Sunday, July 16, 2017

ನನ್ನ ಬಾಲ್ಯ


ಅಧ್ಯಾಯ ೨೯
ನನ್ನ ಅಣ್ಣನಿಗೆ ತಾನು ಮುಂದೆ ಓದಲಾಗದಿದ್ದರೂ ತನ್ನ ತಮ್ಮಂದಿರು ಓದಿ ಮುಂದೆ ಬರಲೇ ಬೇಕೆಂಬ ಆಸೆಯಿತ್ತು. ಅವನ ಮುಂದಿದ್ದ ಗುರಿಯೆಂದರೆ ತನ್ನ ತಮ್ಮಂದಿರು ವಿದ್ಯಾವಂತರಾಗಿ ಪೇಟೆಯ ಹುಡುಗರಂತೆ ಪಟಪಟನೆ ಇಂಗ್ಲಿಷ್ ಮಾತನಾಡುತ್ತಾ ನೌಕರಿ ಮಾಡಬೇಕೆಂದು. ಆ ದೃಷ್ಟಿಯಿಂದ ಅವನು ಸರ್ವ ಪ್ರಯತ್ನ ಮಾಡಿದ್ದನ್ನು ನಾವೆಂದೂ ಮರೆಯಲಾರೆವು.

ನನ್ನ ಈ ದೃಷ್ಟಿಯ ಪಯಣ ನಾನು ಮೊಟ್ಟ ಮೊದಲ ಬಾರಿ ಅಡೇಖಂಡಿ ಮನೆಯನ್ನು ಬಿಟ್ಟು ಹೊಕ್ಕಳಿಕೆಗೆ ಹೊರಡುವುದರೊಡನೆ  ಆರಂಭವಾಯಿತು. ಅದು ೧೯೫೯ ನೇ ಇಸವಿಯ ಮಾರ್ಚ್ ತಿಂಗಳ ಕೊನೆಯ ವಾರ. ಅಣ್ಣ ನನಗಾಗಿ ಆಗಲೇ ೬ನೇ ತರಗತಿಯ ಪುಸ್ತಕಗಳನ್ನು ತಂದು ಬಿಟ್ಟಿದ್ದ.  ಆ ಕಾಲದಲ್ಲೇ ಅಣ್ಣನ ಸ್ನೇಹಿತರಾದ ಗೋಳಿಕಟ್ಟೆ ಕೃಷ್ಣರಾವ್ ಅವರ ಮನೆಗೆ  ಫಿಲಂ ಫೇರ್ ವಾರ ಪತ್ರಿಕೆ ಬರುತ್ತಿತ್ತು. ಅಣ್ಣ ಅದರ ಒಂದು ಕಾಪಿ ಮನೆಗೆ ತಂದ . ಉದ್ದೇಶ ಓದಲಿಕ್ಕಲ್ಲ. ನನ್ನ ಪುಸ್ತಕಗಳಿಗೆ ಬೈಂಡ್ ಮಾಡುವುದಕ್ಕೆ!  ರಾಜ್ ಕಪೂರ್, ನರ್ಗಿಸ್, ದಿಲೀಪ್ ಕುಮಾರ್, ಮಧುಬಾಲ, ಮುಂತಾದವರ ಫೋಟೋಗಳಿದ್ದ ಪತ್ರಿಕೆಯ ಪುಟಗಳು ನನ್ನ ಪುಸ್ತಕಗಳ ಹೊರಭಾಗವನ್ನು ಅಲಂಕರಿಸಿದುವು.

