Sunday, February 24, 2019

ಒಂದು ಊರಿನ ಕಥೆ - ಕೊಪ್ಪ - 4


ಅಧ್ಯಾಯ ೪
ಅಚ್ಯುತ ಭಟ್ಟರ ಅಂಗಡಿಯ ಪಕ್ಕದಲ್ಲೇ ಸುಬ್ಬಾಭಟ್ಟರ ಅಂಗಡಿಯಿತ್ತು. ಅದು ಹೆಸರಿಗೆ ದಿನಸಿ ಅಂಗಡಿಯಾದರೂ ಅಲ್ಲಿ ಸಿಗದ ಸಾಮಾನುಗಳಿರಲಿಲ್ಲ. ನನಗೆ ತಿಳಿದಂತೆ ಸುಬ್ಬಾಭಟ್ಟರು  ಚಾರಣಬೈಲ್ ಹತ್ತಿರ ಇದ್ದ ಮೆಟ್ಲುಮನೆಯವರು. ಅವರ ಫ್ಯಾಮಿಲಿ ಆಗರ್ಭ ಶ್ರೀಮಂತ ಮನೆತನವಾಗಿತ್ತು. ಅದರಲ್ಲಿ ಕೆಲವರು ನನ್ನೊಟ್ಟಿಗೆ ಬಸವಾನಿ ಮಿಡ್ಲ್ ಸ್ಕೂಲ್ ಗೆ ಬರುತ್ತಿದ್ದರು.

ನಾವು ಚಿಕ್ಕವರಾಗಿದ್ದಾಗಲೇ ಬಸ್ ನಿಲ್ದಾಣವನ್ನು ಹೊಸದಾಗಿ ಕೆಳಗಿನ ಪೇಟೆಯಲ್ಲಿ ನಿರ್ಮಿಸಲಾಯಿತು. ಅದರ ಮೊದಲ ಜಾಗದಲ್ಲಿ ಒಂದು ಪೆಟ್ರೋಲ್ ಬಂಕ್ ಮತ್ತು ಟಾಟಾ ಮರ್ಸಿಡೆಸ್ ಬೆಂಜ್ ಸರ್ವಿಸ್ ಸೆಂಟರ್ ಗಳನ್ನು  ಕಟ್ಟಲಾಯಿತು. ಹೊಸ ಬಸ್ ನಿಲ್ದಾಣದ ಎದುರಿಗೆ ಸೀತಾರಾಮ ಎಂಬುವರ ಗೀತಾ ಕೆಫೆ ಎಂಬ ಹೋಟೆಲ್ ಇತ್ತು. ಗೀತಾ ಅವರ ಮಗಳ ಹೆಸರಂತೆ. ಮೊದಲು ಮೊದಲು ಚೆನ್ನಾಗಿಯೇ ನಡೆಯುತ್ತಿದ್ದ ಹೋಟೆಲ್ ಕ್ರಮೇಣ ನಷ್ಟ ಅನುಭವಿಸಿ ಮುಚ್ಚಲ್ಪಟ್ಟಿತು. ಸೀತಾರಾಮ  ನಮ್ಮ ತಂದೆ ಮತ್ತು ಅಣ್ಣನಿಗೆ ಆಪ್ತರಾಗಿದ್ದರು. ಅವರು ಹೋಟೆಲ್ ಪುನಃ ತೆರೆದರಾದರೂ ಅದು ಹೆಚ್ಚು ದಿನ ನಡೆಯಲಿಲ್ಲ. ಬಳಿಕ ಅವರು ಬೆಂಗಳೂರಿನಲ್ಲಿ ರಸ್ತೆ ಬದಿ ಒಂದು ಹೋಟೆಲ್ ನಡೆಸುತ್ತಿದ್ದರೆಂದು ತಿಳಿದು ಬಂತು. ಆಮೇಲಿನ ವಿಷಯ ತಿಳಿಯಲಿಲ್ಲ.
ರಘು ಹೋಟೆಲ್
ಬಸ್ ನಿಲ್ದಾಣದಲ್ಲಿ ಇದ್ದ ಹೋಟೆಲಿಗೆ ರಘು ಹೋಟೆಲ್ ಎಂದು ಕರೆಯಲಾಗುತ್ತಿತ್ತು. ಅದು ತಕ್ಕಮಟ್ಟಿಗೆ ಚೆನ್ನಾಗಿಯೇ ಇತ್ತು. ಆದಿನಗಳಲ್ಲಿ ನಮ್ಮೂರಿನ ಪುರದಮನೆಯಲ್ಲಿ ನಡೆಯುತ್ತಿದ್ದ ನವರಾತ್ರಿ ಸಮಾರಾಧನೆಗೆ ಕೆಳಕೊಪ್ಪ ಗಂಗಮ್ಮ ಎಂಬುವರು ತಮ್ಮ ಮೊಮ್ಮಕ್ಕಳಿಬ್ಬರೊಡನೆ ಬರುತ್ತಿದ್ದರು. ಅದರಲ್ಲಿ ಅಣ್ಣ ಬಹಳ ಸಾಧು. ಆದರೆ ನಮ್ಮ ಪ್ರಕಾರ ತಮ್ಮ ಒಬ್ಬ ರೌಡಿ. ಅವನು ನಮ್ಮೊಡನೆ ಹೊಡೆದಾಟ ಮಾಡುತ್ತಿದ್ದ. ನಾವು (ನಾನು ಮತ್ತು ಪುಟ್ಟಣ್ಣ) ಅವನಿಗೆ ಬುದ್ಧಿ ಕಲಿಸಬೇಕೆಂದು ಪ್ಲಾನ್ ಮಾಡುತ್ತಿದ್ದೆವು.  ಇದ್ದಕ್ಕಿದ್ದಂತೆ ಗಂಗಮ್ಮನ ದೊಡ್ಡ ಮೊಮ್ಮಗನನ್ನು ರಘು ಹೋಟೆಲಿನಲ್ಲಿ ಕೆಲಸಕ್ಕೆ ಸೇರಿಸಿಬಿಟ್ಟರೆಂದು ತಿಳಿದು ಬಂತು.  ನಾವೊಮ್ಮೆ ಕೊಪ್ಪದಲ್ಲಿ ಅವನನ್ನು ಹೋಟೆಲಿನೊಳಗೆ ನೋಡಿ ಮಂಕಾಗಿ ಹೋದೆವು. ಅವನು ಹೋಟೆಲಿನ ತಿಂಡಿ ನಿತ್ಯವೂ ತಿಂದು ಬೋಂಡದಂತೆಯೇ ಊದಿಕೊಂಡಿದ್ದ! ನಮಗಾದ ಹೊಟ್ಟೆ ಕಿಚ್ಚು ಅಷ್ಟಿಷ್ಟಲ್ಲ! ಅವನಂತೆ ನಾವೂ ಮುಂದೊಂದು ದಿನ ಹೋಟೆಲಿನ ಕೆಲಸಕ್ಕೆ ಸೇರಿ ಬೆಣ್ಣೆದೋಸೆ ತಿನ್ನುತ್ತಾ ಬೋಂಡದಂತೆಯೇ ಊದಿಕೊಳ್ಳಬೇಕೆಂದು ಕನಸು ಕಾಣ ತೊಡಗಿದೆವು! ಆದರೆ ನಮಗೆ ದೇವರ ದಯದಿಂದ  ಆ ಅದೃಷ್ಟ ದೊರೆಯಲಿಲ್ಲ!
ಕೆಸವೆ  ರಂಗಪ್ಪಯ್ಯ
ನಾನು ಈ ಮೊದಲೇ ಬರೆದಂತೆ ಕೊಪ್ಪದ  ಕೆಳಗಿನ ಪೇಟೆಯಲ್ಲಿ ನಮ್ಮ ಸಂಬಂಧಿಗಳಾದ  ಕೆಸವೆ ರಂಗಪ್ಪಯ್ಯನವರ ಮನೆ  ಇತ್ತು. ಹಾಗೂ ಈಗಲೂ ಇದೆ. ರಂಗಪ್ಪಯ್ಯನವರ ಮೂಲಮನೆ ಕೆಸವೆಯ ಹತ್ತಿರವಿರುವ ಊರುಗೊಡಿಗೆಯಂತೆ.  ಅವರು ಆಗರ್ಭ ಶ್ರೀಮಂತರಾಗಿದ್ದರಂತೆ. ಅವರಿಗೆ ನಮ್ಮ ತಂದೆಯ ಅಕ್ಕನ ಮಗಳಾದ ಮರಡಿಯ ಕಂದಕ್ಕಯ್ಯನನ್ನು ಕೊಟ್ಟು ಮದುವೆ ಮಾಡಲಾಗಿತ್ತು. ಇದ್ದಕ್ಕಿದ್ದಂತೆ ರಂಗಪ್ಪಯ್ಯ  ಯೌವನ ಸಮಯದಲ್ಲೇ ತಮ್ಮ ಅಪಾರ ಸಂಪತ್ತನ್ನು ಹಾಗೆಯೆ ಬಿಟ್ಟು ದೇಶಾಂತರ ಹೋಗಿ ಬಿಟ್ಟರಂತೆ. ಎಷ್ಟೋ ಸಮಯದ ನಂತರ ಅವರು ತಮಿಳು ನಾಡಿನ ಯಾವುದೋ ಊರಿನಲ್ಲಿರುವರೆಂದು ಸಮಾಚಾರ ಬಂತಂತೆ. ಆದರೆ ಅವರನ್ನು ಹುಡುಕಿ ವಾಪಾಸ್ ಮನೆಗೆ ಬರುವಂತೆ ಮಾಡುವುದು ಆ ಕಾಲದಲ್ಲಿ ಅಷ್ಟೊಂದು ಸುಲಭವಾಗಿರಲಿಲ್ಲ. ಆದರೆ ಅವರ ಆತ್ಮೀಯರಾದ ಬೇಲಿಹಳ್ಳಿ ಪಟೇಲ್ ಮಹಾಬಲಯ್ಯ ಎಂಬ ಸಜ್ಜನ ಅವರನ್ನು ವಾಪಾಸ್ ಕರೆತರಲೇ ಬೇಕೆಂದು ಪಣತೊಟ್ಟರಂತೆ. ಹಾಗೂ ತಮ್ಮ ಕಾರ್ಯದಲ್ಲಿ ಜಯಶೀಲರಾಗಿಯೂ ಬಿಟ್ಟರಂತೆ.
ಸಿವಿಲ್ ಕಾಂಟ್ರ್ಯಾಕ್ಟರ್ ರಂಗಪ್ಪಯ್ಯ
ರಂಗಪ್ಪಯ್ಯನವರು ಮಾಮೂಲಿ ಜಮೀನ್ದಾರರುಗಳಂತೆ ಕೇವಲ ಬೇಸಾಯದತ್ತ ಗಮನ ಕೊಡುವವರಾಗಿರಲಿಲ್ಲವಂತೆ. ಅವರಿಗೆ ಇಂಜಿನಿಯರಿಂಗ್ ಬ್ರೈನ್ ಹುಟ್ಟಿನಿಂದ ಬಂದಿತ್ತಂತೆ. ಬೇಗನೆ ಅವರು ಕೊಪ್ಪ ತಾಲೂಕ್ ಬೋರ್ಡಿನ ಪ್ರಮುಖ ಸಿವಿಲ್ ಕಾಂಟ್ರ್ಯಾಕ್ಟರ್ ಗಳಲ್ಲಿ ಒಬ್ಬರಾದರಂತೆ. ಅವರು ರಸ್ತೆ, ಬಾವಿ, ಮೋರಿ  ಮತ್ತು ಸೇತುವೆಗಳನ್ನು ಕಟ್ಟುವುದರಲ್ಲಿ ಪರಿಣಿತರಾಗಿಬಿಟ್ಟರಂತೆ. ಅವರೇ ಮುಂದೆ ನಿಂತು ಕಟ್ಟಿಸಿದ ಮಿನಿ ಸೇತುವೆಯೊಂದು ಇಂದಿಗೂ ಕೆಸವೆ ಗ್ರಾಮದ ಗೋಳ್ ಗಾರಿಗೆ ಹೋಗುವ ದಾರಿಯಲ್ಲಿದ್ದು ಅದರ ಮೇಲೆ ೧೦ ಟನ್ ಭಾರ ಹೇರಿದ ಲಾರಿಗಳು ಸಲೀಸಾಗಿ ಹಾದು ಹೋಗುವವಂತೆ.
ರಂಗಪ್ಪಯ್ಯನವರಿಗೆ ನಾಲ್ಕು ಮಕ್ಕಳಿದ್ದರು. ಅವರಲ್ಲಿ ಮಹಾಬಲ ಮತ್ತು ನಾಗರಾಜ ಎಂಬುವರು ತೀರಿಕೊಂಡಿದ್ದು ಈಗ ಹಿರಿಯ ಮಗಳು ಗೌರಿ ಮತ್ತು ಹಿರಿಯ ಮಗ ಮಾಧವರಾವ್ ಅವರು ನಮ್ಮೊಡನಿದ್ದಾರೆ. ರಂಗಪ್ಪಯ್ಯನವರೇ  ಮುಂದೆ ನಿಂತು ಕಟ್ಟಿಸಿದ ಅವರ ಕೊಪ್ಪದ ಮನೆ ಇಂದಿಗೂ ಅವರ ಹಿರಿಯ ಮಗ ಮಾಧವರಾವ್ ಅವರ ವಶದಲ್ಲಿದೆ.
ಶಂಕರ್ ಮೋಟಾರ್ ಟ್ರಾನ್ಸ್ಪೋರ್ಟ್
ಕೊಪ್ಪ ಪಟ್ಟಣದ ಅಂದಿನ ಕಥೆ ಶಂಕರ್ ಮೋಟಾರ್ ಟ್ರಾನ್ಸ್ಪೋರ್ಟ್ ಬಗ್ಗೆ ಬರೆಯದೇ ಮುಕ್ತಾಯವಾಗಲಾರದು. ವಿವಿಧ ಮಾರ್ಗಗಳಲ್ಲಿ ಓಡಾಡುತ್ತಿದ್ದ ಬಸ್ಸುಗಳಲ್ಲದೇ  ಯಾವುದೇ ವೇಳೆಯಲ್ಲಿ ಕೊಪ್ಪದ ಬಸ್ ನಿಲ್ದಾಣ ಹಾಗೂ ಕಂಪನಿಯ ವರ್ಕ್ ಶಾಪಿನಲ್ಲಿ ನಾಲ್ಕರಿಂದ ಐದು ಬಸ್ಸುಗಳು ನಿಂತಿರುತ್ತಿದ್ದವು. ಉದಯ ಮೋಟಾರಿನ ಎರಡು ಬಸ್ಸುಗಳು, ಸಿ ಕೆ ಎಂ ಸ್  ಮತ್ತು ಗಜಾನನ ಮೋಟಾರ್  ಕಂಪನಿಗಳ ಒಂದೊಂದು ಬಸ್ಸುಗಳನ್ನು ಬಿಟ್ಟರೆ ಬೇರೆ ಯಾವುದೇ ಕಂಪನಿಗಳ ಬಸ್ಸುಗಳಿಗೆ ಕೊಪ್ಪ ಬಸ್ ನಿಲ್ದಾಣದಲ್ಲಿ ಪ್ರವೇಶವಿರಲಿಲ್ಲ.
----ಮುಂದುವರಿಯುವುದು ---

Saturday, February 23, 2019

ಒಂದು ಊರಿನ ಕಥೆ - ಕೊಪ್ಪ - 3


ಅಧ್ಯಾಯ ೩
ಮಿಲಿಟರಿ ಡಾಕ್ಟರ್ ಅಲ್ಲದೇ ಕೊಪ್ಪದಲ್ಲಿದ್ದ ಬೇರೆ ಇಬ್ಬರು ಡಾಕ್ಟರ್ಗಳ ಹೆಸರುಗಳು ನೆನಪಿಗೆ ಬರುತ್ತಿವೆ.  ಡಾಕ್ಟರ್ ರಾವ್ ಸಾಹೇಬ್ ಎಂಬುವರ ಶಾಪ್ ಮುಖ್ಯ  ರಸ್ತೆಯಲ್ಲೇ ಇತ್ತು.  ತುಂಬಾ ಅಪರೂಪದ ಹೆಸರದು.  ಇನ್ನೊಬ್ಬರು ಡಾಕ್ಟರ್ ಎಂದರೆ ಡಾಕ್ಟರ್ ಯೋಗೇಂದ್ರ ನಾಯಕ್.  ನನ್ನ ಅಕ್ಕಂದಿರ ಊರಾದ ಹೊಕ್ಕಳಿಕೆಯವರು ಯಾವಾಗಲೂ ಈ  ಡಾಕ್ಟರ್ ಹತ್ತಿರವೇ ಹೋಗುತ್ತಿದ್ದರು. ದುರದೃಷ್ಟವಶಾತ್  ಯೋಗೇಂದ್ರ ನಾಯಕ್ ಕೊಪ್ಪದಲ್ಲೇ ಸಂಭವಿಸಿದ ಒಂದು ರೋಡ್ ಆಕ್ಸಿಡೆಂಟ್ನಲ್ಲಿ ತೀರಿಕೊಂಡರಂತೆ. ಕಾಲ ಕ್ರಮದಲ್ಲಿ ಮಿಲಿಟರಿ ಡಾಕ್ಟರ್ ನಮ್ಮ ಊರಿಗೆ ಬರುವುದು ನಿಂತು ಹೋಯಿತು. ಅದಕ್ಕೆ ಮುಖ್ಯ ಕಾರಣ ಇನ್ನೊಬ್ಬ  ಡಾಕ್ಟರ್  ಅವರಿಂದ ಪೈಪೋಟಿ.

ಶೃಂಗೇರಿಯಲ್ಲಿ ಆ ದಿನಗಳಲ್ಲಿ  ಡಾಕ್ಟರ್ ಕೆ ಪಿ ಭಟ್ , ಡಾಕ್ಟರ್ ಟಿ ಕೆ ಭಟ್ ಮತ್ತು ಹೆಗ್ಡೆ ಡಾಕ್ಟರ್  ತುಂಬಾ ಪ್ರಸಿದ್ಧ ಡಾಕ್ಟರ್  ಆಗಿದ್ದರು. ಆದರೆ ಅವರು ಯಾರೂ ಹಳ್ಳಿಗಳಿಗೆ ವಿಸಿಟ್ ಮಾಡಲು ಬರುತ್ತಿರಲಿಲ್ಲ. ಕಾರಣ ತುಂಗಾ ನದಿಗೆ ಸೇತುವೆ ಇಲ್ಲದ್ದು ಮತ್ತು ಅವರು ಮೋಟಾರ್ ಬೈಕ್ ಸವಾರಿ ಮಾಡದೇ ಇರುವುದು. ಆದರೆ ಸುಮಾರು ೧೯೬೦ನೇ ಇಸವಿಯ ವೇಳೆಗೆ ತುಂಗಾ ನದಿಗೆ ಸೇತುವೆ ಆದದ್ದು ಮಾತ್ರವಲ್ಲ. ಶೃಂಗೇರಿಗೆ ಇನ್ನೊಬ್ಬ ಪ್ರಸಿದ್ಧ ಡಾಕ್ಟರ್ ಪ್ರವೇಶ ಮಾಡಿಬಿಟ್ಟರು. ಅವರೇ ಡಾಕ್ಟರ್ ರಾಮಚಂದ್ರ ರಾವ್. ಬಹು ಬೇಗನೆ ಡಾಕ್ಟರ್ ರಾಮಚಂದ್ರ ರಾವ್ ಅವರ (ಕವಿಲ್ ಕೊಡಿಗೆ ಅವರ ಮನೆಯಲ್ಲಿದ್ದ) ಶಾಪ್ ನಲ್ಲಿ ರೋಗಿಗಳ ಆಗಮನ ಜಾಸ್ತಿ ಆಗಿ ಹೋಯಿತು. ಮಾತ್ರವಲ್ಲ.  ಅವರ ಹೊಸ ಮೋಟಾರ್ ಬೈಕ್ ಶೃಂಗೇರಿಯ ಸುತ್ತಮುತ್ತಲಿನ ಹಳ್ಳಿಗಳಲ್ಲಿ ರೋಗಿಗಳನ್ನು ನೋಡಲು ಪ್ರತ್ಯಕ್ಷವಾಗತೊಡಗಿತು. ಹಳ್ಳಿಯವರ ಪ್ರಕಾರ ಅದಕ್ಕೆ ಮುಖ್ಯ ಕಾರಣ ಡಾಕ್ಟರ್ ರಾಮಚಂದ್ರರಾವ್  ಅವರ ಕೈ ಗುಣ. ಒಟ್ಟಿನಲ್ಲಿ ಮಿಲಿಟರಿ ಡಾಕ್ಟರ್ ಅವರ ರಾಯಲ್ ಬುಲೆಟ್ ಮೋಟಾರ್ ಬೈಕ್ ನಮ್ಮೂರ ದಾರಿಯನ್ನು ಬಹು ಬೇಗನೆ ಮರೆತು ಬಿಟ್ಟಿತು.
ಕೊಪ್ಪದ ಹೋಟೆಲ್ ಗಳು
ನನಗೆ ಮೊದಲು ನೆನಪಿಗೆ ಬರುವುದು ಶಾಸ್ತ್ರಿ ಹೋಟೆಲಿನ ಹೆಸರು. ಶಾಸ್ತ್ರಿ ಎಂಬುವರು ಖುದ್ದಾಗಿ ಹೋಟೆಲ್ ನಡೆಸುತ್ತಿದ್ದರು. ದೋಸೆ ಹೊಯ್ಯುವುದರಿಂದ ಹಿಡಿದು ಇಡ್ಲಿ ಬೇಯಿಸಿ ಕಳಸಿಗೆ ಇಳಿಸಿಬಿಡುವುದು, ವಡೆ ಬೇಯಿಸುವುದು ಇತ್ಯಾದಿ ಸಕಲ ಪಾಕಶಾಸ್ತ್ರ ಪಾರಂಗತರಾಗಿದ್ದ ಶಾಸ್ತ್ರಿಗಳು ಒಬ್ಬ ನುರಿತ ಹೋಟೆಲ್ ಉದ್ಯಮಿಗಳಾಗಿದ್ದರು. ಅವರ ಹೆಸರೇ ಒಂದು ಬ್ರಾಂಡ್ ಆಗಿ ಬಿಟ್ಟಿತ್ತೆಂದರೆ ಅತಿಶಯೋಕ್ತಿಯಲ್ಲ.

ಇನ್ನು ಬಸ್ ಸ್ಟಾಂಡ್ ಎದುರಿಗಿದ್ದ ಸುಬ್ಬರಾಯರ ಗಜಾನನ ಕೆಫೆ ಶಾಸ್ತ್ರಿ ಹೋಟೆಲಿಗಿಂತಲೂ ಮಿಗಿಲಾದ ಹೆಸರು ಪಡೆದಿತ್ತು. ಹೋಟೆಲಿನ ದೋಸೆ ಮತ್ತು ಕಾಫಿ ರುಚಿ 'ಬಲ್ಲವನೇ ಬಲ್ಲ ಬೆಲ್ಲದ ಸವಿಯ' ಎಂಬ ಗಾದೆಯಂತೆ ಇತ್ತೆಂದು ಹೇಳಬಹುದು. ಇನ್ನೊಂದು ಪ್ರಸಿದ್ಧ ಹೋಟೆಲಿನ ಒಡೆಯರು ಹಂದೆ ಎಂಬುವರು. ಇವರ ಹೋಟೆಲ್ ಕೂಡ ಪೇಟೆಯ ಮಧ್ಯದಲ್ಲಿತ್ತೆಂದು ನೆನಪು.  ಎಲ್ಲರೂ ಅದನ್ನು ಹಂದೆಯವರ ಹೋಟೆಲ್ ಎಂದು ಕರೆಯುವುದು ಮಾಮೂಲಾಗಿ ಬಿಟ್ಟಿತ್ತು. ಹೋಟೆಲಿನ ಹೆಸರು ವಸಂತ ವಿಹಾರ ಎಂದಿರಬೇಕು.  ಹಂದೆ ಮತ್ತು ಸುಬ್ಬ ರಾಯರು ದಕ್ಷಿಣ ಕನ್ನಡದಿಂದ ಬಂದವರು. ಶಾಸ್ತ್ರಿಯವರು ಎಲ್ಲಿಂದ ಬಂದರೋ ಗೊತ್ತಿರಲಿಲ್ಲ. ಗಜಾನನ ಕೆಫೆ  ಇಂದಿಗೂ ಕೊಪ್ಪದಲ್ಲಿರುವುದಂತೆ.  ಪ್ರಾಯಶಃ ಅದು ಶತಮಾನೋತ್ಸವ ಆಚರಿಸುವ ಸಮಯ ಬಂದಿರಬೇಕು.
ಇತರ ಅಂಗಡಿಗಳು
ಜವಳಿ ಅಂಗಡಿಗಳಲ್ಲಿ ನೆನಪಿಗೆ ಬರುವುದು ಅಚ್ಯುತ ಭಟ್ಟರ ಜವಳಿ ಅಂಗಡಿ.  ಅವರದೊಂದು ಅಂಗಡಿ ಶೃಂಗೇರಿಯಲ್ಲೂ ಇತ್ತೆಂದು ನೆನಪು. ರೇಷ್ಮೆ ಸೀರೆಯಿಂದ ಹಿಡಿದು ಎಲ್ಲ ಬಗೆಯ ಜವಳಿಗಳೂ ಭಟ್ಟರ ಅಂಗಡಿಯಲ್ಲಿ ದೊರೆಯುತ್ತಿದ್ದವು. ಭಟ್ಟರ ಅಂಗಡಿಯಲ್ಲಿ ಬಟ್ಟೆ ಖರೀದಿಸಿದ ನಂತರ ಹೊಲಿಗೆಗೆ ಕೊಡಲು ಅವರ ಅಂಗಡಿಯಿಂದ ಸ್ವಲ್ಪ ಕೆಳಗಿನ ರಸ್ತೆಯಲ್ಲಿದ್ದ ಶೇಷಗಿರಿ ಎಂಬ ಟೈಲರ್ ಬಳಿಗೆ ಹೋಗುತ್ತಿದ್ದುದು ನೆನಪಾಗುತ್ತದೆ. ಆ ಕಾಲಕ್ಕೆ ಕೊಪ್ಪದಲ್ಲಿ ಅತ್ಯಂತ  ಪ್ರಸಿದ್ಧನಾಗಿದ್ದ ಟೈಲರ್ ಶೇಷಗಿರಿ. ಶೇಷಗಿರಿಯ ಪ್ರಸಿದ್ಧಿ ಅವನ ಹೊಲಿಗೆಯ ಪ್ರವೀಣತೆಗಲ್ಲ. ಅದಕ್ಕೆ ಕಾರಣವೆ ಬೇರೆ.  ಅವನು ಯಾವುದೇ ಡ್ರೆಸ್ ಹೊಲಿಗೆಗೆ ಕೊಟ್ಟದ್ದನ್ನು ಒಪ್ಪಿಕೊಂಡ ಸಮಯಕ್ಕೆ ಹೊಲಿದು ಕೊಟ್ಟ ಉದಾಹರಣೆಗಳೇ ಇರಲಿಲ್ಲ. ಸಾಮಾನ್ಯವಾಗಿ ಗೋಕುಲಾಷ್ಟಮಿಗೆ ಹಾಕಲೆಂದು ಬಟ್ಟೆ ಹೊಲಿಗೆಗೆ ಕೊಟ್ಟರೆ ಮಹಾಶಿವರಾತ್ರಿಗೆ ಅದು ಸಿಗುವ ಸಾಧ್ಯತೆ ಇತ್ತು!

ನಾಯಕ್ ಬ್ರದರ್ಸ್ ಆಗಿನ ಕಾಲದಲ್ಲಿ ಕೊಪ್ಪದಲ್ಲಿ ತುಂಬಾ ಹೆಸರು ಪಡೆದ ಬಿಸಿನೆಸ್ ಫ್ಯಾಮಿಲಿ ಆಗಿತ್ತು. ಈ ಫ್ಯಾಮಿಲಿ ಬಗೆ ಬಗೆಯ ಬಿಸಿನೆಸ್ ಮಾಡುತ್ತಿದ್ದರು. ಅವುಗಳಲ್ಲಿ ಔಷದಿ ಅಂಗಡಿ, ರೇಡಿಯೋ ಶಾಪ್ ಮತ್ತು ಸ್ಟೇಷನರಿ ಸಾಮಾನುಗಳ ಅಂಗಡಿಗಳು ಮುಖ್ಯವಾದವು. ದಿನಸಿ ಅಂಗಡಿಗಳಲ್ಲಿ ಮುಖ್ಯವಾದವೆಂದರೆ ಮಾವಿನಕಟ್ಟೆ ಸಾಹೇಬರ ಮತ್ತು ಸಿದ್ಧಿ ಸಾಹೇಬರ ಅಂಗಡಿಗಳು. ಇದಲ್ಲದೇ ಭಾಸ್ಕರನ ಅಂಗಡಿ ಎಂಬುದೂ ಕೂಡ ತುಂಬಾ ಪ್ರಸಿದ್ಧಿ ಪಡೆದಿತ್ತು. ಅಲ್ಲಿ ಸಿಗದ ವಸ್ತುಗಳಿರಲಿಲ್ಲ. ಮಾವಿನಕಟ್ಟೆ ಸಾಹೇಬರ ಅಂಗಡಿಯ ವಿಶೇಷವೆಂದರೆ ಆ ಅಂಗಡಿಯ ಮುಂದೆ ಮಾವಿನ ಮರಗಳಿರುವ ಕಟ್ಟೆ ಇದೆಯೆಂದು ತಿಳಿದು ಕೆಲವರು ಪೇಸು ಬೀಳುತ್ತಿದ್ದದ್ದು!
----ಮುಂದುವರಿಯುವುದು ---

Wednesday, February 20, 2019

ಒಂದು ಊರಿನ ಕಥೆ - ಕೊಪ್ಪ- 2

ಅಧ್ಯಾಯ ೨
ಕೊಪ್ಪ ಎಂದು ಹೆಸರು ಬರಲು ಅಲ್ಲಿದ್ದ ಕೋಪದ ವೀರಭದ್ರ ದೇವಸ್ಥಾನವೇ  ಕಾರಣವಂತೆ. ಆದರೆ ದೇವಸ್ಥಾನ ಎಲ್ಲಿತ್ತೆಂಬುವುದು ನಮಗೆ ತಿಳಿದಿರಲಿಲ್ಲ. ಶೃಂಗೇರಿಯಲ್ಲಿ ಪವಿತ್ರ ತುಂಗಾ ನದಿ ಹರಿಯುತ್ತಿದ್ದರೆ ಕೊಪ್ಪದ ಹತ್ತಿರ ಒಂದು ಹಳ್ಳ ಹರಿಯುತ್ತಿದ್ದು ಅದಕ್ಕೆ ಯಾವುದೋ ಕಾರಣದಿಂದ ಮುಸರೇಹಳ್ಳವೆಂದು ಕರೆಯಲಾಗುತ್ತಿತ್ತು. ದಿನಗಳಲ್ಲಿ ನಮ್ಮ ಮನೆಗಳಲ್ಲಿ ಮುಸರೆ ಮುಟ್ಟಿದರೆ (ಅನ್ನದ ಪಾತ್ರೆ  ಇತ್ಯಾದಿ ) ಕೈ ತೊಳೆಯ ಬೇಕಿತ್ತು. ಹಾಗಿರುವಾಗ  ಮುಸರೇ ಹಳ್ಳದ ನೀರು ಮುಟ್ಟಿದರೆ ಏನು ಮಾಡಬೇಕಿತ್ತೆಂದು ನಮಗೆ ಆಶ್ಚರ್ಯವಾಗುತ್ತಿತ್ತು. ನಮ್ಮ ದಾಯಾದಿಗಳಿದ್ದ ಕೆಸವೆ ಎಂಬ ಊರಿಗೆ ಹೋಗುವಾಗ ನಾವು ಮುಸರೇಹಳ್ಳವನ್ನು ದಾಟಿ ಹೋಗುತ್ತಿದ್ದೆವು.
ಲೋಕಸೇವಾನಿರತ ಎಂ ಎಸ್ ದೇವೇಗೌಡರು
ಆಗಿನ ಕಾಲದಲ್ಲಿ ಕೊಪ್ಪ ಏಳಿಗೆ ಕಾಣಲು ಮುಖ್ಯ ಕಾರಣ ಮಾನ್ಯ ಎಂ ಎಸ್ ದೇವೇಗೌಡರು. ಆಗರ್ಭ ಶ್ರೀಮಂತರಾಗಿದ್ದ  ದೇವೇಗೌಡರಿಗೆ ಅವರ ಜನಹಿತ ಕಾರ್ಯಗಳನ್ನು ಪರಿಗಣಿಸಿ ಮೈಸೂರಿನ ಮಹಾರಾಜರು ಲೋಕಸೇವಾನಿರತ ಎಂಬ ಬಿರುದನ್ನು ನೀಡಿದ್ದರಂತೆ. ಶೃಂಗೇರಿಯ ರಸ್ತೆಗೆ ಟಾರ್ ಹಾಕುವ ಮೊದಲೇ ಕೊಪ್ಪದ ರಸ್ತೆಗೆ  ಆಗಿನ ಕಾಲದಲ್ಲೇ ಕಾಂಕ್ರೀಟ್  ಹಾಕಲಾಗಿತ್ತು. ಹಾಗೇ ಮೇಲಿನ ಪೇಟೆಯಲ್ಲಿ ಒಂದು ದೊಡ್ಡ ವಾಟರ್ ಟ್ಯಾಂಕ್ ಕಟ್ಟಿಸಿ ಊರಿಗೆಲ್ಲಾ ನೀರು ಸರಬರಾಯಿ ಮಾಡಲಾಗುತ್ತಿತ್ತು.  ಇನ್ನು ಇಲ್ಲಿನ ಸಾರ್ವಜನಿಕ ಆಸ್ಪತ್ರೆ ತುಂಬಾ ಪ್ರಸಿದ್ಧಿ ಪಡೆದಿತ್ತು.  ಕಾಂತರಾಜ್ ಎಂಬ ಡಾಕ್ಟರ್ ತುಂಬಾ ಹೆಸರುಗಳಿಸಿದ್ದರು.

ದೇವೇಗೌಡರು ಮೂಲತಃ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಎಂಬ ಊರಿನವರಂತೆ. ಅವರು ದೊಡ್ಡ ದೊಡ್ಡ ಕಾಫಿ ಎಸ್ಟೇಟ್ ಹೊಂದಿದ್ದಲ್ಲದೆ ಕೊಪ್ಪದಲ್ಲಿ ಶಂಕರ್ ಟ್ರಾನ್ಸ್ಪೋರ್ಟ್ ಒಡೆಯರಾಗಿದ್ದರು. ಕೊಪ್ಪದಲ್ಲಿದ್ದ ಒಂದೇ ಒಂದು ರೈಸ್ ಮಿಲ್ ಆದ ಶಂಕರ್ ರೈಸ್ ಮಿಲ್ ಕೂಡ ಅವರದ್ದಂತೆ. ಅವರ ಇಬ್ಬರು ಮಕ್ಕಳಾದ ಎಂ ಡಿ ನಾರಾಯಣ್ ಮತ್ತು ಎಂ ಡಿ ಬಾಲಕೃಷ್ಣ ಅವರ ಹೆಸರು ನೆನಪಿಗೆ ಬರುತ್ತಿದೆ. ಬಾಲಕೃಷ್ಣ  ಅವರು ನೇತ್ರಕೊಂಡ ಮತ್ತು ಕರ್ಕಿ ಕಾಫಿ ಎಸ್ಟೇಟ್ ಒಡೆಯರಾಗಿದ್ದರು. ಅವರು United Planters’ Association of South India (UPASI)  ಛೇರ್ಮನ್ ಆಗಿದ್ದರಂತೆ. ಅವರು ೨೦೧೫ನೇ ಇಸವಿಯಲ್ಲಿ ತೀರಿಕೊಂಡಾಗ ಅವರ ಅಂತ್ಯಕ್ರಿಯೆ ಅವರ ತಂದೆ ಮತ್ತು  ತಾಯಿ (ಪುಟ್ಟಮ್ಮ) ಅವರ ಅಂತ್ಯಕ್ರಿಯೆ ನಡೆದಿದ್ದ ರೈಸ್ ಮಿಲ್ ಕಾಂಪೌಂಡ್ ಒಳಗೇ ಮಾಡಲಾಯಿತೆಂದು ಹಿಂದೂ ಪತ್ರಿಕೆಯ ವರದಿಯೊಂದು ಹೇಳುತ್ತದೆ.

ಕ್ಯಾಪ್ಟನ್  ಎಂ ಆರ್ ಆರ್ ಐಯ್ಯಂಗಾರ್  (ಮಿಲಿಟರಿ ಡಾಕ್ಟರ್)
ಆಗಿನ ಕಾಲದಲ್ಲಿ ನಮ್ಮ ಮಲೆನಾಡ ಯಾವುದೇ ಮನೆಯಲ್ಲಿ ರೋಗಿಯ ಪರಿಸ್ಥಿತಿ ಕಠಿಣವಾಗಿದ್ದರೆ ಕೊಪ್ಪದಿಂದ ಮಿಲಿಟರಿ ಡಾಕ್ಟರ್ ಅವರನ್ನು ಕರೆಸಲಾಗುತ್ತಿತ್ತು. ಅವರ ರಾಯಲ್ ಬುಲೆಟ್ ಮೋಟಾರ್ ಬೈಕ್ ಯಾವುದೇ ಹಳ್ಳಿ ರಸ್ತೆ ಅಥವಾ ಕಾಡಿನ ಮಧ್ಯದ ಕಾಲು ದಾರಿಯಲ್ಲಿ ಗುಡುಗುಡಿಸುತ್ತಾ ಬಂದು ಬಿಡುತ್ತಿತ್ತು. ಆದರೆ ನಮ್ಮ ಕೆಲವು ಮನೆಗಳಿಗೆ ತೋಟದೊಳಗೆ ಅದು ಬರುತ್ತಿರಲಿಲ್ಲ. ಆಗ ಮನೆಯ ಒಬ್ಬರು ಅವರ ಬ್ಯಾಗನ್ನು ಹಿಡಿದುಕೊಂಡು ಅವರನ್ನು ಮನೆಗೆ ಕರೆತರಬೇಕಿತ್ತು. ತುಂಬಾ  ಸ್ಟೈಲಿಶ್ ಆಗಿದ್ದ ಡಾಕ್ಟರ್ ಮಿಲಿಟರಿ ಹ್ಯಾಟ್ ಹಾಕಿಕೊಂಡು ದರ್ಪದಿಂದ  ಮನೆಗೆ ಪ್ರವೇಶ ಮಾಡುತ್ತಿದ್ದಂತೆಯೇ  ರೋಗಿಯ  ಅರ್ಧ ರೋಗ ದೇಹ ಬಿಟ್ಟು ಓಡಿಹೋದಂತೆ ಅನಿಸುತ್ತಿತ್ತು!  ಆಗಿನ ಕಾಲದಲ್ಲಿ ಇಂಜೆಕ್ಷನ್ ಚುಚ್ಚಿಸಿಕೊಳ್ಳಲು ನಾವೆಲ್ಲ ತುಂಬಾ ಭಯ ಪಡುತ್ತಿದ್ದೆವು. ಆದರೆ ಡಾಕ್ಟರ್ ನಮ್ಮ ಕೈ ಹಿಡಿದು ಯಾವುದೊ ರೀತಿಯಲ್ಲಿ ನಮಗೆ ಮುಗುಳ್ನಗೆ ಬರುವಂತೆ ಮಾಡಿ ಇಂಜೆಕ್ಷನ್ ಚುಚ್ಚಿ ಬಿಡುತ್ತಿದ್ದರು. ಆಗಿನ ಕಾಲದಲ್ಲಿ ಮನೆಯ ಎಲ್ಲರಿಗೂ ಒಮ್ಮೆಯಾದರೂ ಟೈಫಾಯಿಡ್ ಕಾಯಿಲೆ ಬಂದೇ ಬರುತ್ತಿತ್ತು. ಆದರೆ ಮಿಲಿಟರಿ ಡಾಕ್ಟರ್ ಅವರ ಮೂರು ಇಂಜೆಕ್ಷನ್ಗಳ ಸರ್ಜಿಕಲ್ ಸ್ಟ್ರೈಕ್ ಎದುರಿಸಲಾಗದೇ ಅದು ಪರಾರಿಯಾಗುತ್ತಿತ್ತು.

ಕೊಪ್ಪದ ಮೇಲಿನಪೇಟೆಯಲ್ಲಿದ್ದ ಡಾಕ್ಟರ್ ಮನೆಗೆ ಕೆಲವು ಬಾರಿ ಹೋಗಿದ್ದು ನೆನಪಿಗೆ ಬರುತ್ತಿದೆ. ಅವರಿಗೆ ಹರಿಹರಪುರದ ಹತ್ತಿರ ಜಮೀನು ಇತ್ತು. ಅದನ್ನು ಅವರೇ ಸ್ವತಃ ವ್ಯವಸಾಯ ಮಾಡುತ್ತಿದ್ದರಂತೆ.  ನನಗೆ ಶಿವಮೊಗ್ಗೆಯಲ್ಲಿ ಹೈಸ್ಕೂಲ್ ಓದಲು  ಹೋಗುವಾಗ ಬ್ರಾಹ್ಮಣರ ಹಾಸ್ಟೆಲ್ಲಿನಲ್ಲಿ ಫ್ರೀ ಸೀಟ್ ಸಿಗುವಂತೆ ಡಾಕ್ಟರಿಂದ ಒಂದು ರೆಕಮೆಂಡೇಷನ್ ಲೆಟರ್ ಸಿಕ್ಕಿತ್ತು. ಆದರೆ ಒಂದು ಕಂಡೀಶನ್ ಮೇಲೆ! ನಾನು ತರಗತಿಗೆ ಒಂದು ಅಥವಾ ಎರಡನೇ ಸ್ಥಾನ ಗಳಿಸಲೇ ಬೇಕಿತ್ತು!  ಅದೂ ಕೂಡ ಒಂದು ಮಿಲಿಟರಿ ಆರ್ಡರ್ ನಂತೆಯೇ ಇತ್ತು!

ಪುಣ್ಯಾತ್ ಗಿತ್ತಿ  ರತ್ನಾವತಿ!
ಆಗಿನ ಕೊಪ್ಪದಲ್ಲಿ ನಮಗೆ ಸಂಭಂದಿಗಳ ಮನೆಗಳು ಒಂದು ಕೈಬೆರಳಿನಲ್ಲಿ ಎಣಿಸುವಷ್ಟೂ ಇರಲಿಲ್ಲ. ನನ್ನ ನೆನಪಿಗೆ ಬರುವುದು ಕೇವಲ ಮೂರು ಮನೆಗಳು ಮಾತ್ರಾ . ಮೇಲಿನಪೇಟೆಯಲ್ಲಿದ್ದ ರತ್ನಾವತಿ ಎಂಬುವರ ಮನೆ. ಕೆಳಗಿನಪೇಟೆಯಲ್ಲಿ ಕೆಸವೆ ರಂಗಪ್ಪಯ್ಯ ಮತ್ತು ಊರುಗುಡಿಗೆ ಶ್ರೀನಿವಾಸಯ್ಯ ಎಂಬುವರ ಮನೆಗಳು. ನಮ್ಮ ಮನೆಯಲ್ಲಿ ಯಾರಿಗಾದರೂ ಕೊಪ್ಪದಲ್ಲೇ ರಾತ್ರಿ ಉಳಿದುಕೊಳ್ಳುವ ಸಂದರ್ಭ ಬಂದಾಗ ರತ್ನಾವತಿಯವರ ಮನೆಯ ಬಾಗಿಲು ನಮಗೆ ತೆರೆದಿರುತ್ತಿತ್ತು.   ನಮಗೆ ಯಾವುದೋ ದೂರದ ಸಂಬಂಧಿಗಳಾದ ರತ್ನಾವತಿಯವರು ತುಂಬಾ ಆದರದಿಂದ ನಮ್ಮನ್ನು ನೋಡಿಕೊಳ್ಳುತ್ತಿದ್ದರು. ಅವರ ಮಗಳೊಬ್ಬಳು ಶಂಕರ್ ಟ್ರಾನ್ಸ್ಪೋರ್ಟ್ ಆಫೀಸ್ನಲ್ಲಿ ಕೆಲಸ ಮಾಡುತ್ತಿದ್ದಳು.

ರತ್ನಾವತಿಯವರ  ಗಂಡ ದ್ವಾರಮಕ್ಕಿ ಮಂಜಪ್ಪಯ್ಯ  ಎಂಬುವರು. ಅವರು ಯಾವ ವೃತ್ತಿಯಲ್ಲಿ ತೊಡಗಿದ್ದರೆಂದು ನೆನಪಿಗೆ ಬರುತ್ತಿಲ್ಲ. ಆದರೆ ಅವರು ಯಾವುದೋ ದೇವಸ್ಥಾನಕ್ಕಾಗಿ ಅಡಿಕೆ ಸಂಭಾವನೆಗಾಗಿ  ಪ್ರತಿ ವರ್ಷವೂ ನಮ್ಮೂರಿಗೆ ಬರುತ್ತಿದ್ದದ್ದು ನೆನಪಿದೆ. ಅವರು ಕೊಪ್ಪದಲ್ಲಿ ವಾಸಿಸುತ್ತಿದ್ದ ಮನೆಗೆ ಮಂಜಪ್ಪಯ್ಯನವರ ಮನೆ ಎನ್ನದೇ ರತ್ನಾವತಿಯ ಮನೆ ಎಂದು ಕರೆಯಲು ಕಾರಣ ಏನಿರಬಹುದೆಂದು ನಮಗೆ ಅನಿಸುತ್ತಿತ್ತು. ಬಗ್ಗೆ ತಂದೆಯವರನ್ನು ಕೇಳಿದಾಗ ಅವರು ತಮಾಷೆಯಾಗಿ ರತ್ನಾವತಿ ಪುಣ್ಯಾತ್ ಗಿತ್ತಿ ಆದ್ದರಿಂದ ಮನೆಗೆ ಅವಳ ಹೆಸರೇ ಮುಖ್ಯವಾಗಿತ್ತೆಂದರು. ರತ್ನಾವತಿ ಪುಣ್ಯಾತ್ ಗಿತ್ತಿ ಎಂದು ಹೇಳಲು ಮುಖ್ಯ ಕಾರಣ ಅವರ ಅಮ್ಮನ ಹೆಸರು ಪುಣ್ಯಮ್ಮ ಎಂದಿತ್ತಂತೆ. ಅದೊಂದು ಅಪರೂಪವಾದ ಹೆಸರು. ಅವರ ಮನೆ ನಮ್ಮ ತಂದೆಯ ಅಕ್ಕನ ಮಗ ಮರಡಿ ಕೃಷ್ಣರಾಯರ ಮನೆಯ ಪಕ್ಕದಲ್ಲಿತ್ತಂತೆ.
----ಮುಂದುವರಿಯುವುದು ---

Monday, February 18, 2019

ಒಂದು ಊರಿನ ಕಥೆ - ಕೊಪ್ಪ - 1


ಅಧ್ಯಾಯ ೧

ಚಿಕ್ಕಮಗಳೂರು ಜಿಲ್ಲೆಯ ಒಂದು ಮುಖ್ಯ ತಾಲೂಕು ಕೇಂದ್ರ ಕೊಪ್ಪ. ನಮ್ಮ ಬೆಳವಿನಕೊಡಿಗೆ ಗ್ರಾಮ ಈ ತಾಲೂಕಿನ ಹರಿಹರಪುರ ಹೋಬಳಿಗೆ ಸೇರಿತ್ತು. ಒಂದು  ಕಾಲದಲ್ಲಿ 'ತಪ್ಪು ಮಾಡಿದರೆ ಕೊಪ್ಪಕ್ಕೆ ಹಾಕು ' ಎಂಬ ಗಾದೆಯೇ ಇತ್ತಂತೆ. ಇದಕ್ಕೆ ಕಾರಣ ಮಲೇರಿಯಾ ರೋಗ ಮತ್ತು ದಟ್ಟ ಮಲೆನಾಡಿನ ಮಧ್ಯದಲ್ಲಿದ್ದ ಊರಿನಲ್ಲಿ ಯಾವುದೇ ಹೆಚ್ಚು ಸೌಕರ್ಯಗಳು ಇರದೇ ಹೋದದ್ದು.  ಇಂದು ಕೊಪ್ಪ ಒಂದು ದೊಡ್ಡ ಪಟ್ಟಣವಾಗಿ ಬೆಳೆದು ಹೋಗಿದೆ. ಹಾಗೂ ಸಕಲ ಸೌಕರ್ಯಗಳನ್ನು ಹೊಂದಿದೆ.  ಈ ಪಟ್ಟಣ ನಮ್ಮ ಬಾಲ್ಯದಲ್ಲಿ ಹೇಗಿತ್ತೆಂದು ತಿರುಗಿ ನೋಡಿದಾಗ ಅನೇಕ ಪ್ರಸಂಗಗಳು ಹಾಗೂ ವಿಷಯಗಳು ನೆನಪಿಗೆ ಬರುತ್ತಿವೆ.  ಅವನ್ನು ಇಲ್ಲಿ ಮೆಲುಕು ಹಾಕುವ ಪ್ರಯತ್ನ ಮಾಡಿದ್ದೇನೆ.
ನನ್ನ ಮೊದಲ ಕೊಪ್ಪ ಸಂತೆ ಭೇಟಿ
ದಿನಗಳಲ್ಲಿ ನಮ್ಮ ಮನೆಗೆ ಬೇಕಾದ ಎಲ್ಲ ಸಾಮಾನುಗಳನ್ನೂ ನಾವು ಕೊಪ್ಪದಿಂದಲೇ ತರಬೇಕಿತ್ತು. ಆದರೆ ನಾವು ಕೊಪ್ಪಕ್ಕೆ ಹೋಗಲು ಬಸ್ ಹತ್ತಬೇಕಾದರೆ ಮೈಲಿ ನಡೆದು ತುಂಗಾ ನದಿಯ ಉಪನದಿಯಾದ ಸೀತಾ ನದಿಯನ್ನು ದಾಟಿ ಬಿ ಜಿ ಕಟ್ಟೆ ಎಂಬಲ್ಲಿಗೆ ಹೋಗಬೇಕಾಗಿತ್ತು. ವರ್ಷದಲ್ಲಿ ತಿಂಗಳು ಮಳೆಗಾಲದಲ್ಲಿ ನದಿಯಲ್ಲಿ ಪ್ರವಾಹದ ಕಾರಣ ಅದನ್ನು ದಾಟಿ ಹೋಗಿ ಸಾಮಾನುಗಳನ್ನು ತರಲಾಗುತ್ತಿರಲಿಲ್ಲ. ಆದ್ದರಿಂದ ನಮಗೆ ಬೇಕಾದ ಎಲ್ಲಾ ಮುಖ್ಯ ವಸ್ತುಗಳನ್ನು ಪ್ರತಿ ವರ್ಷವೂ ಮೇ ತಿಂಗಳೊಳಗೆ ತಂದುಕೊಳ್ಳಬೇಕಾಗಿತ್ತು.  ಆದರೆ ನಮ್ಮ ತಂದೆಯವರು ಮಳೆಗಾಲದಲ್ಲಿ ಕೂಡಾ ಕೊಪ್ಪದ ಸಂತೆಗೆ ಪ್ರತಿ ಭಾನುವಾರ ವೀಳ್ಯದೆಲೆ ಮಾರಲು ಹೋಗುತ್ತಿದ್ದರು. ಹಾಗೆ ಹೋಗಲು ಮುತ್ತೂರಗಂಡಿ ಎಂಬ ಬೇರೊಂದು ಕಡೆ ಸೀತಾ ನದಿಯನ್ನು ದೋಣಿಯಲ್ಲಿ  ದಾಟಿ ಕಬ್ಬಿಣದ ಸೇತುವೆ ಎಂಬಲ್ಲಿ ಬಸ್ ಹತ್ತಬೇಕಿತ್ತು.

ಸಂತೆಗೆ ಹೋಗಲು ವೀಳ್ಯದೆಲೆಯನ್ನು ಕೊಯ್ದು ೨೦ ಎಲೆಗಳ ಕೌಳಿಗೆ ಮಾಡಿ ಅವನ್ನು ಬಾಳೆ ಎಲೆಯಮೇಲಿಟ್ಟು ಹೊತ್ತಲೆ ಮಾಡುವುದೊಂದು ದೊಡ್ಡ ಕೆಲಸವಾಗಿತ್ತು. ಚಿಕ್ಕವರಾದ ನಾವು ಕೂಡ ಎಲೆ ಒಟ್ಟುವ  ಕೆಲಸ ಮಾಡಲೇ ಬೇಕಿತ್ತು. ನಮಗೆ ಶನಿವಾರ ಅರ್ಧ ದಿನ ಮಾತ್ರ ಸ್ಕೂಲ್ ಇರುತ್ತಿದ್ದರಿಂದ ಉಳಿದ ವೇಳೆ ಕೆಲಸ ಮಾಡಬೇಕಿತ್ತು. ಕೆಲಸ ಎಷ್ಟೋ ಬಾರಿ ರಾತ್ರಿ ಕೂಡ ಮುಂದುವರಿಯುತ್ತಿತ್ತು. ನಮಗೆ ಅದು ಎಷ್ಟೊಂದು ರೂಢಿಯಾಗಿತ್ತೆಂದರೆ ನಾನು ಸ್ಕೂಲಿಗೆ ಭಾನುವಾರ ರಜೆ ಕೊಡಲು ಕಾರಣ ಕೊಪ್ಪದ ಸಂತೆ ಎಂದೂ ಹಾಗೂ ಶನಿವಾರ ಅರ್ಧ ದಿನ ರಜೆ ಎಲೆ ಒಟ್ಟುವ  ಕೆಲಸ ಮಾಡಲೆಂದೂ ತಿಳಿದು ಬಿಟ್ಟಿದ್ದೆ!
ನಾನಿನ್ನೂ ಚಿಕ್ಕವನಾಗಿದ್ದಾಗ ತಂದೆಯವರೊಡನೆ ಒಮ್ಮೆ ನನ್ನನ್ನೂ ಅವರೊಟ್ಟಿಗೆ ಸಂತೆಗೆ ಕರೆದೊಯ್ಯುವಂತೆ ಹಠ ಮಾಡತೊಡಗಿದೆ. ಅವರು ಅದಕ್ಕೊಪ್ಪಿ ಒಂದು ಭಾನುವಾರದ ಸಂತೆಗೆ ನನ್ನನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗಲು ತೀರ್ಮಾನಿಸಿದರು. ಅಷ್ಟು  ಮಾತ್ರವಲ್ಲ. ನನಗಾಗಿ ಇಪ್ಪತ್ತು ಕೌಳಿಗೆಗಳ ಒಂದು ಎಲೆ ಹೊತ್ಲೆಯನ್ನೂ ತಯಾರು ಮಾಡಿಬಿಟ್ಟರು. ನಾನು ಅವರೊಟ್ಟಿಗೆ ಕುಳಿತು ಸಂತೆಯಲ್ಲಿ ಅದನ್ನು ಮಾರಿ ವ್ಯಾಪಾರದ ಸೂಕ್ಷ್ಮಗಳನ್ನು ಅರಿತುಕೊಳ್ಳಬೇಕಿತ್ತು! ನನ್ನ ಉತ್ಸಾಹಕ್ಕೆ ಮಿತಿಯೇ ಇರಲಿಲ್ಲ.
ಭುವನಕೋಟೆ
ಭಾನುವಾರ ಬೆಳಿಗ್ಗೆ ಮುಂಚೆ ನಾವಿಬ್ಬರೂ ಎಲೆ ಹೊತ್ಲೆಗಳನ್ನು ತಲೆಯ ಮೇಲೇರಿಸಿಕೊಂಡು ಮನೆಯಿಂದ ಪ್ರಯಾಣ ಬೆಳೆಸಿದೆವು.  ನಮ್ಮ ತೋಟದ ಗಡಿದಾಟಿ ಒಂದು ಗುಡ್ಡವನ್ನು ಹತ್ತಿ ರಸ್ತೆಯನ್ನು ಸೇರಿದೆವು. ಹಾಗೇ ಸ್ವಲ್ಪ ಮುಂದೆ ಹೋದಾಗ ರಸ್ತೆಯ ಮೇಲ್ಭಾಗಕ್ಕೆ ಭುವನಕೋಟೆ ಎಂಬಲ್ಲಿಗೆ ಹೋಗುವ ಕಾಲುದಾರಿ ಗೋಚರಿಸಿತು.   ದಾರಿಯಲ್ಲಿ ಸ್ವಲ್ಪ ಮುಂದೆ ಹೋದಾಗ ಕೆಳಗೆ ತುಂಬಾ ಆಳದಲ್ಲಿದ್ದ ಭುವನಕೋಟೆ ಅಗ್ರಹಾರ ಕಣ್ಣಿಗೆ ಬಿತ್ತು. ಆಗಿನ ನಮ್ಮ ಮಲೆನಾಡ ಹಳ್ಳಿಗಳಿಗೆ ಸಾಮಾನ್ಯವಾಗಿ ಇರುವ ಹೆಸರಿಗಿಂತ ಭುವನಕೋಟೆ ಎಂಬ ಹೆಸರು ತುಂಬಾ ವಿಭಿನ್ನವಾಗಿತ್ತು. ಹೆಸರಿನ ಹಿಂದೆ ಯಾವುದೊ ರಹಸ್ಯವಿದ್ದು ಅದು ಕಾಲಗರ್ಭದಲ್ಲಿ ಅಡಗಿ ಹೋಗಿರಬೇಕು. ಅಗ್ರಹಾರದ ಒಂದು ಭಾಗ ಆಗರ್ಭ ಶ್ರೀಮಂತರಾಗಿದ್ದ ಬಾಸ್ರಿ ಎಂಬ ಮನೆತನದವರ ವಾಸಸ್ಥಾನವಾಗಿತ್ತು. ಬಾಸ್ರಿಗಳು ನಮ್ಮೂರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಕೋಟ ಎಂಬಲ್ಲಿಂದ (ಶಿವರಾಮ ಕಾರಂತರ ಊರು) ಯಾವುದೊ ಕಾಲದಲ್ಲಿ ವಲಸೆ ಬಂದು ನೆಲಸಿದ್ದರು. ಲೇವಾದೇವಿ ವ್ಯವಹಾರದಲ್ಲಿ ತುಂಬಾ ಹಣಗಳಿಸಿ ದೊಡ್ಡ ದೊಡ್ಡ ಜಮೀನುಗಳನ್ನು ಖರೀದಿಸಿ ಗ್ರಾಮಕ್ಕೆ ದೊಡ್ಡ ಕುಳವಾಗಿದ್ದರು. ಕಾಲವಾಗಿ ಹೋಗಿದ್ದ ಬಾಸ್ರಿಗಳು ನಮ್ಮ ತಂದೆಯವರಮೇಲೆ ತುಂಬಾ ವಿಶ್ವಾಸ ಇಟ್ಟಿದ್ದರಂತೆ. ಹಾಗೇ ಅವರ ದೊಡ್ಡ ಮಗ ನಾಗಪ್ಪ ಬಾಸ್ರಿ ಎಂಬುವರ ಪರಿಚಯವೂ ನಮ್ಮ ತಂದೆಗೆ ಚೆನ್ನಾಗಿ ಇತ್ತು.

ನಾಗಪ್ಪ ಬಾಸ್ರಿಗಳು ಆಗಿನ ಕಾಲದಲ್ಲೇ ಚಾರ್ಟರ್ಡ್ ಅಕೌಂಟೆನ್ಸಿ (CA)  ಪಾಸ್ ಮಾಡಿ ಮಂಗಳೂರಿನಲ್ಲಿ ಕರ್ಣಾಟಕ ಬ್ಯಾಂಕ್ ಹೆಡ್ ಆಫೀಸಿನಲ್ಲಿ ಜನರಲ್ ಮ್ಯಾನೇಜರ್ ಆಗಿದ್ದರು. ನಮ್ಮ ಊರಿನಲ್ಲಿ ಹಲವರ ಪ್ರಕಾರ ಅವರೆಷ್ಟು ಮುಂದುವರಿದಿದ್ದರೆಂದರೆ (forward) ಪ್ರತಿದಿನ ಸಾಯಂಕಾಲ ಮಂಗಳೂರಿನ ರಸ್ತೆಯಲ್ಲಿ ತಮ್ಮ ಹೆಂಡತಿಯೊಡನೆ ಕೈಕೈ ಹಿಡಿದುಕೊಂಡು ವಾಕಿಂಗ್ ಹೋಗುತ್ತಿದ್ದರಂತೆ! ಅವರ ತಮ್ಮ ಹರಿಕೃಷ್ಣ ಬಾಸ್ರಿಯವರು ತಮ್ಮ ಓದನ್ನು ಇಂಟರ್ಮೀಡಿಯೇಟ್ ನಲ್ಲೇ ನಿಲ್ಲಿಸಿ ಊರಿಗೆ ಬರಬೇಕಾಯಿತು. ಬಾಸ್ರಿಯವರ ಒಂದು ದೊಡ್ಡ ಜಮೀನು ವ್ಯವಹಾರ ಕೋರ್ಟ್ನಲ್ಲಿತ್ತು. ತಂದೆಯವರು ತೀರಿಕೊಂಡಿದ್ದರಿಂದ ಅವರೇ ಅದನ್ನು ನೋಡಿಕೊಳ್ಳ ಬೇಕಾಗಿತ್ತು. ಇನ್ನೊಬ್ಬ ಅಣ್ಣ ನರಸಿಂಹ ಬಾಸ್ರಿಗಳು ಹೆಚ್ಚು ಓದಿರದಿದ್ದರಿಂದ ಅದಕ್ಕೆ ಯೋಗ್ಯರಾಗಿರಲಿಲ್ಲ.

ನಾವು ಅಲ್ಲಿಂದ ಒಂದು ಗದ್ದೆ ಹಾಗೂ ಕಾಡನ್ನು ದಾಟಿ ರಸ್ತೆ ಸೇರಿದೆವು. ಆ ರಸ್ತೆ ನಮ್ಮನ್ನು ಹಳ್ಳಿಮನೆ ಮತ್ತು ಕೊಂಡಿಬೈಲು ಎಂಬ ಮನೆಗಳನ್ನು ಹಾಗೂ  ಸೀತಾನದಿಯನ್ನು ದಾಟಿ  ಬಿ ಜಿ ಕಟ್ಟೆ ತಲುಪಿಸಿತು.. ನಾನು ಅದುವರೆಗೆ ಬಸ್ ಪ್ರಯಾಣವಿರಲಿ ಬಸ್ಸನ್ನೇ ನೋಡಿರಲಿಲ್ಲ. ಸ್ವಲ್ಪ ಹೊತ್ತಿನ ನಂತರ ನಮ್ಮ ಮುಂದೆ ಶಂಕರ್ ಟ್ರಾನ್ಸ್ಪೋರ್ಟ್ಸ್ ಬಸ್ ಒಂದು ಪ್ರತ್ಯಕ್ಷವಾಯಿತು. ನಮ್ಮ ತಂದೆಯವರು ಅವರ ಹೊತ್ಲೆಯನ್ನು ಬಸ್ಸಿನ ಟಾಪ್ ಮೇಲೆ ಹಾಕಿಬಂದರು. ನನ್ನ ಹೊತ್ಲೆಯನ್ನು ಅವರ ತೊಡೆಯಮೇಲೆ ಇಟ್ಟುಕೊಂಡರು. ನಾವೆಲ್ಲರೂ ಬಸ್ ಹತ್ತಿದ ನಂತರ ಡ್ರೈವರ್ಪೋಯಾ’ ಎಂದು ಕೇಳಿದ.  ಕಂಡಕ್ಟರ್ ಕೂಡಲೇ ರೈಟ್! ಪೋಯೀ ! ಎಂದು ಕೂಗಿ ಸೀಟಿ ಹಾಕಿಬಿಟ್ಟ. ಪೋಯಾ ಮತ್ತು ಪೋಯೀ ಎಂಬುದು ತುಳು ಭಾಷೆಯಂತೆ. ನಮಗೆ ಡ್ರೈವರ್ ಹಿಂದಿನ ಸೀಟ್ ಸಿಕ್ಕಿದ್ದರಿಂದ ನಾನು ಅವನು ಡ್ರೈವ್ ಮಾಡುವುದನ್ನು ಗಮನಿಸತೊಡಗಿದೆ. ಅವನು ಘಾಟಿಯ ತಿರುವಿನಲ್ಲಿ ಡ್ರೈವ್ ಮಾಡುವ ಕೌಶಲ್ಯ ನನಗೆ ತುಂಬಾ ಇಷ್ಟವಾಯಿತು. ನನ್ನ ದೃಷ್ಟಿಯಲ್ಲಿ ಅವನೊಬ್ಬ ಹೀರೊ ಆಗಿಬಿಟ್ಟ. ನನ್ನ ಮನಸ್ಸಿನಲ್ಲೇ ನಾನೂ ಒಂದು ದಿನ ಡ್ರೈವರ್ ಆಗಬೇಕೆಂದೂ ಆಸೆಪಟ್ಟುಬಿಟ್ಟೆ. ನಮ್ಮ ಬಸ್ಸು ನಾರ್ವೆ ಮತ್ತು ಕುಂಚೂರು ಘಾಟಿಯಮೇಲೆ ಹಾದು ಅರ್ಧ ಘಂಟೆಯಲ್ಲಿ ಕೊಪ್ಪ ತಲುಪಿತು.

ಆಗಿನ ಕಾಲದಲ್ಲಿ ಕೊಪ್ಪ ಬಸ್ ನಿಲ್ದಾಣ ಮೇಲಿನಪೇಟೆ ಎಂಬಲ್ಲಿತ್ತು. ನಮ್ಮ ಹೊತ್ತಲೆಗಳೊಡನೆ ನಾವು ಬೇಗ ಬೇಗನೆ  ನಡೆದು ಸಂತೆ ತಲುಪಿದೆವು. ಅಷ್ಟರಲ್ಲೇ ಬೇರೆ ಬೇರೆ ಊರುಗಳಿಂದ ಬಂದವರು ಒಳ್ಳೊಳ್ಳೆ ಜಾಗ ಆರಿಸಿಕೊಂಡು ಎಲೆ ಮಾರಲು ತೊಡಗಿದ್ದರು. ನಮ್ಮ ತಂದೆಯವರು ಕೂಡ ಒಂದು ಜಾಗ ಆರಿಸಿ ನಮ್ಮಿಬ್ಬರಿಗೂ ಹೊತ್ತಲೆಗಳನ್ನು ಮುಂದಿರಿಸಿಕೊಂಡು ಕುಳಿತುಕೊಳ್ಳಲು ಏರ್ಪಾಟು ಮಾಡಿದರು. ಅವರು ಮಾರ್ಕೆಟ್ಟಿಗೆ ಒಂದು ರೌಂಡ್ ಹಾಕಿ ಆದಿನ ಎಲೆಗೆ ಯಾವ ಬೆಲೆ ಹೇಳಬಹುದು ಎಂದು ತಿಳಿದುಕೊಂಡರು. ಆದಿನ ಡಿಮ್ಯಾಂಡಿಗಿಂತ ಸಪ್ಲೈ ಕಡಿಮೆಯಿದ್ದರಿಂದ ಎಲೆಗೆ ಒಳ್ಳೆ ಬೆಲೆ ಇತ್ತಂತೆ. ತಂದೆಯವರು ಬಿಡಿ ಕೌಳಿಗೆಗಳನ್ನು ಒಳ್ಳೆ ಬೆಲೆಯಲ್ಲಿ ಮಾರತೊಡಗಿದರು. ನಾನು ನೋಡುತ್ತಿದ್ದಂತೆ ಒಬ್ಬ ಗಿರಾಕಿ ನನ್ನ ಇಡೀ ಹೊತ್ತಲೆಯನ್ನು ಒಳ್ಳೆ ಬೆಲೆಗೆ ಕೊಂಡುಬಿಟ್ಟ.ಅವನು ಕೊಟ್ಟ ಹಣವನ್ನು ತಂದೆಯವರು ಎಣಿಸಿ ನನ್ನ ಜೇಬಿನಲ್ಲಿ ಹಾಕಿಬಿಟ್ಟರು. ಅದು ನನ್ನ ಜೀವಮಾನದ ಮೊದಲ ಸಂಪಾದನೆಯಾಗಿತ್ತು.  ನನ್ನ ಖುಷಿಗೆ ಮಿತಿ ಇರಲಿಲ್ಲ. ಸ್ವಲ್ಪ ಸಮಯದಲ್ಲೇ ತಂದೆಯವರ ಎಲೆಗಳೂ ಸಂಪೂರ್ಣವಾಗಿ ಮಾರಾಟವಾದವು.

ತಂದೆಯವರ ಪ್ರಕಾರ ಕೆಲವು  ಬಾರಿ ಡಿಮ್ಯಾಂಡಿಗಿಂತ  ಸಪ್ಲೈ ಜಾಸ್ತಿಯಾಗಿ ಬೆಲೆ ಪೂರ್ತಿ ಬಿದ್ದು ಹೋಗುತ್ತಿತ್ತಂತೆ. ಆಗ ರೈತರೆಲ್ಲಾ ತಮ್ಮ ಎಲೆಗಳನ್ನು "ಎಲೆ ರಾಮಯ್ಯ"ಎಂಬ ಸಗಟು ವ್ಯಾಪಾರಿಗೆ ಅತ್ಯಂತ ನಿಕೃಷ್ಟ ದರದಲ್ಲಿ ಮಾರಬೇಕಾಗುತ್ತಿತ್ತಂತೆ. ಅವರು ಅದನ್ನೆಲ್ಲಾ ಮಾರನೇ ದಿನದ ತರೀಕೆರೆಯ ಸಂತೆಗೆ ತೆಗೆದುಕೊಂಡು ಹೋಗುತ್ತಿದ್ದರಂತೆ.  ಅಲ್ಲಿ ಯಾವಾಗಲೂ ಕೊಪ್ಪಕ್ಕಿಂತ ಒಳ್ಳೆ ಬೆಲೆ ಸಿಗುತ್ತಿತ್ತಂತೆ. ಆದರೆ ತಂದೆಯವರು ಮಾತ್ರ ಒಂದು ಬಾರಿಯೂ  ಎಲೆ ರಾಮಯ್ಯನ ಹತ್ತಿರ ಸುಳಿಯಲೂ ಇಲ್ಲವಂತೆ. ಅವರಿಗೆ ಅವರದ್ದೇ ಆದ ಮಾರಾಟ ಕೌಶಲವಿತ್ತು.

ನಮ್ಮ ಮನೆಗೆ ಅವಶ್ಯವಾಗಿ ಬೇಕಾದ ಕೆಲವು ವಸ್ತುಗಳನ್ನು ತಂದೆಯವರು ಸಂತೆಯಲ್ಲೇ ಕೊಳ್ಳ ತೊಡಗಿದರು. ನಾನು ಅವರ ವ್ಯವಹಾರವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೆ. ಅವರು ತಾವು ತಂದ  ವಸ್ತುಗಳನ್ನು ಅತ್ಯಂತ ಹೆಚ್ಚು ಬೆಲೆಗೂ ಹಾಗೂ ತಾವು ಕೊಳ್ಳುವ ಸಾಮಾನುಗಳನ್ನು ಅತ್ಯಂತ ಕಡಿಮೆ ಬೆಲೆಗೂ ವ್ಯವಹಾರ ಮಾಡುವುದರಲ್ಲಿ ನಿಸ್ಸೀಮರಾಗಿದ್ದರು. ಅದೆಷ್ಟೆಂದರೆ ನಮ್ಮ ಊರಿನ ಎಷ್ಟೋ ಜನರು ವಿಚಾರದಲ್ಲಿ ಅವರ ಸಲಹೆ ಪಡೆಯುತ್ತಿದ್ದರು.

ಸಂತೆಯ ವ್ಯಾಪಾರ ಮುಗಿಸಿ ನಾವು ಬಸ್ ಸ್ಟ್ಯಾಂಡ್ ಕಡೆ ಬಂದೆವು. ದಾರಿಯಲ್ಲಿ ನಾವು ಪೊಲೀಸ್ ಠಾಣೆಯ ಮುಂದೆ ಬರಬೇಕಾಯಿತು. ಅಲ್ಲಿ ಒಂದು ದೃಶ್ಯ ನನ್ನ ಕಣ್ಣಿಗೆ ಬಿತ್ತು. ಯಾರೋ ಒಬ್ಬ ದೊಡ್ಡ ಹುಡುಗ ಠಾಣೆಯ  ಮುಂದಿನ ರಸ್ತೆಯ ಬದಿ ಮೂತ್ರ ಮಾಡತೊಡಗಿದ. ಅದನ್ನು ನೋಡಿದ ಪೊಲೀಸ್ ಪೇದೆಯೊಬ್ಬ ಅವನನ್ನು ಠಾಣೆಯೊಳಗೆ ಎಳೆದುಕೊಂಡು ಹೋಗಿ ಬಿಟ್ಟ. ನನಗೆ ಅದನ್ನು ನೋಡಿ ತುಂಬಾ ಗಾಬರಿಯಾಯಿತು. ತಂದೆಯವರನ್ನು ಆಬಗ್ಗೆ ಕೇಳಿದಾಗ ಅವನು ಮಾಡಿದ್ದು ಅಪರಾಧವೆಂದೂ ಮತ್ತು ಅದಕ್ಕೆ ಅವನಿಗೆ  ಶಿಕ್ಷೆಯಾಗುವುದೆಂದೂ ತಿಳಿಯಿತು. ಅದನ್ನು ಕೇಳಿ ನಾನು ಎಂದೂ ಪೇಟೆಯಲ್ಲಿ ವಾಸಮಾಡಬಾರದೆಂದೂ ಹಳ್ಳಿಯಲ್ಲೇ ಇದ್ದುಬಿಟ್ಟರೆ ನೆಮ್ಮದಿ ಎಂದೂ ತೀರ್ಮಾನಿಸಿಬಿಟ್ಟೆ.
ನಾವು ಆಮೇಲೆ ಬಸ್ಸಿನಲ್ಲಿ ಬಿ ಜಿ ಕಟ್ಟೆ ತಲುಪಿ ಅಲ್ಲಿಂದ ನಾವು ಕೊಂಡ ಸಾಮಾನುಗಳನ್ನೆಲ್ಲಾ ತಲೆಯಮೇಲೆ ಹೊತ್ತುಕೊಂಡು ಮನೆ ತಲುಪಿದೆವು. ನನಗೆ ಹೋಗುವಾಗ ಇದ್ದ ಉತ್ಸಾಹ ವಾಪಾಸ್ ಬರುವಾಗ ಇರಲಿಲ್ಲ. ಆದರೆ ಜೇಬಿನಲ್ಲಿದ್ದ ಎಲೆ ದುಡ್ಡು ತುಂಬಾ ಖುಷಿ ಕೊಟ್ಟಿತೆಂದು ಹೇಳಬೇಕಿಲ್ಲ. ನನ್ನ ಮೊದಲ ಕೊಪ್ಪ ಸಂತೆ ಭೇಟಿ ಹೀಗೆ ತೃಪ್ತಿಕರವಾಗಿ ಮುಕ್ತಾಯವಾಯಿತು.
----ಮುಂದುವರಿಯುವುದು ---