Wednesday, February 22, 2017

ನನ್ನ ಬಾಲ್ಯ


ಅಧ್ಯಾಯ ೧೫
ಗೌರಕ್ಕನ ಮದುವೆ
ನಮ್ಮ ಪ್ರೀತಿಯ ಹಿರಿಯಕ್ಕನ ಮದುವೆ ನಮ್ಮ ಸಂಸಾರದಲ್ಲಿ ಒಂದು ಹೊಸ ಅಧ್ಯಾಯವನ್ನೇ  ತೆರೆಯಿತೆಂದು ಹೇಳಬೇಕು. ತಾನು ಹೊಸದಾಗಿ ಸೇರಿದ ಕುಟುಂಬಕ್ಕೆ ಮತ್ತು ಹೊಕ್ಕಳಿಕೆ ಊರಿಗೆ  ತನ್ನನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡರೂ ಅಕ್ಕ ತನ್ನ ತವರುಮನೆಯವರನ್ನು ಎಂದೂ ಕಡೆಗಣಿಸಲಿಲ್ಲ. ಮಾತ್ರವಲ್ಲ ನನ್ನನ್ನೂ ಸೇರಿ ಮೂರು ಜನ ತಮ್ಮಂದಿರನ್ನು ತನ್ನ ಮನೆಯಲ್ಲಿ ಇಟ್ಟುಕೊಂಡು ನಮ್ಮ ವಿದ್ಯಾಭ್ಯಾಸ ಸುಸೂತ್ರವಾಗಿ  ಮುಂದುವರೆಯುವಂತೆ ನೋಡಿಕೊಂಡಳು.

ದಿನ ನನಗಿನ್ನೂ ಸ್ಪಷ್ಟವಾಗಿ ನೆನಪಿದೆ. ಬೆಳವಿನಕೊಡಿಗೆಯಲ್ಲಿ ಯಾವುದೋ ಸಂತರ್ಪಣೆ ಊಟ ಮುಗಿದನಂತರ ಅಪ್ಪ ತನ್ನೊಡನೆ ಶ್ರೀಕಂಠ ಜೋಯಿಸರನ್ನು ಕರೆದುಕೊಂಡು ನಮ್ಮ  ಮನೆಗೆ ಬಂದ. ಅವರನ್ನು ಚಾಪೆಯ ಮೇಲೆ ಕೂರಿಸಿ ಅವರ ಕೈಯಲ್ಲಿ  ಎರಡು ಜಾತಕಗಳನ್ನು ಇಡಲಾಯಿತು. ಜೋಯಿಸರ ಕನ್ನಡಕ ಮೂಗಿನಮೇಲೆ ಏರಿತು. ತಮ್ಮ ಕೈಯಲ್ಲಿದ್ದ ಜಾತಕಗಳ ಪರಿಶೀಲನೆ ಮಾಡತೊಡಗಿದರು. ಸ್ವಲ್ಪ ಸಮಯದ ನಂತರ ಕನ್ನಡಕ ವಾಪಾಸ್ ತನ್ನ ಕೇಸ್ ನೊಳಗೆ ಹೋಯಿತು. ಅಪ್ಪ ಮತ್ತು ಅಮ್ಮ ಜೋಯಿಸರ ಬಾಯಿಂದ ಬರುವ ಮಾತಿಗಾಗಿ ಕುತೂಹಲದಿಂದ ನೋಡುತ್ತಿದ್ದರು. ಅವರಿಗೆ ಜೋಯಿಸರ ಮುಖದಲ್ಲೊಂದು ಮುಗುಳ್ನಗೆ ಕಾಣಿಸಿತು. ಅವರಿಗೆ ನಿರಾಶೆಯಾಗಲಿಲ್ಲ. ಜೋಯಿಸರ ಪ್ರಕಾರ ಜಾತಕಗಳು ನೂರಕ್ಕೆ ನೂರು ಹೊಂದಾಣಿಕಯಲ್ಲಿದ್ದುವು!

ಅದು ೧೯೫೪ನೇ ಇಸವಿ. ನಮ್ಮ ಅಕ್ಕ ಮತ್ತು ಹೊಕ್ಕಳಿಕೆ ಮಹಾಬಲಯ್ಯನವರ ಮದುವೆ ಆಗುಂಬೆಯ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ನಮ್ಮ ಕಡೆಯಿಂದ ಮದುವೆಯ ಸಂಪೂರ್ಣ ಜವಾಬ್ದಾರಿಯನ್ನು ಪುರದಮನೆ ಶ್ರೀನಿವಾಸಯ್ಯನವರು ಹೊತ್ತಿದ್ದರು. ಹಾಗಾಗಿ ಯಾವುದೇ ಕೊರತೆಗಳಿರಲಿಲ್ಲ. ದಿನಗಳಲ್ಲಿ ನಮ್ಮ ಕೊಪ್ಪ ಶೃಂಗೇರಿ ಸೀಮೆಯವರಿಗೆಲ್ಲಾ ಮದುವೆ ಇತ್ಯಾದಿ ಸಮಾರಂಭಗಳಿಗೆ ಹೋಗಲು ಮತ್ತು ಅಡಿಕೆಯನ್ನು ಶಿವಮೊಗ್ಗಕ್ಕೆ ಒಯ್ಯಲು ಇದ್ದ ಏಕೈಕ ವಾಹನವೆಂದರೆ ಮಾರ್ತಾಂಡಪುರದ ಪುಟ್ಟರಾಯರ ಲಾರಿ. ನಾವೆಲ್ಲಾ ಒಟ್ಟಿಗೆ ಅವರ ಲಾರಿಯಲ್ಲಿ ಮೊದಲ ಪ್ರಯಾಣ ಮಾಡಿ ಆಗುಂಬೆ ತಲುಪಿದೆವು. ಆದರೆ ಹಿಂದಿರುಗಿ ಬರುವಾಗ ನಮ್ಮ ಅಕ್ಕ ನಮ್ಮೊಂದಿಗಿಲ್ಲದ್ದು ನಮಗೆಲ್ಲ ತುಂಬಾ ದುಃಖದ  ವಿಷಯವಾಗಿತ್ತು.

ಮಹಾಬಲಯ್ಯ ಅವರ ತಂದೆ ತಾಯಿಯ ಐದು ಜನ ಗಂಡು ಮಕ್ಕಳಲ್ಲಿ ಹಿರಿಯರು. ಗೋಕರ್ಣದ ದೇವರಿಗೆ ಹರಕೆ ಹೊತ್ತನಂತರ ಹುಟ್ಟಿದ ಗಂಡು ಮಗನಾದ್ದರಿಂದ ಮಹಾಬಲಯ್ಯನೆಂದು ಹೆಸರಿಡಲಾಗಿತ್ತು. ಅವರಿಗೆ ಆರು ಜನ ಅಕ್ಕ ತಂಗಿಯರಿದ್ದರು. ತಂದೆ ಪುಟ್ಟುರಾಯರು ಬೇಗ ತೀರಿಕೊಂಡದ್ದರಿಂದ ದೊಡ್ಡ ಸಂಸಾರದ ಜವಾಬ್ದಾರಿ ಅವರ ಕೈಗೆ ಬಂದಿತ್ತು. ಹಣಕಾಸಿನ ವ್ಯವಹಾರದಲ್ಲಿ ಅತಿ ಬುದ್ದಿವಂತರಾಗಿದ್ದ ಮಹಾಬಲಯ್ಯ ಅತಿ ಶೀಘ್ರದಲ್ಲೇ ಇದ್ದ ಜಮೀನು ಅಭಿವೃದ್ಧಿ ಮಾಡಿದುದು ಮಾತ್ರವಲ್ಲ ಹೊಸ ಹೊಸ ಜಮೀನುಗಳನ್ನೂ  ಕೊಂಡು ಹಾಕಿ ಆದಾಯವನ್ನು ಮೇಲಕ್ಕೇರಿಸಿಬಿಟ್ಟರು. ಒಟ್ಟಿನಲ್ಲಿ ನಮ್ಮಕ್ಕ ನಮ್ಮ ಬಡ ಸಂಸಾರದಿಂದ ಶ್ರೀಮಂತ ಸಂಸಾರ ಒಂದರಲ್ಲಿ ಕಾಲಿಡುತ್ತಿದ್ದಳು.

ಆಮೇಲೆ ಎಷ್ಟೋ ದಿನ ಅಕ್ಕನಿಲ್ಲದ ಮನೆ ಬಿಕೋ ಎನ್ನುತ್ತಿತ್ತು. ಆದರೆ ವರ್ಷದ ಯುಗಾದಿ ಹಬ್ಬ ನಮಗೆ ತುಂಬಾ ಸಂತಸ ತಂದಿತು. ಗೌರಕ್ಕ ತನ್ನ ಗಂಡನೊಡನೆ ಅವಳ ತವರುಮನೆಗೆ ಮೊದಲ ಯುಗಾದಿ ಹಬ್ಬವನ್ನು ಆಚರಿಸಲು ಆಗಮಿಸಿದಳು. ನಮಗೆಲ್ಲ ವರ್ಷದ ಯುಗಾದಿ ತುಂಬಾ ಸಂತಸದ್ದಾಗಿತ್ತು. ಎಲ್ಲರಿಗೂ ಅವಳ ಬಾಯಿಂದ ಅವಳ ಗಂಡನ ಮನೆಯ ಅನುಭವಗಳನ್ನು ಕೇಳುವ ಕುತೂಹಲ. ಸಾಯಂಕಾಲ ಮುರುವಿನ ಒಲೆಯ ಮುಂದೆ ಕುಳಿತು ಅಕ್ಕನ ಬಾಯಿಂದ ಅವಳ ಹೊಸ ಸಂಸಾರದ ವಿವರಗಳನ್ನು ಸಂಪೂರ್ಣವಾಗಿ ತಿಳಿದುಕೊಂಡೆವು. ಮಧ್ಯೆ ಭಾವನವರು ನಮ್ಮ ತೋಟವನ್ನೆಲ್ಲಾ ಸುತ್ತಾಡಿದರು. ನಮ್ಮ ತೋಟದ ಹೆಚ್ಚಿನ ಮರಗಳಿಗೆ ವೀಳ್ಯದೆಲೆಯ ಬಳ್ಳಿಗಳನ್ನು ಹಬ್ಬಿಸಲಾಗಿತ್ತು. ಆದರೆ ಭಾವನ ಪ್ರಕಾರ ಹೊಕ್ಕಳಿಕೆಯಲ್ಲಿ ವೀಳ್ಯದೆಲೆಯನ್ನು ಬೆಳೆಯುತ್ತಿರಲಿಲ್ಲವಂತೆ! ನಮ್ಮ ತಂದೆಯವರು ಕೂಡಲೇ ಬಾವನವರಿಗೆ ಕೊಂಡೊಯ್ಯಲು ವೀಳ್ಯದೆಲೆಯ ಬಳ್ಳಿಗಳನ್ನು ರೆಡಿ ಮಾಡಿದರು.

ನಡುವೆ ಅಕ್ಕ ಭಾವನವರ ಜೊತೆ ನಮ್ಮ ಮನೆಯಿಂದ ಒಬ್ಬ ಹುಡುಗ ಹೋಗಿ ಸ್ವಲ್ಪ ದಿನ ಅಕ್ಕನೊಡನೆ ಇದ್ದು ಬರಬೇಕೆಂದು ತೀರ್ಮಾನಿಸಲಾಯಿತು. ಸೀನಿಯಾರಿಟಿ ಪ್ರಕಾರ ಅದು ಪುಟ್ಟಣ್ಣ ಎಂದು ತೀರ್ಮಾನವಾಯಿತು. ನನ್ನ ಸರದಿ ಮುಂದಿನ ಬಾರಿ ಎಂದೂ ಹೇಳಿ ಎಂದು ವೈಟಿಂಗ್ ಲಿಸ್ಟ್ ನಲ್ಲಿ ಇಡಲಾಯಿತು! ಸುಮಾರು ಒಂದು  ತಿಂಗಳ ನಂತರ ಪುಟ್ಟಣ್ಣ ವಾಪಾಸ್ ಬಂದು ತನ್ನ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಂಡ. ನಾನು ಪುನಃ ಅಕ್ಕ ಬರುವುದನ್ನೇ ಕಾಯತೊಡಗಿದೆ.

ಆಮೇಲೆ ಎಷ್ಟೋ  ಸಮಯದ ನಂತರ ಅಕ್ಕ ಮತ್ತು ಭಾವನೊಡನೆ ಹೊಕ್ಕಳಿಕೆಗೆ ಹೋಗುವ ಅವಕಾಶ ನನ್ನದಾಯಿತು. ನಮ್ಮ ಮನೆಯಿಂದ ನಾರ್ವೆಯವರೆಗೆ ನಾವು ಕಾಲ್ನಡಿಗೆಯಲ್ಲಿ ಹೋದೆವು. ಅಲ್ಲಿಂದ ನಾವು ಕಾಲ್ನಡಿಗೆಯಲ್ಲೇ ಹರಿಹರಪುರ ಮಾರ್ಗವಾಗಿ ಹೊಕ್ಕಳಿಕೆ ಸೇರಬೇಕಾಗಿತ್ತು. ನಮ್ಮ ಅದೃಷ್ಟಕ್ಕೆ ದಾರಿಯಲ್ಲೇ ಹೋಗುತ್ತಿದ್ದ ಲಾರಿಯೊಂದು ನಮ್ಮ ಪಕ್ಕದಲ್ಲೇ ಬಂದು ನಿಂತಿತು. ಅದರ ಡ್ರೈವರ್ ಭಾವನವರ ಪರಿಚಯಸ್ಥನಂತೆ. ಹಾಗಾಗಿ ಅವನು ನಮ್ಮನ್ನು ಬೇಗನೆ ಹರಿಹರಪುರ ತಲುಪಿಸಿಬಿಟ್ಟ. ನಮ್ಮಮ್ಮ ಹರಿಹರಪುರದ ಬಗ್ಗೆ ಹೇಳುತ್ತಿದ್ದ ಕಥೆಯೊಂದು ಆಗ ನನಗೆ ನೆನಪಿಗೆ ಬಂತು.

ಕಾಶ್ಮೀರವಾಸಿಯಾಗಿದ್ದ ಶಾರದಾಂಬೆಯನ್ನು ಆದಿ ಶಂಕರಾಚಾರ್ಯರು ಶೃಂಗೇರಿಗೆ ತಂದು ಪ್ರತಿಷ್ಟಾಪನೆ ಮಾಡಬೇಕೆಂದು ತೀರ್ಮಾನಿಸಿದರಂತೆ. ಅವರ ಭಕ್ತಿಯನ್ನು ಮೆಚ್ಚಿದ ಶಾರದಾಂಬೆ ಒಪ್ಪಿಗೆ ನೀಡಿ ಬಿಟ್ಟಳಂತೆ. ಆದರೆ ಒಂದು ಷರತ್ತಿನ ಮೇಲೆ. ಅವಳು ಕಾಲ್ನಡಿಗೆಯಲ್ಲೇ ಆಚಾರ್ಯರನ್ನು ಹಿಂಬಾಲಿಸಿ ಬರುವಾಗ ಆಚಾರ್ಯರು ಒಮ್ಮೆಯೂ ತಿರುಗಿ ನೋಡ ಕೂಡದು. ಹಾಗೇನಾದರೂ ನೋಡಿದರೆ ಶಾರದಾಂಬೆ ಸ್ಥಳದಲ್ಲೇ ನೆಲೆಯೂರಿಬಿಡುವಳು.

ಅಂತೆಯೇ ಆಚಾರ್ಯರು ಕಾಶ್ಮೀರದಿಂದ ತಮ್ಮ ಪ್ರಯಾಣ ಪ್ರಾರಂಭಿಸಿದರು. ಅವರಿಗೆ ಶಾರದಾಂಬೆ ತಮ್ಮ ಹಿಂದೆ ಬರುತ್ತಿರುವುದು ಅವಳ ಕಾಲ್ಗೆಜ್ಜೆಯ ನಾದದಿಂದ ಅರಿವಾಗುತ್ತಿತ್ತು. ವಿಂಧ್ಯ ಪರ್ವತವನ್ನು ದಾಟಿ ದಂಡಕಾರಣ್ಯದ ಮೂಲಕ ಆಚಾರ್ಯರು ಪವಿತ್ರ ತುಂಗಾ ತೀರದಲ್ಲಿದ್ದ ಹರಿಹರಪುರಕ್ಕೆ ಆಗಮಿಸಿದರು. ಇನ್ನು ಕೆಲವೇ ಸಮಯದಲ್ಲಿ ಅವರು ಶೃಂಗೇರಿ ತಲುಪುವುದರಲ್ಲಿದ್ದರು. ಆದರೆ ಅವರಿಗೆ ಇದ್ದಕ್ಕಿದ್ದಂತೆ ತಮಗೆ ಗೆಜ್ಜೆಯ ಶಬ್ದ ಕೇಳುತ್ತಿಲ್ಲವೆಂದು ಅನ್ನಿಸಿತು. ತಮ್ಮ ಕುತೂಹಲವನ್ನು ತಾಳಲಾರದೆ ಆಚಾರ್ಯರು ಹಿಂತಿರುಗಿ ನೋಡಿಯೇ ಬಿಟ್ಟರು. ಆದರೆ ಪ್ರಮಾದವಾಗಿ ಬಿಟ್ಟಿತ್ತು. ಅವರ ಹಿಂದೆಯೇ ಬರುತ್ತಿದ್ದ ದೇವಿ ತಾನು ಮೊದಲೇ ಹಾಕಿದ ಷರತ್ತಿನಂತೆ ಹರಿಹರಪುರದಲ್ಲೇ ನೆಲೆಯೂರುವುದಾಗಿ ಹೇಳಿಬಿಟ್ಟಳು!
----ಮುಂದುವರಿಯುವುದು ---




2 comments:

SREENATH said...

Very interesting...namma balyada nenapugalu yendu marayada sumadhura rasa galugegalu...aagaga meluku haaki rasa gangayelli mindu manatumbikollutheve...

A V K Murthy said...

Than you Sreenath