Wednesday, February 14, 2018

ಒಂದು ಊರಿನ ಕಥೆ (ಹೊಕ್ಕಳಿಕೆ) - 1

ಪೀಠಿಕೆ
ಮನುಷ್ಯನಿಗೆ ಮಾತೃ ಋಣ ಮತ್ತು ಪಿತೃ ಋಣವಿದ್ದಂತೆ ಊರಿನ ಋಣವೂ ಇರುತ್ತದೆಂದು ನನ್ನ ಅಭಿಪ್ರಾಯ. ನನ್ನ ಬರವಣಿಗೆಗಳಲ್ಲಿ ನಾನು ನಮ್ಮೂರಿನ ಬಗ್ಗೆ ಎಷ್ಟೋ ಬರೆದು ಅದರ ಋಣವನ್ನು ತೀರಿಸಲು ಪ್ರಯತ್ನಿಸಿದ್ದೇನೆ. ಆದರೆ ನಮ್ಮ ಅಕ್ಕಂದಿರಿಬ್ಬರನ್ನೂ ಮದುವೆ ಮಾಡಿ ಕೊಟ್ಟ ಊರಾದ ಹೊಕ್ಕಳಿಕೆಯ ಬಗ್ಗೆ ನಾನು ಹೆಚ್ಚು ಬರೆದಿಲ್ಲ. ಆ ಊರು ನಮಗೆ ನಮ್ಮೂರಿನಷ್ಟೇ ಪ್ರಿಯವಾದುದು. ನಾವು ಮೂರು ಮಂದಿ ಸಹೋದರರು ಅಕ್ಕನ ಮನೆಯಲ್ಲೇ ಇದ್ದು ಮೂರು ವರ್ಷ ಶಾಲೆಗೆ ಹೋದುದು ಮಾತ್ರವಲ್ಲ, ನಮ್ಮ ಸಂಸಾರದ ಎಲ್ಲರೂ ಆಗಾಗ ಹೊಕ್ಕಳಿಕೆ ಪ್ರಯಾಣ ಮಾಡುತ್ತಿದ್ದುದು ಮಾಮೂಲಾಗಿ ಬಿಟ್ಟಿತ್ತು. ನಮಗೆ ನಮ್ಮ ಅಕ್ಕಂದಿರ ಮೇಲಿದ್ದ ಪ್ರೀತಿಯಷ್ಟೇ ಊರಿನ ಮೇಲೆಯೂ ಪ್ರೀತಿ ಇತ್ತು. ಈಗಲೂ ಇದೆ. ಹಾಗಾಗಿ ಹೊಕ್ಕಳಿಕೆಯ ಇತಿಹಾಸ ನಮ್ಮ ಜೀವನದ ಒಂದು ಅವಿಭಾಜ್ಯ ಅಂಗವಾಗಿತ್ತು. ಅದರ ನೆನಪಿಗಾಗಿ ನಾನು ನನಗೆ ತಿಳಿದಷ್ಟು ಹಾಗೂ ನನ್ನ ಅಕ್ಕಂದಿರ ಮಕ್ಕಳು ಹಾಗೂ ಇತರರಿಂದ ಸಂಗ್ರಹಿಸಿದಷ್ಟು ವಿಷಯಗಳನ್ನು ಕಲೆಹಾಕಿ 'ಒಂದು ಊರಿನ ಕಥೆ' ಬರೆಯಲು ಪ್ರಯತ್ನಿಸಿದ್ದೇನೆ. ಇದರಲ್ಲಿ ಕೆಲವು ತಪ್ಪುಗಳು ಸೇರಿಕೊಂಡಿರುವ ಸಾಧ್ಯತೆಗಳಿವೆ. ಹಾಗೆಯೇ ಹಲವು ಮುಖ್ಯ ವಿಷಯಗಳು ಬಿಟ್ಟು ಹೋಗಿರಬಹುದು. ಅದು ತಿಳಿದು ಬಂದಾಗ ಅಲ್ಲಲ್ಲಿಯೇ ಸೇರಿಸಲು ಯತ್ನಿಸುತ್ತೇನೆ.

ಹೊಕ್ಕಳಿಕೆಯ ದಾರಿ ಮತ್ತು ಹೆಸರಿನ ರಹಸ್ಯ
ಕಥೆಯ ಆರಂಭ ಸರಿ  ಸುಮಾರು ೧೯೫೪ನೇ ಇಸವಿಯಿಂದ. ದಿನಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮತ್ತು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕುಗಳ ಗಡಿಯಲ್ಲಿದ್ದ ಗಡಿಕಲ್ಲಿನಿಂದ ಕಾಲ್ನಡಿಗೆಯಲ್ಲಿ ಪಯಣಿಸುವಾಗ ಮೇಲ್ಕೊಪ್ಪ ಎಂಬಲ್ಲಿ ರಸ್ತೆ ಕವಲೊಡೆಯುವಲ್ಲಿ ಕೈಮರವೊಂದು ಗೋಚರಿಸುತ್ತಿತ್ತು. ಕೈಮರದ ಬಲಭಾಗದಲ್ಲಿ ದೊಡ್ಡದಾಗಿ ಬಸವಾನಿಗೆ ಎಂದೂ ಹಾಗೂ ಎಡಭಾಗದಲ್ಲಿ "ಹೊಕ್ಕಳಿಕೆಗೆ " ಎಂದು ಬರೆಯಲಾಗಿತ್ತು.  ಯಾರೋ ಕಿಡಿಗೇಡಿಗಳು ಸ್ವಲ್ಪ ದಿನಗಳ ನಂತರ ಅದರಲ್ಲಿದ್ದ 'ಕೆ' ಅಕ್ಷರವನ್ನು ಅಳಿಸಿಹಾಕಿಬಿಟ್ಟಿದ್ದರುಹಾಗಾಗಿ ಅದು 'ಹೊಕ್ಕಳಿಗೆ' ಆಗಿ ಬಿಟ್ಟಿತ್ತು. ವಿಚಿತ್ರವೆಂದರೆ ಹೊಕ್ಕಳಿಕೆ ಊರಿನ ಹೆಸರಿಗೂ ಹೊಕ್ಕಳಿಗೂ ಏನೋ ಸಂಬಂಧ ಇದ್ದಿರಬೇಕೆಂಬ ಸೂಚನೆಯನ್ನು ಬರಹ ಉಂಟುಮಾಡುತ್ತಿದ್ದುದು ರಸ್ತೆ ಮುಂದೆ ಪ್ರಸಿದ್ಧ ಬೊಮ್ಲಾಪುರ ತ್ರಿಪುರಾಂತಕೀ ಅಮ್ಮನವರ  ದೇವಸ್ಥಾನಕ್ಕೆ ಹೋಗುತ್ತಿದ್ದು, ರಸ್ತೆಯ ಹೊಕ್ಕಳಿನ ಭಾಗದಲ್ಲಿದ್ದ ಊರಿಗೆ ಹೊಕ್ಕಳಿಕೆ ಎಂಬ ಹೆಸರು ಬಂದಿರುವುದು ಕೂಡ ಸಾಧ್ಯವಿತ್ತು.

ನಾಲ್ಕು ಮನೆಗಳ ಊರಿಗೆ ಸೇರಿತು ಹೊಸಮನೆ!
ದಿನಗಳಲ್ಲಿ ಹೊಕ್ಕಳಿಕೆಯಲ್ಲಿ ಕೇವಲ ನಾಲ್ಕು ಮನೆತನಗಳಿದ್ದುವು. ನಾಲ್ಕು ಸಂಸಾರಗಳ ಮನೆಗಳು ಬೊಮ್ಲಾಪುರ ರಸ್ತೆಯ ಬಲಭಾಗಕ್ಕಿದ್ದವು. ಮನೆಗಳ ಕೆಳಭಾಗದಲ್ಲಿ ಒಂದು ಹಳ್ಳ ಹರಿಯುತ್ತಿದ್ದು ಅದರ ಪಕ್ಕದಲ್ಲಿ ಅಡಿಕೆ ಮತ್ತು ಬಾಳೆ ತೋಟ ಹರಡಿಕೊಂಡಿತ್ತು. ಕುಡಿಯುವ ನೀರಿಗಾಗಿ ಎಲ್ಲಾ ಮನೆಗಳು ಬಾವಿಯನ್ನು ಹೊಂದಿದ್ದವುಊರಿನ ಮೇಲ್ಭಾಗದ ಮೊದಲ ಮನೆಗೆ ಮೇಲಿನಮನೆ ಎಂದು ಕರೆಯಲಾಗುತ್ತಿದ್ದು, ಅದರ ಯಜಮಾನರ ಹೆಸರು ಪಣಿಯಪ್ಪಯ್ಯ ಎಂದಾಗಿತ್ತು. ಮನೆಯ ಕೆಳಭಾಗದ ತೋಟದಲ್ಲಿ ಈಶ್ವರನ ದೇವಸ್ಥಾನವಿದ್ದು ಅದರ ಪೂಜೆ ಇತ್ಯಾದಿ ಹಕ್ಕು ಮತ್ತು ಜವಾಬ್ದಾರಿ ಫಣಿಯಪ್ಪಯ್ಯನವರಿಗೆ ಸೇರಿತ್ತು.

ಫಣಿಯಪ್ಪಯ್ಯ ಓರ್ವ ಅಸಾಮಾನ್ಯ ವ್ಯಕ್ತಿ. ಅವರೊಬ್ಬ ರೈತ, ವರ್ತಕ, ಅರ್ಚಕ, ಸಂಗೀತಗಾರ  ಹಾಗೂ ವಿದ್ವಾಂಸರಾಗಿದ್ದರುಅವರ ಮನೆಯ ಮುಂದೆ ಒಂದು ಅಂಗಡಿ ಇದ್ದು ಅದನ್ನು ಅವರೇ ಸ್ವತಃ ನಡೆಸುತ್ತಿದ್ದದ್ದಲ್ಲದೇ, ದೇವಸ್ಥಾನದ  ಪೂಜೆ, ತೋಟ ಮತ್ತು ಗದ್ದೆ ವ್ಯವಸಾಯ  ಹಾಗೂ ಹಾರ್ಮೋನಿಯಂ ಬಾರಿಸುತ್ತಾ ರಾತ್ರಿ ಭಜನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಅವಿಶ್ರಾಂತ ಜೀವನವನ್ನು ನಡೆಸುತ್ತಿದ್ದರು. ಸ್ವಲ್ಪ ವರ್ಷಗಳ ನಂತರ ಅಂಗಡಿಯನ್ನು ಊರಿನ ತುದಿಯಲ್ಲಿದ್ದ ಕಟ್ಟೆಯ ಬಳಿ ಒಂದು ಹೊಸ ಕೊಟ್ಟಿಗೆ ಕಟ್ಟಿ ಸ್ಥಳಾಂತರಿಸಲಾಯಿತು. ಪಣಿಯಪ್ಪಯ್ಯನವರಿಗೆ  ಶೇಷಾದ್ರಿ, ಪದ್ಮನಾಭ, ಪುರುಷೋತ್ತಮ ಮತ್ತು ಸತ್ಯನಾರಾಯಣ ಎಂಬ ನಾಲ್ಕು ಗಂಡು ಮಕ್ಕಳು ಹಾಗೂ ಶ್ರೀದೇವಿ, ವಾಗ್ದೇವಿ , ಜಯಲಕ್ಷ್ಮಿ ಮತ್ತು ರಮಾದೇವಿ ಎಂಬ ಹೆಣ್ಣು ಮಕ್ಕಳಿದ್ದರು.

ಊರಿನ ಎರಡನೇ ಮನೆ ಜನಾರ್ಧನಯ್ಯ ಮತ್ತು ರಾಮಯ್ಯ ಎಂಬ ಅಣ್ಣ ತಮ್ಮಂದಿರಿಗೆ ಸೇರಿತ್ತುಅವರ ತಂದೆಯವರು ತೀರಿಕೊಂಡಿದ್ದರು. ತಾಯಿಯ ಹೆಸರು  ಸುಬ್ಬಮ್ಮ. ಊರಿನಲ್ಲಿ ಅವರನ್ನು ಕಿರಿಯರೆಲ್ಲಾ ಪ್ರ್ರೇತಿಯಿಂದ ಸುಬ್ಬ ದೊಡ್ಡಮ್ಮ ಎಂದೇ ಕರೆಯುತ್ತಿದ್ದರು. ಊರಿನಲ್ಲಿ  ಯಾವುದೇ ಹೆಣ್ಣು ಮಗಳಿಗೆ ಹೆರಿಗೆಯಾಗುವಾಗ ಸುಬ್ಬ ದೊಡ್ಡಮ್ಮ ಅಲ್ಲಿ ಹಾಜರಾಗುತ್ತಿದ್ದರು.  ಜನಾರ್ಧನಯ್ಯನವರ ಪತ್ನಿ ದ್ರೌಪತಿ.  ಅವರ ತವರುಮನೆ ಅಂಬುತೀರ್ಥದ ಹತ್ತಿರದ ಮೂಡುಗುಡ್ಡೆ ಎಂಬಲ್ಲಿ ಇತ್ತು.

ಮೂರನೇ ಮನೆ ರಾಮಪ್ಪಯ್ಯ ಮತ್ತು ವೆಂಕಟಕೃಷ್ಣಯ್ಯ ಎಂಬ ಅಣ್ಣ ತಮ್ಮಂದಿರ ಕೂಡು ಕುಟುಂಬಕ್ಕೆ ಸೇರಿತ್ತು. ಅಣ್ಣ ತಮ್ಮಂದಿರಿಬ್ಬರೂ ತೀರಿಕೊಂಡು ಪಿತ್ರಾರ್ಜಿತ ಮನೆ ರಾಮಪ್ಪಯ್ಯನವರ ಮಕ್ಕಳ ವಶಕ್ಕೆ ಬಂದಿತ್ತು. ವೆಂಕಟಕೃಷ್ಣಯ್ಯನವರ ಹಿರಿಯ ಮಗ ತಿಮ್ಮಪ್ಪಯ್ಯ ಆಗತಾನೇ  (ಇಸವಿ ೧೯೫೪) ಊರಿನಿಂದ ಸ್ವಲ್ಪ ದೂರದಲ್ಲಿ ಗದ್ದೆಯ ದಂಡೆಯ  ಮೇಲೆ 'ಹೊಸಮನೆ  ಕಟ್ಟಿಸಿ ಪ್ರವೇಶ ಮಾಡಿದ್ದರು. ಆಮೇಲೆ ಊರಿನಲ್ಲಿ ಎಷ್ಟೋ ಹೊಸಮನೆಗಳನ್ನು ಕಟ್ಟಲಾಯಿತಾದರೂ ತಿಮ್ಮಪ್ಪಯ್ಯನವರ ಮನೆ ಮಾತ್ರ ತನ್ನ 'ಹೊಸಮನೆ ' ಹೆಸರನ್ನು ಇಂದಿಗೂ ಉಳಿಸಿಕೊಂಡಿದೆ. ಅಷ್ಟು ಮಾತ್ರವಲ್ಲ. ತಿಮ್ಮಪ್ಪಯ್ಯನವರ ಹೆಸರೂ ಕೂಡ ಹೊಸಮನೆ ತಿಮ್ಮಪ್ಪಯ್ಯ ಎಂದು ಪರಿವರ್ತನೆಯಾಯಿತು. ಹೊಕ್ಕಳಿಕೆ ಬೊಮ್ಲಾಪುರ ಗ್ರಾಮದಲ್ಲಿದ್ದರೆ ಹೊಸಮನೆ ಬೋಳಾಪುರ ಗ್ರಾಮಕ್ಕೆ ಸೇರಿತ್ತು. ತಿಮ್ಮಪ್ಪಯ್ಯನ ತಮ್ಮಂದಿರು ಬೇರೆ ಬೇರೆ ಊರು ಸೇರಿದ್ದರು. ಊರಿನ ನಾಲ್ಕನೇ ಮನೆಯಲ್ಲಿ ಪುಟ್ಟುರಾಯರ ಸಂಸಾರವಿತ್ತು. ಪುಟ್ಟುರಾಯ-ಗೌರಮ್ಮ ದಂಪತಿಗಳಿಗೆ ಒಂದರ ಹಿಂದೆ ಒಂದು ನಾಲ್ಕು ಹೆಣ್ಣುಮಕ್ಕಳೇ ಹುಟ್ಟಿದಾಗ ಗೋಕರ್ಣ ದೇವರಿಗೆ ಹರಕೆ ಹೊತ್ತರಂತೆ. ಪರಿಣಾಮವಾಗಿ ಜನಿಸಿದ ಮೊದಲ ಮಗನಿಗೆ ಮಹಾಬಲನೆಂದು ಗೋಕರ್ಣ ದೇವರ ಹೆಸರನ್ನೇ ಇಡಲಾಯಿತು.

ಸುಲಭ ಸಂಪ್ರದಾಯ
ಆಗಿನ ಮಲೆನಾಡಿನಲ್ಲಿ ಒಂದು ಸಂಪ್ರದಾಯ ಇತ್ತು. ಹೆಣ್ಣುಮಕ್ಕಳಿಗೆ ಮದುವೆ ಮಾಡುವಾಗ ತಮ್ಮ ಊರಿನಲ್ಲಿ ಗಂಡು ಸಿಗದಿದ್ದರೆ ಮಾತ್ರಾ ಬೇರೆ ಊರಿನ ಗಂಡು ನೋಡುತ್ತಿದ್ದರು. ಈ ಸಂಪ್ರದಾಯದಂತೆ ಪಣಿಯಪ್ಪಯ್ಯನವರಿಗೆ ಅವರ ಮನೆಯಿಂದ ಮೂರನೇ ಮನೆಯಲ್ಲಿದ್ದ ಪುಟ್ಟುರಾಯರ ಮಗಳು ಗೌರಮ್ಮನವರೊಡನೆ ವಿವಾಹವಾಗಿತ್ತು. ವಿಚಿತ್ರವೆಂದರೆ ಪುಟ್ಟುರಾಯರ ಹೆಂಡತಿಯ ಹೆಸರೂ ಗೌರಮ್ಮನೇ ಆಗಿತ್ತು. ಹೀಗೆ ತಾಯಿಯ ಹೆಸರನ್ನೇ ಮಗಳಿಗೂ ಇಟ್ಟ  ಕಾರಣ ಹೇಳುವವರು ಯಾರೂ ಈಗ ಜೀವಂತವಾಗಿಲ್ಲ. ಮುಂದೆ ಮೂರನೇ ಗೌರಮ್ಮನಾಗಿ ನಮ್ಮ ಹಿರಿಯಕ್ಕ ಗೌರಕ್ಕನೂ ಪುಟ್ಟುರಾಯರ ಸೊಸೆಯಾಗಿ ಅವರ ಮೊದಲ ಮಗ ಮಹಾಬಲಯ್ಯನವರ ಕೈ ಹಿಡಿದು ಮನೆ ಸೇರಿದುದೊಂದು ಅಪರೂಪದ ಸಂಗತಿಯಾಗಿತ್ತು. ಇದಲ್ಲದೇ ಹೊಸಮನೆ ತಿಮ್ಮಪ್ಪಯ್ಯನವರ ಹಿರಿಯ ಮಗಳು ಜಾನಕಿಯನ್ನು ಜನಾರ್ಧನಯ್ಯನವರ ತಮ್ಮ ರಾಮಯ್ಯನವರಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಈ ಪದ್ದತಿಯ ಸಮಸ್ಯೆ ಏನೆಂದರೆ, ಮದುವೆಯಾದ ಹೆಣ್ಣು ಮಕ್ಕಳಿಗೆ ಆಗಾಗ ತವರುಮನೆಗೆ ಹೋಗಿ ಬರುವ ಸಡಗರವೇ ಇಲ್ಲದೇ ಹೋಗುವುದು. ಹಾಗೆಯೇ ಅಳಿಯನಿಗೆ ಮಾವನ ಮನೆಯ ವಿಶೇಷ ಗೌರವ ಮತ್ತು ಆತಿಥ್ಯ ಇಲ್ಲದೇ ಹೋಗುವುದು. ಇದೊಂದು ಗಂಡು ಮತ್ತು ಹೆಣ್ಣು ಇಬ್ಬರಿಗೂ ಬಣ್ಣಿಸಲಾಗದ ವೇದನೆ ಆಗಿರುತ್ತಿತ್ತು.

ಇದಲ್ಲದೇ ಇನ್ನೊಂದು ಬಗೆಯ ಕೊಟ್ಟು-ತರುವ ವ್ಯವಹಾರವೂ ರೂಢಿಯಲ್ಲಿತ್ತು. ಪುಟ್ಟುರಾಯರ ಮಗಳಾದ ಸೀತಮ್ಮನನ್ನು ನರ್ಜಿ ತಿಮ್ಮಪ್ಪಯ್ಯನವರಿಗೆ ಮದುವೆಮಾಡಿ ಅವರ ಹಿರಿಯ ಮಗಳು ಜಲಜಾಳನ್ನು ರಾಮಪ್ಪಯ್ಯನವರ (ತಿಮ್ಮಪ್ಪಯ್ಯನವರ ದೊಡ್ಡಪ್ಪ)  ಎರಡನೇ ಮಗ ಶ್ರೀನಿವಾಸಯ್ಯನವರಿಗೆ (ವಾಪಾಸ್!) ತಂದು ಮದುವೆ ಮಾಡಲಾಗಿತ್ತು. ತಿಮ್ಮಪ್ಪಯ್ಯನವರ ತಂಗಿ ಸಾವಿತ್ರಮ್ಮನವರನ್ನು ಆಲ್ಮನೆ ಶೇಷಗಿರಿಯವರಿಗೆ ಮದುವೆ ಮಾಡಿ ಅವರ ಸಹೋದರಿ ಸರಸ್ವತಿಯಮ್ಮನವರನ್ನು ತಂದು ರಾಮಪ್ಪಯ್ಯನವರ ಹಿರಿಯ ಮಗ ಸದಾಶಿವಯ್ಯನವರಿಗೆ ಮದುವೆ ಮಾಡಲಾಗಿತ್ತು. ರಾಮಪ್ಪಯ್ಯನವರ ಇನ್ನಿಬ್ಬರು ಮಕ್ಕಳೆಂದರೆ ಅಚ್ಯುತಯ್ಯ ಮತ್ತು ಗಣೇಶಯ್ಯ. ಅಚ್ಯುತಯ್ಯನವರ ಪತ್ನಿ ಗೌರಮ್ಮ ಹೊಸನಗರ ಕಡೆಯವರು. ಗಣೇಶಯ್ಯನವರಿಗೆ ಇನ್ನೂ ಮದುವೆಯಾಗಿರಲಿಲ್ಲ.
ಪುಟ್ಟುರಾಯರ ಸಂಸಾರ
ಪುಟ್ಟುರಾಯರದ್ದು ಏಳು ಹೆಣ್ಣುಮಕ್ಕಳು ಹಾಗೂ ಐದು ಗಂಡುಮಕ್ಕಳ (ಬರೋಬ್ಬರಿ ಒಂದು ಡಜನ್!) ಭರ್ಜರಿ ಸಂಸಾರ. ಹೆಣ್ಣುಮಕ್ಕಳ ಹೆಸರು  ಮೀನಾಕ್ಷಿ (ಹುಲ್ಕುಳಿ ), ಕಮಲಾಕ್ಷಿ (ನರ್ಜಿ), ಗೌರಮ್ಮ (ಹೊಕ್ಕಳಿಕೆ), ಸೀತಮ್ಮ (ನರ್ಜಿ), ಗಿರಿಜೆ (ಆಲ್ಮನೆ), ರಾಧಾ (ಎಡಗೇರಿ) ಮತ್ತು ಲಕ್ಷ್ಮಿ (ಕಮಲಾಪುರ). ಗಂಡುಮಕ್ಕಳ ಹೆಸರು ಕ್ರಮವಾಗಿ ಮಹಾಬಲಯ್ಯ , ಚಂದ್ರಹಾಸಯ್ಯ , ಗಣೇಶಯ್ಯ, ಕೃಷ್ಣಮೂರ್ತಿ ಮತ್ತು ನಾಗೇಶಯ್ಯ ಎಂದಿತ್ತು.  ಹೆಣ್ಣುಮಕ್ಕಳಿಗೆಲ್ಲಾ ಮದುವೆಯಾಗಿ ಅವರ ಹೆಸರ ಮುಂದಿರುವ ಊರುಗಳನ್ನು ಸೇರಿದ್ದರು. ಮಹಾಬಲಯ್ಯನವರಿಗೆ ಕೆಸವೆ ಊರಿನ ಲಕ್ಷ್ಮಮ್ಮ ಎಂಬುವರೊಡನೆ  ಮದುವೆಯಾಗಿತ್ತು. ಲಕ್ಷ್ಮಮ್ಮ ತಿಮ್ಮಪ್ಪಯ್ಯನವರ ಹೆಂಡತಿ ಕಮಲಾಕ್ಷಮ್ಮನವರ ತಂಗಿ. ದಂಪತಿಗಳಿಗೆ ಮಂಜಪ್ಪ ಮತ್ತು ಕೇಶವ ಎಂಬ ಗಂಡು ಮಕ್ಕಳು ಹುಟ್ಟಿದ ನಂತರ ಲಕ್ಷ್ಮಮ್ಮ ತೀರಿಕೊಂಡಿದ್ದರು. ಕೇಶವನನ್ನು ಹುಲ್ಕುಳಿ  ಪುಟ್ಟಮ್ಮ ಎಂಬುವರು ಹುಲ್ಕುಳಿ ಸುಬ್ಬರಾಯರೆಂಬ ಶ್ರೀಮಂತರ ತೀರ್ಥಹಳ್ಳಿ ಮನೆಯಲ್ಲಿ ಸಾಕಿದ್ದರು. ಮಹಾಬಲಯ್ಯ ಸ್ವಲ್ಪ ಸಮಯದ ನಂತರ ನಮ್ಮ ಗೌರಕ್ಕನನ್ನು ಮದುವೆಯಾದರು.  ಚಂದ್ರಹಾಸಯ್ಯನವರಿಗೆ ನಮ್ಮೂರಿನವರೇ ಆದ ಸರಸ್ವತಮ್ಮ ಎಂಬುವರೊಡನೆ ಮದುವೆಯಾಗಿತ್ತು.  ಗಣೇಶಯ್ಯನವರಿಗೆ ಕಾನೂರಿನ ಸುಬ್ಬರಾಯರ ಮಗಳು ಜಯಲಕ್ಷ್ಮಿಯವರೊಡನೆ ವಿವಾಹವಾಗಿತ್ತು.

------- ಮುಂದುವರಿಯುವುದು-------

No comments: