ಆಗ ಡಾಕ್ಟರ್ ರಾಮಚಂದ್ರರಾವ್
ಅವರು ಶೃಂಗೇರಿ ಪೇಟೆಯಲ್ಲಿ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲೆಲ್ಲಾ ಅತ್ಯಂತ ಜನಪ್ರಿಯ ಡಾಕ್ಟರ್ ಆಗಿದ್ದರು. ಎಲ್ ಏ ಎಂ ಎಸ್ ಕ್ವಾಲಿಫಿಕೇಷನ್ ಹೊಂದಿದ್ದ
ಅವರ ಹಸ್ತಗುಣವೂ ಅಷ್ಟೇ ಪ್ರಸಿದ್ಧವಾಗಿತ್ತು. ಶ್ರೀಮಂತ ಜಮೀನ್ದಾರರೇ ಆಗಿದ್ದ ರಾವ್ ಅವರ ಫೀ ಕೂಡ ತುಂಬಾ ಕಡಿಮೆಯೇ ಆಗಿತ್ತು. ಸುತ್ತಮುತ್ತಲಿನ ಶೃಂಗೇರಿ ಹಾಗೂ ಕೊಪ್ಪ ತಾಲೂಕಿನ ಯಾವುದೇ ಹಳ್ಳಿಗೆ ಮತ್ತು ಯಾವುದೇ ಸಮಯಕ್ಕೆ ರಾತ್ರಿ ಹಗಲೆನ್ನದೇ ಸೀರಿಯಸ್ ಕೇಸ್ ಇದ್ದರೆ ರಾವ್ ಅವರು ತಮ್ಮ ಮೋಟಾರ್ ಸೈಕಲ್ ಮೇಲೆ ಬಂದು ಬಿಡುತ್ತಿದ್ದರು. ರಾವ್ ಅವರ ಚಿಕಿತ್ಸೆ ಮತ್ತು ಅವರ ಸಲಹೆಗಳು ರೋಗಿಗಳ ಕುಟುಂಬಕ್ಕೆ ತುಂಬಾ ನೆಮ್ಮದಿ ನೀಡುತ್ತಿದ್ದವು. ರಾವ್ ಅವರು ತಮ್ಮ ಫೀ ಕೂಡಲೇ ಕೊಟ್ಟುಬಿಡಬೇಕೆಂದು ನಿರ್ಬಂಧ ಕೂಡ ಮಾಡಿರಲಿಲ್ಲ. ಆದರೆ ಫೀ ಬಾಕಿಯನ್ನು ನಿಯಮಿತವಾಗಿ ಪುಸ್ತಕದಲ್ಲಿ ಬರೆದಿಡುತ್ತಿದ್ದರು. ಹಾಗೆಯೇ ಬಾಕಿದಾರರಿಗೆ ಎಷ್ಟು ಫೀ ಬಾಕಿ ಇದೆಯೆಂದು ಆಗಾಗ ಒಂದು
ಪೋಸ್ಟ್ ಕಾರ್ಡಿನ
ಮೂಲಕ ತಿಳಿಸಿಬಿಡುತ್ತಿದ್ದರು. ಎಷ್ಟೋ ಬಾರಿ ಕಾರ್ಡ್ ಬೇರೆಯವರ ಕಣ್ಣಿಗೆ ಸಹ ಬೀಳುತ್ತಿದ್ದರಿಂದ ಬಾಕಿದಾರರು ಕೂಡಲೇ ಅದನ್ನು ತೀರಿಸಿಬಿಡುವ ಚಾನ್ಸ್ ಜಾಸ್ತಿಯಾಗಿತ್ತು! ಕಾರ್ಡುಗಳನ್ನು ತುಂಬಾ ನಮ್ರತೆಯಿಂದ ಬರೆಯಲಾಗುತ್ತಿತ್ತು.
ಕವಿಲ್ ಕೊಡಿಗೆ ಸುಬ್ಬರಾಯರು
ಡಾಕ್ಟರ್ ರಾವ್ ಅವರು ಶೃಂಗೇರಿಯಲ್ಲಿ ಆಗಿನ ಕಾಲದಲ್ಲಿ ಅಪರೂಪವಾದ ಒಂದು ಆರ್ ಸಿ ಸಿ ಕಟ್ಟಡದಲ್ಲಿ ನಿವಾಸ ಮತ್ತು ಕ್ಲಿನಿಕ್ ಹೊಂದಿದ್ದರು. ಭಾರತಿ ರಸ್ತೆಯ ಮಧ್ಯಭಾಗದಲ್ಲೇ ಇದ್ದ
ಆ ಕಟ್ಟಡ ಆ ಕಾಲದಲ್ಲಿ ನಮ್ಮ ಸಮಾಜದಲ್ಲೇ ಅತ್ಯಂತ ದೊಡ್ಡ ಶ್ರೀಮಂತ ಜಮೀನ್ದಾರರಾಗಿದ್ದ ಕವಿಲ್ ಕೊಡಿಗೆ ಸುಬ್ಬರಾಯರಿಗೆ ಸೇರಿತ್ತು. ಅವರಿಗೆ ಕೊಪ್ಪ ಮತ್ತು ಶಿವಮೊಗ್ಗೆಯಲ್ಲೂ ಇಂತಹ ಮನೆಗಳಿದ್ದವು. ಸುಬ್ಬರಾಯರಿಗೆ ಕೊಪ್ಪ ಮತ್ತು ಶೃಂಗೇರಿ ತಾಲೂಕಿನ ಅನೇಕ ಹಳ್ಳಿಗಳಲ್ಲಿ ಅಡಿಕೆ ತೋಟ ಮತ್ತು ಗದ್ದೆಗಳಿದ್ದುವು. ಅವುಗಳಲ್ಲಿ ಹೆಚ್ಚಿನವನ್ನು ಗೇಣಿಗೆ ಕೊಡಲಾಗಿತ್ತು. ಅವರ ಮನೆಯ ಹತ್ತಿರವಿದ್ದ ಜಮೀನುಗಳನ್ನು ಮಾತ್ರ ಸ್ವಂತ ವ್ಯವಸಾಯ ಮಾಡುತ್ತಿದ್ದರು. ಪ್ರತಿ ವರ್ಷವೂ ಗೇಣಿದಾರರಿಂದ ಗೇಣಿ ವಸೂಲು ಮಾಡುವುದೇ ಒಂದು ದೊಡ್ಡ ಕಾರ್ಯವಾಗಿತ್ತು.
ತುಂಬಾ ಸರಳ ಮತ್ತು ಮೃದು ಸ್ವಭಾವದ ಸುಬ್ಬರಾಯರು ಶೃಂಗೇರಿಯ ಶಾರದ ಬ್ಯಾಂಕಿನ ದೊಡ್ಡ ಷೇರುದಾರರಾಗಿದ್ದರು. ಆಮೇಲೆ ಆ ಬ್ಯಾಂಕ್ ಕರ್ನಾಟಕ ಬ್ಯಾಂಕಿನೊಡನೆ ವಿಲೀನವಾಯಿತು. ಶೃಂಗೇರಿ, ಕೊಪ್ಪ ಮತ್ತು ಶಿವಮೊಗ್ಗೆಯಲ್ಲಿ ಹೊಸದಾಗಿ ಬಂದ ಬ್ಯಾಂಕ್ ಮ್ಯಾನೇಜರ್ ಗಳು ಒಮ್ಮೆ ಕವಿಲ್ ಕೊಡಿಗೆಗೆ ಭೇಟಿ ಕೊಡುವುದು ಮಾಮೂಲಾಗಿತ್ತು. ಏಕೆಂದರೆ ಅವರಿಗೆ ತಮ್ಮ ಬ್ಯಾಂಕಿನಲ್ಲಿ ಈಗಾಗಲೇ ಇದ್ದ ಕವಿಲ್ ಕೊಡಿಗೆ ಕುಟುಂಬದ ಠೇವಣಿಗಳನ್ನು ಉಳಿಸಿಕೊಳ್ಳುವುದು ಮತ್ತು ಹೊಸ ಠೇವಣಿಗಳು ಬರುವಂತೆ ನೋಡಿಕೊಳ್ಳುವುದು ತುಂಬಾ ಮುಖ್ಯವಾಗಿತ್ತು.
ಕವಿಲ್ ಕೊಡಿಗೆ
ಕೊಪ್ಪ-ಶೃಂಗೇರಿ ರಸ್ತೆಯಲ್ಲಿರುವ ಅಡ್ಡಗದ್ದೆ ಎಂಬ ಊರಿನ ಹತ್ತಿರವಿದೆ. ಎಷ್ಟೋ ಮಂದಿ ಸರ್ಕಾರೀ ಅಧಿಕಾರಿಗಳು ಮತ್ತು ಕನ್ನಡ ಸಾಹಿತಿಗಳು ಕವಿಲ್ ಕೊಡಿಗೆಗೆ ಅತಿಥಿಗಳಾಗಿ ಬರುತ್ತಿದ್ದರು. ಹಾಗೆ ಭೇಟಿ ನೀಡಿದ ವ್ಯಕ್ತಿಗಳಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದ ಡಾಕ್ಟರ್ ಶಿವರಾಮ ಕಾರಂತರೂ ಒಬ್ಬರಾಗಿದ್ದರು. ಸುಬ್ಬರಾಯರ ಕುಟುಂಬ ಆತಿಥ್ಯಕ್ಕೆ ಹೆಸರಾದ ಕುಟುಂಬವಾಗಿತ್ತು. ಪ್ರಾಯಶಃ ಖಾಸಗಿ ಜಲ ವಿದ್ಯುತ್ ಉತ್ಪಾದನೆಯಲ್ಲಿ ಸುಬ್ಬರಾಯರು ಮೈಸೂರು ರಾಜ್ಯಕ್ಕೇ ಮೊದಲಿಗರಾಗಿದ್ದರು. ಇನ್ನೂ ಶೃಂಗೇರಿ ಪೇಟೆಗೆ ವಿದ್ಯುಚ್ಛಕ್ತಿ ಬರುವ ಮೊದಲೇ ಸುಬ್ಬರಾಯರ ಮನೆಯಲ್ಲಿ ವಿದ್ಯುತ್ ದೀಪಗಳು ಆಗಮಿಸಿದ್ದವು. ಸುಬ್ಬರಾಯರು ತಮ್ಮ ಮನೆಯ ಹತ್ತಿರವೇ ಇದ್ದ ಒಂದು ಸಣ್ಣ ಜಲಪಾತದ ಧಾರೆಯಿಂದ ಡೈನಾಮೊ ಚಾಲನೆ ಮಾಡಿ ವಿದ್ಯುಚ್ಛಕ್ತಿ
ಉತ್ಪಾದಿಸಿ ಒಂದು ದಾಖಲೆಯನ್ನೇ ಬರೆದುಬಿಟ್ಟಿದ್ದರು. ಇದಲ್ಲದೇ
ತಮ್ಮ ಮನೆಯಲ್ಲೇ ಒಂದು ಸಣ್ಣ ಬತ್ತದ ಗಿರಣಿ ಸ್ಥಾಪಿಸಿ ಅದರಿಂದ ಅಕ್ಕಿ ಮಾಡುತ್ತಿದ್ದರು.
ಸುಬ್ಬರಾಯರ ಐಶ್ವರ್ಯ ಎಷ್ಟಿರಬಹುದೆಂಬ ಬಗ್ಗೆ ಅನೇಕ ಕಥೆಗಳು ಪ್ರಚಲಿತವಾಗಿದ್ದವು. ಆದರೆ ಯಾರಿಗೂ ಖಚಿತವಾಗಿ ಅದೆಷ್ಟಿರಬಹುದೆಂಬ ಅರಿವಿರಲಿಲ್ಲ. ನಾವು ಕೇಳಿದ ಒಂದು ತುಂಬಾ ಸಿಲ್ಲಿಯಾದ ಕಥೆಯ ಪ್ರಕಾರ ಸುಬ್ಬರಾಯರು ಆದಾಯ ತೆರಿಗೆಯಿಂದ ತಪ್ಪಿಸಿಕೊಳ್ಳಲು ಪ್ರತಿಯೊಂದು ಬ್ಯಾಂಕಿನ ಶಾಖೆಯಲ್ಲೂ ೯೯,೦೦೦ ರೂಪಾಯಿ ಡೆಪಾಸಿಟ್ ಇಡುತ್ತಿದ್ದರಂತೆ! ಏಕೆಂದರೆ ಡೆಪಾಸಿಟ್ ಒಂದು ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಾಗಿದ್ದರೆ ತೆರಿಗೆ ಬೀಳುತ್ತಿತ್ತಂತೆ. ಆಗಿನ್ನೂ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ನಮಗೆ ಸುಬ್ಬರಾಯರ ಒಟ್ಟು ಐಶ್ವರ್ಯವನ್ನು ಕಂಡು ಹಿಡಿಯುವ ಒಂದು ಸುಲಭೋಪಾಯ ಹೊಳೆದು ಬಿಟ್ಟಿತು!
ತುಂಬಾ ಸರಳವಾದ ಈ ಉಪಾಯವೇನೆಂದರೆ ಕೊಪ್ಪ, ಶೃಂಗೇರಿ ಮತ್ತು ಶಿವಮೊಗ್ಗೆಯಲ್ಲಿದ್ದ ಒಟ್ಟು ಬ್ಯಾಂಕ್ ಶಾಖೆಗಳ ಸಂಖ್ಯೆಯೊಡನೆ ೯೯,೦೦೦ ರೂಪಾಯಿಗಳನ್ನು ಗುಣಿಸಿ ಬಿಡುವುದು! ಒಹ್! ಎಂತಹಾ ಮೇಧಾವಿ ಮತ್ತು ಅದ್ಬುತ ಉಪಾಯ ಅದಾಗಿತ್ತು! ಆದರೆ ಕೇವಲ ಒಂದು ಮಾಹಿತಿಯ ಕೊರತೆಯಿಂದ ನಮ್ಮ ಉಪಾಯ ಭಗ್ನವಾಗಿ ಬಿಟ್ಟಿತು. ನಮಗೆ ಕೊಪ್ಪ ಮತ್ತು ಶೃಂಗೇರಿಯಲ್ಲಿ ಎಷ್ಟು ಬ್ಯಾಂಕ್ ಶಾಖೆಗಳು ಇರುವವೆಂಬ ಅರಿವಿತ್ತು. ಆದರೆ ದುರದೃಷ್ಟವಶಾತ್ ಶಿವಮೊಗ್ಗೆಯ ಬ್ಯಾಂಕ್ ಶಾಖೆಗಳ ಸಂಖ್ಯೆ ನಮಗೆ ದೊರೆಯಲೇ ಇಲ್ಲ!
ಸುಬ್ಬರಾಯರ ಐಶ್ವರ್ಯದ ಬಗ್ಗೆ ಇನ್ನೂ ಒಂದು ಕಥೆ ಪ್ರಚಲಿತದಲ್ಲಿತ್ತು. ಅದರ ಪ್ರಕಾರ ಸುಬ್ಬರಾಯರು ತಮ್ಮ ಅಪಾರ ಐಶ್ವರ್ಯದ ಸ್ವಲ್ಪ ಭಾಗವನ್ನು ಚಿನ್ನದ ಇಟ್ಟಿಗೆಯಾಗಿ ಪರಿವರ್ತಿಸಿ ಮನೆಯಲ್ಲೇ ಕೂಡಿಟ್ಟಿದ್ದರಂತೆ! ಈ ಇಟ್ಟಿಗೆಗಳನ್ನು ತಮ್ಮ ಪುರಾತನ ಮನೆಯ ಗೋಡೆಗಳಲ್ಲಿ ಮತ್ತು ನೆಲದಲ್ಲಿ ಹೂತು ಬಿಟ್ಟಿದ್ದರಂತೆ! ಈ ಕಥೆ ಎಷ್ಟು ಪ್ರಚಾರವಾಯಿತೆಂದರೆ ಕೇಂದ್ರ ಸರ್ಕಾರದ ಅಬಕಾರಿ ಇಲಾಖೆಯವರೂ ಅದನ್ನು ನಂಬಿ ಆಗಾಗ ಸುಬ್ಬರಾಯರ ಮನೆಯ ಮೇಲೆ ದಾಳಿ ಮಾಡತೊಡಗಿದರಂತೆ. ಈ ಅಧಿಕಾರಿಗಳು ರಾಯರ ಮನೆಯ ಗೋಡೆ ಮತ್ತು ನೆಲವನ್ನು ಅಗೆದು ಅಡಗಿಸಿಟ್ಟಿರುವರೆನ್ನಲಾದ ಚಿನ್ನದ ಇಟ್ಟಿಗೆಗಳಿಗಾಗಿ ಹುಡುಕಾಡುತ್ತಿದ್ದರಂತೆ. ಇಂತಹ ಒಂದು ದಾಳಿ ನಾನು ಶೃಂಗೇರಿ ಕಾಲೇಜಿನಲ್ಲಿ ಓದುತ್ತಿರುವಾಗಲೇ ನಡೆಯಿತೆಂದು ನಾನು ಕೇಳಿದ್ದೆ. ಆದರೆ ಪಾಪ! ಒಂದೇ ಒಂದು ಚಿನ್ನದ ಇಟ್ಟಿಗೆ ಅಧಿಕಾರಿಗಳ ಕಣ್ಣಿಗೆ ಬೀಳಲಿಲ್ಲವಂತೆ!
ಸುಬ್ಬರಾಯರಿಗೆ ಈ ದಾಳಿಗಳು ತುಂಬಾ ತಮಾಷೆಯಾಗಿ ಕಾಣುತ್ತಿದ್ದವಂತೆ. ಅಲ್ಲದೇ ಚಿನ್ನದ ಇಟ್ಟಿಗೆ ಕೂಡಿಡುವ ಮಟ್ಟದವರು ತಾವು ಎಂದು ಸರ್ಕಾರವೇ ತಿಳಿದಿರುವುದು ತಮಗೆ ಒಂದು ದೊಡ್ಡ ಗೌರವ ಎಂದು ಅವರು ದಾಳಿಗೆ ಬಂದ ಅಧಿಕಾರಿಗಳಿಗೆ ಹೇಳತೊಡಗಿದರಂತೆ! ಎಷ್ಟೋ ಬಾರಿ ಅವರಿಗೆ ತಮ್ಮ ಪೂರ್ವಜರು ನಿಜವಾಗಿ ಮನೆಯಲ್ಲಿ ಚಿನ್ನದ ಇಟ್ಟಿಗೆಗಳನ್ನು ಹೂತಿಟ್ಟಿರಬಹುದೇ ಎಂದೂ ಅನುಮಾನವಾಗತೊಡಗಿತಂತೆ! ಆದರೆ ಅವರಿಗೆ ದಾಳಿಯ ನಂತರ ಮನೆ ರಿಪೇರಿ ಮಾಡಿಸುವುದೇ ಒಂದು ದೊಡ್ಡ ಕೆಲಸವಾಯಿತಂತೆ. ಆದರೂ ಬೇಸರ ಮಾಡದೇ ಮನೆಯಲ್ಲೇ ಅಧಿಕಾರಿಗಳಿಗೆ ಔತಣದ ಊಟ ಹಾಕಿ ಶೃಂಗೇರಿ ಮಠದ ಭೇಟಿಗೂ ಏರ್ಪಾಟು ಮಾಡುತ್ತಿದ್ದರಂತೆ!
ಡಾಕ್ಟರ್
ಹುಲಸೆ ಮಂಜಪ್ಪ ಗೌಡ
ಆಗಿನ್ನೂ ತರುಣ ಡಾಕ್ಟರ್ ಆಗಿದ್ದ ಹುಲಸೆ ಮಂಜಪ್ಪ ಗೌಡರಿಗೆ ಕೂಡ ಒಳ್ಳೆ ಪ್ರಾಕ್ಟೀಸ್ ಇತ್ತು. ಶ್ರೀಮಂತ ಕೃಷಿಕ ಮನೆತನದ ಗೌಡರು ತುಂಬಾ ಶ್ರೀಮಂತ ಜಮೀನ್ದಾರರೂ ಮತ್ತು ರಾಜಕೀಯ ವ್ಯಕ್ತಿಯಾಗಿದ್ದ ಹಾಲಪ್ಪ ಗೌಡ ಎಂಬುವವರ ಏಕಮಾತ್ರ ಪುತ್ರಿಯನ್ನು ವಿವಾಹವಾಗಿದ್ದರು. ಕಾಲೇಜು ಪ್ರಾರಂಭವಾದ ವರ್ಷವೇ ಮಂಜಪ್ಪ ಗೌಡರು ಹೊಸದಾಗಿ ಒಂದು ಆರ್ ಸಿ ಸಿ ಬಂಗಲೆಯನ್ನು ಕಟ್ಟಿಸಿದರು. ಆ ಕಾಲಕ್ಕೆ ಅದು ಶೃಂಗೇರಿಯಲ್ಲೇ ಹೆಚ್ಚು ಸುಂದರವಾದ ಕಟ್ಟಡವಾಗಿತ್ತು.
ನಾನು ಶೃಂಗೇರಿಯಲ್ಲಿ ಓದಲು
ಹೋಗುವ ಮೊದಲು ಡಾಕ್ಟರ್ ಹೆಗ್ಡೆ ಎನ್ನುವವರು ತುಂಬಾ ಪ್ರಸಿದ್ಧ ಡಾಕ್ಟರ್ ಆಗಿದ್ದರಂತೆ. ಆದರೆ ಅವರು ಬೇಗನೆ ತೀರಿಕೊಂಡಿದ್ದರು. ದಕ್ಷಿಣ ಕನ್ನಡದ ಭಂಟ ಸಮಾಜಕ್ಕೆ ಸೇರಿದ್ದ ಹೆಗ್ಡೆಯವರು ಶೃಂಗೇರಿ ಪೇಟೆಯ ಮಧ್ಯದಲ್ಲಿ ತಮ್ಮ ಮಗನ ಹೆಸರಿನಲ್ಲಿ ಪ್ರೇಮ ಮೆಡಿಕಲ್ ಹಾಲ್ ಎಂಬ ಔಷದಿ ಅಂಗಡಿ ತೆರೆದಿದ್ದರು. ಆಗ ಶೃಂಗೇರಿಯಲ್ಲಿದ್ದ ಒಂದೇ ಒಂದು ಔಷದಿ ಅಂಗಡಿ ಅದಾಗಿತ್ತು. ಅವರ ಮಕ್ಕಳು ನಮ್ಮ ಪುಟ್ಟಣ್ಣನ ಆತ್ಮೀಯ ಸ್ನೇಹಿತರಾಗಿದ್ದರು. ಅವರ ಮಗ ತಾರಾನಾಥ ಹೆಗ್ಡೆ ಕಾಲೇಜಿನಲ್ಲಿ ನನ್ನ ಕ್ಲಾಸ್ ಮೇಟ್ ಆಗಿದ್ದ.
ಶೃಂಗೇರಿ ಪೇಟೆಯ ವ್ಯಾಪಾರಿ
ವರ್ಗ
ಶೃಂಗೇರಿ ಪೇಟೆಯ ವ್ಯಾಪಾರಿಗಳಲ್ಲಿ ಮೊದಲು ನೆನಪಿಗೆ ಬರುವುದು ದುಬಾರಿ ದಾಸಪ್ಪ ಶೆಟ್ಟಿ & ಸನ್ಸ್ ಅವರದ್ದು. ದಾಸಪ್ಪ ಶೆಟ್ಟರು ತಮ್ಮ ಅಂಗಡಿಯ ಮಾಲುಗಳನ್ನು ಅತ್ಯಂತ ದುಬಾರಿ ಬೆಲೆಯಲ್ಲಿ ಮಾರುತ್ತಿದ್ದರಿಂದ ಅವರ ಅಂಗಡಿಗೆ ದುಬಾರಿ ದಾಸಪ್ಪ ಶೆಟ್ಟರ ಅಂಗಡಿ ಎಂದೇ ಹೆಸರು ಬಂದು ಬಿಟ್ಟಿತ್ತು. ಆದರೂ ಅವರ ಅಂಗಡಿ ವ್ಯವಹಾರ ಚೆನ್ನಾಗಿಯೇ ನಡೆಯುತ್ತಿತ್ತು. ನಾನು ಕಾಲೇಜಿಗೆ ಹೋಗುವ ವೇಳೆಗೆ ದಾಸಪ್ಪ ಶೆಟ್ಟರು ತೀರಿಕೊಂಡಿದ್ದರು. ಅವರ ಮಕ್ಕಳ ಕಾಲದಲ್ಲಿ ದುಬಾರಿ ಹೆಸರು ಮಾತ್ರ ಉಳಿದು ವ್ಯವಹಾರ ತೀರಾ ಕೆಳಗೆ ಬಿದ್ದು ಹೋಗಿತ್ತು.
"ಬಿಸ್ಕತ್ ಭಟ್ಟರು" ಎಂಬ ಬ್ರ್ಯಾಂಡ್ ಮೂಲಕ ಹೆಸರು ಪಡೆದಿದ್ದ ಇನ್ನೊಂದು ಅಂಗಡಿ ಕೂಡ ಒಳ್ಳೆ ಹೆಸರು ಪಡೆದಿದ್ದು ವ್ಯವಹಾರವೂ ತುಂಬಾ ಚೆನ್ನಾಗಿ ನಡೆಯುತ್ತಿತ್ತು. ನಗು ಮುಖದ ಈ ಎರಡು ತರುಣ ಅಣ್ಣ-ತಮ್ಮಂದಿರ ಜೋಡಿ ಮನೆಯಲ್ಲೇ ಬ್ರೆಡ್ ಮತ್ತು ಬಿಸ್ಕತ್ ತಯಾರಿಸುತ್ತಿತ್ತು. ಇವರ ಅಂಗಡಿಯಲ್ಲಿ ಪುಸ್ತಕಗಳನ್ನೂ ಮಾರಾಟ ಮಾಡುತ್ತಿದ್ದರು. ನೋಡಲು ತುಂಬಾ ಅಂದವಾಗಿದ್ದ ಈ ಜೋಡಿ ಭಟ್ಟರು ಮಾತಿನಲ್ಲೂ ಬೆಣ್ಣೆಯಷ್ಟೇ ಮೃದು ಮತ್ತು ನಯವಾಗಿ ದುಬಾರಿ ಬೆಲೆಯನ್ನು ಹೇಳಿ ವಸೂಲು ಮಾಡುವ ಜಾಣತನ ಹೊಂದಿದ್ದರು! ಅವರ ಈ ಜಾಣತನಕ್ಕೆ ಹಿಂದಿಯಲ್ಲಿ
“ಮೀಟಿಚೂರಿ ಟೆಕ್ನಿಕ್” ಎಂದು ಹೇಳಬಹುದಾಗಿತ್ತು. ನಾವು ಮುಂದೆ ಡಿಗ್ರಿ ತರಗತಿಗೆ ಬಂದಾಗ
ಭಟ್ಟರ ಮೂಲಕ ಕೆಲವು ಪುಸ್ತಕಗಳನ್ನು ಆರ್ಡರ್ ಮಾಡಿ ಸರಿಯಾಗಿ ಕೆತ್ತಿಸಿಕೊಂಡಿದ್ದೆವು.
ಟಿ ಕೆ ಶ್ರೀನಿವಾಸ ಶೆಟ್ಟಿ & ಸನ್ಸ್ ಎಂಬ ಪುಸ್ತಕದ ಅಂಗಡಿ ತುಂಬಾ ಪ್ರಸಿದ್ಧಿ ಪಡೆದ ಒಂದು ಹಳೆಯ ಅಂಗಡಿಯಾಗಿತ್ತು. ನಮ್ಮೂರಿನಂತಹ ಹಳ್ಳಿಗಳಲ್ಲೂ ಈ ಅಂಗಡಿಯ ಹೆಸರು ಮನೆಮಾತಾಗಿತ್ತು. ದುರದೃಷ್ಟವಶಾತ್ ನಾನು ಕಾಲೇಜು ಓದುವ ವೇಳೆಗೆ ಈ ಅಂಗಡಿಯ ವ್ಯವಹಾರ ತೀರಾ ಬಿದ್ದು ಹೋಗಿ ಮುಚ್ಚಿ ಹೋಗುವ ಸ್ಥಿತಿ ತಲುಪಿತ್ತು. ಶೆಟ್ಟರ ಹಿರಿಯ ಮಗ ತುಂಬಾ ಚೆನ್ನಾಗಿ ಭಜನೆ ಮಾಡುತ್ತಿದ್ದುದು ನೆನಪಿಗೆ ಬರುತ್ತಿದೆ. ಆದರೆ ಆಧ್ಯಾತ್ಮದತ್ತ ಒಲವಿದ್ದ ಅವರಿಗೆ ವ್ಯವಹಾರದಲ್ಲಿ ಆಸಕ್ತಿ ಇರಲಿಲ್ಲ.
ಕಟ್ಟೆ ಬಾಗಿಲಿನಲ್ಲಿದ್ದ ಎಂ ಶ್ರೀನಿವಾಸ ಶೆಟ್ಟಿ & ಸನ್ಸ್ ತುಂಬಾ ದೊಡ್ಡ ಮಟ್ಟದ ಕಿರಾಣಿ ಅಂಗಡಿ ಹೊಂದಿದ್ದರು. ಮುಂದೆ ಅವರ ಮಗಳನ್ನು ನಮ್ಮ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕರೊಬ್ಬರಿಗೆ ಕೊಟ್ಟು ಮದುವೆ ಮಾಡಲಾಯಿತು. ಬಜೆ ರಾಮರಾವ್ ಎಂಬುವರದೂ ಒಂದು ದೊಡ್ಡ ಕಿರಾಣಿ ಅಂಗಡಿಯಾಗಿತ್ತು. ಮುಂದೆ ಅವರ ಮಗಳನ್ನು ನಮ್ಮ ಕೆಮಿಸ್ಟ್ರಿ ಉಪನ್ಯಾಸಕರಾದ ಶಾನುಭೋಗ್ ಅವರಿಗೆ ಕೊಟ್ಟು ಮದುವೆ ಮಾಡಲಾಯಿತು. ಅಣ್ಣಯ್ಯ ಪಂಡಿತ್ ಎಂಬುವರು ಒಂದು ದೊಡ್ಡ ಜವಳಿ ಅಂಗಡಿ ನಡೆಸುತ್ತಿದ್ದರು. ಅವರ ಮಗ ವಿವೇಕಾನಂದ ಪಂಡಿತ್ ನನ್ನ ಕ್ಲಾಸ್ ಮೇಟ್ ಮತ್ತು ಗೆಳೆಯನೂ ಆಗಿದ್ದ. ಪದ್ಮರಾಜ ಶೆಟ್ಟಿ & ಸನ್ಸ್ ಒಂದು ದೊಡ್ಡ ಚಿನ್ನ ಮತ್ತು ಬೆಳ್ಳಿಯ ಆಭರಣಗಳ ಅಂಗಡಿಯಾಗಿತ್ತು. ಅದರ ಮಾಲೀಕರ ಕುಟುಂಬ ಜೈನ್ ಸಮಾಜಕ್ಕೆ ಸೇರಿತ್ತು.
ನನ್ನ ಕ್ಲಾಸ್ ಮೇಟ್ ಲಲಿತಾಂಬ ಅವರ ತಂದೆ ಶಿವಯ್ಯನವರು ತಾಂಡವಮೂರ್ತಿ ಎನ್ನುವರೊಡನೆ ಪಾಲುಗಾರಿಕೆಯಲ್ಲಿ ಒಂದು ದೊಡ್ಡ ಕಿರಾಣಿ ಅಂಗಡಿ ನಡೆಸುತ್ತಿದ್ದರು. ತಾಂಡವಮೂರ್ತಿಯವರು ನಮ್ಮ ಕಾಲೇಜಿಗೆ ಹೋಗುವ ದಾರಿಯಲ್ಲಿದ್ದ ಗುಡ್ಡವನ್ನು ಅಗೆದು ಒಂದು ತಲೆ ಬುಡ ಅರ್ಥವಾಗದಂತ ಕಟ್ಟಡವನ್ನು ಕಟ್ಟಿಸಿದ್ದರು. ಒಂದು ಸರಿಯಾದ ಆಕಾರವೂ ಇಲ್ಲದೆ ಉದ್ದಕ್ಕೆ ಹರಡಿಕೊಂಡಿದ್ದ ಈ ಕಟ್ಟಡವನ್ನು ನಿತ್ಯವೂ ನೋಡುವಾಗ ನಮ್ಮ ಕಣ್ಣುಗಳಿಗೆ ಒಂದು ಬಗೆಯ ಹಿಂಸೆಯಾಗುತ್ತಿತ್ತು. ಆ ಕಟ್ಟಡದ ಉಪಯೋಗ ಏನೆಂದು ಯಾರಿಗೂ ಊಹಿಸಲೂ ಸಾಧ್ಯವಿರಲಿಲ್ಲ. ನಮ್ಮ ಕಾಲೇಜು ವಿದ್ಯಾರ್ಥಿಗಳು ಅದಕ್ಕೆ ತಮಾಷೆಯಾಗಿ ತಾಂಡವಮೂರ್ತಿ ಕುದುರೆ ಲಾಯ ಎಂದು ಕರೆಯುತ್ತಿದ್ದರು!
ಮಲ್ಲಿಕಾ ಮಂದಿರ
ಕಟ್ಟೆಯ ಬಾಗಿಲಿನ ಹತ್ತಿರವೇ ಇದ್ದ ಮಲ್ಲಿಕಾ ಮಂದಿರ ಆಗಿನ ಶೃಂಗೇರಿ ಪೇಟೆಯಲ್ಲಿ ಅತಿ ಉತ್ತಮ ಮತ್ತು ಹೆಸರಾಂತ ಹೋಟೆಲ್ ಆಗಿತ್ತು. ತನ್ನದೇ ಬ್ರ್ಯಾಂಡ್ ಹೊಂದಿದ್ದ ಈ ಹೋಟೆಲ್ ಶುಚಿಗೆ ಮತ್ತು ರುಚಿ ರುಚಿ ತಿಂಡಿಗಳಿಗೆ ಪ್ರಸಿದ್ಧವಾಗಿತ್ತು. ಅವಕಾಶ ಸಿಕ್ಕಿದಾಗ ನಾವು ಈ ಹೋಟೆಲಿನ ತಿಂಡಿಯ ರುಚಿ ಸವಿದೇ ಬಿಡುತ್ತಿದ್ದೆವು. ಪೇಟೆಯ ಬೇರೆ ಯಾವುದೇ ಹೋಟೆಲ್ ಮಲ್ಲಿಕಾ ಮಂದಿರದೊಂದಿಗೆ ಪೈಪೋಟಿ ಮಾಡಲು ಸಾಧ್ಯವಿರಲಿಲ್ಲ.
ಶ್ರೀಕಂಠ ಭಟ್ ಮತ್ತು ನಂಜುಂಡ ಭಟ್
ಪೇಟೆಯ ನಡುವೆ ಇದ್ದ ಕೊಡೂರು ಶಾಮಭಟ್ಟರ ಮನೆ ಕೂಡ ಶೃಂಗೇರಿ ಪೇಟೆಯ ಒಂದು ಲ್ಯಾಂಡ್ ಮಾರ್ಕ್ ಆಗಿತ್ತು. ಶಾಮ ಭಟ್ಟರು ದೊಡ್ಡ ವಿದ್ವಾಂಸರೂ ಮತ್ತು ಸಂಸ್ಕೃತ ಪಂಡಿತರೂ ಆಗಿದ್ದರಂತೆ. ಶ್ರೀಕಂಠ ಭಟ್ ಮತ್ತು ನಂಜುಂಡ ಭಟ್ ಎನ್ನುವವರು ಶಾಮ ಭಟ್ಟರ ಅವಳಿ ಜವಳಿ ಮಕ್ಕಳು. ನಾನು ಈಗಾಗಲೇ ನಂಜುಂಡ ಭಟ್ಟರು ನಮ್ಮೂರಿನಲ್ಲಿ ಜಮೀನು ಖರೀದಿ ಮಾಡಿದ್ದರ ಬಗ್ಗೆ ಬರೆದಿದ್ದೇನೆ. ಆದರೆ ನಾನು ನೋಡುವಾಗ ಅವರಿನ್ನೂ ಶೃಂಗೇರಿಯಲ್ಲೇ ಇದ್ದರು. ಒಂದು ಕಾಲದಲ್ಲಿ ಅಂಬಾ ಭವನ ಎಂಬ ಪ್ರಸಿದ್ಧ
ಹೋಟೆಲ್ ಇದ್ದ ಕಟ್ಟಡ ಭಟ್ಟರ ಕುಟುಂಬಕ್ಕೆ ಸೇರಿತ್ತು. ಶ್ರೀಕಂಠ ಭಟ್ಟರ ಮಗಳು ಕಮಲಾಂಬ ಮತ್ತು ನಂಜುಂಡ ಭಟ್ಟರ ಮಗಳು ವಿಮಲಾಂಬ ನಮ್ಮ ಕಾಲೇಜಿನಲ್ಲೇ ಓದುತ್ತಿದ್ದರು.
ನಂಜುಂಡ ಭಟ್ಟರ ಮುಗಿಯದ ಭಾಷಣ!
ನಾನು ಈ ಹಿಂದೆಯೇ ಬರೆದಂತೆ ನಂಜುಂಡ ಭಟ್ಟರಿಗೆ ಸಮಾರಂಭಗಳಲ್ಲಿ ಭಾಷಣ ಮಾಡುವ ಹುಚ್ಚು ತುಂಬಾ ಇತ್ತು. ನಾನೊಮ್ಮೆ ನಮ್ಮೂರ ಶಾಲೆಯಲ್ಲಿ ಅವರ ಭಾಷಣ ಕೇಳಿದ್ದೆ. ಅವರ ಕೊನೆಯಿಲ್ಲದ ಭಾಷಣವನ್ನು ಅಂತ್ಯಗೊಳಿಸಲು ಸಮಾರಂಭವನ್ನು ಏರ್ಪಟಿಸಿದವರು ತುಂಬಾ ಪ್ರಯತ್ನ ಮಾಡಬೇಕಾಯಿತು!
ಭಟ್ಟರಿಗೆ ನಮ್ಮ ಕಾಲೇಜಿನಲ್ಲಿ ಒಮ್ಮೆ ಭಾಷಣ ಮಾಡಿಬಿಡಬೇಕೆಂಬ ಅಸೆ ತುಂಬಾ ಇತ್ತು. ಆದರೆ ಕಾಲೇಜಿನ ಆಡಳಿತ ವರ್ಗ ಏಕೋ ಆ ಬಗ್ಗೆ ಆಸಕ್ತಿ ತೋರಿಸಿರಲೇ ಇಲ್ಲ. ಆದರೆ
ನಮ್ಮ ಕಾಲೇಜಿನ ಯಾವುದೋ ಒಂದು ಸಮಾರಂಭದಲ್ಲಿ ಭಟ್ಟರಿಗೆ ಭಾಷಣ ಮಾಡುವ ಅವಕಾಶ ಸಿಕ್ಕಿಯೇ ಬಿಟ್ಟಿತು. ಭಟ್ಟರ
ಸಂತೋಷಕ್ಕೆ ಮಿತಿಯೇ ಇರಲಿಲ್ಲ. ಸಮಾರಂಭದ ಕೊನೆಯಲ್ಲಿ ತಮ್ಮ ಸರದಿ ಬಂದಾಗ ತಮ್ಮ ಲಂಗು ಲಗಾಮಿಲ್ಲದ ಮಾತಿನ ಪ್ರವಾಹವನ್ನು ಹರಿಯ ಬಿಟ್ಟರು. ಅದರ ಪರಿಣಾಮವನ್ನು ನಾವು ನಿರ್ವಾಹವಿಲ್ಲದೇ ಎದುರಿಸಲೇ ಬೇಕಾಯಿತು. ನಮಗೆ ಭಟ್ಟರು ಭಾಷಣ ಆರಂಭ ಮಾಡಿದ್ದು ಮಾತ್ರ ನೆನಪಿತ್ತು. ಆದರೆ ಅದರ ಅಂತ್ಯ ಆಗುವ ಚಾನ್ಸೇ ಕಾಣಿಸಲಿಲ್ಲ. ಭಟ್ಟರ ಗಮನ ನಮ್ಮ ಬಳಲಿದ ಮುಖಗಳತ್ತ ಹರಿಯಲೇ ಇಲ್ಲ. ಕೊನೆಯಲ್ಲಿ ನಿರ್ವಾಹವಿಲ್ಲದೇ ಸಮಾರಂಭದ ನಿರೂಪಕರು ಭಟ್ಟರೊಮ್ಮೆ ಉಸಿರು ತೆಗೆದುಕೊಳ್ಳಲು ಮಾತು ನಿಲ್ಲಿಸಿದ ಸಮಯ ನೋಡಿ
ವಂದನಾರ್ಪಣೆ ಮಾಡಲು ಪ್ರಾರಂಭ ಮಾಡಿಬಿಟ್ಟರು! ಅಲ್ಲಿಗೆ ನಮ್ಮ ಬವಣೆ ಕೊನೆಗೊಂಡಿತು!
------- ಮುಂದುವರಿಯುವುದು-----
No comments:
Post a Comment