Monday, May 18, 2020

ಬಾಲ್ಯ ಕಾಲದ ನೆನಪುಗಳು – ೮೭

ಎಷ್ಟೋ ವರ್ಷಗಳ ಹಿಂದೆ  ನಮ್ಮ ಮನೆಯಲ್ಲೂ ಒಂದು ಅಲರಾಂ ಗಡಿಯಾರ ಇತ್ತು. ಅದು ಒಮ್ಮೆ ಕೆಟ್ಟು ಹೋದಾಗ ಕೊಪ್ಪದಲ್ಲಿ ಒಂದು ಅಂಗಡಿಗೆ ರಿಪೇರಿ ಮಾಡಲು ಕೊಡಲಾಗಿತ್ತು. ಆದರೆ ಆ ಅಂಗಡಿಯವನು ಪ್ರತಿ ವಾರ ನಮ್ಮ ತಂದೆ ಸಂತೆಗೆ ಹೋದಾಗ ವಿಚಾರಿಸಿದರೆ ಮುಂದಿನ ವಾರ ಗ್ಯಾರಂಟಿಯಾಗಿ ಕೊಡುವುದಾಗಿ ಹೇಳುತ್ತಲೇ ಇದ್ದ. ಆದರೆ ಆ ಮುಂದಿನ ವಾರ ಎಂದೂ ಬರಲೇ ಇಲ್ಲ! ಹಾಗಾಗಿ ನಮ್ಮ ತಂದೆಯವರು ಅದರ ತಂಟೆಗೇ ಹೋಗದೇ ಕೈ ಬಿಟ್ಟುಬಿಟ್ಟರು. ಹೊಸದೊಂದು ಗಡಿಯಾರವನ್ನು ಕೊಳ್ಳುವಷ್ಟು ಹಣ ಇಲ್ಲದೇ ಹೋದ ಕಾರಣ ನಾವು ಮಾಮೂಲಿನಂತೆ ಸೂರ್ಯನ ಬಿಸಿಲು ಅಂಗಳದಲ್ಲಿ ಎಲ್ಲಿಯವರೆಗೆ ಪಸರಿಸಿದೆ ಎಂಬ ಆಧಾರದ ಮೇಲೆ ವೇಳೆ ಎಷ್ಟೆಂದು ಕಂಡುಕೊಳ್ಳತೊಡಗಿದೆವು.

ಶಂಕರರಾಯರಿಂದ ನನಗೆ ಒಂದು ವಿಷಯ ತಿಳಿದು ಬಂದಿತ್ತು. ಅವರು ಹಿಂದಿನ ವರ್ಷ ನನ್ನ ಕಾಲೇಜು ಫೀ ೩೫೦ ರೂಪಾಯಿ ಕಟ್ಟಿದ ವಿಷಯ ಹೇಳಿದಾಗ ಪುರದಮನೆ ಶ್ರೀನಿವಾಸಯ್ಯನವರು ಅವರಿಗೆ ೧೦೦ ರುಪಾಯಿ ಮತ್ತು ಭುವನಕೋಟೆ ವೆಂಕಪ್ಪಯ್ಯನವರು ೫೦ ರುಪಾಯಿ ಅವರ ಕೊಡುಗೆಯಾಗಿ ನೀಡಿದ್ದರಂತೆ.  ಆದರೆ ಅವರಿಬ್ಬರೂ ಈ ವಿಷಯ ನನಗಾಗಲೀ ನನ್ನ ತಂದೆಯವರಿಗಾಗಲೀ ತಿಳಿಸಿರಲಿಲ್ಲ. ಹಾಗಾಗಿ ಅವೆರಡೂ ನನ್ನ ವಿದ್ಯಾಭ್ಯಾಸಕ್ಕೆ ಅವರು ನೀಡಿದ ಅಜ್ಞಾತ ಕೊಡುಗೆಯಾಗಿತ್ತು! ಶ್ರೀನಿವಾಸಯ್ಯನವರು ನಾನು Rank ಪಡೆದ ವಿಷಯ ತಿಳಿದು ತುಂಬಾ ಸಂತೋಷ ವ್ಯಕ್ತಪಡಿಸಿದರು. ಹಾಗೆಯೇ ನನಗೆ ಬಹುಮಾನವಾಗಿ ದೊರೆತ ಗಡಿಯಾರಕ್ಕೆ ಒಂದು ಸುಂದರವಾದ ತೇಗದ ಮರದ ಪೆಟ್ಟಿಗೆ ಮಾಡಿಸಿಕೊಟ್ಟರು. ಮಿತ್ರವೃಂದದವರು ಕೊಟ್ಟ ಗಡಿಯಾರ ಎಷ್ಟೋ ವರ್ಷ ನಮ್ಮ ಮನೆಯ ಒಳಗಿನ ಗೋಡೆಯಲ್ಲಿ ಆ ಪೆಟ್ಟಿಗೆಯೊಳಗೆ ರಾರಾಜಿಸುತ್ತಿತ್ತು. ಹಾಗೆಯೇ ನಮಗೆ ಖಚಿತವಾಗಿ ಸಮಯವೆಷ್ಟೆಂದು ಸೂಚಿಸುತ್ತಲೇ ಇತ್ತು.

ನಮ್ಮ ಪುಟ್ಟಣ್ಣನೂ ಪಿ. ಯು.ಸಿ ಪಾಸಾಗಿ ಆ ವರ್ಷ ಬೆಂಗಳೂರಿನ ಎಂ.ಇ.ಎಸ್ ಕಾಲೇಜಿನಲ್ಲಿ ಬಿ. ಕಾಂ. ತರಗತಿಗೆ ಸೇರುವನಿದ್ದ. ಹಂಚಿನಮನೆ ಸುಬ್ರಹ್ಮಣ್ಯನಿಂದ ಇನ್ನು ಯಾವ ಸಹಾಯ ಸಿಗುವ ಪ್ರಶ್ನೆಯೇ ಇರಲಿಲ್ಲ. ಆದ್ದರಿಂದ ಅವನಿಗೆ ನಮ್ಮ ತಂದೆಯವರಿಂದ ಆರ್ಥಿಕ ಸಹಾಯ ಅತ್ಯಗತ್ಯವಾಗಿತ್ತು. ಈಗಾಗಲೇ ನನ್ನ ಮೆಸ್ ಚಾರ್ಜ್ ತಿಂಗಳಿಗೆ ೩೦ ರೂಪಾಯಿ  ನಮ್ಮ ತಂದೆಯವರಿಗೆ ದೊಡ್ಡ ಹೊರೆಯೇ ಆಗಿತ್ತು. ಆದ್ದರಿಂದ ಅವರಿಗೆ ಆ ಹೊರೆಯನ್ನು ತಪ್ಪಿಸುವುದು ನನ್ನ ಮುಖ್ಯ ಉದ್ದೇಶವಾಗಿತ್ತು. ನಾನು ಕಾಲೇಜಿನ ಮೊದಲ ವರ್ಷವೇ Rank ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದರಿಂದ ಕಾಲೇಜು ಆಡಳಿತ ವರ್ಗ ಅಥವಾ ಮಣಿಪಾಲ್ ಅಕ್ಯಾಡೆಮಿಯವರು ಈ ಖರ್ಚನ್ನು ವಹಿಸಿಕೊಳ್ಳುವಂತೆ ಮಾಡುವುದು ನನ್ನ ಗುರಿಯಾಗಿತ್ತು.  ಆದರೆ ನಾನು ನಮ್ಮ ಕಾಲೇಜಿನಲ್ಲೇ ಓದು ಮುಂದುವರಿಸಿದರೆ ಮಾತ್ರ ಆ ಸಾಧ್ಯತೆ ಇತ್ತು.

ತಲವಾನೆ ಶ್ರೀನಿವಾಸ್ ಅವರಿಂದ ನನಗೊಂದು ಅಭಿನಂದನಾ ಪತ್ರ 

ಆಗ ನವದೆಹಲಿಯಲ್ಲಿದ್ದ ಡಾಕ್ಟರ್ ತಲವಾನೆ ಶ್ರೀನಿವಾಸ್ ಅವರಿಂದ ನನಗೊಂದು ಅಭಿನಂದನಾ ಪತ್ರ  ಬಂತು. ನನಗೆ ಶಿವಮೊಗ್ಗೆಯ ಹಾಸ್ಟೆಲಿನಲ್ಲಿ ಫ್ರೀ ಸೀಟ್ ದೊರಯಲು ಅವರು ಸಹಾಯ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ನನ್ನ ಮುಂದಿನ ವಿದ್ಯಾಭ್ಯಾಸದ ಕೆರಿಯರ್ ತುಂಬಾ ಎಚ್ಚರಿಕೆಯಿಂದ ಆಯ್ಕೆ ಮಾಡಬೇಕೆಂದು ಅವರು ಸೂಚಿಸಿದ್ದರು. ನನಗೆ ಅದೊಂದು ಕಷ್ಟಕರವಾದ ತೀರ್ಮಾನವೇ ಆಗಿತ್ತು. ಏಕೆಂದರೆ ಆ ಬಗ್ಗೆ ನನಗೆ ಮಾರ್ಗದರ್ಶನ ನೀಡುವರು ಯಾರೂ ಇರಲೇ ಇಲ್ಲ. ನಾನು Rank ಗಳಿಸಿದ್ದೇನೋ ನಿಜ. ಆದರೆ ನನ್ನ ಮುಂದಿನ ಗುರಿ ಏನೆಂದು ನನಗೇ ಗೊತ್ತಿರಲಿಲ್ಲ. ಕೆಲವರು ನನಗೆ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಓದಲು ಸೂಚಿಸಿದರೆ ಇನ್ನು ಕೆಲವರು ಕೆ.ಆರ್.ಇ.ಸಿ ಸುರತ್ಕಲ್ಲಿನಲ್ಲಿ ಇಂಜಿನಿಯರಿಂಗ್  ಓದುವಂತೆ ಸಲಹೆ ಮಾಡಿದರು. ಆ ಕಾಲದಲ್ಲಿ Rank ಪಡೆದ ವಿದ್ಯಾರ್ಥಿಗಳು ಈ ಎರಡು ಕೋರ್ಸುಗಳಲ್ಲಿ ಒಂದನ್ನು ಆಯ್ಕೆ ಮಾಡುವುದು ಮಾಮೂಲಾಗಿತ್ತು. ನನ್ನಂತೆ ಮ್ಯಾಥೆಮ್ಯಾಟಿಕ್ಸ್ ಸಬ್ಜೆಕ್ಟಿನಲ್ಲಿ ೧೦೦ಕ್ಕೆ ೧೦೦ ಅಂಕಗಳಿಸಿದ್ದ ಪ್ರಕಾಶ್ ಕಾಮತ್ ಸುರತ್ಕಲ್ಲಿನಲ್ಲಿ ಇಂಜಿನಿಯರಿಂಗ್  ಓದಲು ತೀರ್ಮಾನಿಸಿದ್ದ. ಪ್ರಕಾಶನ ತಂದೆಯವರು ಆ ಬಗ್ಗೆ ಎಲ್ಲ ವಿವರಗಳನ್ನು ಕೊಟ್ಟು ನನ್ನನ್ನೂ ಅಲ್ಲಿಯೇ ಓದುವಂತೆ  ಹೇಳಿದರು. ಆದರೆ ನನಗೆ ಆರ್ಥಿಕವಾಗಿ ಅದು ಸಾಧ್ಯವೇ ಎಂಬ ಪ್ರಶ್ನೆಗೆ ಯಾವ ಉತ್ತರವಿರಲಿಲ್ಲ. ಆಗ ತಾನೇ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬಿ.ಎಸ್ ಸಿ (ಆನರ್ಸ್) ತರಗತಿಗಳನ್ನು ಪ್ರಾರಂಭ ಮಾಡುವರಿದ್ದರು. ನನಗೆ ಅದರಲ್ಲಿ ತುಂಬಾ ಆಸಕ್ತಿ ಇತ್ತು. ಆದರೆ ನಾನಿದ್ದ ಆರ್ಥಿಕ ಪರಿಸ್ಥಿತಿಯಲ್ಲಿ ಅದು ಕೇವಲ ಕನಸಾಗಿತ್ತು. ಅಷ್ಟೇ.

ನಾಲ್ಕನೇ Rank ಪಡೆದ ನನಗೆ ಪಿ. ಯು.ಸಿ ಪರೀಕ್ಷೆಯಲ್ಲಿ ಬಂದ ಅಂಕಗಳು ಕೆಳ  ಕಂಡಂತಿದ್ದವು:

Subject

Maximum Marks

Marks Secured

English

100

69

Sanskrit

100

71

Physics

100

82

Chemistry

100

88

Mathematics

100

100

 

ಆಗಿನ ಕಾಲದಲ್ಲಿ ಮ್ಯಾಥಮ್ಯಾಟಿಕ್ಸ್ ಬಿಟ್ಟರೆ ಬೇರೆ ಯಾವ ಸಬ್ಜೆಕ್ಟಿನಲ್ಲೂ ೯೦ರ ಮೇಲೆ ಅಂಕಗಳನ್ನು ತೆಗೆಯುವ ಪ್ರಶ್ನೆ ಇರಲಿಲ್ಲ. ಹಾಗೆಯೇ ಲ್ಯಾಂಗ್ವೇಜ್ ಸಬ್ಜೆಕ್ಟುಗಳಿಗೆ ೭೦ರ ಮೇಲೆ ಅಂಕಗಳನ್ನು ನೀಡುತ್ತಿರಲಿಲ್ಲ.

ಆ ವರ್ಷ ಕಾಲೇಜಿಗೆ ಸೇರಲು ಅರ್ಜಿ ಹಾಕಿದ್ದ ವಿದ್ಯಾರ್ಥಿಗಳಿಗೆ ಸಂದರ್ಶನ!

ಈ ಬಗೆಯ ಅನಿಶ್ಚಿತ ಸ್ಥಿತಿಯಲ್ಲಿ ನಾನು ಪ್ರಿನ್ಸಿಪಾಲ್ ರಾಮಕೃಷ್ಣರಾಯರನ್ನು ಭೇಟಿಯಾಗಲು ಹೋದೆ. ಆದರೆ ಅವರೆಷ್ಟು ಬ್ಯುಸಿ ಆಗಿದ್ದರೆಂದರೆ ನನ್ನ ಕಣ್ಣುಗಳನ್ನು ನಾನೇ ನಂಬಲಾಗಲಿಲ್ಲ. ಏಕೆಂದರೆ ಅವರು ಆ ಸಮಯದಲ್ಲಿ ಆ ವರ್ಷ ಕಾಲೇಜಿಗೆ ಸೇರಲು ಅರ್ಜಿ ಹಾಕಿದ್ದ ವಿದ್ಯಾರ್ಥಿಗಳಿಗೆ ಸಂದರ್ಶನ ಮಾಡುತ್ತಿದ್ದರು! ಆ ಸಂದರ್ಶನಕ್ಕಾಗಿ ವಿದ್ಯಾರ್ಥಿಗಳ ಒಂದು ದೊಡ್ಡ ಸಾಲೇ ನಿಂತು ಬಿಟ್ಟಿತ್ತು! ಹಿಂದಿನ ವರ್ಷ ಇದೇ ಕಾಲೇಜಿನಲ್ಲಿ ಓದಲು ವಿದ್ಯಾರ್ಥಿಗಳನ್ನು ಹುಡುಕುತ್ತಿದ್ದರೆ ಈ ವರ್ಷ ಸೇರಲು ಬಯಸಿದ ವಿದ್ಯಾರ್ಥಿಗಳಿಗೆ ಪ್ರಿನ್ಸಿಪಾಲರು ಸಂದರ್ಶನ ಮಾಡುವಂತಾಗಿತ್ತು! ನಮ್ಮ ಕಾಲೇಜಿನ ಮೊದಲ ವರ್ಷವೇ ಒಬ್ಬ ವಿದ್ಯಾರ್ಥಿ Rank ಪಡೆದ ಸಮಾಚಾರ ಎಲ್ಲೆಡೆ ಹಬ್ಬಿ ಪ್ರವೇಶಕ್ಕಾಗಿ ಚಿಕ್ಕಮಗಳೂರು, ಕಡೂರು, ಬೀರೂರು, ಕೊಪ್ಪ ಮತ್ತು ನರಸಿಂಹರಾಜಪುರ ಇತ್ಯಾದಿ ಊರುಗಳಿಂದ ವಿದ್ಯಾರ್ಥಿಗಳು ನಮ್ಮ ಕಾಲೇಜಿಗೆ ಸೇರಲು ಅರ್ಜಿ ಹಾಕಿ ಸಂದರ್ಶನಕ್ಕೆ ಬಂದಿದ್ದರು. ನನ್ನೆದುರಿನಲ್ಲೇ ಪ್ರಿನ್ಸಿಪಾಲರು ಯಾವುದೋ ಕಾರಣಕ್ಕಾಗಿ ಇಬ್ಬರು ವಿದ್ಯಾರ್ಥಿಗಳಿಗೆ ಸೀಟ್ ನಿರಾಕರಿಸಿದುದನ್ನೂ ನಾನು ನೋಡಿದೆ! ಒಟ್ಟಿನಲ್ಲಿ ನನ್ನ ಮೊದಲ ವರ್ಷವೇ Rank ಗಳಿಸಿಬಿಟ್ಟ ಸಾಧನೆ ಕಾಲೇಜಿನ ಕೀರ್ತಿಯನ್ನು ಮೇಲೇರಿಸಿ ಬಿಟ್ಟಿತ್ತು. ಪ್ರಿನ್ಸಿಪಾಲರು ಕೂಡ ಅದನ್ನು ಒಪ್ಪಿಕೊಂಡರು.

ಶ್ರೀಕಂಠಯ್ಯನವರಿಂದ ಅವರ ಮನೆಯಲ್ಲೇ ಇರಲು ಅಹ್ವಾನ

ನಾನು ನನ್ನ ಮುಂದಿನ ಕೆರಿಯರ್ ಆರಿಸಲು ಉಂಟಾಗಿದ್ದ ಅನಿಶ್ಚತೆಯನ್ನು ಪ್ರಿನ್ಸಿಪಾಲರಿಗೆ ವಿವರಿಸಿದೆ. ಹಾಗೆಯೇ ನಾನು ಪ್ರಾಯಶಃ ನಮ್ಮ ಕಾಲೇಜಿನಲ್ಲೇ ಓದು ಮುಂದುವರಿಸುವ ತೀರ್ಮಾನ ಮಾಡಬೇಕಾಗಬಹುದೆಂದೂ ತಿಳಿಸಿದೆ. ಪ್ರಿನ್ಸಿಪಾಲರು ಹಾಗಿದ್ದಲ್ಲಿ ಅವರು ಅಕ್ಯಾಡೆಮಿಯವರೊಡನೆ ಅವರಿಂದ ನನಗೆ ಯಾವ ರೀತಿಯಲ್ಲಿ ಸಹಾಯ ದೊರೆಯುವುದೆಂದು ವಿಚಾರಿಸಿ ತಿಳಿಸುವುದಾಗಿ ಹೇಳಿದರು. ಅವರಿಗೆ ಡಾಕ್ಟರ್ ಟಿ. ಎಂ. ಏ. ಪೈ ಅವರೊಂದಿಗೆ ತುಂಬಾ ಒಳ್ಳೆಯ ಸಂಬಂಧವಿತ್ತು. ನಾನು ಆಮೇಲೆ ನಮ್ಮ ಪುಟ್ಟಣ್ಣನ ಕ್ಲಾಸ್ ಮೇಟ್ ಆದ ಜಯಪ್ರಕಾಶನ ಮನೆಗೆ ಹೋದೆ. ಅವನೂ ಉತ್ತಮ ಅಂಕಗಳನ್ನು ಪಡೆದು ಮೆಡಿಕಲ್ ಕಾಲೇಜಿಗೆ ಸೇರಲು ಕಾಯುತ್ತಿದ್ದ. ಆಗ ಮನೆಯಲ್ಲೇ ಇದ್ದ ಪ್ರಕಾಶನ ತಂದೆ ಹಳೇಮನೆ ಶ್ರೀಕಂಠಯ್ಯನವರು ನಾನು ಮೆಸ್ ಚಾರ್ಜ್ ಪಾವತಿ ಮಾಡಲು ಒದ್ದಾಡುತ್ತಿರುವ ವಿಷಯ ಕೇಳಿ ನಾನು ಅವರ ಮನೆಯಲ್ಲೇ ಇರಬಹುದೆಂದೂ, ಹಾಗೆ ಮಾಡಿದರೆ ಆ ಖರ್ಚು ಇರುವುದಿಲ್ಲವೆಂದೂ ಹೇಳಿದರು. ಆದರೆ ಆಗ ನಾನು ಅವರ ಆ ಸಲಹೆಯತ್ತ ಗಮನ ಕೊಡಲಿಲ್ಲ.

ನನ್ನ ಫೋಟೋ ಪೇಪರಿನಲ್ಲಿ ಬರುವುದೆಂದು ಕಾಯುತ್ತಿದ್ದ ನನ್ನ ಅಣ್ಣನಿಗೆ ನಿರಾಶೆ

ಇಂಡಿಯನ್ ಎಕ್ಸ್ ಪ್ರೆಸ್ ಮತ್ತು ಕನ್ನಡ ಪ್ರಭ ಏಜೆಂಟ್ ಆಗಿದ್ದ ಎನ್ ಎಸ್ ಚಂದ್ರಶೇಖರ್  ಅವರು ನನ್ನ ಛಾಯಾಚಿತ್ರವನ್ನು ಪತ್ರಿಕೆಗಳಲ್ಲಿ ಹಾಕಲು ಬಯಸಿ ನನ್ನ ಹತ್ತಿರ ಒಂದು ಫೋಟೋ ಕೊಡುವಂತೆ ಹೇಳಿದರು. ಆದರೆ ನನ್ನ ಹತ್ತಿರ ನಾನೊಬ್ಬನೇ ತೆಗೆಸಿದ್ದ ಯಾವುದೇ ಫೋಟೋ ಇರಲಿಲ್ಲ. ಆ ಕಾಲದಲ್ಲಿ ಶೃಂಗೇರಿಯಲ್ಲಿ ಯಾವುದೇ  ಸ್ಟುಡಿಯೋ ಇರಲಿಲ್ಲ. ಕೊಪ್ಪದಲ್ಲಿ ಥಾಮ್ಸನ್ ಎಂಬ ಸ್ಟುಡಿಯೋ ಇತ್ತು. ಆದರೆ ತೆಗೆದ ಫೋಟೋ ಕೂಡಲೇ ಸಿಗುತ್ತಿರಲಿಲ್ಲ. ಒಟ್ಟಿನಲ್ಲಿ ನನ್ನ ಫೋಟೋ ಪೇಪರಿನಲ್ಲಿ ಬರಲೇ ಇಲ್ಲ. ನನ್ನ ಫೋಟೋ ಪೇಪರಿನಲ್ಲಿ ಬರುವುದೆಂದು ಶಿವಮೊಗ್ಗದಲ್ಲಿ ಕಾಯುತ್ತಿದ್ದ ನನ್ನ ಅಣ್ಣನಿಗೆ ತುಂಬಾ ನಿರಾಶೆ ಆಯಿತಂತೆ.

ಅಂತಿಮ ಬಿ.ಎಸ್ ಸಿ. ಪರೀಕ್ಷೆಯಲ್ಲಿ ಕೂಡ Rank ಪಡೆಯುವೆನೆಂಬ ನಿರೀಕ್ಷೆ ಒಂದು ದೊಡ್ಡ  ಹೊರೆಯಾಗಲಿತ್ತು

ನಾನು ಅಂತಿಮವಾಗಿ ನಮ್ಮ ಕಾಲೇಜಿನಲ್ಲೇ ಬಿ.ಎಸ್ ಸಿ. ತರಗತಿಗೆ ಸೇರುವ ತೀರ್ಮಾನ ಮಾಡಿಬಿಟ್ಟೆ. ಮುಂದೆ ಫಿಸಿಕ್ಸ್ ಸಬ್ಜೆಕ್ಟಿನಲ್ಲಿ ಎಂ.ಎಸ್ ಸಿ. ಮಾಡುವುದು ನನ್ನ ಗುರಿಯಾಗಿತ್ತು. ಶಂಕರರಾಯರಿಗೂ ನನ್ನ ತೀರ್ಮಾನವನ್ನು ತಿಳಿಸಿದೆ. ಅವರು ಹಿಂದಿನ ವರ್ಷದಂತೆ ನನ್ನ ಕಾಲೇಜು ಫೀ ಕಟ್ಟಲು ಸಹಾಯ ಮಾಡುವುದಾಗಿ ಹೇಳಿದರು. ಆದರೆ ನನಗೊಂದು ಸಮಸ್ಯೆ ಎದುರಾಯಿತು. ನಾನು ಫಿಸಿಕ್ಸ್ ಮತ್ತು ಮ್ಯಾಥಮ್ಯಾಟಿಕ್ಸ್ ಮೇಜರ್ ಸಬ್ಜೆಕ್ಟುಗಳಾಗಿ ತೆಗೆದುಕೊಳ್ಳಬೇಕೆಂದಿದ್ದೆ. ಆದರೆ ಅಕ್ಯಾಡೆಮಿಯವರು ನಮ್ಮ ಕಾಲೇಜಿನಲ್ಲಿ ಕೇವಲ ಫಿಸಿಕ್ಸ್ ಮತ್ತು ಕೆಮಿಸ್ಟ್ರಿ ಮೇಜರ್ ಸಬ್ಜೆಕ್ಟುಗಳಾಗಿ ಮತ್ತು ಮ್ಯಾಥಮ್ಯಾಟಿಕ್ಸ್ ಮೈನರ್ ಸಬ್ಜೆಕ್ಟ್ ಆಗಿ ಇಟ್ಟುಬಿಟ್ಟಿದ್ದರು. ನನಗೆ ಕೆಮಿಸ್ಟ್ರಿಯಲ್ಲಿ ಅಷ್ಟು ಆಸಕ್ತಿ ಇರಲಿಲ್ಲ. ಅಲ್ಲದೇ ಮ್ಯಾಥಮ್ಯಾಟಿಕ್ಸ್ ಸಬ್ಜೆಕ್ಟಿನಲ್ಲಿ ಮಾತ್ರ ೪೦೦ಕ್ಕೆ ೪೦೦ ಅಂಕ ಪಡೆಯುವ ಅವಕಾಶವಿತ್ತು. ಆದರೆ ಕೆಮಿಸ್ಟ್ರಿಯಲ್ಲಿ ಎಷ್ಟು ಚೆನ್ನಾಗಿ ಉತ್ತರ ಬರೆದರೂ ೪೦೦ಕ್ಕೆ ೩೦೦ ಅಂಕಗಳನ್ನು ಕೂಡ ಆ ಕಾಲದಲ್ಲಿ ಕೊಡುತ್ತಿರಲಿಲ್ಲ. ಆದ್ದರಿಂದ ಕೆಮಿಸ್ಟ್ರಿ ಮೇಜರ್ ಆಗಿ ತೆಗೆದುಕೊಂಡ ವಿದ್ಯಾರ್ಥಿ ಮೈನರ್ ಮ್ಯಾಥಮ್ಯಾಟಿಕ್ಸ್ ಸಬ್ಜೆಕ್ಟಿನಲ್ಲಿ ೨೦೦ಕ್ಕೆ ೨೦೦ ಅಂಕಗಳನ್ನು ತೆಗೆದರೂ ಅಂತಿಮ ಬಿ.ಎಸ್ ಸಿ. ಪರೀಕ್ಷೆಯಲ್ಲಿ Rank ತೆಗೆದುಕೊಳ್ಳುವ ಸಾಧ್ಯತೆಯೇ ಇರಲಿಲ್ಲ. ಆದರೆ ನಾನಾಗಲೇ ಪಿ. ಯು. ಸಿ. ಪರೀಕ್ಷೆಯಲ್ಲಿ Rank ಪಡೆದಿದ್ದುದರಿಂದ ನನ್ನ ಗುರುಗಳೂ ಮತ್ತು ಹಿತೈಷಿಗಳು ನಾನು ಅಂತಿಮ ಬಿ.ಎಸ್ ಸಿ. ಪರೀಕ್ಷೆಯಲ್ಲಿ ಕೂಡ Rank ಪಡೆಯುವೆನೆಂದು ಖಂಡಿತವಾಗಿ ನಿರೀಕ್ಷೆ ಮಾಡುತ್ತಿದ್ದರು. ಆದರೆ ಅದು ಸಾಧ್ಯವಿಲ್ಲವೆಂದು ಹೇಳಿದರೆ ಅವರಲ್ಲಿ ಯಾರೂ ಒಪ್ಪುವ ಸಾಧ್ಯತೆಯೇ ಇರಲಿಲ್ಲ. ಈ ನಿರೀಕ್ಷೆ ಮುಂದೆ ನನಗೆ ದೊಡ್ಡ ಹೊರೆಯಾಗಲಿತ್ತು.

ಅಕ್ಯಾಡೆಮಿಯವರ ಔದಾರ್ಯ

ನಾನು ಮುಂದಿನ ವಾರ ಪುನಃ ಪ್ರಿನ್ಸಿಪಾಲರನ್ನು ಭೇಟಿಯಾಗಲು ಹೋದಾಗ ಅವರು ನಾನು ಬರುವುದನ್ನೇ ಕಾಯುತ್ತಿದ್ದರು. ಅವರು ತುಂಬಾ ಉತ್ಸಾಹದಿಂದ ಇನ್ನು ಮುಂದೆ ನನ್ನ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು ಅಕ್ಯಾಡೆಮಿಯೇ ಕೊಡುವುದಾಗಿ ಹೇಳಿಬಿಟ್ಟರು! ಆದರೆ ಅದರಲ್ಲಿ ಒಂದೇ ಒಂದು ಷರತ್ತು ಇತ್ತು. ಅದೇನೆಂದರೆ ನಾನು ನನ್ನ ವಿದ್ಯಾಭ್ಯಾಸ ಮುಗಿದ ನಂತರ ಅಕ್ಯಾಡೆಮಿಯ ಯಾವುದಾದರೂ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡಬೇಕಿತ್ತು. ನಿರುದ್ಯೋಗ ತುಂಬಾ ಹೆಚ್ಚಾಗಿದ್ದ ಆ ಕಾಲದಲ್ಲಿ ಈ ಷರತ್ತು ಒಂದು ವರವೇ ಆಗಿತ್ತು. ಏಕೆಂದರೆ ಅಕ್ಯಾಡೆಮಿಯಲ್ಲಿ ನನ್ನ ನೌಕರಿ ಗ್ಯಾರಂಟಿಯಾಗಿತ್ತು. ಪ್ರಿನ್ಸಿಪಾಲರು ಹೇಳಿದ ಸಮಾಚಾರ ತಿಳಿದು ನನ್ನ ಆನಂದಕ್ಕೆ ಮಿತಿಯೇ ಇರಲಿಲ್ಲ. ಏಕೆಂದರೆ ಅಕ್ಯಾಡೆಮಿಯವರ ಈ ಔದಾರ್ಯ ನನ್ನ ವಿದ್ಯಾಭ್ಯಾಸದ ಹೊರೆಯನ್ನು ನನ್ನ  ತಂದೆ ತಾಯಿಯವರಿಂದ ಸಂಪೂರ್ಣವಾಗಿ ದೂರಮಾಡಲಿತ್ತು. ಅಕ್ಯಾಡೆಮಿಯವರು ನನ್ನ ಸಾಧನೆಗೆ ಸೂಕ್ತ ಬಹುಮಾನ ನೀಡಿಬಿಡುವರೆಂದು ನಾನು ತಿಳಿದೆ . ಆದರೂ ನನ್ನ ಮನಸ್ಸಿನಲ್ಲಿ ಕೆಲವು ಅನುಮಾನಗಳು ಬಂದವು. ನಾನು ಅವುಗಳಿಗೆ ಸೂಕ್ತ ಉತ್ತರವನ್ನು ಅಕ್ಯಾಡೆಮಿಯವರಿಂದ ಪಡೆದುಕೊಳ್ಳುವಂತೆ ಪ್ರಿನ್ಸಿಪಾಲರನ್ನು ಕೇಳಿಕೊಂಡೆ:

೧. ಅಕ್ಯಾಡೆಮಿಯ ಕಾಲೇಜುಗಳಲ್ಲಿ ಸ್ನಾತಕೋತ್ತರ ತರಗತಿಗಳಿಲ್ಲವಾದ್ದರಿಂದ ನಾನು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅಭ್ಯಾಸ ಮಾಡಿದರೂ ನನಗೆ ನೀಡುವ ನೆರವು ಮುಂದುವರಿಯುವುದೇ?

೨. ಅಕ್ಯಾಡೆಮಿಯವರು ನೀಡುವ ನೆರವಿನಲ್ಲಿ ನನ್ನ ಹಾಸ್ಟೆಲ್ ಫೀ ಕೂಡ ಸೇರಿರುವುದೇ?

ಆಮೇಲೆ ಸ್ವಲ್ಪ ದಿನಗಳಲ್ಲೇ ಪ್ರಿನ್ಸಿಪಾಲರು ನನ್ನನ್ನು ಕರೆದು ಅಕ್ಯಾಡೆಮಿಯ ನೆರವಿನಲ್ಲಿ ನನ್ನ ಹಾಸ್ಟೆಲ್ ಫೀ ಕೂಡ ಸೇರಿದೆಯೆಂದು ಹೇಳಿಬಿಟ್ಟರು. ಅವರ ಪ್ರಕಾರ ನಾನು ಕೇವಲ ನನ್ನ ಬಟ್ಟೆಗಳಿಗಾಗಿ ಮಾತ್ರ ವೆಚ್ಚ ಮಾಡಬೇಕಾಗಿತ್ತು! ಅಲ್ಲದೇ ಅಕ್ಯಾಡೆಮಿಯ ನೆರವು ನಾನು ಯಾವುದೇ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದರೂ ನನ್ನ ಸಂಪೂರ್ಣ ವಿದ್ಯಾರ್ಥಿ ಜೀವನ ಕೊನೆಗೊಳ್ಳುವವರೆಗೂ ದೊರೆಯಲಿತ್ತು.

ನಾನು ನನ್ನ ತಂದೆ ತಾಯಿಯವರಿಗೆ ಅಕ್ಯಾಡೆಮಿಯವರು ನನ್ನ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಹೇಳಿದಾಗ ಅವರಿಗೆ ತುಂಬಾ ಆನಂದವಾಯಿತು. ನನ್ನ ಹಿತೈಷಿಗಳು ಅದರಲ್ಲೂ ಮುಖ್ಯವಾಗಿ ಶಂಕರರಾಯರು ಇದಕ್ಕಿಂತಲೂ ಉತ್ತಮ ನೆರವು ಯಾರಿಂದಲೂ ದೊರೆಯಲು ಸಾಧ್ಯವಿಲ್ಲವೆಂದು ಹೇಳಿ ಬಿಟ್ಟರು. ಏಕೆಂದರೆ ವಿದ್ಯಾಭ್ಯಾಸಕ್ಕೆ ನೆರವಿನೊಂದಿಗೆ ನಂತರದ ನೌಕರಿಯನ್ನೂ ಅಕ್ಯಾಡೆಮಿ ನೀಡಲಿತ್ತು. ಅಕ್ಯಾಡೆಮಿಯು ನನ್ನ ಸಾಧನೆಗೆ ತುಂಬಾ ಉನ್ನತ ಮಟ್ಟದ ನೆರವನ್ನೇ ನೀಡಲಿತ್ತು. ಇದಕ್ಕಿಂತ ಹೆಚ್ಚೇನನ್ನು ನಾನು ಬಯಸುವ ಪ್ರಶ್ನೆಯೇ ಇರಲಿಲ್ಲ. ನನ್ನ ಸಕಲ ಸಂಕಟಗಳೂ ಒಮ್ಮೆಗೇ ಕೊನೆಗೊಂಡಂತೆ ನನಗನ್ನಿಸಿತು. ಆದರೆ ಅದು ನಿಜವಾಯಿತೇ?

------- ಮುಂದುವರಿಯುವುದು-----


No comments: