ಅಧ್ಯಾಯ ೮
ಆ
ದಿನ ನನಗೆ ಸ್ಪಷ್ಟವಾಗಿ ನೆನಪಿಗೆ
ಬರುತ್ತಿದೆ. ಬೆಳವಿನಕೊಡಿಗೆಯಲ್ಲಿ ಯಾವುದೋ ಸಂತರ್ಪಣೆ ಊಟ
ಆಗ ತಾನೇ ಮುಗಿದಿತ್ತು.
ಬಂದವರಲ್ಲಿ ಹೆಚ್ಚು ಜನ ಕಾಫಿ
ಕೂಡ ಕುಡಿಯದೇ ಕೂಡಲೇ ಮನೆಯಿಂದ
ಹೊರಟು ಬಿಟ್ಟರು. ಅವರೆಲ್ಲಾ ಹುರುಳಿಹಕ್ಕಲಿಗೆ ಹೋಗುವವರಂತೆ. ಅಲ್ಲಿಯ ಶಾಲೆಯಲ್ಲಿ ವಯಸ್ಕರ
ಶಿಕ್ಷಣ ಸಮಿತಿಯವರು ಒಂದು ವಿಡಿಯೋ ಕಾರ್ಯಕ್ರಮ
ಏರ್ಪಾಟು ಮಾಡಿದ್ದರಂತೆ. ಪುಟ್ಟಣ್ಣ ಮತ್ತು ನಾನು ಕೂಡಾ
ಕುತೂಹಲ ತಡೆಯಲಾರದೇ ಅವರೊಂದಿಗೆ ಸೇರಿಕೊಂಡೆವು. ನಮ್ಮ ಗುಂಪು ಕಿತ್ಲೆಕಟ್ಟೆ
ಗುಡ್ಡ ಹತ್ತಿ ಕೊಂಗನಸರಳು ಎಂಬ
ಕಣಿವೆಯನ್ನು ಹಾದು ಹುರುಳಿಹಕ್ಕಲನ್ನು ತಲುಪಿತು.
ಅಲ್ಲಿ ಹುರುಳಿಹಕ್ಕಲಿನ ಸಾಹುಕಾರರು ಮತ್ತು
ಬೆಳವಿನಕೊಡಿಗೆ ಗ್ರಾಮ ಪಂಚಾಯತಿಯ
ಅಧ್ಯಕ್ಷರಾದ ಬಿ ಎಸ್ ಲಕ್ಷ್ಮೀನಾರಾಯಣರಾಯರ
ನೇತೃತ್ವದಲ್ಲಿ ಸಮಾರಂಭ ಒಂದು ಏರ್ಪಟ್ಟಿತ್ತು.
ವೇದಿಕೆಯ
ಮೇಲಿದ್ದವರೆಂದರೆ (ನಮಗೆ ಆಮೇಲೆ ಪರಿಚಯ
ಮಾಡಿಸಿದಂತೆ) ವಯಸ್ಕರ
ಶಿಕ್ಷಣ ಸಮಿತಿಯ ವತಿಯಿಂದ ಆರಾಧ್ಯ
ಎಂಬುವರು, ಕೊಪ್ಪ ತಾಲೂಕ್ ಬೋರ್ಡ್
ಪ್ರೆಸಿಡೆಂಟ್ ಹೆಚ್ ಜಿ ಗೋವಿಂದೇ
ಗೌಡರು, ಕೊಪ್ಪ ಹೈಸ್ಕೂಲ್ ಹೆಡ್ಮಾಸ್ಟರ್
ಕಾಳಿಂಗ ಕೃಷ್ಣ ಮತ್ತು ಕೊಪ್ಪ
ರೇಂಜ್ ಫಾರೆಸ್ಟ್ ಆಫೀಸರ್ (ಹೆಸರು
ನೆನಪಿಗೆ ಬರುತ್ತಿಲ್ಲ). ನಾನು ಗೋವಿಂದೇ ಗೌಡರನ್ನು
ನೋಡಿದ್ದು ಅದೇ ಮೊದಲ ಬಾರಿ.
ಆಮೇಲೆ ಅವರನ್ನು ಹಲವು ಬಾರಿ
ನೋಡಿದ್ದು ನೆನಪಿದೆ. ಕಾಳಿಂಗ ಕೃಷ್ಣ ಅವರು ಕೂಡಾ ಕೊಪ್ಪದಲ್ಲಿ
ತುಂಬಾ ಹೆಸರು ಪಡೆದವರು. ಇನ್ನು
ರೇಂಜರ್ ಎಂದು ಕರೆಯಲಾಗುತ್ತಿದ್ದ ಫಾರೆಸ್ಟ್
ಆಫೀಸರ್ ಅವರು ಸ್ವಲ್ಪ “ಡೇಂಜರ್”
ಎಂದು ಶ್ರೀಮಂತ ಜಮೀನ್ದಾರರು ಹೇಳುತ್ತಿದ್ದರಂತೆ.
ಕಾರಣವಿಷ್ಟೇ. ಅವರು ಮಲಯಾಳಿ ಕುಟ್ಟಿಗಳಿಂದ
ಗುಟ್ಟಾಗಿ ಕೊಯ್ದು ಕಾಡಿನಲ್ಲಿ ಕೂಡಿಡುತ್ತಿದ್ದ ನಾಟಾಗಳನ್ನು ರೇಂಜರ್ ಅವರು ರೈಡ್ ಮಾಡಿ ಸೀಜ್
ಮಾಡಿಬಿಡುತ್ತಿದ್ದರಂತೆ! ಕಾರ್ಯ
ಕ್ರಮ ತುಂಬಾ ಚೆನ್ನಾಗಿ ನಡೆಯಿತು.
ಕೊನೆಯಲ್ಲಿ ವಯಸ್ಕರ ಶಿಕ್ಷಣ ಸಮಿತಿಯವರು ವಿಡಿಯೋ
ಕಾರ್ಯಕ್ರಮವನ್ನು ತಾವು ತಂದ ಪ್ರೊಜೆಕ್ಟರ್
ಮೂಲಕ ತುಂಬಾ ಆಕರ್ಷಕವಾಗಿ ತೋರಿಸಿದರು.
ಅದೆಲ್ಲಾ ಮುಗಿದು
ನಾವು ಮನೆ ಸೇರುವಾಗ ತುಂಬಾ ರಾತ್ರಿಯಾಗಿತ್ತು.
ಮಲೆನಾಡ ಗಾಂಧಿ
ಹೆಚ್
ಜಿ
ಗೋವಿಂದೇ
ಗೌಡರು
ಕೊಪ್ಪ
ಪಟ್ಟಣ ಮತ್ತು ಕೊಪ್ಪ ತಾಲೂಕಿನ
ಅಭಿವೃದ್ಧಿಗೆ ಮುಖ್ಯ ಕಾರಣ ಮುಂದೆ
ಮಲೆನಾಡ ಗಾಂಧಿ ಎಂದು ಹೆಸರು
ಪಡೆದ ಹೆಚ್
ಜಿ ಗೋವಿಂದೇ ಗೌಡರು. ತಮ್ಮ ತಾರುಣ್ಯದಲ್ಲೇ ಸ್ವಾತಂತ್ರ ಚಳುವಳಿಯಲ್ಲಿ ಭಾಗವಹಿಸಿದ್ದ
ಗೌಡರು ಒಬ್ಬ ನುರಿತ ರಾಜಕಾರಣಿ. ಕೊಪ್ಪ ಪಟ್ಟಣದ ಮುನಿಸಿಪಲ್ ಅಧ್ಯಕ್ಷರಾಗಿ, ಕೊಪ್ಪ ತಾಲೂಕ್ ಡೆವಲಪ್ಮೆಂಟ್
ಬೋರ್ಡ್ ಅಧ್ಯಕ್ಷರಾಗಿ ಹಾಗೂ ಮುಂದೆ ಕರ್ನಾಟಕ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿ ಅವರು ಸಲ್ಲಿಸಿದ
ಸಾರ್ವಜನಿಕ ಸೇವೆಗಳಿಗೆ ಮಿತಿಯಿರಲಿಲ್ಲ.
ಕಾಲೇಜಿಗಾಗಿ ಪೈಪೋಟಿ
ಅಂದಿನ
ಕಾಲದ ಮಲೆನಾಡಿನ ತರುಣ ತರುಣಿಯರಿಗೆ ಕಾಲೇಜು ಮಟ್ಟದ ವಿದ್ಯಾಭ್ಯಾಸಕ್ಕೆ ಕೇವಲ ಶಿವಮೊಗ್ಗೆಯ ಸಹ್ಯಾದ್ರಿ
ಕಾಲೇಜಿನಲ್ಲಿ ಮಾತ್ರಾ ಅವಕಾಶವಿತ್ತು.. ಹಾಗಾಗಿ ಕೊಪ್ಪ, ಶೃಂಗೇರಿ ಮತ್ತು ತೀರ್ಥಹಳ್ಳಿ ತಾಲೂಕುಗಳಿಗೆ
ಶಿವಮೊಗ್ಗೆಯೇ ವಿದ್ಯಾಭ್ಯಾಸ ಕೇಂದ್ರವಾಗಿತ್ತು. ಗೋವಿಂದೇ
ಗೌಡರು ಕೂಡ ತಮ್ಮ ಇಂಟರ್ ಮೀಡಿಯೇಟ್ ತರಗತಿಯನ್ನು ಸಹ್ಯಾದ್ರಿ ಕಾಲೇಜಿನಲ್ಲೇ ಮುಗಿಸಿದ್ದರಂತೆ. ಸುಮಾರು
೧೯೬೩-೧೯೬೫ ನೇ ಇಸವಿಯ ವೇಳೆಗೆ ಈ ಮೂರು ತಾಲೂಕು ಕೇಂದ್ರಗಳಿಗೆ ಹೊಸ ಕಾಲೇಜು ಸ್ಥಾಪನೆ ವಿಚಾರದಲ್ಲಿ
ಪೈಪೋಟಿ ಆರಂಭವಾಯಿತು. ಈ ಪೈಪೋಟಿಯಲ್ಲಿ ಶೃಂಗೇರಿಯ ಚಂದ್ರಮೌಳಿ ರಾಯರು ಮತ್ತು ವೀರಪ್ಪ ಗೌಡರ ನೇತೃತ್ವದ
ಭಾರತೀ ವಿದ್ಯಾ ಸಂಸ್ಥೆ ವಿಜಯ ಸಾಧಿಸಿತು. ಅದಕ್ಕೆ ಮುಖ್ಯ ಕಾರಣ ಅದು ಮಣಿಪಾಲ್ ಅಕ್ಯಾಡೆಮಿಯೊಂದಿಗೆ
ಮಾಡಿಕೊಂಡ ಒಪ್ಪಂದ. ಅದರೊಂದಿಗೆ ಶೃಂಗೇರಿಯಲ್ಲಿ ಜೆ ಸಿ ಬಿ ಮ್ ಕಾಲೇಜಿನ ಸ್ಥಾಪನೆ ೧೯೬೫ನೇ ಇಸವಿಯಲ್ಲಿ
ನೆರವೇರಿತು. ಮುಂದೆ ತೀರ್ಥಹಳ್ಳಿಯಲ್ಲಿ ತುಂಗಾ ಮಹಾವಿದ್ಯಾಲಯ ೧೯೬೭ನೇ ಇಸವಿಯಲ್ಲಿ ಸ್ಥಾಪನೆಗೊಂಡಿತು.
ಆದರೆ ಕೊಪ್ಪದಲ್ಲಿ ಕಾಲೇಜಿನ ಸ್ಥಾಪನೆಗೆ ಹಲವು ವರ್ಷಗಳೇ ಬೇಕಾದವು.
ಎಂ ಎಲ್ ಏ ಸ್ಥಾನಕ್ಕೆ ಕಾಂಗ್ರೆಸ್ಸಿನಲ್ಲಿ
ಪೈಪೋಟಿ
ಮಾನ್ಯ
ಕಡಿದಾಳ್ ಮಂಜಪ್ಪನವರು ೧೯೬೭ರಲ್ಲಿ ರಾಜಕೀಯ ಸನ್ಯಾಸ ಸ್ವೀಕರಿಸುವುದರೊಂದಿಗೆ ಶೃಂಗೇರಿ ಕ್ಷೇತ್ರದಿಂದ
ಸ್ಪರ್ದಿಸಲು ಕಾಂಗ್ರೆಸ್ ಪಕ್ಷದಲ್ಲಿ ತೀವ್ರ ಪೈಪೋಟಿ ನಡೆಯಿತು. ಅದರಲ್ಲಿ ಬಸವಾನಿ ರಾಮಶರ್ಮರ ಹೆಸರೂ
ಇತ್ತು. ಆದರೆ ಮುಖ್ಯ ಪೈಪೋಟಿ ಕೊಪ್ಪದಿಂದ ಗೋವಿಂದೇ ಗೌಡರು ಮತ್ತು ಶೃಂಗೇರಿಯಿಂದ ವೀರಪ್ಪ ಗೌಡರ ನಡುವೆ
ಇತ್ತು. ಅಂದಿನ ಮೈಸೂರು ಕಾಂಗೆಸ್ಸಿನಲ್ಲಿ ನಿಜಲಿಂಗಪ್ಪನವರ ದರ್ಬಾರು ನಡೆಯುತ್ತಿತ್ತು. ನಾನಾಗ ಶೃಂಗೇರಿ
ಕಾಲೇಜಿನಲ್ಲಿ ಓದುತ್ತಿದ್ದೆ. ವೀರಪ್ಪ ಗೌಡರ ಮಗ ರವೀಂದ್ರನಾಥ ಟ್ಯಾಗೋರ್ ನನ್ನ ಸಹಪಾಠಿಯಾಗಿದ್ದ.
ಒಂದು
ದಿನ ಸಂಜೆ ನಾವು ಕಾಲೇಜಿನಿಂದ ಹಿಂದಿರುಗುವಾಗ ವೀರಪ್ಪ ಗೌಡರು ಮೀಸೆ ತಿರುವುತ್ತಾ ದೊಣ್ಣೆ
(Walking Stick) ಕೈಯಲ್ಲಿ ಹಿಡಿದುಕೊಂಡು ಕೆಳಗಿನ ಪೇಟೆಯಲ್ಲಿದ್ದ ಕಳಸಪ್ಪ ನಾಯಕರ ಅಂಗಡಿ ಪ್ರವೇಶ
ಮಾಡುವುದನ್ನು ನೋಡಿದೆವು. ವಿಷಯ ಸ್ಪಷ್ಟವಾಗಿತ್ತು. ಮಾರನೇ ದಿನ ವೀರಪ್ಪ ಗೌಡರು ಕಾಂಗ್ರೆಸ್ ಟಿಕೆಟ್
ಪಡೆಯುವುದರಲ್ಲಿ ಜಯಶೀಲರಾದರೆಂದು ಊರಿಗೆಲ್ಲ ತಿಳಿದು ಹೋಯಿತು. ಆಗಿನ್ನೂ ನಲವತ್ತರ ಪ್ರಾಯದಲ್ಲಿದ್ದ ಗೋವಿಂದೇ ಗೌಡರು
ಮುಂದೆ ೧೯೮೩ರಲ್ಲಿ ಜನತಾದಳದ ಅಭ್ಯರ್ಥಿಯಾಗಿ ವಿಧಾನ ಸಭೆಯನ್ನು ಪ್ರವೇಶಿಸಿದರು. ಮುಂದೆ ಕರ್ನಾಟಕ
ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿ ಅವರು ಸಲ್ಲಿಸಿದ ಸಾರ್ವಜನಿಕ ಸೇವೆಗಳ ವಿವರ ಎಲ್ಲರಿಗೂ ಲಭ್ಯವಿದೆ.
ಪಿ ಯು ಸಿ ಪರೀಕ್ಷೆಯಲ್ಲಿ Rank
ಪಡೆದು ನ್ಯೂಸ್ ಪೇಪರಿನಲ್ಲಿ ಹೆಸರು - ಆದರೆ ಪೇಪರ್
ಲಭ್ಯವಿಲ್ಲ!
ನಾನು
ಒಂದು ವಿಚಾರಕ್ಕೆ ಕೊಪ್ಪವನ್ನು ಎಂದೂ ಮರೆಯುವಂತಿಲ್ಲ. ನಾನು ಶೃಂಗೇರಿಯಲ್ಲಿ ಜೆ ಸಿ ಬಿ ಮ್ ಕಾಲೇಜಿನ
ಮೊದಲ ವರ್ಷದ ವಿದ್ಯಾರ್ಥಿಯಾಗಿ ಪಿ ಯು ಸಿ ಪರೀಕ್ಷೆ ಮುಗಿಸಿದ್ದೆ. ಆಗಿನ ಕಾಲದಲ್ಲಿ ಪಿ ಯು ಸಿ ಪರೀಕ್ಷೆಯ ಫಲಿತಾಂಶಗಳು ನ್ಯೂಸ್ ಪೇಪರುಗಳಲ್ಲಿ ಪ್ರಕಟವಾಗುತ್ತಿದ್ದವು.
ಹಾಗೆಯೇ ಪರೀಕ್ಷೆಯಲ್ಲಿ ಪ್ರಥಮ ೧೦ ಸ್ಥಾನಗಳನ್ನು ಪಡೆದ ವಿದ್ಯಾರ್ಥಿಗಳ ಹೆಸರುಗಳನ್ನೂ ಪ್ರಕಟಿಸುತ್ತಿದ್ದರು.
ನನ್ನ ದೊಡ್ಡ ಅಣ್ಣನಿಗೆ ನನ್ನ ಹೆಸರನ್ನು ಆ ಪಟ್ಟಿಯಲ್ಲಿ ನೋಡುವ ಆಶೆ ತುಂಬಾ ಇತ್ತು. ಹಾಗೆಯೇ ನನ್ನ
ಕಾಲೇಜು ಅಧ್ಯಾಪಕರೂ ಕೂಡ ನಾನು ಆ ಸ್ಥಾನಕ್ಕೆ ಅರ್ಹನೆಂದು ಹೇಳುತ್ತಿದ್ದರು.
ಅದು
೧೯೬೬ನೇ ಇಸವಿಯ ಜೂನ್ ೧ನೇ ತಾರೀಕು. ನಾನು ಅಕ್ಕಂದಿರ ಊರಾದ ಹೊಕ್ಕಳಿಕೆಯಿಂದ ಮಧ್ಯಾಹ್ನ ಹೊರಟು ಕೊಪ್ಪದ
ಮೂಲಕ ಊರಿಗೆ ಹೋಗಲು ಗಡಿಕಲ್ಲಿಗೆ ಬಂದೆ. ಅಲ್ಲಿನ ಗುಂಡಾ ನಾಯಕರ ಅಂಗಡಿಯಲ್ಲಿ ಅಂದಿನ ಪ್ರಜಾವಾಣಿ
ಪತ್ರಿಕೆ ನನ್ನ ಕಣ್ಣಿಗೆ ಬಿತ್ತು. ಅದರಲ್ಲಿ ನಮ್ಮ ಪರೀಕ್ಷೆಯ ಫಲಿತಾಂಶಗಳು ಪ್ರಕಟವಾಗಿದ್ದವು. ನನ್ನ
ರಿಜಿಸ್ಟರ್ ನಂಬರ್ ಫಸ್ಟ್ ಕ್ಲಾಸಿನಲ್ಲಿ ಪಾಸಾದವರ ಪಟ್ಟಿಯಲ್ಲಿತ್ತು. ಹಾಗೆಯೇ ಪ್ರಥಮ ೧೦ ಸ್ಥಾನಗಳನ್ನು
ಪಡೆದ ವಿದ್ಯಾರ್ಥಿಗಳ ಹೆಸರುಗಳ ಮೇಲೆ ಕೂಡ ನನ್ನ ಕಣ್ಣು ಹಾಯಿಸಿದೆ. ನನ್ನ ಕಣ್ಣನ್ನು ನನಗೇ ನಂಬಲಾಗಲಿಲ್ಲ.
ನನ್ನ ಹೆಸರು ನಾಲ್ಕನೇ ಸ್ಥಾನದಲ್ಲಿ ಪ್ರಕಟವಾಗಿತ್ತು! ಆದರೆ ನನ್ನ ಸಂತಸವನ್ನು ಹಂಚಿಕೊಳ್ಳಲು ನನಗೆ
ಪರಿಚಯವಿದ್ದವರು ಯಾರೂ ನನ್ನ ಬಳಿಯಿರಲಿಲ್ಲ. ಹಾಗೆಯೇ ಗುಂಡಾ ನಾಯಕರ ಬಳಿ ಕೇವಲ ಒಂದು ಪ್ರತಿ ಇದ್ದುದರಿಂದ
ಅದನ್ನು ನನಗೆ ಕೊಡಲು ಅವರು ಒಪ್ಪಲಿಲ್ಲ.
ಆಮೇಲೆ
ಅರ್ಧ ಗಂಟೆಯಲ್ಲಿ ನಾನು ಕೊಪ್ಪ ಪಟ್ಟಣ ತಲುಪಿದೆ. ಅಲ್ಲಿನ
ಬಸ್ ನಿಲ್ದಾಣದಲ್ಲಿ ನನ್ನ ಕಾಲೇಜಿನ ಸಹಪಾಠಿ ಶ್ರೀಕೃಷ್ಣ ಎಂಬುವವನು ಕಣ್ಣಿಗೆ ಬಿದ್ದ. ಅವನು ತುಂಬಾ
ಸಂತೋಷದಿಂದ ನನ್ನನ್ನು ಅಭಿನಂದಿಸತೊಡಗಿದ. ಆಗ ನಾನು ಅವನಿಗೆ ನನಗೆ ಊರಿನಲ್ಲಿ ನನ್ನ ಹೆಸರು ಪೇಪರಿನಲ್ಲಿ
ಪ್ರಕಟವಾಗಿರುವುದನ್ನು ತೋರಿಸಲು ಒಂದು ಪತ್ರಿಕೆಯೂ ಇಲ್ಲದ ಪರಿಸ್ಥಿತಿ ತಿಳಿಸಿದೆ. ಆಮೇಲೆ ನಾವಿಬ್ಬರೂ
ಕೊಪ್ಪದ ಬೇರೆ ಬೇರೆ ಅಂಗಡಿಯನ್ನೆಲ್ಲ ಸುತ್ತಾಡಿದರೂ ಯಾರೂ ಅವರ ಬಳಿಯಿದ್ದ ಕೇವಲ ಒಂದೇ ಪ್ರತಿಯನ್ನು
ನನಗೆ ಕೊಡಲು ತಯಾರಿರಲಿಲ್ಲ.
ಶ್ರೀಕೃಷ್ಣನಿಗೆ
ನಾನು ಹೇಗಾದರೂ ಒಂದು ಪ್ರತಿ ಪಡೆದೇ ಊರಿಗೆ ಹೋಗಬೇಕೆಂದು ಹೇಳಿದೆ. ಅವನು ನನ್ನನ್ನು ಬಸ್ ನಿಲ್ದಾಣದಲ್ಲೇ
ಇರುವಂತೆ ಹೇಳಿ ಹೊರಟುಹೋದ. ಸ್ವಲ್ಪ ಸಮಯದ ನಂತರ ಅವನು ಒಂದು ಪ್ರತಿಯೊಡನೆ ನನ್ನ ಮುಂದೆ ಪ್ರತ್ಯಕ್ಷನಾದ.
ಅವನು ಮಾಡಿದ್ದಿಷ್ಟೇ. ಅಂಗಡಿಯೊಂದರಲ್ಲಿ ಓದಲೆಂದು ಒಂದು ಪ್ರತಿಯನ್ನು ಪಡೆದು ಅದನ್ನು ಕೈಯಲ್ಲಿ ಹಿಡಿದುಕೊಂಡು
ಹಾಗೇ ಹೊರಟು ಬಂದು ಬಿಟ್ಟಿದ್ದ! ಶ್ರೀಕೃಷ್ಣ ಪ್ರಾಯಶಃ ನಾರ್ವೆ ಹತ್ತಿರವಿದ್ದ ಮರಿತೊಟ್ಲು ಎಂಬ ಊರಿನವನು. ಅವನು ಮಾಡಿದ
ಉಪಕಾರವನ್ನು ನಾನೆಂದೂ ಮರೆಯುವಂತಿಲ್ಲ. ಅವನು ಕೊಟ್ಟ ಪ್ರಜಾವಾಣಿಯ ಪ್ರತಿ ಇಂದೂ ನನ್ನ ಬಳಿಯಿದೆ.
--------ಮುಕ್ತಾಯ------
No comments:
Post a Comment