Monday, May 4, 2020

ಬಾಲ್ಯ ಕಾಲದ ನೆನಪುಗಳು – ೮೩

ನನ್ನ ಈ ಹಿಂದಿನ ಶಿವಮೊಗ್ಗೆಯ ಹಾಸ್ಟೆಲಿನ ಶಿಸ್ತಿನ ಜೀವನಕ್ಕೂ ಶೃಂಗೇರಿಯ ದಿನಚರಿಗೂ ಅಜಗಜಾಂತರ ವ್ಯತ್ಯಾಸವಿತ್ತು. ಹಾಸ್ಟೆಲಿನ ಒಂದೇ ಕಟ್ಟಡದಲ್ಲಿ ನನ್ನ ವಾಸ, ಸ್ನಾನ, ಊಟ, ತಿಂಡಿ ಇತ್ಯಾದಿಗಳು  ಸೀಮಿತವಾಗಿದ್ದರೆ, ಶೃಂಗೇರಿಯಲ್ಲಿ ನಾನಿದ್ದ ಕೊಠಡಿಯಲ್ಲಿ ಯಾವುದೇ ಸೌಲಭ್ಯಗಳು ಇರಲಿಲ್ಲ. ಬೆಳಿಗ್ಗೆ ನಾನು ನನ್ನ ರೂಮಿನ ಹತ್ತಿರವೇ ಇದ್ದ ಹೊಳ್ಳರ ಮೆಸ್ಸಿನಲ್ಲಿ ಸ್ನಾನ ಮಾಡಿ ಕಾಫಿ ಮತ್ತು ತಿಂಡಿ ತೆಗೆದುಕೊಳ್ಳಬೇಕಿತ್ತು. ಒಂದು ರೀತಿಯ ಅಗ್ರಹಾರದಂತೇ ಇದ್ದ ಕಟ್ಟಡದಲ್ಲಿದ್ದ ಮೆಸ್ ನನ್ನ ಅದೃಷ್ಟಕ್ಕೆ ನನ್ನ ರೂಮಿನ ಹತ್ತಿರವೇ ಇತ್ತು. ಕಟ್ಟಡದ ಬಲಭಾಗದಲ್ಲಿ ಹೊಳ್ಳರ ಮನೆ ಮತ್ತು ಮೆಸ್ ಇದ್ದರೆ, ಎಡಭಾಗದಲ್ಲಿ ಸಣ್ಣೇಭಟ್ಟ ಎಂಬುವರ ಮನೆ ಇತ್ತು. ನಾವು ಚಿಕ್ಕವರಿದ್ದಾಗ  ನವರಾತ್ರಿಗೆ ಶೃಂಗೇರಿಗೆ ಬಂದಾಗ ಸಣ್ಣೇಭಟ್ಟರ ಮನೆಯಲ್ಲೇ ಉಳಿದುಕೊಳ್ಳುತ್ತಿದ್ದೆವು. ಆದರೆ ಈಗ ಸಣ್ಣೇಭಟ್ಟರು ತುಂಬಾ ಮುದುಕರಾಗಿ ಬಿಟ್ಟಿದ್ದರು. ಶೃಂಗೇರಿಯಲ್ಲಿ ಕಾಲೇಜು ಆಗಿದ್ದು ಅವರಿಗೊಂದು ವರವೇ ಆಯಿತು. ಏಕೆಂದರೆ ನಿರುದ್ಯೋಗಿಯಾಗಿದ್ದ ಅವರ ಹಿರಿಯ ಮಗ ನರಸಿಂಹನಿಗೆ ಕಾಲೇಜಿನಲ್ಲಿ ಲ್ಯಾಬೋರೇಟರಿ ಅಟೆಂಡರ್ ಕೆಲಸ ಸಿಕ್ಕಿ ಬಿಟ್ಟಿತು.

ಹೊಳ್ಳರ ಮನೆ ಮತ್ತು ಮೆಸ್ ಒಂದೇ ಆಗಿದ್ದರಿಂದ ನಮಗೆ ಹಲವು ಮುಜುಗರಗಳಿದ್ದವು.  ಮನೆಯ ಹಿಂಭಾಗದಲ್ಲಿ ಬಚ್ಚಲುಮನೆ ಮತ್ತು ದನದ ಕೊಟ್ಟಿಗೆ ಇದ್ದುವು. ಬಾಗಿಲಿಲ್ಲದ ಬಚ್ಚಲಮನೆಯಲ್ಲಿ ನಾವು ಸ್ನಾನ ಮಾಡುತ್ತಿರುವಾಗ ಹೊಳ್ಳರ ಹೆಂಡತಿ ಮತ್ತು ಮಗಳು ಅಲ್ಲೇ ದನದ ಕೊಟ್ಟಿಗೆಗೆ ಹೋಗಲು ಓಡಾಡುತ್ತಿದ್ದರು. ಹಳ್ಳಿಯಲ್ಲೇ ಹುಟ್ಟಿ ಬೆಳೆದ ನಮಗೆ ಹೆಂಗಸರ ಮುಂದೆ ಸ್ನಾನ ಮಾಡುವುದು ನಾಚಿಕೆಯನ್ನುಂಟು ಮಾಡುತ್ತಿತ್ತು. ಆದರೆ ಹೊಳ್ಳರು ಊಟ ಮತ್ತು ತಿಂಡಿ ಬಡಿಸುವುದಕ್ಕೆ  ಹೆಂಗಸರನ್ನು ಕರೆಯುತ್ತಿರಲಿಲ್ಲ. ಅವರೇ ಸ್ವತಃ ಮತ್ತು ಗಂಡು ಮಕ್ಕಳೊಡನೆ ಆ ಕಾರ್ಯ ಮಾಡುತ್ತಿದ್ದರು. ನಮಗೆ ಅದೊಂದು ನೆಮ್ಮದಿಯಾಗಿತ್ತು. ಹೊಳ್ಳರು ತುಂಬಾ ಶ್ರಮ ಜೀವಿಯಾಗಿದ್ದರು ಮತ್ತು ಊಟ, ತಿಂಡಿಗಳ ಗುಣಮಟ್ಟ ಹಾಗೂ ರುಚಿ ತುಂಬಾ ಚೆನ್ನಾಗಿತ್ತು.

ಇದ್ದಕ್ಕಿದ್ದಂತೇ ಹೊಳ್ಳರ ಮೆಸ್ಸಿನ ವ್ಯವಹಾರ ಮತ್ತು ಪ್ರತಿಷ್ಠೆ ಆಕಾಶಕ್ಕೇರಿ ಬಿಟ್ಟವು. ಏಕೆಂದರೆ ಕಾಲೇಜಿನ ಉಪನ್ಯಾಸಕರೆಲ್ಲಾ ಅವರ ಮೆಸ್ಸಿನಲ್ಲೇ ಊಟ ಮತ್ತು ತಿಂಡಿ ತೆಗೆದುಕೊಳ್ಳುವುದಾಗಿ ತೀರ್ಮಾನಿಸಿ ಬಿಟ್ಟರು. ನಮಗೂ ಅವರೊಂದಿಗೆ ಕುಳಿತು ಊಟ, ತಿಂಡಿ ತೆಗೆದುಕೊಳ್ಳುವ ಸನ್ನಿವೇಶ ಉಂಟಾಯಿತು. ನಾವು ಬೆಳಿಗ್ಗೆ ಸುಮಾರು ೯.೩೦ ಗಂಟೆಗೆ ಊಟ ಮುಗಿಸಿ ಕಾಲೇಜಿಗೆ ಹೊರಡುತ್ತಿದ್ದೆವು. ಸುಮಾರು ಎರಡು ಕಿಲೋಮೀಟರ್ ದೂರದಲ್ಲಿದ್ದ ಕಾಲೇಜಿಗೆ ನಾವುಗಳು ಮತ್ತು ಉಪನ್ಯಾಸಕರು ನಡೆದೇ ಹೋಗುತ್ತಿದ್ದೆವು. ಹೆಚ್ಚು ಮಂದಿ ಹಳ್ಳಿಯಿಂದ ಬರುತ್ತಿದ್ದ ವಿದ್ಯಾರ್ಥಿಗಳೂ ಕೂಡ ಸಾಮಾನ್ಯವಾಗಿ ಕಾಲ್ನಡಿಗೆಯಲ್ಲೇ ಕಾಲೇಜು ತಲುಪುತ್ತಿದ್ದರು.

ಉಪನ್ಯಾಸಕರ ಪೇಟೆ ಮೆರವಣಿಗೆ

ಇನ್ನೂ ಹೊಸದಾಗಿ ಬಂದಿದ್ದ  ಉಪನ್ಯಾಸಕರುಗಳಿಗೆ ಶೃಂಗೇರಿ ಪಟ್ಟಣದ ಜನಗಳ ನಾಗರೀಕತೆ ಸ್ವಲ್ಪ ಹಳೆಯ ಕಾಲದ್ದೇ ಆಗಿತ್ತೆಂದು ಬೇಗನೆ ಅರಿವಾಯಿತು. ಆಗಿನ ಕಾಲದ ಶೃಂಗೇರಿ ಪೇಟೆ ಎಂದರೆ  ಮಠದಿಂದ ಕೊಪ್ಪ-ಮತ್ತು ಜಯಪುರ ರಸ್ತೆಯತ್ತ ಸಾಗುವ  ಭಾರತಿ ಬೀದಿ ಎಂಬ ನೇರ ರಸ್ತೆಯಲ್ಲಿದ್ದ ಅಂಗಡಿ ಮತ್ತು ಮನೆಗಳಾಗಿದ್ದವು.  ಉಪನ್ಯಾಸಕರೆಲ್ಲಾ ಮಠದ ಹತ್ತಿರವೇ ಇದ್ದ ಮನೆಗಳಲ್ಲಿ ವಾಸ ಮಾಡುತ್ತಿದ್ದರಿಂದ ಅವರು ಭಾರತಿ ರಸ್ತೆಯ ತುದಿಯವರೆಗೆ ನಡೆದು ಕಾಲೇಜು ಕಟ್ಟಡ ತಲುಪಬೇಕಿತ್ತು. ಸಾಮಾನ್ಯವಾಗಿ ಅವರೆಲ್ಲಾ ಒಟ್ಟಾಗಿಯೇ ಕಾಲೇಜಿಗೆ ಹೊರಡುತ್ತಿದ್ದರಿಂದ ಬೀದಿಯಲ್ಲಿ ಹೋಗುತ್ತಿದ್ದ ಒಂದು ಮೆರವಣಿಗೆಯಂತೇ ಕಾಣಿಸುತ್ತಿದ್ದರು. ಪೇಟೆಯ ಜನಗಳು ಮತ್ತು ವಿದ್ಯಾರ್ಥಿಗಳಾದ ನಾವು ಸಾಮಾನ್ಯವಾಗಿ ಮುಂಡುಪಂಚೆ ಮತ್ತು ಶರ್ಟ್ ಧರಿಸಿದ್ದರೆ ಉಪನ್ಯಾಸಕರಲ್ಲಿ ಹೆಚ್ಚಿನ ಮಂದಿ ಫುಲ್ ಸೂಟ್ ಧರಿಸುತ್ತಿದ್ದರು. ಈ ಮೆರವಣಿಗೆ ಊರಿನ ಜನರ ಕಣ್ಣು ಕುಕ್ಕುವಂತೆ ಕಾಣತೊಡಗಿತು.

ಪೇಟೆಯ ಹೆಚ್ಚು ಮಂದಿಗೆ ಅದರಲ್ಲೂ ಸ್ತ್ರೀಯರಿಗೆ ತಮ್ಮ ಮನೆಗಳ ಕಿಟಕಿ ಅಥವಾ ಅರೆತೆರೆದ ಬಾಗಿಲುಗಳ ಮೂಲಕ ಈ ಉಪನ್ಯಾಸಕರ ಮೆರವಣಿಗೆಯನ್ನು ನೋಡುವುದೊಂದು ದಿನನಿತ್ಯದ ಹವ್ಯಾಸವಾಗಿ ಹೋಯಿತು. ಅಷ್ಟು ಮಾತ್ರವಲ್ಲ. ಅವರಲ್ಲಿ ಯಾರು ಪ್ರತಿಯೊಬ್ಬ ಉಪನ್ಯಾಸಕರ ಹೆಸರು ಮತ್ತು ಅವರು ತೆಗೆದುಕೊಳ್ಳುತ್ತಿದ್ದ ಸಬ್ಜೆಕ್ಟ್ ಸರಿಯಾಗಿ ಹೇಳಬಲ್ಲರೆಂಬ ಬಗ್ಗೆ ಒಂದು ಸ್ಪರ್ಧೆಯೂ ನಡೆಯ ತೊಡಗಿತು! ಇದಲ್ಲದೇ ಉಪನ್ಯಾಸಕರಲ್ಲಿ ಯಾರು ಹೆಚ್ಚು ಸುಂದರವಾಗಿರುವರು ಮತ್ತು ಯಾರು ಹೆಚ್ಚು ಸ್ಟೈಲಾಗಿ ಡ್ರೆಸ್ ಮಾಡುವರು ಎಂಬ ಬಗ್ಗೆ ಕೂಡ ಚರ್ಚೆಗಳು ನಡೆಯತೊಡಗಿದವು. ಈ ಸ್ಪರ್ಧೆಗಳಲ್ಲಿ ಯಾವಾಗಲೂ ಹೊಳ್ಳರ ಹೆಂಡತಿಯ ಒಂದು ಕೈ ಮೇಲಾಗಿರುತ್ತಿತ್ತು. ಏಕೆಂದರೆ ಅವರಲ್ಲಿ ಹೆಚ್ಚಿನವರು ಮೆಸ್ಸಿನಲ್ಲಿ ಊಟ ಮಾಡುತ್ತಿದ್ದರಿಂದ ಆಕೆಗೆ ಅವರನ್ನು ತೀರಾ ಹತ್ತಿರದಿಂದ ನೋಡುವ ಅವಕಾಶ ದೊರೆಯುತ್ತಿತ್ತು. ಹಾಗಾಗಿ ಅವರಲ್ಲಿ ಯಾರು ಹೆಚ್ಚು ಊಟ ಮಾಡುತ್ತಾರೆ ಮತ್ತು ಯಾರು ಕಡಿಮೆ ಊಟ ಮಾಡುತ್ತಾರೆಂದು ಕೂಡ ಆಕೆಗೆ ಗೊತ್ತಿತ್ತು! ಅಲ್ಲದೇ ನಮ್ಮಿಂದಲೂ ಕೆಲವು ವಿಷಯಗಳು ತಿಳಿಯುತ್ತಿದ್ದವು.

ಉಪನ್ಯಾಸಕರುಗಳಿಗೆ ಹೀಗೆ ಊರಿನ ಜನಗಳು ಪ್ರತಿ ನಿತ್ಯವೂ ತಮ್ಮ ಮೆರವಣಿಗೆಯನ್ನು ಗಮನಿಸುತ್ತಿದ್ದಾರೆಂದು ಮೊದಮೊದಲು ಅರಿವಿರಲಿಲ್ಲ. ಆದರೆ ತಾವು ಶೃಂಗೇರಿ ಪೇಟೆಯ ಬೀದಿಯಲ್ಲಿ ಉತ್ಸವಮೂರ್ತಿಗಳಾಗಿದ್ದೇವೆಂಬ ಸಮಾಚಾರ ತಿಳಿದಾಗ ಅವರಿಗೇನು ತಮಾಷೆ ಎನಿಸಲಿಲ್ಲ. ಇಷ್ಟರ ಮಧ್ಯೆ ಅವರಿಗೆ ಇನ್ನೊಂದು ವಿಷಯವೂ ಗೊತ್ತಾಯಿತು. ಪೇಟೆಯ ಕೆಲವು ಕುಟುಂಬದವರು ಅವರಲ್ಲಿ  ಕೆಲವರನ್ನು ತಮ್ಮ ಮಗಳಿಗೆ ವರನನ್ನಾಗಿ ಆಯ್ಕೆ ಮಾಡಿ ಬಿಟ್ಟಿದ್ದರು! ಆ ವಿಷಯ ತಿಳಿದಾಗ ಅವರಿಗಾದ ಕಸಿವಿಸಿ ಅಷ್ಟಿಟ್ಟಲ್ಲ. ಆದರೆ ಈ ಸಮಾಚಾರ ತೀರಾ ಸುಳ್ಳೂ ಆಗಲಿಲ್ಲ. ಏಕೆಂದರೆ ಮುಂದೆ ಇಬ್ಬರು ಉಪನ್ಯಾಸಕರು ಶೃಂಗೇರಿ ಪೇಟೆಯ ಹುಡುಗಿಯರನ್ನೇ ವಿವಾಹವಾದದ್ದು ಅಷ್ಟೇ ನಿಜವಾಗಿತ್ತು!

ಆದರೆ ಆ ಸಮಯದಲ್ಲಿ ಉಪನ್ಯಾಸಕರುಗಳಿಗೆ  ಪೇಟೆಯ ಜನಗಳ ಈ ನಡೆವಳಿಕೆ ಏನೇನೂ ಇಷ್ಟವಾಗಲಿಲ್ಲ. ಅವರಲ್ಲಿ ಅತ್ಯಂತ ಕೋಪ ಬಂದಿದ್ದುದು ಇಂಗ್ಲಿಷ್ ಉಪನ್ಯಾಸಕರಾದ ಶ್ರೀರಾಮ್ ಅವರಿಗೆ. ಏಕೆಂದರೆ ಅವರು ತಮ್ಮ ಉಡುಪಿನ ಬಗ್ಗೆ ವಿಶೇಷ ಗಮನ ಕೊಡುತ್ತಿರಲಿಲ್ಲ.  ಒಂದು ಸಾಧಾರಣ ಶರ್ಟ್ ಮತ್ತು ಪ್ಯಾಂಟ್ ಧರಿಸಿ ಕಾಲೇಜಿಗೆ ಬರುತ್ತಿದ್ದ ಅವರಿಗೆ ಪೇಟೆಯ ಜನಗಳ ದೃಷ್ಟಿಯಲ್ಲಿ ತಮ್ಮ ರೇಟಿಂಗ್ ತುಂಬಾ ಕೆಳಮಟ್ಟದ್ದಾಗಿದೆಯೆಂದೂ ಗೊತ್ತಾಗಿ ಮೈಯೆಲ್ಲಾ ಉರಿದು ಹೋಯಿತು. ನಾನು ಈ ಮೊದಲೇ ಬರೆದಂತೆ ಶೃಂಗೇರಿ ಜನರ ಆಚಾರ ವಿಚಾರಗಳು ಅವರಿಗೆ ಏನೇನೂ ಇಷ್ಟವಾಗಿರಲಿಲ್ಲ. ಅದನ್ನು ಅವರು ಪದೇಪದೇ ತಮ್ಮ ತರಗತಿಯಲ್ಲಿ ಹೇಳುತ್ತಲೇ ಇದ್ದರು.

ಹಾಗಾಗಿ ನಾವು ಎಣಿಸಿದಂತೆ ಉಪನ್ಯಾಸಕರುಗಳ ೧೦ ವಿಕೆಟ್ ಗಳಲ್ಲಿ ಮೊದಲು ಬಿದ್ದ ವಿಕೆಟ್ ಶ್ರೀರಾಮ್  ಅವರದ್ದೇ ಆಗಿತ್ತು!  ಆ ಬಗ್ಗೆ ಮುಂದೆ ಬರೆಯುತ್ತೇನೆ.

ಆ ಕಾಲದ ಶೃಂಗೇರಿ ಪೇಟೆ

ನನ್ನ ಓದುಗರನ್ನು ಈಗ ೫೦ ವರ್ಷಕ್ಕೂ ಹಿಂದಿನ ಆ ಕಾಲದಲ್ಲಿ ಶೃಂಗೇರಿ ಪೇಟೆ ಮತ್ತು ಅಲ್ಲಿಯ ಪ್ರಮುಖ ನಾಗರೀಕರು ಹೇಗಿದ್ದರೆಂದು ಸೂಕ್ಷ್ಮ ಪರಿಚಯ ಮಾಡಿಕೊಡಲು ಯತ್ನಿಸುತ್ತೇನೆ. ಪೇಟೆಯಲ್ಲಿದ್ದ ಹೆಚ್ಚು ಕಟ್ಟಡಗಳು ತೀರಾ ಕಳಪೆ ಕಟ್ಟಡಗಳಾಗಿದ್ದುವು. ಹೆಚ್ಚಿನವಕ್ಕೆ ಮಂಗಳೂರು ಹೆಂಚೂ ಹೊದಿಸದೆ ನಾಡ ಹೆಂಚು ಹೊದಿಸಲಾಗಿತ್ತು. ಮುನಿಸಿಪಾಲಿಟಿ ಇದ್ದರೂ ಕೂಡ ಸರಿಯಾದ ಒಳಚರಂಡಿ ವ್ಯವಸ್ಥೆ ಇರಲಿಲ್ಲ. ಶೃಂಗೇರಿ ಮಠದಿಂದ ಹೊರಗೆ ಬಂದಾಗ ಎದುರಿಗಿದ್ದದ್ದೇ ಭಾರತಿ ರಸ್ತೆ.  ಎಡ ಭಾಗಕ್ಕೆ ತಿರುಗಿ ಹೋದರೆ ಒಂದು ಸಣ್ಣ ರಸ್ತೆ ಬಸ್ ನಿಲ್ದಾಣಕ್ಕೆ  ಹೋಗುತ್ತಿತ್ತು.  ಒಂದು ಹಾಳು ಬಿದ್ದ ಕಟ್ಟಡ ಮತ್ತು ಅದರೊಳಗಿದ್ದ ಒಂದು ಕೊಳಕು ಹೋಟೆಲ್ ಮುಂದಿದ್ದ ಈ ಬಸ್ ನಿಲ್ದಾಣಕ್ಕೆ ಯಾವುದೇ ಪ್ರಾಮುಖ್ಯತೆ ಇರಲಿಲ್ಲ. ಅಲ್ಲಿ ಪ್ರಯಾಣಿಕರು ಯಾರೂ ನಿಮ್ಮ ಕಣ್ಣಿಗೆ ಬೀಳುತ್ತಿರಲಿಲ್ಲ. ಕಾರಣವಿಷ್ಟೇ. ಹೆಚ್ಚಿನ ಪ್ರಯಾಣಿಕರು ಪೇಟೆಯ ಮಧ್ಯೆ ಇದ್ದ ಕಟ್ಟೇಬಾಗಿಲು ಎಂಬಲ್ಲಿ ಅಥವಾ ಮಠದ ಮುಂಭಾಗದಲ್ಲಿ ಬಸ್ ಹತ್ತುತ್ತಿದ್ದರು ಅಥವಾ ಇಳಿದುಬಿಡುತ್ತಿದ್ದರು. ಖಾಲಿ ಬಸ್ ನಿಲ್ದಾಣ ತಲುಪಿ ಅಲ್ಲಿಂದಲೂ ಖಾಲಿಯಾಗಿಯೇ ಹೊರಡುತ್ತಿತ್ತು.

ಈ ರಸ್ತೆಯಲ್ಲಿ ಮೊದಲು ಸಿಗುತ್ತಿದ್ದುದು ನಾನು ಹಿಂದೆಯೇ ಹೇಳಿದ್ದ ಚಂದ್ರಮೌಳಿರಾಯರ ಮನೆ. ಅದು ತಕ್ಕಮಟ್ಟಿಗೆ ಚೆನ್ನಾಗಿಯೇ ಇದ್ದ ಕಟ್ಟಡವಾಗಿತ್ತು. ಈ ಬೀದಿಯಲ್ಲಿದ್ದ ಇನ್ನೊಂದು ಪ್ರಮುಖ ಮನೆಯೆಂದರೆ ಎನ್ ಎಸ್ ಚಂದ್ರಶೇಖರ್ ಅವರದು. ಹಿರಿಯ ಪತ್ರಕರ್ತರಾಗಿದ್ದ ಚಂದ್ರಶೇಖರ್ ಇಂಡಿಯನ್ ಎಕ್ಸ್ ಪ್ರೆಸ್ ಮತ್ತು ಕನ್ನಡ ಪ್ರಭಾ ಏಜೆಂಟ್ ಕೂಡಾ ಆಗಿದ್ದರು. ಇನ್ನೊಂದು ಮುಖ್ಯ ಮನೆ ಪ್ರಸಿದ್ಧ ಜೋತಿಷಿ ಬಾಲಗಣಪತಿಯವರದು. ಮುನಿಸಿಪಾಲಿಟಿ ಆಫೀಸ್ ಕೂಡ ಈ ರಸ್ತೆಯಲ್ಲೇ ಇತ್ತು. ಶೃಂಗೇರಿಯ ಇನ್ನೊಂದು ಮೆಸ್ ಕೂಡ ಈ ಬೀದಿಯಲ್ಲಿತ್ತು. ಅದನ್ನು ನಡೆಸುತ್ತಿದ್ದವರು ಕಲ್ಲು ದೇವಸ್ಥಾನ ಸುಬ್ಬರಾಯರು. ಸುಬ್ಬರಾಯರದು ಆಗ ತಾನೇ ಪ್ರಾರಂಭಿಸಿದ ಮೆಸ್ ಆಗಿತ್ತು. ಅದಕ್ಕೆ ಮೊದಲು ಅವರು ಬೇರೊಂದು ವಿಚಿತ್ರ ವೃತ್ತಿಯಿಂದ ಜೀವನ ಸಾಗಿಸುತ್ತಿದ್ದರಂತೆ. ಅದೇ ಅವರು ಮನೆಯಲ್ಲೇ ನಡೆಸುತ್ತಿದ್ದ ಇಸ್ಪೇಟು ಕ್ಲಬ್. ಇಸ್ಪೇಟು ಆಟವೊಂದು ದುಶ್ಚಟ ಮತ್ತು ಹಣಕಳಕೊಳ್ಳುವ ಆಟವೆಂದು ನಾವೆಲ್ಲಾ ಭಾವಿಸಿದ್ದ ಆ ದಿನಗಳಲ್ಲಿ ಸುಬ್ಬರಾಯರು ಅದರಿಂದ ಸಂಪಾದಿಸಿದ ಹಣದಿಂದಲೇ ಸಂಸಾರ   ನಿರ್ವಹಿಸುತ್ತಿದ್ದರಂತೆ! ಹಗಲು ರಾತ್ರಿ ಎನ್ನದೇ ಇವರ ಮನೆಯಲ್ಲಿ  ಹಾಗೂ ಕಾಳಪ್ಪ ಶೆಟ್ಟಿ ಎಂಬುವರ ಮನೆಯಲ್ಲಿ ನಡೆಯುತ್ತಿದ್ದ ಇಸ್ಪೇಟು ಆಟದಲ್ಲಿ ಪೇಟೆಯ ಕೆಲವರಲ್ಲದೇ ಹತ್ತಿರದ ಕೆಲವು ಹಳ್ಳಿಯವರೂ ಭಾಗವಹಿಸುತ್ತಿದ್ದರಂತೆ. ಅಂದಿನ ಮಲೆನಾಡಿನ ಎಷ್ಟೋ ಕುಟುಂಬಗಳ ಯಜಮಾನರು ಶೃಂಗೇರಿಗೆ ಬರುತ್ತಿದ್ದುದು ಶಾರದಾಂಬೆಯ ದರ್ಶನಕ್ಕಲ್ಲ. ಕೇವಲ ಇಸ್ಪೇಟು ಆಟ ಆಡಿ ಹಣ ಕಳಕೊಳ್ಳುವುದಕ್ಕೆ. ಅದನ್ನರಿತ ಈ ಯಜಮಾನರ ಪತ್ನಿಯರು ಹೀಗೆ ಇಸ್ಪೇಟು ಆಟಕ್ಕೆ ಅವಕಾಶ ನೀಡುತ್ತಿದ್ದ ಸುಬ್ಬರಾಯರಂತವರಿಗೆ ಹಿಡಿ ಶಾಪ ಹಾಕುತ್ತಿದ್ದರಲ್ಲಿ ಆಶ್ಚರ್ಯವೇನಿರಲಿಲ್ಲ.

ಹಳೇಮನೆ ಕುಟುಂಬ

ಮಠದ ಮುಂದೆ ಬಲಭಾಗದಲ್ಲಿದ್ದ ಕಟ್ಟಡದಲ್ಲಿ ತಾಲೂಕ್  ಕಚೇರಿ ಇದ್ದರೆ  ಎಡಭಾಗದಲ್ಲಿದ್ದ ಮೊದಲ ಕಟ್ಟಡ ಹಳೇಮನೆ ಕುಟುಂಬಕ್ಕೆ ಸೇರಿತ್ತು. ನಾಲ್ಕು ಮಂದಿ ಸಹೋದರರ ಆ ಕುಟುಂಬದ ಹಿರಿಯರಾದ ಮಹಾಬಲಯ್ಯ ಮತ್ತು ಕಿರಿಯರಾದ ಶ್ರೀಕಂಠಯ್ಯ ಈ ಕಟ್ಟಡದಲ್ಲಿದ್ದ ಎರಡು ಮನೆಗಳಲ್ಲಿ ವಾಸ ಮಾಡುತ್ತಿದ್ದರು. ಕೃಷ್ಣಸ್ವಾಮಿ ಎನ್ನುವರು ಹತ್ತಿರದ ಹಳ್ಳಿಯಲ್ಲಿದ್ದರೆ ಇನ್ನೊಬ್ಬ ಸಹೋದರ ಶಿವಸ್ವಾಮಿಯವರು ಮಣಿಪಾಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದರು. ಶ್ರೀಕಂಠಯ್ಯನವರು ಶೃಂಗೇರಿಯ ಸ್ಥಳೀಯ  ರಾಜಕೀಯದಲ್ಲಿ ಚಾಣಕ್ಯನಂತಿದ್ದರು. ಒಮ್ಮೆ ಮುನಿಸಿಪಾಲಿಟಿ ಸದಸ್ಯರೂ ಆಗಿದ್ದ ಶ್ರೀಕಂಠಯ್ಯನವರು ಆಮೇಲೆ ತೆರೆಮರೆಯಲ್ಲಿ ಚಟುವಟಿಕೆ ನಡೆಸುತ್ತಿದ್ದ ಕಿಂಗ್ ಮೇಕರ್ ಆಗಿದ್ದರು. ಮುನಿಸಿಪಾಲಿಟಿ ಚುನಾವಣೆಗೆ ನಿಲ್ಲುವರಿಗೆ ಅವರ ಸಲಹೆಗಳು ತುಂಬಾ ಅಮೂಲ್ಯವಾಗಿದ್ದವು. ತುಂಬಾ ಆಕರ್ಷಕ ಮತ್ತು ಸರಳ ಸ್ವಭಾವದ ಶ್ರೀಕಂಠಯ್ಯನವರು ವಿದ್ಯಾಭ್ಯಾಸದ ಅವಶ್ಯಕತೆಯನ್ನು ಬಲ್ಲವರಾಗಿದ್ದರು. ಅವರ ಹಿರಿಯ ಮಗಳು ವಿಜಯಲಕ್ಷ್ಮಿ ಹುಬ್ಬಳ್ಳಿ ಮೆಡಿಕಲ್ ಕಾಲೇಜಿನಲ್ಲಿ ಎಂ. ಬಿ. ಬಿ. ಎಸ್ ಓದುತ್ತಿದ್ದರೆ ಅವಳ  ತಮ್ಮ ಜಯಪ್ರಕಾಶ ಅಲ್ಲಿಯೇ ಪಿ. ಯು. ಸಿ. ಓದುತ್ತಿದ್ದ. ಅವನನ್ನು ಶೃಂಗೇರಿ ಕಾಲೇಜಿನಲ್ಲಿ ಓದಿಸಲು ಅವರಿಗೆ ಯಾವುದೋ ಕಾರಣದಿಂದ ಇಷ್ಟವಿರಲಿಲ್ಲ. ಜಯಪ್ರಕಾಶ ನನ್ನ ಅಣ್ಣನ ಕ್ಲಾಸ್ ಮೇಟ್ ಮತ್ತು ಆತ್ಮೀಯ ಸ್ನೇಹಿತನಾಗಿದ್ದ . ನಾನೊಮ್ಮೆ ಅಣ್ಣನೊಡನೆ ಶ್ರೀಕಂಠಯ್ಯನವರ ಮನೆಗೆ ಹೋಗಿದ್ದೆ.

ಭಾರತಿ ರಸ್ತೆಯಲ್ಲಿದ್ದ ಇನ್ನೊಂದು ಮುಖ್ಯವಾದ ಮನೆ ಶೃಂಗೇರಿ ಹೈಸ್ಕೂಲಿನ ಹೆಡ್ ಮಾಸ್ಟರ್ ಅವರದಾಗಿತ್ತು. ಅವರ ಹಿರಿಯ ಮಗಳು ಸುಭದ್ರಾ ನಮ್ಮ ಕ್ಲಾಸ್ ಮೇಟ್  ಆಗಿದ್ದಳು. ಒಂದು ವರ್ಷದ ಹಿಂದೆ ಪೇಟೆಯ ಪ್ರಮುಖರಲ್ಲೊಬ್ಬರಾಗಿದ್ದ ಹೆಡ್ ಮಾಸ್ಟರ್ ಅವರ ಸ್ಥಾನ ಕಾಲೇಜ್ ಸ್ಥಾಪನೆಯಾದ ನಂತರ ಸ್ವಲ್ಪ ಕೆಲ ಮಟ್ಟಕ್ಕೆ ಹೋಗಿ ಬಿಟ್ಟಿತ್ತು. ಸ್ಥಳೀಯರ ದೃಷ್ಟಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಕಾಲೇಜು ಉಪನ್ಯಾಸಕರ ಮುಂದೆ ಹೈಸ್ಕೂಲ್ ಮೇಷ್ಟ್ರುಗಳ ಸ್ಥಾನ ಸ್ವಲ್ಪ ಕೆಳಮಟ್ಟದ್ದಾಗಿತ್ತು!

ಶೃಂಗೇರಿಯ ಡಾಕ್ಟರ್ ಗಳು

ಶೃಂಗೇರಿ ತಾಲೂಕಿನಲ್ಲಿ ಆಗ ಮ್ಯಾಜಿಸ್ಟ್ರೇಟ್ ಕೋರ್ಟ್ ಇರಲಿಲ್ಲ. ಆದ್ದರಿಂದ ಪ್ರಾಕ್ಟೀಸ್ ಮಾಡುತ್ತಿದ್ದ ಯಾವುದೇ ನ್ಯಾಯವಾದಿಗಳು ಅಲ್ಲಿರಲಿಲ್ಲ. ಆದರೆ ಸಾಕಷ್ಟು ಸಂಖ್ಯೆಯ ಡಾಕ್ಟರ್ ಗಳು ಇದ್ದರು. ಡಾಕ್ಟರ್ ಟಿ.ಕೆ. ಭಟ್ ಎನ್ನುವರು ಎಲ್ಲರಿಗಿಂತಲೂ ಹಿರಿಯ ಡಾಕ್ಟರ್ ಆಗಿದ್ದರು. ಅವರು ಮತ್ತು ಡಾಕ್ಟರ್ ಹುಲಸೆ ಮಂಜಪ್ಪ ಗೌಡ ಎಂಬ ಇಬ್ಬರು ಮಾತ್ರಾ ಎಂ. ಬಿ. ಬಿ. ಎಸ್  ಪದವೀಧರರಾಗಿದ್ದರು. ಟಿ.ಕೆ. ಭಟ್ ಅವರು ಎಷ್ಟು ಹಿರಿಯರಾಗಿದ್ದರೆಂದರೆ ಬೆಂಗಳೂರಿನ ಟಾಟಾ ಇನ್ಸ್ಟಿಟ್ಯೂಟ್ ನಲ್ಲಿ (IISc) ಪ್ರೊಫೆಸರ್ ಆಗಿದ್ದ ಅವರ ಹಿರಿಯ ಮಗ ೧೯೬೯ನೇ ಇಸವಿಯಲ್ಲಿ ನಾನವರನ್ನು ಭೇಟಿ ಮಾಡಿದಾಗ ನಿವೃತ್ತಿಯ ಹತ್ತಿರದಲ್ಲಿದ್ದರು.

ಡಾಕ್ಟರ್ ಟಿ.ಕೆ. ಭಟ್ ಮತ್ತು ಇನ್ನೊಬ್ಬ ಹಿರಿಯ ಡಾಕ್ಟರ್ ಕೆ. ಪಿ. ಭಟ್ ಅವರಿಬ್ಬರೂ ಗೌಡ ಸಾರಸ್ವತ ಸಮುದಾಯಕ್ಕೆ ಸೇರಿದವರಾಗಿದ್ದರು. ಎಲ್. ಎಂ. ಪಿ.  ಪಾಸ್ ಮಾಡಿದ್ದ ಕೆ. ಪಿ. ಭಟ್ ಒಂದು ಕಾಲದಲ್ಲಿ ಶೃಂಗೇರಿಯ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಒಳ್ಳೆಯ ಪ್ರಾಕ್ಟೀಸ್ ಹೊಂದಿದ್ದರಂತೆ. ಆದರೆ ವಯಸ್ಸಾಗುತ್ತ ಬಂದಂತೆ ಇಬ್ಬರು ಭಟ್ ಡಾಕ್ಟರುಗಳ ಪ್ರಾಕ್ಟೀಸ್ ಕಡಿಮೆಯಾಗಿ ಬಿಟ್ಟಿತ್ತು. ಆದರೆ ಅವರಿಬ್ಬರ ಕ್ಲಿನಿಕ್ ಗಳು ಪೇಟೆಯಲ್ಲಿ ನಡೆಯುತ್ತಲೇ ಇದ್ದವು. ಡಾಕ್ಟರ್ ಟಿ.ಕೆ. ಭಟ್ ಅವರು ಇನ್ನೊಂದು ಕಾರಣಕ್ಕಾಗಿಯೂ ಸುದ್ದಿಯಲ್ಲಿದ್ದರು. ಅದಕ್ಕೆ ಕಾರಣ ಅವರು ಮತ್ತು ತಾಲೂಕ್ ಬೋರ್ಡ್ ಅಧ್ಯಕ್ಷರಾಗಿದ್ದ ವೀರಪ್ಪ ಗೌಡರ ನಡುವಿನ ಒಂದು ವಿವಾದಕ್ಕಾಗಿ.

ವೀರಪ್ಪ ಗೌಡರು (ಮುಂದೆ ಎಂ. ಎಲ್. ಎ. ಆದವರು) ಶೃಂಗೇರಿ ಹೈಸ್ಕೂಲಿನ ಬಳಿ ರಸ್ತೆಯ ಪಕ್ಕದಲ್ಲಿ ಇದ್ದ ಒಂದು ಗುಡ್ಡದ ತುದಿಯಲ್ಲಿ ಒಂದು ಬಂಗಲೆ ಕಟ್ಟಿ ವಾಸ ಮಾಡುತ್ತಿದ್ದರು. ಬಂಗಲೆಯ ಹತ್ತಿರ ಅವರು ತೋಡಿಸಿದ್ದ ಭಾವಿಯಲ್ಲಿ ನೀರು ಸಮೃದ್ಧಿಯಾಗಿತ್ತಂತೆ.  ರಸ್ತೆಯ ಕೆಳಭಾಗದ ಇನ್ನೊಂದು ಬದಿಯಲ್ಲಿ  ಡಾಕ್ಟರ್ ಟಿ.ಕೆ. ಭಟ್  ಅವರ ಬಂಗಲೆ ಮತ್ತು ಗಾರ್ಡನ್ ಇತ್ತಂತೆ. ಭಟ್ ಅವರು ತಮ್ಮ ಗಾರ್ಡನ್ ಒಳಗೆ ಭಾವಿಯೊಂದನ್ನು ತೋಡಿಸಿದಾಗ ಕೇವಲ ಸ್ವಲ್ಪ ಆಳದಲ್ಲೇ ನೀರು ಸಮೃದ್ಧಿಯಾಗಿ ದೊರೆಯಿತಂತೆ. ಆದರೆ ಪರಿಣಾಮವಾಗಿ ವೀರಪ್ಪ ಗೌಡರ ಬಂಗಲೆಯ ಭಾವಿಯಲ್ಲಿ ನೀರಿನ ಪ್ರಮಾಣ ತೀರಾ ಕಡಿಮೆಯಾಗಿ ಬಿಟ್ಟಿತಂತೆ. ಇದು ಎರಡು ಕುಟುಂಬಗಳ ನಡುವೆ ಮುಗಿಯಲಾರದ ಒಂದು ವಿವಾದವಾಗಿ ಬಿಟ್ಟಿತಂತೆ.

------- ಮುಂದುವರಿಯುವುದು-----


No comments: