ಅಧ್ಯಾಯ ೩
ಮಿಲಿಟರಿ
ಡಾಕ್ಟರ್ ಅಲ್ಲದೇ ಕೊಪ್ಪದಲ್ಲಿದ್ದ ಬೇರೆ ಇಬ್ಬರು ಡಾಕ್ಟರ್ಗಳ ಹೆಸರುಗಳು ನೆನಪಿಗೆ ಬರುತ್ತಿವೆ. ಡಾಕ್ಟರ್ ರಾವ್ ಸಾಹೇಬ್ ಎಂಬುವರ ಶಾಪ್ ಮುಖ್ಯ ರಸ್ತೆಯಲ್ಲೇ ಇತ್ತು. ತುಂಬಾ ಅಪರೂಪದ ಹೆಸರದು. ಇನ್ನೊಬ್ಬರು ಡಾಕ್ಟರ್ ಎಂದರೆ ಡಾಕ್ಟರ್ ಯೋಗೇಂದ್ರ ನಾಯಕ್. ನನ್ನ ಅಕ್ಕಂದಿರ ಊರಾದ ಹೊಕ್ಕಳಿಕೆಯವರು ಯಾವಾಗಲೂ ಈ ಡಾಕ್ಟರ್ ಹತ್ತಿರವೇ ಹೋಗುತ್ತಿದ್ದರು. ದುರದೃಷ್ಟವಶಾತ್ ಯೋಗೇಂದ್ರ ನಾಯಕ್ ಕೊಪ್ಪದಲ್ಲೇ ಸಂಭವಿಸಿದ ಒಂದು ರೋಡ್ ಆಕ್ಸಿಡೆಂಟ್ನಲ್ಲಿ
ತೀರಿಕೊಂಡರಂತೆ. ಕಾಲ ಕ್ರಮದಲ್ಲಿ ಮಿಲಿಟರಿ ಡಾಕ್ಟರ್ ನಮ್ಮ ಊರಿಗೆ ಬರುವುದು ನಿಂತು ಹೋಯಿತು. ಅದಕ್ಕೆ
ಮುಖ್ಯ ಕಾರಣ ಇನ್ನೊಬ್ಬ ಡಾಕ್ಟರ್ ಅವರಿಂದ ಪೈಪೋಟಿ.
ಶೃಂಗೇರಿಯಲ್ಲಿ
ಆ ದಿನಗಳಲ್ಲಿ ಡಾಕ್ಟರ್ ಕೆ ಪಿ ಭಟ್ , ಡಾಕ್ಟರ್ ಟಿ
ಕೆ ಭಟ್ ಮತ್ತು ಹೆಗ್ಡೆ ಡಾಕ್ಟರ್ ತುಂಬಾ ಪ್ರಸಿದ್ಧ
ಡಾಕ್ಟರ್ ಆಗಿದ್ದರು. ಆದರೆ ಅವರು ಯಾರೂ ಹಳ್ಳಿಗಳಿಗೆ
ವಿಸಿಟ್ ಮಾಡಲು ಬರುತ್ತಿರಲಿಲ್ಲ. ಕಾರಣ ತುಂಗಾ ನದಿಗೆ ಸೇತುವೆ ಇಲ್ಲದ್ದು ಮತ್ತು ಅವರು ಮೋಟಾರ್ ಬೈಕ್
ಸವಾರಿ ಮಾಡದೇ ಇರುವುದು. ಆದರೆ ಸುಮಾರು ೧೯೬೦ನೇ ಇಸವಿಯ ವೇಳೆಗೆ ತುಂಗಾ ನದಿಗೆ ಸೇತುವೆ ಆದದ್ದು ಮಾತ್ರವಲ್ಲ.
ಶೃಂಗೇರಿಗೆ ಇನ್ನೊಬ್ಬ ಪ್ರಸಿದ್ಧ ಡಾಕ್ಟರ್ ಪ್ರವೇಶ ಮಾಡಿಬಿಟ್ಟರು. ಅವರೇ ಡಾಕ್ಟರ್ ರಾಮಚಂದ್ರ ರಾವ್.
ಬಹು ಬೇಗನೆ ಡಾಕ್ಟರ್ ರಾಮಚಂದ್ರ ರಾವ್ ಅವರ (ಕವಿಲ್ ಕೊಡಿಗೆ ಅವರ ಮನೆಯಲ್ಲಿದ್ದ) ಶಾಪ್ ನಲ್ಲಿ ರೋಗಿಗಳ
ಆಗಮನ ಜಾಸ್ತಿ ಆಗಿ ಹೋಯಿತು. ಮಾತ್ರವಲ್ಲ. ಅವರ
ಹೊಸ ಮೋಟಾರ್ ಬೈಕ್ ಶೃಂಗೇರಿಯ ಸುತ್ತಮುತ್ತಲಿನ ಹಳ್ಳಿಗಳಲ್ಲಿ ರೋಗಿಗಳನ್ನು ನೋಡಲು ಪ್ರತ್ಯಕ್ಷವಾಗತೊಡಗಿತು.
ಹಳ್ಳಿಯವರ ಪ್ರಕಾರ ಅದಕ್ಕೆ ಮುಖ್ಯ ಕಾರಣ ಡಾಕ್ಟರ್ ರಾಮಚಂದ್ರರಾವ್ ಅವರ ಕೈ ಗುಣ. ಒಟ್ಟಿನಲ್ಲಿ ಮಿಲಿಟರಿ ಡಾಕ್ಟರ್ ಅವರ ರಾಯಲ್
ಬುಲೆಟ್ ಮೋಟಾರ್ ಬೈಕ್ ನಮ್ಮೂರ ದಾರಿಯನ್ನು ಬಹು ಬೇಗನೆ ಮರೆತು ಬಿಟ್ಟಿತು.
ಕೊಪ್ಪದ ಹೋಟೆಲ್ ಗಳು
ನನಗೆ
ಮೊದಲು ನೆನಪಿಗೆ ಬರುವುದು ಶಾಸ್ತ್ರಿ
ಹೋಟೆಲಿನ ಹೆಸರು. ಶಾಸ್ತ್ರಿ ಎಂಬುವರು
ಖುದ್ದಾಗಿ ಈ ಹೋಟೆಲ್ ನಡೆಸುತ್ತಿದ್ದರು.
ದೋಸೆ ಹೊಯ್ಯುವುದರಿಂದ ಹಿಡಿದು ಇಡ್ಲಿ ಬೇಯಿಸಿ
ಕಳಸಿಗೆ ಇಳಿಸಿಬಿಡುವುದು, ವಡೆ ಬೇಯಿಸುವುದು ಇತ್ಯಾದಿ
ಸಕಲ ಪಾಕಶಾಸ್ತ್ರ ಪಾರಂಗತರಾಗಿದ್ದ ಶಾಸ್ತ್ರಿಗಳು ಒಬ್ಬ ನುರಿತ ಹೋಟೆಲ್
ಉದ್ಯಮಿಗಳಾಗಿದ್ದರು. ಅವರ ಹೆಸರೇ ಒಂದು
ಬ್ರಾಂಡ್ ಆಗಿ ಬಿಟ್ಟಿತ್ತೆಂದರೆ ಅತಿಶಯೋಕ್ತಿಯಲ್ಲ.
ಇನ್ನು
ಬಸ್ ಸ್ಟಾಂಡ್ ಎದುರಿಗಿದ್ದ ಸುಬ್ಬರಾಯರ
ಗಜಾನನ ಕೆಫೆ ಶಾಸ್ತ್ರಿ ಹೋಟೆಲಿಗಿಂತಲೂ ಮಿಗಿಲಾದ ಹೆಸರು ಪಡೆದಿತ್ತು. ಹೋಟೆಲಿನ
ದೋಸೆ ಮತ್ತು ಕಾಫಿ ರುಚಿ 'ಬಲ್ಲವನೇ ಬಲ್ಲ ಬೆಲ್ಲದ ಸವಿಯ' ಎಂಬ ಗಾದೆಯಂತೆ ಇತ್ತೆಂದು ಹೇಳಬಹುದು.
ಇನ್ನೊಂದು ಪ್ರಸಿದ್ಧ ಹೋಟೆಲಿನ ಒಡೆಯರು ಹಂದೆ ಎಂಬುವರು. ಇವರ ಹೋಟೆಲ್ ಕೂಡ ಪೇಟೆಯ ಮಧ್ಯದಲ್ಲಿತ್ತೆಂದು
ನೆನಪು. ಎಲ್ಲರೂ ಅದನ್ನು ಹಂದೆಯವರ ಹೋಟೆಲ್ ಎಂದು
ಕರೆಯುವುದು ಮಾಮೂಲಾಗಿ ಬಿಟ್ಟಿತ್ತು. ಹೋಟೆಲಿನ ಹೆಸರು ವಸಂತ ವಿಹಾರ ಎಂದಿರಬೇಕು. ಹಂದೆ ಮತ್ತು ಸುಬ್ಬ ರಾಯರು ದಕ್ಷಿಣ ಕನ್ನಡದಿಂದ ಬಂದವರು.
ಶಾಸ್ತ್ರಿಯವರು ಎಲ್ಲಿಂದ ಬಂದರೋ ಗೊತ್ತಿರಲಿಲ್ಲ. ಗಜಾನನ ಕೆಫೆ ಇಂದಿಗೂ ಕೊಪ್ಪದಲ್ಲಿರುವುದಂತೆ. ಪ್ರಾಯಶಃ ಅದು ಶತಮಾನೋತ್ಸವ ಆಚರಿಸುವ ಸಮಯ ಬಂದಿರಬೇಕು.
ಇತರ ಅಂಗಡಿಗಳು
ಜವಳಿ
ಅಂಗಡಿಗಳಲ್ಲಿ ನೆನಪಿಗೆ ಬರುವುದು ಅಚ್ಯುತ
ಭಟ್ಟರ ಜವಳಿ ಅಂಗಡಿ. ಅವರದೊಂದು ಅಂಗಡಿ ಶೃಂಗೇರಿಯಲ್ಲೂ ಇತ್ತೆಂದು
ನೆನಪು. ರೇಷ್ಮೆ ಸೀರೆಯಿಂದ ಹಿಡಿದು
ಎಲ್ಲ ಬಗೆಯ ಜವಳಿಗಳೂ ಭಟ್ಟರ
ಅಂಗಡಿಯಲ್ಲಿ ದೊರೆಯುತ್ತಿದ್ದವು. ಭಟ್ಟರ ಅಂಗಡಿಯಲ್ಲಿ ಬಟ್ಟೆ
ಖರೀದಿಸಿದ ನಂತರ ಹೊಲಿಗೆಗೆ ಕೊಡಲು
ಅವರ ಅಂಗಡಿಯಿಂದ ಸ್ವಲ್ಪ ಕೆಳಗಿನ ರಸ್ತೆಯಲ್ಲಿದ್ದ
ಶೇಷಗಿರಿ ಎಂಬ ಟೈಲರ್ ಬಳಿಗೆ
ಹೋಗುತ್ತಿದ್ದುದು ನೆನಪಾಗುತ್ತದೆ. ಆ ಕಾಲಕ್ಕೆ
ಕೊಪ್ಪದಲ್ಲಿ ಅತ್ಯಂತ ಪ್ರಸಿದ್ಧನಾಗಿದ್ದ ಟೈಲರ್ ಶೇಷಗಿರಿ. ಶೇಷಗಿರಿಯ ಪ್ರಸಿದ್ಧಿ
ಅವನ ಹೊಲಿಗೆಯ ಪ್ರವೀಣತೆಗಲ್ಲ. ಅದಕ್ಕೆ ಕಾರಣವೆ ಬೇರೆ. ಅವನು ಯಾವುದೇ ಡ್ರೆಸ್ ಹೊಲಿಗೆಗೆ ಕೊಟ್ಟದ್ದನ್ನು ಒಪ್ಪಿಕೊಂಡ
ಸಮಯಕ್ಕೆ ಹೊಲಿದು ಕೊಟ್ಟ ಉದಾಹರಣೆಗಳೇ ಇರಲಿಲ್ಲ. ಸಾಮಾನ್ಯವಾಗಿ ಗೋಕುಲಾಷ್ಟಮಿಗೆ ಹಾಕಲೆಂದು ಬಟ್ಟೆ
ಹೊಲಿಗೆಗೆ ಕೊಟ್ಟರೆ ಮಹಾಶಿವರಾತ್ರಿಗೆ ಅದು ಸಿಗುವ ಸಾಧ್ಯತೆ ಇತ್ತು!
ನಾಯಕ್ ಬ್ರದರ್ಸ್ ಆಗಿನ ಕಾಲದಲ್ಲಿ
ಕೊಪ್ಪದಲ್ಲಿ ತುಂಬಾ ಹೆಸರು ಪಡೆದ ಬಿಸಿನೆಸ್ ಫ್ಯಾಮಿಲಿ ಆಗಿತ್ತು. ಈ ಫ್ಯಾಮಿಲಿ ಬಗೆ ಬಗೆಯ ಬಿಸಿನೆಸ್
ಮಾಡುತ್ತಿದ್ದರು. ಅವುಗಳಲ್ಲಿ ಔಷದಿ ಅಂಗಡಿ, ರೇಡಿಯೋ ಶಾಪ್ ಮತ್ತು ಸ್ಟೇಷನರಿ ಸಾಮಾನುಗಳ ಅಂಗಡಿಗಳು
ಮುಖ್ಯವಾದವು. ದಿನಸಿ ಅಂಗಡಿಗಳಲ್ಲಿ ಮುಖ್ಯವಾದವೆಂದರೆ ಮಾವಿನಕಟ್ಟೆ ಸಾಹೇಬರ ಮತ್ತು ಸಿದ್ಧಿ ಸಾಹೇಬರ
ಅಂಗಡಿಗಳು. ಇದಲ್ಲದೇ ಭಾಸ್ಕರನ ಅಂಗಡಿ ಎಂಬುದೂ ಕೂಡ ತುಂಬಾ ಪ್ರಸಿದ್ಧಿ ಪಡೆದಿತ್ತು. ಅಲ್ಲಿ ಸಿಗದ
ವಸ್ತುಗಳಿರಲಿಲ್ಲ. ಮಾವಿನಕಟ್ಟೆ ಸಾಹೇಬರ ಅಂಗಡಿಯ ವಿಶೇಷವೆಂದರೆ ಆ ಅಂಗಡಿಯ ಮುಂದೆ ಮಾವಿನ ಮರಗಳಿರುವ
ಕಟ್ಟೆ ಇದೆಯೆಂದು ತಿಳಿದು ಕೆಲವರು ಪೇಸು ಬೀಳುತ್ತಿದ್ದದ್ದು!
----ಮುಂದುವರಿಯುವುದು ---
No comments:
Post a Comment