Sunday, February 24, 2019

ಒಂದು ಊರಿನ ಕಥೆ - ಕೊಪ್ಪ - 4


ಅಧ್ಯಾಯ ೪
ಅಚ್ಯುತ ಭಟ್ಟರ ಅಂಗಡಿಯ ಪಕ್ಕದಲ್ಲೇ ಸುಬ್ಬಾಭಟ್ಟರ ಅಂಗಡಿಯಿತ್ತು. ಅದು ಹೆಸರಿಗೆ ದಿನಸಿ ಅಂಗಡಿಯಾದರೂ ಅಲ್ಲಿ ಸಿಗದ ಸಾಮಾನುಗಳಿರಲಿಲ್ಲ. ನನಗೆ ತಿಳಿದಂತೆ ಸುಬ್ಬಾಭಟ್ಟರು  ಚಾರಣಬೈಲ್ ಹತ್ತಿರ ಇದ್ದ ಮೆಟ್ಲುಮನೆಯವರು. ಅವರ ಫ್ಯಾಮಿಲಿ ಆಗರ್ಭ ಶ್ರೀಮಂತ ಮನೆತನವಾಗಿತ್ತು. ಅದರಲ್ಲಿ ಕೆಲವರು ನನ್ನೊಟ್ಟಿಗೆ ಬಸವಾನಿ ಮಿಡ್ಲ್ ಸ್ಕೂಲ್ ಗೆ ಬರುತ್ತಿದ್ದರು.

ನಾವು ಚಿಕ್ಕವರಾಗಿದ್ದಾಗಲೇ ಬಸ್ ನಿಲ್ದಾಣವನ್ನು ಹೊಸದಾಗಿ ಕೆಳಗಿನ ಪೇಟೆಯಲ್ಲಿ ನಿರ್ಮಿಸಲಾಯಿತು. ಅದರ ಮೊದಲ ಜಾಗದಲ್ಲಿ ಒಂದು ಪೆಟ್ರೋಲ್ ಬಂಕ್ ಮತ್ತು ಟಾಟಾ ಮರ್ಸಿಡೆಸ್ ಬೆಂಜ್ ಸರ್ವಿಸ್ ಸೆಂಟರ್ ಗಳನ್ನು  ಕಟ್ಟಲಾಯಿತು. ಹೊಸ ಬಸ್ ನಿಲ್ದಾಣದ ಎದುರಿಗೆ ಸೀತಾರಾಮ ಎಂಬುವರ ಗೀತಾ ಕೆಫೆ ಎಂಬ ಹೋಟೆಲ್ ಇತ್ತು. ಗೀತಾ ಅವರ ಮಗಳ ಹೆಸರಂತೆ. ಮೊದಲು ಮೊದಲು ಚೆನ್ನಾಗಿಯೇ ನಡೆಯುತ್ತಿದ್ದ ಹೋಟೆಲ್ ಕ್ರಮೇಣ ನಷ್ಟ ಅನುಭವಿಸಿ ಮುಚ್ಚಲ್ಪಟ್ಟಿತು. ಸೀತಾರಾಮ  ನಮ್ಮ ತಂದೆ ಮತ್ತು ಅಣ್ಣನಿಗೆ ಆಪ್ತರಾಗಿದ್ದರು. ಅವರು ಹೋಟೆಲ್ ಪುನಃ ತೆರೆದರಾದರೂ ಅದು ಹೆಚ್ಚು ದಿನ ನಡೆಯಲಿಲ್ಲ. ಬಳಿಕ ಅವರು ಬೆಂಗಳೂರಿನಲ್ಲಿ ರಸ್ತೆ ಬದಿ ಒಂದು ಹೋಟೆಲ್ ನಡೆಸುತ್ತಿದ್ದರೆಂದು ತಿಳಿದು ಬಂತು. ಆಮೇಲಿನ ವಿಷಯ ತಿಳಿಯಲಿಲ್ಲ.
ರಘು ಹೋಟೆಲ್
ಬಸ್ ನಿಲ್ದಾಣದಲ್ಲಿ ಇದ್ದ ಹೋಟೆಲಿಗೆ ರಘು ಹೋಟೆಲ್ ಎಂದು ಕರೆಯಲಾಗುತ್ತಿತ್ತು. ಅದು ತಕ್ಕಮಟ್ಟಿಗೆ ಚೆನ್ನಾಗಿಯೇ ಇತ್ತು. ಆದಿನಗಳಲ್ಲಿ ನಮ್ಮೂರಿನ ಪುರದಮನೆಯಲ್ಲಿ ನಡೆಯುತ್ತಿದ್ದ ನವರಾತ್ರಿ ಸಮಾರಾಧನೆಗೆ ಕೆಳಕೊಪ್ಪ ಗಂಗಮ್ಮ ಎಂಬುವರು ತಮ್ಮ ಮೊಮ್ಮಕ್ಕಳಿಬ್ಬರೊಡನೆ ಬರುತ್ತಿದ್ದರು. ಅದರಲ್ಲಿ ಅಣ್ಣ ಬಹಳ ಸಾಧು. ಆದರೆ ನಮ್ಮ ಪ್ರಕಾರ ತಮ್ಮ ಒಬ್ಬ ರೌಡಿ. ಅವನು ನಮ್ಮೊಡನೆ ಹೊಡೆದಾಟ ಮಾಡುತ್ತಿದ್ದ. ನಾವು (ನಾನು ಮತ್ತು ಪುಟ್ಟಣ್ಣ) ಅವನಿಗೆ ಬುದ್ಧಿ ಕಲಿಸಬೇಕೆಂದು ಪ್ಲಾನ್ ಮಾಡುತ್ತಿದ್ದೆವು.  ಇದ್ದಕ್ಕಿದ್ದಂತೆ ಗಂಗಮ್ಮನ ದೊಡ್ಡ ಮೊಮ್ಮಗನನ್ನು ರಘು ಹೋಟೆಲಿನಲ್ಲಿ ಕೆಲಸಕ್ಕೆ ಸೇರಿಸಿಬಿಟ್ಟರೆಂದು ತಿಳಿದು ಬಂತು.  ನಾವೊಮ್ಮೆ ಕೊಪ್ಪದಲ್ಲಿ ಅವನನ್ನು ಹೋಟೆಲಿನೊಳಗೆ ನೋಡಿ ಮಂಕಾಗಿ ಹೋದೆವು. ಅವನು ಹೋಟೆಲಿನ ತಿಂಡಿ ನಿತ್ಯವೂ ತಿಂದು ಬೋಂಡದಂತೆಯೇ ಊದಿಕೊಂಡಿದ್ದ! ನಮಗಾದ ಹೊಟ್ಟೆ ಕಿಚ್ಚು ಅಷ್ಟಿಷ್ಟಲ್ಲ! ಅವನಂತೆ ನಾವೂ ಮುಂದೊಂದು ದಿನ ಹೋಟೆಲಿನ ಕೆಲಸಕ್ಕೆ ಸೇರಿ ಬೆಣ್ಣೆದೋಸೆ ತಿನ್ನುತ್ತಾ ಬೋಂಡದಂತೆಯೇ ಊದಿಕೊಳ್ಳಬೇಕೆಂದು ಕನಸು ಕಾಣ ತೊಡಗಿದೆವು! ಆದರೆ ನಮಗೆ ದೇವರ ದಯದಿಂದ  ಆ ಅದೃಷ್ಟ ದೊರೆಯಲಿಲ್ಲ!
ಕೆಸವೆ  ರಂಗಪ್ಪಯ್ಯ
ನಾನು ಈ ಮೊದಲೇ ಬರೆದಂತೆ ಕೊಪ್ಪದ  ಕೆಳಗಿನ ಪೇಟೆಯಲ್ಲಿ ನಮ್ಮ ಸಂಬಂಧಿಗಳಾದ  ಕೆಸವೆ ರಂಗಪ್ಪಯ್ಯನವರ ಮನೆ  ಇತ್ತು. ಹಾಗೂ ಈಗಲೂ ಇದೆ. ರಂಗಪ್ಪಯ್ಯನವರ ಮೂಲಮನೆ ಕೆಸವೆಯ ಹತ್ತಿರವಿರುವ ಊರುಗೊಡಿಗೆಯಂತೆ.  ಅವರು ಆಗರ್ಭ ಶ್ರೀಮಂತರಾಗಿದ್ದರಂತೆ. ಅವರಿಗೆ ನಮ್ಮ ತಂದೆಯ ಅಕ್ಕನ ಮಗಳಾದ ಮರಡಿಯ ಕಂದಕ್ಕಯ್ಯನನ್ನು ಕೊಟ್ಟು ಮದುವೆ ಮಾಡಲಾಗಿತ್ತು. ಇದ್ದಕ್ಕಿದ್ದಂತೆ ರಂಗಪ್ಪಯ್ಯ  ಯೌವನ ಸಮಯದಲ್ಲೇ ತಮ್ಮ ಅಪಾರ ಸಂಪತ್ತನ್ನು ಹಾಗೆಯೆ ಬಿಟ್ಟು ದೇಶಾಂತರ ಹೋಗಿ ಬಿಟ್ಟರಂತೆ. ಎಷ್ಟೋ ಸಮಯದ ನಂತರ ಅವರು ತಮಿಳು ನಾಡಿನ ಯಾವುದೋ ಊರಿನಲ್ಲಿರುವರೆಂದು ಸಮಾಚಾರ ಬಂತಂತೆ. ಆದರೆ ಅವರನ್ನು ಹುಡುಕಿ ವಾಪಾಸ್ ಮನೆಗೆ ಬರುವಂತೆ ಮಾಡುವುದು ಆ ಕಾಲದಲ್ಲಿ ಅಷ್ಟೊಂದು ಸುಲಭವಾಗಿರಲಿಲ್ಲ. ಆದರೆ ಅವರ ಆತ್ಮೀಯರಾದ ಬೇಲಿಹಳ್ಳಿ ಪಟೇಲ್ ಮಹಾಬಲಯ್ಯ ಎಂಬ ಸಜ್ಜನ ಅವರನ್ನು ವಾಪಾಸ್ ಕರೆತರಲೇ ಬೇಕೆಂದು ಪಣತೊಟ್ಟರಂತೆ. ಹಾಗೂ ತಮ್ಮ ಕಾರ್ಯದಲ್ಲಿ ಜಯಶೀಲರಾಗಿಯೂ ಬಿಟ್ಟರಂತೆ.
ಸಿವಿಲ್ ಕಾಂಟ್ರ್ಯಾಕ್ಟರ್ ರಂಗಪ್ಪಯ್ಯ
ರಂಗಪ್ಪಯ್ಯನವರು ಮಾಮೂಲಿ ಜಮೀನ್ದಾರರುಗಳಂತೆ ಕೇವಲ ಬೇಸಾಯದತ್ತ ಗಮನ ಕೊಡುವವರಾಗಿರಲಿಲ್ಲವಂತೆ. ಅವರಿಗೆ ಇಂಜಿನಿಯರಿಂಗ್ ಬ್ರೈನ್ ಹುಟ್ಟಿನಿಂದ ಬಂದಿತ್ತಂತೆ. ಬೇಗನೆ ಅವರು ಕೊಪ್ಪ ತಾಲೂಕ್ ಬೋರ್ಡಿನ ಪ್ರಮುಖ ಸಿವಿಲ್ ಕಾಂಟ್ರ್ಯಾಕ್ಟರ್ ಗಳಲ್ಲಿ ಒಬ್ಬರಾದರಂತೆ. ಅವರು ರಸ್ತೆ, ಬಾವಿ, ಮೋರಿ  ಮತ್ತು ಸೇತುವೆಗಳನ್ನು ಕಟ್ಟುವುದರಲ್ಲಿ ಪರಿಣಿತರಾಗಿಬಿಟ್ಟರಂತೆ. ಅವರೇ ಮುಂದೆ ನಿಂತು ಕಟ್ಟಿಸಿದ ಮಿನಿ ಸೇತುವೆಯೊಂದು ಇಂದಿಗೂ ಕೆಸವೆ ಗ್ರಾಮದ ಗೋಳ್ ಗಾರಿಗೆ ಹೋಗುವ ದಾರಿಯಲ್ಲಿದ್ದು ಅದರ ಮೇಲೆ ೧೦ ಟನ್ ಭಾರ ಹೇರಿದ ಲಾರಿಗಳು ಸಲೀಸಾಗಿ ಹಾದು ಹೋಗುವವಂತೆ.
ರಂಗಪ್ಪಯ್ಯನವರಿಗೆ ನಾಲ್ಕು ಮಕ್ಕಳಿದ್ದರು. ಅವರಲ್ಲಿ ಮಹಾಬಲ ಮತ್ತು ನಾಗರಾಜ ಎಂಬುವರು ತೀರಿಕೊಂಡಿದ್ದು ಈಗ ಹಿರಿಯ ಮಗಳು ಗೌರಿ ಮತ್ತು ಹಿರಿಯ ಮಗ ಮಾಧವರಾವ್ ಅವರು ನಮ್ಮೊಡನಿದ್ದಾರೆ. ರಂಗಪ್ಪಯ್ಯನವರೇ  ಮುಂದೆ ನಿಂತು ಕಟ್ಟಿಸಿದ ಅವರ ಕೊಪ್ಪದ ಮನೆ ಇಂದಿಗೂ ಅವರ ಹಿರಿಯ ಮಗ ಮಾಧವರಾವ್ ಅವರ ವಶದಲ್ಲಿದೆ.
ಶಂಕರ್ ಮೋಟಾರ್ ಟ್ರಾನ್ಸ್ಪೋರ್ಟ್
ಕೊಪ್ಪ ಪಟ್ಟಣದ ಅಂದಿನ ಕಥೆ ಶಂಕರ್ ಮೋಟಾರ್ ಟ್ರಾನ್ಸ್ಪೋರ್ಟ್ ಬಗ್ಗೆ ಬರೆಯದೇ ಮುಕ್ತಾಯವಾಗಲಾರದು. ವಿವಿಧ ಮಾರ್ಗಗಳಲ್ಲಿ ಓಡಾಡುತ್ತಿದ್ದ ಬಸ್ಸುಗಳಲ್ಲದೇ  ಯಾವುದೇ ವೇಳೆಯಲ್ಲಿ ಕೊಪ್ಪದ ಬಸ್ ನಿಲ್ದಾಣ ಹಾಗೂ ಕಂಪನಿಯ ವರ್ಕ್ ಶಾಪಿನಲ್ಲಿ ನಾಲ್ಕರಿಂದ ಐದು ಬಸ್ಸುಗಳು ನಿಂತಿರುತ್ತಿದ್ದವು. ಉದಯ ಮೋಟಾರಿನ ಎರಡು ಬಸ್ಸುಗಳು, ಸಿ ಕೆ ಎಂ ಸ್  ಮತ್ತು ಗಜಾನನ ಮೋಟಾರ್  ಕಂಪನಿಗಳ ಒಂದೊಂದು ಬಸ್ಸುಗಳನ್ನು ಬಿಟ್ಟರೆ ಬೇರೆ ಯಾವುದೇ ಕಂಪನಿಗಳ ಬಸ್ಸುಗಳಿಗೆ ಕೊಪ್ಪ ಬಸ್ ನಿಲ್ದಾಣದಲ್ಲಿ ಪ್ರವೇಶವಿರಲಿಲ್ಲ.
----ಮುಂದುವರಿಯುವುದು ---

No comments: