Tuesday, April 28, 2020

ಬಾಲ್ಯ ಕಾಲದ ನೆನಪುಗಳು – ೮೨


ಸೋಮವಾರ ನಾನು ಕಾಲೇಜಿನ ಮೊದಲ ದಿನದ ತರಗತಿಗೆ ಹಾಜರಾದೆ. ಅಲ್ಲಿ ಹಾಜರಾದ ಇತರ ವಿದ್ಯಾರ್ಥಿಗಳಿಗೆ ನಾನೊಬ್ಬ ತೀರಾ ಅಪರಿಚಿತನಾಗಿದ್ದೆ. ಹೆಚ್ಚಿನವರು ಶೃಂಗೇರಿ ಹೈಸ್ಕೂಲಿನಿಂದ ಆ ವರ್ಷವೇ ಪಾಸಾಗಿ ಬಂದವರಾಗಿದ್ದರಿಂದ ಅವರೆಲ್ಲಾ ಒಬ್ಬರಿಗೊಬ್ಬರು ಪರಿಚಿತರೇ ಆಗಿದ್ದರು. ಕೆಲವರು ಓದುವುದನ್ನು ಬಿಟ್ಟು ಹಲವು ವರ್ಷಗಳ ನಂತರ ಕಾಲೇಜಿಗೆ ಬಂದವರಾದರೆ ಅವರಲ್ಲಿ ಕೆಲವರು ಏನೇನು ಇಷ್ಟವಿಲ್ಲದಿದ್ದರೂ ಸಮಿತಿಯವರ ಒತ್ತಾಯದಿಂದ ನಿರ್ವಾಹವಿಲ್ಲದೆ ಕಾಲೇಜು ಸೇರಿದ್ದರು. ಇನ್ನು  ಕೆಲವರು ಲೆಕ್ಚರರ್ ಗಳಿಗಿಂತ ವಯಸ್ಸಿನಲ್ಲಿ ಹಿರಿಯರಾಗಿದ್ದರು. ಆದರೆ ಎಲ್ಲರಲ್ಲೂ ಒಂದು ಸಮಾನತೆ ಇತ್ತು. ಅದೇನೆಂದರೆ ಯಾರೂ ಪ್ಯಾಂಟ್ ಅಥವಾ ಪೈಜಾಮ ಧರಿಸಿರಲಿಲ್ಲ. ಎಲ್ಲರೂ ಮುಂಡು  ಪಂಚೆ ಉಟ್ಟವರೇ ಆಗಿದ್ದರು.

ನಮ್ಮ ಪ್ರಿನ್ಸಿಪಾಲ್ ಡಾಕ್ಟರ್ ರಾಮಕೃಷ್ಣರಾವ್ ತತ್ವ ಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದಿದ್ದರು. ತುಂಬಾ ಗೌರವಾನ್ವಿತ ವ್ಯಕ್ತಿತ್ವ ಹೊಂದಿದ್ದ ಅವರು ಅಷ್ಟೇ ದಕ್ಷ ಆಡಳಿತಗಾರರೂ ಆಗಿದ್ದರು. ಅವರ ಉಡುಪು ಮತ್ತು ವ್ಯಕ್ತಿತ್ವ ನೋಡಿದೊಡನೆ ಅವರೊಬ್ಬ ದೊಡ್ಡ ತತ್ವ ಶಾಸ್ತ್ರಜ್ಞರಿರಬೇಕೆಂದು ಅನಿಸಿ ಬಿಡುತ್ತಿತ್ತು. ಈ ಮೊದಲು ಅವರು ದಕ್ಷಿಣ ಕನ್ನಡದ ಮುಲ್ಕಿಯ ವಿಜಯ ಕಾಲೇಜಿನ ಪ್ರಿನ್ಸಿಪಾಲ್ ಆಗಿದ್ದರು. ಅಕ್ಯಾಡೆಮಿಯವರು ತುಂಬಾ ದೂರದೃಷ್ಟಿಯಿಂದಲೇ ಅವರನ್ನು ಪವಿತ್ರ ಯಾತ್ರಾಸ್ಥಳವಾದ ಶೃಂಗೇರಿಯ ಪ್ರತಿಷ್ಠಿತ ಕಾಲೇಜಿಗೆ ಪ್ರಿನ್ಸಿಪಾಲ್ ಆಗಿ ನೇಮಕ ಮಾಡಿದ್ದರು.

ನಮಗೆ ಮೊಟ್ಟ ಮೊದಲ ಕ್ಲಾಸ್ ತೆಗೆದುಕೊಂಡವರು ಪ್ರಧಾನ್ ಗುರುದತ್ತ ಅವರು. ಕನ್ನಡ ಮತ್ತು ಹಿಂದಿ ಎಂ. ಏ. ಮಾಡಿದ್ದ ಗುರುದತ್ತ ಈ ಹಿಂದೆ ಮೈಸೂರಿನಲ್ಲಿ ಲೆಕ್ಚರರ್ ಆಗಿ ಕೆಲಸ ಮಾಡಿದ್ದರು. ಫುಲ್ ಸೂಟ್ ಧರಿಸಿ ಟೈ ಕಟ್ಟಿ ಕಾಲೇಜಿಗೆ ಬರುತ್ತಿದ್ದ ಗುರುದತ್ತ ತುಂಬಾ ಆಕರ್ಷಕ ವ್ಯಕ್ತಿತ್ವ ಹೊಂದಿದ್ದರು. ತಮ್ಮ ಮಾತಿನ ಜಾಣ್ಮೆಯಿಂದ ವಿದ್ಯಾರ್ಥಿಗಳನ್ನು ಆಕರ್ಷಿಸುವುದು ಅವರ ಉದ್ದೇಶವೆಂದು ಬೇಗ ಗೊತ್ತಾಗಿ ಬಿಡುತ್ತಿತ್ತು. ಅವರು ಆ ಉದ್ದೇಶದಲ್ಲಿ ಸಂಪೂರ್ಣ ಸಫಲರೂ ಆದರು ಎಂದು ಹೇಳಲೇ ಬೇಕು.

ಒಟ್ಟಿನಲ್ಲಿ ಸುಮಾರು ೧೦ ಮಂದಿ ಉಪನ್ಯಾಸಕರಿದ್ದು ಅವರಲ್ಲಿ ಅರ್ಧದಷ್ಟು ಮಂದಿ ದಕ್ಷಿಣ ಕನ್ನಡದವರಾದರೆ ಇನ್ನರ್ಧ ಮಂದಿ ಮೈಸೂರಿನವರಾಗಿದ್ದರು. ಮೈಸೂರಿನವರೆಲ್ಲಾ ಫುಲ್ ಸೂಟ್ ಧರಿಸುತ್ತಿದ್ದರೆ ದಕ್ಷಿಣ ಕನ್ನಡದ ಪ್ರಾಣಿಶಾಸ್ತ್ರ ಉಪನ್ಯಾಸಕ ರೈ ಅವರು ಮಾತ್ರ ಸೂಟ್ ಧರಿಸುತ್ತಿದ್ದರು. ನಮ್ಮ ಮೇಲೆ ತಮ್ಮ ವ್ಯಕ್ತಿತ್ವದಿಂದ ತುಂಬಾ ಪ್ರಭಾವ ಬೀರಿದವರೆಂದರೆ ಚಿತ್ರದುರ್ಗದ ರಘುನಾಥನ್.  ಮೈಸೂರಿನಲ್ಲಿ ಕೆಮಿಸ್ಟ್ರಿ ಎಂ. ಎಸ್ ಸಿ. ಮಾಡಿದ್ದ  ರಘುನಾಥನ್ ಫುಲ್ ಸೂಟ್ ಧರಿಸಿಯೇ ಕಾಲೇಜಿಗೆ ಬರುತ್ತಿದ್ದರು. ನಮ್ಮ ಕಾಲೇಜಿಗೆ ಆಗ ಇನ್ನೂ ಫಿಸಿಕ್ಸ್ ಸಬ್ಜೆಕ್ಟಿಗೆ ಉಪನ್ಯಾಸಕರ ನೇಮಕವಾಗಿರಲಿಲ್ಲ. ಆದ್ದರಿಂದ ರಘುನಾಥನ್ ಅವರು ಸ್ವಲ್ಪ ದಿನ  ಫಿಸಿಕ್ಸ್ ಕ್ಲಾಸನ್ನೂ ತೆಗೆದುಕೊಳ್ಳುತ್ತಿದ್ದರು. ಸಂಸ್ಕೃತ ಉಪನ್ಯಾಸಕ ವೆಂಕಣ್ಣಯ್ಯನವರು ಪ್ರಸಿದ್ಧ ಸಾಹಿತಿ ಮತ್ತು ಕನ್ನಡ ಪ್ರೊಫೆಸರ್  ತ. ಸು. ಶಾಮರಾಯರ ಮಗ.  ಮ್ಯಾಥಮ್ಯಾಟಿಕ್ಸ್ ಉಪನ್ಯಾಸಕ ಎನ್. ರಾಮಚಂದ್ರ ಭಟ್ ಅವರು ಕಾಸರಗೋಡಿನವರು. ಅರ್ಥಶಾಸ್ತ್ರ ಉಪನ್ಯಾಸಕರಾದ ಶಿವಾನಂದ ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ. ಎ . ಪದವಿ ಪಡೆದಿದ್ದರು. ಹಿಂದಿ ಉಪನ್ಯಾಸಕ ಎ. ಕೆ . ಭಟ್ ಹಿಂದಿಯಲ್ಲಿ ಎಂ. ಎ. ಪದವಿ ಪಡೆದಿದ್ದರು.

ಇಂಗ್ಲಿಷ್ ಉಪನ್ಯಾಸಕ ಬಿ.ಎನ್.ಶ್ರೀರಾಮ್ 
ನಮಗೆಲ್ಲಾ ಬೇರೆ ಬೇರೆ ಉಪನ್ಯಾಸಕರ ಪರಿಚಯ ಸುಗಮವಾಗಿಯೇ ಅಯಿತಾದರೂ ಇಂಗ್ಲಿಷ್ ಉಪನ್ಯಾಸಕ ಬಿ.ಎನ್.ಶ್ರೀರಾಮ್  ಅವರ ಮೊದಲ ತರಗತಿ ಒಂದು ದುರಂತವೇ ಆಯಿತು. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಎಂ.ಎ. ಪದವಿ ಪಡೆದಿದ್ದ ಶ್ರೀರಾಮ್ ಕನ್ನಡ ಸಾಹಿತ್ಯದಲ್ಲೂ ಅಷ್ಟೇ ತಿಳುವಳಿಕೆಯುಳ್ಳವರಾಗಿದ್ದರು. ಆ ದಿನಗಳಲ್ಲಿ ಇಂಗ್ಲಿಷ್ ಎಂ. ಎ. ಪಾಸ್ ಮಾಡಿದವರ ಕೊರತೆ ತುಂಬಾ ಇತ್ತು. ಅದು ಶ್ರೀರಾಮ್ ಅವರಿಗೂ ಗೊತ್ತಿತ್ತು. ಅವರು ರಾಷ್ಟ್ರಕವಿ ಕುವೆಂಪು ಅವರ ಮಗನಾದ ಪೂರ್ಣಚಂದ್ರ ತೇಜಸ್ವಿಯ ಪರಮ ಮಿತ್ರರಾಗಿದ್ದರು. ಅವರಿಗೆ ಶೃಂಗೇರಿ ಜನರ ಸಂಪ್ರದಾಯಸ್ಥ ನಡೆವಳಿಕೆ ಹಾಗೂ ಶ್ರೀ ಶಂಕರ ಮಠ ಮತ್ತು ಅದರ ಧಾರ್ಮಿಕ ಆಚಾರಗಳಲ್ಲಿ ಯಾವುದೇ ನಂಬಿಕೆ ಅಥವಾ ಶೃದ್ಧೆ ಇರಲಿಲ್ಲ.

ತಮ್ಮ ಮುಂದೆ ಕುಳಿತಿದ್ದ ಧೋತಿ ಧರಿಸಿದ ವಿದ್ಯಾರ್ಥಿಗಳನ್ನು ನೋಡಿ ಶ್ರೀರಾಮ್ ಅವರಿಗೆ ತಾವು ತೆಗೆದುಕೊಳ್ಳಬೇಕಾದ ಮೊದಲ ತರಗತಿಯ ಉತ್ಸಾಹ ಒಮ್ಮೆಲೇ ಇಳಿದು ಹೋಯಿತೆಂದು ನಮಗನ್ನಿಸಿತು. ಅವರು ಹೇಳಿದಂತೆ ವಿದ್ಯಾರ್ಥಿಗಳು ಒಬ್ಬರ ನಂತರ ಒಬ್ಬರು ತಮ್ಮ ಪರಿಚಯವನ್ನು ಇಂಗ್ಲೀಷಿನಲ್ಲಿ ಮಾಡಿಕೊಳ್ಳುತ್ತಿದ್ದಂತೇ ಅವರ ಕೋಪ ಹೆಚ್ಚಾಗುತ್ತಾ ಹೋಯಿತು. ಹೆಚ್ಚಿನ ವಿದ್ಯಾರ್ಥಿಗಳ ಇಂಗ್ಲಿಷ್ ಭಾಷೆಯ ಜ್ಞಾನ  ಕೆಳಮಟ್ಟದ್ದಾಗಿದೆಯೆಂದು ತಿಳಿದು ಅವರಿಗೆ ನಿರಾಶೆಯಾಯಿತು. ಅವರೆಲ್ಲಾ ಎಸ್. ಎಸ್.ಎಲ್.ಸಿ.ವರೆಗೆ ಕನ್ನಡ ಮಾಧ್ಯಮದಲ್ಲೇ ಓದಿದ್ದು ಅದಕ್ಕೆ ಸ್ವಲ್ಪ ಕಾರಣವಿದ್ದಿರಬಹುದು. ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಒಳ್ಳೆಯ ಪಾಂಡಿತ್ಯವಿದ್ದ ಶ್ರೀರಾಮ್ ಅವರಿಗೆ ತಮ್ಮ ವಿದ್ಯಾರ್ಥಿಗಳು ಬೇರೆ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾದರಿ ಆಗಬೇಕೆಂಬ ಗುರಿ ಇತ್ತು. ಆದರೆ ಆ ಗುರಿ ಅವರ ಕೈಗೆ  ಎಟುಕುವಂತೆ ಅವರಿಗೆ ಅನಿಸಲಿಲ್ಲ.

ಶ್ರೀರಾಮ್ ಅವರು ನಮಗೆಲ್ಲಾ ಜವಾಹರ್ಲಾಲ್ ನೆಹರು ಅವರ ಬಗ್ಗೆ ಇಂಗ್ಲೀಷಿನಲ್ಲಿ ಒಂದು ಸಣ್ಣ ಪ್ರಬಂಧ ಬರೆಯುವಂತೆ ಹೇಳಿದರು. ನಾವು ಬರೆದ ಪ್ರಬಂಧಗಳನ್ನು ನೋಡಿದಾಗ ಹೆಚ್ಚಿನ ವಿದ್ಯಾರ್ಥಿಗಳಿಗೆ ಇಂಗ್ಲೀಷಿನಲ್ಲಿ ಸರಳ ವಾಕ್ಯಗಳನ್ನೂ ಬರೆಯಲು ಬರುತ್ತಿರುವುದಿಲ್ಲವೆಂದೂ ಮತ್ತು ದೇಶದ ಪ್ರಧಾನಿಯಾಗಿದ್ದ ನೆಹರು ಅವರ ಬಗ್ಗೆ ಕೂಡ ಹೆಚ್ಚು ತಿಳುವಳಿಕೆ ಇಲ್ಲವೆಂದು ಗೊತ್ತಾಯಿತು. ಕೇವಲ ಕೆಲವು ವಿದ್ಯಾರ್ಥಿಗಳು (ನನ್ನನ್ನೂ ಸೇರಿ) ಬರೆದ ಪ್ರಬಂಧಗಳು ಮಾತ್ರ ಶ್ರೀರಾಮ್ ಅವರಿಗೆ ಇಷ್ಟವಾದವು. ನಾನು ಬಳಸಿದ ಸೆಕ್ಯುಲರ್ ಎಂಬ ಪದ ನೋಡಿ ಅವರಿಗೆ ತುಂಬಾ ಆಶ್ಚರ್ಯವಾಯಿತು. ಆ ಪದದ ಅರ್ಥ ಕನ್ನಡದಲ್ಲಿ ಏನೆಂದು ಕೇಳಿದಾಗ ನಾನು ಜಾತ್ಯಾತೀತ  ಎಂದು ಹೇಳಿಬಿಟ್ಟೆ. ಅವರ ಮುಖ ಒಮ್ಮೆಲೇ ಅರಳಿ ನನಗೆ ಭೇಷ್ ಎಂದು ಹೇಳಿಬಿಟ್ಟರು. ನನ್ನ ಇಂಗ್ಲಿಷ್ ಬರವಣಿಗೆಗೆ ಸಿಕ್ಕಿದ ಮೊದಲ ಮೆಚ್ಚುಗೆ ಶ್ರೀರಾಮ್ ಅವರಿಂದಾಗಿತ್ತು.

ನಮ್ಮ ಕಾಲೇಜಿನಲ್ಲಿ ಸಾಕಷ್ಟು ಸಂಖ್ಯೆಯ ಹುಡುಗಿಯರೂ ಇದ್ದರು. ಆದರೆ ಹೆಚ್ಚಿನವರು ಐಚ್ಛಿಕ ವಿಷಯವಾಗಿ ಆರ್ಟ್ಸ್ ತೆಗೆದುಕೊಂಡಿದ್ದರಿಂದ ಕೇವಲ ಇಂಗ್ಲಿಷ್ ಮತ್ತು ಕನ್ನಡ ಅಥವಾ ಸಂಸೃತ ತರಗತಿಗಳಿಗೆ ನಮ್ಮೊಡನೆ ಹಾಜರಾಗುತ್ತಿದ್ದರು. ಕೇವಲ ಇಬ್ಬರು ಹುಡುಗಿಯರು ಸೈನ್ಸ್ ಸಬ್ಜೆಕ್ಟ್ (ಅದರಲ್ಲಿ ಬಯಾಲಜಿ) ತೆಗೆದುಕೊಂಡಿದ್ದರು. ಉದ್ದೇಶ ಎಂ. ಬಿ. ಬಿ. ಎಸ್ ಮಾಡಿ ಡಾಕ್ಟರಾಗುವುದು. ಅವರಲ್ಲಿ ಇಂದಿರಾದೇವಿ ಎನ್ನುವಳು ಚಂದ್ರಮೌಳಿರಾಯರ ಮೊಮ್ಮಗಳು. ನಿರ್ಮಲ ಎಂಬ ಹುಡುಗಿ ಪಿ ಯು ಸಿ ತರಗತಿಗೆ ಎರಡನೇ ಬಾರಿ ಸೇರಿದ್ದಳು. ಏಕೆಂದರೆ ಹಿಂದಿನ ವರ್ಷದ ಪರೀಕ್ಷೆಯಲ್ಲಿ ಬಂದ  ಅಂಕಗಳು ಎಂ. ಬಿ. ಬಿ.ಎಸ್ ಸೀಟ್ ಸಿಗುವಷ್ಟಿರಲಿಲ್ಲ. ತುಂಬಾ ಬುದ್ದಿವಂತೆಯಾಗಿದ್ದ ನಿರ್ಮಲ ಮುಂದೆ ಎಂ. ಬಿ. ಬಿ. ಎಸ್. ಪಾಸ್ ಮಾಡಿ ಶಿವಮೊಗ್ಗದಲ್ಲಿ ನಿರ್ಮಲ ಹಾಸ್ಪಿಟಲ್ ಯಶಸ್ವಿಯಾಗಿ  ಸ್ಥಾಪಿಸಿ ನಡೆಸುತ್ತಿದ್ದಾಳೆ. ನಾನೊಮ್ಮೆ ಅವಳನ್ನು ಭೇಟಿ ಮಾಡಿದ್ದೆ. ಆರ್ಟ್ಸ್ ತೆಗೆದುಕೊಂಡ ಹುಡುಗಿಯರಲ್ಲಿ ಲಲಿತಾಂಬ ಎಂಬ ಹುಡುಗಿ ತುಂಬಾ ಬುದ್ಧಿವಂತೆಯಾಗಿದ್ದಳು. ಅವಳು ಶಿವಯ್ಯ ಎಂಬ ವ್ಯಾಪಾರಸ್ಥರ ಮಗಳು. ಅವಳ ತಮ್ಮ ಫಾಲಚಂದ್ರ ಎಂಬ ಹುಡುಗನೂ ಕಾಲೇಜು ಸೇರಿದ್ದ. ಶೃಂಗೇರಿ ಹೈಸ್ಕೂಲಿನ ಹೆಡ್ ಮಾಸ್ಟರ್ ಅವರ ಹಿರಿಯ ಮಗಳು ಸುಭದ್ರಾ ಕೂಡ ಆರ್ಟ್ಸ್ ತೆಗೆದುಕೊಂಡಿದ್ದಳು.

ಬೇರೆ ವಿದ್ಯಾರ್ಥಿಗಳಲ್ಲಿ ವೀರಪ್ಪ ಗೌಡರ ಮಗ ರವೀಂದ್ರನಾಥ ಟ್ಯಾಗೋರ್ ಕೂಡ ಇದ್ದ. ಅವನು ಬಯಾಲಜಿ ವಿದ್ಯಾರ್ಥಿಯಾಗಿದ್ದ. ಫಿಸಿಕ್ಸ್, ಕೆಮಿಸ್ಟ್ರಿ ಮತ್ತು ಮ್ಯಾಥಮ್ಯಾಟಿಕ್ಸ್ (ಪಿ. ಸಿ. ಎಂ.)  ತೆಗೆದುಕೊಂಡ ವಿದ್ಯಾರ್ಥಿಗಳಲ್ಲಿ ನನ್ನೊಡನೆ ಪ್ರಕಾಶ್ ಕಾಮತ್ ಎಂಬ ಅತ್ಯಂತ ಮೇಧಾವಿ ವಿದ್ಯಾರ್ಥಿ ಇದ್ದ. ಹೆಚ್ಚು ಅಂಕಗಳನ್ನು ತೆಗೆದುಕೊಳ್ಳುವರಲ್ಲಿ ಅವನು ನನಗೆ ತೀವ್ರ ಪೈಪೋಟಿ ನೀಡುವನಿದ್ದ. ಹೈಸ್ಕೂಲಿನಲ್ಲಿ ಅವನ ಸಹಪಾಠಿ ಮತ್ತು ಸ್ನೇಹಿತನಾಗಿದ್ದ ಇನ್ನೊಬ್ಬ ವಿದ್ಯಾರ್ಥಿ ನನಗೆ ಪ್ರಕಾಶನಿಗಿಂತ ಹೆಚ್ಚು ಅಂಕಗಳನ್ನು ತೆಗೆಯಲು ಸಾಧ್ಯವಿಲ್ಲವೆಂದು ಹೇಳಿ ಆ ಬಗ್ಗೆ ಸ್ಪರ್ಧೆಗೆ ಆಹ್ವಾನಿಸಿ ಬಿಟ್ಟ! ಪ್ರಕಾಶನೊಬ್ಬ ಪಕ್ಕಾ ಆರ್. ಎಸ್. ಎ ಸ್. ಸ್ವಯಂಸೇವಕನಾಗಿದ್ದ. ಮುಂದೆ ಸುರತ್ಕಲ್ ಕೆ. ಆರ್. ಈ. ಸಿ. ಸೇರಿ ಬಿ. ಇ. ಮುಗಿಸಿದ  ನಂತರ ಪ್ರಕಾಶ ತನ್ನ ಜೀವನವನ್ನು ಆರ್. ಎಸ್. ಎ ಸ್.  ಸಂಸ್ಥೆಗೆ ಮುಡಿಪಾಗಿ ಇಟ್ಟುಬಿಟ್ಟನಂತೆ.

ಮಣಿಪಾಲ್  ಅಕ್ಯಾಡೆಮಿ ಕಾಲೇಜುಗಳಲ್ಲಿ ಕಾಮರ್ಸ್ (ವಾಣಿಜ್ಯ)  ಕಡ್ಡಾಯವಾದ  ಐಚ್ಛಿಕ ವಿಭಾಗವಾಗಿ  ಇರುತ್ತಿತ್ತು. ಸಿಂಡಿಕೇಟ್ ಬ್ಯಾಂಕ್ ಸ್ಥಾಪಕರಲ್ಲಿ ಒಬ್ಬರಾಗಿದ್ದ ಟಿ. ಎಂ. ಎ ಪೈ ಅವರು ವಾಣಿಜ್ಯ ವಿಭಾಗಕ್ಕೆ ತುಂಬಾ ಪ್ರಾಮುಖ್ಯತೆ ನೀಡುತ್ತಿದ್ದರು. ಆದರೆ ಆಗ ಎಂ. ಕಾಂ. ಡಿಗ್ರಿ ಪಡೆದ ವ್ಯಕ್ತಿಗಳ ತುಂಬಾ ಕೊರತೆ ಇತ್ತು. ಹಾಗಾಗಿ ಕೇವಲ ಮೂರು ವಿಧ್ಯಾರ್ಥಿಗಳಿದ್ದ ಆ ವಿಭಾಗಕ್ಕೆ ಆಂಧ್ರ ಪ್ರದೇಶದ ಸತ್ಯನಾರಾಯಣ ಎಂಬುವರು ಉಪನ್ಯಾಸಕರಾಗಿ ಆಯ್ಕೆಯಾಗಿದ್ದರು.

ವೈಸ್ ಪ್ರಿನ್ಸಿಪಾಲ್  ಪದವಿಗೆ ಪೈಪೋಟಿ
ಸುಂದರ್ ಎನ್ನುವರು ಹಿಸ್ಟರಿ (ಇತಿಹಾಸ) ಸಬ್ಜೆಕ್ಟ್ ಉಪನ್ಯಾಸಕರಾಗಿದ್ದರು. ಗುರುದತ್ತರಂತೆಯೇ ಆಕರ್ಷಕ ವ್ಯಕ್ತಿತ್ವ ಹೊಂದಿದ್ದ ಸುಂದರ್ ಫುಲ್ ಸೂಟ್ ಧರಿಸಿರುತ್ತಿದ್ದರು. ಅವರಿಗಾಗಲೇ ವಿವಾಹವಾಗಿತ್ತು. ಹೆಚ್ಚಿನ ವಿದ್ಯಾರ್ಥಿಗಳಿಗೆ ಅವರ ಬಗ್ಗೆ ಮೆಚ್ಚುಗೆ ಇರಲಿಲ್ಲ. ಕಾರಣವಿಷ್ಟೇ. ನಗೆಮೊಗವನ್ನೇ ತೋರಿಸದ ಸುಂದರ್ ಉಳಿದ ಉಪನ್ಯಾಸಕರೊಡನೆ ಹಾಗೂ ವಿದ್ಯಾರ್ಥಿಗಳೊಡನೆ ಹೆಚ್ಚು ಬೆರೆಯುತ್ತಿರಲಿಲ್ಲ. ವೈಸ್ ಪ್ರಿನ್ಸಿಪಾಲ್  ಪದವಿಯ ಮೇಲೆ ಕಣ್ಣಿಟ್ಟಿದ್ದ ಸುಂದರ್ ಪ್ರಿನ್ಸಿಪಾಲ್ ರಾಮಕೃಷ್ಣರಾಯರ ಬಳಿಯೇ ಸುಳಿದಾಡುತ್ತಿದ್ದರು ಮತ್ತು ಅವರಿಗೆ  ತುಂಬಾ ಆತ್ಮೀಯರೆಂದು ಪ್ರದರ್ಶನ ಮಾಡುತ್ತಿದ್ದರು. ಆದರೆ ಅವರ ಆ ಗುರಿಗೆ ಇನ್ನೊಬ್ಬ ಉಪನ್ಯಾಸಕರ ತೀವ್ರ ಪೈಪೋಟಿ ಇತ್ತು. ಅವರೇ ಕನ್ನಡ ಉಪನ್ಯಾಸಕ ಪ್ರಧಾನ್ ಗುರುದತ್ತರು. ಇವರಿಬ್ಬರ ನಡುವೆ ಅದೊಂದು ತೀವ್ರ ಸ್ಪರ್ದೆಯೇ ಆಗಿತ್ತು. ಹಾಗೂ ನಮಗೆಲ್ಲಾ  ಒಂದು ತಮಾಷೆಯ ವಿಷಯವೇ ಆಗಿತ್ತು. 

ಆರ್ಟ್ಸ್ ವಿದ್ಯಾರ್ಥಿಗಳಿಗೆ ತರ್ಕಶಾಸ್ತ್ರವೊಂದು ಐಚ್ಛಿಕ ಸಬ್ಜೆಕ್ಟ್ ಆಗಿತ್ತು. ಅದನ್ನು ಸ್ವತಃ ಪ್ರಿನ್ಸಿಪಾಲ್ ರಾಮಕೃಷ್ಣರಾಯರೇ ತೆಗೆದುಕೊಳ್ಳುತ್ತಿದ್ದರು. ಅವರ ಉಪನ್ಯಾಸಗಳು ಎಷ್ಟು ಆಸಕ್ತಿದಾಯಕವಾಗಿರುತ್ತಿದ್ದವೆಂದರೆ ವಿಧ್ಯಾರ್ಥಿಗಳಲ್ಲದ ಕೆಲವರೂ ಕೂಡಾ ಅವರಿಂದ ಅನುಮತಿ ಪಡೆದು ತರಗತಿಗೆ ಹಾಜರಾಗುತ್ತಿದ್ದರು. ತುಂಬಾ ಪಾಂಡಿತ್ಯಪೂರ್ಣ ವಿದ್ವಾಂಸರಾಗಿದ್ದ ರಾಮಕೃಷ್ಣರಾಯರ ಉಪನ್ಯಾಸಗಳು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಕೂಡ ತುಂಬಾ ಉಪಯುಕ್ತವಾಗಿದ್ದವು.

ವಿಶ್ವನಾಥ, ಮಂಜುನಾಥ ಮತ್ತು ಪದ್ಮನಾಭ
ಆ ದಿನ ಸಂಜೆ ನಾನು ಒಂದು ಕಾಲದಲ್ಲಿ ಪುರದಮನೆ ಪ್ರಾಥಮಿಕ ಶಾಲೆಯಲ್ಲಿ ಸ್ವಲ್ಪ ಕಾಲ ನನ್ನ ಸಹಪಾಠಿಯಾಗಿದ್ದ ಹೆಬ್ಬಿಗೆ ಊರಿನ ವಿಶ್ವನಾಥ ಎಂಬುವನನ್ನು ಭೇಟಿಯಾದೆ. ಬಯಾಲಜಿ ಸಬ್ಜೆಕ್ಟ್ ಐಚ್ಛಿಕ ವಿಷಯವಾಗಿ ತೆಗೆದುಕೊಂಡಿದ್ದ ವಿಶ್ವನಾಥ ನನಗೆ ದೂರದ ಸಂಬಂಧಿಯೂ ಆಗಿದ್ದ. ನನ್ನ ಕೊಠಡಿಯ ಸಮೀಪದಲ್ಲೇ ಇನ್ನೊಂದು ಕೊಠಡಿಯಲ್ಲಿ ವಿಶ್ವನಾಥ ತನ್ನ ಅಕ್ಕನ ಮಗನಾದ ಮರಡಿ ಊರಿನ ಮಂಜುನಾಥ ಮತ್ತು ಪದ್ಮನಾಭ ಎಂಬ ವಿದ್ಯಾರ್ಥಿಗಳೊಡನೆ ವಾಸಮಾಡುತ್ತಿದ್ದ. ಪದ್ಮನಾಭ ಮತ್ತು ಮಂಜುನಾಥ ಶೃಂಗೇರಿ ಹೈಸ್ಕೂಲಿನಲ್ಲಿ ಓದುತ್ತಿದ್ದರು. ಪದ್ಮನಾಭ ಕೊಡಿಗೆತೋಟದ ಕೃಷ್ಣರಾಯರೆಂಬ ಶ್ರೀಮಂತ ಜಮೀನ್ದಾರರ ಮಗ. ಇವರು ಮೂವರೂ ನನ್ನಂತೆಯೇ ಹೊಳ್ಳರ ಮೆಸ್ಸಿನಲ್ಲಿ ಸ್ನಾನ ಮಾಡಿ ಊಟ ಮತ್ತು ತಿಂಡಿ ತೆಗೆದುಕೊಳ್ಳುತ್ತಿದ್ದರು. ನಾವು ನಾಲ್ಕು ಮಂದಿ ಒಂದು ಸ್ನೇಹಿತರ ಗುಂಪಾಗಿ ಬಿಟ್ಟೆವು. ನಾವು ನಿತ್ಯವೂ ಸಂಜೆಯ ವೇಳೆ ಒಟ್ಟಾಗಿ ತುಂಗಾ ನದಿಯಲ್ಲಿ ಕಾಲು ಕೈ ತೊಳೆದು ಶಾರದಾಂಬೆಯ ದೇವಸ್ಥಾನಕ್ಕೆ ಭೇಟಿ ಕೊಡುತ್ತಿದ್ದೆವು. ನನ್ನ ಬಿಡುವಿನ ವೇಳೆಯನ್ನು ನಾನು ಈ ಮೂವರ ರೂಮಿನಲ್ಲೇ ಹೆಚ್ಚಾಗಿ ಕಳೆಯತೊಡಗಿದೆ. ಆ ರೂಮು ಒಂದು ಕಾಲದಲ್ಲಿ ಪದ್ಮನಾಭಯ್ಯ ಎಂಬುವರು ನಡೆಸುತ್ತಿದ್ದ ಅಂಬಾ ಭವನ ಎಂಬ ಪ್ರಸಿದ್ಧ ಹೋಟೆಲ್ ಇದ್ದ ಕಟ್ಟಡದ ಮೊದಲನೇ ಮಹಡಿಯಲ್ಲಿತ್ತು. ಕೊಡೂರು ಶಾಮ ಭಟ್ಟರ ಕುಟುಂಬಕ್ಕೆ ಸೇರಿದ್ದ ಈ ಕಟ್ಟಡದಲ್ಲಿ ಆಗ ಪ್ರಾಥಮಿಕ ಶಾಲೆಯೊಂದನ್ನು ನಡೆಸಲಾಗುತ್ತಿತ್ತು.
------- ಮುಂದುವರಿಯುವುದು-----

No comments: