Wednesday, May 20, 2020

ಬಾಲ್ಯ ಕಾಲದ ನೆನಪುಗಳು – ೮೮

ಎರಡನೇ ವರ್ಷಕ್ಕೆ ಕಾಲಿರಿಸಿದ್ದ ನಮ್ಮ ಕಾಲೇಜಿನ ವಾತಾವರಣ ಸಂಪೂರ್ಣವಾಗಿ ಬದಲಾಗಿ ಹೋಗಿತ್ತು. ಒಮ್ಮೆಲೇ ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿ ಆಗುವುದರ ಜೊತೆಗೆ ಉಪನ್ಯಾಸಕರ  ಸಂಖ್ಯೆಯೂ ಜಾಸ್ತಿಯಾಗಿತ್ತು. ಅಲ್ಲದೇ ಬಿಎಸ್.ಸಿ , ಬಿ.ಎ  ಮತ್ತು ಬಿ. ಕಾಂ ಪದವಿಗಳಿಗೆ ಮೊದಲ ವರ್ಷದ ವಿದ್ಯಾರ್ಥಿಗಳು ಸೇರಿದ್ದರಿಂದ ಒಟ್ಟು ಸಂಖ್ಯಾ ಬಲ ಹೆಚ್ಚಾಗುವುದರ ಜೊತೆಗೆ ಉಪನ್ಯಾಸಕರ ಸಂಖ್ಯೆಯೂ ಜಾಸ್ತಿ ಆಗಲೇ ಬೇಕಿತ್ತು. ಒಟ್ಟಿನಲ್ಲಿ ಚಟುವಟಿಕೆಗಳು ಒಮ್ಮೆಗೆ ಜಾಸ್ತಿಯಾಗಿ ಬಿಟ್ಟಿದ್ದವು. ಕಾಲೇಜಿನ ಆಡಳಿತ ವರ್ಗ ಹೊರ ಊರುಗಳಿಂದ ಬಂದ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ಸೌಲಭ್ಯವನ್ನು ಒದಗಿಸಲೂ ತೀರ್ಮಾನ ಮಾಡಿತ್ತು. ಈ ಸೌಲಭ್ಯ ಹೊಸದಾಗಿ ಕಾಲೇಜು ಪ್ರವೇಶ ಮಾಡಿದ್ದ ಚಿಕ್ಕಮಗಳೂರು, ಬೀರೂರು ಮತ್ತು ಕಡೂರಿನ ವಿದ್ಯಾರ್ಥಿಗಳಿಗೆ ಅತ್ಯಾವಶ್ಯಕವಾಗಿತ್ತು. ಆಡಳಿತ ವರ್ಗ ಮತ್ತು ಉಪನ್ಯಾಸಕರುಗಳು ತುಂಬಾ ಉತ್ಸಾಹದಿಂದಿದ್ದರೆ ಪ್ರಿನ್ಸಿಪಾಲರು ಕೂಡ ಅಷ್ಟೇ ಉತ್ಸಾಹದಿಂದ ಆಡಳಿತವನ್ನು ತುಂಬಾ ಬಿಗಿಗೊಳಿಸಿಬಿಟ್ಟಿದ್ದರು.

ನಮ್ಮ ಪದವಿ ತರಗತಿಗಳು ಪ್ರಾರಂಭವಾಗುವ ಸಮಯ ಬಂದು ಬಿಟ್ಟಿತ್ತು. ಆದರೆ ಅಕ್ಯಾಡೆಮಿಯವರಿಂದ ನನ್ನ ಕಾಲೇಜು ಫೀ ಮತ್ತು ಹಾಸ್ಟೆಲ್ ಫೀ ಯಾವಾಗ ಮತ್ತು ಹೇಗೆ ಪಾವತಿಮಾಡುವರೆಂಬ ಸಮಾಚಾರವೇ ಬಂದಿರಲಿಲ್ಲ. ನನಗೆ ಯಾವುದೇ ತರಗತಿಗಳಿಂದ ತಪ್ಪಿಸಿ ಕೊಳ್ಳುವುದು ಇಷ್ಟವಿರಲಿಲ್ಲ. ಆದ್ದರಿಂದ ನಾನು ಮೊದಲ ದಿನವೇ ಶೃಂಗೇರಿ ತಲುಪಿ ತರಗತಿಗಳಿಗೆ ಹಾಜರಾದೆ. ಕಾಲೇಜು ಹಾಸ್ಟೆಲ್ ಹಿಂದಿನ ದಿನವೇ ತೆರೆಯಲಾಗಿತ್ತೆಂದು ನನಗೆ ತಿಳಿಯಿತು. ಅಲ್ಲದೇ ಪೇಟೆಯಲ್ಲಿ ಅತ್ತ್ಯುತ್ತಮ ಹೋಟೆಲ್ ಆಗಿದ್ದ ಮಲ್ಲಿಕಾ ಮಂದಿರದ ಮಾಲೀಕರೇ ಹಾಸ್ಟೆಲಿನ ಊಟ ಮತ್ತು ತಿಂಡಿ ವ್ಯವಸ್ಥೆ ಮಾಡುವರೆಂದೂ ಗೊತ್ತಾಯಿತು. ಹಾಸ್ಟೆಲಿಗೆ ಸೇರಲು ತುಂಬಾ ಉತ್ಸಾಹಿತನಾಗಿದ್ದ ನಾನು ಪ್ರಿನ್ಸಿಪಾಲರಿಂದ ಯಾವಾಗ ಕರೆ ಬರುವುದೆಂದು ಕಾಯುತ್ತಿದ್ದೆ. ತಾತ್ಕಾಲಿಕವಾಗಿ ನನಗೊಂದು ತಂಗುವ ಮತ್ತು ಊಟ ತಿಂಡಿ ಮಾಡುವ ವ್ಯವಸ್ಥೆ ನಾನು ಮಾಡಿಕೊಳ್ಳ ಬೇಕಾಯಿತು.

ನಾನು ಪ್ರತಿನಿತ್ಯ ಕಾಲೇಜು ಆಫೀಸಿಗೆ ಹೋಗಿ ಪ್ರಿನ್ಸಿಪಾಲರನ್ನು ಭೇಟಿಮಾಡತೊಡಗಿದೆ. ಒಂದು ದಿನ ಬೆಳಿಗ್ಗೆ ಅವರು ನನಗೆ ಅಕ್ಯಾಡೆಮಿಯಿಂದ ಚೆಕ್ ಬಂದಿರುವುದಾಗಿಯೂ ಮತ್ತು ನಾನು ಕೆಲವು ಕಾಗದ ಪತ್ರಗಳನ್ನು ಸಹಿ ಮಾಡಬೇಕೆಂದೂ ಹೇಳಿದರು. ನಾನು ಚೆಕ್ಕಿನಲ್ಲಿ ಕೇವಲ ನನ್ನ ಕಾಲೇಜು ಫೀ ಆಗುವಷ್ಟು ಹಣ ಮಾತ್ರ ಬರೆದಿದುದನ್ನು ನೋಡಿದೆ. ಅಲ್ಲದೇ ಪ್ರಿನ್ಸಿಪಾಲರ ವರ್ತನೆಯಲ್ಲೂ ನನಗೆ ಬದಲಾವಣೆಗಳು ಕಾಣಿಸಿ ಏನೋ ಸರಿಯಿಲ್ಲವೆಂದು ಸಂಶಯ ಬಂತು. ನಾನು ಹಾಸ್ಟೆಲ್ ಫೀ ಬಗ್ಗೆ ಕೇಳಿದಾಗ ಅವರು ಸರಿಯಾದ ಉತ್ತರ ಕೊಡಲಿಲ್ಲ. ನಮ್ಮ ತಂದೆಯವರಿಂದ ಸಹಿ ಮಾಡಿಸಿಕೊಂಡು ಬರಬೇಕೆಂದು ಹೇಳಿ ಒಂದು ಡಾಕ್ಯುಮೆಂಟನ್ನು ನನ್ನ ಕೈಗಿತ್ತರು.

ಪ್ರಿನ್ಸಿಪಾಲರ ವಿಚಿತ್ರ ವರ್ತನೆಯಿಂದ ನಾನು ಸ್ವಲ್ಪ ಕಂಗಾಲಾಗಿಬಿಟ್ಟೆ. ಆದರೆ ಅವರು ಕೊಟ್ಟ ಡಾಕ್ಯುಮೆಂಟನ್ನು ನೋಡಿದ ಮೇಲೆ ನನಗೆ ದೊಡ್ಡ ಆಘಾತವೇ ಆಯಿತು. ಏಕೆಂದರೆ ಅದೊಂದು ಪ್ರಾಮಿಸರಿ ನೋಟ್ ಆಗಿತ್ತು ಮತ್ತು ಅದರಲ್ಲಿ ಕಾಲೇಜು ಫೀ ಆಗುವಷ್ಟು ಹಣವನ್ನು ಬರೆಯಲಾಗಿತ್ತು. ಸಾಲ  ಕೊಡುವವರು ಸಾಲಗಾರರಿಂದ ಪ್ರಾಮಿಸರಿ ನೋಟ್ ಸಹಿ ಮಾಡಿಸಿಕೊಳ್ಳುವರೆಂದು ನನಗೆ ಗೊತ್ತಿತ್ತು. ನಾನು ಪುನಃ ಪ್ರಿನ್ಸಿಪಾಲರ  ಹತ್ತಿರ ಹೋಗಿ ಆ ಡಾಕ್ಯುಮೆಂಟ್ ಬಗ್ಗೆ ಸ್ಪಷ್ಟೀಕರಣ ಕೇಳಿದೆ. ಅದಕ್ಕೆ ಅವರು ಅಕ್ಯಾಡೆಮಿಯವರು ನನಗೆ ಕೊಟ್ಟ ಹಣಕ್ಕೆ ತೆಗೆದುಕೊಳ್ಳುತ್ತಿರುವ ರಸೀದಿ ಅದೆಂದು ಹೇಳಿದರು!

ಆದರೆ ನಾನು ಅವರಿಗೆ ಅದರಲ್ಲಿ ಬರೆದುದನ್ನು ಓದಿದರೆ ಅದೊಂದು ರಸೀದಿ ಅಲ್ಲವೆಂದೂ ಮತ್ತು ಹಣವನ್ನು ಹಿಂತಿರುಗಿಸುವುದಾಗಿ ಬರೆದ ಪ್ರಾಮಿಸರಿ ನೋಟ್ ಎಂದೂ ಸ್ಪಷ್ಟವಾಗಿ ಗೊತ್ತಾಗುವುದೆಂದು ಹೇಳಿದೆ. ಅಲ್ಲದೇ ನಾನು ಹಿಂದೆ ಸ್ಕಾಲರ್ಷಿಪ್ ಹಣಕ್ಕಾಗಿ ಸಹಿ ಮಾಡಿದಾಗ ರಸೀದಿ ಹೇಗಿರುವುದೆಂದು ನೋಡಿರುವುದಾಗಿ ತಿಳಿಸಿದೆ. ನಾನು ಈ ಹಿಂದೆ ಎಷ್ಟೋ ಬಾರಿ ನನ್ನ ಜನರಲ್ ನಾಲೆಜ್ ಬಗ್ಗೆ ಮೇಷ್ಟ್ರುಗಳಿಂದ ಹೊಗಳಿಸಿ ಕೊಂಡಿದ್ದೆ. ಆದರೆ ಈ ಸಂದರ್ಭದಲ್ಲಿ ಪ್ರಿನ್ಸಿಪಾಲರ ಸಿಟ್ಟು ನೆತ್ತಿಗೇರಿ ಬಿಟ್ಟಿತು. ಅವರು ನನಗೆ ಸುಮ್ಮನೆ ಅಧಿಕ ಪ್ರಸಂಗ ಮಾಡದೇ ಡಾಕ್ಯುಮೆಂಟನ್ನು ತಂದೆಯವರಿಂದ ಸಹಿ ಮಾಡಿಸಿಕೊಂಡು ಬರಬೇಕೆಂದೂ ಮತ್ತು ನನ್ನ ಹಿತದೃಷ್ಟಿಯಿಂದಲೇ ಅವರು ನನಗೆ ಮಾರ್ಗದರ್ಶನ ನೀಡುತ್ತಿರುವುದಾಗಿ ತಿಳಿಸಿದರು.

ನಾನು ಡಾಕ್ಯುಮೆಂಟ್ ಬಗ್ಗೆ ಬೇರೆ ಹಿರಿಯರನ್ನು ಕೇಳಿದಾಗ ಅವರು ನಾನು ಭಾವಿಸಿದಂತೆಯೇ ಅದೊಂದು ಸಾಲಗಾರರಿಂದ ಸಹಿ ತೆಗೆದುಕೊಳ್ಳುವ ಪ್ರಾಮಿಸರಿ ನೋಟ್ ಹೌದೆಂದು ಹೇಳಿದರು. ಆದರೆ ಅವರ ಪ್ರಕಾರ ಅಕ್ಯಾಡೆಮಿಯವರು ಎಂದೂ ನನ್ನಿಂದ ಹಣವನ್ನು ವಾಪಾಸ್ ಕೇಳುವ ಪ್ರಶ್ನೆ ಇಲ್ಲವೆಂದು ತಿಳಿದು ಬಂತು. ಆದ್ದರಿಂದ ನಾನು ತಂದೆಯವರ ಸಹಿ ಪಡೆದು ಡಾಕ್ಯುಮೆಂಟ್ ಪ್ರಿನ್ಸಿಪಾಲರಿಗೆ ಕೊಟ್ಟುಬಿಟ್ಟೆ. ಕಾಲೇಜ್ ಆಫೀಸಿನವರು ಚೆಕ್ಕಿನ ಹಿಂದೆ ನನ್ನ ಸಹಿ ಪಡೆದು ನನಗೆ ವಾರ್ಷಿಕ ಫೀ ಪೂರ್ತಿ ಪಾವತಿಯಾಯಿತೆಂದು ರಶೀದಿ ಕೊಟ್ಟುಬಿಟ್ಟರು.

ನನಗೆ ಯಾವಾಗಲೂ ಲೋನ್ ಅಥವಾ ಸಾಲ ಎಂಬ ಪದದ ಬಗ್ಗೆ ಒಂದು ರೀತಿಯ ಅಲರ್ಜಿ ಇತ್ತು. ನಮ್ಮ ತಂದೆಯವರು ಎಷ್ಟೋ ಬಾರಿ ಅಮ್ಮನ ಆಭರಣಗಳನ್ನು  ಅಡವಿಟ್ಟು ಬ್ಯಾಂಕಿನಿಂದ ಸಾಲ ತೆಗೆಯುತ್ತಿದ್ದರು. ಆದರೆ ಸಾಲ ತೀರಿಸಲಾಗದೇ ಎಷ್ಟೋ ಆಭರಣಗಳು ಹರಾಜಾಗಿದ್ದವು. ಆದ್ದರಿಂದ ನಾನು ಮಾತ್ರ ಎಂದೂ ಸಾಲ ತೆಗೆಯುವುದಿಲ್ಲವೆಂದು ಮನಸ್ಸಿನಲ್ಲೇ ಪ್ರತಿಜ್ಞೆ ಮಾಡಿಬಿಟ್ಟಿದ್ದೆ. ಹಾಗಾಗಿ ನನಗೆ ಪಿ. ಯು. ಸಿ  ಓದುವಾಗ  ಕೇಂದ್ರ ಸರ್ಕಾರದ ಬಡ್ಡಿ ಇಲ್ಲದ ಸಾಲ ದೊರೆಯುತ್ತಿದ್ದರೂ ನಾನದನ್ನು ತೆಗೆದುಕೊಂಡಿರಲಿಲ್ಲ. ಮುಂದೆ ಒಂದು ದಿನ ನಾನು ನೌಕರಿಗೆ ಸೇರಿದಾಗ ಸಾಲದ ಹೊರೆಯೊಂದು ನನ್ನ ಮೇಲಿರುವುದು ನನಗೆ ಸ್ವಲ್ಪವೂ ಇಷ್ಟವಿರಲಿಲ್ಲ.

ಈ ದೃಷ್ಟಿಯಿಂದ ನೋಡಿದಾಗ ಅಕ್ಯಾಡೆಮಿಯವರು ನನ್ನ ತಂದೆಯವರಿಂದ ಪ್ರಾಮಿಸರಿ ನೋಟ್  ಮೇಲೆ ಸಹಿ ಪಡೆದುದು ನನ್ನ ಮನಸ್ಸಿನಲ್ಲಿ ತುಂಬಾ ಕಸಿವಿಸಿ ಉಂಟು ಮಾಡಿತ್ತು. ನಾನು ನನ್ನ ಓದುಗರಿಗೆ ಇಲ್ಲಿ ತಿಳಿಸ ಬಯಸುವುದೇನೆಂದರೆ ಮುಂದೆ ಒಂದು ಕಾಲಕ್ಕೆ ನನ್ನ ಅನುಮಾನಗಳೆಲ್ಲಾ ನಿಜವಾಗಿ ಬಿಟ್ಟವು. ಆಗ ನಮ್ಮ ತಂದೆಯವರು ಸಹಿ ಮಾಡಿದ ಡಾಕ್ಯುಮೆಂಟ್ ಕೇವಲ  ರಶೀದಿ ಎಂದು ಹೇಳಿದ ನಮ್ಮ ಪ್ರಿನ್ಸಿಪಾಲ್  ರಾಮಕೃಷ್ಣರಾಯರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಹಿಂದೂ ಫಿಲಾಸಫಿ ಬೋಧನೆ ಮಾಡುತ್ತಿದ್ದರು. ಆಗ ಅವರ ಹತ್ತಿರ ಮಾತನಾಡಿ ಏನೂ ಉಪಯೋಗವಿರಲಿಲ್ಲ.

ನಾನು ಮುಂದಿನ ಬಾರಿ ನಾನು ಪ್ರಿನ್ಸಿಪಾಲರನ್ನು ಭೇಟಿಯಾದಾಗನನ್ನ ವಿಚಾರವಾಗಿ  ಅವರ ವರ್ತನೆ ಇದ್ದಕ್ಕಿದ್ದಂತೆ ಬದಲಾವಣೆಯಾಗಲು ಕಾರಣವೇನೆಂದು ಗೊತ್ತಾಗಿ ಹೋಯಿತು. ಅವರು ನನ್ನ ಹತ್ತಿರ ಹಿಂದೆ ನನ್ನ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು (ನನ್ನ ಬಟ್ಟೆ ಖರ್ಚು ಬಿಟ್ಟು) ಅಕ್ಯಾಡೆಮಿಯವರು ಭರಿಸುವುದಾಗಿ ಹೇಳಿದ್ದರಷ್ಟೇ. ಆದರೆ ಅಕ್ಯಾಡೆಮಿಯವರ ದೃಷ್ಟಿಯಲ್ಲಿ ಸಂಪೂರ್ಣ ವೆಚ್ಚವೆಂದರೆ ಕೇವಲ ಕಾಲೇಜು ಫೀ ಆಗಿತ್ತು. ಅಷ್ಟೇ. ಈಗ ಅದು ತಿಳಿದ ಮೇಲೆ ನನಗೆ ಆ ವಿಷಯ ತಿಳಿಸಲು ಅವರಿಗೆ ತುಂಬಾ ಮುಜುಗರವಾಗಿತ್ತು. ಅದರ ಪರಿಹಾರಾರ್ಥವಾಗಿ ಅವರು ನನ್ನ ಮುಂದೆ ಹೊಸ ಸಲಹೆಯೊಂದನ್ನಿಟ್ಟರು. ಅದರ ಪ್ರಕಾರ ನಾನು ವಾರದಲ್ಲಿ ಒಂದು ದಿನ ಅವರ ಮನೆಯಲ್ಲೇ ಊಟ ಮಾಡಬಹುದಿತ್ತು. ಉಳಿದ ದಿನಗಳಲ್ಲಿ ಊಟ ಹಾಕಲು ನಾನು ಆ ವೇಳೆಗೆ ಶೃಂಗೇರಿಯಲ್ಲಿ ಕುಟುಂಬದೊಡನೆ ಇರುವ ಇತರ ಉಪನ್ಯಾಸಕರನ್ನು ಬೇಡಿಕೊಳ್ಳಬೇಕಿತ್ತು. ಅದಕ್ಕಾಗಿ ಆ ಕೂಡಲೇ ಉಪನ್ಯಾಸಕರ ಕೊಠಡಿಗೆ ಹೋಗಿ ಅವರನ್ನು ಕೇಳಿಕೊಳ್ಳುವಂತೆ ಒತ್ತಾಯ ಮಾಡಿ ಬಿಟ್ಟರು ಕೂಡ.

ನಾನು ಮಾತು ಮುಂದುವರಿಸದೇ ಪ್ರಿನ್ಸಿಪಾಲರ ಕೊಠಡಿಯಿಂದ ಒಮ್ಮೆಗೆ ಹೊರಬಂದು ಬಿಟ್ಟೆ. ನನ್ನ ಪರಿಸ್ಥಿತಿ ನಾನು Rank ಪಡೆಯುವುದಕ್ಕಿಂತ ಮೊದಲಿದ್ದ ಸ್ಥಿತಿಗೇ ವಾಪಾಸ್ ಬಂದಂತಾಗಿತ್ತು. ಇಲ್ಲ. ಹಾಗಲ್ಲ. ಅದಕ್ಕಿಂತಲೂ ತುಂಬಾ ಕೆಟ್ಟದ್ದಾಗಿತ್ತು! ಏಕೆಂದರೆ ನಾನು ಶಿವಮೊಗ್ಗೆಯ ಹಾಸ್ಟೆಲಿನಲ್ಲಿ ಫ್ರೀ ಸೀಟ್ ಇದ್ದರೂ ಉಳಿದ ಖರ್ಚುಗಳಿಗಾಗಿ ಪರರನ್ನು ಬೇಡಲಿಚ್ಛಿಸದೇ ಅಲ್ಲಿ ನನ್ನ ವಿಧ್ಯಾಭ್ಯಾಸವನ್ನು ನಿಲ್ಲಿಸಿಬಿಟ್ಟಿದ್ದೆ. ಕಳೆದ ವರ್ಷ ನನ್ನ ಸಂಪೂರ್ಣ ಕಾಲೇಜು ಫೀ ಶಂಕರರಾಯರು ಕಟ್ಟಿದ್ದರು. ನನ್ನ ಈಗಿನ ಸ್ಥಿತಿ ಹೇಗಿತ್ತೆಂದರೆ ಶಂಕರರಾಯರ ಬದಲಿಗೆ ಅಕ್ಯಾಡೆಮಿಯವರು ನನ್ನ ಪೂರ್ತಿ ಫೀ ಕಟ್ಟಿದ್ದರು. ಶಂಕರರಾಯರಿಗೆ ನಾನು ಹಣ ಹಿಂತಿರುಗಿಸುವ ಪ್ರಶ್ನೆ ಇರಲಿಲ್ಲ. ಆದರೆ ಅಕ್ಯಾಡೆಮಿಯವರು ನನ್ನ ತಂದೆಯವರಿಂದ ಪ್ರಾಮಿಸರಿ ನೋಟ್  ಮೇಲೆ ಸಹಿ ಪಡೆದಿದ್ದರು. ಒಟ್ಟಿನಲ್ಲಿ ನಾನು ಕಾಲೇಜಿನ ಪ್ರಥಮ ವರ್ಷದಲ್ಲಿ Rank ಪಡೆದು ಅಕ್ಯಾಡೆಮಿಯವರ ಸಾಲಗಾರನಾಗಿ ಬಿಟ್ಟಿದ್ದೆ! ಅಷ್ಟು ಮಾತ್ರವಲ್ಲ. ಪ್ರಿನ್ಸಿಪಾಲರು ನನ್ನನ್ನು ಉಪನ್ಯಾಸಕರ ಹತ್ತಿರ ಕಳಿಸಿ ಅವರ ಮನೆಯಲ್ಲಿ ಊಟ ಹಾಕುವಂತೆ ಬೇಡಿಕೊಳ್ಳಲು ಒತ್ತಾಯ ಮಾಡುತ್ತಿದ್ದರು. ಅವರ ಈ ಸಲಹೆ ಕೇಳಿ ನನ್ನ ಮೈ ಎಲ್ಲಾ  ಉರಿದು ಹೋಯಿತು. ನಾನು ಯಾರೊಡನೆಯೂ ಏನನ್ನೂ ಬೇಡಿಕೊಳ್ಳಲು ತಯಾರಿರಲಿಲ್ಲ.

------- ಮುಂದುವರಿಯುವುದು-----


No comments: