ಟ್ಯೂಶನ್ ಮೇಷ್ಟ್ರು ವಿಠ್ಠಲ
ಶೆಟ್ಟಿ
ಆ ದಿನಗಳಲ್ಲಿ ನಮ್ಮೂರಿನ ಶಾಲೆಯಲ್ಲಿ ಮೇಷ್ಟರ ಕೊರತೆಯಿಂದಾಗಿ
ಬೆಳವಿನಕೊಡಿಗೆ ಮನೆಯಲ್ಲಿ ಹುಡುಗರಿಗೆ ಪಾಠ ಕಲಿಸಲು ವಿಠ್ಠಲ ಶೆಟ್ಟಿ ಎಂಬ ಟ್ಯೂಶನ್ ಮೇಷ್ಟ್ರುಇದ್ದರು.
ಮನೆಯ ಉಪ್ಪರಿಗೆಯ ಮೇಲೆ ಜಮಖಾನದ ಮೇಲೆ ಕುಳಿತು ಹುಡುಗರು ಪಾಠ ಕಲಿಯುತ್ತಿದ್ದನ್ನು ನಾವು ನೋಡಿದ್ದೆವು. ತರುಣರಾಗಿದ್ದ ವಿಠ್ಠಲ ಶೆಟ್ರು ತುಂಬಾ ಒಳ್ಳೆಯ ಮೇಷ್ಟರಾಗಿದ್ದರು.
ಅವರು ಇಂಗ್ಲಿಷ್ ಪಾಠಗಳನ್ನೂ ಹೇಳಿ ಕೊಡುತ್ತಿದ್ದರು. ಬೆಳವಿನಕೊಡಿಗೆ ಹುಡುಗರು ಶಿವಮೊಗ್ಗ ಸೇರಿದ
ಮೇಲೆ ಮೇಷ್ಟರು ಹುರುಳಿಹಕ್ಕಲು ಮನೆಯಲ್ಲಿ ಪಾಠ ಮಾಡತೊಡಗಿದರು. ಆ ದಿನಗಳಲ್ಲಿ ನೀರುಕಟ್ಟಿನ ಸುಬ್ಬರಾಯ ಕೂಡ ಹುರುಳಿಹಕ್ಕಲು
ಮನೆಯಲ್ಲಿಯೇ ಇದ್ದು ಅವರಿಂದ ಪಾಠ ಹೇಳಿಸಿಕೊಳ್ಳುತ್ತಿದ್ದ. ಮೇಷ್ಟರಿಗೆ ಹುರುಳಿಹಕ್ಕಲು ಮನೆಯಲ್ಲಿಯೇ
ತಂಗುವ ಮತ್ತು ಊಟ, ಕಾಫಿ-ತಿಂಡಿ ವ್ಯವಸ್ಥೆ ಇತ್ತು.
ತಿಮ್ಮಪ್ಪ, ರಮೇಶ ಮತ್ತು ನೀರುಕಟ್ಟಿನ ಸುಬ್ಬರಾಯ ಜಯಪುರ
ಮಿಡ್ಲ್ ಸ್ಕೂಲ್ ನಲ್ಲಿ ಪರೀಕ್ಷೆ ಕಟ್ಟಿ ನಂತರ ಕೊಪ್ಪದಲ್ಲಿ ಹೈಸ್ಕೂಲ್ ಓದಿದರಂತೆ. ಅಲ್ಲಿ ಅವರು
ಬೆಟ್ಟಗೆರೆ ಕೃಷ್ಣಭಟ್ಟರ ಹಾಸ್ಟೆಲಿನಲ್ಲಿ ಇದ್ದರಂತೆ. ಆಗ ಅವರು ಅಲ್ಲಿ ಆಡಿದ ನಾಟಕ ಒಂದರ ಫೋಟೋ ಈ
ಲೇಖನದಲ್ಲಿ ಸೇರಿಸಿದ್ದೇನೆ. ಫೋಟೋದಲ್ಲಿ ಅವರು ಮಾಡಿದ ಪಾತ್ರಗಳ ಹೆಸರೂ ಸೇರಿಸಲಾಗಿದೆ .
ಹಾಗೆಯೇ ಆಗ ಅವರೊಡನೆ
ಹಾಸ್ಟೆಲಿನಲ್ಲಿದ್ದ ಕೆಲವರ ಅಪರೂಪದ ಫೋಟೋ ಒಂದನ್ನು ಕೂಡಾ ಸೇರಿಸಿದ್ದೇನೆ. ಈ ಫೋಟೋದಲ್ಲಿ ಮುಂದಿನ
ಸಾಲಿನಲ್ಲಿರುವವರು ಆಲ್ಮನೆ ವೆಂಕಟೇಶ, ಸಂಸ್ಕೃತ ಮೇಷ್ಟ್ರು ಚರಂತಿಮಠ್ ಮತ್ತು ಗೋಳ್ಗಾರ್ ನಾಗೇಂದ್ರ. ಎರಡನೇ ಸಾಲಿನಲ್ಲಿರುವವರು
ರಮೇಶ, ಗೋಳ್ಗಾರ್ ಕೃಷ್ಣಮೂರ್ತಿ, ರಾಜಾರಾಮ್ ಮಧ್ಯಸ್ಥ ಮತ್ತು ಭಂಡಿಗಡಿ ಶ್ರೀನಿವಾಸಮೂರ್ತಿ. ಮಧ್ಯಸ್ಥ
ನನ್ನೊಡನೆ ಶಿವಮೊಗ್ಗ ಬ್ರಾಹ್ಮಿನ್ಸ್ ಹಾಸ್ಟೆಲ್ ಮತ್ತು ಬೆಂಗಳೂರಿನ ಟಾಟಾ ಇನ್ಸ್ಟಿಟ್ಯೂಟಿನಲ್ಲಿ
ಇದ್ದ. ಅವನು ನನಗಿಂತ ಎರಡು ವರ್ಷ ಸೀನಿಯರ್. ಇನ್ನು
ಶ್ರೀನಿವಾಸಮೂರ್ತಿ ನನ್ನ ಕೆನರಾ ಬ್ಯಾಂಕ್ ಶಿವಮೊಗ್ಗ
ಸಹೋದ್ಯೋಗಿ.
ಅಜ್ಞಾತ ಪುರುಷ
ವೆಂಕಟಸುಬ್ಬಯ್ಯ
ಹುರುಳಿಹಕ್ಕಲು ಮನೆಯಲ್ಲಿ ನಾವು ನೋಡಿದಂತೆ ವೆಂಕಟಸುಬ್ಬಯ್ಯ ಎಂಬ ಹಿರಿಯರೊಬ್ಬರಿದ್ದರು.
ಮನೆಯ ಒಬ್ಬ ಸದಸ್ಯರಾಗಿ ಎಲ್ಲಾ ಕೆಲಸದ ಜವಾಬ್ದಾರಿಯನ್ನೂ
ಹೊರುತ್ತಿದ್ದ ವೆಂಕಟಸುಬ್ಬಯ್ಯನವರ ಮೂಲಮನೆ ಯಾವುದಿರಬಹುದೆಂದು ತಿಳಿದುಬರುತ್ತಿಲ್ಲ. ಮುಂದೆ ಹುರುಳಿಹಕ್ಕಲು
ಸಂಸಾರ ಊರು ಬಿಟ್ಟು ಶಿವಮೊಗ್ಗೆ ಸೇರಿದಾಗಲೂ ಅವರು ಜೊತೆಯಲ್ಲಿದ್ದರಂತೆ. ಅವರ ಫೋಟೋ ಒಂದನ್ನು ಈ ಬರಹಕ್ಕೆ
ಲಗತ್ತಿಸಲಾಗಿದೆ.
ಅಚ್ಚಣ್ಣ
ಶೆಟ್ಟರ ಸಾಲವೆಂಬ ಶೂಲ!
ಆ ದಿನಗಳಲ್ಲಿ ಜಯಪುರದಲ್ಲಿ ಅಚ್ಚಣ್ಣಶೆಟ್ಟರೆಂಬ ಶ್ರೀಮಂತ
ವ್ಯಾಪಾರಿಯೊಬ್ಬರಿದ್ದರು. ಕೇವಲ ಮುಂಡು ಪಂಚೆಯೊಂದನ್ನು
ಉಟ್ಟು ಸಾಲ ವಸೂಲಿಗೆ ಸಾಹುಕಾರರ ಮನೆಗಳಿಗೆ ನಡೆದೇ
ಬರುತ್ತಿದ್ದ ಶೆಟ್ಟರ ಹತ್ತಿರ ಹಣವೆಷ್ಟಿತ್ತೆಂದು ಆ ಬ್ರಹ್ಮನಿಗೂ ತಿಳಿದಿರಲಾರದು! ಆದರೆ ಒಂದಂತೂ
ಗ್ಯಾರಂಟೀ ಆಗಿತ್ತು. ಅವರ ಸಾಲ ಸಂಪೂರ್ಣವಾಗಿ ತೀರಿಸಬೇಕಾದರೆ ಜಮೀನು ಮತ್ತು ಮನೆ ಮಾರಿ ಊರುಬಿಡಲೇ
ಬೇಕಿತ್ತು! ಅದಕ್ಕೆ ಮೊದಲ ಉದಾಹರಣೆ ಲಕ್ಷ್ಮೀನಾರಾಯಣರಾಯರೇ ಆದದ್ದು ಒಂದು ದೌರ್ಭಗ್ಯವೆನ್ನಲೇ ಬೇಕು.
ಜಮೀನು ಮಾರಾಟ
ಮತ್ತು ಊರುಬಿಡಿಸಾಟ!
ಆ ದಿನಗಳಲ್ಲಿ ಭೂ ಸುಧಾರಣೆ ಕಾನೂನು ಇನ್ನೂ ಬಂದಿರಲಿಲ್ಲ.
ಅಲ್ಲದೇ ಲಕ್ಷ್ಮೀನಾರಾಯಣರಾಯರ ಹೆಚ್ಚಿನ ಜಮೀನುಗಳು ಗೇಣಿಗೆ ಕೊಡಲ್ಪಟ್ಟಿದ್ದವು. ಅವರ ಮನೆಯ
ಮುಂದಿದ್ದ ಸುಮಾರು ೮-೧೦ ಎಕರೆ ಅಡಿಕೆತೋಟ ಬಿಟ್ಟರೆ ಉಳಿದ ಜಮೀನೆಲ್ಲಾ ಗೇಣಿಗೆ ಕೊಡಲ್ಪಟ್ಟಿದ್ದವು.
ಹಾಗಾಗಿ ಅಚ್ಚಣ್ಣ ಶೆಟ್ಟರ ಸಾಲ ತೀರಿಸಲು ರಾಯರು ಒಂದೊಂದೇ ಜಮೀನು ಮಾರುತ್ತಿದ್ದಂತೇ ಗೇಣಿ ಮಾಡುತ್ತಿದ್ದ ಕುಟುಂಬಗಳು ಊರು ಬಿಡಬೇಕಾಗಿ ಬರುತ್ತಿತ್ತು.
ಏಕೆಂದರೆ ಜಮೀನು ಕೊಂಡವರು ಅದನ್ನು ತಾವೇ ಮುಂದೆ ಬೇಸಾಯ ಮಾಡಬೇಕೆಂದು ಬಯಸುತ್ತಿದ್ದರಲ್ಲಿ
ತಪ್ಪೇನೂ ಇರಲಿಲ್ಲ. ಹಾಗಾಗಿ ಅವರು ಗೇಣಿದಾರರನ್ನು ಖಾಲಿ ಮಾಡಿಸಲೇ ಬೇಕಾಗುತ್ತಿತ್ತು.
ಮೊದಲ ಜಮೀನು
ಮಾರಾಟ ಮತ್ತು ಸೋದರತ್ತೆ ಕುಟುಂಬದಿಂದ ಊರಿಗೆ ವಿದಾಯ
ದುರದೃಷ್ಟವಶಾತ್ ರಾಯರು ಮೊದಲು ಮಾರಿದ ನಮ್ಮೂರಿನ ಜಮೀನು
ಅವರ ಸೋದರತ್ತೆಯ ಸಂಸಾರವೇ ನಮ್ಮೂರು ತೊರೆಯುವಂತೆ ಮಾಡಿತು. ಹುರುಳಿಹಕ್ಕಲಿನ ಸಮೀಪದಲ್ಲೇ ಅರದಳ್ಳಿ
ಎಂಬಲ್ಲಿ ರಾಯರಿಗೆ ಸೇರಿದ ಅಡಿಕೆ ತೋಟ ಮತ್ತು ಬತ್ತದ ಗದ್ದೆಗಳಿದ್ದುವು. ಅದನ್ನು ನಾವು ಬಾಲ್ಯದಲ್ಲಿ ನೋಡಿದಂತೆ
ಅವರ ಸೋದರತ್ತೆ ಫಣಿಯಮ್ಮ ನವರ ಮಕ್ಕಳಾದ ವೆಂಕಟರಮಣಯ್ಯ ಮತ್ತು ರಾಯ (ಅವರ ಪೂರ್ತಿ ಹೆಸರು ನಮಗ್ಯಾರಿಗೂ
ತಿಳಿದಿರಲಿಲ್ಲ) ಎಂಬ ಅಣ್ಣ ತಮ್ಮಂದಿರು ಗೇಣಿ ಮಾಡುತ್ತಿದ್ದರು. ಆ ಜಮೀನನ್ನು ರಾಯರು ತಮ್ಮ ಷಡ್ಡಕರೇ
ಆದ ಸಂಪೇಕೊಳಲು ಗಣೇಶರಾಯರಿಗೆ ಮಾರಾಟ ಮಾಡಿದರು. ಗಣೇಶರಾಯರ ಪತ್ನಿ ಸೀತಮ್ಮ ಲಕ್ಷ್ಮೀನಾರಾಯಣರಾಯರ ಪತ್ನಿ ರುಕ್ಮಿಣಮ್ಮನವರ ತಂಗಿ. ವೆಂಕಟರಮಣಯ್ಯನವರು ತೀರ್ಥಹಳ್ಳಿಯ
ಹತ್ತಿರದ ಒಂದು ಊರಿಗೆ ವಲಸೆ ಹೋದರೆ ಅವರ ತಮ್ಮ ರಾಯರು ಕಾನೂರು ಎಂಬಲ್ಲಿಗೆ ಹೋದರಂತೆ.
ನಂಜುಂಡ ಭಟ್ಟರ
ಆಗಮನ ಮತ್ತು ಮೇಲಿನಕೊಡಿಗೆ ಸೀತಾರಾಮಯ್ಯ ಮತ್ತು ಶ್ರೀನಿವಾಸಯ್ಯನವರ ಸಂಸಾರಗಳ ನಿರ್ಗಮನ
----ಮುಂದುವರಿಯುವುದು ---
No comments:
Post a Comment