Tuesday, December 31, 2019

ಬಾಲ್ಯ ಕಾಲದ ನೆನಪುಗಳು – ೪೩


ಬಾಲ್ಯ ಕಾಲದ ನೆನಪುಗಳು – ೪೩
ಭಾವನವರು ಹೇಳಿದ ಗಣಪತಿಯ ಕಥೆ
ಭಾದ್ರಪದ ಶುಕ್ಲ ಚೌತಿಯ ದಿನ ಪ್ರತಿ ವರ್ಷವೂ ಮಣ್ಣಿನಲ್ಲಿ ಮಾಡಿದ ಗಣಪತಿಯ ವಿಗ್ರಹವನ್ನು ಪ್ರತಿ ಮನೆಗಳಲ್ಲೂ ಇಟ್ಟು  ಪೂಜೆ ಮಾಡುವ ಪದ್ಧತಿ ನಮ್ಮ ದೇಶದ ಹಲವು ಭಾಗಗಳಲ್ಲಿ  ಪ್ರಾಚೀನ ಕಾಲದಲ್ಲಿಂದಲೂ  ನಡೆದು ಬಂದಿದೆ. ಹಾಗೆಯೇ ಆಮೇಲೆ ಮಣ್ಣಿನ ಮೂರ್ತಿಯನ್ನು ಕೆರೆ, ಕೊಳ , ನದಿ ಅಥವಾ ಸಮುದ್ರದಲ್ಲಿ ವಿಸರ್ಜನೆ ಮಾಡುವುದೂ ನಡೆದು ಬಂದ ಸಂಪ್ರದಾಯ. ಆದರೆ ಪದ್ಧತಿ ಹೇಗೆ ಪ್ರಾರಂಭವಾಯಿತೆನ್ನುವ ಬಗ್ಗೆ ಯಾವ ಪುರಾಣಗಳಲ್ಲೂ ಹೇಳಿದ ಹಾಗೆ ಕಾಣುವುದಿಲ್ಲ. ಪದ್ಧತಿಯ ಮೂಲ ಯಾವುದೆನ್ನುವ ಬಗ್ಗೆ ಒಂದು ಕಥೆಯನ್ನು ನಮ್ಮ ಭಾವನವರು ಮಹಾಭಾರತದ ಒಂದು ಪ್ರಸಂಗವನ್ನಾಧಾರಿಸಿ ಹೇಳುತ್ತಿದ್ದರಂತೆ. ನನಗೆ ಕಥೆಯನ್ನು ಹೇಳಿದ್ದು ನನ್ನ ತಮ್ಮ ಶ್ರೀನಿವಾಸ.

ಪಾಂಡವರ ಕುರುಕ್ಷೇತ್ರ ಯುದ್ಧದ ಗೆಲುವಿನೊಂದಿಗೆ ಭಾರತ ದೇಶದಲ್ಲಿ ಸಂಪೂರ್ಣ ಶಾಂತಿಯುತ ವಾತಾವರಣ ಉಂಟಾಯಿತು. ಅದೇ ವೇಳೆಗೆ ಪಾಂಡವರಿಗೆ ತಮ್ಮ ವಿಜಯದ ನೆನಪಿಗಾಗಿ ಒಂದು ದೊಡ್ಡ ಸಮಾರಂಭವನ್ನು ಏರ್ಪಾಡು  ಮಾಡಬೇಕೆಂಬ ಉತ್ಸಾಹ ಬಂತು. ಬಗ್ಗೆ ಚರ್ಚೆ ಮಾಡಲು ತಮ್ಮ ವಿಜಯದ ರೂವಾರಿಯಾದ ಭಗವಾನ್ ಶ್ರೀಕೃಷ್ಣನನ್ನು ಒಮ್ಮೆ ಹಸ್ತಿನಾಪುರಕ್ಕೆ ಬರುವಂತೆ ಆಹ್ವಾನಿಸಿದರು. ಕೃಷ್ಣನ ಸಲಹೆಯಂತೆ ಒಂದು ಮಹಾ ಯಜ್ಞವನ್ನು ಮಾಡುವುದೆಂದು ಮತ್ತು ಅದಕ್ಕಾಗಿ ಭಾರತದ ಎಲ್ಲಾ ರಾಜರನ್ನೂ ಅವರ ಕುಟುಂಬ ಸಮೇತರಾಗಿ ಬರುವಂತೆ ಅಹ್ವಾನ ಕಳಿಸುವುದೆಂದೂ ತೀರ್ಮಾನಿಸಲಾಯಿತು. ಮಾಮೂಲಿನಂತೆ ಯಜ್ಞದ ಆರಂಭದ ಮೊದಲು ವಿಘ್ನರಾಜ ಗಣಪತಿಯನ್ನು ಪೂಜಿಸುವುದೆಂದೂ ತೀರ್ಮಾನಿಸಲಾಯಿತು.
ಅದೇ ವೇಳೆ ಶ್ರೀಕೃಷ್ಣನಿಂದ ಒಂದು ಅಮೂಲ್ಯ ಸಲಹೆ ಪಾಂಡವರಿಗೆ ಬಂತು. ಸಲಹೆ ಇಷ್ಟೇ. ಗಣರಾಯನ ವಿಗ್ರಹದ ಪೂಜೆಗೆ ಬದಲಾಗಿ ಅವನನ್ನೇ ಏಕೆ ಸ್ವತಃ ಬರುವಂತೆ ಅಹ್ವಾನ ಕಳುಹಿಸಿ ಪ್ರತ್ಯಕ್ಷ ಪೂಜೆ ಮಾಡಬಾರದೆಂದು. ಸಲಹೆ ಪಾಂಡವರಿಗೆ ತುಂಬಾ ಮೆಚ್ಚಿಗೆಯಾಯಿತು. ಅವರು ಸ್ವಲ್ಪವೂ ತಡಮಾಡದೆ ನಕುಲ-ಸಹದೇವರ ಜೋಡಿಯನ್ನು ಗಣೇಶನಿಗೆ ಅಹ್ವಾನ ನೀಡಲು ಕೈಲಾಸ ಪರ್ವತಕ್ಕೆ ಕಳಿಸಿದರು. ಗಣೇಶನಿಂದ ಒಪ್ಪಿಗೆಯೂ ಸಿಕ್ಕಿತು. ಅವನು ಕೂಡಲೇ ತನ್ನ ವಾಹನವಾದ ಮೂಷಿಕರಾಯನನ್ನು ಕರೆದು ಯಜ್ಞದ ದಿನ ಸಮಯಕ್ಕೆ ಸರಿಯಾಗಿ ತನ್ನನ್ನು ಹಸ್ತಿನಾಪುರಕ್ಕೆ ಒಯ್ಯುವ ಜವಾಬ್ಧಾರಿಯನ್ನು ಒಪ್ಪಿಸಿದನು.
ಯಜ್ಞದ ದಿನ ಹಸ್ತಿನಾಪುರವನ್ನೆಲ್ಲಾ ಅಲಂಕರಿಸಲಾಯಿತು. ರಾಜ ಮಹಾರಾಜರೆಲ್ಲರ ಆಗಮನವಾಯಿತು. ಮಹರ್ಷಿಗಳು ಯಜ್ಞ ಕುಂಡವನ್ನು ತಯಾರು ಮಾಡಿ ಬೇಕಾದ ಸಾಮಾಗ್ರಿಗಳನ್ನೆಲ್ಲಾ ಶಾಸ್ತ್ರಾನುಸಾರ ಜೋಡಿಸಿದರು. ಯಜ್ಞದ ವೇಳೆಯೂ ಸಮೀಪವಾಗತೊಡಗಿತು. ಆಗ ಇದ್ದಕ್ಕಿದ್ದಂತೆ ಪಾಂಡವರಿಗೆ ಮೊದಲ ಪೂಜೆಗೊಳ್ಳಬೇಕಾದ ಗಣಪತಿಯೇ ಇನ್ನೂ ಆಗಮಿಸಿಲ್ಲವೆಂಬ ವಿಷಯ ಗಮನಕ್ಕೆ ಬಂತು. ಎಲ್ಲರ ಗಮನ ವಿಘ್ನೇಶನ ಪ್ರತ್ಯಕ್ಷ ಪೂಜೆ ಮಾಡುವಂತೆ ಸಲಹೆ ನೀಡಿದ್ದ ಶ್ರೀಕೃಷ್ಣನತ್ತ ಹೋಯಿತು. ಆದರೆ ಸ್ವತಃ  ಕೃಷ್ಣನಿಗೆ ಕೂಡಾ ವಿನಾಯಕನ ಗೈರು ಹಾಜರಿಯ ಕಾರಣದ   ಅರಿವಿರಲಿಲ್ಲ.
ಸಂಪೂರ್ಣ ಗಾಬರಿಗೊಂಡ  ಪಾಂಡವರು ಶ್ರೀಕೃಷ್ಣ ಪರಮಾತ್ಮನೇ ತಮ್ಮ ಸಮಸ್ಯೆಯನ್ನು ಪರಿಹರಿಸ ಬೇಕೆಂದು ಬೇಡಿಕೊಂಡರು. ಶ್ರೀಕೃಷ್ಣನ ಕೈಯಲ್ಲಿ ಆಗದ ಕೆಲಸವುಂಟೇ? ಸ್ವಲ್ಪವೂ ತಡಮಾಡದೇ ಯಜ್ಞಶಾಲೆಯಿಂದ ಹೊರಗೆ ಹೋದ ಕೃಷ್ಣ ಐದು ನಿಮಿಷದೊಳಗೆ ಗಣೇಶನ ಕೈ ಹಿಡಿದುಕೊಂಡು ನಗೆಮೊಗದಿಂದ ವಾಪಾಸ್ ಆಗಮಿಸಿಬಿಟ್ಟ!
ಗಣೇಶನ ಆಗಮನದ ನಂತರ ಮುನಿವರ್ಯರು ಅವನನ್ನು ಪೀಠದಲ್ಲಿ ಕೂರಿಸಿ ಶಾಸ್ತ್ರೋಕ್ತ ಪೂಜೆಗೆ ಪ್ರಾರಂಭಿಸಿದರು. ಪೂಜೆಯೇನೂ ಸಾಂಗೋಪಸಾಂಗವಾಗಿ ನೆರವೇರತೊಡಗಿತು. ಆದರೆ ಅಷ್ಟರಲ್ಲೇ ಯಾರೂ ಎಣಿಸದಂತ ಸಂಗತಿಯೊಂದು ಜರುಗಿತು. ಎಲ್ಲರಿಗೂ ಆಶ್ಚರ್ಯವಾಗುವಂತೆ ಯಜ್ಞ ಶಾಲೆಯೊಳಗೆ ಇನ್ನೋರ್ವ ಗಣೇಶನ ಆಗಮನವಾಯಿತು! ಮಾತ್ರವಲ್ಲ ಹೊಸ ಗಣೇಶನ ಆಗಮನವಾಗುತ್ತಿದ್ದಂತೆ ಪೀಠದ ಮೇಲೆ ಪೂಜೆಗೊಳ್ಳುತ್ತಿದ್ದ ಗಣರಾಯ ಅದೃಶ್ಯನಾಗಿಬಿಟ್ಟ! ಸ್ವಲ್ಪ ಕಾಲ ಯಜ್ಞಶಾಲೆಯಲ್ಲಿ ತುಂಬಾ ಗಲಿಬಿಲಿಯ ವಾತಾವರಣ ಉಂಟಾಯಿತು. ಆದರೆ ಶ್ರೀಕೃಷ್ಣನ ಸಲಹೆಯಂತೆ ಹೊಸದಾಗಿ ಆಗಮಿಸಿದ ಗಣೇಶನನ್ನು ಪೀಠದಲ್ಲಿ ಕೂರಿಸಿ ಪೂಜೆ ಮುಗಿಸುವುದರಿಂದ ಪರಿಸ್ಥಿತಿ ಶಾಂತ ಸ್ಥಿತಿಗೆ ಬಂತು. ನಂತರ ಯಜ್ಞ ಯಾವುದೇ ವಿಘ್ನಗಳಿಲ್ಲದೇ ಶಾಸ್ತ್ರೋಕ್ತವಾಗಿ ನೆರವೇರಿತು.

ಗಣೇಶನಿಗೆ ಶ್ರೀಕೃಷ್ಣನೇ ತಾನು ಬರುವುದು ತಡವಾದ್ದರಿಂದ ಪೂಜೆಗಾಗಿ ಇನ್ನೊಬ್ಬ ಗಣೇಶನನ್ನು ಸೃಷ್ಟಿ ಮಾಡಿರಬೇಕೆಂದು ಅನುಮಾನವಿತ್ತು. ಅವನು ಬರಲು ತಡವಾಗುವುದಕ್ಕೆ ಕಾರಣ ಅವನ ಮೂಷಿಕ ವಾಹನ. ಅದಕ್ಕೆ ಮೊದಲೇ ಸಮಯಕ್ಕೆ ಸರಿಯಾಗಿ ಬರಬೇಕೆಂದು ಗಣೇಶನ ಆಜ್ಞೆಯಿದ್ದರೂ ಅದನ್ನು ಮರೆತು ತನ್ನ ಬಿಲದಲ್ಲಿ ಹಾಯಾಗಿ ನಿದ್ರಿಸುತ್ತಿತ್ತಂತೆ! ಅದಕ್ಕೆ ಎಚ್ಚರವಾದುದು ಗಣೇಶ ಜೋರಾಗಿ ಕರೆದ ನಂತರವೇ! ಆದರೆ ಆಗ ಕಾಲ ಮೀರಿ ಹೋಗಿತ್ತು. ಗಣೇಶನ ಕುತೂಹಲವನ್ನು ಶ್ರೀಕೃಷ್ಣನೇ ಪರಿಹಾರ ಮಾಡಿದ. ಅವನು ತಾನು ನಿರ್ವಾಹವಿಲ್ಲದೆ ಪೂಜೆ ತಡವಾಗದಂತೆ  ಇನ್ನೊಬ್ಬ ಗಣೇಶನನ್ನು ಸೃಷ್ಟಿ ಮಾಡಿದ್ದಾಗಿ ಒಪ್ಪಿಕೊಂಡ. ಇಬ್ಬರೂ ಕೂಡಿ ಪ್ರಸಂಗದ ಬಗ್ಗೆ ಪಾಂಡವರಿಗೆ ವಿವರಣೆ ನೀಡಿ ಅವರ ಕುತೂಹಲವನ್ನು ಪರಿಹರಿಸಿದರು. ಯಜ್ಞ ಪೀಠದಲ್ಲಿ ಇಬ್ಬರು ಗಣನಾಯಕರ ಆಗಮನ ಹೀಗೆ ಸಮಸ್ತರಿಗೂ ಒಂದು ಮರೆಯಲಾರದ ಪ್ರಸಂಗವಾಗಿ ಪರಿಣಮಿಸಿತು.
ಪ್ರಸಂಗದ ನೆನಪು ಸದಾ ಕಾಲವೂ ಉಳಿಯಬೇಕೆಂದು ಶ್ರೀಕೃಷ್ಣನೇ ತೀರ್ಮಾನಿಸಿದ. ಅದಕ್ಕಾಗಿ ಅವನು ಅಲ್ಲಿ ಸೇರಿದ ರಾಜ ಮಹಾರಾಜರಿಗೆ ಮತ್ತು ಇತರ  ಮಹಾನುಭಾವರಿಗೆ ಒಂದು ಸಲಹೆ ನೀಡಿದ. ಅದರಂತೆ ಪ್ರತಿ ವರ್ಷದ ಭಾದ್ರಪದ ಶುಕ್ಲ ಚೌತಿಯ ದಿನ ಸಮಸ್ತರೂ ತಮ್ಮ ಮನೆಗಳಲ್ಲಿ ಮಣ್ಣಿನಿಂದ ಮಾಡಿದ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜೆ ಮಾಡತಕ್ಕದ್ದು. ಹಾಗೂ ನಂತರ ಮೂರ್ತಿಯನ್ನು ಕೆರೆ, ಕೊಳ , ನದಿ ಅಥವಾ ಸಮುದ್ರದಲ್ಲಿ ವಿಸರ್ಜನೆ ಮಾಡುವುದು.  ಶ್ರೀಕೃಷ್ಣನ ಸಲಹೆಗೆ ಗಣೇಶನ ಸಂಪೂರ್ಣ ಒಪ್ಪಿಗೆ ದೊರೆಯಿತು. ಅವನು ತಾನು ತನ್ನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ ಎಲ್ಲಾ ಮನೆಗಳಲ್ಲೂ  ಹಾಜರಾಗಿ ಮನೆಯವರನ್ನೆಲ್ಲಾ ಆಶೀರ್ವದಿಸುವುದಾಗಿ ಒಪ್ಪಿಗೆ ನೀಡಿದ.
ವಿಚಿತ್ರವೆಂದರೆ ಅತ್ಯಂತ ಕುತೂಹಲಕಾರಿಯಾದ ಪ್ರಸಂಗ ವ್ಯಾಸ ಮಹರ್ಷಿ ವಿರಚಿತ ಮೂಲ ಮಹಾಭಾರತ ಕಥೆಯಲ್ಲೆಲ್ಲೂ ಬಂದಂತಿಲ್ಲ. ಇನ್ನೂ ವಿಚಿತ್ರವೆಂದರೆ ವ್ಯಾಸ ಮಹರ್ಷಿಗಳು ಮೂಲ ಮಹಾಭಾರತವನ್ನು ಸ್ವತಃ ಗಣೇಶನ ಹಸ್ತದಲ್ಲೇ ಬರವಣಿಗೆ ಮಾಡಿಸಿದ್ದರು. ಅವನು ವ್ಯಾಸರಿಗೆ ಪ್ರಸಂಗವನ್ನು ಕಥೆಯಲ್ಲಿ ಸೇರಿಸುವಂತೆ ಸಲಹೆ ಮಾಡಬಹುದಿತ್ತಲ್ಲವೇ ಎನ್ನುವ ಪ್ರಶ್ನೆಬಂದೇ  ಬರುತ್ತದೆ. ನಮ್ಮ ಭಾವನವರ ಪ್ರಕಾರ ಗಣೇಶ ತುಂಬಾ ಸಂಕೋಚ ಮತ್ತು ನಾಚಿಕೆ ಸ್ವಭಾವದ ವ್ಯಕ್ತಿ. ಅವನಿಗೆ ಆತ್ಮ ಪ್ರತಿಷ್ಠೆ ಲವಲೇಶವೂ ಇರಲಿಲ್ಲ. ಅಲ್ಲದೇ ವ್ಯಾಸ ಮಹರ್ಷಿಗಳು ಬರವಣಿಗೆ ಮಾಡಿಸುತ್ತಿರುವಾಗ ಮಧ್ಯೆ ತಲೆ ಹಾಕುವುದು ರಸಾಭಾಸವಾಗುತ್ತಿತ್ತು! ಜೈ ಗಣೇಶ!
----ಮುಂದುವರಿಯುವುದು ---

No comments: