Wednesday, December 4, 2019

ಬಾಲ್ಯ ಕಾಲದ ನೆನಪುಗಳು - ೩೬


ದೇವಪ್ಪನ ಪ್ರಣಯ ಪ್ರಸಂಗ ಮತ್ತು ಮಂಜಪ್ಪನ ಪತ್ತೇದಾರಿ ಸಾಹಸ ಸ್ವಲ್ಪ ದಿನ ಶಾಲೆಯ ಎಲ್ಲರ ಬಾಯಲ್ಲೂ ಕೇಳಿ ಬರುತ್ತಿದ್ದವು. ದೇವಪ್ಪನ ಜೋಡಿ ೮ನೇ ತರಗತಿ ಮುಗಿಸಿ ಶಾಲೆಯನ್ನು ಬಿಟ್ಟು ಹೋಯಿತು. ಮಂಜಪ್ಪನೇನೋ ೭ನೇ ತರಗತಿ ಪಾಸ್ ಮಾಡಿಬಿಟ್ಟ. ಆದರೆ ಅವನ ತಂದೆ ಅವನಿಗೆ ೮ನೇ ತರಗತಿಗೆ ಬರಲು ಅವಕಾಶವನ್ನೇ ಕೊಡಲಿಲ್ಲ. ಅವರಿಗಿದ್ದ ಹೆಚ್ಚಿನ ಜಮೀನಿನ ವ್ಯವಸಾಯ ನೋಡಿಕೊಳ್ಳಲು ಅವನನ್ನು ಮನೆಯಲ್ಲೇ ಇರುವಂತೆ ಮಾಡಿಬಿಟ್ಟರು. ಮಂಜಪ್ಪನ ಪತ್ತೇದಾರಿ ಪ್ರವೀಣತೆ ಹೀಗೆ ವ್ಯರ್ಥವಾಗಿ ಕೊನೆಗೊಂಡಿತು. ಮಂಜಪ್ಪ ಇಂದಿನ ಕಾಲದ ಟೀವಿ (TV) ರಿಪೋರ್ಟರ್ ವೃತ್ತಿಗೆ ಹೇಳಿ ಮಾಡಿಸಿದ ವ್ಯಕ್ತಿಯಾಗಿದ್ದ. ಕಾಲಾಯ ತ ಸ್ಮೈ ನಮಃ.

ಈ ನಡುವೆ ನಾನು ಶಾಲೆಯಲ್ಲಿ ಪ್ರಥಮ ಸ್ಥಾನ ಗಳಿಸುವ ಬಗ್ಗೆ ಯೋಚಿಸತೊಡಗಿದೆ. ಬಹು ಬೇಗನೆ ನಮ್ಮ ಕ್ಲಾಸ್ ಟೀಚರ್ ಗುರುಶಾಂತಪ್ಪನವರು ನನ್ನ ನೆನಪಿನ ಶಕ್ತಿ ಮತ್ತು ಪಾಠಗಳನ್ನು ಅರ್ಥ ಮಾಡಿಕೊಳ್ಳುವ ಜಾಣ್ಮೆಯನ್ನು ಪರಿಗಣಿಸಿ ಫಸ್ಟ್ ಟರ್ಮ್  ಪರೀಕ್ಷೆಯಲ್ಲಿ ನನಗೆ ಎಲ್ಲರಿಗಿಂತ ಹೆಚ್ಚು ಅಂಕಗಳನ್ನು ಕೊಟ್ಟುಬಿಟ್ಟರು. ಕೇವಲ ಹಿಂದಿಯಲ್ಲಿ ಮಾತ್ರಾ ಗೋಪಾಲ್ ಮೇಷ್ಟರು ಶ್ರೀಧರಮೂರ್ತಿಗೆ ನನಗಿಂತ ಸ್ವಲ್ಪ ಹೆಚ್ಚು ಅಂಕಗಳನ್ನು ಕೊಟ್ಟರು. ಶ್ರೀಧರಮೂರ್ತಿ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ನಡೆಸುತ್ತಿದ್ದ ಮಾಧ್ಯಮ ಪರೀಕ್ಷೆ ಪಾಸ್ ಮಾಡಿದ್ದ. ಆದ್ದರಿಂದ ಅವನಿಗಿಂತ ಹೆಚ್ಚು ಅಂಕ ಪಡೆಯುವುದು ನನಗೆ ಸುಲಭವಿರಲಿಲ್ಲ. ಆದರೆ ೭ನೇ ತರಗತಿಗೆ ಬಂದಾಗ ಹಿಂದಿಯಲ್ಲೂ ನನಗೆ ಹೆಚ್ಚು ಅಂಕಗಳು ಬಂದವು. ಒಟ್ಟಿನಲ್ಲಿ ಅಣ್ಣನು ನನ್ನ ಮುಂದಿಟ್ಟಿದ್ದ ಗುರಿಯನ್ನು ನಾನು ಸಾಧಿಸಿಬಿಟ್ಟೆ. ಜಗದೀಶ ಎರಡನೇ ಸ್ಥಾನ ಮತ್ತು ಶ್ರೀಧರಮೂರ್ತಿ ಮೂರನೇ ಸ್ಥಾನಕ್ಕೆ ತೃಪ್ತಿಗೊಳ್ಳ ಬೇಕಾಯಿತು.
ಹೆಡ್ ಮಾಸ್ಟರ್ ವರದಾಚಾರ್ ಅವರಿಂದ ಪರೀಕ್ಷೆ
ಆಗಿನ ಕಾಲದ ರೂಲ್ಸ್ ಪ್ರಕಾರ ಶಾಲೆಯ ಹೆಡ್ಮಾಸ್ಟರ್ ಪ್ರತಿಯೊಬ್ಬ ಮೇಷ್ಟರ ತರಗತಿಗಳಿಗೂ ಆಗಾಗ ಹಠಾತ್ ಭೇಟಿ ನೀಡಿ ಅವರು ಪಾಠ ಮಾಡುವ ಕ್ರಮ ಮತ್ತು ವಿದ್ಯಾರ್ಥಿಗಳು ಅವರ ಪಾಠಗಳನ್ನು ಕಲಿಯುವ ಬಗೆ ಇತ್ಯಾದಿ ಪರೀಕ್ಷೆ ಮಾಡಬೇಕಾಗಿತ್ತು. ನಾನು ಈ ಮೊದಲೇ ಹೇಳಿದಂತೆ ನಮ್ಮ ಶಾಲೆಯ ಹೆಡ್ ಮಾಸ್ಟರ್ ವರದಾಚಾರ್ ಅವರು ತುಂಬಾ ಪ್ರಸಿದ್ಧಿ ಪಡೆದ ಮೇಷ್ಟರಾಗಿದ್ದರು. ಅವರು  ಒಂದು ದಿನ ಗುರುಶಾಂತಪ್ಪನವರು ನಮಗೆ ಇಂಗ್ಲಿಷ್ ಪಾಠ ಮಾಡುವಾಗ ನಮ್ಮ ತರಗತಿಯೊಳಗೆ ಹಠಾತ್ತಾಗಿ ಪ್ರವೇಶ ಮಾಡಿದರು.

ಮೇಷ್ಟರು ಪಾಠ ಮುಗಿಸಿದ ನಂತರ ಹೆಡ್ಮಾಸ್ಟರ್ ಅವರು ವಿದ್ಯಾರ್ಥಿಗಳಿಗೆ ಒಬ್ಬರ ನಂತರ ಒಬ್ಬರಿಗೆ ಇಂಗ್ಲಿಷ್ ಪದಗಳ ಸ್ಪೆಲ್ಲಿಂಗ್ ಕೇಳತೊಡಗಿದರು. ಅವೆಲ್ಲಾ ಸುಲಭವಾದ ಸ್ಪೆಲ್ಲಿಂಗ್ ಪದಗಳೇ ಆದರೂ ಹೆಚ್ಚಿನ ವಿದ್ಯಾರ್ಥಿಗಳಿಂದ ತಪ್ಪು ಉತ್ತರಗಳು ಬಂದವು. ನನ್ನ ಸರದಿ ಬಂದಾಗ ನಾನು ಪಟಪಟನೆ ಸರಿಯಾದ ಉತ್ತರಗಳನ್ನು ಕೊಟ್ಟುಬಿಟ್ಟೆ. ನನ್ನ ಉತ್ತರಗಳು ಹೆಡ್ ಮಾಸ್ಟರ್  ಮುಖದಲ್ಲಿ ಮುಗುಳ್ನಗೆಯನ್ನು ತಂದವು. ಅವರು ನನ್ನೊಡನೆ ಕೊನೆಯದಾಗಿ  ಕ್ಲಿಷ್ಟ ಪದ ಒಂದರ  ಸ್ಪೆಲ್ಲಿಂಗ್ ಕೇಳುವುದಾಗಿ ಹೇಳಿದರು. ಅವರು ಕೇಳಿದ ಪದ ಸರ್ಟೈನ್ಲಿ  (certainly) ಎಂಬ ಪದ. ನಾನು ಅದರ ಸ್ಪೆಲ್ಲಿಂಗ್ ಸರಿಯಾಗಿ ಹೇಳಿದಾಗ ಅವರು ನನಗೆ “You are certainly  a bright boy” ಎಂದು ಹೇಳಿದರು.

ಹೆಡ್ಮಾಸ್ಟರ್ ಅವರು  ನನಗೆ ನಿತ್ಯವೂ ನಾನು ಎಷ್ಟು ಸಮಯವನ್ನು ಓದಿಗಾಗಿ ಮೀಸಲಿಡುವೆನೆಂದು ಪ್ರಶ್ನೆ ಮಾಡಿದರು. ನನಗೆ ಹೆಡ್ಮಾಸ್ಟರ್ ಅವರನ್ನು ಕಂಡರೆ ವಿಪರೀತ ಗೌರವ ಅಷ್ಟೇ ಭಯ ಇತ್ತು. ನನಗೆ ಏನು ಹೇಳಬೇಕೆಂದು ತೋಚದೆ  ತೊದಲುತ್ತಾ "ಅರ್ಧ ಘಂಟೆ " ಎಂದು ಹೇಳಿಬಿಟ್ಟೆ. ಅವರು ಕೂಡಲೇ ಉಳಿದ ವಿದ್ಯಾರ್ಥಿಗಳಿಗೆ ಕೇವಲ ಅರ್ಧ ಘಂಟೆ ದಿನವೂ ಓದುವ ಮೂಲಕ ನಾನು ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಡುವಂತಾದದ್ದನ್ನು ಗಮನಿಸಿ ನನ್ನನ್ನೇ ಅನುಕರಿಸುವಂತೆ ಹೇಳಿದರು. ಆಗ ನನಗಾದ ಸಂತೋಷಕ್ಕೆ ಮಿಗಿಲೇ  ಇರಲಿಲ್ಲ. ಅದೊಂದು ನನ್ನ ಬಾಲ್ಯದ ಅತ್ಯಂತ ತೃಪ್ತಿಕರ ಸನ್ನಿವೇಶವಾಗಿತ್ತೆಂದು ಇಂದಿಗೂ ಅನ್ನಿಸುತ್ತಿದೆ.
ಬಸವಾನಿ ಪುಸ್ತಕ ಭಂಡಾರ ಮತ್ತು ಪತ್ತೇದಾರಿ ಕಾದಂಬರಿಗಳು
ಬಹು ಬೇಗನೆ ಜಗದೀಶ ಮತ್ತು ಶ್ರೀಧರಮೂರ್ತಿ ನನ್ನ ಆತ್ಮೀಯ  ಸ್ನೇಹಿತರಾಗಿಬಿಟ್ಟರು. ಬಸವಾನಿಯಲ್ಲಿ ಶ್ರೀಧರಮೂರ್ತಿಯ ತಂದೆ ನಾರಾಯಣ ಭಟ್ಟರು ಒಂದು ಕನ್ನಡ ಪುಸ್ತಕ ಭಂಡಾರವನ್ನು ನಡೆಸುತ್ತಿದ್ದರು. ಶ್ರೀಧರಮೂರ್ತಿ ನನಗೆ ಅವರ ಪರಿಚಯ ಮಾಡಿಸಿದ. ನಾನು ಅಲ್ಲಿಂದ ಕನ್ನಡ ಕಾದಂಬರಿಗಳನ್ನು ಅಕ್ಕನ ಮನೆಗೆ ಒಯ್ಯತೊಡಗಿದೆ. ನಾನು, ಅಕ್ಕ ಮತ್ತು ಪಕ್ಕದ ಮನೆಯಲ್ಲಿದ್ದ ನಾಗೇಶ ಭಾವನ ಹೆಂಡತಿ ಸಿಂಗಾರಿ ಬೇಗ ಬೇಗನೆ ಅವುಗಳನ್ನು ಓದಿ ಮುಗಿಸುತ್ತಿದ್ದೆವು. ನಾನು ಪುನಃ ಹೊಸ ಪುಸ್ತಕಗಳನ್ನು ತರುತ್ತಿದ್ದೆ. ಅವುಗಳಲ್ಲಿ ಹೆಚ್ಚಿನವು ಪತ್ತೇದಾರಿ ಕಾದಂಬರಿಗಳಾಗಿದ್ದವು.
ಆ ದಿನಗಳಲ್ಲಿ ಹೊಕ್ಕಳಿಕೆಗೆ ವಿದ್ಯುಚ್ಛಕ್ತಿ ಇನ್ನೂ ಬಂದಿರಲಿಲ್ಲ. ಹಾಗಾಗಿ ನಾನು ಮತ್ತು ಅಕ್ಕ ರಾತ್ರಿ ಚಿಮಣಿ ದೀಪದ ಬೆಳಕಿನಲ್ಲಿ ಕಾದಂಬರಿಗಳನ್ನು ಓದುತ್ತಿದ್ದೆವು. ಕಾದಂಬರಿಗಳಲ್ಲಿ ಕೆಲವು ಭೂತಗಳು ಮತ್ತು ಮಂತ್ರವಾದಿಗಳ ಬಗೆಗಿನ ಕಥೆಗಳಾಗಿರುತ್ತಿದ್ದವು. ರಾತ್ರಿ ಕಾಲದಲ್ಲಿ ಅವುಗಳನ್ನು ಓದುವಾಗ ನಮಗೆ ವಿಪರೀತ ಭಯವಾಗುತ್ತಿತ್ತು. ಒಂದು ದಿನ ರಾತ್ರಿ ಭಾವನವರು ಯಾವುದೋ ಊರಿಗೆ ಹೋಗಿದ್ದರು. ಅವರು ಎರಡು ದಿನದ ನಂತರ ವಾಪಾಸ್ ಬರುವರಿದ್ದರು.

"ಮಾಟಗಾರ ಮಾಯಣ್ಣ" ಮತ್ತು "ಭಯಂಕರ ಬೈರಾಗಿ" 
ಅಕ್ಕನ ಮನೆ ತುಂಬಾ ದೊಡ್ಡದಾಗಿದ್ದು ರಾತ್ರಿ ನಾವು ಮಲಗುವ ಮುನ್ನ ಮನೆಯ ಮುಂಬಾಗಿಲಲ್ಲದೇ ಸುಮಾರು ಏಳೆಂಟು ಹಿಂಬಾಗಿಲುಗಳನ್ನು ಹಾಕಿ ಭದ್ರಪಡಿಸಬೇಕಿತ್ತು. ಮದ್ಯ ರಾತ್ರಿ ಏನಾದರೂ ಬಚ್ಚಲ ಮನೆಗೆ ಹೋಗಬೇಕೆಂದರೆ ಅಷ್ಟು ಬಾಗಿಲುಗಳನ್ನು ತೆರೆದು ಹೋಗಬೇಕಿತ್ತು. ನಮ್ಮ ಮನೆಯಲ್ಲಿ ಯಾವುದೇ ಬಾಗಿಲಿಲ್ಲದ ಜಗಲಿಯ ಮೇಲೆ ಏನೂ ಭಯವಿಲ್ಲದೇ ಮಲಗುತ್ತಿದ್ದ ನನಗೆ ಅಕ್ಕನ ಮನೆಯಲ್ಲಿ ಎಷ್ಟೋ ಬಾರಿ ಯಾವುದೋ ಬಾಗಿಲು ಹಾಕದಿದ್ದರಿಂದ ಕಳ್ಳ ಅಥವಾ ಭೂತವೊಂದು ಪ್ರವೇಶಿಸಿದಂತೆ ಕನಸು ಬೀಳುತ್ತಿತ್ತು. ಪ್ರಾಯಶಃ ಅಕ್ಕನ ಮನೆಯಲ್ಲಿ ಭಾವನ ಹಣದ ಖಜಾನೆ ಇದ್ದು ನಮ್ಮ ಮನೆಯಲ್ಲಿ ಯಾರ ಹತ್ತಿರವೂ ಹಣವೇ ಇಲ್ಲದಿದ್ದುದು ಅದಕ್ಕೆ ಕಾರಣವಿರಬೇಕು!

ಆ ರಾತ್ರಿ ಎಲ್ಲಾ ಬಾಗಿಲುಗಳನ್ನೂ  ಭದ್ರವಾಗಿ ಮುಚ್ಚಿ ನಾನು ಮತ್ತು ಅಕ್ಕ ನರಸಿಂಹಯ್ಯನವರ ಕಾದಂಬರಿಗಳನ್ನು ಓದತೊಡಗಿದೆವು. ನಾನು "ಮಾಟಗಾರ ಮಾಯಣ್ಣ" ಎಂಬ ಕಾದಂಬರಿಯನ್ನು ಮತ್ತು ಅಕ್ಕ "ಭಯಂಕರ ಬೈರಾಗಿ"  ಎಂಬ ಕಾದಂಬರಿಯನ್ನೂ ಓದುವುದರಲ್ಲಿ ತಲ್ಲೀನರಾಗಿದ್ದೆವು.  ವಿದ್ಯುಚ್ಛಕ್ತಿ ಅಥವಾ ರೇಡಿಯೋ ಕೂಡ ಇಲ್ಲದ ಆದಿನಗಳಲ್ಲಿ ಇಡೀ ಊರೇ ಸುಮಾರು ೯ ಘಂಟೆಯ ಒಳಗೆ ನಿದ್ದೆಯಲ್ಲಿ ತೊಡಗಿರುತ್ತಿತ್ತು. ನಾನು ಮತ್ತು ಅಕ್ಕ ಮಾತ್ರಾ ರಾತ್ರಿಯ ಪರಿವಿಲ್ಲದೇ ನರಸಿಂಹಯ್ಯನವರ ಕಾದಂಬರಿಗಳಲ್ಲಿ ಮಗ್ನರಾಗಿದ್ದೆವು. ಅದು ಸರಿ ಸುಮಾರು ೧೧ ಘಂಟೆ ರಾತ್ರಿ ಇರಬಹುದು. ನಮಗೆ ಮನೆಯ ಎದುರಿನ ಬಾಗಿಲನ್ನು ಯಾರೋ ಜೋರಾಗಿ ಬಡಿಯುತ್ತಿರುವ ಶಬ್ಧ ಕೇಳಿಸತೊಡಗಿತು. ಒಮ್ಮೆಗೇ ನನ್ನ  ಮತ್ತು ಅಕ್ಕನ ಎದೆ ಝಲ್ಲೆನಿಸಿತು. ನನಗೆ ಮಾಟಗಾರ ಮಾಯಣ್ಣ ಸೃಷ್ಠಿಸಿದ ಭೂತವೊಂದು ಬಾಗಿಲನ್ನು ಬಡಿಯುತ್ತಿರುವಂತೆ ಅನಿಸಿದರೆ ಪ್ರಾಯಶಃ ಅಕ್ಕನಿಗೆ ಭಯಂಕರ ಬೈರಾಗಿಯೇ  ಬಾಗಿಲನ್ನು ಬಡಿಯುತ್ತಿರುವಂತೆ ಅನಿಸಿರಬೇಕು! ಮಾಳಿಗೆಯಲ್ಲಿ ಹಾಸಿಗೆಯ ಮೇಲೆ ಕುಳಿತು ಪುಸ್ತಕ ಓದುತ್ತಿದ್ದ ನಮಗೆ ಅದರ ಬಾಗಿಲನ್ನು ತೆರೆದು ಜಗಲಿಗೆ ಹೋಗಿ ಮನೆಯ ಮುಂದಿನ ಬಾಗಿಲನ್ನು ತೆರೆಯುವ ಧೈರ್ಯವೇ ಬರಲಿಲ್ಲ. ಆದರೆ ಬಾಗಿಲನ್ನು ಬಡಿಯುವ ಶಬ್ಧ ಜೋರಾಗುತ್ತಾ ಹೋಯಿತು.
-----ಮುಂದುವರೆಯುವುದು-----

No comments: