Tuesday, February 28, 2017

ನನ್ನ ಬಾಲ್ಯ


ಅಧ್ಯಾಯ ೧೬
ಶೃಂಗೇರಿಯಲ್ಲಿ ಶಾರದಾಂಬೆಯನ್ನು ಪ್ರತಿಷ್ಟಾಪಿಸಲು ಸಕಲ ವ್ಯವಸ್ಥೆಯನ್ನು ಮಾಡಿ ಬಂದಿದ್ದ ಶಂಕರಾಚಾರ್ಯರಿಗೆ ದೇವಿ ತಾನು ಹರಿಹರಪುರದಲ್ಲೇ ನೆಲೆಯೂರುವುದಾಗಿ ಹೇಳಿದ್ದು ದೊಡ್ಡ ಆಘಾತವಾಯಿತು. ಅವರು ದೇವಿಗೆ ಉದ್ದಂಡ ನಮಸ್ಕಾರ ಮಾಡಿ ತಮ್ಮನ್ನು ಕ್ಷಮಿಸಬೇಕೆಂದೂ ಮತ್ತು ಶೃಂಗೇರಿಗೆ ಬರಲೇ ಬೇಕೆಂದು ಕೇಳಿಕೊಂಡರು. ಆಗ ದೇವಿ ತಾನು ಹರಿಹರಪುರದಲ್ಲೇ ಉಳಿಯುವುದಾಗಿಯೂ ಆದರೆ  ಆಚಾರ್ಯರು ತನ್ನ ವಿಗ್ರಹವನ್ನು ಶೃಂಗೇರಿಯಲ್ಲಿ  ಪ್ರತಿಷ್ಟಾಪಿಸಬಹುದೆಂದೂ ಮತ್ತು ಶರನ್ನವರಾತ್ರಿಯ ಒಂಬತ್ತು ದಿನಗಳು ತಾನು ಶೃಂಗೇರಿಯಲ್ಲಿ ಪ್ರತ್ಯಕ್ಷಳಾಗುವುದಾಗಿಯೂ ಒಪ್ಪಿಕೊಂಡಳು. ನಮ್ಮಮ್ಮನ ಪ್ರಕಾರ ಕಾರಣದಿಂದಲೇ ಶರನ್ನವರಾತ್ರಿಯ ಒಂಬತ್ತು ದಿನಗಳಲ್ಲಿ ಶೃಂಗೇರಿಯಲ್ಲಿ ಶಾರದಾಂಬೆಗಿರುವ ಮುಖದ ಸೌಂದರ್ಯ ಮತ್ತು ಕಳೆ ಬೇರೆ ದಿನಗಳಲ್ಲಿ ಕಾಣುವುದಿಲ್ಲ.

ಪವಿತ್ರ ತುಂಗಾ ನದಿಯನ್ನು ಹರಿಹರಪುರದಲ್ಲಿ ದಾಟಿದ ನಾವು ಮೂವರು ಕಾಲ್ನಡಿಗೆಯನ್ನು ಮುಂದುವರಿಸಿ ಹೊಕ್ಕಳಿಕೆ ಊರನ್ನು ತಲುಪಿದೆವು. ಅಲ್ಲಿಯವರೆಗೆ ನಾನು ಬೇರೊಬ್ಬರ ಮನೆಯಲ್ಲಿ ಒಂದು ರಾತ್ರಿಗಿಂತ ಹೆಚ್ಚು ಕಳೆದಿರಲಿಲ್ಲ. ಹಾಗಾಗಿ ನನಗೆ ಅಕ್ಕನ ಮನೆಯ ವಾಸ ಒಂದು ಹೊಸ ಅನುಭವವಾಗಿತ್ತು.

ನಮ್ಮ ಮನೆಯಲ್ಲಿ ಆಗ ಒಂದೂ ರೂಮ್ ಇರಲಿಲ್ಲ ಮತ್ತು ನಮಗೆಲ್ಲ ಯಾವುದೇ ಬಾಗಿಲಿಲ್ಲದ ಜಗಲಿಯ ಮೇಲೆ ಮಲಗಿ ಅಭ್ಯಾಸವಾಗಿತ್ತು. ಆದರೆ ಅಕ್ಕನ  ಮನೆಯಲ್ಲಿ ಭಾವನ ಕಿರಿಯ ತಮ್ಮನಾದ ನಾಗೇಶ ಭಾವ ಮಾತ್ರಾ ಜಗಲಿಯಲ್ಲಿ ಮಲಗುತ್ತಿದ್ದರು. ಅದಕ್ಕೆ ಕೂಡ ಭದ್ರವಾದ ಬಾಗಿಲಿತ್ತು. ನನಗೆ ನಾಗೇಶ ಭಾವನ ಪಕ್ಕದಲ್ಲೇ ಮಲಗಿಕೊಳ್ಳಲು ಏರ್ಪಾಟು ಮಾಡಲಾಯಿತು. ಆದರೆ ಬೆಳಗಿನ ಉಪಹಾರ ಒಂದು  ದೊಡ್ಡ ಸಮಸ್ಯೆಯಾಯಿತು. ಏಕೆಂದರೆ ಮನೆಯ ಗಂಡಸರು ಯಾರಿಗೂ ಬೆಳಿಗ್ಗೆ ತಿಂಡಿ ತಿನ್ನುವುದರಲ್ಲಿ ಆಸಕ್ತಿಯೇ ಇರಲಿಲ್ಲ! ನಮ್ಮ ಮನೆಯಂತೆ ಒಬ್ಬೊಬ್ಬರಾಗಿ ಕುಳಿತು ದೋಸೆ ತಿನ್ನುವುದಾಗಲೀ ಅಥವಾ ಒಟ್ಟಿಗೆ ಕುಳಿತು ಉಪ್ಪಿಟ್ಟು, ಇಡ್ಲಿ, ಇತ್ಯಾದಿಗಳನ್ನು ತಿನ್ನುವ ಕ್ರಮವೇ ಅಲ್ಲಿರಲಿಲ್ಲ.

ಆಗ ನನ್ನ ಸಹಾಯಕ್ಕೆ ಬಂದವರು ಗಣೇಶ ಭಾವ. ಉಳಿದವರಿಗಿಂತ ಸ್ವಲ್ಪ ಹೆಚ್ಚಿಗೆ ಬೆಳಗಿನ ಉಪಹಾರದಲ್ಲಿ ಆಸಕ್ತಿಯಿದ್ದ ಅವರೊಡನೆ ನನ್ನ ತಿಂಡಿ ಏರ್ಪಾಟಾಯಿತು. ಆದರೆ ಅವರು ಕೇವಲ ಎರಡು ದೋಸೆ ಮಾತ್ರ ತಿನ್ನುತ್ತಿದ್ದರು. ಮಾತ್ರವಲ್ಲ ಮೊಸರನ್ನುತಿನ್ನುತ್ತಲೇ ಇರಲಿಲ್ಲ. ಸ್ವಲ್ಪ ಮುಜುಗರವೆನಿಸಿದರೂ ನನಗೆ  ಮಾತ್ರ ಅಕ್ಕನೇ ಖುದ್ದಾಗಿ ಮನೆಯಲ್ಲಿ ಸಮೃದ್ಧಿಯಾಗಿದ್ದ ಮೊಸರನ್ನು ಬಡಿಸುತ್ತಿದ್ದಳು. ಊಟಕ್ಕೂ ಕೂಡ ಎಲ್ಲರೂ ಒಟ್ಟಿಗೆ ಕೂರುತ್ತಿರಲಿಲ್ಲ. ಆದರೆ ಅಕ್ಕನ ಪ್ರೀತಿಯಲ್ಲಿ ನನಗೇನೂ ಊಟ ತಿಂಡಿಗಳ ಕೊರತೆ ಇರಲಿಲ್ಲ.

