Wednesday, February 20, 2019

ಒಂದು ಊರಿನ ಕಥೆ - ಕೊಪ್ಪ- 2

ಅಧ್ಯಾಯ ೨
ಕೊಪ್ಪ ಎಂದು ಹೆಸರು ಬರಲು ಅಲ್ಲಿದ್ದ ಕೋಪದ ವೀರಭದ್ರ ದೇವಸ್ಥಾನವೇ  ಕಾರಣವಂತೆ. ಆದರೆ ದೇವಸ್ಥಾನ ಎಲ್ಲಿತ್ತೆಂಬುವುದು ನಮಗೆ ತಿಳಿದಿರಲಿಲ್ಲ. ಶೃಂಗೇರಿಯಲ್ಲಿ ಪವಿತ್ರ ತುಂಗಾ ನದಿ ಹರಿಯುತ್ತಿದ್ದರೆ ಕೊಪ್ಪದ ಹತ್ತಿರ ಒಂದು ಹಳ್ಳ ಹರಿಯುತ್ತಿದ್ದು ಅದಕ್ಕೆ ಯಾವುದೋ ಕಾರಣದಿಂದ ಮುಸರೇಹಳ್ಳವೆಂದು ಕರೆಯಲಾಗುತ್ತಿತ್ತು. ದಿನಗಳಲ್ಲಿ ನಮ್ಮ ಮನೆಗಳಲ್ಲಿ ಮುಸರೆ ಮುಟ್ಟಿದರೆ (ಅನ್ನದ ಪಾತ್ರೆ  ಇತ್ಯಾದಿ ) ಕೈ ತೊಳೆಯ ಬೇಕಿತ್ತು. ಹಾಗಿರುವಾಗ  ಮುಸರೇ ಹಳ್ಳದ ನೀರು ಮುಟ್ಟಿದರೆ ಏನು ಮಾಡಬೇಕಿತ್ತೆಂದು ನಮಗೆ ಆಶ್ಚರ್ಯವಾಗುತ್ತಿತ್ತು. ನಮ್ಮ ದಾಯಾದಿಗಳಿದ್ದ ಕೆಸವೆ ಎಂಬ ಊರಿಗೆ ಹೋಗುವಾಗ ನಾವು ಮುಸರೇಹಳ್ಳವನ್ನು ದಾಟಿ ಹೋಗುತ್ತಿದ್ದೆವು.
ಲೋಕಸೇವಾನಿರತ ಎಂ ಎಸ್ ದೇವೇಗೌಡರು
ಆಗಿನ ಕಾಲದಲ್ಲಿ ಕೊಪ್ಪ ಏಳಿಗೆ ಕಾಣಲು ಮುಖ್ಯ ಕಾರಣ ಮಾನ್ಯ ಎಂ ಎಸ್ ದೇವೇಗೌಡರು. ಆಗರ್ಭ ಶ್ರೀಮಂತರಾಗಿದ್ದ  ದೇವೇಗೌಡರಿಗೆ ಅವರ ಜನಹಿತ ಕಾರ್ಯಗಳನ್ನು ಪರಿಗಣಿಸಿ ಮೈಸೂರಿನ ಮಹಾರಾಜರು ಲೋಕಸೇವಾನಿರತ ಎಂಬ ಬಿರುದನ್ನು ನೀಡಿದ್ದರಂತೆ. ಶೃಂಗೇರಿಯ ರಸ್ತೆಗೆ ಟಾರ್ ಹಾಕುವ ಮೊದಲೇ ಕೊಪ್ಪದ ರಸ್ತೆಗೆ  ಆಗಿನ ಕಾಲದಲ್ಲೇ ಕಾಂಕ್ರೀಟ್  ಹಾಕಲಾಗಿತ್ತು. ಹಾಗೇ ಮೇಲಿನ ಪೇಟೆಯಲ್ಲಿ ಒಂದು ದೊಡ್ಡ ವಾಟರ್ ಟ್ಯಾಂಕ್ ಕಟ್ಟಿಸಿ ಊರಿಗೆಲ್ಲಾ ನೀರು ಸರಬರಾಯಿ ಮಾಡಲಾಗುತ್ತಿತ್ತು.  ಇನ್ನು ಇಲ್ಲಿನ ಸಾರ್ವಜನಿಕ ಆಸ್ಪತ್ರೆ ತುಂಬಾ ಪ್ರಸಿದ್ಧಿ ಪಡೆದಿತ್ತು.  ಕಾಂತರಾಜ್ ಎಂಬ ಡಾಕ್ಟರ್ ತುಂಬಾ ಹೆಸರುಗಳಿಸಿದ್ದರು.

ದೇವೇಗೌಡರು ಮೂಲತಃ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಎಂಬ ಊರಿನವರಂತೆ. ಅವರು ದೊಡ್ಡ ದೊಡ್ಡ ಕಾಫಿ ಎಸ್ಟೇಟ್ ಹೊಂದಿದ್ದಲ್ಲದೆ ಕೊಪ್ಪದಲ್ಲಿ ಶಂಕರ್ ಟ್ರಾನ್ಸ್ಪೋರ್ಟ್ ಒಡೆಯರಾಗಿದ್ದರು. ಕೊಪ್ಪದಲ್ಲಿದ್ದ ಒಂದೇ ಒಂದು ರೈಸ್ ಮಿಲ್ ಆದ ಶಂಕರ್ ರೈಸ್ ಮಿಲ್ ಕೂಡ ಅವರದ್ದಂತೆ. ಅವರ ಇಬ್ಬರು ಮಕ್ಕಳಾದ ಎಂ ಡಿ ನಾರಾಯಣ್ ಮತ್ತು ಎಂ ಡಿ ಬಾಲಕೃಷ್ಣ ಅವರ ಹೆಸರು ನೆನಪಿಗೆ ಬರುತ್ತಿದೆ. ಬಾಲಕೃಷ್ಣ  ಅವರು ನೇತ್ರಕೊಂಡ ಮತ್ತು ಕರ್ಕಿ ಕಾಫಿ ಎಸ್ಟೇಟ್ ಒಡೆಯರಾಗಿದ್ದರು. ಅವರು United Planters’ Association of South India (UPASI)  ಛೇರ್ಮನ್ ಆಗಿದ್ದರಂತೆ. ಅವರು ೨೦೧೫ನೇ ಇಸವಿಯಲ್ಲಿ ತೀರಿಕೊಂಡಾಗ ಅವರ ಅಂತ್ಯಕ್ರಿಯೆ ಅವರ ತಂದೆ ಮತ್ತು  ತಾಯಿ (ಪುಟ್ಟಮ್ಮ) ಅವರ ಅಂತ್ಯಕ್ರಿಯೆ ನಡೆದಿದ್ದ ರೈಸ್ ಮಿಲ್ ಕಾಂಪೌಂಡ್ ಒಳಗೇ ಮಾಡಲಾಯಿತೆಂದು ಹಿಂದೂ ಪತ್ರಿಕೆಯ ವರದಿಯೊಂದು ಹೇಳುತ್ತದೆ.

ಕ್ಯಾಪ್ಟನ್  ಎಂ ಆರ್ ಆರ್ ಐಯ್ಯಂಗಾರ್  (ಮಿಲಿಟರಿ ಡಾಕ್ಟರ್)
ಆಗಿನ ಕಾಲದಲ್ಲಿ ನಮ್ಮ ಮಲೆನಾಡ ಯಾವುದೇ ಮನೆಯಲ್ಲಿ ರೋಗಿಯ ಪರಿಸ್ಥಿತಿ ಕಠಿಣವಾಗಿದ್ದರೆ ಕೊಪ್ಪದಿಂದ ಮಿಲಿಟರಿ ಡಾಕ್ಟರ್ ಅವರನ್ನು ಕರೆಸಲಾಗುತ್ತಿತ್ತು. ಅವರ ರಾಯಲ್ ಬುಲೆಟ್ ಮೋಟಾರ್ ಬೈಕ್ ಯಾವುದೇ ಹಳ್ಳಿ ರಸ್ತೆ ಅಥವಾ ಕಾಡಿನ ಮಧ್ಯದ ಕಾಲು ದಾರಿಯಲ್ಲಿ ಗುಡುಗುಡಿಸುತ್ತಾ ಬಂದು ಬಿಡುತ್ತಿತ್ತು. ಆದರೆ ನಮ್ಮ ಕೆಲವು ಮನೆಗಳಿಗೆ ತೋಟದೊಳಗೆ ಅದು ಬರುತ್ತಿರಲಿಲ್ಲ. ಆಗ ಮನೆಯ ಒಬ್ಬರು ಅವರ ಬ್ಯಾಗನ್ನು ಹಿಡಿದುಕೊಂಡು ಅವರನ್ನು ಮನೆಗೆ ಕರೆತರಬೇಕಿತ್ತು. ತುಂಬಾ  ಸ್ಟೈಲಿಶ್ ಆಗಿದ್ದ ಡಾಕ್ಟರ್ ಮಿಲಿಟರಿ ಹ್ಯಾಟ್ ಹಾಕಿಕೊಂಡು ದರ್ಪದಿಂದ  ಮನೆಗೆ ಪ್ರವೇಶ ಮಾಡುತ್ತಿದ್ದಂತೆಯೇ  ರೋಗಿಯ  ಅರ್ಧ ರೋಗ ದೇಹ ಬಿಟ್ಟು ಓಡಿಹೋದಂತೆ ಅನಿಸುತ್ತಿತ್ತು!  ಆಗಿನ ಕಾಲದಲ್ಲಿ ಇಂಜೆಕ್ಷನ್ ಚುಚ್ಚಿಸಿಕೊಳ್ಳಲು ನಾವೆಲ್ಲ ತುಂಬಾ ಭಯ ಪಡುತ್ತಿದ್ದೆವು. ಆದರೆ ಡಾಕ್ಟರ್ ನಮ್ಮ ಕೈ ಹಿಡಿದು ಯಾವುದೊ ರೀತಿಯಲ್ಲಿ ನಮಗೆ ಮುಗುಳ್ನಗೆ ಬರುವಂತೆ ಮಾಡಿ ಇಂಜೆಕ್ಷನ್ ಚುಚ್ಚಿ ಬಿಡುತ್ತಿದ್ದರು. ಆಗಿನ ಕಾಲದಲ್ಲಿ ಮನೆಯ ಎಲ್ಲರಿಗೂ ಒಮ್ಮೆಯಾದರೂ ಟೈಫಾಯಿಡ್ ಕಾಯಿಲೆ ಬಂದೇ ಬರುತ್ತಿತ್ತು. ಆದರೆ ಮಿಲಿಟರಿ ಡಾಕ್ಟರ್ ಅವರ ಮೂರು ಇಂಜೆಕ್ಷನ್ಗಳ ಸರ್ಜಿಕಲ್ ಸ್ಟ್ರೈಕ್ ಎದುರಿಸಲಾಗದೇ ಅದು ಪರಾರಿಯಾಗುತ್ತಿತ್ತು.

ಕೊಪ್ಪದ ಮೇಲಿನಪೇಟೆಯಲ್ಲಿದ್ದ ಡಾಕ್ಟರ್ ಮನೆಗೆ ಕೆಲವು ಬಾರಿ ಹೋಗಿದ್ದು ನೆನಪಿಗೆ ಬರುತ್ತಿದೆ. ಅವರಿಗೆ ಹರಿಹರಪುರದ ಹತ್ತಿರ ಜಮೀನು ಇತ್ತು. ಅದನ್ನು ಅವರೇ ಸ್ವತಃ ವ್ಯವಸಾಯ ಮಾಡುತ್ತಿದ್ದರಂತೆ.  ನನಗೆ ಶಿವಮೊಗ್ಗೆಯಲ್ಲಿ ಹೈಸ್ಕೂಲ್ ಓದಲು  ಹೋಗುವಾಗ ಬ್ರಾಹ್ಮಣರ ಹಾಸ್ಟೆಲ್ಲಿನಲ್ಲಿ ಫ್ರೀ ಸೀಟ್ ಸಿಗುವಂತೆ ಡಾಕ್ಟರಿಂದ ಒಂದು ರೆಕಮೆಂಡೇಷನ್ ಲೆಟರ್ ಸಿಕ್ಕಿತ್ತು. ಆದರೆ ಒಂದು ಕಂಡೀಶನ್ ಮೇಲೆ! ನಾನು ತರಗತಿಗೆ ಒಂದು ಅಥವಾ ಎರಡನೇ ಸ್ಥಾನ ಗಳಿಸಲೇ ಬೇಕಿತ್ತು!  ಅದೂ ಕೂಡ ಒಂದು ಮಿಲಿಟರಿ ಆರ್ಡರ್ ನಂತೆಯೇ ಇತ್ತು!

ಪುಣ್ಯಾತ್ ಗಿತ್ತಿ  ರತ್ನಾವತಿ!
ಆಗಿನ ಕೊಪ್ಪದಲ್ಲಿ ನಮಗೆ ಸಂಭಂದಿಗಳ ಮನೆಗಳು ಒಂದು ಕೈಬೆರಳಿನಲ್ಲಿ ಎಣಿಸುವಷ್ಟೂ ಇರಲಿಲ್ಲ. ನನ್ನ ನೆನಪಿಗೆ ಬರುವುದು ಕೇವಲ ಮೂರು ಮನೆಗಳು ಮಾತ್ರಾ . ಮೇಲಿನಪೇಟೆಯಲ್ಲಿದ್ದ ರತ್ನಾವತಿ ಎಂಬುವರ ಮನೆ. ಕೆಳಗಿನಪೇಟೆಯಲ್ಲಿ ಕೆಸವೆ ರಂಗಪ್ಪಯ್ಯ ಮತ್ತು ಊರುಗುಡಿಗೆ ಶ್ರೀನಿವಾಸಯ್ಯ ಎಂಬುವರ ಮನೆಗಳು. ನಮ್ಮ ಮನೆಯಲ್ಲಿ ಯಾರಿಗಾದರೂ ಕೊಪ್ಪದಲ್ಲೇ ರಾತ್ರಿ ಉಳಿದುಕೊಳ್ಳುವ ಸಂದರ್ಭ ಬಂದಾಗ ರತ್ನಾವತಿಯವರ ಮನೆಯ ಬಾಗಿಲು ನಮಗೆ ತೆರೆದಿರುತ್ತಿತ್ತು.   ನಮಗೆ ಯಾವುದೋ ದೂರದ ಸಂಬಂಧಿಗಳಾದ ರತ್ನಾವತಿಯವರು ತುಂಬಾ ಆದರದಿಂದ ನಮ್ಮನ್ನು ನೋಡಿಕೊಳ್ಳುತ್ತಿದ್ದರು. ಅವರ ಮಗಳೊಬ್ಬಳು ಶಂಕರ್ ಟ್ರಾನ್ಸ್ಪೋರ್ಟ್ ಆಫೀಸ್ನಲ್ಲಿ ಕೆಲಸ ಮಾಡುತ್ತಿದ್ದಳು.

ರತ್ನಾವತಿಯವರ  ಗಂಡ ದ್ವಾರಮಕ್ಕಿ ಮಂಜಪ್ಪಯ್ಯ  ಎಂಬುವರು. ಅವರು ಯಾವ ವೃತ್ತಿಯಲ್ಲಿ ತೊಡಗಿದ್ದರೆಂದು ನೆನಪಿಗೆ ಬರುತ್ತಿಲ್ಲ. ಆದರೆ ಅವರು ಯಾವುದೋ ದೇವಸ್ಥಾನಕ್ಕಾಗಿ ಅಡಿಕೆ ಸಂಭಾವನೆಗಾಗಿ  ಪ್ರತಿ ವರ್ಷವೂ ನಮ್ಮೂರಿಗೆ ಬರುತ್ತಿದ್ದದ್ದು ನೆನಪಿದೆ. ಅವರು ಕೊಪ್ಪದಲ್ಲಿ ವಾಸಿಸುತ್ತಿದ್ದ ಮನೆಗೆ ಮಂಜಪ್ಪಯ್ಯನವರ ಮನೆ ಎನ್ನದೇ ರತ್ನಾವತಿಯ ಮನೆ ಎಂದು ಕರೆಯಲು ಕಾರಣ ಏನಿರಬಹುದೆಂದು ನಮಗೆ ಅನಿಸುತ್ತಿತ್ತು. ಬಗ್ಗೆ ತಂದೆಯವರನ್ನು ಕೇಳಿದಾಗ ಅವರು ತಮಾಷೆಯಾಗಿ ರತ್ನಾವತಿ ಪುಣ್ಯಾತ್ ಗಿತ್ತಿ ಆದ್ದರಿಂದ ಮನೆಗೆ ಅವಳ ಹೆಸರೇ ಮುಖ್ಯವಾಗಿತ್ತೆಂದರು. ರತ್ನಾವತಿ ಪುಣ್ಯಾತ್ ಗಿತ್ತಿ ಎಂದು ಹೇಳಲು ಮುಖ್ಯ ಕಾರಣ ಅವರ ಅಮ್ಮನ ಹೆಸರು ಪುಣ್ಯಮ್ಮ ಎಂದಿತ್ತಂತೆ. ಅದೊಂದು ಅಪರೂಪವಾದ ಹೆಸರು. ಅವರ ಮನೆ ನಮ್ಮ ತಂದೆಯ ಅಕ್ಕನ ಮಗ ಮರಡಿ ಕೃಷ್ಣರಾಯರ ಮನೆಯ ಪಕ್ಕದಲ್ಲಿತ್ತಂತೆ.
----ಮುಂದುವರಿಯುವುದು ---

1 comment:

ಮಾಧವ ರಾವ್ ಎ.ವಿ. said...

ಲೋಕ ಸೇವಾನಿರತ ಎಂ. ಎಸ್. ದೇವೇಗೌಡರಲ್ಲ, ಅವರು ದ್ಯಾವೇಗೌಡರು.