ಅಧ್ಯಾಯ ೧೪
ರಂಗ ವಿಲಾಸ ಹತ್ಯಾ
ಕಾಂಡ
ಅಂದಿನ
ಕಾಲದಲ್ಲಿ ಇಡೀ ಮೈಸೂರು ರಾಜ್ಯವನ್ನೇ ತಲ್ಲಣಗೊಳಿಸಿದ ನಾವು ಕೇಳಿದ ಸಮಾಚಾರವೆಂದರೆ ಬೆಂಗಳೂರಿನ ಗಾಂಧಿನಗರದಲ್ಲಿ
ನಡೆದ ರಂಗ ವಿಲಾಸ ಕೊಲೆ ಪ್ರಸಂಗ. ಈ ಕೊಲೆಗಳು
ನಡೆದುದು ೧೯೫೬ನೇ ಇಸವಿಯ ಜೂನ್ ೫ ನೇ ತಾರೀಕಿನ ಮಧ್ಯ ರಾತ್ರಿಯಲ್ಲಿ. ನನಗೆ ಆಗ ಕೇವಲ ೮ ವರ್ಷ ವಯಸ್ಸಾಗಿತ್ತು. ಆದರೆ ರೇಡಿಯೋ ಮತ್ತು ದಿನಪತ್ರಿಕೆಗಳಲ್ಲಿ
ವರದಿಯಾದ ಈ ಭಯಾನಕ ಕೊಲೆಗಳ ನೆನಪು ಇಂದಿಗೂ ಮನಸ್ಸಿನಿಂದ ಮಾಸುತ್ತಿಲ್ಲ.
ಬೇಲೂರು
ಶ್ರೀನಿವಾಸ ಅಯ್ಯಂಗಾರ್ ಅವರು ಆ ಕಾಲದಲ್ಲಿ ಬೆಂಗಳೂರಿನ ಸುಪ್ರಸಿದ್ಧ ಕ್ರಿಮಿನಲ್ ಲಾಯರ್ ಆಗಿದ್ದರು.
ಅವರು ಗಾಂಧಿನಗರದಲ್ಲಿದ್ದ ತಮ್ಮ ಅರಮನೆಯಂತಹ ಮನೆಯಲ್ಲಿ ತಮ್ಮ ತುಂಬು ಕುಟುಂಬದೊಡನೆ ವಾಸಿಸುತ್ತಿದ್ದರು.
ಆ ಮನೆ ಈಗಿನ ಗಾಂಧಿನಗರದ ಸಿಂಡಿಕೇಟ್ ಬ್ಯಾಂಕ್ ಇರುವ
ಜಾಗದಲ್ಲೇ ಇತ್ತು. ಅಯ್ಯಂಗಾರ್ ಅವರ ಇಡೀ ಕುಟುಂಬವೇ ಆ ಭೀಕರ ರಾತ್ರಿಯಲ್ಲಿ ಕೊಲೆಗಾರರ ಚೂರಿಗಳಿಗೆ
ಬಲಿಯಾಗಿ ಹೋಯಿತು. ಆದರೆ ರಂಗಲಕ್ಷ್ಮಿಯೆಂಬ ಮಗಳೊಬ್ಬಳು ಮಾತ್ರ ಯಾವುದೊ ಕಾರಣದಿಂದ ಕೊಲೆಗಡುಕರ ಕೈಯಿಂದ
ಪಾರಾಗಿದ್ದಳು. ಆಶ್ಚರ್ಯದ ವಿಷಯವೆಂದರೆ ಅಯ್ಯಂಗಾರ್ ಅವರು ಆ ಬಂಗಲೆಗೆ (ತಮ್ಮ ಮುದ್ದಿನ ಮಗಳಾದ ರಂಗಲಕ್ಷ್ಮಿಯ ಹೆಸರಿನಲ್ಲಿ)
"ರಂಗ ವಿಲಾಸ " ಎಂದೇ ಹೆಸರಿಟ್ಟಿದ್ದರು.
ಕೊಲೆಯಾದ
ಮಾರನೇ ದಿನ ಮನೆಯ ಮುಂದೆ
ಭಾರೀ ಜನಸಂದಣಿ ಸೇರಿತ್ತು. ಆಗ
ನಮ್ಮೂರಿನಲ್ಲಿ ಪುರದಮನೆಯಲ್ಲಿ ಮಾತ್ರ ಒಂದು ರೇಡಿಯೋ
ಇತ್ತು. ಅಲ್ಲದೆ ಬೆಳವಿನಕೊಡಿಗೆಗೆ ಮಾತ್ರ
ಒಂದು ದಿನ ಪತ್ರಿಕೆ ಬರುತ್ತಿತ್ತು.
ಆದರೂ ಕೂಡ ಇಡೀ ಊರಿಗೆ
ಇದು ಸಮಾಚಾರವಾಗಿ
ಹರಡಿತು.
ಪೊಲೀಸ್
ಅಧಿಕಾರಿಗಳಿಗೆ ಈ ಕೊಲೆಯ ರಹಸ್ಯವನ್ನು
ಬಯಲುಮಾಡಿ ಕೊಲೆಗಡುಕರನ್ನು ಹಿಡಿಯುವ ದೊಡ್ಡ ಜವಾಬ್ದಾರಿ
ಇತ್ತು. ಚಾಣಾಕ್ಷ ಅಧಿಕಾರಿಗಳು ಶ್ವಾನದಳವನ್ನು
ಬಳಸಿ ಅತಿ ಶೀಘ್ರದಲ್ಲೇ ಕೊಲೆಗಡುಕರನ್ನು ಪತ್ತೆಹಚ್ಚಿಬಿಟ್ಟರು.
ಆ ಕೊಲೆಗಡುಕರ ಹೆಸರು ಗೋವಿಂದ ರೆಡ್ಡಿ,
ಕೃಷ್ಣ ರೆಡ್ಡಿ ಮತ್ತು ಮುನಿಸ್ವಾಮಿ.
ಈ ಮೂರು ಜನರು
ಯಾರಿಂದಲೋ ಹಣ ಪಡೆದು ಇಡೀ
ಕುಟುಂಬದ ಕೊಲೆ ಮಾಡಿದ್ದರು. ಆದರೆ ಈ ಕೊಲೆಗಳ
ಹಿಂದೆ ಯಾರಿದ್ದರು ಎಂಬ ರಹಸ್ಯ ಕೊನೆಗೂ
ಬಯಲಾಗಲಿಲ್ಲ. ಕೋರ್ಟಿನಲ್ಲಿ ಬಹುಕಾಲ ವಿಚಾರಣೆ ನಡೆದು
ಮೂರೂ ಜನ ಅಪರಾಧಿಗಳಿಗೆ ಮರಣ ದಂಡನೆ
ವಿಧಿಸಲಾಯಿತು. ಆಮೇಲೆ ಅವರನ್ನು ಬೆಂಗಳೂರಿನ
ಸೆಂಟ್ರಲ್ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು. ಇತ್ತೀಚಿಗೆ ಟೈಮ್ಸ್ ಅಫ್ ಇಂಡಿಯಾದಲ್ಲಿ
ಬಂದ ಒಂದು ಬರಹದ ಪ್ರಕಾರ
ಬೆಂಗಳೂರಿನ ಜೈಲಿನಲ್ಲಿ ಆ ನಂತರ ಯಾರನ್ನೂ
ಇದುವರೆಗೆ ಗಲ್ಲಿಗೇರಿಸಿಲ್ಲ.
ಈ
ಕೊಲೆಯ ಕೇಸ್ ಎಷ್ಟು ಪ್ರಸಿದ್ದಿ
ಪಡೆಯಿತೆಂದರೆ ಅದನ್ನು ಆಧಾರಿಸಿ ಅನೇಕ ಪತ್ತೇದಾರಿ
ಕಾದಂಬರಿಗಳನ್ನು ಬರೆಯಲಾಯಿತು. ಅಂತಹ ಒಂದು ಕಾದಂಬರಿಗೆ
ರಂಗಮಹಲ್
ರಹಸ್ಯ
ಎಂದು ಹೆಸರಿಡಲಾಗಿತ್ತು. ಅದೇ ಹೆಸರಿನ ಒಂದು
ಸಿನಿಮಾ ಕೂಡ ಬಂತು. ಇಷ್ಟಲ್ಲದೇ
ಈ ಕಥೆಯನ್ನು ಆಧಾರಿಸಿ
ಒಂದು ಲಾವಣಿಯನ್ನು ಕೂಡ ಬರೆಯಲಾಯಿತು. ನಮ್ಮಣ್ಣ
ತಂದಿದ್ದ ಆ ಲಾವಣಿ ಪುಸ್ತಕವನ್ನು
ನಾವು ಸಂಪೂರ್ಣವಾಗಿ ಬಾಯಿಪಾಠ ಮಾಡಿ ಹಾಡತೊಡಗಿದೆವು. ಅದರ ಕೆಲ ಸಾಲುಗಳು
ಹೀಗಿದ್ದವು:
"ಒಂಬೈನೂರೈವತ್ತರನೇ ಇಸವಿ ಜೂನ್ ಐದರ
ಸಮ ರಾತ್ರಿಯೊಳು
ತುಂಬಿದ ಬೆಂಗ್ಳೂರ್ ಗಾಂಧಿನಗರದೊಳು
ಅಮಾನುಷತ್ವದ ಹತ್ಯಗಳು
ಕಂಬನಿಗರೆಯುವ ರೀತಿಯ ಕಗ್ಗೊಲೆ ನಡೆದಿದ್ದಿತು
ಬಲು ಹಿಂಸೆಯೊಳು
ಹಂಬಲ ಪಡುತಲಿ ಪಟ್ಟಣ
ಪ್ರಜೆಗಳು ಒಂದುಗೂಡಿದರು ಬೆಳಗಿನೊಳು
ಬೊಂಬೆಗಳಂತಿಹ ಮಕ್ಕಳ ಹತ್ಯೆಯ ನೋಡಿ
ಮರುಗಿ ಉದ್ರೇಕದೊಳು
ನಂಬಿಕೆ ದ್ರೋಹಿಗಳಿಂದಲೇ ನಡೆದಿದೆ
ಎಂದರು ಈ ಪರಿ ಹತ್ಯೆಗಳು”
“ಮುನಿಸ್ವಾಮಿ ಎಂಬ ಕೇಡಿ ಮಹಾ
ಕ್ರೂರಿ
ಗುಣಹೀನ ಗೋವಿಂದ, ಕೃಷ್ಣ ರೆಡ್ಡಿ
ಸಹ ಸೇರಿ
ಧನದಾಸೆಯಿಂದ ಈ ತ್ರಿಪೀಡೆಗಳು ಬಾಯಾರಿ
ಘನ ರಂಗವಿಲಾಸದ ಹತ್ಯಾಕಾಂಡ
ಗೈದಿರುವರು ಭಾರಿ”
ಹಂದಿಗೋಡು ಕೊಲೆ
ಮೊಕದ್ದಮೆ
ನನಗೆ
ನೆನಪಿದ್ದಂತೆ ಆಮೇಲೆ ಸುಮಾರು ೧-೨ ವರ್ಷದ
ನಂತರ ನಮ್ಮೂರಿನ ಹತ್ತಿರವೇ ಬೆಂಗಳೂರಿನಲ್ಲಿ ನಡೆದಂತಹದೇ ಕೊಲೆಗಳು ನಡೆದು ಹೋದವು.
ಶೃಂಗೇರಿಯ ಸಮೀಪದಲ್ಲಿ ಹಂದಿಗೋಡು ಎಂಬ ಸ್ಥಳವೊಂದಿದೆ. ಆ
ಊರಿನಲ್ಲಿ ವಾಸಿಸುತ್ತಿದ್ದ ಒಕ್ಕಲಿಗ ಕುಟುಂಬ ಒಂದರ
ಸಂಪೂರ್ಣ ಹತ್ಯೆ ರಾತ್ರೋರಾತ್ರಿ ನಡೆದು
ಹೋಯಿತು. ಈ ಪ್ರಸಂಗದಲ್ಲಿ ಕೂಡ
ಒಬ್ಬ ಹುಡುಗನ ಜೀವ ಮಾತ್ರ
ಉಳಿಯಿತು. ಈ ಹುಡುಗ ಶೃಂಗೇರಿಯ ಹೈಸ್ಕೂಲ್ನಲ್ಲಿ
ಓದುತ್ತಿದ್ದ. ಹಾಗಾಗಿ ಹತ್ಯೆ ನಡೆಯುವಾಗ
ಅವನು ಮನೆಯಲ್ಲಿರಲಿಲ್ಲ. ಕುಟುಂಬಗಳ
ನಡುವಿನ ದ್ವೇಷವೇ ಈ ಕೊಲೆಗಳಿಗೆ
ಕಾರಣವಂತೆ.
ಕೊಲೆಗಾರರನ್ನು
ಕಂಡು ಹಿಡಿಯಲು ಬೆಂಗಳೂರಿನಿಂದಲೇ ವಿಶೇಷ
ಪೊಲೀಸ್ ಪಡೆ ಶ್ವಾನದಳದೊಡನೆ ಆಗಮಿಸಿತು.
ಕೊನೆಗೆ ಆ ಕೇಸ್ ನಲ್ಲೂ
ಅಪರಾಧಿಗಳನ್ನು ಕಂಡುಹಿಡಿಯಲಾಯಿತು. ಶಿವಪ್ಪ ನಾಯಕ ಎಂಬುವನೊಬ್ಬ
ಈ ಕೊಲೆಗಳಿಗೆ ಮುಖ್ಯ
ಕಾರಣವಾಗಿದ್ದ. ಕೇಸ್ ಹಲವು ವರ್ಷಗಳು
ನಡೆದು ಅಪರಾಧಿಗಳಿಗೆ ಶಿಕ್ಷೆಯಾಯಿತು. ಆದರೆ ಯಾರಿಗೂ ಮರಣ
ದಂಡನೆ ವಿಧಿಸಲಿಲ್ಲ.
ರೇಡಿಯೋದಲ್ಲಿ ಬಂದ
ತಿಂಡಿ!
ಪುರದಮನೆಯಲ್ಲಿ
ಆಸ್ತಿ ವಿಭಾಗವಾದಾಗ ಗ್ರಾಮೋಫೋನ್ ಶ್ರೀನಿವಾಸಯ್ಯನವರ ತಮ್ಮ ಕೃಷ್ಣ ರಾವ್ ಅವರ ಪಾಲಿಗೆ
ಹೋಯಿತು. ಅದರ ಬದಲಿಗೆ ಶ್ರೀನಿವಾಸಯ್ಯನವರು
ಹೊಸದಾಗಿ ಒಂದು ರೇಡಿಯೋ ಕೊಂಡುಕೊಂಡರು.
ಅದು ನಮ್ಮ ಊರಿನ ಮೊದಲ
ರೇಡಿಯೋ. ನಮ್ಮೆಲ್ಲರ ಕುತೂಹಲಕ್ಕೆ ಮಿತಿ ಇರಲಿಲ್ಲ. ಆ
ರೇಡಿಯೋಗೆ ಮೂರು ಸ್ಪೀಕರ್ ಗಳಿದ್ದು
ಅವನ್ನು ಮನೆಯ ಬೇರೆ ಬೇರೆ
ಭಾಗಗಳಲ್ಲಿ ಫಿಕ್ಸ್ ಮಾಡಲಾಯಿತು. ಮತ್ತು ಒಂದು ಉದ್ದ ವೈರ್ ಅನ್ನು
ಎಳೆದುಕೊಂಡುಹೋಗಿ ಮನೆಯ ಅಂಗಳದಲ್ಲಿ ಹುಗಿಯಲಾಯಿತು.
ಅದು ಏರಿಯಲ್ ವೈರ್ ಅಂತೆ!
ರೇಡಿಯೋದಲ್ಲಿ ಪ್ರಸಾರವಾಗುತ್ತಿದ್ದ ಕಾರ್ಯಕ್ರಮಗಳಿಗೆ ಮಿತಿಯೇ ಇರಲಿಲ್ಲ. ಪ್ರದೇಶ
ಸಮಾಚಾರ, ನಾಟಕಗಳು, ಸಿನಿಮಾ ಹಾಡುಗಳು, ವಿವಿಧ
ವಿನೋದಾವಳಿಗಳು, ಇತ್ಯಾದಿ, ಒಂದರ ನಂತರ
ಒಂದು ಇಡೀ ದಿನ ಮತ್ತು
ರಾತ್ರಿ ಪ್ರಸಾರವಾಗುತ್ತಲೇ ಇರುತ್ತಿದ್ದವು. ಶನಿವಾರದ ದಿನ ಒಂದು
ಹರಿಕಥೆಯೂ ಇರುತ್ತಿತ್ತು.
ಒಂದು
ದಿನ ನಮ್ಮ ಅಮ್ಮ ಪುರದಮನೆಗೆ
ಹೋದವಳು ವಾಪಾಸ್ ಬರುವಾಗ ಒಂದು
ಡಬ್ಬದಲ್ಲಿ ಯಾವುದೊ ತಿಂಡಿಯನ್ನು ತಂದಿದ್ದಳು.
ಆ ಸಿಹಿ ತಿಂಡಿ
ನಮಗೆಲ್ಲ ತುಂಬಾ ಇಷ್ಟವಾಯಿತು. ಅಮ್ಮ
ಹೇಳಿದ ಪ್ರಕಾರ ಅದು ರೇಡಿಯೋದಲ್ಲಿ
"ಬಂದ" ತಿಂಡಿಯಂತೆ. ಅದನ್ನು ಕೇಳಿ ನಮಗಾದ
ಆಶ್ಚರ್ಯಕ್ಕೆ ಮಿತಿ ಇರಲಿಲ್ಲ. ನಾವು
ಅದುವರೆಗೆ ರೇಡಿಯೋ ಇರುವುದು ಕೇವಲ
ಮನೋರಂಜನೆಗೆ ಎಂದು ತಿಳಿದಿದ್ದೆವು. ಆದರೆ
ಅದು ಈ ರೀತಿ ತಿಂಡಿ
ಮಾಡಿ ಕೊಡುತ್ತೆಂದೂ ಕನಸಿನಲ್ಲೂ ಎಣಿಸಿರಲಿಲ್ಲ. ಎಂತಹಾ ಪವಾಡವಿದು! ಆಗ ನಮಗೆ ಒಂದು
ನೆನಪಾಯಿತು. ಹಲವು ಬಾರಿ ಕಾರ್ಯಕ್ರಮಗಳ
ನಡುವೆ ರೇಡಿಯೋದಿಂದ ಗರ್ ಗರ್ ಎಂಬ
ಶಬ್ದ ಬರುತ್ತಿತ್ತು. ಪ್ರಾಯಶಃ ಅದು ತಿಂಡಿ
ತಯಾರಿಸುವ ಶಬ್ದವೇ ಇರಬೇಕೆಂದು ಭಾವಿಸಿದೆವು!
ಮಾರ್ಕೋನಿ ಎಂಬ
ಅಡಿಗೆ
ಭಟ್ಟ!
ಮಾರ್ಕೋನಿ
ಎಂಬ ಇಟಲಿ ದೇಶದವನು ರೇಡಿಯೋವನ್ನು
ಕಂಡುಹಿಡಿದನೆಂದು ನಾವು ಕೇಳಿದ್ದೆವು . ಆದರೆ
ಅವನು ಅದರಲ್ಲಿ ತಿಂಡಿ ಮಾಡುವ
ತಂತ್ರವನ್ನೂ ಅಳವಡಿಸಿದ್ದನೆಂದು ನಮಗೆ ಗೊತ್ತೇ ಇರಲಿಲ್ಲ!
ಆಮೇಲೆಯೂ ಅಮ್ಮ ಅನೇಕ ಬಾರಿ
ಪುರದಮನೆಯಿಂದ ರೇಡಿಯೋದಲ್ಲಿ "ಬಂದ" ತಿಂಡಿಯನ್ನು ತಂದಿದ್ದಳು. ಒಂದಕ್ಕಿಂತ ಒಂದು ಚೆನ್ನಾಗಿಯೇ ಇದ್ದುವು.
ನಾವು ದೊಡ್ಡವರಾದ ಮೇಲೆ ಅಮ್ಮನಿಗೆ ಒಂದು
ರೇಡಿಯೋ ತಂದು ಕೊಟ್ಟರೆ ಅವಳ
ಕೆಲಸ ಕಡಿಮೆಯಾಗುವುದೆಂದು ಕನಸು ಕಾಣತೊಡಗಿದೆವು. ಆದರೆ
ಒಂದು ದಿನ ಈ ರೇಡಿಯೋ
ತಿಂಡಿಯ ರಹಸ್ಯ ಬಯಲಾಗಿ ಹೋಯಿತು.
ನಮ್ಮ ಅಣ್ಣನ ಪ್ರಕಾರ ಆ
ತಿಂಡಿಗಳನ್ನೆಲ್ಲಾ ತಯಾರಿಸಿದ್ದು ಪುರದಮನೆ ಲಕ್ಷ್ಮಿ ಅತ್ತೆಯೇ
ಅಂತೆ! ರೇಡಿಯೋದಲ್ಲಿ ಯಾರೋ ಆ ತಿಂಡಿಗಳನ್ನು
ಮಾಡುವ ವಿಧಾನವನ್ನು ಮಾತ್ರ ಪ್ರಸಾರ ಮಾಡುತ್ತಿದ್ದರಂತೆ!
----ಮುಂದುವರಿಯುವುದು ---
No comments:
Post a Comment