜವಾಗಿಯೂ ವಿಶೇಷವಾಗಿತ್ತು . 

ನಮ್ಮ ಮನೆಯನ್ನು ಸೇರುವ ಮೊದಲು ನಾನು ತೋಟದಲ್ಲಿದ್ದ ಒಂದು ವಿಶಾಲವಾದ ಕೆರೆಯ ದಂಡೆಯ ಮೇಲೆ ಹಾದು ಹೋಗಬೇಕಿತ್ತು. ಈ ಕೆರೆಯ ಹೆಸರು ಕಪ್ರಣೆಕೆರೆ. ಈ ಕೆರೆಗೆ ಇಂತಹ ವಿಚಿತ್ರ ಹೆಸರಿಡಲು ಕಾರಣ ಮಾತ್ರ ಯಾರಿಗೂ ಗೊತ್ತಿರಲಿಲ್ಲ. ಆದರೆ ಈ ಕೆರೆಯ ವಿಶೇಷವೊಂದಿತ್ತು. ನಮ್ಮೂರಿನ ಎಲ್ಲಾ ಕೆರೆಗಳ ನೀರು ಸಾಮಾನ್ಯವಾಗಿ ನೀಲವರ್ಣವಾಗಿದ್ದರೆ ಈ ಕೆರೆಯದು ಮಾತ್ರಾ ಕಪ್ಪು ಬಣ್ಣವಾಗಿತ್ತು ! ಇಂತಹ ಕಡು ಕಪ್ಪು ಬಣ್ಣ ಈ ಕೆರೆಯ ನೀರಿಗೆ ಬರಲು ಯಾವುದೋ  ರಹಸ್ಯಾತ್ಮಕ ಕಾರಣವಿದ್ದಿರಬೇಕೆಂದು ನಮಗೆಷ್ಟೋ ಬಾರಿ ಅನಿಸುತ್ತಿತ್ತು . ಕೆಲವು ಬಾರಿ ಹಗಲಿನಲ್ಲಿ ಕೂಡಾ ಈ ಕೆರೆಯ ದಂಡೆಯ ಮೇಲೆ ಹೋಗುವಾಗ ಒಂದು ಬಗೆಯ ಭೀತಿ ನಮ್ಮನ್ನಾವರಿಸುತ್ತಿತ್ತು . ಈ ಕೆರೆಯು ತನ್ನ  ಗರ್ಭದಲ್ಲಿ ಒಂದು ರಹಸ್ಯವನ್ನು ಅಡಗಿಸಿಕೊಂಡಿತ್ತೇ  ಎಂಬ ಪ್ರಶ್ನೆಗೆ ಉತ್ತರ ವಿರಲಿಲ್ಲ.

ಅದಿರಲಿ. ನಾನು ಮಾತ್ರಾ ಕೆರೆಯ ನೀರಿನ ಕಡೆಗೆ ಕೊಂಚವೂ ದೃಷ್ತಿಹಾಯಿಸದೆ ದಂಡೆಯ ಮೇಲೆ ಬಿರಬಿರನೆ ನಡೆಯತೊಡಗಿದೆ . ಆದರೆ ಎಷ್ಟೇ ಪ್ರಯತ್ನಿಸಿದರೂ ಕೆರೆಯೊಳಗಿನ ಕಪ್ಪು ನೀರಿನ ಭೀತಿ ನನ್ನಿಂದ ತೊಲಗಲಿಲ್ಲ . ಅಷ್ಟು ಮಾತ್ರವಲ್ಲ . ಇದ್ದಕ್ಕಿದ್ದಂತೆ ನನಗೆ ನಡುನೀರಿನಿಂದ ಯಾವುದೋ ಹೆಂಗಸಿನ ನರಳುವ ಶಬ್ದ ಸ್ಪಷ್ಟವಾಗಿ ಕೇಳತೊಡಗಿತು . ನನ್ನ ಮೈ ರೋಮಗಳು ನಿಗರಿ ಹೃದಯದ ಬಡಿತವೇ ನಿಂತಂತಾಯಿತು. ಆ ಶಬ್ದವನ್ನು ನಿರ್ಲಕ್ಷಿಸಿ ಬೇಗಬೇಗನೆ ನಡೆಯಲು ಪ್ರಯತ್ನಿಸಿದೆ. ಅದು ಸಾಧ್ಯವಾಗಲಿಲ್ಲ ಮಾತ್ರವಲ್ಲ ನರಳುವ ಶಬ್ದ ಇನ್ನೂ ಜೋರಾಗಿ ಕೇಳತೊಡಗಿತು. ನನ್ನ ಬುದ್ದಿ ನನಗೆ ಸುಮ್ಮನೆ ಮುಂದುವರಿಯುವಂತೆ ಹೇಳುತ್ತಿದ್ದರೂ ನನ್ನ ಕಣ್ಣು ಮಾತ್ರ ಕುತೂಹಲ ತಾಳಲಾರದೆ ಕೆರೆಯತ್ತ ನೋಡಿಯೇ ಬಿಟ್ಟಿತು. ಓ! ಅಲ್ಲಿ ಕಂಡ ದೃಶ್ಯ ನನ್ನನ್ನು ಚಲಿಸದ ಬೊಂಬೆಯಾಗಿ ಮಾಡಿಬಿಟ್ಟಿತು!

ಆಗ ನನಗೆ ಇದ್ದಕ್ಕಿದ್ದಂತೆ ನಮ್ಮ ಅಮ್ಮ ಆಗಾಗ ಹೇಳುತ್ತಿದ್ದ ಕಥೆಯೊಂದು ನೆನಪಾಯಿತು. ನಿಜವಾಗಿ ಹೇಳುವುದಾದರೆ  ಅದು ಕಥೆಯಲ್ಲ; ನಮ್ಮ ಸಂಸಾರದಲ್ಲಿ ನಡೆದ ಒಂದು ದುರ್ಘಟನೆ . ನನ್ನ ತಂದೆಯ ಅಮ್ಮನಿಗೆ ಇಬ್ಬರು ತಂಗಿಯರಿದ್ದರು. ದುರದೃಷ್ಟವಶಾತ್  ಇಬ್ಬರೂ ಬಾಲವಿಧವೆಯರಾಗಿದ್ದರು. ದೊಡ್ಡವಳ ಹೆಸರು ಗಿರಿಜಮ್ಮ  ಮತ್ತು ಚಿಕ್ಕವಳ ಹೆಸರು ನಾಗಕ್ಕ. ನಾನು ಚಿಕ್ಕವನಿದ್ದಾಗ ಈ ಗಿರಿಜಮ್ಮನನ್ನು ನೋಡಿದ್ದೆ . ತುಂಬಾ ಗೌರವ ವ್ಯಕ್ತಿತ್ವ ಹೊಂದಿದ್ದ ಅವರು ಅವರ ಅಣ್ಣನ ಮಗನ ಮನೆಯಾದ ಸಂಪಿಗೆಕೊಳಲು ಎಂಬ ನಮ್ಮ ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದರು. ನಮ್ಮ ಸಂಸಾರವನ್ನು ತುಂಬಾ ಪ್ರೀತಿಸುತ್ತಿದ್ದ ಅವರು ನಮಗೆ ಎಷ್ಟೋ ಉಪಕಾರಗಳನ್ನು ಮಾಡಿದ್ದರು. ಯಾರಿಗೂ ಹೆದರದ ನಮ್ಮ ತಂದೆ ಅವರ ಈ ಚಿಕ್ಕಮ್ಮನ ಎದುರಿನಲ್ಲಿ ಗಟ್ಟಿಯಾಗಿ ಉಸಿರಾಡಲೂ ಭಯ ಪಡುತ್ತಿದ್ದರು!

ಚಿಕ್ಕವಳಾದ ನಾಗಕ್ಕ ಮಾತ್ರಾ ನಾನು ಹುಟ್ಟುವ ಮೊದಲೇ ತೀರಿಕೊಂಡಿದ್ದಳು. ನಮ್ಮಮ್ಮ ಆಗಾಗ ಅವಳ ಹೆಸರು ಹೇಳುತ್ತಿದ್ದಳು. ಪ್ರಾಯಶಃ ಇಬ್ಬರೂ ಸ್ನೇಹಿತೆಯರಾಗಿದ್ದಿರಬೇಕು. ನಾಗಕ್ಕ ಅವಳ ಅಕ್ಕನೊಂದಿಗೆ ಸಂಪಿಗೆಕೊಳಲಿನಲ್ಲಿ ವಾಸಿಸುತ್ತಿದ್ದಳಂತೆ. ಆದರೆ ಅವಳ ಸಾವು ಅಸಾಧಾರಣ ರೀತಿಯಲ್ಲಿ ಆಗಿತ್ತು. ಒಂದು ದಿನ ಬೆಳಿಗ್ಗೆ ಅವಳ ಶವ ಕಪ್ರಣೆಕೆರೆಯಲ್ಲಿ ತೇಲುತ್ತಿತ್ತು. ನಮಗೆಲ್ಲ ಅವಳ ಸಾವಿನ ಕಾರಣಗಳ ಬಗ್ಗೆ ವಿಶೇಷ ಕುತೂಹಲವಿದ್ದರೂ ನಮ್ಮಮ್ಮ ಮಾತ್ರಾ ಆ ಬಗ್ಗೆ ತುಟಿ ಪಿಟಕ್ ಎನ್ನುತ್ತಿರಲಿಲ್ಲ. ಅವಳು ಅದನ್ನು ರಹಸ್ಯವಾಗಿಡಲು ಪ್ರಯತ್ನಿಸುತ್ತಿದ್ದಳೆಮ್ಬುದರಲ್ಲಿ ಯಾವುದೇ ಅನುಮಾನವಿರಲಿಲ್ಲ. ಹೀಗಾಗಿ ನಾಗಕ್ಕ ನಮ್ಮ ಬಾಲ್ಯದ ಒಬ್ಬ ರಹಸ್ಯಾತ್ಮಕ ವ್ಯಕ್ತಿಯಾಗಿಬಿಟ್ಟಿದ್ದಳು. ನಾವು ಕೇವಲ ಅವಳ ಬಗ್ಗೆ  ಕಲ್ಪನೆ ಮಾಡಬಹುದಾಗಿತ್ತು. ಏಕೆಂದರೆ ಆಗಿನ ಕಾಲದಲ್ಲಿ ಮನೆಯಲ್ಲಿ ಯಾವುದೇ ಫೋಟೋಗಳು ಇರುತ್ತಿರಲಿಲ್ಲ.

ಆದರೆ ನನಗೆ ಇದ್ದಕ್ಕಿದ್ದಂತೆ ಅವಳ ಫೋಟೋದ ಅವಶ್ಯವಿಲ್ಲದಂತಾಗಿ ಬಿಟ್ಟಿತು! ಏಕೆಂದರೆ ನನಗೆ ಆ ರಾತ್ರಿ ಕೆರೆಯ ಮಧ್ಯದಲ್ಲಿ ಕಂಡ ವ್ಯಕ್ತಿ ನಾಗಕ್ಕನಲ್ಲದೆ ಬೇರೆಯಾರಿರಲು ಸಾಧ್ಯವಿರಲಿಲ್ಲ. ಓ! ಆ ಭಯಾನಕ ರಾತ್ರಿಯಲ್ಲಿ ಕೆರೆಯ ನಟ್ಟ ನಡುವಿನಲ್ಲಿ ಶ್ವೇತವರ್ಣದ ಸೀರೆಯುಟ್ಟು ನನ್ನ ಮುಂದೆ ಪ್ರತ್ಯಕ್ಷಳಾದ ಸುಂದರ ಬಾಲ ವಿಧವೆ ನಾಗಕ್ಕನಲ್ಲದೆ ಇನ್ನಾರು? ನನ್ನ ಬುದ್ಧಿ ಪುನಃ ನನಗೆ ಅಲ್ಲಿಂದ ಓಡಿಹೋಗುವಂತೆ ಮತ್ತು ಕೆರೆಯ ಕಡೆ ಪುನಃ ನೋಡದಂತೆ ಹೇಳತೊಡಗಿತು. ಆದರೆ ನನ್ನಿಂದ ಅದು ಸಾಧ್ಯವಾಗಲಿಲ್ಲ. ಅಷ್ಟರಲ್ಲೇ ಆ ಶ್ವೇತವಸ್ರಧಾರಿ ಸುಂದರಿ  ನನ್ನನ್ನು ನಿಲ್ಲುವಂತೆ ಹೇಳುತ್ತಾ ನೀರಿನ ಮೇಲೆಯೇ ನನ್ನತ್ತ ನಡೆದು ಬರತೊಡಗಿದಳು. ಇನ್ನೇನು ನನ್ನನ್ನು ತಲುಪಿಯೇ ಬಿಟ್ಟಳು!

ಆ ನಡು ರಾತ್ರಿಯಲ್ಲಿ ಕೂಡಾ ಪ್ರಾಯಶಃ ನನ್ನ ಕುತೂಹಲ ನನ್ನ ಭಯವನ್ನು ಮೀರಿತೆಂದು ಅನ್ನಿಸುತ್ತದೆ . ಹಾಗೆಯೇ ನಾನು ನಾಗಕ್ಕನ ಪ್ರೇತಾತ್ಮ ನನ್ನ ಹತ್ತಿರ ಬರುವವರೆಗೆ ಕಾದೆ. ನನಗೆ ಖಂಡಿತವಾಗಿ ಅದು ಅವಳ ಆತ್ಮವಲ್ಲದೆ ಶರೀರವಾಗಿರಲಿಕ್ಕಿಲ್ಲವೆಂದು ಅನ್ನಿಸಿತ್ತು . ಅದು ಏನೇ ಇರಲಿ; ಆ ವ್ಯಕ್ತಿ ನನ್ನ ಬಳಿ ಬಂದು ನಾನು ಕುಳಿತುಕೊಂಡು ಅವಳ ಕಥೆಯನ್ನು ಕೇಳಬೇಕೆಂದು ಸನ್ನೆ ಮಾಡಿತು.

ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ . ಆದರೆ ನಾನು ಮಾತ್ರಾ ಆ ರಾತ್ರಿ ನಾಗಕ್ಕ ನನಗೆ ಖುದ್ದಾಗಿ ಹೇಳಿದ ಕಥೆಯನ್ನು ಸಂಪೂರ್ಣವಾಗಿ ನಂಬಿದೆ. ಮಾತ್ರವಲ್ಲ ನಮ್ಮ ಸಂಸಾರದಲ್ಲಿ ಎಷ್ಟೋ ವರ್ಷಗಳ ಹಿಂದೆ ನಡೆದ ದುರಂತಕ್ಕೆ ನಾಗಕ್ಕ ಹೊಣೆಯಲ್ಲ ಎಂಬ ಸತ್ಯವನ್ನರಿತೆ. ಆ ಕಥೆಯನ್ನು ಅವಳು ಹೇಳಿದಂತೆ ಮುಂದೆ ಬರೆದಿದ್ದೇನೆ :

ನಾನು ಮೊದಲೇ ಹೇಳಿದಂತೆ ನಾಗಕ್ಕ ಮೂರು ಜನ ಹೆಣ್ಣು ಮಕ್ಕಳಲ್ಲಿ ಕಿರಿಯವಳಾಗಿದ್ದಳು. ಹಾಗೆಯೇ ಅವಳು ಎಲ್ಲರಿಗಿಂತ ತುಂಬಾ ಸುಂದರಿಯೂ ಆಗಿದ್ದಳು. ಆಗಿನ ಕಾಲದ ವಾಡಿಕೆಯಂತೆ ಅವಳಿಗೆ ಕೂಡಾ ಎಂಟು ವರ್ಷಕ್ಕೇ ಮದುವೆಯೂ ಆಯಿತು . ಅಂದಿನ ಕ್ರಮದಂತೆ ಅವಳು 'ದೊಡ್ಡವಳು ' ಆದಮೇಲೆ ನಿಷೇಕ  ಪ್ರಸ್ಥದ ನಂತರ  ಮಾವನಮನೆ ಸೇರಬೇಕಾಗಿತ್ತು. ಆದರೆ ದುರದೃಷ್ಟವಶಾತ್ ಆ ಪ್ರಮೇಯವೇ ಬರಲಿಲ್ಲ. ನಾಗಕ್ಕನಿಗೆ  ಮದುವೆ ಎಂದರೆ ಏನೆಂದು ತಿಳಿಯುವ ವಯಸ್ಸು ಬರುವುದರೊಳಗೇ ಅವಳ ಗಂಡ ಇಹ ಲೋಕವನ್ನು ತ್ಯಜಿಸಿ ಬಿಟ್ಟಿದ್ದ. ಇದು ಆ ಸಂಸಾರಕ್ಕೆ ಇನ್ನೊಂದು ಆಘಾತವಾಗಿತ್ತು. ಏಕೆಂದರೆ ನಾಗಕ್ಕನ ಅಕ್ಕ ಆಗಲೇ ವಿಧವೆಯಾಗಿ ತವರುಮನೆ ಸೇರಿದ್ದಳು.

ನಾಗಕ್ಕನ ಅಕ್ಕ ಗಿರಿಜಮ್ಮ ವಿಧವಾ ಜೀವನಕ್ಕೆ ಹೊಂದಿಕೊಂಡು ಬಿಟ್ಟಿದ್ದಳು. ಮನೆಯಲ್ಲಿ ನಡೆಯುತ್ತಿದ್ದ ದೈನಂದಿನ ಎಲ್ಲಾ ಕೆಲಸ ಕಾರ್ಯಗಳಲ್ಲೂ ಸೇರಿಕೊಂಡು ತಾನೊಬ್ಬ ವಿಧವೆ ಎಂಬ ಮನೋಭಾವನೆ  ಬಾರದಂತಿದ್ದಳು. ಹಾಗಾಗಿ ಅವಳಿಗೆ ಜೀವನದಲ್ಲಿ ಯಾವುದೇ ಕುಂದು ಕೊರತೆ ಇದ್ದಂತನಿಸಲಿಲ್ಲ. ಆದರೆ ನಾಗಕ್ಕನ ವಿಷಯ ಬೇರೆಯೇ ಆಗಿತ್ತು. ಅವಳಿಗೆ ವಿಧವಾ ಜೀವನ ಒಂದು ಶಾಪದಂತೆ ಅನಿಸುತ್ತಿತ್ತು ನವತಾರುಣ್ಯದಲ್ಲಿದ್ದ ಅವಳಿಗೆ ಆ ವಯಸ್ಸಿಗೆ ಇರಬೇಕಾದ ಆಸೆಗಳೆಲ್ಲಾ ದೇಹ ಹಾಗೂ ಮನಸ್ಸಿನಲ್ಲಿ ಸೇರಿಕೊಂಡಿದ್ದವು. ಆದರೆ ಬಾಲವಿಧವೆಯಾದ ತನಗೆ ಯಾವುದೇ ಸುಖ ಸಿಗುವಂತಿಲ್ಲವೆಂದು ಮನಸ್ಸು ಪರಿತಪಿಸುತ್ತಿತ್ತು.

ಆಗಿನ ಕಾಲದಲ್ಲಿ ಬಾಲ ವಿಧವೆಯರಿಗೆ ಒಂದು ರಿಯಾಯಿತಿ ಇತ್ತು. ಅವರು ಕೆಂಪು ಸೀರಯುಡದೆ ಬಿಳೇ ಸೀರೆಯುಡಬಹುದಿತ್ತು ಮತ್ತು ಕೂದಲು ತೆಗೆಸಬೇಕಿರಲಿಲ್ಲ. ನಾಗಕ್ಕನಿಗೆ ಅದೊಂದು ದೊಡ್ಡ ನೆಮ್ಮದಿಯೇ ಆಗಿತ್ತು. ಬಿಳೇ ಸೀರೆ ಮತ್ತು ಜಡೆಯೊಂದಿಗೆ ಅವಳು ನವ ತರುಣಿಯಂತೆ ಕಾಣುತ್ತಿದ್ದಳು. ಆದರೆ ಅವಳಿಗೆ ಕೂಡಾ ವಯಸ್ಸಿಗೆ ಸಹಜವಾದ ಅಭಿಲಾಷೆಗಳು ಮೂಡತೊದಗಿದ್ದವು. ಸಮಾನ ವಯಸ್ಸಿನ ಹುಡುಗರ ಆಕರ್ಷಣೆ ಮತ್ತು ಅವರೊಡನೆ ಬೇರೆಯಬೇಕೆಂಬ ಆಸೆಗಳು ಬರತೊದಗಿದ್ದರಲ್ಲಿ ಆಶ್ಚರ್ಯವೇನಿರಲಿಲ್ಲ .

ಆದರೆ ಆ ಸಂದರ್ಭದಲ್ಲೇ ಅವಳ ಸಂಸಾರದಲ್ಲಿ ನಡೆದ ಒಂದು ದುರ್ಘಟನೆ ಅವಳ ಮನಸ್ಸಿಗೆ ದೊಡ್ಡ ಆಘಾತ ತಂದಿತು. ನಾಗಕ್ಕನ ದೊಡ್ಡ ಅಕ್ಕನ ಕಿರಿಯ ಮಗಳು ಲಕ್ಷ್ಮಿ  ಕೂಡಾ ಬಾಲ ವಿಧವೆಯಾಗಿದ್ದಳು. ಅವಳು ಗರ್ಭಿಣಿ ಆಗಿರುವ ಸಮಾಚಾರ ಇದ್ದಕ್ಕಿದ್ದಂತೆ ಹೊರಬಂತು. ಗರ್ಭಪಾತಮಾಡಿಸುವ ಎಲ್ಲ ಪ್ರಯತ್ನಗಳೂ ವಿಫಲವಾಗಿ ಅವಳೊಂದು ಗಂಡುಮಗುವಿಗೆ ಜನ್ಮವಿತ್ತೇ ಬಿಟ್ಟಳು .

ಆ ಮಗುವಿನ ಜನನ ಸಂತೋಷಕ್ಕೆ ಬದಲಾಗಿ ಒಂದು ದುರಾದೃಷ್ಟದ ಪರಮಾವಧಿಯಂತಿತ್ತು. ಮನೆಯ ವಾತಾವರಣ ಸತ್ತ ಸೂತಕಕ್ಕಿಂತ ಕೆಟ್ಟದಾಗಿತ್ತು. ಆಗಿನ ಕಾಲದ ನಿಯಮದಂತೆ ಹಿರಿಯರೆಲ್ಲಾ ಸೇರಿ ಲಕ್ಷ್ಮಿಯ 'ಘಟಶ್ರಾದ್ಧಕ್ಕೆ' ತಯಾರಿ ನಡೆಸಿಯೇ ಬಿಟ್ಟರು. ಅವಳನ್ನು ವಿಧಿವತ್ತಾಗಿ ಕುಲದಿಂದ ಹೊರಹಾಕಲಾಯಿತು. ಆಗಿನ ಸಮಾಜ ಈ ವಿಷಯದಲ್ಲಿ ಯಾವುದೇ ಕರುಣೆ ಅಥವಾ ದಯೆ ತೋರಿಸಲಿಲ್ಲ.

ಈ ಪ್ರಸಂಗ ನಾಗಕ್ಕನಲ್ಲಿ ಬಹು ದೊಡ್ಡ ಬದಲಾವಣೆ ತಂದು ಬಿಟ್ಟಿತು. ಅವಳಿಗೆ ಹುಡುಗರ ಆಕರ್ಷಣೆ ಕಡಿಮೆಯಾದದ್ದು ಮಾತ್ರವಲ್ಲ ಗಂಡು ಜಾತಿಯಮೇಲೆಯೇ ದ್ವೇಷ ಬಂತು. ಅವಳು ನೋಡಿದಂತೆ ನಿಸ್ಸಹಾಯಕಳಾದ ಲಕ್ಷ್ಮಿಗೆ ಕಠಿಣ ಶಿಕ್ಷೆಕೊಟ್ಟ ಸಮಾಜ ಅವಳ ಆ ಸ್ಥಿತಿಗೆ ಕಾರಣನಾದ ಗಂಡಸಿಗೆ ಯಾವುದೇ ಶಿಕ್ಷೆ ನೀಡುವ ಬಗ್ಗೆ ಯೋಚಿಸಲಿಲ್ಲ ಕೂಡ! ನಾಗಕ್ಕನಿಗೆ ಇದ್ದಕ್ಕಿದ್ದಂತೆ ಜೀವನದಲ್ಲಿ ಜಿಗುಪ್ಸೆ ಬಂದು ಬಿಟ್ಟಿತು. ಅವಳೋರ್ವ ಅಂತರ್ಮುಖಿಯಾಗಿಬಿಟ್ಟಳು.

ಸರಿಯಾಗಿ ಅದೇ ಸಮಯಕ್ಕೆ ನಾಗಕ್ಕನ ಮೇಲೆ  ಊರಿನ ಖೂಳನೊಬ್ಬನ ದೃಷ್ಟಿ ಬಿತ್ತು. ಅವನ ಹೆಸರು ಶೀನ. ಅವನು ನಾಗಕ್ಕನಮೇಲೆ ಕಣ್ಣಿಟ್ಟಿದ್ದ. ನಾಗಕ್ಕನಿಗೆ ಮೊದಲು ಅದರ ಅರಿವಿರಲಿಲ್ಲ. ಗೊತ್ತಾದ ನಂತರವೂ ಅವನನ್ನು ನಿರ್ಲಕ್ಷಿಸಲು ಪ್ರಯತ್ನಿಸಿದಳು. ಆದರೆ ಅವನು ಯಾವುದೇ ನಾಚಿಕೆ ಇಲ್ಲದೇ ತನ್ನ ಹೀನ ಪ್ರಯತ್ನಗಳನ್ನು ಮುಂದುವರಿಸುತ್ತಲೇ ಇದ್ದದ್ದು ಅವಳ ಅರಿವಿಗೆ ಬಂತು.

ಇದ್ದಕ್ಕಿದ್ದಂತೆ ನಾಗಕ್ಕ ಕಾಹಿಲೆ ಬಿದ್ದಳು. ಕಾಹಿಲೆ ವಾಸಿಯಾಗಲು ತುಂಬಾ ಸಮಯವೇ ಹಿಡಿಯಿತು. ವಾಸಿಯಾದ ನಂತರವೂ ಅವಳಿಗೆ ತನ್ನ ದೇಹದಲ್ಲಿ ಏನೋ ಬದಲಾವಣೆ ಆದಂತೆ  ಅನಿಸಿತು. ಸೂಕ್ಸ್ಮವಾಗಿ ಗಮನಿಸಿದಾಗ ತನ್ನ ಹೊಟ್ಟೆ ಉಬ್ಬರಿಸಿಕೊಂಡಿರುವುದು ಗೋಚರಿಸಿತು. ಮೊದಮೊದಲು ಅದು ಅವಳಿಗೆ ಕೇವಲ ಒಂದು ಮುಜುಗರ ಅನಿಸಿತ್ತು. ಆದರೆ ಆಳವಾಗಿ ಯೋಚಿಸಿದಾಗ ಅವಳಿಗೆ ಸಮಾಜ ಅದನ್ನು ಹೇಗೆ ಪರಿಗಣಿಸುವುದೆಂಬ ಸೂಕ್ಷ್ಮದ ಅರಿವಾಯಿತು. ತಾನು ಎಂತಹಾ ಅಪಾಯ ಪರಿಸ್ತಿತಿಯಲ್ಲಿದ್ದೇನೆಂಬ ವಿಷಯವೂ ಮನದಟ್ಟಾಯಿತು.

ಅವಳೆಣಿಸಿದಂತೆ ಸ್ವಲ್ಪ ಸಮಯದನಂತರ ಊರಿನಲ್ಲಿ ಅವಳ ಬಗ್ಗೆ ಗುಸಗುಸನೆ ಪಿಸಪಿಸನೆ ಮಾತನಾಡುತ್ತಿರುವ ಸಮಾಚಾರ ಅವಳ ಕಿವಿಗೆ ಬಿತ್ತು. ಅವಳು ಗಂಗೆಯಂತೆ ಪರಿಶುದ್ಧಳೆನ್ನುವ ವಿಷಯ ಅವಳಿಗೆ ಗೊತ್ತಿದ್ದರೂ ಸಮಾಜಕ್ಕೆ ಅದನ್ನು ತಿಳಿಹೇಳುವುದು ಸಾಧ್ಯವಿರಲಿಲ್ಲ. ಇದೇ ವೇಳೆಯಲ್ಲಿ ಶೀನನ ದುಷ್ಟ ನೆರಳು ಅವಳನ್ನು ಹಿಂಬಾಲಿಸುತ್ತಲೇ ಇತ್ತು. ಕಾಡು ಪ್ರಾಣಿ ತನ್ನ ಬಲಿಪಶುವಿಗೆ ಕಾಯುತ್ತಿದ್ದಂತೆ ಅವನೂ ಹೊಂಚು ಹಾಕುತ್ತಲೇ ಇದ್ದ. 

ಅದೊಂದು ಭಯಾನಕ ಕಾಳ ರಾತ್ರಿ. ನಾಗಕ್ಕನ ವಿನಹ ಉಳಿದವರೆಲ್ಲಾ ಊರಿನ ದೇವಸ್ಥಾನದಲ್ಲಿ ನಡೆಯುತ್ತಿದ್ದ ದೀಪಾರಾಧನೆಗೆ ಹೋಗಿದ್ದರು. ನಾಗಕ್ಕ ಅಂತಹ ಸಮಾರಂಭಗಳಿಗೆ ಹೋಗುವುದನ್ನು ನಿಲ್ಲಿಸಿದ್ದಳು. ಇದ್ದಕ್ಕಿದ್ದಂತೆ ಅವಳಿಗೆ ಯಾರೋ  ಬಾಗಿಲು ಬಡಿಯುತ್ತಿರುವುದು ಕೇಳಿಸಿತು. ಕಿಟಕಿಯಿಂದ ನೋಡಿದ ಅವಳಿಗೆ ಅದು ಶೀನನೇ ಇರಬೇಕೆಂಬ ಬಗ್ಗೆ ಯಾವುದೇ ಸಂಶಯ ಉಳಿಯಲಿಲ್ಲ. ಹಸಿದ ದುಷ್ಟ ಮೃಗ ತನ್ನ ಬಲಿ ಕೈಗೆ ಬಿತ್ತೆಂಬ ಉತ್ಸಾಹದಲ್ಲಿತ್ತು.

ಒಂದು ನಿಮಿಷವೂ ತಡಮಾಡದೇ ನಾಗಕ್ಕ ಹಿಂಬಾಗಿಲಿನಿಂದ ಹೊರಬಿದ್ದು ಓಡ ತೊಡಗಿದಳು. ಅವಳ ಗುರಿ ಅವಳ ಮನೆಯ ಸ್ವಲ್ಪ ದೂರದಲ್ಲಿದ್ದ ಅವಳ ಅಕ್ಕನ ಮಗನ ಮನೆಯಾಗಿತ್ತು. ಆದರೆ  ದುರದೃಷ್ಟವಶಾತ್ ಮನೆಯ ಬಾಗಿಲಿಗೆ ಬೀಗಹಾಕಿ ಎಲ್ಲರೂ ದೀಪಾರಾಧನೆಗೆ ಹೋಗಿದ್ದರು. ನಾಗಕ್ಕನಿಗೆ ಅಲ್ಲಿಂದ ಎಲ್ಲಿಗೆ ಹೋಗಬೇಕೆಂದು ತಿಳಿಯಲಿಲ್ಲ . ಆದರೆ ಅಷ್ಟರಲ್ಲೇ ಅವಳಿಗೆ ಶೀನನ ಹೆಜ್ಜೆಯ ಸದ್ದು ಹತ್ತಿರದಲ್ಲೇ ಕೇಳತೊಡಗಿತು.

ಸ್ವಲ್ಪವೂ ತಡಮಾಡದೇ ನಾಗಕ್ಕ ಮನೆಯ ಮುಂದಿದ್ದ ತೋಟಕ್ಕೆ ಜಿಗಿದು ಓಡ ತೊಡಗಿದಳು. ಅವಳ ಶಕ್ತಿ ಕುಂದಿಹೋಗಿ ನಾಲಗೆ ಒಣಗಿ ಓಟದ ವೇಗ ಕಡಿಮೆಯಾಗತೊಡಗಿತು. ಬೇಗನೆ ಅವಳು ಕಪ್ರಣೆಕೆರೆಯ ದಂಡೆ ಸೇರಿದಳು. ಹಿಂದೆ ತಿರುಗಿ ನೋಡಿದ ಅವಳಿಗೆ ಶೀನನು ತನ್ನನ್ನು ಸಮೀಪಿಸುತ್ತಿರುವುದು ಕಾಣಿಸಿತು. ಈಗ ಅವಳಿಗೆ ಯೋಚಿಸಲೂ ಸಮಯವಿರಲಿಲ್ಲ. ಸೀದಾ ಕೆರೆಯೊಳಗೆ ಹಾರಿಯೇ ಬಿಟ್ಟಳು. ಅವಳಿಗೆ ಈಜು ಗೊತ್ತಿರಲಿಲ್ಲ. ನೀರಿನೊಳಗಿಂದ ಎರಡುಬಾರಿ ಮೇಲೆಬಂದ ಅವಳಿಗೆ ಶೀನ ದಡದಲ್ಲಿ ನಿಂತಿರುವುದು ಸ್ಪಷ್ಟವಾಗಿ ಕಾಣಿಸಿತು. ಮೂರನೇ ಬಾರಿ ಅವಳು ಮೇಲೆ ಬರಲಿಲ್ಲ. ಅವಳ ಭೂಲೋಕ ಪಯಣ ಕೊನೆಗೊಂಡಿತ್ತು.

ದೀಪಾರಾಧನೆಯಿಂದ ಹಿಂದಿರುಗಿ ಬಂದ ಮನೆಯವರಿಗೆ ನಾಗಕ್ಕ ಮನೆಯಲ್ಲಿಲ್ಲದ ಅರಿವಾಯಿತು. ಹಾಗೆಯೇ ಮನೆಯ ಹಿಂಬಾಗಿಲು ತೆರೆದಿರುವುದು ಗೊತ್ತಾಯಿತು. ಆದರೆ ಇಡೀ ರಾತ್ರಿ ಹುಡುಕಿದರೂ ಅವಳ ಸುಳಿವು ಸಿಗಲಿಲ್ಲ. ಬೆಳಗಾದಮೇಲೆ ಅವಳ ಹೆಣ ಕಪ್ರಣೆಕೆರೆಯಲ್ಲಿ  ತೇಲುತ್ತಿದ್ದುದು ಕಣ್ಣಿಗೆ ಬಿತ್ತು. ಊರಿನವರೆಲ್ಲಾ ಅವಳು ಗರ್ಭಿಣಿ ಆಗಿದ್ದೇ ಅವಳ ಆತ್ಮಹತ್ಯಕ್ಕೆ ಕಾರಣವಿರಬೇಕೆಂದು ಯೋಚಿಸಿದರು. ಹಾಗೆಯೇ  ಲಕ್ಷ್ಮಿಗೆ ಮಾಡಿದಂತೆ ತನಗೂ ಘಟಶ್ರಾದ್ಧ ಮಾಡಬಹುದೆಂಬ ಭಯವೇ ಅವಳ ಮರಣಕ್ಕೆ ಕಾರಣವಾಯಿತೆಂದು ತೀರ್ಮಾನಿಸಿಬಿಟ್ಟರು.ಯಾರಾದರೂ ವೈದ್ಯರು ಶವ ಪರೀಕ್ಷೆ ಮಾಡಿದ್ದರೆ ಸತ್ಯ ಹೊರಬೀಳುತ್ತಿತ್ತು. ಆದರೆ ನಾಗಕ್ಕ ಗಂಗಾ ಜಲದಂತೆ ಪರಿಶುದ್ಧಳೆನ್ನುವ ವಿಷಯ ಜಗತ್ತಿಗೆ ಗೊತ್ತಾಗಲೇ ಇಲ್ಲ.

ಇಲ್ಲಿಗೆ ಕಥೆ ಮುಗಿಸಿದ ನಾಗಕ್ಕ ಒಂದೇ ಒಂದು ಬೇಡಿಕೆಯನ್ನು ನನ್ನ ಮುಂದೆ ಇಟ್ಟಳು. ಅದೆಂದರೆ ಅವಳು ಜೀವನದಲ್ಲಿ ಯಾವುದೇ ತಪ್ಪು ಮಾಡಿರಲಿಲ್ಲ ಮತ್ತು ಕೊನೆಯವರೆಗೂ ಪರಿಶುದ್ಧಳಾಗಿದ್ದಳೆಂದು ನಾನು ನನ್ನ ಅಮ್ಮನಿಗೆ ತಿಳಿಸಬೇಕೆಂದು. ನಾಗಕ್ಕನ ಅತ್ಯಂತ ಆತ್ಮೀಯಳಾಗಿದ್ದ ನನ್ನ ಅಮ್ಮ ಕೂಡಾ ಅವಳ ಬಗ್ಗೆ ತಪ್ಪು ತಿಳಿದಿದ್ದಳೆಂಬ ಅಂಶ ನಾಗಕ್ಕನ ಜೀವ ಕುಟುಕುತ್ತಿತ್ತು.. ಹೀಗೆ ಹೇಳುತ್ತಲೇ ನಾಗಕ್ಕನ ಆತ್ಮ ನನ್ನಿಂದ ದೂರಸರಿಯುತ್ತಾ ಕೆರೆಯ ನೀರಿನ ಮಧ್ಯದಲ್ಲಿ ಮಾಯವಾಯಿತು.

ಸ್ವಲ್ಪ ಸಮಯದಲ್ಲೇ ನಾನು ಮನೆ ಸೇರಿದೆ. ಅಮ್ಮ ನನಗಾಗಿ ಕಾತುರದಿಂದ ಕಾಯುತ್ತಿದ್ದಳು. ಅವಳು ನನಗೆ ಊಟ ಬಡಿಸುತ್ತಿರುವಾಗಲೇ ನಾನು ಅವಳಿಗೆ ನಾಗಕ್ಕನ ಕಥೆಯನ್ನು ಒಂದಕ್ಷರ ಬಿಡದೆ ಹೇಳಿಬಿಟ್ಟೆ. ಅವಳೂ ಗಮನವಿಟ್ಟು ಕೇಳುತ್ತಿರುವುದು ನನ್ನ ಅನುಭವಕ್ಕೆ ಬಂತು. ಅವಳ ಮನಸ್ಸಿಗೆ ಒಂದು ರೀತಿಯ ನೆಮ್ಮದಿ ಸಿಕ್ಕಿದುದೂ ಅವಳ ಭಾವದಲ್ಲಿ ವ್ಯಕ್ತವಾಯಿತು . ಆದರೆ ಅವಳು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಪ್ರಾಯಶಃ ಅವಳ ಮನಸ್ಸು ಅವಳ ಬಾಲ್ಯಕಾಲದ ಗೆಳತಿ ನಾಗಕ್ಕನೊಡನೆ ಕಳೆದ ದಿನಗಳನ್ನು ಮೆಲುಕು ಹಾಕತೊಡಗಿತ್ತು .

ಬೆಳಗಾಗುತ್ತಿದ್ದಂತೆ ನಾನು ಸೀದಾ ಕಪ್ರಣೆಕೆರೆಯ ಬಳಿಗೆ ಪ್ರಯಾಣ ಬೆಳೆಸಿದೆ. ಕೆರೆಯನ್ನು ಸಮೀಪಿಸುತ್ತಿದ್ದಂತೆ ನನಗೆ ನನ್ನ ಕಣ್ಣನ್ನೇ ನಂಬಲಾಗಲಿಲ್ಲ. ಇಡೀ ಕೆರೆಯ ನೀರು ನಸು ನೀಲೀವರ್ಣ ಪಡೆದುಬಿಟ್ಟಿತ್ತು! ಸ್ವಲ್ಪವೂ ಕಪ್ಪುವರ್ಣದ ಸುಳಿವೇ ಇರಲಿಲ್ಲ. ಮೂಕಸ್ಮಿಥನಾದ ನಾನು ತಲೆಯೆತ್ತಿ ಆಕಾಶದತ್ತ ನೋಡಿದೆ. ಅಲ್ಲಿ ನನಗೆ ನಾಗಕ್ಕನ ಆತ್ಮ ನನ್ನನ್ನು ಅಶೀರ್ವದಿಸುತ್ತಿದ್ದಂತೆ ಕಾಣಿಸಿತೇ? ಹೌದು. ನನ್ನ ಪ್ರಕಾರ ಅದು ನಿಜ. ಇಡೀ ಪ್ರಪಂಚಕ್ಕೆ ನಾನು ನಾಗಕ್ಕ ಗಂಗೆಯಂತೆ ಪರಿಶುದ್ಧಳೆಂದು ಸಾರಿಬಿಟ್ಟಿದ್ದೆ.