Saturday, February 24, 2018

ಒಂದು ಊರಿನ ಕಥೆ - 3 (ಹೊಕ್ಕಳಿಕೆ)


ಶೃಂಗೇರಿಯಲ್ಲಿ ಶಾರದಾಂಬೆಯನ್ನು ಪ್ರತಿಷ್ಟಾಪಿಸಲು ಸಕಲ ವ್ಯವಸ್ಥೆಯನ್ನು ಮಾಡಿ ಬಂದಿದ್ದ ಶಂಕರಾಚಾರ್ಯರಿಗೆ ದೇವಿ ತಾನು ಹರಿಹರಪುರದಲ್ಲೇ ನೆಲೆಯೂರುವುದಾಗಿ ಹೇಳಿದ್ದು ದೊಡ್ಡ ಆಘಾತವಾಯಿತು. ಅವರು ದೇವಿಗೆ ಉದ್ದಂಡ ನಮಸ್ಕಾರ ಮಾಡಿ ತಮ್ಮನ್ನು ಕ್ಷಮಿಸಬೇಕೆಂದೂ ಮತ್ತು ಶೃಂಗೇರಿಗೆ ಬರಲೇ ಬೇಕೆಂದು ಕೇಳಿಕೊಂಡರು. ಆಗ ದೇವಿ ತಾನು ಹರಿಹರಪುರದಲ್ಲೇ ಉಳಿಯುವುದಾಗಿಯೂ ಆದರೆ  ಆಚಾರ್ಯರು ತನ್ನ ವಿಗ್ರಹವನ್ನು ಶೃಂಗೇರಿಯಲ್ಲಿ  ಪ್ರತಿಷ್ಟಾಪಿಸಬಹುದೆಂದೂ ಮತ್ತು ಶರನ್ನವರಾತ್ರಿಯ ಒಂಬತ್ತು ದಿನಗಳು ತಾನು ಶೃಂಗೇರಿಯಲ್ಲಿ ಪ್ರತ್ಯಕ್ಷಳಾಗುವುದಾಗಿಯೂ ಒಪ್ಪಿಕೊಂಡಳು. ನಮ್ಮಮ್ಮನ ಪ್ರಕಾರ ಕಾರಣದಿಂದಲೇ ಶರನ್ನವರಾತ್ರಿಯ ಒಂಬತ್ತು ದಿನಗಳಲ್ಲಿ ಶೃಂಗೇರಿಯಲ್ಲಿ ಶಾರದಾಂಬೆಗಿರುವ ಮುಖದ ಸೌಂದರ್ಯ ಮತ್ತು ಕಳೆ ಬೇರೆ ದಿನಗಳಲ್ಲಿ ಕಾಣುವುದಿಲ್ಲ.
ಅಕ್ಕನ ಮನೆ
ಪವಿತ್ರ ತುಂಗಾ ನದಿಯನ್ನು ಹರಿಹರಪುರದಲ್ಲಿ ದಾಟಿದ ನಾವು ಮೂವರು ಕಾಲ್ನಡಿಗೆಯನ್ನು ಮುಂದುವರಿಸಿ ಹೊಕ್ಕಳಿಕೆ ಊರನ್ನು ತಲುಪಿದೆವು. ಅಲ್ಲಿಯವರೆಗೆ ನಾನು ಬೇರೊಬ್ಬರ ಮನೆಯಲ್ಲಿ ಒಂದು ರಾತ್ರಿಗಿಂತ ಹೆಚ್ಚು ಕಳೆದಿರಲಿಲ್ಲ. ಹಾಗಾಗಿ ನನಗೆ ಅಕ್ಕನ ಮನೆಯ ವಾಸ ಒಂದು ಹೊಸ ಅನುಭವವಾಗಿತ್ತು. ಭಾವನ ಮೂರನೇ ತಮ್ಮ ಕೃಷ್ಣಮೂರ್ತಿಯವರಿಗೆ ಆಗ ತಾನೇ  ಮದುವೆಯಾಗಿತ್ತು. ಅವರ ಹೆಂಡತಿ ಗೋಪಮ್ಮ ಕಳಸ ಸೀಮೆಯ ಅಂಬಿನಕೊಡಿಗೆ ರಂಗಯ್ಯ ಹೆಬ್ಬಾರ್ ಎಂಬ ಶ್ರೀಮಂತರ ಮಗಳು. ಗೋಪಮ್ಮ ಮತ್ತು ಗಣೇಶ ಭಾವನವರ ಹೆಂಡತಿ ಜಯಲಕ್ಷ್ಮಿಯವರು ಆಗ ತವರುಮನೆಗೆ ಹೋಗಿದ್ದರಿಂದ ಮನೆಯಲ್ಲಿ ಆಗ ಹೆಂಗಸರೆಂದರೆ ಗೌರಕ್ಕ ಮತ್ತು ಚಂದ್ರಹಾಸ ಭಾವನವರ ಪತ್ನಿ ಸರಸ್ವತಮ್ಮ ಮಾತ್ರ. ಇಬ್ಬರಿಗೂ ಕೈ ತುಂಬಾ ಕೆಲಸಗಳಿರುತ್ತಿದ್ದವು.

ನಮ್ಮ ಮನೆಯಲ್ಲಿ ಆ ದಿನಗಳಲ್ಲಿ ಒಂದು ರೂಮ್ ಕೂಡಾ ಇರಲಿಲ್ಲ ಮತ್ತು ನಮಗೆಲ್ಲ ಯಾವುದೇ ಬಾಗಿಲಿಲ್ಲದ ಜಗಲಿಯ ಮೇಲೆ ಮಲಗಿ ಅಭ್ಯಾಸವಾಗಿತ್ತು. ಆದರೆ ಅಕ್ಕನ  ಮನೆಯಲ್ಲಿ ಭಾವನ ಕಿರಿಯ ತಮ್ಮನಾದ ನಾಗೇಶ ಭಾವ ಮಾತ್ರಾ ಜಗಲಿಯಲ್ಲಿ ಮಲಗುತ್ತಿದ್ದರು. ಅದಕ್ಕೆ ಕೂಡ ಭದ್ರವಾದ ಬಾಗಿಲಿತ್ತು. ಉಳಿದ ನಾಲ್ಕು ಜನ ಅಣ್ಣಂದಿರಿಗೂ ಮದುವೆಯಾಗಿ ಅವರಿಗೆ ಮಲಗಲು  ಪ್ರತ್ಯೇಕ ಕೋಣೆಗಳಿದ್ದುವು. ನನಗೆ ನಾಗೇಶ ಭಾವನ ಪಕ್ಕದಲ್ಲೇ ಮಲಗಿಕೊಳ್ಳಲು ಏರ್ಪಾಟು ಮಾಡಲಾಯಿತು. ಆದರೆ ಬೆಳಗಿನ ಉಪಹಾರ ಒಂದು  ದೊಡ್ಡ ಸಮಸ್ಯೆಯಾಯಿತು. ಏಕೆಂದರೆ ಮನೆಯ ಗಂಡಸರು ಯಾರಿಗೂ ಬೆಳಿಗ್ಗೆ ತಿಂಡಿ ತಿನ್ನುವುದರಲ್ಲಿ ಆಸಕ್ತಿಯೇ ಇರಲಿಲ್ಲ! ನಮ್ಮ ಮನೆಯಂತೆ ಒಬ್ಬೊಬ್ಬರಾಗಿ ಕುಳಿತು ದೋಸೆ ತಿನ್ನುವುದಾಗಲೀ ಅಥವಾ ಒಟ್ಟಿಗೆ ಕುಳಿತು ಉಪ್ಪಿಟ್ಟು, ಇಡ್ಲಿ, ಇತ್ಯಾದಿಗಳನ್ನು ತಿನ್ನುವ ಕ್ರಮವೇ ಅಲ್ಲಿರಲಿಲ್ಲ.
ಆಗ ನನ್ನ ಸಹಾಯಕ್ಕೆ ಬಂದವರು ಗಣೇಶ ಭಾವ. ಉಳಿದವರಿಗಿಂತ ಸ್ವಲ್ಪ ಹೆಚ್ಚಿಗೆ ಬೆಳಗಿನ ಉಪಹಾರದಲ್ಲಿ ಆಸಕ್ತಿಯಿದ್ದ ಅವರೊಡನೆ ನನ್ನ ತಿಂಡಿ ಏರ್ಪಾಟಾಯಿತು. ಆದರೆ ಅವರು ಕೇವಲ ಎರಡು ದೋಸೆ ಮಾತ್ರ ತಿನ್ನುತ್ತಿದ್ದರು. ಮಾತ್ರವಲ್ಲ ಮೊಸರನ್ನು ತಿನ್ನುತ್ತಲೇ ಇರಲಿಲ್ಲ. ಸ್ವಲ್ಪ ಮುಜುಗರವೆನಿಸಿದರೂ ನನಗೆ  ಮಾತ್ರ ಅಕ್ಕನೇ ಖುದ್ದಾಗಿ ಮನೆಯಲ್ಲಿ ಸಮೃದ್ಧಿಯಾಗಿದ್ದ ಮೊಸರನ್ನು ಬಡಿಸುತ್ತಿದ್ದಳು. ಊಟಕ್ಕೂ ಕೂಡ ಎಲ್ಲರೂ ಒಟ್ಟಿಗೆ ಕೂರುತ್ತಿರಲಿಲ್ಲ. ಆದರೆ ಅಕ್ಕನ ಪ್ರೀತಿಯಲ್ಲಿ ನನಗೇನೂ ಊಟ ತಿಂಡಿಗಳ ಕೊರತೆ ಇರಲಿಲ್ಲ.

ವಯಸ್ಸಾಗಿದ್ದ ಅಕ್ಕನ ಅತ್ತೆ ಸಂಪೂರ್ಣ ಕತ್ತಲೆಯಿಂದ ತುಂಬಿದ್ದ ಮಾಳಿಗೆಯಲ್ಲಿ ಯಾವಾಗಲೂ ಮಲಗಿರುತ್ತಿದ್ದರು. ನನಗೆ ಒಮ್ಮೆಯೂ ಅವರ ಮುಖ ನೋಡುವ ಅವಕಾಶ ಸಿಗಲಿಲ್ಲ. ಮಾಳಿಗೆಯ ಒಂದು ಭಾಗದಲ್ಲಿ ಅಕ್ಕ ಭಾವಂದಿರು ಮಲಗುವ ಕೋಣೆಯಿತ್ತು. ಅಕ್ಕ ಇಡೀ ದಿನ ಯಾವುದೋ ಕೆಲಸಗಳಲ್ಲಿ ತೊಡಗಿರುತ್ತಿದ್ದಳು. ಆದಿನಗಳಲ್ಲಿ ಹೊಕ್ಕಳಿಕೆಗೂ ವಿದ್ಯುಚ್ಛಕ್ತಿ ಬಂದಿರಲಿಲ್ಲ. ಹಾಗಾಗಿ ಹಗಲು ಹೊತ್ತಿನಲ್ಲಿ ಕೂಡ ಮನೆಯ ಒಳಭಾಗದಲ್ಲಿ ಒಬ್ಬರ ಮುಖ ಇನ್ನೊಬ್ಬರಿಗೆ ಕಾಣುತ್ತಿರಲಿಲ್ಲ.
ಭಾವನವರ ಹಣಕಾಸು ವ್ಯವಹಾರ
ನಮ್ಮ ಮನೆಯಲ್ಲಿ ಹಣ ಇಡುವುದಕ್ಕೆ ಯಾವುದೇ ತಿಜೋರಿ  ಇತ್ಯಾದಿಗಳಿರಲಿಲ್ಲ. ಕಾರಣವಿಷ್ಟೇ. ಇರುವ ಸ್ವಲ್ಪ ಹಣ ಅಪ್ಪನ ಅಥವಾ ಅಣ್ಣನ ಜೇಬಿನಲ್ಲೇ ಇಟ್ಟುಕೊಳ್ಳಬಹುದಾಗಿತ್ತು! ಆದರೆ ಅಕ್ಕನ ಮನೆಯಲ್ಲಿ ಭಾವನವರು ಅವರ ರೂಮಿನ ಒಂದು ಲಾಕರ್ ನಲ್ಲಿ ಮತ್ತು ಜಗಲಿಯಲ್ಲಿದ್ದ ಇನ್ನೊಂದು ಒಂದು ತಿಜೋರಿಯಲ್ಲಿ ಹಣ ಇಟ್ಟಿರುತ್ತಿದ್ದರು. ಜಗಲಿಯಲ್ಲಿದ್ದ ತಿಜೋರಿಯಲ್ಲಿ ಹಣ  ಖಾಲಿಯಾಗುತ್ತಿದ್ದಂತೆ ರೂಮಿನ  ತಿಜೋರಿಯಿಂದ ಅಲ್ಲಿಗೆ ಟ್ರಾನ್ಸ್ಫರ್ ಮಾಡುತ್ತಿದ್ದರು. ಆಗಿನ ಕಾಲದಲ್ಲಿ ೨೦ ಮತ್ತು ೫೦ ರೂಪಾಯಿ ನೋಟುಗಳು ಚಲಾವಣೆಗೆ ಬಂದಿರಲಿಲ್ಲ. ೧೦ ರೂಪಾಯಿ ನೋಟುಗಳು ತುಂಬಾ ದೊಡ್ಡ ಸೈಜ್ ನಲ್ಲಿ ಇರುತ್ತಿದ್ದವು. ನಾನು ಮೊದಲ ಬಾರಿಗೆ ಭಾವನವರ ಹತ್ತಿರವಿದ್ದ ೧೦೦ ರೂಪಾಯಿ ನೋಟುಗಳನ್ನು ನೋಡಿದೆ. ಬಡವರ ಕಣ್ಣಿಗೇ ಬೀಳದ ನೋಟುಗಳಿಗೆ ಹಸಿರು ನೋಟು ಎಂದು ಕರೆಯಲಾಗುತ್ತಿತ್ತು. ಭಾವನವರ ಹಣಕಾಸಿನ ವ್ಯವಹಾರ ತುಂಬಾ ಜೋರಾಗಿ ನಡೆಯುತ್ತಿತ್ತು.  ಜಗಲಿಯಲ್ಲಿದ್ದ ಒರಗು ಬೆಂಚಿನ ಮೇಲೆ ಸಾಮಾನ್ಯವಾಗಿ ಒಬ್ಬರಲ್ಲದಿದ್ದರೆ ಮತ್ತೊಬ್ಬರು ಸಾಲ ತೆಗೆದುಕೊಳ್ಳಲು ಬಂದು ಕೂತಿರುತ್ತಿದ್ದರು.

ಭಾವನವರು ವಾಸ ಮಾಡುತ್ತಿದ್ದ ಹಳೇ ಮನೆಯ ಪಕ್ಕದಲ್ಲೇ ಒಂದು ಹೊಸ ಮನೆ ಕಟ್ಟಲಾಗಿತ್ತು.  ಸ್ವಲ್ಪ ಕಾಲದಲ್ಲೇ ಭಾವನ ಸಂಸಾರದಲ್ಲಿ ಪಾಲಾಗುವುದೆಂದು ತೀರ್ಮಾನವಾಗಿತ್ತು. ಆದರೆ ಹೊಸಮನೆ ಯಾರ ಪಾಲಿಗೆ ಹೋಗುವುದೆಂದು ನಿರ್ಧಾರವಾಗಿರಲಿಲ್ಲ. ಇಟ್ಟಿಗೆಯನ್ನು ಬಳಸದೇ ಕೇವಲ ಕೆಂಪು ಮಣ್ಣನ್ನು ಕಲಸಿ ಕಟ್ಟಿದ್ದರೂ, ಹೊಚ್ಚ ಹೊಸದಾಗಿದ್ದ ಮನೆ ನೋಡಲು ತುಂಬಾ ಸುಂದರವಾಗಿತ್ತು. ನನ್ನಕ್ಕನೇ ಮನೆಗೆ ಹೋಗುವಂತಾಗಲೆಂದು ನಾನು ಆಗಲೇ ದೇವರನ್ನು ಪ್ರಾರ್ಥಿಸಿಬಿಟ್ಟೆ!
ಹೊಕ್ಕಳಿಕೆ ಗ್ರಾಂಟ್ ಶಾಲೆ
ಊರಿನ ಮಧ್ಯದಲ್ಲಿದ್ದ ಹೊಕ್ಕಳಿಕೆಯ ಪ್ರಾಥಮಿಕ ಶಾಲೆಯ ಕಟ್ಟಡ ಮೇಷ್ಟರುಗಳ ಕೊರತೆಯಿಂದ ಹಾಳು ಸುರಿಯುತ್ತಿತ್ತು. ಒಂದು ಕಾಲದಲ್ಲಿ ಅದು ಪ್ರಸಿದ್ಧಿ ಪಡೆದಿತ್ತಂತೆ. ಆದರೆ ಅದೊಂದು ಗ್ರಾಂಟ್ ಸ್ಕೂಲ್ ಆದ್ದರಿಂದ ಮೇಷ್ಟರಿಗೆ ತಿಂಗಳ ಸಂಬಳ ಕೇವಲ ೩೦ ರೂಪಾಯಿ ಕೊಡುತ್ತಿದ್ದರಂತೆ. ಆದ್ದರಿಂದ ಮೇಷ್ಟರುಗಳು ಶಾಲೆಗೆ ಬರಲು ತಯಾರಿರಲಿಲ್ಲವಂತೆ. ನಮ್ಮೂರಿನ ಮೇಷ್ಟರಿಗೆ ತಿಂಗಳಿಗೆ ೭೫  ರೂಪಾಯಿ ಸಂಬಳವಿದ್ದರೂ ಯಾರೂ ಬಾರದಿದ್ದರಿಂದ ನನ್ನ ಓದು ಎರಡನೇ ತರಗತಿಯಲ್ಲೇ ನಿಂತು ಹೋಗಿತ್ತು. ಹೊಕ್ಕಳಿಕೆಯ ಮಕ್ಕಳು ಆಗ ಹತ್ತಿರದಲ್ಲೇ ಇದ್ದ ಮೇಲ್ಕೊಪ್ಪ ಶಾಲೆಗೆ ಹೋಗುತ್ತಿದ್ದರು. ಭಾವನ ತಮ್ಮ ಚಂದ್ರಹಾಸಯ್ಯನವರ ಮಕ್ಕಳಾದ ವಿಶಾಲಾಕ್ಷೀ ಮತ್ತು ಶ್ರೀನಿವಾಸ ಅದೇ ಶಾಲೆಗೆ ಹೋಗುತ್ತಿದ್ದರು.
ರಾಧಮ್ಮನ ಮಕ್ಕಳು ಮತ್ತು ನನ್ನ ಸಾಹಸ
ಭಾವನವರ ಒಬ್ಬ ಸಹೋದರಿಯಾದ ರಾಧಮ್ಮನವರನ್ನು ಯೆಡಗೆರೆಯ ದ್ಯಾವಪ್ಪಯ್ಯನವರಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಒಂದು ದಿನ ರಾಧಮ್ಮನವರು ತಮ್ಮ ಹೆಣ್ಣು ಮಕ್ಕಳಾದ ರುಕ್ಮಿಣಿ, ಸರಸ್ವತಿ ಮತ್ತು ಜಯ ಎಂಬುವರೊಡನೆ ತಮ್ಮ ತವರುಮನೆಗೆ ಆಗಮಿಸಿದರು. ನಾನು ಊರಿನ ಇತರ ಮಕ್ಕಳೊಡನೆ ಹಾಗೂ ಹೊಸದಾಗಿ ಮನೆಗೆ ಬಂದ ಹೆಣ್ಣು ಮಕ್ಕಳೊಡನೆ ಆಟ ಮತ್ತು ಚೇಷ್ಟೆಗಳಲ್ಲಿ ತೊಡಗಿಸಿ ಕೊಂಡೆ.

ನನಗೆ ಅಲ್ಲಿಯವೆರೆಗೆ ಹುಡುಗಿಯರೊಂದಿಗೆ ಅಡಿ ಅಭ್ಯಾಸವಿರಲಿಲ್ಲ. ಮೂವರು ಹುಡುಗಿಯರಲ್ಲಿ ಒಬ್ಬಳು ತುಂಬಾ ತುಂಟಿಯಾಗಿದ್ದಳು. ನನಗೆ ಹುಡುಗಿಯರ ಮುಂದೆ ನನ್ನ ಶೌರ್ಯವನ್ನು ತೋರಿಸಿಕೊಳ್ಳಬೇಕೆಂಬ ಅಭಿಲಾಷೆ ಮೇರೆ ಮೀರಿತು. ಅದೆಷ್ಟಾಯಿತೆಂದರೆ ನನ್ನ ಜೀವಕ್ಕೇ ಅಪಾಯವಾಗುವಂತ ಸಾಹಸವೊಂದನ್ನು ನಾನು ಮಾಡಿಬಿಟ್ಟೆ!

ಅಕ್ಕನ ಮನೆಯ ಹಿಂಭಾಗದಲ್ಲಿದ್ದ ಬಾವಿಯಲ್ಲಿದ್ದ ನೀರು ಬೇಸಿಗೆಯಲ್ಲಿ ಕಡಿಮೆಯಾಗಿ ಮನೆಯ ಬಳಕೆಗೆ ಸಾಕಾಗುವಷ್ಟು ಇರುತ್ತಿರಲಿಲ್ಲ. ಆದ್ದರಿಂದ ಬೇಸಿಗೆಯಲ್ಲಿ ಸ್ನಾನಕ್ಕೆ ತೋಟದಲ್ಲಿ ಹಳ್ಳದ ಪಕ್ಕದಲ್ಲಿದ್ದ ಬಾವಿಯೊಂದರ ನೀರು ಬಳಸಲಾಗುತ್ತಿತ್ತು. ಅದಕ್ಕಾಗಿ ಬಾವಿಯ ಪಕ್ಕದಲ್ಲೇ ಒಂದು ಸ್ನಾನದ ಮನೆಯನ್ನು ಕಟ್ಟಲಾಗಿತ್ತು. ಭಾವಿಯಲ್ಲಿ ನೀರು ಯಥೇಚ್ಛವಾಗಿತ್ತು.

ದಿನ ನಾವು ಮಕ್ಕಳು ಒಬೊಬ್ಬರಾಗಿ ತೋಟದ ಬಚ್ಚಲಲ್ಲಿ ಸ್ನಾನ ಮಾಡುತ್ತಿದ್ದೆವು. ವೇಳೆಗೆ ಬಚ್ಚಲಿನ ಹೊರಗೆ ಭಾವಿಯ ಬಳಿ ಸ್ನಾನಕ್ಕೆ ಕಾಯುತ್ತಿದ್ದವರಲ್ಲಿ ಒಂದು ಸ್ಪರ್ಧೆ ಪ್ರಾರಂಭವಾಯಿತು. ಬಾವಿ ಸಂಪೂರ್ಣವಾಗಿ ತುಂಬಿ ಅದರ ಮೇಲ್ಭಾಗದಿಂದ ಎರಡು ಮೆಟ್ಟಿಲುಗಳು ಮಾತ್ರ ಕಣ್ಣಿಗೆ ಬೀಳುತ್ತಿದ್ದವು. ನಮ್ಮಲ್ಲಿ ಯಾರು ಹೆಚ್ಚು ಮೆಟ್ಟಿಲು ಕೆಳಗಿಳಿಯುವರೆಂಬುದೇ ಸ್ಪರ್ಧೆಯಾಗಿತ್ತು. ಮೊದಲಿನ ಸ್ಪರ್ಧಿಗಳು ಒಬೊಬ್ಬರಾಗಿ ಮೂರು ಮೆಟ್ಟಿಲವರೆಗೆ ಕಾಲಿಟ್ಟು ನಿಂತು ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡಿದರು. ನನ್ನ ಸರದಿ ನಾಲ್ಕನೇ ಮೆಟ್ಟಿಲಿನದ್ದಾಗಿತ್ತು. ನಾನು ನಿರಾಳವಾಗಿ ಮೆಟ್ಟಿಲಮೇಲೆ ಕಾಲಿಟ್ಟು ನಿಂತುಬಿಟ್ಟೆ. ನೀರು ನನ್ನ ಕಾಲಗಂಟಿನ ಮೇಲಿನವರೆಗೂ ಬಂದಿತ್ತು. ನನ್ನ ಸಾಹಸಕ್ಕೆ ಹುಡುಗಿಯರಿಂದಲೂ ಚಪ್ಪಾಳೆ ಸಿಕ್ಕಿತು. ಅದು ನನ್ನ ತಲೆಗೇರಿ ಐದನೇ ಮೆಟ್ಟಿಲಿಗೆ ಕಾಲಿಡಲು ಸಹ ತೀರ್ಮಾನಿಸಿಬಿಟ್ಟೆ! ಅಂತೆಯೇ ನನ್ನ ಕಣ್ಣಿಗೆ ಕಾಣದಂತಿದ್ದ ಐದನೇ ಮೆಟ್ಟಿಲಿನತ್ತ ನನ್ನ ಒಂದು ಕಾಲನ್ನು ಜೋರಾಗಿ ಊರಿಬಿಟ್ಟೆ. ಹುಡುಗಿಯರಿಂದ ಚಪ್ಪಾಳೆಗಳೂ ಕೇಳಿಸಿದವು. ಆದರೆ ಅದು ನನ್ನ ಮೂರ್ಖತನದ ಪರಮಾವಧಿಯಾಗಿತ್ತು. ಏಕೆಂದರೆ ಬಾವಿಯಲ್ಲಿ ಐದನೇ ಮೆಟ್ಟಿಲೇ ಇರಲಿಲ್ಲ!

ನಾನು ಕಾಲಿಟ್ಟ ರಭಸಕ್ಕೆ ನನ್ನ ಶರೀರ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿ ಹೋಯಿತು. ನಾನು ನೀರಿನಲ್ಲಿ ತೇಲುತ್ತಲೇ ಮೆಟ್ಟಿಲಿನ ಹತ್ತಿರಬಂದು ಬಾವಿಯಿಂದ ಹೊರಬರಲು ಪ್ರಯತ್ನಿಸಿದೆ. ಆದರೆ ಅದು ಸಾಧ್ಯವಾಗಲಿಲ್ಲ. ಮಾತ್ರವಲ್ಲ ನೀರು ನಾನು ಉಸಿರೆಳೆದಂತೆ ದೇಹದೊಳಗೆ ಸೇರತೊಡಗಿತು. ಬಾವಿಯ ಹೊರಗಿದ್ದ ಮಕ್ಕಳು ಬೊಬ್ಬೆ ಹಾಕತೊಡಗಿದರು. ಆದರೆ ಯಾರೂ ಹತ್ತಿರದಲ್ಲಿದ್ದ ಮನೆಯಲ್ಲಿದ್ದ ಹಿರಿಯರಿಗೆ ತಿಳಿಸುವ ಯೋಚನೆ ಮಾಡಲಿಲ್ಲ. ಅವರಿಗೆ ಅದನ್ನು ಹೇಳುವ ನನ್ನ  ಪ್ರಯತ್ನ ವಿಫಲವಾಯಿತು. ನಾನು ನನ್ನ ಕಥೆ ಮುಗಿಯಿತೆಂದೇ ಭಾವಿಸಿದೆ.
ಜೀವ ಉಳಿಸಿದ ಸರಸ್ವತಮ್ಮ!
ಆದರೆ ನನ್ನ ಅದೃಷ್ಟ ಚೆನ್ನಾಗಿತ್ತು. ಅದೇ ಸಮಯಕ್ಕೆ ಭಾವನ ತಮ್ಮ ಚಂದ್ರಹಾಸಯ್ಯನವರ ಪತ್ನಿ ಸರಸ್ವತಮ್ಮನವರು ದೇವರೇ ಕಳಿಸಿದಂತೆ ಸ್ನಾನಕ್ಕಾಗಿ ಅಲ್ಲಿಗೆ ಬಂದರು. ಅವರಿಗೆ ನಾನು ಬಾವಿಯಲ್ಲಿ ತೇಲಾಡುವ ದೃಶ್ಯ ಗೋಚರಿಸಿ ಕಂಗಾಲಾದರು. ಆದರೆ ಗಟ್ಟಿಮುಟ್ಟಾಗಿದ್ದ ಅವರು ಸ್ವಲ್ಪವೂ ಭಯಪಡದೆ ನನಗೆ ನೀರಿನೊಳಗಿನಿಂದ ಮೇಲಕ್ಕೆ ಕೈ ಚಾಚುವಂತೆ ಕೂಗಿ ಹೇಳತೊಡಗಿದರು. ನಾನು ಕೈ ಮೇಲೆತ್ತುತ್ತಿದ್ದಂತೆ ಅವರು ನನ್ನನು ಒಮ್ಮೆಗೆ ನೀರಿನಿಂದ ಹೊರಗೆಳೆದು ಹಾಕಿಬಿಟ್ಟರು. ಆಮೇಲೆ ನನ್ನನ್ನು ಮನೆಯೊಳಗೇ ಎತ್ತಿಕೊಂಡು ಹೋಗಿ ದೇಹದಲ್ಲಿ ಸೇರಿದ್ದ ನೀರನ್ನು ಹೊರತೆಗೆಯಲಾಯಿತು. ಅರೆ ಎಚ್ಚರದಲ್ಲಿದ ನನಗೆ ತುಂಬಾ ಸಮಯ ಇನ್ನೂ ನೀರಿನೊಳಗೇ ಮುಳುಗಿದ್ದಂತೆ ಅನ್ನಿಸುತ್ತಿತ್ತು.

ನನ್ನ ಮಾರಣಾಂತಿಕ ಸಾಹಸಕ್ಕೆ ಅಕ್ಕ ಮತ್ತು ಭಾವನವರಿಂದ ತೀವ್ರ  ಪ್ರತಿಕ್ರಿಯೆ ಬರಬಹುದೆಂದು ನಾನು ಭಯಪಟ್ಟಿದ್ದೆ. ಆದರೆ ಅವರಿಬ್ಬರೂ ನನಗೆ ಒಂದು ಮಾತೂ ಅನ್ನಲಿಲ್ಲ.  ಆದರೆ ಊರಿನ ತುಂಬಾ ನನ್ನ ಸಾಹಸದ ಸಮಾಚಾರ ಹರಡಿತು. ಅಕ್ಕನ ಮನೆಯ ಬಾವಿಯ ಆಳ ಅಳತೆ ಮಾಡಿದವನೆಂಬ ಬಿರುದೂ ನನಗೆ  ಸಿಕ್ಕಿತು!  ಬೇರೆ ಮಕ್ಕಳು ನನ್ನ ಹತ್ತಿರ ಪದೇಪದೇ "ಬಾವಿಯ ಆಳ ಎಷ್ಟಿತ್ತಪ್ಪಾ?" ಎಂದು ಕೇಳತೊಡಗಿದರು!
---------------------------------00------------------------------------00-------------------------00-------------------

ಜಕ್ಕಾರುಕೊಡಿಗೆ ಮದುವೆ
ಅಕ್ಕನಿಗೆ ಮದುವೆಯಾದಾಗ ಅವಳಿಗೆ ಕೇವಲ ೧೬ ವರ್ಷ ವಯಸ್ಸು. ಆದರೆ ನಾನು ಹೊಕ್ಕಳಿಕೆಯಲ್ಲಿದ್ದಾಗಲೇ ಅವಳಿಗೊಂದು ಹೆಣ್ಣನ್ನು ಧಾರೆ ಎರೆಸಿಕೊಳ್ಳುವ  ಅವಕಾಶ ಬಂದಿತು. ತೀರ್ಥಹಳ್ಳಿಯ ಸಮೀಪದಲ್ಲಿದ್ದ ಆಲ್ಮನೆ ಎಂಬ ಊರಿನ ತಿಮ್ಮಪ್ಪಯ್ಯ ಎಂಬುವರು ಭಾವನ ದಾಯಾದಿಗಳಂತೆ. ಅವರಿಗೆ ಶೃಂಗೇರಿಯ ಸಮೀಪದಲ್ಲಿದ್ದ ಜಕ್ಕಾರುಕೊಡಿಗೆ ಎಂಬ ಊರಿನ ಹುಡುಗಿಯೊಡನೆ ಮದುವೆ ನಿಶ್ಚಯವಾಗಿತ್ತು. ( ಹುಡುಗಿಯ ಅಕ್ಕನನ್ನು ತಿಮ್ಮಪ್ಪಯ್ಯನವರ ತಮ್ಮ ವಾಸುದೇವಯ್ಯನವರಿಗೆ ಕೊಟ್ಟು ಮದುವೆ  ಮಾಡಲಾಗಿತ್ತು.) ತಿಮ್ಮಪ್ಪಯ್ಯನವರ ತಂದೆತಾಯಿಗಳು (ಪ್ರಾಯಶಃ) ಇಲ್ಲದಿದ್ದರಿಂದ ಅಕ್ಕ-ಭಾವನವರೇ ಹುಡುಗಿಯನ್ನು ಧಾರೆಎರೆಸಿಕೊಳ್ಳಬೇಕೆಂದು ನಿಶ್ಚಯವಾಗಿತ್ತು. ಮದುವೆ ಜಕ್ಕಾರುಕೊಡಿಗೆ ಹೆಣ್ಣಿನ ಮನೆಯಲ್ಲೇ ನಡೆಯುವುದೆಂದೂ ನಿಶ್ಚಯಿಸಲಾಗಿತ್ತು.

ಅಕ್ಕ ಭಾವ ಇಬ್ಬರು ಮದುವೆಗೆ ನಮಗಿಂತ ಮೊದಲೇ ಹೊರಟು  ಹೋದರು. ನಾನು ಬೇರೆಯವರೊಡನೆ ಮದುವೆಯ ಹಿಂದಿನ ದಿನದ ಸಂಜೆಗೆ ಜಕ್ಕಾರುಕೊಡಿಗೆ ತಲುಪುವುದೆಂದೂ ತೀರ್ಮಾನಿಸಲಾಗಿತ್ತು. ಅದರಂತೆ ನಾವೆಲ್ಲಾ ಹರಿಹರಪುರಕ್ಕೆ ನಡೆದು ಹೋದೆವು. ಅಲ್ಲಿಂದ ಒಂದು ಲಾರಿಯಲ್ಲಿ ನಾವು ಶೃಂಗೇರಿ ಮಾರ್ಗವಾಗಿ ಜಕ್ಕಾರುಕೊಡಿಗೆ ಸೇರಬೇಕಿತ್ತು. ನಮ್ಮ ಅದೃಷ್ಟಕ್ಕೆ ಎಷ್ಟು ಕಾದರೂ ಲಾರಿ ಮಾತ್ರಾ ಬರಲೇ ಇಲ್ಲ. ಕೊನೆಗೆ ಸಂಜೆಯ ನಂತರ ಅದರ ದರ್ಶನವಾಯಿತು. ನಾವೆಲ್ಲ ಡಬಡಬನೆ ಲಾರಿ ಹತ್ತಿದೆವು.  ಆದರೆ ಕೂಡಲೇ ಹೊರಟ ಅದರ ಶಬ್ದವನ್ನು ನೋಡಿದರೆ ಏನೋ  ಸಮಸ್ಯೆ ಇರುವಂತೆ ತೋರುತ್ತಿತ್ತು. ನಾವು ಜಕ್ಕಾರುಕೊಡಿಗೆ ಸೇರುವಾಗ ರಾತ್ರಿಯಾಗುವುದೆಂದು ಭಾವಿಸಿದೆವು.

ಆದರೆ ನಮ್ಮ ನಿರೀಕ್ಷೆಯೂ ಸುಳ್ಳಾಯಿತು. ಹರಿಹರಪುರದಿಂದ ಸ್ವಲ್ಪ ದೂರದಲ್ಲಿದ್ದ ಅಡ್ಡಗದ್ದೆ ಎಂಬ ಊರಿನ ಹತ್ತಿರ ನಮ್ಮ ಲಾರಿ ನೆಲಕಚ್ಚಿ ನಿಶ್ಶಬ್ದವಾಯಿತು. ಡ್ರೈವರ್ ಮತ್ತು ಕಂಡಕ್ಟರ್ ಅದನ್ನು ರಿಪೇರಿ ಮಾಡಲು ಮಾಡಿದ ಪ್ರಯತ್ನವೆಲ್ಲ ವಿಫಲವಾಗಿ ನಾವು ಕತ್ತಲೆಯಲ್ಲಿ  ಬೀದಿ ಪಾಲಾದೆವು.

ಆಗ  ಸುಮಾರು ರಾತ್ರಿ ಘಂಟೆ ವೇಳೆಯಿರಬೇಕು. ಗಾಡಾಂಧಕಾರದ ರಾತ್ರಿಯಲ್ಲಿ ನಾವು ರಸ್ತೆಯ ಪಕ್ಕದ ಕಾಡಿನ ದಂಡೆಯಲ್ಲಿ ಕುಳಿತು ಆಕಾಶದಲ್ಲಿ ಕಾಣುತ್ತಿದ್ದ ನಕ್ಷತ್ರಗಳನ್ನು ಎಣಿಸತೊಡಗಿದೆವು. ನಕ್ಷತ್ರಗಳಲ್ಲಿ ಧ್ರುವ ನಕ್ಷತ್ರ ಯಾವುದೆಂದು ಕಂಡುಹಿಡಿಯುವ ಸ್ಪರ್ಧೆ ನಡೆಯಿತು. ಅಷ್ಟರಲ್ಲೇ ನಮಗೆ ಹರಿಹರಪುರದ ಕಡೆಯಿಂದ ಯಾವುದೋ ವಾಹನವೊಂದು ಬರುತ್ತಿರುವ ಶಬ್ದ ಕೇಳಿ ಬೆಳಕೂ ಕಾಣಿಸಿತು. ನಮ್ಮ ಹತ್ತಿರ ಬಂದು ನಿಂತ ಬಸ್ಸಿನ ಹೆಸರು ಎಂಪಿಎಂ ಬಸ್ ಎಂದೂ ಮತ್ತು ಅದು ಬೆಳಗಿನ ಝಾವ ಶೃಂಗೇರಿಯಿಂದ ಹೊರಟು ಬೀರೂರಿಗೆ ಹೋಗಿ ಈಗ ವಾಪಾಸ್ ಬರುತ್ತಿತ್ತೆಂದೂ ತಿಳಿಯಿತು. ನಾವೆಲ್ಲ ಬೇಗನೆ ಬಸ್ ಏರಿದೆವು. ಅರ್ಧಗಂಟೆಯಲ್ಲಿ ನಾವು ಶೃಂಗೇರಿಯಲ್ಲಿದ್ದೆವು.

ಶೃಂಗೇರಿಯಲ್ಲಿ ದಿನಗಳಲ್ಲಿ ನಮ್ಮೂರಿನವರಿಗೆಲ್ಲಾ ಪರಿಚಿತರಾಗಿದ್ದ ಅಣ್ಣಪ್ಪಯ್ಯ ಎಂಬುವರ ಮನೆಯಲ್ಲಿ ನಾವು ರಾತ್ರಿ ಊಟ ಮಾಡಿ ಅಲ್ಲಿಯೇ ತಂಗಿದೆವು. ಬೆಳಗಾಗುವಾಗ ನಮ್ಮ ಲಾರಿ ರಿಪೇರಿಯಾಗಿ ನಮ್ಮನ್ನು ಜಕ್ಕಾರುಕೊಡಿಗೆಗೆ  ತಲುಪಿಸುವುದೆಂದು ಭಾವಿಸಲಾಗಿತ್ತು. ಆದರೆ ಅದು ಸುಳ್ಳಾಯಿತು. ಆದ್ದರಿಂದ ನಾವು ನಮ್ಮ ಕಾಲ್ನಡಿಗೆ ಪ್ರಯಾಣ ಪ್ರಾರಂಭಿಸಿ ತುಂಗಾ ನದಿಯನ್ನು ದಾಟಿ ವೈಕುಂಠಪುರವೆಂಬ ಊರಿನ ಮೂಲಕ ಗಂಗಾಮೂಲದತ್ತ (ತುಂಗೆಯ ಉಗಮಸ್ಥಳ) ಮುಂದುವರೆದೆವು. ಆಮೇಲೆ ಎಷ್ಟೋ ವರ್ಷದ ನಂತರ ಇದೇ  ವೈಕುಂಠಪುರದಲ್ಲಿ ಗಿರೀಶ್ ಕಾರ್ನಾಡ್ ಅವರು ನಟಿಸಿದ ಅನಂತಮೂರ್ತಿಯವರು ಬರೆದ ಸಂಸ್ಕಾರ ಸಿನಿಮಾ ಶೂಟಿಂಗ್ ನಡೆಯಿತು. ಆಗ ವೈಕುಂಠಪುರ ದೂರ್ವಾಸಪುರವಾಗಿ ಪರಿವರ್ತಿತವಾಗಿತ್ತು.

ಸುಮಾರು ಘಂಟೆಗೆ ನಾವು ಕಾಫಿಕಾಡು ಎಂಬ ಮನೆಯಲ್ಲಿ ವಾಸಿಸುತ್ತಿದ್ದ ಸುಬ್ಬರಾಯರೆಂಬುವರ ಮನೆಗೆ ತಲುಪಿದೆವು. ಅಲ್ಲಿ ನಮ್ಮ ಸ್ನಾನ ಮತ್ತು ಬೆಳಗಿನ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಂದ ನಾವು ಮದುವೆಯ ಮುಹೂರ್ತಕ್ಕೆ ಸರಿಯಾಗಿ ಜಕ್ಕಾರುಕೊಡಿಗೆಗೆ ತಲುಪಿದೆವು. ಅಕ್ಕನಿಗೆ ನಾವು ಕೊನೆಗೂ ಸಮಯಕ್ಕೆ ಸರಿಯಾಗಿ ಅಲ್ಲಿಗೆ ತಲುಪಿದ್ದು ನೆಮ್ಮದಿ ತಂದಿತು.
ನನಗೆ ಶಾಲೆಗೆ ಹೋಗುವ ತೊಂದರೆ ಇಲ್ಲದ್ದರಿಂದ ಇನ್ನೂ ಕೆಲವು ದಿನ ಅಕ್ಕನ ಮನೆಯಲ್ಲೇ ಕಳೆಯ ಬಹುದಾಗಿತ್ತು. ಆದರೆ ಅಷ್ಟರಲ್ಲೇ ಪುಟ್ಟಣ್ಣನ ಉಪನಯನ ಹೊರನಾಡು ಅನ್ನಪೂರ್ಣೇಶ್ವರಿ ದೇವಿಯ ಸನ್ನಿಧಿಯಲ್ಲಿ ನಡೆಯಲಿರುವ ಸಮಾಚಾರ ಬಂತು. ಆದ್ದರಿಂದ ನಾನು ಅಕ್ಕ ಮತ್ತು ಭಾವನವರೊಡನೆ ಪುನಃ ಕಾಲ್ನಡಿಗೆ ಪ್ರಯಾಣಮಾಡಿ ಅಡೇಖಂಡಿ  ತಲುಪಿದೆ.
----ಮುಂದುವರಿಯುವುದು ---