ಮನೆಯಿಂದ ಹೊರಟ ನಾನು ಮತ್ತು ಅಣ್ಣ ಬಸ್ಸಿನಲ್ಲಿ ಕೊಪ್ಪ ತಲುಪಿದೆವು. ಸೀದಾ  ಅಚ್ಯುತ ಭಟ್ಟರ ಅಂಗಡಿಗೆ ಹೋಗಿ ನನಗೆ ಒಂದು ಜೊತೆ ಶರ್ಟ್ ಮತ್ತು ಚೆಡ್ಡಿ ಬಟ್ಟೆಗಳನ್ನು ಖರೀದಿಸಿದೆವು. ಅದನ್ನು ಹೊಲಿಸಲು ಆ ಕಾಲಕ್ಕೆ ಕೊಪ್ಪದಲ್ಲಿ ಅತ್ಯಂತ  ಪ್ರಸಿದ್ಧನಾಗಿದ್ದ ಶೇಷಗಿರಿ ಎಂಬುವನ ಟೈಲರ್ ಶಾಪ್ ಒಳಗೆ ಪ್ರವೇಶ ಮಾಡಿದೆವು. ಶೇಷಗಿರಿಯ ಪ್ರಸಿದ್ಧಿ ಅವನ ಹೊಲಿಗೆಯ ಪ್ರವೀಣತೆಗಲ್ಲ. ಅದಕ್ಕೆ ಕಾರಣವೆ ಬೇರೆ.  ಅವನು ಯಾವುದೇ ಡ್ರೆಸ್ ಹೊಲಿಗೆಗೆ ಕೊಟ್ಟದ್ದನ್ನು ಒಪ್ಪಿಕೊಂಡ ಸಮಯಕ್ಕೆ ಹೊಲಿದು ಕೊಟ್ಟ ಉದಾಹರಣೆಗಳೇ ಇರಲಿಲ್ಲ. ಸಾಮಾನ್ಯವಾಗಿ ಗೋಕುಲಾಷ್ಟಮಿಗೆ ಹಾಕಲೆಂದು ಹೊಲಿಗೆಗೆ ಕೊಟ್ಟರೆ ಮಹಾಶಿವರಾತ್ರಿಗೆ ಅದು ಸಿಗುವ ಸಾಧ್ಯತೆ ಇತ್ತು!

ಶೇಷಗಿರಿಯ ಹತ್ತಿರ ಯಾವುದೇ ರಿಸ್ಕ್ ತೆಗೆದುಕೊಳ್ಳದೇ ನನ್ನ ಅಣ್ಣ ಅವನು ಬಟ್ಟೆ ಕಟ್ ಮಾಡಿ ಹೊಲಿಯಲು ಪ್ರಾರಂಭ ಮಾಡಿದ್ದನ್ನು ಕಣ್ಣಾರೆ ಕಂಡ  ಮೇಲೆಯೇ ನನ್ನನ್ನು ಒಂದು ಶೂ ಅಂಗಡಿಗೆ ಕರೆದುಕೊಂಡು ಹೋದ. ಅಲ್ಲಿ ನನಗೆ ಒಂದು ಜೊತೆ ಕ್ಯಾನ್ವಾಸ್ ಶೂ ಕೊಡಿಸಲಾಯಿತು. ನನಗೆ ನನ್ನ ಕಣ್ಣನ್ನೇ ನಂಬಲಾಗಲಿಲ್ಲ. ಏಕೆಂದರೆ ಆ ಕಾಲದಲ್ಲಿ ನಮ್ಮೂರಿನಲ್ಲಿ ಶೂ ಇರಲಿ, ಚಪ್ಪಲಿಯನ್ನು ಧರಿಸುವರೇ ವಿರಳರಾಗಿದ್ದರು. ನನಗೆ ಶೂ ಕೊಡಿಸುವ ಅಣ್ಣನ ತೀರ್ಮಾನ ಒಂದು ದೊಡ್ಡ ಕ್ರಾಂತಿಕಾರಿ ತೀರ್ಮಾನವಾಗಿತ್ತು! ಶೂ ಧರಿಸಿದ ನನ್ನನ್ನು ಅಣ್ಣ ಪುನಃ ಶೇಷಗಿರಿಯ ಅಂಗಡಿಗೆ ಕರೆದುಕೊಂಡು ಹೋದ. ಅಲ್ಲಿ ನಾನು ನನ್ನ ಹೊಸ ಡ್ರೆಸ್ ಗಳು ರೆಡಿಯಾಗುವುದನ್ನು ಕಣ್ಣಾರೆ ಗಮನಿಸಬೇಕಾಗಿತ್ತು. ಏಕೆಂದರೆ ಅಣ್ಣನಿಗೆ ಶೇಷಗಿರಿಯ ಮೇಲೆ ನಂಬಿಕೆಯೇ ಇರಲಿಲ್ಲ.

ನನ್ನ ಹೊಸ ಬಟ್ಟೆ ರೆಡಿಯಾದ ಮೇಲೆ ನಾವು ಬಸ್ ಪ್ರಯಾಣ ಮಾಡಿ ಗಡಿಕಲ್ ಎಂಬ ಊರನ್ನು ತಲುಪಿದೆವು. ನಾನು ಹಿಂದೆ ಹೊಕ್ಕಳಿಕೆಗೆ ಹೋಗುವಾಗ ಹರಿಹರಪುರ ಮಾರ್ಗವಾಗಿ ನಡೆದೇ ಹೋಗಿದ್ದೆ. ಆದರೆ ಈ ಬಾರಿ ಬಿ ಜಿ ಕಟ್ಟೆಯಿಂದ ಕೊಪ್ಪ ಮಾರ್ಗವಾಗಿ ಬಸ್ನಲ್ಲೇ ಗಡಿಕಲ್ ತಲುಪಿದ್ದೆ. ಅಲ್ಲಿಂದ ನಾವು ಎರಡು ಮೈಲಿ ಕಾಲ್ನಡಿಗೆ ಮಾಡಬೇಕಿತ್ತು. ಗಡಿಕಲ್ ಊರು ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಗಡಿಯಾಗಿತ್ತು. ಕನ್ನಡದ ಪ್ರಸಿದ್ಧ ಕವಿ ಕುವೆಂಪು ಅವರು ಇಲ್ಲಿಗೆ ಸಮೀಪದ ಕುಪ್ಪಳ್ಳಿಯವರು .

ಗೌರಕ್ಕನಿಗೆ ನಾನು ಅವಳ ಮನೆಯಲ್ಲೇ ಇರಲು ಬಂದದ್ದು ತುಂಬಾ ಸಂತೋಷ ಕೊಟ್ಟಿತು. ಅಲ್ಲದೆ ನಾನು ಅವಳ ಮನೆಯಲ್ಲೇ ಮೂರು ವರ್ಷ ಇರುವುದೆಂದು ಆಗಲೇ ತೀರ್ಮಾನವಾಗಿ ಬಿಟ್ಟಿತ್ತು. ಅಷ್ಟರಲ್ಲೇ ನರ್ಜಿ ವಿಷ್ಣುಮೂರ್ತಿ ಕೂಡ ಹೊಕ್ಕಳಿಕೆಗೆ ೭ನೇ ತರಗತಿ ಓದಲು ಪಕ್ಕದ ಮನೆಗೆ ಬಂದು ಬಿಟ್ಟಿದ್ದ. ಆದರೆ ಅವನನ್ನು ನಾವೆಣಿಸಿದಂತೆ ಗಡಿಕಲ್ ಶಾಲೆಗೆ ಸೇರಿಸಿರಲಿಲ್ಲ. ಬದಲಿಗೆ ತೀರ್ಥಹಳ್ಳಿ ತಾಲೂಕಿನ ಬಸವಾನಿ ಎಂಬಲ್ಲಿದ್ದ ಗವರ್ನಮೆಂಟ್ ಶಾಲೆಗೆ ಸೇರಿಸಿದ್ದರು. ಆ ಊರು ಹೊಕ್ಕಳಿಕೆಗೆ ಮೂರು ಮೈಲಿ ದೂರದಲ್ಲಿತ್ತು. ಅಲ್ಲಿನ ಶಾಲೆ ತುಂಬಾ ಪ್ರಸಿದ್ಧಿ ಪಡೆದಿತ್ತಂತೆ. ಅದನ್ನು ತಿಳಿದ ನಂತರ ನನ್ನನ್ನೂ ಅದೇ ಶಾಲೆಗೆ ಸೇರಿಸುವುದೆಂದು ತೀರ್ಮಾನಿಸಲಾಯಿತು.

ಮಾರನೇ ದಿನ ನಾವು ಬಸವಾನಿ ಶಾಲೆಗೆ ಹೋದೆವು. ಶಾಲೆಯ ಹೆಡ್ ಮಾಸ್ಟರ್ ಆಗಿದ್ದ ವರದಾಚಾರ್ ಅವರು ಇಡೀ ತೀರ್ಥಹಳ್ಳಿ ತಾಲೂಕಿನಲ್ಲೇ ಪ್ರಸಿದ್ಧರಾಗಿದ್ದ ಮೇಷ್ಟರಾಗಿದ್ದರು. ಅವರ ವ್ಯಕ್ತಿತ್ವ ಅತ್ಯಂತ  ಪ್ರಭಾವಶಾಲಿಯಾಗಿತ್ತು. ಅವರು ಬೇಗನೆ ಹೈಸ್ಕೂಲ್ ಮೇಷ್ಟರಾಗಿ ಹೋಗುವರೆಂದು ಹೇಳಲಾಗುತ್ತಿತ್ತು. ನನ್ನ ಮಾರ್ಕ್ಸ್ ಕಾರ್ಡ್ ನೋಡಿ ಅವರು ಸಂತೋಷ ವ್ಯಕ್ತಪಡಿಸಿದರು.

ನನ್ನ ಕ್ಲಾಸ್ ಟೀಚರ್ ಹೆಸರು ಗುರುಶಾಂತಪ್ಪ ಎಂದಿತ್ತು. ಅವರು ಬಯಲುಸೀಮೆಯ ಚೆನ್ನಗಿರಿಯವರು. ಇನ್ನೊಬ್ಬ ಮೇಷ್ಟರ ಹೆಸರು ರಾಮಪ್ಪ ಎಂದಿತ್ತು. ಅವರ ಊರು ಸೊರಬ. ಬಸವಾನಿ ಶಾಲೆಯ ವಿಶೇಷವೊಂದಿತ್ತು. ಬೇರೆ ಎಲ್ಲ ಶಾಲೆಗಳಲ್ಲಿ ೬ ನೇ ತರಗತಿಗೆ "ಅರೋಗ್ಯ' ಎಂಬ ಸಬ್ಜೆಕ್ಟ್ ಇದ್ದರೆ  ಇಲ್ಲಿ ಮಾತ್ರ ಅದರ ಬದಲಿಗೆ ಹಿಂದಿ ಸಬ್ಜೆಕ್ಟ್ ಇತ್ತು. ಅದಕ್ಕೊಬ್ಬ ಪಾರ್ಟ್ ಟೈಮ್ ಮೇಷ್ಟರಿದ್ದರು. ಅವರ  ಹೆಸರು ಗೋಪಾಲ. ಅವರು ಬಸವಾನಿಯ ಸಮೀಪದಲ್ಲಿದ್ದ ಲಕ್ಕುಡಿಗೆ ಎಂಬ ಊರಿನವರು. ಅವರು ಮದ್ಯಾಹ್ನದ ನಂತರ ಶಾಲೆಗೆ ಬಂದು ಕೇವಲ ೬,೭ ಮತ್ತು ೮ ನೇ ತರಗತಿಗಳಿಗೆ ಪಾಠ ಮಾಡುತ್ತಿದ್ದರು. ಅವರ ಸಂಬಳ ಆಗ ತಿಂಗಳಿಗೆ ೩೦ ರೂಪಾಯಿ ಇತ್ತು.  ಮಲ್ಲಾಡಿ ಹಳ್ಳಿಯ ಸ್ವಾಮೀಜಿಯವರ ಶಿಷ್ಯರಾದ ಗೋಪಾಲ ಮೇಷ್ಟರಿಗೆ  "ಕೃಪಾನಂದ' ಎಂಬ ಕಾವ್ಯನಾಮವೂ ಇತ್ತು. ಅವರೊಬ್ಬ ಬ್ರಹ್ಮಚಾರಿ ಮತ್ತು ಕನ್ನಡ ಸಾಹಿತಿ. ಅವರ ಕನ್ನಡ ಕಾದಂಬರಿಗಳು ಆಗಲೇ ಪ್ರಕಟಗೊಂಡಿದ್ದವು. ಅವರು ಬರೆದ ಕಥೆಗಳು ಚಂದಮಾಮದಲ್ಲೂ ಪ್ರಕಟಿತವಾಗಿದ್ದವು.

ನಮ್ಮಣ್ಣ ನಮಗೆ ಆಗಲೇ ಹಿಂದಿ ಕಲಿಸಿಬಿಟ್ಟಿದ್ದರಿಂದ ನನಗೆ ಶಾಲೆಯಲ್ಲಿ ಹಿಂದಿ ಇರುವುದೆಂದು ತಿಳಿದು ಸಂತೋಷವಾಯಿತು. ಆದರೆ ದುರದೃಷ್ಟವಶಾತ್ ನನಗೆ ಹಿಂದಿ ಪುಸ್ತಕ ಸಿಗಲೇ ಇಲ್ಲ. ಕೇವಲ ನಮ್ಮ ಶಾಲೆಯಲ್ಲಿ ಮಾತ್ರ ಇದ್ದ ಸಬ್ಜೆಕ್ಟ್  ಆದ್ದರಿಂದ ಪುಸ್ತಕದ ಕೊರತೆ ಇತ್ತು. ಆಗ ನನ್ನ ಸಹಾಯಕ್ಕೆ ಬಂದವರು ನನ್ನ ಭಾವನ  ಕಿರಿಯ ತಮ್ಮ ನಾಗೇಶ್ ರಾವ್ . ಅವರು ಹಿಂದೆ ಬಸವಾನಿ ಶಾಲೆಯಲ್ಲೇ ಓದಿದವರು. ಅವರ ಹತ್ತಿರವಿದ್ದ ಹಳೆಯ ಪುಸ್ತಕವನ್ನು ಹುಡುಕಿ ನನಗೆ ಕೊಟ್ಟುಬಿಟ್ಟರು. ಬಸವಾನಿ ಶಾಲೆಯಲ್ಲಿ ಇನ್ನೊಂದು ವಿಶೇಷವಿತ್ತು. ಅಲ್ಲಿ ಮದ್ಯಾಹ್ನ ಕ್ಯಾಂಟೀನ್ ವ್ಯವಸ್ಥೆ ಇತ್ತು. ಅದಕ್ಕೆ ಬೇಕಾದ ಗೋಧಿ ಮತ್ತು ಹಾಲಿನ ಪೌಡರ್ ಅಮೇರಿಕಾದಿಂದ ಬರುತ್ತಿತ್ತು (under PL 480 Funds Scheme). ಶಾಲೆಯ ಹತ್ತಿರವಿದ್ದ ಹೋಟೆಲ್ ನಡೆಸುತ್ತಿದ್ದ ಅಡಿಗರೆಂಬುವರು ಅದರಿಂದ ಉಪ್ಪಿಟ್ಟು ಮತ್ತು ಹಾಲು ತಯಾರಿಸಿ ಶಾಲೆಯ ಮಕ್ಕಳಿಗೆ ಮದ್ಯಾಹ್ನ ಬಡಿಸುತ್ತಿದ್ದರು.

ಆ ಕಾಲದಲ್ಲಿ ಮಲೆನಾಡಿನ ಹೆಚ್ಚಿನ ಹಳ್ಳಿಗಳಿಗೆ ವಿದ್ಯುಚ್ಛಕ್ತಿಯ ಅನುಕೂಲ ಬಂದಿರಲಿಲ್ಲ. ಹಾಗೆಯೇ ಸಾರಿಗೆ ಸಂಪರ್ಕ ಮತ್ತು ನೀರಿನ ಸರಬರಾಯಿ ವ್ಯವಸ್ಥೆ ಇರಲಿಲ್ಲ. ಅಕ್ಕನ ಊರಿಗೂ ಈ  ಅನುಕೂಲಗಳಿರಲಿಲ್ಲ. ಆದರೆ ಬಸವಾನಿ ಒಂದು ಮಾದರಿ ಗ್ರಾಮವಾಗಿತ್ತು. ಊರಿಗೆ ವಿದ್ಯುಚ್ಛಕ್ತಿಯ ಅನುಕೂಲವಿತ್ತು. ತೀರ್ಥಹಳ್ಳಿಯಿಂದ ಬಸ್ಸುಗಳು ಬರುತ್ತಿದ್ದವು. ಊರಿನ ರಸ್ತೆಗೆ ಟಾರ್ ಹಾಕಲಾಗಿತ್ತು. ನಮ್ಮ ಶಾಲೆಯ ಮುಂದಿದ್ದ ಕೆರೆಯಿಂದ ನೀರು ಶಾಲೆಯ ಹಿಂದಿದ್ದ ಗುಡ್ಡಕ್ಕೆ ಪಂಪ್ ಆಗಿ ಅಲ್ಲಿಂದ ಇಡೀ ಊರಿಗೆ ಹಂಚಲ್ಪಡುತ್ತಿತ್ತು.

ನನ್ನ ಓದಿಗೆ ಎಲ್ಲ ವ್ಯವಸ್ಥೆಮಾಡಿದ  ನಂತರ ಅಣ್ಣ ನನ್ನ ಜೇಬಿನಲ್ಲಿ ಸ್ವಲ್ಪ ಚಿಲ್ಲರೆ ದುಡ್ಡಿಟ್ಟು ಊರಿಗೆ ಹೊರಟುಬಿಟ್ಟ. ಆ ವೇಳೆ ನನಗೆ ನಾನು ಮೊಟ್ಟ ಮೊದಲ ಬಾರಿಗೆ ನಮ್ಮ ಸಂಸಾರದ ಎಲ್ಲರನ್ನೂ ತೊರೆದು ಬೇರೆ ಊರು ಸೇರಿದೆನೆಂಬ ಯೋಚನೆ ಬಂದಿತು. ಆಗಿನ ಕಾಲದಲ್ಲಿ ಅಪ್ಪ ಅಮ್ಮನನ್ನು ಬಿಟ್ಟು ಬೇರೆ ಊರಿನಲ್ಲಿ ಇರಬೇಕೆಂಬ ಕಲ್ಪನೆಯೇ  ನಮಗೆ ದುಃಖ ತರುತ್ತಿತ್ತು. ಹಾಗಾಗಿ ಅಣ್ಣನಿಗೆ ವಿದಾಯ ಹೇಳುವಾಗ ನನ್ನ ಕಣ್ಣಲ್ಲಿ ನೀರು ಹರಿಯತೊಡಗಿತು. ಆದರೆ ನನ್ನ ಪ್ರೀತಿಯ ಗೌರಕ್ಕ ನನ್ನೊಡನೆ ಇರುವಳೆಂಬ ವಿಷಯ  ನನಗೆ ಸ್ವಲ್ಪ ನೆಮ್ಮದಿ ನೀಡಿತು. ಒಟ್ಟಿನಲ್ಲಿ ನನ್ನ ಜೀವನದಲ್ಲಿ ಒಂದು ಹೊಸ ಅಧ್ಯಾಯ ಪ್ರಾರಂಭಗೊಂಡಿತ್ತು.
-----ಮುಂದುವರೆಯುವುದು-----

No comments: