Monday, May 25, 2020

ಬಾಲ್ಯ ಕಾಲದ ನೆನಪುಗಳು – ೮೯

ಆ ದಿನ ರಾತ್ರಿಯಲ್ಲಿ ನನಗೆ ಸರಿಯಾಗಿ ನಿದ್ದೆಯೇ ಬರಲಿಲ್ಲ. ಎರಡು ಮುಖ್ಯ ವಿಷಯಗಳು ನನ್ನ ತಲೆ ತಿನ್ನುತ್ತಿದ್ದವು. ಮೊದಲನೆಯದಾಗಿ ನಾನು ನನ್ನ ವಿದ್ಯಾಭ್ಯಾಸದ ಖರ್ಚಿನ ಹೊರೆಯನ್ನು ತಂದೆ ತಾಯಿಗಳ ಬೆನ್ನ ಮೇಲಿಂದ ಇಳಿಸಲಾಗದಿದ್ದುದು. ಎರಡನೆಯದು ನಾನು ನಾಲ್ಕನೇ ರಾಂಕ್ ಗಳಿಸಿದ್ದಕ್ಕೆ ಸೂಕ್ತ ಬಹುಮಾನವನ್ನು ಪಡೆಯಲಾಗದಿದ್ದುದು. ಈ ದೃಷ್ಟಿಯಲ್ಲಿ ನಾನು ಮುಂದೇನು ಮಾಡಬೇಕೆಂದು ಯೋಚಿಸುತ್ತಾ ಹೋದಾಗ ನನಗೊಂದು ಐಡಿಯಾ ಹೊಳೆಯಿತು.

ಚಂದ್ರಮೌಳಿರಾಯರ ಭೇಟಿ

ನಾನು ಈ ಮೊದಲೇ ಬರೆದಂತೆ ಹುಲಗಾರು ಚಂದ್ರಮೌಳಿರಾಯರು ಶೃಂಗೇರಿಯಲ್ಲಿ ಕಾಲೇಜು ಆರಂಭವಾಗುವುದಕ್ಕಾಗಿ ಹೋರಾಟ ಮಾಡಿದ ಮುಖ್ಯ ಮಹನೀಯರಲ್ಲಿ ಮೊದಲಿಗರಾಗಿದ್ದರು. ಅವರು ಹುಟ್ಟುಹಾಕಿದ ಭಾರತಿ ವಿದ್ಯಾ ಸಂಸ್ಥೆಯೇ ಮಣಿಪಾಲ ಅಕ್ಯಾಡೆಮಿಯೊಂದಿಗೆ ಸೇರಿಕೊಂಡು ಕಾಲೇಜನ್ನು ಪ್ರಾರಂಭಿಸಿತ್ತು. ಕಳೆದ ಒಂದು ವರ್ಷದಲ್ಲಿ ಆದ ಕಾಲೇಜಿನ ಬೆಳವಣಿಗೆ ಅವರಿಗೆ ತುಂಬಾ ಆನಂದವನ್ನು ತಂದಿತ್ತು. ಹಾಗೆಯೇ  ಅವರಿಗೆ ನಾನು ಮೊದಲ ವರ್ಷವೇ ನಾಲ್ಕನೇ Rank ಪಡೆಯುವ ಮೂಲಕ ಕಾಲೇಜಿನ ಕೀರ್ತಿ ಇಡೀ ಮಲೆನಾಡಿನಲ್ಲಿ ಮತ್ತು ಬೀರೂರು, ಕಡೂರು ಇತ್ಯಾದಿ ಊರುಗಳಲ್ಲಿ ಹಬ್ಬಲು ಕಾರಣನಾಗಿದ್ದೆನೆಂಬ ಅರಿವಿತ್ತು. ಪ್ರಿನ್ಸಿಪಾಲರು ಮತ್ತು ಶಂಕರರಾಯರು ನನ್ನ ಹತ್ತಿರ ಚಂದ್ರಮೌಳಿರಾಯರು ನನ್ನ ಬಗ್ಗೆ ತುಂಬಾ ಅಭಿಮಾನ ಹೊಂದಿದ್ದರೆಂದು ಹೇಳುತ್ತಲೇ ಇದ್ದರು. ಆದರೆ ನಾನವರನ್ನು ಅಲ್ಲಿಯವರೆಗೆ ಭೇಟಿ ಮಾಡಿಯೇ ಇರಲಿಲ್ಲ. ಈಗ ಪ್ರಿನ್ಸಿಪಾಲರು ನನಗೆ ಕೊಟ್ಟಿದ್ದ ಭರವಸೆಯಲ್ಲಿ ವಿಫಲರಾದ ಕಾರಣ ನಾನೊಮ್ಮೆ ರಾಯರನ್ನು ಭೇಟಿ ಮಾಡಿ ನನ್ನ ಪರಿಸ್ಥಿತಿಯನ್ನು ಅವರಿಗೆ ವಿವರಿಸುವುದು ಸೂಕ್ತವೆಂದು ನನಗನಿಸಿತು.

ಮಾರನೇ ದಿನ ಸಂಜೆ ನಾನು ಚಂದ್ರಮೌಳಿರಾಯರು ಶೃಂಗೇರಿಯಲ್ಲಿ ಬಂದಾಗ ಇರುತ್ತಿದ್ದ  ಅವರ ಇನ್ನೊಂದು ಮನೆಗೆ ಹೋದೆ. ಮಠದ ಹತ್ತಿರವೇ ಇದ್ದ ಈ ಮನೆಯಲ್ಲಿ ರಾಯರ ಕುಟುಂಬದ ಕೆಲವರು ವಾಸವಾಗಿದ್ದರು ಮತ್ತು ರಾಯರು ಹೆಚ್ಚು ಸಮಯವನ್ನು ಆ ಮನೆಯಲ್ಲೇ ಕಳೆಯುತ್ತಿದ್ದರು.  ನನ್ನನ್ನು ತುಂಬಾ ಆದರದಿಂದ ಬರಮಾಡಿಕೊಂಡ ರಾಯರು Rank ಪಡೆದುದಕ್ಕಾಗಿ  ನನ್ನನ್ನು ಅಭಿನಂದಿಸಿದರು. ಅಲ್ಲದೇ ಕಾಲೇಜಿನ ಮೊದಲ ವರ್ಷವೇ Rank ಪಡೆದು ನಾನು ಕಾಲೇಜಿನ ಪ್ರಸಿದ್ಧಿಗೆ ಕಾರಣನಾಗಿದ್ದೇನೆಂದೂ ಹೇಳಿದರು.

ನನ್ನ ನಡವಳಿಕೆ ನೋಡಿ ಅವರಿಗೆ ನಾನು ಯಾವುದೋ ಸಮಸ್ಯೆಯನ್ನು ಅವರ ಹತ್ತಿರ ಹೇಳಲು ಬಂದಿರುವೆನೆಂದು ಅನಿಸಿರಬೇಕು. ಅವರು ನನಗೆ ನನ್ನ ಸಮಸ್ಯೆ ಏನಿದ್ದರೂ ನಿಸ್ಸಂಕೋಚವಾಗಿ ತಿಳಿಸಲು ಹೇಳಿದರು. ನಾನು ಅವರಿಗೆ ಮಣಿಪಾಲ್ ಅಕ್ಯಾಡೆಮಿಯವರು ಹೇಗೆ ನನಗೆ ನೀಡಿದ ಭರವಸೆಯನ್ನು ಮುರಿದಿರುವರೆಂದು ವಿವರಿಸಿದೆ. ಅವರು ಕೂಡಲೇ ನನಗೆ ನಾನು ಏಕೆ ಅಕ್ಯಾಡೆಮಿಯವರ ಸಹಾಯ ಕೇಳಲು ಹೋದೆನೆಂದು ಪ್ರಶ್ನಿಸಿದರು. ಆಗ ನಾನು ಅವರಿಗೆ ನನ್ನ ಬಹು ಮುಖ್ಯ ಸಮಸ್ಯೆ ಎಂದರೆ ನನಗೆ ಹಾಸ್ಟೆಲ್ ಫೀ ಕಟ್ಟುವಷ್ಟು ಅನುಕೂಲ ಇಲ್ಲದಿರುವುದು ಎಂದು ಹೇಳಿದೆ. ಆಗ ಅವರು ನನಗೆ ಅಲ್ಲಿಂದ ಸೀದಾ ಹಾಸ್ಟೆಲಿಗೆ ಹೋಗಿ ಸೇರಿಕೊಳ್ಳ ಬೇಕೆಂದೂ ಮತ್ತು ವಾರ್ಡನ್ ಅವರಿಗೆ ನನ್ನ ಫೀ ಚಂದ್ರಮೌಳಿರಾಯರೇ ಕಟ್ಟುವರೆಂದು ಹೇಳಬೇಕೆಂದು ಕೂಡ ಹೇಳಿ ಬಿಟ್ಟರು.

ಎನ್.ಬಿ.ಎನ್. ಮೂರ್ತಿಯವರು

ನಾನು ಸ್ವಲ್ಪವೂ ತಡ ಮಾಡದೇ ಆಗ ಹಾಸ್ಟೆಲಿನ ವಾರ್ಡನ್ ಆಗಿದ್ದ ಎನ್.ಬಿ.ಎನ್ ಮೂರ್ತಿಯವರನ್ನು ಅವರ ಕೊಠಡಿಗೆ ಹೋಗಿ ಭೇಟಿಯಾದೆ. ನಾನು ಈ ಮೊದಲೇ ಬರೆದಂತೆ ಆ ವರ್ಷ ನಮ್ಮ ಕಾಲೇಜಿಗೆ ಆಗಮಿಸಿದ ಹೊಸ ಉಪನ್ಯಾಸಕರುಗಳಲ್ಲಿ ಎನ್ .ಬಿ .ಎನ್. ಮೂರ್ತಿಯವರು ಕೂಡ ಒಬ್ಬರಾಗಿದ್ದರು. ಇಂಗ್ಲೀಷಿನಲ್ಲಿ ಎಂ. ಏ. ಪದವೀಧರರಾದ ಮೂರ್ತಿಯವರು ಈ ಹಿಂದೆ ಅಕ್ಯಾಡೆಮಿಯೇ ಸ್ಥಾಪಿಸಿದ್ದ ಕಾರ್ಕಳದ  ಭುವನೇಂದ್ರ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ಬಂದವರಾಗಿದ್ದರು. ಅವರನ್ನು ಶೃಂಗೇರಿ ಕಾಲೇಜಿನಲ್ಲಿ ರೀಡರ್ ಮತ್ತು ಇಲಾಖೆಯ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿತ್ತು. ಹಾಗೆಯೇ ಸೀನಿಯಾರಿಟಿಯ ಆಧಾರದ ಮೇಲೆ ಅವರು ನಮ್ಮ ಕಾಲೇಜಿನ ವೈಸ್ ಪ್ರಿನ್ಸಿಪಾಲರೂ ಆಗಿದ್ದರು. ತುಂಬಾ ಆಕರ್ಷಕ ವ್ಯಕ್ತಿತ್ವ ಹೊಂದಿದ್ದ ಮೂರ್ತಿಯವರು ಅಷ್ಟೇ ಆಕರ್ಷಕವಾಗಿ ಉಪನ್ಯಾಸ ಮತ್ತು ಭಾಷಣಗಳನ್ನು ಮಾಡಬಲ್ಲವರಾಗಿದ್ದರು. ಅತಿ ಬೇಗನೆ ಮೂರ್ತಿಯವರು ನಮ್ಮ ಕಾಲೇಜಿನ ಅತ್ಯಂತ ಜನಪ್ರಿಯ ವ್ಯಕ್ತಿಯಾಗಿ ಹೊರಹೊಮ್ಮಿದ್ದರು.

ಆಗಿನ್ನೂ ಬ್ರಹ್ಮಚಾರಿಯೇ ಆಗಿದ್ದ ಮೂರ್ತಿಯವರು ಕಾಲೇಜು ಹಾಸ್ಟೆಲಿನ ಸಮೀಪದಲ್ಲೇ ಇದ್ದ ಒಂದು ಕೊಠಡಿಯಲ್ಲಿ ವಾಸಮಾಡುತ್ತಿದ್ದರು. ನಾನು ಅವರನ್ನು ಭೇಟಿ ಮಾಡಿ ಚಂದ್ರಮೌಳಿರಾಯರು  ನನಗೆ ಹಾಸ್ಟೆಲಿಗೆ ಸೇರಲು  ಹೇಳಿದ್ದಾರೆಂದೂ ಮತ್ತು ನನ್ನ ಫೀ ಅವರೇ ಕಟ್ಟುವುದಾಗಿ ಹೇಳಿದ್ದಾರೆಂದು ತಿಳಿಸಿದೆ. ಹಾಗೆಯೇ ನಾನು ರಾಯರ ಬಳಿ ಹೋಗುವಂತಹ ಪರಿಸ್ಥಿತಿ ಹೇಗೆ ಬಂತೆಂದು ವಿವರಿಸಿದೆ. ಮೂರ್ತಿಯವರಿಗೆ ನನ್ನ ಪರಿಸ್ಥಿತಿ ಸ್ಪಷ್ಟವಾಗಿ ಗೊತ್ತಾಯಿತು. ಆ ವೇಳೆಗೆ ರಾತ್ರಿಯಾಗಿ ಬಿಟ್ಟಿದ್ದರಿಂದ ಮೂರ್ತಿಯವರು ನನಗೆ ಮಾರನೇ ದಿನ ಸಂಜೆ ಹಾಸ್ಟೆಲಿಗೆ ಸೇರಿಕೊಳ್ಳುವಂತೆ ಸೂಚಿಸಿದರು. ಅಷ್ಟು ಮಾತ್ರವಲ್ಲ. ಚಂದ್ರಮೌಳಿರಾಯರಿಂದ ತಾವೇ ನನ್ನ  ಫೀ ನೇರವಾಗಿ ತೆಗೆದುಕೊಳ್ಳುವುದಾಗಿಯೂ ಮತ್ತು ನಾನು ಆ ಬಗ್ಗೆ ಚಿಂತೆ ಮಾಡಬೇಕಿಲ್ಲವೆಂದೂ ಹೇಳಿದರು. ಅವರ ಈ ಮಾತುಗಳು ನನಗೆ ತುಂಬಾ ನೆಮ್ಮದಿಯನ್ನು ನೀಡಿದವು.

ಕಾಲೇಜಿನಲ್ಲಿ ನಾನೊಬ್ಬ ಹೀರೋ ಆಗಿ ಬಿಟ್ಟೆ!

ನಾನು Rank ಪಡೆದ ನಂತರವೂ ಈ ಬಗೆಯ ಹೋರಾಟ ಮಾಡಬೇಕಾಗಿ ಬಂದಿದ್ದರೂ ಮತ್ತೂ ನೋವನ್ನು ಅನುಭವಿಸುತ್ತಿದ್ದರೂ ಬೇರೆ ಕೆಲವು ವಿಷಯಗಳಲ್ಲಿ ನನಗೆ ಸಂತೋಷ ತರುವ ವಾತಾವರಣ ಕಾಲೇಜಿನಲ್ಲಿ ಉಂಟಾಗಿತ್ತು. ಆ ವರ್ಷ ಹೊಸದಾಗಿ ಕಾಲೇಜು ಸೇರಿದ್ದ ವಿದ್ಯಾರ್ಥಿಗಳ ದೃಷ್ಟಿಯಲ್ಲಿ ನಾನೊಬ್ಬ ಹೀರೋ ಆಗಿ ಬಿಟ್ಟಿದ್ದೆ. ಅವರಲ್ಲಿ ತುಂಬಾ ಹುಡುಗರಿಗೆ ನನ್ನೊಡನೆ ಮಾತನಾಡಿ ನಾನು Rank ಪಡೆಯಲು ಯಾವ ರೀತಿಯ ತಯಾರಿ ಮಾಡಿಕೊಂಡೆನೆಂದು ತಿಳಿಯಬೇಕೆಂಬ ಕುತೂಹಲವಿತ್ತು..  ನಾನು ತುಂಬಾ ಹೆಮ್ಮೆಯಿಂದ ಅವರ ಪ್ರಶ್ನೆಗಳಿಗೆ ಉತ್ತರ ಕೊಡುತ್ತಾ ಅವರು ನನ್ನ ಸಾಧನೆಯ ಬಗ್ಗೆ ತೋರುತ್ತಿದ್ದ ಮೆಚ್ಚುಗೆಯನ್ನು ಮನಸ್ಸಿನಲ್ಲೇ ಅನುಭವಿಸುತ್ತಿದ್ದೆ. ಅವರಲ್ಲಿ ತುಂಬಾ ಹುಡುಗರು ಕಾಲೇಜ್ ಹಾಸ್ಟೆಲಿಗೆ ಸೇರಿಕೊಂಡಿದ್ದರು. ನಾನು ಹಾಸ್ಟೆಲಿಗೆ ಸೇರುವೆನೆಂಬ ಸಮಾಚಾರ ತಿಳಿದು ಅವರಿಗೆ ತುಂಬಾ ಸಂತೋಷವಾಗಿ ಬಿಟ್ಟಿತ್ತು.

ನನ್ನ ರೂಮ್ ಮೇಟ್  ಆಗಲು ಪೈಪೋಟಿ

ನಾನು ಮಾರನೇ ಸಂಜೆ ನನ್ನ ವಸ್ತುಗಳನ್ನೆಲ್ಲಾ ಒಂದು ಟ್ರಂಕ್ ಒಳಗೆ ಇಟ್ಟುಕೊಂಡು ಹಾಸ್ಟೆಲಿಗೆ ಹೋದೆ. ನಾನು ಬರುವುದನ್ನೇ ಕಾಯುತ್ತಿದ್ದ ಹುಡುಗರಲ್ಲಿ ಒಬ್ಬ ನನ್ನ ಕೈಯಿಂದ ಟ್ರಂಕ್ ಕಿತ್ತುಕೊಂಡು ನಾನು ಅವನ ರೂಮ್ ಮೇಟ್  ಆಗಬೇಕೆಂದು ಕೇಳಿಕೊಂಡ! ಅಷ್ಟರಲ್ಲಿ ಇನ್ನೊಬ್ಬ ವಿದ್ಯಾರ್ಥಿ ಅದು ಸಾಧ್ಯವಿಲ್ಲವೆಂದು ಹೇಳಿ ವಾರ್ಡನ್ ಮೂರ್ತಿಯವರು ನಾನು ಅವನ ರೂಮ್ ಮೇಟ್ ಎಂದು ಆಗಲೇ ಹೇಳಿಬಿಟ್ಟಿದ್ದಾರೆಂದು ತಿಳಿಸಿದ. ನನಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ಆದರೆ ನಾನು ಮನಸ್ಸಿನಲ್ಲೇ ನನ್ನ ರೂಮ್ ಮೇಟ್ ಆಗಲು ನಡೆಯುತ್ತಿದ್ದ ಪೈಪೋಟಿಯ ಆನಂದವನ್ನು ಅನುಭವಿಸಿದೆ. ಆ ವೇಳೆಗೆ ಅಲ್ಲಿಗೆ ಬಂದ ವಾರ್ಡನ್ ಮೂರ್ತಿಯವರು ನಾನು ಆ ಎರಡನೇ ವಿದ್ಯಾರ್ಥಿಯ ರೂಮ್ ಮೇಟ್ ಆಗಿ ಅವನ ರೂಮಿನಲ್ಲಿರಬೇಕೆಂದು ಹೇಳಿಬಿಟ್ಟರು. ಕೂಡಲೇ ಆ ವಿದ್ಯಾರ್ಥಿ ಮೊದಲ ವಿದ್ಯಾರ್ಥಿಯ ಕೈಯಿಂದ ಟ್ರಂಕ್ ಕಿತ್ತುಕೊಂಡು ನನ್ನನ್ನು ಅವನ ರೂಮಿಗೆ ಕರೆದುಕೊಂಡು ಹೋದ. ನನ್ನ ರೂಮ್ ಮೇಟ್  ಆಗಲು ನಡೆದ ಪೈಪೋಟಿ ಹೀಗೆ  ಮುಕ್ತಾಯಗೊಂಡಿತು.

ನಂಜುಂಡಸ್ವಾಮಿಯ ಮಹತ್ವಾಕಾಂಕ್ಷೆ

ಹೀಗೆ ನನ್ನ ರೂಮ್ ಮೇಟ್ ಆದ  ವಿದ್ಯಾರ್ಥಿಯ ಹೆಸರು ನಂಜುಂಡಸ್ವಾಮಿ ಎಂದಿತ್ತು. ಅವನು ತರೀಕೆರೆ ತಾಲೂಕಿನ ಲಿಂಗದಹಳ್ಳಿ ಎಂಬ ಊರಿನ ಹುಡುಗ. ನನ್ನನ್ನು ರೂಮ್ ಮೇಟ್ ಆಗಿ ಪಡೆದು  ತಾನೊಂದು ದೊಡ್ಡ ಹೋರಾಟದಲ್ಲಿ ಗೆದ್ದುಬಿಟ್ಟೆನೆಂಬ ತೃಪ್ತಿ ನಂಜುಂಡಸ್ವಾಮಿಯ ಮುಖದಲ್ಲಿ ಎದ್ದು ಕಾಣುತ್ತಿತ್ತು. ಅವನ ಪ್ರಕಾರ ಅವನೊಂದು ಸಾಧನೆ ಮಾಡಲೇ ಬೇಕೆಂಬ ಗುರಿ ಇಟ್ಟುಕೊಂಡಿದ್ದ. ಅವನ ಮಹತ್ವಾಕಾಂಕ್ಷೆ ಏನೆಂದರೆ ಮ್ಯಾಥಮ್ಯಾಟಿಕ್ಸ್ ಸಬ್ಜೆಕ್ಟಿನಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆಯುವುದು. ಅವನಿಗೆ ನಾನು ಮ್ಯಾಥಮ್ಯಾಟಿಕ್ಸ್ ಸಬ್ಜೆಕ್ಟಿನಲ್ಲಿ ನೂರಕ್ಕೆ  ನೂರು ಅಂಕಗಳನ್ನು ಪಡೆದಿರುವುದು ಗೊತ್ತಿತ್ತು. ಅವನಿಗೆ ನನ್ನಿಂದ ನಾನು ಹೇಗೆ ಆ ಸಾಧನೆಯನ್ನು ಮಾಡಿದೆನೆಂದು ತಿಳಿದುಕೊಳ್ಳಬೇಕಾಗಿತ್ತು, ಅವನ ಪ್ರಕಾರ ಆ ಗುರಿ ಸಾಧನೆಗೆ ನನ್ನನ್ನು ರೂಮ್ ಮೇಟ್ ಆಗಿ ಪಡೆದುದು ಮೊದಲ ಹೆಜ್ಜೆಯಾಗಿತ್ತು. ಇನ್ನು ಮುಂದಿನ ಮಾರ್ಗದರ್ಶನ ನನ್ನ ಜವಾಬ್ದಾರಿಯಾಗಿತ್ತು! ಆ ಜವಾಬ್ದಾರಿಯನ್ನು ನಾನು ಹೇಗೆ ನಿರ್ವಹಿಸಬೇಕೆಂದು ನಾನೇ ತೀರ್ಮಾನ ಮಾಡಬೇಕಿತ್ತು!

ನಾನು ನಂಜುಂಡಸ್ವಾಮಿಯ ಗುರಿ ಸಾಧನೆಗೆ ಮಾರ್ಗದರ್ಶನ ನೀಡಲು ಒಪ್ಪಕೊಂಡುಬಿಟ್ಟೆ. ಅಷ್ಟರಲ್ಲೇ ಉಳಿದ ವಿದ್ಯಾರ್ಥಿಗಳು ನನ್ನೊಡನೆ ತಮ್ಮ ಪರಿಚಯ ಮಾಡಿಕೊಳ್ಳಲು ಕಾಯುತ್ತಿರುವುದು ನನ್ನ ಕಣ್ಣಿಗೆ ಬಿತ್ತು. ಬೇರೆ ಬೇರೆ ಊರಿನಿಂದ ಬಂದಿದ್ದ ಆ ವಿದ್ಯಾರ್ಥಿಗಳ ಬಳಗ ಶೃಂಗೇರಿ ಕಾಲೇಜಿಗೆ ಸೇರಿ ಸಾಧನೆ ಮಾಡಬೇಕೆಂದು ತುಂಬಾ ಆಸಕ್ತಿ ಹೊಂದಿದ್ದರು. ಅವರೆಲ್ಲಾ ತುಂಬಾ ಉತ್ಸಾಹದಿಂದಿರುವುದು ನೋಡಿ ನನಗೆ ತುಂಬಾ ಸಂತೋಷವಾಯಿತು. ಹಾಸ್ಟೆಲಿನಲ್ಲಿ ವಿದ್ಯಾಭ್ಯಾಸಕ್ಕೆ ತುಂಬಾ ಅನುಕೂಲವಾದ ವಾತಾವರಣ ಇದ್ದುದನ್ನು ನಾನು ನೋಡಿದೆ. ಮಲ್ಲಿಕಾ ಮಂದಿರದ ಆಡಳಿತ ವರ್ಗ ಹಾಸ್ಟೆಲಿನ ಊಟ ಮತ್ತು ತಿಂಡಿಗಳ  ಗುಣಮಟ್ಟ ಮತ್ತು ರುಚಿ ತುಂಬಾ ಶ್ರೇಷ್ಠವಾಗಿರುವಂತೆ ನೋಡಿಕೊಳ್ಳುತ್ತಿತ್ತು. ಉಪನ್ಯಾಸಕರಲ್ಲಿ ಹೆಚ್ಚು ಮಂದಿ ಹಾಸ್ಟೆಲಿನಲ್ಲೇ ಊಟ ಮತ್ತು ತಿಂಡಿ ತೆಗೆದುಕೊಳ್ಳುತ್ತಿದ್ದರು. ಒಟ್ಟಿನಲ್ಲಿ ನನ್ನ ಸಮಸ್ಯೆಗಳೆಲ್ಲಾ ಬಗೆಹರಿದು ನಾನಿನ್ನು ನನ್ನ  ಬಿ. ಎಸ್ ಸಿ ಮೊದಲ ವರ್ಷದ ತರಗತಿಗಳ ಕಡೆಗೆ ಗಮನ ಹರಿಸಬಹುದೆಂದು ನನಗನ್ನಿಸಿತು.

------- ಮುಂದುವರಿಯುವುದು-----


No comments: