Monday, February 18, 2019

ಒಂದು ಊರಿನ ಕಥೆ - ಕೊಪ್ಪ - 1


ಅಧ್ಯಾಯ ೧

ಚಿಕ್ಕಮಗಳೂರು ಜಿಲ್ಲೆಯ ಒಂದು ಮುಖ್ಯ ತಾಲೂಕು ಕೇಂದ್ರ ಕೊಪ್ಪ. ನಮ್ಮ ಬೆಳವಿನಕೊಡಿಗೆ ಗ್ರಾಮ ಈ ತಾಲೂಕಿನ ಹರಿಹರಪುರ ಹೋಬಳಿಗೆ ಸೇರಿತ್ತು. ಒಂದು  ಕಾಲದಲ್ಲಿ 'ತಪ್ಪು ಮಾಡಿದರೆ ಕೊಪ್ಪಕ್ಕೆ ಹಾಕು ' ಎಂಬ ಗಾದೆಯೇ ಇತ್ತಂತೆ. ಇದಕ್ಕೆ ಕಾರಣ ಮಲೇರಿಯಾ ರೋಗ ಮತ್ತು ದಟ್ಟ ಮಲೆನಾಡಿನ ಮಧ್ಯದಲ್ಲಿದ್ದ ಊರಿನಲ್ಲಿ ಯಾವುದೇ ಹೆಚ್ಚು ಸೌಕರ್ಯಗಳು ಇರದೇ ಹೋದದ್ದು.  ಇಂದು ಕೊಪ್ಪ ಒಂದು ದೊಡ್ಡ ಪಟ್ಟಣವಾಗಿ ಬೆಳೆದು ಹೋಗಿದೆ. ಹಾಗೂ ಸಕಲ ಸೌಕರ್ಯಗಳನ್ನು ಹೊಂದಿದೆ.  ಈ ಪಟ್ಟಣ ನಮ್ಮ ಬಾಲ್ಯದಲ್ಲಿ ಹೇಗಿತ್ತೆಂದು ತಿರುಗಿ ನೋಡಿದಾಗ ಅನೇಕ ಪ್ರಸಂಗಗಳು ಹಾಗೂ ವಿಷಯಗಳು ನೆನಪಿಗೆ ಬರುತ್ತಿವೆ.  ಅವನ್ನು ಇಲ್ಲಿ ಮೆಲುಕು ಹಾಕುವ ಪ್ರಯತ್ನ ಮಾಡಿದ್ದೇನೆ.
ನನ್ನ ಮೊದಲ ಕೊಪ್ಪ ಸಂತೆ ಭೇಟಿ
ದಿನಗಳಲ್ಲಿ ನಮ್ಮ ಮನೆಗೆ ಬೇಕಾದ ಎಲ್ಲ ಸಾಮಾನುಗಳನ್ನೂ ನಾವು ಕೊಪ್ಪದಿಂದಲೇ ತರಬೇಕಿತ್ತು. ಆದರೆ ನಾವು ಕೊಪ್ಪಕ್ಕೆ ಹೋಗಲು ಬಸ್ ಹತ್ತಬೇಕಾದರೆ ಮೈಲಿ ನಡೆದು ತುಂಗಾ ನದಿಯ ಉಪನದಿಯಾದ ಸೀತಾ ನದಿಯನ್ನು ದಾಟಿ ಬಿ ಜಿ ಕಟ್ಟೆ ಎಂಬಲ್ಲಿಗೆ ಹೋಗಬೇಕಾಗಿತ್ತು. ವರ್ಷದಲ್ಲಿ ತಿಂಗಳು ಮಳೆಗಾಲದಲ್ಲಿ ನದಿಯಲ್ಲಿ ಪ್ರವಾಹದ ಕಾರಣ ಅದನ್ನು ದಾಟಿ ಹೋಗಿ ಸಾಮಾನುಗಳನ್ನು ತರಲಾಗುತ್ತಿರಲಿಲ್ಲ. ಆದ್ದರಿಂದ ನಮಗೆ ಬೇಕಾದ ಎಲ್ಲಾ ಮುಖ್ಯ ವಸ್ತುಗಳನ್ನು ಪ್ರತಿ ವರ್ಷವೂ ಮೇ ತಿಂಗಳೊಳಗೆ ತಂದುಕೊಳ್ಳಬೇಕಾಗಿತ್ತು.  ಆದರೆ ನಮ್ಮ ತಂದೆಯವರು ಮಳೆಗಾಲದಲ್ಲಿ ಕೂಡಾ ಕೊಪ್ಪದ ಸಂತೆಗೆ ಪ್ರತಿ ಭಾನುವಾರ ವೀಳ್ಯದೆಲೆ ಮಾರಲು ಹೋಗುತ್ತಿದ್ದರು. ಹಾಗೆ ಹೋಗಲು ಮುತ್ತೂರಗಂಡಿ ಎಂಬ ಬೇರೊಂದು ಕಡೆ ಸೀತಾ ನದಿಯನ್ನು ದೋಣಿಯಲ್ಲಿ  ದಾಟಿ ಕಬ್ಬಿಣದ ಸೇತುವೆ ಎಂಬಲ್ಲಿ ಬಸ್ ಹತ್ತಬೇಕಿತ್ತು.

ಸಂತೆಗೆ ಹೋಗಲು ವೀಳ್ಯದೆಲೆಯನ್ನು ಕೊಯ್ದು ೨೦ ಎಲೆಗಳ ಕೌಳಿಗೆ ಮಾಡಿ ಅವನ್ನು ಬಾಳೆ ಎಲೆಯಮೇಲಿಟ್ಟು ಹೊತ್ತಲೆ ಮಾಡುವುದೊಂದು ದೊಡ್ಡ ಕೆಲಸವಾಗಿತ್ತು. ಚಿಕ್ಕವರಾದ ನಾವು ಕೂಡ ಎಲೆ ಒಟ್ಟುವ  ಕೆಲಸ ಮಾಡಲೇ ಬೇಕಿತ್ತು. ನಮಗೆ ಶನಿವಾರ ಅರ್ಧ ದಿನ ಮಾತ್ರ ಸ್ಕೂಲ್ ಇರುತ್ತಿದ್ದರಿಂದ ಉಳಿದ ವೇಳೆ ಕೆಲಸ ಮಾಡಬೇಕಿತ್ತು. ಕೆಲಸ ಎಷ್ಟೋ ಬಾರಿ ರಾತ್ರಿ ಕೂಡ ಮುಂದುವರಿಯುತ್ತಿತ್ತು. ನಮಗೆ ಅದು ಎಷ್ಟೊಂದು ರೂಢಿಯಾಗಿತ್ತೆಂದರೆ ನಾನು ಸ್ಕೂಲಿಗೆ ಭಾನುವಾರ ರಜೆ ಕೊಡಲು ಕಾರಣ ಕೊಪ್ಪದ ಸಂತೆ ಎಂದೂ ಹಾಗೂ ಶನಿವಾರ ಅರ್ಧ ದಿನ ರಜೆ ಎಲೆ ಒಟ್ಟುವ  ಕೆಲಸ ಮಾಡಲೆಂದೂ ತಿಳಿದು ಬಿಟ್ಟಿದ್ದೆ!
ನಾನಿನ್ನೂ ಚಿಕ್ಕವನಾಗಿದ್ದಾಗ ತಂದೆಯವರೊಡನೆ ಒಮ್ಮೆ ನನ್ನನ್ನೂ ಅವರೊಟ್ಟಿಗೆ ಸಂತೆಗೆ ಕರೆದೊಯ್ಯುವಂತೆ ಹಠ ಮಾಡತೊಡಗಿದೆ. ಅವರು ಅದಕ್ಕೊಪ್ಪಿ ಒಂದು ಭಾನುವಾರದ ಸಂತೆಗೆ ನನ್ನನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗಲು ತೀರ್ಮಾನಿಸಿದರು. ಅಷ್ಟು  ಮಾತ್ರವಲ್ಲ. ನನಗಾಗಿ ಇಪ್ಪತ್ತು ಕೌಳಿಗೆಗಳ ಒಂದು ಎಲೆ ಹೊತ್ಲೆಯನ್ನೂ ತಯಾರು ಮಾಡಿಬಿಟ್ಟರು. ನಾನು ಅವರೊಟ್ಟಿಗೆ ಕುಳಿತು ಸಂತೆಯಲ್ಲಿ ಅದನ್ನು ಮಾರಿ ವ್ಯಾಪಾರದ ಸೂಕ್ಷ್ಮಗಳನ್ನು ಅರಿತುಕೊಳ್ಳಬೇಕಿತ್ತು! ನನ್ನ ಉತ್ಸಾಹಕ್ಕೆ ಮಿತಿಯೇ ಇರಲಿಲ್ಲ.
ಭುವನಕೋಟೆ
ಭಾನುವಾರ ಬೆಳಿಗ್ಗೆ ಮುಂಚೆ ನಾವಿಬ್ಬರೂ ಎಲೆ ಹೊತ್ಲೆಗಳನ್ನು ತಲೆಯ ಮೇಲೇರಿಸಿಕೊಂಡು ಮನೆಯಿಂದ ಪ್ರಯಾಣ ಬೆಳೆಸಿದೆವು.  ನಮ್ಮ ತೋಟದ ಗಡಿದಾಟಿ ಒಂದು ಗುಡ್ಡವನ್ನು ಹತ್ತಿ ರಸ್ತೆಯನ್ನು ಸೇರಿದೆವು. ಹಾಗೇ ಸ್ವಲ್ಪ ಮುಂದೆ ಹೋದಾಗ ರಸ್ತೆಯ ಮೇಲ್ಭಾಗಕ್ಕೆ ಭುವನಕೋಟೆ ಎಂಬಲ್ಲಿಗೆ ಹೋಗುವ ಕಾಲುದಾರಿ ಗೋಚರಿಸಿತು.   ದಾರಿಯಲ್ಲಿ ಸ್ವಲ್ಪ ಮುಂದೆ ಹೋದಾಗ ಕೆಳಗೆ ತುಂಬಾ ಆಳದಲ್ಲಿದ್ದ ಭುವನಕೋಟೆ ಅಗ್ರಹಾರ ಕಣ್ಣಿಗೆ ಬಿತ್ತು. ಆಗಿನ ನಮ್ಮ ಮಲೆನಾಡ ಹಳ್ಳಿಗಳಿಗೆ ಸಾಮಾನ್ಯವಾಗಿ ಇರುವ ಹೆಸರಿಗಿಂತ ಭುವನಕೋಟೆ ಎಂಬ ಹೆಸರು ತುಂಬಾ ವಿಭಿನ್ನವಾಗಿತ್ತು. ಹೆಸರಿನ ಹಿಂದೆ ಯಾವುದೊ ರಹಸ್ಯವಿದ್ದು ಅದು ಕಾಲಗರ್ಭದಲ್ಲಿ ಅಡಗಿ ಹೋಗಿರಬೇಕು. ಅಗ್ರಹಾರದ ಒಂದು ಭಾಗ ಆಗರ್ಭ ಶ್ರೀಮಂತರಾಗಿದ್ದ ಬಾಸ್ರಿ ಎಂಬ ಮನೆತನದವರ ವಾಸಸ್ಥಾನವಾಗಿತ್ತು. ಬಾಸ್ರಿಗಳು ನಮ್ಮೂರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಕೋಟ ಎಂಬಲ್ಲಿಂದ (ಶಿವರಾಮ ಕಾರಂತರ ಊರು) ಯಾವುದೊ ಕಾಲದಲ್ಲಿ ವಲಸೆ ಬಂದು ನೆಲಸಿದ್ದರು. ಲೇವಾದೇವಿ ವ್ಯವಹಾರದಲ್ಲಿ ತುಂಬಾ ಹಣಗಳಿಸಿ ದೊಡ್ಡ ದೊಡ್ಡ ಜಮೀನುಗಳನ್ನು ಖರೀದಿಸಿ ಗ್ರಾಮಕ್ಕೆ ದೊಡ್ಡ ಕುಳವಾಗಿದ್ದರು. ಕಾಲವಾಗಿ ಹೋಗಿದ್ದ ಬಾಸ್ರಿಗಳು ನಮ್ಮ ತಂದೆಯವರಮೇಲೆ ತುಂಬಾ ವಿಶ್ವಾಸ ಇಟ್ಟಿದ್ದರಂತೆ. ಹಾಗೇ ಅವರ ದೊಡ್ಡ ಮಗ ನಾಗಪ್ಪ ಬಾಸ್ರಿ ಎಂಬುವರ ಪರಿಚಯವೂ ನಮ್ಮ ತಂದೆಗೆ ಚೆನ್ನಾಗಿ ಇತ್ತು.

ನಾಗಪ್ಪ ಬಾಸ್ರಿಗಳು ಆಗಿನ ಕಾಲದಲ್ಲೇ ಚಾರ್ಟರ್ಡ್ ಅಕೌಂಟೆನ್ಸಿ (CA)  ಪಾಸ್ ಮಾಡಿ ಮಂಗಳೂರಿನಲ್ಲಿ ಕರ್ಣಾಟಕ ಬ್ಯಾಂಕ್ ಹೆಡ್ ಆಫೀಸಿನಲ್ಲಿ ಜನರಲ್ ಮ್ಯಾನೇಜರ್ ಆಗಿದ್ದರು. ನಮ್ಮ ಊರಿನಲ್ಲಿ ಹಲವರ ಪ್ರಕಾರ ಅವರೆಷ್ಟು ಮುಂದುವರಿದಿದ್ದರೆಂದರೆ (forward) ಪ್ರತಿದಿನ ಸಾಯಂಕಾಲ ಮಂಗಳೂರಿನ ರಸ್ತೆಯಲ್ಲಿ ತಮ್ಮ ಹೆಂಡತಿಯೊಡನೆ ಕೈಕೈ ಹಿಡಿದುಕೊಂಡು ವಾಕಿಂಗ್ ಹೋಗುತ್ತಿದ್ದರಂತೆ! ಅವರ ತಮ್ಮ ಹರಿಕೃಷ್ಣ ಬಾಸ್ರಿಯವರು ತಮ್ಮ ಓದನ್ನು ಇಂಟರ್ಮೀಡಿಯೇಟ್ ನಲ್ಲೇ ನಿಲ್ಲಿಸಿ ಊರಿಗೆ ಬರಬೇಕಾಯಿತು. ಬಾಸ್ರಿಯವರ ಒಂದು ದೊಡ್ಡ ಜಮೀನು ವ್ಯವಹಾರ ಕೋರ್ಟ್ನಲ್ಲಿತ್ತು. ತಂದೆಯವರು ತೀರಿಕೊಂಡಿದ್ದರಿಂದ ಅವರೇ ಅದನ್ನು ನೋಡಿಕೊಳ್ಳ ಬೇಕಾಗಿತ್ತು. ಇನ್ನೊಬ್ಬ ಅಣ್ಣ ನರಸಿಂಹ ಬಾಸ್ರಿಗಳು ಹೆಚ್ಚು ಓದಿರದಿದ್ದರಿಂದ ಅದಕ್ಕೆ ಯೋಗ್ಯರಾಗಿರಲಿಲ್ಲ.

ನಾವು ಅಲ್ಲಿಂದ ಒಂದು ಗದ್ದೆ ಹಾಗೂ ಕಾಡನ್ನು ದಾಟಿ ರಸ್ತೆ ಸೇರಿದೆವು. ಆ ರಸ್ತೆ ನಮ್ಮನ್ನು ಹಳ್ಳಿಮನೆ ಮತ್ತು ಕೊಂಡಿಬೈಲು ಎಂಬ ಮನೆಗಳನ್ನು ಹಾಗೂ  ಸೀತಾನದಿಯನ್ನು ದಾಟಿ  ಬಿ ಜಿ ಕಟ್ಟೆ ತಲುಪಿಸಿತು.. ನಾನು ಅದುವರೆಗೆ ಬಸ್ ಪ್ರಯಾಣವಿರಲಿ ಬಸ್ಸನ್ನೇ ನೋಡಿರಲಿಲ್ಲ. ಸ್ವಲ್ಪ ಹೊತ್ತಿನ ನಂತರ ನಮ್ಮ ಮುಂದೆ ಶಂಕರ್ ಟ್ರಾನ್ಸ್ಪೋರ್ಟ್ಸ್ ಬಸ್ ಒಂದು ಪ್ರತ್ಯಕ್ಷವಾಯಿತು. ನಮ್ಮ ತಂದೆಯವರು ಅವರ ಹೊತ್ಲೆಯನ್ನು ಬಸ್ಸಿನ ಟಾಪ್ ಮೇಲೆ ಹಾಕಿಬಂದರು. ನನ್ನ ಹೊತ್ಲೆಯನ್ನು ಅವರ ತೊಡೆಯಮೇಲೆ ಇಟ್ಟುಕೊಂಡರು. ನಾವೆಲ್ಲರೂ ಬಸ್ ಹತ್ತಿದ ನಂತರ ಡ್ರೈವರ್ಪೋಯಾ’ ಎಂದು ಕೇಳಿದ.  ಕಂಡಕ್ಟರ್ ಕೂಡಲೇ ರೈಟ್! ಪೋಯೀ ! ಎಂದು ಕೂಗಿ ಸೀಟಿ ಹಾಕಿಬಿಟ್ಟ. ಪೋಯಾ ಮತ್ತು ಪೋಯೀ ಎಂಬುದು ತುಳು ಭಾಷೆಯಂತೆ. ನಮಗೆ ಡ್ರೈವರ್ ಹಿಂದಿನ ಸೀಟ್ ಸಿಕ್ಕಿದ್ದರಿಂದ ನಾನು ಅವನು ಡ್ರೈವ್ ಮಾಡುವುದನ್ನು ಗಮನಿಸತೊಡಗಿದೆ. ಅವನು ಘಾಟಿಯ ತಿರುವಿನಲ್ಲಿ ಡ್ರೈವ್ ಮಾಡುವ ಕೌಶಲ್ಯ ನನಗೆ ತುಂಬಾ ಇಷ್ಟವಾಯಿತು. ನನ್ನ ದೃಷ್ಟಿಯಲ್ಲಿ ಅವನೊಬ್ಬ ಹೀರೊ ಆಗಿಬಿಟ್ಟ. ನನ್ನ ಮನಸ್ಸಿನಲ್ಲೇ ನಾನೂ ಒಂದು ದಿನ ಡ್ರೈವರ್ ಆಗಬೇಕೆಂದೂ ಆಸೆಪಟ್ಟುಬಿಟ್ಟೆ. ನಮ್ಮ ಬಸ್ಸು ನಾರ್ವೆ ಮತ್ತು ಕುಂಚೂರು ಘಾಟಿಯಮೇಲೆ ಹಾದು ಅರ್ಧ ಘಂಟೆಯಲ್ಲಿ ಕೊಪ್ಪ ತಲುಪಿತು.

ಆಗಿನ ಕಾಲದಲ್ಲಿ ಕೊಪ್ಪ ಬಸ್ ನಿಲ್ದಾಣ ಮೇಲಿನಪೇಟೆ ಎಂಬಲ್ಲಿತ್ತು. ನಮ್ಮ ಹೊತ್ತಲೆಗಳೊಡನೆ ನಾವು ಬೇಗ ಬೇಗನೆ  ನಡೆದು ಸಂತೆ ತಲುಪಿದೆವು. ಅಷ್ಟರಲ್ಲೇ ಬೇರೆ ಬೇರೆ ಊರುಗಳಿಂದ ಬಂದವರು ಒಳ್ಳೊಳ್ಳೆ ಜಾಗ ಆರಿಸಿಕೊಂಡು ಎಲೆ ಮಾರಲು ತೊಡಗಿದ್ದರು. ನಮ್ಮ ತಂದೆಯವರು ಕೂಡ ಒಂದು ಜಾಗ ಆರಿಸಿ ನಮ್ಮಿಬ್ಬರಿಗೂ ಹೊತ್ತಲೆಗಳನ್ನು ಮುಂದಿರಿಸಿಕೊಂಡು ಕುಳಿತುಕೊಳ್ಳಲು ಏರ್ಪಾಟು ಮಾಡಿದರು. ಅವರು ಮಾರ್ಕೆಟ್ಟಿಗೆ ಒಂದು ರೌಂಡ್ ಹಾಕಿ ಆದಿನ ಎಲೆಗೆ ಯಾವ ಬೆಲೆ ಹೇಳಬಹುದು ಎಂದು ತಿಳಿದುಕೊಂಡರು. ಆದಿನ ಡಿಮ್ಯಾಂಡಿಗಿಂತ ಸಪ್ಲೈ ಕಡಿಮೆಯಿದ್ದರಿಂದ ಎಲೆಗೆ ಒಳ್ಳೆ ಬೆಲೆ ಇತ್ತಂತೆ. ತಂದೆಯವರು ಬಿಡಿ ಕೌಳಿಗೆಗಳನ್ನು ಒಳ್ಳೆ ಬೆಲೆಯಲ್ಲಿ ಮಾರತೊಡಗಿದರು. ನಾನು ನೋಡುತ್ತಿದ್ದಂತೆ ಒಬ್ಬ ಗಿರಾಕಿ ನನ್ನ ಇಡೀ ಹೊತ್ತಲೆಯನ್ನು ಒಳ್ಳೆ ಬೆಲೆಗೆ ಕೊಂಡುಬಿಟ್ಟ.ಅವನು ಕೊಟ್ಟ ಹಣವನ್ನು ತಂದೆಯವರು ಎಣಿಸಿ ನನ್ನ ಜೇಬಿನಲ್ಲಿ ಹಾಕಿಬಿಟ್ಟರು. ಅದು ನನ್ನ ಜೀವಮಾನದ ಮೊದಲ ಸಂಪಾದನೆಯಾಗಿತ್ತು.  ನನ್ನ ಖುಷಿಗೆ ಮಿತಿ ಇರಲಿಲ್ಲ. ಸ್ವಲ್ಪ ಸಮಯದಲ್ಲೇ ತಂದೆಯವರ ಎಲೆಗಳೂ ಸಂಪೂರ್ಣವಾಗಿ ಮಾರಾಟವಾದವು.

ತಂದೆಯವರ ಪ್ರಕಾರ ಕೆಲವು  ಬಾರಿ ಡಿಮ್ಯಾಂಡಿಗಿಂತ  ಸಪ್ಲೈ ಜಾಸ್ತಿಯಾಗಿ ಬೆಲೆ ಪೂರ್ತಿ ಬಿದ್ದು ಹೋಗುತ್ತಿತ್ತಂತೆ. ಆಗ ರೈತರೆಲ್ಲಾ ತಮ್ಮ ಎಲೆಗಳನ್ನು "ಎಲೆ ರಾಮಯ್ಯ"ಎಂಬ ಸಗಟು ವ್ಯಾಪಾರಿಗೆ ಅತ್ಯಂತ ನಿಕೃಷ್ಟ ದರದಲ್ಲಿ ಮಾರಬೇಕಾಗುತ್ತಿತ್ತಂತೆ. ಅವರು ಅದನ್ನೆಲ್ಲಾ ಮಾರನೇ ದಿನದ ತರೀಕೆರೆಯ ಸಂತೆಗೆ ತೆಗೆದುಕೊಂಡು ಹೋಗುತ್ತಿದ್ದರಂತೆ.  ಅಲ್ಲಿ ಯಾವಾಗಲೂ ಕೊಪ್ಪಕ್ಕಿಂತ ಒಳ್ಳೆ ಬೆಲೆ ಸಿಗುತ್ತಿತ್ತಂತೆ. ಆದರೆ ತಂದೆಯವರು ಮಾತ್ರ ಒಂದು ಬಾರಿಯೂ  ಎಲೆ ರಾಮಯ್ಯನ ಹತ್ತಿರ ಸುಳಿಯಲೂ ಇಲ್ಲವಂತೆ. ಅವರಿಗೆ ಅವರದ್ದೇ ಆದ ಮಾರಾಟ ಕೌಶಲವಿತ್ತು.

ನಮ್ಮ ಮನೆಗೆ ಅವಶ್ಯವಾಗಿ ಬೇಕಾದ ಕೆಲವು ವಸ್ತುಗಳನ್ನು ತಂದೆಯವರು ಸಂತೆಯಲ್ಲೇ ಕೊಳ್ಳ ತೊಡಗಿದರು. ನಾನು ಅವರ ವ್ಯವಹಾರವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೆ. ಅವರು ತಾವು ತಂದ  ವಸ್ತುಗಳನ್ನು ಅತ್ಯಂತ ಹೆಚ್ಚು ಬೆಲೆಗೂ ಹಾಗೂ ತಾವು ಕೊಳ್ಳುವ ಸಾಮಾನುಗಳನ್ನು ಅತ್ಯಂತ ಕಡಿಮೆ ಬೆಲೆಗೂ ವ್ಯವಹಾರ ಮಾಡುವುದರಲ್ಲಿ ನಿಸ್ಸೀಮರಾಗಿದ್ದರು. ಅದೆಷ್ಟೆಂದರೆ ನಮ್ಮ ಊರಿನ ಎಷ್ಟೋ ಜನರು ವಿಚಾರದಲ್ಲಿ ಅವರ ಸಲಹೆ ಪಡೆಯುತ್ತಿದ್ದರು.

ಸಂತೆಯ ವ್ಯಾಪಾರ ಮುಗಿಸಿ ನಾವು ಬಸ್ ಸ್ಟ್ಯಾಂಡ್ ಕಡೆ ಬಂದೆವು. ದಾರಿಯಲ್ಲಿ ನಾವು ಪೊಲೀಸ್ ಠಾಣೆಯ ಮುಂದೆ ಬರಬೇಕಾಯಿತು. ಅಲ್ಲಿ ಒಂದು ದೃಶ್ಯ ನನ್ನ ಕಣ್ಣಿಗೆ ಬಿತ್ತು. ಯಾರೋ ಒಬ್ಬ ದೊಡ್ಡ ಹುಡುಗ ಠಾಣೆಯ  ಮುಂದಿನ ರಸ್ತೆಯ ಬದಿ ಮೂತ್ರ ಮಾಡತೊಡಗಿದ. ಅದನ್ನು ನೋಡಿದ ಪೊಲೀಸ್ ಪೇದೆಯೊಬ್ಬ ಅವನನ್ನು ಠಾಣೆಯೊಳಗೆ ಎಳೆದುಕೊಂಡು ಹೋಗಿ ಬಿಟ್ಟ. ನನಗೆ ಅದನ್ನು ನೋಡಿ ತುಂಬಾ ಗಾಬರಿಯಾಯಿತು. ತಂದೆಯವರನ್ನು ಆಬಗ್ಗೆ ಕೇಳಿದಾಗ ಅವನು ಮಾಡಿದ್ದು ಅಪರಾಧವೆಂದೂ ಮತ್ತು ಅದಕ್ಕೆ ಅವನಿಗೆ  ಶಿಕ್ಷೆಯಾಗುವುದೆಂದೂ ತಿಳಿಯಿತು. ಅದನ್ನು ಕೇಳಿ ನಾನು ಎಂದೂ ಪೇಟೆಯಲ್ಲಿ ವಾಸಮಾಡಬಾರದೆಂದೂ ಹಳ್ಳಿಯಲ್ಲೇ ಇದ್ದುಬಿಟ್ಟರೆ ನೆಮ್ಮದಿ ಎಂದೂ ತೀರ್ಮಾನಿಸಿಬಿಟ್ಟೆ.
ನಾವು ಆಮೇಲೆ ಬಸ್ಸಿನಲ್ಲಿ ಬಿ ಜಿ ಕಟ್ಟೆ ತಲುಪಿ ಅಲ್ಲಿಂದ ನಾವು ಕೊಂಡ ಸಾಮಾನುಗಳನ್ನೆಲ್ಲಾ ತಲೆಯಮೇಲೆ ಹೊತ್ತುಕೊಂಡು ಮನೆ ತಲುಪಿದೆವು. ನನಗೆ ಹೋಗುವಾಗ ಇದ್ದ ಉತ್ಸಾಹ ವಾಪಾಸ್ ಬರುವಾಗ ಇರಲಿಲ್ಲ. ಆದರೆ ಜೇಬಿನಲ್ಲಿದ್ದ ಎಲೆ ದುಡ್ಡು ತುಂಬಾ ಖುಷಿ ಕೊಟ್ಟಿತೆಂದು ಹೇಳಬೇಕಿಲ್ಲ. ನನ್ನ ಮೊದಲ ಕೊಪ್ಪ ಸಂತೆ ಭೇಟಿ ಹೀಗೆ ತೃಪ್ತಿಕರವಾಗಿ ಮುಕ್ತಾಯವಾಯಿತು.
----ಮುಂದುವರಿಯುವುದು ---

No comments: