(ಫೋಟೋದಲ್ಲಿರುವುದು ಲಕ್ಷ್ಮೀನಾರಾಯಣರಾಯರ ಸಹೋದರಿ ಸೀತಾಲಕ್ಷ್ಮಿ ಮತ್ತು ನೀರುಕಟ್ಟಿನ ವೆಂಕಟರಾಮಯ್ಯನವರ ಮದುವೆ ಪತ್ರಿಕೆ ಇಸವಿ ೧೯೪೩)
ಅಣ್ಣಯ್ಯನ ಮದುವೆ
ಅಣ್ಣಯ್ಯನ ಮದುವೆ
ಪ್ರಾಯಶಃ ಅದು ೧೯೬೦ನೇ ಇಸವಿಯ ಕೊನೆಯಲ್ಲಿ
ಅಥವಾ ೧೯೬೧ನೇ ಇಸವಿಯ ಮಾರ್ಚಿ-ಏಪ್ರಿಲ್ ತಿಂಗಳಿರಬೇಕು. ನಾನಾಗ ಹೊಕ್ಕಳಿಕೆಯಲ್ಲಿದ್ದು ಬಸವಾನಿ ಶಾಲೆಗೆ
ಹೋಗುತ್ತಿದ್ದೆ. ರುಕ್ಮಿಣಕ್ಕನ ಮದುವೆ ಮುಗಿದು ಸ್ವಲ್ಪ ದಿನಗಳಾಗಿದ್ದವು. ಒಂದು ದಿನ ಹುರುಳಿಹಕ್ಕಲಿನ
ಲಕ್ಷ್ಮೀನಾರಾಯಣರಾಯರು ಸ್ವತಹಃ ನಮ್ಮ ಮನೆಗೆ ಆಗಮಿಸಿದರಂತೆ. ಅವರು ಬಂದ
ಕಾರಣ ನಮ್ಮಣ್ಣನೊಡನೆ ಅವರ ಮೂರನೆಯ ಮಗಳು ಶಾರದೆಯ ಮದುವೆಯ ಪ್ರಸ್ತಾಪಕ್ಕೆ. ನಮ್ಮ ತಂದೆ ತಾಯಿಯವರಿಗೆ ಶ್ರೀಮಂತ ಮನೆತನದವರೊಡನೆ ಮದುವೆ ಸಂಬಂಧ ಅಷ್ಟೇನೂ ಇಷ್ಟವಿರಲಿಲ್ಲ.
ಆದರೆ ಅಣ್ಣನು ಶಾರದೆಯೊಡನೆ ಮದುವೆ ಮಾಡಿಕೊಳ್ಳಲು ಇಷ್ಟಪಟ್ಟಿದ್ದಾನೆಂದು ತಿಳಿದ ಮೇಲೆ ಅವರ ಒಪ್ಪಿಗೆ
ದೊರೆಯಿತು.
ಮದುವೆಯ
ಸಡಗರ
ನಮ್ಮ ಪ್ರೀತಿಯ ಅಣ್ಣ ಮತ್ತು
ಶಾರದೆಯ ಮದುವೆ ಹುರುಳಿಹಕ್ಕಲಿನ ಮನೆಯಲ್ಲಿಯೇ ಅತ್ಯಂತ
ಸಡಗರ ಹಾಗೂ ವಿಜೃಂಭಣೆಯಿಂದ ನೆರವೇರಿತು. ಪ್ರಾಯಶಃ ನಾನು ನೋಡಿದ ಆ ಕಾಲದ ಮದುವೆಗಳಲ್ಲಿಯೇ ಅದು ಹೆಚ್ಚಿನ
ಸಂಭ್ರಮದಿಂದ ಕೂಡಿದ ಮದುವೆಯಾಗಿತ್ತು. ಹುರುಳಿಹಕ್ಕಲಿನ ಮನೆಯ ಮುಂಭಾಗದಲ್ಲಿ
ದೊಡ್ಡ ಚಪ್ಪರದ ಕೆಳಗೆ ಮದುವೆ ಮಂಟಪ ಕಂಗೊಳಿಸುತ್ತಿತ್ತು.
ಅಣ್ಣಯ್ಯನ ಆತ್ಮೀಯ ಮಿತ್ರರಾದ ಗೋಳಿಕಟ್ಟೆ ಕೃಷ್ಣಯ್ಯನವರ ಹೆಚ್ ಎಂ ವಿ ಗ್ರಾಮೋಫೋನ್ ಮದುವೆಯ ಸಂಭ್ರಮಕ್ಕೆ
ಪುಟ ಕೊಟ್ಟಂತಿತ್ತು. ಮದುವೆಯ ಚಪ್ಪರದಲ್ಲಿ ಅದರ ಸ್ಪೀಕರ್ ನಿಂದ ಆ ಕಾಲದ ಜನಪ್ರಿಯ ಸಿನಿಮಾ ಹಾಡುಗಳು
ಒಂದಾದ ಮೇಲೆ ಒಂದು ಕೇಳಿಬರುತ್ತಿದ್ದವು. ಮುಖ್ಯವಾಗಿ ಭಕ್ತ ಕನಕದಾಸ ಮತ್ತು ಕಿತ್ತೂರು ರಾಣಿ ಚೆನ್ನಮ್ಮನ
ಹಾಡುಗಳು ಮೊಳಗುತ್ತಿದ್ದವು. ಉದಾಹರಣೆಗೆ:
ಭಕ್ತ
ಕನಕದಾಸ
"ಬಾಗಿಲನು
ತೆರೆದು ಸೇವೆಯನು ಕೊಡೊ ಹರಿಯೇ "
"ಕುಲಕುಲ
ಕುಲವೆಂದು"
"ಸಿಂಗಾರ
ಶೀಲಾ ಸಂಗೀತ ಲೋಲ "
"ಬದುಕಿದೆನು
ಬದುಕಿದೆನು ಭವ ಎನಗೆ ಹಿಂಗಿತು"
ಕಿತ್ತೂರು
ರಾಣಿ ಚೆನ್ನಮ್ಮ
“ಸನ್ನೆ
ಏನೇನೋ ಮಾಡಿತು ಕಣ್ಣು”
“ತಾಯಿ
ದೇವಿಯನು ಕಾಣೆ ಹಂಬಲಿಸಿ”
“ಅಹೋ
ರಾತ್ರಿ ನಿಲದೋಡಿ ತಾ ಬಂದಿದೆ”
“ಹೂವಿನ
ಹಂತ ಹತ್ತುವ ಜಾಣೆ ಕಾಲಾಗೆ ಗೆಜ್ಯಾಕಾ”
ವಿಶೇಷವಾಗಿ ಹೆಣ್ಣೊಪ್ಪಿಸಿ ಕೊಡುವಾಗ ಗ್ರಾಮೋಫೋನ್ ಕಿತ್ತೂರು ರಾಣಿಯ ಕೆಳಕಂಡ
ಹಾಡನ್ನು ಹಾಡಿ ಎಲ್ಲರ ಕಣ್ಣಲ್ಲೂ ನೀರು ತರಿಸಿತು.
“ಆಲಕ್ಕೆ ಹೂವಿಲ್ಲ ಸಾಲಕ್ಕೆ ಕೊನೆಯಿಲ್ಲ
ಜಾಲೀಯ
ಮರವೂ ನೆರಳಲ್ಲ
ಜಾಲೀಯ
ಮರವೂ ನೆರಳಲ್ಲ ಮಗಳೇ
ತಾಯಿಯ
ಮನೆಯೂ ಸ್ಥಿರವಲ್ಲ”
ಆ ಸಂದರ್ಭದಲ್ಲಿ ಈ ಹಾಡನ್ನು ಹಾಕಿ
ಕಣ್ಣೇರು ತರಿಸಿದ ಬಗ್ಗೆ ಕೆಲವರಿಂದ ಆಕ್ಷೇಪಣೆ ಕೂಡಾ ಬಂದಿದ್ದುದು ನೆನಪಾಗುತ್ತಿದೆ.
“ಬುಡುಬುಡಿಕೆ”
ಅಥವಾ “ಮಾತಿನ ಮಲ್ಲಿ” ನಾಟಕ
ಲಕ್ಷ್ಮೀನಾರಾಯಣರಾಯರ ನೇತೃತ್ವದಲ್ಲಿ
ಹುರುಳಿಹಕ್ಕಲು ಮತ್ತು ಮೇಲಿನಕೊಡಿಗೆಯ ಹುಡುಗರ ತಂಡವೊಂದು ಕನ್ನಡ ನಾಟಕವೊಂದನ್ನು ಆಗ ಆಡಲು ಪ್ರಾಕ್ಟೀಸ್
ಮಾಡಿದ್ದರು. ಆ ನಾಟಕವನ್ನು ಮೊದಲು ಪುರದಮನೆ ನವರಾತ್ರಿಯಂದು ಆಡಲಾಗಿತ್ತು. ನಾಟಕದ ಮೂಲ ಹೆಸರು
"ಬುಡುಬುಡಿಕೆ" ಎಂದಿತ್ತಂತೆ. ಆದರೆ ರಾಯಲ್ಟಿ ಕೊಡುವುದನ್ನು ತಪ್ಪಿಸಲು ಅದರ ಹೆಸರನ್ನು
"ಮಾತಿನಮಲ್ಲಿ" ಎಂದು ಬದಲಾಯಿಸಲಾಯಿತಂತೆ. ಅದೇ ನಾಟಕವನ್ನು ನಮ್ಮ ಅಣ್ಣನ ಮದುವೆಯ ದಿನ
ರಾತ್ರಿ ಮನೆಯ ಮುಂದಿದ್ದ ಕೊಟ್ಟಿಗೆಯಲ್ಲಿ ಸ್ಟೇಜ್ ಕಟ್ಟಿ ಆಡಿಸಲಾಯಿತು. ಹಾಸ್ಯಮಯವಾದ ಈ ನಾಟಕದ ಮುಖ್ಯ
ಪಾತ್ರದಾರಿಗಳು ರಾಯರ ಹಿರಿಯ ಮಗ ತಿಮ್ಮಪ್ಪ, ಅವನ ತಮ್ಮ ರಮೇಶ, ನೀರ್ಕಟ್ಟಿನ ಸುಬ್ರಾಯ, ಹಾಗೂ ಮೇಲಿನಕೊಡಿಗೆ ಸೀತಾರಾಮಯ್ಯನವರ ಮಗ ತಿಮ್ಮಪ್ಪ
ಎಂದು ನೆನಪು. ರಮೇಶನ ಡಾಕ್ಟರ್ ಪಾತ್ರ ಎಲ್ಲರ ಮೆಚ್ಚುಗೆ ಗಳಿಸಿತು. ತಿಮ್ಮಪ್ಪನದು ಸ್ತ್ರೀ ಪಾತ್ರ. ಅವನು ಸುಬ್ಬರಾಯನ ಪಾತ್ರದ ಪತ್ನಿಯಾಗಿ ತುಂಬಾ ಚೆನ್ನಾಗಿ
ನಟಿಸಿದ್ದ.
ನಾಟಕದ
ಕಥೆ
ಸುಬ್ಬರಾಯನ ಪಾತ್ರದ ಪತ್ನಿ (ತಿಮ್ಮಪ್ಪ)
ಮಾತು ಬಾರದ ಮೂಕಿಯಾಗಿರುತ್ತಾಳೆ . ಸ್ಪೆಷಲಿಸ್ಟ್
ಡಾಕ್ಟರ್ ಪಾತ್ರಧಾರಿ (ರಮೇಶ) ಅವಳಿಗೆ ಮಾತು ಬರುವಂತೆ ಮಾಡುವ ಕಾರ್ಯದಲ್ಲಿ ಯಶಸ್ವಿ ಆಗುತ್ತಾನೆ. ಆದರೆ ಸಮಸ್ಯೆ ಶುರುವಾಗುವುದೇ ಅಲ್ಲಿ. ಮೂಕಿಯಾದ ಪತ್ನಿ
ಟ್ರೀಟ್ಮೆಂಟ್ ಆದಮೇಲೆ ಕೊನೆ ಮೊದಲಿಲ್ಲದಂತೆ ಮಾತನಾಡಲು ತೊಡಗುತ್ತಾಳೆ. ಅವಳ ಸಂಭಾಷಣೆ ಯಾರೊಡನೆಯಾದರೂ
ಪ್ರಾರಂಭವಾಯಿತೆಂದರೆ ಅದಕ್ಕೆ ಮುಕ್ತಾಯವೇ ಇರುವುದಿಲ್ಲ! ಪರಿಸ್ಥಿತಿ ಯಾವ ಮಟ್ಟಕ್ಕೆ ಹೋಯಿತೆಂದರೆ
ಗಂಡನ ಪಾತ್ರಧಾರಿ ಸುಬ್ಬರಾಯ ಪುನಃ ಡಾಕ್ಟರ್ (ರಮೇಶ) ಹತ್ತಿರ ಹೋಗುವ ಪ್ರಸಂಗ ಬರುತ್ತದೆ. ಉದ್ದೇಶವಿಷ್ಟೇ. ತನ್ನ “ಮಾತಿನ ಮಲ್ಲಿ” ಅಥವಾ “ಬುಡುಬುಡಿಕೆ”
ಪತ್ನಿಯನ್ನು ಪುನಃ ಮೂಕಿಯಾಗಿ ಮಾಡುವಂತೆ ಪ್ರಾರ್ಥಿಸಲು!
ಇತರ
ಕಾರ್ಯಕ್ರಮಗಳು
ಆ ದಿನಗಳಲ್ಲಿ ನಮ್ಮೂರಿನಲ್ಲಿ ಯಾವುದೇ
ಕಾರ್ಯಕ್ರಮ ನಡೆದಾಗ ಮೇಲಿನಕೊಡಿಗೆ ಶ್ರೀನಿವಾಸಯ್ಯನವರ ಹಿರಿಯ ಮಗ ಗಣೇಶ (ಅಥವಾ ತಿಮ್ಮಪ್ಪಎಂದು ನೆನಪು) ಒಂದು ಹಾಡನ್ನು ಹಾಡುವುದು ನಿಗದಿಯಾಗಿರುತ್ತಿತ್ತು. ಸ್ವಾತಂತ್ರ ದಿನಾಚರಣೆಯ ಮತ್ತು ಗಣರಾಜ್ಯೋತ್ಸವದ ದಿನ ಅವನು
"ಭಾರತದಾ ಬಾಪೂ ನೀನೇ ಜಗದ ಕಾಪೂ " ಎಂಬ ಗೀತೆಯನ್ನು ಹಾಡುವುದು ಮಾಮೂಲಾಗಿತ್ತು. ಅವನಿಂದ
ಅಣ್ಣನ ಮದುವೆಯ ರಾತ್ರಿ ಒಂದು ವಿಶೇಷ ಹಾಡನ್ನು ಹಾಡಿಸಲಾಯಿತು. ಅದೊಂದು ಜಾನಪದ ಗೀತೆ. ಅದು ನನ್ನ
ನೆನಪಿನ ಆಧಾರದ ಮೇಲೆ ಕೆಳಕಂಡಂತಿತ್ತು.
“ಗುಜು
ಗುಜು ಬಾಪುರೆ ಹೆಣ್ಣ ಕೋಡಾ
ಗುಜ್ಜಾಲ ಬಾಪುರೆ ಹೆಣ್ಣ ಕೋಡಾ
ಸಾವಧಾನದಲಿ ಹೆಣ್ಣ ಕೋಡಾ
ಈ ಲೋಕಕ್ಕೆಲ್ಲಾ
ಹೆಣ್ಣ ಕೋಡಾ!
ನಾಳೆಗೆ
ಬಂದರೆ
ಮನೆ ನೋಡಾ
ನಿನ್ನ
ಮನಸಿಗೆ ಬಂದರೆ
ಹೆಣ್ಣ
ಕೋಡಾ!
ಬಾರವ್ವ
ಬಾರವ್ವ ಭೀಗಿತ್ತಿ
ವಂಕಿ
ವಡ್ಡಿ ವಾಣಕೇನಂತಿ ?
ಹಂಡಿ
ಕೊಡಪಾನ ಮಸ್ತಾಯಿತಿ
ಬಾಂಡ್ಲಿ ಸಾಮಾನ್
ತುಂಬೈತಿ!
ನೆರೆಹೊರೆ
ಜನ ಕೇಳ್ಯಾರು
ಪಂಚಾಂಗ
ತೆಗೆಸಿ ನೋಡ್ಯಾರು
ನೀವೇನ್
ಬಲ್ಲಿರಿ ಹಿರಿಯವರು
ನಮ್ಮ
ಬಂಗಾರ ಶೆಟ್ಟಿ ಸೌಕಾರ್ರು
ದಸರೇ
ಹಬ್ಬಕೆ ಬರುವವರು
ನಮ್ಮ
ಹೆಣ್ಣಮ್ ಮದುವೆ
ಮಾಡಿಕೊಂಡು
ಹೋಗುವರು
ಗುಜು
ಗುಜು ಬಾಪುರೆ ಹೆಣ್ಣ ಕೋಡಾ
ಗುಜ್ಜಾಲ ಬಾಪುರೆ ಹೆಣ್ಣ ಕೋಡಾ
ಈ ಹಾಡನ್ನು ಈ ಮೊದಲೂ ನಾವು ಕೇಳಿದ್ದೆವು.
ಪ್ರಾಯಶಃ ಗ್ರಾಮೋಫೋನ್ ರೆಕಾರ್ಡಿನಲ್ಲೇ ಇರಬಹುದು. ಆದರೆ ಯಾರದೋ ಸೂಚನೆಯಂತೆ ಅಣ್ಣನ ಮದುವೆಯ ಸಂದರ್ಭದಲ್ಲಿ
ಹುರುಳಿಹಕ್ಕಲಿನ ಲಕ್ಷ್ಮೀನಾರಾಯಣರಾಯರ ಗೌರವಾರ್ಥ ಹಾಡಿನಲ್ಲಿ "ನಮ್ಮ ಬಂಗಾರ ಶೆಟ್ಟಿ ಸೌಕಾರ್ರು"
ಎಂಬುದರ ಬದಲು "ಹುರುಳಿಹಕ್ಕಲು ಛೇರ್ಮನ್ ಸಾಹುಕಾರ್ರು"ಎಂದು ಬದಲಾಯಿಸಿ ಹಾಡಲಾಯಿತು!
----ಮುಂದುವರಿಯುವುದು ---
No comments:
Post a Comment