Thursday, April 20, 2017

ನನ್ನ ಬಾಲ್ಯ


ಅಧ್ಯಾಯ ೨೧
ನಾವು ನಮ್ಮ ಅಮ್ಮನ ಬಾಯಿಂದ ಕೇಳಿದ ನಮ್ಮೂರಿನ ಹಳೆ ಕಾಲದ ಕಥೆಗಳು ಯಾವಾಗಲೂ ನಮ್ಮ ಕುತೂಹಲವನ್ನು ಕೆರಳಿಸುವಂತಹವೇ ಆಗಿರುತ್ತಿದ್ದವು. ಎಲ್ಲಪ್ಪಯ್ಯನವರ ಕಥೆಯೂ ಅಂತಹದೇ ಆಗಿತ್ತು. ಒಬ್ಬ ದೃಢಕಾಯ ವ್ಯಕ್ತಿಯಾಗಿದ್ದ ಅವರು ಸ್ವಲ್ಪ ಸಮಯದಲ್ಲೇ ತಮ್ಮ ಕಾಲಿನ ಕಟ್ಟುಗಳನ್ನು ಬಿಡಿಸಿಕೊಳ್ಳುವುದರಲ್ಲಿ ಯಶಸ್ವಿಯಾದರು. ಆದರೆ ಎಷ್ಟು ಕಷ್ಟಪಟ್ಟರೂ ತಮ್ಮ ಕೈಕಟ್ಟುಗಳನ್ನು ಬಿಡಿಸಿಕೊಳ್ಳಲಾಗಲಿಲ್ಲ. ಆದ್ದರಿಂದ ಕಣ್ಣಿನ ಕಟ್ಟುಗಳನ್ನೂ ಬಿಚ್ಚಿಕೊಳಲಾರದೆ ಕುರುಡರಂತಾಗಿಬಿಟ್ಟರು. ಆದರೆ ಅವರೆಷ್ಟು ಸಾಹಸಿಯೆಂದರೆ ಕೇವಲ ತಮ್ಮ ನೆನಪಿನ ಶಕ್ತಿಯಿಂದಲೇ ಅವರು ಒಂದು ಮೈಲಿಗೂ ಹೆಚ್ಚು ದೂರ ನಡೆದು ಅವರಿಗೆ ಇಷ್ಟವಾದ ಒಬ್ಬರ ಮನೆಗೆ ಹೋಗಿ ತಮ್ಮ ಕಣ್ಣಿನ ಕಟ್ಟುಗಳನ್ನು ಬಿಚ್ಚಿಸಿಕೊಂಡರಂತೆ!

ನಮ್ಮ ಅಮ್ಮನಿಗೆ ದರೋಡೆಗಾರರು ಆಮೇಲೆ ಸಿಕ್ಕಿಬಿದ್ದರೇ ಎಂಬ ವಿಷಯ ತಿಳಿದು ಬರಲಿಲ್ಲ. ಆದ್ದರಿಂದ ಎಲ್ಲಪ್ಪಯ್ಯನವರ ಅಷ್ಟೊಂದು ಸಂಪತ್ತು ಕರಗಿ ಹೋಗಿದ್ದು ಸತ್ಯವಾಗಿತ್ತು. ಆದರೆ ನಮ್ಮೂರಿನಲ್ಲಿ ಹಣ ಹುಗಿದಿಡುವ ಸಂಪ್ರದಾಯ ಮೊದಲಿಂದ ಇದ್ದದ್ದರಿಂದ   ಎಲ್ಲಪ್ಪಯ್ಯನವರೂ ತಮ್ಮ ಸಂಪತ್ತನ್ನು ಬೇರೆ ಬೇರೆ ಕಡೆ ಇಟ್ಟಿದ್ದಿರಬೇಕೆಂದು ಒಂದು ಊಹೆ. ಅಲ್ಲದೇ ಅವರ ಜಮೀನಿನಿಂದ ವಾರ್ಷಿಕ ಆದಾಯವೇನು ಸಾಮಾನ್ಯ ಮಟ್ಟದ್ದಾಗಿರಲಿಲ್ಲ. ಒಟ್ಟಿನಲ್ಲಿ ಸ್ವಲ್ಪ ಕಾಲದಲ್ಲೇ ಅವರ  ಸಂಪತ್ತು ಮೊದಲಿನ ಮಟ್ಟ ತಲುಪಿರಬೇಕು.

ನಾನು ನನ್ನ ಬಾಲ್ಯದಲ್ಲಿ ನೋಡಿದ ಬೆಳವಿನಕೊಡಿಗೆಯಲ್ಲಿ ಎಲ್ಲಪ್ಪಯ್ಯನ ಕಾಲ ಮುಗಿದು ಅವರ ಮೂರು ಗಂಡು ಮಕ್ಕಳಲ್ಲಿ ಹಿರಿಯರಾದ ಗಣೇಶಯ್ಯನವರ ಮನೆ ಆಡಳಿತವೂ ಕೊನೆಗೊಂಡಿತ್ತು. ಅವರ ತಮ್ಮಂದಿರಾದ ತಿಮ್ಮಪ್ಪಯ್ಯ ಮತ್ತು ವೆಂಕಪ್ಪಯ್ಯನವರು ಜಂಟಿಯಾಗಿ ಮನೆ ಆಡಳಿತ ನೆಡಸುತ್ತಿದ್ದರು. ಗಣೇಶಯ್ಯನವರ ಒಬ್ಬಳೇ ಮಗಳು ಒಂದು ಅಪಘಾತದಲ್ಲಿ ತೀರಿಕೊಂಡ ನಂತರ ಅವರು ತಮ್ಮ ಪತ್ನಿ ಕಾವೇರಮ್ಮ ನವರೊಡನೆ ಶಿವಮೊಗ್ಗ ಪೇಟೆಯಲ್ಲಿ ಸ್ವಂತ ಮನೆ ಮಾಡಿಕೊಂಡು ವಾಸಿಸುತ್ತಿದ್ದರು. ಆದರೆ ಅವರು ಅಲ್ಲಿಂದಲೇ ಮನೆಯ ಹಣಕಾಸು ಇತ್ಯಾದಿಗಳ ರಿಮೋಟ್ ಕಂಟ್ರೋಲ್ ಮಾಡುತ್ತಿದ್ದರು. ಅವರ ಪತ್ನಿ ಕಾವೇರಮ್ಮ ಕಾನೂರಿನ ಶ್ರೀಮಂತ ಸುಬ್ಬರಾಯರ ಸಹೋದರಿ.

ಗಣೇಶಯ್ಯನವರು ಒಬ್ಬ ಆಜಾನುಬಾಹು ವ್ಯಕ್ತಿ . ಅವರ ವ್ಯಕ್ತಿತ್ವ ಬಾಹುಬಲಿಯನ್ನು ಹೋಲುತ್ತಿದ್ದು ಸಾಮಾನ್ಯ ಪುರುಷರಿಗೆ ಅವರ ಮುಂದೆ ನಿಲ್ಲುವ  ಧೈರ್ಯ  ಕೂಡ ಬರುತ್ತಿರಲಿಲ್ಲ. ಅವರ ಧ್ವನಿ ಕೂಡ ಅತ್ಯಂತ ಅಧಿಕಾರದಿಂದ ಕೂಡಿರುತ್ತಿತ್ತು. ಕಾವೇರಮ್ಮನವರು ಮಹಾರಾಣಿಯ ಲಕ್ಷಣ ಹೊಂದಿದ್ದು ನೋಡುವರಿಗೆ ಪ್ರೀತಿ ಮತ್ತು ಮಮತೆಯ ಸಾಕಾರವಾಗಿ ಕಾಣುತ್ತಿದ್ದರು. ದಂಪತಿಗಳು ತಮ್ಮೊಡನೆ ಮನೆಯ  ಕೆಲವು  ಗಂಡು ಮತ್ತು ಹೆಣ್ಣು ಮಕ್ಕಳನ್ನು ಕರೆದುಕೊಂಡು ಹೋಗಿ ಶಿವಮೊಗ್ಗೆಯ ಶಾಲೆಗಳಲ್ಲಿ ಓದಿಸುತ್ತಿದ್ದರು. ಅಲ್ಲದೆ ಮನೆಯಲ್ಲಿ ವರ್ಷವಿಡೀ ನಡೆಯುವ ಹಬ್ಬ ಹಾಗೂ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ನವರಾತ್ರಿ ಹಬ್ಬ ಮತ್ತು ಅನಂತ ಚತುರ್ದಶಿ ಅವುಗಳಲ್ಲಿ ಮುಖ್ಯವಾದ ಹಬ್ಬಗಳು.

ನಮ್ಮೂರಿನ ಇತರ ಮನೆಗಳಂತೆ ಬೆಳವಿನಕೊಡಿಗೆ ಮನೆಗೆ ಕೂಡ ಮನೆಯಿಂದ ಸ್ವಲ್ಪ ದೂರದಲ್ಲಿದ್ದ ಒಂದು ಕೆರೆಯಿಂದ ನೀರು ವರ್ಷವಿಡೀ ಹರಿದು ಬರುತ್ತಿತ್ತು. ಮನೆಯ ಪಕ್ಕದಲ್ಲಿದ್ದ ಒಂದು ದೊಡ್ಡ ಗೋಶಾಲೆ ಹಸು ಕರುಗಳಿಂದ ತುಂಬಿರುತ್ತಿತ್ತು. ಅಂದಿನ ಮಲೆನಾಡಿನಲ್ಲಿ ಮನೆಯಲ್ಲಿ ಜನಿಸಿದ ಮಕ್ಕಳಲ್ಲಿ ಹೆಣ್ಣು ಅಥವಾ ಗಂಡು ಎಂಬ ಬೇಧಭಾವ ಇರಲಿಲ್ಲ. ಆದರೆ ಹಸುಗಳು ಕರು ಹಾಕಿದಾಗ ಹೆಣ್ಣು ಕರುವಿನ ಮೇಲಿದ್ದ ಮಮತೆ ಗಂಡಿನ ಮೇಲಿರಲಿಲ್ಲ. ಅದಕ್ಕೆ ಕಾರಣ ಹೆಣ್ಣು ಕರುಗಳು ಮುಂದೆ ಹಸುಗಳಾಗಿ ಬೆಳೆದು ಹಾಲನ್ನೀಯುವುದು. ಅಲ್ಲದೆ ಹೆಣ್ಣು ಕರುಗಳು ಸಾಮಾನ್ಯವಾಗಿ ಸಾಧುಗಳಾಗಿದ್ದರೆ ಗಂಡು ಕರುಗಳು ಬೇಗನೆ ಪೋಲಿ ಪೋಕರಿಗಳಾಗುತ್ತಿದ್ದವು. ಬೆಳವಿನಕೊಡಿಗೆಯಲ್ಲಿ ಅವುಗಳಿಗೆ  ಒಂದು ವಿಶೇಷ ವ್ಯವಸ್ಥೆಯಿತ್ತು.

ಗಂಡು ಕರುಗಳನ್ನು ಅವು ಅಮ್ಮನ ಮೊಲೆ ಹಾಲು ಕುಡಿಯುವುದನ್ನು ನಿಲ್ಲಿಸಿದೊಡನೆ ನಮ್ಮ ಮನೆಯ ಹತ್ತಿರವಿದ್ದ ಒಂದು "ಶಿಶುವಿಹಾರಕ್ಕೆ" ಸ್ಥಳಾಂತರಿಸಲಾಗುತ್ತಿತ್ತು. ಹೆಣ್ಣು ಕರುಗಳು ಅಮ್ಮನೊಟ್ಟಿಗೆ ತವರು ಮನೆಯಲ್ಲೇ ವಾಸ ಮುಂದುವರಿಸುವ ಹಕ್ಕನ್ನು ಹೊಂದಿದ್ದವು. ಆದರೆ ಬಡಪಾಯಿಗಳಾದ ಗಂಡುಕರುಗಳು ಶಿಶುವಿಹಾರ ಸೇರಲೇ ಬೇಕಿತ್ತು. ಶಿಶುವಿಹಾರ ಒಂದು ಹಾಸ್ಟೆಲಿಗೆ ಸಮಾನವಾಗಿತ್ತು. ಕನ್ನಡದಲ್ಲಿ ಅದಕ್ಕೆ ಕೂಡುಕೊಟ್ಟಿಗೆ ಎಂಬ ಹೆಸರಿತ್ತು. ಅದರ ವಾರ್ಡನ್ ಶೇಷ ಎಂಬ ಹೆಸರಿನ ಹಿರಿಯ ನೌಕರ.

ಹೆಣ್ಣು ಕರುಗಳನ್ನು ಕೊಟ್ಟಿಗೆಯಲ್ಲಿ ಬೇರೆ ಬೇರೆಯಾಗಿ ಕಟ್ಟಿದ್ದರೆ ಕೂಡುಕೊಟ್ಟಿಗೆಯಲ್ಲಿದ್ದ ಗಂಡು ಕರುಗಳು ಯಾವುದೇ ಹಗ್ಗವಿಲ್ಲದೆ ಸ್ವತಂತ್ರವಾಗಿರುತ್ತಿದ್ದವು. ಬೆಳಿಗ್ಗೆ ಮುಂಚೆ ಶೇಷ ಅವುಗಳಿಗೆ ಹುಲ್ಲು ತಿನ್ನಿಸಿ ಕೊಟ್ಟಿಗೆ ಬಾಗಿಲು ತೆಗೆದು ಚೌಡನೊಡನೆ ಮೇವಿಗೆ ಕಳಿಸುತ್ತಿದ್ದ. ಸಂಜೆ ಅವುಗಳನ್ನು ಪುನಃ ಕೊಟ್ಟಿಗೆಯೊಳಗೆ ಸೇರಿಸಿ ಬಾಗಿಲು ಹಾಕಿ  ಬಿಡುತ್ತಿದ್ದ. ಅಮ್ಮನ ಮತ್ತು ಮನೆಯವರ ಮಮತೆಯಿಲ್ಲದ ಕರುಗಳು ತುಂಬಾ ತುಂಟಾಟದಲ್ಲಿ ತೊಡಗಿರುತ್ತಿದ್ದವು. ಅವುಗಳಲ್ಲಿ ಹಿರಿಯ ಕರುಗಳು ಗಂಭೀರವಾಗಿ ಮಲಗಿದ್ದರೆ ಕಿರಿಯವು ಯಾವಾಗಲೂ ಗುದ್ದಾಟದಲ್ಲಿ ತೊಡಗಿರುತ್ತಿದ್ದವು. ಹಿರಿಯ ಕರುಗಳನ್ನು ಸ್ವಲ್ಪ ಸಮಯದ ನಂತರ ಮಕ್ಕಿ ಗದ್ದೆಯ ಹತ್ತಿರವಿದ್ದ ಎತ್ತಿನ ಕೊಟ್ಟಿಗೆಗೆ ಪ್ರಮೋಷನ್ ಮಾಡಿ ಕಳಿಸಲಾಗುತ್ತಿತ್ತು. ಅದೊಂದು ಟ್ರೇನಿಂಗ ಸೆಂಟರ್ ಆಗಿತ್ತು. ಅಲ್ಲಿ ಅವುಗಳಿಗೆ ಗದ್ದೆಯಲ್ಲಿ ಹೂಟೆ ಮಾಡುವ ವಿಶೇಷ ತರಬೇತಿ ನೀಡಲಾಗುತ್ತಿತ್ತು.

ಕೂಡುಕೊಟ್ಟಿಗೆಯ ಸಮೀಪದಲ್ಲೇ ವಾರ್ಡನ್ ಶೇಷನಿಗೆ ಒಂದು ಬಿಡಾರದ ವ್ಯವಸ್ಥೆಯಿತ್ತು. ಅದರ ಹತ್ತಿರವಿದ್ದ ಖಾಲಿ ಜಾಗದಲ್ಲಿ ಶೇಷ ಅನೇಕ ತರಕಾರಿಗಳನ್ನು ಬೆಳೆಯುತ್ತಿದ್ದ. ಅವುಗಳಲ್ಲಿ ಬಸಳೆ ಎಂಬ ತರಕಾರಿ ವಿಶೇಷದ್ದಾಗಿತ್ತು. ಯಾವುದೊ ಕಾರಣದಿಂದ ಬಸಳೆಯನ್ನು ಕಾಲದಲ್ಲಿ ಅಡಿಗೆಗೆ ನಿಷಿದ್ಧ ಮಾಡಲಾಗಿತ್ತು. ಶೇಷ ಅದನ್ನು ನಮ್ಮ ಮನೆಗೆ ತುಂಬಾ ಗುಟ್ಟಾಗಿ ಸಪ್ಲೈ ಮಾಡುತ್ತಿದ್ದ. ನಮ್ಮ ಅಮ್ಮ ಬಸಳೆ ಸೊಪ್ಪಿನಿಂದ ತುಂಬಾ ರುಚಿಕರವಾದ ಸಾಂಬಾರ್ ಮತ್ತು ಸಾಸಿವೆ (ತಂಬುಳಿಮಾಡುತ್ತಿದ್ದಳು. ಶೇಷ ಕೇವಲ ಒಂದು ಲೋಟ ಕಾಫಿ  ಮತ್ತು ಎಲೆ ಅಡಿಕೆಗಳಿಂದ ತೃಪ್ತಿ ಹೊಂದುತ್ತಿದ್ದ. ಶೇಷನಿಗೆ ಇನ್ನೂ ಬೇರೆ ಕೆಲಸಗಳಿದ್ದುವು. ಅದರಲ್ಲಿ ನಮ್ಮ ಮನೆಯ ಹತ್ತಿರವಿದ್ದ ಬೆಳವಿನಕೊಡಿಗೆಯವರ ತೋಟಕ್ಕೆ ಕೆರೆ ನೀರು ಬಿಡುವುದೂ ಸೇರಿತ್ತು. ಶೇಷನ ವ್ಯಕ್ತಿತ್ವ ನೋಡಲು ಚೋಮನ ದುಡಿ ಸಿನಿಮಾದ ಚೋಮನಂತೇ ಇತ್ತು.

ನಮ್ಮೂರಿನ ಮುಖ್ಯ ದೇವಸ್ಥಾನ ಗಣಪತಿಕಟ್ಟೆ ಬೆಳವಿನಕೊಡಿಗೆ ಮನೆಯವರ ಸುಪರ್ದಿನಲ್ಲಿತ್ತು. ಅದರ ದಿನನಿತ್ಯ ಪೂಜೆಯ ಜವಾಬ್ದಾರಿಯನ್ನು ನಡುವಿನ ಮನೆಯ ಫಣಿಯಪ್ಪಯ್ಯನವರಿಗೆ ವಹಿಸಲಾಗಿತ್ತು. ಪ್ರತಿ ದಿನದ ಪೂಜೆಯ ನಂತರ ಹಣ್ಣು ಕಾಯಿಯನ್ನು  ಬೆಳವಿನಕೊಡಿಗೆ ಮನೆಗೆ ತಲುಪಿಸಬೇಕಿತ್ತು. ಅದಕ್ಕಾಗಿ ಅವರಿಗೆ ವರ್ಷಕ್ಕೆ ಎಷ್ಟು ಭತ್ತವನ್ನು ಕೊಡಬೇಕೆಂದು ನಿಗದಿ ಮಾಡಲಾಗಿತ್ತು. ಪ್ರತಿ ಚೌತಿ ತಿಥಿಯಂದು ಗಣಪತಿಗೆ ವಿಶೇಷ ಪೂಜೆ ಮಾಡಿ ಪ್ರತಿಯೊಂದು ಮನೆಗೂ ಹಣ್ಣು ಕಾಯಿ ತಲುಪಿಸಲಾಗುತ್ತಿತ್ತು. ಅದಕ್ಕೆ ಪ್ರತಿ ಮನೆಯವರೂ ನಿಗದಿ ಮಾಡಿದಷ್ಟು ಹಣ ನೀಡ ಬೇಕಿತ್ತು. ದೀಪಾವಳಿ ಹಬ್ಬದ ಸಮಯದಲ್ಲಿ ಬೇರೆ ಬೇರೆ ಮನೆಗಳ ವತಿಯಿಂದ ದೇವಸ್ಥಾನದಲ್ಲಿ ದೀಪಾರಾಧನೆ ನಡೆಯುತ್ತಿತ್ತು. ಆಗ ನಾವು ಎತ್ತಿನ ಗಾಡಿಯಲ್ಲಿ ಅಲ್ಲಿಗೆ ತಲುಪುತ್ತಿದ್ದೆವು.
----ಮುಂದುವರಿಯುವುದು ---No comments: