Wednesday, April 22, 2015

ನಾ ಕೊಂದ ಹುಡುಗಿ!

ನನ್ನ ಮತ್ತು   ಹುಡುಗಿಯೊಬ್ಬಳ ನಡುವಿನ ಮೊಟ್ಟಮೊದಲ  ಸಂಬಂಧ ಶುರುವಾಗುವ ಮೊದಲೇ ಮುಕ್ತಾಯವಾಗಿಬಿಟ್ಟಿತು! ನೀವು ನಂಬಿದರೆ ನಂಬಿ; ಬಿಟ್ಟರೆ ಬಿಡಿ.  ಈ ಸಂಬಂಧ ನಾನು ಹುಡುಗಿಯನ್ನು ಸಾಯಿಸುವುದರಲ್ಲಿ ಮುಕ್ತಾಯವಾಯಿತು!

ಈ ಪ್ರಸಂಗ ಶುರುವಾದದ್ದು ಹೀಗೆ: ನಾನಾಗ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದೆ . ಆಗ ನಮ್ಮ ಮನೆಯವರೆಲ್ಲ ಒಟ್ಟಾಗಿ ಊರಿನ ದೊಡ್ಡ ಮನುಷ್ಯರೊಬ್ಬರ ಮಗಳ ಮದುವೆಗೆ ಹೋಗಿದ್ದೆವು. ಈ ಮದುವೆ ಬರೋಬ್ಬರಿ ಮೂರು ದಿನಗಳವರೆಗೆ ನಡೆಯಿತು. ನನಗೆ ಆದ ಆಶ್ಚರ್ಯವೇನೆಂದರೆ ತುಂಬಾ ಸುಂದರನಾಗಿ ಕಾಣುತ್ತಿದ್ದ ಮದುಮಗ ದುಂಡಗೆ ಕುರೂಪಿಯಾಗಿ ಕಾಣುತ್ತಿದ್ದ ಆ ದೊಡ್ಡಮನುಷ್ಯರ ಮಗಳೊಡನೆ ಮೂರುದಿನವೂ ಹಸೆಮಣೆಯ ಮೇಲೆ ಹೊಗೆಯ ಮುಂದೆ ಕುಳಿತುಕೊಳ್ಳ ಬೇಕಾಗಿ ಬಂದುದು! ನನಗೆ ಆ ಹುಡುಗನಿಗೆ ಈ ಬಗೆಯ ಶಿಕ್ಷೆ ಕೊಡಲು ಕಾರಣ ಗೊತ್ತಾಗಲೇ ಇಲ್ಲ. ಖಂಡಿತಾ ಅವನ್ಯಾವುದೋ ದೊಡ್ಡ ಅಪರಾಧ ಮಾಡಿರಬೇಕೆಂದು ನನಗನ್ನಿಸಿತು.

ನನ್ನಣ್ಣನೊಡನೆ  ಆಬಗ್ಗೆ ವಿಚಾರಿಸಿದಾಗ ತಿಳಿದು ಬಂದ ವಿಷಯವಿಷ್ಟೇ. ಆ ಹುಡುಗ ಬಡತನ ತುಂಬಿದ ಸಂಸಾರದಿಂದ ಬಂದವನು. ಹಾಗಾಗಿ ಅವನಿಗೆ ಅದು ಕಡ್ಡಾಯ ದಾಂಪತ್ಯ ಆಗಿತ್ತು. ಆದರೆ ನನಗೆ ತಿಳಿಯದ ಅಂಶವೆಂದರೆ ಅವನು ಆ ಹುಡುಗಿಯನ್ನು ಮುಂದೇನು ಮಾಡಬೇಕೆನ್ನುವುದು. ಅದಕ್ಕೆ ನನ್ನಣ್ಣನಿಂದ ಬಂದ ಉತ್ತರ ನನ್ನನ್ನು ಇನ್ನೂ ಗಾಬರಿಗೊಳಿಸಿತು. ಅವನ ಪ್ರಕಾರ  ಆ ಹುಡುಗ ಒಂದು ರಾತ್ರಿ ಪೂರ್ತಿ ಆ ಹುಡುಗಿಯೊಡನೆ ಒಂದು ಕತ್ತಲೆ ಕೋಣೆಯಲ್ಲಿ ಕಳೆಯ ಬೇಕಿತ್ತು! ಅಷ್ಟು ಮಾತ್ರವಲ್ಲ. ಅವನು ಅವಳನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಅವಳೊಡನೆ ಇಡೀ ಜೀವಮಾನ ಕಳೆಯಬೇಕಿತ್ತು!

ಅಣ್ಣನಿಂದ ಈ ಸಂಕ್ತಿ ತಿಳಿದ ನನಗೆ ನಿಜವಾಗಿಯೂ ಎದೆ ನಡುಗಿ ಹೋಯಿತು. ಯಾಕೆಂದರೆ ನಮ್ಮ ಸಂಸಾರ ಕೂಡಾ ಒಂದು ಬಡಸಂಸಾರ ಎಂಬ ವಿಷಯ ನನಗಾಗಲೇ ತಿಳಿದು ಹೋಗಿತ್ತು. ಆದರೆ ಅಷ್ಟು ಮಾತ್ರಕ್ಕೆ ಈ ಬಗೆಯ ಘೋರ ಶಿಕ್ಷೆ ನಾನೂ ಒಂದಲ್ಲ ಒಂದುದಿನ ಅನುಭವಿಸ ಬೇಕಾಗಬಹುದೆನ್ನುವ ಯೋಚನೆಯೇ ನನ್ನನ್ನು ಕಂಗೆದಿಸಿಬಿಟ್ಟಿತು. ಏನೇ ಇರಲೀ;  ನಾನು ಮಾತ್ರಾ ಈ ಮದುವೆಯೆಂಬ ಶಿಕ್ಷೆಗೆ ವಿರುಧ್ಧವಾಗಿ ಹೋರಾಟ ಮಾಡಲೇ ಬೇಕೆಂದು ತೀರ್ಮಾನಿಸಿಬಿಟ್ಟೆ.

ಇದಾಗಿ ಕೇವಲ ಒಂದು ವಾರವಾಗಿರಬೇಕು. ನನ್ನ ಎರಡನೇ ಅಕ್ಕ (ರುಕ್ಮಿಣಿ ಅಕ್ಕ) ಯಾರೊಡನೆಯೋ ಹೇಳುತ್ತಿದ್ದ ಮಾತೊಂದು ನನ್ನ ಕಿವಿಗೆ ಬಿದ್ದುಬಿಟ್ಟಿತು. ಅವಳ ಪ್ರಕಾರ ನನ್ನ ಮತ್ತು ಕೋಟೀಬೈಲು ಎನ್ನುವ ಊರಿನ ಭಾಗೀರಥಿ ಎಂಬ ಹುಡುಗಿಯ ಜೋಡಿ ತುಂಬಾ ಹೊಂದಾಣಿಕೆ ಆಗುವುದಂತೆ! ನಾನು ಕೂಡಲೇ ಆ ಹುಡುಗಿಯ ತಂದೆ ಅವರ ಮನೆಯ ಹೆಸರಿಗೆ ತಕ್ಕಂತೆ ಕೊಟ್ಯಾಧೀಶರಾಗಿರಬೇಕೆಂದು ತೀರ್ಮಾನಿಸಿಬಿಟ್ಟೆ.  ಹಾಗೂ ಅವರ ಮಗಳಾಗಿದ್ದ ಭಾಗೀರಥಿಯು ಹೇಗಿರಬಹುದೆಂಬ ಬಗ್ಗೆ ನನಗೆ ಯಾವುದೇ ಸಂಶಯ ಉಳಿಯಲಿಲ್ಲ.

ಇಲ್ಲಿ ನಾನು ನಿಮಗೆ ಒಂದು ವಿಷಯ ಹೇಳಲೇ ಬೇಕು. ಅದೆಂದರೆ ಈ ರುಕ್ಮಿಣಿಅಕ್ಕ ನಮ್ಮ ಮನೆಯಲ್ಲಿ ಚಿಕ್ಕವರಾದ ನಮಗೆಲ್ಲಾ ಒಬ್ಬಳು ಸರ್ವಾಧಿಕಾರಿ ಆಗಿ ಬಿಟ್ಟಿದ್ದಳು. ಅವಳೋರ್ವ ಶಿಸ್ತಿನ ಸಿಪಾಯಿ. ಅವಳ ಮಾತನ್ನು ಮೀರುವ ಎದೆಗಾರಿಕೆ ನಮಗೆ ಕನಸ್ಸಿನಲ್ಲಿಯೂ ಬರುವ ಸಾಧ್ಯತೆ ಇರಲಿಲ್ಲ. ಅವಳು ನಮಗೆಲ್ಲಾ ಒಂದು ವೇಳಾಪಟ್ಟಿ ಮಾಡಿಬಿಟ್ಟಿದ್ದಳು. ನಾವೆಲ್ಲಾ ಅದರಂತೆ ನಮ್ಮ ದೈನಂದಿನ ಕಾರ್ಯಗಳನ್ನು ಕ್ರಮವಾಗಿ ಮಾಡಬೇಕಾಗಿತ್ತು. ಅದರಲ್ಲಿ ಯಾವುದೇ ವ್ಯತ್ಯಾಸ ಆಗುವಂತಿರಲಿಲ್ಲ. ಯಾವುದೇ ಭಿನ್ನಾಭಿಪ್ರಾಯ ಬಂದರೆ ಅವಳ ತೀರ್ಮಾನವೇ ಅಂತಿಮ ತೀರ್ಮಾನವಾಗಿತ್ತು. ತಂದೆ-ತಾಯಿ ಎಂಬ ಸುಪ್ರೀಂ ಕೋರ್ಟ್ ಕೂಡಾ ಏನೂ ಮಾಡುವ ಸ್ಥಿತಿಯಲ್ಲಿರಲಿಲ್ಲ.

ದಿನಕಳೆದಂತೆ ರುಕ್ಮಿಣಿಅಕ್ಕ ನಮ್ಮ ಮನೆಗೆ ಬಂದವರೊಡನೆ ನನ್ನ ಹಾಗೂ ಭಾಗೀರಥಿ ಜೋಡಿಯ ಬಗ್ಗೆ ಮಾತನಾಡುವುದು ಜಾಸ್ತಿಯಾಗುತ್ತಾ ಹೋಯಿತು. ಅಷ್ಟು ಮಾತ್ರವಲ್ಲ. ಅವಳು ಭಾಗೀರಥಿ ನನಗೆ ಆರತಿ ಎತ್ತುತ್ತಿರುವಂತೆ ಒಂದು ಹಾಡನ್ನೇ ರಚಿಸಿ ಹಾಡತೊಡಗಿದಳು. ನನ್ನ ಪರಿಸ್ಥಿತಿ ತುಂಬಾ ಚಿಂತಾಜನಕವಾಗಿ ಬಿಟ್ಟಿತು. ನಾನು ನನ್ನ ಕೊನೆಗಾಲ ಹತ್ತಿರ ಬಂತೆಂದೇ ಭಾವಿಸಿದೆ!

ಆಗ ನನಗೆ ಇದ್ದಕ್ಕಿದ್ದಂತೆ ಒಂದು ವಿಷಯ ನೆನಪಾಯಿತು. ನಾನು ಕೇಳಿದ ಮಹಾಭಾರತ ಹಾಗೂ ರಾಮಾಯಣ ಕಥೆಗಳಲ್ಲಿ ಕೆಲವು ಋಷಿಗಳು ಶಾಪ ಕೊಡುವುದನ್ನು ಅರಿತಿದ್ದೆ. ನಾನು ಕೂಡಲೇ ನನಗಿಂತ ಕೇವಲ ಎರಡು ವರ್ಷ ದೊಡ್ಡವನಾದ ನನ್ನಣ್ಣನೊಡನೆ ಈ ವಿಷಯ ಚರ್ಚೆ ಮಾಡಿದೆ. ಅವನು ಇಂತಹಾ ವಿಷಯಗಳಲ್ಲಿ ತುಂಬಾ ಅಧಿಕೃತವಾಗಿ ಮಾತನಾದಬಲ್ಲವನಾಗಿದ್ದ .  ಅವನ ಪ್ರಕಾರ ಈ ಕಲಿಯುಗದಲ್ಲೂ ಕೂಡಾ ಒಬ್ಬ ಮನುಷ್ಯ ಯಾವುದೇ ತಪ್ಪನ್ನು ಮಾಡದೆ ಮನಸ್ಸನ್ನು ಪರಿಶುದ್ಧವಾಗಿ ಇಟ್ಟುಕೊಂಡಿದ್ದರೆ ಅವನಿಗೆ ಶಾಪ ಕೊಡುವ ಸಾಮರ್ಥ್ಯ ಇರುತ್ತದೆ. ನನಗೆ ಅಷ್ಟೇ ಬೇಕಾಗಿತ್ತು. ನಾನು ಕೂಡಲೇ ಹಿಂದುಮುಂದು ನೋಡದೆ ಮನದಲ್ಲೇ ಭಾಗೀರಥಿ ಸತ್ತು ಹೋಗುವಂತೆ ಶಪಿಸಿ ಬಿಟ್ಟೆ!

ನನಗೆ ಗೊತ್ತು. ನೀವು ಯಾರೂ ಇದನ್ನು ನಂಬಲಿಕ್ಕಿಲ್ಲ. ಆದರೆ ನಾನು ಮಾತ್ರಾ ಜೀವಮಾನವಿಡೀ ಪಶ್ಚಾತ್ತಾಪ ಪಡಲೇ ಬೇಕಾಗಿದೆ. ನಾನು ಶಾಪಕೊಟ್ಟು ಕೇವಲ ಎರಡು ಅಥವಾ ಮೂರು ವಾರಗಳಾಗಿರಬೇಕು. ನನ್ನ ರುಕ್ಮಿಣಿಅಕ್ಕ ಇದ್ದಕ್ಕಿದ್ದಂತೆ ಮೌನವೃತ ಪ್ರಾರಂಭಿಸಿ ಬಿಟ್ಟಿದ್ದು ನನ್ನ ಅರಿವಿಗೆ ಬಂತು. ಅಷ್ಟು ಮಾತ್ರವಲ್ಲ; ಅವಳು ಆಗಾಗ ಅಳುತ್ತಿದ್ದುದೂ ನನ್ನ ಕಣ್ಣಿಗೆ ಬೀಳತೊಡಗಿತು. ಹಾಗೆಯೇ ನನ್ನ   ಮದುವೆಯ ಪ್ರಸ್ತಾಪವನ್ನು ಕೂಡಾ ನಿಲ್ಲಿಸಿಬಿಟ್ಟಿದ್ದಳು. ನನ್ನ ಮನಸ್ಸಿಗೆ ತುಂಬಾ ನೆಮ್ಮದಿ ಅಂತೂ ಸಿಕ್ಕಿತು.  ಆದರೆ ಅಕ್ಕನ ಈ ಬಗೆಯ ಪರಿವರ್ತನೆಗೆ ಕಾರಣ ತಿಳಿಯಬೇಕೆಂಬ ಕುತೂಹಲ ಮಾತ್ರಾ ಬೆಳೆಯ ತೊಡಗಿತು. ಪುನಃ ನಾನು ಸರ್ವಜ್ನನಾದ ನನ್ನ ಅಣ್ಣನಿಗೆ ವಿಷಯ ತಿಳಿಯಲು ಶರಣು ಹೋಗಬೇಕಾಯಿತು. ಅವನು ನನ್ನನ್ನು ನಿರಾಶೆ ಗೊಳಿಸಲಿಲ್ಲ. ಅವನು ಹೇಳಿದ ಪ್ರಕಾರ ಭಾಗೀರಥಿಗೆ  ಟೈಪಾಯ್ದ್  ಕಾಹಿಲೆಯಾಗಿ ಅವಳು ತೀರಿಕೊಂಡು ಬಿಟ್ಟಿದ್ದಳು!

ನನಗೆ ಆಮೇಲೆ ತಿಳಿದ ವಿಷಯವೇನೆಂದರೆ ಭಾಗೀರಥಿ ಒಬ್ಬ ಸುಂದರಿಯಾದ ಹುಡುಗಿಯಾಗಿದ್ದಳು. ಅವಳು ಕುರೂಪಿ ಎಂಬುದು ಕೇವಲ ನನ್ನ ಮನಸ್ಸಿನ ಭ್ರಮೆಯಾಗಿದ್ದಿತು.  ನನ್ನ ಪ್ರೀತಿಯ ಅಕ್ಕ ನನಗಾಗಿ ಒಬ್ಬ ಸ್ಪುರದ್ರೂಪಿಯಾಗಿದ್ದ  ಹುಡುಗಿಯನ್ನೇ ಆರಿಸಿದ್ದಳು. ಅದನ್ನು ಕೇಳುತ್ತಲೇ ನನಗೆ ಭಾಗೀರಥಿಯ ಮೇಲೆ ಇದ್ದಕ್ಕಿದ್ದಂತೆ ವ್ಯಾಮೋಹ ಬಂದು ಬಿಟ್ಟಿತು. ಆದರೆ ವಿಷಯ ಕೈಮೀರಿ ಹೋಗಿತ್ತು. ಒಬ್ಬ  ಸ್ಪುರದ್ರೂಪಿ ಹುಡುಗಿಯನ್ನು ಮದುವೆಯಾಗುವ ಅವಕಾಶವನ್ನು ನಾನು ಮೂರ್ಖತನದಿಂದ ಕಳೆದು ಕೊಂಡಿದ್ದೆ. ಮಾತ್ರವಲ್ಲ; ಅವಳ ಸಾವಿಗೆ ನಾನೇ ಕಾರಣನಾಗಿಬಿಟ್ಟಿದ್ದೆ. ನನ್ನ ಅದೃಷ್ಟಕ್ಕೆ ನಾನು ಯಾರಿಗೆ ಶಾಪ ಕೊಡುವೆನೆಂದು ನನ್ನಣ್ಣನಿಗೆ ನಾನು ತಿಳಿಸಿರಲಿಲ್ಲ. ಹಾಗಿಲ್ಲದಿದ್ದರೆ ಭಾಗೀರಥಿ ಕೊಲೆ ಮೊಕದ್ದಮೆಯಲ್ಲಿ ನನ್ನಣ್ಣನೇ ನನ್ನ ವಿರುದ್ಧ ಮುಖ್ಯ ಸಾಕ್ಷಿ ಆಗುವ ಪ್ರಸಂಗ ಬರುತ್ತಿತ್ತು!

ಈ ಸಂಗತಿ ನನ್ನ ಬಾಲ್ಯ ಜೀವನದಲ್ಲಿ ನಡೆದು ಎಷ್ಟೋ ವರ್ಷಗಳು ಸಂದಿವೆ. ಆದರೆ ನನಗೆ ನನ್ನ ಅಪರಾಧವನ್ನು ಇಲ್ಲಿಯವರೆಗೂ ಮರೆಯಲಾಗಿಲ್ಲ. ಹಾಗೆಯೇ ನನ್ನನ್ನು ನಾನು ಕ್ಷಮಿಸಿಕೊಳ್ಳಲೂ ಆಗುತ್ತಿಲ್ಲ. ಆದರೆ ಈ ಪ್ರಸಂಗವನ್ನು ಓದುಗರ ಮುಂದೆ ಇಟ್ಟ ಮೇಲೆ ಮನಸ್ಸಿಗೆ ಒಂದು ಬಗೆಯ ನೆಮ್ಮದಿ ಸಿಕ್ಕಿದಂತೆ ಅನಿಸುತ್ತಿದೆ. ತೀರ್ಮಾನವನ್ನು ಓದುಗನಿಗೇ ಬಿಟ್ಟಿರುತ್ತೇನೆ.