ನಮ್ಮ ತರಗತಿಗಳೆಲ್ಲಾ ಒಮ್ಮೆಲೇ ಪ್ರಾರಂಭವಾಗಿ
ಟೈಮ್ ಟೇಬಲ್ ಪ್ರಕಾರ ಉಪನ್ಯಾಸಕರು ತರಗತಿಗಳನ್ನು ತೆಗೆದುಕೊಳ್ಳಲಾರಂಭಿಸಿದರು. ನಮ್ಮ ಪ್ರಿನ್ಸಿಪಾಲ್
ರಾಮಕೃಷ್ಣರಾಯರು ತುಂಬಾ ದಕ್ಷ ಆಡಳಿತಗಾರರೂ ಆಗಿದ್ದರು. ಅವರು ವಿಧ್ಯಾರ್ಥಿಗಳಂತೆಯೇ ಉಪನ್ಯಾಸಕರನ್ನೂ
ಶಿಸ್ತಿನಿಂದ ತಮ್ಮ ಕೆಲಸದಲ್ಲಿ ತೊಡಗಿಸುವುದರಲ್ಲಿ ನಿಸ್ಸೀಮರಾಗಿದ್ದರು. ನಿಜ ಹೇಳಬೇಕೆಂದರೆ
ರಾಯರ ಹಿರಿತನ ಮತ್ತು ಗಾಂಭೀರ್ಯ ಉಪನ್ಯಾಸಕರ ಮೇಲೆ ಎಷ್ಟೊಂದು ಪ್ರಭಾವ ಬೀರಿತ್ತೆಂದರೆ ರಾಯರ ಮುಂದೆ
ಅವರು ನಮ್ಮಂತೆಯೇ ವಿದ್ಯಾರ್ಥಿಗಳ ಹಾಗೆ ಕಾಣುತ್ತಿದ್ದರು. ಅವರೆಲ್ಲರೂ ವಯಸ್ಸಿನಲ್ಲಿ ಕಿರಿಯರಾಗಿದ್ದುದೂ
ಇದಕ್ಕೆ ಒಂದು ಕಾರಣವಾಗಿತ್ತು. ನಾನು ಈ ಹಿಂದೆ ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜಿನ ಹಿರಿಯ ಉಪನ್ಯಾಸಕರನ್ನು ನೋಡಿದ್ದೆ ಮತ್ತು ಕೆಲವರ ಉಪನ್ಯಾಸಗಳನ್ನೂ ಕೇಳುವ ಅವಕಾಶ ನನಗೆ ಸಿಕ್ಕಿತ್ತು. ಆ ಹಿರಿಯ ಉಪನ್ಯಾಸಕರೊಡನೆ ನಮ್ಮ
ಕಾಲೇಜಿನ ಅನನುಭವಿ ಉಪನ್ಯಾಸಕರನ್ನು ಹೋಲಿಸಿದಾಗ ನನಗೆ ಸ್ವಲ್ಪ ನಿರಾಶೆಯೇ ಉಂಟಾಯಿತು. ಆದರೆ ನಮ್ಮ ಉಪನ್ಯಾಸಕರೆಲ್ಲಾ ತೋರುತ್ತಿದ್ದ ಉತ್ಸಾಹ ಮತ್ತು ಆಸಕ್ತಿ ಖಂಡಿತವಾಗಿ ನಮಗೆ ಸಂತೋಷವನ್ನುಂಟು ಮಾಡಿತು.
ನನ್ನ ಮೇಲೆ ಹೆಚ್ಚು ಪ್ರಭಾವ ಬೀರಿದ ಮೊದಲ ಉಪನ್ಯಾಸಕರೆಂದರೆ ಕೆಮಿಸ್ಟ್ರಿ ಲೆಕ್ಚರರ್
ರಘುನಾಥನ್ ಅವರು. ನಮಗೆ ಫಿಸಿಕ್ಸ್
ಸಬ್ಜೆಕ್ಟ್ ತೆಗೆದುಕೊಳ್ಳುವ ಉಪನ್ಯಾಸಕರು ಇನ್ನೂ ಬಂದಿಲ್ಲವಾದ್ದರಿಂದ ರಘುನಾಥನ್ ಅವರು ಅದನ್ನೂ ತೆಗೆದುಕೊಳ್ಳ ತೊಡಗಿದರು.
ಕೇವಲ ಸ್ವಲ್ಪ ಕಾಲದಲ್ಲೇ ರಘುನಾಥನ್ ಅವರು ನನ್ನನ್ನು ಒಬ್ಬ ಮೆರಿಟ್ ವಿದ್ಯಾರ್ಥಿ ಎಂದು ಪರಿಗಣಿಸಿ ನನ್ನತ್ತ ವಿಶೇಷ ಗಮನ ಕೊಡತೊಡಗಿದರು. ಮ್ಯಾಥಮ್ಯಾಟಿಕ್ಸ್ ಉಪನ್ಯಾಸಕ ಎನ್ ಆರ್ ಭಟ್ ಕೂಡ ನಾನು ಮತ್ತು ಪ್ರಕಾಶ್ ಕಾಮತ್ ೧೦೦ಕ್ಕೆ ೧೦೦ ಅಂಕಗಳನ್ನು ತೆಗೆದುಕೊಳ್ಳುವ ಅರ್ಹತೆ ಇರುವವರು ಎಂದು ತೀರ್ಮಾನಿಸಿ ನಮಗೆ ಆ ಗುರಿ ಇಟ್ಟುಕೊಳ್ಳುವಂತೆ ಹೇಳಿದರು. ನಾನು ಅಲ್ಲಿಯವರೆಗೆ ಕೆಲವು ಸಬ್ಜೆಕ್ಟಿನಲ್ಲಿ ೯೦ ರ ಮೇಲೆ ಅಂಕಗಳನ್ನು ಪಡೆದಿದ್ದರೂ ೧೦೦ಕ್ಕೆ ನೂರು
ಗಳಿಸಿರಲಿಲ್ಲ. ಆದರೆ ಭಟ್ಟರು ನಮಗೆ ಅದು ಸಾಧ್ಯವೆಂದು ಹುರಿದುಂಬಿಸಿದರು. ಹಾಗೆಯೇ
ಆ ಗುರಿಯತ್ತ ನಮ್ಮ ಪ್ರಗತಿಯನ್ನು ತೀವ್ರವಾಗಿ ಗಮನಿಸತೊಡಗಿದರು.
ಫಿಸಿಕ್ಸ್ ಉಪನ್ಯಾಸಕ ಕೃಷ್ಣಪ್ಪಯ್ಯನವರ
ಆಗಮನ
ಆಮೇಲೆ ಸುಮಾರು ಎರಡು ತಿಂಗಳ ನಂತರ ನಮ್ಮ ಹೊಸ ಫಿಸಿಕ್ಸ್ ಉಪನ್ಯಾಸಕರು ಆಗಮಿಸಿದರು. ಕೃಷ್ಣಪ್ಪಯ್ಯನವರು ಮಣಿಪಾಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿದ್ದರು. ನಿಜ ಹೇಳಬೇಕೆಂದರೆ ಕೃಷ್ಣಪ್ಪಯ್ಯನವರ ಹೆಸರು ನಮಗೆ ಅಷ್ಟು ಉತ್ಸಾಹ ನೀಡಲಿಲ್ಲ. ಏಕೆಂದರೆ ಆ ಹೆಸರು ಆ ಕಾಲಕ್ಕೆ ತೀರ್ಥಹಳ್ಳಿ ಪೇಟೆಯಲ್ಲಿ ಪ್ರಸಿದ್ಧವಾಗಿದ್ದ ಹೋಟೆಲೊಂದರ ಮಾಲೀಕರದ್ದೇ ಆಗಿತ್ತು! ಆದರೆ ನಮ್ಮ ಭಾವನೆ ಎಷ್ಟು ತಪ್ಪಾಗಿತ್ತೆಂದು ನಮಗೆ ಬೇಗನೆ ಅರಿವಾಯಿತು. ನಿಜ ಹೇಳಬೇಕೆಂದರೆ ಕೃಷ್ಣಪ್ಪಯ್ಯನವರು ಬಹು ಬೇಗನೆ ನನ್ನ ಅತ್ಯಂತ ನೆಚ್ಚಿನ ಗುರು ಮತ್ತು ಮಾರ್ಗದರ್ಶಕರಾಗಿ ಬಿಟ್ಟರು. ಕೃಷ್ಣಪ್ಪಯ್ಯನವರು ಮುಂದೆ ಕಾಲೇಜಿನ ಪ್ರಿನ್ಸಿಪಾಲ್ ಆಗಿ ನಿವೃತ್ತಿ ಪಡೆದರು.
ಕೃಷ್ಣಪ್ಪಯ್ಯನವರು ಅಕ್ಯಾಡೆಮಿ ಕಾಲೇಜಿನಲ್ಲಿ
ಆಗಲೇ ಒಂದು ವರ್ಷ ಕೆಲಸ
ಮಾಡಿದ್ದರಿಂದ ನಮ್ಮ ಕಾಲೇಜಿನ ವೈಸ್ ಪ್ರಿನ್ಸಿಪಾಲ್ ಯಾರೆಂಬುವ ಸಮಸ್ಯೆ ಬಗೆಹರಿದು ಬಿಟ್ಟಿತು.
ಅವರೊಬ್ಬ
ಶ್ರೇಷ್ಠ ಉಪನ್ಯಾಸಕರು ಮಾತ್ರವಲ್ಲ ಉತ್ತಮ ಆಡಳಿತಗಾರರೂ ಆಗಿದ್ದರು. ತಮ್ಮ ಕರ್ತವ್ಯವನ್ನು ಬಿಟ್ಟು
ಬೇರೆ ಯಾವುದೇ ಚಿಕ್ಕ ಪುಟ್ಟ ವಿಷಯಗಳ ಬಗ್ಗೆ ಅವರು ಆಸಕ್ತಿ ವಹಿಸುತ್ತಿರಲಿಲ್ಲ. ಮುಂದೆ ಕಾಲೇಜಿನ
ಪ್ರಿನ್ಸಿಪಾಲರಾಗಿ ಸ್ವಯಂ ಪ್ರೇರಿತ ನಿವೃತ್ತಿ ಪಡೆದ ಕೃಷ್ಣಪ್ಪಯ್ಯನವರು ಶುದ್ಧ ಬ್ರಹ್ಮಚಾರಿಯಾಗೇ
ಉಳಿದು ಬಿಟ್ಟರು. ಆಮೇಲೆ ಎಷ್ಟೋ ವರ್ಷಗಳ ನಂತರ ನಾನೊಮ್ಮೆ ದಕ್ಷಿಣ ಕನ್ನಡ
ಜಿಲ್ಲೆಯ ಕಲ್ಲಡ್ಕದ ಹತ್ತಿರ ಇದ್ದ ಅವರ ಮನೆಗೇ ಹೋಗಿ ಭೇಟಿಯಾಗಿ ಬಂದಿದ್ದೆ. ಆಗಲೂ
ನನ್ನನ್ನು ತುಂಬಾ ಪ್ರೀತಿ ಮತ್ತು ಅಭಿಮಾನದಿಂದ ಮಾತನಾಡಿಸಿದ್ದನ್ನು ನಾನೆಂದೂ ಮರೆಯುವಂತಿಲ್ಲ.
ಕಮ್ಮರಡಿ
ಉಮರಬ್ಬ
ನಮ್ಮ ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿಗಳಲ್ಲಿ ನನಗೆ ನೆನಪು ಬರುವವರಲ್ಲಿ ಕಮ್ಮರಡಿ ಊರಿನ ಉಮರಬ್ಬನದು ಮೊದಲ ಹೆಸರಾಗಿದೆ. ತುಂಬಾ ಸ್ನೇಹಮಯ ವ್ಯಕ್ತಿತ್ವದ ಉಮರಬ್ಬ ಕನ್ನಡದಲ್ಲಿ ಒಳ್ಳೆಯ ಭಾಷಣಕಾರನಾಗಿದ್ದ. ಹಾಗೆಯೇ ಅವನು ಕನ್ನಡ ಸಿನಿಮಾ ಹಾಡುಗಳನ್ನು ತುಂಬಾ ಚೆನ್ನಾಗಿ ಹಾಡುತ್ತಿದ್ದ. ಆದರೆ ಮುಂದೆ ಬಿ.ಎಸ್.ಸಿ ತರಗತಿಯಲ್ಲಿ ಓದುವಾಗ ಉಮರಬ್ಬ ಸ್ವಲ್ಪ ವಿಲಕ್ಷಣ ಸ್ವಭಾವ ಬೆಳೆಸಿಕೊಂಡು ಕಾಲೇಜಿನ ಆಡಳಿತ ವರ್ಗದ ಸಹಾನುಭೂತಿ ಕಳೆದುಕೊಂಡು ಬಿಟ್ಟ. ಆಮೇಲೆ ಎಷ್ಟೋ ವರ್ಷಗಳ ನಂತರ ನಾನು ಕರ್ನಾಟಕದ ಹೊರಗೆ ಕೆಲಸ ಮಾಡುವಾಗ ಉಮರಬ್ಬ ರಾಜಕೀಯ ಪ್ರವೇಶಿಸಿ ದಕ್ಷಿಣ ಕನ್ನಡದ ಒಂದು ಕ್ಷೇತ್ರದಿಂದ ಶಾಸಕನಾಗಿ ಚುನಾಯಿತನಾದನೆಂದು ಕೇಳಿದ್ದೆ. ಹಾಗೂ ಅವನೊಬ್ಬ ಜನಪ್ರಿಯ ರಾಜಕೀಯ ವ್ಯಕ್ತಿಯಾಗಿ ಬಿಟ್ಟಿದ್ದನಂತೆ. ಆದರೆ ವಿಪರೀತ ಕುಡಿತದ ಹುಚ್ಚಿನ ಕಾರಣ ಅವನ ರಾಜಕೀಯ ಜೀವನ ಸಂಪೂರ್ಣ ಕೆಟ್ಟು ಹೋಗಿ ಅವನು ಅಕಾಲ ಮರಣ ಹೊಂದಿದನಂತೆ.
ಭಾಷಣಕಾರ
ರಾಮಶರ್ಮ
ಶೃಂಗೇರಿಯ ಹತ್ತಿರದ ಒಂದು ಊರಿನ ರಾಮಶರ್ಮ ಎಂಬ ವಿದ್ಯಾರ್ಥಿ ಕೂಡ ಕನ್ನಡದಲ್ಲಿ ತುಂಬಾ ಒಳ್ಳೆಯ ಭಾಷಣಕಾರನಾಗಿದ್ದ.
ಮಾತುಗಾರಿಕೆಯಲ್ಲಿ ತುಂಬಾ ಪ್ರತಿಭಾವಂತನೆಂಬ ಹೆಸರೂ ಕೂಡ ಶರ್ಮನಿಗೆ ಸಿಕ್ಕಿ ಬಿಟ್ಟಿತು. ಆದರೆ ಪ್ರಾಯಶಃ ತನಗೆ ಸಿಕ್ಕ ಅತಿ ಹೊಗಳಿಕೆ ಶರ್ಮನ ತಲೆಗೇರಿ ಬಿಟ್ಟಿತು. ಒಂದು ರೀತಿಯ ವಿಲಕ್ಷಣ ಮನೋಭಾವ ಬೆಳೆಸಿಕೊಂಡ ಶರ್ಮನನ್ನು ಅನಧಿಕೃತವಾಗಿ ಅರೆಹುಚ್ಚನೆಂದು ಎಲ್ಲರೂ ತೀರ್ಮಾನಿಸಿ ಬಿಟ್ಟರು! ಅದು ಯಾವ ಮಟ್ಟಕ್ಕೆ ಹೋಯಿತೆಂದರೆ ಶರ್ಮನ ಕಾಲೇಜು ವಿಧ್ಯಾಭ್ಯಾಸವೇ ಕೊನೆಗೊಂಡುಬಿಟ್ಟಿತು.
ಪ್ರತಿ ಶನಿವಾರ
ನಮ್ಮೂರಿಗೆ ಕಾಲ್ನಡಿಗೆಯ ಪ್ರಯಾಣ
ಪ್ರತಿ ಶನಿವಾರ ಸಂಜೆಯೂ ನಾನು ನಮ್ಮೂರಿಗೆ ಕಾಲ್ನಡಿಗೆಯ ಪ್ರಯಾಣ ಮಾಡಿಬಿಡುತ್ತಿದ್ದೆ. ಭಾನುವಾರ ಪೂರ್ತಿ ದಿನ ತಂದೆಯವರಿಗೆ ನಮ್ಮ ಅಡಿಕೆ ತೋಟದಲ್ಲಿ ಸಹಾಯ ಮಾಡುವುದು, ಕಾಫಿ ಹಣ್ಣು ಕೊಯ್ಯುವುದೂ, ಇತ್ಯಾದಿ ಕೆಲಸಗಳು ನನಗಿರುತ್ತಿದ್ದವು. ನಮ್ಮೂರಿನ ಜನಗಳಿಗೆ ನಮ್ಮ ಕಾಲೇಜಿನ ಬಗ್ಗೆ ತುಂಬಾ ಕುತೂಹಲವಿತ್ತು. ಅವರಿಗೆ ಆ ಬಗ್ಗೆ ತಿಳಿ ಹೇಳುವುದು ನನ್ನ ಚಟುವಟಿಕೆಗಳಲ್ಲಿ ಒಂದಾಗಿ ಬಿಟ್ಟಿತ್ತು. ಸೋಮವಾರದಂದು ಬೆಳಿಗ್ಗೆ ಮುಂಚೆಯೇ ಮನೆಯಿಂದ ಹೊರಟು ಎಂಟು ಮೈಲಿ ನಡೆದು ಶೃಂಗೇರಿ ತಲುಪಿ ಕಾಲೇಜಿಗೆ ಹೋಗಿ ಬಿಡುತ್ತಿದ್ದೆ. ಈ ಬಗೆಯ ಪ್ರತಿ ವಾರದ ಪ್ರಯಾಣ ನಾನು ಶೃಂಗೇರಿ ಕಾಲೇಜಿನಲ್ಲಿ ಓದಿದ ನಾಲ್ಕು ವರ್ಷಗಳೂ ನನಗೆ ಮಾಮೂಲಾಗಿ ಬಿಟ್ಟಿತ್ತು. ಪ್ರಕೃತಿಯ ನಡುವಿನ ಆ ಪ್ರಯಾಣದ ಸಂತೋಷ ಈಗಿನ ಕಾಲದಲ್ಲಿ ಪ್ರಾಯಶಃ ಯಾರಿಗೂ ಲಭ್ಯವಿಲ್ಲ ಎಂದು ಅನಿಸುತ್ತದೆ. ನನ್ನ ತಂದೆ ತಾಯಿ , ತಂಗಿ ಮತ್ತು ಸಹೋದರರು
ಪ್ರತಿ ಶನಿವಾರ ನನ್ನ ಆಗಮನದ ನಿರೀಕ್ಷೆಯಲ್ಲಿರುತ್ತಿದ್ದರು. ನಾನೆಂದೂ ಅವರನ್ನು ನಿರಾಶೆಗೊಳಿಸಲಿಲ್ಲ.
ಪುಟ್ಟಣ್ಣನ ಓದಿಗೆ ಸಮಸ್ಯೆ
ಇದ್ದಕ್ಕಿದ್ದಂತೆ ಬೆಂಗಳೂರಿನಲ್ಲಿದ್ದ ನಮ್ಮ ಪುಟ್ಟಣ್ಣನಿಂದ ಬಂದ ಒಂದು ಪತ್ರ ನಮ್ಮ ತಂದೆ ಮತ್ತು ತಾಯಿಯರಿಗೆ ತುಂಬಾ ಚಿಂತೆ ಉಂಟಾಗುವಂತೆ ಮಾಡಿತು. ನಮ್ಮ ಕಸಿನ್ ಆದ ಹಂಚಿನಮನೆ ಸುಬ್ರಹ್ಮಣ್ಯ ಕೊಟ್ಟ ಆರ್ಥಿಕ ಸಹಾಯದ ಭರವಸೆಯ ಮೇಲೆ ಪುಟ್ಟಣ್ಣ ಬೆಂಗಳೂರಿಗೆ ಹೋಗಿ ಎಂ.ಇ.ಎಸ್ ಕಾಲೇಜಿನಲ್ಲಿ ಪಿ.ಯು.ಸಿ ಓದುತ್ತಿದ್ದ. ಆದ್ದರಿಂದ ಅವನ ಓದಿಗಾಗಿ ತಾವೇನೂ ಖರ್ಚು ಮಾಡಬೇಕಾಗಿಲ್ಲವೆಂದು ತಂದೆ ತಾಯಿಯವರು ಭಾವಿಸಿದ್ದರು. ಆದರೆ ಸುಬ್ರಹ್ಮಣ್ಯ ಇದ್ದಕ್ಕಿದ್ದಂತೇ ಹಣದ ಸಹಾಯವನ್ನು ನಿಲ್ಲಿಸಿ ಬಿಟ್ಟಿದ್ದರು. ಮಾತ್ರವಲ್ಲ. ಆ ಬಗ್ಗೆ ಪುಟ್ಟಣ್ಣ ಬರೆದ ಪತ್ರಗಳಿಗೆ ಉತ್ತರ ಕೊಡುವ ಗೋಜಿಗೇ ಹೋಗಲಿಲ್ಲ. ಪ್ರತಿ ತಿಂಗಳೂ ನಾನು ಕೊಡಬೇಕಾಗಿದ್ದ ಮೆಸ್ ಚಾರ್ಜ್ ೩೦ ರೂಪಾಯಿಗಳಿಗೇ ಒದ್ದಾಡುತ್ತಿದ್ದ
ತಂದೆ ಮತ್ತು ತಾಯಿಯರಿಗೆ ಇನ್ನೊಂದು ದೊಡ್ಡ ಸಂಕಟ ಎದುರಾಗಿತ್ತು.
ಊರು ಬಿಟ್ಟು ಓಡಿಹೋದ ಸುಬ್ರಹ್ಮಣ್ಯ
ನಾನಾಗ ಸುಬ್ರಹ್ಮಣ್ಯ ಅವರ ಶೃಂಗೇರಿ ಮನೆಯ ಮುಂದಿದ್ದ ಒಂದು ರೂಮಿನಲ್ಲೇ ಇದ್ದೆ. ಅವರು ಪ್ರತಿ ದಿನವೂ ಶೃಂಗೇರಿಗೆ ಬಂದು ತಮ್ಮ ಕೆಲವು ಸ್ನೇಹಿತರೊಡನೆ ಅವರ ಮನೆಯಲ್ಲೇ ಇರುತ್ತಿದ್ದರು. ನಾನು ಪುಟ್ಟಣ್ಣನಿಂದ ಬಂದ ಪತ್ರದ ವಿಚಾರ ಅವರೊಡನೆ ಮಾತನಾಡಿದಾಗ ಅವರಿಂದ ಯಾವುದೇ ಉತ್ತರ ದೊರೆಯಲಿಲ್ಲ. ತಮ್ಮ ತಂದೆಯವರು ಬಿಟ್ಟು ಹೋದ ತುಂಬಾ ದೊಡ್ಡ ಆಸ್ತಿ ಮತ್ತು ಮನೆಯಿದ್ದ ಒಬ್ಬನೇ ಮಗನಾದ ಸುಬ್ರಹ್ಮಣ್ಯ ತಮ್ಮ ಅಪಾರ ವಾರ್ಷಿಕ ಆದಾಯವನ್ನು ಹೇಗೆ ವ್ಯಯ ಮಾಡುತ್ತಿದ್ದರೆಂಬುದು ಒಂದು ಬ್ರಹ್ಮ ರಹಸ್ಯವೇ ಆಗಿತ್ತು. ಇನ್ನೂ ಬ್ರಹ್ಮಚಾರಿಯಾಗೇ ಇದ್ದ ಸುಬ್ರಹ್ಮಣ್ಯ ಮುಂದೆ ತಾವು ಮಾಡಿದ ಸಾಲ ತೀರಿಸಲಾಗದೇ ಊರು ಬಿಟ್ಟು ಓಡಿ ಹೋದದ್ದು ಒಂದು ನಂಬಲಾರದ ಸತ್ಯವಾಗಿ ಬಿಟ್ಟಿತು. ಅವರ ಆಸ್ತಿ ಮತ್ತು ಮನೆ ಎಲ್ಲವೂ ಸಾಲಗಾರರ ಪಾಲಾಗಿ ಹೋದವು. ಇಂದು ಅವರ ಪೂರ್ವಿಕರು ಕಟ್ಟಿದ್ದ ಹಂಚಿನಮನೆ ನಮಗೆಲ್ಲಾ
ಕೇವಲ ಒಂದು ಕಹಿ ನೆನಪಾಗಿ ಉಳಿದು ಹೋಗಿದೆ ಅಷ್ಟೇ. ಸುಬ್ರಹ್ಮಣ್ಯ ಎಂದೂ ಹಿಂತಿರುಗಿ ಬರಲೇ ಇಲ್ಲ.
ನನಗೆ ಮ್ಯಾಥಮ್ಯಾಟಿಕ್ಸ್ ಸಬ್ಜೆಕ್ಟಿನಲ್ಲಿ ನೂರಕ್ಕೆ ನೂರು ಅಂಕ
ನಮಗೆ ನಡೆದ ಫಸ್ಟ್ ಟರ್ಮ್ ಪರೀಕ್ಷೆಯಲ್ಲಿ ನಾನು ಎಲ್ಲಾ ಸಬ್ಜೆಕ್ಟ್ ಗಳಲ್ಲೂ ಉಳಿದವರಿಗಿಂತ ಹೆಚ್ಚಿನ ಅಂಕಗಳನ್ನು ಗಳಿಸಿ ಬಿಟ್ಟೆ. ಅಲ್ಲದೇ ನನಗೆ ಮ್ಯಾಥಮ್ಯಾಟಿಕ್ಸ್ ಸಬ್ಜೆಕ್ಟಿನಲ್ಲಿ ನೂರಕ್ಕೆ ನೂರು ಅಂಕಗಳೂ ದೊರೆತವು. ಪರಿಣಾಮವಾಗಿ ನಮ್ಮ ಉಪನ್ಯಾಸಕರುಗಳಿಗೆ ನಾನು ವಿಶ್ವವಿದ್ಯಾನಿಲಯದ ಮಟ್ಟದಲ್ಲಿ Rank ಪಡೆಯ ಬಲ್ಲ ವಿದ್ಯಾರ್ಥಿ ಎಂಬ ವಿಶ್ವಾಸ ಬಂದು ಬಿಟ್ಟಿತು. ಅವರೆಲ್ಲಾ ನನಗೆ ಆ ಗುರಿಯನ್ನಿಟ್ಟುಕೊಂಡು ಅಭ್ಯಾಸ ಮಾಡುವಂತೆ ಒತ್ತಾಯಿಸತೊಡಗಿದರು. ಅಲ್ಲದೇ ಆ ದೃಷ್ಟಿಯಿಂದ ನನಗೆ ಸೂಕ್ತ ಸಲಹೆಗಳನ್ನು ನೀಡತೊಡಗಿದರು. ನನಗೂ ಕೂಡ ನಾನು Rank ಪಡೆಯಬಲ್ಲೆನೆಂಬ ವಿಶ್ವಾಸ ಮೂಡತೊಡಗಿತು. ಪ್ರಿನ್ಸಿಪಾಲ್ ರಾಮಕೃಷ್ಣರಾಯರು ಕೂಡ ನನ್ನನ್ನು ಕರೆದು ನಾನು ಕಾಲೇಜಿಗೆ
ಒಳ್ಳೆಯ ಹೆಸರು ತರುವೆನೆಂಬ ವಿಶ್ವಾಸವನ್ನು ವ್ಯಕ್ತ ಪಡಿಸಿದರು.
ಉಪನ್ಯಾಸಕರುಗಳ ನಿರ್ಗಮನ
ಒಂದು ದಿನ ಬೆಳಿಗ್ಗೆ ನಮಗೆ ನಮ್ಮ ಇಂಗ್ಲಿಷ್ ಉಪನ್ಯಾಸಕ ಶ್ರೀರಾಮ್ ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟು ಮೈಸೂರಿಗೆ ಹೋಗಿ ಬಿಟ್ಟರೆಂದು ತಿಳಿದು ಬಂತು. ಅವರು ಮೈಸೂರಿನ ಒಂದು ಕಾಲೇಜಿಗೆ ಉಪನ್ಯಾಸಕರಾಗಿ ಆಯ್ಕೆ ಆಗಿದ್ದರಂತೆ. ಈ ವಿಷಯ ತಿಳಿದು ನಮಗೆಲ್ಲಾ ತುಂಬಾ ದುಃಖವಾಯಿತು. ನಮಗೆ ತುಂಬಾ ಬೇಸರವಾದ ವಿಷಯವೆಂದರೆ ಅವರು ವಿದ್ಯಾರ್ಥಿಗಳಾದ ನಮಗೆ ಸ್ವಲ್ಪ ಸೂಚನೆಯನ್ನೂ ಕೊಡದೇ ಶೃಂಗೇರಿ ಬಿಟ್ಟು ಹೋದದ್ದು. ಅವರ ಜಾಗಕ್ಕೆ ಎರಡು ತಿಂಗಳ ನಂತರ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ಬರಾಯ
ಎಂಬ ಹಿರಿಯ ವ್ಯಕ್ತಿ ಒಬ್ಬರು ಆಗಮಿಸಿದರು. ಉಪನ್ಯಾಸಕರಾಗಿ ತುಂಬಾ ಅನುಭವಸ್ತರಾದ ಸುಬ್ಬರಾಯರು ನಮ್ಮನ್ನು ಪಿ.ಯು.ಸಿ ಅಂತಿಮ ಪರೀಕ್ಷೆಗೆ ಬಹಳ ಚೆನ್ನಾಗಿಯೇ ತಯಾರು ಮಾಡಿಬಿಟ್ಟರು.
ಆಮೇಲೆ ಸ್ವಲ್ಪ ಕಾಲದಲ್ಲೇ ನಮ್ಮನ್ನು ಅಗಲಿದವರು ನಮ್ಮ ನೆಚ್ಚಿನ ಕೆಮಿಸ್ಟ್ರಿ ಉಪನ್ಯಾಸಕರಾದ ರಘುನಾಥನ್ ಅವರು.
ಅವರು ನಮ್ಮನ್ನು ಆಗಲಿ ದಾವಣಗೆರೆಯ ಡಿ.ಆರ್.ಎಂ ಮೆಡಿಕಲ್ ಕಾಲೇಜಿಗೆ ಉಪನ್ಯಾಸಕರಾಗಿ ಹೋಗುವರೆಂದು ತಿಳಿದು ನಮಗೆಲ್ಲಾ ಆದ ದುಃಖ ಅಷ್ಟಿಷ್ಟಲ್ಲ. ತುಂಬಾ ಉತ್ತಮ ಮಟ್ಟದ ಉಪನ್ಯಾಸಕರಾದ ರಘುನಾಥನ್ ನಮ್ಮ ಕಾಲೇಜ್ ಮತ್ತು ವಿದ್ಯಾರ್ಥಿಗಳಾದ ನಮ್ಮನ್ನು ತುಂಬಾ ಮನಸ್ಸಿಗೆ ಹಚ್ಚಿಕೊಂಡಿದ್ದರು. ಅಲ್ಲದೇ ಅವರು ಶ್ರೀರಾಮ್ ಅವರಂತೆ ನಮಗೆಲ್ಲ ತಿಳಿಸದೇ ನಮ್ಮಿಂದ ಅಗಲಲಿಲ್ಲ. ತಾವು ಶೃಂಗೇರಿ ಬಿಟ್ಟು ಹೋಗುವುದಾಗಿ ನಮಗೆಲ್ಲಾ ಹೇಳುತ್ತಾ ನಮ್ಮ ಮುಂದೆ ಕಣ್ಣೀರು ಸುರಿಸಿಬಿಟ್ಟರು. ನಮ್ಮೆಲ್ಲರ ಕಣ್ಣುಗಳೂ ಒದ್ದೆಯಾದುವೆಂದು ಹೇಳಲೇ ಬೇಕಿಲ್ಲ. ಆದರೆ ಆಕಸ್ಮಿಕವಾಗಿ ನಮ್ಮನ್ನು ಹೀಗೆ ತೊರೆದು ಹೋಗುತ್ತಿರುವುದಕ್ಕೆ ನಮಗೆ ಕಾರಣ ತಿಳಿಯಲೇ ಇಲ್ಲ.
ನಮ್ಮ ಕಾಲೇಜಿನಿಂದ ಅಗಲಿದ ಮೂರನೇ ಉಪನ್ಯಾಸಕರೆಂದರೆ ಅರ್ಥ ಶಾಸ್ತ್ರದ ಉಪನ್ಯಾಸಕರಾದ ಶಿವಾನಂದ ಅವರು. ವಿದ್ಯಾರ್ಥಿಗಳಿಗೆ ತುಂಬಾ ಇಷ್ಟವಾಗಿದ್ದ ಶಿವಾನಂದ ಅವರಿಗೆ ಮೈಸೂರು ಸರ್ಕಾರದ ವಾಣಿಜ್ಯ ಇಲಾಖೆಯಲ್ಲಿ ಅಧಿಕಾರಿಯಾಗಿ ಕೆಲಸ ದೊರೆತಿತ್ತು. ಹೀಗೆ ಒಮ್ಮೆಗೇ ಮೂರು ಮಂದಿ ಉಪನ್ಯಾಸಕರು ನಮ್ಮನ್ನು ತೊರೆದು ಹೋಗಿ ಬಿಟ್ಟದ್ದು ನಮಗೆಲ್ಲ ದೊಡ್ಡ ಆಘಾತವೇ ಆಗಿತ್ತು. ಇಂತಹಾ ದೊಡ್ಡ ಆಘಾತದಿಂದ ಹೊರಬರಲು ನಮಗೆ ಹಲವು ದಿನಗಳೇ ಬೇಕಾದವು. ಶೃಂಗೇರಿಯಂತಹ ಸಣ್ಣ ಊರಿನಲ್ಲಿದ್ದ ನಮಗೆ ಆ ಕಾಲದಲ್ಲಿ ತುಂಬಾ ಭಾವನಾತ್ಮಕ ಮನೋಭಾವನೆ ಇತ್ತೆಂದು ಇಲ್ಲಿ ಹೇಳಲೇ ಬೇಕು. ಆದರೆ ಆ ಕಾಲದ ಶೃಂಗೇರಿಯಲ್ಲಿ ಉಪನ್ಯಾಸಕರುಗಳಿಗೆ ಬೇಕಾದ ಸಾಮಾನ್ಯ ಮಟ್ಟದ ಅನುಕೂಲತೆಗಳೂ ಇರಲಿಲ್ಲ ಎನ್ನುವುದೂ
ಅಷ್ಟೇ ಸತ್ಯವಾಗಿತ್ತು. ಆ ವರ್ಷ ಹೊಸದಾಗಿ ಕಾಲೇಜಿಗೆಬಂದ
ಉಪನ್ಯಾಸಕರುಗಳೆಂದರೆ ಸಸ್ಯಶಾಸ್ತ್ರ ಉಪನ್ಯಾಸಕ ಆನಂದರಾಮ ಮಡಿ ಮತ್ತು ರಘುನಾಥನ್ ಅವರ ಬದಲಿಗೆ ಬಂದ ಕೆಮಿಸ್ಟ್ರಿ ಉಪನ್ಯಾಸಕರಾದ ಶಾನಭಾಗ್ ಅವರು.
ಟಿ.ಎಂ.ಏ. ಪೈ ಮತ್ತು
ಟಿ.ಏ.ಪೈ
ಮಣಿಪಾಲ್
ಅಕ್ಯಾಡೆಮಿಯ ರಿಜಿಸ್ಟ್ರಾರ್ ಆದ ಡಾಕ್ಟರ್ ಟಿ.ಎಂ.ಏ.ಪೈ ನಮ್ಮ ಕಾಲೇಜಿಗೆ ಆಗಾಗ ಭೇಟಿಕೊಟ್ಟು ನಮ್ಮನ್ನುದ್ದೇಶಿಸಿ ಮಾತನಾಡುತ್ತಿದ್ದರು. ತಮ್ಮ ಭಾಷಣಗಳಲ್ಲಿ ಅವರು ತಾವು ಹೇಗೆ ಮಣಿಪಾಲ್ ಮತ್ತು ಅಲ್ಲಿನ ವಿದ್ಯಾಕೇಂದ್ರಗಳನ್ನು ಸ್ಥಾಪಿಸಿ ಅಭಿವೃದ್ಧಿಗೊಳಿಸಿದರೆಂದು ವಿವರವಾಗಿ ಮತ್ತು ಆಸಕ್ತಿದಾಯಕವಾಗಿ ನಮಗೆ ತಿಳಿಸುತ್ತಿದ್ದರು. ಪೈ ಅವರು ಮಣಿಪಾಲಿನಲ್ಲಿ ಸಿಂಡಿಕೇಟ್ ಬ್ಯಾಂಕ್, ಮೆಡಿಕಲ್ ಕಾಲೇಜ್, ಇಂಜಿನಿಯರಿಂಗ್ ಕಾಲೇಜ್, ಮಣಿಪಾಲ ಹಾಸ್ಪಿಟಲ್ ಇತ್ಯಾದಿಗಳನ್ನು ಸ್ಥಾಪಿಸಿ ಅವುಗಳ ಆಡಳಿತ ವ್ಯವಸ್ಥೆಯನ್ನು ಅಷ್ಟೇ ಚೆನ್ನಾಗಿ
ಮಾಡಿದ್ದರು. ಆಗ ಸಿಂಡಿಕೇಟ್ ಬ್ಯಾಂಕ್ ಛೇರ್ಮನ್ ಆಗಿದ್ದ ಟಿ.ಏ.ಪೈ ಅವರೂ ಕೂಡ ಆಗಾಗ ನಮ್ಮ ಕಾಲೇಜಿಗೆ ಬಂದು ನಮ್ಮನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಇವರಲ್ಲದೆ ಎಂ ಜಿ ಎಂ ಕಾಲೇಜಿನ ಪ್ರಿನ್ಸಿಪಾಲ್ ಕು ಶಿ ಹರಿದಾಸ್ ಭಟ್
ಮತ್ತು ಅನೇಕ ಕನ್ನಡ ಸಾಹಿತ್ಯಲೋಕದ ಮಹನೀಯರುಗಳು ನಮ್ಮ ಕಾಲೇಜಿಗೆ ಅತಿಥಿಗಳಾಗಿ ಬರುತ್ತಿದ್ದರು. ನಮಗೆ ಅವರ ವಿದ್ವತ್ಪೂರ್ಣ ಭಾಷಣಗಳನ್ನು ಕೇಳುವ ಅವಕಾಶಗಳು ದೊರೆತಿದ್ದವು.
ಪ್ರಿಪರೇಟರಿ ಎಕ್ಸಾಮಿನೇಷನ್ ಮತ್ತು
ನನ್ನ ಚಕ್ಕರ್!
ನಮ್ಮ ಫೈನಲ್ ಎಕ್ಸಾಮಿನೇಷನ್ ಹತ್ತಿರ ಬರುತ್ತಿದ್ದಂತೆ ನಾವೆಲ್ಲಾ ನಮ್ಮ ಅಭ್ಯಾಸಗಳ ಬಗ್ಗೆ ತೀವ್ರ ಗಮನ ಕೊಡಲಾರಂಭಿಸಿದೆವು. ಆಗ ಇದ್ದಕ್ಕಿದ್ದಂತೇ ನಾವೆಲ್ಲಾ ಒಂದು ಪ್ರಿಪರೇಟರಿ ಎಕ್ಸಾಮಿನೇಷನ್ ಎದುರಿಸಬೇಕೆಂದು ಹೇಳಲಾಯಿತು. ನನಗೆ ಈ ಬಗೆಯ ಪ್ರಿಪರೇಟರಿ ಪರೀಕ್ಷೆಯಲ್ಲಿ ಏನೇನೂ ಆಸಕ್ತಿ ಇರಲಿಲ್ಲ. ನಾನು ನೇರವಾಗಿ ಅಂತಿಮ ಪರೀಕ್ಷೆಯನ್ನು ಎದುರಿಸಲು ತಯಾರಿ ನಡೆಸಿದ್ದೆ. ಆದ್ದರಿಂದ ನಾನು ಯಾರಿಗೂ ಹೇಳದೇ ಆ ಪರೀಕ್ಷೆಗೆ ಚಕ್ಕರ್ ಹೊಡೆದು ಊರಿಗೆ ಹೋಗಿಬಿಟ್ಟೆ. ಆಗ ನಮ್ಮ ತಂದೆಯವರಿಗೆ ಶೃಂಗೇರಿಯಲ್ಲಿ ಏನೋ ಕೆಲಸವಿತ್ತು. ನಾನು
ಅವರ ಮೂಲಕ ನನಗೆ ಅರೋಗ್ಯ ಸರಿಯಿಲ್ಲದ ಕಾರಣ ಪರೀಕ್ಷೆಗೆ ಬರಲಾಗುತ್ತಿಲ್ಲವೆಂದು ಸಂದೇಶ ಕಳಿಸಿಬಿಟ್ಟೆ. ತಂದೆಯವರು ಹೊಳ್ಳರ ಮೆಸ್ಸಿನಲ್ಲಿ ನನ್ನ ಉಪನ್ಯಾಸಕರ ಭೇಟಿ ಮಾಡಿ ವಿಷಯ ತಿಳಿಸಿದರಂತೆ. ವಿಷಯ ತಿಳಿದ ಅವರು ನನ್ನ ಬಗ್ಗೆ ತುಂಬಾ ಚಿಂತೆ ವ್ಯಕ್ತಪಡಿಸಿದ್ದನ್ನು ನೋಡಿ ನನ್ನ ತಂದೆಯವರಿಗೆ ತುಂಬಾ ಗಾಭರಿ ಆಗಿ ಬಿಟ್ಟಿತು. ಪರೀಕ್ಷೆಗೆ ನಾನು ಹಾಜರಾಗದಿದ್ದರೆ ತುಂಬಾ ತೊಂದರೆಯಾಗಬಹುದೆಂದು ಅವರು ಭಾವಿಸಿದ್ದರು. ಆದರೆ ನಾನು ಆ ಬಗ್ಗೆ ಚಿಂತೆ ಮಾಡಲೇ ಇಲ್ಲ. ಪರೀಕ್ಷೆಗೆ ಹೋಗಲೂ
ಇಲ್ಲ.
ಮಾರ್ಚ್ ತಿಂಗಳ
ಅಂತಿಮ ಪರೀಕ್ಷೆ:
ಫಿಸಿಕ್ಸ್ ಪ್ರಶ್ನೆ ಪತ್ರಿಕೆಯಲ್ಲಿ ಒಂದು ಔಟ್ ಅಫ್ ಸಿಲಬಸ್ ಪ್ರಶ್ನೆ
ಮಾರ್ಚ್ ತಿಂಗಳಲ್ಲಿ ನಮ್ಮ ಅಂತಿಮ ಪರೀಕ್ಷೆ ಆರಂಭವಾಯಿತು. ನಾನು ಎಲ್ಲಾ ಪ್ರಶ್ನೆ ಪತ್ರಿಕೆಗಳಿಗೂ ತುಂಬಾ ಚೆನ್ನಾಗಿಯೇ ಉತ್ತರ ಬರೆದಿದ್ದೆ. ಆದರೆ ನಮ್ಮ ಫಿಸಿಕ್ಸ್ ಪ್ರಶ್ನೆ ಪತ್ರಿಕೆಯಲ್ಲಿ ಒಂದು ಔಟ್ ಅಫ್ ಸಿಲಬಸ್ ಪ್ರಶ್ನೆ ಬಂದುಬಿಟ್ಟಿತ್ತು. ವಾಸ್ತವವಾಗಿ ಇದೇ
ಪ್ರಶ್ನೆ ಹಿಂದೆ ಎರಡು ಬಾರಿ ಬೇರೆ ಬೇರೆ ವರ್ಷದ ಪ್ರಶ್ನೆ ಪತ್ರಿಕೆಗಳಲ್ಲೂ ಬಂದಿತ್ತು. ಅದನ್ನು ವಿಶೇಷವಾಗಿ ಗಮನಿಸಿದ್ದ ನಾನು ಕೃಷ್ಣಪ್ಪಯ್ಯನವರ ಹತ್ತಿರ ಆ ಪ್ರಶ್ನೆಗೆ ಸಂಬಂಧ ಪಟ್ಟ ವಿಷಯವನ್ನು ನಮಗೆ ವಿವರಿಸಿ ಪ್ರಶ್ನೆ ಪುನಃ ಬಂದರೆ ಉತ್ತರ ಬರೆಯಲು ತಯಾರು ಮಾಡಬೇಕೆಂದು ಕೇಳಿಕೊಂಡಿದ್ದೆ. ಅವರೂ ಅದಕ್ಕೆ ಒಪ್ಪಿಗೆ ನೀಡಿದ್ದರು. ಆದರೆ ಪರೀಕ್ಷೆ ಹತ್ತಿರ ಬರುತ್ತಿರುವಾಗ ಅವರು ನನಗೆ ಅದೇ ಪ್ರಶ್ನೆ ಪುನಃ ಬರುವ ಚಾನ್ಸ್ ಇಲ್ಲವೆಂದು ಹೇಳಿ ಬಿಟ್ಟರು. ಮತ್ತು ನಮ್ಮನ್ನು ಆ ಪ್ರಶ್ನೆಗೆ ಉತ್ತರ ಬರೆಯಲು ತಯಾರಿ ಮಾಡಲೇ ಇಲ್ಲ.
ಆ ದಿನ ನಾನು ಫಿಸಿಕ್ಸ್ ಪ್ರಶ್ನೆ ಪತ್ರಿಕೆಗೆ ಉತ್ತರ ಬರೆದು ಮುಗಿಸಿ ಪರೀಕ್ಷಾ ಕೊಠಡಿಯಿಂದ ಹೊರಬರುತ್ತಿರುವಾಗ ಕೃಷ್ಣಪ್ಪಯ್ಯನವರು ತುಂಬಾ ಆತಂಕದಿಂದ ನಾನು ಹೊರಗೆ ಬರುವುದನ್ನೇ ಕಾಯುತ್ತಿರುವುದು ನನ್ನ ಕಣ್ಣಿಗೆ ಬಿತ್ತು. ನಾನು ತುಂಬಾ ಬೇಡಿಕೆ ಮಾಡಿದ್ದರೂ ಆ ಪ್ರಶ್ನೆಗೆ ಉತ್ತರ ಬರೆಯಲು ನಮಗೆ ಸಹಾಯ ಮಾಡದುದಕ್ಕಾಗಿ ತುಂಬಾ ಪಶ್ಚಾತ್ತಾಪವನ್ನು ವ್ಯಕ್ತಪಡಿಸಿದರು. ನಮ್ಮ ಪ್ರಶ್ನೆ ಪತ್ರಿಕೆಯಲ್ಲಿ ಆ ಪ್ರಶ್ನೆಗೆ ಯಾವುದೇ ಚಾಯ್ಸ್ ಇಲ್ಲದ್ದರಿಂದ ಉತ್ತರ ಬರೆಯದ ನನಗೆ ೧೦ ಅಂಕಗಳು ನಷ್ಟವಾದುವೆಂದು ಅವರು ಭಾವಿಸಿದ್ದರು. ನಾನವರಿಗೆ ಏನೂ ಬೇಸರಮಾಡುವ ಅವಶ್ಯಕತೆ ಇಲ್ಲವೆಂದೂ ಮತ್ತು ನಾನು ಆ ಪ್ರಶ್ನೆಗೆ ಸರಿಯಾದ ಉತ್ತರ ಬರೆದಿರುವೆನೆಂದೂ
ತಿಳಿಸಿದೆ!
ಮೂಲತಃ ನನ್ನದೊಂದು ಸ್ವಭಾವವಿತ್ತು. ನಾನು ಪರೀಕ್ಷೆಯ ವಿಷಯದಲ್ಲಿ ಯಾವುದೇ ರಿಸ್ಕ್ ತೆಗೆದುಕೊಳ್ಳುತ್ತಿರಲಿಲ್ಲ. ಕೃಷ್ಣಪ್ಪಯ್ಯನವರು ಸಹಾಯ ಮಾಡದಿದ್ದರಿಂದ ನಾನು ಒಂದು ಗೈಡ್ ನೋಡಿ ಆ ಪ್ರಶ್ನೆಗೆ ಉತ್ತರ ಬರೆಯುವ ತಯಾರಿ ಮಾಡಿಕೊಂಡು ಬಿಟ್ಟಿದ್ದೆ. ಹಾಗಾಗಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳಲ್ಲಿ ನಾನು ಮಾತ್ರ ಆ ಪ್ರಶ್ನೆಗೆ ಉತ್ತರಿಸಿ ಬಿಡಲು ಸಾಧ್ಯವಾಗಿತ್ತು. ಕೃಷ್ಣಪ್ಪಯ್ಯನವರಿಗೆ ನಾನು ಹೇಳಿದುದನ್ನು ನಂಬುವುದೇ ಕಷ್ಟವಾಯಿತು. ಅವರು ನನ್ನ ಹಠ ಮತ್ತು ಸಾಧನೆಗೆ ಹಾರ್ದಿಕವಾಗಿ ಅಭಿನಂದಿಸಿದರು.
------- ಮುಂದುವರಿಯುವುದು-----
No comments:
Post a Comment