ವಯಸ್ಸಾಗಿದ್ದ ಅಕ್ಕನ ಅತ್ತೆ ಸಂಪೂರ್ಣ ಕತ್ತಲೆಯಿಂದ ತುಂಬಿದ್ದ ಮಾಳಿಗೆಯಲ್ಲಿ ಯಾವಾಗಲೂ ಮಲಗಿರುತ್ತಿದ್ದರು. ನನಗೆ ಒಮ್ಮೆಯೂ ಅವರ ಮುಖ ನೋಡುವ ಅವಕಾಶ ಸಿಗಲಿಲ್ಲ. ಮಾಳಿಗೆಯ ಒಂದು ಭಾಗದಲ್ಲಿ ಅಕ್ಕ ಭಾವಂದಿರು ಮಲಗುವ ಕೋಣೆಯಿತ್ತು. ಅಕ್ಕ ಇಡೀ ದಿನ ಯಾವುದೋ ಕೆಲಸಗಳಲ್ಲಿ ತೊಡಗಿರುತ್ತಿದ್ದಳು. ಆದಿನಗಳಲ್ಲಿ ಹೊಕ್ಕಳಿಕೆಗೂ ವಿದ್ಯುಚ್ಛಕ್ತಿ ಬಂದಿರಲಿಲ್ಲ. ಹಾಗಾಗಿ ಹಗಲು ಹೊತ್ತಿನಲ್ಲಿ ಕೂಡ ಮನೆಯ ಒಳಭಾಗದಲ್ಲಿ ಒಬ್ಬರ ಮುಖ ಇನ್ನೊಬ್ಬರಿಗೆ ಕಾಣುತ್ತಿರಲಿಲ್ಲ.

ನಮ್ಮ ಮನೆಯಲ್ಲಿ ಹಣ ಇಡುವುದಕ್ಕೆ ಯಾವುದೇ ತಿಜೋರಿ  ಇತ್ಯಾದಿಗಳಿರಲಿಲ್ಲ. ಕಾರಣವಿಷ್ಟೇ. ಇರುವ ಸ್ವಲ್ಪ ಹಣ ಅಪ್ಪನ ಅಥವಾ ಅಣ್ಣನ ಜೇಬಿನಲ್ಲೇ ಇಟ್ಟುಕೊಳ್ಳಬಹುದಾಗಿತ್ತು! ಆದರೆ ಅಕ್ಕನ ಮನೆಯಲ್ಲಿ ಭಾವವರು ಅವರ ರೂಮಿನ ಒಂದು ಲಾಕರ್ ನಲ್ಲಿ ಮತ್ತು ಜಗಲಿಯಲ್ಲಿದ್ದ ಇನ್ನೊಂದು ಒಂದು ತಿಜೋರಿಯಲ್ಲಿ ಹಣ ಇಟ್ಟಿರುತ್ತಿದ್ದರು. ಜಗಲಿಯಲ್ಲಿದ್ದ ತಿಜೋರಿಯಲ್ಲಿ ಹಣ  ಖಾಲಿಯಾಗುತ್ತಿದ್ದಂತೆ ರೂಮಿನ  ತಿಜೋರಿಯಿಂದ ಅಲ್ಲಿಗೆ ಟ್ರಾನ್ಸ್ಫರ್ ಮಾಡುತ್ತಿದ್ದರು. ಆಗಿನ ಕಾಲದಲ್ಲಿ ೨೦ ಮತ್ತು ೫೦ ರೂಪಾಯಿ ನೋಟುಗಳು ಚಲಾವಣೆಗೆ ಬಂದಿರಲಿಲ್ಲ. ೧೦ ರೂಪಾಯಿ ನೋಟುಗಳು ತುಂಬಾ ದೊಡ್ಡ ಸೈಜ್ ನಲ್ಲಿ ಇರುತ್ತಿದ್ದವು. ನಾನು ಮೊದಲ ಬಾರಿಗೆ ಭಾವನವರ ಹತ್ತಿರವಿದ್ದ ೧೦೦ ರೂಪಾಯಿ ನೋಟುಗಳನ್ನು ನೋಡಿದೆ. ಬಡವರ ಕಣ್ಣಿಗೇ ಬೀಳದ ನೋಟುಗಳಿಗೆ ಹಸಿರು ನೋಟು ಎಂದು ಕರೆಯಲಾಗುತ್ತಿತ್ತು. ಭಾವನವರ ಹಣಕಾಸಿನ ವ್ಯವಹಾರ ತುಂಬಾ ಜೋರಾಗಿ ನಡೆಯುತ್ತಿತ್ತುಜಗಲಿಯಲ್ಲಿದ್ದ ಒರಗು ಬೆಂಚಿನ ಮೇಲೆ ಸಾಮಾನ್ಯವಾಗಿ ಒಬ್ಬರಲ್ಲದಿದ್ದರೆ ಮತ್ತೊಬ್ಬರು ಸಾಲ ತೆಗೆದುಕೊಳ್ಳಲು ಬಂದು ಕೂತಿರುತ್ತಿದ್ದರು.

ಆಗಿನ ಹೊಕ್ಕಳಿಕೆಯಲ್ಲಿ ಕೇವಲ ಐದು ಮನೆಗಳಿದ್ದುವು. ಭಾವನವರು ತಮ್ಮ ನಾಲ್ಕು ತಮ್ಮೊಂದಿರೊಂದಿಗೆ ತುಂಬಾ ಹಳೆಯ ಕಾಲದ ಮನೆಯಲ್ಲಿ ಇದ್ದರು. ಇನ್ನೊಂದು ಮನೆಯಲ್ಲಿ ಸದಾಶಿವಯ್ಯನವರು ತಮ್ಮ ಮೂರು ಜನ ತಮ್ಮಂದಿರೊಡನಿದ್ದರು. ಜನಾರ್ಧನಯ್ಯನವರ ಮನೆಯಲ್ಲಿ ಆಗ ತಾನೇ ಪಾಲಾಗಿ ಅವರ  ತಮ್ಮ ರಾಮಯ್ಯನವರು ಮನೆಯ ಮತ್ತೊಂದು ಭಾಗದಲ್ಲಿ ವಾಸಮಾಡುತ್ತಿದ್ದರು. ಮೇಲಿನಮನೆ ಎಂದು ಕರೆಯುತ್ತಿದ್ದ ಮನೆಯಲ್ಲಿ ಫಣಿಯಪ್ಪಯ್ಯನವರು ವಾಸ  ಮಾಡುತ್ತಿದ್ದರು. ಅವರಿಗೆ ನಮ್ಮ ಭಾವನವರ ಅಕ್ಕನನ್ನೇ (ಗೌರಮ್ಮ) ಕೊಟ್ಟು ಮದುವೆಯಾಗಿತ್ತು. ಸದಾಶಿವಯ್ಯನವರ ದಾಯಾದಿಗಳಾದ ತಿಮ್ಮಪ್ಪಯ್ಯ ಮತ್ತು ಸಹೋದರರು ಆಗ ತಾನೆ ಅವರ ಮನೆಯಿಂದ ಹೊರಬಿದ್ದಿದ್ದರು. ಹಿರಿಯರಾದ ತಿಮ್ಮಪ್ಪಯ್ಯನವರು ಊರಿನಿಂದ ಸ್ವಲ್ಪ ದೂರದಲ್ಲಿದ್ದ ತಮ್ಮ ಗದ್ದೆಯ ಹತ್ತಿರ ಬಾಳಾಪುರ ಎಂಬಲ್ಲಿ ಹೊಸಮನೆಯನ್ನು ೧೯೫೪ನೇ ಇಸವಿಯಲ್ಲಿ ಕಟ್ಟಿಸಿಕೊಂಡು ವಾಸ  ಮಾಡುತ್ತಿದ್ದರು ಮನೆಗೆ ಹೊಸಮನೆಯೆಂದೇ ಹೆಸರಿಡಲಾಗಿತ್ತು. ಅವರ ಹಿರಿಯ ಮಗಳಾಗಿದ್ದ ಜಾನಕಿಯನ್ನು ರಾಮಯ್ಯನವರಿಗೆ ಮದುವೆ ಮಾಡಲಾಗಿತ್ತು. ನಾನು ಒಮ್ಮೆ ಹೊಸಮನೆಗೆ ಹೋಗಿದ್ದೆ. ಗದ್ದೆಯ ದಂಡೆಯ ಮೇಲಿದ್ದ ಮನೆ ಊರಿನ ಬೇರೆ ಮನೆಗಳಿಗಿಂತ ತುಂಬಾ ಸುಂದರವಾಗಿ ಕಾಣುತ್ತಿತ್ತು.

ಭಾವನವರು ವಾಸ ಮಾಡುತ್ತಿದ್ದ ಹಳೇ ಮನೆಯ ಪಕ್ಕದಲ್ಲೇ ಒಂದು ಹೊಸ ಮನೆ ಕಟ್ಟಲಾಗಿತ್ತುಸ್ವಲ್ಪ ಕಾಲದಲ್ಲೇ ಭಾವನ ಸಂಸಾರದಲ್ಲಿ ಪಾಲಾಗುವುದೆಂದು ತೀರ್ಮಾನವಾಗಿತ್ತು. ಆದರೆ ಹೊಸಮನೆ ಯಾರ ಪಾಲಿಗೆ ಹೋಗುವುದೆಂದು ನಿರ್ಧಾರವಾಗಿರಲಿಲ್ಲ. ಹೊಚ್ಚ ಹೊಸದಾಗಿದ್ದ ಮನೆ ನೋಡಲು ತುಂಬಾ ಸುಂದರವಾಗಿತ್ತು. ನನ್ನಕ್ಕನೇ ಮನೆಗೆ ಹೋಗುವಂತಾಗಲೆಂದು ನಾನು ಆಗಲೇ ದೇವರನ್ನು ಪ್ರಾರ್ಥಿಸಿಬಿಟ್ಟೆ!

ಊರಿನ ಮಧ್ಯದಲ್ಲಿದ್ದ ಹೊಕ್ಕಳಿಕೆಯ ಪ್ರಾಥಮಿಕ ಶಾಲೆಯ ಕಟ್ಟಡ ಮೇಷ್ಟರುಗಳ ಕೊರತೆಯಿಂದ ಹಾಳು ಸುರಿಯುತ್ತಿತ್ತು. ಒಂದು ಕಾಲದಲ್ಲಿ ಅದು ಪ್ರಸಿದ್ಧಿ ಪಡೆದಿತ್ತಂತೆ. ಆದರೆ ಅದೊಂದು ಗ್ರಾಂಟ್ ಸ್ಕೂಲ್ ಆದ್ದರಿಂದ ಮೇಷ್ಟರಿಗೆ ತಿಂಗಳ ಸಂಬಳ ಕೇವಲ ೩೦ ರೂಪಾಯಿ ಕೊಡುತ್ತಿದ್ದರಂತೆ. ಆದ್ದರಿಂದ ಮೇಷ್ಟರುಗಳು ಶಾಲೆಗೆ ಬರಲು ತಯಾರಿರಲಿಲ್ಲವಂತೆ. ನಮ್ಮೂರಿನ ಮೇಷ್ಟರಿಗೆ ತಿಂಗಳಿಗೆ ೭೫  ರೂಪಾಯಿ ಸಂಬಳವಿದ್ದರೂ ಯಾರೂ ಬಾರದಿದ್ದರಿಂದ ನನ್ನ ಓದು ಎರಡನೇ ತರಗತಿಯಲ್ಲೇ ನಿಂತು ಹೋಗಿತ್ತು. ಹೊಕ್ಕಳಿಕೆಯ ಮಕ್ಕಳು ಆಗ ಹತ್ತಿರದಲ್ಲೇ ಇದ್ದ ಮೇಲ್ಕೊಪ್ಪ ಶಾಲೆಗೆ ಹೋಗುತ್ತಿದ್ದರು.

ಹೊಕ್ಕಳಿಕೆಯ ಮನೆಯ ಮುಂದಿದ್ದ ಅಡಿಕೆ  ತೋಟದ ಪಕ್ಕದಲ್ಲೇ ಒಂದು ನೀರಿನ ಹಳ್ಳ ಹರಿಯುತ್ತಿತ್ತು. ಹಳ್ಳಕ್ಕೆ ಬೇಸಿಗೆಯಲ್ಲಿ ಒಂದು ದಂಡೆ ಕಟ್ಟಿ ನೀರು ನಿಲ್ಲಿಸುತ್ತಿದ್ದರು. ತೋಟಕ್ಕೆ ಅದೇ ನೀರು ಆಸರೆಯಾಗಿತ್ತು. ಕಟ್ಟು ತುಂಬಿ ಹೆಚ್ಚಾದ ನೀರು ಪುನಃ ಹಳ್ಳದಲ್ಲೇ ಮುಂದೆ ಹರಿದು ಹೋಗುತ್ತಿತ್ತು. ಒಂದು ದಿನ ಮದ್ಯಾಹ್ನ ನಾವು ಅಂಗಳದಲ್ಲಿ ಆಡುತ್ತಿದ್ದೆವು. ಆಗ ಇದ್ದಕ್ಕಿದ್ದಂತೆ ಎರಡು ಹಾವುಗಳು ಹಳ್ಳದ ದಂಡೆಯಿಂದ ಹೊರಬಿದ್ದು ಅಂಗಳ ಪ್ರವೇಶ ಮಾಡಿದುವು. ನಾವು ಭಯದಿಂದ ಮನೆಯೊಳಗೆ ಓಡಿಹೋಗಿ ಬಾಗಿಲು ಹಾಕಿಕೊಂಡು ಜಗಲಿಯ ದಳಿಯ ಮೂಲಕ ನೋಡತೊಡಗಿದೆವು.

ಸರ್ಪಗಳು ಯಾವುದೇ ಭಯವಿಲ್ಲದೆ ಅಂಗಳದ ಮಧ್ಯದಲ್ಲಿ ಒಂದಕ್ಕೊಂದು ಸುರುಳಿ ಸುತ್ತಿಕೊಳ್ಳುತ್ತಾ ಆಟವಾಡ  ತೊಡಗಿದವು. ನಾನು ಅಲ್ಲಿಯವರೆಗೆ ನಮ್ಮೂರಿನಲ್ಲಿ ಎಷ್ಟೋ ಸರ್ಪಗಳನ್ನು ನೋಡಿದ್ದರೂ ಅವುಗಳ ಜೋಡಿಯೊಂದು ಬಗೆಯ ಆಟದಲ್ಲಿ ತೊಡಗಿರುವುದನ್ನು ನೋಡಿರಲಿಲ್ಲ. ಎಷ್ಟು ಹೊತ್ತಾದರೂ ಸರ್ಪ ಜೋಡಿ ಯಾವುದೇ ಭಯ ಅಥವಾ ಸಂಕೋಚವಿಲ್ಲದೇ ತಮ್ಮ ಆಟದಲ್ಲಿ ಮಗ್ನವಾಗಿದ್ದುವು. ಕೊನೆಗೆ ಮನೆಯ ಆಳುಗಳು ಅವುಗಳನ್ನು ಒಂದು ದೋಟಿಯ ತುದಿಯಿಂದ ಹಳ್ಳದೊಳಗೆ ತಳ್ಳಿಬಿಟ್ಟರು. ಮಕ್ಕಳಾದ ನಮಗೆಲ್ಲಾ ಅದೊಂದು ವಿಸ್ಮಯ ಸಂಗತಿಯಾಯಿತು. ಆಳುಗಳ ಪ್ರಕಾರ ಅವುಗಳಲ್ಲಿ ಒಂದು ವಿಷವುಳ್ಳ ನಾಗ ಸರ್ಪ ಮತ್ತು ಇನ್ನೊಂದು ವಿಷವಿಲ್ಲದ ಕೇರೇ ಹಾವಂತೆ. ಆಮೇಲೆ ಎಷ್ಟೋ ವರ್ಷಗಳ ನಂತರ ನನಗೆ ಸರ್ಪಗಳು ಪ್ರಣಯ ಕೇಳಿಯಲ್ಲಿ ತೊಡಗಿದ್ದವೆಂದು ತಿಳಿದು ಬಂತು.

ಭಾವನವರ ಒಬ್ಬ ಸಹೋದರಿಯಾದ ರಾಧಮ್ಮನವರನ್ನು ಯೆಡಗೆರೆಯ ದ್ಯಾವಪ್ಪಯ್ಯನವರಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಒಂದು ದಿನ ರಾಧಮ್ಮನವರು ತಮ್ಮ ಹೆಣ್ಣು ಮಕ್ಕಳಾದ ರುಕ್ಮಿಣಿ, ಸರಸ್ವತಿ ಮತ್ತು ಜಯ ಎಂಬುವರೊಡನೆ ತಮ್ಮ ತವರುಮನೆಗೆ ಆಗಮಿಸಿದರು.
----ಮುಂದುವರಿಯುವುದು ---